Print Page Options
Previous Prev Day Next DayNext

Old/New Testament

Each day includes a passage from both the Old Testament and New Testament.
Duration: 365 days
Kannada Holy Bible: Easy-to-Read Version (KERV)
Version
ಯೆಹೆಜ್ಕೇಲ 24-26

ಮಡಕೆ ಮತ್ತು ಮಾಂಸ

24 ನನ್ನ ಒಡೆಯನಾದ ಯೆಹೋವನ ಸಂದೇಶ ನನಗೆ ಬಂತು. ಇದು ಸೆರೆಹೋದ (ಯೆಹೋಯಾಖೀನನು ಸೆರೆಯಾದ) ಒಂಭತ್ತನೇ ವರ್ಷದ ಹತ್ತನೇ ತಿಂಗಳಿನ ಹತ್ತನೇ ದಿವಸದಲ್ಲಿ ಆಯಿತು. ಆತನು ಹೇಳಿದ್ದೇನೆಂದರೆ, “ನರಪುತ್ರನೇ, ಈವತ್ತಿನ ದಿವಸವನ್ನೂ ಸಂದೇಶವನ್ನೂ ಬರೆ: ‘ಈ ದಿವಸ ಬಾಬಿಲೋನ್ ರಾಜನ ಸೈನ್ಯವು ಜೆರುಸಲೇಮಿಗೆ ಮುತ್ತಿಗೆ ಹಾಕಿತು.’ ಈ ವಿಷಯವನ್ನು ವಿಧೇಯರಾಗದ ಆ ಸಂತಾನಕ್ಕೆ ತಿಳಿಸು. ಅವರಿಗೆ ಹೀಗೆ ಹೇಳು, ‘ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ:

“‘ಹಂಡೆಯನ್ನು ಬೆಂಕಿಯ ಮೇಲಿಟ್ಟು
    ಅದರಲ್ಲಿ ನೀರು ಹೊಯ್ಯಿ.
ಅದರೊಳಗೆ ಮಾಂಸದ ತುಂಡುಗಳನ್ನು ಹಾಕು.
    ತೊಡೆ, ಭುಜ, ಮಾಂಸದ ಒಳ್ಳೆಯ ಭಾಗಗಳನ್ನು ಹಾಕು.
ಒಳ್ಳೆಯ ಎಲುಬುಗಳನ್ನೂ ಹಾಕು.
    ಹಿಂಡಿನಿಂದ ಉತ್ತಮವಾದ ಪಶುವನ್ನು ತೆಗೆದುಕೊ.
ಹಂಡೆಯ ಕೆಳಗೆ ಸೌದೆಗಳನ್ನು ಜೋಡಿಸು.
    ಮಾಂಸ ತುಂಡುಗಳನ್ನು ಬೇಯಿಸು.
    ಮೂಳೆಗಳನ್ನು ಸಹ ಹಂಡೆಯಲ್ಲಿ ಬೇಯಿಸು.’

“‘ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ:
ಕೊಲೆಗಾರರ ಪಟ್ಟಣವಾದ ಜೆರುಸಲೇಮಿಗೆ ಆಪತ್ತು ಬರುವುದು.
    ಕೊಲೆಗಾರರ ನಗರಕ್ಕೆ ಕೇಡಾಗುವದು.
ಜೆರುಸಲೇಮು ಕಿಲುಬು ಹಿಡಿದ ಹಂಡೆಯಂತಿದೆ.
    ಆ ಕಿಲುಬಿನ ಕಲೆಯನ್ನು ತೆಗೆಯಲಾಗುವುದೇ ಇಲ್ಲ.
    ಆ ಹಂಡೆಯು ಅಶುದ್ಧವಾಗಿರುವುದರಿಂದ ಅದರೊಳಗಿರುವ ಮಾಂಸವನ್ನೆಲ್ಲಾ ಹೊರಗೆ ತೆಗೆದುಬಿಡು.
    ಆ ಮಾಂಸವನ್ನು ನೀನಾಗಲಿ ಯಾಜಕರಾಗಲಿ ತಿನ್ನಕೂಡದು.
ಜೆರುಸಲೇಮು ಕಿಲುಬು ಹಿಡಿದ ಹಂಡೆಯಂತಿದೆ.
    ಯಾಕೆಂದರೆ ಆಕೆ ಸುರಿಸಿದ ರಕ್ತದ ಕಲೆಗಳು ಇನ್ನೂ ಇವೆ.
ಆಕೆಯು ಆ ರಕ್ತವನ್ನು ನೆಲದ ಮೇಲೆ ಸುರಿಯದೆ
    ಬಂಡೆಯ ಮೇಲೆ ಸುರಿದು ಅದಕ್ಕೆ ಮಣ್ಣನ್ನೂ ಮುಚ್ಚಲಿಲ್ಲ.
ಆಕೆಯು ಸುರಿಸಿದ ರಕ್ತವು ಬರಿದಾದ
    ಬಂಡೆಯ ಮೇಲೆ ಮುಚ್ಚಲ್ಪಡದಂತೆ ನಾನೇ ಮಾಡಿದೆನು.
ನಿರಪರಾಧಿಗಳನ್ನು ಆಕೆ ಕೊಂದದ್ದಕ್ಕೆ ಜನರು ಕೋಪಗೊಂಡು
    ಆಕೆಯನ್ನು ದಂಡಿಸಲೆಂದು ನಾನು ಹೀಗೆ ಮಾಡಿದೆನು.

“‘ಆದ್ದರಿಂದ ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ:
ಕೊಲೆಗಾರರಿಂದ ತುಂಬಿದ್ದ ನಗರಕ್ಕೆ ಕೇಡು ಉಂಟಾಗುವದು.
    ನಾನು ಸೌದೆಯ ಗುಡ್ಡೆಯನ್ನು ದೊಡ್ಡದು ಮಾಡುವೆನು.
10 ಹಂಡೆಯಡಿಯಲ್ಲಿ ತುಂಬಾ ಸೌದೆಯನ್ನು ಇಡು.
    ಬೆಂಕಿಯನ್ನು ಹಚ್ಚು.
ಮಾಂಸವು ಬೇಯುವತನಕ ಬೇಯಿಸು.
    ಮೂಳೆಗಳು ಸುಟ್ಟುಹೋಗಲಿ.
11 ಬರಿದಾದ ಹಂಡೆಯು ಉರಿಯುವ ಕೆಂಡಗಳ ಮೇಲಿದ್ದು,
    ಕಾದು ಅದರ ತಾಮ್ರವು ಕೆಂಪಾಗಲಿ.
ಮತ್ತು ಅದರೊಳಗಿರುವ ಕಲೆಗಳು ಕರಗಿಹೋಗಲಿ.
    ಮತ್ತು ಅದರ ಕಿಲುಬು ಸುಟ್ಟುಹೋಗಲಿ.

12 “‘ತನ್ನ ಕಿಲುಬುಗಳ ಕಲೆಯನ್ನು ತೆಗೆಯಲು
    ಜೆರುಸಲೇಮ್ ತುಂಬಾ ಕಷ್ಟಪಡಬಹುದು.
ಆದರೆ ಆ ಕಿಲುಬು ಹೋಗುವದಿಲ್ಲ.
    ಬೆಂಕಿಯು ಮಾತ್ರ ಕಿಲುಬನ್ನು ತೆಗೆದುಹಾಕುವುದು.

13 “‘ನಿನ್ನ ವಿರುದ್ಧ ನನಗಿರುವ ಕೋಪ ತೃಪ್ತಿಗೊಳ್ಳುವ ತನಕ
    ನೀನು ಮತ್ತೆಂದಿಗೂ ಶುದ್ಧಳಾಗುವುದಿಲ್ಲ.
ನಿನ್ನನ್ನು ತೊಳೆದು ಕಲೆಗಳನ್ನು ತೆಗೆಯಲು ನನಗೆ ಮನಸ್ಸಿತ್ತು.
    ಆದರೆ ಕಲೆಗಳು ಹೋಗಲಿಲ್ಲ.
ಆದ್ದರಿಂದ ನಿನ್ನ ಮೇಲಿನ ನನ್ನ ಕೋಪವು ತಣ್ಣಗಾಗುವ ತನಕ
    ನಾನು ನಿನ್ನನ್ನು ತೊಳೆಯುವುದೇ ಇಲ್ಲ.

14 “‘ನಾನೇ ಯೆಹೋವನು. ನಿನಗೆ ಶಿಕ್ಷೆಯು ಬರುವದು ಎಂದು ನಾನು ಹೇಳಿದರೆ ಅದು ಬರುವಂತೆ ನಾನು ಮಾಡುವೆನು. ನಾನು ದಂಡನೆಯನ್ನು ತಡೆಹಿಡಿಯುವುದಿಲ್ಲ. ನಾನು ನಿನ್ನನ್ನು ಬಿಟ್ಟುಬಿಡುವುದಿಲ್ಲ. ಅದರ ಬಗ್ಗೆ ನನ್ನ ಮನಸ್ಸನ್ನು ನಾನು ಮಾರ್ಪಡಿಸುವುದಿಲ್ಲ. ನಿನ್ನ ಕೆಟ್ಟಕಾರ್ಯಗಳಿಗಾಗಿ ನಾನು ನಿನ್ನನ್ನು ಶಿಕ್ಷಿಸುವೆನು.’ ನನ್ನ ಒಡೆಯನಾದ ಯೆಹೋವನು ಇದನ್ನು ನುಡಿದಿದ್ದಾನೆ.”

ಯೆಹೆಜ್ಕೇಲನ ಹೆಂಡತಿಯ ಮರಣ

15 ಯೆಹೋವನ ಸಂದೇಶ ನನಗೆ ಬಂತು. ಆತನು ಹೇಳಿದ್ದೇನೆಂದರೆ, 16 “ನರಪುತ್ರನೇ, ನೀನು ನಿನ್ನ ಹೆಂಡತಿಯನ್ನು ಬಹಳವಾಗಿ ಪ್ರೀತಿಸುತ್ತಿ. ಆದರೆ ನಾನು ಆಕೆಯನ್ನು ನಿನ್ನಿಂದ ತೆಗೆದು ಬಿಡುವೆನು. ನಿನ್ನ ಹೆಂಡತಿಯು ಫಕ್ಕನೆ ತೀರಿಹೋಗುವಳು. ಆದರೆ ನೀನು ನಿನ್ನ ದುಃಖವನ್ನು ಪ್ರದರ್ಶಿಸಬಾರದು. ನೀನು ಗಟ್ಟಿಯಾಗಿ ರೋಧಿಸಬಾರದು. ಅಳಬೇಡ ಅಥವಾ ಕಣ್ಣೀರು ಸುರಿಸಬೇಡ. 17 ಮೌನವಾಗಿ ನರಳಾಡು. ನಿನ್ನ ಸತ್ತ ಹೆಂಡತಿಗಾಗಿ ಗಟ್ಟಿಯಾಗಿ ರೋಧಿಸಬೇಡ. ನೀನು ಯಾವಾಗಲೂ ತೊಡುವ ಬಟ್ಟೆಯನ್ನು ತೊಟ್ಟುಕೋ. ಮುಂಡಾಸವನ್ನು ಕಟ್ಟಿಕೋ. ಕಾಲಿಗೆ ಕೆರವನ್ನು ಮೆಟ್ಟಿಕೋ, ನಿನ್ನ ದುಃಖವನ್ನು ತೋರಿಸಲು ಮೀಸೆಯನ್ನು ಮುಚ್ಚಿಕೊಳ್ಳಬೇಡ. ಮರಣದ ಊಟವನ್ನು ಮಾಡದಿರು.”

18 ದೇವರು ಹೇಳಿದ್ದನ್ನು ನಾನು ಮರುದಿವಸ ಮುಂಜಾನೆ ತಿಳಿಸಿದೆ. ಆ ಸಾಯಂಕಾಲ ನನ್ನ ಪತ್ನಿಯು ಸತ್ತುಹೋದಳು. ಮರುದಿವಸ ಬೆಳಿಗ್ಗೆ ದೇವರು ಆಜ್ಞಾಪಿಸಿದ್ದನ್ನೆಲ್ಲ ಮಾಡಿದೆನು. 19 ಆಗ ಜನರು ನನ್ನನ್ನು, “ಇದನ್ನೆಲ್ಲಾ ಯಾಕೆ ಮಾಡುತ್ತೀ? ಇದರರ್ಥವೇನು?” ಎಂದು ಕೇಳಿದರು.

20 ಆಗ ನಾನು ಅವರಿಗೆ ಹೀಗೆಂದೆನು: “ಯೆಹೋವನ ಸಂದೇಶ ನನಗೆ ಬಂತು. 21 ಆತನು ಹೇಳಿದ್ದೇನೆಂದರೆ: ಇಸ್ರೇಲ್ ಜನರಿಗೆ ಹೇಳು: ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ: ‘ಇಗೋ, ನನ್ನ ಪವಿತ್ರಾಲಯವನ್ನು ಹಾಳುಮಾಡುವೆನು. ನೀವು ಆ ಸ್ಥಳದ ಬಗ್ಗೆ ಹೆಮ್ಮೆಯುಳ್ಳವರಾಗಿದ್ದು ಸ್ತುತಿಗೀತೆಗಳನ್ನು ಹಾಡುತ್ತೀರಿ. ಅದು ಶಕ್ತಿ ದೊರಕುವ ಸ್ಥಳ. ನೀವು ಆ ಆಲಯವನ್ನು ನೋಡುತ್ತಾ ಆನಂದಿಸುತ್ತೀರಿ; ಅದನ್ನು ಬಹಳವಾಗಿ ಪ್ರೀತಿಸುತ್ತೀರಿ. ಆದರೆ ನಾನು ಅದನ್ನು ಕೆಡವಿಬಿಡುವೆನು. ನೀವು ಬಿಟ್ಟುಹೋಗುವ ನಿಮ್ಮ ಮಕ್ಕಳು ಯುದ್ಧದಲ್ಲಿ ಸಾಯುವರು. 22 ನಾನು ನನ್ನ ಸತ್ತ ಹೆಂಡತಿಗೆ ಮಾಡಿದಂತೆಯೇ ನೀವೂ ಮಾಡುವಿರಿ. ನಿಮ್ಮ ದುಃಖವನ್ನು ತೋರಿಸಲು ನೀವು ನಿಮ್ಮ ಮೀಸೆಯನ್ನು ಮುಚ್ಚಿಕೊಳ್ಳುವುದಿಲ್ಲ. ಯಾರಾದರೂ ಸತ್ತಾಗ, ಗೋಳಾಡುವವರು ತಿನ್ನುವ ಆಹಾರವನ್ನು ನೀವು ತಿನ್ನುವುದಿಲ್ಲ. 23 ನೀವು ನಿಮ್ಮ ಮುಂಡಾಸವನ್ನು ಧರಿಸಿಕೊಂಡು ಕಾಲಿಗೆ ಕೆರವನ್ನು ಹಾಕಿಕೊಳ್ಳುವಿರಿ. ನೀವು ನಿಮ್ಮ ದುಃಖವನ್ನು ತೋರಿಸಿಕೊಳ್ಳುವುದಿಲ್ಲ. ನೀವು ಅಳುವದೂ ಇಲ್ಲ. ಆದರೆ ನೀವು ನಿಮ್ಮ ಪಾಪಗಳ ದೆಸೆಯಿಂದ ಕೃಶರಾಗುವಿರಿ. ನೀವು ಒಬ್ಬರಿಗೊಬ್ಬರು ದುಃಖದ ಶಬ್ದಗಳನ್ನು ಮಾಡುವಿರಿ. 24 ಯೆಹೆಜ್ಕೇಲನು ನಿಮಗೆ ಒಬ್ಬ ಮಾದರಿಯಾಗಿದ್ದಾನೆ. ಆತನು ಮಾಡಿದ ಹಾಗೆ ನೀವೂ ಮಾಡುವಿರಿ. ನಿಮ್ಮ ಶಿಕ್ಷಾ ಸಮಯವು ಹತ್ತಿರ ಬಂದಿದೆ. ನಾನು ಒಡೆಯನಾದ ಯೆಹೋವನೆಂದು ಆಗ ನೀವು ತಿಳಿಯುವಿರಿ.’”

25-26 ಆತನು ಹೇಳಿದ್ದೇನೆಂದರೆ: “ನರಪುತ್ರನೇ, ನಾನು ಬಲಿಷ್ಠವಾದ ಆಲಯವನ್ನು ಜನರಿಂದ ತೆಗೆದುಬಿಡುವೆನು. ಆ ಸುಂದರ ಸ್ಥಳವು ಅವರಿಗೆ ಆನಂದವನ್ನು ಕೊಡುತ್ತಿದೆ. ಆ ಸ್ಥಳವನ್ನು ನೋಡಲು ಅವರು ಆತುರಪಡುವರು. ಆದರೆ ನಾನು ಆಲಯವನ್ನೂ ಮತ್ತು ಅವರ ಮಕ್ಕಳನ್ನೂ ಆ ಜನರಿಂದ ತೆಗೆದುಬಿಡುವೆನು. ಆ ದಿನದಂದು, ಪಾರಾದವನು ನಿನ್ನ ಬಳಿಗೆ ಬಂದು ನಾಶನದ ಕುರಿತಾದ ಕೆಟ್ಟ ಸುದ್ದಿಯನ್ನು ನಿನಗೆ ತಿಳಿಸುವನು. 27 ಆ ಸಮಯದಲ್ಲಿ ನಿನಗೆ ಆ ಮನುಷ್ಯನೊಂದಿಗೆ ಮಾತನಾಡಲಾಗುವುದು. ನೀನು ಆಮೇಲೆ ಎಂದಿಗೂ ಮೌನವಾಗಿರುವುದಿಲ್ಲ. ಈ ರೀತಿಯಾಗಿ ನೀನು ಅವರಿಗೆ ಒಂದು ಮಾದರಿಯಾಗುವೆ. ನಾನು ಯೆಹೋವನೆಂದು ಆಗ ಅವರು ತಿಳಿಯುವರು.”

ಅಮ್ಮೋನಿಗೆ ವಿರುದ್ಧ ಪ್ರವಾದನೆ

25 ಒಡೆಯನಾದ ಯೆಹೋವನ ಮಾತುಗಳು ನನಗೆ ಬಂದವು. ಆತನು ಹೀಗೆ ಹೇಳಿದನು: “ನರಪುತ್ರನೇ, ಅಮ್ಮೋನಿನ ಕಡೆಗೆ ಮುಖಮಾಡಿ, ಅವರಿಗೆ ವಿರುದ್ಧವಾಗಿ ಪ್ರವಾದಿಸು. ಅಮ್ಮೋನಿಯರಿಗೆ ಹೀಗೆ ಹೇಳು: ‘ನನ್ನ ಒಡೆಯನಾದ ಯೆಹೋವನ ಮಾತುಗಳನ್ನು ಕೇಳಿರಿ. ಆತನು ಹೇಳುವುದೇನೆಂದರೆ, ನನ್ನ ಪವಿತ್ರಾಲಯವು ಅಪವಿತ್ರಗೊಂಡಾಗಲೂ ಇಸ್ರೇಲ್ ದೇಶವು ನಾಶವಾದಾಗಲೂ ಯೆಹೂದದ ಜನರು ಸೆರೆ ಒಯ್ಯಲ್ಪಟ್ಟಾಗಲೂ ನೀವು ಸಂತೋಷಪಟ್ಟಿರಿ. ಅದಕ್ಕಾಗಿ ನಾನು ನಿಮ್ಮನ್ನು ಪೂರ್ವದ ಜನರಿಗೆ ಬಿಟ್ಟುಕೊಡುವೆನು. ಅವರು ಬಂದು ನಿಮ್ಮ ದೇಶವನ್ನು ಕಿತ್ತುಕೊಳ್ಳುವರು. ಅವರ ಸೈನ್ಯವು ಬಂದು ನಿಮ್ಮ ದೇಶದೊಳಗೆ ಪಾಳೆಯ ಮಾಡುವದು. ಅವರು ನಿಮ್ಮ ಮಧ್ಯದಲ್ಲಿ ವಾಸಿಸಿ ನಿಮ್ಮ ಹಣ್ಣುಗಳನ್ನು ತಿಂದು ನಿಮ್ಮ ಹಾಲನ್ನು ಕುಡಿಯುವರು.

“‘ನಾನು ರಬ್ಬಾ ನಗರವನ್ನು ಒಂಟೆಗಳು ಮೇಯುವ ಸ್ಥಳವನ್ನಾಗಿಯೂ, ಅಮ್ಮೋನ್ ದೇಶವನ್ನು ಕುರಿಹಟ್ಟಿಯನ್ನಾಗಿಯೂ ಮಾಡುವೆನು. ಆಗ ನಾನು ಯೆಹೋವನೆಂದು ನಿಮಗೆ ಗೊತ್ತಾಗುವದು. ಯೆಹೋವನು ಹೇಳುವುದೇನೆಂದರೆ: ಜೆರುಸಲೇಮ್ ನಾಶವಾಯಿತೆಂದು ನೀವು ಸಂತೋಷಪಟ್ಟಿರಿ. ನೀವು ಚಪ್ಪಾಳೆತಟ್ಟಿ ಕಾಲಿನಿಂದ ನೆಲವನ್ನು ಬಡಿದಿರಿ. ಇಸ್ರೇಲ್ ದೇಶವನ್ನು ಕಡೆಗಣಿಸಿ ನಗಾಡಿದಿರಿ. ಅದಕ್ಕಾಗಿ ನಾನು ನಿಮ್ಮನ್ನು ದಂಡಿಸುವೆನು. ಜನಾಂಗಗಳಿಂದ ನಿಮ್ಮನ್ನು ಕೊಳ್ಳೆ ಹೊಡೆಸಿ ನಿರ್ಮೂಲ ಮಾಡುವೆನು. ದೇಶಗಳೊಳಗಿಂದ ನಿಮ್ಮ ಹೆಸರನ್ನು ಅಳಿಸಿಹಾಕುವೆನು; ನಿಮ್ಮನ್ನು ನಾಶಮಾಡುವೆನು. ನಾನೇ ಯೆಹೋವನೆಂಬುದು ಆಗ ನಿಮಗೆ ತಿಳಿಯುವುದು.’”

ಮೋವಾಬ್ ಮತ್ತು ಸೇಯೀರ್ ವಿರುದ್ಧ ಪ್ರವಾದನೆ

ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ: “ಮೋವಾಬ್ ಮತ್ತು ಸೇಯೀರ್, ‘ಯೆಹೂದ ಜನಾಂಗದವರು ಇತರ ಎಲ್ಲಾ ಜನಾಂಗಗಳವರಂತಿದ್ದಾರೆ.’ ಎಂದು ಹೇಳುತ್ತಾರೆ. ಮೋವಾಬಿನ ಗಡಿಯನ್ನು ಸಂರಕ್ಷಿಸುತ್ತಿರುವ ಪಟ್ಟಣಗಳು ಆಕ್ರಮಣಕ್ಕೆ ಗುರಿಯಾಗುವಂತೆ ಮಾಡುತ್ತೇನೆ. ಬೇತ್‌ಯೆಷೀಮೋತ್, ಬಾಳ್‌ಮೆಯೋನ್, ಕಿರ್ಯಾಥಯಿಮ್, ಅದರ ವೈಭವಯುತವಾದ ಸರಹದ್ದಿನ ಪಟ್ಟಣಗಳನ್ನು ನಾನು ತೆಗೆದುಹಾಕುವೆನು. 10 ಪೂರ್ವದಿಕ್ಕಿನ ಜನರು ಮೋವಾಬನ್ನೂ ಅಮ್ಮೋನನ್ನೂ ಗೆದ್ದುಕೊಳ್ಳುವಂತೆ ನಾನು ಮಾಡುವೆನು. ಆಗ ಜನರು ಮೋವಾಬಿನವರನ್ನು ಮರೆತುಬಿಡುವರು. 11 ಹೀಗೆ ನಾನು ಮೋವಾಬನ್ನು ಶಿಕ್ಷಿಸುವೆನು. ಆಗ ನಾನೇ ಯೆಹೋವನೆಂದು ಅವರು ತಿಳಿಯುವರು.”

ಎದೋಮ್ ವಿರುದ್ಧ ಪ್ರವಾದನೆಗಳು

12 ನನ್ನ ಒಡೆಯನಾದ ಯೆಹೋವನು ಹೀಗೆ ಹೇಳುತ್ತಾನೆ: “ಎದೋಮ್ಯರು ಯೆಹೂದದ ಜನರು ಮೇಲೆ ಕ್ರೂರವಾದ ಸೇಡನ್ನು ತೀರಿಸಿಕೊಂಡಿದ್ದಾರೆ. ಅವರ ಮೇಲೆ ಸತತವಾಗಿ ಸೇಡು ತೀರಿಸಿಕೊಳ್ಳುವುದರ ಮೂಲಕ ಎದೋಮ್ಯರು ಮಹಾಪರಾಧ ಮಾಡಿದ ದೋಷಿಗಳಾಗಿದ್ದಾರೆ.” 13 ಆದ್ದರಿಂದ ನನ್ನ ಒಡೆಯನಾದ ಯೆಹೋವನು ಹೇಳುವುದೇನೆಂದರೆ, “ನಾನು ಎದೋಮನ್ನು ಶಿಕ್ಷಿಸುವೆನು. ಎದೋಮಿನ ಜನರನ್ನೂ ಪ್ರಾಣಿಗಳನ್ನೂ ನಾಶಮಾಡುವೆನು. ತೇಮಾನಿನಿಂದ ಹಿಡಿದು ದೆದಾನ್‌ತನಕ ಆ ದೇಶವನ್ನೆಲ್ಲಾ ನಾಶಮಾಡುವೆನು. ಎದೋಮ್ಯರು ರಣರಂಗದಲ್ಲಿ ಸಾಯುವರು. 14 ನಾನು ನನ್ನ ಇಸ್ರೇಲ್ ಜನರನ್ನು ಉಪಯೋಗಿಸಿ ಎದೋಮ್ಯರಿಗೆ ಮುಯ್ಯಿ ತೀರಿಸುವೆನು. ಈ ರೀತಿಯಾಗಿ ಎದೋಮಿನ ಮೇಲಿರುವ ನನ್ನ ಕೋಪವನ್ನು ಇಸ್ರೇಲರು ಅವರಿಗೆ ತೋರಿಸುವರು. ಆಗ ಎದೋಮ್ಯರು ನಾನು ಅವರನ್ನು ಶಿಕ್ಷಿಸಿದ್ದೇನೆಂದು ತಿಳಿದುಕೊಳ್ಳುವರು.” ಇದು ನನ್ನ ಒಡೆಯನಾದ ಯೆಹೋವನ ವಾಕ್ಯ.

ಫಿಲಿಷ್ಟಿಯರ ವಿರುದ್ಧ ಪ್ರವಾದನೆಗಳು

15 ನನ್ನ ಒಡೆಯನಾದ ಯೆಹೋವನು ಹೀಗೆ ಹೇಳುತ್ತಾನೆ, “ಫಿಲಿಷ್ಟಿಯರು ಸೇಡನ್ನು ತೀರಿಸಿಕೊಂಡಿದ್ದಾರೆ. ಅವರು ಆವೇಶದಿಂದ ತಿರಸ್ಕರಿಸಿ ಸೇಡನ್ನು ತೀರಿಸಿಕೊಂಡಿದ್ದಾರೆ. ಅವರು ತಮ್ಮ ದೀರ್ಘಕಾಲದ ದ್ವೇಷದಿಂದ ನಾಶನವು ಬರುವಂತೆ ಮಾಡಿದ್ದಾರೆ.” 16 ಆದ್ದರಿಂದ ನನ್ನ ಒಡೆಯನಾದ ಯೆಹೋವನು ಹೇಳಿದ್ದೇನೆಂದರೆ, “ನಾನು ಫಿಲಿಷ್ಟಿಯರನ್ನು ಶಿಕ್ಷಿಸುವೆನು, ಹೌದು, ಕೆರೇತದ ಆ ಜನರನ್ನು ನಾಶಮಾಡುವೆನು. ಸಮುದ್ರ ಕರಾವಳಿಯಲ್ಲಿ ವಾಸಿಸುವ ಉಳಿದ ಜನರನ್ನೆಲ್ಲಾ ನಾಶಮಾಡುವೆನು. 17 ನಾನು ಅವರೊಂದಿಗೆ ಮುಯ್ಯಿತೀರಿಸಿಕೊಳ್ಳುವೆನು. ನನ್ನ ಕೋಪವು ಅವರಿಗೆ ಪಾಠ ಕಲಿಸುವದು. ನಾನು ಯೆಹೋವನೆಂದು ಆಗ ಅವರು ತಿಳಿದುಕೊಳ್ಳುವರು.”

ತೂರಿನ ಬಗ್ಗೆ ದುಃಖಕರವಾದ ವಾರ್ತೆ

26 ದೇಶ ಭ್ರಷ್ಟರಾಗಿದ್ದ ಹನ್ನೊಂದನೇ ವರ್ಷದ ತಿಂಗಳ ಮೊದಲನೇ ದಿವಸದಲ್ಲಿ ಯೆಹೋವನ ಸಂದೇಶ ನನಗೆ ಬಂತು. ಆತನು ಹೇಳಿದ್ದೇನೆಂದರೆ, “ನರಪುತ್ರನೇ, ಜೆರುಸಲೇಮ್ ಬಗ್ಗೆ ತೂರ್ ಕೆಟ್ಟ ಮಾತುಗಳನ್ನಾಡಿದೆ. ‘ಜನರನ್ನು ಸುರಕ್ಷಿತವಾಗಿರಿಸುವ ನಗರದ್ವಾರವು ಕೆಡವಲ್ಪಟ್ಟು ದ್ವಾರವೇ ಇಲ್ಲದಂತಾಗಿದೆ. ನಗರವು ಹಾಳಾಗಿರುವುದರಿಂದ ಕೊಳ್ಳೆ ಹೊಡೆಯಲು ಸುಲಭವಾಯಿತು’ ಎಂದು ಅದು ಅಂದುಕೊಂಡಿದೆ.”

ಆದ್ದರಿಂದ ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ: “ತೂರೇ, ನಾನು ನಿನಗೆ ಮ್ಯುಯಿತೀರಿಸುವೆನು. ನಿನಗೆ ವಿರುದ್ಧವಾಗಿ ಯುದ್ಧ ಮಾಡಲು ಅನೇಕ ರಾಜ್ಯಗಳನ್ನು ಎಬ್ಬಿಸುತ್ತೇನೆ. ಅವರು ಸಮುದ್ರದ ತೆರೆಯಂತೆ ಮೇಲಿಂದ ಮೇಲೆ ನಿನಗೆ ವಿರುದ್ಧವಾಗಿ ಬರುವರು.”

ದೇವರು ಹೇಳಿದ್ದೇನೆಂದರೆ, “ಆ ಶತ್ರು ಸೈನಿಕರು ತೂರಿನ ಗೋಡೆಗಳನ್ನು ಕೆಡವಿ, ಅದರ ಬುರುಜುಗಳನ್ನು ಎಳೆದು ಹಾಕುವರು. ನಾನು ಅದರ ಫಲವತ್ತಾದ ಮಣ್ಣನ್ನು ಕೆರೆದುಹಾಕಿ, ಅದನ್ನು ಬರಿದಾದ ಬಂಡೆಯನ್ನಾಗಿ ಬಿಟ್ಟುಬಿಡುವೆನು. ಬೆಸ್ತರು ತಮ್ಮ ಬಲೆಗಳನ್ನು ಹರಡಿ ಒಣಗಿಸುವ ಸ್ಥಳವನ್ನಾಗಿ ಮಾಡುವೆನು. ಇದು ನನ್ನ ನುಡಿ.” ನನ್ನ ಒಡೆಯನಾದ ಯೆಹೋವನು ಹೀಗೆ ಹೇಳುತ್ತಾನೆ, “ಸೈನಿಕರು ಯುದ್ಧದ ಸಮಯದಲ್ಲಿ ಬೆಲೆಬಾಳುವ ವಸ್ತುವನ್ನು ಕೊಳ್ಳೆ ಮಾಡುವಂತೆ ತೂರ್ ಇದೆ. ಆಕೆಯ ಹೆಣ್ಣುಮಕ್ಕಳು (ಚಿಕ್ಕ ಪಟ್ಟಣಗಳು) ಯುದ್ಧದಲ್ಲಿ ಕೊಲ್ಲಲ್ಪಡುವರು. ನಾನು ಯೆಹೋವನೆಂದು ಆಗ ತಿಳಿಯುವರು.”

ನೆಬೂಕದ್ನೆಚ್ಚರನು ತೂರಿನ ಮೇಲೆ ಧಾಳಿ ಮಾಡುವನು

ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ: “ಉತ್ತರ ದಿಕ್ಕಿನಿಂದ ಒಬ್ಬ ಶತ್ರುವನ್ನು ನಾನು ತೂರಿಗೆ ವಿರುದ್ಧವಾಗಿ ಬರಮಾಡುವೆನು. ಅವನೇ ಬಾಬಿಲೋನಿನ ರಾಜನಾದ ನೆಬೂಕದ್ನೆಚ್ಚರನು. ಅವನು ಲೆಕ್ಕವಿಲ್ಲದಷ್ಟು ಕುದುರೆ ಸವಾರರು, ರಥಗಳು, ಕಾಲ್ಬಲವುಳ್ಳ ದೊಡ್ಡ ಸೈನ್ಯವನ್ನು ತೆಗೆದುಕೊಂಡು ಬರುವನು. ಅವನ ಸೈನಿಕರೆಲ್ಲಾ ಬೇರೆಬೇರೆ ಜನಾಂಗದವರು. ನೆಬೂಕದ್ನೆಚ್ಚರನು ನಿನ್ನ ಹೆಣ್ಣುಮಕ್ಕಳನ್ನು (ಚಿಕ್ಕ ಪಟ್ಟಣಗಳನ್ನು) ಕೊಲ್ಲುವನು. ಅವನು ಬುರುಜುಗಳನ್ನು ಕಟ್ಟಿ ನಿನ್ನ ನಗರವನ್ನು ಧಾಳಿ ಮಾಡುವನು. ನಿನ್ನ ನಗರದ ಸುತ್ತಲೂ ಮಣ್ಣಿನ ಮಾರ್ಗ ಮಾಡುವನು. ಕೋಟೆಗೋಡೆಯ ತನಕ ರಸ್ತೆಯನ್ನು ತಯಾರಿಸುವನು. ಅವನು ಮರದ ತೊಲೆಗಳನ್ನು ತಂದು ನಿನ್ನ ಗೋಡೆಗಳನ್ನು ಕೆಡವಿಬಿಡುವನು. ಗುದ್ದಲಿಗಳಿಂದ ನಿನ್ನ ಬುರುಜುಗಳನ್ನು ಕೆಡವಿಹಾಕುವನು. 10 ಅವನ ಕುದುರೆಗಳ ಗೊರಸುಗಳಿಂದ ಹೊರಟ ಧೂಳು ನಿನ್ನನ್ನು ಮುಚ್ಚಿಬಿಡುವದು. ಅವರ ರಾಹುತರ, ಚಕ್ಕಡಿಗಳ, ರಥಗಳ ಶಬ್ದದಿಂದ ನಿನ್ನ ಗೋಡೆಗಳು ನಡುಗುವವು. ಕೋಟೆಗೋಡೆಗಳು ಕೆಡವಲ್ಪಡುವದರಿಂದ ಅವರು ನಗರದೊಳಗೆ ನುಗ್ಗುವರು. 11 ಬಾಬಿಲೋನಿನ ರಾಜನು ಕುದುರೆಯ ಮೇಲೆ ಕುಳಿತುಕೊಂಡು ನಿನ್ನ ನಗರದೊಳಗೆ ಪ್ರವೇಶಮಾಡುವನು. ನಿನ್ನ ರಸ್ತೆಗಳ ಮೇಲೆ ಅವನ ಕುದುರೆಯ ಗೊರಸು ಶಬ್ದವೇರಿಸುವದು. ನಿನ್ನನ್ನು ತನ್ನ ಖಡ್ಗದಿಂದ ಸಂಹರಿಸುವನು. ನಿನ್ನ ನಗರದಲ್ಲಿನ ಉನ್ನತಸ್ತಂಭಗಳು ಕೆಡವಲ್ಪಡುವವು, 12 ನೆಬೂಕದ್ನೆಚ್ಚರನ ಸೈನ್ಯವು ನಿನ್ನ ಐಶ್ವರ್ಯವನ್ನು ದೋಚಿಕೊಳ್ಳುವದು. ನೀನು ಮಾರಬೇಕೆಂದಿದ್ದ ವಸ್ತುಗಳನ್ನು ಅವರು ದೋಚಿಕೊಳ್ಳುವರು. ನಿನ್ನ ಗೋಡೆಗಳನ್ನು ಒಡೆದು ಅಂದವಾದ ನಿನ್ನ ಮನೆಗಳನ್ನು ಹಾಳು ಮಾಡುವರು. ನಿನ್ನ ಮರದಿಂದ ಮತ್ತು ಕಲ್ಲುಗಳಿಂದ ಮಾಡಿದ ಮನೆಗಳನ್ನು ಕಸದಂತೆ ಸಮುದ್ರಕ್ಕೆ ಎಸೆಯುವರು. 13 ನಿನ್ನ ಸಂತಸದ ಹಾಡುಗಳನ್ನು ನಾನು ನಿಲ್ಲಿಸಿಬಿಡುವೆನು. ನಿನ್ನ ಕಿನ್ನರಿ ಸ್ವರವನ್ನು ಜನರು ಇನ್ನೆಂದೂ ಕೇಳರು. 14 ನಾನು ನಿನ್ನನ್ನು ಬರಿದಾದ ಬಂಡೆಯನ್ನಾಗಿ ಮಾಡುವೆನು. ಸಮುದ್ರದ ತೀರದಲ್ಲಿ ಬಲೆಗಳನ್ನು ಹರಡುವ ಸ್ಥಳವಾಗಿ ನೀನು ಮಾರ್ಪಡುವೆ. ನೀನು ತಿರುಗಿ ಕಟ್ಟಲ್ಪಡುವದಿಲ್ಲ. ಇದು ಒಡೆಯನಾದ ಯೆಹೋವನ ನುಡಿ.” ನನ್ನ ಒಡೆಯನಾದ ಯೆಹೋವನು ಇದನ್ನು ನನಗೆ ತಿಳಿಸಿದನು.

ಬೇರೆ ದೇಶಗಳವರು ತೂರ್ ದೇಶಕ್ಕಾಗಿ ಅಳುವರು

15 ಒಡೆಯನಾದ ಯೆಹೋವನು ತೂರಿಗೆ ಹೇಳುವುದೇನೆಂದರೆ, “ಭೂಮದ್ಯ ಸಮುದ್ರ ಕರಾವಳಿಯಲ್ಲಿರುವ ದೇಶದವರು ನೀನು ಕೆಳಗೆ ಬೀಳುವ ಶಬ್ದ ಕೇಳಿ ನಡುಗುವರು. ಅದು ನಿನ್ನ ಜನರು ಗಾಯಗೊಂಡು ಸಾಯುವಾಗ ಆಗುವದು. 16 ಆಗ ಸಮುದ್ರ ತೀರದ ದೇಶಗಳ ನಾಯಕರೆಲ್ಲಾ ತಮ್ಮ ಸಿಂಹಾಸನದಿಂದ ಕೆಳಗಿಳಿದು ತಮ್ಮ ಶೋಕವನ್ನು ವ್ಯಕ್ತಪಡಿಸುವರು. ಅವರು ತಮ್ಮ ಸುಂದರವಾದ ರಾಜವಸ್ತ್ರಗಳನ್ನು ತೆಗೆದಿಟ್ಟು ಭಯದ ಬಟ್ಟೆಗಳನ್ನು ಧರಿಸಿಕೊಂಡು ನೆಲದ ಮೇಲೆ ಭಯದಿಂದ ಕುಳಿತುಕೊಳ್ಳುವರು. ನೀನು ಎಷ್ಟು ಬೇಗನೇ ನಾಶವಾದೆ ಎಂದು ಕೇಳಿ ದಂಗುಬಡಿದಂತಾಗುವರು. 17 ಅವರು ನಿನ್ನ ಬಗ್ಗೆ ಈ ಶೋಕಗೀತೆಯನ್ನು ಹಾಡುವರು:

“‘ತೂರ್, ನೀನು ಹೆಸರುವಾಸಿಯಾದ ನಗರವಾಗಿದ್ದೆ.
    ನಿನ್ನಲ್ಲಿ ವಾಸಮಾಡಲು ಜನರು ಸಮುದ್ರದಾಚೆಯಿಂದ ಬಂದರು.
ನೀನು ಪ್ರಸಿದ್ಧಳಾಗಿದ್ದೆ,
    ಆದರೆ ನೀನೀಗ ಹೋಗಿಬಿಟ್ಟೆ.
ದ್ವೀಪವಾಗಿರುವ ನೀನು ಮತ್ತು ನಿನ್ನಲ್ಲಿ ವಾಸವಾಗಿದ್ದ ಜನರು
    ಸಮುದ್ರದಿಂದ ದೂರದಲ್ಲಿರುವುದರಿಂದ ಬಲಿಷ್ಠರಾಗಿದ್ದೀರಿ.
ಭೂಮಿಯ ಮೇಲೆ ವಾಸವಾಗಿದ್ದ ಎಲ್ಲಾ ಜನರನ್ನು ನೀವು ಭಯಗೊಳಿಸಿದಿರಿ.
18 ನೀನು ಬಿದ್ದ ದಿವಸ
    ಕರಾವಳಿಯಲ್ಲಿರುವ ದೇಶಗಳೆಲ್ಲಾ ನಡುಗುವವು.
ನೀನು ಕರಾವಳಿಯಲ್ಲಿ ಅನೇಕ ವಸಾಹತುಗಳನ್ನು ನಿರ್ಮಿಸಿದ್ದೀ.
    ನೀನು ಹೋದ ಬಳಿಕ ಅವರು ಭಯಗ್ರಸ್ತರಾಗುವರು.’”

19 ಇದು ನನ್ನ ಒಡೆಯನಾದ ಯೆಹೋವನ ನುಡಿ. “ತೂರ್, ನಾನು ನಿನ್ನನ್ನು ನಾಶಮಾಡುವೆನು. ಆಗ ನೀನು ಬರಿದಾದ ನಗರವಾಗಿರುವೆ. ಯಾರೂ ಅಲ್ಲಿ ವಾಸ ಮಾಡುವದಿಲ್ಲ. ನಿನ್ನ ಮೇಲೆ ಸಮುದ್ರವು ತುಂಬುವಂತೆ ಮಾಡುವೆನು. ಆ ಮಹಾಸಾಗರವು ನಿನ್ನನ್ನು ಮುಚ್ಚಿಬಿಡುವದು. 20 ಆಳವಾದ ಗುಂಡಿಗೆ, ಸತ್ತವರು ಹೋಗುವ ಸ್ಥಳಕ್ಕೆ ನಿನ್ನನ್ನು ಕಳುಹಿಸುವೆನು. ಬೇರೆ ಹಳೇ ನಗರಗಳಂತೆ ನಾನು ಭೂಮಿಯ ಕೆಳಗೆ ನಿನ್ನನ್ನು ಕಳುಹಿಸಿಬಿಡುವೆನು. ಸಮಾಧಿಯೊಳಗಿರುವವರೊಂದಿಗೆ ನೀನು ಇರುವೆ. ನಿನ್ನಲ್ಲಿ ಆಗ ಯಾರೂ ವಾಸ ಮಾಡುವದಿಲ್ಲ. ನೀನು ಎಂದಿಗೂ ಜೀವಿಸುವವರ ಲೋಕದಲ್ಲಿರುವದಿಲ್ಲ. 21 ನಿನಗಾದ ಸ್ಥಿತಿಯನ್ನು ನೋಡಿ ಬೇರೆ ಜನರು ಭಯಗ್ರಸ್ತರಾಗುವರು. ನಿನ್ನ ಅಂತ್ಯವು ಆಯಿತು. ಜನರು ನಿನಗಾಗಿ ಹುಡುಕಾಡುವರು. ಆದರೆ ಅವರು ನಿನ್ನನ್ನು ಕಂಡುಹಿಡಿಯುವುದೇ ಇಲ್ಲ.” ಇವು ಒಡೆಯನಾದ ಯೆಹೋವನ ಮಾತು.

1 ಪೇತ್ರನು 2

ಜೀವಂತವಾದ ಕಲ್ಲು ಮತ್ತು ಪವಿತ್ರವಾದ ದೇಶ

ಆದ್ದರಿಂದ ಇತರ ಜನರಿಗೆ ಕೇಡುಮಾಡಬೇಡಿ, ಸುಳ್ಳಾಡದಿರಿ, ಜನರನ್ನು ಮೋಸಗೊಳಿಸಬೇಡಿ, ಹೊಟ್ಟೆಕಿಚ್ಚುಪಡದಿರಿ, ಜನರ ಬಗ್ಗೆ ಕೆಟ್ಟಮಾತುಗಳನ್ನು ಆಡದಿರಿ. ಇವುಗಳನ್ನೆಲ್ಲಾ ನಿಮ್ಮ ಜೀವಿತದಿಂದ ಹೊರಕ್ಕೆ ಹಾಕಿರಿ. ಹೊಸದಾಗಿ ಹುಟ್ಟಿದ ಕೂಸುಗಳಂತಿರಿ. ನಿಮ್ಮ ಆತ್ಮವನ್ನು ಪೋಷಿಸುವಂಥ ಶುದ್ಧ ಹಾಲನ್ನು (ದೇವರ ವಾಕ್ಯವೆಂಬ) ಬಯಸಿರಿ. ನೀವು ಅದನ್ನು ಕುಡಿಯುವುದರಿಂದ ಬೆಳವಣಿಗೆ ಹೊಂದಿ ರಕ್ಷಿಸಲ್ಪಡುವಿರಿ. ನೀವು ಈಗಾಗಲೇ ದೇವರ ಒಳ್ಳೆಯತನವನ್ನು ರುಚಿ ನೋಡಿದ್ದೀರಿ.

ಪ್ರಭುವಾದ ಯೇಸುವೇ ಜೀವವುಳ್ಳ “ಕಲ್ಲು.” ಈ ಲೋಕದ ಜನರು ತಮಗೆ ಆ “ಕಲ್ಲು” (ಯೇಸು) ಬೇಡವೆಂದು ತೀರ್ಮಾನಿಸಿದರು. ಆದರೆ ಆತನು ದೇವರಿಂದ ಆರಿಸಲ್ಪಟ್ಟ “ಕಲ್ಲು.” ಆತನು ದೇವರಿಗೆ ಅಮೂಲ್ಯನಾಗಿದ್ದಾನೆ. ಆದ್ದರಿಂದ ಆತನ ಹತ್ತಿರಕ್ಕೆ ಬನ್ನಿರಿ. ನೀವೂ ಸಹ ಜೀವವುಳ್ಳ ಕಲ್ಲುಗಳಾಗಿದ್ದೀರಿ. ಆತ್ಮಸಂಬಂಧವಾದ ದೇವಾಲಯವಾಗುವದಕ್ಕಾಗಿ ನೀವೇ ಕಟ್ಟಲ್ಪಡುತ್ತಿದ್ದೀರಿ; ದೇವರಿಂದ ಸ್ವೀಕೃತವಾಗುವಂಥ ಆತ್ಮಿಕ ಯಜ್ಞಗಳನ್ನು ಯೇಸು ಕ್ರಿಸ್ತನ ಮೂಲಕ ದೇವರಿಗೆ ಅರ್ಪಿಸುವ ಪವಿತ್ರ ಯಾಜಕರಾಗಿದ್ದೀರಿ. ಪವಿತ್ರ ಗ್ರಂಥವು ಹೇಳುವುದೇನೆಂದರೆ,

“ನಾನು ಅಮೂಲ್ಯವಾದ ಮೂಲೆಗಲ್ಲನ್ನು ಆರಿಸಿದ್ದೇನೆ.
    ನಾನು ಆ ಕಲ್ಲನ್ನು ಚಿಯೋನಿನಲ್ಲಿ ಇಟ್ಟಿರುವೆನು;
ಆತನನ್ನು ನಂಬುವವನು ಎಂದಿಗೂ ಆಶಾಭಂಗಪಡುವುದಿಲ್ಲ”(A)

ನಂಬಿಕೆಯುಳ್ಳ ಜನರಾದ ನಿಮಗೆ ಆ ಕಲ್ಲು (ಯೇಸು) ಹೆಚ್ಚು ಬೆಲೆಯುಳ್ಳದ್ದು. ಆದರೆ ನಂಬದ ಜನರಿಗೆ ಆತನು ಇಂತೆಂದಿದ್ದಾನೆ:

“ಕಟ್ಟುವವರು ಬೇಡವೆಂದು ಬಿಟ್ಟ ಕಲ್ಲೇ
    ಮೂಲೆಗಲ್ಲಾಯಿತು.”(B)

ನಂಬದಿರುವ ಜನರಿಗೆ ಆತನು:

“ಜನರನ್ನು ಮುಗ್ಗರಿಸುವ ಕಲ್ಲೂ
    ಜನರನ್ನು ಬೀಳಿಸುವ ಕಲ್ಲೂ ಆಗಿದ್ದಾನೆ.”(C)

ದೇವರ ಮಾತಿಗೆ ಅವಿಧೇಯರಾಗುವುದರಿಂದಲೇ ಜನರು ಮುಗ್ಗರಿಸಿ ಬೀಳುವರು. ಆ ಜನರಿಗೆ ಹೀಗಾಗಬೇಕೆಂಬುದು ದೇವರ ಯೋಜನೆಯಾಗಿತ್ತು.

ನೀವಾದರೋ ದೇವರಾದುಕೊಂಡ ಜನಾಂಗವೂ ರಾಜವಂಶಸ್ಥರಾದ ಯಾಜಕರೂ ಮೀಸಲಾದ ಜನರೂ ದೇವರ ಸ್ವಕೀಯ ಪ್ರಜೆಯೂ ಆಗಿದ್ದೀರಿ. ದೇವರು ತಾನು ಮಾಡಿದ ಅತ್ಯಾಶ್ಚರ್ಯ ಸಂಗತಿಗಳನ್ನು ತಿಳಿಸಲು ನಿಮ್ಮನ್ನು ಅಂಧಕಾರದಿಂದ (ಪಾಪಗಳಿಂದ) ತನ್ನ ಅದ್ಭುತವಾದ ಬೆಳಕಿಗೆ ಕರೆತಂದನು.

10 ಒಂದು ಕಾಲದಲ್ಲಿ, ನೀವು ದೇವರ ಜನರಾಗಿರಲಿಲ್ಲ.
    ಆದರೆ ಈಗ ನೀವು ದೇವರ ಜನರಾಗಿದ್ದೀರಿ.
ಮೊದಲು ನೀವು ಕರುಣೆಯನ್ನು ಹೊಂದಿರಲಿಲ್ಲ.
    ಆದರೆ ಈಗ ನೀವು ದೇವರ ಕರುಣೆಯನ್ನು ಹೊಂದಿಕೊಂಡಿದ್ದೀರಿ.[a]

ದೇವರಿಗಾಗಿ ಜೀವಿಸಿ

11 ಪ್ರಿಯ ಸ್ನೇಹಿತರೇ, ನೀವು ಈ ಲೋಕದಲ್ಲಿ ಪ್ರವಾಸಿಗಳಂತೆ ಮತ್ತು ಪರದೇಶದವರಂತೆ ಇದ್ದೀರಿ. ಆದ್ದರಿಂದ ನಿಮ್ಮ ದೇಹಗಳಿಗೆ ಇಷ್ಟವಾದ ಕೆಟ್ಟಸಂಗತಿಗಳಿಂದ ದೂರವಾಗಿರಿ. ಇವು ನಿಮ್ಮ ಜೀವಾತ್ಮಕ್ಕೆ ವಿರುದ್ಧವಾಗಿ ಹೋರಾಡುತ್ತವೆ. 12 ನಂಬಿಕೆಯಿಲ್ಲದ ಜನರು ನಿಮ್ಮ ಸುತ್ತಮುತ್ತಲೆಲ್ಲಾ ವಾಸಿಸುತ್ತಿದ್ದಾರೆ. ನೀವು ತಪ್ಪು ಮಾಡುತ್ತಿರುವಿರೆಂದು ಅವರು ಹೇಳುವ ಸಾಧ್ಯತೆಯಿದೆ. ಆದ್ದರಿಂದ ಒಳ್ಳೆಯವರಾಗಿ ಬಾಳಿರಿ. ನೀವು ಮಾಡುವ ಒಳ್ಳೆಯ ಕಾರ್ಯಗಳನ್ನು ಅವರು ನೋಡುವರು ಮತ್ತು ದೇವರು ಪ್ರತ್ಯಕ್ಷನಾದ ದಿನದಂದು ಆತನನ್ನು ಕೊಂಡಾಡುವರು.

ಈ ಲೋಕದ ಪ್ರತಿಯೊಬ್ಬ ಅಧಿಕಾರಿಗೂ ವಿಧೇಯರಾಗಿರಿ

13 ಈ ಲೋಕದ ಅಧಿಕಾರಿಗಳಿಗೆ ವಿಧೇಯರಾಗಿರಿ. ಪ್ರಭುವಿಗಾಗಿ ಇದನ್ನು ಮಾಡಿರಿ. ಸರ್ವಾಧಿಕಾರಿಯಾದ ರಾಜನಿಗೆ ವಿಧೇಯರಾಗಿರಿ. 14 ರಾಜನು ಕಳುಹಿಸುವ ಅಧಿಕಾರಿಗಳಿಗೆ ವಿಧೇಯರಾಗಿರಿ. ತಪ್ಪು ಮಾಡಿದವರನ್ನು ದಂಡಿಸಲೂ ಒಳ್ಳೆಯದನ್ನು ಮಾಡಿದವರನ್ನು ಹೊಗಳಲೂ ಅವರನ್ನು ಕಳುಹಿಸಲಾಗಿದೆ. 15 ನೀವು ಒಳ್ಳೆಯದನ್ನು ಮಾಡುವಾಗ ನಿಮ್ಮನ್ನು ಕುರಿತು ಕೆಟ್ಟಮಾತುಗಳನ್ನು ಆಡಲು ಮೂಢರಿಗೆ ಸಾಧ್ಯವಾಗುವುದಿಲ್ಲ. ದೇವರ ಅಪೇಕ್ಷೆಯೂ ಇದೇ ಆಗಿದೆ. 16 ಸ್ವತಂತ್ರ ಹೊಂದಿದವರಂತೆ ಜೀವಿಸಿರಿ. ಆದರೆ ನೀವು ಮಾಡುವ ಕೆಟ್ಟಕಾರ್ಯಗಳನ್ನು ಮರೆಮಾಡಲು ಆ ಸ್ವಾತಂತ್ರ್ಯವನ್ನು ಉಪಯೋಗಿಸಬೇಡಿ. ನೀವು ದೇವರ ಸೇವೆಯನ್ನು ಮಾಡುತ್ತಾ ಜೀವಿಸಿರಿ. 17 ಜನರೆಲ್ಲರಿಗೂ ಗೌರವವನ್ನು ತೋರಿಸಿರಿ. ದೇವರ ಕುಟುಂಬದ ಸಹೋದರ ಸಹೋದರಿಯರೆಲ್ಲರನ್ನು ಪ್ರೀತಿಸಿರಿ. ದೇವರಿಗೆ ಭಯಪಡಿರಿ ಮತ್ತು ರಾಜನನ್ನು ಗೌರವಿಸಿರಿ.

ಕ್ರಿಸ್ತನ ಸಂಕಟದ ಉದಾಹರಣೆ

18 ಸೇವಕರೇ, ನಿಮ್ಮ ಒಡೆಯರ ಅಧಿಕಾರವನ್ನು ಒಪ್ಪಿಕೊಳ್ಳಿರಿ. ಇದನ್ನು ತುಂಬಾ ಗೌರವದಿಂದ ಮಾಡಿರಿ. ಒಳ್ಳೆಯವರಾದ ಮತ್ತು ದಯಾಪರರಾದ ಒಡೆಯರಿಗೆ ನೀವು ವಿಧೇಯರಾಗಿರಬೇಕು ಮತ್ತು ಕೆಟ್ಟವರಾದ ಒಡೆಯರಿಗೂ ವಿಧೇಯರಾಗಿರಬೇಕು. 19 ಒಬ್ಬನು ಅನ್ಯಾಯವಾಗಿ ಸಂಕಟಕ್ಕೆ ಒಳಗಾದಾಗ ದೇವರಿಗಾಗಿ ಅದನ್ನು ಸಹಿಸಿಕೊಂಡರೆ ದೇವರ ಮೆಚ್ಚುಗೆಗೆ ಪಾತ್ರನಾಗುತ್ತಾನೆ. 20 ಆದರೆ ನಿಮ್ಮ ತಪ್ಪಿಗಾಗಿ ನೀವು ದಂಡಿಸಲ್ಪಟ್ಟರೆ ಆ ದಂಡನೆಯನ್ನು ನೀವು ಅನುಭವಿಸಿದ್ದಕ್ಕೆ ನಿಮಗೇನೂ ಕೀರ್ತಿ ಬರುವುದಿಲ್ಲ. ಆದರೆ ನೀವು ಒಳ್ಳೆಯದನ್ನು ಮಾಡಿದ್ದರಿಂದ ಸಂಕಟಕ್ಕೆ ಒಳಗಾಗಿ ಅದನ್ನು ತಾಳ್ಮೆಯಿಂದ ಸಹಿಸಿಕೊಂಡರೆ ಅದು ದೇವರನ್ನು ಸಂತೋಷ ಪಡಿಸುತ್ತದೆ. 21 ಇದಕ್ಕಾಗಿಯೇ ನಿಮ್ಮನ್ನು ಕರೆಯಲಾಯಿತು. ನೀವು ಅನುಸರಿಸತಕ್ಕ ಮಾದರಿಯು ಕ್ರಿಸ್ತನೇ ಆಗಿದ್ದಾನೆ. ಆತನು ಮಾಡಿದಂತೆ ನೀವೂ ಮಾಡಿರಿ. ನೀವು ಸಂಕಟವನ್ನು ಅನುಭವಿಸುವಾಗ ತಾಳ್ಮೆಯಿಂದಿರಬೇಕು, ಏಕೆಂದರೆ ಕ್ರಿಸ್ತನು ನಿಮಗಾಗಿ ಸಂಕಟಪಟ್ಟನು.

22 “ಆತನು (ಕ್ರಿಸ್ತನು) ಪಾಪವನ್ನು ಮಾಡಲಿಲ್ಲ.
    ಆತನ ಬಾಯಿಂದ ಯಾವ ಸುಳ್ಳು ಮಾತೂ ಬರಲಿಲ್ಲ.”(D)

23 ಜನರು ಕ್ರಿಸ್ತನನ್ನು ಬಯ್ದರೂ ಆತನು ಅವರನ್ನು ಬಯ್ಯಲಿಲ್ಲ. ಆತನು ಸಂಕಟವನ್ನು ಅನುಭವಿಸಿದರೂ ಜನರನ್ನು ಹೆದರಿಸಲಿಲ್ಲ. ಆತನು ತನ್ನ ಕಾರ್ಯವನ್ನು ದೇವರಿಗೆ ವಹಿಸಿದನು. ಸರಿಯಾದ ನ್ಯಾಯತೀರ್ಪು ನೀಡುವಾತನು ದೇವರೊಬ್ಬನೇ. 24 ಕ್ರಿಸ್ತನು ನಮ್ಮ ಪಾಪಗಳನ್ನೆಲ್ಲಾ ತನ್ನ ದೇಹದಲ್ಲಿ ಹೊತ್ತುಕೊಂಡು ಶಿಲುಬೆಯನ್ನೇರಿದನು. ನಾವು ಪಾಪಕ್ಕೋಸ್ಕರ ಜೀವಿಸದೆ, ನೀತಿವಂತರಾಗಿ ಜೀವಿಸಬೇಕೆಂಬುದೇ ಆತನ ಉದ್ದೇಶವಾಗಿತ್ತು. ಆತನ (ಕ್ರಿಸ್ತನ) ಬಾಸುಂಡೆಗಳಿಂದ ನಿಮಗೆ ಗುಣವಾಯಿತು. 25 ನೀವು ದಾರಿ ತಪ್ಪಿದ ಕುರಿಗಳಾಗಿದ್ದಿರಿ. ಆದರೆ ಈಗ ನೀವು ನಿಮ್ಮ ಕುರುಬನ ಬಳಿಗೆ ಅಂದರೆ ನಿಮ್ಮ ಆತ್ಮಗಳನ್ನು ಕಾಪಾಡುವಾತನ ಬಳಿಗೆ ಹಿಂತಿರುಗಿ ಬಂದಿರುವಿರಿ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International