Old/New Testament
ನೀತಿಯ ನ್ಯಾಯತೀರ್ಪು
18 ಯೆಹೋವನ ನುಡಿಯು ನನಗೆ ಬಂತು. ಆತನು ಹೇಳಿದ್ದೇನೆಂದರೆ, 2 “ಇಸ್ರೇಲ್ ದೇಶದ ಕುರಿತಾದ ಈ ಗಾದೆಯನ್ನು ನೀವೆಲ್ಲರೂ ಮರುನುಡಿಯುವುದೇಕೆ?
‘ಹೆತ್ತವರು ಹುಳಿ ದ್ರಾಕ್ಷಿಹಣ್ಣನ್ನು ತಿಂದಾಗ
ಮಕ್ಕಳ ಬಾಯಿ ಹುಳಿಯಾಗುವುದು.’[a]”
3 ಆದರೆ ಒಡೆಯನಾದ ಯೆಹೋವನು ಹೇಳುವುದೇನೆಂದರೆ, “ಇಸ್ರೇಲಿನ ಜನರು ಇನ್ನು ಮುಂದಕ್ಕೆ ಈ ಗಾದೆಯು ಸತ್ಯವೆಂದು ನೆನಸುವದಿಲ್ಲ. 4 ಎಲ್ಲಾ ಪ್ರಾಣಗಳು ನನ್ನವೇ. ತಂದೆಯ ಪ್ರಾಣವೂ ಮಗನ ಪ್ರಾಣವೂ ನನ್ನವೇ. ಪಾಪಮಾಡುವವನು ಮಾತ್ರ ಸಾಯುವನು.
5 “ಒಬ್ಬ ವ್ಯಕ್ತಿ ನೀತಿವಂತನಾಗಿದ್ದರೆ ಅವನು ಬಾಳುವನು. ಆ ಮನುಷ್ಯನು ಜನರನ್ನು ಸರಿಯಾದ ರೀತಿಯಲ್ಲಿ ನೋಡುವನು. 6 ಆ ನೀತಿವಂತ ಮನುಷ್ಯನು ಬೆಟ್ಟಗಳಿಗೆ ಹೋಗಿ ಅಲ್ಲಿ ಸುಳ್ಳು ದೇವರಿಗೆ ಅರ್ಪಿಸಿದ ಆಹಾರದಲ್ಲಿ ಪಾಲು ತೆಗೆದುಕೊಳ್ಳುವದಿಲ್ಲ. ಇಸ್ರೇಲಿನಲ್ಲಿರುವ ಆ ಹೊಲಸು ವಿಗ್ರಹಗಳಿಗೆ ಅವನು ಪ್ರಾರ್ಥಿಸುವುದಿಲ್ಲ. ಅವನು ತನ್ನ ನೆರೆಯವನ ಹೆಂಡತಿಯೊಂದಿಗೆ ವ್ಯಭಿಚಾರ ಮಾಡುವುದಿಲ್ಲ. ತನ್ನ ಹೆಂಡತಿಯು ಮುಟ್ಟಾದಾಗ ಆಕೆಯನ್ನು ಕೂಡುವುದಿಲ್ಲ. 7 ಆ ಒಳ್ಳೆಯ ಮನುಷ್ಯನು ಜನರ ಬಲಹೀನತೆಯನ್ನು ದುರುಪಯೋಗಪಡಿಸಿಕೊಳ್ಳುವುದಿಲ್ಲ; ಸಾಲ ಮಾಡಿದವನ ಒತ್ತೆಯನ್ನು ಬಿಗಿಹಿಡಿಯುವುದಿಲ್ಲ; ಯಾರ ಸೊತ್ತನ್ನೂ ದರೋಡೆ ಮಾಡುವುದಿಲ್ಲ; ಹಸಿದವನಿಗೆ ಅನ್ನ ಕೊಡುವನು; ಬಟ್ಟೆಯಿಲ್ಲದವನಿಗೆ ಬಟ್ಟೆ ಕೊಡುವನು; 8 ಅವನು ಸಾಲ ಕೊಡುವಾಗ ಬಡ್ಡಿಹಾಕುವುದಿಲ್ಲ. ಅವನು ಕೆಡುಕುಗಳನ್ನು ಮಾಡುವುದಿಲ್ಲ. ಅವನು ತನ್ನ ವ್ಯವಹಾರಗಳಲ್ಲಿ ಪ್ರತಿಯೊಬ್ಬನೊಂದಿಗೂ ಯಥಾರ್ಥವಾಗಿಯೂ ನ್ಯಾಯವಾಗಿಯೂ ಇರುವನು. 9 ಅವನು ನನ್ನ ನಿಯಮಗಳಿಗನುಸಾರವಾಗಿ ಜೀವಿಸುವನು ಮತ್ತು ನನ್ನ ಕಟ್ಟಳೆಗಳಿಗೆ ನಂಬಿಗಸ್ತಿಕೆಯಿಂದ ವಿಧೇಯನಾಗುವನು. ಅಂಥಾ ಮನುಷ್ಯನು ನೀತಿವಂತನಾಗಿದ್ದಾನೆ ಮತ್ತು ಅವನು ಖಂಡಿತವಾಗಿಯೂ ಬದುಕುವನು.
10 “ಆದರೆ ಒಂದುವೇಳೆ ಆ ನೀತಿವಂತನ ಮಗನು ಒಳ್ಳೆಯ ಕಾರ್ಯಗಳನ್ನು ಮಾಡದೆ ದರೋಡೆ ಮಾಡುವವನೂ ಕೊಲೆಮಾಡುವವನೂ ಆಗಿರಬಹುದು. 11 ಅವನ ತಂದೆಯು ಈ ಪಾಪಗಳಿಂದ ದೂರವಿದ್ದಾಗ್ಯೂ, ಮಗನು ಈ ಪಾಪಗಳಲ್ಲಿ ಪ್ರತಿಯೊಂದನ್ನೂ ಮಾಡಿದ್ದಿರಬಹುದು. ಅವನು ಬೆಟ್ಟದ ಮೇಲೆ ಹೋಗಿ ಅಲ್ಲಿ ವಿಗ್ರಹಗಳಿಗರ್ಪಿಸಿದ ನೈವೇದ್ಯದಲ್ಲಿ ಪಾಲು ತೆಗೆದುಕೊಳ್ಳಬಹುದು. ಆ ಕೆಟ್ಟ ಮಗನು ನೆರೆಯವನ ಹೆಂಡತಿಯೊಂದಿಗೆ ವ್ಯಭಿಚಾರ ನಡೆಸಿದ್ದಿರಬಹುದು. 12 ಬಡ, ನಿಸ್ಸಹಾಯಕರಾದ ಜನರಿಗೆ ಕಿರುಕುಳ ಕೊಟ್ಟಿರಬಹುದು. ಜನರ ನಿಸ್ಸಹಾಯಕತೆಯ ಪ್ರಯೋಜನ ಪಡೆಯುತ್ತಿರಬಹುದು. ಒತ್ತೆಗೆ ತೆಗೆದುಕೊಂಡ ವಸ್ತುವನ್ನು ಹಿಂದಕ್ಕೆ ಕೊಡದೆ ಇದ್ದಿರಬಹುದು. ಆ ಮಗನು ವಿಗ್ರಹಗಳಿಗೆ ಪ್ರಾರ್ಥಿಸಿ ಇನ್ನೂ ಅನೇಕ ಭಯಂಕರ ಕೃತ್ಯಗಳನ್ನೂ ಮಾಡಿದ್ದಿರಬಹುದು. 13 ಆ ಕೆಟ್ಟ ಮಗನಿಂದ ಯಾರಾದರೂ ಸಾಲ ತೆಗೆದುಕೊಂಡಿದ್ದರೆ ಅವನು ಅವರಿಂದ ಬಡ್ಡಿಯನ್ನು ಕಡ್ಡಾಯವಾಗಿ ವಸೂಲು ಮಾಡಿದ್ದಿರಬಹುದು. ಹೀಗಿರುವದರಿಂದ ಆ ಕೆಟ್ಟ ಮಗನು ಹೆಚ್ಚುಕಾಲ ಬದುಕುವುದಿಲ್ಲ. ಅವನು ಭಯಂಕರ ಕೃತ್ಯಗಳನ್ನು ಮಾಡಿರುವದರಿಂದ ಕೊಲ್ಲಲ್ಪಡುವನು. ಅವನ ಮರಣಕ್ಕೆ ಅವನೇ ಜವಾಬ್ದಾರನು.
14 “ಇಗೋ, ಆ ಕೆಟ್ಟ ಮಗನಿಗೆ ಒಬ್ಬ ಮಗನಿರಬಹುದು. ತಂದೆ ಮಾಡುವ ದುಷ್ಕೃತ್ಯಗಳನ್ನು ನೋಡಿದ ಅವನು ತಂದೆಯಂತೆ ಜೀವಿಸದಿರಬಹುದು. 15 ಈ ಒಳ್ಳೆಯ ಮಗನು ಬೆಟ್ಟಕ್ಕೆ ಹೋಗಿ ಅಲ್ಲಿ ವಿಗ್ರಹಗಳಿಗೆ ಅರ್ಪಿಸಿದ ನೈವೇದ್ಯವನ್ನು ತಿನ್ನುವುದಿಲ್ಲ. ಅವನು ಇಸ್ರೇಲಿನ ಹೊಲಸು ವಿಗ್ರಹಗಳಿಗೆ ಪ್ರಾರ್ಥಿಸುವುದಿಲ್ಲ. ಅವನು ತನ್ನ ನೆರೆಯವನ ಹೆಂಡತಿಯೊಂದಿಗೆ ವ್ಯಭಿಚಾರ ಮಾಡುವುದಿಲ್ಲ. 16 ಆ ಒಳ್ಳೆಯ ಮಗನು ಯಾರ ಮೇಲೂ ದಬ್ಬಾಳಿಕೆ ನಡೆಸುವುದಿಲ್ಲ. ಅವನು ಒತ್ತೆಯಿಲ್ಲದೆ ಸಾಲಕೊಡುವನು. ಅವನು ಯಾರನ್ನೂ ದರೋಡೆ ಮಾಡುವುದಿಲ್ಲ. ಅವನು ಹಸಿದವರಿಗೆ ಊಟ ಕೊಡುವನು; ಬಟ್ಟೆಯಿಲ್ಲದವರಿಗೆ ಬಟ್ಟೆಯನ್ನು ಕೊಡುವನು. 17 ಅವನು ಬಡವರಿಗೆ ನೋವು ಮಾಡುವುದಿಲ್ಲ. ಅವನು ಹಣವನ್ನು ಸಾಲಕೊಡುವಾಗ ಬಡ್ಡಿಹಾಕುವುದಿಲ್ಲ. ಅವನು ನನ್ನ ಕಟ್ಟಳೆಗಳಿಗೆ ವಿಧೇಯನಾಗುವನು. ಮತ್ತು ನನ್ನ ನಿಯಮಗಳನ್ನು ಅನುಸರಿಸುವನು. ಈ ಒಳ್ಳೆಯ ಮಗನು ತಂದೆಯ ದುಷ್ಟತನದ ಕಾರಣಕ್ಕಾಗಿ ಮರಣಶಿಕ್ಷೆಯನ್ನು ಅನುಭವಿಸುವದಿಲ್ಲ. ಆ ಒಳ್ಳೆಯ ಮಗನು ಬಾಳುವನು. 18 ತಂದೆಯು ಜನರನ್ನು ಹೆದರಿಸಿಯಾಗಲಿ ದರೋಡೆ ಮಾಡಿಯಾಗಲಿ ವಸ್ತುಗಳನ್ನು ತೆಗೆದುಕೊಂಡಿರಬಹುದು. ತನ್ನ ಜನರ ಮಧ್ಯದಲ್ಲಿ ಕೆಟ್ಟದಾಗಿರುವುದನ್ನು ಅವನು ಮಾಡಿರಬಹುದು. ಆ ತಂದೆಯು ತನ್ನ ಪಾಪಗಳ ಸಲುವಾಗಿ ಸಾಯುವನು. ಆದರೆ ತಂದೆಯ ಪಾಪಗಳಿಗಾಗಿ ಮಗನು ಶಿಕ್ಷಿಸಲ್ಪಡುವುದಿಲ್ಲ.
19 “‘ತಂದೆಯ ಪಾಪಗಳಿಗಿರುವ ಪ್ರತಿಫಲಗಳಲ್ಲಿ ಯಾವುದನ್ನೂ ಮಗನು ಹೊತ್ತುಕೊಳ್ಳದಿರುವದೇಕೆ?’ ಎಂದು ನೀವು ಕೇಳಬಹುದು. ಮಗನು ನ್ಯಾಯವಾದುದ್ದನ್ನು ಮತ್ತು ಸರಿಯಾದುದ್ದನ್ನು ಮಾಡಿದ್ದಾನೆ. ಅವನು ಎಚ್ಚರಿಕೆಯಿಂದ ನನ್ನ ಎಲ್ಲಾ ನಿಯಮಗಳಿಗೆ ವಿಧೇಯನಾಗಿದ್ದನು. ಆದ್ದರಿಂದ ಅವನು ಬಾಳುವನು. 20 ಯಾರು ಪಾಪ ಮಾಡುತ್ತಾರೋ ಅವರೇ ಮರಣಶಿಕ್ಷೆ ಹೊಂದುವರು. ತಂದೆಯ ಪಾಪಗಳ ಪ್ರತಿಫಲಗಳಲ್ಲಿ ಯಾವುದನ್ನೂ ಮಗನು ಹೊತ್ತುಕೊಳ್ಳುವುದಿಲ್ಲ. ಮತ್ತು ಮಗನ ಪಾಪಗಳ ಪ್ರತಿಫಲಗಳಲ್ಲಿ ಯಾವುದನ್ನೂ ತಂದೆಯು ಹೊತ್ತುಕೊಳ್ಳುವದಿಲ್ಲ. ಒಬ್ಬ ಒಳ್ಳೆ ಮನುಷ್ಯನ ನೀತಿಯು ಅವನಿಗೇ ಸೇರಿದ್ದು. ಕೆಟ್ಟ ಮನುಷ್ಯನ ದುಷ್ಟತ್ವವೂ ಆ ಕೆಟ್ಟ ಮನುಷ್ಯನಿಗೆ ಸೇರಿದ್ದಾಗಿದೆ.
21 “ಒಂದುವೇಳೆ ದುಷ್ಟನೊಬ್ಬನು ತಾನು ಮಾಡಿದ ಎಲ್ಲಾ ಪಾಪಗಳಿಗೆ ವಿಮುಖನಾದರೆ, ನನ್ನ ಎಲ್ಲಾ ನಿಯಮಗಳಿಗೆ ವಿಧೇಯನಾದರೆ, ನ್ಯಾಯವಾದುದ್ದನ್ನೂ ಸರಿಯಾದುದ್ದನ್ನೂ ಮಾಡಿದರೆ, ಅವನು ಸಾಯದೆ ಬದುಕುವನು. 22 ದೇವರು ಅವನ ಹಿಂದಿನ ಪಾಪಗಳನ್ನು ನೆನಪಿಗೆ ತರುವದಿಲ್ಲ. ಅವನು ತಾನು ಮಾಡಿದ ಒಳ್ಳೆಯ ಕಾರ್ಯಗಳ ನಿಮಿತ್ತ ಬದುಕುವನು.”
23 ನನ್ನ ಒಡೆಯನಾದ ಯೆಹೋವನು ಹೇಳುವುದೇನೆಂದರೆ, “ನನಗೆ ಪಾಪಿಗಳು ಸಾಯುವದರಲ್ಲಿ ಇಷ್ಟವಿಲ್ಲ. ಅವರು ತಮ್ಮ ಜೀವಿತವನ್ನು ಬದಲಾಯಿಸಿ ಜೀವವನ್ನು ಹೊಂದಬೇಕೆಂಬುದೇ ನನ್ನ ಅಪೇಕ್ಷೆಯಾಗಿದೆ.
24 “ಒಂದುವೇಳೆ ಒಳ್ಳೆಯವನೊಬ್ಬನು ತನ್ನ ಒಳ್ಳೆಯತನವನ್ನು ಬಿಟ್ಟು ಪಾಪ ಮಾಡಬಹುದು; ದುಷ್ಟರು ಮಾಡುವ ಅಸಹ್ಯಕೃತ್ಯಗಳನ್ನೆಲ್ಲ ಮಾಡಬಹುದು. ಅವನು ಹೀಗೆ ಮಾಡುತ್ತಾ ಬದುಕಲು ಸಾಧ್ಯವೇ ಇಲ್ಲ! ಅವನು ಅಪನಂಬಿಗಸ್ತನಾದ್ದರಿಂದ ಮತ್ತು ಪಾಪ ಮಾಡಿದ್ದರಿಂದ ದೇವರು ಅವನ ಎಲ್ಲಾ ಒಳ್ಳೆಯ ಕಾರ್ಯಗಳನ್ನೂ ಮರೆತುಬಿಡುವನು. ಅವನು ತನ್ನ ಪಾಪಗಳ ದೆಸೆಯಿಂದ ಸಾಯುವನು.”
25 ದೇವರು ಹೇಳಿದ್ದೇನೆಂದರೆ: “ಒಂದುವೇಳೆ ನೀವು ಹೇಳಬಹುದು: ‘ನನ್ನ ಒಡೆಯನಾದ ದೇವರ ಕ್ರಮವು ದೃಢವಾಗಿಲ್ಲ.’ ಆದರೆ, ಇಸ್ರೇಲಿನ ಜನರೇ, ಕೇಳಿರಿ. ನಿಮ್ಮ ನಡತೆಯೇ ದೃಢವಾಗಿಲ್ಲ. 26 ಒಬ್ಬ ಒಳ್ಳೆಯವನು ಬದಲಾವಣೆ ಹೊಂದಿ ಕೆಟ್ಟಕಾರ್ಯಗಳನ್ನು ಮಾಡಿದರೆ, ಅವನ ದುಷ್ಟತ್ವಕ್ಕಾಗಿ ಅವನು ಸಾಯಲೇಬೇಕು. 27 ಆದರೆ ಒಬ್ಬ ಪಾಪಿ ಬದಲಾವಣೆ ಹೊಂದಿ ನೀತಿವಂತನಾಗಿ ಬಾಳಿದರೆ ಅವನು ತನ್ನ ಪ್ರಾಣವನ್ನು ಉಳಿಸಿಕೊಳ್ಳುವನು. 28 ತಾನು ಎಷ್ಟು ಕೆಟ್ಟವನಾಗಿ ಜೀವಿಸಿದನೆಂದು ತಿಳಿದು ನನ್ನ ಕಡೆಗೆ ತಿರುಗಿ ದುಷ್ಟತನ ಮಾಡುವದನ್ನು ನಿಲ್ಲಿಸಿದರೆ. ಅಂಥವನು ಸಾಯದೆ, ಬಾಳುವನು.”
29 ಆದರೆ ಇಸ್ರೇಲ್ ಜನರು, “ಅದು ಸರಿಯಲ್ಲ. ನನ್ನ ಒಡೆಯನಾದ ಯೆಹೋವನ ಕ್ರಮವು ದೃಢವಲ್ಲ” ಎಂದರು.
ಆಗ ದೇವರು, “ನಾನು ದೃಢವಾಗಿದ್ದೇನೆ. ನಿಮ್ಮ ನಡತೆಯೇ ದೃಢವಾಗಿಲ್ಲ. 30 ಇಸ್ರೇಲರೇ, ನಾನು ಪ್ರತಿಯೊಬ್ಬನನ್ನು ಅವನವನ ಕಾರ್ಯಗಳ ಪ್ರಕಾರ ನ್ಯಾಯತೀರಿಸುವೆನು” ಎಂದು ಹೇಳಿದನು. ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ: “ಆದ್ದರಿಂದ ನನ್ನ ಬಳಿಗೆ ಬನ್ನಿರಿ, ದುಷ್ಟತನ ಮಾಡುವದನ್ನು ನಿಲ್ಲಿಸಿರಿ, ಪಾಪವು ನಿಮ್ಮ ನಾಶನಕ್ಕೆ ಕಾರಣವಾಗದಂತೆ ಎಚ್ಚರಿಕೆಯಾಗಿರಿ. 31 ನಿಮ್ಮ ದಂಗೆಕೋರತನದ ಮಾರ್ಗಗಳನ್ನೆಲ್ಲ ತೊರೆದುಬಿಟ್ಟು ನಿಮ್ಮ ಹೃದಯವನ್ನೂ ಸ್ವಭಾವವನ್ನೂ ನೂತನ ಮಾಡಿಕೊಳ್ಳಿರಿ. ಇಸ್ರೇಲ್ ಜನರೇ, ನೀವು ಮರಣವನ್ನು ಬರಮಾಡಿಕೊಳ್ಳುವುದೇಕೆ? 32 ನಿಮ್ಮನ್ನು ಸಾಯಿಸಲು ನನಗೆ ಇಷ್ಟವಿಲ್ಲ. ನೀವು ನನ್ನ ಕಡೆಗೆ ಹಿಂದಿರುಗಿ ಜೀವಿಸಿರಿ.” ಇದು ನನ್ನ ಒಡೆಯನಾದ ಯೆಹೋವನ ನುಡಿ.
ಇಸ್ರೇಲಿನ ಪ್ರಭುಗಳ ಕುರಿತು ಶೋಕಗೀತೆ
19 ದೇವರು ನನಗೆ, “ಇಸ್ರೇಲರ ಅಧಿಪತಿಗಳ ವಿಷಯವಾದ ಈ ಶೋಕಗೀತೆಯನ್ನು ನೀನು ಹಾಡಬೇಕು” ಎಂದು ಹೇಳಿದನು:
2 “‘ನಿನ್ನ ತಾಯಿಯು ಏನಾಗಿದ್ದಳು?
ಆಕೆಯು ಸಿಂಹಗಳ ಮಧ್ಯದಲ್ಲಿ ಸಿಂಹಿಣಿಯಾಗಿದ್ದಳು.
ಆಕೆಯು ಪ್ರಾಯದ ಸಿಂಹಗಳೊಡನೆ
ಮಲಗಿ ತನ್ನ ಮರಿಗಳನ್ನು ಸಾಕಿದಳು.
3 ಮರಿಗಳಲ್ಲೊಂದು ಎದ್ದು
ಗಟ್ಟಿಮುಟ್ಟಾದ ಸಿಂಹವಾಗಿ ಬೆಳೆಯುತ್ತಾ ಬಂತು.
ತನ್ನ ಆಹಾರವನ್ನು ತಾನೇ ಬೇಟೆಯಾಡತೊಡಗಿ
ಮನುಷ್ಯರನ್ನು ಕೊಂದು ತಿನ್ನಲಾರಂಭಿಸಿತು.
4 “‘ಅದು ಗರ್ಜಿಸುವ ಶಬ್ದವನ್ನು ಜನರು ಕೇಳಿದರು.
ಜನಾಂಗಗಳು ಅದರ ಬಗ್ಗೆ ಕೇಳಿದರು.
ಅದನ್ನು ತಮ್ಮ ಗುಂಡಿಯಲ್ಲಿ ಅವರು ಬಂಧಿಸಿದರು.
ಅವರು ಅದರ ಬಾಯಿಗೆ ಕೊಂಡಿಯನ್ನು ಹಾಕಿ ಈಜಿಪ್ಟಿಗೆ ಅದನ್ನು ಕೊಂಡೊಯ್ದರು.
5 “‘ಆ ಸಿಂಹಿಣಿಯು ತನಗಾದ ನಿರಾಶೆಯನ್ನೂ
ತನ್ನ ಮರಿಸಿಂಹದ ಮೇಲೆ ತನಗಿದ್ದ ನಿರೀಕ್ಷೆ ಹಾಳಾದದ್ದನ್ನು ಕಂಡು,
ತನ್ನ ಮರಿಗಳಲ್ಲಿ ಮತ್ತೊಂದನ್ನು ತೆಗೆದುಕೊಂಡು
ಅದನ್ನು ಪ್ರಾಯದ ಸಿಂಹವನ್ನಾಗಿ ಮಾಡಿತು.
6 ಅದು ಬೆಳೆದು ಪ್ರಾಯದ ಸಿಂಹವಾಗಿ
ಸಿಂಹಗಳೊಂದಿಗೆ ಬೇಟೆಯಾಡಲು ಹೋಯಿತು;
ತನ್ನ ಆಹಾರವನ್ನು ತಾನೇ ಬೇಟೆಯಾಡತೊಡಗಿ
ಮನುಷ್ಯರನ್ನು ಕೊಂದು ತಿನ್ನಲಾರಂಭಿಸಿತು.
7 ಅದು ಸ್ತ್ರೀಯರನ್ನು ವಿಧವೆಯರನ್ನಾಗಿ ಮಾಡಿತು; ಪಟ್ಟಣಗಳನ್ನು ನಿರ್ಜನವನ್ನಾಗಿ ಮಾಡಿತು;
ಅದು ಗರ್ಜಿಸಿದಾಗ ದೇಶವೂ ಅದರಲ್ಲಿರುವ ಪ್ರತಿಯೊಂದೂ ಭಯಗೊಂಡವು.
8 ಸುತ್ತಮುತ್ತಲಿನ ಜನಾಂಗಗಳವರು ಕೂಡಿಬಂದು ಅದರ ವಿರುದ್ಧವಾಗಿ ನಿಂತು,
ಬಲೆಹರಡಿ ಅದನ್ನು ಬಂಧಿಸಿದರು.
9 ಅವರು ಅದನ್ನು ಮರದ ಪಂಜರದಲ್ಲಿಟ್ಟು ಕೊಂಡಿಗಳನ್ನು ಹಾಕಿ,
ಬಾಬಿಲೋನಿನ ರಾಜನ ಬಳಿಗೆ ಕೊಂಡೊಯ್ದರು.
ಅದರ ಗರ್ಜನೆಯು ಇಸ್ರೇಲಿನ ಪರ್ವತಗಳ ಮೇಲೆ ಇನ್ನೆಂದಿಗೂ ಕೇಳದಿರಲಿ
ಎಂದು ಅದನ್ನು ಅಲ್ಲಿ ಸೆರೆಮನೆಗೆ ಹಾಕಿದರು.
10 “‘ನಿನ್ನ ತಾಯಿಯು ನೀರಾವರಿಯಲ್ಲಿ ನೆಟ್ಟ
ದ್ರಾಕ್ಷಾಲತೆಯಂತಿದ್ದಳು.
ಬೇಕಾದಷ್ಟು ನೀರು ಇದ್ದುದರಿಂದ
ಅದು ಫಲಭರಿತವಾಗಿದ್ದು ಅನೇಕ ಕೊಂಬೆಗಳನ್ನು ಹೊಂದಿತ್ತು.
11 ಅದು ಬಲವಾದ ಕಾಂಡಗಳನ್ನು ಬೆಳೆಸಿತು.
ಅದರ ಕಾಂಡಗಳು ಅಧಿಪತಿಗಳ ರಾಜದಂಡದಂತಿದ್ದವು.
ಅವುಗಳಲ್ಲಿ ಒಂದು ಮೋಡಗಳ ಮಧ್ಯದಲ್ಲಿ ಎತ್ತರವಾಗಿ ಬೆಳೆಯಿತು.
ಅದು ತನ್ನ ಎತ್ತರದಿಂದ ಮತ್ತು ತನ್ನ ಅನೇಕ ಕೊಂಬೆಗಳಿಂದ ಎದ್ದುಕಾಣುತ್ತಿತ್ತು.
12 ಆದರೆ ದ್ರಾಕ್ಷಾಲತೆಯು ಬೇರು ಸಮೇತ ಕಿತ್ತುಹಾಕಲ್ಪಟ್ಟಿತು.
ಅದು ನೆಲದ ಮೇಲೆ ಬಿಸಾಡಲ್ಪಟ್ಟಿತು.
ಪೂರ್ವದ ಬಿಸಿಗಾಳಿಯು ಅದರ ಹಣ್ಣುಗಳನ್ನು ಒಣಗಿಸಿತು.
ಅದರ ಬಲವಾದ ಕೊಂಬೆಗಳು ಮುರಿಯಲ್ಪಟ್ಟವು.
ಅವುಗಳನ್ನು ಬೆಂಕಿಯು ಸುಟ್ಟುಹಾಕಿತು.
13 “‘ಈಗ ಆ ದ್ರಾಕ್ಷಾಬಳ್ಳಿಯನ್ನು ಮರುಭೂಮಿಯಲ್ಲಿ ನೆಡಲ್ಪಟ್ಟಿರುತ್ತದೆ.
ಅದು ನೀರಿಲ್ಲದ ಬಂಜರು ಭೂಮಿ.
14 ಅದರ ಸ್ವಂತ ಕಾಂಡದಿಂದಲೇ ಬೆಂಕಿಯು ಹೊರಟುಬಂದು
ಅದರ ಚಿಕ್ಕ ಕೊಂಬೆಗಳನ್ನು ಮತ್ತು ಫಲಗಳನ್ನು ನಾಶಮಾಡಿತು.
ಈಗ ಬಲವಾದ ಕಾಂಡ ಅದರಲ್ಲಿಲ್ಲ.
ಆಳುವದಕ್ಕೆ ರಾಜದಂಡವೂ ಅದರಲ್ಲಿಲ್ಲ.’
ಇದು ಮರಣದ ಶೋಕಗೀತೆ. ಇದನ್ನು ಶೋಕಗೀತೆಯನ್ನಾಗಿಯೇ ಬಳಸಲಾಗುತ್ತಿದೆ.”
ದೇವರಿಗೆ ನಿಮ್ಮನ್ನು ಒಪ್ಪಿಸಿಕೊಳ್ಳಿ
4 ನಿಮ್ಮ ಹೋರಾಟಗಳು ಮತ್ತು ವಾದವಿವಾದಗಳು ಎಲ್ಲಿಂದ ಬರುತ್ತವೆಯೆಂಬುದು ನಿಮಗೆ ತಿಳಿದಿದೆಯೋ? ನಿಮ್ಮ ಸ್ವಾರ್ಥಪರ ಆಸೆಗಳಿಂದ ನಿಮ್ಮ ಹೋರಾಟಗಳು ಮತ್ತು ವಾದವಿವಾದಗಳು ಬರುತ್ತವೆ. ಅವು ನಿಮ್ಮ ಅಂತರಂಗದಲ್ಲಿ ಯುದ್ಧ ಮಾಡುತ್ತಿವೆ. 2 ನೀವು ಅನೇಕ ವಸ್ತುಗಳಿಗಾಗಿ ಆಶಿಸುತ್ತೀರಿ. ಆದರೆ ಅವುಗಳನ್ನು ಪಡೆಯುವುದರಲ್ಲಿ ವಿಫಲರಾಗುತ್ತೀರಿ. ಆದ್ದರಿಂದ ನೀವು ಕೊಲೆ ಮಾಡುತ್ತೀರಿ ಮತ್ತು ಇತರರ ಬಗ್ಗೆ ಅಸೂಯೆಪಡುತ್ತೀರಿ. ಆದರೆ ನೀವು ಆಸೆಪಟ್ಟದ್ದನ್ನು ಇನ್ನೂ ಪಡೆಯಲಾರದವರಾಗಿರುವಿರಿ. ಆದ್ದರಿಂದ ನೀವು ವಾದವಿವಾದ ಮಾಡುವಿರಿ ಮತ್ತು ಹೊಡೆದಾಡುವಿರಿ. ನೀವು ದೇವರನ್ನು ಕೇಳಿಕೊಳ್ಳಲಿಲ್ಲ. ಆದ್ದರಿಂದಲೇ, ನೀವು ಆಸೆ ಪಟ್ಟದ್ದು ನಿಮಗೆ ದೊರೆಯಲಿಲ್ಲ. 3 ಮತ್ತು ನೀವು ಕೇಳಿಕೊಂಡಾಗ ನಿಮಗೆ ಅವು ಸಿಗಲಿಲ್ಲ. ಏಕೆಂದರೆ ನಿಮ್ಮ ಉದ್ದೇಶವು ಸರಿಯಾಗಿರಲಿಲ್ಲ. ನೀವು ಅವುಗಳನ್ನು ಕೇವಲ ನಿಮ್ಮ ಸ್ವಂತ ಸುಖಕ್ಕಾಗಿ ಕೇಳಿಕೊಂಡಿರಿ.
4 ಆದ್ದರಿಂದ ನೀವು ದೇವರಿಗೆ ನಂಬಿಗಸ್ತರಾಗಿಲ್ಲ! ಇಹಲೋಕದ ಮೇಲಿರುವ ವ್ಯಾಮೋಹ ದೇವರ ಮೇಲಿರುವ ದ್ವೇಷಕ್ಕೆ ಸಮಾನವಾಗಿದೆ. ಆದ್ದರಿಂದ ಈ ಲೋಕವನ್ನು ಪ್ರೀತಿಸುವವನು ತನ್ನನ್ನು ದೇವರಿಗೆ ಶತ್ರುವನ್ನಾಗಿ ಮಾಡಿಕೊಳ್ಳುತ್ತಾನೆ. 5 ಪವಿತ್ರ ಗ್ರಂಥವು ಅರ್ಥವಿಲ್ಲದ್ದೆಂದು ಯೋಚಿಸುವಿರಾ? “ದೇವರು ನಮ್ಮಲ್ಲಿ ಇರಿಸಿರುವ ಆತ್ಮದ ಅಪೇಕ್ಷೆಯೇನೆಂದರೆ, ನಾವು ಆತನಿಗೋಸ್ಕರ ಮಾತ್ರ ಇರಬೇಕೆಂದಷ್ಟೆ”[a] ಎಂದು ಪವಿತ್ರ ಗ್ರಂಥವು ಹೇಳುತ್ತದೆ. 6 ಆದರೆ ದೇವರು ದಯಪಾಲಿಸಿದ ಕೃಪೆಯು ಅದಕ್ಕಿಂತಲೂ ಹೆಚ್ಚಿನದು. ಪವಿತ್ರ ಗ್ರಂಥವು ಹೇಳುವಂತೆ, “ದೇವರು ಅಹಂಕಾರಿಗಳಿಗೆ ವಿರುದ್ಧವಾಗಿರುತ್ತಾನೆ, ದೀನರಿಗಾದರೆ ಕೃಪೆಯನ್ನು ದಯಪಾಲಿಸುತ್ತಾನೆ.”(A)
7 ಆದ್ದರಿಂದ ದೇವರಿಗೆ ನಿಮ್ಮನ್ನು ಒಪ್ಪಿಸಿಕೊಂಡು ಸೈತಾನನನ್ನು ಎದುರಿಸಿರಿ. ಆಗ ಅವನು ನಿಮ್ಮಿಂದ ದೂರ ಓಡಿಹೋಗುತ್ತಾನೆ. 8 ದೇವರ ಸಮೀಪಕ್ಕೆ ಬನ್ನಿ, ಆಗ ದೇವರು ನಿಮ್ಮ ಸಮೀಪಕ್ಕೆ ಬರುತ್ತಾನೆ. ನೀವು ಪಾಪಿಗಳು, ಆದ್ದರಿಂದ ನಿಮ್ಮ ಜೀವಿತಗಳಿಂದ ಪಾಪಗಳನ್ನು ತೊಳೆದು ಹಾಕಿರಿ. ನೀವು ದೇವರನ್ನು ಮತ್ತು ಈ ಲೋಕವನ್ನು ಏಕಕಾಲದಲ್ಲಿ ಅನುಸರಿಸಲು ಪ್ರಯತ್ನಿಸುತ್ತಿರುವಿರಿ. ನಿಮ್ಮ ಆಲೋಚನೆಗಳನ್ನು ಪರಿಶುದ್ಧಗೊಳಿಸಿರಿ. 9 ದುಃಖಪಡಿರಿ, ಗೋಳಾಡಿರಿ, ಕಣ್ಣೀರಿಡಿರಿ! ನಗುವುದನ್ನು ಬಿಟ್ಟು ಗೋಳಾಡಿರಿ. ಸಂತೋಷಿಸುವುದನ್ನು ಬಿಟ್ಟು ವ್ಯಸನಪಡಿರಿ. 10 ಪ್ರಭುವಿನ ಎದುರಿನಲ್ಲಿ ದೀನರಾಗಿರಿ, ಆತನು ನಿಮ್ಮನ್ನು ಉನ್ನತ ಮಟ್ಟಕ್ಕೆ ತರುತ್ತಾನೆ.
ನೀವು ತೀರ್ಪುಗಾರರಲ್ಲ
11 ಸಹೋದರ ಸಹೋದರಿಯರೇ, ಒಬ್ಬರ ವಿರುದ್ಧ ಮತ್ತೊಬ್ಬರು ನಿಂದೆಯ ಮಾತುಗಳನ್ನಾಡದಿರಿ. ಕ್ರಿಸ್ತನಲ್ಲಿ ನಿಮ್ಮ ಸಹೋದರನಾಗಿರುವವನನ್ನು ನೀವು ಟೀಕಿಸಿದರೆ ಅಥವಾ ಅವನ ಬಗ್ಗೆ ತೀರ್ಪು ನೀಡಿದರೆ, ಅವನು ಅನುಸರಿಸುವ ಧರ್ಮಶಾಸ್ತ್ರವನ್ನೇ ಟೀಕಿಸಿದಂತಾಯಿತು. ಕ್ರಿಸ್ತನಲ್ಲಿ ಸಹೋದರನಾಗಿರುವವನಿಗೆ ನೀವು ತೀರ್ಪು ನೀಡಿದರೆ, ಅವನು ಅನುಸರಿಸುತ್ತಿರುವ ಧರ್ಮಶಾಸ್ತ್ರದ ಬಗ್ಗೆ ನೀವು ತೀರ್ಪು ನೀಡಿದಂತಾಯಿತು. ನೀವು ಧರ್ಮಶಾಸ್ತ್ರಕ್ಕೆ ತೀರ್ಪು ನೀಡುವಾಗ ನೀವು ಧರ್ಮಶಾಸ್ತ್ರವನ್ನು ಅನುಸರಿಸುವವರಲ್ಲ. ನೀವು ನ್ಯಾಯಾಧಿಪತಿಗಳಾಗಿದ್ದೀರಿ! 12 ದೇವರೊಬ್ಬನೇ ನಿಯಮಗಳನ್ನು ಮಾಡುವಾತನು. ಆತನೊಬ್ಬನೇ ನಿಜವಾದ ನ್ಯಾಯಾಧಿಪತಿ. ದೇವರೊಬ್ಬನೇ ರಕ್ಷಿಸಬಲ್ಲನು ಮತ್ತು ನಾಶಮಾಡಬಲ್ಲನು. ಆದ್ದರಿಂದ ಬೇರೊಬ್ಬ ವ್ಯಕ್ತಿಯ ಬಗ್ಗೆ ತೀರ್ಪು ನೀಡುವುದು ನಿಮಗೆ ಯೋಗ್ಯವಾದುದಲ್ಲ.
ದೇವರೇ ನಿನ್ನ ಜೀವನದ ಬಗ್ಗೆ ಯೋಚಿಸಲಿ
13 ನಿಮ್ಮಲ್ಲಿ ಕೆಲವರು, “ಈ ಹೊತ್ತು ಅಥವಾ ನಾಳೆ ನಗರಕ್ಕೆ ಹೋಗುತ್ತೇವೆ. ಅಲ್ಲಿ ಒಂದು ವರ್ಷವಿದ್ದು ವ್ಯಾಪಾರಮಾಡಿ ಹಣ ಸಂಪಾದಿಸುತ್ತೇವೆ” ಎಂದು ಹೇಳುವಿರಿ. ಆಲಿಸಿರಿ! ಇದರ ಬಗ್ಗೆ ಯೋಚಿಸಿರಿ: 14 ನಾಳೆ ಏನಾಗುವುದೋ ನಿಮಗೆ ತಿಳಿಯದು! ನಿಮ್ಮ ಜೀವನವು ಹಬೆಯಂತಿದೆ. ನೀವು ಅದನ್ನು ಸ್ವಲ್ಪಕಾಲ ನೋಡುವಿರಿ. ನಂತರ ಅದು ಅದೃಶ್ಯವಾಗುವುದು. 15 ಆದ್ದರಿಂದ, ನೀವು ಹೀಗೆ ಹೇಳಬೇಕು, “ಪ್ರಭುವು ಇಚ್ಛೆಪಟ್ಟರೆ, ನಾವು ಜೀವಿಸಿರುತ್ತೇವೆ. ಇಂಥಿಂಥದ್ದನ್ನು ಮಾಡುತ್ತೇವೆ.” 16 ಆದರೆ ನೀವೀಗ ಜಂಬಗಾರರಾಗಿ ಹೊಗಳಿಕೊಳ್ಳುತ್ತೀರಿ. ನಿಮ್ಮ ಹೊಗಳಿಕೆಯೆಲ್ಲವೂ ಕೆಟ್ಟದ್ದು. 17 ಒಳ್ಳೆಯದನ್ನು ಹೇಗೆ ಮಾಡಬೇಕೆಂದು ತಿಳಿದಿದ್ದರೂ ಒಳ್ಳೆಯದನ್ನು ಮಾಡದಿರುವವನು ಪಾಪವನ್ನು ಮಾಡುವವನಾಗಿದ್ದಾನೆ.
Kannada Holy Bible: Easy-to-Read Version. All rights reserved. © 1997 Bible League International