Old/New Testament
ಯೆಹೆಜ್ಕೇಲನನ್ನು ಪ್ರವಾದಿಯನ್ನಾಗಿ ನೇಮಿಸಿದ್ದು
1 1-3 ನಾನು ಯಾಜಕನಾಗಿದ್ದೇನೆ. ನಾನು ಬೂಜಿಯ ಮಗನಾದ ಯೆಹೆಜ್ಕೇಲ. ನಾನು ಬಾಬಿಲೋನಿನಲ್ಲಿ ಯೆಹೂದ್ಯರೊಂದಿಗೆ ಸೆರೆಯಲ್ಲಿದ್ದೆ. ನಾನು ಕೆಬಾರ್ ಕಾಲುವೆಯ ಬಳಿಯಲ್ಲಿದ್ದಾಗ ಆಕಾಶ ತೆರೆದಿರುವದನ್ನು ಕಂಡೆನು. ನನಗೆ ದೇವದರ್ಶನವಾಯಿತು. ಇದು ಮೂವತ್ತನೆಯ ವರ್ಷದ ನಾಲ್ಕನೆಯ ತಿಂಗಳಿನ ಐದನೆ ದಿವಸದಲ್ಲಾಯಿತು. ಒಡೆಯನಾದ ಯೆಹೋಯಾಖೀನನು ಸೆರೆಯಲ್ಲಿದ್ದ ಐದನೆಯ ವರ್ಷದ ನಾಲ್ಕನೆ ತಿಂಗಳಿನ ಐದನೆಯ ದಿನದಲ್ಲಿ ಯೆಹೋವನ ವಾಕ್ಯವು ಯೆಹೆಜ್ಕೇಲನಿಗೆ ಬಂದಿತು. ಆ ಸ್ಥಳದಲ್ಲಿ ಯೆಹೋವನ ಆತ್ಮನಿಂದ ಅವನು ಪರವಶನಾದನು.
ಯೆಹೋವನ ರಥ—ದೇವರ ಸಿಂಹಾಸನ
4 ಉತ್ತರ ದಿಕ್ಕಿನಿಂದ ಒಂದು ದೊಡ್ಡ ಬಿರುಗಾಳಿ ಬರುವದನ್ನು ಯೆಹೆಜ್ಕೇಲನಾದ ನಾನು ನೋಡಿದೆನು. ಬಿರುಗಾಳಿಯೊಡನೆ ಕೂಡಿದ ಒಂದು ದೊಡ್ಡ ಮೋಡವು ಅಲ್ಲಿತ್ತು. ಅದರಿಂದ ಬೆಂಕಿಯು ಪ್ರಜ್ವಲಿಸುತ್ತಿತ್ತು. ಮೋಡದ ಸುತ್ತಲೂ ಬೆಳಕಿತ್ತು. ಬೆಂಕಿಯ ಮಧ್ಯದಲ್ಲಿ ಕಾದಲೋಹದಂತೆ ಹೊಳೆಯುತ್ತಿದ್ದ ಏನನ್ನೊ ಕಂಡೆನು. 5 ಆ ಮೋಡದೊಳಗೆ ಮನುಷ್ಯರನ್ನು ಹೋಲುವ ನಾಲ್ಕು ಜೀವಿಗಳಿದ್ದವು. 6 ಆ ಜೀವಿಗಳಲ್ಲಿ ಪ್ರತಿಯೊಂದಕ್ಕೂ ನಾಲ್ಕು ಮುಖಗಳೂ ನಾಲ್ಕು ರೆಕ್ಕೆಗಳೂ ಇದ್ದವು. 7 ಅವುಗಳ ಕಾಲುಗಳು ನೆಟ್ಟಗಿದ್ದವು. ಅವುಗಳ ಪಾದಗಳು ಕರುವಿನ ಗೊರಸಿನಂತಿದ್ದವು. ಅವು ಬೆಳಗಿದ ತಾಮ್ರದಂತೆ ಹೊಳೆಯುತ್ತಿದ್ದವು. 8 ಒಂದೊಂದು ಜೀವಿಯ ನಾಲ್ಕು ಪಾರ್ಶ್ವಗಳಲ್ಲಿನ ರೆಕ್ಕೆಗಳ ಕೆಳಗೆ ಮನುಷ್ಯನ ತೋಳುಗಳೂ ಕೈಗಳೂ ಇದ್ದವು. ನಾಲ್ಕು ಜೀವಿಗಳಿಗೆ ಮುಖಗಳೂ ರೆಕ್ಕೆಗಳೂ ಈ ರೀತಿಯಲ್ಲಿದ್ದವು; 9 ಆ ರೆಕ್ಕೆಗಳು ಒಂದಕ್ಕೊಂದು ತಾಕಿದ್ದವು. ಆ ಜೀವಿಗಳು ಚಲಿಸುವಾಗ ಅತ್ತಿತ್ತ ತಿರುಗುತ್ತಿರಲಿಲ್ಲ. ತಮ್ಮ ದೃಷ್ಟಿಯಿದ್ದ ಕಡಗೆ ನೆಟ್ಟಗೆ ಹೋದವು.
10 ಪ್ರತೀ ಜೀವಿಗೆ ನಾಲ್ಕು ಮುಖಗಳಿದ್ದವು. ಮುಂಭಾಗದಲ್ಲಿ ಮನುಷ್ಯನ ಮುಖ, ಬಲ ಬದಿಯಲ್ಲಿ ಸಿಂಹದ ಮುಖ, ಎಡ ಬದಿಯಲ್ಲಿ ಹೋರಿಯ ಮುಖ, ಹಿಂಬದಿಯಲ್ಲಿ ಗರುಡನ ಮುಖ. 11 ಒಂದೊಂದು ಜೀವಿಯ ಎರಡು ರೆಕ್ಕೆಗಳು ಮತ್ತೊಂದು ಜೀವಿಯ ರೆಕ್ಕೆಗಳನ್ನು ತಾಗುತ್ತಿದ್ದವು ಮತ್ತು ಉಳಿದೆರಡು ರೆಕ್ಕೆಗಳು ಅದರ ದೇಹವನ್ನು ಆವರಿಸಿಕೊಂಡಿದ್ದವು. 12 ಆ ಜೀವಿಗಳು ಯಾವ ದಿಕ್ಕಿಗೆ ನೋಡುತ್ತಿದ್ದವೋ ಅದೇ ಕಡೆಗೆ ಹೋಗುತ್ತಿದ್ದವು. ದೇವರಾತ್ಮನು ಅವುಗಳನ್ನು ಯಾವ ಕಡೆಗೆ ನಡಿಸುತ್ತಾನೋ ಆ ದಿಕ್ಕಿಗೆ ಅವು ಹೋದವು. ಆದರೆ ಹೋಗುತ್ತಿರುವಾಗ ಅವುಗಳು ತಿರುಗಲಿಲ್ಲ. 13 ಆ ಜೀವಿಗಳ ಮಧ್ಯದಲ್ಲಿ ಉರಿಯುವ ಕೆಂಡಗಳಂತೆ ಕಾಣುತ್ತಿದ್ದ ಏನೋ ಇತ್ತು.
ಈ ಬೆಂಕಿಯು ಸಣ್ಣ ದೀವಟಿಗೆಗಳಂತೆ ಜೀವಿಗಳ ಮಧ್ಯೆ ಸಂಚರಿಸುತ್ತಿದ್ದವು. ಆ ಬೆಂಕಿಯು ಪ್ರಕಾಶಮಾನವಾಗಿದ್ದು ಅದರೊಳಗಿಂದ ಮಿಂಚುಗಳು ಹೊರಡುತ್ತಿದ್ದವು. 14 ಆ ಮಿಂಚಿನ ವೇಗದಂತೆ ಜೀವಿಗಳು ಅತ್ತಿತ್ತ ಓಡಾಡುತ್ತಿದ್ದವು.
15-16 ಆ ಜೀವಿಗಳನ್ನು ನಾನು ನೋಡುತ್ತಿರುವಾಗ, ನೆಲಕ್ಕೆ ತಾಕಿದ್ದ ನಾಲ್ಕು ಚಕ್ರಗಳನ್ನು ಕಂಡೆನು. ಒಂದೊಂದು ಜೀವಿಯ ಪಕ್ಕದಲ್ಲಿ ಒಂದೊಂದು ಚಕ್ರಗಳಿದ್ದವು. ಆ ಎಲ್ಲಾ ಚಕ್ರಗಳು ಒಂದೇ ಪ್ರಕಾರವಾಗಿ ಕಾಣುತ್ತಿದ್ದವು. ಅವುಗಳು ಹೊಳೆಯುವ ಹಳದಿ ಬಣ್ಣದ ರತ್ನಗಳಿಂದ ಮಾಡಲ್ಪಟ್ಟಂತೆ ತೋರುತ್ತಿದ್ದವು. ಆ ಚಕ್ರದೊಳಗೆ ಇನ್ನೊಂದು ಚಕ್ರವಿದ್ದಂತೆ ತೋರುತ್ತಿತ್ತು. 17 ಆ ಚಕ್ರಗಳು ಹೊರಳುವಾಗ ನಾಲ್ಕು ದಿಕ್ಕುಗಳಲ್ಲಿ ಯಾವ ದಿಕ್ಕಿಗೆ ಬೇಕಾದರೂ ತಿರುಗಬಲ್ಲವುಗಳಾಗಿದ್ದವು. ಆದರೆ ಜೀವಿಗಳು ಚಲಿಸುತ್ತಿರುವಾಗ ಅವು ತಿರುಗುತ್ತಿರಲಿಲ್ಲ.
18 ಚಕ್ರಗಳ ಅಂಚು ಎತ್ತರವಾಗಿದ್ದು ಭಯಾನಕವಾಗಿ ಕಾಣುತ್ತಿದ್ದವು. ಆ ನಾಲ್ಕು ಚಕ್ರಗಳ ಅಂಚುಗಳ ತುಂಬ ಕಣ್ಣುಗಳಿದ್ದವು.
19 ಚಕ್ರಗಳು ಜೀವಿಗಳೊಂದಿಗೆ ಯಾವಾಗಲೂ ಚಲಿಸುತ್ತಿದ್ದವು. ಜೀವಿಗಳು ಗಾಳಿಯಲ್ಲಿ ಹಾರಾಡುತ್ತಿದ್ದರೆ, ಚಕ್ರಗಳು ಸಹ ಅವುಗಳ ಜೊತೆಯಲ್ಲಿಯೇ ಚಲಿಸುತ್ತಿದ್ದವು. 20 ದೇವರಾತ್ಮನು ನಡೆಸಿದ ಕಡೆಗೆ ಜೀವಿಗಳು ಹೋದವು. ಚಕ್ರಗಳು ಸಹ ಅವುಗಳೊಂದಿಗೆ ಚಲಿಸಿದವು. ಯಾಕೆಂದರೆ ಜೀವಿಗಳನ್ನು ನಿಯಂತ್ರಿಸುವ ಆತ್ಮವು ಚಕ್ರಗಳಲ್ಲಿತ್ತು. 21 ಹೀಗೆ ಜೀವಿಗಳು ಚಲಿಸಿದಾಗ ಚಕ್ರಗಳು ಚಲಿಸಿದವು. ಜೀವಿಗಳು ನಿಂತಾಗ ಚಕ್ರಗಳೂ ನಿಂತವು. ಜೀವಿಗಳು ಗಾಳಿಯಲ್ಲಿ ಮೇಲಕ್ಕೆ ಹೋದರೆ, ಚಕ್ರಗಳೂ ಅವುಗಳೊಂದಿಗೆ ಮೇಲಕ್ಕೆ ಹೋದವು; ಯಾಕೆಂದರೆ ಜೀವಿಗಳನ್ನು ನಿಯಂತ್ರಿಸುವ ಆತ್ಮವು ಚಕ್ರಗಳಲ್ಲಿ ಇತ್ತು.
22 ಆ ಜೀವಿಗಳ ತಲೆಗಳ ಮೇಲೆ ಆಶ್ಚರ್ಯಕರವಾದ ಒಂದು ಗುಮಟದಂತಿರುವ ವಸ್ತುವು ಹರಡಿಕೊಂಡಿತ್ತು. ಅದು ತಲೆಕೆಳಕಾಗಿ ಇಟ್ಟಿದ್ದ ಬೋಗುಣಿಯಂತಿತ್ತು. ಅದು ಸ್ಪಟಿಕದಂತೆ ಸ್ವಚ್ಫವಾಗಿತ್ತು. 23 ಈ ಬೋಗುಣಿಯಡಿಯಲ್ಲಿ ಒಂದೊಂದು ಜೀವಿಯು ತನ್ನ ಎರಡು ರೆಕ್ಕೆಗಳನ್ನು ಚಾಚಿಕೊಂಡು ಮತ್ತೊಂದು ಜೀವಿಯನ್ನು ತಾಕುತ್ತಿತ್ತು. ಒಂದೊಂದು ಜೀವಿಯ ಮತ್ತೆರಡು ರೆಕ್ಕೆಗಳು ಅದರ ದೇಹವನ್ನು ಆವರಿಸಿಕೊಂಡಿದ್ದವು.
24 ಜೀವಿಗಳು ಚಲಿಸಿದಾಗಲೆಲ್ಲಾ ಅವುಗಳ ರೆಕ್ಕೆಗಳ ಗಟ್ಟಿಯಾದ ಶಬ್ದ ನನಗೆ ಕೇಳಿಸಿತು. ಅದು ನೀರು ಭೋರ್ಗರೆಯುವ ಶಬ್ದದಂತಿತ್ತು. ಸರ್ವಶಕ್ತನಾದ ದೇವರ ಶಬ್ದದಂತೆ ಅದು ಗಟ್ಟಿಯಾಗಿತ್ತು. ಅದು ದೊಡ್ಡ ಸೈನ್ಯದ ಅಥವಾ ಜನಸಮೂಹದ ಶಬ್ದದಂತಿತ್ತು. ಜೀವಿಗಳು ಚಲಿಸುವುದನ್ನು ನಿಲ್ಲಿಸಿದಾಗ ಅವುಗಳು ತಮ್ಮ ರೆಕ್ಕೆಗಳನ್ನು ತಮ್ಮ ಪಾರ್ಶ್ವಗಳಲ್ಲಿ ಕೆಳಗಿಳಿಸುತ್ತಿದ್ದವು.
25 ಜೀವಿಗಳು ಚಲಿಸುವದನ್ನು ನಿಲ್ಲಿಸಿ ರೆಕ್ಕೆಗಳನ್ನು ಕೆಳಗಿಳಿಸಿದವು. ಆಗ ಇನ್ನೊಂದು ದೊಡ್ಡ ಶಬ್ದ ಉಂಟಾಯಿತು. ಅವುಗಳ ತಲೆಗಳ ಮೇಲ್ಗಡೆಯ ಬೋಗುಣಿಯ ಮೇಲಿನಿಂದ ಆ ಶಬ್ದವು ಹೊರಟಿತ್ತು. 26 ಆ ಬೋಗುಣಿಯ ಮೇಲೆ ಸಿಂಹಾಸನದಂತಿದ್ದ ವಸ್ತುವು ಇತ್ತು. ಅದು ನೀಲಮಣಿಯಂತೆ ನೀಲಿ ಬಣ್ಣದ್ದಾಗಿತ್ತು. ಆ ಸಿಂಹಾಸನದ ಮೇಲೆ ಕುಳಿತುಕೊಂಡಿದ್ದ ಒಬ್ಬನು ಮನುಷ್ಯನಂತೆ ಕಾಣುತ್ತಿದ್ದನು. 27 ನಾನು ಆತನ ಸೊಂಟದ ಮೇಲ್ಭಾಗವನ್ನು ನೋಡಿದಾಗ, ಆತನು ಬೆಂಕಿಯಿಂದ ಸುತ್ತುವರಿದ ಕಾದಲೋಹದಂತೆ ಕಂಡನು. ನಾನು ಆತನ ಸೊಂಟದಿಂದ ಕೆಳಭಾಗವನ್ನು ನೋಡಿದಾಗ ಆತನು ಬೆಂಕಿಯಂತೆ ಕಂಡನು. ಆತನ ಸುತ್ತಲೂ ಪ್ರಕಾಶಮಾನವಾದ ಬೆಳಕಿತ್ತು. 28 ಆತನ ಸುತ್ತಲೂ ಇದ್ದ ಪ್ರಕಾಶವು ಮೇಘಬಿಲ್ಲಿನಂತೆಯೂ ಯೆಹೋವನ ಮಹಿಮೆಯಂತೆಯೂ ಕಾಣುತ್ತಿತ್ತು. ನಾನು ಅದನ್ನು ನೋಡಿದ ಕೂಡಲೇ ನೆಲಕ್ಕೆ ಬಿದ್ದೆನು. ಮುಖವನ್ನು ನೆಲದ ಮೇಲಿಟ್ಟು ಅಡ್ಡಬಿದ್ದೆನು. ಆಗ ನನ್ನೊಂದಿಗೆ ಮಾತನಾಡುತ್ತಿದ್ದ ಸ್ವರವನ್ನು ಕೇಳಿದೆನು.
ಯೆಹೋವನು ಯೆಹೆಜ್ಕೇಲನ ಸಂಗಡ ಮಾತನಾಡಿದ್ದು
2 ಆ ಸ್ವರವು, “ನರಪುತ್ರನೇ, ಎದ್ದೇಳು ನಾನು ನಿನ್ನೊಂದಿಗೆ ಮಾತನಾಡುತ್ತೇನೆ” ಎಂದಿತು.
2 ಆತನು ನನ್ನೊಂದಿಗೆ ಮಾತನಾಡುತ್ತಿರಲು, ಆತ್ಮವು ನನ್ನೊಳಗೆ ಪ್ರವೇಶಿಸಿ, ನಾನು ಕಾಲೂರಿ ನಿಂತುಕೊಳ್ಳುವಂತೆ ಮಾಡಿತು. ಆತನು ನನ್ನೊಂದಿಗೆ ಮಾತಾಡುವುದು ನನಗೆ ಕೇಳಿಸಿತು. 3 ಆತನು ನನ್ನೊಂದಿಗೆ, “ನರಪುತ್ರನೇ, ಇಸ್ರೇಲ್ ಜನಾಂಗದವರೊಡನೆ ಮಾತನಾಡಲು ನಿನ್ನನ್ನು ಕಳುಹಿಸುತ್ತಿದ್ದೇನೆ. ಅವರು ಎಷ್ಟೋಬಾರಿ ನನಗೆ ವಿರುದ್ಧವಾಗಿ ಎದ್ದರು. ಅವರ ಪೂರ್ವಿಕರೂ ನನಗೆ ವಿರುದ್ಧವಾಗಿ ಎದ್ದಿದ್ದರು. ನನಗೆ ವಿರುದ್ಧವಾಗಿ ಎಷ್ಟೋವೇಳೆ ಪಾಪ ಮಾಡಿದರು. ಈಗಲೂ ಅವರು ಪಾಪ ಮಾಡುತ್ತಲೇ ಇದ್ದಾರೆ. 4 ಆ ಜನರೊಂದಿಗೆ ಮಾತನಾಡಲು ನಾನು ನಿನ್ನನ್ನು ಕಳುಹಿಸುತ್ತಿದ್ದೇನೆ. ಅವರು ಬಹಳವಾಗಿ ಪ್ರತಿಭಟಿಸುವವರೂ ಮೊಂಡರೂ ಆಗಿದ್ದಾರೆ. ಆದರೆ ನೀನು ಅವರೊಂದಿಗೆ ಮಾತಾಡಿ, ‘ನಮ್ಮ ಒಡೆಯನಾದ ಯೆಹೋವನು ಇದನ್ನು ಹೇಳಿದ್ದಾನೆ’ ಎಂದು ಹೇಳಬೇಕು. 5 ಜನರು ನಿನ್ನ ಮಾತನ್ನು ಕೇಳಬಹುದು ಅಥವಾ ಕೇಳದಿರಬಹುದು: ಯಾಕೆಂದರೆ ಅವರು ದಂಗೆಕೋರರಾಗಿದ್ದಾರೆ. ನನ್ನ ಮುಂದೆ ಪಾಪಮಾಡುವುದನ್ನು ನಿಲ್ಲಿಸಲಿಲ್ಲ. ಅವರು ಯಾವಾಗಲೂ ನನ್ನ ವಿರುದ್ಧ ದಂಗೆ ಏಳುವರು. ಆದ್ದರಿಂದ ನಾನು ತಿಳಿಸಿದ್ದನ್ನೆ ನೀನು ಹೇಳಬೇಕು. ಆಗ ಅವರು ತಮ್ಮ ಮಧ್ಯೆ ಒಬ್ಬ ಪ್ರವಾದಿ ಇದ್ದಾನೆಂದು ಗ್ರಹಿಸಿಕೊಳ್ಳುವರು.
6 “ನರಪುತ್ರನೇ, ಆ ಜನರು ನಿನ್ನನ್ನು ವಿರೋಧಿಸಿದರೂ ನೀನು ಅವರಿಗೆ ಭಯಪಡಬೇಡ ಮತ್ತು ಅವರು ಹೇಳುವ ಮಾತುಗಳಿಗೆ ನೀನು ಹೆದರಬೇಡ. ಮುಳ್ಳುಗಳೂ ಮುಳ್ಳುಪೊದೆಗಳೂ ನಿನಗೆ ಒತ್ತುವಂತೆಯೂ ನೀನು ಚೇಳುಗಳ ಮೇಲೆ ಕುಳಿತುಕೊಂಡಿರುವಂತೆಯೂ ಅದು ಇರುವದು. ಆದರೆ ಅವರಾಡುವ ಮಾತುಗಳಿಗೆ ಭಯಪಡಬೇಡ. ಅವರು ದಂಗೆಕೋರರು. 7 ಅವರು ಕೇಳಲಿ, ಕೇಳದಿರಲಿ, ನಾನು ಹೇಳುವದನ್ನು ಅವರಿಗೆ ತಿಳಿಸು; ಯಾಕೆಂದರೆ ಅವರು ದಂಗೆಕೋರರು.
8 “ನರಪುತ್ರನೇ, ನಾನು ಹೇಳುವದನ್ನು ನೀನು ಸರಿಯಾಗಿ ಕೇಳಬೇಕು. ದಂಗೆಕೋರರಾದ ಆ ಜನರಂತೆ ನೀನೂ ನನಗೆ ವಿರುದ್ಧವಾಗಿರಬೇಡ. ನಾನು ನಿನಗೆ ಕೊಡಲಿರುವುದನ್ನು ನಿನ್ನ ಬಾಯಿತೆರೆದು ತಿನ್ನು.”
9 ಆಗ ನಾನು ಒಂದು ಕೈ ನನ್ನ ಬಳಿಗೆ ಬರುವದನ್ನು ಕಂಡೆನು. ಆ ಕೈ ಒಂದು ಸುರುಳಿಯನ್ನು ಹಿಡುಕೊಂಡಿತ್ತು. 10 ಆತನು ಆ ಸುರುಳಿಯನ್ನು ನನ್ನೆದುರಿನಲ್ಲಿ ಬಿಚ್ಚಿದಾಗ ಅದರ ಮುಂಭಾಗದಲ್ಲಿಯೂ ಹಿಂಭಾಗದಲ್ಲಿಯೂ ಮಾತುಗಳು ಬರೆಯಲ್ಪಟ್ಟಿದ್ದವು. ನಾನಾ ತರದ ಪ್ರಲಾಪಗಳು, ನರಳಾಟಗಳು ಮತ್ತು ಗೋಳಾಟಗಳು ಬರೆಯಲ್ಪಟ್ಟಿದ್ದವು.
ನಂಬಿಕೆ
11 ನಂಬಿಕೆ ಎಂದರೆ ನಾವು ನಿರೀಕ್ಷೆಯಿಂದಿರುವ ಸಂಗತಿಗಳಲ್ಲಿ ಭರವಸದಿಂದಿರುವುದೂ ನಮ್ಮ ಕಣ್ಣಿಗೆ ಕಾಣದಿರುವುದನ್ನು ನಿಜವೆಂದು ತಿಳಿದುಕೊಳ್ಳುವುದೂ ಆಗಿದೆ. 2 ಬಹಳ ಹಿಂದಿನ ಕಾಲದಲ್ಲಿ ಜೀವಿಸಿದ್ದ ಜನರಲ್ಲಿ ಈ ರೀತಿಯ ನಂಬಿಕೆಯಿದ್ದುದರಿಂದ ದೇವರು ಅವರ ವಿಷಯದಲ್ಲಿ ಸಂತೋಷಪಟ್ಟನು.
3 ದೇವರು ತನ್ನ ಆಜ್ಞೆಯಿಂದ ಈ ಲೋಕವನ್ನು ಸೃಷ್ಟಿಸಿದನೆಂಬುದನ್ನು ಅರ್ಥಮಾಡಿಕೊಳ್ಳಲು ನಂಬಿಕೆ ನಮಗೆ ಸಹಾಯ ಮಾಡುತ್ತದೆ. ಹೇಗೆಂದರೆ ನಮ್ಮ ಕಣ್ಣಿಗೆ ಕಾಣುವಂಥ ವಸ್ತುಗಳಿಂದ ಈ ಜಗತ್ತು ಸೃಷ್ಟಿಯಾಗಲಿಲ್ಲ.
4 ಕಾಯಿನ ಮತ್ತು ಹೇಬೆಲರಿಬ್ಬರೂ ದೇವರಿಗೆ ಯಜ್ಞಗಳನ್ನು ಅರ್ಪಿಸಿದರು. ಆದರೆ ಹೇಬೆಲನಲ್ಲಿ ನಂಬಿಕೆಯಿದ್ದುದರಿಂದ ಅವನು ದೇವರಿಗೆ ಉತ್ತಮವಾದ ಯಜ್ಞವನ್ನು ಅರ್ಪಿಸಿದನು. ಅವನು ಅರ್ಪಿಸಿದ ವಸ್ತುಗಳಿಂದ ತನಗೆ ಸಂತೋಷವಾಯಿತೆಂದು ದೇವರೇ ಹೇಳಿದನು. ಅವನಲ್ಲಿ ನಂಬಿಕೆಯಿದ್ದುದರಿಂದ ದೇವರು ಅವನನ್ನು ಒಳ್ಳೆಯ ಮನುಷ್ಯನೆಂದು ಕರೆದನು. ಹೇಬೆಲನು ಸತ್ತುಹೋದನು, ಆದರೂ ತನ್ನ ನಂಬಿಕೆಯ ಮೂಲಕ ಇನ್ನೂ ಮಾತನಾಡುತ್ತಿದ್ದಾನೆ.
5 ಹನೋಕನು ಸಾವನ್ನು ಅನುಭವಿಸದೆ ಈ ಲೋಕದಿಂದ ಮೇಲೋಕಕ್ಕೆ ಒಯ್ಯಲ್ಪಟ್ಟನು. ಪವಿತ್ರ ಗ್ರಂಥವು ಹೇಳುವಂತೆ, ಅವನು ಒಯ್ಯಲ್ಪಡುವುದಕ್ಕಿಂತ ಮೊದಲು ದೇವರಿಗೆ ನಿಜವಾಗಿಯೂ ಮೆಚ್ಚಿಕೆಯಾಗಿದ್ದನು. ತರುವಾಯ ಜನರಿಗೆ ಅವನು ಸಿಕ್ಕಲೇ ಇಲ್ಲ. ಅವನ ನಂಬಿಕೆಯ ದೆಸೆಯಿಂದ ದೇವರು ಅವನನ್ನು ತನ್ನೊಡನಿರಲು ಕೊಂಡೊಯ್ದನು. 6 ನಂಬಿಕೆಯಿಲ್ಲದೆ ದೇವರನ್ನು ಯಾರೂ ಮೆಚ್ಚಿಸಲಾಗುವುದಿಲ್ಲ. ದೇವರ ಬಳಿಗೆ ಬರುವ ಯಾರೇ ಆಗಲಿ, ದೇವರು ಇದ್ದಾನೆಂತಲೂ ಆತನನ್ನು ಮನಃಪೂರ್ವಕವಾಗಿ ಹುಡುಕುವ ಜನರಿಗೆ ಆತನು ಪ್ರತಿಫಲವನ್ನು ಕೊಡುತ್ತಾನೆಂತಲೂ ನಂಬಬೇಕು.
7 ಕಣ್ಣಿಗೆ ಇನ್ನೂ ಕಾಣದಿದ್ದ ಸಂಗತಿಗಳ ಬಗ್ಗೆ ದೇವರು ನೋಹನನ್ನು ಎಚ್ಚರಿಸಿದನು. ನೋಹನು ದೇವರಲ್ಲಿ ನಂಬಿಕೆಯಿಟ್ಟಿದ್ದನು ಮತ್ತು ಭಕ್ತಿಯುಳ್ಳವನಾಗಿದ್ದನು. ಆದ್ದರಿಂದ ಅವನು ತನ್ನ ಕುಟುಂಬ ರಕ್ಷಣೆಗಾಗಿ ದೊಡ್ಡ ನಾವೆಯನ್ನು ಕಟ್ಟಿ, ಈ ಲೋಕದ ತಪ್ಪನ್ನು ತೋರ್ಪಡಿಸಿದನು. ಹೀಗೆ, ನಂಬಿಕೆಯ ಮೂಲಕ ನೀತಿವಂತರಾದ ಜನರಲ್ಲಿ ಅವನೂ ಒಬ್ಬನಾದನು.
8 ದೇವರು ತಾನು ಕೊಡುತ್ತೇನೆಂದು ವಾಗ್ದಾನ ಮಾಡಿದ್ದ ಸ್ಥಳಕ್ಕೆ ಪ್ರಯಾಣ ಮಾಡಬೇಕೆಂದು ಅಬ್ರಹಾಮನನ್ನು ಕರೆದನು. ಆ ಸ್ಥಳವು ಎಲ್ಲಿದೆಯೆಂಬುದು ಅವನಿಗೆ ತಿಳಿದಿರಲಿಲ್ಲ. ಅಬ್ರಹಾಮನಲ್ಲಿ ನಂಬಿಕೆಯಿದ್ದುದರಿಂದ, ದೇವರಿಗೆ ವಿಧೇಯನಾಗಿ ಪ್ರಯಾಣ ಮಾಡಲಾರಂಭಿಸಿದನು. 9 ದೇವರು ಕೊಡುವುದಾಗಿ ವಾಗ್ದಾನ ಮಾಡಿದ್ದ ದೇಶದಲ್ಲಿ ಅವನು ಪ್ರವಾಸಿಗನಂತೆ ವಾಸಮಾಡಿದ್ದು ನಂಬಿಕೆಯಿಂದಲೇ. ಅದೇ ವಾಗ್ದಾನಕ್ಕೆ ಸಹ ಭಾದ್ಯರಾಗಿದ್ದ ಇಸಾಕನೂ ಯಾಕೋಬನೂ ಅವನಂತೆಯೇ ಡೇರೆಗಳಲ್ಲಿ ವಾಸಿಸಿದರು. 10 ಅಬ್ರಹಾಮನು ಶಾಶ್ವತವಾದ ಅಡಿಪಾಯಗಳುಳ್ಳ ನಗರಕ್ಕಾಗಿ ಕಾದಿದ್ದನು. ದೇವರೇ ಸಂಕಲ್ಪಿಸಿ, ನಿರ್ಮಿಸಿದ ನಗರಕ್ಕಾಗಿ ಅವನು ಕಾದಿದ್ದನು.
11 ಅಬ್ರಹಾಮನು ಮಕ್ಕಳನ್ನು ಪಡೆಯಲಾಗದಷ್ಟು ವೃದ್ಧನಾಗಿದ್ದನು. ಸಾರಳು ಮಕ್ಕಳನ್ನು ಪಡೆಯಲು ಸಮರ್ಥಳಾಗಿರಲಿಲ್ಲ. ಆದರೆ ಅಬ್ರಹಾಮನಿಗೆ ದೇವರಲ್ಲಿ ನಂಬಿಕೆಯಿದ್ದುದರಿಂದ, ಅವರು ಮಕ್ಕಳನ್ನು ಪಡೆಯಲು ಸಮರ್ಥರಾಗುವಂತೆ ದೇವರು ಮಾಡಿದನು. 12 ಅವನು ಮೃತಪ್ರಾಯನಾಗಿದ್ದವನಂತೆ ವೃದ್ಧನಾಗಿದ್ದರೂ ಆಕಾಶದ ನಕ್ಷತ್ರಗಳಂತೆಯೂ ಸಮುದ್ರತೀರದ ಉಸುಬಿನಂತೆಯೂ ಅಸಂಖ್ಯಾತವಾಗಿ ಮಕ್ಕಳು ಹುಟ್ಟಿದರು.
13 ಈ ಮಹಾಪುರಷರೆಲ್ಲರೂ ತಾವು ಸಾಯುವವರೆಗೂ ನಂಬಿಕೆಯುಳ್ಳವರಾಗಿದ್ದರು. ದೇವರು ತನ್ನ ಜನರಿಗೆ ವಾಗ್ದಾನ ಮಾಡಿದ್ದವುಗಳನ್ನು ಆ ಜನರು ಪಡೆಯಲಿಲ್ಲ. ಮುಂದೆ ಬಹುಕಾಲದ ನಂತರ ಬರಲಿದ್ದ ಅವುಗಳನ್ನು ನೋಡಿ ಅವರು ಸಂತೋಷಗೊಂಡರು. ಅವರು ತಾವು ಈ ಲೋಕದಲ್ಲಿ ಪ್ರವಾಸಿಗಳಂತೆ ಮತ್ತು ಅಪರಿಚಿತರಂತೆ ಇದ್ದೇವೆ ಎಂಬುದನ್ನು ಒಪ್ಪಿಕೊಂಡರು. 14 ಅವರು ಹಾಗೆ ಒಪ್ಪಿಕೊಂಡಿದ್ದರಿಂದ ತಾವು ಸ್ವದೇಶಕ್ಕಾಗಿ ಕಾದಿರುವುದಾಗಿ ತೋರ್ಪಡಿಸಿಕೊಂಡಂತಾಯಿತು. 15 ಆ ಜನರು ತಾವು ಬಿಟ್ಟುಬಂದ ದೇಶದ ಮೇಲೇನಾದರೂ ಮನಸ್ಸಿಟ್ಟಿದ್ದರೆ, ಅವರು ಮರಳಿಹೋಗುತ್ತಿದ್ದರು. 16 ಆದರೆ ಆ ಜನರು ಉತ್ತಮ ದೇಶವಾದ ಪರಲೋಕಕ್ಕಾಗಿ ಕಾದಿದ್ದರು. ಆದ್ದರಿಂದ ದೇವರು ತನ್ನನ್ನು ಅವರ ದೇವರೆಂದು ಹೇಳಿಕೊಳ್ಳಲು ನಾಚಿಕೆಪಡದೆ ಅವರಿಗಾಗಿ ಒಂದು ನಗರವನ್ನು ಸಿದ್ಧಪಡಿಸಿದನು.
17-18 ದೇವರು ಅಬ್ರಹಾಮನ ನಂಬಿಕೆಯನ್ನು ಪರೀಕ್ಷಿಸಿದನು. ಇಸಾಕನನ್ನು ಯಜ್ಞವಾಗಿ ಸಮರ್ಪಿಸೆಂದು ದೇವರು ಅವನಿಗೆ ಹೇಳಿದನು. ಅಬ್ರಹಾಮನಲ್ಲಿ ನಂಬಿಕೆಯಿದ್ದುದರಿಂದ ವಿಧೇಯನಾದನು. ದೇವರು ಅವನಿಗೆ, “ನಿನ್ನ ಸಂತತಿಗಳವರು ಇಸಾಕನ ಮೂಲಕ ಬರುವರು”(A) ಎಂದು ಮೊದಲೇ ವಾಗ್ದಾನ ಮಾಡಿದ್ದನು. ಆದರೂ ತನ್ನ ಒಬ್ಬನೇ ಮಗನನ್ನು ಅರ್ಪಿಸಲು ಅವನು ಸಿದ್ಧನಾಗಿದ್ದನು. 19 ದೇವರು ಸತ್ತವರನ್ನು ಜೀವಂತವಾಗಿ ಎಬ್ಬಿಸಬಲ್ಲನೆಂದು ಅವನು ನಂಬಿದ್ದನು. ಇಸಾಕನನ್ನು ಕೊಲ್ಲದಂತೆ ದೇವರು ಅವನನ್ನು ತಡೆದಾಗ, ಅವನಿಗೆ ನಿಜವಾಗಿಯೂ ಇಸಾಕನನ್ನು ಸಾವಿನಿಂದ ಮರಳಿ ಪಡೆದಂತಾಯಿತು.
Kannada Holy Bible: Easy-to-Read Version. All rights reserved. © 1997 Bible League International