Old/New Testament
ಯೆಹೋವನು ನೆಬೂಕದ್ನೆಚ್ಚರನನ್ನು ರಾಜನನ್ನಾಗಿ ಮಾಡಿದ್ದು
27 ಯೆರೆಮೀಯನಿಗೆ ಯೆಹೋವನಿಂದ ಒಂದು ಸಂದೇಶ ಬಂದಿತು. ಯೆಹೂದದ ರಾಜನಾದ ಚಿದ್ಕೀಯನ ಆಳ್ವಿಕೆಯ ನಾಲ್ಕನೇ ವರ್ಷದಲ್ಲಿ ಈ ಸಂದೇಶ ಬಂದಿತು. ಚಿದ್ಕೀಯನು ರಾಜನಾಗಿದ್ದ ಯೋಷೀಯನ ಮಗ.[a] 2 ಯೆಹೋವನು ನನಗೆ ಹೀಗೆ ಹೇಳಿದನು: “ನೀನು ಮರದ ಕಂಬದಿಂದ ಕೆಲವು ನೊಗಗಳನ್ನು ಮಾಡಿ ನಿನ್ನ ಕತ್ತಿನ ಹಿಂಬದಿಯ ಮೇಲೆ ಇಟ್ಟುಕೋ. 3 ತರುವಾಯ ಎದೋಮಿನ ರಾಜ, ಮೋವಾಬಿನ ರಾಜ, ಅಮ್ಮೋನಿನ ರಾಜ, ತೂರಿನ ರಾಜ, ಚೀದೋನಿನ ರಾಜ ಇವರುಗಳಿಗೆ ಅವುಗಳನ್ನು ಕಳಿಸು. ಯೆಹೂದದ ರಾಜನಾದ ಚಿದ್ಕೀಯನನ್ನು ನೋಡಲು ಬಂದ ಈ ರಾಜರ ರಾಯಭಾರಿಗಳ ಮೂಲಕ ಸಂದೇಶವನ್ನು ಕಳಿಸು. 4 ಈ ಸಂದೇಶವನ್ನು ತಮ್ಮ ಒಡೆಯರಿಗೆ ತಿಳಿಸಬೇಕೆಂದು ಆ ರಾಯಭಾರಿಗಳಿಗೆ ಹೇಳು. ಅವರಿಗೆ ಹೀಗೆ ಹೇಳು: ‘ಇಸ್ರೇಲಿನ ದೇವರು ಸರ್ವಶಕ್ತನೂ ಆಗಿರುವ ಯೆಹೋವನು ಹೀಗೆ ಹೇಳುತ್ತಾನೆ ಎಂದು ನಿಮ್ಮ ಒಡೆಯರಿಗೆ ತಿಳಿಸಿ. 5 ನಾನು ಭೂಮಿಯನ್ನೂ ಮತ್ತು ಅದರ ಮೇಲಿರುವ ಎಲ್ಲಾ ಜನರನ್ನೂ ಸೃಷ್ಟಿಸಿದೆ. ನಾನು ಭೂಮಿಯ ಮೇಲಿನ ಎಲ್ಲಾ ಪ್ರಾಣಿಗಳನ್ನು ಸೃಷ್ಟಿಸಿದೆ. ನಾನು ಇದನ್ನು ನನ್ನ ಮಹಾಶಕ್ತಿಯಿಂದಲೂ ಬಲವಾದ ತೋಳುಗಳಿಂದಲೂ ಸೃಷ್ಟಿಸಿದೆ. ನಾನು ಆ ಭೂಮಿಯನ್ನು ನನ್ನ ಮನಸ್ಸಿಗೆ ಬಂದವರಿಗೆ ಕೊಡಬಹುದು. 6 ಈಗ ನಾನು ನಿಮ್ಮೆಲ್ಲ ದೇಶಗಳನ್ನು ಬಾಬಿಲೋನಿನ ರಾಜನಾದ ನೆಬೂಕದ್ನೆಚ್ಚರನಿಗೆ ಒಪ್ಪಿಸಿದ್ದೇನೆ. ಅವನು ನನ್ನ ಸೇವಕನಾಗಿದ್ದಾನೆ. ಕಾಡುಪ್ರಾಣಿಗಳು ಸಹ ಅವನ ಆಜ್ಞೆಯನ್ನು ಪಾಲಿಸುವಂತೆ ಮಾಡುವೆನು. 7 ಎಲ್ಲಾ ಜನಾಂಗಗಳು ನೆಬೂಕದ್ನೆಚ್ಚರನ, ಅವನ ಮಗನ ಮತ್ತು ಅವನ ಮೊಮ್ಮಗನ ಸೇವೆಮಾಡುವವು. ಆಮೇಲೆ ಬಾಬಿಲೋನನ್ನು ಸೋಲಿಸುವ ಸಮಯ ಬರುತ್ತದೆ. ಅನೇಕ ಜನಾಂಗಗಳು ಮತ್ತು ದೊಡ್ಡ ರಾಜರು ಬಾಬಿಲೋನನ್ನು ತಮ್ಮ ಸೇವಕನನ್ನಾಗಿ ಮಾಡಿಕೊಳ್ಳುವರು.
8 “‘ಆದರೆ ಈಗ ಕೆಲವು ಜನಾಂಗಗಳು ಅಥವಾ ರಾಜ್ಯಗಳು ಬಾಬಿಲೋನಿನ ರಾಜನಾದ ನೆಬೂಕದ್ನೆಚ್ಚರನನ್ನು ಸೇವಿಸಲು ಒಪ್ಪಲಿಲ್ಲ. ಅವುಗಳು ಅವನ ನೊಗವನ್ನು ತಮ್ಮ ಕತ್ತಿನ ಮೇಲೆ ಇಟ್ಟುಕೊಳ್ಳಲು ಒಪ್ಪಲಿಲ್ಲ. ಆದ್ದರಿಂದ ನಾನು ಆ ಜನಾಂಗವನ್ನು ಖಡ್ಗ, ಹಸಿವು ಮತ್ತು ಭಯಂಕರ ವ್ಯಾಧಿಗಳಿಂದ ಶಿಕ್ಷಿಸುತ್ತೇನೆ, ಇದು ಯೆಹೋವನಿಂದ ಬಂದ ಸಂದೇಶ. ನಾನು ಆ ಜನಾಂಗವನ್ನು ನಾಶಗೊಳಿಸುವವರೆಗೂ ಹಾಗೆ ಮಾಡುವೆನು. ಅವನ ವಿರುದ್ಧ ಹೋರಾಡುವ ಜನಾಂಗವನ್ನು ನಾಶಮಾಡುವದಕ್ಕಾಗಿ ನಾನು ನೆಬೂಕದ್ನೆಚ್ಚರನನ್ನು ಉಪಯೋಗಿಸುತ್ತೇನೆ. 9 ಆದ್ದರಿಂದ ನಿಮ್ಮ ಪ್ರವಾದಿಗಳ ಮಾತುಗಳನ್ನು ಕೇಳಬೇಡಿರಿ. ಮಾಟಮಾಂತ್ರಗಳನ್ನು ಬಳಸಿ ಭವಿಷ್ಯವನ್ನು ಹೇಳುವವರ ಮಾತುಗಳನ್ನು ಕೇಳಬೇಡಿರಿ. ಕನಸುಗಳ ಗೂಢಾರ್ಥವನ್ನು ಹೇಳುವೆವೆಂಬ ಜನರ ಮಾತುಗಳನ್ನು ಕೇಳಬೇಡಿರಿ. ಸತ್ತವರೊಡನೆ ಮಾತನಾಡುವ ಅಥವಾ ಮಾಟಮಂತ್ರ ಮಾಡುವ ಜನರ ಮಾತುಗಳನ್ನು ಕೇಳಬೇಡಿರಿ. ಅವರೆಲ್ಲರೂ, “ನೀವು ಬಾಬಿಲೋನಿನ ರಾಜನಿಗೆ ಗುಲಾಮರಾಗುವದಿಲ್ಲ” ಎಂದು ಹೇಳುವರು. 10 ಆದರೆ ಅವರು ನಿಮಗೆ ಹೇಳುವುದು ಸುಳ್ಳುಗಳೇ. ಅವರು ನಿಮ್ಮನ್ನು ನಿಮ್ಮ ದೇಶದಿಂದ ಬಹುದೂರ ತೆಗೆದುಕೊಂಡು ಹೋಗುವರು. ನಾನು ನಿಮ್ಮನ್ನು ನಿಮ್ಮ ದೇಶದಿಂದ ಬಲವಂತವಾಗಿ ಹೊರಗಟ್ಟುವೆನು. ನೀವು ಅನ್ಯ ದೇಶದಲ್ಲಿ ಸಾಯುವಿರಿ.
11 “‘ಆದರೆ ಬಾಬಿಲೋನ್ ರಾಜನ ನೊಗಕ್ಕೆ ತಮ್ಮ ಹೆಗಲನ್ನು ಕೊಡುವ ಮತ್ತು ಅವನ ಆಜ್ಞೆಯನ್ನು ಪಾಲಿಸುವ ಜನಾಂಗಗಳು ಬದುಕುವವು. ಆ ಜನಾಂಗಗಳವರು ತಮ್ಮ ದೇಶದಲ್ಲಿಯೇ ಇದ್ದುಕೊಂಡು ಬಾಬಿಲೋನಿನ ರಾಜನ ಸೇವೆ ಮಾಡುವ ಅವಕಾಶವನ್ನು ಮಾಡಿಕೊಡುತ್ತೇನೆ. ಆ ಜನಾಂಗಗಳ ಜನರು ತಮ್ಮ ದೇಶದಲ್ಲಿಯೇ ವ್ಯವಸಾಯ ಮಾಡಿಕೊಂಡಿರುವರು.’” ಇದು ಯೆಹೋವನ ನುಡಿ.
12 ನಾನು ಯೆಹೂದದ ರಾಜನಾದ ಚಿದ್ಕೀಯನಿಗೂ ಇದೇ ಸಂದೇಶವನ್ನು ಕೊಟ್ಟಿದ್ದೇನೆ. “ಚಿದ್ಕೀಯನೇ, ನೀನು ನಿನ್ನ ಹೆಗಲನ್ನು ಬಾಬಿಲೋನಿನ ರಾಜನ ನೊಗಕ್ಕೆ ಕೊಡಬೇಕು; ಅವನ ಆಜ್ಞಾಪಾಲನೆ ಮಾಡಬೇಕು. ಬಾಬಿಲೋನಿನ ರಾಜನ ಮತ್ತು ಅಲ್ಲಿಯ ಜನರ ಸೇವೆಮಾಡಿಕೊಂಡಿದ್ದರೆ ನೀನು ಬದುಕುವೆ. 13 ಬಾಬಿಲೋನಿನ ರಾಜನ ಸೇವೆಮಾಡಲು ಒಪ್ಪದಿದ್ದರೆ ನೀನು ಮತ್ತು ನಿನ್ನ ಜನರು ವೈರಿಗಳ ಖಡ್ಗದಿಂದಲೂ ಹಸಿವೆಯಿಂದಲೂ ಭಯಂಕರವಾದ ವ್ಯಾಧಿಗಳಿಂದಲೂ ಸಾಯುವಿರಿ. ಇದು ನೆರವೇರುತ್ತದೆಯೆಂದು ಯೆಹೋವನು ಹೇಳಿದ್ದಾನೆ. 14 ಆದರೆ ನೀವೆಂದಿಗೂ ಬಾಬಿಲೋನ್ ರಾಜನಿಗೆ ಗುಲಾಮರಾಗುವದಿಲ್ಲ ಎಂದು ಈ ಸುಳ್ಳುಪ್ರವಾದಿಗಳು ಹೇಳುತ್ತಿದ್ದಾರೆ.
“‘ಆ ಪ್ರವಾದಿಗಳ ಮಾತುಗಳನ್ನು ಕಿವಿಗೆ ಹಾಕಿಕೊಳ್ಳಬೇಡಿ. ಅವರು ನಿಮಗೆ ಸುಳ್ಳುಪ್ರವಾದನೆ ಮಾಡುತ್ತಿದ್ದಾರೆ. 15 ನಾನು ಆ ಪ್ರವಾದಿಗಳನ್ನು ಕಳುಹಿಸಿಲ್ಲ. ಅವರು ಸುಳ್ಳು ಪ್ರವಾದನೆಗಳನ್ನು ಮಾಡುತ್ತಿದ್ದಾರೆ ಮತ್ತು ಅದು ನನ್ನ ಸಂದೇಶವೆಂದು ಹೇಳುತ್ತಲಿದ್ದಾರೆ. ನಾನು ಯೆಹೂದದ ಜನರಾದ ನಿಮ್ಮನ್ನು ದೂರ ಕಳುಹಿಸುತ್ತೇನೆ. ನೀವು ಸಾಯುವಿರಿ. ನಿಮಗೆ ಪ್ರವಾದನೆಯನ್ನು ಮಾಡುತ್ತಿರುವ ಆ ಪ್ರವಾದಿಗಳು ಸಹ ಸಾಯುತ್ತಾರೆ’” ಇದು ಯೆಹೋವನ ನುಡಿ.
16 ಆಗ ನಾನು (ಯೆರೆಮೀಯನು) ಯಾಜಕರಿಗೂ ಆ ಸಮಸ್ತ ಜನರಿಗೂ ಹೀಗೆ ಹೇಳಿದೆ: “ಯೆಹೋವನು ಹೇಳುತ್ತಾನೆ. ಆ ಸುಳ್ಳುಪ್ರವಾದಿಗಳು, ‘ಬಾಬಿಲೋನಿನವರು ಯೆಹೋವನ ಆಲಯದಿಂದ ಅನೇಕ ವಸ್ತುಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಆ ವಸ್ತುಗಳನ್ನು ಬೇಗನೆ ಹಿಂದಕ್ಕೆ ತರಲಾಗುವುದು’ ಎಂದು ಹೇಳುತ್ತಿದ್ದಾರೆ. ಆ ಪ್ರವಾದಿಗಳ ಮಾತುಗಳಿಗೆ ಕಿವಿಗೊಡಬೇಡಿ. ಏಕೆಂದರೆ ಅವರು ನಿಮಗೆ ಸುಳ್ಳುಪ್ರವಾದನೆ ಮಾಡುತ್ತಿದ್ದಾರೆ. 17 ಆ ಪ್ರವಾದಿಗಳ ಮಾತನ್ನು ಕೇಳಬೇಡಿ. ಬಾಬಿಲೋನಿನ ರಾಜನ ಸೇವೆಮಾಡಿರಿ. ದಂಡನೆಗಳನ್ನು ಸ್ವಿಕರಿಸಿರಿ, ಆಗ ನೀವು ಬದುಕುವಿರಿ. ನಿಷ್ಕಾರಣವಾಗಿ ಈ ಜೆರುಸಲೇಮ್ ನಗರವು ಹಾಳಾಗಬಾರದು. 18 ಆ ಜನರು ಯೆಹೋವನ ಸಂದೇಶವನ್ನು ತಂದ ಪ್ರವಾದಿಗಳಾಗಿದ್ದರೆ, ಅವರು ಪ್ರಾರ್ಥನೆ ಸಲ್ಲಿಸಲಿ. ಇನ್ನೂ ಯೆಹೋವನ ಆಲಯದಲ್ಲಿರುವ ವಸ್ತುಗಳ ಬಗ್ಗೆ ಅವರು ಪ್ರಾರ್ಥನೆ ಸಲ್ಲಿಸಲಿ. ಇನ್ನೂ ರಾಜನ ಅರಮನೆಯಲ್ಲಿರುವ ವಸ್ತುಗಳ ಬಗ್ಗೆ ಅವರು ಪ್ರಾರ್ಥನೆ ಸಲ್ಲಿಸಲಿ. ಇನ್ನೂ ಜೆರುಸಲೇಮಿನಲ್ಲಿರುವ ಪದಾರ್ಥಗಳ ಬಗ್ಗೆ ಅವರು ಪ್ರಾರ್ಥನೆ ಸಲ್ಲಿಸಲಿ. ಆ ವಸ್ತುಗಳನ್ನೆಲ್ಲ ಬಾಬಿಲೋನಿಗೆ ತೆಗೆದುಕೊಂಡು ಹೋಗಬಾರದೆಂದು ಅವರು ಪ್ರಾರ್ಥನೆ ಸಲ್ಲಿಸಲಿ.
19 “ಸರ್ವಶಕ್ತನಾದ ಯೆಹೋವನು ಜೆರುಸಲೇಮಿನಲ್ಲಿ ಇನ್ನೂ ಉಳಿದ ವಸ್ತುಗಳ ಬಗ್ಗೆ ಹೀಗೆ ಹೇಳುತ್ತಾನೆ. ಯೆಹೋವನ ಆಲಯದಲ್ಲಿ ಕಂಬಗಳಿವೆ, ಕಂಚಿನ ಸಾಗರವಿದೆ, ಪೀಠಗಳಿವೆ ಮತ್ತು ಇತರ ವಸ್ತುಗಳಿವೆ. ಬಾಬಿಲೋನಿನ ರಾಜನಾದ ನೆಬೂಕದ್ನೆಚ್ಚರನು ಆ ವಸ್ತುಗಳನ್ನು ಜೆರುಸಲೇಮಿನಲ್ಲಿಯೇ ಬಿಟ್ಟುಹೋದನು. 20 ನೆಬೂಕದ್ನೆಚ್ಚರನು ಯೆಹೂದದ ರಾಜನಾದ ಯೆಹೋಯಾಕೀನನನ್ನು ಸೆರೆಯಾಳಾಗಿ ತೆಗೆದುಕೊಂಡು ಹೋಗುವಾಗ ಆ ವಸ್ತುಗಳನ್ನು ತೆಗೆದುಕೊಂಡು ಹೋಗಲಿಲ್ಲ. ಯೆಹೋಯಾಕೀನನು ಯೆಹೋಯಾಕೀಮನ ಮಗನಾಗಿದ್ದನು. ನೆಬೂಕದ್ನೆಚ್ಚರನು ಯೆಹೂದ ಮತ್ತು ಜೆರುಸಲೇಮಿನಿಂದ ಬೇರೆ ಪ್ರಮುಖ ಜನರನ್ನು ಸಹ ತೆಗೆದುಕೊಂಡು ಹೋದನು. 21 ಸರ್ವಶಕ್ತನೂ ಇಸ್ರೇಲರ ದೇವರೂ ಆಗಿರುವ ಯೆಹೋವನ ಆಲಯದಲ್ಲಿ ಇನ್ನೂ ಉಳಿದ ವಸ್ತುಗಳ ಬಗ್ಗೆಯೂ ರಾಜನ ಅರಮನೆಯಲ್ಲಿ ಮತ್ತು ಜೆರುಸಲೇಮಿನಲ್ಲಿ ಇನ್ನೂ ಉಳಿದಿರುವ ವಸ್ತುಗಳ ಬಗ್ಗೆಯೂ ಹೀಗೆನ್ನುತ್ತಾನೆ: ‘ಆ ವಸ್ತುಗಳನ್ನು ಬಾಬಿಲೋನಿಗೆ ತೆಗೆದುಕೊಂಡು ಹೋಗಲಾಗುವುದು. 22 ಆ ವಸ್ತುಗಳು ಬಾಬಿಲೋನಿಗೆ ಒಯ್ಯಲ್ಪಟ್ಟು ನಾನು ಅವುಗಳನ್ನು ಅಲ್ಲಿಂದ ತರುವ ದಿವಸಗಳವರೆಗೆ ಅಲ್ಲಿಯೇ ಇರುವವು, ಆಮೇಲೆ ನಾನು ಆ ವಸ್ತುಗಳನ್ನು ತರುವೆನು. ನಾನು ಆ ವಸ್ತುಗಳನ್ನು ಮತ್ತೆ ಈ ಸ್ಥಳದಲ್ಲಿ ಇಡುವೆನು.’” ಇದು ಯೆಹೋವನ ನುಡಿ.
ಸುಳ್ಳುಪ್ರವಾದಿಯಾದ ಹನನ್ಯನು
28 ಯೆಹೂದದಲ್ಲಿ ಚಿದ್ಕೀಯನ ಆಳ್ವಿಕೆಯ ನಾಲ್ಕನೇ ವರ್ಷದ ಐದನೇ ತಿಂಗಳಲ್ಲಿ ಹನನ್ಯನೆಂಬ ಪ್ರವಾದಿಯು ನನ್ನೊಂದಿಗೆ ಮಾತನಾಡಿದನು. ಹನನ್ಯನು ಅಜ್ಜೂರನ ಮಗ, ಹನನ್ಯನು ಗಿಬ್ಯೋನ್ ಊರಿನವನು. ನನ್ನೊಂದಿಗೆ ಮಾತನಾಡಿದಾಗ ಅವನು ಯೆಹೋವನ ಆಲಯದಲ್ಲಿದ್ದನು. ಯಾಜಕರು ಮತ್ತು ಸಮಸ್ತ ಜನರು ಅಲ್ಲಿದ್ದರು. ಹನನ್ಯನು ಹೀಗೆ ಹೇಳಿದನು: 2 “ಸರ್ವಶಕ್ತನೂ ಇಸ್ರೇಲರ ದೇವರೂ ಆಗಿರುವ ಯೆಹೋವನು ಹೇಳುವನು: ‘ಯೆಹೂದ್ಯರ ಮೇಲೆ ಬಾಬಿಲೋನಿನ ರಾಜನು ಹೊರಿಸಿದ ನೊಗವನ್ನು ನಾನು ಮುರಿದುಹಾಕುವೆನು. 3 ಎರಡು ವರ್ಷಗಳೊಳಗಾಗಿ, ಬಾಬಿಲೋನಿನ ರಾಜನಾದ ನೆಬೂಕದ್ನೆಚ್ಚರನು ಯೆಹೋವನ ಆಲಯದಿಂದ ತೆಗೆದುಕೊಂಡು ಹೋದ ಎಲ್ಲಾ ವಸ್ತುಗಳನ್ನು ಹಿಂದಕ್ಕೆ ತರುವೆನು. ನೆಬೂಕದ್ನೆಚ್ಚರನು ಆ ವಸ್ತುಗಳನ್ನು ಬಾಬಿಲೋನಿಗೆ ತೆಗೆದುಕೊಂಡು ಹೋಗಿದ್ದಾನೆ. ಆದರೆ ನಾನು ಆ ವಸ್ತುಗಳನ್ನು ಜೆರುಸಲೇಮಿಗೆ ತರುತ್ತೇನೆ. 4 ನಾನು ಯೆಹೂದದ ರಾಜನಾದ ಯೆಹೋಯಾಕೀನನನ್ನು ಇಲ್ಲಿಗೆ ಕರೆದುಕೊಂಡು ಬರುತ್ತೇನೆ. ಯೆಹೋಯಾಕೀನನು ಯೆಹೋಯಾಕೀಮನ ಮಗನು. ನೆಬೂಕದ್ನೆಚ್ಚರನು ಬಾಬಿಲೋನಿಗೆ ತೆಗೆದುಕೊಂಡು ಹೋದ ಎಲ್ಲಾ ಯೆಹೂದ್ಯರನ್ನು ನಾನು ಮತ್ತೆ ಕರೆದುಕೊಂಡು ಬರುತ್ತೇನೆ. ಬಾಬಿಲೋನಿನ ರಾಜನು ಯೆಹೂದದ ಜನರ ಮೇಲೆ ಹೇರಿದ ನೊಗವನ್ನು ನಾನು ಮುರಿದುಹಾಕುತ್ತೇನೆ.’” ಇದು ಯೆಹೋವನ ಸಂದೇಶ.
5 ಪ್ರವಾದಿಯಾದ ಯೆರೆಮೀಯನು ಪ್ರವಾದಿಯಾದ ಹನನ್ಯನಿಗೆ ಹೀಗೆ ಉತ್ತರ ಕೊಟ್ಟನು. ಅವರು ಯೆಹೋವನ ಆಲಯದಲ್ಲಿ ನಿಂತಿದ್ದರು. ಯಾಜಕರೂ ಮತ್ತು ಅಲ್ಲಿಯ ಸಮಸ್ತ ಜನರು ಯೆರೆಮೀಯನ ಉತ್ತರವನ್ನು ಕೇಳಿಸಿಕೊಂಡರು. 6 ಯೆರೆಮೀಯನು ಹನನ್ಯನಿಗೆ, “ಹಾಗೆಯೇ ಆಗಲಿ, ನೀನು ಹೇಳಿದಂತೆ ಯೆಹೋವನು ಮಾಡಲಿ. ನೀನು ಪ್ರವಾದಿಸಿದ ಸಂದೇಶವನ್ನು ಯೆಹೋವನು ನಿಜವಾಗುವಂತೆ ಮಾಡುವನೆಂದು ನಾನು ಆಶಿಸುತ್ತೇನೆ. ಯೆಹೋವನು ಬಾಬಿಲೋನಿನಿಂದ ತನ್ನ ಆಲಯದ ವಸ್ತುಗಳನ್ನು ಇಲ್ಲಿಗೆ ತರುವನೆಂದು ನಾನು ಆಶಿಸುವೆ. ತಮ್ಮ ಮನೆಗಳನ್ನು ಬಿಟ್ಟುಹೋಗಲು ಒತ್ತಾಯಿಸಲ್ಪಟ್ಟ ಜನರನ್ನು ಮತ್ತೆ ಯೆಹೋವನು ಇಲ್ಲಿಗೆ ಕರೆತರುವನೆಂದು ನಾನು ಆಶಿಸುವೆ.
7 “ಹನನ್ಯನೇ, ನಾನು ಹೇಳಬೇಕಾದುದನ್ನು ಕೇಳು. ಸಮಸ್ತ ಜನರಿಗೆ ನಾನು ಹೇಳಬೇಕಾದುದನ್ನು ಕೇಳು. 8 ಹನನ್ಯನೇ, ನಾನು ಮತ್ತು ನೀನು ಪ್ರವಾದಿಗಳಾಗುವದಕ್ಕಿಂತ ಬಹಳ ಮುಂಚೆ ಪ್ರವಾದಿಗಳು ಇದ್ದರು. ಯುದ್ಧ, ಹಸಿವು ಮತ್ತು ಭಯಂಕರವಾದ ವ್ಯಾಧಿಗಳು ಅನೇಕ ದೇಶಗಳಿಗೆ ಮತ್ತು ದೊಡ್ಡದೊಡ್ಡ ರಾಜ್ಯಗಳಿಗೆ ಬರುತ್ತವೆ ಎಂದು ಅವರು ಪ್ರವಾದಿಸಿದ್ದಾರೆ. 9 ಆದರೆ ನಾವು ನೆಮ್ಮದಿಯಿಂದ ಇರುವೆವು ಎಂದು ಪ್ರವಾದಿಸುವ ಪ್ರವಾದಿಯು ನಿಜವಾಗಿಯೂ ಯೆಹೋವನಿಂದ ಕಳುಹಿಸಲ್ಪಟ್ಟಿರುವನೇ ಎಂಬುದನ್ನು ನಾವು ಪರೀಕ್ಷಿಸಬೇಕು. ಆ ಪ್ರವಾದಿಯ ಸಂದೇಶವು ಸತ್ಯವಾಗಿ ಪರಿಣಮಿಸಿದರೆ ಅವನು ನಿಜವಾಗಿ ಯೆಹೋವನಿಂದ ಕಳುಹಿಸಲ್ಪಟ್ಟವನೆಂದು ಜನರು ತಿಳಿದುಕೊಳ್ಳಬಹುದು.”
10 ಯೆರೆಮೀಯನು ತನ್ನ ಹೆಗಲಿನ ಮೇಲೆ ನೊಗವನ್ನು ಹೊತ್ತುಕೊಂಡಿದ್ದನು. ಪ್ರವಾದಿಯಾದ ಹನನ್ಯನು ಯೆರೆಮೀಯನ ಹೆಗಲಿನಿಂದ ಆ ನೊಗವನ್ನು ತೆಗೆದುಕೊಂಡು ಆ ನೊಗವನ್ನು ಮುರಿದುಹಾಕಿದನು. 11 ಆಮೇಲೆ ಹನನ್ಯನು ಗಟ್ಟಿಯಾಗಿ ಎಲ್ಲರೂ ಕೇಳುವಂತೆ ಮಾತನಾಡಿದನು. “ಯೆಹೋವನು ಹೇಳುತ್ತಾನೆ: ‘ಇದೇ ರೀತಿಯಲ್ಲಿ ಬಾಬಿಲೋನಿನ ರಾಜನಾದ ನೆಬೂಕದ್ನೆಚ್ಚರನು ಹೇರಿದ ನೊಗವನ್ನು ನಾನು ಮುರಿದುಹಾಕುವೆನು. ಅವನು ಆ ನೊಗವನ್ನು ಜಗತ್ತಿನ ಸಮಸ್ತ ಜನಾಂಗಗಳ ಮೇಲೆ ಹೇರಿದ್ದಾನೆ. ಆದರೆ ನಾನು ಆ ನೊಗವನ್ನು ಎರಡು ವರ್ಷದೊಳಗಾಗಿ ಮುರಿದುಹಾಕುವೆನು.’”
ಹನನ್ಯನು ಹಾಗೆ ಹೇಳಿದ ಮೇಲೆ ಯೆರೆಮೀಯನು ಪವಿತ್ರಾಲಯವನ್ನು ಬಿಟ್ಟನು.
12 ಆಗ ಯೆರೆಮೀಯನಿಗೆ ಯೆಹೋವನ ಸಂದೇಶ ಬಂದಿತು. ಹನನ್ಯನು ಯೆರೆಮೀಯನ ಕತ್ತಿನಿಂದ ನೊಗವನ್ನು ತೆಗೆದುಕೊಂಡು ಮುರಿದುಹಾಕಿದ ಮೇಲೆ ಈ ಸಂದೇಶ ಬಂದಿತು. 13 ಯೆಹೋವನು ಯೆರೆಮೀಯನಿಗೆ ಹೀಗೆಂದನು: “ಹೋಗಿ ಹನನ್ಯನಿಗೆ ಹೀಗೆ ಹೇಳು: ‘ಯೆಹೋವನು ಹೀಗೆನ್ನುತ್ತಾನೆ. ನೀನು ಮರದ ನೊಗವನ್ನು ಮುರಿದೆ, ಆದರೆ ನಾನು ಮರದ ನೊಗಕ್ಕೆ ಬದಲಾಗಿ ಕಬ್ಬಿಣದ ನೊಗವನ್ನು ಮಾಡುವೆನು. 14 ಇಸ್ರೇಲಿನ ದೇವರೂ ಸರ್ವಶಕ್ತನೂ ಆಗಿರುವ ಯೆಹೋವನು ಹೇಳುವುದೇನೆಂದರೆ, ನಾನು ಕಬ್ಬಿಣದ ನೊಗವನ್ನು ಈ ಎಲ್ಲಾ ಜನಾಂಗಗಳ ಹೆಗಲಿನ ಮೇಲೆ ಹೊರಿಸುವೆನು. ಬಾಬಿಲೋನಿನ ರಾಜನಾದ ನೆಬೂಕದ್ನೆಚ್ಚರನ ಸೇವೆಯನ್ನು ಮಾಡುವಂತೆ ಮಾಡುತ್ತೇನೆ. ಅವರು ಅವನಿಗೆ ಗುಲಾಮರಾಗಿರುವರು. ನಾನು ನೆಬೂಕದ್ನೆಚ್ಚರನಿಗೆ ಕಾಡುಪ್ರಾಣಿಗಳ ಮೇಲೂ ಅಧಿಕಾರವನ್ನು ದಯಪಾಲಿಸುವೆನು.’”
15 ತರುವಾಯ ಪ್ರವಾದಿಯಾದ ಯೆರೆಮೀಯನು ಪ್ರವಾದಿಯಾದ ಹನನ್ಯನಿಗೆ ಹೀಗೆ ಹೇಳಿದನು: “ಹನನ್ಯನೇ, ಕೇಳು. ಯೆಹೋವನು ನಿನ್ನನ್ನು ಕಳುಹಿಸಲಿಲ್ಲ. ಆದರೆ ಯೆಹೂದದ ಜನರಿಗೆ ಸುಳ್ಳನ್ನು ನಂಬುವಂತೆ ನೀನು ಮಾಡಿರುವೆ. 16 ಅದಕ್ಕಾಗಿ ಯೆಹೋವನು ಹೀಗೆ ಹೇಳುತ್ತಾನೆ: ‘ಹನನ್ಯನೇ, ನಾನು ನಿನ್ನನ್ನು ಶೀಘ್ರದಲ್ಲಿ ಈ ಜಗತ್ತಿನಿಂದ ತೆಗೆದುಬಿಡುತ್ತೇನೆ. ನೀನು ಈ ವರ್ಷ ಮರಣಹೊಂದುವೆ. ಏಕೆಂದರೆ ನೀನು ಜನರನ್ನು ಯೆಹೋವನ ವಿರುದ್ಧ ತಿರುಗುವಂತೆ ಮಾಡಿದೆ.’”
17 ಹನನ್ಯನು ಅದೇ ವರ್ಷದ ಏಳನೆಯ ತಿಂಗಳಲ್ಲಿ ಮರಣಹೊಂದಿದನು.
ಬಾಬಿಲೋನಿನಲ್ಲಿದ್ದ ಯೆಹೂದದ ಸೆರೆಯಾಳುಗಳಿಗೆ ಒಂದು ಪತ್ರ
29 ಯೆರೆಮೀಯನು ಬಾಬಿಲೋನಿನಲ್ಲಿದ್ದ ಯೆಹೂದ್ಯ ಸೆರೆಯಾಳುಗಳಿಗೆ, ಅಂದರೆ ಹಿರಿಯನಾಯಕರಿಗೆ, ಯಾಜಕರಿಗೆ, ಪ್ರವಾದಿಗಳಿಗೆ ಮತ್ತು ಇನ್ನುಳಿದ ಸಮಸ್ತ ಜನರಿಗೆ ಪತ್ರವನ್ನು ಕಳುಹಿಸಿದನು. ಇವರನ್ನು ನೆಬೂಕದ್ನೆಚ್ಚರನು ಜೆರುಸಲೇಮಿನಿಂದ ಬಾಬಿಲೋನಿಗೆ ಸೆರೆಯಾಳುಗಳಾಗಿ ಕೊಂಡೊಯ್ದನು. 2 (ರಾಜನಾದ ಯೆಹೋಯಾಕೀನನನ್ನು, ರಾಜಮಾತೆಯನ್ನು, ಯೆಹೂದದ ಮತ್ತು ಜೆರುಸಲೇಮಿನ ಅಧಿಕಾರಿಗಳನ್ನು, ಮುಂದಾಳುಗಳನ್ನು, ಬಡಗಿಗಳನ್ನು ಮತ್ತು ಕಮ್ಮಾರರನ್ನು ಜೆರುಸಲೇಮಿನಿಂದ ತೆಗೆದುಕೊಂಡು ಹೋದ ಮೇಲೆ ಈ ಪತ್ರವನ್ನು ಕಳಿಸಲಾಯಿತು.) 3 ಚಿದ್ಕೀಯನು ಎಲ್ಲಾಸ ಮತ್ತು ಗೆಮರ್ಯರನ್ನು ರಾಜನಾದ ನೆಬೂಕದ್ನೆಚ್ಚರನ ಬಳಿಗೆ ಕಳಿಸಿದನು. ಚಿದ್ಕೀಯನು ಯೆಹೂದದ ರಾಜನಾಗಿದ್ದನು. ಎಲ್ಲಾಸನು ಶಾಫಾನನ ಮಗನಾಗಿದ್ದನು. ಗೆಮರ್ಯನು ಹಿಲ್ಕೀಯನ ಮಗನಾಗಿದ್ದನು. ಬಾಬಿಲೋನಿಗೆ ಕೊಂಡೊಯ್ಯುವಂತೆ ಯೆರೆಮೀಯನು ಅವರಿಗಾಗಿ ಪತ್ರವನ್ನು ಕೊಟ್ಟನು. ಆ ಪತ್ರದಲ್ಲಿ ಹೀಗೆ ಬರೆಯಲಾಗಿತ್ತು:
4 ಇಸ್ರೇಲರ ದೇವರೂ ಸರ್ವಶಕ್ತನೂ ಆಗಿರುವ ಯೆಹೋವನು ತಾನು ಜೆರುಸಲೇಮಿನಿಂದ ಬಾಬಿಲೋನಿಗೆ ಬಂಧಿಗಳನ್ನಾಗಿ ಕಳುಹಿಸಿದ ಎಲ್ಲಾ ಜನರಿಗೆ ಈ ಮಾತುಗಳನ್ನು ಹೇಳುತ್ತಾನೆ. 5 “ಮನೆಗಳನ್ನು ಕಟ್ಟಿ ಅವುಗಳಲ್ಲಿ ವಾಸಿಸಿರಿ. ಆ ಪ್ರದೇಶದಲ್ಲಿ ನೆಲೆಸಿರಿ. ತೋಟಗಳನ್ನು ಬೆಳೆಸಿರಿ ಮತ್ತು ನೀವು ಬೆಳೆಸಿದ ಆಹಾರವನ್ನು ಸೇವಿಸಿರಿ. 6 ಮದುವೆ ಮಾಡಿಕೊಳ್ಳಿರಿ; ಗಂಡು ಮತ್ತು ಹೆಣ್ಣುಮಕ್ಕಳನ್ನು ಪಡೆಯಿರಿ. ನಿಮ್ಮ ಗಂಡುಮಕ್ಕಳಿಗೂ ನಿಮ್ಮ ಹೆಣ್ಣುಮಕ್ಕಳಿಗೂ ಮದುವೆ ಮಾಡಿರಿ. ಅವರಿಗೂ ಗಂಡು ಮತ್ತು ಹೆಣ್ಣು ಮಕ್ಕಳಾಗಲಿ. ಅನೇಕ ಮಕ್ಕಳನ್ನು ಹೆತ್ತು ಬಾಬಿಲೋನಿನಲ್ಲಿ ಬಹುಸಂಖ್ಯಾತರಾಗಿ. ಅಲ್ಪಸಂಖ್ಯಾತರಾಗಬೇಡಿ. 7 ಅಂತೆಯೇ, ನಾನು ನಿಮ್ಮನ್ನು ಕಳುಹಿಸಿದ ನಗರಕ್ಕೆ ಒಳ್ಳೆಯದನ್ನು ಮಾಡಿರಿ. ನೀವು ವಾಸಮಾಡುತ್ತಿರುವ ನಗರಕ್ಕಾಗಿ ಯೆಹೋವನಿಗೆ ಪ್ರಾರ್ಥಿಸಿರಿ. ಏಕೆಂದರೆ ಆ ನಗರದಲ್ಲಿ ನೆಮ್ಮದಿಯಿದ್ದರೆ ನಿಮಗೂ ನೆಮ್ಮದಿ ಸಿಗುವುದು.” 8 ಇಸ್ರೇಲರ ದೇವರೂ, ಸರ್ವಶಕ್ತನೂ ಆಗಿರುವ ಯೆಹೋವನು, ಹೀಗೆನ್ನುತ್ತಾನೆ: “ನಿಮ್ಮ ಪ್ರವಾದಿಗಳು ಮತ್ತು ಮಾಟಮಂತ್ರಗಾರರು ನಿಮ್ಮನ್ನು ಮರುಳುಗೊಳಿಸದಿರಲಿ. ಅವರು ನೋಡುವ ಕನಸುಗಳಿಗೆ ಕಿವಿಗೊಡಬೇಡಿ. 9 ಅವರು ಸುಳ್ಳುಗಳನ್ನು ಬೋಧಿಸುತ್ತಿರುವರು. ಅವರ ಸಂದೇಶವು ನನ್ನಿಂದ ಬಂದಿದೆ ಎಂದು ಅವರು ಹೇಳುತ್ತಿರುವರು. ಆದರೆ ನಾನು ಅದನ್ನು ಕಳುಹಿಸಲಿಲ್ಲ.” ಈ ಸಂದೇಶವು ಯೆಹೋವನಿಂದ ಬಂದದ್ದು.
10 ಯೆಹೋವನು ಹೀಗೆನ್ನುತ್ತಾನೆ: “ಬಾಬಿಲೋನ್ ಎಪ್ಪತ್ತು ವರ್ಷಗಳವರೆಗೆ ಬಲಿಷ್ಠವಾಗಿರುವುದು. ಅನಂತರ ನಾನು ಬಾಬಿಲೋನಿನಲ್ಲಿ ವಾಸಮಾಡುತ್ತಿರುವ ನಿಮ್ಮ ಬಳಿಗೆ ಬಂದು ನನ್ನ ವಾಗ್ದಾನದಂತೆ ನಿಮ್ಮನ್ನು ಜೆರುಸಲೇಮಿಗೆ ಮತ್ತೆ ಕರೆದುಕೊಂಡು ಬರುವೆನು. 11 ನಾನು ನಿಮಗಾಗಿ ಹಾಕಿದ ಯೋಜನೆಗಳು ನನಗೆ ಗೊತ್ತಿರುವುದರಿಂದ ನಾನು ಹೀಗೆ ಹೇಳುತ್ತಿದ್ದೇನೆ.” ಇದು ಯೆಹೋವನ ಸಂದೇಶ. “ನಾನು ನಿಮಗಾಗಿ ಒಳ್ಳೆಯ ಯೋಜನೆಗಳನ್ನು ಹಾಕಿದ್ದೇನೆ. ನಿಮಗೆ ಕೆಟ್ಟದ್ದನ್ನು ಮಾಡುವ ವಿಚಾರ ನನಗಿಲ್ಲ. ನಾನು ನಿಮಗಾಗಿ ಆಶಾದಾಯಕವಾದ ಮತ್ತು ಒಳ್ಳೆಯ ಭವಿಷ್ಯದ ವಿಚಾರಗಳನ್ನಿಟ್ಟುಕೊಂಡಿದ್ದೇನೆ. 12 ಆಗ ನೀವು ನನ್ನಲ್ಲಿ ಮೊರೆಯಿಡುವಿರಿ. ನೀವು ನನ್ನಲ್ಲಿಗೆ ಬಂದು ನನ್ನನ್ನು ಪ್ರಾರ್ಥಿಸಿರಿ; ಆಗ ನಾನು ನಿಮಗೆ ಕಿವಿಗೊಡುವೆನು. 13 ನೀವು ನನ್ನನ್ನು ಹುಡುಕುವಿರಿ. ನೀವು ಮನಃಪೂರ್ವಕವಾಗಿ ಹುಡುಕಿದಾಗ ನನ್ನನ್ನು ಕಂಡುಕೊಳ್ಳುವಿರಿ. 14 ನಾನು ನಿಮಗೆ ದೊರೆಯುವೆನು.” ಇದು ಯೆಹೋವನ ನುಡಿ. “ನಾನು ನಿಮ್ಮನ್ನು ನಿಮ್ಮ ಬಂಧನದಿಂದ ಬಿಡಿಸಿ ಕರೆದುತರುವೆನು. ನಾನು ಈ ಸ್ಥಳವನ್ನು ಬಿಡಲು ನಿಮಗೆ ಒತ್ತಾಯಿಸಿದೆ. ಆದರೆ ನಾನು ನಿಮ್ಮನ್ನು ಕಳುಹಿಸಿದ್ದ ಎಲ್ಲಾ ಜನಾಂಗಗಳಿಂದ ಮತ್ತು ಎಲ್ಲಾ ಸ್ಥಳಗಳಿಂದ ನಿಮ್ಮನ್ನು ಒಟ್ಟುಗೂಡಿಸಿ ಈ ಸ್ಥಳಕ್ಕೆ ಕರೆದು ತರುವೆನು.” ಇದು ಯೆಹೋವನ ನುಡಿ.
15 “ಆದರೆ ಯೆಹೋವನು ನಮಗೆ ಬಾಬಿಲೋನಿನಲ್ಲಿಯೇ ಪ್ರವಾದಿಗಳನ್ನು ಕೊಟ್ಟಿದ್ದಾನೆ” ಎಂದು ನೀವು ಹೇಳಬಹುದು. 16 ಬಾಬಿಲೋನಿಗೆ ತೆಗೆದುಕೊಂಡು ಹೋಗದ ನಿಮ್ಮ ಆಪ್ತರ ಬಗ್ಗೆ ಯೆಹೋವನು ಹೀಗೆನ್ನುತ್ತಾನೆ. ಈಗ ದಾವೀದನ ಸಿಂಹಾಸನಾರೂಢನಾದ ರಾಜನ ವಿಷಯವಾಗಿಯೂ ಇನ್ನೂ ಜೆರುಸಲೇಮ್ ನಗರದಲ್ಲಿಯೇ ಇರುವ ಜನರ ವಿಷಯವಾಗಿಯೂ ಹೇಳುತ್ತಿರುವೆನು. 17 ಸರ್ವಶಕ್ತನಾದ ಯೆಹೋವನು ಹೇಳಿದನು: “ಇನ್ನೂ ಜೆರುಸಲೇಮಿನಲ್ಲಿಯೇ ಇದ್ದ ಜನರ ವಿರುದ್ಧ ನಾನು ಬೇಗನೆ ಖಡ್ಗವನ್ನು, ಹಸಿವನ್ನು ಮತ್ತು ಭಯಂಕರವಾದ ವ್ಯಾಧಿಯನ್ನು ಕಳುಹಿಸುವೆನು. ನಾನು ಅವರನ್ನು, ಅತೀ ಕೊಳೆತು ತಿನ್ನಲಾಗದ ಅಂಜೂರದ ಹಣ್ಣುಗಳಂತೆ ಮಾಡುವೆನು. 18 ಇನ್ನೂ ಜೆರುಸಲೇಮಿನಲ್ಲಿರುವ ಜನರಿಗೆ ಖಡ್ಗ, ಹಸಿವು ಮತ್ತು ಭಯಂಕರವಾದ ವ್ಯಾಧಿಗಳಿಂದೊಡಗೂಡಿ ಬೆನ್ನಟ್ಟುವೆನು. ಆ ಜನರ ದುರ್ಗತಿಯನ್ನು ನೋಡಿ ಭೂಲೋಕದ ಸಮಸ್ತ ರಾಜ್ಯಗಳಿಗೆ ಭಯ ಉಂಟಾಗುವಂತೆ ಮಾಡುವೆನು. ಆ ಜನರನ್ನು ನಾಶಮಾಡುವೆನು. ನಡೆದ ವಿಷಯಗಳ ಬಗ್ಗೆ ಕೇಳಿ ಜನರು ಬೆರಗಾಗಿ ಸಿಳ್ಳುಹಾಕುವರು. ಯಾರಿಗಾದರೂ, ಕೇಡಾಗಲಿ ಎಂದು ಹೇಳಬೇಕಾದರೆ ಜನರು ಅವರ ಉದಾಹರಣೆಯನ್ನು ಕೊಡುವರು. ನಾನು ಅವರನ್ನು ಅಟ್ಟಿದ ಎಲ್ಲೆಡೆಯಲ್ಲಿಯೂ ಜನರು ಅವರನ್ನು ಅವಮಾನಗೊಳಿಸುವರು. 19 ಜೆರುಸಲೇಮಿನವರು ನನ್ನ ಸಂದೇಶಕ್ಕೆ ಕಿವಿಗೊಟ್ಟಿಲ್ಲವಾದ ಕಾರಣ ನಾನು ಹಾಗೆಲ್ಲ ನಡೆಯುವಂತೆ ಮಾಡುವೆನು” ಇದು ಯೆಹೋವನ ನುಡಿ. “ನಾನು ಮತ್ತೆಮತ್ತೆ ನನ್ನ ಸಂದೇಶವನ್ನು ಅವರಿಗೆ ಕೊಟ್ಟೆ. ಆ ಜನರಿಗೆ ಸಂದೇಶಗಳನ್ನು ಕೊಡುವದಕ್ಕಾಗಿ ನನ್ನ ಸೇವಕರಾದ ಪ್ರವಾದಿಗಳನ್ನು ಉಪಯೋಗಿಸಿಕೊಂಡೆ. ಆದರೆ ಆ ಜನರು ಕೇಳಲಿಲ್ಲ.” ಇದು ಯೆಹೋವನ ನುಡಿ. 20 “ನೀವು ಬಂಧಿಗಳು. ನಾನು ನಿಮ್ಮನ್ನು ಜೆರುಸಲೇಮ್ ಬಿಟ್ಟು ಬಾಬಿಲೋನಿಗೆ ಹೋಗುವಂತೆ ಒತ್ತಾಯಿಸಿದೆ. ಆದ್ದರಿಂದ ಯೆಹೋವನ ಸಂದೇಶವನ್ನು ಕೇಳಿರಿ.”
21 ಕೊಲಾಯನ ಮಗನಾದ ಅಹಾಬ ಮತ್ತು ಮಾಸೇಯನ ಮಗನಾದ ಚಿದ್ಕೀಯ ಇವರ ವಿಷಯವಾಗಿ ಸರ್ವಶಕ್ತನಾದ ಯೆಹೋವನು ಹೀಗೆಂದನು: “ಇವರಿಬ್ಬರು ನಿಮಗೆ ಸುಳ್ಳುಪ್ರವಾದನೆ ಮಾಡಿದ್ದಾರೆ. ಅವರ ಸಂದೇಶವು ನನ್ನಿಂದ ಬಂದದ್ದು ಎಂದು ಅವರು ಹೇಳಿದ್ದಾರೆ. ಆದರೆ ಅವರು ಹೇಳಿದ್ದು ಸುಳ್ಳು. ನಾನು ಆ ಇಬ್ಬರು ಪ್ರವಾದಿಗಳನ್ನು ಬಾಬಿಲೋನಿನ ರಾಜನಾದ ನೆಬೂಕದ್ನೆಚ್ಚರನಿಗೆ ಒಪ್ಪಿಸುವೆನು. ನೆಬೂಕದ್ನೆಚ್ಚರನು ಬಾಬಿಲೋನಿನಲ್ಲಿ ಬಂಧಿಯಾಗಿರುವ ನಿಮ್ಮೆಲ್ಲರ ಸಮ್ಮುಖದಲ್ಲಿ ಆ ಇಬ್ಬರು ಪ್ರವಾದಿಗಳನ್ನು ಕೊಲ್ಲುವನು. 22 ಯೆಹೂದದ ಬಂಧಿಗಳೆಲ್ಲಾ ಬೇರೆಯವರಿಗೆ ಕೇಡಾಗಲಿ ಎಂದು ಕೇಳಿಕೊಳ್ಳುವಾಗ ಆ ಜನರ ಉದಾಹರಣೆ ಕೊಡುವರು. ಆ ಬಂಧಿಗಳು ಹೀಗೆನ್ನುವರು: ‘ಬಾಬಿಲೋನಿನ ರಾಜನು ಬೆಂಕಿಯಲ್ಲಿ ಸುಟ್ಟುಬಿಟ್ಟ ಚಿದ್ಕೀಯನ ಮತ್ತು ಅಹಾಬನ ಗತಿಯನ್ನು ಯೆಹೋವನು ನಿನಗೆ ತರಲಿ.’ 23 ಆ ಪ್ರವಾದಿಗಳಿಬ್ಬರು ಇಸ್ರೇಲಿನಲ್ಲಿ ಹೆಚ್ಚಿನ ದುರಾಚಾರವನ್ನು ನಡೆಸಿದರು. ಅವರು ತಮ್ಮ ನೆರೆಯವರ ಹೆಂಡತಿಯರೊಂದಿಗೆ ವ್ಯಭಿಚಾರ ಮಾಡಿದರು. ಅವರು ಸುಳ್ಳುಗಳನ್ನು ಹೇಳಿದರು. ಆ ಸುಳ್ಳುಗಳನ್ನು ಯೆಹೋವನಾದ ನನ್ನ ಸಂದೇಶವೆಂದು ಹೇಳಿದರು. ಹಾಗೆ ಮಾಡಲು ನಾನು ಅವರಿಗೆ ಹೇಳಿಲ್ಲ, ಅವರು ಏನು ಮಾಡಿದ್ದಾರೆಂಬುದನ್ನು ನಾನು ಬಲ್ಲೆ. ಅದಕ್ಕೆ ನಾನೇ ಸಾಕ್ಷಿ.” ಇದು ಯೆಹೋವನ ಸಂದೇಶ.
ಶೆಮಾಯನಿಗೆ ದೇವರ ಸಂದೇಶ
24 (ಯೆಹೋವನು ಯೆರೆಮೀಯನಿಗೆ ಈ ಅಪ್ಪಣೆಯನ್ನು ಕೊಟ್ಟನು.) ನೀನು ನೆಹೆಲಾಮ್ಯನಾದ ಶೆಮಾಯನಿಗೆ ಕೂಡ ಒಂದು ಸಂದೇಶವನ್ನು ಕೊಡು. 25 ಇಸ್ರೇಲಿನ ದೇವರೂ ಸರ್ವಶಕ್ತನೂ ಆಗಿರುವ ಯೆಹೋವನು ಹೀಗೆ ಹೇಳುವನು: “ಶೆಮಾಯನೇ, ಜೆರುಸಲೇಮಿನಲ್ಲಿರುವ ಎಲ್ಲಾ ಜನರಿಗೆ ನೀನು ಪತ್ರವನ್ನು ಕಳುಹಿಸಿದೆ. ನೀನು ಮಾಸೇಯನ ಮಗನಾಗಿರುವ ಯಾಜಕನಾದ ಚೆಫನ್ಯನಿಗೂ ಮತ್ತು ಎಲ್ಲಾ ಯಾಜಕರಿಗೂ ಪತ್ರಗಳನ್ನು ಕಳುಹಿಸಿದೆ. ಆ ಪತ್ರಗಳನ್ನು ಯೆಹೋವನ ಆದೇಶದ ಪ್ರಕಾರ ಕಳುಹಿಸದೆ, ನಿನ್ನ ಹೆಸರಿನಿಂದ ಕಳುಹಿಸಿದೆ. 26 ಶೆಮಾಯನೇ, ನೀನು ಚೆಫನ್ಯನಿಗೆ ಬರೆದ ಪತ್ರದಲ್ಲಿ ಹೀಗೆ ಹೇಳಿರುವೆ: ‘ಚೆಫನ್ಯನೇ, ಯೆಹೋವನು ನಿನ್ನನ್ನು ಯೆಹೋಯಾದನ ಸ್ಥಾನದಲ್ಲಿ ಯಾಜಕನನ್ನಾಗಿ ನೇಮಿಸಿದ್ದಾನೆ. ನೀನು ಯೆಹೋವನ ಆಲಯದ ಮೇಲ್ವಿಚಾರಕನಾಗಿರುವೆ. ಹುಚ್ಚನಂತೆ ವರ್ತಿಸುವ ಮತ್ತು ಪ್ರವಾದಿಯಂತೆ ನಟಿಸುವ ವ್ಯಕ್ತಿಯನ್ನು ನೀನು ಬಂಧಿಸಬೇಕು, ಅವನಿಗೆ ಕೋಳಹಾಕಿ ಕೊರಳಿಗೆ ಕಬ್ಬಿಣದ ಕಂಠಪಟ್ಟಿಯನ್ನು ಹಾಕಬೇಕು. 27 ಈಗ ಯೆರೆಮೀಯನು ಪ್ರವಾದಿಯಂತೆ ನಟಿಸುತ್ತಿದ್ದಾನೆ. ನೀನು ಅವನನ್ನು ಏಕೆ ಬಂಧಿಸಲಿಲ್ಲ? 28 ಯೆರೆಮೀಯನು ಬಾಬಿಲೋನಿನಲ್ಲಿದ್ದ ನಮಗೆ ಈ ಸಂದೇಶವನ್ನು ಕಳುಹಿಸಿದ್ದಾನೆ: ಬಾಬಿಲೋನಿನಲ್ಲಿರುವ ನೀವು ಅಲ್ಲಿ ಬಹಳ ಕಾಲದವರೆಗೆ ಇರುವಿರಿ. ಆದ್ದರಿಂದ ಮನೆಗಳನ್ನು ಕಟ್ಟಿಕೊಂಡು ಅಲ್ಲಿ ನೆಲೆಸಿರಿ; ತೋಟಗಳನ್ನು ಬೆಳೆಸಿರಿ; ಮತ್ತು ನೀವು ಬೆಳೆದದ್ದನ್ನು ಆಹಾರವನ್ನಾಗಿ ಬಳಸಿರಿ.’”
29 ಯಾಜಕನಾದ ಚೆಫನ್ಯನು ಈ ಕಾಗದವನ್ನು ಪ್ರವಾದಿಯಾದ ಯೆರೆಮೀಯನ ಮುಂದೆ ಓದಿದನು. 30 ಆಗ ಯೆರೆಮೀಯನಿಗೆ ಯೆಹೋವನ ಸಂದೇಶವು ಬಂದಿತು. 31 “ಯೆರೆಮೀಯನೇ, ಬಾಬಿಲೋನಿನಲ್ಲಿರುವ ಎಲ್ಲಾ ಬಂಧಿಗಳಿಗೆ ಈ ಸಂದೇಶವನ್ನು ಕಳುಹಿಸು, ‘ನೆಹೆಲಾಮ್ಯನಾದ ಶೆಮಾಯನ ವಿಷಯದಲ್ಲಿ ಯೆಹೋವನು ಹೀಗೆನ್ನುವನು: ಶೆಮಾಯನು ನಿಮಗೆ ಪ್ರವಾದನೆ ಮಾಡಿದ್ದಾನೆ. ಆದರೆ ನಾನು ಅವನನ್ನು ಕಳುಹಿಸಲಿಲ್ಲ. ನೀವು ಸುಳ್ಳನ್ನು ನಂಬುವಂತೆ ಅವನು ಮಾಡಿದ್ದಾನೆ. 32 ಆದ್ದರಿಂದ ಅವನನ್ನು ನಾನು ತಕ್ಷಣ ದಂಡಿಸುತ್ತೇನೆ. ನಾನು ಅವನ ಕುಟುಂಬವನ್ನು ಸಂಪೂರ್ಣವಾಗಿ ನಾಶಮಾಡುತ್ತೇನೆ. ನಾನು ನನ್ನ ಜನರಿಗಾಗಿ ಮಾಡುವ ಒಳ್ಳೆಯವುಗಳಲ್ಲಿ ಅವನು ಪಾಲು ಹೊಂದುವುದಿಲ್ಲ.’” ಇದು ಯೆಹೋವನ ನುಡಿ. “‘ಶೆಮಾಯನು, ಜನರನ್ನು ಯೆಹೋವನಾದ ನನ್ನ ವಿರುದ್ಧ ತಿರುಗುವಂತೆ ಮಾಡಿದ್ದರಿಂದ ನಾನು ಅವನನ್ನು ದಂಡಿಸುವೆನು.’”
ಜೀವಿಸಲು ಯೋಗ್ಯವಾದ ಮಾರ್ಗ
3 ನೀನು ಜನರಿಗೆ ತಿಳಿಸಬೇಕಾದದ್ದೇನೆಂದರೆ: ನಿಮ್ಮ ಅಧಿಪತಿಗಳಿಗೂ ಅಧಿಕಾರಿಗಳಿಗೂ ಅಧೀನರಾಗಿರಿ; ಸಕಲ ಸತ್ಕಾರ್ಯಗಳನ್ನು ಮಾಡಲು ಸಿದ್ಧರಾಗಿರಿ. 2 ಯಾರನ್ನೂ ದೂಷಿಸದೆ, ಯಾರೊಂದಿಗೂ ಜಗಳವಾಡದೆ ಮೃದುವಾಗಿ ಎಲ್ಲರೊಂದಿಗೆ ಸೌಜನ್ಯದಿಂದ ನಡೆದುಕೊಳ್ಳಿರಿ.
3 ಮೊದಲು ನಾವು ಸಹ ಅವಿವೇಕಿಗಳಾಗಿದ್ದೆವು. ನಾವು ವಿಧೇಯರಾಗಿರಲಿಲ್ಲ. ನಾವು ಮೋಸಹೋಗಿದ್ದೆವು. ಅನೇಕ ಬಗೆಯ ಆಸೆಗಳಿಗೆ ಮತ್ತು ಭೋಗಗಳಿಗೆ ದಾಸರಾಗಿದ್ದೆವು; ಕೆಟ್ಟದ್ದನ್ನು ಮಾಡುವವರೂ ಹೊಟ್ಟೆಕಿಚ್ಚುಳ್ಳವರೂ ಆಗಿದ್ದೆವು. ಜನರು ನಮ್ಮನ್ನು ದ್ವೇಷಿಸುತ್ತಿದ್ದರು. ನಾವು ಒಬ್ಬರನ್ನೊಬ್ಬರು ದ್ವೇಷಿಸುತ್ತಿದ್ದೆವು. 4 ಆಗ ನಮ್ಮ ರಕ್ಷಕನಾದ ದೇವರ ಪ್ರೀತಿಯೂ ಕೃಪೆಯೂ ಪ್ರತ್ಯಕ್ಷವಾದವು. 5 ಆತನು ನಮ್ಮನ್ನು ರಕ್ಷಿಸಿದ್ದು ತನ್ನ ಕರುಣೆಯಿಂದಲೇ ಹೊರತು ನೀತಿವಂತರಾಗಲು ನಾವು ಮಾಡಿದ ಒಳ್ಳೆಯ ಕಾರ್ಯಗಳಿಂದಲ್ಲ. ಆತನು ನಮ್ಮನ್ನು ಸ್ನಾನದ ಮೂಲಕವಾಗಿಯೂ ಪವಿತ್ರಾತ್ಮನ ಮೂಲಕವಾಗಿಯೂ ಹೊಸಬರನ್ನಾಗಿ ಮಾಡಿ ರಕ್ಷಿಸಿದನು. 6 ನಮ್ಮ ರಕ್ಷಕನಾದ ಯೇಸುಕ್ರಿಸ್ತನ ಮೂಲಕ ದೇವರು ಪವಿತ್ರಾತ್ಮನನ್ನು ನಮ್ಮ ಮೇಲೆ ಸಮೃದ್ಧಿಯಾಗಿ ಸುರಿಸಿದನು. 7 ದೇವರು ತನ್ನ ಕೃಪೆಯಿಂದ ನಮ್ಮನ್ನು ನೀತಿವಂತರನ್ನಾಗಿ ಮಾಡಿದನು. ನಾವು ನಿತ್ಯಜೀವವನ್ನು ಪಡೆಯುವಂತೆ ಆತನು ನಮಗೆ ಪವಿತ್ರಾತ್ಮನನ್ನು ಕೊಟ್ಟನು. ಅದೇ ನಮ್ಮ ನಿರೀಕ್ಷೆ. 8 ಈ ಬೋಧನೆಯು ಸತ್ಯವಾದದ್ದು.
ನೀನು ಜನರಿಗೆ ಈ ಸಂಗತಿಗಳನ್ನು ಒತ್ತಿಹೇಳಬೇಕೆಂದು ನಾನು ಅಪೇಕ್ಷಿಸುತ್ತೇನೆ. ಆಗ, ದೇವರಲ್ಲಿ ನಂಬಿಕೆ ಇಟ್ಟಿರುವವರು ಜಾಗರೂಕರಾಗಿದ್ದು ತಮ್ಮ ಜೀವನದಲ್ಲಿ ಒಳ್ಳೆಯ ಕಾರ್ಯಗಳನ್ನು ಮಾಡುವರು. ಇವು ಎಲ್ಲರಿಗೂ ಹಿತಕರವಾಗಿವೆ ಮತ್ತು ಪ್ರಯೋಜನಕರವಾಗಿವೆ.
9 ಬುದ್ಧಿಯಿಲ್ಲದೆ ಕುತರ್ಕ ಮಾಡುವ ಜನರಿಂದ, ನಿರರ್ಥಕವಾದ ವಂಶಾವಳಿಗಳ ಚರಿತ್ರೆಯ ಬಗ್ಗೆ ಮಾತನಾಡುವ ಜನರಿಂದ, ಮೋಶೆಯು ಬರೆದಿರುವ ಧರ್ಮಶಾಸ್ತ್ರದಲ್ಲಿರುವ ನಿಯಮಗಳ ಬಗ್ಗೆ ತೊಂದರೆಯನ್ನು ಉಂಟುಮಾಡುವ ಮತ್ತು ವಾಗ್ವಾದ ಮಾಡುವ ಜನರಿಂದ ದೂರವಾಗಿರು. ಅವುಗಳಿಗೆ ಯಾವ ಬೆಲೆಯೂ ಇಲ್ಲ, ಅವುಗಳಿಂದ ಜನರಿಗೆ ಯಾವ ಪ್ರಯೋಜನವೂ ಇಲ್ಲ. 10 ಯಾವನಾದರೂ ಭೇದ ಹುಟ್ಟಿಸುತ್ತಿದ್ದರೆ, ಅವನಿಗೆ ಎಚ್ಚರಿಕೆ ನೀಡು. ಅವನಿನ್ನೂ ಮುಂದುವರಿಸಿದರೆ ಮತ್ತೊಮ್ಮೆ ಎಚ್ಚರಿಕೆ ನೀಡು. ಆದರೂ ಅವನು ಕೇಳದೆಹೋದರೆ ಅವನ ಸಹವಾಸವನ್ನು ತೊರೆದುಬಿಡು. 11 ಅಂಥವನು ಕೆಟ್ಟವನೂ ಪಾಪಪೂರಿತನೂ ಆಗಿದ್ದಾನೆ ಎಂಬುದು ನಿನಗೂ ತಿಳಿದಿದೆ. ಅವನು ತನ್ನ ಸ್ವಕಾರ್ಯಗಳಿಂದಲೇ ತಪ್ಪಿತಸ್ಥನೆಂಬ ತೀರ್ಪನ್ನು ಹೊಂದಿದ್ದಾನೆ.
ನೆನಪಿನಲ್ಲಿಡಬೇಕಾದ ಕೆಲವು ಸಂಗತಿಗಳು
12 ನಾನು ನಿನ್ನ ಬಳಿಗೆ ಅರ್ತೆಮನನ್ನು ಮತ್ತು ತುಖಿಕನನ್ನು ಕಳುಹಿಸಿದಾಗ, ನಿಕೊಪೊಲಿಯಲ್ಲಿರುವ ನನ್ನ ಬಳಿಗೆ ಬರಲು ಆದಷ್ಟು ಪ್ರಯತ್ನಿಸು. ನಾನು ಈ ಚಳಿಗಾಲವನ್ನು ಅಲ್ಲಿಯೇ ಕಳೆಯಬೇಕೆಂದಿದ್ದೇನೆ. 13 ವಕೀಲನಾದ ಜೇನನೂ ಅಪೊಲ್ಲೋಸನೂ ಅಲ್ಲಿಂದ ಪ್ರಯಾಣ ಮಾಡುತ್ತಾರೆ. ಅವರ ಪ್ರಯಾಣಕ್ಕೆ ನಿನ್ನಿಂದ ಸಾಧ್ಯವಾದಷ್ಟು ಸಹಾಯಮಾಡು. ಅವರಿಗೆ ಯಾವ ಕೊರತೆಯೂ ಆಗದಂತೆ ನೋಡಿಕೊ. 14 ನಮ್ಮ ಜನರು ತಮ್ಮ ಜೀವನವು ನಿಷ್ಪ್ರಯೋಜಕವಾಗದಂತೆ ಪರೋಪಕಾರವನ್ನು ಕಲಿತುಕೊಂಡು ಕೊರತೆಯಲ್ಲಿರುವವರಿಗೆ ಉಪಕಾರ ಮಾಡಬೇಕು.
15 ಇಲ್ಲಿ ನನ್ನೊಡನೆ ಇರುವ ಜನರೆಲ್ಲರೂ ನಿನಗೆ ವಂದನೆ ಹೇಳುತ್ತಾರೆ. ಕ್ರಿಸ್ತನಲ್ಲಿ ನಂಬಿಕೆ ಇಟ್ಟವರಾಗಿದ್ದು ನಮ್ಮನ್ನು ಪ್ರೀತಿಸುವವರಿಗೆಲ್ಲ ನಮ್ಮ ವಂದನೆ ತಿಳಿಸು.
ದೇವರ ಕೃಪೆಯು ನಿಮ್ಮೊಂದಿಗಿರಲಿ.
Kannada Holy Bible: Easy-to-Read Version. All rights reserved. © 1997 Bible League International