Print Page Options
Previous Prev Day Next DayNext

Old/New Testament

Each day includes a passage from both the Old Testament and New Testament.
Duration: 365 days
Kannada Holy Bible: Easy-to-Read Version (KERV)
Version
ಯೆಹೆಜ್ಕೇಲ 8-10

ದೇವಾಲಯದಲ್ಲಿನ ಪಾಪಕೃತ್ಯಗಳು

ಒಂದು ದಿವಸ ನಾನು ನನ್ನ ಮನೆಯಲ್ಲಿ ಕುಳಿತುಕೊಂಡಿದ್ದೆನು. ಯೆಹೂದದ ನಾಯಕರು ನನ್ನ ಮುಂದೆ ಕುಳಿತಿದ್ದರು. ಇದು ಸೆರೆಹಿಡಿದ ಆರನೇ ವರ್ಷದ, ಆರನೆಯ ತಿಂಗಳಿನ, ಐದನೇ ದಿವಸವಾಗಿತ್ತು. ಫಕ್ಕನೆ ನನ್ನ ಒಡೆಯನಾದ ಯೆಹೋವನ ಆತ್ಮನಿಂದ ನಾನು ಪರವಶನಾದೆನು. ಮನುಷ್ಯನಂತೆ ಕಾಣುತ್ತಿದ್ದ ರೂಪವೊಂದನ್ನು ನಾನು ನೋಡಿದೆನು. ಅದರ ಸೊಂಟದಿಂದಿಡಿದು ಕೆಳಭಾಗದವರೆಗೆ ಬೆಂಕಿಯಂತೆ ಕಾಣುತ್ತಿತ್ತು. ಸೊಂಟದಿಂದ ಮೇಲ್ಭಾಗದವರೆಗೆ ಕಾದಲೋಹದಂತೆ ಹೊಳೆಯುತ್ತಿತ್ತು. ಆಗ ಅದು ಕೈಯಂತಿದ್ದ ಒಂದನ್ನು ಚಾಚಿ ನನ್ನ ತಲೆಯ ಕೂದಲನ್ನು ಹಿಡಿದುಕೊಂಡಿತು. ಬಳಿಕ ಆತ್ಮವು ನನ್ನನ್ನು ಮೇಲಕ್ಕೆ ಎತ್ತಿ ದಿವ್ಯದರ್ಶನದಲ್ಲಿ ಜೆರುಸಲೇಮಿಗೆ ಕೊಂಡೊಯ್ಯಿತು. ಅದು ನನ್ನನ್ನು ಒಳದ್ವಾರಕ್ಕೆ ಕೊಂಡೊಯ್ಯಿತು. ಇದು ಉತ್ತರ ದಿಕ್ಕಿನಲ್ಲಿತ್ತು. ದೇವರನ್ನು ಸಿಟ್ಟಿಗೆಬ್ಬಿಸುವ ವಿಗ್ರಹವು ಈ ದ್ವಾರದ ಬಳಿ ಇತ್ತು. ಇಸ್ರೇಲಿನ ದೇವರ ಮಹಿಮೆಯು ಅಲ್ಲಿ ಇತ್ತು. ಆ ಮಹಿಮೆ ನಾನು ಕೆಬಾರ್ ಕಾಲುವೆಯ ಪಕ್ಕದ ಕಣಿವೆಯಲ್ಲಿ ಕಂಡ ದರ್ಶನದಂತಿತ್ತು.

ದೇವರು ನನ್ನೊಂದಿಗೆ ಮಾತನಾಡುತ್ತಾ, “ನರಪುತ್ರನೇ, ಉತ್ತರ ದಿಕ್ಕಿಗೆ ನೋಡು” ಎಂದು ಹೇಳಿದನು. ನಾನು ಉತ್ತರ ದಿಕ್ಕಿಗೆ ನೋಡಿದಾಗ, ದೇವರನ್ನು ರೋಷಗೊಳಿಸುವ ವಿಗ್ರಹವು ಯಜ್ಞವೇದಿಕೆಯ ದ್ವಾರದ ಉತ್ತರ ದಿಕ್ಕಿನಲ್ಲಿರುವ ಪ್ರವೇಶದ ಸ್ಥಳದಲ್ಲಿ ಇತ್ತು.

ಆಗ ದೇವರು ನನಗೆ, “ನರಪುತ್ರನೇ, ನನ್ನನ್ನು ನನ್ನ ಆಲಯದಿಂದ ಓಡಿಸಲು ಇಲ್ಲಿ ಇಸ್ರೇಲರು ಮಾಡುತ್ತಿರುವ ಭಯಂಕರವಾದ ಕೃತ್ಯಗಳು ನಿನಗೆ ಕಾಣುತ್ತಿಲ್ಲವೇ? ಆದರೆ ಇದಕ್ಕಿಂತಲೂ ಹೆಚ್ಚಿನ ದುಷ್ಕೃತ್ಯಗಳನ್ನು ನೀನು ನೋಡುವೆ” ಎಂದು ಹೇಳಿದನು.

ಬಳಿಕ ಆತನು ನನ್ನನ್ನು ಅಂಗಳದ ದ್ವಾರಕ್ಕೆ ತಂದನು. ನಾನು ಗೋಡೆಯಲ್ಲಿದ್ದ ಒಂದು ರಂಧ್ರವನ್ನು ಕಂಡೆನು. ಆಗ ದೇವರು ನನಗೆ, “ನರಪುತ್ರನೇ, ಗೋಡೆಯ ರಂಧ್ರವನ್ನು ಅಗೆದು ದೊಡ್ಡದನ್ನಾಗಿ ಮಾಡು” ಎಂದು ಹೇಳಿದನು. ನಾನು ಗೋಡೆಯನ್ನು ಅಗೆದೆನು. ಆಗ ಬಾಗಿಲೊಂದು ನನಗೆ ಕಾಣಿಸಿತು.

ಆಗ ದೇವರು ನನಗೆ, “ಜನರು ಇಲ್ಲಿ ಮಾಡುತ್ತಿರುವ ಅಸಹ್ಯವಾದ ದುಷ್ಕೃತ್ಯಗಳನ್ನು ಹೋಗಿ ನೋಡು” ಎಂದು ಹೇಳಿದನು. 10 ನಾನು ಒಳಗೆ ಹೋದಾಗ, ಗೋಡೆಗಳ ಮೇಲೆಲ್ಲಾ ಕೆತ್ತಲ್ಪಟ್ಟಿದ್ದ ಎಲ್ಲಾ ಬಗೆಯ ಕ್ರಿಮಿಕೀಟಗಳನ್ನು ಮತ್ತು ಅಸಹ್ಯಕರವಾದ ಪ್ರಾಣಿಗಳ ವಿಗ್ರಹಗಳನ್ನು ಕಂಡೆನು.

11 ನಾನು ಅಲ್ಲಿ ಶಾಫಾನನ ಮಗನಾದ ಯಾಜನ್ಯನು ಮತ್ತು ಇಸ್ರೇಲರ ಎಪ್ಪತ್ತು ಮಂದಿ ಹಿರಿಯರು ಈ ಚಿತ್ರಗಳ ಮತ್ತು ವಿಗ್ರಹಗಳ ಮುಂದೆ ನಿಂತಿರುವುದನ್ನು ಕಂಡೆನು. ಪ್ರತಿಯೊಬ್ಬನು ಒಂದು ಧೂಪಾರತಿಯನ್ನು ಹಿಡಿದುಕೊಂಡಿದ್ದನು. ಆ ಧೂಪದ ಹೊಗೆಯು ಆಕಾಶದವರೆಗೂ ಏರಿ ಹೋಗುತ್ತಿತ್ತು. 12 ಆಗ ದೇವರು ನನಗೆ, “ನರಪುತ್ರನೇ, ಇಸ್ರೇಲಿನ ಹಿರಿಯರು ಕತ್ತಲೆಯಲ್ಲಿ ಮಾಡುತ್ತಿರುವುದು ನಿನಗೆ ಕಾಣುತ್ತಿದೆಯೋ? ಅವರಲ್ಲಿ ಪ್ರತಿಯೊಬ್ಬನಿಗೆ ಒಂದೊಂದು ವಿಶೇಷ ಕೋಣಿಯಿದೆ. ಅದರೊಳಗೆ ಅವರ ದೇವರ ವಿಗ್ರಹಗಳನ್ನಿಟ್ಟುಕೊಂಡಿದ್ದಾರೆ. ಅವರು, ‘ಯೆಹೋವನು ನಮ್ಮನ್ನು ನೋಡುವದಿಲ್ಲ. ಆತನು ಈ ದೇಶವನ್ನು ತೊರೆದುಬಿಟ್ಟಿದ್ದಾನೆ’ ಎಂದು ತಮ್ಮೊಳಗೆ ಹೇಳಿಕೊಳ್ಳುತ್ತಿದ್ದಾರೆ” ಎಂದನು. 13 ಬಳಿಕ ದೇವರು ನನಗೆ, “ನೀನು ನನ್ನೊಂದಿಗೆ ಬಂದರೆ, ಜನರು ಮಾಡುವ ಇನ್ನೂ ಭಯಂಕರ ಸಂಗತಿಗಳನ್ನು ನೀನು ನೋಡುವೆ” ಎಂದು ಹೇಳಿದನು.

14 ಆಗ ದೇವರು ನನ್ನನ್ನು ಯೆಹೋವನಾಲಯದ ಉತ್ತರ ದ್ವಾರದ ಪ್ರವೇಶ ಸ್ಥಳಕ್ಕೆ ನಡೆಸಿದನು. ಅಲ್ಲಿ ಹೆಂಗಸರು ಕುಳಿತುಕೊಂಡು ರೋಧಿಸುವುದನ್ನು ನೋಡಿದೆನು. ಅವರು ತಮ್ಮೂಜ್ ಎಂಬ ಸುಳ್ಳುದೇವತೆಗೋಸ್ಕರ ದುಃಖಪಡುತ್ತಿದ್ದರು.

15 ದೇವರು ನನಗೆ, “ನರಪುತ್ರನೇ, ಈ ದುರಾಚಾರಗಳನ್ನು ನೋಡಿದ್ದೀಯಾ? ನನ್ನೊಂದಿಗೆ ಬಾ, ಇವುಗಳಿಗಿಂತ ಇನ್ನೂ ಹೆಚ್ಚಿನ ಭಯಂಕರ ಸಂಗತಿಗಳನ್ನು ನಿನಗೆ ತೋರಿಸುವೆನು” ಎಂದನು. 16 ದೇವರು ನನ್ನನ್ನು ಯೆಹೋವನಾಲಯದ ಒಳಗಿನ ಅಂಗಳಕ್ಕೆ ಕರಕೊಂಡು ಹೋದನು. ಯೆಹೋವನಾಲಯದ ಪ್ರವೇಶ ಸ್ಥಳದಲ್ಲಿ ಮಂಟಪಕ್ಕೂ ಯಜ್ಞವೇದಿಕೆಗೂ ನಡುವೆ ಪವಿತ್ರ ಸ್ಥಳದ ಕಡೆಗೆ ಬೆನ್ನು ಮಾಡಿಕೊಂಡಿದ್ದ ಇಪ್ಪತ್ತೈದು ಮಂದಿ ಇದ್ದರು. ಪೂರ್ವಕ್ಕೆ ಮುಖಮಾಡಿಕೊಂಡಿದ್ದ ಅವರು ಸೂರ್ಯನನ್ನು ಪೂಜಿಸುತ್ತಿದ್ದರು.

17 ಆಗ ದೇವರು ನನಗೆ, “ನರಪುತ್ರನೇ, ಅವರು ಮಾಡುತ್ತಿರುವುದು ನಿನಗೆ ಕಾಣುತ್ತಿದೆಯೋ? ಯೆಹೂದದ ಜನರಿಗೆ ತಾವು ಮಾಡುತ್ತಿರುವ ಈ ಭಯಂಕರ ಕೃತ್ಯಗಳು ಸಾಕಾಗಿಲ್ಲ. ಇಡೀ ದೇಶವು ದುಷ್ಟತನದಿಂದ ತುಂಬಿಹೋಗಿದೆ. ಅವರು ನನ್ನನ್ನು ಇನ್ನೂ ಹೆಚ್ಚಿಗೆ ಕೋಪಗೊಳಿಸುತ್ತಿದ್ದಾರೆ. ವಿಗ್ರಹಾರಾಧನೆಯ ಪ್ರತೀಕವಾಗಿ ತಮ್ಮ ಮೂಗುಗಳಿಗೆ ಎಳೆಯ ಕೊಂಬೆಗಳನ್ನು ಸೋಕಿಸುತ್ತಾರೆ. 18 ಅವರಿಗೆ ನಾನು ನನ್ನ ರೌದ್ರವನ್ನು ತೋರಿಸುವೆನು. ಅವರಿಗೆ ನಾನು ಕರುಣೆಯನ್ನು ಎಂದಿಗೂ ತೋರಿಸುವುದಿಲ್ಲ. ಅವರಿಗಾಗಿ ನಾನು ದುಃಖಿಸುವುದೂ ಇಲ್ಲ. ಅವರು ನನ್ನನ್ನು ಕೂಗುವರು, ಆದರೆ ನಾನು ಅವರಿಗೆ ಕಿವಿಗೊಡುವುದಿಲ್ಲ.”

ದೇವರ ಸಂದೇಶಕನು ಜೆರುಸಲೇಮ್‌ನ್ನು ದಂಡಿಸಿದ್ದು

ಆಮೇಲೆ ದೇವರು ಗಟ್ಟಿಯಾದ ಧ್ವನಿಯಿಂದ ಕರೆಯುವುದು ನನಗೆ ಕೇಳಿಸಿತು: “ಪಟ್ಟಣವನ್ನು ದಂಡಿಸಲು ನೇಮಕಗೊಂಡಿರುವವರೇ, ಇಲ್ಲಿಗೆ ಬನ್ನಿ. ನಿಮ್ಮಲ್ಲಿ ಪ್ರತಿಯೊಬ್ಬರೂ ನಾಶದ ಆಯುಧವನ್ನು ನಿಮ್ಮ ಕೈಯಲ್ಲಿ ಹಿಡಿದುಕೊಂಡು ಬನ್ನಿ.” ಆಗ ಆರು ಮಂದಿ ಪುರುಷರು ಉತ್ತರದಿಕ್ಕಿನಲ್ಲಿದ್ದ ಮೇಲಿನ ದ್ವಾರದ ಮಾರ್ಗದಿಂದ ಬರುತ್ತಿರುವುದನ್ನು ನಾನು ನೋಡಿದೆನು. ಪ್ರತಿಯೊಬ್ಬನ ಕೈಯಲ್ಲಿ ಮಾರಕಾಸ್ತ್ರವಿತ್ತು. ಅವರಲ್ಲೊಬ್ಬನು ನಾರುಮಡಿಯನ್ನು ಧರಿಸಿದ್ದನು. ಅವನ ಸೊಂಟದಲ್ಲಿ ಲೇಖಕನ ಸಾಮಾಗ್ರಿಯ ಚಿಕ್ಕ ಚೀಲವಿತ್ತು. ಅವರು ಆಲಯದೊಳಗಿದ್ದ ತಾಮ್ರದ ವೇದಿಕೆಯ ಬಳಿ ಹೋಗಿ ನಿಂತುಕೊಂಡರು. ಆಗ ಇಸ್ರೇಲರ ದೇವರ ಮಹಿಮೆಯು ತಾನು ಆಸನಾರೂಢನಾಗಿದ್ದ ಕೆರೂಬಿದೂತರ ಮೇಲಿನಿಂದ ಏರಿ ದೇವಾಲಯದ ಪ್ರವೇಶ ಸ್ಥಳಕ್ಕೆ ಹೋಯಿತು. ಆ ಮಹಿಮೆಯು ನಾರುಮಡಿಯನ್ನು ಧರಿಸಿದ್ದ, ಲೇಖಕನ ಸಾಮಾಗ್ರಿಯ ಚಿಕ್ಕ ಚೀಲವನ್ನು ಹೊಂದಿದ್ದ ಪುರುಷನನ್ನು ಕರೆಯಿತು.

ಆಗ ಯೆಹೋವನು ಅವನಿಗೆ, “ಜೆರುಸಲೇಮ್ ನಗರದಲ್ಲೆಲ್ಲಾ ತಿರುಗಾಡು. ಜೆರುಸಲೇಮಿನಲ್ಲಿ ನಡೆಯುತ್ತಿರುವ ಅಸಹ್ಯವಾದ ದುಷ್ಕೃತ್ಯಗಳ ಬಗ್ಗೆ ನರಳಾಡುತ್ತಿರುವವರ ಮತ್ತು ನಿಟ್ಟುಸಿರುಬಿಡುತ್ತಿರುವವರ ಹಣೆಯ ಮೇಲ್ಗಡೆ ಒಂದು ಗುರುತನ್ನಿಡು” ಎಂದು ಹೇಳಿದನು.

5-6 ಬಳಿಕ ದೇವರು ಅಲ್ಲಿದ್ದ ಉಳಿದವರಿಗೆ, “ಮೊದಲನೆಯವನನ್ನು ಹಿಂಬಾಲಿಸಿರಿ. ಹಣೆಗಳ ಮೇಲೆ ಗುರುತಿಲ್ಲದ ಜನರನ್ನು ಕೊಂದು ನಾಶಪಡಿಸಿರಿ. ಯಾವ ಮರುಕವನ್ನಾಗಲಿ ಕನಿಕರವನ್ನಾಗಲಿ ತೋರದೆ ವೃದ್ಧರನ್ನೂ ಯೌವನಸ್ಥರನ್ನೂ ಯುವತಿಯರನ್ನೂ ಸ್ತ್ರೀಯರನ್ನೂ ಮಕ್ಕಳನ್ನೂ ಕೊಲ್ಲಿರಿ. ಆದರೆ ಹಣೆಯ ಮೇಲೆ ಗುರುತು ಹೊಂದಿರುವ ಯಾರನ್ನೂ ಮುಟ್ಟಬೇಡಿ. ಇದನ್ನು ನನ್ನ ಆಲಯದಿಂದಲೇ ಆರಂಭಿಸಿ” ಎಂದು ಹೇಳಿದನು. ಆದ್ದರಿಂದ ಅವರು ಆಲಯದ ಮುಂದೆ ಇದ್ದ ಹಿರಿಯರನ್ನು ಕೊಲ್ಲುವುದರ ಮೂಲಕ ಈ ಕೆಲಸವನ್ನು ಆರಂಭಿಸಿದರು.

ದೇವರು ಅವರಿಗೆ ಹೇಳಿದ್ದೇನೆಂದರೆ, “ಈ ಆಲಯವನ್ನು ಹೊಲೆ ಮಾಡಿರಿ. ಆಲಯದ ಅಂಗಳವನ್ನು ಹೆಣಗಳಿಂದ ತುಂಬಿಸಿರಿ. ಈಗ ಹೊರಡಿ.” ಅವರು ಹೊರಟುಹೋಗಿ ನಗರದ ಜನರನ್ನು ಕೊಂದರು.

ಅವರು ಜನರನ್ನು ಕೊಲ್ಲಲು ಹೊರಟಾಗ ನಾನೊಬ್ಬನೇ ಅಲ್ಲಿದ್ದೆನು. ನಾನು ಬಾಗಿ ನಮಸ್ಕರಿಸಿ, “ಅಯ್ಯೋ, ನನ್ನ ಒಡೆಯನಾದ ಯೆಹೋವನೇ, ನೀನು ಜೆರುಸಲೇಮಿನ ಮೇಲೆ ನಿನ್ನ ಕೋಪವನ್ನು ಪ್ರದರ್ಶಿಸುವಾಗ ಉಳಿದ ಇಸ್ರೇಲರನ್ನು ನೀನು ನಿರ್ಮೂಲ ಮಾಡುವೆ!” ಎಂದು ಹೇಳಿದೆನು.

ಅದಕ್ಕೆ ದೇವರು, “ಇಸ್ರೇಲ್ ಮತ್ತು ಯೆಹೂದ ಜನರ ದೋಷವು ಬಹಳ ಹೆಚ್ಚಾಗಿದೆ. ಈ ದೇಶದಲ್ಲಿ ಎಲ್ಲೆಲ್ಲಿಯೂ ಕೊಲೆಗಳು ನಡೆಯುತ್ತಿವೆ. ಈ ನಗರವು ಅಪರಾಧಗಳಿಂದ ತುಂಬಿಹೋಗಿದೆ. ಯಾಕೆಂದರೆ ಜನರು ಹೀಗೆಂದುಕೊಳ್ಳುತ್ತಿದ್ದಾರೆ, ‘ಯೆಹೋವನು ಈ ದೇಶವನ್ನು ಬಿಟ್ಟುಹೋಗಿದ್ದಾನೆ. ನಾವು ಮಾಡುತ್ತಿರುವಂಥದ್ದನ್ನು ಅವನು ನೋಡುವುದಿಲ್ಲ.’ 10 ಅವರಿಗೆ ನಾನು ಕನಿಕರ ತೋರಿಸುವುದಿಲ್ಲ. ಅವರಿಗಾಗಿ ನಾನು ದುಃಖಿಸುವುದಿಲ್ಲ. ಅವರು ತಾವೇ ಇದನ್ನು ತಮ್ಮ ಮೇಲೆ ಬರಮಾಡಿಕೊಂಡರು. ಅವರು ಹೊಂದಲು ಯೋಗ್ಯವಾದ ಶಿಕ್ಷೆಯನ್ನೇ ನಾನು ಕೊಡುತ್ತಿರುವುದು.”

11 ಆಗ ನಾರುಬಟ್ಟೆಯನ್ನು ಧರಿಸಿಕೊಂಡು ಲೇಖಕನ ಸಾಮಾಗ್ರಿಯ ಚಿಕ್ಕ ಚೀಲವನ್ನು ಸೊಂಟಕ್ಕೆ ಕಟ್ಟಿಕೊಂಡಿದ್ದವನು, “ನೀನು ಆಜ್ಞಾಪಿಸಿದ ಮೇರೆಗೆ ನಾನು ಮಾಡಿದೆ” ಅಂದನು.

ಯೆಹೋವನ ಮಹಿಮೆ ದೇವಾಲಯವನ್ನು ಬಿಟ್ಟಿದ್ದು

10 ಕೆರೂಬಿಯರ ತಲೆಗಳ ಮೇಲಿದ್ದ ಗುಮಟದ ಕಡೆಗೆ ನೋಡಿದೆನು. ಆ ಗುಮಟದ ಮೇಲೆ ಇಂದ್ರನೀಲಮಣಿಯಿಂದ ಮಾಡಿದ ಸಿಂಹಾಸನದಂತೆ ಕಾಣುತ್ತಿದ್ದ ಏನೋ ಇತ್ತು. ಆಗ ಸಿಂಹಾಸನದಲ್ಲಿ ಕೂತಿದ್ದಾತನು ನಾರುಮಡಿ ಧರಿಸಿದ್ದವನಿಗೆ, “ಕೆರೂಬಿದೂತರ ಕೆಳಗಿರುವ ಚಕ್ರಗಳ ನಡುವೆ ಹೋಗು. ಕೆರೂಬಿಗಳ ನಡುವೆ ಇರುವ ಉರಿಯುವ ಕೆಂಡಗಳನ್ನು ನಿನ್ನ ಅಂಗೈಗಳಲ್ಲಿ ತುಂಬಿಕೊಂಡು ಜೆರುಸಲೇಮ್ ನಗರದ ಮೇಲೆ ಹರಡು” ಎಂದು ಹೇಳಿದನು.

ನಾನು ನೋಡುತ್ತಿರಲು ಆ ಮನುಷ್ಯನು ಒಳಗೆ ಹೋದನು. ಆ ಮನುಷ್ಯನು ಚಕ್ರಗಳ ನಡುವೆ ಒಳಗೆ ಹೋದಾಗ ಕೆರೂಬಿದೂತರು ಆಲಯದ ದಕ್ಷಿಣಕ್ಕೆ ಇರುವ ಸ್ಥಳದಲ್ಲಿ ನಿಂತಿದ್ದರು. ಒಳಗಿನ ಅಂಗಳವು ಮೋಡದಿಂದ ತುಂಬಿತ್ತು. ಯೆಹೋವನ ಮಹಿಮೆಯು ಕೆರೂಬಿದೂತರ ಮೇಲಿನಿಂದ ಹೊರಟು ಆಲಯದ ಹೊಸ್ತಿಲಿಗೆ ಬಂದಿತು. ಆಗ ಮೋಡವು ಆಲಯದಲ್ಲಿ ತುಂಬಿಕೊಂಡಿತು. ಯೆಹೋವನ ಮಹಿಮೆಯ ಪ್ರಕಾಶವು ಇಡೀ ಅಂಗಳವನ್ನು ತುಂಬಿಕೊಂಡಿತು. ಕೆರೂಬಿದೂತರ ರೆಕ್ಕೆಗಳ ಬಡಿತದ ಶಬ್ದವು ಹೊರಗಿನ ಪ್ರಾಕಾರದ ತನಕ ಕೇಳುತ್ತಿತ್ತು. ಅದು ತುಂಬಾ ಗಟ್ಟಿಯಾದ ಶಬ್ದವಾಗಿತ್ತು. ಸರ್ವಶಕ್ತನಾದ ದೇವರು ಮಾತನಾಡುವಾಗ ಆಗುವ ಗುಡುಗಿನ ಶಬ್ದದಂತಿತ್ತು.

ನಾರುಮಡಿ ಧರಿಸಿಕೊಂಡಿದ್ದವನಿಗೆ ದೇವರು, “ಕೆರೂಬಿದೂತರ ಮಧ್ಯದೊಳಗಿಂದ, ಚಕ್ರಗಳ ಮಧ್ಯೆ ಪ್ರವೇಶಿಸಿ ಅಲ್ಲಿಂದ ಉರಿಯುವ ಕೆಂಡಗಳನ್ನು ತೆಗೆದುಕೊ” ಎಂದು ಆಜ್ಞಾಪಿಸಿದಾಗ, ಆ ಮನುಷ್ಯನು ಅಲ್ಲಿಗೆ ಹೋಗಿ ಚಕ್ರಗಳ ಸಮೀಪದಲ್ಲಿ ನಿಂತುಕೊಂಡನು. ಕೆರೂಬಿದೂತರಲ್ಲೊಬ್ಬನು ಅವರ ಮಧ್ಯೆಯಿದ್ದ ಉರಿಯುವ ಕೆಂಡದಲ್ಲಿ ಸ್ವಲ್ಪವನ್ನು ಆ ಮನುಷ್ಯನ ಕೈಗೆ ಸುರಿದನು. ಆ ಮನುಷ್ಯನು ಅಲ್ಲಿಂದ ಹೊರಟನು. ಕೆರೂಬಿದೂತರ ರೆಕ್ಕೆಯ ಕೆಳಗೆ ಮನುಷ್ಯರ ಕೈಗಳಂತೆ ಕಾಣುತ್ತಿದ್ದ ಕೈಗಳಿದ್ದವು.

ಆಗ ನಾನು ಅಲ್ಲಿ ನಾಲ್ಕು ಚಕ್ರಗಳಿರುವದನ್ನು ಕಂಡೆನು. ಪ್ರತಿಯೊಬ್ಬ ಕೆರೂಬಿದೂತನ ಬಳಿ ಒಂದು ಚಕ್ರವಿತ್ತು. ಆ ಚಕ್ರಗಳು ಹೊಳೆಯುವ ಹಳದಿ ರತ್ನದಂತೆ ಕಂಡವು. 10 ಅಲ್ಲಿದ್ದ ನಾಲ್ಕು ಚಕ್ರಗಳೂ ಒಂದೇ ಪ್ರಕಾರವಾಗಿದ್ದವು. ಅವು ಚಕ್ರದೊಳಗೆ ಚಕ್ರಗಳಿದ್ದಂತೆ ತೋರುತ್ತಿದ್ದವು. 11 ಅವು ಚಲಿಸುವಾಗ ನಾಲ್ಕು ದಿಕ್ಕುಗಳಲ್ಲಿ ಯಾವ ದಿಕ್ಕಿಗಾದರೂ ಅತ್ತಿತ್ತ ತಿರುಗದೆ ಚಲಿಸುತ್ತಿದ್ದವು. 12 ಅವರ ಶರೀರದ ಮೇಲೆಲ್ಲಾ ಕಣ್ಣುಗಳಿದ್ದವು. ಅವರ ಬೆನ್ನಿನ ಮೇಲೆ, ಕೈಗಳ ಮೇಲೆ, ರೆಕ್ಕೆಗಳ ಮೇಲೆ, ಅವರ ಚಕ್ರಗಳ ಮೇಲೆ ಕಣ್ಣುಗಳಿದ್ದವು. ಹೌದು, ಅವರ ನಾಲ್ಕು ಚಕ್ರಗಳ ಮೇಲೂ ಕಣ್ಣುಗಳಿದ್ದವು. 13 ಈ ಚಕ್ರಗಳಿಗೆ “ಚರಕ ಚಕ್ರ” ಎಂಬುದಾಗಿ ಕರೆಯುತ್ತಾರೆಂದು ನನಗೆ ಕೇಳಿಸಿತು.

14 ಪ್ರತೀ ಕೆರೂಬಿದೂತನಿಗೆ ನಾಲ್ಕು ಮುಖಗಳಿದ್ದವು. ಮೊದಲನೆಯ ಮುಖವು ಕೆರೂಬಿಯ ಮುಖ, ಎರಡನೆಯದು ಮನುಷ್ಯನ ಮುಖ, ಮೂರನೆಯ ಸಿಂಹದ ಮುಖ ಮತ್ತು ನಾಲ್ಕನೆಯ ಗರುಡನ ಮುಖ. 15 ಈ ಜೀವಿಗಳು ಮೊದಲು ನಾನು ಕೆಬಾರ್ ನದಿಯ ಬಳಿ ಕಂಡ ದರ್ಶನದಲ್ಲಿದ್ದ ಕೆರೂಬಿಯರೇ ಆಗಿರಬೇಕು ಎಂದು ಆಗ ನನಗೆ ಮನದಟ್ಟಾಯಿತು. ಬಳಿಕ ಕೆರೂಬಿಗಳು ಮೇಲಕ್ಕೆ ಏರಿದವು. 16 ಅವುಗಳೊಂದಿಗೆ ಚಕ್ರಗಳು ಎತ್ತಲ್ಪಟ್ಟವು. ಕೆರೂಬಿದೂತರು ರೆಕ್ಕೆಗಳನ್ನು ಚಾಚಿ ಗಾಳಿಯಲ್ಲಿ ಹಾರಿದಾಗ ಅವುಗಳ ಪಕ್ಕದಲ್ಲಿದ್ದ ಚಕ್ರಗಳು ತಮ್ಮ ಸ್ಥಳವನ್ನು ಬದಲಾಯಿಸಲಿಲ್ಲ. 17 ಕೆರೂಬಿದೂತರು ಗಾಳಿಯಲ್ಲಿ ಹಾರಾಡಿದಾಗ ಚಕ್ರಗಳೂ ಅವರೊಂದಿಗೆ ಹೋದವು. ಅವು ನಿಂತಾಗ ಚಕ್ರಗಳೂ ನಿಂತುಬಿಡುತ್ತಿದ್ದವು. ಯಾಕೆಂದರೆ ಜೀವಿಗಳನ್ನು ಹತೋಟಿಯಲ್ಲಿಡುವ ಆತ್ಮವು ಚಕ್ರಗಳಲ್ಲಿತ್ತು.

18 ಆಗ ಆಲಯದ ಹೊಸ್ತಿಲಿನ ಮೇಲಿನಿಂದ ಯೆಹೋವನ ಮಹಿಮೆಯು ಎದ್ದು ಕೆರೂಬಿದೂತರು ನಿಂತಿದ್ದ ಸ್ಥಳದ ಮೇಲೆ ನಿಂತುಕೊಂಡಿತು. 19 ಕೆರೂಬಿದೂತರು ರೆಕ್ಕೆಗಳನ್ನು ಚಾಚಿ ಹಾರಿದವು. ಅವು ಆಲಯವನ್ನು ಬಿಟ್ಟುಹೋಗುವದನ್ನು ನೋಡಿದೆನು. ಚಕ್ರಗಳು ಅವುಗಳೊಂದಿಗೆ ಹೋದವು. ಅವು ಯೆಹೋವನಾಲಯದ ಪೂರ್ವದ ಬಾಗಿಲ ಬಳಿ ನಿಂತವು. ಇಸ್ರೇಲಿನ ದೇವರ ಮಹಿಮೆಯು ಅವುಗಳ ಮೇಲೆ ಇತ್ತು.

20 ಆಗ ಕೆಬಾರ್ ನದಿಯ ಬಳಿ ನನಗಾದ ಇಸ್ರೇಲಿನ ದೇವರ ಮಹಿಮೆಯ ದರ್ಶನದಲ್ಲಿ ನಾನು ಕಂಡ ಜೀವಿಗಳು ಕೆರೂಬಿದೂತರೇ ಎಂದು ತಿಳಿಯಿತು. 21 ಪ್ರತಿಯೊಂದಕ್ಕೂ ನಾಲ್ಕು ಮುಖಗಳೂ, ನಾಲ್ಕು ರೆಕ್ಕೆಗಳೂ ಮತ್ತು ಅವುಗಳ ರೆಕ್ಕೆಗಳ ಕೆಳಗೆ ಮನುಷ್ಯನ ಕೈಗಳಂತಿದ್ದ ಕೈಗಳೂ ಇದ್ದವು. 22 ನಾನು ಕೆಬಾರ್ ಕಾಲುವೆಯ ಪಕ್ಕದಲ್ಲಿ ಕಂಡ ಜೀವಿಗಳ ಮುಖಗಳಂತೆಯೇ ಕೆರೂಬಿದೂತರ ಮುಖಗಳಿದ್ದವು. ಪ್ರತಿಯೊಂದು ನೇರವಾಗಿ ಮುಂದೆ ಸಾಗಿದವು.

ಇಬ್ರಿಯರಿಗೆ 13

ದೇವರಿಗೆ ಮೆಚ್ಚಿಕೆಯಾದ ಆರಾಧನೆ

13 ನೀವು ಕ್ರಿಸ್ತನಲ್ಲಿ ಸಹೋದರ ಸಹೋದರಿಯರಾಗಿರುವುದರಿಂದ ಒಬ್ಬರನ್ನೊಬ್ಬರು ಪ್ರೀತಿಸಿರಿ. ಅತಿಥಿಸತ್ಕಾರ ಮಾಡಿರಿ. ಕೆಲವರು ತಿಳಿಯದೆ ದೇವದೂತರನ್ನೂ ಸತ್ಕರಿಸಿದ್ದಾರೆ. ಸೆರೆಮನೆಯಲ್ಲಿರುವ ಜನರನ್ನು ಮರೆಯದಿರಿ. ನೀವೂ ಅವರ ಜೊತೆಯಲ್ಲಿ ಸೆರೆಮನೆಯಲ್ಲಿದ್ದೀರೋ ಎಂಬಂತೆ ನೆನಪುಮಾಡಿಕೊಳ್ಳಿ ಮತ್ತು ಸಂಕಟಕ್ಕೊಳಗಾಗಿರುವ ಜನರನ್ನು ಮರೆಯದಿರಿ. ನೀವೂ ಅವರ ಜೊತೆಯಲ್ಲಿ ಸಂಕಟಪಡುತ್ತಿರುವಿರೋ ಎಂಬಂತೆ ನೆನಪು ಮಾಡಿಕೊಳ್ಳಿ.

ಮದುವೆಯನ್ನು ಜನರೆಲ್ಲರೂ ಗೌರವಿಸಬೇಕು. ಗಂಡ ಹೆಂಡತಿಯರ ಸಂಬಂಧ ಪರಿಶುದ್ಧವಾಗಿರಬೇಕು. ಲೈಂಗಿಕ ಪಾಪಗಳನ್ನು ಮಾಡುವವರು ಮತ್ತು ವ್ಯಭಿಚಾರವನ್ನು ಮಾಡುವವರು ದೇವರ ತೀರ್ಪಿಗೆ ಒಳಗಾಗಿದ್ದಾರೆ. ಹಣದ ಮೇಲೆ ನಿಮಗಿರುವ ವ್ಯಾಮೋಹವನ್ನು ದೂರತಳ್ಳಿರಿ. ನಿಮ್ಮಲ್ಲಿರುವ ವಸ್ತುಗಳಲ್ಲಿ ತೃಪ್ತಿಯಿಂದಿರಿ. ದೇವರು ಹೀಗೆ ಹೇಳಿದ್ದಾನೆ:

“ನಾನು ನಿಮ್ಮನ್ನು ಎಂದೆಂದಿಗೂ ಕೈಬಿಡುವುದಿಲ್ಲ.
ನಾನು ನಿಮ್ಮನ್ನು ಎಂದೆಂದಿಗೂ ತೊರೆದುಬಿಡುವುದಿಲ್ಲ.”(A)

ಆದ್ದರಿಂದ ನಾವು ಖಚಿತವಾಗಿ ಹೀಗೆ ಹೇಳಬಹುದು:

“ಪ್ರಭುವೇ ನನ್ನ ಸಹಾಯಕನು;
    ನಾನು ಹೆದರುವುದಿಲ್ಲ.
ಜನರು ನನಗೆ ಏನೂ ಮಾಡಲಾರರು.”(B)

ನಿಮ್ಮ ಸಭಾನಾಯಕರನ್ನು ನೆನಪು ಮಾಡಿಕೊಳ್ಳಿ. ಅವರು ನಿಮಗೆ ದೇವರ ಸಂದೇಶವನ್ನು ಬೋಧಿಸಿದರು. ಅವರು ಹೇಗೆ ಜೀವಿಸಿದ್ದರು ಮತ್ತು ಹೇಗೆ ಸತ್ತರು ಎಂಬುದನ್ನು ನೆನಪಿಸಿಕೊಳ್ಳಿ. ಅವರ ನಂಬಿಕೆಯನ್ನು ಅನುಸರಿಸಿರಿ. ಯೇಸು ಕ್ರಿಸ್ತನು ನಿನ್ನೆ ಇದ್ದಂತೆ ಇಂದಿಗೂ ಇದ್ದಾನೆ. ಸದಾಕಾಲ ಹಾಗೆಯೇ ಇರುವನು. ನಿಮ್ಮನ್ನು ತಪ್ಪು ಮಾರ್ಗಕ್ಕೆ ಎಳೆಯುವಂತಹ ಅನ್ಯೋಪದೇಶಗಳ ಕಡೆಗೆ ಗಮನಕೊಡಬೇಡಿ. ನಿಮ್ಮ ಹೃದಯಗಳು ದೇವರ ಕೃಪೆಯಿಂದ ಬಲವಾಗಬೇಕೇ ಹೊರತು ಆಹಾರದ ನಿಯಮಗಳ ಪಾಲನೆಯಿಂದಲ್ಲ. ಆ ನಿಯಮಗಳ ಪಾಲನೆಯು ಜನರಿಗೆ ಸಹಾಯಕವಾಗುವುದಿಲ್ಲ.

10 ನಮಗೊಂದು ಯಜ್ಞವಿದೆ. ಪವಿತ್ರ ಗುಡಾರದಲ್ಲಿ ಸೇವೆ ಸಲ್ಲಿಸುತ್ತಿರುವ ಯಾಜಕರು ನಮ್ಮ ಯಜ್ಞದಿಂದ ತಿನ್ನಲಾಗುವುದಿಲ್ಲ. 11 ಪ್ರಧಾನಯಾಜಕನು ಪಶುಗಳ ರಕ್ತವನ್ನು ಮಹಾ ಪವಿತ್ರಸ್ಥಳದೊಳಕ್ಕೆ ತೆಗೆದುಕೊಂಡು ಹೋಗುತ್ತಾನೆ. ಅವನು ಪಾಪಗಳಿಗಾಗಿ ಆ ರಕ್ತವನ್ನು ಅರ್ಪಿಸುತ್ತಾನೆ. ಆದರೆ ಆ ಪಶುಗಳ ದೇಹಗಳು ಪಾಳೆಯದ ಆಚೆ ಸುಡಲ್ಪಡುತ್ತವೆ. 12 ಆದ್ದರಿಂದ ಯೇಸುವು ನಗರದ ಹೊರಗಡೆ ಸಂಕಟವನ್ನು ಅನುಭವಿಸಿದನು. ಆತನು ತನ್ನ ಜನರನ್ನು ಪವಿತ್ರರನ್ನಾಗಿಸಲು, ತನ್ನ ಸ್ವಂತ ರಕ್ತವನ್ನೇ ಅರ್ಪಿಸಿ ಸತ್ತನು. 13 ನಾವು ಪಾಳೆಯದ ಹೊರಗಡೆಯಲ್ಲಿರುವ ಆತನ ಬಳಿಗೆ ಹೋಗಬೇಕು. ಆತನಿಗಾದ ಅಪಮಾನವನ್ನು ನಾವೂ ಸ್ವೀಕರಿಸಿಕೊಳ್ಳಬೇಕು. 14 ಈ ಲೋಕದಲ್ಲಿ ಶಾಶ್ವತವಾಗಿರುವ ನಗರವೇ ಇಲ್ಲ. ಆದರೆ ನಾವು ಮುಂದೆ ಬರುವ ನಗರಕ್ಕಾಗಿ ಕಾಯುತ್ತಿದ್ದೇವೆ. 15 ಆದ್ದರಿಂದ ಆತನ ಮೂಲಕ ನಾವು ದೇವರಿಗೆ ಯಜ್ಞಗಳನ್ನು ಅರ್ಪಿಸುವುದನ್ನು ನಿಲ್ಲಿಸಬಾರದು. ಆತನೇ ಪ್ರಭುವೆಂದು ನಮ್ಮ ಬಾಯಿಂದ ಅರಿಕೆ ಮಾಡುವುದೇ ನಾವು ಅರ್ಪಿಸುವ ಯಜ್ಞವಾಗಿದೆ. 16 ಇದಲ್ಲದೆ ಪರೋಪಕಾರವನ್ನೂ ದಾನಧರ್ಮವನ್ನೂ ಮರೆಯದಿರಿ. ಇವೇ ದೇವರಿಗೆ ಸಮರ್ಪಕವಾದ ಯಜ್ಞಗಳು.

17 ನಿಮ್ಮ ಸಭಾನಾಯಕರಿಗೆ ವಿಧೇಯರಾಗಿರಿ ಮತ್ತು ಅವರ ಅಧಿಕಾರದ ಅಧೀನದಲ್ಲಿರಿ. ಅವರೇ ನಿಮಗೆ ಜವಾಬ್ದಾರರು. ಅವರು ನಿಮ್ಮ ಆತ್ಮಗಳನ್ನು ಕಾಯುವವರಾಗಿದ್ದಾರೆ. ಅವರು ಈ ಕಾರ್ಯವನ್ನು ವ್ಯಸನದಿಂದ ಮಾಡದೆ ಸಂತೋಷದಿಂದ ಮಾಡಲು ಸಾಧ್ಯವಾಗುವಂತೆ ಅವರಿಗೆ ವಿಧೇಯರಾಗಿರಿ. ಅವರ ಕಾರ್ಯವನ್ನು ಕಷ್ಟಕರವನ್ನಾಗಿ ಮಾಡುವುದರಿಂದ ನಿಮಗೇನೂ ಪ್ರಯೋಜನವಿಲ್ಲ.

18 ನಮಗೋಸ್ಕರ ಪ್ರಾರ್ಥಿಸುವುದನ್ನು ಮುಂದುವರಿಸಿರಿ. ನಾವು ಯಾವಾಗಲೂ ಉತ್ತಮ ಕಾರ್ಯಗಳನ್ನು ಮಾಡಲು ಪ್ರಯತ್ನಿಸುವುದರಿಂದ, ನಮ್ಮ ಹೃದಯಗಳು ಶುದ್ಧವಾಗಿವೆ ಎಂಬ ನಂಬಿಕೆ ನಮಗಿದೆ. 19 ದೇವರು ನನ್ನನ್ನು ನಿಮ್ಮ ಬಳಿಗೆ ಬೇಗನೆ ಕಳುಹಿಸುವಂತೆ ನೀವು ಆತನಲ್ಲಿ ಪ್ರಾರ್ಥನೆಯನ್ನು ಮಾಡಬೇಕೆಂದು ನಾನು ಬೇಡಿಕೊಳ್ಳುತ್ತೇನೆ. ನನಗೆ ಅತ್ಯಗತ್ಯವಾದದ್ದು ಇದೇ.

20-21 ಶಾಂತಿಸ್ವರೂಪನಾದ ದೇವರು ನಿಮಗೆ ಬೇಕಾದ ತನ್ನ ವರದಾನಗಳನ್ನು ದಯಪಾಲಿಸಲಿ ಎಂದು ನಾನು ಆತನಲ್ಲಿ ಪ್ರಾರ್ಥಿಸುತ್ತೇನೆ. ಏಕೆಂದರೆ ಆಗ ನೀವು ಆತನ ಇಷ್ಟಕ್ಕನುಸಾರವಾದವುಗಳನ್ನೆಲ್ಲಾ ಮಾಡಲು ಸಾಧ್ಯವಾಗುವುದು. ತನ್ನ ರಕ್ತವನ್ನು ಸುರಿಸಿ ಸಭೆಯೆಂಬ ಹಿಂಡಿಗೆ ಮಹಾಕುರುಬನಾಗಿರುವ ನಮ್ಮ ಪ್ರಭುವಾದ ಯೇಸುವನ್ನು ಸತ್ತವರೊಳಗಿಂದ ಮೇಲಕ್ಕೆ ಎಬ್ಬಿಸಿದವನು ದೇವರೇ. ಆತನ ರಕ್ತವು ಶಾಶ್ವತವಾದ ಹೊಸ ಒಡಂಬಡಿಕೆಯನ್ನಾರಂಭಿಸಿತು. ದೇವರು ತನಗೆ ಸಂತೋಷವನ್ನು ಉಂಟುಮಾಡುವ ಕಾರ್ಯಗಳನ್ನು ಯೇಸು ಕ್ರಿಸ್ತನ ಮೂಲಕ ನಮ್ಮಲ್ಲಿ ನಡೆಸಲಿ. ಯೇಸುವಿಗೆ ಎಂದೆಂದಿಗೂ ಮಹಿಮೆಯಾಗಲಿ. ಆಮೆನ್.

22 ನನ್ನ ಸಹೋದರ ಸಹೋದರಿಯರೇ, ನಾನು ಹೇಳಿದ ಈ ಸಂಗತಿಗಳನ್ನು ನೀವು ತಾಳ್ಮೆಯಿಂದ ಆಲಿಸಬೇಕೆಂದು ನಿಮ್ಮಲ್ಲಿ ಬೇಡಿಕೊಳ್ಳುತ್ತೇನೆ. ನಿಮ್ಮನ್ನು ಬಲಪಡಿಸುವುದಕ್ಕಾಗಿ ಈ ಪತ್ರವನ್ನು ಬರೆದಿರುವೆನು. ಈ ಪತ್ರವು ಬಹುದೀರ್ಘವಾದದ್ದೇನೂ ಅಲ್ಲ. 23 ನಮ್ಮ ಸಹೋದರನಾದ ತಿಮೊಥೆಯನಿಗೆ ಸೆರೆಮನೆಯಿಂದ ಬಿಡುಗಡೆ ಆಯಿತೆಂಬುದು ನಿಮಗೆ ತಿಳಿದಿರಲಿ. ಅವನು ನನ್ನ ಬಳಿಗೆ ಬೇಗನೆ ಬಂದರೆ, ನಾವಿಬ್ಬರೂ ನಿಮ್ಮನ್ನು ನೋಡಲು ಬರುತ್ತೇವೆ.

24 ನಿಮ್ಮ ಸಭಾನಾಯಕರಿಗೆಲ್ಲ ಮತ್ತು ದೇವಜನರಿಗೆಲ್ಲ ನಮ್ಮ ವಂದನೆಗಳನ್ನು ತಿಳಿಸಿ. ಇಟಲಿಯ ದೇವಜನರೆಲ್ಲರೂ ನಿಮಗೆ ವಂದನೆಗಳನ್ನು ಹೇಳುತ್ತಾರೆ.

25 ದೇವರ ಕೃಪೆಯು ನಿಮ್ಮೆಲ್ಲರೊಂದಿಗಿರಲಿ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International