Old/New Testament
51 ಯೆಹೋವನು ಹೀಗೆನ್ನುತ್ತಾನೆ:
“ನಾನು ಭಯಂಕರವಾದ ಬಿರುಗಾಳಿ ಬೀಸುವಂತೆ ಮಾಡುವೆನು.
ಅದು ಬಾಬಿಲೋನಿನ ಮೇಲೂ ಬಾಬಿಲೋನಿನ ಜನರ ಮೇಲೂ ಬೀಸುವಂತೆ ಮಾಡುವೆನು.
2 ಬಾಬಿಲೋನನ್ನು ತೂರುವದಕ್ಕಾಗಿ ನಾನು ವಿದೇಶಿಯರನ್ನು ಕಳಿಸುವೆನು.
ಅವರು ಬಾಬಿಲೋನನ್ನು ತೂರುವರು.
ಆ ಜನರು ಬಾಬಿಲೋನನ್ನು ಬರಿದುಗೊಳಿಸುವರು.
ಸೈನಿಕರು ನಗರವನ್ನು ಮುತ್ತುವರು; ಅಪಾರ ವಿನಾಶ ಸಂಭವಿಸುವದು.
3 ಬಾಬಿಲೋನಿನ ಸೈನಿಕರು ತಮ್ಮ ಬಿಲ್ಲುಬಾಣಗಳನ್ನು ಉಪಯೋಗಿಸಲಾರರು.
ಅವರು ತಮ್ಮ ಕವಚಗಳನ್ನು ಧರಿಸಲಾರರು.
ಬಾಬಿಲೋನಿನ ಯೋಧರಿಗೆ ಮರುಕ ತೋರಿಸಬೇಡಿ.
ಅದರ ಸೈನ್ಯವನ್ನು ಸಂಪೂರ್ಣವಾಗಿ ನಾಶಮಾಡಿರಿ.
4 ಕಸ್ದೀಯರ ಪ್ರದೇಶದಲ್ಲಿಯೇ ಬಾಬಿಲೋನಿನ ಸೈನಿಕರನ್ನು ಕೊಲ್ಲಲಾಗುವುದು.
ಬಾಬಿಲೋನಿನ ಬೀದಿಗಳಲ್ಲಿಯೇ ಅವರು ಗಾಯಗೊಳ್ಳುವರು.”
5 ಸರ್ವಶಕ್ತನಾದ ಯೆಹೋವನು ಇಸ್ರೇಲನ್ನು ಮತ್ತು ಯೆಹೂದವನ್ನು ವಿಧವೆಯಾಗಿ ಮಾಡಿಲ್ಲ.
ಆತನು ಅವರ ಕೈಬಿಟ್ಟಿಲ್ಲ. ಅವರು ಇಸ್ರೇಲಿನ ಪರಿಶುದ್ಧನನ್ನು ತೊರೆದು ಅಪರಾಧ ಮಾಡಿದರು.
ಅವರು ಆತನನ್ನು ತ್ಯಜಿಸಿದರು.
ಆದರೆ ಆತನು ಅವರನ್ನು ತ್ಯಜಿಸಲಿಲ್ಲ.
6 ಬಾಬಿಲೋನಿನಿಂದ ದೂರ ಓಡಿಹೋಗಿರಿ.
ನಿಮ್ಮ ಪ್ರಾಣಗಳನ್ನು ಉಳಿಸಿಕೊಳ್ಳುವುದಕ್ಕಾಗಿ ಓಡಿಹೋಗಿರಿ.
ಇಲ್ಲವಾದರೆ ಬಾಬಿಲೋನಿನ ಪಾಪದಿಂದ ನೀವೂ ಮರಣಕ್ಕೆ ಗುರಿಯಾಗುವಿರಿ.
ಅವರು ಮಾಡಿದ ದುಷ್ಕೃತ್ಯಗಳಿಗಾಗಿ ದೇವರು ಬಾಬಿಲೋನಿನ ಜನರನ್ನು ಶಿಕ್ಷಿಸುವ ಕಾಲವಿದು.
ಅದು ತಕ್ಕ ಶಿಕ್ಷೆಯನ್ನು ಪಡೆಯುವುದು.
7 ಬಾಬಿಲೋನ್ ಯೆಹೋವನ ಕೈಯಲ್ಲಿನ ಬಂಗಾರದ ಪಾತ್ರೆಯಂತಿತ್ತು.
ಲೋಕವೆಲ್ಲವೂ ಮದ್ಯಪಾನ ಮಾಡುವಂತೆ ಬಾಬಿಲೋನ್ ಮಾಡಿತು.
ಜನಾಂಗಗಳು ಬಾಬಿಲೋನಿನ ದ್ರಾಕ್ಷಾರಸವನ್ನು
ಕುಡಿದು ಹುಚ್ಚಾದವು.
8 ಬಾಬಿಲೋನ್ ಬೀಳುವುದು; ಬೇಗನೆ ಮುರಿದುಹೋಗುವುದು.
ಅದರ ಸಲುವಾಗಿ ಗೋಳಾಡಿರಿ.
ಅದರ ನೋವಿಗಾಗಿ ಔಷಧಿಯನ್ನು ತೆಗೆದುಕೊಂಡು ಬನ್ನಿ,
ಒಂದುವೇಳೆ ಅದು ಗುಣಹೊಂದಬಹುದು.
9 ನಾವು ಬಾಬಿಲೋನನ್ನು ವಾಸಿಮಾಡುವ ಪ್ರಯತ್ನ ಮಾಡಿದೆವು.
ಆದರೆ ಅದನ್ನು ವಾಸಿಮಾಡಲು ಆಗುವದಿಲ್ಲ.
ಆದ್ದರಿಂದ ಅದನ್ನು ಬಿಟ್ಟುಬಿಡೋಣ.
ನಾವು ನಮ್ಮನಮ್ಮ ದೇಶಗಳಿಗೆ ಹೋಗೋಣ.
ಪರಲೋಕದ ದೇವರು ಬಾಬಿಲೋನಿಗೆ ವಿಧಿಸಬೇಕಾದ ಶಿಕ್ಷೆಯನ್ನು ನಿರ್ಧರಿಸುವನು.
ಬಾಬಿಲೋನಿಗೆ ಏನಾಗಬೇಕೆಂಬುದನ್ನು ಆತನು ನಿರ್ಧರಿಸುವನು.
10 ನಮ್ಮ ಬಗ್ಗೆಯೂ ಯೆಹೋವನು ನಿರ್ಧಾರ ಕೈಗೊಂಡಿದ್ದಾನೆ.
ಬನ್ನಿ, ಅದರ ಬಗ್ಗೆ ನಾವು ಚೀಯೋನಿನಲ್ಲಿ ಹೇಳೋಣ.
ನಮ್ಮ ದೇವರಾದ ಯೆಹೋವನು ಮಾಡಿದ್ದನ್ನು ನಾವು ಹೇಳೋಣ.
11 ನಿಮ್ಮ ಬಾಣಗಳನ್ನು ಮಸೆಯಿರಿ.
ನಿಮ್ಮ ಕವಚಗಳನ್ನು ಧರಿಸಿರಿ.
ಯೆಹೋವನು ಮೇದ್ಯರ ರಾಜರನ್ನು ಪ್ರಚೋದಿಸಿದ್ದಾನೆ.
ಬಾಬಿಲೋನನ್ನು ನಾಶಪಡಿಸಬೇಕೆಂಬ ಉದ್ದೇಶದಿಂದ ಆತನು ಅವರನ್ನು ಪ್ರಚೋದಿಸಿದ್ದಾನೆ.
ಯೆಹೋವನು ಬಾಬಿಲೋನಿನ ಜನರಿಗೆ ತಕ್ಕ ಶಿಕ್ಷೆಯನ್ನು ಕೊಡುತ್ತಾನೆ.
ಬಾಬಿಲೋನಿನ ಸೈನ್ಯವು ಜೆರುಸಲೇಮಿನಲ್ಲಿದ್ದ ಯೆಹೋವನ ಪವಿತ್ರ ಆಲಯವನ್ನು ನಾಶಮಾಡಿತು.
ಆದ್ದರಿಂದ ಯೆಹೋವನು ಅವರಿಗೆ ತಕ್ಕ ಶಿಕ್ಷೆಯನ್ನು ಕೊಡುವನು.
12 ಬಾಬಿಲೋನಿನ ಕೋಟೆಗೋಡೆಯ ವಿರುದ್ಧ ಧ್ವಜವನ್ನು ಎತ್ತಿ ಹಾರಿಸಿರಿ.
ಹೆಚ್ಚಿನ ಸಂಖ್ಯೆಯಲ್ಲಿ ಕಾವಲುಗಾರರನ್ನು ಕರೆದುತನ್ನಿರಿ.
ಯೋಧರನ್ನು ಅವರವರ ಸ್ಥಾನಗಳಲ್ಲಿ ನಿಲ್ಲಿಸಿರಿ.
ಗುಪ್ತವಾಗಿ ಧಾಳಿ ಮಾಡುವುದಕ್ಕೆ ಸಿದ್ಧರಾಗಿರಿ.
ಯೆಹೋವನು ತನ್ನ ಯೋಜನೆಗಳಂತೆ ಕಾರ್ಯ ನೆರವೇರಿಸುವನು.
ಯೆಹೋವನು ಬಾಬಿಲೋನಿನ ಜನರ ವಿರುದ್ಧ ಹೇಳಿರುವಂತೆಯೇ ಮಾಡುವನು.
13 ಬಾಬಿಲೋನೇ, ನೀನು ಸಮೃದ್ಧವಾದ ನೀರಿನ ಹತ್ತಿರ ಇರುವೆ.
ನೀನು ಸಂಪತ್ತಿನಿಂದ ಸಮೃದ್ಧವಾಗಿರುವೆ.
ಆದರೆ ಒಂದು ಜನಾಂಗವಾಗಿ ನೀನು ಬಹಳ ಕಾಲ ಮುಂದುವರೆಯಲಾರೆ.
ನಿನ್ನ ವಿನಾಶ ಕಾಲ ಸಮೀಪಿಸಿದೆ.
14 ಸರ್ವಶಕ್ತನಾದ ಯೆಹೋವನು ತನ್ನ ಮೇಲೆ ಆಣೆ ಇಟ್ಟುಕೊಂಡು ಹೀಗೆ ಹೇಳಿದ್ದಾನೆ:
“ಬಾಬಿಲೋನೇ, ನಾನು ಖಂಡಿತವಾಗಿ ನಿನ್ನನ್ನು ವೈರಿ ಸೈನಿಕರಿಂದ ತುಂಬಿಸಿಬಿಡುವೆನು.
ಅವರು ಮಿಡತೆಗಳ ಸಮೂಹದಂತೆ ವ್ಯಾಪಿಸುವರು.
ಆ ಸೈನಿಕರು ನಿನ್ನ ವಿರುದ್ಧ ಯುದ್ಧದಲ್ಲಿ ಜಯಗಳಿಸುವರು.
ಅವರು ನಿನ್ನ ಮೇಲೆ ನಿಂತುಕೊಂಡು ಜಯಘೋಷ ಮಾಡುವರು.”
15 ಯೆಹೋವನು ತನ್ನ ಅಪಾರ ಶಕ್ತಿಯಿಂದ ಭೂಮಿಯನ್ನು ಸೃಷ್ಟಿಸಿದನು.
ತನ್ನ ಜ್ಞಾನದಿಂದ ಈ ಲೋಕವನ್ನು ನಿರ್ಮಿಸಿದನು.
ತನ್ನ ವಿವೇಕದಿಂದ ಆಕಾಶವನ್ನು ಹರಡಿದನು.
16 ಆತನು ಗರ್ಜಿಸಿದಾಗ ಸಮುದ್ರದ ನೀರು ಭೋರ್ಗರೆಯುತ್ತದೆ.
ಆತನು ಇಡೀ ಭೂಮಂಡಲದಿಂದ ಮೋಡಗಳು ಮೇಲೆ ಹೋಗುವಂತೆ ಮಾಡುತ್ತಾನೆ.
ಆತನು ಮಳೆಯ ಜೊತೆ ಮಿಂಚನ್ನು ಕಳುಹಿಸುತ್ತಾನೆ.
ತನ್ನ ಭಂಡಾರದಿಂದ ಗಾಳಿಯನ್ನು ಹೊರಗೆ ಬಿಡುತ್ತಾನೆ.
17 ಆದರೆ ಜನರು ಬುದ್ಧಿಹೀನರಾಗಿ
ದೇವರ ಕಾರ್ಯವನ್ನು ತಿಳಿಯದವರಾಗಿದ್ದಾರೆ.
ಕುಶಲಕೆಲಸಗಾರರು ಸುಳ್ಳುದೇವರುಗಳ ಪ್ರತಿಮೆಗಳನ್ನು ಮಾಡುತ್ತಾರೆ.
ಆ ಪ್ರತಿಮೆಗಳು ಕೇವಲ ಸುಳ್ಳುದೇವರುಗಳೇ.
ಆ ಕೆಲಸಗಾರರು ಎಷ್ಟು ಮೂರ್ಖರೆಂಬುದನ್ನು ಅವು ತೋರಿಸುತ್ತವೆ.
ಆ ಪ್ರತಿಮೆಗಳು ಜೀವಂತವಾಗಿರುವದಿಲ್ಲ.
18 ಆ ವಿಗ್ರಹಗಳು ನಿಷ್ಪ್ರಯೋಜಕವಾದವುಗಳೇ.
ಆ ವಿಗ್ರಹಗಳನ್ನು ಮಾಡಿದವರು ಜನರೇ.
ಅವುಗಳು ಕೇವಲ ಹಾಸ್ಯಾಸ್ಪದ ವಸ್ತುಗಳಲ್ಲದೆ ಮತ್ತೇನೂ ಅಲ್ಲ.
ಅವುಗಳ ಬಗ್ಗೆ ತೀರ್ಪುಕೊಡುವ ಕಾಲ ಬರುವದು;
ಆ ವಿಗ್ರಹಗಳನ್ನು ನಾಶಮಾಡಲಾಗುವುದು.
19 ಆದರೆ ಯಾಕೋಬ್ಯರ ಸ್ವಾಸ್ತ್ಯವಾದಾತನು ಆ ನಿಷ್ಪ್ರಯೋಜಕ ವಿಗ್ರಹಗಳಂತಲ್ಲ.
ಜನರು ದೇವರನ್ನು ಸೃಷ್ಟಿಸಲಿಲ್ಲ.
ದೇವರು ತನ್ನ ಜನರನ್ನು ಸೃಷ್ಟಿಸಿದನು.
ದೇವರು ಎಲ್ಲವನ್ನು ಸೃಷ್ಟಿಸಿದನು.
ಆತನ ಹೆಸರು ಸರ್ವಶಕ್ತನಾದ ಯೆಹೋವನು.
20 ಯೆಹೋವನು ಹೀಗೆನ್ನುತ್ತಾನೆ: “ಬಾಬಿಲೋನೇ, ನೀನು ನನ್ನ ಗದೆ.
ಜನಾಂಗಗಳನ್ನು ಜಜ್ಜಿಹಾಕಲೂ
ರಾಜ್ಯಗಳನ್ನು ಧ್ವಂಸ ಮಾಡಲೂ ನಾನು ನಿನ್ನನ್ನು ಬಳಸುತ್ತೇನೆ.
21 ಕುದುರೆಗಳನ್ನೂ ಅದರ ಸವಾರರನ್ನೂ ಜಜ್ಜಿಹಾಕಲು ನಾನು ನಿನ್ನನ್ನು ಬಳಸುತ್ತೇನೆ.
ರಥಗಳನ್ನೂ ಸಾರಥಿಗಳನ್ನೂ ಪುಡಿಪುಡಿ ಮಾಡಲು ನಾನು ನಿನ್ನನ್ನು ಬಳಸುತ್ತೇನೆ.
22 ಗಂಡಸರನ್ನೂ ಹೆಂಗಸರನ್ನೂ ಸಂಹರಿಸುವದಕ್ಕಾಗಿ ನಾನು ನಿನ್ನನ್ನು ಬಳಸುತ್ತೇನೆ.
ವೃದ್ಧರನ್ನೂ ತರುಣರನ್ನೂ ನಾಶಪಡಿಸಲು ನಾನು ನಿನ್ನನ್ನು ಬಳಸುತ್ತೇನೆ.
ತರುಣರನ್ನೂ ತರುಣಿಯರನ್ನೂ ಧ್ವಂಸ ಮಾಡಲು ನಾನು ನಿನ್ನನ್ನು ಬಳಸುತ್ತೇನೆ.
23 ಕುರುಬರನ್ನೂ ಕುರಿಹಿಂಡನ್ನೂ ನಾಶಮಾಡುವದಕ್ಕಾಗಿ ನಾನು ನಿನ್ನನ್ನು ಬಳಸುತ್ತೇನೆ.
ರೈತರನ್ನೂ ಮತ್ತು ಹಸುಗಳನ್ನೂ ಸಂಹರಿಸುವದಕ್ಕಾಗಿ ನಾನು ನಿನ್ನನ್ನು ಬಳಸುತ್ತೇನೆ.
ಅಧಿಪತಿಗಳನ್ನೂ ಪ್ರಮುಖ ಅಧಿಕಾರಿಗಳನ್ನೂ ನುಚ್ಚುನೂರು ಮಾಡುವದಕ್ಕಾಗಿ ನಾನು ನಿನ್ನನ್ನು ಬಳಸುತ್ತೇನೆ.
24 ಆದರೆ ನಾನು ಬಾಬಿಲೋನಿಗೆ ಮುಯ್ಯಿತೀರಿಸುವೆನು.
ನಾನು ಬಾಬಿಲೋನಿನ ಎಲ್ಲಾ ಜನರಿಗೆ ಮುಯ್ಯಿತೀರಿಸುವೆನು.
ಅವರು ಚೀಯೋನಿಗೆ ಮಾಡಿದ ಎಲ್ಲಾ ದುಷ್ಕೃತ್ಯಗಳಿಗಾಗಿ ನಾನು ಮುಯ್ಯಿತೀರಿಸುವೆನು.
ಯೆಹೂದವೇ, ನಿನ್ನ ಎದುರಿನಲ್ಲಿಯೇ ಅವರಿಗೆ ಮುಯ್ಯಿತೀರಿಸುವೆನು.”
ಇದು ಯೆಹೋವನ ನುಡಿ.
25 ಯೆಹೋವನು ಹೀಗೆನ್ನುತ್ತಾನೆ:
“ಬಾಬಿಲೋನೇ, ನೀನು ಇಡೀ ದೇಶವನ್ನು
ನಾಶಪಡಿಸುವ ಜ್ವಾಲಾಮುಖಿಯಂತಿರುವೆ.
ಆದರೆ ನಾನು ನಿನಗೆ ವಿರುದ್ಧವಾಗಿ ತಿರುಗಿದ್ದೇನೆ.
ನಾನು ನಿನ್ನನ್ನು ಸುಟ್ಟುಹೋದ ಪರ್ವತವನ್ನಾಗಿ ಮಾಡುವೆನು.
26 ನಿಮ್ಮಿಂದ ಜನರಿಗೆ ಮೂಲೆಗಲ್ಲಾಗುವಷ್ಟು ದೊಡ್ಡ ಕಲ್ಲು ಸಹ ಸಿಗಲಾರದು.
ಜನರು ತಮ್ಮ ಕಟ್ಟಡದ ಅಸ್ತಿವಾರಕ್ಕಾಗಿ ಒಂದು ಕಲ್ಲುಬಂಡೆಯನ್ನು ಬಾಬಿಲೋನಿನಿಂದ ತೆಗೆದುಕೊಂಡು ಹೋಗಲಾರರು.
ಏಕೆಂದರೆ ಶಾಶ್ವತವಾಗಿ ನಿಮ್ಮ ನಗರವು ಒಡೆದ ಕಲ್ಲುಗಳ ಗುಡ್ಡೆಯಾಗುವುದು.”
ಯೆಹೋವನು ಹೀಗೆನ್ನುತ್ತಾನೆ:
27 “ಎಲ್ಲಾ ದೇಶಗಳಲ್ಲಿ ಯುದ್ಧದ ಧ್ವಜವನ್ನು ಹಾರಿಸಿರಿ.
ಎಲ್ಲಾ ರಾಷ್ಟ್ರಗಳಲ್ಲಿ ತುತ್ತೂರಿಗಳನ್ನು ಊದಿರಿ.
ಬಾಬಿಲೋನಿನ ವಿರುದ್ಧ ಹೋರಾಡಲು ಎಲ್ಲಾ ಜನಾಂಗಗಳನ್ನು ಸಿದ್ಧಗೊಳಿಸಿರಿ.
ಅರರಾಟ್, ಮಿನ್ನಿ, ಅಷ್ಕೆನಜ್ ಎಂಬ ರಾಜ್ಯಗಳನ್ನು ಬಾಬಿಲೋನಿನ ವಿರುದ್ಧ ಯುದ್ಧಮಾಡಲು ಕರೆಯಿರಿ.
ಸೈನ್ಯದ ಮುಂದಾಳಾಗಿರಲು ಒಬ್ಬ ಸೇನಾಧಿಪತಿಯನ್ನು ಆರಿಸಿರಿ.
ಮಿಡತೆಯ ದಂಡಿನಂತೆ ಅಪಾರವಾಗಿರುವ ಅಶ್ವಬಲವನ್ನು ಕಳುಹಿಸಿರಿ.
28 ಅದರ ವಿರುದ್ಧ ಯುದ್ಧಕ್ಕಾಗಿ ಜನಾಂಗಗಳನ್ನು ಸಿದ್ಧಮಾಡಿರಿ.
ಮೇದ್ಯರ ರಾಜರನ್ನು ಸಿದ್ಧಮಾಡಿರಿ.
ಅವರ ಅಧಿಪತಿಗಳನ್ನು ಮತ್ತು ಎಲ್ಲಾ ಮುಖ್ಯ ಅಧಿಕಾರಿಗಳನ್ನು ಸಿದ್ಧಗೊಳಿಸಿರಿ.
ಬಾಬಿಲೋನಿನ ವಿರುದ್ಧ ಯುದ್ಧಮಾಡಲು ಅವರು ಆಳುವ ಎಲ್ಲಾ ದೇಶಗಳನ್ನು ಸನ್ನದ್ಧಗೊಳಿಸಿರಿ.
29 ನೋವಿನಿಂದಲೋ ಎಂಬಂತೆ ಭೂಮಿಯು ನಡುಗುತ್ತದೆ ಮತ್ತು ಹೊರಳಾಡುತ್ತದೆ.
ಯೆಹೋವನು ತಾನು ಯೋಚಿಸಿದಂತೆ ಬಾಬಿಲೋನಿಗೆ ಮಾಡಿದಾಗ ಅದು ನಡುಗುತ್ತದೆ.
ಬಾಬಿಲೋನನ್ನು ಯಾರೂ ವಾಸಮಾಡದ ಮರುಭೂಮಿಯನ್ನಾಗಿ
ಮಾಡಬೇಕೆಂಬುದು ಯೆಹೋವನ ಯೋಜನೆ.
30 ಬಾಬಿಲೋನಿನ ಸೈನಿಕರು ಕಾದಾಡುವದನ್ನು ನಿಲ್ಲಿಸಿದ್ದಾರೆ.
ಅವರು ತಮ್ಮ ಕೋಟೆಗಳಲ್ಲಿದ್ದಾರೆ.
ಅವರ ಬಲ ನಷ್ಟವಾಗಿದೆ.
ಅವರು ಭಯಪಟ್ಟ ಹೆಂಗಸಿನಂತಾಗಿದ್ದಾರೆ.
ಬಾಬಿಲೋನಿನ ಮನೆಗಳು ಉರಿಯುತ್ತಿವೆ.
ಅದರ ಬಾಗಿಲಿನ ಅಗುಳಿಗಳು ಮುರಿದುಹೋಗಿವೆ.
31 ಒಬ್ಬ ಸಂದೇಶಕನ ನಂತರ ಇನ್ನೊಬ್ಬ ಸಂದೇಶಕನು ಬರುವನು.
ಸಂದೇಶಕರ ಮೇಲೆ ಸಂದೇಶಕರು ಬಂದು,
ಇಡೀ ನಗರವನ್ನು ವಶಪಡಿಸಿಕೊಳ್ಳಲಾಗಿದೆ ಎಂದು
ಅವರು ಬಾಬಿಲೋನಿನ ರಾಜನಿಗೆ ತಿಳಿಸುತ್ತಾರೆ.
32 ಹಾಯ್ಗಡಗಳನ್ನು ವಶಪಡಿಸಿಕೊಂಡಿದ್ದಾರೆ;
ಜವುಗು ನೆಲವು ಉರಿಯುತ್ತಿದೆ.
ಬಾಬಿಲೋನಿನ ಎಲ್ಲಾ ಸೈನಿಕರು ಅಂಜಿಕೊಂಡಿದ್ದಾರೆ.”
33 ಇಸ್ರೇಲರ ದೇವರೂ ಸರ್ವಶಕ್ತನೂ ಆಗಿರುವ ಯೆಹೋವನು ಹೀಗೆನ್ನುವನು:
“ಬಾಬಿಲೋನಿನ ನಗರವು ಒಂದು ಕಣದಂತೆ ಇದೆ.
ಸುಗ್ಗಿಕಾಲದಲ್ಲಿ ಜನರು ಕಾಳನ್ನು ಹೊಟ್ಟಿನಿಂದ ಬೇರ್ಪಡಿಸುವದಕ್ಕಾಗಿ ಅದನ್ನು ಬಡಿಯುತ್ತಾರೆ.
ಬಾಬಿಲೋನಿನ ಸುಗ್ಗಿಕಾಲ (ವಿನಾಶ ಕಾಲ) ಹತ್ತಿರವಾಗುತ್ತಲಿದೆ.
34 “ಹಿಂದಿನ ಕಾಲದಲ್ಲಿ, ಬಾಬಿಲೋನಿನ ರಾಜನಾದ ನೆಬೂಕದ್ನೆಚ್ಚರನು ನಮ್ಮನ್ನು ಹಾಳುಮಾಡಿದನು;
ನಮ್ಮನ್ನು ಹಿಂಸಿಸಿದನು;
ನಮ್ಮ ಜನರನ್ನು ಸೆರೆ ಒಯ್ದನು.
ಆಗ ನಾವು ಒಂದು ಬರಿದಾದ ಪಾತ್ರೆಯಂತಾದೆವು.
ಅವನು ನಮ್ಮ ಎಲ್ಲಾ ಉತ್ತಮ ವಸ್ತುಗಳನ್ನು ತೆಗೆದುಕೊಂಡು ಹೋದನು.
ತನಗೆ ತೃಪ್ತಿಯಾಗುವವರೆಗೆ ಎಲ್ಲವನ್ನು ತಿಂದು ತೇಗಿದ ರಾಕ್ಷಸನಂತಿದ್ದನು.
ಅವನು ನಮ್ಮೆಲ್ಲ ಉತ್ಕೃಷ್ಠ ವಸ್ತುಗಳನ್ನು
ಕಿತ್ತುಕೊಂಡು ನಮ್ಮನ್ನು ದೂರ ಎಸೆದನು.
35 ನಮ್ಮನ್ನು ನೋಯಿಸಲು ಬಾಬಿಲೋನ್ ಭಯಂಕರ ಕೆಲಸವನ್ನು ಮಾಡಿತು.
ಈಗ ಬಾಬಿಲೋನಿಗೂ ಅಂಥಾ ಸ್ಥಿತಿ ಬರಲೆಂದು ನನ್ನ ಆಶೆ.”
ಚೀಯೋನ್ ನಿವಾಸಿಗಳು ಹೀಗೆಂದರು:
“ಬಾಬಿಲೋನಿನ ಜನರು ನಮ್ಮ ಜನರನ್ನು ಕೊಲ್ಲುವ ಪಾಪವನ್ನು ಮಾಡಿದ್ದಾರೆ.
ಈಗ ಅವರು ಮಾಡಿದ ದುಷ್ಕೃತ್ಯಗಳಿಗಾಗಿ ಅವರನ್ನು ಶಿಕ್ಷಿಸಲಾಗುತ್ತಿದೆ”
ಎಂದು ಜೆರುಸಲೇಮ್ ನಗರ ಹೇಳುವುದು.
36 ಯೆಹೋವನು ಹೀಗೆನ್ನುವನು:
“ಯೆಹೂದವೇ, ನಾನು ನಿನ್ನನ್ನು ರಕ್ಷಿಸುವೆನು.
ನಿಶ್ಚಿತವಾಗಿ ಬಾಬಿಲೋನಿಗೆ ಶಿಕ್ಷೆ ಆಗುವಂತೆ ನಾನು ನೋಡಿಕೊಳ್ಳುತ್ತೇನೆ.
ನಾನು ಬಾಬಿಲೋನಿನ ಸಮುದ್ರವನ್ನು ಒಣಗಿಸಿಬಿಡುವೆನು.
ಅದರ ನೀರಿನ ಚಿಲುಮೆಗಳು ಬತ್ತುವಂತೆ ಮಾಡುತ್ತೇನೆ.
37 ಬಾಬಿಲೋನು ನಾಶವಾದ ಕಟ್ಟಡಗಳ ಗುಡ್ಡೆಯಾಗುವುದು.
ಬಾಬಿಲೋನು ಕಾಡುನಾಯಿಗಳ ನಿವಾಸವಾಗುವುದು.
ಜನರು ಕಲ್ಲುಬಂಡೆಗಳ ಗುಡ್ಡೆಯನ್ನು ನೋಡಿ ಆಶ್ಚರ್ಯಪಡುವರು.
ಬಾಬಿಲೋನಿನ ಬಗ್ಗೆ ಜನರು ತಲೆಯಾಡಿಸುವರು.
ಬಾಬಿಲೋನು ನಿರ್ಜನ ಪ್ರದೇಶವಾಗುವುದು.
38 “ಬಾಬಿಲೋನಿನ ಜನರು ಗರ್ಜಿಸುವ ಪ್ರಾಯದ ಸಿಂಹಗಳಂತಿದ್ದಾರೆ.
ಅವರು ಮರಿಸಿಂಹಗಳಂತೆ ಗುರುಗುಟ್ಟುವರು.
39 ಆ ಜನರು ಬಲಶಾಲಿಗಳಾದ ಸಿಂಹಗಳಂತೆ ವರ್ತಿಸುತ್ತಿದ್ದಾರೆ.
ನಾನು ಅವರಿಗೊಂದು ಔತಣವನ್ನೇರ್ಪಡಿಸುವೆನು.
ಅವರಿಗೆ ಮತ್ತೇರುವಂತೆ ಕುಡಿಸುವೆನು.
ಅವರು ನಗುನಗುತ್ತಾ ಸಂತೋಷದಿಂದ ಕಾಲ ಕಳೆಯುವರು.
ಆಮೇಲೆ ಅವರು ಶಾಶ್ವತವಾಗಿ ಮಲಗುವರು.
ಅವರು ಮತ್ತೆ ಏಳಲಾರರು.”
ಇದು ಯೆಹೋವನ ನುಡಿ.
40 “ನಾನು ಬಾಬಿಲೋನಿನ ಜನರನ್ನು ವಧೆಗಾಗಿ ತೆಗೆದುಕೊಂಡು ಹೋಗುವೆನು.
ಬಾಬಿಲೋನಿನ ಗತಿ ವಧೆಗಾಗಿ ತಂದ
ಕುರಿ, ಟಗರು ಮತ್ತು ಹೋತಗಳಂತೆ ಆಗುವುದು.
41 “ಶೇಷಕನು”[a] ಶತ್ರುಗಳ ವಶವಾಗುವನು.
ಲೋಕದಲ್ಲಿಯೇ ಅತ್ಯುತ್ತಮವಾದ ಮತ್ತು ಹೆಮ್ಮೆಪಡುವ ದೇಶವು ವೈರಿಗಳ ಕೈವಶವಾಗುವುದು.
ಬೇರೆ ಜನಾಂಗದ ಜನರು ಬಾಬಿಲೋನಿನ ಕಡೆಗೆ ನೋಡಿದಾಗ
ಅಲ್ಲಿನ ಸ್ಥಿತಿಗತಿಗಳನ್ನು ಕಂಡು ಭಯಪಡುವರು.
42 ಸಮುದ್ರವು ಬಾಬಿಲೋನಿನ ಮೇಲೆ ನುಗ್ಗುವುದು.
ಅದರ ಆರ್ಭಟಿಸುವ ತೆರೆಗಳು ಅದನ್ನು ಮುಚ್ಚಿಬಿಡುವವು.
43 ಬಾಬಿಲೋನಿನ ಪಟ್ಟಣಗಳು ಬರಿದಾದ ಊರುಗಳಾಗುವವು.
ಬಾಬಿಲೋನು ಮರುಭೂಮಿಯಾಗುವುದು.
ಅದು ನಿರ್ಜನವಾದ ನೆಲವಾಗುವುದು.
ಜನರು ಬಾಬಿಲೋನಿನ ಮೂಲಕ ಪ್ರಯಾಣ ಮಾಡಲಾಗದು.
44 ನಾನು ಬಾಬಿಲೋನಿನ ಬೇಲ್ ದೇವರನ್ನು ದಂಡಿಸುವೆನು.
ಅವನು ನುಂಗಿದ ಜನರನ್ನು ಅವನು ಕಕ್ಕುವಂತೆ ಮಾಡುವೆನು.
ಬೇರೆ ಜನಾಂಗಗಳು ಬಾಬಿಲೋನಿಗೆ ಬರಲಾರವು.
ಬಾಬಿಲೋನಿನ ಸುತ್ತಲಿನ ಗೋಡೆಯು ಬೀಳುವುದು.
45 ನನ್ನ ಜನರೇ, ಬಾಬಿಲೋನ್ ನಗರದಿಂದ ಹೊರಗೆ ಬನ್ನಿ.
ನಿಮ್ಮ ಪ್ರಾಣಗಳನ್ನು ಉಳಿಸಿಕೊಳ್ಳಲು ಓಡಿಹೋಗಿರಿ.
ಯೆಹೋವನ ಭಯಂಕರ ಕೋಪದಿಂದ ತಪ್ಪಿಸಿಕೊಳ್ಳಲು ಓಡಿಹೋಗಿರಿ.
46 “ನನ್ನ ಜನರೇ, ದುಃಖಿಸಬೇಡಿ,
ಸುದ್ದಿಗಳು ಹಬ್ಬುತ್ತವೆ. ಆದರೆ ಹೆದರಬೇಡಿ.
ಒಂದು ಸುದ್ದಿ ಈ ವರ್ಷ ಬರುವುದು.
ಮುಂದಿನ ವರ್ಷ ಮತ್ತೊಂದು ಸುದ್ದಿ ಬರಬಹುದು.
ದೇಶದಲ್ಲಿ ಭಯಂಕರವಾದ ಯುದ್ಧದ ಬಗ್ಗೆ ಸುದ್ದಿಗಳು ಕೇಳಿಬರುವವು.
ರಾಜರುಗಳು ಬೇರೆ ರಾಜರುಗಳೊಂದಿಗೆ ಯುದ್ಧ ಮಾಡುತ್ತಿರುವ ವದಂತಿಗಳು ಕೇಳಿಬರುವವು.
47 ನಾನು ಬಾಬಿಲೋನಿನ ಸುಳ್ಳುದೇವತೆಗಳನ್ನು ದಂಡಿಸುವ ಸಮಯ ಖಂಡಿತವಾಗಿ ಬರುವುದು.
ಬಾಬಿಲೋನಿನ ಇಡೀ ಪ್ರದೇಶವು ನಾಚಿಕೆಪಡುವುದು.
ನಗರದ ಬೀದಿಗಳಲ್ಲಿ
ಅನೇಕಾನೇಕ ಶವಗಳು ಬಿದ್ದಿರುವವು.
48 ಆಗ ಭೂಮ್ಯಾಕಾಶಗಳು ಮತ್ತು ಅವುಗಳಲ್ಲಿರುವ ಸಮಸ್ತ ವಸ್ತುಗಳು
ಬಾಬಿಲೋನಿನ ಬಗ್ಗೆ ಹರ್ಷಧ್ವನಿ ಮಾಡುವವು.
ಏಕೆಂದರೆ ಸೈನ್ಯವು ಉತ್ತರದಿಂದ ಬಂದಿತು,
ಬಾಬಿಲೋನಿನ ವಿರುದ್ಧ ಯುದ್ಧಮಾಡಿತು”
ಇದು ಯೆಹೋವನ ನುಡಿ.
49 “ಬಾಬಿಲೋನ್ ಇಸ್ರೇಲರನ್ನು ಕೊಂದಿತು.
ಬಾಬಿಲೋನ್ ಭೂಮಂಡಲದ ಎಲ್ಲೆಡೆಯ ಜನರನ್ನು ಕೊಂದಿತು.
ಅದಕ್ಕಾಗಿ ಬಾಬಿಲೋನ್ ಪತನವಾಗಲೇಬೇಕು.
50 ನೀವು ಖಡ್ಗಗಳಿಂದ ತಪ್ಪಿಸಿಕೊಂಡಿರಿ.
ನೀವು ಅವಸರ ಮಾಡಿ ಬಾಬಿಲೋನನ್ನು ಬಿಡಬೇಕು.
ತಡೆಯಬೇಡಿ,
ನೀವು ಬಹಳ ದೂರಪ್ರದೇಶದಲ್ಲಿ ಇದ್ದೀರಿ.
ಆದರೆ ನೀವು ಇರುವಲ್ಲಿಯೇ ಯೆಹೋವನನ್ನು ಸ್ಮರಿಸಿರಿ; ಜೆರುಸಲೇಮನ್ನೂ ಸ್ಮರಿಸಿಕೊಳ್ಳಿರಿ.
51 “ಯೆಹೂದದ ಜನರಾದ ನಾವು ನಾಚಿಕೆಪಟ್ಟೆವು.
ಜನರು ನಮ್ಮನ್ನು ಅಪಮಾನಗೊಳಿಸಿದ್ದರಿಂದ ನಾವು ನಾಚಿಕೆಪಟ್ಟಿದ್ದೇವೆ.
ಏಕೆಂದರೆ ಯೆಹೋವನ ಆಲಯದ
ಪವಿತ್ರ ಸ್ಥಳಗಳಲ್ಲಿ ಅಪರಿಚಿತರು ಪ್ರವೇಶಗೈದಿದ್ದಾರೆ.”
52 ಯೆಹೋವನು ಹೀಗೆನ್ನುವನು: “ಬಾಬಿಲೋನಿನ ವಿಗ್ರಹಗಳನ್ನು
ನಾನು ದಂಡಿಸುವ ಕಾಲ ಬರುತ್ತಿದೆ.
ಆಗ ಆ ದೇಶದಲ್ಲೆಲ್ಲಾ ಗಾಯಗೊಂಡ ಜನರು
ನೋವಿನಿಂದ ಗೋಳಾಡುವರು.
53 ಬಾಬಿಲೋನ್ ನಗರವು ಗಗನ ಚುಂಬಿಯಾಗಿ ಬೆಳೆಯಬಹುದು.
ಅದು ತನ್ನ ಕೋಟೆಗಳನ್ನು ಭದ್ರಪಡಿಸಿಕೊಳ್ಳಬಹುದು.
ಆದರೆ ಆ ನಗರದ ವಿರುದ್ಧ ಯುದ್ಧಮಾಡಲು ನಾನು ಜನರನ್ನು ಕಳುಹಿಸುತ್ತೇನೆ.
ಆ ಜನರು ಅದನ್ನು ನಾಶಮಾಡುವರು.”
ಇದು ಯೆಹೋವನ ನುಡಿ.
54 “ಬಾಬಿಲೋನಿನಲ್ಲಿ ಜನರು ರೋಧಿಸುವದನ್ನು ನಾವು ಕೇಳುವೆವು.
ಬಾಬಿಲೋನ್ ಪ್ರದೇಶದಲ್ಲಿ ವಸ್ತುಗಳನ್ನು ನಾಶಮಾಡುವ ಜನರ ಧ್ವನಿಯನ್ನು ನಾವು ಕೇಳುವೆವು.
55 ಯೆಹೋವನು ಬಾಬಿಲೋನನ್ನು ಬಹುಬೇಗನೆ ನಾಶಮಾಡುವನು.
ಆ ನಗರದ ದೊಡ್ಡ ಧ್ವನಿಗಳು ಶಾಂತವಾಗುವಂತೆ ಆತನು ಮಾಡುವನು.
ವೈರಿಗಳು ಸಾಗರದ ತರಂಗಮಾಲೆಗಳಂತೆ ಗರ್ಜಿಸುತ್ತಾ ಬರುವರು.
ಸುತ್ತಮುತ್ತಲಿನ ಜನರೆಲ್ಲರು ಆ ಗರ್ಜನೆಯನ್ನು ಕೇಳುವರು.
56 ಸೈನ್ಯವು ಬಂದು ಬಾಬಿಲೋನನ್ನು ನಾಶಮಾಡುವುದು.
ಬಾಬಿಲೋನಿನ ಸೈನಿಕರನ್ನು ವಶಪಡಿಸಿಕೊಳ್ಳಲಾಗುವುದು.
ಅವರ ಬಿಲ್ಲುಗಳನ್ನು ಮುರಿಯಲಾಗುವುದು.
ಏಕೆಂದರೆ ಯೆಹೋವನು ಜನರನ್ನು ಅವರು ಮಾಡುವ ದುಷ್ಕೃತ್ಯಗಳಿಗಾಗಿ ಶಿಕ್ಷಿಸುತ್ತಾನೆ.
ಯೆಹೋವನು ಅವರಿಗೆ ತಕ್ಕ ಶಿಕ್ಷೆಯನ್ನು ಸಂಪೂರ್ಣವಾಗಿ ಕೊಡುತ್ತಾನೆ.
57 ಬಾಬಿಲೋನಿನ ಮುಖ್ಯ ಅಧಿಕಾರಿಗಳಿಗೂ
ಪಂಡಿತರಿಗೂ ದ್ರಾಕ್ಷಾರಸ ಕುಡಿಯುವಂತೆ ಮಾಡುತ್ತೇನೆ.
ಅಲ್ಲಿಯ ಅಧಿಪತಿಗಳಿಗೂ ಅಧಿಕಾರಿಗಳಿಗೂ ಸೈನಿಕರಿಗೂ ದ್ರಾಕ್ಷಾರಸ ಕುಡಿಸುತ್ತೇನೆ.
ಆಮೇಲೆ ಅವರು ಶಾಶ್ವತವಾಗಿ ಮಲಗಿಬಿಡುತ್ತಾರೆ.
ಅವರು ಎಚ್ಚರಗೊಳ್ಳುವುದೇ ಇಲ್ಲ.”
ಸರ್ವಶಕ್ತನಾದ ಯೆಹೋವನೆಂಬ
ನಾಮಧೇಯದ ರಾಜಾಧಿರಾಜನ ನುಡಿಯಿದು.
58 ಸರ್ವಶಕ್ತನಾದ ಯೆಹೋವನು ಹೀಗೆನ್ನುವನು:
“ಬಾಬಿಲೋನಿನ ಅಗಲವಾದ ಮತ್ತು ಸುಭದ್ರವಾದ ಗೋಡೆಯನ್ನು ಬೀಳಿಸಲಾಗುವುದು.
ಅದರ ಎತ್ತರವಾದ ಬಾಗಿಲುಗಳನ್ನು ಸುಟ್ಟುಹಾಕಲಾಗುವುದು.
ಬಾಬಿಲೋನಿನ ಜನರು ನಗರವನ್ನು ರಕ್ಷಿಸಲು ಬಹಳ ಕಷ್ಟಪಡುವರು.
ಆದರೆ ಅದು ನಿಷ್ಪ್ರಯೋಜಕವಾಗುವುದು.
ನಗರವನ್ನು ರಕ್ಷಿಸುವ ಪ್ರಯತ್ನದಲ್ಲಿ ಅವರು ತುಂಬಾ ಶ್ರಮವಹಿಸುವರು.
ಆದರೆ ಅವರು ಕೇವಲ ಅಗ್ನಿಗೆ ಆಹುತಿಯಾಗುವರು.”
ಬಾಬಿಲೋನಿಗೆ ಯೆರೆಮೀಯನ ಸಂದೇಶ
59 ಯೆರೆಮೀಯನು ಸೆರಾಯ ಎಂಬ ಅಧಿಕಾರಿಯ ಕೈಗೆ ಕೊಟ್ಟ ಸಂದೇಶವಿದು. ಸೆರಾಯನು ಯೆಹೂದದ ನೇರೀಯನ ಮಗ. ನೇರೀಯನು ಮಹ್ಸೇಯನ ಮಗನು. ಸೆರಾಯನು ಯೆಹೂದದ ರಾಜನಾದ ಚಿದ್ಕೀಯನ ಜೊತೆಗೆ ಬಾಬಿಲೋನಿಗೆ ಹೋದನು. ಈ ಸಂಗತಿ ಯೆಹೂದದಲ್ಲಿ ಚಿದ್ಕೀಯನ ಆಳ್ವಿಕೆಯ ನಾಲ್ಕನೇ ವರ್ಷದಲ್ಲಿ ನಡೆದದ್ದು. ಆ ಸಮಯದಲ್ಲಿ ಯೆರೆಮೀಯನು ಸೆರಾಯನೆಂಬ ಅಧಿಕಾರಿಯ ಕೈಗೆ ಈ ಸಂದೇಶವನ್ನು ಕೊಟ್ಟನು. 60 ಬಾಬಿಲೋನಿಗೆ ಉಂಟಾಗುವ ಎಲ್ಲಾ ಕೇಡನ್ನು ಯೆರೆಮೀಯನು ಒಂದು ಸುರಳಿಯಲ್ಲಿ ಬರೆದಿದ್ದನು. ಅವನು ಬಾಬಿಲೋನಿನ ಬಗ್ಗೆ ಈ ವಿಷಯಗಳನ್ನೆಲ್ಲ ಬರೆದಿದ್ದನು.
61 ಯೆರೆಮೀಯನು ಸೆರಾಯನಿಗೆ ಹೀಗೆ ಹೇಳಿದನು: “ಸೆರಾಯನೇ, ಬಾಬಿಲೋನಿಗೆ ಹೋಗು. ಎಲ್ಲರಿಗೂ ಕೇಳಿಸುವಂತೆ ಈ ಸಂದೇಶವನ್ನು ಖಂಡಿತವಾಗಿ ಓದು. 62 ಆಮೇಲೆ ಹೀಗೆ ಹೇಳು: ‘ಯೆಹೋವನೇ, ಬಾಬಿಲೋನ್ ನಗರವನ್ನು ನಾಶಮಾಡುವೆನೆಂದು ನೀನು ಹೇಳಿರುವೆ. ಪ್ರಾಣಿಗಳು ಅಥವಾ ಮನುಷ್ಯರು ಯಾರೂ ಇಲ್ಲಿ ವಾಸಮಾಡದಂತೆ, ಇದು ಎಂದೆಂದಿಗೂ ಹಾಳುಬಿದ್ದ ಸ್ಥಳವಾಗಿರುವಂತೆ ಇದನ್ನು ನಾಶಮಾಡುವದಾಗಿ ಹೇಳಿರುವೆ.’ 63 ಈ ಸುರುಳಿಯನ್ನು ಓದಿಮುಗಿಸಿದ ಮೇಲೆ ಅದಕ್ಕೊಂದು ಕಲ್ಲನ್ನು ಕಟ್ಟಿ ಆ ಕಾಗದದ ಸುರುಳಿಯನ್ನು ಯೂಫ್ರೇಟೀಸ್ ನದಿಯಲ್ಲಿ ಎಸೆದುಬಿಡು. 64 ಆಮೇಲೆ ‘ಇದೇ ರೀತಿಯಲ್ಲಿ ಬಾಬಿಲೋನ್ ಕೂಡ ಮುಳುಗಿಹೋಗುವುದು. ಬಾಬಿಲೋನ್ ಎಂದಿಗೂ ಮೇಲಕ್ಕೆ ಏಳುವದಿಲ್ಲ. ಅಲ್ಲಿ ನಾನು ಬರಮಾಡುವ ಅನೇಕ ವಿಪತ್ತುಗಳಿಂದಾಗಿ ಬಾಬಿಲೋನ್ ಮುಳುಗಿಹೋಗುವುದು’” ಎಂದು ಹೇಳು.
ಯೆರೆಮೀಯನ ಸಂದೇಶ ಇಲ್ಲಿಗೆ ಮುಗಿಯುತ್ತದೆ.
ಜೆರುಸಲೇಮಿನ ಪತನ
52 ಚಿದ್ಕೀಯನು ಯೆಹೂದದ ರಾಜನಾದಾಗ ಇಪ್ಪತ್ತೊಂದು ವರ್ಷದವನಾಗಿದ್ದನು. ಚಿದ್ಕೀಯನು ಜೆರುಸಲೇಮಿನಲ್ಲಿ ಹನ್ನೊಂದು ವರ್ಷ ಆಳಿದನು. ಅವನ ತಾಯಿಯ ಹೆಸರು ಹಮೂಟಲ್. ಈಕೆ ಯೆರೆಮೀಯನ[b] ಮಗಳು. ಹಮೂಟಲಳ ಮನೆತನದವರು ಲಿಬ್ನ ಪಟ್ಟಣದ ನಿವಾಸಿಗಳಾಗಿದ್ದರು. 2 ರಾಜನಾದ ಯೆಹೋಯಾಕೀಮನು ಮಾಡಿದಂತೆ ಚಿದ್ಕೀಯನು ದುಷ್ಕೃತ್ಯಗಳನ್ನು ಮಾಡಿದನು. ಚಿದ್ಕೀಯನು ಆ ದುಷ್ಕೃತ್ಯಗಳನ್ನು ಮಾಡಿದ್ದು ಯೆಹೋವನಿಗೆ ಒಪ್ಪಿಗೆಯಾಗಲಿಲ್ಲ. 3 ಯೆಹೋವನಿಗೆ ಅವರ ಮೇಲೆ ಕೋಪ ಬಂದುದರಿಂದ ಜೆರುಸಲೇಮ್ ಮತ್ತು ಯೆಹೂದಗಳಿಗೆ ವಿಪತ್ತುಗಳು ಸಂಭವಿಸಿದವು. ಕೊನೆಗೆ, ಯೆಹೋವನು ಜೆರುಸಲೇಮ್ ಮತ್ತು ಯೆಹೂದದ ಜನರನ್ನು ತನ್ನಿದ ದೂರ ಎಸೆದುಬಿಟ್ಟನು.
ಚಿದ್ಕೀಯನು ಬಾಬಿಲೋನ್ ರಾಜನ ವಿರುದ್ಧವಾಗಿ ದಂಗೆ ಎದ್ದನು. 4 ಆದ್ದರಿಂದ ಚಿದ್ಕೀಯನು ತನ್ನ ಆಳ್ವಿಕೆಯ ಒಂಭತ್ತನೆಯ ವರ್ಷದ ಹತ್ತನೆಯ ತಿಂಗಳಿನ ಹತ್ತನೆಯ ದಿನ[c] ಬಾಬಿಲೋನಿನ ರಾಜನಾದ ನೆಬೂಕದ್ನೆಚ್ಚರನು ಜೆರುಸಲೇಮಿನ ವಿರುದ್ಧ ದಂಡಯಾತ್ರೆ ಕೈಗೊಂಡನು. ನೆಬೂಕದ್ನೆಚ್ಚರನ ಸಂಗಡ ಅವನ ಇಡೀ ಸೈನ್ಯವಿತ್ತು. ಬಾಬಿಲೋನ್ ಸೈನ್ಯವು ಜೆರುಸಲೇಮಿನ ಹೊರಭಾಗದಲ್ಲಿ ಬೀಡುಬಿಟ್ಟಿತು. ಆ ನಗರವನ್ನು ಹತ್ತಲು ಅನುಕೂಲವಾಗುವಂತೆ ಅವರು ನಗರದ ಪೌಳಿಗೋಡೆಗೆ ಅಲ್ಲಲ್ಲಿ ಇಳಿಜಾರಾದ ಗೋಡೆಗಳನ್ನು ಕಟ್ಟಿದ್ದರು. 5 ಚಿದ್ಕೀಯನ ಆಳ್ವಿಕೆಯ ಹನ್ನೊಂದನೇ ವರ್ಷದವರೆಗೆ ಬಾಬಿಲೋನಿನ ಸೈನ್ಯವು ಜೆರುಸಲೇಮ್ ನಗರವನ್ನು ಮುತ್ತಿಗೆ ಹಾಕಿತ್ತು. 6 ಆ ವರ್ಷದ ನಾಲ್ಕನೆ ತಿಂಗಳಿನ ಒಂಭತ್ತನೆ ದಿನದವರೆಗೆ ಆ ನಗರದಲ್ಲಿ ಹಸಿವಿನ ಹಾವಳಿ ತುಂಬ ಹೆಚ್ಚಾಗಿತ್ತು. ಆ ನಗರದಲ್ಲಿ ಜನರಿಗೆ ತಿನ್ನಲು ಆಹಾರವೇ ಇರಲಿಲ್ಲ. 7 ಆ ದಿನ ಬಾಬಿಲೋನಿನ ಸೈನ್ಯವು ಜೆರುಸಲೇಮಿನಲ್ಲಿ ನುಗ್ಗಿತ್ತು. ಜೆರುಸಲೇಮಿನ ಸೈನಿಕರು ಓಡಿಹೋದರು. ಅವರು ರಾತ್ರಿಯ ಸಮಯದಲ್ಲಿ ಎರಡು ಗೋಡೆಗಳ ಮಧ್ಯದ ಬಾಗಿಲಿನಿಂದ ನಗರದಿಂದ ಓಡಿಹೋದರು. ಆ ಬಾಗಿಲು ರಾಜನ ಉದ್ಯಾನವನದ ಹತ್ತಿರ ಇತ್ತು. ಬಾಬಿಲೋನಿನ ಸೈನಿಕರು ಜೆರುಸಲೇಮ್ ನಗರವನ್ನು ಮುತ್ತಿದ್ದರೂ ಜೆರುಸಲೇಮಿನ ಸೈನಿಕರು, ಮರುಭೂಮಿಯ ಕಡೆಗೆ ಓಡಿಹೋದರು.
8 ಬಾಬಿಲೋನಿನ ಸೈನಿಕರು ರಾಜನಾದ ಚಿದ್ಕೀಯನನ್ನು ಬೆನ್ನಟ್ಟಿದರು. ಅವರು ಅವನನ್ನು ಜೆರಿಕೊವಿನ ಬಯಲಿನಲ್ಲಿ ಹಿಡಿದರು. ಚಿದ್ಕೀಯನ ಎಲ್ಲಾ ಸೈನಿಕರು ಓಡಿಹೋದರು. 9 ಬಾಬಿಲೋನಿನ ಸೈನಿಕರು ರಾಜನಾದ ಚಿದ್ಕೀಯನನ್ನು ಬಂಧಿಸಿ ಅವನನ್ನು ರಿಬ್ಲದಲ್ಲಿದ್ದ ತಮ್ಮ ರಾಜನ ಬಳಿಗೆ ಹಿಡಿದುಕೊಂಡು ಹೋದರು. ರಿಬ್ಲವು ಹಮಾತ್ ಪ್ರದೇಶದಲ್ಲಿದೆ. ರಿಬ್ಲದಲ್ಲಿ ಬಾಬಿಲೋನಿನ ರಾಜನು ಚಿದ್ಕೀಯನ ಬಗ್ಗೆ ತನ್ನ ತೀರ್ಪನ್ನು ಪ್ರಕಟಪಡಿಸಿದನು. 10 ರಿಬ್ಲ ನಗರದಲ್ಲಿ ಬಾಬೆಲಿನ ರಾಜನು ಚಿದ್ಕೀಯನ ಮಕ್ಕಳನ್ನು ಸಂಹರಿಸಿದನು. ಚಿದ್ಕೀಯನು ತನ್ನ ಮಕ್ಕಳ ಕೊಲೆಯನ್ನು ಕಣ್ಣಾರೆ ನೋಡುವಂತೆ ಮಾಡಲಾಯಿತು. ಬಾಬಿಲೋನಿನ ರಾಜನು ಯೆಹೂದದ ರಾಜನ ಎಲ್ಲಾ ಅಧಿಕಾರಿಗಳನ್ನು ಸಹ ಕೊಲ್ಲಿಸಿದನು. 11 ತರುವಾಯ ಬಾಬಿಲೋನಿನ ರಾಜನು ಚಿದ್ಕೀಯನ ಕಣ್ಣುಗಳನ್ನು ಸಹ ಕೀಳಿಸಿದನು. ಅವನಿಗೆ ಕಂಚಿನ ಸರಪಳಿಗಳನ್ನು ಬಿಗಿಸಿದನು. ಆಮೇಲೆ ಚಿದ್ಕೀಯನನ್ನು ಬಾಬಿಲೋನಿಗೆ ತೆಗೆದುಕೊಂಡು ಹೋದನು. ಬಾಬಿಲೋನಿನಲ್ಲಿ ಚಿದ್ಕೀಯನನ್ನು ಸೆರೆಮನೆಯಲ್ಲಿ ಇಟ್ಟನು. ಚಿದ್ಕೀಯನು ಸಾಯುವವರೆಗೆ ಸೆರೆಮನೆಯಲ್ಲಿದ್ದನು.
12 ನೆಬೂಕದ್ನೆಚ್ಚರನ ಆಳ್ವಿಕೆಯ ಹತ್ತೊಂಭತ್ತನೆ ವರ್ಷದ ಐದನೆ ತಿಂಗಳಿನ ಹತ್ತನೆ ದಿನ ಬಾಬಿಲೋನಿನ ವಿಶೇಷ ರಕ್ಷಕದಳದ ಅಧಿಪತಿಯಾದ ನೆಬೂಜರದಾನನು ಜೆರುಸಲೇಮಿಗೆ ಬಂದನು. ನೆಬೂಜರದಾನನು ಬಾಬಿಲೋನಿನ ಒಬ್ಬ ಪ್ರಮುಖ ವ್ಯಕ್ತಿಯಾಗಿದ್ದನು. 13 ನೆಬೂಜರದಾನನು ಯೆಹೋವನ ಆಲಯವನ್ನು ಸುಟ್ಟನು. ಅವನು ಜೆರುಸಲೇಮಿನಲ್ಲಿದ್ದ ಅರಮನೆಯನ್ನು ಮತ್ತು ಉಳಿದೆಲ್ಲ ಮನೆಗಳನ್ನು ಸುಟ್ಟುಬಿಟ್ಟನು. ಅವನು ಜೆರುಸಲೇಮಿನ ಎಲ್ಲಾ ಮುಖ್ಯ ಕಟ್ಟಡಗಳನ್ನು ಸುಟ್ಟುಹಾಕಿದನು. 14 ಬಾಬಿಲೋನಿನ ಇಡೀ ಸೈನ್ಯವು ಜೆರುಸಲೇಮಿನ ಪೌಳಿಗೋಡೆಯನ್ನು ಒಡೆದುಹಾಕಿತು. ಆ ಸೈನ್ಯವು ರಾಜನ ವಿಶೇಷ ರಕ್ಷಕದಳದ ಅಧಿಪತಿಯ ಅಧಿನದಲ್ಲಿತ್ತು. 15 ಸೇನಾಧಿಪತಿಯಾದ ನೆಬೂಜರದಾನನು ಜೆರುಸಲೇಮಿನಲ್ಲಿ ಇನ್ನೂ ಉಳಿದುಕೊಂಡಿದ್ದ ಜನರನ್ನು ಬಂಧಿಗಳನ್ನಾಗಿ ಮಾಡಿಕೊಂಡನು. ಈ ಮುಂಚೆ ಬಾಬಿಲೋನಿನ ರಾಜನಿಗೆ ಶರಣಾಗತರಾದವರನ್ನು ಸಹ ಅವನು ತೆಗೆದುಕೊಂಡು ಹೋದನು. ಜೆರುಸಲೇಮಿನಲ್ಲಿ ಉಳಿದ ಕುಶಲಕರ್ಮಿಗಳನ್ನು ಸಹ ಅವನು ತೆಗೆದುಕೊಂಡು ಹೋದನು. 16 ಆದರೆ ಕೆಲವು ಕಡುಬಡವರನ್ನು ನೆಬೂಜರದಾನನು ಆ ಪ್ರದೇಶದಲ್ಲಿಯೇ ಬಿಟ್ಟುಹೋದನು. ಅವನು ಆ ಜನರನ್ನು ದ್ರಾಕ್ಷಿತೋಟಗಳಲ್ಲಿ ಮತ್ತು ಹೊಲಗಳಲ್ಲಿ ಕೆಲಸ ಮಾಡಲು ಬಿಟ್ಟುಹೋದನು.
17 ಬಾಬಿಲೋನಿನ ಸೈನಿಕರು ಪವಿತ್ರಾಲಯದ ಕಂಚಿನ ಕಂಬಗಳನ್ನು ಮುರಿದರು. ಅವರು ಯೆಹೋವನ ಆಲಯದಲ್ಲಿದ್ದ ಪೀಠಗಳನ್ನು ಮತ್ತು ಕಂಚಿನ ಸರೋವರಗಳನ್ನು ಸಹ ಮುರಿದುಬಿಟ್ಟರು. ಅವರು ಎಲ್ಲಾ ಕಂಚಿನ ವಸ್ತುಗಳನ್ನು ಬಾಬಿಲೋನಿಗೆ ತೆಗೆದುಕೊಂಡು ಹೋದರು. 18 ಬಾಬಿಲೋನಿನ ಸೈನಿಕರು ಪವಿತ್ರಾಲಯದಿಂದ ಪಾತ್ರೆಗಳು, ಸಲಿಕೆಗಳು, ಕತ್ತರಿಗಳು, ದೊಡ್ಡ ಬೋಗುಣಿಗಳು, ತಟ್ಟೆಗಳು ಮತ್ತು ಪವಿತ್ರಾಲಯದ ಸೇವೆಗಾಗಿ ಉಪಯೋಗಿಸಲಾಗುವ ಕಂಚಿನ ಸಾಮಾನುಗಳನ್ನು ಬಾಬಿಲೋನಿಗೆ ತೆಗೆದುಕೊಂಡು ಹೋದರು. 19 ರಾಜನ ವಿಶೇಷ ರಕ್ಷಕದಳದ ಅಧಿಪತಿಯು ಬೋಗುಣಿಗಳನ್ನು, ಧೂಪಾರತಿಗಳನ್ನು, ದೊಡ್ಡ ಬಟ್ಟಲುಗಳನ್ನು, ಪಾತ್ರೆಗಳನ್ನು, ದೀಪಸ್ತಂಭಗಳನ್ನು, ತಟ್ಟೆಗಳನ್ನು, ಪಾನನೈವೇದ್ಯಕ್ಕೆ ಉಪಯೋಗಿಸುವ ಬೋಗುಣಿಗಳನ್ನು ತೆಗೆದುಕೊಂಡು ಹೋದನು. ಚಿನ್ನ ಅಥವಾ ಬೆಳ್ಳಿಯ ಪ್ರತಿಯೊಂದು ವಸ್ತುವನ್ನು ಅವನು ತೆಗೆದುಕೊಂಡನು. 20 ಎರಡು ಕಂಬಗಳು, ಸಮುದ್ರವೆನಿಸಿಕೊಂಡ ಪಾತ್ರೆಯು, ಅದನ್ನು ಹೊತ್ತುಕೊಂಡಿರುವ ಹನ್ನೆರಡು ಕಂಚಿನ ಹೋರಿಗಳು ಮತ್ತು ಚಲಿಸಬಲ್ಲ ಅಡ್ಡಣಿಗಳು ಬಹಳ ಭಾರವಾಗಿದ್ದವು. ರಾಜನಾದ, ಸೊಲೊಮೋನನು ಯೆಹೋವನ ಆಲಯಕ್ಕೋಸ್ಕರ ಆ ವಸ್ತುಗಳನ್ನು ಮಾಡಿಸಿದ್ದನು. ಆ ವಸ್ತುಗಳಿಗಾಗಿ ಉಪಯೋಗಿಸಲಾದ ಕಂಚು ತೂಕ ಮಾಡಲಾರದಷ್ಟು ಭಾರವಾಗಿತ್ತು.
21 ಪ್ರತಿಯೊಂದು ಕಂಚಿನ ಕಂಬ ಇಪ್ಪತ್ತೇಳು ಅಡಿ ಎತ್ತರವಾಗಿದ್ದು ಅದರ ಸುತ್ತಳತೆ ಹದಿನೆಂಟು ಅಡಿ ಇತ್ತು. ಪ್ರತಿಯೊಂದು ಕಂಬ ಟೊಳ್ಳಾಗಿದ್ದು ಅದರ ತಗಡು ನಾಲ್ಕು ಅಂಗುಲ ದಪ್ಪವಾಗಿತ್ತು. 22 ಮೊದಲನೇ ಕಂಬದ ಮೇಲೆ ಏಳುವರೆ ಅಡಿ ಎತ್ತರದ ಕಂಚಿನ ಕಂಬವಿತ್ತು. ಅದು ಅಲ್ಲಲ್ಲಿ ಜಾಲರಿಗಳಿಂದ ಮತ್ತು ಕಂಚಿನ ದಾಳಿಂಬೆಗಳಿಂದ ಅಲಂಕೃತವಾಗಿತ್ತು. ಎರಡನೆಯ ಕಂಬದಲ್ಲಿಯೂ ದಾಳಿಂಬೆಗಳು ಶೋಭಿಸುತ್ತಿದ್ದವು. ಅದು ಮೊದಲನೆ ಕಂಬದಂತೆ ಇತ್ತು. 23 ಕಂಬಗಳ ಪಕ್ಕದಲ್ಲಿ ತೊಂಭತ್ತಾರು ದಾಳಿಂಬೆಗಳಿದ್ದವು. ಜಾಲರಿಯ ಮೇಲೆ ಸುತ್ತಲೂ ಒಟ್ಟಾಗಿ ನೂರು ದಾಳಿಂಬೆ ಹಣ್ಣುಗಳಿದ್ದವು.
24 ರಾಜನ ವಿಶೇಷ ರಕ್ಷಕದಳದ ಅಧಿಪತಿಯು ಸೆರಾಯ ಮತ್ತು ಚೆಫನ್ಯರನ್ನು ಸೆರೆಹಿಡಿದನು. ಸೆರಾಯನು ಮಹಾ ಯಾಜಕನಾಗಿದ್ದನು ಮತ್ತು ಚೆಫನ್ಯನು ಅವರ ತರುವಾಯದ ಶ್ರೇಷ್ಠ ಯಾಜಕನಾಗಿದ್ದನು. ಮೂರು ಜನ ದ್ವಾರಪಾಲಕರನ್ನು ಕೂಡ ಸೆರೆಹಿಡಿಯಲಾಯಿತು. 25 ರಾಜನ ವಿಶೇಷ ರಕ್ಷಕದಳದ ಅಧಿಪತಿಯು ಸೈನ್ಯದ ವ್ಯವಸ್ಥಾಪಕನ ಅಧಿಕಾರಿಯನ್ನು ಬಂಧಿಸಿದನು. ಅವನು ರಾಜನ ಏಳು ಜನ ಆಪ್ತ ಮಂತ್ರಿಗಳನ್ನು ಸಹ ಸೆರೆಹಿಡಿದನು. ಅವರೆಲ್ಲ ಇನ್ನೂ ಜೆರುಸಲೇಮಿನಲ್ಲಿದ್ದರು. ಯುದ್ಧಕ್ಕೆ ಹೋಗುವವರ ಪಟ್ಟಿಯನ್ನು ಮಾಡುವ ಲಿಪಿಗಾರನನ್ನು ಸಹ ಅವನು ಸೆರೆಹಿಡಿದನು. ನಗರದಲ್ಲಿದ್ದ ಅರವತ್ತು ಮಂದಿ ಜನಸಾಮಾನ್ಯರನ್ನು ಸಹ ಅವನು ಸೆರೆಹಿಡಿದನು. 26-27 ಸೇನಾಧಿಪತಿಯಾದ ನೆಬೂಜರದಾನನು ಆ ಜನರನ್ನೆಲ್ಲ ಸೆರೆಹಿಡಿದನು. ಬಾಬಿಲೋನಿನ ರಾಜನಲ್ಲಿಗೆ ತಂದನು. ಬಾಬಿಲೋನಿನ ರಾಜನು ರಿಬ್ಲ ನಗರದಲ್ಲಿದ್ದನು. ರಿಬ್ಲ ನಗರವು ಹಮಾತ್ ಪ್ರದೇಶದಲ್ಲಿದೆ. ಆ ರಿಬ್ಲ ನಗರದಲ್ಲಿಯೇ ರಾಜನು ಅವರನ್ನೆಲ್ಲ ವಧಿಸಬೇಕೆಂದು ಅಪ್ಪಣೆ ಮಾಡಿದನು. ಯೆಹೂದದ ಜನರನ್ನು ಅವರ ದೇಶದಿಂದ ತೆಗೆದುಕೊಂಡು ಹೋಗಲಾಯಿತು. 28 ನೆಬೂಕದ್ನೆಚ್ಚರನು ಸೆರೆಹಿಡಿದುಕೊಂಡವರ ವಿವರ ಹೀಗಿದೆ:
ರಾಜನಾದ ನೆಬೂಕದ್ನೆಚ್ಚರನ ಆಳ್ವಿಕೆಯ ಏಳನೇ ವರ್ಷದಲ್ಲಿ[d] ಯೆಹೂದದಿಂದ ಒಯ್ಯಲ್ಪಟ್ಟ ಜನರು 3,023.
29 ನೆಬೂಕದ್ನೆಚ್ಚರನ ಹದಿನೆಂಟನೇ ವರ್ಷದಲ್ಲಿ[e] ಜೆರುಸಲೇಮಿನಿಂದ 832.
30 ನೆಬೂಕದ್ನೆಚ್ಚರನ ಇಪ್ಪತ್ಮೂರನೇ ವರ್ಷದಲ್ಲಿ[f] ನೆಬೂಜರದಾನನು 745 ಜನ ಯೆಹೂದಿಯರನ್ನು ಸೆರೆಹಿಡಿದನು. ನೆಬೂಜರದಾನನು ರಾಜನ ವಿಶೇಷ ರಕ್ಷಕದಳದ ಅಧಿಪತಿಯಾಗಿದ್ದನು.
ಒಟ್ಟಿನಲ್ಲಿ 4,600 ಜನರನ್ನು ಸೆರೆಹಿಡಿಯಲಾಗಿತ್ತು.
ಯೆಹೋಯಾಖೀನನ ಬಿಡುಗಡೆ
31 ಯೆಹೂದದ ರಾಜನಾಗಿದ್ದ ಯೆಹೋಯಾಖೀನನು ಮೂವತ್ತೇಳು ವರ್ಷ ಬಾಬಿಲೋನಿನ ಸೆರೆಮನೆಯಲ್ಲಿದ್ದನು. ಆತನ ಕಾರಾಗೃಹವಾಸದ ಮೂವತ್ತೇಳನೇ ವರ್ಷದಲ್ಲಿ ಬಾಬಿಲೋನಿನ ರಾಜನಾದ ಎವೀಲ್ಮೆರೋದಕನು ಯೆಹೋಯಾಖೀನನ ಮೇಲೆ ದಯೆತೋರಿದನು. ಆ ವರ್ಷ ಅವನು ಯೆಹೋಯಾಖೀನನನ್ನು ಸೆರೆಮನೆಯಿಂದ ಬಿಡುಗಡೆ ಮಾಡಿದನು. ಇದೇ ವರ್ಷ ಎವೀಲ್ಮೆರೋದಕನು ಯೆಹೋಯಾಖೀನನನ್ನು ಆ ವರ್ಷದ ಹನ್ನೆರಡನೆ ತಿಂಗಳಿನ ಇಪ್ಪತ್ತೈದನೆ ದಿನ ಬಿಡುಗಡೆ ಮಾಡಿದನು. 32 ಎವೀಲ್ಮೆರೋದಕನು ಯೆಹೋಯಾಖೀನನೊಂದಿಗೆ ಪ್ರೀತಿಯಿಂದ ಮಾತನಾಡಿದನು. ಅವನು ತನ್ನ ಸಂಗಡ ಬಾಬಿಲೋನಿನಲ್ಲಿದ್ದ ಎಲ್ಲಾ ರಾಜರುಗಳಿಗಿಂತ ಉನ್ನತಸ್ಥಾನವನ್ನು ಯೆಹೋಯಾಖೀನನಿಗೆ ಕೊಟ್ಟನು. 33 ಯೆಹೋಯಾಖೀನನು ತನ್ನ ಸೆರೆಮನೆಯ ಬಟ್ಟೆಗಳನ್ನು ತೆಗೆದುಹಾಕಿದನು. ಅವನು ಬದುಕಿರುವವರೆಗೂ ರಾಜನ ಪಂಕ್ತಿಯಲ್ಲಿ ಊಟಮಾಡುತ್ತಿದ್ದನು. 34 ಪ್ರತಿದಿನ ಬಾಬಿಲೋನಿನ ರಾಜನು ಯೆಹೋಯಾಖೀನನಿಗೆ ಭತ್ಯವನ್ನು ಕೊಡುತ್ತಿದ್ದನು. ಯೆಹೋಯಾಖೀನನು ಸಾಯುವವರೆಗೆ ಈ ಕ್ರಮ ಮುಂದುವರೆಯಿತು.
ಹಳೆಯ ಒಡಂಬಡಿಕೆಯ ಕ್ರಮಕ್ಕನುಸಾರವಾದ ಆರಾಧನೆ
9 ಮೊದಲನೆ ಒಡಂಬಡಿಕೆಯಲ್ಲಿ ಆರಾಧನೆಯ ನಿಯಮಗಳಿದ್ದವು. ಅದರಲ್ಲಿ ಮಾನವನಿರ್ಮಿತವಾದ ಆರಾಧನಾ ಸ್ಥಳವಿತ್ತು. 2 ಈ ಸ್ಥಳವು ಗುಡಾರದ ಒಳಗಿತ್ತು. ಗುಡಾರದ ಮೊದಲ ಆವರಣವನ್ನು ಪವಿತ್ರ ಸ್ಥಳವೆಂದು ಕರೆಯುತ್ತಿದ್ದರು. ಪವಿತ್ರ ಸ್ಥಳದಲ್ಲಿ ದೀಪಸ್ತಂಭ, ಮೇಜು ಮತ್ತು ದೇವರಿಗೆ ಅರ್ಪಿಸಲ್ಪಟ್ಟ ರೊಟ್ಟಿಗಳಿದ್ದವು. 3 ಎರಡನೆ ತೆರೆಯ ಹಿಂದೆ “ಮಹಾ ಪವಿತ್ರಸ್ಥಳ”ವೆಂದು ಕರೆಸಿಕೊಳ್ಳುವ ಒಂದು ಕೊಠಡಿಯಿತ್ತು. 4 ಮಹಾ ಪವಿತ್ರಸ್ಥಳದಲ್ಲಿ ಧೂಪವನ್ನು ಸುಡುವುದಕ್ಕಾಗಿ ಬಂಗಾರದ ಯಜ್ಞವೇದಿಕೆಯಿತ್ತು. ಅಲ್ಲದೆ ಮೊದಲನೆ ಒಡಂಬಡಿಕೆಯನ್ನು ಇಡಲಾಗಿದ್ದ ಪವಿತ್ರ ಪೆಟ್ಟಿಗೆಯಿತ್ತು. ಅದಕ್ಕೆ ಚಿನ್ನದ ತಗಡನ್ನು ಹೊದಿಸಲಾಗಿತ್ತು. ಅದರ ಒಳಗಡೆ ಚಿನ್ನದ ಪಾತ್ರೆಯಲ್ಲಿಟ್ಟಿದ್ದ ಮನ್ನಾ ಮತ್ತು ಒಂದಾನೊಂದು ಕಾಲದಲ್ಲಿ ಚಿಗುರಿ ಎಲೆಗಳನ್ನು ಬಿಟ್ಟಿದ್ದ ಆರೋನನ ಕೋಲು ಇದ್ದವು. ಅಲ್ಲದೆ ಆ ಮೊದಲನೆ ಒಡಂಬಡಿಕೆಯ ಹತ್ತು ಆಜ್ಞೆಗಳನ್ನು ಬರೆಯಲಾಗಿದ್ದ ಕಲ್ಲಿನ ಹಲಗೆಗಳನ್ನು ಅದರಲ್ಲಿ ಇಡಲಾಗಿತ್ತು. 5 ಆ ಪೆಟ್ಟಿಗೆಯ ಮೇಲ್ಗಡೆ ದೇವರ ವೈಭವವನ್ನು ತೋರ್ಪಡಿಸುವ ಕೆರೂಬಿಗಳಿದ್ದವು. ಈ ಕೆರೂಬಿಗಳು ಕೃಪಾಸನವನ್ನು ಆಚ್ಛಾದಿಸಿಕೊಂಡಿದ್ದವು. ಆದರೆ ಇವುಗಳ ಕುರಿತು ಎಲ್ಲವನ್ನೂ ನಾವು ಈಗ ಹೇಳಲು ಸಾಧ್ಯವಿಲ್ಲ.
6 ನಾನು ನಿಮಗೆ ವಿವರಿಸಿದಂತೆಯೇ ಗುಡಾರದಲ್ಲಿ ಎಲ್ಲವನ್ನೂ ಸಿದ್ಧಮಾಡಲಾಗಿತ್ತು. ಯಾಜಕರು ಪ್ರತಿದಿನವೂ ತಮ್ಮ ಆರಾಧನೆಯ ಕರ್ತವ್ಯಗಳನ್ನು ಮಾಡಲು ಮೊದಲನೆ ಕೊಠಡಿಯ ಒಳಗಡೆ ಹೋಗುತ್ತಿದ್ದರು. 7 ಆದರೆ ಪ್ರಧಾನಯಾಜಕನು ಮಾತ್ರ ಎರಡನೆ ಕೊಠಡಿಯ ಒಳಗೆ ಹೋಗಬಹುದಿತ್ತು. ಅವನು ವರ್ಷಕ್ಕೊಮ್ಮೆ ಮಾತ್ರ ಅದರೊಳಗೆ ಹೋಗುತ್ತಿದ್ದನು. ಅವನು ತನ್ನೊಂದಿಗೆ ರಕ್ತವನ್ನು ತೆಗೆದುಕೊಳ್ಳದೆ ಎಂದೂ ಅದರೊಳಗೆ ಪ್ರವೇಶಿಸುತ್ತಿರಲಿಲ್ಲ. ತನಗೋಸ್ಕರವಾಗಿಯೂ ಜನರು ತಿಳಿಯದೆ ಮಾಡಿದ ಪಾಪಗಳಿಗಾಗಿಯೂ ಅವನು ಆ ರಕ್ತವನ್ನು ದೇವರಿಗೆ ಅರ್ಪಿಸುತ್ತಿದ್ದನು.
8 ಪವಿತ್ರಾತ್ಮನು ಆ ಎರಡು ಪ್ರತ್ಯೇಕವಾದ ಕೊಠಡಿಗಳ ಮೂಲಕ ನಮಗೆ ತಿಳಿಸುವುದೇನೆಂದರೆ, ಮೊದಲನೆ ಕೊಠಡಿಯು ಅಲ್ಲಿ ಇರುವವರೆಗೂ ಮಹಾ ಪವಿತ್ರಸ್ಥಳಕ್ಕೆ ಹೋಗುವ ಮಾರ್ಗವು ತೆರೆಯಲೇ ಇಲ್ಲ. 9 ಈ ದಿನ ನಮಗೆ ಇದೊಂದು ಉದಾಹರಣೆಯಾಗಿದೆ. ದೇವರಿಗೆ ಅರ್ಪಿಸಲ್ಪಡುತ್ತಿದ್ದ ಕಾಣಿಕೆಗಳಿಗಾಗಲಿ ಯಜ್ಞಗಳಿಗಾಗಲಿ ದೇವಾರಾಧನೆ ಮಾಡುವ ವ್ಯಕ್ತಿಯನ್ನು ಪರಿಪೂರ್ಣನನ್ನಾಗಿ ಮಾಡಲು ಸಾಧ್ಯವಿರಲಿಲ್ಲ ಎಂಬುದನ್ನು ಇದು ತೋರ್ಪಡಿಸುತ್ತದೆ. ಆ ವ್ಯಕ್ತಿಯ ಹೃದಯವನ್ನು ಪರಿಶುದ್ಧಗೊಳಿಸಲು ಆ ಯಜ್ಞಗಳಿಗೆ ಸಾಧ್ಯವಿರಲಿಲ್ಲ. 10 ಆ ಯಜ್ಞಗಳು ಮತ್ತು ಕಾಣಿಕೆಗಳು ಅನ್ನಪಾನಾದಿಗಳನ್ನೂ ವಿಶೇಷವಾದ ಸ್ನಾನಗಳನ್ನೂ ಕುರಿತಾಗಿದ್ದವು. ಅವು ದೇಹಕ್ಕೆ ಸಂಬಂಧಿಸಿದ ನಿಯಮಗಳೇ ಹೊರತು ಜನರ ಹೃದಯಕ್ಕೆ ಸಂಬಂಧಿಸಿದ್ದವುಗಳಲ್ಲ. ಜನರಿಗೆ ದೇವರ ಹೊಸ ಮಾರ್ಗವು ಲಭಿಸುವ ಕಾಲದವರೆಗೆ, ಅವರು ಅನುಸರಿಸಲೆಂದು ಆ ನಿಯಮಗಳನ್ನು ದೇವರೇ ಕೊಟ್ಟನು.
ಹೊಸ ಒಡಂಬಡಿಕೆಗನುಸಾರವಾಗಿ ಆರಾಧನೆ
11 ಆದರೆ ಕ್ರಿಸ್ತನು ಈಗಾಗಲೇ ಪ್ರಧಾನಯಾಜಕನಾಗಿ ಬಂದಿದ್ದಾನೆ. ಈಗ ನಾವು ಹೊಂದಿರುವ ಉತ್ತಮ ಸಂಗತಿಗಳಿಗೆ ಆತನು ಪ್ರಧಾನಯಾಜಕನಾಗಿದ್ದಾನೆ. ಇತರ ಯಾಜಕರಾದರೊ ಗುಡಾರದಲ್ಲಿ ಸೇವೆಯನ್ನು ಮಾಡಿದರು. ಆದರೆ ಕ್ರಿಸ್ತನು ಗುಡಾರದಲ್ಲಿ ಸೇವೆ ಮಾಡದೆ ಅದಕ್ಕಿಂತಲೂ ಶ್ರೇಷ್ಠವಾದ ಸ್ಥಳದಲ್ಲಿ ಸೇವೆ ಮಾಡುತ್ತಾನೆ. ಅದು ಮತ್ತಷ್ಟು ಪರಿಪೂರ್ಣವಾದದ್ದು. ಅದು ಮನುಷ್ಯರಿಂದ ನಿರ್ಮಿತವಾದದ್ದಲ್ಲ. ಲೋಕಕ್ಕೆ ಸೇರಿದ್ದೂ ಅಲ್ಲ. 12 ಆತನು ಒಂದೇ ಒಂದು ಸಾರಿ ಮಹಾ ಪವಿತ್ರಸ್ಥಳಕ್ಕೆ ಪ್ರವೇಶಿಸಿದನು. ಆತನು ಹೋತಗಳ ಮತ್ತು ಹೋರಿಕರುಗಳ ರಕ್ತವನ್ನು ತೆಗೆದುಕೊಳ್ಳದೆ ತನ್ನ ಸ್ವಂತ ರಕ್ತದಿಂದಲೇ ಮಹಾ ಪವಿತ್ರಸ್ಥಳಕ್ಕೆ ಪ್ರವೇಶಿಸಿ ನಮಗೆ ನಿತ್ಯಸ್ವಾತಂತ್ರ್ಯವನ್ನು ತಂದುಕೊಟ್ಟನು.
13 ಹೋತಗಳ ಮತ್ತು ಹೋರಿಗಳ ರಕ್ತವನ್ನೂ ಹಸುಗಳ ಬೂದಿಯನ್ನೂ ಆ ಆರಾಧನೆಯ ಸ್ಥಳದಲ್ಲಿ ಪ್ರವೇಶಿಸುವಷ್ಟು ಶುದ್ಧರಾಗಿಲ್ಲದ ಜನರ ಮೇಲೆ ಚಿಮುಕಿಸಲಾಗುತ್ತಿತ್ತು. ಆ ರಕ್ತ ಮತ್ತು ಬೂದಿ ಜನರ ದೇಹಗಳನ್ನು ಮಾತ್ರ ಶುದ್ಧಿಗೊಳಿಸುತ್ತಿದ್ದವು. 14 ಆದ್ದರಿಂದ ಆತನ ರಕ್ತವು ಖಚಿತವಾಗಿ ಅದಕ್ಕಿಂತಲೂ ಹೆಚ್ಚಿನದನ್ನು ಸಾಧಿಸುತ್ತದೆ. ಆತನು ನಿತ್ಯಾತ್ಮನ ಮೂಲಕ ತನ್ನನ್ನು ತಾನೇ ದೇವರಿಗೆ ನಿಷ್ಕಳಂಕವಾದ ಯಜ್ಞವನ್ನಾಗಿ ಅರ್ಪಿಸಿಕೊಂಡನು. ಆತನ ರಕ್ತವು ನಮ್ಮನ್ನು ನಮ್ಮ ಕೆಟ್ಟಕಾರ್ಯಗಳಿಂದ ಪರಿಪೂರ್ಣವಾಗಿ ಬಿಡಿಸಿ ನಾವು ಜೀವಸ್ವರೂಪನಾದ ದೇವರನ್ನು ಆರಾಧಿಸಲು ಸಾಧ್ಯವಾಗುವಂತೆ ನಮ್ಮ ಹೃದಯವನ್ನೂ ಪರಿಶುದ್ಧಗೊಳಿಸುತ್ತದೆ.
15 ದೇವರಿಂದ ಕರೆಯಲ್ಪಟ್ಟ ಜನರು ದೇವರ ವಾಗ್ದಾನಗಳನ್ನು ಹೊಂದಿಕೊಳ್ಳಲೆಂದು ಕ್ರಿಸ್ತನು ಈ ಹೊಸ ಒಡಂಬಡಿಕೆಯನ್ನು ದೇವರಿಂದ ತಂದನು. ದೇವರ ಜನರು ಅವುಗಳನ್ನು ಶಾಶ್ವತವಾಗಿ ಹೊಂದಿಕೊಳ್ಳಲು ಸಾಧ್ಯ. ಏಕೆಂದರೆ ಮೊದಲನೆ ಒಡಂಬಡಿಕೆಯ ಕಾಲದಲ್ಲಿ ಮಾಡಿದ ಪಾಪಗಳಿಂದ ಜನರನ್ನು ಬಿಡುಗಡೆಗೊಳಿಸುವುದಕ್ಕಾಗಿ ಕ್ರಿಸ್ತನು ಮರಣ ಹೊಂದಿದನು.
16 ಒಬ್ಬನು ಸಾಯುವ ಮೊದಲೇ ಉಯಿಲನ್ನು[a] ಬರೆದಿಡುತ್ತಾನೆ. ಆದರೆ ಸತ್ತಿರುವಾತನೇ ಆ ಉಯಿಲನ್ನು ಬರೆದವನೆಂದು ಜನರು ಸಾಧಿಸಿ ತೋರಿಸಬೇಕು. 17 ಅದನ್ನು ಬರೆದವನು ಇನ್ನೂ ಬದುಕಿದ್ದರೆ ಅದಕ್ಕೆ ಬೆಲೆಯೇನೂ ಇಲ್ಲ. ಅದನ್ನು ಬರೆದಾತನು ಸತ್ತನಂತರ ಅದು ಉಪಯುಕ್ತವಾಗಿರುತ್ತದೆ. 18 ದೇವರು ತನ್ನ ಜನರೊಂದಿಗೆ ಮಾಡಿಕೊಂಡ ಮೊದಲನೆ ಒಡಂಬಡಿಕೆ ಇದಕ್ಕೆ ಹೋಲಿಕೆಯಾಗಿದೆ. ಮೊದಲನೆ ಒಡಂಬಡಿಕೆ ಉಪಯುಕ್ತಕ್ಕೆ ಬರಲು ರಕ್ತಾರ್ಪಣೆಯಾಗಬೇಕಿತ್ತು. 19 ಮೊದಲನೆಯದಾಗಿ, ಮೋಶೆಯು ಧರ್ಮಶಾಸ್ತ್ರದ ಪ್ರತಿಯೊಂದು ಆಜ್ಞೆಯನ್ನೂ ಜನರಿಗೆಲ್ಲ ತಿಳಿಸಿದನು. ನಂತರ ಅವನು ಕರುಗಳ ರಕ್ತವನ್ನು ತೆಗೆದುಕೊಂಡು ಅದನ್ನು ನೀರಿನೊಂದಿಗೆ ಬೆರೆಸಿದನು. ಬಳಿಕ ನೀರು ಮತ್ತು ರಕ್ತವನ್ನು ಧರ್ಮಶಾಸ್ತ್ರದ ಮೇಲೆ ಮತ್ತು ಜನರೆಲ್ಲರ ಮೇಲೆ ಚಿಮುಕಿಸಲು ಕೆಂಪು ಉಣ್ಣೆಯನ್ನೂ ಹಿಸ್ಸೋಪ್ ಗಿಡದ[b] ಕವಲನ್ನು ಉಪಯೋಗಿಸಿದನು. 20 ಚಿಮುಕಿಸುವಾಗ, “ನೀವು ಅನುಸರಿಸಬೇಕೆಂದು ದೇವರು ಆಜ್ಞಾಪಿಸಿದ ಒಡಂಬಡಿಕೆಯನ್ನು ಈ ರಕ್ತ ದೃಢಪಡಿಸುತ್ತದೆ”(A) ಎಂದು ಹೇಳಿದನು. 21 ಅದೇರೀತಿ, ಮೋಶೆಯು ರಕ್ತವನ್ನು ಗುಡಾರದ ಮೇಲೆಯೂ ಆರಾಧನೆಯಲ್ಲಿ ಬಳಸುವ ಎಲ್ಲಾ ವಸ್ತುಗಳ ಮೇಲೆಯೂ ಚಿಮುಕಿಸಿದನು. 22 ಬಹುಮಟ್ಟಿಗೆ ಪ್ರತಿಯೊಂದೂ ರಕ್ತದಿಂದ ಪರಿಶುದ್ಧವಾಗಬೇಕೆಂದು ಧರ್ಮಶಾಸ್ತ್ರವು ಹೇಳುತ್ತದೆ. ರಕ್ತವಿಲ್ಲದೆ ಪಾಪಗಳನ್ನು ಕ್ಷಮಿಸಲು ಸಾಧ್ಯವಿಲ್ಲ.
ಕ್ರಿಸ್ತನ ಯಜ್ಞವು ಪಾಪಗಳನ್ನು ದೂರತಳ್ಳಿತು
23 ಈ ವಸ್ತುಗಳು ಪರಲೋಕದಲ್ಲಿರುವ ವಸ್ತುಗಳ ಪ್ರತಿರೂಪಗಳಾಗಿವೆ. ಇವುಗಳನ್ನು ಪ್ರಾಣಿಗಳ ಯಜ್ಞಗಳಿಂದ ಪರಿಶುದ್ಧಗೊಳಿಸಬೇಕಾಗಿದೆ. ಆದರೆ ಪರಲೋಕದಲ್ಲಿರುವ ನಿಜರೂಪಗಳಿಗಾಗಿ ಉತ್ತಮವಾದ ಯಜ್ಞಗಳನ್ನು ಅರ್ಪಿಸಬೇಕಾಗಿದೆ. 24 ಕ್ರಿಸ್ತನು ಮಹಾ ಪವಿತ್ರಸ್ಥಳದೊಳಕ್ಕೆ ಹೋದನು. ಆದರೆ ಆತನು ಮಾನವನಿರ್ಮಿತವಾದ ಮಹಾಪವಿತ್ರಸ್ಥಳಕ್ಕೆ ಹೋಗಲಿಲ್ಲ. ಈ ಮಹಾಪವಿತ್ರಸ್ಥಳವು ನಿಜವಾದದ್ದರ ಪ್ರತಿರೂಪ ಮಾತ್ರವಾಗಿದೆ. ಆತನು ಪರಲೋಕಕ್ಕೆ ಹೋದನು; ನಮಗೆ ಸಹಾಯ ಮಾಡುವುದಕ್ಕೋಸ್ಕರ ಈಗ ದೇವರ ಸನ್ನಿಧಿಯಲ್ಲಿದ್ದಾನೆ.
25 ಪ್ರಧಾನಯಾಜಕನು ವರ್ಷಕ್ಕೊಮ್ಮೆ ಮಹಾ ಪವಿತ್ರಸ್ಥಳಕ್ಕೆ ಪ್ರವೇಶಿಸುವಾಗ ಅರ್ಪಿಸುವುದಕ್ಕಾಗಿ ಪಶುರಕ್ತವನ್ನು ತನ್ನೊಡನೆ ತೆಗೆದುಕೊಂಡು ಹೋಗುತ್ತಿದ್ದನು. ಆದರೆ ಅವನು ತನ್ನ ಸ್ವಂತ ರಕ್ತವನ್ನು ಅರ್ಪಿಸುತ್ತಿರಲಿಲ್ಲ. ಕ್ರಿಸ್ತನು ಪರಲೋಕಕ್ಕೆ ಹೋದದ್ದು, ಪ್ರಧಾನ ಯಾಜಕನು ಮತ್ತೆಮತ್ತೆ ರಕ್ತವನ್ನು ಅರ್ಪಿಸಿದಂತೆ ತನ್ನನ್ನು ಮತ್ತೆಮತ್ತೆ ಅರ್ಪಿಸಿಕೊಳ್ಳುವುದಕ್ಕಾಗಿಯಲ್ಲ. 26 ಕ್ರಿಸ್ತನು ಅನೇಕ ಸಲ ತನ್ನನ್ನು ಅರ್ಪಿಸಿಕೊಂಡಿದ್ದರೆ, ಈ ಲೋಕವು ಸೃಷ್ಟಿಯಾದಂದಿನಿಂದ ಆತನು ಅನೇಕ ಸಲ ಸಂಕಟವನ್ನು ಅನಭವಿಸ ಬೇಕಾಗುತ್ತಿತ್ತು. ಆದರೆ ಕ್ರಿಸ್ತನು ಯುಗಾಂತ್ಯದಲ್ಲಿ ಪಾಪನಿವಾರಣೆ ಮಾಡುವುದಕ್ಕಾಗಿ ಬಂದು ಒಂದೇ ಸಲ ತನ್ನನ್ನು ಅರ್ಪಿಸಿಕೊಂಡನು.
27 ಪ್ರತಿಯೊಬ್ಬರೂ ಒಂದೇಸಾರಿ ಸಾಯುವರು. ಅನಂತರ ಅವರಿಗೆ ನ್ಯಾಯತೀರ್ಪಾಗುವುದು. 28 ಅದರಂತೆಯೇ ಕ್ರಿಸ್ತನು ಅನೇಕ ಜನರ ಪಾಪಗಳನ್ನು ತೆಗೆದುಹಾಕಲು ಒಂದು ಸಲ ಮಾತ್ರ ತನ್ನನ್ನು ಯಜ್ಞವನ್ನಾಗಿ ಅರ್ಪಿಸಿಕೊಂಡನು. ಕ್ರಿಸ್ತನು ಎರಡನೆ ಸಲ ಪ್ರತ್ಯಕ್ಷನಾಗುವುದು ಜನರ ಪಾಪನಿವಾರಣೆಗೋಸ್ಕರವಲ್ಲ. ತನಗಾಗಿ ಕಾಯುತ್ತಿರುವ ಜನರನ್ನು ಬಿಡುಗಡೆ ಮಾಡುವುದಕ್ಕಾಗಿಯಷ್ಟೇ.
Kannada Holy Bible: Easy-to-Read Version. All rights reserved. © 1997 Bible League International