Old/New Testament
ಯೆರೆಮೀಯ ಮತ್ತು ಪಷ್ಹೂರನು
20 ಪಷ್ಹೂರನೆಂಬುವನು ಯಾಜಕನಾಗಿದ್ದನು. ಅವನು ಯೆಹೋವನ ಆಲಯದ ಮುಖ್ಯಾಧಿಕಾರಿಯಾಗಿದ್ದನು. ಪಷ್ಹೂರನು ಇಮ್ಮೇರನ ಮಗನು. ಯೆಹೋವನ ಆಲಯದ ಪ್ರಾಕಾರದಲ್ಲಿ ಯೆರೆಮೀಯನು ಮಾಡಿದ ಪ್ರವಾದನೆಯನ್ನು ಪಷ್ಹೂರನು ಕೇಳಿದನು. 2 ಅವನು ಪ್ರವಾದಿಯಾದ ಯೆರೆಮೀಯನನ್ನು ಹೊಡೆಯಿಸಿ ಯೆಹೋವನ ಆಲಯಕ್ಕೆ ಸೇರಿದ ಮೇಲಣ ಬೆನ್ಯಾಮೀನ್ ದ್ವಾರದಲ್ಲಿದ್ದ ಕೋಳಕ್ಕೆ ಹಾಕಿಸಿದನು. 3 ಮರುದಿನ ಪಷ್ಹೂರನು ಯೆರೆಮೀಯನನ್ನು ಕೋಳದಿಂದ ಬಿಡಿಸಿದನು. ಆಗ ಯೆರೆಮೀಯನು ಪಷ್ಹೂರನಿಗೆ ಹೀಗೆ ಹೇಳಿದನು: “ದೇವರು ನಿನ್ನನ್ನು ಪಷ್ಹೂರ್ ಎಂದು ಹೇಳುವದಿಲ್ಲ. ಈಗ ಯೆಹೋವನು ನಿನಗಿಟ್ಟ ಹೆಸರು, ‘ಪ್ರತಿಯೊಂದು ಭಾಗದಲ್ಲಿಯೂ ಭಯಂಕಾರಿ.’ 4 ಅದು ನಿನ್ನ ಹೆಸರು. ಏಕೆಂದರೆ ಯೆಹೋವನು ಹೇಳುತ್ತಾನೆ: ‘ನಾನು ತಕ್ಷಣ ನಿನ್ನನ್ನು ನಿನಗೆ ಭಯಂಕಾರಿಯನ್ನಾಗಿ ಮಾಡುವೆನು. ನಾನು ನಿನ್ನನ್ನು ನಿನ್ನ ಎಲ್ಲಾ ಸ್ನೇಹಿತರಿಗೆ ಭಯಂಕಾರಿಯನ್ನಾಗಿ ಮಾಡುವೆನು. ವೈರಿಗಳು ಖಡ್ಗಗಳಿಂದ ನಿನ್ನ ಸ್ನೇಹಿತರನ್ನು ಕೊಲ್ಲುವುದನ್ನು ನೀನು ನೋಡುವೆ. ಯೆಹೂದದ ಎಲ್ಲಾ ಜನರನ್ನು ನಾನು ಬಾಬಿಲೋನಿನ ರಾಜನಿಗೆ ಒಪ್ಪಿಸುವೆನು. ಅವನು ಯೆಹೂದ್ಯರನ್ನು ಬಾಬಿಲೋನಿಗೆ ತೆಗೆದುಕೊಂಡು ಹೋಗುವನು; ಅವನ ಸೈನಿಕರು ಯೆಹೂದ್ಯರನ್ನು ತಮ್ಮ ಕತ್ತಿಗಳಿಂದ ಕೊಂದುಹಾಕುವರು. 5 ಸಂಪತ್ತನ್ನು ಸಂಗ್ರಹಿಸಿ ಸಿರಿವಂತರಾಗಲು ಜೆರುಸಲೇಮಿನ ಜನರು ಬಹಳ ಕಷ್ಟಪಟ್ಟು ದುಡಿದರು. ಆದರೆ ನಾನು ಅದೆಲ್ಲವನ್ನು ಅವರ ವೈರಿಗಳಿಗೆ ಒಪ್ಪಿಸುವೆನು. ಜೆರುಸಲೇಮಿನ ರಾಜನ ಬಳಿ ಅನೇಕ ನಿಧಿನಿಕ್ಷೇಪಗಳಿವೆ. ಆದರೆ ನಾನು ಆ ನಿಧಿನಿಕ್ಷೇಪಗಳನ್ನೆಲ್ಲಾ ವೈರಿಗೆ ಒಪ್ಪಿಸುತ್ತೇನೆ. ವೈರಿಯು ಅವುಗಳನ್ನು ಬಾಬಿಲೋನ್ ದೇಶಕ್ಕೆ ತೆಗೆದುಕೊಂಡು ಹೋಗುವನು. 6 ಪಷ್ಹೂರನೇ, ನಿನ್ನನ್ನೂ ನಿನ್ನ ಮನೆಯಲ್ಲಿರುವವರೆಲ್ಲರನ್ನೂ ಬಲವಂತವಾಗಿ ಬಾಬಿಲೋನ್ ದೇಶಕ್ಕೆ ಸೆರೆ ಒಯ್ಯಲಾಗುವುದು. ನೀನು ಬಾಬಿಲೋನ್‌ನಲ್ಲಿ ಮರಣಹೊಂದುವೆ; ನಿನ್ನನ್ನು ಆ ಪರದೇಶದಲ್ಲಿಯೇ ಹೂಳಲಾಗುವುದು. ನೀನು ನಿನ್ನ ಸ್ನೇಹಿತರಿಗೆ ಸುಳ್ಳುಬೋಧನೆಯನ್ನು ಮಾಡಿದೆ. ಹೀಗಾಗುವುದಿಲ್ಲವೆಂದು ನೀನು ಹೇಳಿದೆ. ಆದರೆ ನಿನ್ನೆಲ್ಲ ಸ್ನೇಹಿತರು ಸಹ ಸತ್ತು ಬಾಬಿಲೋನಿನಲ್ಲಿ ಹೂಳಲ್ಪಡುವರು.’”
ಯೆರೆಮೀಯನ ಐದನೆ ದೂರು
7 ಯೆಹೋವನೇ, ನೀನು ನನ್ನನ್ನು ಮರುಳುಗೊಳಿಸಿದೆ, ನಿಜವಾಗಿಯೂ ನಾನು ಮರುಳಾದೆನು,
ನೀನು ನನಗಿಂತ ಬಲಿಷ್ಠನಾದುದರಿಂದ ಗೆದ್ದೆ.
ನಾನೊಂದು ತಮಾಷೆಯಾಗಿದ್ದೇನೆ.
ಹಗಲೆಲ್ಲ ಜನರು ನನ್ನನ್ನು ಕಂಡು ನಗುತ್ತಾರೆ.
ನನ್ನನ್ನು ಗೇಲಿ ಮಾಡುತ್ತಾರೆ.
8 ನಾನು ಮಾತನಾಡಿದಾಗಲೆಲ್ಲ ಕೂಗಿಕೂಗಿ ಹೇಳುತ್ತೇನೆ.
ನಾನು ಯಾವಾಗಲೂ ಹಿಂಸೆ ಮತ್ತು ವಿನಾಶದ ಬಗ್ಗೆ ಕೂಗಿಕೊಳ್ಳುತ್ತೇನೆ.
ಯೆಹೋವನಿಂದ ಬಂದ ಸಂದೇಶದ ಬಗ್ಗೆ ಜನರಿಗೆ ಹೇಳುತ್ತೇನೆ.
ಆದರೆ ಜನರು ಯಾವಾಗಲೂ ನನಗೆ ಅವಮಾನ ಮಾಡುತ್ತಾರೆ.
ನನ್ನನ್ನು ಗೇಲಿ ಮಾಡುತ್ತಾರೆ.
9 ಒಮ್ಮೊಮ್ಮೆ ನನ್ನಷ್ಟಕ್ಕೆ ನಾನೇ ಹೇಳಿಕೊಳ್ಳುತ್ತೇನೆ,
“ನಾನು ಯೆಹೋವನನ್ನೇ ಮರೆತುಬಿಡುತ್ತೇನೆ.
ಆತನ ಹೆಸರಿನಲ್ಲಿ ಇನ್ನೇನೂ ಮಾತನಾಡುವುದಿಲ್ಲ”
ಎಂದುಕೊಂಡರೆ ಆತನ ಸಂದೇಶವು ನನ್ನ ಅಂತರಾಳದಲ್ಲಿ ಉರಿಯುವ ಜ್ವಾಲೆಯಂತಾಗುತ್ತದೆ.
ಅದು ಆಳಕ್ಕೆ ಇಳಿದು ನನ್ನ ಎಲುಬುಗಳನ್ನು ಸುಡುವಂತಾಗುತ್ತದೆ.
ಯೆಹೋವನ ಸಂದೇಶವನ್ನು ನನ್ನ ಅಂತರಾಳದಲ್ಲಿ ಹಿಡಿದಿಟ್ಟುಕೊಳ್ಳಲು ಪ್ರಯತ್ನ ಮಾಡಿ ನಾನು ದಣಿಯುತ್ತೇನೆ.
ಕೊನೆಗೆ ಅದನ್ನು ನನ್ನೊಳಗೆ ಇಟ್ಟುಕೊಳ್ಳಲು ಅಸಾಧ್ಯವಾಗುತ್ತದೆ.
10 ಅನೇಕ ಜನರು ನನ್ನ ವಿರುದ್ಧವಾಗಿ ಮೆಲುಧ್ವನಿಯಲ್ಲಿ ಮಾತನಾಡುವದು ನನ್ನ ಕಿವಿಗೆ ಬೀಳುತ್ತಿದೆ,
ಅದು ನನ್ನನ್ನು ಭಯಗೊಳಿಸುತ್ತಿದೆ.
ನನ್ನ ಸ್ನೇಹಿತರು ಸಹ ನನ್ನ ವಿರುದ್ಧ ಮಾತನಾಡುತ್ತಿದ್ದಾರೆ.
ನಾನು ಯಾವುದಾದರೂ ತಪ್ಪನ್ನು ಮಾಡಲಿ ಎಂದು ಜನರು ಹೊಂಚುಹಾಕಿ ಕಾದಿದ್ದಾರೆ.
“ಅವನು ದುಷ್ಕೃತ್ಯವನ್ನು ಮಾಡಿದ್ದಾನೆಂದು ನಾವು ಸುಳ್ಳು ಹೇಳೋಣ.
ಯೆರೆಮೀಯನನ್ನು ನಾವು ವಂಚಿಸಲು ಸಾಧ್ಯವಾಗಬಹುದು.
ನಾವು ಅವನನ್ನು ಹಿಡಿದುಕೊಳ್ಳಬಹುದು.
ಕೊನೆಗೆ ಅವನನ್ನು ತೊಲಗಿಸಬಹುದು.
ನಾವು ಅವನನ್ನು ಹಿಡಿದು ಅವನ ಮೇಲೆ ನಮ್ಮ ಸೇಡನ್ನು ತೀರಿಸಿಕೊಳ್ಳೋಣ” ಎಂದು ಮಾತನಾಡುತ್ತಿದ್ದಾರೆ.
11 ಆದರೆ ಯೆಹೋವನು ನನ್ನೊಡನಿದ್ದಾನೆ.
ಯೆಹೋವನು ಒಬ್ಬ ಶೂರ ಯೋಧನಂತಿದ್ದಾನೆ.
ಆದ್ದರಿಂದ ನನ್ನನ್ನು ಬೆನ್ನಟ್ಟಿಕೊಂಡು ಬರುತ್ತಿದ್ದ ಜನರು ಬೀಳುತ್ತಾರೆ.
ಅವರು ನನ್ನನ್ನು ಸೋಲಿಸಲಾರರು.
ಆ ಜನರು ಸೋತುಹೋಗುತ್ತಾರೆ.
ಅವರಿಗೆ ಆಶಾಭಂಗವಾಗುತ್ತದೆ.
ಅವರಿಗೆ ನಾಚಿಕೆಯಾಗುತ್ತದೆ.
ಅವರು ಆ ನಾಚಿಕೆಯನ್ನು ಎಂದೂ ಮರೆಯಲಾರರು.
12 ಸರ್ವಶಕ್ತನಾದ ಯೆಹೋವನೇ, ನೀನು ಒಳ್ಳೆಯವರನ್ನು ಪರೀಕ್ಷಿಸುವೆ.
ನೀನು ಒಬ್ಬ ವ್ಯಕ್ತಿಯ ಹೃದಯವನ್ನು ಮತ್ತು ಬುದ್ಧಿಯನ್ನು ಆಳವಾಗಿ ಪರೀಕ್ಷಿಸಿನೋಡುವೆ.
ನಾನು ಅವರ ವಿರುದ್ಧ ನನ್ನ ಅಭಿಪ್ರಾಯಗಳನ್ನು ನಿನಗೆ ತಿಳಿಸಿದ್ದೇನೆ.
ನೀನು ಅವರಿಗೆ ತಕ್ಕ ಶಿಕ್ಷೆಯನ್ನು ವಿಧಿಸಿರುವದನ್ನು ನನ್ನ ಕಣ್ಣುಗಳು ನೋಡಲಿ.
13 ಯೆಹೋವನನ್ನು ಕೀರ್ತಿಸಿರಿ, ಯೆಹೋವನನ್ನು ಸ್ತುತಿಸಿರಿ.
ಆತನು ಬಡಜನರ ಪ್ರಾಣಗಳನ್ನು ಉಳಿಸುತ್ತಾನೆ.
ಆತನು ಅವರನ್ನು ದುಷ್ಟರ ದೌರ್ಜನ್ಯದಿಂದ ರಕ್ಷಿಸುತ್ತಾನೆ.
ಯೆರೆಮೀಯನ ಆರನೇ ದೂರು
14 ನಾನು ಹುಟ್ಟಿದ ದಿನವು ಶಾಪಗ್ರಸ್ತವಾಗಲಿ;
ತಾಯಿಯು ನನ್ನನ್ನು ಹೆತ್ತ ದಿನವು ಶುಭವೆನಿಸಿಕೊಳ್ಳದಿರಲಿ.
15 “ನಿನಗೆ ಗಂಡುಮಗು ಹುಟ್ಟಿದೆ” ಎಂಬ ಸಮಾಚಾರವನ್ನು ನನ್ನ ತಂದೆಗೆ ತಿಳಿಸಿ
ಅವನಿಗೆ ಅತ್ಯಾನಂದವನ್ನು ಉಂಟುಮಾಡಿದವನು ಶಪಿಸಲ್ಪಡಲಿ.
16 ಯೆಹೋವನು ಕನಿಕರಪಡದೆ
ಕೆಡವಿಬಿಟ್ಟ ನಗರಗಳ ಗತಿಯು ಅವನಿಗೆ ಬರಲಿ.
ಬೆಳಿಗ್ಗೆ ಯುದ್ಧದ ಕೂಗಾಟವೂ,
ಮಧ್ಯಾಹ್ನದಲ್ಲಿ ಯುದ್ಧದ ಕಿರುಚಾಟವೂ ಅವನ ಕಿವಿಗೆ ಬೀಳಲಿ.
17 ಯಾಕೆ ಆ ಮನುಷ್ಯನು
ನಾನು ನನ್ನ ತಾಯಿಯ ಗರ್ಭದಲ್ಲಿದ್ದಾಗಲೇ ನನ್ನನ್ನು ಕೊಲ್ಲಲಿಲ್ಲ?
ಆಗ ಅವನು ನನ್ನನ್ನು ಕೊಂದಿದ್ದರೆ
ನನ್ನ ತಾಯಿಯೇ ನನಗೆ ಗೋರಿಯಾಗುತ್ತಿದ್ದಳು.
ನಾನೆಂದೂ ಹುಟ್ಟುತ್ತಲೇ ಇರಲಿಲ್ಲ.
18 ನಾನು ತಾಯಿಯ ಗರ್ಭದಿಂದ ಏಕೆ ಹೊರಬರಬೇಕಿತ್ತು?
ನಾನು ಕಷ್ಟವನ್ನು ಮತ್ತು ದುಃಖವನ್ನು ಕಂಡಿರುವೆನಷ್ಟೇ.
ನನ್ನ ಜೀವನವು ನಾಚಿಕೆಯಲ್ಲಿಯೇ ಕೊನೆಗೊಳ್ಳುವುದು.
ದೇವರು ರಾಜನಾದ ಚಿದ್ಕೀಯನ ಪ್ರಾರ್ಥನೆಯನ್ನು ತಿರಸ್ಕರಿಸಿದನು
21 ಯೆಹೋವನಿಂದ ಯೆರೆಮೀಯನಿಗೆ ಈ ಸಂದೇಶ ಬಂದಿತು. ಯೆಹೂದದ ರಾಜನಾದ ಚಿದ್ಕೀಯನು ಮಲ್ಕೀಯನ ಮಗನಾದ ಪಷ್ಹೂರನನ್ನೂ ಮಾಸೇಯನ ಮಗನಾದ ಯಾಜಕ ಚೆಫನ್ಯನನ್ನೂ ಯೆರೆಮೀಯನ ಬಳಿಗೆ ಕಳುಹಿಸಿದಾಗ ಈ ಸಂದೇಶ ಬಂದಿತು. ಪಷ್ಹೂರ ಮತ್ತು ಚೆಫನ್ಯರು ಯೆರೆಮೀಯನಿಗೆ ರಾಜನ ಸಂದೇಶವನ್ನು ತಂದಿದ್ದರು. 2 ಪಷ್ಹೂರ ಮತ್ತು ಚೆಫನ್ಯರು ಹೀಗೆಂದರು: “ನಮಗೋಸ್ಕರ ಯೆಹೋವನನ್ನು ಪ್ರಾರ್ಥಿಸಿ ಮುಂದೆ ಸಂಭವಿಸುವುದನ್ನು ವಿಚಾರಿಸು. ಬಾಬಿಲೋನಿನ ರಾಜನಾದ ನೆಬೂಕದ್ನೆಚ್ಚರನು ನಮಗೆ ವಿರುದ್ಧವಾಗಿ ಯುದ್ಧಮಾಡುತ್ತಿರುವನು; ಆದ್ದರಿಂದ ಮುಂದೆ ಸಂಭವಿಸುವುದನ್ನು ನಾವು ತಿಳಿಯ ಬಯಸುತ್ತೇವೆ. ಮೊದಲಿನಂತೆ ಯೆಹೋವನು ನಮಗೋಸ್ಕರ ಅದ್ಭುತಗಳನ್ನೂ ಮಾಡಬಹುದು. ನೆಬೂಕದ್ನೆಚ್ಚರನು ನಮ್ಮ ಮೇಲೆ ಧಾಳಿ ಮಾಡುವುದನ್ನು ನಿಲ್ಲಿಸಿ ಹೊರಟುಹೋಗುವಂತೆ ಆತನು ಮಾಡಬಹುದು.”
3 ಆಗ ಯೆರೆಮೀಯನು ಪಷ್ಹೂರ ಮತ್ತು ಚೆಫನ್ಯರಿಗೆ ಹೀಗೆ ಉತ್ತರಕೊಟ್ಟನು: “ರಾಜನಾದ ಚಿದ್ಕೀಯನಿಗೆ ಹೇಳಿರಿ. 4 ಇಸ್ರೇಲಿನ ದೇವರಾದ ಯೆಹೋವನು ಹೀಗೆ ಹೇಳುತ್ತಾನೆ, ‘ನಿಮ್ಮ ಕೈಯಲ್ಲಿ ಯುದ್ಧದ ಆಯುಧಗಳಿವೆ. ಆ ಆಯುಧಗಳನ್ನು ನೀವು ನಿಮ್ಮ ರಕ್ಷಣೆಗಾಗಿಯೂ ಬಾಬಿಲೋನಿನ ರಾಜನ ವಿರುದ್ಧವಾಗಿಯೂ ಮತ್ತು ಬಾಬಿಲೋನಿನ ಜನರ ವಿರುದ್ಧವಾಗಿಯೂ ಬಳಸುತ್ತಿದ್ದೀರಿ. ಆದರೆ ನಾನು ಆ ಆಯುಧಗಳನ್ನು ವಿಫಲಗೊಳಿಸುತ್ತೇನೆ.
“‘ಬಾಬಿಲೋನಿನ ಸೈನ್ಯವು ನಗರದ ಸುತ್ತಲಿನ ಪೌಳಿಗೋಡೆಯ ಬಳಿಯಿದೆ. ತಕ್ಷಣವೇ ನಾನು ಆ ಸೈನ್ಯವನ್ನು ಜೆರುಸಲೇಮಿನ ಒಳಗಡೆ ತರುತ್ತೇನೆ. 5 ಯೆಹೂದಿಗಳಾದ ನಿಮ್ಮ ವಿರುದ್ಧ ನಾನೇ ಕಾದಾಡುತ್ತೇನೆ. ನಾನು ನನ್ನ ಬಲಿಷ್ಠವಾದ ಕೈಗಳಿಂದ ನಿಮ್ಮ ವಿರುದ್ಧ ಹೋರಾಡುತ್ತೇನೆ. ನಿಮ್ಮ ಮೇಲೆ ನನಗೆ ಬಹಳ ಕೋಪ ಬಂದಿದೆ; ಅದಕ್ಕಾಗಿ ನನ್ನ ಬಲಿಷ್ಠವಾದ ತೋಳಿನಿಂದ ನಾನು ನಿಮ್ಮ ಸಂಗಡ ಯುದ್ಧ ಮಾಡುತ್ತೇನೆ. ನಾನು ನಿಮ್ಮ ವಿರುದ್ಧ ಬಹಳ ರಭಸದಿಂದ ಯುದ್ಧಮಾಡಿ ನನಗೆ ಎಷ್ಟು ಕೋಪ ಬಂದಿದೆ ಎಂಬುದನ್ನು ತೋರಿಸುತ್ತೇನೆ. 6 ಜೆರುಸಲೇಮಿನಲ್ಲಿ ವಾಸಮಾಡುತ್ತಿರುವ ಜನರನ್ನು ನಾನು ಕೊಂದುಬಿಡುತ್ತೇನೆ. ನಾನು ಜನರನ್ನು ಮತ್ತು ಪ್ರಾಣಿಗಳನ್ನು ಕೊಲ್ಲುತ್ತೇನೆ. ಅವರುಗಳು ನಗರದಲ್ಲೆಲ್ಲಾ ಹರಡಿದ ಭಯಂಕರವಾದ ರೋಗದಿಂದ ಮಡಿಯುವರು.’” ಇದು ಯೆಹೋವನ ನುಡಿ. 7 “‘ಇದಾದ ಮೇಲೆ ನಾನು ಯೆಹೂದದ ರಾಜನಾದ ಚಿದ್ಕೀಯನನ್ನು ಮತ್ತು ಅಧಿಪತಿಗಳನ್ನು ಬಾಬಿಲೋನಿನ ರಾಜನಾದ ನೆಬೂಕದ್ನೆಚ್ಚರನಿಗೆ ಒಪ್ಪಿಸುತ್ತೇನೆ. ಜೆರುಸಲೇಮಿನ ಕೆಲವು ಜನರು ಭಯಂಕರವಾದ ರೋಗದಿಂದ ಸಾಯುವುದಿಲ್ಲ; ಕೆಲವು ಜನರು ಖಡ್ಗಗಳಿಗೆ ಆಹುತಿಯಾಗುವದಿಲ್ಲ; ಕೆಲವರು ಹಸಿವಿನಿಂದ ಸಾಯುವುದಿಲ್ಲ. ಅಂಥವರನ್ನು ನಾನು ನೆಬೂಕದ್ನೆಚ್ಚರನಿಗೆ ಕೊಡುತ್ತೇನೆ. ಯೆಹೂದದ ವೈರಿಯು ಗೆಲ್ಲುವಂತೆ ನಾನು ಮಾಡುತ್ತೇನೆ. ನೆಬೂಕದ್ನೆಚ್ಚರನ ಸೈನಿಕರು ಯೆಹೂದ್ಯರನ್ನು ಕೊಲ್ಲಬಯಸುತ್ತಾರೆ. ಆದ್ದರಿಂದ ಯೆಹೂದ ಮತ್ತು ಜೆರುಸಲೇಮಿನ ಜನರು ಖಡ್ಗಗಳಿಗೆ ಬಲಿಯಾಗುವರು. ನೆಬೂಕದ್ನೆಚ್ಚರನು ಸ್ವಲ್ಪವೂ ದಯೆ ತೋರುವದಿಲ್ಲ. ಆ ಜನರ ಸಲುವಾಗಿ ಅವನು ಮರುಗುವದಿಲ್ಲ.’
8 “ಜೆರುಸಲೇಮಿನ ಜನರಿಗೆ ಇದನ್ನು ಸಹ ಹೇಳಿರಿ. ಯೆಹೋವನು ಹೀಗೆನ್ನುತ್ತಾನೆ, ‘ನಾನು ನಿಮಗೆ ಜೀವವನ್ನಾಗಲಿ ಮರಣವನ್ನಾಗಲಿ ಆರಿಸಿಕೊಳ್ಳಲು ಅವಕಾಶ ಕೊಟ್ಟಿದ್ದೇನೆ ಎಂಬುದನ್ನು ತಿಳಿದುಕೊಳ್ಳಿರಿ. 9 ಜೆರುಸಲೇಮಿನಲ್ಲಿ ಉಳಿಯುವವನು ಮರಣಹೊಂದುವನು. ಆತನು ಖಡ್ಗದಿಂದಾಗಲಿ ಹಸಿವಿನಿಂದಾಗಲಿ ಭಯಂಕರವಾದ ರೋಗದಿಂದಾಗಲಿ ಮಡಿಯುವನು. ಆದರೆ ಜೆರುಸಲೇಮಿನಿಂದ ಹೊರಗೆ ಬಾಬಿಲೋನಿನ ಸೈನಿಕರಿಗೆ ಶರಣಾಗತನಾದವನು ಬದುಕುವನು. ಆ ಸೈನಿಕರು ನಗರವನ್ನು ಮುತ್ತಿದ್ದಾರೆ. ಯಾರೂ ನಗರದಲ್ಲಿ ಆಹಾರವನ್ನು ತರುವಂತಿಲ್ಲ. ಆದರೆ ನಗರವನ್ನು ಬಿಟ್ಟು ಹೊರಗೆ ಹೋದವರು ಬದುಕುವರು. 10 ಜೆರುಸಲೇಮ್ ನಗರಕ್ಕೆ ತೊಂದರೆಯನ್ನು ಉಂಟುಮಾಡಬೇಕೆಂದು ನಾನು ನಿಶ್ಚಯಿಸಿದ್ದೇನೆ. ನಾನು ಈ ನಗರಕ್ಕೆ ಸಹಾಯಮಾಡುವದಿಲ್ಲ.’” ಇದು ಯೆಹೋವನಿಂದ ಬಂದ ಸಂದೇಶ. “‘ಜೆರುಸಲೇಮ್ ನಗರವನ್ನು ನಾನು ಬಾಬಿಲೋನಿನ ರಾಜನಿಗೆ ಒಪ್ಪಿಸುತ್ತೇನೆ. ಅವನು ಅದನ್ನು ಬೆಂಕಿಯಿಂದ ಸುಟ್ಟುಹಾಕುತ್ತಾನೆ.’”
11 “ಯೆಹೂದದ ರಾಜಮನೆತನದವರಿಗೆ ಈ ವಿಷಯಗಳನ್ನು ತಿಳಿಸಿರಿ:
‘ಯೆಹೋವನ ಸಂದೇಶವನ್ನು ಕೇಳಿರಿ.
12 ದಾವೀದನ ಮನೆತನದವರೇ, ಯೆಹೋವನು ಹೀಗೆ ಹೇಳುತ್ತಾನೆ:
ನೀವು ಪ್ರತಿದಿನ ನಿಷ್ಪಕ್ಷಪಾತವಾಗಿ ನ್ಯಾಯನಿರ್ಣಯ ಮಾಡಬೇಕು.
ಅಪರಾಧಿಗಳಿಂದ ಕಷ್ಟಕ್ಕೊಳಗಾದವರನ್ನು ರಕ್ಷಿಸಬೇಕು.
ನೀವು ಹಾಗೆ ಮಾಡದಿದ್ದರೆ
ನನಗೆ ಬಹಳ ಕೋಪ ಬರುತ್ತದೆ.
ನನ್ನ ಕೋಪವು ಯಾರಿಂದಲೂ ನಂದಿಸಲಾಗದ ಬೆಂಕಿಯಂತಿದೆ.
ನೀವು ದುಷ್ಕೃತ್ಯಗಳನ್ನು ಮಾಡಿದ್ದರಿಂದ ಹೀಗಾಗುತ್ತದೆ.’
13 “ಜೆರುಸಲೇಮ್ ನಗರವೇ, ನಾನು ನಿನ್ನ ವಿರುದ್ಧವಾಗಿದ್ದೇನೆ.
ನೀನು ಬೆಟ್ಟದ ಮೇಲೆ ಕುಳಿತಿರುವೆ,
ನೀನು ರಾಣಿಯಂತೆ ಈ ಕಣಿವೆಯ ಮೇಲೆ ಕುಳಿತಿರುವೆ.
‘ನಮ್ಮ ಮೇಲೆ ಯಾರೂ ಧಾಳಿ ಮಾಡಲಾರರು,
ನಮ್ಮ ಭದ್ರವಾದ ನಗರವನ್ನು ಯಾರೂ ಪ್ರವೇಶ ಮಾಡಲಾರರು’
ಎಂದು ಜೆರುಸಲೇಮಿನ ನಿವಾಸಿಗಳಾದ ನೀವು ಹೇಳುವಿರಿ.”
ಆದರೆ ಯೆಹೋವನ ಸಂದೇಶವನ್ನು ಕೇಳಿರಿ.
14 “ನೀವು ತಕ್ಕ ಶಿಕ್ಷೆಯನ್ನು ಅನುಭವಿಸುವಿರಿ.
ನಾನು ನಿಮ್ಮ ಅರಣ್ಯಗಳಲ್ಲಿ ಬೆಂಕಿಯನ್ನು ಹೊತ್ತಿಸುತ್ತೇನೆ.
ಆ ಬೆಂಕಿಯು ನಿಮ್ಮ ಸುತ್ತಮುತ್ತಲಿನ ಪ್ರತಿಯೊಂದು ವಸ್ತುವನ್ನು ಸುಟ್ಟುಹಾಕುತ್ತದೆ.”
4 ಜೀವಂತರಾಗಿರುವ ಜನರಿಗೂ ಸತ್ತುಹೋಗಿರುವ ಜನರಿಗೂ ನ್ಯಾಯತೀರಿಸುವಾತನು ಕ್ರಿಸ್ತ ಯೇಸುವೇ. ಆತನು ತನ್ನ ರಾಜ್ಯವನ್ನು ಹೊಂದಿದ್ದಾನೆ. ಆತನು ಮತ್ತೆ ಬರುವನು. ಆದ್ದರಿಂದ ಯೇಸು ಕ್ರಿಸ್ತನ ಮತ್ತು ದೇವರ ಸನ್ನಿಧಿಯಲ್ಲಿ ನಾನು ನಿನಗೆ ಆಜ್ಞಾಪಿಸುವುದೇನೆಂದರೆ, 2 ಸುವಾರ್ತೆಯನ್ನು ಜನರಿಗೆ ತಿಳಿಸು. ಕಾಲವು ಅನುಕೂಲವಾಗಿದ್ದರೂ ಅನಾನುಕೂಲವಾಗಿದ್ದರೂ ಬೋಧನೆಯನ್ನು ಮುಂದುವರಿಸು. ಜನರು ಮಾಡಬೇಕಾದುದನ್ನು ಅವರಿಗೆ ತಿಳಿಸು. ಅವರು ತಪ್ಪು ಮಾಡಿದಾಗ ಅದನ್ನು ಅವರಿಗೆ ತೋರಿಸಿಕೊಡು. ಅವರನ್ನು ಗದರಿಸು, ಇವುಗಳನ್ನು ಬಹಳ ತಾಳ್ಮೆಯಿಂದಲೂ ಎಚ್ಚರಿಕೆಯಿಂದಲೂ ಮಾಡು.
3 ಜನರು ಸತ್ಯೋಪದೇಶವನ್ನು ಕೇಳದಿರುವ ಕಾಲವು ಬರಲಿದೆ. ಜನರು ತಮ್ಮನ್ನು ಮೆಚ್ಚಿಸುವಂಥ ಬೋಧಕರನ್ನು ಮತ್ತು ತಮ್ಮ ಕಿವಿಗೆ ಹಿತವೆನಿಸುವ ಬೋಧನೆಯನ್ನು ನೀಡುವ ಬೋಧಕರನ್ನು ಕಂಡುಕೊಳ್ಳುವರು. 4 ಜನರು ಸತ್ಯವನ್ನು ಕೇಳದೆ ಸುಳ್ಳುಕಥೆಗಳನ್ನು ಕೇಳಲಾರಂಭಿಸುತ್ತಾರೆ. 5 ಆದರೆ ನೀನು ಎಲ್ಲಾ ಕಾಲದಲ್ಲಿಯೂ ಸ್ವಸ್ಥಚಿತ್ತನಾಗಿರು. ತೊಂದರೆಗಳು ಬಂದಾಗ ಸಹಿಸಿಕೊ. ಸುವಾರ್ತೆಯನ್ನು ಪ್ರಚಾರಮಾಡು. ದೇವರ ಸೇವಕನಿಗೆ ಯೋಗ್ಯವಾದ ಎಲ್ಲಾ ಕಾರ್ಯಗಳನ್ನು ಮಾಡುತ್ತಿರು.
6 ನನ್ನ ಜೀವಿತವನ್ನು ದೇವರಿಗಾಗಿ ಅರ್ಪಿಸುತ್ತಿದ್ದೇನೆ. ನಾನು ಈ ಲೋಕವನ್ನು ಬಿಟ್ಟುಹೋಗುವ ಕಾಲವು ಸಮೀಪಿಸಿದೆ. 7 ಶ್ರೇಷ್ಠ ಹೋರಾಟವನ್ನು ಮಾಡಿದ್ದೇನೆ. ಪಂದ್ಯದಲ್ಲಿ ನನ್ನ ಓಟವನ್ನು ಮುಗಿಸಿದ್ದೇನೆ; ನನ್ನ ನಂಬಿಕೆಯನ್ನು ಕಾಪಾಡಿಕೊಂಡಿದ್ದೇನೆ. 8 ನೀತಿವಂತರಿಗೆ ದೊರೆಯುವ ಜಯಮಾಲೆಯು ಈಗ ನನಗೆ ಸಿದ್ಧವಾಗಿದೆ. ನೀತಿಯುಳ್ಳ ನ್ಯಾಯಾಧಿಪತಿಯಾಗಿರುವ ಪ್ರಭುವೇ ನನಗೆ ಅದನ್ನು ಆ ದಿನದಂದು ಕೊಡುವನು. ನನಗೆ ಮಾತ್ರವಲ್ಲದೆ ಆತನ ಬರುವಿಕೆಯನ್ನು ಅಪೇಕ್ಷಿಸಿ ಅದಕ್ಕಾಗಿ ಕಾಯುತ್ತಿದ್ದವರಿಗೆಲ್ಲ ಆತನು ಆ ಜಯಮಾಲೆಯನ್ನು ದಯಪಾಲಿಸುವನು.
ವೈಯಕ್ತಿಕ ಮಾತುಗಳು
9 ನಿನಗೆ ಸಾಧ್ಯವಾದಷ್ಟು ಬೇಗನೆ ನನ್ನ ಬಳಿಗೆ ಬಾ. 10 ದೇಮನು ಈ ಲೋಕವನ್ನು ಬಹಳ ಪ್ರೀತಿಸಿದನು. ಆದಕಾರಣವೇ ಅವನು ನನ್ನನ್ನು ಬಿಟ್ಟು ಥೆಸಲೋನಿಕಕ್ಕೆ ಹೋದನು. ಕ್ರೆಸ್ಕನು ಗಲಾತ್ಯಕ್ಕೆ ಹೋದನು. ತೀತನು ದಲ್ಮಾತ್ಯಕ್ಕೆ ಹೋದನು. 11 ಲೂಕನೊಬ್ಬನು ಮಾತ್ರ ನನ್ನ ಜೊತೆಯಲ್ಲಿದ್ದಾನೆ. ನೀನು ಬರುವಾಗ ಮಾರ್ಕನನ್ನೂ ನಿನ್ನ ಜೊತೆಯಲ್ಲಿ ಕರೆದುಕೊಂಡು ಬಾ. ಅವನು ನನ್ನ ಸೇವೆಗೆ ಸಹಾಯ ಮಾಡಬಲ್ಲನು. 12 ತುಖಿಕನನ್ನು ಎಫೆಸಕ್ಕೆ ಕಳುಹಿಸಿದೆನು.
13 ನಾನು ತ್ರೋವದಲ್ಲಿದ್ದಾಗ ಕರ್ಪನ ಬಳಿ ನನ್ನ ಮೇಲಂಗಿಯನ್ನು ಬಿಟ್ಟು ಬಂದಿದ್ದೇನೆ. ನೀನು ನನ್ನ ಬಳಿಗೆ ಬರುವಾಗ ಅದನ್ನು ತೆಗೆದುಕೊಂಡು ಬಾ. ನನ್ನ ಪುಸ್ತಕಗಳನ್ನೂ ಮುಖ್ಯವಾಗಿ, ಕುರಿಚರ್ಮದಿಂದ ಮಾಡಿದ ಪುಸ್ತಕಗಳನ್ನು ತೆಗೆದುಕೊಂಡು ಬಾ.
14 ಕಂಚುಗಾರನಾದ ಅಲೆಗ್ಸಾಂಡರನು ನನಗೆ ಅನೇಕ ಕೆಡಕುಗಳನ್ನು ಮಾಡಿದನು. ಅವನು ಮಾಡಿದ ಕೃತ್ಯಗಳಿಗಾಗಿ ಪ್ರಭುವು ಅವನನ್ನು ದಂಡಿಸುವನು. 15 ಅವನು ನಿನಗೂ ತೊಂದರೆ ಕೊಡಲಾಗದಂತೆ ಎಚ್ಚರವಾಗಿರು. ಅವನು ನಮ್ಮ ಉಪದೇಶದ ವಿರುದ್ಧ ಬಹಳ ಹೋರಾಡಿದನು.
16 ಮೊದಲ ಸಲ ನಾನು ನನ್ನನ್ನು ಸಮರ್ಥಿಸಿಕೊಂಡಾಗ ನನಗೆ ಯಾರೂ ಸಹಾಯಮಾಡಲಿಲ್ಲ. ಎಲ್ಲರೂ ನನ್ನನ್ನು ಬಿಟ್ಟುಹೋದರು. ದೇವರು ಅವರನ್ನು ಕ್ಷಮಿಸಲಿ ಎಂದು ಪ್ರಾರ್ಥಿಸುತ್ತೇನೆ. 17 ಆದರೆ ಪ್ರಭುವು ನನ್ನ ಬಳಿಯೇ ಇದ್ದನು. ನಾನು ಸುವಾರ್ತೆಯನ್ನು ಯೆಹೂದ್ಯರಲ್ಲದವರಿಗೆ ಸಂಪೂರ್ಣವಾಗಿ ಬೋಧಿಸಲು ಪ್ರಭುವು ನನಗೆ ಶಕ್ತಿಯನ್ನು ದಯಪಾಲಿಸಿದನು. ಆ ಸುವಾರ್ತೆಯನ್ನು ಯೆಹೂದ್ಯರಲ್ಲದ ಜನರೆಲ್ಲರೂ ಕೇಳುವುದು ಪ್ರಭುವಿನ ಇಷ್ಟವಾಗಿತ್ತು. ಆತನು ನನ್ನನ್ನು ಸಿಂಹದ (ಶತ್ರು) ಬಾಯಿಂದ ರಕ್ಷಿಸಿದನು. 18 ಯಾರಾದರೂ ನನಗೆ ತೊಂದರೆ ಮಾಡಲು ಪ್ರಯತ್ನಿಸಿದರೆ, ಪ್ರಭುವು ನನ್ನನ್ನು ರಕ್ಷಿಸುವನು. ಪ್ರಭುವು ನನ್ನನ್ನು ಸುರಕ್ಷಿತವಾಗಿ ತನ್ನ ಪರಲೋಕರಾಜ್ಯಕ್ಕೆ ಸೇರಿಸುವನು. ಯುಗಯುಗಾಂತರಗಳಲ್ಲಿಯೂ ಪ್ರಭುವಿಗೆ ಮಹಿಮೆಯಾಗಲಿ.
ಅಂತಿಮ ವಂದನೆಗಳು
19 ಪ್ರಿಸ್ಕಳಿಗೆ, ಅಕ್ವಿಲ್ಲನಿಗೆ ಮತ್ತು ಒನೇಸಿಫೋರನ ಮನೆಯವರಿಗೆ ವಂದನೆಗಳನ್ನು ಹೇಳು. 20 ಎರಸ್ತನು ಕೊರಿಂಥದಲ್ಲಿ ನೆಲಸಿದನು. ತ್ರೊಫಿಮನು ಅಸ್ವಸ್ಥನಾಗಿದ್ದುದರಿಂದ ನಾನು ಅವನನ್ನು ಮಿಲೇತದಲ್ಲಿ ಇರಿಸಬೇಕಾಯಿತು. 21 ಚಳಿಗಾಲಕ್ಕೆ ಮುಂಚೆಯೇ ನನ್ನ ಬಳಿಗೆ ಬರಲು ನಿನ್ನಿಂದಾದಷ್ಟು ಪ್ರಯತ್ನಿಸು.
ಯುಬೂಲ, ಪೊದೇಯ, ಲೀನ, ಕ್ಲೌದ್ಯ, ಇವರುಗಳು ಮತ್ತು ಇತರ ಸಹೋದರರೆಲ್ಲರೂ ನಿನಗೆ ವಂದನೆಗಳನ್ನು ಹೇಳಿದ್ದಾರೆ.
22 ಪ್ರಭುವು ನಿನ್ನ ಆತ್ಮದ ಸಂಗಡ ಇರಲಿ. ಆತನ ಕೃಪೆಯು ನಿನ್ನೊಂದಿಗಿರಲಿ.
Kannada Holy Bible: Easy-to-Read Version. All rights reserved. © 1997 Bible League International