Old/New Testament
ಯೆಹೋವನಿಗೆ ಇಸ್ರೇಲ್ ವಿಮುಖಗೊಂಡದ್ದು
20 ಮಾರ್ಗದರ್ಶನಕ್ಕಾಗಿ ಯೆಹೋವನನ್ನು ಕೇಳಲು ಒಂದು ದಿನ ಇಸ್ರೇಲಿನ ಹಿರಿಯರಲ್ಲಿ ಕೆಲವರು ನನ್ನ ಬಳಿಗೆ ಬಂದರು. ಅದು ಸೆರೆವಾಸದ ಏಳನೆ ವರ್ಷದ ಐದನೆ ತಿಂಗಳಿನ ಹತ್ತನೆಯ ದಿನ. ಹಿರಿಯರು ನನ್ನ ಎದುರಿನಲ್ಲಿ ಕುಳಿತುಕೊಂಡರು.
2 ಆಗ ಯೆಹೋವನ ಸಂದೇಶ ನನಗೆ ಬಂದಿತು. ಆತನು ಹೇಳಿದ್ದೇನೆಂದರೆ, 3 “ನರಪುತ್ರನೇ, ಇಸ್ರೇಲಿನ ಹಿರಿಯರೊಂದಿಗೆ ಮಾತಾಡಿ ಅವರಿಗೆ, ‘ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ: ನೀವು ನನ್ನ ಬುದ್ಧಿವಾದವನ್ನು ಕೇಳಲು ಬಂದಿರುವಿರಾ? ನನ್ನ ಜೀವದಾಣೆ, ನನ್ನ ಬುದ್ಧಿವಾದವನ್ನು ನಿಮಗೆ ಹೇಳುವದಿಲ್ಲವೆಂದು ನಾನು ಪ್ರಮಾಣಮಾಡುತ್ತೇನೆ. ನನ್ನ ಒಡೆಯನಾದ ಯೆಹೋವನ ವಾಕ್ಯವಿದು.’ 4 ನರಪುತ್ರನೇ, ನೀನು ಅವರ ನ್ಯಾಯತೀರಿಸುವಿಯಾ? ಅವರ ಪೂರ್ವಿಕರು ಮಾಡಿದ ಭಯಂಕರ ಸಂಗತಿಗಳನ್ನು ನೀನು ಅವರಿಗೆ ಹೇಳಬೇಕು. 5 ನೀನು ಅವರಿಗೆ, ‘ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ: ನಾನು ಇಸ್ರೇಲನ್ನು ಆರಿಸಿಕೊಂಡ ದಿವಸ ನಾನು ನನ್ನನ್ನು ಈಜಿಪ್ಟ್ ದೇಶದಲ್ಲಿ ಅವರಿಗೆ ಪ್ರಕಟಿಸಿಕೊಂಡೆನು. ನಾನು ನನ್ನ ಕೈಯನ್ನು ಮೇಲೆತ್ತಿ ಯಾಕೋಬನ ಕುಟುಂಬಕ್ಕೆ ವಾಗ್ದಾನ ಮಾಡಿದೆನು. ನಾನು ಅವರಿಗೆ, “ನಿಮ್ಮ ಒಡೆಯನಾದ ಯೆಹೋವನು ನಾನೇ.” ಎಂದು ಹೇಳಿದೆನು. 6 ಅವರನ್ನು ಈಜಿಪ್ಟಿನಿಂದ ಹೊರಗೆ ತಂದು, ನಾನು ಅವರಿಗಾಗಿ ಹುಡುಕಿಟ್ಟಿರುವ ದೇಶಕ್ಕೆ ಕರೆದುಕೊಂಡು ಹೋಗುವುದಾಗಿ ವಾಗ್ದಾನ ಮಾಡಿದೆನು. ಅದು ಹಾಲೂ ಜೇನೂ ಹರಿಯುವ ದೇಶವಾಗಿತ್ತು. ಅದು ಎಲ್ಲಾ ದೇಶಗಳಿಗಿಂತಲೂ ಸುಂದರವಾದ ದೇಶ.[a]
7 “‘ನಾನು ಇಸ್ರೇಲ್ ಜನಾಂಗದವರಿಗೆ, ಅವರಲ್ಲಿದ್ದ ಅಸಹ್ಯವಾದ ಎಲ್ಲಾ ವಿಗ್ರಹಗಳನ್ನು ಬಿಸಾಡಿಬಿಡಲು ಹೇಳಿದೆನು. ಈಜಿಪ್ಟಿನ ಹೊಲಸು ವಿಗ್ರಹಗಳಿಂದ ಹೊಲಸು ಆಗಬಾರದು ಎಂದು ಹೇಳಿದೆನು. “ನಾನು ನಿಮ್ಮ ದೇವರಾದ ಯೆಹೋವನು” ಎಂಬುದಾಗಿ ಹೇಳಿದೆನು. 8 ಆದರೆ ಅವರು ನನ್ನ ವಿರುದ್ಧವಾಗಿ ಎದ್ದು ನನ್ನ ಮಾತುಗಳನ್ನು ಕೇಳದೆ ಹೋದರು. ತಮ್ಮ ವಿಗ್ರಹಗಳನ್ನು ಬಿಸಾಡಿಬಿಡಲಿಲ್ಲ. ಈಜಿಪ್ಟಿನ ವಿಗ್ರಹಗಳನ್ನು ತೊರೆದುಬಿಡಲಿಲ್ಲ. ಆದ್ದರಿಂದ ನಾನು ಅವರನ್ನು (ಇಸ್ರೇಲರನ್ನು) ಈಜಿಪ್ಟಿನಲ್ಲಿಯೇ ನಾಶಮಾಡಿ ನನ್ನ ರೋಷಾಗ್ನಿಯನ್ನು ತೀರಿಸಿಕೊಳ್ಳಲು ಆಲೋಚಿಸಿದೆನು. 9 ಆದರೆ ನಾನು ಅವರನ್ನು ನಾಶಮಾಡಲಿಲ್ಲ. ಇಸ್ರೇಲರು ವಾಸವಾಗಿರುವ ಸ್ಥಳದಲ್ಲಿ ಜನರ ಮುಂದೆ ನನ್ನ ಹೆಸರನ್ನು ಅವಮಾನಕ್ಕೆ ಗುರಿಮಾಡಲು ನನಗೆ ಇಷ್ಟವಿರಲಿಲ್ಲ. ಈಜಿಪ್ಟಿನಿಂದ ಹೊರಗೆ ತರುತ್ತೇನೆಂಬ ವಾಗ್ದಾನದೊಡನೆ ನಾನು ಇಸ್ರೇಲರಿಗೆ ಪ್ರಕಟಿಸಿಕೊಂಡಿದ್ದನ್ನು ಅವರು ನೋಡಿದ್ದರು. ಆದ್ದರಿಂದ ನಾನು ಇಸ್ರೇಲರನ್ನು ಅವರ ಮುಂದೆ ನಾಶಮಾಡಲಿಲ್ಲ. 10 ನಾನು ಇಸ್ರೇಲ್ ಜನಾಂಗವನ್ನು ಈಜಿಪ್ಟಿನಿಂದ ಹೊರತಂದು ಅಡವಿ ಪ್ರದೇಶದಲ್ಲಿ ನಡೆಸಿದೆನು. 11 ಅಲ್ಲಿ ಅವರಿಗೆ ಧರ್ಮಶಾಸ್ತ್ರವನ್ನು ಕೊಟ್ಟೆನು. ನನ್ನ ವಿಧಿನಿಯಮಗಳನ್ನು ತಿಳಿಸಿದೆನು. ಅವುಗಳನ್ನು ಕೈಕೊಂಡು ನಡೆಯುವ ಎಲ್ಲರೂ ಜೀವಿಸುತ್ತಾರೆ. 12 ಅವರ ವಿಶ್ರಾಂತಿ ದಿವಸಗಳ ಬಗ್ಗೆ ತಿಳಿಸಿದೆನು. ಆ ವಿಶೇಷ ದಿವಸಗಳು ನನಗೂ ಅವರಿಗೂ ಇರುವ ಸಂಬಂಧಕ್ಕೆ ಒಂದು ಗುರುತಾಗಿತ್ತು. ನಾನೇ ಯೆಹೋವನೆಂದೂ ನಾನು ಅವರನ್ನು ನನಗೆ ವಿಶೇಷವಾದವರನ್ನಾಗಿ ಮಾಡಿಕೊಳ್ಳುತ್ತಿರುವೆನೆಂದೂ ಅವು ತೋರಿಸುತ್ತಿದ್ದವು.
13 “‘ಆದರೆ ಇಸ್ರೇಲ್ ಜನರು ಅಡವಿಯಲ್ಲಿರುವಾಗ ನನಗೆ ವಿರುದ್ಧವಾಗಿ ತಿರುಗಿಬಿದ್ದರು. ನನ್ನ ಆಜ್ಞೆಗಳನ್ನು ಅವರು ಅನುಸರಿಸಲಿಲ್ಲ. ನನ್ನ ನಿಯಮಗಳಿಗೆ ವಿಧೇಯರಾಗಲು ನಿರಾಕರಿಸಿದರು. ಆ ಆಜ್ಞೆಗಳೆಲ್ಲಾ ನ್ಯಾಯವಾದವುಗಳೇ. ಒಬ್ಬನು ಆ ಆಜ್ಞೆಗಳಿಗೆ ವಿಧೇಯನಾದರೆ ಅವನು ಬಾಳುವನು. ನಾನು ನೇಮಿಸಿದ ಸಬ್ಬತ್ ದಿವಸಗಳನ್ನು ವಿಶೇಷವಾಗಿ ಅಲಕ್ಷ್ಯ ಮಾಡಿದರು. ಆ ದಿವಸಗಳಲ್ಲಿ ಅವರು ಎಷ್ಟೋ ಸಾರಿ ಕೆಲಸ ಮಾಡಿದರು. ನನ್ನ ರೌದ್ರದ ತೀವ್ರತೆಯನ್ನು ಅವರು ಅರಿತುಕೊಳ್ಳಲೆಂದು ನಾನು ಅವರನ್ನು ಅಡವಿಯಲ್ಲಿ ದಂಡಿಸಿ ನಾಶಮಾಡಲು ಆಲೋಚಿಸಿಕೊಂಡೆನು. 14 ಆದರೆ ನಾನು ಅವರನ್ನು ನಾಶಮಾಡಲಿಲ್ಲ. ಬೇರೆ ದೇಶದವರು ನಾನು ಅವರನ್ನು ಈಜಿಪ್ಟಿನಿಂದ ಬಿಡಿಸಿ ತರುವುದನ್ನು ನೋಡಿದರು. ನನ್ನ ಒಳ್ಳೆಯ ಹೆಸರನ್ನು ಅವರೆದುರಿನಲ್ಲಿ ಅವಮಾನಪಡಿಸುವದಕ್ಕೆ ನನಗೆ ಇಷ್ಟವಿರಲಿಲ್ಲ. ಆದ್ದರಿಂದ ಅವರ ಮುಂದೆ ಇಸ್ರೇಲನ್ನು ನಾಶಮಾಡಲಿಲ್ಲ. 15 ಅವರು ಅಡವಿಯಲ್ಲಿದ್ದಾಗ ನಾನು ಮತ್ತೊಂದು ಪ್ರಮಾಣವನ್ನು ಮಾಡಿದೆನು. ನಾನು ಅವರಿಗೆ ಕೊಟ್ಟಿದ್ದ ದೇಶಕ್ಕೆ ಅವರನ್ನು ಹೋಗಗೊಡಿಸುವದಿಲ್ಲ ಎಂದು ಪ್ರಮಾಣ ಮಾಡಿದೆನು. ಆ ದೇಶವು ಅತ್ಯುತ್ತಮವಾಗಿತ್ತು. ಎಲ್ಲಾ ದೇಶಗಳಿಗಿಂತ ಬಹು ಸುಂದರವಾದ ದೇಶ.[b]
16 “‘ಇಸ್ರೇಲ್ ಜನರು ನನ್ನ ಆಜ್ಞೆಗಳಿಗೆ ವಿಧೇಯರಾಗಲು ನಿರಾಕರಿಸಿದರು. ನನ್ನ ಕಟ್ಟಳೆಗಳನ್ನು ಅವರು ಅನುಸರಿಸಲಿಲ್ಲ. ನಾನು ನೇಮಿಸಿದ ಸಬ್ಬತ್ ದಿವಸಗಳನ್ನು ಆಚರಿಸಲಿಲ್ಲ. ಅವರ ಮನಸ್ಸು ಆ ಹೊಲಸು ದೇವರುಗಳ ಮೇಲೆ ನೆಟ್ಟಿದ್ದರಿಂದ ಅವರು ಹಾಗೆಲ್ಲಾ ಮಾಡಿದರು. 17 ಆದರೆ ನಾನು ಅವರಿಗಾಗಿ ದುಃಖಗೊಂಡೆನು. ಆದ್ದರಿಂದ ಅವರನ್ನು ನಾನು ನಾಶಮಾಡಲಿಲ್ಲ. ಮರುಭೂಮಿಯಲ್ಲಿ ಅವರನ್ನು ಸಂಪೂರ್ಣವಾಗಿ ನಾಶಮಾಡಲಿಲ್ಲ. 18 ಅವರ ಮಕ್ಕಳಿಗೆ ನಾನು ಬುದ್ಧಿಹೇಳುತ್ತಾ, “ನಿಮ್ಮ ಪೂರ್ವಿಕರಂತೆ ನೀವಾಗಬೇಡಿರಿ. ಅವರ ಅಸಹ್ಯವಾದ ವಿಗ್ರಹಗಳಿಂದ ನಿಮ್ಮನ್ನು ನೀವು ಅಶುದ್ಧಮಾಡಿಕೊಳ್ಳಬೇಡಿರಿ. ಅವರ ಕಟ್ಟಳೆಗಳನ್ನು ಅನುಸರಿಸಬೇಡಿರಿ. ಅವರ ಆಜ್ಞೆಗಳಿಗೆ ವಿಧೇಯರಾಗಬೇಡಿರಿ. 19 ನಾನೇ ನಿಮ್ಮ ದೇವರಾದ ಯೆಹೋವನು. ನನ್ನ ಕಟ್ಟಳೆಗಳಿಗೆ ವಿಧೇಯರಾಗಿರಿ, ನನ್ನ ಆಜ್ಞೆಗಳನ್ನು ಅನುಸರಿಸಿರಿ. ನಾನು ಹೇಳಿದವುಗಳನ್ನು ಮಾಡಿರಿ. 20 ನಾನು ನೇಮಿಸಿದ ಸಬ್ಬತ್ ದಿವಸಗಳು ಮಹತ್ವವಾದವುಗಳೆಂದು ಎಣಿಸಿರಿ. ನನ್ನ ಮತ್ತು ನಿಮ್ಮ ಸಂಬಂಧಕ್ಕೆ ಅವು ಗುರುತುಗಳಾಗಿವೆ. ನಾನು ನಿಮ್ಮ ಕರ್ತನು. ನಾನೇ ನಿಮ್ಮ ದೇವರಾದ ಯೆಹೋವನೆಂದು ತಿಳಿದುಕೊಳ್ಳಲು ಇವುಗಳು ಸಾಕ್ಷಿಗಳಾಗಿವೆ.”
21 “‘ಆದರೆ ಅವರ ಮಕ್ಕಳು ನನಗೆ ವಿರುದ್ಧವಾಗಿ ದಂಗೆ ಎದ್ದರು. ಅವರು ನನ್ನ ಕಟ್ಟಳೆಗಳನ್ನು ಅನುಸರಿಸಲಿಲ್ಲ. ಅವರು ನನ್ನ ಆಜ್ಞೆಗಳಿಗೆ ವಿಧೇಯರಾಗಲಿಲ್ಲ. ನಾನು ಹೇಳಿದ್ದನ್ನು ಅವರು ಮಾಡಲಿಲ್ಲ. ಅವು ಒಳ್ಳೆಯ ಕಟ್ಟಳೆಗಳಾಗಿದ್ದವು. ಅವುಗಳಿಗೆ ವಿಧೇಯರಾಗುವವರು ಜೀವಿಸುವರು. ಅವರು ನನ್ನ ಸಬ್ಬತ್ ದಿವಸಗಳನ್ನು ಆಚರಿಸಲಿಲ್ಲ. ಆದ್ದರಿಂದ ಮರುಭೂಮಿಯಲ್ಲಿ ಅವರನ್ನು ಸಂಪೂರ್ಣವಾಗಿ ನಿರ್ಮೂಲ ಮಾಡಲು ನಿರ್ಧರಿಸಿದೆನು. ನನ್ನ ಕೋಪದ ತೀಕ್ಷ್ಣತೆಯನ್ನು ಅವರು ತಿಳಿದುಕೊಳ್ಳಬೇಕೆಂದು ತೀರ್ಮಾನಿಸಿದೆನು. 22 ಆದರೆ ನಾನು ನನ್ನನ್ನು ಹಾಗೆ ಮಾಡದಂತೆ ತಡೆದೆನು. ಇಸ್ರೇಲರನ್ನು ಈಜಿಪ್ಟಿನಿಂದ ಹೊರತರುವದನ್ನು ಬೇರೆ ಜನಾಂಗದವರು ನೋಡಿರುತ್ತಾರೆ. ಆದ್ದರಿಂದ ನಾನು ಅವರನ್ನು ನಾಶಮಾಡಲಿಲ್ಲ. ನನ್ನ ಹೆಸರಿನ ಘನತೆಯನ್ನು ಉಳಿಸಿಕೊಂಡೆನು. 23 ಆಗ ನಾನು ಅಡವಿಯಲ್ಲಿ ಅವರೊಂದಿಗೆ ಇನ್ನೊಂದು ಮಾತುಕೊಟ್ಟೆನು. ನಾನು ಅವರನ್ನು ನಾನಾ ದೇಶಗಳಿಗೆ ಚದರಿಸಿಬಿಡುವೆನೆಂದು ಅವರಿಗೆ ತಿಳಿಸಿದೆನು.
24 “‘ಇಸ್ರೇಲ್ ಜನರು ನನ್ನ ಆಜ್ಞೆಗಳಿಗೆ ವಿಧೇಯರಾಗಲಿಲ್ಲ. ನನ್ನ ಕಟ್ಟಳೆಗಳಿಗೆ ವಿಧೇಯರಾಗಲು ನಿರಾಕರಿಸಿದರು. ನಾನು ನೇಮಿಸಿದ ಸಬ್ಬತ್ ದಿವಸಗಳನ್ನು ಅಲಕ್ಷ್ಯಮಾಡಿದರು. ಮತ್ತು ಅವರ ಪೂರ್ವಿಕರ ಹೊಲಸು ವಿಗ್ರಹಗಳನ್ನು ಪೂಜಿಸಿದರು. 25 ಆಗ ನಾನು ಅವರಿಗೆ ಒಳ್ಳೆಯದಲ್ಲದ ಕಟ್ಟಳೆಗಳನ್ನು ಕೊಟ್ಟೆನು. ಜೀವವನ್ನು ಕೊಡಲು ಅಸಾಧ್ಯವಾದ ನಿಯಮಗಳನ್ನು ವಿಧಿಸಿದೆನು. 26 ಅವರು ತಮ್ಮ ಕಾಣಿಕೆಗಳಿಂದ ತಮ್ಮನ್ನೆ ಹೊಲಸು ಮಾಡಿಕೊಳ್ಳಲು ಅವರನ್ನು ಬಿಟ್ಟುಕೊಟ್ಟೆನು. ಅವರು ತಮ್ಮ ವಿಗ್ರಹಗಳಿಗೆ ತಮ್ಮ ಸ್ವಂತ ಚೊಚ್ಚಲು ಗಂಡುಮಕ್ಕಳನ್ನು ಆಹುತಿಕೊಡಲು ಪ್ರಾರಂಭಿಸಿದರು. ಈ ರೀತಿಯಾಗಿ ನಾನು ಆ ಜನರನ್ನು ನಾಶಮಾಡುವೆನು. ಆಗ ಅವರು ನಾನು ಒಡೆಯನಾದ ಯೆಹೋವನೆಂದು ತಿಳಿದುಕೊಳ್ಳುವರು.’ 27 ಆದ್ದರಿಂದ ನರಪುತ್ರನೇ, ಇಸ್ರೇಲ್ ಜನಾಂಗದವರೊಂದಿಗೆ ಮಾತನಾಡು. ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ: ‘ನಿಮ್ಮ ಪೂರ್ವಿಕರು ನನಗೆ ಅಪಮಾನ ಮಾಡಿದರು ಮತ್ತು ದ್ರೋಹ ಮಾಡಿದರು. 28 ನಾನು ಅವರಿಗೆ ಕೊಡುವುದಾಗಿ ವಾಗ್ದಾನ ಮಾಡಿದ ದೇಶಕ್ಕೆ ಅವರನ್ನು ಕರೆದುಕೊಂಡು ಬಂದೆನು. ಆದರೆ ಎತ್ತರವಾದ ಬೆಟ್ಟವನ್ನಾಗಲಿ ಎಲೆಗಳುಳ್ಳ ಮರವನ್ನಾಗಲಿ ಅವರು ಕಂಡಾಗಲೆಲ್ಲಾ ಅವರು ಅಲ್ಲಿಗೆ ಹೋದರು ಮತ್ತು ವಿಗ್ರಹಗಳನ್ನು ಪೂಜಿಸಿದರು. ಅಲ್ಲಿ ಅವರು ಯಜ್ಞಗಳನ್ನೂ ನನ್ನನ್ನು ಕೋಪಗೊಳಿಸುವ ಕಾಣಿಕೆಗಳನ್ನೂ ಧೂಪವನ್ನೂ ಮತ್ತು ಪಾನದ್ರವ್ಯಾರ್ಪಣೆಗಳನ್ನೂ ಅರ್ಪಿಸಿದರು. 29 ನಾನು ಇಸ್ರೇಲರಿಗೆ, “ನೀವು ಎತ್ತರದಲ್ಲಿರುವ ಪೂಜಾಸ್ಥಳಗಳಿಗೆ ಯಾಕೆ ಹೋಗುತ್ತೀರಿ?” ಎಂದು ಪ್ರಶ್ನಿಸಿದೆನು. ಆ ಪೂಜಾಸ್ಥಳಗಳು ಇಂದಿಗೂ “ಎತ್ತರವಾದ ಸ್ಥಳ” ಎಂದು ಕರೆಯಲ್ಪಡುತ್ತಿವೆ. ಈಗಲೂ ಆ ಪೂಜಾಸ್ಥಳಗಳು ಅಲ್ಲಿವೆ.’”
30 ದೇವರು ಹೇಳಿದ್ದೇನೆಂದರೆ, “ಇಸ್ರೇಲ್ ಜನರು ದುಷ್ಕೃತ್ಯಗಳನ್ನು ಮಾಡಿದ್ದಾರೆ. ಆದ್ದರಿಂದ ನೀನು ಹೋಗಿ ಅವರಿಗೆ ಹೇಳು: ‘ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ: ನಿಮ್ಮ ಪೂರ್ವಿಕರು ಮಾಡಿದಂತೆಯೇ ನೀವು ನಿಮ್ಮನ್ನು ಅಪವಿತ್ರರನ್ನಾಗಿ ಮಾಡಿಕೊಳ್ಳುತ್ತಿದ್ದೀರಿ. ನೀವು ಸೂಳೆಯರ ಹಾಗೆ ವರ್ತಿಸಿರುತ್ತೀರಿ. ನಿಮ್ಮ ಪೂರ್ವಿಕರು ಪೂಜಿಸಿದ ಆ ಭಯಂಕರವಾದ ವಿಗ್ರಹಗಳೊಂದಿಗೆ ಇರುವದಕ್ಕಾಗಿ ನನ್ನನ್ನು ನೀವು ತೊರೆದುಬಿಟ್ಟಿರಿ. 31 ನೀವು ಅವುಗಳಿಗೆ ಅದೇ ರೀತಿಯ ಕಾಣಿಕೆಗಳನ್ನರ್ಪಿಸುತ್ತೀರಿ. ಆ ಸುಳ್ಳು ದೇವರುಗಳಿಗೆ ನೀವು ನಿಮ್ಮ ಮಕ್ಕಳನ್ನು ಬೆಂಕಿಯ ಮೂಲಕ ಆಹುತಿ ಮಾಡುತ್ತೀರಿ. ಈ ಹೊತ್ತಿನ ದಿನದ ತನಕವೂ ಆ ಹೊಲಸು ವಿಗ್ರಹಗಳ ಮೂಲಕ ನೀವು ನಿಮ್ಮನ್ನು ಅಶುದ್ಧಪಡಿಸಿಕೊಳ್ಳುತ್ತಿದ್ದೀರಿ. ನೀವು ನನ್ನ ಬಳಿಗೆ ಬಂದು ನನ್ನ ಸಲಹೆಗಳನ್ನು ಕೇಳಲು ನಿಮ್ಮನ್ನು ನಾನು ಸ್ವಾಗತಿಸಬೇಕೋ? ನಾನು ಒಡೆಯನಾದ ಯೆಹೋವನು. ನನ್ನ ಜೀವದಾಣೆ, ನಾನು ನಿಮಗೆ ಉತ್ತರಿಸುವುದಿಲ್ಲ; ನಿಮಗೆ ಸಲಹೆಗಳನ್ನೂ ಕೊಡುವದಿಲ್ಲ. 32 ನಾವು ಮರದ ಮತ್ತು ಕಲ್ಲಿನ ವಸ್ತುಗಳನ್ನು ಪೂಜಿಸುತ್ತಾ ಇತರ ಜನಾಂಗಗಳಂತೆ ಇರೋಣ ಎಂದು ನೀವು ಯೋಚಿಸುತ್ತಲೇ ಇರುತ್ತೀರಿ. ನಿಮ್ಮ ಮನಸ್ಸುಗಳಲ್ಲಿರುವ ಈ ಆಲೋಚನೆಯು ಎಂದಿಗೂ ನೆರವೇರುವುದಿಲ್ಲ.’”
33 ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ: “ನನ್ನ ಜೀವದಾಣೆ, ನಾನು ರಾಜನಾಗಿ ನಿಮ್ಮ ಮೇಲೆ ದೊರೆತನ ಮಾಡುವೆನೆಂದು ಪ್ರಮಾಣ ಮಾಡುತ್ತೇನೆ. ನಾನು ನನ್ನ ಬಲವಾದ ಕೈಯನ್ನು ಮತ್ತು ಶಕ್ತಿಯುತವಾದ ತೋಳನ್ನು ಮೇಲೆತ್ತಿ ನಿಮ್ಮನ್ನು ದಂಡಿಸುವೆನು. ನಿಮ್ಮ ವಿರುದ್ಧವಾಗಿ ನನ್ನ ಕೋಪವನ್ನು ತೋರ್ಪಡಿಸುವೆನು. 34 ಪರದೇಶಗಳಿಂದ ನಾನು ನಿಮ್ಮನ್ನು ಹೊರತರುವೆನು. ನಾನು ಆ ದೇಶಗಳಲ್ಲಿ ನಿಮ್ಮನ್ನು ಚದರಿಸಿದೆನು. ಆದರೆ ಆ ದೇಶಗಳಿಂದ ನಾನು ನಿಮ್ಮನ್ನು ಒಟ್ಟುಗೂಡಿಸಿ ಹಿಂದಕ್ಕೆ ಬರಮಾಡುವೆನು. ನನ್ನ ಬಲವಾದ ಕೈಯನ್ನು ಮತ್ತು ಶಕ್ತಿಯುತವಾದ ತೋಳನ್ನು ಮೇಲೆತ್ತಿ ನಿಮ್ಮನ್ನು ಶಿಕ್ಷಿಸಿ ನನ್ನ ಕೋಪವನ್ನು ಪ್ರದರ್ಶಿಸುವೆನು. 35 ನಾನು ಹಿಂದಿನ ಕಾಲದಲ್ಲಿ ಮಾಡಿದಂತೆ ಮರುಭೂಮಿಗೆ ನಿಮ್ಮನ್ನು ನಡೆಸುವೆನು. ಆದರೆ ಇದು ಅನ್ಯಜನಾಂಗಗಳು ವಾಸಿಸುವ ಸ್ಥಳದಲ್ಲಿರುವುದು ಮತ್ತು ನಾನು ಎದುರುಬದುರಾಗಿ ನಿಂತು ನಿಮಗೆ ನ್ಯಾಯತೀರಿಸುವೆನು. 36 ನಾನು ಈಜಿಪ್ಟಿನ ಮರುಭೂಮಿಯಲ್ಲಿ ನಿಮ್ಮ ಪೂರ್ವಿಕರನ್ನು ದಂಡಿಸಿದಂತೆ ನಿಮ್ಮನ್ನೂ ದಂಡಿಸುವೆನು.” ನನ್ನ ಒಡೆಯನಾದ ಯೆಹೋವನು ಇವುಗಳನ್ನು ಹೇಳಿದನು.
37 “ನಾನು ನಿಮ್ಮ ನ್ಯಾಯವಿಚಾರಣೆ ಮಾಡಿ ನೀವು ಮಾಡಿದ ತಪ್ಪುಗಳಿಗೆ ನನ್ನ ಒಡಂಬಡಿಕೆಯ ಪ್ರಕಾರ ನಿಮ್ಮನ್ನು ಶಿಕ್ಷಿಸುವೆನು. 38 ನನಗೆ ವಿರೋಧವಾಗಿ ಎದ್ದು ಪಾಪಮಾಡಿದ ಜನರನ್ನು ಅವರ ಸ್ವದೇಶದಿಂದ ತೆಗೆದುಬಿಡುವೆನು. ಅವರು ಇನ್ನೆಂದಿಗೂ ಇಸ್ರೇಲ್ ದೇಶಕ್ಕೆ ಹಿಂತಿರುಗಿ ಬರುವುದೇ ಇಲ್ಲ. ನಾನೇ ಯೆಹೋವನೆಂಬುದು ಆಗ ನಿಮಗೆ ತಿಳಿಯುವುದು.”
39 ಇಸ್ರೇಲ್ ಜನರೇ, ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ: “ಆ ಹೊಲಸು ವಿಗ್ರಹಗಳನ್ನು ಆರಾಧಿಸಬೇಕೆನ್ನುವವನು ಹೋಗಿ ಆರಾಧಿಸಲಿ. ಮುಂದಿನ ಕಾಲದಲ್ಲಂತೂ ನೀವು ನನ್ನ ಬುದ್ಧಿಮಾತನ್ನು ಕೇಳೇ ಕೇಳುವಿರಿ. ನನ್ನ ಪರಿಶುದ್ಧ ಹೆಸರನ್ನು ನೀವು ನಿಮ್ಮ ಬಲಿಗಳಿಂದಲೂ ಬೊಂಬೆಗಳಿಂದಲೂ ಅಪಕೀರ್ತಿಗೆ ಗುರಿಮಾಡುವುದೇ ಇಲ್ಲ.”
40 ನನ್ನ ಒಡೆಯನಾದ ಯೆಹೋವನು ಹೇಳುವುದೇನೆಂದರೆ, “ಇಸ್ರೇಲಿನ ಎತ್ತರವಾದ ನನ್ನ ಪವಿತ್ರಪರ್ವತಕ್ಕೆ ಜನರು ಬರಲೇಬೇಕು. ಅಲ್ಲಿ ಅವರು ನನ್ನ ಸೇವೆ ಮಾಡಲೇಬೇಕು. ಇಡೀ ಇಸ್ರೇಲ್ ಜನಾಂಗವು ತಮ್ಮ ದೇಶದಲ್ಲಿರುವುದು. ಅಲ್ಲಿ ನಾನು ಅವರನ್ನು ಸ್ವೀಕರಿಸಿಕೊಳ್ಳುವೆನು. ಅಲ್ಲಿ ನೀವು ನಿಮ್ಮ ಕಾಣಿಕೆಗಳನ್ನು ಪ್ರಥಮ ಫಲಗಳನ್ನು ಮತ್ತು ಎಲ್ಲಾ ಪವಿತ್ರ ಕಾಣಿಕೆಗಳನ್ನು ನನಗೆ ತರಬೇಕೆಂದು ಅಪೇಕ್ಷಿಸುತ್ತೇನೆ. 41 ಆಗ ನಿಮ್ಮ ಕಾಣಿಕೆಯ ಸುವಾಸನೆಯಿಂದ ಸಂತೋಷಭರಿತನಾಗುವೆನು. ಇದು ನಿಮ್ಮನ್ನು ಹಿಂದಕ್ಕೆ ನಿಮ್ಮ ದೇಶಕ್ಕೆ ಕರೆತಂದಾಗ ಆಗುವದು. ನಾನು ನಿಮ್ಮನ್ನು ಅನೇಕ ದೇಶಗಳಲ್ಲಿ ಚದರಿಸಿದೆನು. ಆದರೆ ನಾನು ನಿಮ್ಮನ್ನು ಒಟ್ಟುಗೂಡಿಸಿ ನಿಮ್ಮ ಮೂಲಕ ನನ್ನ ಪವಿತ್ರತೆಯನ್ನು ಪ್ರದರ್ಶಿಸುವೆನು. ಆ ಎಲ್ಲಾ ದೇಶಗಳವರು ಇದನ್ನು ನೋಡುವರು. 42 ನಾನು ನಿಮ್ಮನ್ನು ತಿರುಗಿ ನಿಮ್ಮ ಪೂರ್ವಿಕರಿಗೆ ವಾಗ್ದಾನ ಮಾಡಿದ ಇಸ್ರೇಲ್ ದೇಶಕ್ಕೆ ಬರಮಾಡಿದಾಗ ನಾನೇ ಯೆಹೋವನೆಂದು ಅರಿತುಕೊಳ್ಳುವಿರಿ. 43 ನಿಮ್ಮನ್ನು ನಿಮ್ಮ ದುಷ್ಟತ್ವದಿಂದ ಹೊಲಸು ಮಾಡಿಕೊಂಡದ್ದನ್ನು ಅಲ್ಲಿ ಜ್ಞಾಪಕಮಾಡಿಕೊಳ್ಳುವಿರಿ. ಆಗ ನೀವು ನಾಚಿಕೆಪಡುವಿರಿ. 44 ಇಸ್ರೇಲ್ ಜನಾಂಗಗಳೇ, ನೀವು ಅನೇಕ ಕೆಟ್ಟ ವಿಷಯಗಳನ್ನು ಮಾಡಿರುತ್ತೀರಿ. ಆ ದುಷ್ಕೃತ್ಯಗಳಿಗಾಗಿ ನೀವು ನಾಶವಾಗಿ ಹೋಗಬೇಕಾಗಿತ್ತು. ಆದರೆ ನನ್ನ ಒಳ್ಳೆಯ ಹೆಸರಿನ ಸಲುವಾಗಿ ನೀವು ಹೊಂದಬೇಕಾದ ಶಿಕ್ಷೆಯನ್ನು ನಾನು ನಿಮಗೆ ವಿಧಿಸುವುದಿಲ್ಲ. ಆಗ ನಾನೇ ಒಡೆಯನಾದ ಯೆಹೋವನೆಂದು ತಿಳಿದುಕೊಳ್ಳುವಿರಿ.” ಇದು ನನ್ನ ಒಡೆಯನಾದ ಯೆಹೋವನ ನುಡಿ.
45 ಯೆಹೋವನ ವಾಕ್ಯವು ನನಗೆ ಬಂದಿತು. ಆತನು ಹೇಳಿದ್ದೇನೆಂದರೆ, 46 “ನರಪುತ್ರನೇ, ಯೆಹೂದದ ದಕ್ಷಿಣದಲ್ಲಿರುವ ನೆಗೆವ್ ಕಡೆಗೆ ನೋಡು. ನೆಗೆವ್ ಅಡವಿಗೆ ವಿರುದ್ಧವಾಗಿ ಮಾತನಾಡು. 47 ನೆಗೆವ್ ಅಡವಿಗೆ ಹೀಗೆ ಹೇಳು: ‘ಯೆಹೋವನ ಮಾತುಗಳನ್ನು ಆಲೈಸು. ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ: ನಾನು ನಿನ್ನ ಅಡವಿಯಲ್ಲಿ ಬೆಂಕಿಯನ್ನು ಹಾಕುತ್ತೇನೆ. ಆ ಬೆಂಕಿಯು ಪ್ರತಿಯೊಂದು ಹಸಿರು ಮರವನ್ನೂ ಪ್ರತಿಯೊಂದು ಒಣಗಿದ ಮರವನ್ನೂ ಸುಟ್ಟುಬಿಡುವುದು. ಆ ಬೆಂಕಿಯನ್ನು ನಂದಿಸಲಾಗುವದಿಲ್ಲ. ದಕ್ಷಿಣದಿಂದ ಉತ್ತರದ ತನಕವಿರುವ ಪ್ರತಿಯೊಂದು ಮುಖವು ಅದರ ತಾಪವನ್ನು ಅನುಭವಿಸುವುದು. 48 ಆಗ ಎಲ್ಲಾ ಜನರು ಯೆಹೋವನಾದ ನಾನೇ ಬೆಂಕಿಯನ್ನಿಟ್ಟಿದ್ದು ಎಂದು ತಿಳಿದುಕೊಳ್ಳುವರು. ಆ ಬೆಂಕಿಯು ನಂದಿಸಲ್ಪಡುವುದಿಲ್ಲ.’”
49 ಆಗ ನಾನು (ಯೆಹೆಜ್ಕೇಲ್), “ಅಯ್ಯೋ, ನನ್ನ ಒಡೆಯನಾದ ಯೆಹೋವನೇ, ನಾನು ಇದನ್ನೆಲ್ಲಾ ಹೇಳಿದರೆ, ನಿಗೂಢವಾದ ಕಥೆಗಳನ್ನು ಹೇಳುತ್ತಿದ್ದೇನೆಂದು ಹೇಳುವರು. ಮತ್ತು ನನಗೆ ಇನ್ನೆಂದಿಗೂ ಕಿವಿಗೊಡುವದಿಲ್ಲ” ಎಂದು ಹೇಳಿದೆನು.
ಯೆಹೋವನ ಖಡ್ಗ ಮತ್ತು ಬಾಬಿಲೋನ್
21 ಯೆಹೋವನ ಸಂದೇಶ ನನಗೆ ತಿರುಗಿ ಬಂತು. ಆತನು ಹೇಳಿದ್ದೇನೆಂದರೆ, 2 “ನರಪುತ್ರನೇ, ಜೆರುಸಲೇಮಿನ ಕಡೆಗೆ ನೋಡಿ ಅವರ ಪವಿತ್ರ ಸ್ಥಳಗಳಿಗೆ ವಿರುದ್ಧವಾಗಿ ಹೇಳು. ನನ್ನ ಪರವಾಗಿ ಇಸ್ರೇಲ್ ದೇಶದ ವಿರುದ್ಧವಾಗಿ ಮಾತನಾಡು. 3 ಇಸ್ರೇಲ್ ದೇಶಕ್ಕೆ ಹೀಗೆ ಹೇಳು: ‘ಯೆಹೋವನು ನನಗೆ ಹೀಗೆಂದಿದ್ದಾನೆ, ನಾನು ನಿನಗೆ ವಿರೋಧವಾಗಿದ್ದೇನೆ. ನನ್ನ ಖಡ್ಗವನ್ನು ಅದರ ಒರೆಯಿಂದ ಹೊರತೆಗೆಯುವೆನು. ನಿನ್ನಲ್ಲಿರುವ ಒಳ್ಳೆಯ ಜನರನ್ನೂ ಕೆಟ್ಟ ಜನರನ್ನೂ ತೆಗೆದುಬಿಡುವೆನು. 4 ಒಳ್ಳೆಯ ಜನರನ್ನೂ ಕೆಟ್ಟ ಜನರನ್ನೂ ನಿನ್ನಿಂದ ಕಡಿದುಹಾಕುವೆನು. ನನ್ನ ಖಡ್ಗವನ್ನು ಒರೆಯಿಂದ ತೆಗೆದು ದಕ್ಷಿಣದಿಂದ ಉತ್ತರದ ತನಕ ಇರುವ ಎಲ್ಲಾ ಜನರಿಗೆ ವಿರುದ್ಧವಾಗಿ ಉಪಯೋಗಿಸುವೆನು. 5 ಆಗ, ಯೆಹೋವನಾದ ನಾನೇ ನನ್ನ ಖಡ್ಗವನ್ನು ಒರೆಯಿಂದ ತೆಗೆದಿದ್ದೇನೆಂದು ಎಲ್ಲಾ ಜನರಿಗೆ ಗೊತ್ತಾಗುವುದು. ನನ್ನ ಖಡ್ಗವು ತನ್ನ ಕಾರ್ಯಮಾಡದೆ ತಿರುಗಿ ಒರೆಯೊಳಗೆ ಹೋಗುವದಿಲ್ಲ.’”
6 ದೇವರು ನನಗೆ ಹೇಳಿದ್ದೇನೆಂದರೆ, “ನರಪುತ್ರನೇ, ಹೃದಯ ಒಡೆದ ಮನುಷ್ಯನು ದುಃಖದಿಂದಿರುವಾಗ ಅಳುವ ಶಬ್ದವನ್ನು ಮಾಡು. ಈ ಶಬ್ದವನ್ನು ಜನರ ಮುಂದೆ ಮಾಡು. 7 ಆಗ ಅವರು, ‘ನೀನು ದುಃಖದಿಂದ ಅಳುವದೇಕೆ?’ ಎಂದು ವಿಚಾರಿಸುವರು. ಆಗ ನೀನು ಹೀಗೆ ಹೇಳಬೇಕು: ‘ಭೀತಿಯನ್ನು ಉಂಟು ಮಾಡುವ ವಾರ್ತೆ ಬರುವದರಿಂದ ಎಲ್ಲರ ಹೃದಯಗಳು ಭಯದಿಂದ ಕರಗಿಹೋಗಿರುತ್ತವೆ; ಕೈಗಳು ಬಲಹೀನವಾಗುತ್ತವೆ. ಪ್ರತಿ ಮನುಷ್ಯನ ಆತ್ಮವು ಕೃಶವಾಗುವುದು. ಮೊಣಗಂಟುಗಳು ನೀರಿನಂತಿರುವವು.’ ನೋಡಿ, ಆ ಕೆಟ್ಟ ಸುದ್ದಿಯು ಬರುತ್ತಲಿದೆ. ಇವೆಲ್ಲಾ ನಡೆಯುವವು.” ನನ್ನ ಒಡೆಯನಾದ ಯೆಹೋವನು ಇದನ್ನು ಹೇಳಿದನು.
ಖಡ್ಗವು ತಯಾರಿದೆ
8 ಯೆಹೋವನ ನುಡಿ ನನಗೆ ಬಂತು. ಆತನು ಹೇಳಿದ್ದೇನೆಂದರೆ, 9 “ನರಪುತ್ರನೇ, ನನ್ನ ಪರವಾಗಿ ಜನರೊಂದಿಗೆ ಮಾತನಾಡು. ಅವರಿಗೆ ಹೀಗೆ ಹೇಳು: ‘ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ:
“‘ನೋಡು, ಒಂದು ಖಡ್ಗ, ಹರಿತವಾದ ಖಡ್ಗ,
ಆ ಖಡ್ಗವು ಉಜ್ಜಿ ಶುಭ್ರಮಾಡಲ್ಪಟ್ಟಿದೆ.
10 ಕೊಲ್ಲುವದಕ್ಕಾಗಿ ಆ ಖಡ್ಗವು ಹರಿತಮಾಡಲ್ಪಟ್ಟಿದೆ,
ಮಿಂಚಿನಂತೆ ಹೊಳೆಯುತ್ತಿದೆ.
ನನ್ನ ಮಗನೇ, ನಾನು ನಿನ್ನನ್ನು ಶಿಕ್ಷಿಸುತ್ತಿದ್ದ ಬೆತ್ತದಿಂದ ನೀನು ಓಡಿಹೋದೆ.
ಬೆತ್ತದ ಶಿಕ್ಷೆಯನ್ನು ಅನುಭವಿಸಲು ನೀನು ಒಪ್ಪಲಿಲ್ಲ.
11 ಖಡ್ಗವು ಉಜ್ಜಲ್ಪಟ್ಟಿದೆ.
ಅದು ಈಗ ಉಪಯೋಗಿಸಲ್ಪಡುತ್ತದೆ.
ಖಡ್ಗವು ಹರಿತಮಾಡಲ್ಪಟ್ಟು ಚೆನ್ನಾಗಿ ಉಜ್ಜಲ್ಪಟ್ಟಿದೆ.
ಅದನ್ನು ಈಗ ಕೊಲ್ಲುವವನ ಕೈಯಲ್ಲಿ ಕೊಡಲಾಗುವುದು.
12 “‘ಬೊಬ್ಬೆಹಾಕು, ಕಿರುಚು, ಓ ನರಪುತ್ರನೇ, ಯಾಕೆಂದರೆ ಖಡ್ಗವು ನನ್ನ ಜನರ ಮೇಲೆ ಮತ್ತು ಇಸ್ರೇಲಿನ ಎಲ್ಲಾ ಅಧಿಪತಿಗಳ ಮೇಲೆ ಉಪಯೋಗಿಸಲ್ಪಡುವುದು. ಇಸ್ರೇಲನ್ನು ಆಳುವವರಿಗೆ ಯುದ್ಧವು ಬೇಕು. ಆಗ ಅವರು ಖಡ್ಗವು ಬಂದಾಗ ನನ್ನ ಜನರೊಂದಿಗೆ ಇರಬಹುದು. ಆದ್ದರಿಂದ ನಿನ್ನ ತೊಡೆಗೆ ಬಡಿದು ಗಟ್ಟಿಯಾದ ಸ್ವರದಿಂದ ನಿನ್ನ ದುಃಖವನ್ನು ಪ್ರದರ್ಶಿಸು. 13 ಯಾಕೆಂದರೆ ಶೋಧನೆಯು ಸಂಭವಿಸಿತು. ಆದರೆ ನೀನು ಬೆತ್ತದ ಶಿಕ್ಷೆ ಅನುಭವಿಸಲು ನಿರಾಕರಿಸಿದಿ. ಹಾಗಾದರೆ ನಾನು ನಿನಗೆ ಏನು ಉಪಯೋಗಿಸಬೇಕು? ಹೌದು, ಖಡ್ಗವೇ?’” ನನ್ನ ಒಡೆಯನಾದ ಯೆಹೋವನು ನುಡಿದಿದ್ದಾನೆ. 14 ಆತನು ಹೀಗೆ ಹೇಳಿದನು: “ನರಪುತ್ರನೇ, ಕೈತಟ್ಟಿ ನನ್ನ ಪರವಾಗಿ ಜನರೊಂದಿಗೆ ಮಾತನಾಡು.
“ಖಡ್ಗವು ಎರಡು ಬಾರಿ ಕೆಳಕ್ಕೆ ಹಾಕಲ್ಪಡಲಿ,
ಹೌದು, ಮೂರು ಬಾರಿ!
ಈ ಖಡ್ಗವು ಜನರನ್ನು ಕೊಲ್ಲುವದಕ್ಕಾಗಿಯೇ ಇದೆ.
ಇದು ಮಹಾಹತ್ಯೆ ಮಾಡುವದಕ್ಕಾಗಿ ಇದೆ.
ಈ ಖಡ್ಗವು ಅವರನ್ನು ತೂರಿಹೋಗುವುದು.
15 ಅವರ ಹೃದಯಗಳು ಭಯದಿಂದ ಕರಗಿಹೋಗುವುದು.
ಬಹು ಜನರು ಪ್ರಜ್ಞೆ ತಪ್ಪಿ ಬೀಳುವರು.
ನಗರದ್ವಾರದ ಬಳಿಯಲ್ಲಿದ್ದು
ಈ ಖಡ್ಗವು ಬಹು ಜನರನ್ನು ಕೊಲ್ಲುವುದು.
ಹೌದು, ಖಡ್ಗವು ಮಿಂಚಿನಂತೆ ಹೊಳೆಯುವುದು.
ಜನರನ್ನು ಕೊಲ್ಲುವುದಕ್ಕಾಗಿ ಅದು ಹೊಳಪುಮಾಡಲ್ಪಟ್ಟಿದೆ.
16 ಖಡ್ಗವೇ, ಹರಿತವಾಗು,
ಬಲಭಾಗದಲ್ಲಿ ತುಂಡರಿಸು;
ಮುಂಭಾಗದಲ್ಲಿ ತುಂಡರಿಸು,
ಎಡಭಾಗದಲ್ಲಿ ತುಂಡರಿಸು.
ನಿನ್ನ ಖಡ್ಗವು ಯಾವ ಸ್ಥಳಕ್ಕೆ ನುಗ್ಗಬೇಕೆಂದಿದೆಯೋ ಆ ಸ್ಥಳಕ್ಕೆ ಹೋಗು.
17 “ಆಗ ನಾನೂ ಚಪ್ಪಾಳೆ ಬಡಿದು ನನ್ನ ಕೋಪವನ್ನು ನಿಲ್ಲಿಸುವೆನು.
ಯೆಹೋವನಾದ ನಾನೇ ಇದನ್ನು ನುಡಿದಿದ್ದೇನೆ.”
ಜೆರುಸಲೇಮ್ ದಂಡಿಸಲ್ಪಟ್ಟಿತು
18 ಯೆಹೋವನ ಸಂದೇಶ ನನಗೆ ಬಂದಿತು. ಆತನು ಹೀಗೆ ಹೇಳಿದನು: 19 “ನರಪುತ್ರನೇ, ಬಾಬಿಲೋನಿನ ರಾಜನ ಖಡ್ಗವು ಇಸ್ರೇಲಿಗೆ ಬರಲು ಎರಡು ಮಾರ್ಗಗಳ ನಕ್ಷೆಯನ್ನು ರಚಿಸು. ಅವರೆಡೂ ಒಂದೇ ಪ್ರದೇಶದಿಂದ (ಬಾಬಿಲೋನಿನಿಂದ) ಆರಂಭವಾಗುತ್ತವೆ. ಪ್ರತಿಯೊಂದು ರಸ್ತೆಯ ಆರಂಭದಲ್ಲಿ ಸೂಚನೆ ಕಂಬವನ್ನು ಚಿತ್ರಿಸು. 20 ಯಾವ ಮಾರ್ಗದಲ್ಲಿ ಖಡ್ಗವು ಬರುವದೋ ಆ ದಾರಿಯನ್ನು ಗುರುತಿಸು. ಒಂದು ರಸ್ತೆಯು ಅಮ್ಮೋನಿಯರ ನಗರವಾದ ರಬ್ಬಾಗೆ ಹೋಗುವದು. ಇನ್ನೊಂದು ಮಾರ್ಗವು ಯೆಹೂದದಲ್ಲಿರುವ ಭದ್ರಪಡಿಸಲ್ಪಟ್ಟ ಪಟ್ಟಣವಾಗಿರುವ ಜೆರುಸಲೇಮಿಗೆ ಹೋಗುವುದು. 21 ಇದರ ಅರ್ಥವೇನೆಂದರೆ, ರಸ್ತೆಯು ಶಾಖೆಗಳಾಗಿ ಒಡೆಯುವ ಸ್ಥಳದಲ್ಲಿ ಬಾಬಿಲೋನಿನ ರಾಜನು ಶಕುನವನ್ನು ಕೇಳಲು ನಿಂತಿದ್ದಾನೆ. ಅವನು ಕೆಲವು ಬಾಣಗಳನ್ನು ಅಲುಗಾಡಿಸಿದ್ದಾನೆ. ಅವನು ಕೆಲವು ಬಾಣಗಳನ್ನು ಚದರಿಸಿ, ತನ್ನ ವಂಶದ ವಿಗ್ರಹಗಳಿಗೆ ಕೆಲವು ಪ್ರಶ್ನೆಗಳನ್ನು ಕೇಳಿದನು, ಮತ್ತು ತಾನು ಕೊಂದ ಪ್ರಾಣಿಯ ಕಾಳಿಜವನ್ನು ನೋಡಿದನು.
22 “ಜೆರುಸಲೇಮನ್ನು ಸೂಚಿಸುವ ಮಂತ್ರಶಕ್ತಿಯ ವಸ್ತು ಅವನ ಬಲಗೈಗೆ ಬರುವುದು. ಅವನು ತನ್ನೊಂದಿಗೆ ಭಿತ್ತಿಭೇದಕ ಯಂತ್ರಗಳನ್ನು ತರುವನು. ಅವನು ಅಪ್ಪಣೆ ಮಾಡಿದ ಕೂಡಲೇ ಅವನ ಸೈನಿಕರು ಕೊಲ್ಲಲು ಪ್ರಾರಂಭಿಸುವರು. ರಣರಂಗದ ಆರ್ಭಟ ಮಾಡುವರು. ಆಮೇಲೆ ನಗರದ ಸುತ್ತಲೂ ಮಣ್ಣಿನ ದಿಬ್ಬ ಕಟ್ಟುವರು. ಕೋಟೆಗೋಡೆಯ ತನಕ ಮಣ್ಣಿನ ರಸ್ತೆ ಮಾಡುವರು. ಮರದಿಂದ ಮಾಡಿದ ಗೋಪುರಗಳನ್ನು ಮಾಡಿ ಅಲ್ಲಿಂದ ನಗರಕ್ಕೆ ಧಾಳಿ ಮಾಡುವರು. 23 ಇಸ್ರೇಲ್ ಜನರಿಗೆ ಆ ಮಂತ್ರತಂತ್ರಗಳ ಗುರುತು ಅರ್ಥವಿಲ್ಲದ್ದಾಗಿದೆ. ಅವರು ಮಾಡಿದ ವಾಗ್ದಾನವು ಅವರೊಂದಿಗಿದೆ. ಆದರೆ ಯೆಹೋವನು ಅವರ ಪಾಪಗಳನ್ನು ನೆನಪಿಗೆ ತರುವನು. ಆಗ ಇಸ್ರೇಲರು ಶತ್ರುವಶವಾಗುವರು.”
24 ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ: “ನೀನು ಅನೇಕ ದುಷ್ಕೃತ್ಯಗಳನ್ನು ಮಾಡಿರುವೆ. ನಿನ್ನ ಪಾಪಗಳು ಬಹಳ ಸ್ಪಷ್ಟವಾಗಿವೆ. ನೀನು ದೋಷಿ ಎಂಬುದನ್ನು ನಾನು ನೆನಪುಮಾಡಿಕೊಳ್ಳುವಂತೆ ಮಾಡುವೆ. ವೈರಿಯು ನಿನ್ನನ್ನು ಹಿಡಿಯುವನು. 25 ಇಸ್ರೇಲಿನ ದುಷ್ಟ ಅಧಿಪತಿಯೇ, ನೀನು ಸಾಯುವಿ. ನಿನಗೆ ನನ್ನ ಶಿಕ್ಷೆಯು ಬಂದಾಯಿತು. ನಿನ್ನ ಅಂತ್ಯವು ಹತ್ತಿರವೇ ಇದೆ.”
26 ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ: “ನಿನ್ನ ಮುಂಡಾಸವನ್ನು ತೆಗೆ! ನಿನ್ನ ಕಿರೀಟವನ್ನು ತೆಗೆ! ಈಗ ಇರುವಂತೆಯೇ ಸಂಗತಿಗಳು ಇರುವುದಿಲ್ಲ. ಮುಖ್ಯಾಧಿಕಾರಿಗಳು ತಗ್ಗಿಸಲ್ಪಡುವರು. ಈಗ ಸಾಧಾರಣ ವ್ಯಕ್ತಿಗಳಾಗಿರುವವರು ಪ್ರಮುಖ ನಾಯಕರುಗಳಾಗುವರು. 27 ನಾನು ಆ ನಗರವನ್ನು ಸಂಪೂರ್ಣವಾಗಿ ನಾಶಮಾಡುವೆನು ಆದರೆ ನಾನು ನೇಮಿಸಿದ ವ್ಯಕ್ತಿಯು ರಾಜನಾಗುವ ತನಕ ಇದು ಸಂಭವಿಸುವುದಿಲ್ಲ; ಅವನು ರಾಜನಾದ ಮೇಲೆ ಈ ಪಟ್ಟಣವನ್ನು ಅವನಿಗೊಪ್ಪಿಸುವೆನು.”
ಅಮ್ಮೋನಿನ ವಿರುದ್ಧ ಪ್ರವಾದನೆ
28 ದೇವರು ಹೇಳಿದ್ದು, “ನರಪುತ್ರನೇ, ನನ್ನ ಪರವಾಗಿ ಜನರ ಕೂಡ ಮಾತನಾಡು. ‘ನನ್ನ ಒಡೆಯನಾದ ಯೆಹೋವನು ಅಮ್ಮೋನಿಯರ ಬಗ್ಗೆಯೂ ಅವರ ದೂಷಣೆಗಳ ಬಗ್ಗೆಯೂ ಹೀಗೆ ಹೇಳುತ್ತಾನೆ:
“‘ನೋಡು, ಒಂದು ಖಡ್ಗ.
ಆ ಖಡ್ಗವು ಒರೆಯಿಂದ ಹೊರಬಂದಿದೆ.
ಆ ಖಡ್ಗವನ್ನು ಹರಿತಗೊಳಿಸಲಾಗಿದೆ ಮತ್ತು ನಯಗೊಳಿಸಲಾಗಿದೆ.
ಖಡ್ಗವು ಕೊಲ್ಲಲು ಸಿದ್ಧವಾಗಿದೆ.
ಮಿಂಚಿನಂತೆ ಹೊಳೆಯಲೆಂದು ಅದನ್ನು ನಯಗೊಳಿಸಲಾಗಿದೆ.
29 “‘ಓ ಖಡ್ಗವೇ, ನಿನ್ನ ಕುರಿತು ಅವರು ಸುಳ್ಳುದರ್ಶನಗಳನ್ನು ಕಾಣುವರು.
ನಿನ್ನ ಕುರಿತು ಅವರು ಹೇಳುವ ಕಣಿಯು ದಾರಿ ತಪ್ಪಿಸುತ್ತದೆ.
ಅದು ಕೇವಲ ಸುಳ್ಳುಗಳ ಕಂತೆ.
ಓ ಖಡ್ಗವೇ, ನಿನ್ನನ್ನು ದುಷ್ಟರ ಕುತ್ತಿಗೆಗಳ ಮೇಲೆ ಇರಿಸಲಾಗುವುದು.
ಬೇಗನೇ ಅವರು ಹೆಣಗಳಾಗಿ ಬೀಳುವರು.
ಅವರ ಸಮಯವು ಬಂದಿದೆ.
ಇದು ಅವರ ಅಂತ್ಯದಂಡನೆಯ ಸಮಯವಾಗಿದೆ.
ಬಾಬಿಲೋನ್ ವಿರುದ್ಧ ಪ್ರವಾದನೆ
30 “‘ಬಾಬಿಲೋನೇ, ನಿನ್ನ ಖಡ್ಗವನ್ನು ಒರೆಯಲ್ಲಿ ಹಾಕು. ನೀನು ಎಲ್ಲಿ ನಿರ್ಮಿಸಲ್ಪಟ್ಟಿದ್ದೆಯೋ, ಎಲ್ಲಿ ನೀನು ಜನ್ಮತಾಳಿದೆಯೋ ಅಲ್ಲಿ ನಿನ್ನ ನ್ಯಾಯತೀರಿಸುವೆನು. 31 ನಿನ್ನ ಮೇಲೆ ನನ್ನ ರೌದ್ರವನ್ನು ಸುರಿಸುವೆನು. ನನ್ನ ರೌದ್ರವು ಬಿಸಿಗಾಳಿಯಂತೆ ನಿನ್ನನ್ನು ಸುಡುವದು. ನಾನು ನಿನ್ನನ್ನು ಕ್ರೂರ ಮನುಷ್ಯರ ಕೈಗೆ ಒಪ್ಪಿಸುವೆನು. ಅವರು ಜನರನ್ನು ಕೊಲ್ಲುವುದರಲ್ಲಿ ನಿಪುಣರು. 32 ನೀನು ಬೆಂಕಿಗೆ ಸೌದೆಯಂತೆ ಇರುವಿ. ನಿನ್ನ ರಕ್ತವು ಭೂಮಿಯ ಆಳಕ್ಕೆ ಹರಿಯುವದು. ಜನರು ಇನ್ನು ಮುಂದಕ್ಕೆ ನಿನ್ನನ್ನು ಎಂದಿಗೂ ನೆನಪು ಮಾಡರು. ಇದನ್ನು ಯೆಹೋವನಾದ ನಾನೇ ಹೇಳಿದ್ದೇನೆ.’”
ಸ್ವಾರ್ಥಪರರರಾದ ಶ್ರೀಮಂತರನ್ನು ದಂಡಿಸಲಾಗುವುದು
5 ಶ್ರೀಮಂತ ಜನರೇ, ಕೇಳಿರಿ! ನಿಮಗೆ ಮಹಾಕಷ್ಟವು ಬರಲಿರುವುದರಿಂದ ಗೋಳಾಡಿರಿ, ದುಃಖಪಡಿರಿ. 2 ನಿಮ್ಮ ಶ್ರೀಮಂತಿಕೆಯು ಕೊಳೆತುಹೋಗುತ್ತದೆ ಮತ್ತು ಬೆಲೆಯಿಲ್ಲದಂತಾಗುತ್ತದೆ. ನಿಮ್ಮ ಬಟ್ಟೆಗಳನ್ನು ನುಸಿಗಳು ತಿಂದುಹಾಕುತ್ತವೆ. 3 ನಿಮ್ಮ ಬೆಳ್ಳಿಬಂಗಾರಗಳು ತುಕ್ಕು ಹಿಡಿಯುತ್ತವೆ. ನೀವು ತಪ್ಪಿತಸ್ಥರೆಂಬುದಕ್ಕೆ ಅದೇ ಸಾಕ್ಷಿಯಾಗಿದೆ. ಅವುಗಳ ತುಕ್ಕು ನಿಮ್ಮ ದೇಹವನ್ನು ಬೆಂಕಿಯಂತೆ ತಿಂದುಬಿಡುತ್ತವೆ. ನೀವು ಈ ಕೊನೆಯ ದಿನಗಳಲ್ಲಿ ನಿಮ್ಮ ಭಂಡಾರವನ್ನು ತುಂಬಿಸಿಕೊಂಡಿದ್ದೀರಿ. 4 ಜನರು ನಿಮ್ಮ ಹೊಲಗಳಲ್ಲಿ ಕೆಲಸ ಮಾಡಿದರೂ ನೀವು ಅವರಿಗೆ ಕೂಲಿಯನ್ನು ಕೊಡಲಿಲ್ಲ. ಅವರು ನಿಮ್ಮ ವಿರುದ್ಧವಾಗಿ ಗೋಳಾಡುತ್ತಿದ್ದಾರೆ. ಅವರು ನಿಮ್ಮ ಬೆಳೆಗಳ ಸುಗ್ಗಿಯನ್ನು ಮಾಡಿದರು. ಈಗ ಪರಲೋಕ ಸೇನೆಯ ಅಧಿಪತಿಯಾದ ಪ್ರಭುವು ಅವರ ಗೋಳಾಟವನ್ನು ಕೇಳಿಸಿಕೊಂಡಿದ್ದಾನೆ.
5 ನಿಮ್ಮ ಈ ಲೋಕದ ಜೀವನವು ಐಶ್ವರ್ಯದಿಂದ ತುಂಬಿದೆ. ನೀವು ಇಷ್ಟಪಟ್ಟದ್ದನ್ನೆಲ್ಲ ಪಡೆದುಕೊಂಡು ತೃಪ್ತರಾದಿರಿ. ವಧಿಸುವ ಕಾಲಕ್ಕೆ ಸಿದ್ಧವಾಗಿರುವ ಪಶುವಿನಂತೆ ನಿಮ್ಮನ್ನು ಕೊಬ್ಬಿಸಿಕೊಂಡಿದ್ದೀರಿ. 6 ನೀವು ಒಳ್ಳೆಯ ಜನರಿಗೆ ದಂಡನೆ ವಿಧಿಸಿದಿರಿ. ಅವರು ನಿಮಗೆ ವಿರೋಧವಾಗಿಲ್ಲದಿದ್ದರೂ ಅವರನ್ನು ಕೊಂದುಹಾಕಿದಿರಿ.
ತಾಳ್ಮೆಯಿಂದಿರಿ
7 ಸಹೋದರ ಸಹೋದರಿಯರೇ, ತಾಳ್ಮೆಯಿಂದಿರಿ, ಪ್ರಭುವಾದ ಯೇಸು ಪ್ರತ್ಯಕ್ಷನಾಗುತ್ತಾನೆ. ಆದ್ದರಿಂದ ಅಲ್ಲಿಯವರೆಗೆ ತಾಳ್ಮೆಯಿಂದಿರಿ. ತನ್ನ ಅಮೂಲ್ಯ ಬೆಳೆಯು ಭೂಮಿಯಿಂದ ಬರುವ ತನಕ ರೈತನು ತಾಳ್ಮೆಯಿಂದ ಕಾಯುತ್ತಾನೆ. ಮೊದಲ ಹಾಗೂ ಕೊನೆಯ ಮಳೆಯು ತನ್ನ ಬೆಳೆಯ ಮೇಲೆ ಸುರಿಯುವ ತನಕ ರೈತನು ತಾಳ್ಮೆಯಿಂದ ಕಾದಿರುತ್ತಾನೆ. 8 ನೀವೂ ತಾಳ್ಮೆಯಿಂದಿರಬೇಕು. ನಿಮ್ಮ ನಿರೀಕ್ಷೆಯನ್ನು ಬಿಡಬೇಡಿ. ಪ್ರಭು ಯೇಸು ಬೇಗನೆ ಪ್ರತ್ಯಕ್ಷನಾಗುವನು. 9 ಸಹೋದರ ಸಹೋದರಿಯರೇ, ಒಬ್ಬರ ಮೇಲೊಬ್ಬರು ದೂರದಿರಿ. ನೀವು ದೂರುವುದನ್ನು ನಿಲ್ಲಿಸದಿದ್ದರೆ ದೋಷಿಗಳೆಂದು ನಿಮಗೆ ತೀರ್ಪು ನೀಡಲಾಗುವುದು. ನ್ಯಾಯಧಿಪತಿಯು ಬರಲು ಸಿದ್ಧನಾಗಿದ್ದಾನೆ!
10 ಸಹೋದರ ಸಹೋದರಿಯರೇ, ಪ್ರಭುವಿನ ಸಂದೇಶವನ್ನು ತಿಳಿಸಿದ ಪ್ರವಾದಿಗಳು ನಿಮಗೆ ಮಾದರಿಯಾಗಿರಲಿ. ಅವರು ಅನೇಕ ರೀತಿಯಲ್ಲಿ ಸಂಕಟವನ್ನು ಅನುಭವಿಸಿದರೂ ತಾಳ್ಮೆಯಿಂದಿದ್ದರು. 11 ತಾಳಿಕೊಂಡಿರುವವರನ್ನು ಧನ್ಯರೆಂದು ಹೇಳುತ್ತೇವಲ್ಲವೇ. ಯೋಬನ ತಾಳ್ಮೆಯ ಬಗ್ಗೆ ನಿಮಗೆ ತಿಳಿದಿದೆ. ಯೋಬನು ಎಲ್ಲಾ ಬಗೆಯ ಸಂಕಟಗಳನ್ನು ಅನುಭವಿಸಿದ ಮೇಲೆ ಪ್ರಭುವು ಅವನಿಗೆ ಸಹಾಯ ಮಾಡಿದನು. ಪ್ರಭುವು ದಯೆಯಿಂದಲೂ ಕರುಣೆಯಿಂದಲೂ ತುಂಬಿದ್ದಾನೆಂದು ಇದು ತೋರಿಸುತ್ತದೆ.
ಎಚ್ಚರಿಕೆಯಿಂದ ಮಾತಾಡಿರಿ
12 ನನ್ನ ಸಹೋದರ ಸಹೋದರಿಯರೇ, ನೀವು ವಾಗ್ದಾನ ಮಾಡುವಾಗ ಆಣೆ ಇಡಬೇಡಿರಿ. ಇದು ಬಹಳ ಮುಖ್ಯವಾದದ್ದು. ನಿಮ್ಮ ಹೇಳಿಕೆಯನ್ನು ನಿರೂಪಿಸಲು ಪರಲೋಕದ, ಭೂಲೋಕದ ಮತ್ತು ಬೇರಾವುದರ ಹೆಸರನ್ನೂ ಬಳಸಬೇಡಿ. ಹೌದಾಗಿದ್ದರೆ, “ಹೌದು” ಎನ್ನಿರಿ. ಇಲ್ಲವಾಗಿದ್ದರೆ, “ಇಲ್ಲ” ಎನ್ನಿರಿ. ನೀವು ಹೀಗೆ ಮಾಡಿದರೆ, ನಿಮಗೆ ದೋಷಿಗಳೆಂಬ ತೀರ್ಪಾಗುವುದಿಲ್ಲ.
ಪ್ರಾರ್ಥನೆಯ ಶಕ್ತಿ
13 ನಿಮ್ಮಲ್ಲಿ ತೊಂದರೆಗೆ ಒಳಗಾಗಿರುವವನು ಪ್ರಾರ್ಥಿಸಬೇಕು. ನಿಮ್ಮಲ್ಲಿ ಸಂತೋಷದಿಂದಿರುವವನು ಹಾಡಬೇಕು. 14 ನಿಮ್ಮಲ್ಲಿ ಕಾಯಿಲೆಯಾಗಿರುವವನು ಸಭಾಹಿರಿಯರನ್ನು ಕರೆಯಿಸಬೇಕು. ಹಿರಿಯರು ಅವನಿಗೆ ಎಣ್ಣೆಯನ್ನು ಹಚ್ಚಿ, ಪ್ರಭುವಿನ ಹೆಸರಿನಲ್ಲಿ ಅವನಿಗೋಸ್ಕರ ಪ್ರಾರ್ಥಿಸಬೇಕು. 15 ನಂಬಿಕೆಯಿಂದ ಮಾಡಿದ ಪ್ರಾರ್ಥನೆಯು ಕಾಯಿಲೆಯಲ್ಲಿರುವವನನ್ನು ಗುಣಪಡಿಸುತ್ತದೆ. ಪ್ರಭುವು ಅವನನ್ನು ಗುಣಪಡಿಸುತ್ತಾನೆ. ಒಂದುವೇಳೆ, ಆ ವ್ಯಕ್ತಿಯು ಪಾಪ ಮಾಡಿದ್ದರೆ, ಪ್ರಭುವು ಅವನನ್ನು ಕ್ಷಮಿಸುತ್ತಾನೆ.
16 ನೀವು ಮಾಡಿದ ತಪ್ಪುಗಳನ್ನು ಒಬ್ಬರಿಗೊಬ್ಬರು ಯಾವಾಗಲೂ ಹೇಳಿಕೊಳ್ಳಿರಿ. ಬಳಿಕ ಒಬ್ಬರಿಗೊಬ್ಬರು ಪ್ರಾರ್ಥಿಸಿರಿ. ನೀವು ಹೀಗೆ ಮಾಡಿದರೆ, ದೇವರು ನಿಮ್ಮನ್ನು ಗುಣಪಡಿಸುವನು. ನೀತಿವಂತನ ಅತ್ಯಾಸಕ್ತಿಯುಳ್ಳ ಪ್ರಾರ್ಥನೆಯು ಬಲವಾಗಿದೆ. 17 ಎಲೀಯನು ಸಹ ನಮ್ಮಂತೆಯೇ ಒಬ್ಬ ಮನುಷ್ಯನಾಗಿದ್ದನು. ಮಳೆ ಬಾರದಂತೆ ಅವನು ಪ್ರಾರ್ಥಿಸಿದಾಗ ಮೂರುವರೆ ವರ್ಷಗಳವರೆಗೆ ಆ ನಾಡಿನಲ್ಲಿ ಮಳೆಯೇ ಬೀಳಲಿಲ್ಲ! 18 ಬಳಿಕ ಎಲೀಯನು ಮಳೆ ಬರುವಂತೆ ಪ್ರಾರ್ಥಿಸಿದಾಗ ಆಕಾಶದಿಂದ ಮಳೆ ಸುರಿದು ಭೂಮಿಯಲ್ಲಿ ಮತ್ತೆ ಬೆಳೆಯು ಫಲಿಸಿತು.
ಆತ್ಮವನ್ನು ರಕ್ಷಿಸಿ
19 ನನ್ನ ಸಹೋದರ ಸಹೋದರಿಯರೇ, ನಿಮ್ಮಲ್ಲಿ ಒಬ್ಬನು ಸತ್ಯದಿಂದ ದೂರವಾಗಿ ಅಲೆದಾಡುತ್ತಿದ್ದರೆ, ಮತ್ತೊಬ್ಬನು ಅವನಿಗೆ ಸಹಾಯಮಾಡಿ ಅವನನ್ನು ಸತ್ಯಕ್ಕೆ ನಡೆಸಬೇಕು. 20 ಇದನ್ನು ಜ್ಞಾಪಕದಲ್ಲಿಟ್ಟುಕೊಂಡಿರಿ: ಒಬ್ಬ ಪಾಪಿಯನ್ನು ತಪ್ಪಾದ ಮಾರ್ಗದಿಂದ ಸರಿಯಾದ ಮಾರ್ಗಕ್ಕೆ ನಡೆಸುವವನು ಆ ಪಾಪಿಯ ಆತ್ಮವನ್ನು ಮರಣದಿಂದ ಪಾರುಮಾಡಿದವನೂ ಅನೇಕ ಪಾಪಗಳಿಗೆ ಕ್ಷಮಾಪಣೆಯಾಗುವಂತೆ ಮಾಡಿದವನೂ ಆಗುತ್ತಾನೆ.
Kannada Holy Bible: Easy-to-Read Version. All rights reserved. © 1997 Bible League International