Print Page Options
Previous Prev Day Next DayNext

Old/New Testament

Each day includes a passage from both the Old Testament and New Testament.
Duration: 365 days
Kannada Holy Bible: Easy-to-Read Version (KERV)
Version
ಯೆರೆಮೀಯ 40-42

ಯೆರೆಮೀಯನ ಬಿಡುಗಡೆ

40 ರಾಮನಗರದ ಹತ್ತಿರ ಅವನ ಬಿಡುಗಡೆಯಾದ ಮೇಲೆ ಯೆರೆಮೀಯನಿಗೆ ಯೆಹೋವನಿಂದ ಒಂದು ಸಂದೇಶ ಬಂದಿತು. ಬಾಬಿಲೋನಿನ ರಾಜನ ವಿಶೇಷ ರಕ್ಷಕ ದಳದ ಅಧಿಪತಿಯಾದ ನೆಬೂಜರದಾನನು ಯೆರೆಮೀಯನನ್ನು ರಾಮದಲ್ಲಿ ನೋಡಿದನು. ಯೆರೆಮೀಯನನ್ನು ಸಂಕೋಲೆಗಳಿಂದ ಬಿಗಿಯಲಾಗಿತ್ತು. ಅವನು ಜೆರುಸಲೇಮ್ ಮತ್ತು ಯೆಹೂದದ ಎಲ್ಲಾ ಸೆರೆಯಾಳುಗಳ ಜೊತೆಗಿದ್ದನು. ಆ ಸೆರೆಯಾಳುಗಳನ್ನು ಸೆರೆಹಿಡಿದು ಬಾಬಿಲೋನಿಗೆ ತೆಗೆದುಕೊಂಡು ಹೋಗಲಾಗುತ್ತಿತ್ತು. ಅಧಿಪತಿಯಾದ ನೆಬೂಜರದಾನನು ಯೆರೆಮೀಯನನ್ನು ಕಂಡಾಗ ಅವನನ್ನು ಮಾತನಾಡಿಸಿ ಹೀಗೆಂದನು: “ಯೆರೆಮೀಯನೇ, ನಿಮ್ಮ ದೇವರಾದ ಯೆಹೋವನು ಈ ಸ್ಥಳಕ್ಕೆ ಇಂಥಾ ದುಸ್ಥಿತಿ ಬರುವದೆಂದು ಸಾರಿದ್ದನು. ಏನೇನು ಮಾಡುವೆನೆಂದು ಯೆಹೋವನು ಹೇಳಿದ್ದನೋ ಅದೆಲ್ಲವನ್ನು ಹೇಳಿದ್ದಂತೆಯೇ ಮಾಡಿದ್ದಾನೆ. ಯೆಹೂದದ ಜನರಾದ ನೀವುಗಳು ಯೆಹೋವನ ವಿರುದ್ಧ ಪಾಪ ಮಾಡಿದ್ದರಿಂದ ಈ ಕೇಡು ಸಂಭವಿಸಿತು. ನೀವು ಯೆಹೋವನ ಆಜ್ಞೆಯನ್ನು ಪಾಲಿಸಲಿಲ್ಲ. ಯೆರೆಮೀಯನೇ, ನಾನು ಈಗ ನಿನ್ನನ್ನು ಬಿಡುಗಡೆ ಮಾಡುವೆನು. ನಾನು ನಿನ್ನ ಕೈಗಳಿಂದ ಸಂಕೋಲೆಗಳನ್ನು ಬಿಚ್ಚುವೆನು. ನೀನು ಇಷ್ಟಪಟ್ಟರೆ ನನ್ನ ಸಂಗಡ ಬಾಬಿಲೋನಿಗೆ ಬಾ, ನಾನು ನಿನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ. ನಿನಗೆ ನನ್ನ ಸಂಗಡ ಬರುವ ಇಷ್ಟವಿಲ್ಲದಿದ್ದರೆ ಬರಬೇಡ. ಇಡೀ ದೇಶದಲ್ಲಿ ನಿನಗೆ ಎಲ್ಲಿ ಇಷ್ಟವೋ ಅಲ್ಲಿಗೆ ಹೋಗು. ಅಥವಾ ಅಹೀಕಾಮನ ಮಗನೂ ಶಾಫಾನನ ಮೊಮ್ಮಗನೂ ಆದ ಗೆದಲ್ಯನಲ್ಲಿಗೆ ಹಿಂತಿರುಗಿಹೋಗು. ಬಾಬಿಲೋನಿನ ರಾಜನು ಗೆದಲ್ಯನನ್ನು ಯೆಹೂದದ ಪಟ್ಟಣಗಳಿಗೆ ಅಧಿಪತಿಯಾಗಿ ನೇಮಿಸಿದ್ದಾನೆ. ಗೆದಲ್ಯನಲ್ಲಿಗೆ ಹೋಗಿ ಜನರೊಂದಿಗೆ ವಾಸಿಸು; ಅಥವಾ ನಿನ್ನ ಮನಸ್ಸು ಬಂದಲ್ಲಿಗೆ ಹೋಗು.”

ತರುವಾಯ ನೆಬೂಜರದಾನನು ಯೆರೆಮೀಯನಿಗೆ ಊಟವನ್ನೂ ಕಾಣಿಕೆಯನ್ನೂ ಕೊಟ್ಟು ಕಳುಹಿಸಿದನು. ಯೆರೆಮೀಯನು ಅಹೀಕಾಮನ ಮಗನಾದ ಗೆದಲ್ಯನು ಇದ್ದ ಮಿಚ್ಫಕ್ಕೆ ಹೋದನು. ಯೆರೆಮೀಯನು ಗೆದಲ್ಯನ ಸಂಗಡ ದೇಶದಲ್ಲಿ ಉಳಿದ ಜನರ ಮಧ್ಯೆ ವಾಸಮಾಡಿದನು.

ಗೆದಲ್ಯನ ಸಂಕ್ಷಿಪ್ತ ಆಳ್ವಿಕೆ

ಜೆರುಸಲೇಮ್ ನಗರವನ್ನು ನಾಶಮಾಡಿದಾಗ ಯೆಹೂದದ ಕೆಲವು ಜನ ಸೈನ್ಯಾಧಿಕಾರಿಗಳು ಮತ್ತು ಅವನ ಸೈನಿಕರು ಇನ್ನೂ ಕಾಡುಮೇಡುಗಳಲ್ಲಿದ್ದರು. ಬಾಬಿಲೋನಿನ ರಾಜನು ಅಹೀಕಾಮನ ಮಗನಾದ ಗೆದಲ್ಯನನ್ನು ಅಳಿದುಳಿದ ಜನರ ಮೇಲ್ವಿಚಾರಕನನ್ನಾಗಿ ನೇಮಿಸಿದ್ದಾನೆಂಬ ಸಮಾಚಾರ ಕಿವಿಗೆ ಬಿತ್ತು. ಇಲ್ಲಿ ಅಳಿದುಳಿದವರು ಬಹಳ ಬಡವರಾದ ಗಂಡಸರು, ಹೆಂಗಸರು ಮತ್ತು ಮಕ್ಕಳು. ಅವರನ್ನು ಬಂಧಿಗಳನ್ನಾಗಿ ಮಾಡಿಕೊಂಡು ಬಾಬಿಲೋನಿಗೆ ತೆಗೆದುಕೊಂಡು ಹೋಗಿರಲಿಲ್ಲ. ಆ ಸೈನಿಕರು ಮಿಚ್ಫದಲ್ಲಿ ವಾಸವಾಗಿದ್ದ ಗೆದಲ್ಯನಲ್ಲಿಗೆ ಬಂದರು. ಆ ಸೈನಿಕರು ಯಾರೆಂದರೆ: ನೆತನ್ಯನ ಮಗನಾದ ಇಷ್ಮಾಯೇಲ, ಕಾರೇಹನ ಮಕ್ಕಳಾದ ಯೋಹಾನಾನ ಮತ್ತು ಅವನ ಸೋದರ ಯೋನಾಥಾನ, ತನ್ಹಮೆತನ ಮಗನಾದ ಸೆರಾಯ, ನೆಟೋಫದವನಾದ ಏಫಯನ ಮಕ್ಕಳು, ಮಾಕಾ ಊರಿನ ಯೆಜನ್ಯ ಮತ್ತು ಅವರ ಸಂಗಡ ಇದ್ದ ಜನರು.

ಅಹೀಕಾಮನ ಮಗನೂ ಶಾಫಾನನ ಮೊಮ್ಮಗನೂ ಆದ ಗೆದಲ್ಯನು, ಆ ಸೈನಿಕರು ಮತ್ತು ಅವರ ಜನರು ಈಗ ಅಲ್ಲಿ ಹೆಚ್ಚು ಸುರಕ್ಷಿತರೆಂದು ನಂಬಿಕೆಹುಟ್ಟುವ ಹಾಗೆ ಆಣೆಮಾಡಿ ಹೇಳಿದನು. ಗೆದಲ್ಯನು ಹೀಗೆ ಹೇಳಿದನು. “ಸೈನಿಕರೇ, ಬಾಬಿಲೋನಿನ ಜನರ ಸೇವೆಮಾಡಲು ಭಯಪಡಬೇಡಿ. ಈ ಪ್ರದೇಶದಲ್ಲಿ ನೆಲೆಸಿ ಬಾಬಿಲೋನಿನ ರಾಜನ ಸೇವೆಮಾಡಿರಿ. ನೀವು ಹೀಗೆ ಮಾಡಿದರೆ ನಿಮಗೆಲ್ಲ ಒಳ್ಳೆಯದಾಗುವುದು. 10 ನಾನು ಸ್ವತಃ ಮಿಚ್ಫದಲ್ಲಿ ವಾಸಮಾಡುತ್ತೇವೆ. ಇಲ್ಲಿಗೆ ಬರುವ ಕಸ್ದೀಯರ ಮುಂದೆ ನಿಮ್ಮ ಪರವಾಗಿ ಮಾತನಾಡುತ್ತೇನೆ. ಆ ಕೆಲಸವನ್ನು ನೀವು ನನಗೆ ಬಿಟ್ಟುಬಿಡಿ. ನೀವು ದ್ರಾಕ್ಷಾರಸ, ಹಣ್ಣು ಮತ್ತು ಎಣ್ಣೆ ಇವುಗಳನ್ನು ಸಂಗ್ರಹಿಸಿ ನಿಮ್ಮ ಪಾತ್ರೆಗಳಲ್ಲಿ ತುಂಬಿಸಿಟ್ಟು ನೀವು ಹಿಡಿದುಕೊಂಡ ಪಟ್ಟಣಗಳಲ್ಲಿ ವಾಸಿಸಿರಿ.”

11 ಬಾಬಿಲೋನಿನ ರಾಜನು ಕೆಲವು ಜನ ಯೆಹೂದಿಯರನ್ನು ಆ ಪ್ರದೇಶದಲ್ಲಿ ಬಿಟ್ಟುಹೋಗಿದ್ದಾನೆ ಮತ್ತು ಅಹೀಕಾಮನ ಮಗನೂ ಶಾಫಾನನ ಮೊಮ್ಮಗನೂ ಆದ ಗೆದಲ್ಯನನ್ನು ಅವರ ಅಧಿಪತಿಯನ್ನಾಗಿ ನೇಮಿಸಿದ್ದಾನೆ ಎಂಬ ಸಮಾಚಾರವನ್ನು ಮೋವಾಬ್, ಎದೋಮ್, ಅಮ್ಮೋನ್ ಮೊದಲಾದ ದೇಶಗಳಲ್ಲಿ ಚದುರಿಹೋಗಿದ್ದ ಯೆಹೂದಿಯರು ಕೇಳಿದರು. 12 ಯೆಹೂದದ ಆ ಜನರು ಈ ಸಮಾಚಾರವನ್ನು ಕೇಳಿದ ಕೂಡಲೆ ತಾವು ಚದುರಿಹೋಗಿದ್ದ ಎಲ್ಲಾ ದೇಶಗಳಿಂದ ಯೆಹೂದ ಪ್ರದೇಶಕ್ಕೆ ಹಿಂತಿರುಗಿ ಮಿಚ್ಫದಲ್ಲಿ ಗೆದಲ್ಯನ ಬಳಿಗೆ ಬಂದರು. ಅವರು ದ್ರಾಕ್ಷಾರಸವನ್ನು ಮತ್ತು ಹಣ್ಣುಗಳನ್ನು ಸಮೃದ್ಧಿಯಾಗಿ ಸಂಗ್ರಹಿಸಿದರು.

13 ಕಾರೇಹನ ಮಗನಾದ ಯೋಹಾನಾನನೂ ಮತ್ತು ಇನ್ನೂ ಕಾಡುಮೇಡುಗಳಲ್ಲಿದ್ದ ಯೆಹೂದದ ಸೈನ್ಯಾಧಿಕಾರಿಗಳೂ ಗೆದಲ್ಯನ ಬಳಿಗೆ ಬಂದರು. ಗೆದಲ್ಯನು ಮಿಚ್ಫ ಪಟ್ಟಣದಲ್ಲಿದ್ದನು. 14 ಯೋಹಾನಾನ ಮತ್ತು ಅವನ ಸಂಗಡ ಇದ್ದ ಅಧಿಕಾರಿಗಳು ಹೀಗೆಂದರು: “ಅಮ್ಮೋನ್ಯರ ರಾಜನಾದ ಬಾಲೀಸನು ನಿನ್ನನ್ನು ಕೊಲ್ಲಬಯಸುತ್ತಾನೆ. ಅವನು ನಿನ್ನನ್ನು ಕೊಲ್ಲುವದಕ್ಕಾಗಿ ನೆತನ್ಯನ ಮಗನಾದ ಇಷ್ಮಾಯೇಲನನ್ನು ಕಳುಹಿಸಿದ್ದಾನೆ ಎಂಬುದು ನಿನಗೆ ಗೊತ್ತಿದೆಯೇ?” ಆದರೆ ಅಹೀಕಾಮನ ಮಗನಾದ ಗೆದಲ್ಯನು ಅವರನ್ನು ನಂಬಲಿಲ್ಲ.

15 ಆಗ ಕಾರೇಹನ ಮಗನಾದ ಯೋಹಾನಾನನು ಮಿಚ್ಫದಲ್ಲಿ ಗೆದಲ್ಯನೊಂದಿಗೆ ರಹಸ್ಯವಾಗಿ ಮಾತನಾಡಿದನು. ಯೋಹಾನಾನನು ಗೆದಲ್ಯನಿಗೆ ಹೀಗೆ ಹೇಳಿದನು: “ನಾನು ಹೋಗಿ ನೆತನ್ಯನ ಮಗನಾದ ಇಷ್ಮಾಯೇಲನ ಕೊಲೆ ಮಾಡುವೆನು. ಯಾರಿಗೂ ಆ ವಿಷಯ ತಿಳಿಯುವುದಿಲ್ಲ. ನಾವು ಇಷ್ಮಾಯೇಲನಿಗೆ ನಿನ್ನನ್ನು ಕೊಲ್ಲುವ ಅವಕಾಶ ಕೊಡಬಾರದು. ಅದರಿಂದ ನಿನ್ನ ಆಶ್ರಯದಲ್ಲಿ ಬಂದು ನೆಲೆಸಿದ ಎಲ್ಲಾ ಯೆಹೂದ್ಯರು ಮತ್ತೆ ಬೇರೆಬೇರೆ ದೇಶಗಳಲ್ಲಿ ಚದುರಿ ಹೋಗಬೇಕಾಗುತ್ತದೆ. ಆಗ ಅಳಿದುಳಿದ ಕೆಲವೇ ಜನ ಯೆಹೂದಿಗಳು ಸಹ ಇಲ್ಲವಾಗುತ್ತಾರೆ.”

16 ಆಗ ಅಹೀಕಾಮನ ಮಗನಾದ ಗೆದಲ್ಯನು ಕಾರೇಹನ ಮಗನಾದ ಯೋಹಾನಾನನಿಗೆ, “ಇಷ್ಮಾಯೇಲನನ್ನು ಕೊಲ್ಲಬೇಡ. ನೀನು ಇಷ್ಮಾಯೇಲನ ಬಗ್ಗೆ ಹೇಳಿದ ಸಂಗತಿಗಳು ನಿಜವಲ್ಲ” ಎಂದನು.

41 ಏಳನೇ ತಿಂಗಳಿನಲ್ಲಿ ನೆತನ್ಯನ ಮಗನೂ ಎಲೀಷಾಮನ ಮೊಮ್ಮಗನೂ ಆದ ಇಷ್ಮಾಯೇಲನು ಅಹೀಕಾಮನ ಮಗನಾದ ಗೆದಲ್ಯನಲ್ಲಿಗೆ ಬಂದನು. ಇಷ್ಮಾಯೇಲನು ತನ್ನ ಹತ್ತು ಮಂದಿಯೊಂದಿಗೆ ಬಂದನು. ಆ ಜನರು ಮಿಚ್ಫ ಪಟ್ಟಣಕ್ಕೆ ಬಂದರು. ಇಷ್ಮಾಯೇಲನು ರಾಜವಂಶೀಯನಾಗಿದ್ದನು. ಅವನು ಯೆಹೂದದ ರಾಜನ ಒಬ್ಬ ಅಧಿಕಾರಿಯಾಗಿದ್ದನು. ಇಷ್ಮಾಯೇಲ್ ಮತ್ತು ಅವನ ಜನರು ಗೆದಲ್ಯನೊಂದಿಗೆ ಊಟಮಾಡಿದರು. ಅವರು ಒಟ್ಟಿಗೆ ಊಟ ಮಾಡುತ್ತಿದ್ದಾಗ, ಇಷ್ಮಾಯೇಲ್ ಮತ್ತು ಅವನ ಹತ್ತು ಜನರು ಎದ್ದು ಅಹೀಕಾಮನ ಮಗನಾದ ಗೆದಲ್ಯನನ್ನು ಖಡ್ಗದಿಂದ ಕೊಂದರು. ಗೆದಲ್ಯನನ್ನು ಬಾಬಿಲೋನಿನ ರಾಜನು ಯೆಹೂದದ ಅಧಿಪತಿಯಾಗಿ ನೇಮಿಸಿದ್ದನು. ಇಷ್ಮಾಯೇಲನು ಗೆದಲ್ಯನ ಸಂಗಡ ಮಿಚ್ಫದಲ್ಲಿದ್ದ ಎಲ್ಲಾ ಯೆಹೂದ್ಯರನ್ನು ಸಹ ಕೊಂದನು. ಇಷ್ಮಾಯೇಲನು ಗೆದಲ್ಯನ ಸಂಗಡ ಇದ್ದ ಎಲ್ಲಾ ಬಾಬಿಲೋನಿನ ಸೈನಿಕರನ್ನು ಸಹ ಕೊಂದುಹಾಕಿದನು.

4-5 ಗೆದಲ್ಯನ ಕೊಲೆಯ ಎರಡನೆಯ ದಿನ ಯೆಹೋವನ ಆಲಯಕ್ಕೆ ನೈವೇದ್ಯವನ್ನು ಮತ್ತು ಧೂಪವನ್ನು ತೆಗೆದುಕೊಂಡು ಎಂಭತ್ತು ಜನ ಯೆಹೂದ್ಯರು ಮಿಚ್ಫಕ್ಕೆ ಬಂದರು. ಆ ಎಂಭತ್ತು ಜನ ತಮ್ಮ ಗಡ್ಡ ಬೋಳಿಸಿಕೊಂಡಿದ್ದರು ಮತ್ತು ತಮ್ಮ ಬಟ್ಟೆಗಳನ್ನು ಹರಿದುಕೊಂಡು ಗಾಯಮಾಡಿಕೊಂಡಿದ್ದರು. ಅವರು ಶೆಕೆಮ್, ಶಿಲೋ, ಸಮಾರ್ಯ ಎಂಬ ಊರುಗಳಿಂದ ಬಂದಿದ್ದರು. ಗೆದಲ್ಯನ ಕೊಲೆ ಮಾಡಲಾಗಿದೆ ಎಂಬುದು ಇವರಲ್ಲಿ ಯಾರಿಗೂ ತಿಳಿದಿರಲಿಲ್ಲ. ಇಷ್ಮಾಯೇಲನು ಈ ಎಂಭತ್ತು ಜನರನ್ನು ಕಾಣುವದಕ್ಕಾಗಿ ಮಿಚ್ಫ ಪಟ್ಟಣದ ಹೊರಗಡೆ ಹೋದನು. ಅವರನ್ನು ಕಾಣುವದಕ್ಕೆ ಹೋಗುವಾಗ ಅವನು ಅಳುತ್ತಿದ್ದನು. ಇಷ್ಮಾಯೇಲನು ಆ ಎಂಭತ್ತು ಜನರನ್ನು ಎದುರುಗೊಂಡು, “ಅಹೀಕಾಮನ ಮಗನಾದ ಗೆದಲ್ಯನನ್ನು ಭೇಟಿ ಮಾಡುವದಕ್ಕೆ ನನ್ನೊಂದಿಗೆ ಬನ್ನಿ” ಎಂದು ಕರೆದನು. ಆ ಎಂಭತ್ತು ಜನರು ಮಿಚ್ಫಪಟ್ಟಣಕ್ಕೆ ಹೋದರು. ಆಗ ಇಷ್ಮಾಯೇಲ ಮತ್ತು ಅವನ ಸಂಗಡಿಗರು ಅವರಲ್ಲಿ ಎಪ್ಪತ್ತು ಮಂದಿಯನ್ನು ಕೊಂದರು. ಇಷ್ಮಾಯೇಲ ಮತ್ತು ಅವನ ಸಂಗಡಿಗರು ಆ ಎಪ್ಪತ್ತು ಮಂದಿ ದೇಹಗಳನ್ನು ಒಂದು ಆಳವಾದ ಬಾವಿಯಲ್ಲಿ ಎಸೆದರು. ಆದರೆ ಉಳಿದ ಹತ್ತು ಜನರು ಇಷ್ಮಾಯೇಲನಿಗೆ, “ನಮ್ಮನ್ನು ಕೊಲ್ಲಬೇಡ, ನಮ್ಮಲ್ಲಿ ಗೋಧಿ, ಜವೆಗೋಧಿ, ಎಣ್ಣೆ ಮತ್ತು ಜೇನುತುಪ್ಪ ಇವೆ. ನಾವು ಆ ವಸ್ತುಗಳನ್ನು ಒಂದು ಹೊಲದಲ್ಲಿ ಬಚ್ಚಿಟ್ಟಿದ್ದೇವೆ” ಎಂದು ಹೇಳಿದರು. ಆದ್ದರಿಂದ ಇಷ್ಮಾಯೇಲನು ಆ ಹತ್ತು ಮಂದಿಯನ್ನು ಬಿಟ್ಟುಬಿಟ್ಟನು. ಅವನು ಬೇರೆಯವರೊಂದಿಗೆ ಅವರನ್ನು ಕೊಲ್ಲಲಿಲ್ಲ. ಇಷ್ಮಾಯೇಲನು ಶವಗಳನ್ನು ಆ ಬಾವಿಯೊಳಗೆ ಹಾಕಿದನು. ಆ ಬಾವಿಯು ಬಹಳ ದೊಡ್ಡದಾಗಿತ್ತು. ಅದನ್ನು ಯೆಹೂದದ ರಾಜನಾದ ಆಸನು ತೋಡಿಸಿದ್ದನು. ಯುದ್ಧದ ಸಮಯದಲ್ಲಿ ನಗರದಲ್ಲಿ ನೀರು ಸಾಕಷ್ಟು ಇರಬೇಕೆಂಬ ಉದ್ದೇಶದಿಂದ ರಾಜನಾದ ಆಸನು ಈ ಬಾವಿಯನ್ನು ತೋಡಿಸಿದ್ದನು. ರಾಜನಾದ ಆಸನು ತನ್ನ ನಗರವನ್ನು ಇಸ್ರೇಲಿನ ರಾಜನಾದ ಬಾಷನಿಂದ ರಕ್ಷಿಸುವುದಕ್ಕಾಗಿ ಇದನ್ನು ಕಟ್ಟಿಸಿದ್ದನು.

10 ಮಿಚ್ಫ ನಗರದಲ್ಲಿ ಉಳಿದೆಲ್ಲ ಜನರನ್ನು ಇಷ್ಮಾಯೇಲನು ವಶಪಡಿಸಿಕೊಂಡನು. ಅವರಲ್ಲಿ ರಾಜನ ಹೆಣ್ಣಮಕ್ಕಳು ಮತ್ತು ಅಲ್ಲಿದ್ದ ಬೇರೆ ಜನರೂ ಸೇರಿದ್ದರು. ಆ ಜನರನ್ನು ನೋಡಿಕೊಳ್ಳಲೆಂದು ನೆಬೂಜರದಾನನು ಗೆದಲ್ಯನನ್ನು ನೇಮಿಸಿದ್ದನು. ನೆಬೂಜರದಾನನು ಬಾಬೆಲಿನ ರಾಜನ ವಿಶೇಷ ರಕ್ಷಕದಳದ ಅಧಿಪತಿಯಾಗಿದ್ದನು. ಇಷ್ಮಾಯೇಲನು ಆ ಜನರನ್ನು ಸೆರೆಹಿಡಿದು ಅವರನ್ನು ತೆಗೆದುಕೊಂಡು ಅಮ್ಮೋನ್ಯರ ಸೀಮೆಗೆ ಹೊರಟನು.

11 ಕಾರೇಹನ ಮಗನಾದ ಯೋಹಾನಾನನೂ ಅವನೊಂದಿಗಿದ್ದ ಸಕಲ ಸೇನಾಪತಿಗಳೂ ಇಷ್ಮಾಯೇಲನು ಮಾಡಿದ ಎಲ್ಲಾ ದುಷ್ಕೃತ್ಯಗಳ ಬಗ್ಗೆ ಕೇಳಿದರು. 12 ಆದ್ದರಿಂದ ಯೋಹಾನಾನನು ಮತ್ತು ಅವನೊಂದಿಗಿದ್ದ ಸಕಲ ಸೇನಾಪತಿಗಳು ತಮ್ಮ ಜನರನ್ನು ಕರೆದುಕೊಂಡು ನೆತನ್ಯನ ಮಗನಾದ ಇಷ್ಮಾಯೇಲನ ವಿರುದ್ಧ ಹೋರಾಡಲು ಹೊರಟರು. ಅವರು ಗಿಬ್ಯೋನಿನ ದೊಡ್ಡ ಕೆರೆಯ ಹತ್ತಿರ ಇಷ್ಮಾಯೇಲನನ್ನು ಹಿಡಿದರು. 13 ಇಷ್ಮಾಯೇಲನು ಸೆರೆಹಿಡಿದ ಸೆರೆಯಾಳುಗಳು ಯೋಹಾನಾನನನ್ನು ಮತ್ತು ಸೇನಾಪತಿಗಳನ್ನು ನೋಡಿದರು. ಈ ಸೆರೆಯಾಳುಗಳಿಗೆ ಬಹಳ ಸಂತೋಷವಾಯಿತು. 14 ಆಗ, ಇಷ್ಮಾಯೇಲನು ಮಿಚ್ಫದಲ್ಲಿ ಸೆರೆಹಿಡಿದುಕೊಂಡು ಹೋಗಿದ್ದ ಎಲ್ಲಾ ಜನರು ಕಾರೇಹನ ಮಗನಾದ ಯೋಹಾನಾನನ ಕಡೆಗೆ ಓಡಿದರು. 15 ನೆತನ್ಯನ ಮಗನಾದ ಇಷ್ಮಾಯೇಲನು ಮತ್ತು ಅವನ ಎಂಟು ಜನ ಸಂಗಡಿಗರು ಯೋಹಾನಾನನಿಂದ ತಪ್ಪಿಸಿಕೊಂಡು ಅಮ್ಮೋನ್ಯರ ಮೊರೆಹೊಕ್ಕರು.

16 ಇಷ್ಮಾಯೇಲನು ಗೆದಲ್ಯನನ್ನು ಕೊಂದು ಮಿಚ್ಫದಲ್ಲಿ ಸೆರೆಹಿಡಿದ ಬಂದಿಗಳನ್ನು ಕಾರೇಹನ ಮಗನಾದ ಯೋಹಾನಾನನು ಮತ್ತು ಅವನ ಸೇನಾಪತಿಗಳು ರಕ್ಷಿಸಿದರು. ಆಗ ಉಳಿದುಕೊಂಡವರಲ್ಲಿ ಸೈನಿಕರು, ಹೆಂಗಸರು, ಮಕ್ಕಳು ಮತ್ತು ಅಧಿಕಾರಿಗಳು ಸೇರಿದ್ದರು. ಯೋಹಾನಾನನು ಗಿಬ್ಯೋನಿನಿಂದ ಅವರನ್ನು ಹಿಂದಕ್ಕೆ ಕರೆತಂದನು.

ಈಜಿಪ್ಟಿಗೆ ವಲಸೆ

17-18 ಯೋಹಾನಾನನೂ ಉಳಿದ ಸೇನಾಧಿಪತಿಗಳೂ ಕಸ್ದೀಯರಿಗೆ ಹೆದರಿದರು. ಬಾಬಿಲೋನಿನ ರಾಜನು ಗೆದಲ್ಯನನ್ನು ಯೆಹೂದದ ಅಧಿಪತಿಯಾಗಿ ನೇಮಿಸಿದ್ದನು. ಆದರೆ ಇಷ್ಮಾಯೇಲನು ಗೆದಲ್ಯನನ್ನು ಕೊಲೆ ಮಾಡಿದನು. ಇದರಿಂದ ಕಸ್ದೀಯರಿಗೆ ಕೋಪ ಬರಬಹುದೆಂದು ಯೋಹಾನಾನನು ಭಯಪಟ್ಟನು. ಆದ್ದರಿಂದ ಈಜಿಪ್ಟಿಗೆ ಓಡಿಹೋಗಬೇಕೆಂದು ಅವರು ನಿರ್ಧರಿಸಿದರು. ಈಜಿಪ್ಟಿಗೆ ಹೋಗುವ ದಾರಿಯಲ್ಲಿ ಅವರು ಗೇರುಥ್ ಕಿಮ್ಹಾಮಿನಲ್ಲಿ ಇಳಿದುಕೊಂಡರು. ಗೇರುಥ್ ಕಿಮ್ಹಾಮು ಬೆತ್ಲೆಹೇಮ್ ಪಟ್ಟಣದ ಸಮೀಪದಲ್ಲಿದೆ.

42 ಅವರು ಗೇರುಥ್ ಕಿಮ್ಹಾಮಿನಲ್ಲಿಇಳಿದುಕೊಂಡಿದ್ದಾಗ ಯೋಹಾನಾನನೂ ಹೋಷಾಯನ ಮಗನಾದ ಯೆಜನ್ಯನೂ ಪ್ರವಾದಿಯಾದ ಯೆರೆಮೀಯನಲ್ಲಿಗೆ ಹೋದರು. ಯೋಹಾನಾನ ಮತ್ತು ಯೆಜನ್ಯನ ಸಂಗಡ ಎಲ್ಲಾ ಅಧಿಕಾರಿಗಳೂ ಅಪ್ರಮುಖರಿಂದ ಅತಿ ಪ್ರಮುಖವರೆಗಿನ ಎಲ್ಲಾ ಜನರೂ ಹೋದರು. ಅವರೆಲ್ಲರೂ ಅವನಿಗೆ, “ಯೆರೆಮೀಯನೇ, ನಮ್ಮ ಬೇಡಿಕೆಯನ್ನು ದಯವಿಟ್ಟು ಕೇಳು. ಯೆಹೂದ ಕುಲದಲ್ಲಿ ಅಳಿದುಳಿದ ಎಲ್ಲಾ ಜನರಿಗಾಗಿ ನಿನ್ನ ದೇವರಾದ ಯೆಹೋವನನ್ನು ಪ್ರಾರ್ಥಿಸು. ಯೆರೆಮೀಯನೇ, ನಮ್ಮಲ್ಲಿ ಈಗ ಬಹಳ ಜನ ಉಳಿದಿಲ್ಲವೆಂಬುದು ನಿನಗೆ ಗೊತ್ತಿದೆ. ಒಂದು ಕಾಲದಲ್ಲಿ ನಾವು ಬಹಳ ಜನರಿದ್ದೆವು. ಯೆರೆಮೀಯನೇ, ನಾವು ಎಲ್ಲಿಗೆ ಹೋಗಬೇಕು, ಏನು ಮಾಡಬೇಕು ಎಂಬುದನ್ನು ಹೇಳಬೇಕೆಂದು ನಿನ್ನ ದೇವರನ್ನು ಪ್ರಾರ್ಥಿಸು” ಎಂದರು.

ಆಗ ಪ್ರವಾದಿಯಾದ ಯೆರೆಮೀಯನು, “ನಾನು ಏನು ಮಾಡಬೇಕೆಂದು ನೀವು ಬಯಸುವಿರೆಂಬುದು ನನಗೆ ಗೊತ್ತು. ನೀವು ಹೇಳಿದಂತೆಯೇ, ನಿಮ್ಮ ದೇವರಾದ ಯೆಹೋವನನ್ನು ಪ್ರಾರ್ಥಿಸುವೆನು. ಯೆಹೋವನು ಹೇಳಿದ್ದನ್ನೆಲ್ಲವನ್ನು ನಾನು ನಿಮಗೆ ಹೇಳುತ್ತೇನೆ. ನಾನು ನಿಮ್ಮಿಂದ ಏನನ್ನೂ ಮುಚ್ಚಿಡುವದಿಲ್ಲ” ಎಂದನು.

ಆಗ ಅವರು, “ನಿನ್ನ ದೇವರಾದ ಯೆಹೋವನು ಹೇಳಿದ ಎಲ್ಲವನ್ನು ನಾವು ಮಾಡದಿದ್ದಲ್ಲಿ ಯೆಹೋವನು ಸ್ವತಃ ನಮ್ಮ ವಿರುದ್ಧ ಸ್ಥಿರವಾದ ಸತ್ಯಸಾಕ್ಷಿಯಾಗಿ ನಿಲ್ಲಲಿ. ನಾವು ಏನು ಮಾಡಬೇಕೆಂಬುದನ್ನು ತಿಳಿಸಲು ನಿನ್ನ ದೇವರಾದ ಯೆಹೋವನು ನಿನ್ನನ್ನು ಕಳುಹಿಸುತ್ತಾನೆಂದು ನಾವು ಬಲ್ಲೆವು. ಯೆಹೋವನ ಸಂದೇಶವು ನಮಗೆ ಇಷ್ಟವಾಗಲಿ ಅಥವಾ ಇಷ್ಟವಾಗದಿರಲಿ ನಾವು ನಮ್ಮ ದೇವರಾದ ಯೆಹೋವನ ಆಜ್ಞೆಯನ್ನು ಪಾಲಿಸುತ್ತೇವೆ. ಯೆಹೋವನ ಸಂದೇಶಕ್ಕಾಗಿ ನಾವು ನಿನ್ನನ್ನು ಆತನಲ್ಲಿಗೆ ಕಳುಹಿಸುತ್ತಿದ್ದೇವೆ. ಆತನು ಹೇಳಿದಂತೆ ನಾವು ನಡೆದುಕೊಳ್ಳುತ್ತೇವೆ. ಆಗ ನಮಗೆ ಒಳ್ಳೆಯದಾಗುತ್ತದೆ. ಹೌದು, ನಮ್ಮ ದೇವರಾದ ಯೆಹೋವನು ಹೇಳಿದಂತೆಯೇ ನಾವು ನಡೆದುಕೊಳ್ಳುತ್ತೇವೆ” ಎಂದು ಹೇಳಿದರು.

ಹತ್ತು ದಿನಗಳ ನಂತರ ಯೆರೆಮೀಯನಿಗೆ ಯೆಹೋವನಿಂದ ಸಂದೇಶ ಬಂದಿತು. ಆಗ ಯೆರೆಮೀಯನು ಕಾರೇಹನ ಮಗನಾದ ಯೋಹಾನಾನನನ್ನೂ ಅವನ ಜೊತೆಗಿದ್ದ ಸೇನಾಧಿಪತಿಗಳನ್ನೂ ಕರೆದನು. ಪ್ರಮುಖರು, ಅಪ್ರಮುಖರು ಎನ್ನದೆ ಒಟ್ಟಾಗಿ ಬರಲು ಎಲ್ಲಾ ಜನರನ್ನು ಯೆರೆಮೀಯನು ಕರೆದನು. ಯೆರೆಮೀಯನು ಅವರಿಗೆ ಹೀಗೆ ಹೇಳಿದನು: “ಇಸ್ರೇಲರ ದೇವರಾದ ಯೆಹೋವನು ಹೀಗೆನ್ನುತ್ತಾನೆ. ನೀವು ನನ್ನನ್ನು ಆತನಲ್ಲಿಗೆ ಕಳುಹಿಸಿದಿರಿ. ನೀವು ಕೇಳೆಂದು ನನಗೆ ಹೇಳಿದ್ದನ್ನು ನಾನು ಯೆಹೋವನಿಗೆ ಕೇಳಿದೆ. ಯೆಹೋವನು ಹೀಗೆ ಹೇಳುತ್ತಾನೆ. 10 ‘ನೀವು ಯೆಹೂದದಲ್ಲಿ ವಾಸಮಾಡಿದರೆ ನಾನು ನಿಮ್ಮನ್ನು ನಾಶಮಾಡದೆ ಬಲಶಾಲಿಗಳನ್ನಾಗಿ ಮಾಡುತ್ತೇನೆ. ನಾನು ನಿಮ್ಮನ್ನು ನೆಡುತ್ತೇನೆ, ನಿಮ್ಮನ್ನು ಕೀಳುವುದಿಲ್ಲ. ನಾನು ನಿಮಗೆ ಬರಮಾಡಿದ ಭಯಂಕರವಾದ ಕೇಡಿಗಾಗಿ ದುಃಖಿತನಾಗಿದ್ದೇನೆ. 11 ಈಗ ನೀವು ಬಾಬಿಲೋನಿನ ರಾಜನಿಗೆ ಹೆದರಿದ್ದೀರಿ. ಆದರೆ ಅವನಿಗೆ ಅಂಜಬೇಡಿರಿ.’ ಇದು ಯೆಹೋವನ ನುಡಿ. ‘ಏಕೆಂದರೆ ನಾನು ನಿಮ್ಮೊಂದಿಗಿದ್ದೇನೆ. ನಾನೇ ನಿಮ್ಮನ್ನು ರಕ್ಷಿಸುವೆನು. ನಾನು ನಿಮ್ಮನ್ನು ಕಷ್ಟದಿಂದ ಪಾರು ಮಾಡುವೆನು. ಅವನ ಕೈಗೆ ನೀವು ಸಿಗುವುದಿಲ್ಲ. 12 ನಾನು ನಿಮಗೆ ದಯೆತೋರುತ್ತೇನೆ. ಬಾಬಿಲೋನಿನ ರಾಜನು ಸಹ ನಿಮಗೆ ದಯೆತೋರುವನು. ಅವನು ನಿಮ್ಮನ್ನು ನಿಮ್ಮ ದೇಶಕ್ಕೆ ಮರಳಿ ತರುವನು.’ 13 ಆದರೆ ‘ನಾವು ಯೆಹೂದದಲ್ಲಿ ವಾಸಿಸುವದಿಲ್ಲ’ವೆಂದು ನೀವು ಹೇಳಬಹುದು. ನೀವು ಹಾಗೆ ಹೇಳಿದರೆ ನೀವು ನಿಮ್ಮ ದೇವರಾದ ಯೆಹೋವನ ಮಾತನ್ನು ಮೀರಿದಂತಾಗುತ್ತದೆ. 14 ‘ಇಲ್ಲ, ನಾವು ಈಜಿಪ್ಟಿಗೆ ಹೋಗಿ ಅಲ್ಲಿ ವಾಸಮಾಡುವೆವು. ಅಲ್ಲಿ ನಮಗೆ ಯುದ್ಧದ ಭಯವಿಲ್ಲ. ಯುದ್ಧದ ತುತ್ತೂರಿಗಳ ಶಬ್ಧವು ಕೇಳುವುದಿಲ್ಲ; ಅಲ್ಲಿ ನಮಗೆ ಹಸಿವೆ ಇರುವುದಿಲ್ಲ’ ಎಂದು ನೀವು ಹೇಳಬಹುದು. 15 ಯೆಹೂದದ ಶ್ರೇಷ್ಠ ಜನಗಳೇ, ನೀವು ಒಂದುವೇಳೆ ಹಾಗೆ ಹೇಳುವುದಾದರೆ ಯೆಹೋವನ ಸಂದೇಶವನ್ನು ಕೇಳಿರಿ: ಇಸ್ರೇಲರ ದೇವರೂ ಸರ್ವಶಕ್ತನೂ ಆಗಿರುವ ಯೆಹೋವನು ಹೀಗೆ ಹೇಳುತ್ತಾನೆ: ‘ನೀವು ಈಜಿಪ್ಟಿಗೆ ಹೋಗಿ ಅಲ್ಲಿ ವಾಸಮಾಡಬೇಕೆಂದು ತೀರ್ಮಾನಿಸಿದ್ದರೆ ಪರಿಸ್ಥಿತಿ ಹೀಗಾಗುವುದು: 16 ನೀವು ಯುದ್ಧದ ಖಡ್ಗಕ್ಕೆ ಹೆದರುವಿರಿ. ಆದರೆ ಅದು ನಿಮ್ಮನ್ನು ಅಲ್ಲಿ ಸೋಲಿಸುವುದು. ನಿಮಗೆ ಹಸಿವಿನ ಬಗ್ಗೆ ಯೋಚನೆಯಿದೆ. ಆದರೆ ಈಜಿಪ್ಟಿನಲ್ಲಿ ನೀವು ಹಸಿವಿನಿಂದ ಬಳಲುವಿರಿ. ನೀವು ಅಲ್ಲಿ ಸತ್ತುಹೋಗುವಿರಿ. 17 ಈಜಿಪ್ಟಿಗೆ ಹೋಗಿ ಅಲ್ಲಿ ನೆಲೆಸಬೇಕೆಂದು ನಿಶ್ಚಯಿಸಿದವರೆಲ್ಲರೂ ಖಡ್ಗದಿಂದಾಗಲಿ ಹಸಿವಿನಿಂದಾಗಲಿ ಭಯಂಕರ ವ್ಯಾಧಿಯಿಂದಾಗಲಿ ಸತ್ತುಹೋಗುವರು. ಈಜಿಪ್ಟಿಗೆ ಹೋದವರಲ್ಲಿ ಒಬ್ಬನೂ ಬದುಕಿರಲಾರ. ನಾನು ಅವರಿಗೆ ಉಂಟುಮಾಡುವ ಪೀಡೆಯಿಂದ ಒಬ್ಬನೂ ತಪ್ಪಿಸಿಕೊಳ್ಳಲಾರ.’

18 “ಸರ್ವಶಕ್ತನೂ ಇಸ್ರೇಲರ ದೇವರೂ ಆಗಿರುವ ಯೆಹೋವನು ಹೀಗೆಂದನು: ‘ನಾನು ಜೆರುಸಲೇಮಿನ ಮೇಲೆ ನನ್ನ ಕೋಪವನ್ನು ತೋರಿಸಿದೆ. ಜೆರುಸಲೇಮಿನಲ್ಲಿ ವಾಸಿಸುವ ಜನರನ್ನು ನಾನು ದಂಡಿಸಿದೆ. ಅದೇ ರೀತಿ, ಈಜಿಪ್ಟಿಗೆ ಹೋಗುವವರೆಲ್ಲರ ಮೇಲೂ ನಾನು ನನ್ನ ಕೋಪವನ್ನು ತೋರಿಸುವೆನು. ಬೇರೆಯವರಿಗೆ ಕೆಟ್ಟದಾಗಲಿ ಎಂದು ಹೇಳಬೇಕಾದಾಗ ಜನರು ನಿಮ್ಮಂತೆ ಆಗಲಿ ಎಂದು ನಿಮ್ಮ ಉದಾಹರಣೆಯನ್ನು ಕೊಡುವರು. ನೀವು ಒಂದು ಶಾಪದ ಶಬ್ದವಾಗುವಿರಿ. ಜನರು ನಿಮ್ಮಿಂದ ನಾಚಿಕೆಪಟ್ಟುಕೊಳ್ಳುವರು. ಜನರು ನಿಮ್ಮನ್ನು ಅಪಮಾನ ಮಾಡುವರು. ಯೆಹೂದವನ್ನು ಪುನಃ ನೀವು ಎಂದೂ ನೋಡುವದಿಲ್ಲ.’

19 “ಯೆಹೂದ್ಯರಲ್ಲಿ ಅಳಿದುಳಿದವರೇ, ಯೆಹೋವನು ನಿಮಗೆ, ‘ಈಜಿಪ್ಟಿಗೆ ಹೋಗಬೇಡಿರಿ.’ ಎಂದು ಹೇಳಿದ್ದಾನೆ, ನಾನು ಈಗಲೇ ನಿಮಗೆ ಮುನ್ನೆಚ್ಚರಿಕೆಯನ್ನು ಕೊಡುತ್ತೇನೆ. 20 ನೀವು ನಿಮಗೆ ಮರಣವನ್ನು ಬರಮಾಡುವ ತಪ್ಪನ್ನು ಮಾಡುತ್ತಿದ್ದೀರಿ. ನೀವು ನನ್ನನ್ನು ನಿಮ್ಮ ದೇವರಾದ ಯೆಹೋವನಲ್ಲಿಗೆ ಕಳುಹಿಸಿದಿರಿ. ‘ನಮಗಾಗಿ ಯೆಹೋವನಾದ ನಮ್ಮ ದೇವರನ್ನು ಪ್ರಾರ್ಥಿಸು. ದೇವರು ಮಾಡಬೇಕೆಂದು ಹೇಳಿದ್ದೆಲ್ಲವನ್ನು ನಮಗೆ ಹೇಳು, ನಾವು ಯೆಹೋವನ ಆಜ್ಞೆಯನ್ನು ಪಾಲಿಸುತ್ತೇವೆ’ ಎಂದು ನೀವು ಹೇಳಿದ್ದಿರಿ. 21 ಇಂದು, ನಾನು ನಿಮಗೆ ಯೆಹೋವನ ಸಂದೇಶವನ್ನು ತಿಳಿಸಿದ್ದೇನೆ. ಆದರೆ ನೀವು ನಿಮ್ಮ ದೇವರಾದ ಯೆಹೋವನ ಆಜ್ಞೆಯನ್ನು ಪಾಲಿಸಲಿಲ್ಲ. ನನ್ನ ಮೂಲಕ ಆತನು ನಿಮಗೆ ಹೇಳಿದ ಯಾವ ಮಾತನ್ನೂ ನೀವು ಕೇಳಲಿಲ್ಲ. 22 ಈಗ ನೀವು ಇದನ್ನು ನಿಶ್ಚಿತವಾಗಿ ತಿಳಿದುಕೊಳ್ಳಿ. ನೀವು ಈಜಿಪ್ಟಿನಲ್ಲಿ ವಾಸಮಾಡಲು ಹೋಗಬೇಕೆನ್ನುವಿರಿ. ಆದರೆ ಈಜಿಪ್ಟಿನಲ್ಲಿ ನೀವು ಖಡ್ಗದಿಂದಾದರೂ ಸಾಯುವಿರಿ, ಹಸಿವಿನಿಂದಾದರೂ ಸಾಯುವಿರಿ, ಅಥವಾ ಭಯಂಕರವಾದ ವ್ಯಾಧಿಯಿಂದಾದರೂ ಸಾಯುವಿರಿ.”

ಇಬ್ರಿಯರಿಗೆ 4

ದೇವರು ಆ ಜನರಿಗೆ ನೀಡಿದ ವಾಗ್ದಾನವು ನಮ್ಮಲ್ಲಿ ಇನ್ನೂ ಇದೆ. ನಾವು ದೇವರ ವಿಶ್ರಾಂತಿಯಲ್ಲಿ ಪ್ರವೇಶಿಸಬಹುದೆಂಬುದೇ ಆ ವಾಗ್ದಾನ. ಆದ್ದರಿಂದ ನಮ್ಮಲ್ಲಿ ಯಾರೂ ಆ ವಾಗ್ದಾನದ ಫಲವನ್ನು ಪಡೆಯುವದರಲ್ಲಿ ವಿಫಲರಾಗದಂತೆ ಬಹು ಎಚ್ಚರಿಕೆಯಿಂದಿರೋಣ. ರಕ್ಷಣಾಮಾರ್ಗದ ಕುರಿತು ಅವರಿಗೆ ತಿಳಿಸಲ್ಪಟ್ಟಂತೆಯೇ ನಮಗೂ ತಿಳಿಸಲಾಯಿತು. ಅವರು ಆ ಬೋಧನೆಯನ್ನು ಕೇಳಿದರೂ ಅವರಿಗೆ ಪ್ರಯೋಜನವಾಗಲಿಲ್ಲ. ಏಕೆಂದರೆ ಅವರು ಅದನ್ನು ನಂಬಿಕೆಯಿಂದ ಸ್ವೀಕರಿಸಿಕೊಳ್ಳಲಿಲ್ಲ. ನಂಬುವವರಾದ ನಾವು ದೇವರ ವಿಶ್ರಾಂತಿಯಲ್ಲಿ ಸೇರಲು ಸಮರ್ಥರಾಗಿದ್ದೇವೆ. ದೇವರು ಹೇಳಿದಂತೆ:

“ಆ ಜನರು ನನ್ನ ವಿಶ್ರಾಂತಿಯಲ್ಲಿ ಎಂದಿಗೂ ಪ್ರವೇಶಿಸುವುದಿಲ್ಲವೆಂದು
    ನಾನು ಕೋಪಗೊಂಡು ಪ್ರಮಾಣ ಮಾಡಿದೆನು.”(A)

ಈ ಲೋಕವನ್ನು ಸೃಷ್ಟಿಸಿದ ನಂತರ ತನ್ನ ಕಾರ್ಯಗಳು ಮುಗಿದುಹೋಗಿದ್ದರೂ ದೇವರು ಹೀಗೆ ಹೇಳಿದನು. ಪವಿತ್ರ ಗ್ರಂಥದ ಒಂದು ಭಾಗದಲ್ಲಿ ಆತನು ವಾರದ ಏಳನೆಯ ದಿನದ ಬಗ್ಗೆ ಹೀಗೆ ಮಾತಾಡಿದ್ದಾನೆ: “ಆದ್ದರಿಂದ ದೇವರು ತನ್ನ ಕಾರ್ಯಗಳನ್ನೆಲ್ಲ ಮುಗಿಸಿ ಏಳನೆಯ ದಿನ ವಿಶ್ರಾಂತಿ ಹೊಂದಿದನು.”(B) ಪವಿತ್ರ ಗ್ರಂಥದ ಇನ್ನೊಂದು ಭಾಗದಲ್ಲಿ ಆತನು, “ಆ ಜನರು ನನ್ನ ವಿಶ್ರಾಂತಿಯಲ್ಲಿ ಎಂದಿಗೂ ಪ್ರವೇಶಿಸುವುದಿಲ್ಲ”(C) ವೆಂದೂ ಹೇಳಿದ್ದಾನೆ.

ಆದ್ದರಿಂದ ಕೆಲವರು ದೇವರ ವಿಶ್ರಾಂತಿಯಲ್ಲಿ ಸೇರುತ್ತಾರೆಂಬುದು ಇನ್ನೂ ಖಚಿತವಾಗಿದೆ. ಆದರೆ ರಕ್ಷಣಾಮಾರ್ಗವನ್ನು ಮೊದಲು ಕೇಳಿದ ಜನರು ಪ್ರವೇಶಿಸಲಿಲ್ಲ. ಅವರು ವಿಧೇಯರಾಗದೆ ಇದ್ದುದರಿಂದ ಅವರು ಸೇರಲಿಲ್ಲ. ಆದ್ದರಿಂದ ಆತನು ಮತ್ತೊಂದು ವಿಶೇಷ ದಿನವನ್ನು ಯೋಜಿಸಿದನು. ಅದನ್ನು “ಈ ಹೊತ್ತು” ಎಂದು ಕರೆಯಲಾಗಿದೆ. ಆತನು ಆ ದಿನವನ್ನು ಕುರಿತು ಬಹುಕಾಲದ ನಂತರ ದಾವೀದನ ಮೂಲಕ ತಿಳಿಸಿದನು. ಪವಿತ್ರ ಗ್ರಂಥದ ಈ ಭಾಗವನ್ನು ನಾವು ಮೊದಲೊಮ್ಮೆ ನೋಡಿದೆವು:

“ನೀವು ಈ ಹೊತ್ತು ದೇವರ ಸ್ವರಕ್ಕೆ ಕಿವಿಗೊಟ್ಟರೆ,
    ನಿಮ್ಮ ಹೃದಯಗಳನ್ನು ಕಠಿಣಮಾಡಿಕೊಳ್ಳಬೇಡಿ.”(D)

ದೇವರು ವಾಗ್ದಾನ ಮಾಡಿದ್ದ ವಿಶ್ರಾಂತಿಗೆ ಯೆಹೋಶುವನು ಜನರನ್ನು ಕರೆದೊಯ್ದಿದ್ದರೆ ವಿಶ್ರಾಂತಿಯ ಮತ್ತೊಂದು ದಿನದ ಕುರಿತು ಹೇಳುತ್ತಿರಲಿಲ್ಲ. ದೇವಜನರಿಗೋಸ್ಕರವಿರುವ ಸಬ್ಬತ್ ಎಂಬ ವಿಶ್ರಾಂತಿಯು ಇನ್ನೂ ಬರಲಿದೆ ಎಂಬುದನ್ನು ಇದು ತೋರ್ಪಡಿಸುತ್ತದೆ. 10 ಆತನು ತನ್ನ ಕಾರ್ಯವನ್ನು ಮುಗಿಸಿದ ನಂತರ ವಿಶ್ರಾಂತಿ ಹೊಂದಿದನು. ಆದ್ದರಿಂದ ದೇವರ ವಿಶ್ರಾಂತಿಯಲ್ಲಿ ಪ್ರವೇಶಿಸುವವನು ಆತನು ಮಾಡಿದಂತೆ ತನ್ನ ಕಾರ್ಯವನ್ನು ಮುಗಿಸಿದವನಾಗಿರಬೇಕು. 11 ದೇವರ ವಿಶ್ರಾಂತಿಯಲ್ಲಿ ಪ್ರವೇಶಿಸಲು ನಮ್ಮಿಂದಾದಷ್ಟು ಪ್ರಯತ್ನಿಸೋಣ. ಆತನಿಗೆ ಅವಿಧೇಯರಾದ ಆ ಜನರನ್ನು ಅನುಸರಿಸಿ ನಮ್ಮಲ್ಲಿ ಯಾರೂ ವಿಫಲರಾಗದಂತೆ ನೋಡಿಕೊಳ್ಳೋಣ.

12 ದೇವರ ವಾಕ್ಯವು ಸಜೀವವಾದದ್ದು, ಕಾರ್ಯ ಸಾಧಕವಾದದ್ದು. ಅದು ಅತ್ಯಂತ ಹರಿತವಾದ ಖಡ್ಗಕ್ಕಿಂತಲೂ ಹರಿತವಾಗಿದ್ದು ನಾಟಿಕೊಳ್ಳುತ್ತದೆ. ಆತ್ಮಪ್ರಾಣಗಳನ್ನೂ ಕೀಲುಮಜ್ಜೆಗಳನ್ನೂ ವಿಭಾಗಿಸುತ್ತದೆ; ನಮ್ಮ ಹೃದಯದ ಉದ್ದೇಶಗಳನ್ನು ಮತ್ತು ಆಲೋಚನೆಗಳನ್ನು ವಿವೇಚಿಸುತ್ತದೆ. 13 ದೇವರ ದೃಷ್ಟಿಗೆ ಯಾವುದೂ ಮುಚ್ಚುಮರೆಯಾಗಿಲ್ಲ. ಆತನ ಕಣ್ಣೆದುರಿನಲ್ಲಿ ಪ್ರತಿಯೊಂದೂ ತೆರೆಯಲ್ಪಟ್ಟು ಬಟ್ಟಬಯಲಾಗಿವೆ. ನಾವು ನಮ್ಮ ಜೀವಿತದ ಬಗ್ಗೆ ಲೆಕ್ಕ ಒಪ್ಪಿಸಬೇಕಾಗಿರುವುದು ಆತನಿಗೇ.

ದೇವರ ಸನ್ನಿಧಿಗೆ ಬರಲು ಯೇಸುವಿನ ಸಹಾಯ

14 ಪರಲೋಕಕ್ಕೆ ಏರಿಹೋದ ಪ್ರಧಾನ ಯಾಜಕನೊಬ್ಬನು ನಮಗಿದ್ದಾನೆ. ಆತನೇ ದೇವರ ಮಗನಾದ ಯೇಸು. ಆದ್ದರಿಂದ ನಮಗಿರುವ ನಂಬಿಕೆಯಲ್ಲೇ ದೃಢವಾಗಿ ಸಾಗೋಣ. 15 ನಮ್ಮ ಪ್ರಧಾನ ಯಾಜಕನಾಗಿರುವ ಯೇಸು ನಮ್ಮ ದೌರ್ಬಲ್ಯವನ್ನು ಅರ್ಥಮಾಡಿಕೊಳ್ಳಲು ಸಮರ್ಥನಾಗಿದ್ದಾನೆ. ಆತನು ಈ ಲೋಕದಲ್ಲಿ ಜೀವಿಸಿದ್ದಾಗ, ಸರ್ವವಿಷಯಗಳಲ್ಲಿ ನಮ್ಮಂತೆಯೇ ಶೋಧನೆಗೆ ಗುರಿಯಾದರೂ ಪಾಪಮಾಡಲಿಲ್ಲ. 16 ಆದ್ದರಿಂದ ದೇವರ ಕೃಪಾಸಿಂಹಾಸನದ ಬಳಿಗೆ ಸಂಕೋಚಪಡದೆ ಬರೋಣ. ಕೊರತೆಯಲ್ಲಿರುವಾಗ ನಮಗೆ ಬೇಕಾದ ಸಹಾಯಕ್ಕಾಗಿ ಕೃಪೆಯನ್ನೂ ಕರುಣೆಯನ್ನೂ ಅಲ್ಲಿ ಹೊಂದಿಕೊಳ್ಳುವೆವು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International