Old/New Testament
ಯೆಹೂದದ ರಾಜನಾದ ಚಿದ್ಕೀಯನಿಗೆ ಒಂದು ಎಚ್ಚರಿಕೆ
34 ಯೆಹೋವನಿಂದ ಯೆರಮೀಯನಿಗೆ ಒಂದು ಸಂದೇಶ ಬಂದಿತು. ಬಾಬಿಲೋನಿನ ರಾಜನಾದ ನೆಬೂಕದ್ನೆಚ್ಚರನು ಜೆರುಸಲೇಮ್ ಮತ್ತು ಅದರ ಸುತ್ತಮುತ್ತಲಿನ ಊರುಗಳ ವಿರುದ್ಧ ಯುದ್ಧ ಮಾಡುತ್ತಿದ್ದಾಗ ಈ ಸಂದೇಶ ಬಂದಿತು. ಆಗ ನೆಬೂಕದ್ನೆಚ್ಚರನ ಸಂಗಡ ಅವನ ಸಮಸ್ತ ಸೈನ್ಯವು ಮತ್ತು ಅವನ ಸಾಮ್ರಾಜ್ಯದಲ್ಲಿದ್ದ ಎಲ್ಲಾ ರಾಜ್ಯಗಳ ಮತ್ತು ಜನರ ಸೈನ್ಯವು ಇತ್ತು.
2 ಆ ಸಂದೇಶ ಹೀಗಿತ್ತು: “ಇಸ್ರೇಲಿನ ದೇವರಾದ ಯೆಹೋವನು ಹೀಗೆ ಹೇಳುತ್ತಾನೆ: ಯೆರೆಮೀಯನೇ, ಯೆಹೂದದ ರಾಜನಾದ ಚಿದ್ಕೀಯನ ಬಳಿಗೆ ಹೋಗಿ ಅವನಿಗೆ ಈ ಸಂದೇಶವನ್ನು ತಿಳಿಸು. ‘ಚಿದ್ಕೀಯನೇ, ಯೆಹೋವನು ಹೀಗೆ ಹೇಳುತ್ತಾನೆ: ಅತಿ ಶೀಬ್ರದಲ್ಲಿ ನಾನು ಜೆರುಸಲೇಮ್ ನಗರವನ್ನು ಬಾಬಿಲೋನಿನ ರಾಜನಿಗೆ ಒಪ್ಪಿಸುತ್ತೇನೆ; ಅವನು ಅದನ್ನು ಸುಟ್ಟುಬಿಡುತ್ತಾನೆ. 3 ಚಿದ್ಕೀಯನೇ, ನೀನು ಬಾಬಿಲೋನಿನ ರಾಜನಿಂದ ತಪ್ಪಿಸಿಕೊಳ್ಳಲಾರೆ. ನಿಶ್ಚಿತವಾಗಿ ನಿನ್ನನ್ನು ಹಿಡಿದು ಅವನಿಗೆ ಒಪ್ಪಿಸಲಾಗುವುದು. ಬಾಬಿಲೋನಿನ ರಾಜನನ್ನು ನೀನು ಪ್ರತ್ಯಕ್ಷವಾಗಿ ನೋಡುವೆ. ಅವನು ನಿನ್ನೊಂದಿಗೆ ಮುಖಾಮುಖಿಯಾಗಿ ಮಾತನಾಡುವನು; ನೀನು ಬಾಬಿಲೋನಿಗೆ ಹೋಗುವೆ. 4 ಯೆಹೂದದ ರಾಜನಾದ ಚಿದ್ಕೀಯನೇ, ಯೆಹೋವನ ವಾಗ್ದಾನವನ್ನು ಕೇಳು. ಯೆಹೋವನು ನಿನ್ನ ಬಗ್ಗೆ ಹೀಗೆ ಹೇಳುತ್ತಾನೆ. ನಿನ್ನನ್ನು ಖಡ್ಗದಿಂದ ಕೊಲ್ಲಲಾಗುವುದಿಲ್ಲ. 5 ನೀನು ಸಮಾಧಾನದಿಂದ ಸಾಯುವೆ. ನೀನು ರಾಜನಾಗುವ ಮುನ್ನ ಆಳಿದ ನಿನ್ನ ಪೂರ್ವಿಕರಿಗೆ ಗೌರವ ತೋರುವದಕ್ಕಾಗಿ ಜನರು ಶವಸಂಸ್ಕಾರದ ಧೂಪವನ್ನು ಹಾಕಿದ್ದರು. ಹಾಗೆಯೇ ನಿನ್ನನ್ನು ಗೌರವಿಸಲು ಜನರು ಶವಸಂಸ್ಕಾರದ ಧೂಪವನ್ನು ಹಾಕುವರು. ಅವರು ನಿನಗೋಸ್ಕರ ಅಳುವರು. ಅವರು ದುಃಖದಿಂದ, “ಅಯ್ಯೋ, ಯೆಹೋವನೇ” ಎಂದು ಗೋಳಾಡುವರು. ಸ್ವತಃ ನಾನೇ ನಿನಗೆ ಈ ವಾಗ್ದಾನವನ್ನು ಮಾಡುತ್ತಿದ್ದೇನೆ.’” ಇದು ಯೆಹೋವನ ನುಡಿ.
6 ಆದ್ದರಿಂದ ಯೆರೆಮೀಯನು ಜೆರುಸಲೇಮಿನಲ್ಲಿದ್ದ ಚಿದ್ಕೀಯನಿಗೆ ಯೆಹೋವನ ಸಂದೇಶವನ್ನು ಕೊಟ್ಟನು. 7 ಆಗ ಬಾಬಿಲೋನಿನ ರಾಜನ ಸೈನ್ಯವು ಜೆರುಸಲೇಮಿನ ವಿರುದ್ಧ ಹೋರಾಡುತ್ತಿತ್ತು. ಬಾಬಿಲೋನಿನ ಸೈನ್ಯವು ತಾನು ಇನ್ನೂ ಸ್ವಾಧೀನಪಡಿಸಿಕೊಳ್ಳದ ಯೆಹೂದದ ನಗರಗಳ ವಿರುದ್ಧ ಕೂಡ ಹೋರಾಡುತ್ತಿತ್ತು. ಆ ಪಟ್ಟಣಗಳೆಂದರೆ ಲಾಕೀಷ್ ಮತ್ತು ಅಜೇಕ. ಯೆಹೂದದಲ್ಲಿ ಕೋಟೆಗಳನ್ನು ಹೊಂದಿದ್ದ ನಗರಗಳೆಂದರೆ ಇವೆರಡೇ.
ಜನರು ಒಡಂಬಡಿಕೆಯನ್ನು ಮುರಿದರು
8 ರಾಜನಾದ ಚಿದ್ಕೀಯನು ಜೆರುಸಲೇಮಿನ ಎಲ್ಲಾ ಜನರೊಂದಿಗೆ ಇಬ್ರಿಯದ ಗುಲಾಮರೆಲ್ಲರನ್ನೂ ಬಿಡುಗಡೆ ಮಾಡುವದಾಗಿ ಮಾತುಕೊಟ್ಟಿದ್ದನು. ಚಿದ್ಕೀಯನು ಹೀಗೆ ಮಾತುಕೊಟ್ಟ ತರುವಾಯ ಯೆಹೋವನಿಂದ ಯೆರೆಮೀಯನಿಗೆ ಒಂದು ಸಂದೇಶ ಬಂದಿತು. 9 ಪ್ರತಿಯೊಬ್ಬ ವ್ಯಕ್ತಿಯು ತನ್ನ ಇಬ್ರಿಯ ದಾಸದಾಸಿಯರನ್ನು ಬಿಡುಗಡೆ ಮಾಡಬೇಕಾಗಿತ್ತು. ಯೆಹೂದದ ಕುಲದ ಯಾರನ್ನೂ ಗುಲಾಮರನ್ನಾಗಿ ಇಟ್ಟುಕೊಳ್ಳುವಂತಿರಲಿಲ್ಲ. 10 ಆದ್ದರಿಂದ ಯೆಹೂದದ ಸಮಸ್ತ ಮುಖಂಡರು ಮತ್ತು ಎಲ್ಲಾ ಜನರು ತಮ್ಮ ದಾಸದಾಸಿಯರನ್ನು ಬಿಡುಗಡೆ ಮಾಡುವುದಾಗಿಯೂ ಅವರಿಂದ ಮುಂದೆ ಕೆಲಸ ಮಾಡಿಸುವದಿಲ್ಲ ಎಂಬುದಾಗಿಯೂ ಒಪ್ಪಿಕೊಂಡರು. ಆದ್ದರಿಂದ ಎಲ್ಲಾ ಗುಲಾಮರನ್ನು ಬಿಡುಗಡೆ ಮಾಡಲಾಯಿತು. 11 ಬಳಿಕ ಗುಲಾಮರನ್ನು ಇಟ್ಟುಕೊಂಡಿದ್ದ ಜನರು ತಮ್ಮ ಮನಸ್ಸನ್ನು ಬದಲಾಯಿಸಿ ತಾವು ಬಿಡುಗಡೆ ಮಾಡಿದ ಜನರನ್ನು ಪುನಃ ತಮ್ಮ ಗುಲಾಮರನ್ನಾಗಿ ಮಾಡಿಕೊಂಡರು.
12 ಆಗ ಯೆರೆಮೀಯನಿಗೆ ಯೆಹೋವನಿಂದ ಈ ಸಂದೇಶ ಬಂದಿತು: 13 ಯೆರೆಮೀಯನೇ, ಇಸ್ರೇಲಿನ ದೇವರಾದ ಯೆಹೋವನು ಹೀಗೆ ಹೇಳುತ್ತಾನೆ: “ನಾನು ಈಜಿಪ್ಟಿನಲ್ಲಿ ಗುಲಾಮರಾಗಿದ್ದ ನಿಮ್ಮ ಪೂರ್ವಿಕರನ್ನು ಅಲ್ಲಿಂದ ಹೊರತಂದೆನು. ನಾನು ಹಾಗೆ ಮಾಡಿದಾಗ ಅವರ ಸಂಗಡ ಒಂದು ಒಡಂಬಡಿಕೆಯನ್ನು ಮಾಡಿಕೊಂಡೆ. 14 ನಾನು ನಿಮ್ಮ ಪೂರ್ವಿಕರಿಗೆ ‘ಪ್ರತಿ ಏಳು ವರ್ಷದ ಕೊನೆಯಲ್ಲಿ ಪ್ರತಿಯೊಬ್ಬ ವ್ಯಕ್ತಿಯು ತನ್ನ ಇಬ್ರಿಯ ಗುಲಾಮರನ್ನು ಬಿಡುಗಡೆ ಮಾಡಬೇಕು. ತನ್ನನ್ನು ನಿಮಗೆ ಮಾರಿಕೊಂಡ ಇಬ್ರಿಯ ಸಹೋದರ ನಿಮ್ಮಲ್ಲಿದ್ದರೆ ಅವನು ಆರು ವರ್ಷ ಸೇವೆಮಾಡಿದ ನಂತರ ಅವನನ್ನು ಬಿಡುಗಡೆ ಮಾಡಬೇಕು’ ಎಂದು ಹೇಳಿದ್ದೆ. ಆದರೆ ನಿಮ್ಮ ಪೂರ್ವಿಕರು ನನ್ನ ಮಾತುಗಳನ್ನು ಕಿವಿಗೆ ಹಾಕಿಕೊಳ್ಳಲಿಲ್ಲ; ನನ್ನ ಕಡೆಗೆ ಗಮನ ಕೊಡಲಿಲ್ಲ. 15 ಸ್ವಲ್ಪಕಾಲದ ಹಿಂದೆ ನೀವು ನೀತಿಯುತವಾದದ್ದನ್ನು ಮಾಡಬೇಕೆಂದು ನಿಮ್ಮ ಮನಸ್ಸನ್ನು ಬದಲಾಯಿಸಿದಿರಿ. ನಿಮ್ಮಲ್ಲಿ ಪ್ರತಿಯೊಬ್ಬರು ನಿಮ್ಮಲ್ಲಿದ್ದ ಇಬ್ರಿಯ ಗುಲಾಮರನ್ನು ಬಿಡುಗಡೆ ಮಾಡಿದಿರಿ. ನೀವು ನನ್ನ ಹೆಸರಿನಿಂದ ಖ್ಯಾತಿಗೊಂಡಿರುವ ಆಲಯದಲ್ಲಿ, ನನ್ನ ಸಮ್ಮುಖದಲ್ಲಿ ಒಂದು ಒಡಂಬಡಿಕೆಯನ್ನು ಸಹ ಮಾಡಿಕೊಂಡಿರಿ. 16 ಆದರೆ ಈಗ ನೀವು ಮನಸ್ಸನ್ನು ಬದಲಾಯಿಸಿದ್ದೀರಿ. ನೀವು ನನ್ನ ಹೆಸರಿಗೆ ಗೌರವ ಕೊಡುವದಿಲ್ಲವೆಂಬುದನ್ನು ತೋರಿಸಿದ್ದೀರಿ. ನೀವು ಇದನ್ನು ಹೇಗೆ ಮಾಡಿದಿರಿ? ನಿಮ್ಮಲ್ಲಿ ಪ್ರತಿಯೊಬ್ಬರು ನೀವು ಬಿಡುಗಡೆ ಮಾಡಿದ ದಾಸದಾಸಿಯರನ್ನು ಹಿಂದಕ್ಕೆ ತೆಗೆದುಕೊಂಡಿರುವಿರಿ. ಅವರು ಪುನಃ ಗುಲಾಮರಾಗುವಂತೆ ಒತ್ತಾಯಿಸಿರುವಿರಿ.
17 “ಅದಕ್ಕಾಗಿ ಯೆಹೋವನು ಹೀಗೆನ್ನುತ್ತಾನೆ: ‘ನೀವು ನನ್ನ ಆಜ್ಞಾಪಾಲನೆಯನ್ನು ಮಾಡಿಲ್ಲ. ನೀವು ನಿಮ್ಮ ಸಹೋದರರಾದ ಇಬ್ರಿಯರಿಗೆ ಸ್ವಾತಂತ್ರ್ಯವನ್ನು ಕೊಟ್ಟಿಲ್ಲ. ನೀವು ಒಡಂಬಡಿಕೆಗನುಸಾರವಾಗಿ ನಡೆದುಕೊಂಡಿಲ್ಲ. ಅದಕ್ಕಾಗಿ ನಾನು “ಸ್ವಾತಂತ್ರ್ಯವನ್ನು ಕೊಡುತ್ತೇನೆ.” ಇದು ಯೆಹೋವನ ನುಡಿ. ಖಡ್ಗ, ಭಯಂಕರವಾದ ವ್ಯಾಧಿ ಮತ್ತು ಹಸಿವು ಇವುಗಳಿಗೆ ನಿಮ್ಮನ್ನು ಕೊಲ್ಲುವ “ಸ್ವಾತಂತ್ರ್ಯವನ್ನು” ನಾನು ಕೊಡುತ್ತೇನೆ. ಈ ವಿಷಯ ಕೇಳಿ ಭೂಲೋಕದ ಸಮಸ್ತ ರಾಜ್ಯಗಳು ಭಯಪಡುವಂತೆ ಮಾಡುತ್ತೇನೆ. 18 ನನ್ನ ಒಡಂಬಡಿಕೆಯನ್ನು ಮುರಿದ ಮತ್ತು ನನ್ನ ಸಮ್ಮುಖದಲ್ಲಿ ಕೊಟ್ಟ ಮಾತನ್ನು ಉಳಿಸಿಕೊಳ್ಳದ ಜನರನ್ನು ನಾನು ತ್ಯಜಿಸುವೆನು. ಇವರು ನನ್ನ ಮುಂದೆ ಒಂದು ಕರುವನ್ನು ಎರಡು ತುಂಡುಗಳಾಗಿ ಕತ್ತರಿಸಿ ಇಟ್ಟು ಆ ಎರಡು ತುಂಡುಗಳ ಮಧ್ಯದಿಂದ ಹಾದುಹೋದರು. 19 ಯೆಹೂದದ ಮತ್ತು ಜೆರುಸಲೇಮಿನ ನಾಯಕರು, ಪ್ರಮುಖ ಅಧಿಕಾರಿಗಳು, ಯಾಜಕರು ಮತ್ತು ದೇಶದ ಸಕಲ ಜನರು ಇವರೆಲ್ಲ ನನ್ನ ಮುಂದೆ ಒಡಂಬಡಿಕೆಯನ್ನು ಮಾಡಿದಾಗ ಕರುವಿನ ಶರೀರದ ಎರಡು ತುಂಡುಗಳ ಮಧ್ಯದಿಂದ ಹಾದುಹೋದರು. 20 ಆದ್ದರಿಂದ ನಾನು ಆ ಜನರನ್ನು ಅವರ ವೈರಿಗಳಿಗೆ ಮತ್ತು ಅವರನ್ನು ಕೊಲ್ಲಲು ಇಚ್ಛಿಸುವ ಪ್ರತಿಯೊಬ್ಬರಿಗೆ ಕೊಡುತ್ತೇನೆ. ಆ ಜನರ ದೇಹಗಳು ಗಾಳಿಯಲ್ಲಿ ಹಾರಾಡುವ ಪಕ್ಷಿಗಳಿಗೂ ಭೂಮಿಯ ಮೇಲಿನ ಕಾಡುಪ್ರಾಣಿಗಳಿಗೂ ಆಹಾರವಾಗುವವು. 21 ಯೆಹೂದದ ರಾಜನಾದ ಚಿದ್ಕೀಯನನ್ನೂ ಅವನ ನಾಯಕರುಗಳನ್ನೂ ನಾನು ಅವರ ಶತ್ರುಗಳಿಗೂ ಅವರನ್ನು ಕೊಲ್ಲಬಯಸುವ ಜನರಿಗೂ ಕೊಡುವೆನು. ಬಾಬಿಲೋನಿನ ಸೈನ್ಯವು ಜೆರುಸಲೇಮನ್ನು ಬಿಟ್ಟುಹೋಗಿದ್ದರೂ ನಾನು ಚಿದ್ಕೀಯ ಮತ್ತು ಅವನ ಜನರನ್ನು ಬಾಬಿಲೋನಿನ ಸೈನಿಕರ ಕೈಗೆ ಒಪ್ಪಿಸುತ್ತೇನೆ. 22 ಬಾಬಿಲೋನಿನ ಸೈನ್ಯವು ಜೆರುಸಲೇಮಿಗೆ ಬರಬೇಕೆಂದು ನಾನು ಆಜ್ಞಾಪಿಸುತ್ತೇನೆ.’ ಇದು ಯೆಹೋವನ ನುಡಿ. ‘ಆ ಸೈನ್ಯವು ಜೆರುಸಲೇಮಿನ ವಿರುದ್ಧ ಹೋರಾಡುವುದು. ಅವರು ಅದನ್ನು ಸ್ವಾಧೀನಪಡಿಸಿಕೊಳ್ಳುವರು ಮತ್ತು ಅದಕ್ಕೆ ಬೆಂಕಿಯಿಟ್ಟು ಸುಟ್ಟುಬಿಡುವರು. ನಾನು ಯೆಹೂದ ಪ್ರದೇಶದ ನಗರಗಳನ್ನು ನಾಶಮಾಡುವೆನು. ಆ ನಗರಗಳು ಬರಿದಾದ ಮರುಭೂಮಿಗಳಾಗುವವು. ಅಲ್ಲಿ ಯಾರೂ ವಾಸಮಾಡಲಾರರು.’”
ರೇಕಾಬ್ಯರ ಒಂದು ಒಳ್ಳೆಯ ದೃಷ್ಟಾಂತ
35 ಯೆಹೋಯಾಕೀಮನು ಯೆಹೂದವನ್ನು ಆಳುತ್ತಿದ್ದ ಕಾಲದಲ್ಲಿ ಯೆರೆಮೀಯನಿಗೆ ಯೆಹೋವನಿಂದ ಒಂದು ಸಂದೇಶ ಬಂದಿತು. ಯೆಹೋಯಾಕೀಮನು ರಾಜನಾದ ಯೋಷೀಯನ ಮಗನಾಗಿದ್ದನು. ಯೆಹೋವನ ಸಂದೇಶ ಹೀಗಿತ್ತು: 2 “ಯೆರೆಮೀಯನೇ, ರೇಕಾಬನ ಕುಟುಂಬದವರಲ್ಲಿಗೆ[a] ಹೋಗು. ಅವರನ್ನು ಯೆಹೋವನ ಆಲಯದ ಒಂದು ಪಕ್ಕದ ಕೋಣೆಗೆ ಕರೆದು, ಕುಡಿಯುವದಕ್ಕೆ ದ್ರಾಕ್ಷಾರಸವನ್ನು ಕೊಡು.”
3 ಆದ್ದರಿಂದ ನಾನು (ಯೆರೆಮೀಯನು) ಯಾಜನ್ಯನನ್ನು ಕರೆಯಲು ಹೋದೆನು. ಯಾಜನ್ಯನು ಯೆರೆಮೀಯನೆಂಬುವನ[b] ಮಗ. ಯೆರೆಮೀಯನು ಹಬಚ್ಚಿನ್ಯನ ಮಗ. ನಾನು ಯಾಜನ್ಯನ ಎಲ್ಲಾ ಸಹೋದರರನ್ನೂ ಮಕ್ಕಳನ್ನೂ ಕರೆತಂದೆನು. ನಾನು ರೇಕಾಬ್ಯರ ಇಡೀ ಮನೆತನವನ್ನು ಒಟ್ಟಿಗೆ ಸೇರಿಸಿದೆನು. 4 ಅನಂತರ ನಾನು ರೇಕಾಬ ವಂಶದವರನ್ನು ಯೆಹೋವನ ಆಲಯದಲ್ಲಿ ಕರೆತಂದೆನು. ನಾವು ಹಾನಾನನ ಮಕ್ಕಳ ಕೋಣೆ ಎಂದು ಕರೆಯಲ್ಪಡುವ ಕೋಣೆಯೊಳಕ್ಕೆ ಹೋದೆವು. ಹಾನಾನನು ಇಗ್ದಲ್ಯನೆಂಬವನ ಮಗನು. ಹಾನಾನನು ದೇವರ ಮನುಷ್ಯ. ಈ ಕೋಣೆಯು ಯೆಹೂದದ ರಾಜಕುಮಾರರ ಕೋಣೆಯ ಪಕ್ಕದಲ್ಲಿತ್ತು. ಇದು ಶಲ್ಲೂಮನ ಮಗನಾದ ಮಾಸೇಯನ ಕೋಣೆಯ ಮೇಲ್ಗಡೆ ಇತ್ತು. ಮಾಸೇಯನು ಆಲಯದ ದ್ವಾರಪಾಲಕನಾಗಿದ್ದನು. 5 ಆಮೇಲೆ ನಾನು ದ್ರಾಕ್ಷಾರಸ ತುಂಬಿದ ಕೆಲವು ಪಾತ್ರೆಗಳನ್ನು ಮತ್ತು ಬಟ್ಟಲುಗಳನ್ನು ರೇಕಾಬ್ಯ ಕುಟುಂಬದವರ ಮುಂದಿಟ್ಟು, “ಸ್ವಲ್ಪ ದ್ರಾಕ್ಷಾರಸವನ್ನು ಕುಡಿಯಿರಿ” ಎಂದೆನು.
6 ಆದರೆ ರೇಕಾಬ್ಯರು, “ನಾವು ದ್ರಾಕ್ಷಾರಸವನ್ನು ಕುಡಿಯುವುದೇ ಇಲ್ಲ. ಏಕೆಂದರೆ ನಮ್ಮ ಪೂರ್ವಿಕನಾದ ರೇಕಾಬನ ಮಗನಾದ ಯೋನಾದಾಬನು ನಮಗೆ, ‘ನೀವು ಮತ್ತು ನಿಮ್ಮ ಸಂತಾನದವರು ಎಂದೆಂದಿಗೂ ದ್ರಾಕ್ಷಾರಸವನ್ನು ಕುಡಿಯಬಾರದು. 7 ನೀವೆಂದೂ ಮನೆಯನ್ನು ಕಟ್ಟಿಕೊಳ್ಳಬಾರದು, ಬೀಜಗಳನ್ನು ಬಿತ್ತಬಾರದು, ದ್ರಾಕ್ಷಿತೋಟಗಳನ್ನು ಬೆಳಸಬಾರದು. ನೀವು ಅವುಗಳಲ್ಲಿ ಒಂದನ್ನು ಕೂಡ ಎಂದಿಗೂ ಮಾಡಬಾರದು. ನೀವು ಕೇವಲ ಗುಡಾರಗಳಲ್ಲಿ ವಾಸಿಸಬೇಕು. ಆಗ ನೀವು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ವಲಸೆಹೋಗುವ ದೇಶದಲ್ಲಿ ಬಹಳ ಕಾಲದವರೆಗೆ ಇರಬಲ್ಲಿರಿ’ ಎಂದು ಆಜ್ಞಾಪಿಸಿದ್ದಾನೆ. 8 ಆದ್ದರಿಂದ ರೇಕಾಬ್ಯರಾದ ನಾವು ನಮ್ಮ ಪೂರ್ವಿಕನಾದ ಯೋನಾದಾಬನು ಕೊಟ್ಟ ಆಜ್ಞೆಯನ್ನು ಸಂಪೂರ್ಣವಾಗಿ ಪಾಲಿಸಿದ್ದೇವೆ. ನಾವು ದ್ರಾಕ್ಷಾರಸವನ್ನು ಕುಡಿಯುವುದಿಲ್ಲ. ನಮ್ಮ ಹೆಂಡತಿಯರು ಮತ್ತು ಮಕ್ಕಳು ಸಹ ಎಂದೂ ದ್ರಾಕ್ಷಾರಸವನ್ನು ಕುಡಿಯುವುದಿಲ್ಲ. 9 ವಾಸಿಸುವದಕ್ಕೆ ನಾವೆಂದೂ ಮನೆಗಳನ್ನು ಕಟ್ಟುವದಿಲ್ಲ: ದ್ರಾಕ್ಷಿತೋಟಗಳನ್ನಾಗಲಿ ಹೊಲಗಳನ್ನಾಗಲಿ ಕೊಳ್ಳುವುದಿಲ್ಲ; ಬೀಜವನ್ನು ಬಿತ್ತುವದಿಲ್ಲ. 10 ನಾವು ಗುಡಾರದಲ್ಲಿ ವಾಸಮಾಡಿದ್ದೇವೆ; ನಮ್ಮ ಪೂರ್ವಿಕನಾದ ಯೋನಾದಾಬನು ನಮಗೆ ವಿಧಿಸಿದ್ದನ್ನೆಲ್ಲ ಆಸಕ್ತಿಯಿಂದ ಮಾಡಿದ್ದೇವೆ. 11 ಆದರೆ ಬಾಬಿಲೋನಿನ ರಾಜನಾದ ನೆಬೂಕದ್ನೆಚ್ಚರನು ಯೆಹೂದ ದೇಶದ ಮೇಲೆ ಧಾಳಿ ಮಾಡಿದಾಗ ನಾವು ಜೆರುಸಲೇಮ್ ನಗರದಲ್ಲಿ ಪ್ರವೇಶ ಮಾಡಿ ಹೀಗೆ ಮಾತನಾಡಿಕೊಂಡೆವು, ‘ಬನ್ನಿ, ನಾವು ಬಾಬಿಲೋನಿನ ಸೈನ್ಯದಿಂದ ಮತ್ತು ಅರಾಮ್ಯರ ಸೈನ್ಯದಿಂದ ತಪ್ಪಿಸಿಕೊಳ್ಳುವದಕ್ಕಾಗಿ ಜೆರುಸಲೇಮ್ ನಗರವನ್ನು ಪ್ರವೇಶಿಸೋಣ.’ ಹೀಗಾಗಿ ನಾವು ಜೆರುಸಲೇಮ್ ನಗರದಲ್ಲಿ ವಾಸಿಸುತ್ತಿದ್ದೇವೆ” ಎಂದು ಹೇಳಿದರು.
12 ಆಗ ಯೆರೆಮೀಯನಿಗೆ ಯೆಹೋವನಿಂದ ಸಂದೇಶ ಬಂದಿತು: 13 “ಇಸ್ರೇಲಿನ ದೇವರೂ ಸರ್ವಶಕ್ತನೂ ಆಗಿರುವ ಯೆಹೋವನು ಹೀಗೆ ಹೇಳಿದನು: ಯೆರೆಮೀಯನೇ, ಹೋಗಿ ಈ ಸಂದೇಶವನ್ನು ಯೆಹೂದದ ಮತ್ತು ಜೆರುಸಲೇಮಿನ ಜನರಿಗೆ ತಿಳಿಸು. ನೀವು ಇದರಿಂದ ಒಂದು ಪಾಠವನ್ನು ಕಲಿಯಬೇಕು ಮತ್ತು ನನ್ನ ಸಂದೇಶವನ್ನು ಅನುಸರಿಸಬೇಕು. 14 ‘ರೇಕಾಬನ ಮಗನಾದ ಯೋನಾದಾಬನು ತನ್ನ ಮಕ್ಕಳಿಗೆ ದ್ರಾಕ್ಷಾರಸವನ್ನು ಕುಡಿಯಬೇಡಿರೆಂದು ಹೇಳಿದನು. ಅವನ ಆಜ್ಞೆಯನ್ನು ಪಾಲಿಸಲಾಗಿದೆ. ಇಂದಿನವರೆಗೂ ಯೋನಾದಾಬನ ಸಂತಾನದವರು ತಮ್ಮ ಪೂರ್ವಿಕರ ಆಜ್ಞೆಯನ್ನು ಪಾಲಿಸಿದ್ದಾರೆ. ಅವರು ದ್ರಾಕ್ಷಾರಸವನ್ನು ಕುಡಿಯುವುದಿಲ್ಲ. ನಾನೇ ನಿಮ್ಮ ದೇವರಾದ ಯೆಹೋವನು. ನಾನು ಯೆಹೂದದ ಜನರಾದ ನಿಮಗೆ ಮತ್ತೆಮತ್ತೆ ಸಂದೇಶಗಳನ್ನು ಕೊಟ್ಟಿದ್ದೇನೆ. ಆದರೆ ನೀವು ನನ್ನ ಆಜ್ಞೆಗಳನ್ನು ಪಾಲಿಸಲಿಲ್ಲ. 15 ನಾನು ನನ್ನ ಸೇವಕರಾದ ಪ್ರವಾದಿಗಳನ್ನು ಇಸ್ರೇಲಿಗೆ ಮತ್ತು ಯೆಹೂದಕ್ಕೆ ಕಳುಹಿಸಿಕೊಟ್ಟೆ. ನಾನು ಅವರನ್ನು ನಿಮ್ಮಲ್ಲಿಗೆ ಪುನಃಪುನಃ ಕಳುಹಿಸಿಕೊಟ್ಟೆ. ಆ ಪ್ರವಾದಿಗಳು, “ಇಸ್ರೇಲಿನ ಮತ್ತು ಯೆಹೂದದ ಪ್ರತಿಯೊಬ್ಬರೂ ದುಷ್ಕೃತ್ಯಗಳನ್ನು ಮಾಡುವದನ್ನು ನಿಲ್ಲಿಸಬೇಕು. ನೀವು ಒಳ್ಳೆಯವರಾಗಿರಬೇಕು. ಬೇರೆ ದೇವರುಗಳನ್ನು ಅನುಸರಿಸಬಾರದು. ಅವುಗಳನ್ನು ಪೂಜಿಸಬಾರದು. ಅವುಗಳ ಸೇವೆಮಾಡಬಾರದು ಎಂದು ಹೇಳಿದರು. ನನ್ನ ಆಜ್ಞೆಯನ್ನು ಪಾಲಿಸಿದರೆ ನಾನು ನಿಮಗೂ ಮತ್ತು ನಿಮ್ಮ ಪೂರ್ವಿಕರಿಗೂ ಕೊಟ್ಟ ಪ್ರದೇಶದಲ್ಲಿ ನೀವು ವಾಸಿಸಬಹುದು” ಎಂದು ಹೇಳಿದ್ದೆ. ಆದರೆ ನೀವು ನನ್ನ ಸಂದೇಶದ ಕಡೆಗೆ ಗಮನ ಕೊಡಲಿಲ್ಲ. 16 ಯೋನಾದಾಬನ ಸಂತಾನದವರು ತಮ್ಮ ಪೂರ್ವಿಕರು ವಿಧಿಸಿದ ಆಜ್ಞೆಗಳನ್ನು ಪಾಲಿಸಿದರು. ಆದರೆ ಯೆಹೂದದ ಜನರು ನನ್ನ ಆಜ್ಞೆಯನ್ನು ಪಾಲಿಸಲಿಲ್ಲ.’
17 “ಇಸ್ರೇಲಿನ ದೇವರೂ ಸರ್ವಶಕ್ತನೂ ಆಗಿರುವ ಯೆಹೋವನು ಹೀಗೆಂದನು: ‘ಯೆಹೂದ ಮತ್ತು ಜೆರುಸಲೇಮಿಗೆ ಅನೇಕ ಕೇಡುಗಳು ಸಂಭವಿಸುವವೆಂದು ನಾನು ಹೇಳಿರುವೆನು. ಆ ಎಲ್ಲಾ ಕೇಡುಗಳು ಬೇಗನೆ ಸಂಭವಿಸುವಂತೆ ನಾನು ಮಾಡುವೆನು. ನಾನು ಆ ಜನರೊಂದಿಗೆ ಮಾತನಾಡಿದೆ, ಆದರೆ ಅವರು ಕಿವಿಗೆ ಹಾಕಿಕೊಳ್ಳಲಿಲ್ಲ. ನಾನು ಅವರನ್ನು ಕೂಗಿದೆ, ಆದರೆ ಅವರು ನನಗೆ ಓಗೊಡಲಿಲ್ಲ.’”
18 ಅನಂತರ ಯೆರೆಮೀಯನು ರೇಕಾಬ್ಯರಿಗೆ ಹೀಗೆ ಹೇಳಿದನು, “ಸರ್ವಶಕ್ತನಾದ ಯೆಹೋವನು, ಇಸ್ರೇಲಿನ ದೇವರು ಹೀಗೆ ಹೇಳುತ್ತಾನೆ. ‘ನೀವು ನಿಮ್ಮ ಪೂರ್ವಿಕನಾದ ಯೋನಾದಾಬನ ಆಜ್ಞೆಗಳನ್ನು ಪಾಲಿಸಿದ್ದೀರಿ. ನೀವು ಯೋನಾದಾಬನ ಎಲ್ಲಾ ಉಪದೇಶಗಳನ್ನು ಅನುಸರಿಸಿದ್ದೀರಿ. ನೀವು ಅವನು ವಿಧಿಸಿದಂತೆ ಎಲ್ಲವನ್ನು ಮಾಡಿದ್ದೀರಿ.’ 19 ಆದ್ದರಿಂದ ಇಸ್ರೇಲಿನ ದೇವರಾದ ಸರ್ವಶಕ್ತನಾದ ಯೆಹೋವನು ‘ರೇಕಾಬನ ಮಗನಾದ ಯೋನಾದಾಬನ ಸಂತಾನದವರು ಯಾವಾಗಲೂ ನನ್ನ ಸೇವೆಯಲ್ಲಿರುವರು’ ಎಂದು ನುಡಿದನು.”
ಯೆಹೋಯಾಕೀಮನು ಯೆರೆಮೀಯನ ಗ್ರಂಥವನ್ನು ಸುಟ್ಟದ್ದು
36 ಯೋಷೀಯನ ಮಗನಾದ ಯೆಹೋಯಾಕೀಮನ ಆಳ್ವಿಕೆಯ ನಾಲ್ಕನೇ ವರ್ಷದಲ್ಲಿ ಯೆರೆಮೀಯನಿಗೆ ಯೆಹೋವನಿಂದ ಒಂದು ಸಂದೇಶ ಬಂದಿತು. ಯೆಹೋವನ ಸಂದೇಶ ಹೀಗಿತ್ತು: 2 “ಯೆರೆಮೀಯನೇ, ಒಂದು ಸುರಳಿಯನ್ನು ತೆಗೆದುಕೊಂಡು ನಾನು ನಿನಗೆ ಹೇಳಿದ ಎಲ್ಲಾ ಸಂದೇಶಗಳನ್ನು ಅದರಲ್ಲಿ ಬರೆದಿಡು. ನಾನು ನಿನಗೆ ಇಸ್ರೇಲ್ ಮತ್ತು ಯೆಹೂದ ಜನಾಂಗಗಳ ಬಗ್ಗೆಯೂ ಮತ್ತು ಉಳಿದ ಜನಾಂಗಗಳ ಬಗ್ಗೆಯೂ ಹೇಳಿದ್ದೇನೆ. ಯೋಷೀಯನ ಆಳ್ವಿಕೆಯ ಕಾಲದಿಂದ ಇಲ್ಲಿಯವರೆಗೂ ನಾನು ನಿನಗೆ ಹೇಳಿದ ಪ್ರತಿಯೊಂದು ಶಬ್ಧವನ್ನೂ ಬರೆದಿಡು. 3 ನಾನು ಮಾಡಬೇಕೆಂದು ಯೋಚಿಸಿರುವುದನ್ನು ಯೆಹೂದ ಕುಲದವರು ಕೇಳಿಸಿಕೊಳ್ಳಬಹುದು. ಅವರು ಮಾಡುತ್ತಿರುವ ದುಷ್ಕೃತ್ಯಗಳನ್ನು ನಿಲ್ಲಿಸಬಹುದು. ಅವರು ಹಾಗೆ ಮಾಡಿದರೆ ಅವರು ಮಾಡಿದ ಪಾಪಗಳನ್ನು ನಾನು ಕ್ಷಮಿಸುವೆನು.”
4 ಆಗ ಯೆರೆಮೀಯನು ಬಾರೂಕನೆಂಬ ಒಬ್ಬ ವ್ಯಕ್ತಿಯನ್ನು ಕರೆದನು. ಬಾರೂಕನು ನೇರೀಯನ ಮಗ. ಯೆರೆಮೀಯನು ಯೆಹೋವನ ಸಂದೇಶವನ್ನು ಹೇಳುತ್ತಿದ್ದಾಗ ಬಾರೂಕನು ಆ ಸಂದೇಶವನ್ನು ಸುರುಳಿಯ ಮೇಲೆ ಬರೆದನು. 5 ಆಗ ಯೆರೆಮೀಯನು ಬಾರೂಕನಿಗೆ ಹೀಗೆ ಹೇಳಿದನು: “ಯೆಹೋವನ ಆಲಯಕ್ಕೆ ನಾನು ಹೋಗಲಾರೆ. ಅಲ್ಲಿ ಹೋಗುವದಕ್ಕೆ ಅಪ್ಪಣೆಯಿಲ್ಲ. 6 ಆದ್ದರಿಂದ ನೀನು ಯೆಹೋವನ ಆಲಯಕ್ಕೆ ಉಪವಾಸದ ದಿನ ಹೋಗು ಮತ್ತು ಸುರುಳಿಯಲ್ಲಿ ಬರೆದದ್ದನ್ನು ಜನರ ಮುಂದೆ ಓದು. ನಾನು ಹೇಳುತ್ತಿದ್ದಂತೆಯೇ ನೀನು ಸುರುಳಿಯ ಮೇಲೆ ಬರೆದುಕೊಂಡ ಯೆಹೋವನ ಸಂದೇಶಗಳನ್ನು ಆ ಜನರ ಮುಂದೆ ಓದು. ತಾವು ವಾಸಮಾಡುವ ಸ್ಥಳಗಳಿಂದ ಜೆರುಸಲೇಮಿಗೆ ಬಂದಿರುವ ಎಲ್ಲಾ ಯೆಹೂದ್ಯರ ಮುಂದೆ ಆ ಸಂದೇಶಗಳನ್ನು ಓದು. 7 ಬಹುಶಃ ಆ ಜನರು ತಮಗೆ ಸಹಾಯಮಾಡೆಂದು ಯೆಹೋವನನ್ನು ಪ್ರಾರ್ಥಿಸಬಹುದು. ಆಗ ಪ್ರತಿಯೊಬ್ಬನೂ ದುಷ್ಕೃತ್ಯ ಮಾಡುವದನ್ನು ನಿಲ್ಲಿಸಬಹುದು. ಆ ಜನರ ಮೇಲೆ ತನಗೆ ಬಹಳ ಕೋಪಬಂದಿದೆ ಎಂದು ಯೆಹೋವನು ಪ್ರಕಟಿಸಿದ್ದಾನೆ.” 8 ಪ್ರವಾದಿಯಾದ ಯೆರೆಮೀಯನು ತನಗೆ ಮಾಡಲು ಹೇಳಿದಂತೆ ನೇರೀಯನ ಮಗನಾದ ಬಾರೂಕನು ಮಾಡಿದನು. ಬಾರೂಕನು ಸುರುಳಿಯ ಮೇಲೆ ಬರೆದ ಯೆಹೋವನ ಸಂದೇಶಗಳನ್ನು ಗಟ್ಟಿಯಾಗಿ ಯೆಹೋವನ ಆಲಯದಲ್ಲಿ ಓದಿದನು.
9 ಯೆಹೋಯಾಕೀಮನ ಆಳ್ವಿಕೆಯ ಐದನೇ ವರ್ಷದ ಒಂಭತ್ತನೇ ತಿಂಗಳಲ್ಲಿ ಒಂದು ಉಪವಾಸವನ್ನು ಪ್ರಕಟಿಸಲಾಯಿತು. ಜೆರುಸಲೇಮ್ ನಗರದ ನಿವಾಸಿಗಳೆಲ್ಲರೂ ಯೆಹೂದದ ಬೇರೆ ಊರುಗಳಿಂದ ಜೆರುಸಲೇಮಿಗೆ ಬಂದವರೆಲ್ಲರೂ ಯೆಹೋವನ ಆಲಯದಲ್ಲಿ ಉಪವಾಸ ಮಾಡುವರೆಂದು ಗೊತ್ತುಪಡಿಸಲಾಗಿತ್ತು. 10 ಆ ಸಂದರ್ಭದಲ್ಲಿ ಯೆರೆಮೀಯನು ಹೇಳಿದ ಆ ಸಂದೇಶವನ್ನು ಬಾರೂಕನು ಓದಿದನು. ಅವನು ಯೆಹೋವನ ಆಲಯದಲ್ಲಿ ಆ ಸುರುಳಿಯನ್ನು ಓದಿದನು. ಯೆಹೋವನ ಆಲಯದಲ್ಲಿದ್ದ ಎಲ್ಲಾ ಜನರು ಕೇಳುವಂತೆ ಬಾರೂಕನು ಆ ಸುರುಳಿಯನ್ನು ಓದಿದನು. ಆ ಸುರುಳಿಯನ್ನು ಓದುವಾಗ ಬಾರೂಕನು ಮೇಲಿನ ಪ್ರಾಕಾರದಲ್ಲಿದ್ದ ಗೆಮರ್ಯನ ಕೋಣೆಯಲ್ಲಿದ್ದನು. ಆ ಕೋಣೆಯು ಪವಿತ್ರ ಆಲಯದ ಹೊಸ ಬಾಗಿಲಿನ ಹತ್ತಿರ ಇತ್ತು. ಗೆಮರ್ಯನು ಶಾಫಾನನ ಮಗನಾಗಿದ್ದನು. ಗೆಮರ್ಯನು ಯೆಹೋವನ ಆಲಯದಲ್ಲಿ ಯೆಹೂದ್ಯ ಧರ್ಮಶಾಸ್ತ್ರಜ್ಞನಾಗಿದ್ದನು.
11 ಬಾರೂಕನು ಓದಿದ ಎಲ್ಲಾ ಯೆಹೋವನ ಸಂದೇಶಗಳನ್ನು ಮೀಕಾಯನೆಂಬ ಒಬ್ಬ ಮನುಷ್ಯನು ಕೇಳಿಸಿಕೊಂಡನು. ಮೀಕಾಯನು ಶಾಫಾನನ ಮಗನಾದ ಗೆಮರ್ಯನ ಮಗನಾಗಿದ್ದನು. 12 ಸುರುಳಿಯಲ್ಲಿದ್ದ ಸಂದೇಶಗಳನ್ನು ಕೇಳಿದ ಕೂಡಲೇ ಅವನು ರಾಜನ ಅರಮನೆಯಲ್ಲಿದ್ದ ಆಸ್ಥಾನದ ಅಧಿಕಾರಿಯ ಕೋಣೆಗೆ ಹೋದನು. ರಾಜನ ಅರಮನೆಯಲ್ಲಿ ಎಲ್ಲಾ ರಾಜಾಧಿಕಾರಿಗಳು ಕುಳಿತುಕೊಂಡಿದ್ದರು. ಆ ಅಧಿಕಾರಿಗಳ ಹೆಸರುಗಳು ಇಂತಿವೆ: ದರ್ಬಾರಿನ ಅಧಿಕಾರಿಯಾದ ಎಲೀಷಾಮನು, ಶೆಮಾಯನ ಮಗನಾದ ದೆಲಾಯನು, ಅಕ್ಬೋರನ ಮಗನಾದ ಎಲ್ನಾಥಾನನು, ಶಾಫಾನನ ಮಗನಾದ ಗೆಮರ್ಯನು, ಹನನೀಯನ ಮಗನಾದ ಚಿದ್ಕೀಯನು ಮತ್ತು ಉಳಿದೆಲ್ಲ ಅಧಿಕಾರಿಗಳು ಅಲ್ಲಿದ್ದರು. 13 ಬಾರೂಕನು ಸುರಳಿಯಿಂದ ಓದಿದ ಎಲ್ಲಾ ವಿಷಯವನ್ನು ಮೀಕಾಯನು ಈ ಅಧಿಕಾರಿಗಳಿಗೆ ಹೇಳಿದನು.
14 ಆಗ ಆ ಅಧಿಕಾರಿಗಳೆಲ್ಲ ಯೆಹೂದಿ ಎಂಬುವನನ್ನು ಬಾರೂಕನಲ್ಲಿಗೆ ಕಳುಹಿಸಿಕೊಟ್ಟರು. ಯೆಹೂದಿಯು ಶೆಲೆಮ್ಯನ ಮಗನಾದ ನೆಥನ್ಯನ ಮಗ. ಶೆಲೆಮ್ಯನು ಕೂಷಿಯ ಮಗ. ಯೆಹೂದಿಯು ಬಾರೂಕನಿಗೆ, “ನೀನು ಓದಿದ ಸುರುಳಿಯನ್ನು ತೆಗೆದುಕೊಂಡು ನನ್ನ ಜೊತೆ ಬಾ” ಎಂದು ಕರೆದನು.
ನೇರೀಯನ ಮಗನಾದ ಬಾರೂಕನು ಸುರುಳಿಯನ್ನು ತೆಗೆದುಕೊಂಡು ಯೆಹೂದಿಯ ಸಂಗಡ ಆ ಅಧಿಕಾರಿಗಳ ಹತ್ತಿರಕ್ಕೆ ಹೋದನು.
15 ಆಗ ಆ ಅಧಿಕಾರಿಗಳು ಬಾರೂಕನಿಗೆ, “ಕುಳಿತುಕೊ. ಆ ಸುರುಳಿಯನ್ನು ನಮ್ಮ ಮುಂದೆ ಓದು” ಎಂದರು.
ಬಾರೂಕನು ಸುರುಳಿಯನ್ನು ಅವರ ಮುಂದೆ ಓದಿದನು.
16 ಆ ರಾಜ್ಯಾಧಿಕಾರಿಗಳು ಆ ಸುರುಳಿಯಲ್ಲಿ ಬರೆದ ಎಲ್ಲಾ ಸಂದೇಶಗಳನ್ನು ಕೇಳಿ ಭಯಪಟ್ಟು ಒಬ್ಬರ ಮುಖವನ್ನೊಬ್ಬರು ನೋಡಿದರು. ಅವರು ಬಾರೂಕನಿಗೆ, “ನಾವು ರಾಜನಾದ ಯೆಹೋಯಾಕೀಮನಿಗೆ ಈ ಸುರುಳಿಯಲ್ಲಿರುವ ಸಂದೇಶಗಳ ಬಗ್ಗೆ ತಿಳಿಸಬೇಕು” ಎಂದರು. 17 ಬಳಿಕ ಆ ಅಧಿಕಾರಿಗಳು ಬಾರೂಕನಿಗೆ, “ಬಾರೂಕನೇ, ನೀನು ಈ ಸುರುಳಿಯ ಮೇಲೆ ಬರೆದ ಸಂದೇಶಗಳನ್ನು ಎಲ್ಲಿಂದ ಪಡೆದೆ? ಯೆರಮೀಯನು ನಿನಗೆ ಹೇಳಿದ್ದನ್ನು ನೀನು ಬರೆದುಕೊಂಡೆಯಾ? ಹೇಳು” ಎಂದು ಪ್ರಶ್ನಿಸಿದರು.
18 “ಹೌದು, ಯೆರೆಮೀಯನು ಬಾಯಿಂದ ಹೇಳಿದನು ಮತ್ತು ನಾನು ಆ ಸಂದೇಶಗಳನ್ನೆಲ್ಲಾ ಶಾಹಿಯಿಂದ ಸುರುಳಿಯ ಮೇಲೆ ಬರೆದೆನು” ಎಂದು ಬಾರೂಕನು ಉತ್ತರಿಸಿದನು.
19 ಆಗ ರಾಜಾಧಿಕಾರಿಗಳು ಬಾರೂಕನಿಗೆ, “ನೀನು ಮತ್ತು ಯೆರೆಮೀಯನು ಹೋಗಿ ಎಲ್ಲಿಯಾದರೂ ಅಡಗಿಕೊಳ್ಳಿರಿ. ಎಲ್ಲಿ ಅಡಗಿಕೊಂಡಿದ್ದೀರೆಂಬುದನ್ನು ಯಾರಿಗೂ ತಿಳಿಸಬೇಡಿ” ಎಂದು ಹೇಳಿದರು.
20 ಅನಂತರ ರಾಜಾಧಿಕಾರಿಗಳು ಆ ಸುರುಳಿಯನ್ನು ಧರ್ಮಶಾಸ್ತ್ರಜ್ಞನಾದ ಎಲೀಷಾಮನ ಕೋಣೆಯಲ್ಲಿ ಇಟ್ಟರು. ಅವರು ರಾಜನಾದ ಯೆಹೋಯಾಕೀಮನ ಬಳಿಗೆ ಹೋಗಿ ಆ ಸುರುಳಿಯ ಬಗ್ಗೆ ವಿವರವಾಗಿ ಹೇಳಿದರು.
21 ರಾಜನಾದ ಯೆಹೋಯಾಕೀಮನು ಆ ಸುರುಳಿಯನ್ನು ತರುವದಕ್ಕೆ ಯೆಹೂದಿಯನ್ನು ಕಳುಹಿಸಿದನು. ಯೆಹೂದಿಯು ಧರ್ಮಶಾಸ್ತ್ರಜ್ಞನಾದ ಎಲೀಷಾಮನ ಕೋಣೆಯಿಂದ ಆ ಸುರುಳಿಯನ್ನು ತಂದನು. ಬಳಿಕ ರಾಜನು ಮತ್ತು ಅವನ ಸುತ್ತಲು ನಿಂತ ಅಧಿಕಾರಿಗಳೆಲ್ಲ ಕೇಳುವಂತೆ ಯೆಹೂದಿಯು ಆ ಸುರಳಿಯನ್ನು ಓದಿದನು. 22 ಅದು ನಡೆದದ್ದು ಒಂಭತ್ತನೇ ತಿಂಗಳಲ್ಲಿ, ರಾಜನಾದ ಯೆಹೋಯಾಕೀಮನು ಚಳಿಗಾಲದ ಮನೆಯಲ್ಲಿ ಕುಳಿತಿದ್ದನು. ರಾಜನ ಎದುರಿಗಿದ್ದ ಒಂದು ಸಣ್ಣ ಅಗ್ಗಿಷ್ಟಿಕೆಯಲ್ಲಿ ಬೆಂಕಿಯು ಉರಿಯುತ್ತಿತು. 23 ಯೆಹೂದಿಯು ಸುರುಳಿಯನ್ನು ಓದಲು ಪ್ರಾರಂಭಿಸಿದನು. ಆದರೆ ಅವನು ಎರಡು ಅಥವಾ ಮೂರು ಅಂಕಣಗಳನ್ನು ಓದಿ ಮುಗಿಸಿದ ಕೂಡಲೆ ರಾಜನಾದ ಯೆಹೋಯಾಕೀಮನು ಆ ಸುರುಳಿಯನ್ನು ಕಸಿದುಕೊಂಡು ಆ ಅಂಕಣಗಳನ್ನು ಒಂದು ಸಣ್ಣ ಚೂರಿಯಿಂದ ಕತ್ತರಿಸಿ ಅಗ್ಗಿಷ್ಟಿಕೆಯಲ್ಲಿ ಎಸೆಯತೊಡಗಿದನು. ಕೊನೆಗೆ ಇಡೀ ಸುರುಳಿಯನ್ನು ಸುಟ್ಟುಹಾಕಲಾಯಿತು. 24 ಈ ಸುರುಳಿಯಲ್ಲಿದ್ದ ಸಂದೇಶವನ್ನು ಕೇಳಿ ರಾಜನಾದ ಯೆಹೋಯಾಕೀಮನು ಮತ್ತು ಅವನ ಸೇವಕರು ಗಾಬರಿಯಾಗಲಿಲ್ಲ. ತಾವು ತಪ್ಪು ಮಾಡಿದ್ದಕ್ಕಾಗಿ ದುಃಖವನ್ನು ಸೂಚಿಸಲು ಅವರು ತಮ್ಮ ವಸ್ತ್ರಗಳನ್ನು ಹರಿದುಕೊಳ್ಳಲಿಲ್ಲ.
25 ಎಲ್ನಾಥಾನನೂ ದೆಲಾಯನೂ ಗೆಮರ್ಯನೂ ಅದನ್ನು ಸುಡಬೇಡವೆಂದು ರಾಜನಿಗೆ ಹೇಳುವ ಪ್ರಯತ್ನ ಮಾಡಿದರು. ಆದರೆ ರಾಜನು ಅವರ ಮಾತನ್ನು ಕೇಳಲಿಲ್ಲ. 26 ರಾಜನಾದ ಯೆಹೋಯಾಕೀಮನು ಲಿಪಿಕಾರನಾದ ಬಾರೂಕನನ್ನು ಮತ್ತು ಪ್ರವಾದಿಯಾದ ಯೆರೆಮೀಯನನ್ನು ಬಂಧಿಸಬೇಕೆಂದು ರಾಜವಂಶೀಯನಾದ ಎರಖ್ಮೆಯೇಲ, ಅಜ್ರಿಯೇಲನ ಮಗನಾದ ಸೆರಾಯ, ಅಬ್ದೆಯೇಲನ ಮಗನಾದ ಶೆಲೆಮ್ಯ ಇವರಿಗೆ ಆಜ್ಞೆಯನ್ನು ಕೊಟ್ಟನು. ಆದರೆ ಅವರಿಂದ ಬಾರೂಕನನ್ನು ಮತ್ತು ಯೆರೆಮೀಯನನ್ನು ಹುಡುಕಲಾಗಲಿಲ್ಲ. ಯಾಕೆಂದರೆ ಯೆಹೋವನು ಅವರನ್ನು ಬಚ್ಚಿಟ್ಟಿದ್ದನು.
27 ಯೆರೆಮೀಯನು ಬಾರೂಕನಿಗೆ ಹೇಳಿದ್ದ, ಬಾರೂಕನು ಶಾಹಿಯಿಂದ ಬರೆದಿದ್ದ ಸುರುಳಿಯನ್ನು ಯೆಹೋಯಾಕೀಮನು ಸುಟ್ಟುಹಾಕಿದ ಮೇಲೆ ಯೆರೆಮೀಯನಿಗೆ ಯೆಹೋವನಿಂದ ಈ ಸಂದೇಶ ಬಂದಿತು:
28 “ಯೆರೆಮೀಯನೇ, ಇನ್ನೊಂದು ಸುರುಳಿಯನ್ನು ತೆಗೆದುಕೊ. ಯೆಹೂದದ ರಾಜನಾದ ಯೆಹೋಯಾಕೀಮನು ಸುಟ್ಟುಹಾಕಿದ ಮೊದಲನೇ ಸುರುಳಿಯಲ್ಲಿ ಬರೆದ ಎಲ್ಲಾ ಸಂದೇಶಗಳನ್ನು ಈ ಸುರುಳಿಯ ಮೇಲೆ ಬರೆ. 29 ಯೆರೆಮೀಯನೇ, ಯೆಹೂದದ ರಾಜನಾದ ಯೆಹೋಯಾಕೀಮನಿಗೆ ಹೀಗೆ ಹೇಳು, ‘ಯೆಹೋವನು ಹೀಗೆನ್ನುತ್ತಾನೆ: ಯೆಹೋಯಾಕೀಮನೇ, ನೀನು ಆ ಸುರುಳಿಯನ್ನು ಸುಟ್ಟುಬಿಟ್ಟೆ. ನೀನು, “ಬಾಬಿಲೋನ್ ರಾಜನು ಖಂಡಿತವಾಗಿ ಬಂದು ಈ ದೇಶವನ್ನು ನಾಶಮಾಡುವನು ಎಂದು ಯೆರೆಮೀಯನು ಏಕೆ ಬರೆದನು? ಬಾಬಿಲೋನ್ ರಾಜನು ಈ ದೇಶದ ಮನುಷ್ಯರನ್ನು ಮತ್ತು ಪ್ರಾಣಿಗಳನ್ನು ನಾಶಮಾಡುವನು ಎಂದು ಏಕೆ ಹೇಳಿದನು?” ಎಂದು ಕೇಳಿದೆ. 30 ಇಗೋ ಯೆಹೂದದ ರಾಜನಾದ ಯೆಹೋಯಾಕೀಮನ ಬಗ್ಗೆ ಯೆಹೋವನು ಹೀಗೆ ಹೇಳುತ್ತಾನೆ: ಯೆಹೋಯಾಕೀಮನ ಸಂತಾನದವರು ದಾವೀದನ ಸಿಂಹಾಸನದ ಮೇಲೆ ಕುಳಿತುಕೊಳ್ಳಲಾಗದು. ಯೆಹೋಯಾಕೀಮನು ಸತ್ತರೆ ರಾಜ ಮರ್ಯಾದೆಯಿಂದ ಅವನ ಶವಸಂಸ್ಕಾರ ಮಾಡಲಾಗುವದಿಲ್ಲ. ಅವನ ಶವವನ್ನು ನೆಲದ ಮೇಲೆ ಎಸೆಯಲಾಗುವುದು. ಅವನ ಶವ ಹಗಲಿನ ತಾಪದಲ್ಲಿ ಮತ್ತು ರಾತ್ರಿಯ ಚಳಿಯಲ್ಲಿ ಹೊರಗೆ ಬಿದ್ದಿರುವದು. 31 ಯೆಹೋವನಾದ ನಾನು ಯೆಹೋಯಾಕೀಮ ಮತ್ತು ಅವನ ಮಕ್ಕಳನ್ನು ದಂಡಿಸುವೆನು. ನಾನು ಅವನ ಅಧಿಕಾರಿಗಳನ್ನೂ ದಂಡಿಸುವೆನು. ಅವರು ದುಷ್ಟರಾದುದರಿಂದ ಹೀಗೆ ಮಾಡುವೆನು. ನಾನು ಅವರ ಮೇಲೂ ಜೆರುಸಲೇಮಿನಲ್ಲಿ ವಾಸಮಾಡುವ ಜನರೆಲ್ಲರ ಮೇಲೂ ಮತ್ತು ಯೆಹೂದದ ಜನರ ಮೇಲೂ ಭಯಂಕರವಾದ ಕೇಡನ್ನು ತರಲು ನಿಶ್ಚಯಿಸಿದ್ದೇನೆ. ನಾನು ಹೇಳಿದಂತೆ ಅವರಿಗೆ ಎಲ್ಲಾ ಕೆಡುಕನ್ನು ಉಂಟುಮಾಡುವೆನು. ಏಕೆಂದರೆ ಅವರು ನನ್ನ ಮಾತನ್ನು ಕೇಳಲಿಲ್ಲ.’”
32 ಅನಂತರ ಯೆರೆಮೀಯನು ಇನ್ನೊಂದು ಸುರುಳಿಯನ್ನು ತೆಗೆದುಕೊಂಡು ನೇರೀಯನ ಮಗನಾದ ಲಿಪಿಕಾರ ಬಾರೂಕನಿಗೆ ಕೊಟ್ಟನು. ರಾಜ ಯೆಹೋಯಾಕೀಮನು ಸುಟ್ಟುಹಾಕಿದ ಸುರುಳಿಯಲ್ಲಿದ್ದ ಸಂದೇಶವನ್ನೇ ಯೆರೆಮೀಯನು ಹೇಳಿದಂತೆಲ್ಲ ಬಾರೂಕನು ಸುರುಳಿಯ ಮೇಲೆ ಬರೆದನು. ಬೇರೆ ಹಲವು ಸಂದೇಶಗಳನ್ನು ಎರಡನೇ ಸುರುಳಿಯಲ್ಲಿ ಸೇರಿಸಲಾಯಿತು.
ನಮ್ಮ ರಕ್ಷಣೆಯು ಧರ್ಮಶಾಸ್ತ್ರಕ್ಕಿಂತ ಉತ್ತಮವಾದುದು
2 ಆದ್ದರಿಂದ ನಮಗೆ ಬೋಧಿಸಲ್ಪಟ್ಟ ಸಂಗತಿಗಳನ್ನು ಬಹಳ ಎಚ್ಚರಿಕೆಯಿಂದ ಅನುಸರಿಸಬೇಕು. ಸತ್ಯಮಾರ್ಗವನ್ನು ಬಿಟ್ಟು ತಪ್ಪಿಹೋಗದಂತೆ ಎಚ್ಚರಿಕೆಯಿಂದಿರಬೇಕು. 2 ದೇವರು ತನ್ನ ದೂತರ ಮೂಲಕ ಕೊಟ್ಟ ವಾಕ್ಯವು ನಿಜವಾದದ್ದೆಂದು ತೋರಿಸಲ್ಪಟ್ಟಿದೆ. ಯೆಹೂದ್ಯರು ಈ ವಾಕ್ಯಕ್ಕೆ ವಿರುದ್ಧವಾಗಿ ತಪ್ಪು ಮಾಡಿದಾಗಲೆಲ್ಲಾ ಮತ್ತು ಅವಿಧೇಯರಾದಾಗಲೆಲ್ಲಾ ತಕ್ಕ ದಂಡನೆ ಹೊಂದುತ್ತಿದ್ದರು. 3 ನಮಗೆ ದಯಪಾಲಿಸಲ್ಪಟ್ಟ ಈ ವಿಶೇಷ ರಕ್ಷಣೆಯನ್ನು ನಾವು ಅಲಕ್ಷ್ಯ ಮಾಡಿದರೆ ದಂಡನೆಯಂತೂ ಖಂಡಿತ. ಇದು ಪ್ರಭುವಿನಿಂದ ಮೊದಲು ಹೇಳಲ್ಪಟ್ಟಿತು. ಆತನಿಂದ ಕೇಳಿದವರೇ ಈ ರಕ್ಷಣೆಯ ಕುರಿತಾಗಿ ನಮಗೆ ಸ್ಥಿರಪಡಿಸಿದರು. 4 ಇದಲ್ಲದೆ, ದೇವರು ಅದ್ಭುತಕಾರ್ಯಗಳಿಂದ, ಸೂಚಕಕಾರ್ಯಗಳಿಂದ, ನಾನಾ ವಿಧವಾದ ಮಹತ್ಕಾರ್ಯಗಳಿಂದ ಮತ್ತು ಪವಿತ್ರಾತ್ಮನ ವರಗಳನ್ನು ತನ್ನ ಇಷ್ಟಾನುಸಾರವಾಗಿ ದಯಪಾಲಿಸುವುದರ ಮೂಲಕ ಅದನ್ನು ಸ್ಥಿರಪಡಿಸಿದನು.
ಜನರನ್ನು ರಕ್ಷಿಸಲು ಕ್ರಿಸ್ತನು ಜನರಂತೆಯೇ ಆದನು
5 ಮುಂದೆ ಬರುವ ನೂತನ ಲೋಕವನ್ನು ಆಳಲು ದೇವರು ದೇವದೂತರನ್ನು ಆರಿಸಲಿಲ್ಲ. ಈಗ ನಾವು ನಿಮಗೆ ಹೇಳುತ್ತಿರುವುದು ಆ ಲೋಕದ ಕುರಿತಾಗಿಯೇ. 6 ಅದನ್ನು ಪವಿತ್ರ ಗ್ರಂಥದಲ್ಲಿ ಬರೆಯಲಾಗಿದೆ:
“ದೇವರೇ, ನೀನು ಮಾನವರನ್ನು ಏಕೆ ನೆನಪುಮಾಡಿಕೊಳ್ಳಬೇಕು?
ನೀನು ಮನುಷ್ಯನಿಗೋಸ್ಕರ ಏಕೆ ಚಿಂತಿಸಬೇಕು?
ಅವನು ಅಷ್ಟೊಂದು ಮುಖ್ಯನಾದವನೇ?
7 ಕೇವಲ ಸ್ವಲ್ಪಕಾಲದವರೆಗೆ ನೀನು ಅವನನ್ನು ದೇವದೂತರಿಗಿಂತ ಸ್ವಲ್ಪವೇ ಕಡಿಮೆ ಮಾಡಿದೆ.
ನೀನು ಅವನಿಗೆ ವೈಭವವನ್ನೂ ಗೌರವವನ್ನೂ ಕಿರೀಟವಾಗಿ ಇಟ್ಟಿರುವೆ.
8 ನೀನು ಎಲ್ಲವನ್ನು ಅವನಿಗೆ ಅಧೀನಗೊಳಿಸಿರುವೆ.”(A)
ದೇವರು ಎಲ್ಲವನ್ನೂ ಆತನಿಗೆ ಅಧೀನಗೊಳಿಸಿದ್ದರೆ, ಆತನು ಆಳದೆ ಇರುವಂಥದ್ದು ಒಂದಾದರೂ ಇಲ್ಲ. ಆದರೆ ಸಮಸ್ತದ ಮೇಲೆ ಅವನು ಆಳ್ವಿಕೆ ಮಾಡುತ್ತಿರುವುದು ನಮಗಿನ್ನೂ ಕಾಣುತ್ತಿಲ್ಲ. 9 ಕೇವಲ ಸ್ವಲ್ಪಕಾಲದವರೆಗೆ ಯೇಸುವು ದೇವದೂತರಿಗಿಂತ ಸ್ವಲ್ಪವೇ ಕಡಿಮೆಯಾಗಿ ಮಾಡಲ್ಪಟ್ಟನು. ಆದರೆ ನಾವೀಗ ವೈಭವ, ಗೌರವಗಳೆಂಬ ಕಿರೀಟ ಧರಿಸಿರುವ ಆತನನ್ನು ನೋಡುತ್ತೇವೆ. ಏಕೆಂದರೆ ದೇವರ ಕೃಪೆಯ ನಿಮಿತ್ತ ಆತನು ಎಲ್ಲರಿಗೋಸ್ಕರ ಸಂಕಟ ಅನುಭವಿಸಿ ಮರಣಹೊಂದಿದನು.
10 ಸಮಸ್ತವನ್ನು ಸೃಷ್ಟಿಸಿದಾತನು ದೇವರೇ. ಸಮಸ್ತವು ಆತನ ಮಹಿಮೆಗಾಗಿಯೇ ಸೃಷ್ಟಿಯಾಯಿತು. ದೇವರು ತನ್ನವರೇ ಆದ ಅನೇಕ ಜನರನ್ನು ಹೊಂದಿಕೊಂಡು ಅವರೊಂದಿಗೆ ತನ್ನ ಮಹಿಮೆಯನ್ನು ಹಂಚಿಕೊಳ್ಳಲು ಬಯಸಿದನು. ಆದ್ದರಿಂದ ಆತನು ಅವರನ್ನು ರಕ್ಷಣೆಗೆ ನಡೆಸಲು ಪರಿಪೂರ್ಣನಾದ ಒಬ್ಬಾತನನ್ನು ನಿರ್ಮಿಸಿದನು. ಆತನೇ ಯೇಸು. ದೇವರು ಆತನನ್ನು ಬಾಧೆಗಳ ಮೂಲಕವೇ ಪರಿಪೂರ್ಣನಾದ ರಕ್ಷಕನನ್ನಾಗಿ ಮಾಡಿದನು.
11 ಜನರನ್ನು ಪರಿಶುದ್ಧರನ್ನಾಗಿ ಮಾಡುವ ಯೇಸುವೂ ಮತ್ತು ಆತನಿಂದ ಪರಿಶುದ್ಧರಾಗುವ ಜನರೂ ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಆದ್ದರಿಂದ ಆ ಜನರನ್ನು ಸಹೋದರರೆಂದೂ ಸಹೋದರಿಯರೆಂದೂ ಕರೆಯಲು ಆತನು (ಯೇಸು) ನಾಚಿಕೆಪಡುವುದಿಲ್ಲ. 12 ಯೇಸು ಹೇಳುತ್ತಾನೆ:
“ದೇವರೇ, ನಿನ್ನನ್ನು ಕುರಿತು ನನ್ನ ಸಹೋದರ ಸಹೋದರಿಯರಿಗೆ ತಿಳಿಸುತ್ತೇನೆ;
ನಿನ್ನ ಜನರೆಲ್ಲರ ಮುಂದೆ ನಿನ್ನ ಸ್ತೋತ್ರಗೀತೆಗಳನ್ನು ಹಾಡುತ್ತೇನೆ.”(B)
13 ಆತನು ಮತ್ತೆ ಹೇಳುತ್ತಾನೆ:
“ನಾನು ದೇವರಲ್ಲಿ ಭರವಸೆ ಇಡುತ್ತೇನೆ.”(C)
ಆತನು ಹೇಳುತ್ತಾನೆ:
“ನಾನಿಲ್ಲಿದ್ದೇನೆ. ದೇವರು ನನಗೆ ದಯಪಾಲಿಸಿರುವ ಮಕ್ಕಳು ನನ್ನೊಂದಿಗಿದ್ದಾರೆ.”(D)
14 ಆ ಮಕ್ಕಳು ಭೌತಿಕ ಶರೀರ ಹೊಂದಿದ್ದರು. ಆದ್ದರಿಂದ ಯೇಸು ತಾನೇ ಅವರಂತಾದನು. ಆತನು ತನ್ನ ಸಾವಿನ ಮೂಲಕ ಮರಣಾಧಿಕಾರಿಯನ್ನು ಅಂದರೆ ಸೈತಾನನನ್ನು ನಾಶಗೊಳಿಸಿ, 15 ಅವರನ್ನು ಬಿಡುಗಡೆಗೊಳಿಸಬೇಕೆಂದು, ಅವರಂತೆಯೇ ಆಗಿ, ಮರಣ ಹೊಂದಿದನು. ಅವರು ಮರಣಭಯದಿಂದ, ಜೀವಮಾನವೆಲ್ಲ ಗುಲಾಮರಂತೆ ಜೀವಿಸುತ್ತಿದ್ದರು. 16 ಆತನು ಸಹಾಯ ಮಾಡುವುದು ಅಬ್ರಹಾಮನ ಸಂತತಿಯವರಿಗೇ ಹೊರತು ದೇವದೂತರಿಗಲ್ಲ. 17 ಈ ಕಾರಣದಿಂದಲೇ ಆತನು ಎಲ್ಲಾ ವಿಧದಲ್ಲಿಯೂ ತನ್ನ ಸಹೋದರ ಸಹೋದರಿಯರಿಗೆ ಸಮಾನನಾಗಬೇಕಾಯಿತು. ದೇವರ ಸೇವೆಯಲ್ಲಿ ಆತನು ಜನರಿಗೆ ಕರುಣೆಯುಳ್ಳವನೂ ನಂಬಿಗಸ್ತನೂ ಆದ ಪ್ರಧಾನ ಯಾಜಕನಾದನು. ಹೀಗೆ ಆತನು ಜನರ ಪಾಪಗಳಿಗೆ ಕ್ಷಮೆಯನ್ನು ತರಲು ಸಾಧ್ಯವಾಯಿತು. 18 ತಾನೇ ಶೋಧಿಸಲ್ಪಟ್ಟು ಸಂಕಟಕ್ಕೆ ಒಳಗಾದುದರಿಂದ, ಶೋಧಿಸಲ್ಪಡುವ ಜನರಿಗೆ ಸಹಾಯ ಮಾಡಲು ಈಗ ಆತನು ಸಮರ್ಥನಾಗಿದ್ದಾನೆ.
Kannada Holy Bible: Easy-to-Read Version. All rights reserved. © 1997 Bible League International