Print Page Options
Previous Prev Day Next DayNext

Old/New Testament

Each day includes a passage from both the Old Testament and New Testament.
Duration: 365 days
Kannada Holy Bible: Easy-to-Read Version (KERV)
Version
ಯೆಹೆಜ್ಕೇಲ 16-17

ಜೆರುಸಲೇಮಿನ ಮೇಲೆ ಯೆಹೋವನ ಪ್ರೀತಿ

16 ಮತ್ತೆ ಯೆಹೋವನ ವಾಕ್ಯವು ನನಗೆ ಬಂತು. ಆತನು ಹೇಳಿದ್ದೇನೆಂದರೆ, “ನರಪುತ್ರನೇ, ಜೆರುಸಲೇಮ್ ಪಟ್ಟಣಕ್ಕೆ ಅದರ ಅಸಹ್ಯವಾದ ಆಚರಣೆಗಳ ಬಗ್ಗೆ ಹೇಳು. ದುಷ್ಟತ್ವದ ಕುರಿತು ಅವರಿಗೆ ತಿಳಿಸು. ನೀನು ಏನು ಹೇಳಬೇಕೆಂದರೆ, ‘ಜೆರುಸಲೇಮಿಗೆ ನನ್ನ ದೇವರಾದ ಯೆಹೋವನು ಹೀಗೆನ್ನುತ್ತಾನೆ: ನಿನ್ನ ಇತಿಹಾಸವನ್ನು ನೋಡು. ನೀನು ಕಾನಾನ್‌ನಲ್ಲಿ ಜನಿಸಿರುತ್ತೀ. ನಿನ್ನ ತಂದೆಯು ಅಮೋರಿಯನು, ನಿನ್ನ ತಾಯಿ ಹಿತ್ತಿಯಳು. ಜೆರುಸಲೇಮೇ, ನೀನು ಹುಟ್ಟಿದ ಆ ದಿವಸದಲ್ಲಿ ನಿನ್ನ ಹೊಕ್ಕಳ ನಾಳವನ್ನು ಕೊಯ್ಯಲು ಯಾರೂ ಇದ್ದಿಲ್ಲ. ನಿನ್ನ ಮೈಯನ್ನು ನೀರು ಹಾಕಿ ಯಾರೂ ತೊಳೆದು ಶುದ್ಧಮಾಡಿಲ್ಲ. ನಿನ್ನನ್ನು ಯಾರೂ ಉಪ್ಪಿನಿಂದ ಉಜ್ಜಿಲ್ಲ. ಯಾರೂ ನಿನಗೆ ಬಟ್ಟೆ ಸುತ್ತಲಿಲ್ಲ. ಇವುಗಳಲ್ಲಿ ಯಾವುದನ್ನೇ ಮಾಡಲು ನಿನಗೋಸ್ಕರ ಯಾರೂ ಸಾಕಷ್ಟು ಮರುಕಪಡಲಿಲ್ಲ. ಜೆರುಸಲೇಮೇ, ನೀನು ಜನಿಸಿದ ದಿನದಲ್ಲಿ ನಿನಗೆ ಜನ್ಮವಿತ್ತವರು ನಿನ್ನನ್ನು ಹೊರಗೆ ಬಯಲಿನಲ್ಲಿ ಎಸೆದುಬಿಟ್ಟರು. ನೀನು ತಿರಸ್ಕರಿಸಲ್ಪಟ್ಟಿದ್ದೆ.

“‘ಆಗ ನಾನು (ದೇವರು) ಆ ಮಾರ್ಗವಾಗಿ ಹಾದುಹೋಗುವಾಗ ನೀನು ರಕ್ತಮಯವಾಗಿ ಹೊರಳಾಡುತ್ತಾ ಬಿದ್ದಿದ್ದೆ. ಆಗ ನಾನು “ಜೀವಿಸು” ಅಂದೆನು. ಹೌದು, ನೀನು ರಕ್ತದಲ್ಲಿ ಮುಳುಗಿದ್ದೀ. ಆಗ ನಾನು “ಜೀವಿಸು” ಅಂದೆನು. ನಾನು, ಹೊಲದಲ್ಲಿ ಸಸಿಯು ಹೇಗೆ ಬೆಳೆಯುತ್ತದೋ ಹಾಗೆಯೇ ನೀನು ಬೆಳೆಯಲು ಸಹಾಯ ಮಾಡಿದೆನು. ನೀನು ಬೆಳೆಯುತ್ತಾ ಯೌವನದ ಹೊಸ್ತಿಲಲ್ಲಿ ಕಾಲಿಟ್ಟ ಹೆಂಗಸಿನಂತಾದೆ. ನಿನಗೆ ಮುಟ್ಟು ಪ್ರಾರಂಭವಾಯಿತು. ನಿನ್ನ ಸ್ತನಗಳು ಬೆಳೆದವು. ಕೂದಲುಗಳು ಬೆಳೆದವು. ಆದರೂ ನೀನು ಬಟ್ಟೆಯಿಲ್ಲದವಳಾಗಿ ಬೆತ್ತಲೆಯಾಗಿದ್ದೆ. ನಾನು ಮತ್ತೆ ಹಾದುಹೋಗುವಾಗ ನಿನ್ನನ್ನು ನೋಡಲಾಗಿ ನೀನು ಸಂಭೋಗಿಸಲು ತಯಾರಾಗಿದ್ದೆ. ನಾನು ನನ್ನ ಹೊದಿಕೆಯನ್ನು ನಿನ್ನ ಮೇಲೆ ಹಾಕಿ ನಿನ್ನ ಬೆತ್ತಲೆ ದೇಹವನ್ನು ಮುಚ್ಚಿದೆನು. ನಿನ್ನನ್ನು ವಿವಾಹವಾಗಲು ಮಾತುಕೊಟ್ಟೆನು. ನಾನು ನಿನ್ನೊಡನೆ ಒಡಂಬಡಿಕೆ ಮಾಡಿಕೊಂಡೆನು. ಆಗ ನೀನು ನನ್ನವಳಾದೆ.’” ಇದು ನನ್ನ ಒಡೆಯನಾದ ಯೆಹೋವನ ನುಡಿ. “‘ನಾನು ನಿನ್ನನ್ನು ನೀರಿನಲ್ಲಿ ತೊಳೆದೆನು. ನಿನ್ನ ರಕ್ತವನ್ನು ತೊಳೆದೆನು. ನಿನ್ನ ಮೈಗೆ ಎಣ್ಣೆ ಹಚ್ಚಿ ಉಜ್ಜಿದೆನು. 10 ನಿನಗೆ ಅಂದವಾದ ಉಡುಪನ್ನು ಕೊಟ್ಟು ಕಾಲಿಗೆ ನಯವಾದ ಚರ್ಮದ ಕೆರಗಳನ್ನು ಕೊಟ್ಟೆನು. ನಿನ್ನ ತಲೆಗೆ ನಾರುಮಡಿಯ ತಲೆಕಟ್ಟನ್ನು ಕೊಟ್ಟೆನು ಮತ್ತು ನಿನಗೆ ರೇಷ್ಮೆಯ ಬಟ್ಟೆಯನ್ನು ಹೊದಿಸಿದೆನು. 11 ಅನಂತರ ನಿನಗೆ ಕೆಲವು ಆಭರಣಗಳನ್ನು ಕೊಟ್ಟೆನು. ನಿನ್ನ ತೋಳುಗಳಿಗೆ ತೋಳುಕಟ್ಟುಗಳನ್ನು, ಕುತ್ತಿಗೆಗೆ ಹಾರವನ್ನು ತೊಡಿಸಿದೆನು. 12 ನಿನಗೆ ಮೂಗುತಿ, ಕಿವಿಗೆ ಕಿವಿಯುಂಗುರಗಳನ್ನು ಮತ್ತು ಒಂದು ಅಂದವಾದ ಕಿರೀಟವನ್ನು ಧರಿಸಲು ಕೊಟ್ಟೆನು. 13 ನಿನ್ನ ಚಿನ್ನ, ಬೆಳ್ಳಿ, ಆಭರಣ, ನಾರುಮಡಿ, ರೇಷ್ಮೆ ಮತ್ತು ಕಸೂತಿ ಹಾಕಿದ ಬಟ್ಟೆಗಳಲ್ಲಿ ನೀನು ಸುಂದರಳಾಗಿ ಕಾಣಿಸುತ್ತಿದ್ದೆ. ನೀನು ಉತ್ತಮವಾದ ಆಹಾರವನ್ನು ಊಟ ಮಾಡಿದೆ: ಉತ್ತಮ ಗೋಧಿಹಿಟ್ಟು, ಜೇನುತುಪ್ಪ ಮತ್ತು ಆಲೀವ್ ಎಣ್ಣೆ. ನೀನು ಅತ್ಯಂತ ಸುಂದರಿಯಾದೆ. ಮತ್ತು ನೀನು ರಾಣಿಯಾಗಿದ್ದೆ. 14 ಹೌದು, ನೀನು ನಿನ್ನ ಸಂಪೂರ್ಣವಾದ ಸೌಂದರ್ಯಕ್ಕಾಗಿ ಜನಾಂಗಗಳ ಮಧ್ಯದಲ್ಲಿ ಹೆಸರು ವಾಸಿಯಾಯಿತು. ಯಾಕೆಂದರೆ ನಾನು ನಿನ್ನನ್ನು ಅತ್ಯಂತ ಸೌಂದರ್ಯವತಿಯನ್ನಾಗಿ ಮಾಡಿದೆನು.’” ಇವುಗಳನ್ನು ನನ್ನ ಒಡೆಯನಾದ ಯೆಹೋವನು ಹೇಳಿದನು.

ಜೆರುಸಲೇಮ್ ನೀತಿಗೆಟ್ಟ ವಧುವು

15 ದೇವರು ಹೀಗೆಂದನು: “ನೀನು ನಿನ್ನ ಸೌಂದರ್ಯದ ಮೇಲೆ ಭರವಸೆ ಉಳ್ಳವಳಾಗಿದ್ದೆ. ನಿನ್ನ ಪ್ರಖ್ಯಾತಿಯಿಂದಾಗಿ ನನಗೆ ಅಪನಂಬಿಗಸ್ತಳಾದಿ. ನಿನ್ನನ್ನು ಹಾದುಹೋಗುವ ಪ್ರತಿವ್ಯಕ್ತಿಯೊಂದಿಗೆ ನೀನು ವೇಶ್ಯೆಯಂತೆ ನಡೆದುಕೊಂಡಿ. ನೀನು ನಿನ್ನನ್ನು ಅವರಿಗೊಪ್ಪಿಸಿದಿ. 16 ನೀನು ನಿನ್ನ ಬಟ್ಟೆಗಳಲ್ಲಿ ಕೆಲವನ್ನು ತೆಗೆದುಕೊಂಡು ನಿನ್ನ ಪೂಜಿಸುವ ಸ್ಥಳಗಳನ್ನು ವರ್ಣರಂಜಿತವನ್ನಾಗಿ ಮಾಡಿದೆ ಮತ್ತು ಆ ಸ್ಥಳಗಳಲ್ಲಿ ನೀನು ಸೂಳೆಯಂತೆ ವರ್ತಿಸಿದೆ. ಹಾದುಹೋಗುವ ಪ್ರತಿಯೊಬ್ಬ ಗಂಡಸಿಗೂ ನೀನು ನಿನ್ನನ್ನು ಒಪ್ಪಿಸಿಕೊಟ್ಟೆ. 17 ನಾನು ನಿನಗೆ ಕೊಟ್ಟ ಬೆಳ್ಳಿಬಂಗಾರಗಳ ಆಭರಣಗಳಿಂದ ನೀನು ಗಂಡು ವಿಗ್ರಹಗಳನ್ನು ಮಾಡಿಕೊಂಡು ಅವುಗಳೊಂದಿಗೆ ಸೂಳೆಯಂತೆ ವರ್ತಿಸಿದೆ. 18 ನಂತರ ನೀನು ಅಂದವಾದ ಬಟ್ಟೆಯಿಂದ ಆ ವಿಗ್ರಹಗಳಿಗೆ ಹೊದಿಸಿದೆ. ನಾನು ನಿನಗೆ ಕೊಟ್ಟಿದ್ದ ಧೂಪ, ಪರಿಮಳದ್ರವ್ಯವನ್ನು ನೀನು ಆ ವಿಗ್ರಹಗಳ ಮುಂದೆ ಹಾಕಿದಿ. 19 ನಾನು ನಿನಗೆ ರೊಟ್ಟಿ, ಜೇನು ಮತ್ತು ಎಣ್ಣೆಯನ್ನು ಕೊಟ್ಟಿದ್ದೆನು. ಆದರೆ ನೀನು ಆ ಆಹಾರವನ್ನು ಮೂರ್ತಿಗಳಿಗೆ ಕೊಟ್ಟೆ. ಆ ಸುಳ್ಳು ದೇವರುಗಳನ್ನು ಮೆಚ್ಚಿಸುವದಕ್ಕೋಸ್ಕರ ನೀನು ಅವುಗಳನ್ನು ಸುಗಂಧವಾಸನೆಯ ಕಾಣಿಕೆಯಂತೆ ಅರ್ಪಿಸಿದೆ.” ನನ್ನ ಒಡೆಯನಾದ ಯೆಹೋವನು ಈ ಸಂಗತಿಗಳನ್ನು ಹೇಳಿದನು.

20 ದೇವರು ಹೇಳಿದ್ದೇನೆಂದರೆ, “ನನ್ನ ಮಕ್ಕಳಾಗಿದ್ದ ನಿನ್ನ ಪುತ್ರಪುತ್ರಿಯರನ್ನು ನೀನು ತೆಗೆದುಕೊಂಡು ಅವರನ್ನು ಆಹಾರವನ್ನಾಗಿ ವಿಗ್ರಹಗಳಿಗೆ ಯಜ್ಞ ಅರ್ಪಿಸಿದೆ. ನಿನ್ನ ಸೂಳೆತನವು ಸಾಕಾಗಿರಲಿಲ್ಲವೇ? 21 ನೀನು ನನ್ನ ಗಂಡುಮಕ್ಕಳನ್ನು ಸಂಹರಿಸಿ ಬೆಂಕಿಯಲ್ಲಿ ದಾಟಿಸಿ ಆ ಸುಳ್ಳುದೇವರಿಗೆ ಕೊಟ್ಟೆ. 22 ನಿನ್ನ ಅಸಹ್ಯಕೃತ್ಯಗಳನ್ನೂ ಸೂಳೆಯಂತೆ ವರ್ತಿಸುತ್ತಿರುವುದನ್ನೂ ನಿನ್ನ ಎಳೆತನದ ಸಮಯವನ್ನೂ ಮತ್ತು ನಿನ್ನ ಸ್ವಂತ ರಕ್ತದಲ್ಲಿ ಬೆತ್ತಲೆಯಾಗಿ ಹೊರಳಾಡುತ್ತಿದ್ದುದನ್ನೂ ನೀನು ಮರೆತುಬಿಟ್ಟೆ.

23 “ಓ ಜೆರುಸಲೇಮೇ, ಎಂಥಾ ಭಯಂಕರ, ನಿನಗೆಂಥಾ ಭಯಂಕರವಾಗಿರುವುದು ಸಂಭವಿಸುತ್ತದೆ!” ಎನ್ನುತ್ತಾನೆ ನನ್ನ ಒಡೆಯನಾದ ಯೆಹೋವನು. 24 “ನೀನು ಎಲ್ಲಾ ದುಷ್ಕೃತ್ಯಗಳನ್ನು ಮಾಡಿದ ನಂತರ ಸುಳ್ಳು ದೇವರುಗಳಿಗಾಗಿ ಎತ್ತರವಾದ ಸ್ಥಳಗಳಲ್ಲಿ ಹೆಚ್ಚು ಪೂಜಾಸ್ಥಳಗಳನ್ನು ಮಾಡಿದೆ. ಪ್ರತಿಯೊಂದು ರಸ್ತೆಯ ಚೌಕಗಳಲ್ಲಿ ಅನ್ಯದೇವರುಗಳಿಗಾಗಿ ಪೂಜಾಸ್ಥಳಗಳನ್ನು ಮಾಡಿದೆ. 25 ಪ್ರತೀ ರಸ್ತೆಯ ಪ್ರಾರಂಭದಲ್ಲಿ ಅಂಥಾ ಪೂಜಾಸ್ಥಳಗಳನ್ನು ನಿರ್ಮಿಸಿದ್ದೀ. ನೀನು ನಿನ್ನ ಸೌಂದರ್ಯವನ್ನು ಹಾಳುಮಾಡಿಕೊಂಡಿ. ನೀನು ಅಸಹ್ಯವಾದ ಕಾರ್ಯಗಳನ್ನು ಮಾಡಲು ನಿನ್ನ ಸೌಂದರ್ಯವನ್ನು ಬಳಸಿಕೊಂಡೆ. ಹಾದಿಯಲ್ಲಿ ಹೋಗುವ ಪ್ರತಿಯೊಬ್ಬ ಗಂಡಸಿಗೂ ನೀನು ಲೈಂಗಿಕ ತೃಪ್ತಿ ನೀಡಿ ನಿನ್ನ ಸೂಳೆತನವನ್ನು ಹೆಚ್ಚಿಸಿಕೊಂಡೆ. 26 ಬಳಿಕ ನಿನ್ನ ನೆರೆಯವರೂ ಅತೀ ಕಾಮುಕರೂ ಆಗಿದ್ದ ಈಜಿಪ್ಟಿನವರ ಬಳಿಗೆ ನೀನು ಹೋದೆ. ನನ್ನನ್ನು ಕೋಪಗೊಳಿಸುವುದಕ್ಕಾಗಿ ನೀನು ಅವರೊಂದಿಗೆ ಹಲವಾರು ಸಲ ಲೈಂಗಿಕ ಸಂಪರ್ಕ ಮಾಡಿದೆ. 27 ಆಗ ನಾನು ನಿನ್ನನ್ನು ಶಿಕ್ಷಿಸಿದೆನು. ನಾನು ನಿನಗೆ ಕೊಟ್ಟ ದೇಶದಿಂದ ಸ್ವಲ್ಪ ಭಾಗವನ್ನು ಕಿತ್ತುಕೊಂಡೆನು. ನಿನ್ನ ಶತ್ರುಗಳಾದ ಫಿಲಿಷ್ಟಿಯರ ಹೆಣ್ಣುಮಕ್ಕಳು ನಿನ್ನೊಂದಿಗೆ ತಮಗೆ ಇಷ್ಟ ಬಂದಂತೆ ವರ್ತಿಸಲುಬಿಟ್ಟೆನು. ನಿನ್ನ ಕೆಟ್ಟಕಾರ್ಯಗಳನ್ನು ನೋಡಿ ಅವರೂ ಅಚ್ಚರಿಗೊಂಡರು. 28 ಆ ಬಳಿಕ ನೀನು ಅಶ್ಶೂರದವರೊಂದಿಗೆ ಸಂಭೋಗಿಸಲು ಹೋದಿ. ನೀನು ತೃಪ್ತಿಗೊಳ್ಳುವಷ್ಟು ಆನಂದ ಸಿಗಲಿಲ್ಲ. ನೀನೆಂದೂ ತೃಪ್ತಿಗೊಂಡವಳಲ್ಲ. 29 ಆದ್ದರಿಂದ ನೀನು ವ್ಯಾಪಾರದ ದೇಶವಾದ ಬಾಬಿಲೋನಿನ ಕಡೆಗೆ ಮುಖ ಮಾಡಿಕೊಂಡೆ. ಆದರೂ ನೀನು ತೃಪ್ತಿ ಪಡೆಯಲಿಲ್ಲ. 30 ನಾಚಿಕೆಯಿಲ್ಲದ ಸೂಳೆಯಂತೆ ನೀನು ಮಾಡಿದ ಈ ಎಲ್ಲಾ ಕಾರ್ಯಗಳಿಂದ ನಾನು ನಿನ್ನ ವಿರುದ್ಧ ಕೋಪದಿಂದ ತುಂಬಿರುವೆ.” ನನ್ನ ಒಡೆಯನಾದ ಯೆಹೋವನು ಈ ಸಂಗತಿಗಳನ್ನು ಹೇಳಿದನು.

31 ದೇವರು ಹೇಳಿದ್ದೇನೆಂದರೆ, “ಆದರೆ ನೀನು ವೇಶ್ಯೆಯ ಹಾಗೆ ಪೂರ್ಣವಾಗಿರಲಿಲ್ಲ. ನೀನು ಎತ್ತರದ ಪೂಜಾಸ್ಥಳಗಳನ್ನು ಪ್ರತೀ ರಸ್ತೆಯ ಪ್ರಾರಂಭದಲ್ಲಿಯೂ ಯಜ್ಞವೇದಿಕೆಗಳನ್ನು ಪ್ರತೀ ರಸ್ತೆಯ ಮೂಲೆಗಳಲ್ಲಿಯೂ ಕಟ್ಟಿಸಿರುವೆ. ಆ ಎಲ್ಲಾ ಪುರುಷರೊಂದಿಗೆ ನೀನು ಸಂಭೋಗಿಸಿರುವೆ. ಆದರೆ ಸೂಳೆಯಂತೆ ಅವರಿಂದ ನೀನು ಹಣ ತೆಗೆದುಕೊಳ್ಳಲಿಲ್ಲ. 32 ವ್ಯಭಿಚಾರಿಣಿಯೇ, ನೀನು ನಿನ್ನ ಸ್ವಂತ ಗಂಡನಿಗಿಂತ ಪರಪುರುಷನನ್ನೇ ಹೆಚ್ಚಾಗಿ ಆಶಿಸುವವಳಾಗಿರುವೆ. 33 ವೇಶ್ಯೆಯರು ತಮ್ಮೊಡನೆ ಕೂಡುವದಕ್ಕಾಗಿ ಪುರುಷರಿಂದ ಹಣ ವಸೂಲಿ ಮಾಡುವರು. ಆದರೆ ನಿನ್ನ ಪ್ರಿಯತಮರಿಗೆ ನೀನೇ ಹಣವನ್ನು ಕೊಟ್ಟಿರುವೆ. ನಿನ್ನೊಂದಿಗೆ ಸಂಭೋಗ ಮಾಡಲು ನೀನೇ ಅವರಿಗೆ ಹಣವನ್ನು ಕೊಟ್ಟಿರುವೆ. 34 ನೀನು ಸೂಳೆಯರಿಗೇ ವಿರುದ್ಧವಾಗಿ ನಡೆದಿರುವೆ. ಅವರು ಪುರುಷರಿಂದ ಹಣ ತೆಗೆದುಕೊಳ್ಳುವಾಗ ನೀನೇ ಅವರಿಗೆ ಹಣಕೊಟ್ಟಿರುವೆ.”

35 ಸೂಳೆಯೇ, ಯೆಹೋವನ ಸಂದೇಶವನ್ನು ಕೇಳು: 36 ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ: “ನಿನ್ನ ಅತಿಯಾದ ಶರೀರದಾಶೆಯಿಂದಾಗಿ, ನಿನ್ನ ಬೆತ್ತಲೆಯ ದೇಹವನ್ನು ನೋಡಿ ನಿನ್ನೊಂದಿಗೆ ಲೈಂಗಿಕ ಸಂಬಂಧವನ್ನು ಹೊಂದಲು ನೀನು ನಿನ್ನ ಪ್ರಿಯತಮರಿಗೂ, ನಿನ್ನ ಹೊಲಸು ದೇವರುಗಳಿಗೂ ಅವಕಾಶ ಮಾಡಿಕೊಟ್ಟೆ. ನೀನು ನಿನ್ನ ಮಕ್ಕಳನ್ನು ಕೊಂದು ಅವರ ರಕ್ತವನ್ನು ಸುರಿಸಿರುವೆ. ಇದು ಆ ಹೊಲಸು ದೇವರುಗಳಿಗೆ ನೀನು ಕೊಟ್ಟ ದಾನ. 37 ಈ ಕಾರಣದಿಂದ, ನೀನು ಸುಖ ಕೊಟ್ಟಿರುವ ನಿನ್ನ ಎಲ್ಲಾ ಪ್ರಿಯರನ್ನು ಅಂದರೆ ಈಗಿನ ಪ್ರಿಯರನ್ನು ಮತ್ತು ನೀನು ತಿರಸ್ಕರಿಸಿರುವ ಹಿಂದಿನ ಪ್ರಿಯರನ್ನೂ ಒಟ್ಟಾಗಿ ಸೇರಿಸಿ, ನಿನ್ನ ಬೆತ್ತಲೆತನವನ್ನು ಅವರು ನೋಡುವಂತೆ ಮಾಡುವೆನು. ಅವರು ನಿನ್ನನ್ನು ಪೂರ್ತಿಯಾಗಿ ನೋಡುವರು. 38 ಬಳಿಕ, ಕೊಲೆಗಾರ್ತಿಯರೂ ವ್ಯಭಿಚಾರಿಣಿಯರೂ ಶಿಕ್ಷಿಸಲ್ಪಡುವಂತೆ ನಾನು ನಿನ್ನನ್ನು ದಂಡಿಸುವೆನು. ನನ್ನ ಭಯಂಕರವಾದ ಕೋಪದಿಂದ ನಿನಗೆ ಮರಣದಂಡನೆಯನ್ನು ವಿಧಿಸುವೆನು. 39 ಆ ನಿನ್ನ ಪ್ರಿಯತಮರಿಗೆ ನಿನ್ನನ್ನು ಬಿಟ್ಟುಕೊಡುವೆನು. ಅವರು ನಿನ್ನ ದಿಬ್ಬಗಳನ್ನು ನಾಶಮಾಡುವರು ಮತ್ತು ಪೂಜಾಯಜ್ಞವೇದಿಕೆಗಳನ್ನು ಕೆಡವಿಹಾಕುವರು. ನಿನ್ನ ಬಟ್ಟೆಗಳನ್ನು ಕಿತ್ತುಕೊಳ್ಳುವರು ಮತ್ತು ಚಂದವಾದ ಆಭರಣಗಳನ್ನು ತೆಗೆದುಕೊಂಡು ಹೋಗುವರು. ಮತ್ತು ನಿನ್ನನ್ನು ಬೆತ್ತಲೆಯಾಗಿ ಮಾಡುವರು. 40 ನಿನ್ನನ್ನು ಕಲ್ಲುಗಳಿಂದ ಕೊಲ್ಲುವದಕ್ಕಾಗಿ ಅವರು ಜನರನ್ನು ಒಂದುಗೂಡಿಸುವರು. ಬಳಿಕ ಅವರು ನಿನ್ನನ್ನು ಖಡ್ಗಗಳಿಂದ ತುಂಡುತುಂಡಾಗಿ ಕತ್ತರಿಸುವರು. 41 ಬಳಿಕ, ಅನೇಕ ಸ್ತ್ರೀಯರು ನೋಡಲೆಂದು ನಿನ್ನ ಮನೆಗಳನ್ನು ಸುಟ್ಟು, ನಿನ್ನನ್ನು ದಂಡಿಸುವರು. ನೀನು ಸೂಳೆಯಂತೆ ಜೀವಿಸುವದನ್ನು ನಾನು ನಿಲ್ಲಿಸುವೆನು. ನೀನು ನಿನ್ನ ಪ್ರಿಯತಮರಿಗೆ ಹಣ ಕೊಡುವದನ್ನು ನಿಲ್ಲಿಸುತ್ತೇನೆ. 42 ಬಳಿಕ ನಿನ್ನ ಮೇಲೆ ನನಗಿರುವ ಕೋಪವನ್ನು ತೊಲಗಿಸುವೆನು; ನಾನು ಶಾಂತನಾಗುವೆನು; ಆ ಬಳಿಕ ನಾನು ಸಿಟ್ಟುಗೊಳ್ಳುವುದೇ ಇಲ್ಲ. 43 ಇವೆಲ್ಲಾ ಯಾಕೆ ಸಂಭವಿಸಬೇಕು? ಯಾಕೆಂದರೆ ನೀನು ಎಳೆಯವಳಾಗಿದ್ದಾಗ ಏನು ಸಂಭವಿಸಿತೆಂದು ಮರೆತುಬಿಟ್ಟಿರುವೆ. ನೀನು ಕೆಟ್ಟಕೆಲಸಗಳನ್ನು ಮಾಡಿ ನಾನು ಕೋಪಿಸಿಕೊಳ್ಳುವಂತೆ ಮಾಡಿರುವೆ. ಆದ್ದರಿಂದ ಆ ಕೆಟ್ಟಕಾರ್ಯ ಮಾಡಿದ್ದಕ್ಕಾಗಿ ನಿನ್ನನ್ನು ಶಿಕ್ಷಿಸಬೇಕಾಗಿ ಬಂತು. ನೀನು ಅದಕ್ಕಿಂತಲೂ ಭಯಂಕರಕೃತ್ಯ ನಡಿಸಲು ಯೋಜನೆ ಹಾಕಿಕೊಂಡಿರುವೆ.” ಇವು ನನ್ನ ಒಡೆಯನಾದ ಯೆಹೋವನ ನುಡಿಗಳು.

44 “ಜ್ಞಾನೋಕ್ತಿಗಳನ್ನು ಉಲ್ಲೇಖಿಸಲು ಇಚ್ಛಿಸುವ ಪ್ರತಿಯೊಬ್ಬನು ನಿನ್ನ ವಿರುದ್ಧವಾಗಿ ಇದನ್ನು ಉಲ್ಲೇಖಿಸುವನು: ‘ತಾಯಿಯಂತೆ ಮಗಳು.’ 45 ನೀನು ನಿನ್ನ ತಾಯಿಯ ಮಗಳು. ನೀನು ನಿನ್ನ ಗಂಡನನ್ನು ಮತ್ತು ಮಕ್ಕಳನ್ನು ತಿರಸ್ಕರಿಸಿರುವೆ. ನೀನು ನಿನ್ನ ಸಹೋದರಿಯಂತಿರುವೆ. ನೀವು ನಿಮ್ಮ ಗಂಡಂದಿರನ್ನೂ ಮಕ್ಕಳನ್ನೂ ತಿರಸ್ಕರಿಸಿದಿರಿ. ನೀವು ನಿಮ್ಮನ್ನು ಹೆತ್ತವರ ತರಹ ಇದ್ದೀರಿ. ನಿಮ್ಮ ತಾಯಿ ಹಿತ್ತಿಯಳಾಗಿದ್ದಳು. ನಿಮ್ಮ ತಂದೆಯು ಅಮೋರಿಯದವನಾಗಿದ್ದನು. 46 ನಿನ್ನ ಅಕ್ಕ ಸಮಾರ್ಯಳು. ಆಕೆಯು ನಿನ್ನ ಉತ್ತರ ದಿಕ್ಕಿನಲ್ಲಿ ತನ್ನ ಹೆಣ್ಣು ಮಕ್ಕಳೊಂದಿಗೆ (ಪಟ್ಟಣಗಳು) ವಾಸ ಮಾಡಿದ್ದಳು. ನಿನ್ನ ತಂಗಿಯು ಸೊದೋಮಳು. ಆಕೆ ನಿನ್ನ ದಕ್ಷಿಣದಲ್ಲಿ ತನ್ನ ಹೆಣ್ಣುಮಕ್ಕಳೊಂದಿಗೆ (ಪಟ್ಟಣಗಳು) ವಾಸಿಸಿದ್ದಳು. 47 ಅವರಿಗಿಂತಲೂ ಹೆಚ್ಚು ಕೆಟ್ಟು ಹೋಗಲು ನಿನಗೆ ಸ್ವಲ್ಪ ಸಮಯವೇ ಸಾಕಾಯಿತು. ಅವರಿಗಿಂತಲೂ ಇನ್ನೂ ಭಯಂಕರವಾದ ಕೆಲಸಗಳನ್ನು ನೀನು ಮಾಡಿರುವೆ. 48 ದೇವರಾದ ಯೆಹೋವನು ಹೀಗೆನ್ನುತ್ತಾನೆ, ನನ್ನ ಜೀವದಾಣೆ, ನಿನ್ನ ತಂಗಿಯಾದ ಸೊದೋಮಳು ಮತ್ತು ಆಕೆಯ ಹೆಣ್ಣುಮಕ್ಕಳು ನೀನು ನಡಿಸಿದಷ್ಟು ದುಷ್ಟತ್ವವನ್ನು ನಡಿಸಲಿಲ್ಲ.”

49 ದೇವರು ಹೇಳಿದ್ದೇನೆಂದರೆ, “ನಿನ್ನ ತಂಗಿ ಸೊದೋಮ್ ಮತ್ತು ಆಕೆಯ ಹೆಣ್ಣುಮಕ್ಕಳು ಕೊಬ್ಬಿದ ಕಣ್ಣುಳ್ಳವರಾಗಿದ್ದರು. ಅವರಿಗೆ ತಿನ್ನಲು ಬೇಕಾದಷ್ಟಿತ್ತು. ಅವರು ಶಾಂತಿಕರವಾದ ಸುಭದ್ರತೆಯಲ್ಲಿ ಜೀವಿಸಿದರು. ಅವರು ಬಡವರಿಗೆ ಸಹಾಯ ಮಾಡಲಿಲ್ಲ. 50 ಸೊದೋಮಿಗೂ ಮತ್ತು ಆಕೆಯ ಹೆಣ್ಣು ಮಕ್ಕಳಿಗೂ ಅತಿರೇಕ ಜಂಬವು ಬಂದು ಭಯಂಕರ ಕೃತ್ಯಗಳನ್ನು ನನ್ನ ಮುಂದೆಯೇ ಮಾಡಿದರು. ಆದ್ದರಿಂದ ನಾನು ಅವರನ್ನು ನನ್ನಿಂದ ದೂರ ಮಾಡಿದೆನು.”

51 ದೇವರು ಹೇಳಿದ್ದೇನೆಂದರೆ: “ನೀನು ಮಾಡಿದ ದುಷ್ಕೃತ್ಯಗಳ ಅರ್ಧದಷ್ಟು ಸಮಾರ್ಯವು ಮಾಡಿತ್ತು. ಸಮಾರ್ಯದವರಿಗಿಂತಲೂ ಹೆಚ್ಚಾದ ಭಯಂಕರಕೃತ್ಯಗಳನ್ನು ನೀನು ಮಾಡಿರುವೆ. ನಿನ್ನ ಅಕ್ಕತಂಗಿಯರಿಗಿಂತ ಹೆಚ್ಚಾಗಿ ನೀನು ದುಷ್ಕೃತ್ಯಗಳನ್ನು ಮಾಡಿರುವೆ. ಸಮಾರ್ಯ ಮತ್ತು ಸೊದೋಮ್ ನಿನ್ನೊಂದಿಗೆ ಹೋಲಿಸಿ ನೋಡಿದರೆ ಅವು ಒಳ್ಳೆಯ ಪಟ್ಟಣಗಳಂತೆ ತೋರಿಬರುತ್ತವೆ. 52 ಆದ್ದರಿಂದ ನಿನ್ನ ಅವಮಾನವನ್ನು ನೀನು ಸಹಿಸಿಕೊಳ್ಳಬೇಕು. ನಿನಗಿಂತ ನಿನ್ನ ಸಹೋದರಿಯರು ನೀತಿವಂತರಂತೆ ತೋರುತ್ತಾರೆ. ಯಾಕೆಂದರೆ ನಿನ್ನ ಪಾಪಗಳು ಬಹಳ ಅಸಹ್ಯವಾಗಿದ್ದವು. ಆದ್ದರಿಂದ ನಿನಗೆ ಅವಮಾನವಾಗಲೇಬೇಕು; ನೀನು ನಾಚಿಕೆಯನ್ನು ಅನುಭವಿಸಲೇಬೇಕು ಯಾಕೆಂದರೆ ನೀನು ನಿನ್ನ ಸಹೋದರಿಯರನ್ನು ನಿರಪರಾಧಿಗಳಾಗಿ ಕಾಣುವಂತೆ ಮಾಡಿರುವೆ.”

53 ದೇವರು ಹೇಳಿದ್ದೇನೆಂದರೆ: “ಸೊದೋಮ್ ಮತ್ತು ಅದರ ಸುತ್ತಲೂ ಇದ್ದ ನಗರಗಳನ್ನು ನಾನು ನಾಶಮಾಡಿದೆನು. ನಾನು ಸಮಾರ್ಯವನ್ನು ನಾಶಮಾಡಿದೆನು. ಮತ್ತು ಜೆರುಸಲೇಮೇ, ನಾನು ನಿನ್ನನ್ನು ನಾಶಮಾಡುವೆ. ಆದರೆ ನಾನು ತಿರುಗಿ ಆ ಪಟ್ಟಣಗಳನ್ನು ಕಟ್ಟುವೆನು. ಜೆರುಸಲೇಮೇ, ನಾನು ನಿನ್ನನ್ನೂ ಕಟ್ಟುವೆನು. 54 ಆಗ, ನೀನು ಮಾಡಿದ ಭಯಂಕರ ಕೃತ್ಯಗಳನ್ನು ನಿನ್ನ ನೆನಪಿಗೆ ತಂದುಕೊಳ್ಳುವೆ. ಆಗ ನೀನು ನಾಚಿಕೆಪಡುವೆ. ಅದೇ ಸಮಯದಲ್ಲಿ ನೀನು ನಿನ್ನ ಸಹೋದರಿಯರನ್ನು ಸಂತೈಸುವೆ. 55 ಆಗ ನೀನೂ ನಿನ್ನ ಸಹೋದರಿಯರೂ ತಿರುಗಿ ಕಟ್ಟಲ್ಪಡುವಿರಿ. ಸೊದೋಮಳೂ ಆಕೆಯ ಸುತ್ತಲಿರುವ ಪಟ್ಟಣಗಳೂ, ಸಮಾರ್ಯಳು ಮತ್ತು ಆಕೆಯ ಸುತ್ತಲಿರುವ ಪಟ್ಟಣಗಳೆಲ್ಲಾ ತಿರುಗಿ ಕಟ್ಟಲ್ಪಡುವವು.”

56 ದೇವರು ಹೇಳಿದ್ದೇನೆಂದರೆ, “ಹಿಂದೆ, ನೀನು ಜಂಬದಿಂದ ನಿನ್ನ ತಂಗಿ ಸೊದೋಮಳ ವಿಷಯವಾಗಿ ಗೇಲಿ ಮಾಡಿದ್ದೀ. ಹಾಗೆ ನೀನು ತಿರುಗಿ ಮಾಡುವುದಿಲ್ಲ. 57 ಈಗಿನಂತೆ, ನಿನ್ನ ದುಷ್ಟತನವು ಹೊರಬರುವುದಕ್ಕಿಂತ ಮೊದಲು ನೀನು ಅದನ್ನು ಮಾಡಿದೆ. ಈಗ ಎದೋಮಿನ ಹೆಣ್ಣುಮಕ್ಕಳು (ಪಟ್ಟಣಗಳು) ಮತ್ತು ಆಕೆಯ ನೆರೆಯವರು ನಿನ್ನನ್ನು ಗೇಲಿ ಮಾಡುವರು. ಫಿಲಿಷ್ಟಿಯರ ಹೆಣ್ಣುಮಕ್ಕಳು ಸಹ ನಿನ್ನನ್ನು ಗೇಲಿ ಮಾಡುವರು. ನಿನ್ನ ಸುತ್ತಲೂ ಇರುವವರು ನಿನ್ನನ್ನು ಕಡೆಗಾಣಿಸುವರು. 58 ಈಗ ನೀನು ಮಾಡಿದ ಭಯಂಕರ ಕೃತ್ಯಗಳ ಸಲುವಾಗಿ ಶಿಕ್ಷೆ ಅನುಭವಿಸಲೇಬೇಕು.” ಇದು ಒಡೆಯನಾದ ಯೆಹೋವನ ನುಡಿ.

ದೇವರ ನಂಬಿಗಸ್ತಿಕೆಯು ಅಚಲ

59 ಈ ಮಾತುಗಳನ್ನು ನನ್ನ ಒಡೆಯನಾದ ಯೆಹೋವನು ಹೇಳಿದನು. “ನೀನು ಮಾಡಿರುವದನ್ನು ನಾನೂ ನಿನಗೆ ಮಾಡುವೆನು. ನೀನು ನಿನ್ನ ಮದುವೆ ಒಡಂಬಡಿಕೆಯನ್ನು ಮುರಿದುಬಿಟ್ಟೆ. ನಮ್ಮ ಒಡಂಬಡಿಕೆಗೆ ನೀನು ಮಹತ್ವ ಕೊಡಲಿಲ್ಲ. 60 ಆದರೆ ನೀನು ಎಳೆಯವಳಾಗಿದ್ದಾಗ ನಿನ್ನೊಡನೆ ನಾನು ಮಾಡಿಕೊಂಡ ಒಡಂಬಡಿಕೆಯನ್ನು ಜ್ಞಾಪಕ ಮಾಡಿಕೊಳ್ಳುತ್ತೇನೆ. ನಾನು ಅದನ್ನು ಶಾಶ್ವತವಾದ ಒಡಂಬಡಿಕೆಯನ್ನಾಗಿ ಮಾಡುವೆನು. 61 ನಿನ್ನ ಅಕ್ಕತಂಗಿಯಂದಿರನ್ನು ನಾನು ನಿನ್ನ ಬಳಿಗೆ ತಂದು ಅವರನ್ನು ನಿನ್ನ ಮಕ್ಕಳನ್ನಾಗಿ ಮಾಡುವೆನು. ಅದು ನಮ್ಮ ಒಡಂಬಡಿಕೆಯಲ್ಲಿಲ್ಲದಿದ್ದರೂ ನಾನು ಅದನ್ನು ನಿನಗಾಗಿ ಮಾಡುವೆನು. ಆಗ ನೀನು ಮಾಡಿದ ಭಯಂಕರ ಸಂಗತಿಗಳನ್ನು ಜ್ಞಾಪಕಕ್ಕೆ ತಂದು ನೀನು ನಾಚಿಕೊಳ್ಳುವಿ. 62 ನಾನು ನಿನ್ನೊಂದಿಗೆ ಒಡಂಬಡಿಕೆ ಮಾಡಿಕೊಳ್ಳುವೆನು. ಮತ್ತು ನಾನೇ ಯೆಹೋವನೆಂದು ನೀನು ತಿಳಿದುಕೊಳ್ಳುವೆ. 63 ಹೀಗಿರಲು, ನಿನ್ನ ಕಾರ್ಯಗಳನ್ನೆಲ್ಲಾ ನಾನು ಕ್ಷಮಿಸುವಾಗ, ನೀನು ಅವುಗಳನ್ನು ಜ್ಞಾಪಿಸಿಕೊಂಡು ನಾಚಿಕೆಪಡುವೆ. ಅಹಂಕಾರದಿಂದ ಮಾತನಾಡಲು ಮತ್ತೊಮ್ಮೆ ಬಾಯಿ ತೆರೆಯಲಾಗದಂತೆ ನೀನು ಬಹಳವಾಗಿ ಅವಮಾನಿತಳಾಗುವೆ.” ಇವು ನನ್ನ ಒಡೆಯನಾದ ಯೆಹೋವನ ನುಡಿಗಳು.

ಹದ್ದುಗಳು ಮತ್ತು ದಾಕ್ಷಾಲತೆಗಳು

17 ಯೆಹೋವನ ಮಾತುಗಳು ನನಗೆ ಬಂದವು. ಆತನು ಹೇಳಿದ್ದೇನೆಂದರೆ, “ನರಪುತ್ರನೇ, ಈ ಕಥೆಯನ್ನು ಇಸ್ರೇಲ್ ಜನಾಂಗಕ್ಕೆ ಹೇಳು. ಇದರ ಅರ್ಥವೇನೆಂದು ಅವರನ್ನು ಕೇಳು. ಅವರಿಗೆ ಹೀಗೆ ಹೇಳು, ದೇವರಾದ ಯೆಹೋವನು ಹೀಗೆನ್ನುತ್ತಾನೆ:

“‘ಅಗಲವಾದ ರೆಕ್ಕೆಗಳುಳ್ಳ ದೊಡ್ಡ ಹದ್ದು (ಬಾಬಿಲೋನಿನ ರಾಜನಾದ ನೆಬೂಕದ್ನೆಚ್ಚರನು) ಲೆಬನೋನಿಗೆ ಬಂದಿತು.
    ಅದರ ರೆಕ್ಕೆಗಳು ಅನೇಕ ಚುಕ್ಕೆಗಳನ್ನು ಹೊಂದಿತ್ತು.
ಆ ಹದ್ದು ದೇವದಾರು ಮರದ (ಯೆಹೂದದ ರಾಜನಾದ ಯೆಹೋಯಾಖೀನ್) ಮೇಲ್ಭಾಗವನ್ನು ಮುರಿದುಬಿಟ್ಟಿತು.
    ಅದನ್ನು ವ್ಯಾಪಾರಿಗಳ ದೇಶಕ್ಕೆ ತಂದುಹಾಕಿತು.
ನಂತರ ಆ ಹದ್ದು ದೇಶದ ಬೀಜಗಳಲ್ಲಿ ಒಂದನ್ನು (ಹಿಜ್ಕೀಯ) ತೆಗೆದುಕೊಂಡು
    ಅದನ್ನು ಒಳ್ಳೆಯ ಮಣ್ಣಿನಲ್ಲಿ ಬಿತ್ತಿತು;
ಸಮೃದ್ಧಿಕರವಾದ ನೀರಿನ ಸಮೀಪದಲ್ಲಿ ಬೆಳೆಯುವ
    ನೀರವಂಜಿಯಂತೆ ಅದನ್ನು ಬೆಳೆಯಿಸಿತು.
ಆ ಬೀಜವು ಚಿಗುರಿ, ಚಿಕ್ಕ ಜಾತಿಯ ದ್ರಾಕ್ಷಾಲತೆಯಂತೆ ನೆಲದ ಮೇಲೆ ಹಬ್ಬಿಕೊಂಡು,
    ತನ್ನ ಕೊಂಬೆಗಳನ್ನು ಗರುಡದ ಕಡೆಗೆ ಚಾಚಿಕೊಂಡು ತನ್ನ ಬೇರುಗಳನ್ನು ಬಿಟ್ಟಿತು:
ಅಂತೆಯೇ ಅದು ಲತೆಯಾಗಿ ಕೊಂಬೆಗಳನ್ನು ಬೆಳೆಸಿ,
    ಎಲೆಗಳನ್ನು ಹೊರಡಿಸಿತು.
ಆಗ ಅಗಲ ರೆಕ್ಕೆಗಳಿದ್ದ ಇನ್ನೊಂದು ಹದ್ದು ದ್ರಾಕ್ಷಾಲತೆಯನ್ನು ನೋಡಿತು.
    ಈ ಹದ್ದಿಗೆ ತುಂಬಾ ಪುಕ್ಕಗಳಿದ್ದವು.
ದ್ರಾಕ್ಷಾಲತೆಯು ತನ್ನ ಬೇರುಗಳನ್ನು
    ಹದ್ದಿನ ಕಡೆಗೆ ತಿರುಗಿಸಿತ್ತು.
ಹದ್ದಿಗೆ ನೀರು ಹಾಯಿಸಲು ಸಾಧ್ಯವಾಗುವಂತೆ
    ಅದು ತನ್ನ ರೆಂಬೆಗಳನ್ನು ಹದ್ದಿನ ಕಡೆಗೆ ಚಾಚಿಕೊಂಡಿತ್ತು.
ಅದು ತಾನು ನೆಡಲ್ಪಟ್ಟಿದ್ದ ಸ್ಥಳದಿಂದ ಬೇರೆ ಕಡೆಗೆ ತಿರುಗಿಕೊಂಡಿತು.
ಆ ದ್ರಾಕ್ಷಾಲತೆಯು ಸಮೃದ್ಧಿಕರವಾಗಿ ನೀರಿದ್ದ ಒಳ್ಳೆಯ ಭೂಮಿಯಲ್ಲಿ ನೆಡಲ್ಪಟ್ಟಿತ್ತು.
    ಕೊಂಬೆಗಳನ್ನು ಬೆಳೆಸಿ, ಹಣ್ಣುಗಳನ್ನು ಫಲಿಸಿ
    ಅಮೋಘವಾದ ದ್ರಾಕ್ಷಾಲತೆಯಾಗಬೇಕೆಂಬುದು ಅದರ ಬಯಕೆಯಾಗಿತ್ತು.’”

ನೀನು ಹೀಗೆ ಹೇಳು: ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ:
“ಆ ದ್ರಾಕ್ಷಾಲತೆಯು ಬದುಕಿ ಬೆಳೆಯುವುದೋ?
ಇಲ್ಲ. ಮೊದಲನೆ ಹದ್ದು ದ್ರಾಕ್ಷಾಲತೆಗಳ ಬೇರುಗಳನ್ನು ಎಳೆದುಹಾಕಿ,
    ಅದರ ದ್ರಾಕ್ಷಿಹಣ್ಣುಗಳನ್ನು ಕಿತ್ತುಹಾಕುವುದು.
ಆಗ ಚಿಗುರುಗಳು ಬಾಡಿ ಒಣಗಿಹೋಗುವವು.
    ಆ ಸಸಿಯು ಬಲಹೀನವಾಗುವುದು.
ಆಗ ಅದನ್ನು ಬೇರುಸಹಿತ ಕಿತ್ತುಹಾಕಲು ಮಹಾ ಬಲವಾಗಲಿ
    ಅಥವಾ ದೊಡ್ಡಸೈನ್ಯವಾಗಲಿ ಅಗತ್ಯವಿರುವದಿಲ್ಲ.
10 ಆ ಸಸಿಯು ನೆಟ್ಟಿದ ಸ್ಥಳದಲ್ಲಿ ಬೆಳೆಯುವುದೋ?
    ಇಲ್ಲ! ಪೂರ್ವದ ಬಿಸಿಗಾಳಿಯು ಬೀಸುವದು,
    ಆಗ ಸಸಿಯು ತಾನು ನೆಡಲ್ಪಟ್ಟಿದ್ದ ಸ್ಥಳದಲ್ಲೇ ಬಾಡಿಹೋಗಿ ಸಾಯುವುದು.”

ರಾಜ ಚಿದ್ಕೀಯನನ್ನು ದಂಡಿಸಿದ್ದು

11 ಯೆಹೋವನ ನುಡಿಯು ನನಗೆ ಬಂತು. ಆತನು ಹೇಳಿದ್ದೇನೆಂದರೆ, 12 “ದಂಗೆಕೋರರಿಗೆ ಇದನ್ನು ಹೇಳು: ಈ ಸಂಗತಿಗಳ ಅರ್ಥವು ನಿಮಗೆ ಗೊತ್ತಿಲ್ಲವೇ? ಅವರಿಗೆ ಹೇಳು: ಮೊದಲಿನ ಗರುಡ ಪಕ್ಷಿ ಬಾಬಿಲೋನ್ ರಾಜನಾದ ನೆಬೂಕದ್ನೆಚ್ಚರನು. ಅವನು ಜೆರುಸಲೇಮಿಗೆ ಬಂದು ಅದರ ರಾಜನನ್ನೂ ಅದರ ಹಿರಿಯರನ್ನೂ ಬಂಧಿಸಿ, ಅವರನ್ನು ತನ್ನ ರಾಜ್ಯವಾದ ಬಾಬಿಲೋನಿಗೆ ಕೊಂಡೊಯ್ದನು. 13 ಯೆಹೂದದ ರಾಜನನ್ನಾಗಿ ಮಾಡುವುದಾಗಿ ನೆಬೂಕದ್ನೆಚ್ಚರನು ರಾಜನ ಕುಟುಂಬದವರಲ್ಲೊಬ್ಬನೊಡನೆ ಒಪ್ಪಂದಮಾಡಿಕೊಂಡು ತನಗೆ (ನೆಬೂಕದ್ನೆಚ್ಚರನಿಗೆ) ಆಧಿನವಾಗಿರುವದಾಗಿ ಅವನಿಂದ (ರಾಜನ ಕುಟುಂಬದವನಿಂದ) ಪ್ರಮಾಣ ಮಾಡಿಸಿಕೊಂಡನು. ಅವನು ಯೆಹೂದದ ಬಲಿಷ್ಠರೆಲ್ಲರನ್ನು ಸಹ ಈ ಒಪ್ಪಂದದಲ್ಲಿ ಸೇರಿಸಿದನು. 14 ಯೆಹೂದ ರಾಜ್ಯವು ದೀನತೆಯಿಂದಿದ್ದು ದಂಗೆ ಏಳದೆ ತನ್ನ ಒಪ್ಪಂದಕ್ಕೆ ಶಾಶ್ವತವಾಗಿ ಬದ್ಧವಾಗಿರಬೇಕೆಂಬುದು ನೆಬೂಕದ್ನೆಚ್ಚರನ ಬಯಕೆಯಾಗಿತ್ತು. 15 ಆದರೆ ಈ ಹೊಸ ರಾಜನು ನೆಬೂಕದ್ನೆಚ್ಚರನಿಗೆ ತಿರುಗಿ ಬೀಳಲು ಪ್ರಯತ್ನಿಸಿದನು. ಅವನು ಈಜಿಪ್ಟಿಗೆ ದೂತರನ್ನು ಕಳುಹಿಸಿ ಸಹಾಯವನ್ನು ಕೇಳಿದನು. ಬಹಳ ಕುದುರೆಗಳನ್ನೂ ಸೈನಿಕರನ್ನೂ ಕೇಳಿದನು. ಯೆಹೂದದ ಹೊಸ ರಾಜನು ತನ್ನ ಪ್ರಯತ್ನದಲ್ಲಿ ಜಯಶಾಲಿಯಾಗುವನು ಎಂದು ಭಾವಿಸುವಿರೋ? ಈ ಹೊಸ ರಾಜನು ಒಪ್ಪಂದವನ್ನು ಮುರಿದು ಶಿಕ್ಷೆಯಿಂದ ಪಾರಾಗುವನೆಂದು ನೀವು ಭಾವಿಸುವಿರೋ?”

16 ನನ್ನ ಒಡೆಯನಾದ ಯೆಹೋವನು ಹೇಳುವುದೇನೆಂದರೆ, “ನನ್ನ ಜೀವದಾಣೆ, ಈ ಹೊಸ ರಾಜನು ಬಾಬಿಲೋನಿನಲ್ಲಿ ಸಾಯುವನು. ಈ ಮನುಷ್ಯನನ್ನು ಯೆಹೂದದ ರಾಜನನ್ನಾಗಿ ಮಾಡಿದ ರಾಜ ನೆಬೂಕದ್ನೆಚ್ಚರನ ನಾಡಿನಲ್ಲಿ ಇವನು ಸಾಯುವನು. ಈ ಮನುಷ್ಯನು ಆ ರಾಜನೊಡನೆ ಮಾಡಿದ ಪ್ರಮಾಣವನ್ನು ತಿರಸ್ಕರಿಸಿ ಆ ರಾಜನೊಡನೆ ಮಾಡಿಕೊಂಡಿದ್ದ ಒಪ್ಪಂದವನ್ನು ಮುರಿದು ಹಾಕಿದನು. 17 ಈಜಿಪ್ಟಿನ ರಾಜನು ಯೆಹೂದದ ರಾಜನನ್ನು ರಕ್ಷಿಸಲು ಸಾಧ್ಯವಿಲ್ಲ. ಅವನು ಬಹಳ ಸೈನಿಕರನ್ನು ಕಳುಹಿಸಬಹುದು, ಆದರೆ ಈಜಿಪ್ಟಿನ ಶಕ್ತಿಯು ಯೆಹೂದವನ್ನು ರಕ್ಷಿಸಲಾರದು. ನೆಬೂಕದ್ನೆಚ್ಚರನ ಸೈನ್ಯವು ಕೆಸರಿನ ಇಳಿಜಾರುಗಳನ್ನೂ ತಡೆಗಟ್ಟುಗಳನ್ನೂ ಕಟ್ಟಿ ಪಟ್ಟಣವನ್ನು ವಶಪಡಿಸಿಕೊಳ್ಳುವುದು. ಎಷ್ಟೋ ಮಂದಿ ಸಾಯುವರು. 18 ಆದರೆ ಯೆಹೂದದ ರಾಜನಿಗೆ ತಪ್ಪಿಸಿಕೊಳ್ಳಲು ಸಾಧ್ಯವಾಗುವದಿಲ್ಲ. ಯಾಕೆಂದರೆ ಅವನು ತನ್ನ ಪ್ರಮಾಣವನ್ನು ತಿರಸ್ಕರಿಸಿದನು ಮತ್ತು ತಾನು ಮಾಡಿಕೊಂಡ ಒಡಂಬಡಿಕೆಯನ್ನು ಮುರಿದುಹಾಕಿದನು.” 19 ಆದ್ದರಿಂದ ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ: “ನನ್ನ ಜೀವದಾಣೆ, ನಾನು ಯೆಹೂದದ ರಾಜನನ್ನು ಶಿಕ್ಷಿಸುವೆನು. ಯಾಕೆಂದರೆ ಅವನು ನನ್ನ ಮುಂದೆ ಮಾಡಿದ ಪ್ರಮಾಣಕ್ಕೆ ಗಮನಕೊಡಲಿಲ್ಲ ಮತ್ತು ನಾನು ಸಾಕ್ಷಿಯಾಗಿದ್ದ ಒಪ್ಪಂದವನ್ನು ಅವನು ಮುರಿದುಹಾಕಿದನು. 20 ನಾನು ಅವನಿಗೆ ಉರುಲನ್ನೊಡ್ಡುವೆನು; ಅವನು ಅದರೊಳಗೆ ಸಿಕ್ಕಿಕೊಳ್ಳುವನು. ನಾನು ಅವನನ್ನು ಬಾಬಿಲೋನಿಗೆ ತಂದು ಅಲ್ಲಿ ಶಿಕ್ಷಿಸುವೆನು. ಯಾಕೆಂದರೆ ಅವನು ನನಗೆ ಅಪನಂಬಿಗಸ್ತನಾದನು. 21 ಅವನ ಸೈನ್ಯವನ್ನು ನಾಶಮಾಡುವೆನು. ಅವನಲ್ಲಿದ್ದ ಶೂರರನ್ನು ನಾಶಮಾಡುವೆನು. ಅಳಿದುಳಿದವರನ್ನು ಗಾಳಿ ಬೀಸುವ ಪ್ರತಿಯೊಂದು ದಿಕ್ಕಿನಲ್ಲಿಯೂ ಚದರಿಸಿಬಿಡುವೆನು. ಆಗ ಯೆಹೋವನಾದ ನಾನು ನಿಮಗೆ ಇದನ್ನು ಹೇಳಿದೆನೆಂದು ತಿಳಿಯುವುದು.”

22 ನನ್ನ ಒಡೆಯನಾದ ಯೆಹೋವನು ಇದನ್ನು ಹೇಳಿದನು:

“ನಾನು ಎತ್ತರವಾದ ದೇವದಾರು ಮರದಿಂದ ಒಂದು ಕೊಂಬೆಯನ್ನು ಕೀಳುವೆನು.
    ಆ ಮರದ ಮೇಲಿರುವ ಒಂದು ಸಣ್ಣ ಕೊಂಬೆಯನ್ನು ಕೀಳುವೆನು.
    ಅದನ್ನು ನಾನು ಎತ್ತರವಾದ ಪರ್ವತದಲ್ಲಿ ನೆಡುವೆನು.
23 ಸ್ವತಃ ನಾನೇ ಅದನ್ನು ಇಸ್ರೇಲಿನ ಉನ್ನತವಾದ ಪರ್ವತದ ಮೇಲೆ ನೆಡುವೆನು.
    ಅದು ಕೊಂಬೆಗಳನ್ನು ಬೆಳೆಸಿ, ಫಲವನ್ನು ಫಲಿಸಿ,
ಅಮೋಘವಾದ ದೇವದಾರು ಮರವಾಗುವುದು;
    ಅದರ ಕೊಂಬೆಗಳ ಮೇಲೆ ಅನೇಕ ಬಗೆಯ ಪಕ್ಷಿಗಳು ವಾಸಿಸುವವು.
ಅದರ ಕೊಂಬೆಯ ನೆರಳಿನಲ್ಲಿ
    ವಿವಿಧ ಬಗೆಯ ಪಕ್ಷಿಗಳು ವಾಸಿಸುವವು.

24 “ಆಗ ಬೇರೆ ಮರಗಳಿಗೆ, ನಾನು ದೊಡ್ಡ ಮರಗಳನ್ನು ನೆಲಕ್ಕೆ ಬೀಳಿಸುವೆನೆಂತಲೂ,
    ಚಿಕ್ಕ ಮರಗಳನ್ನು ಉದ್ದವಾಗಿ ಬೆಳೆಯುವಂತೆ ಮಾಡುತ್ತೇನೆಂತಲೂ ಗೊತ್ತಾಗುವದು.
ಹಸಿರು ಮರಗಳು ಒಣಗಿಹೋಗುವಂತೆಯೂ
    ಒಣಗಿಹೋದ ಮರಗಳು ಹಸಿರಾಗಿ ಬೆಳೆಯುವಂತೆಯೂ ನಾನು ಮಾಡುತ್ತೇನೆ.
ನಾನೇ ಯೆಹೋವನು.
    ಇದನ್ನು ನಾನೇ ಹೇಳಿದ್ದೇನೆ; ಮತ್ತು ನಾನೇ ಇದನ್ನು ನೆರವೇರಿಸುವೆನು.”

ಯಾಕೋಬನು 3

ಹತೋಟಿಮೀರಿ ಮಾತಾಡಬೇಡಿ

ನನ್ನ ಸಹೋದರ ಸಹೋದರಿಯರೇ, ನಿಮ್ಮಲ್ಲಿ ಅನೇಕರು ಬೋಧಕರಾಗಬಾರದು. ಏಕೆಂದರೆ ಬೋಧಕರಾದ ನಮಗೆ ಇತರ ಜನರಿಗಿಂತ ಕಠಿಣವಾದ ತೀರ್ಪಾಗುತ್ತದೆ ಎಂಬುದು ನಿಮಗೆ ತಿಳಿದಿದೆ.

ನಾವೆಲ್ಲರೂ ಅನೇಕ ವಿಷಯಗಳಲ್ಲಿ ತಪ್ಪುವುದುಂಟು. ಆದರೆ ಮಾತಿನಲ್ಲಿ ಎಂದೂ ತಪ್ಪುಮಾಡಿಲ್ಲದ ವ್ಯಕ್ತಿಯು ಪರಿಪೂರ್ಣನೂ ತನ್ನ ದೇಹವನ್ನು ಸ್ವಾಧೀನದಲ್ಲಿಟ್ಟುಕೊಳ್ಳಲು ಸಮರ್ಥನೂ ಆಗಿದ್ದಾನೆ. ನಾವು ಕುದುರೆಗಳನ್ನು ಸ್ವಾಧೀನ ಪಡಿಸಿಕೊಳ್ಳಲು ಅವುಗಳ ಬಾಯಿಗೆ ಕಡಿವಾಣ ಹಾಕುತ್ತೇವಲ್ಲಾ; ಆಗ ಅವುಗಳ ದೇಹವನ್ನೆಲ್ಲಾ ಸ್ವಾಧೀನ ಪಡಿಸಿಕೊಳ್ಳಬಹುದು. ಇದೇ ನಿಯಮ ಹಡಗುಗಳಿಗೂ ಅನ್ವಯಿಸುತ್ತದೆ. ಹಡಗು ಬಹಳ ದೊಡ್ಡದಾಗಿರುತ್ತದೆ ಮತ್ತು ಬಲವಾದ ಗಾಳಿಯು ಅದನ್ನು ತಳ್ಳಿಕೊಂಡು ಹೋಗುತ್ತದೆ. ಆದರೆ ಒಂದು ಸಣ್ಣ ಚುಕ್ಕಾಣಿಯು ಆ ದೊಡ್ಡ ಹಡಗನ್ನು ನಿಯಂತ್ರಿಸುತ್ತದೆ. ಚುಕ್ಕಾಣಿಯನ್ನು ಹತೋಟಿಯಲ್ಲಿ ಇಟ್ಟುಕೊಂಡಿರುವವನು ಹಡಗು ಹೋಗಬೇಕಾದ ಮಾರ್ಗವನ್ನು ತೀರ್ಮಾನಿಸುತ್ತಾನೆ. ಅವನ ಅಪೇಕ್ಷೆಯಂತೇ ಹಡಗು ಹೋಗುತ್ತದೆ. ನಮ್ಮ ನಾಲಿಗೆಯೂ ಅದರಂತೆಯೆ. ಅದು ದೇಹದ ಒಂದು ಸಣ್ಣ ಭಾಗವಾದರೂ, ದೊಡ್ಡ ಕಾರ್ಯಗಳನ್ನು ಕೊಚ್ಚಿಕೊಳ್ಳುತ್ತದೆ.

ಒಂದು ಚಿಕ್ಕ ಬೆಂಕಿಯ ಕಿಡಿಯು ದೊಡ್ಡ ಕಾಡ್ಗಿಚ್ಚಿಗೆ ಕಾರಣವಾಗುತ್ತದೆ. ನಾಲಿಗೆಯು ಬೆಂಕಿಯ ಕಿಡಿಯಂತೆ ನಮ್ಮ ದೇಹದ ಭಾಗಗಳಲ್ಲಿ ಅದು ಕೆಟ್ಟ ಲೋಕದಂತಿದೆ. ಹೇಗೆಂದರೆ, ನಾಲಿಗೆಯು ನಮ್ಮ ದೇಹದಲ್ಲೆಲ್ಲಾ ಕೆಟ್ಟತನವನ್ನು ಹರಡುತ್ತದೆ. ನಮ್ಮ ಜೀವಿತದ ಮೇಲೆಲ್ಲಾ ಪ್ರಭಾವ ಬೀರುವ ಬೆಂಕಿಯನ್ನು ಅದು ನರಕದಿಂದ ಪಡೆದು ಹೊತ್ತಿಸುತ್ತದೆ.

ಜನರು ಎಲ್ಲಾ ವಿಧವಾದ ಕಾಡುಮೃಗ, ಪಕ್ಷಿ, ಸರ್ಪ, ಮೀನುಗಳನ್ನು ಹತೋಟಿಗೆ ತರುತ್ತಾರೆ. ಜನರು ಈಗಾಗಲೇ ಇವುಗಳನ್ನು ಹತೋಟಿಗೆ ತಂದಿದ್ದಾರೆ. ಆದರೆ ಯಾರೂ ನಾಲಿಗೆಯನ್ನು ಹತೋಟಿಗೆ ತಂದಿಲ್ಲ. ಅದು ಕ್ರೂರವಾದದ್ದೂ ಕೆಟ್ಟದ್ದೂ ಆಗಿದೆ. ಅದು ಮರಣಕರವಾದ ವಿಷವನ್ನು ತುಂಬಿಕೊಂಡಿದೆ. ನಮ್ಮ ಪ್ರಭುವನ್ನು ಮತ್ತು ತಂದೆಯನ್ನು (ದೇವರು) ಸ್ತುತಿಸಲು ನಮ್ಮ ನಾಲಿಗೆಯನ್ನು ಬಳಸುತ್ತೇವೆ; ಆದರೆ ಅದರಿಂದಲೇ ಜನರನ್ನು ಶಪಿಸುತ್ತೇವೆ. ದೇವರು ಆ ಜನರನ್ನೂ ತನ್ನ ಹೋಲಿಕೆಗನುಸಾರವಾಗಿ ಸೃಷ್ಟಿಸಿದ್ದಾನೆ. 10 ಹೊಗಳಿಕೆ ಮತ್ತು ತೆಗಳಿಕೆಗಳೆರಡೂ ಒಂದೇ ಬಾಯಿಂದ ಬರುತ್ತವೆ! ನನ್ನ ಸಹೋದರ ಸಹೋದರಿಯರೇ, ಇದು ಸಂಭವಿಸಲೇಬಾರದು. 11 ಸಿಹಿಯಾದ ನೀರು ಮತ್ತು ಕಹಿಯಾದ ನೀರು ಒಂದೇ ಬುಗ್ಗೆಯಿಂದ ಹರಿಯುತ್ತವೆಯೋ? ಇಲ್ಲ! 12 ನನ್ನ ಸಹೋದರ ಸಹೋದರಿಯರೇ, ಅಂಜೂರದ ಮರವು ಆಲಿವ್ ಕಾಯಿಗಳನ್ನು ಬಿಡುವುದೇ? ಇಲ್ಲ! ದ್ರಾಕ್ಷಿಬಳ್ಳಿಯು ಅಂಜೂರದ ಹಣ್ಣನ್ನು ಬಿಡುವುದೇ? ಇಲ್ಲ! ಉಪ್ಪು ನೀರಿನಿಂದ ತುಂಬಿದ ಬಾವಿಯು ಸಿಹಿ ನೀರನ್ನು ಕೊಡುವುದಿಲ್ಲ.

ನಿಜವಾದ ಜ್ಞಾನ

13 ನಿಮ್ಮಲ್ಲಿ ಜ್ಞಾನವಂತರಾಗಲಿ ಬದ್ಧಿವಂತರಾಗಲಿ ಇದ್ದಾರೋ? ಅಂಥವನು ತನ್ನ ಜ್ಞಾನವನ್ನು ಯೋಗ್ಯವಾಗಿ ಬದುಕುವುದರ ಮೂಲಕ ತೋರ್ಪಡಿಸಲಿ. ಅವನು ಒಳ್ಳೆಯ ಕಾರ್ಯಗಳನ್ನು ದೀನತೆಯಿಂದ ಮಾಡಲಿ. ಜ್ಞಾನಿಯಾದವನು ಕೊಚ್ಚಿಕೊಳ್ಳುವುದಿಲ್ಲ. 14 ನೀವು ಸ್ವಾರ್ಥಿಗಳೂ ತೀಕ್ಷ್ಣವಾದ ಮತ್ಸರವನ್ನು ಹೃದಯದಲ್ಲಿ ಹೊಂದಿರುವವರೂ ಆಗಿದ್ದರೆ, ನೀವು ಕೊಚ್ಚಿಕೊಳ್ಳುವುದರಲ್ಲಿ ಅರ್ಥವೇ ಇಲ್ಲ. ಏಕೆಂದರೆ ಅದು ಕೇವಲ ಸುಳ್ಳಷ್ಟೇ. 15 ಇಂಥ “ಜ್ಞಾನ”ವು ದೇವರಿಂದ ಬರದೆ ಲೋಕದಿಂದ ಬರುತ್ತದೆ. ಅದು ಆತ್ಮ ಸಂಬಂಧವಾದುದಲ್ಲ. ಅದು ದೆವ್ವಗಳಿಂದ ಬಂದುದು. 16 ಹೊಟ್ಟೆಕಿಚ್ಚು ಮತ್ತು ಸ್ವಾರ್ಥತೆಗಳು ಎಲ್ಲಿರುವವೋ ಅಲ್ಲಿ ಗಲಿಬಿಲಿಯೂ ಎಲ್ಲಾ ಬಗೆಯ ನೀಚತನಗಳೂ ಇರುತ್ತವೆ. 17 ಆದರೆ ದೇವರಿಂದ ಬರುವ ಜ್ಞಾನವು ಹೀಗಿರುತ್ತದೆ: ಮೊದಲನೆಯದಾಗಿ ಅದು ಪರಿಶುದ್ಧವಾದದ್ದು. ಅದು ಶಾಂತಿದಾಯಕವಾದದ್ದು, ಸಾತ್ವಿಕವಾದದ್ದು ಮತ್ತು ಸುಲಭವಾಗಿ ಮೆಚ್ಚಿಕೊಳ್ಳುವಂಥದ್ದು. ಈ ಜ್ಞಾನವು ತೊಂದರೆಯಲ್ಲಿರುವ ಜನರಿಗೆ ಸಹಾಯ ಮಾಡಲು ಮತ್ತು ಇತರ ಜನರಿಗೆ ಒಳ್ಳೆಯದನ್ನು ಮಾಡಲು ಯಾವಾಗಲೂ ಸಿದ್ಧವಾಗಿರುತ್ತದೆ. ಈ ಜ್ಞಾನವು ಯಾವಾಗಲೂ ನ್ಯಾಯವಾದದ್ದು ಮತ್ತು ಯಥಾರ್ಥವಾದದ್ದು. 18 ಶಾಂತಿ ಸ್ಥಾಪಿಸುವುದಕ್ಕಾಗಿ ಸಮಾಧಾನಕರವಾದ ರೀತಿಯಲ್ಲಿ ಕಾರ್ಯ ಮಾಡುವವರು ಯೋಗ್ಯವಾದ ಬದುಕಿನಿಂದ ಬರುವ ಉತ್ತಮ ಫಲಗಳನ್ನು ಪಡೆಯುತ್ತಾರೆ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International