Old/New Testament
53 ನಾವು ಹೇಳಿದ ಸಂಗತಿಗಳನ್ನು ಯಾರು ನಂಬಿದರು? ಯೆಹೋವನ ದಂಡನೆಯನ್ನು ನಿಜವಾಗಿಯೂ ಸ್ವೀಕರಿಸಿಕೊಂಡವರು ಯಾರು?
2 ಒಂದು ಸಣ್ಣ ಸಸಿಯು ಬೆಳೆಯುವ ರೀತಿಯಲ್ಲಿ ಯೆಹೋವನ ಮುಂದೆ ಆತನು ಬೆಳೆದನು. ಆತನು ಒಣ ನೆಲದಿಂದ ಚಿಗುರುವ ಬೇರಿನಂತಿದ್ದನು. ಆತನು ಒಬ್ಬ ವಿಶೇಷ ಪುರುಷನಂತೆ ತೋರಲಿಲ್ಲ. ಅಂಥ ಲಕ್ಷಣಗಳೇನೂ ಆತನಲ್ಲಿರಲಿಲ್ಲ. ನಾವು ಆತನನ್ನು ನೋಡಿದಾಗ ಆತನಲ್ಲಿ ನೋಡತಕ್ಕ ಯಾವ ಲಕ್ಷಣವೂ ಕಾಣಲಿಲ್ಲ. 3 ಜನರು ಆತನನ್ನು ಪರಿಹಾಸ್ಯ ಮಾಡಿದರು. ಆತನ ಸ್ನೇಹಿತರು ಆತನನ್ನು ತೊರೆದರು. ಆತನು ನೋವಿನಿಂದ ಬಳಲಿದನು. ಆತನು ಕಾಯಿಲೆಯಿಂದ ಬಾಧಿತನಾಗಿದ್ದನು. ಜನರು ಆತನ ಕಡೆಗೆ ನೋಡಲೂ ಇಲ್ಲ. ನಾವು ಆತನನ್ನು ಗಮನಕ್ಕೆ ತರಲೇ ಇಲ್ಲ.
4 ಆದರೆ ಆತನು ನಮ್ಮ ಸಂಕಷ್ಟಗಳನ್ನು ತನ್ನ ಮೇಲೆ ಹೊತ್ತುಕೊಂಡನು. ನಮ್ಮ ಬೇನೆಯನ್ನು ಆತನು ಅನುಭವಿಸಿದನು. ದೇವರು ಆತನನ್ನು ಶಿಕ್ಷಿಸಿದ್ದಾನೆ ಎಂದು ನಾವು ನೆನಸಿದೆವು. ಆತನು ಏನೋ ಮಾಡಿದ್ದಕ್ಕಾಗಿ ದೇವರು ಆತನಿಗೆ ಹೊಡೆದನೆಂದು ಭಾವಿಸಿಕೊಂಡೆವು. 5 ಆದರೆ ನಾವು ಮಾಡಿದ ದುಷ್ಟತನಕ್ಕಾಗಿಯೇ ಆತನು ಬಾಧಿತನಾದನು. ನಮ್ಮ ಅಪರಾಧಗಳ ನಿಮಿತ್ತ ಆತನು ಜಜ್ಜಲ್ಪಟ್ಟನು. ನಾವು ಹೊಂದಬೇಕಾಗಿದ್ದ ಶಿಕ್ಷೆಯನ್ನು ಆತನೇ ಅನುಭವಿಸಿದನು. ಆತನ ಬಾಸುಂಡೆಗಳಿಂದ ನಮಗೆ ಗುಣವಾಯಿತು. 6 ನಾವೆಲ್ಲರೂ ಕುರಿಗಳಂತೆ ದಾರಿತಪ್ಪಿ ತೊಳಲಾಡಿದೆವು. ನಮ್ಮ ಸ್ವಂತ ದಾರಿಯಲ್ಲಿ ನಾವು ಹೋದೆವು. ನಮ್ಮ ಅಪರಾಧಗಳಿಂದ ನಾವು ವಿಮುಕ್ತರಾಗುವಂತೆ ಯೆಹೋವನು ನಮ್ಮ ಅಪರಾಧಗಳನ್ನು ಆತನ ಮೇಲೆ ಹಾಕಿದನು.
7 ಆತನು ಬಾಧೆಯನ್ನೂ ಹಿಂಸೆಯನ್ನೂ ಅನುಭವಿಸಿದನು. ಆದರೂ ಆತನು ಪ್ರತಿಭಟಿಸಲಿಲ್ಲ. ಕೊಯ್ಯಲು ಕೊಂಡೊಯ್ಯುವ ಕುರಿಮರಿಯಂತೆಯೂ ಉಣ್ಣೆಯನ್ನು ಕತ್ತರಿಸುವಾಗ ಮೌನವಾಗಿರುವ ಕುರಿಮರಿಯಂತೆಯೂ ಆತನು ಮೌನವಾಗಿದ್ದನು. 8 ಜನರು ಬಲವಂತದಿಂದ ಆತನನ್ನು ಕೊಂಡೊಯ್ದರು; ಆತನಿಗೆ ಅನ್ಯಾಯವಾದ ತೀರ್ಪನ್ನು ನೀಡಿದರು; ಆತನನ್ನು ಜೀವಲೋಕದಿಂದಲೇ ತೆಗೆದುಹಾಕಿ ಆತನಿಗೆ ಸಂತಾನವೇ ಇಲ್ಲದಂತೆ ಮಾಡಿದರು. ನನ್ನ ಜನರ ಪಾಪಗಳಿಗಾಗಿ ಆತನು ದಂಡಿಸಲ್ಪಟ್ಟನು. 9 ಆತನು ಸತ್ತ ಬಳಿಕ ಧನಿಕರೊಂದಿಗೂ ದುಷ್ಟರೊಂದಿಗೂ ಹೂಳಲ್ಪಟ್ಟನು. ಆತನು ಯಾವ ಅಪರಾಧವನ್ನೂ ಮಾಡಲಿಲ್ಲ; ಸುಳ್ಳಾಡಲಿಲ್ಲ. ಆದರೂ ಇವೆಲ್ಲವೂ ಆತನಿಗೆ ಸಂಭವಿಸಿದವು.
10 ಆತನನ್ನು ಬಾಧೆಯಿಂದ ಜಜ್ಜಬೇಕೆಂಬುದು ಯೆಹೋವನ ನಿರ್ಧಾರವಾಗಿತ್ತು. ಆದ್ದರಿಂದ ಈ ಸೇವಕನು ತನ್ನನ್ನು ಮರಣಕ್ಕೆ ಒಪ್ಪಿಸಿಕೊಟ್ಟನು. ಆದರೆ ಆತನು ತನ್ನ ಹೊಸ ಜೀವಿತದಲ್ಲಿ ಚಿರಂಜೀವಿಯಾಗುವನು. ಆತನು ತನ್ನ ಜನರನ್ನು ದೃಷ್ಟಿಸಿ ನೋಡುವನು. ಯೆಹೋವನ ಸಂಕಲ್ಪದ ಮೇರೆಗೆ ಎಲ್ಲವನ್ನೂ ಆತನು ಮಾಡುವನು. 11 ಆತನು ತನ್ನ ಆತ್ಮದಲ್ಲಿ ಬಹಳವಾಗಿ ಸಂಕಟಪಡುವನು. ಆದರೆ ಒಳ್ಳೆಯ ಕಾರ್ಯಗಳಾಗುವುದನ್ನು ಆತನು ನೋಡುವನು. ತಾನು ಕಲಿತ ವಿಷಯಗಳಲ್ಲಿ ಸಂತುಷ್ಟನಾಗುವನು.
ಅನೇಕರು ತಮ್ಮ ಪಾಪಗಳಿಂದ ಬಿಡುಗಡೆ ಹೊಂದುವಂತೆ ನನ್ನ ಒಳ್ಳೇ ಸೇವಕನು ಮಾಡುವನು. ಅವರ ಪಾಪಗಳನ್ನು ಹೊತ್ತುಕೊಂಡು ಹೋಗುವನು. 12 ಈ ಕಾರಣಕ್ಕಾಗಿ ನಾನು ಆತನನ್ನು ಜನರ ಮಧ್ಯದಲ್ಲಿ ಪ್ರಸಿದ್ಧಿಪಡಿಸುವೆನು. ಆತನು ಬಲಿಷ್ಠರೊಂದಿಗೆ ಸಮಪಾಲನ್ನು ಹೊಂದುವನು. ಆತನು ಜನರಿಗಾಗಿ ತನ್ನ ಪ್ರಾಣವನ್ನು ಕೊಟ್ಟು ಸತ್ತದ್ದಕ್ಕಾಗಿ ನಾನು ಆತನಿಗೆ ಹೀಗೆ ಮಾಡುವೆನು. ಜನರು ಆತನನ್ನು ಅಪರಾಧಿ ಎಂದು ಹೇಳಿದರೂ ವಾಸ್ತವವಾಗಿ ಆತನು ಬಹುಜನರ ಪಾಪಗಳನ್ನು ಹೊತ್ತುಕೊಂಡು ಹೋದನು. ಈಗ ಆತನು ಪಾಪಮಾಡಿದ ಜನರಿಗಾಗಿ ಪ್ರಾರ್ಥನಾಪೂರ್ವಕವಾಗಿ ವಿಜ್ಞಾಪಿಸುವನು.
ದೇವರು ತನ್ನ ಜನರನ್ನು ಸ್ವದೇಶಕ್ಕೆ ಬರಮಾಡುವನು
54 ಬಂಜೆಯೇ, ಸಂತೋಷಿಸು, ನಿನಗೆ ಮಕ್ಕಳಿಲ್ಲ.
ಆದ್ದರಿಂದ ನೀನು ಬಹಳವಾಗಿ ಸಂತೋಷಿಸು.
ಯೆಹೋವನು ಹೇಳುವುದೇನೆಂದರೆ,
“ಗಂಡ ಬಿಟ್ಟಿರುವ ಹೆಂಗಸಿಗೆ ಮದುವೆಯಾದ ಹೆಂಗಸಿಗಿಂತ ಹೆಚ್ಚು ಮಕ್ಕಳಿರುವರು.”
2 “ನಿನ್ನ ಡೇರೆಗಳನ್ನು ವಿಸ್ತರಿಸು.
ನಿನ್ನ ಬಾಗಿಲುಗಳನ್ನು ಅಗಲವನ್ನಾಗಿ ಮಾಡು.
ನಿನ್ನ ಮನೆಯನ್ನು ಅಭಿವೃದ್ಧಿಪಡಿಸು.
ನಿನ್ನ ಡೇರೆಯನ್ನು ದೊಡ್ಡದಾಗಿಯೂ ಬಲವಾಗಿಯೂ ಮಾಡು.
3 ಯಾಕೆಂದರೆ ನೀನು ಅಧಿಕವಾಗಿ ಬೆಳೆಯುವಿ.
ನಿನ್ನ ಮಕ್ಕಳು ಅನೇಕ ಜನಾಂಗಗಳನ್ನು ವಶಮಾಡಿಕೊಳ್ಳುವರು.
ಕೆಡವಿಹಾಕಿದ ಪಟ್ಟಣಗಳಲ್ಲಿ ನಿನ್ನ ಮಕ್ಕಳು ತಿರಿಗಿ ವಾಸಿಸುವರು.
4 ಹೆದರಬೇಡ, ನೀನು ನಿರಾಶಳಾಗುವದಿಲ್ಲ.
ಜನರು ನಿನ್ನ ವಿಷಯವಾಗಿ ಕೆಟ್ಟದ್ದನ್ನು ಆಡುವದಿಲ್ಲ.
ನೀನು ಬೇಸರಗೊಳ್ಳುವದಿಲ್ಲ.
ನೀನು ಯೌವ್ವನಸ್ಥಳಾಗಿರುವಾಗ ನಿನಗೆ ನಾಚಿಕೆಯಾಯಿತು.
ಆದರೆ ಈಗ ನೀನು ಆ ನಾಚಿಕೆಯನ್ನು ಮರೆತುಬಿಟ್ಟವಳಾಗಿದ್ದಿ.
ನಿನ್ನ ಗಂಡನನ್ನು ನೀನು ಕಳೆದುಕೊಂಡಾಗ
ನೀನು ಪಟ್ಟ ನಾಚಿಕೆಯನ್ನು ಜ್ಞಾಪಕ ಮಾಡಿಕೊಳ್ಳುವದಿಲ್ಲ.
5 ಯಾಕೆಂದರೆ ನಿನ್ನ ಗಂಡನೇ (ದೇವರು) ನಿನ್ನನ್ನು ನಿರ್ಮಿಸಿದನು.
ಆತನ ಹೆಸರು ಸರ್ವಶಕ್ತನಾದ ಯೆಹೋವನು.
ಆತನು ಇಸ್ರೇಲನ್ನು ಕಾಪಾಡುವಾತನಾಗಿದ್ದಾನೆ. ಆತನು ಇಸ್ರೇಲಿನ ಪರಿಶುದ್ಧ ದೇವರಾಗಿದ್ದಾನೆ.
ಆತನನ್ನು ‘ಇಡೀ ಭೂಲೋಕದ ದೇವರು’ ಎಂದು ಕರೆಯುವರು.
6 “ನೀನು ಗಂಡಬಿಟ್ಟ ಹೆಂಗಸಿನಂತಿದ್ದಿ.
ನಿನ್ನ ಆತ್ಮದಲ್ಲಿ ನೀನು ತುಂಬಾ ದುಃಖಿತಳಾಗಿದ್ದಿ.
ಆದರೆ ಯೆಹೋವನು ನಿನ್ನನ್ನು ತನ್ನವಳನ್ನಾಗಿ ಮಾಡಲು ಕರೆದನು.
ಎಳೇ ಪ್ರಾಯದಲ್ಲಿ ಮದುವೆಯಾದ ಮತ್ತು ಗಂಡಬಿಟ್ಟ ಹೆಂಗಸಿನಂತೆ ನೀನಿದ್ದಿ.
ಆದರೆ ದೇವರು ತನ್ನವಳನ್ನಾಗಿ ಮಾಡಿಕೊಳ್ಳಲು ನಿನ್ನನ್ನು ಕರೆದನು.”
7 ದೇವರು ಹೇಳುವುದೇನೆಂದರೆ: “ನಾನು ನಿನ್ನನ್ನು ತೊರೆದೆನು. ಆದರೆ ಸ್ವಲ್ಪ ಸಮಯಕ್ಕಾಗಿ ಮಾತ್ರ.
ನಿನ್ನನ್ನು ಮತ್ತೆ ನನಗಾಗಿ ಒಟ್ಟುಗೂಡಿಸುವೆನು. ಆಗ ನಿನಗೆ ಅತ್ಯಂತ ದಯೆಯನ್ನು ತೋರಿಸುವೆನು.
8 ನಾನು ತುಂಬಾ ಸಿಟ್ಟುಗೊಂಡಿದ್ದೆನು ಮತ್ತು ಸ್ವಲ್ಪ ಕಾಲಕ್ಕೆ ನಿನಗೆ ಮರೆಯಾದೆನು.
ಆದರೆ ನಿನ್ನನ್ನು ಕರುಣೆಯಿಂದ ನಿರಂತರವೂ ಸಂತೈಸುವೆನು.”
ನಿನ್ನ ರಕ್ಷಕನಾದ ಯೆಹೋವನ ನುಡಿಗಳಿವು.
9 ದೇವರು ಹೇಳುವುದೇನೆಂದರೆ: “ನೋಹನ ಕಾಲದಲ್ಲಿ ನಾನು ಲೋಕವನ್ನು ಜಲಪ್ರವಾಹದ ಮೂಲಕ ಶಿಕ್ಷಿಸಿದ್ದನ್ನು ಜ್ಞಾಪಕಮಾಡಿಕೊ.
ಆ ಬಳಿಕ ನಾನು ನೋಹನಿಗೆ ಪ್ರಪಂಚವನ್ನು ಜಲಪ್ರವಾಹದಿಂದ ಇನ್ನೆಂದಿಗೂ ನಾಶಪಡಿಸುವದಿಲ್ಲ ಎಂದು ಪ್ರಮಾಣ ಮಾಡಿದೆನು.
ಅದೇ ರೀತಿಯಲ್ಲಿ ಇನ್ನೆಂದಿಗೂ ನಿನ್ನ ಮೇಲೆ ಕೋಪಗೊಳ್ಳುವುದಿಲ್ಲವೆಂತಲೂ ನಿನ್ನನ್ನು ಗದರಿಸುವುದಿಲ್ಲವೆಂತಲೂ ನಾನು ನಿನಗೆ ಪ್ರಮಾಣ ಮಾಡುತ್ತೇನೆ.”
10 ಯೆಹೋವನು ಹೇಳುವುದೇನೆಂದರೆ, “ಪರ್ವತಗಳು ಇಲ್ಲದೆ ಹೋದರೂ
ಬೆಟ್ಟಗಳು ಧೂಳಾದರೂ
ನನ್ನ ಕೃಪೆಯು ನಿನ್ನನ್ನು ಎಂದಿಗೂ ತೊರೆಯದು.
ನಾನು ನಿನ್ನೊಂದಿಗೆ ನಿತ್ಯಕಾಲದ
ಸಮಾಧಾನದಲ್ಲಿ ಇರುವೆನು.”
ಯೆಹೋವನು ನಿನಗೆ ಕರುಣೆಯನ್ನು ತೋರುವನು.
ಈ ಸಂಗತಿಗಳನ್ನು ಆತನೇ ಹೇಳಿದ್ದಾನೆ.
11 “ಬಡನಗರಿಯೇ, ನಿನ್ನ ವೈರಿಗಳು ನಿನಗೆ ವಿರೋಧವಾಗಿ ಬಿರುಗಾಳಿಯಂತೆ ಬಂದಾಗ
ಯಾರೂ ನಿನ್ನನ್ನು ಸಂತೈಸಲಿಲ್ಲ.
ಆದರೆ ನಾನು ಮತ್ತೆ ನಿನ್ನನ್ನು ನಿರ್ಮಿಸುವೆನು.
ನಿನ್ನ ಗೋಡೆಗಳ ಕಲ್ಲುಗಳನ್ನು ಕಟ್ಟಲು ಸುಂದರವಾದ ಗಾರೆಯನ್ನು ಉಪಯೋಗಿಸುವೆನು.
ನಾನು ಅಡಿಪಾಯ ಹಾಕುವಾಗ ಮಾಣಿಕ್ಯಗಳನ್ನು ಹಾಕುವೆನು.
12 ಗೋಡೆಯ ಮೇಲಿರುವ ಕಲ್ಲುಗಳೆಲ್ಲಾ ಕೆಂಪು ಕಲ್ಲುಗಳೇ.
ಹೊಳೆಯುವ ವಜ್ರಗಳಿಂದ ನಾನು ಹೊರಬಾಗಲನ್ನು ತಯಾರಿಸುವೆನು.
ನಿನ್ನ ಸುತ್ತಲೂ ನಾನು ಅಮೂಲ್ಯವಾದ ಕಲ್ಲುಗಳಿಂದ ಗೋಡೆಯನ್ನು ಕಟ್ಟುವೆನು.
13 ನಿನ್ನ ಮಕ್ಕಳು ದೇವರನ್ನು ಅನುಸರಿಸುವರು.
ಆತನು ಅವರಿಗೆ ಬೋಧಿಸುವನು.
ನಿನ್ನ ಮಕ್ಕಳಿಗೆ ನಿಜವಾದ ಶಾಂತಿ ಇರುವದು.
14 ನೀನು ಒಳ್ಳೆಯತನದಿಂದ ಕಟ್ಟಲ್ಪಡುವೆ.
ಆದ್ದರಿಂದ ಎಲ್ಲಾ ದುಷ್ಟತ್ವಗಳಿಂದ ನೀನು ಸುರಕ್ಷಿತಳಾಗಿರುವೆ.
ನೀನು ಯಾವುದಕ್ಕೂ ಹೆದರುವ ಅವಶ್ಯವಿಲ್ಲ.
ಯಾವುದೂ ನಿನಗೆ ಹಾನಿಮಾಡದು.
15 ನಿನಗೆ ವಿರುದ್ಧವಾಗಿ ನನ್ನ ಯಾವ ಸೈನ್ಯವೂ ಯುದ್ಧಮಾಡದು.
ಯಾರಾದರೂ ನಿನ್ನ ಮೇಲೆ ಆಕ್ರಮಣ ಮಾಡಿದರೆ ಆ ಶತ್ರುವನ್ನು ನೀನು ಗೆಲ್ಲುವೆ.
16 “ಇಗೋ, ನಾನು ಕಮ್ಮಾರನನ್ನು ಮಾಡಿದೆನು. ಅವನು ಬೆಂಕಿಯನ್ನು ಊದಿ ಬಿಸಿಯನ್ನು ಹೆಚ್ಚಿಸುವನು. ಆಮೇಲೆ ಕೆಂಪಾಗಿ ಕಾದ ಕಬ್ಬಿಣವನ್ನು ಹೊರತೆಗೆದು ತನಗಿಷ್ಟವಾದ ಉಪಕರಣವನ್ನು ತಯಾರಿಸುವನು. ಅದೇ ರೀತಿಯಲ್ಲಿ ನಾಶಮಾಡುವ ‘ನಾಶಕನನ್ನು’ ನಾನು ನಿರ್ಮಿಸಿದೆನು.
17 “ನಿನಗೆ ವಿರುದ್ಧವಾಗಿ ಯುದ್ಧಮಾಡಲು ಜನರು ಆಯುಧಗಳನ್ನು ತಯಾರಿಸುವರು. ಆದರೆ ಆ ಆಯುಧಗಳು ನಿನ್ನನ್ನು ಸೋಲಿಸಲಾರವು. ಅವರು ನಿನಗೆ ವಿರುದ್ಧವಾಗಿ ಮಾತಾಡಿದರೂ ಆ ಮಾತುಗಳು ನಿನ್ನನ್ನು ತಪ್ಪಿತಸ್ಥಳೆಂದು ತೋರಿಸಲಾರವು.
“ಯೆಹೋವನ ಸೇವಕರಿಗೆ ದೊರೆಯುವುದೇನು? ಅವರಿಗೆ ಆತನಿಂದಲೇ ಸುಫಲಗಳು ದೊರೆಯುತ್ತವೆ” ಎಂದು ಯೆಹೋವನು ಅನ್ನುತ್ತಾನೆ.
ತೃಪ್ತಿಗೊಳಿಸುವ ಆಹಾರವನ್ನು ದೇವರು ಕೊಡುತ್ತಾನೆ
55 “ಎಲೈ ಬಾಯಾರಿದ ಜನರೆಲ್ಲರೇ,
ಬಂದು ನೀರನ್ನು ಕುಡಿಯಿರಿ.
ನಿಮ್ಮಲ್ಲಿ ಹಣವಿಲ್ಲವೆಂದು ಚಿಂತೆಮಾಡಬೇಡಿರಿ.
ಬಂದು ಹೊಟ್ಟೆತುಂಬಾ ತಿಂದು ಕುಡಿಯಿರಿ.
ನೀವು ಹಣ ಕೊಡಬೇಕಿಲ್ಲ.
ಹೊಟ್ಟೆತುಂಬಾ ತಿಂದು ಕುಡಿಯಿರಿ ಹಾಲಿಗೂ ದ್ರಾಕ್ಷಾರಸಕ್ಕೂ ಕ್ರಯವಿಲ್ಲ.
2 ಆಹಾರವಲ್ಲದ್ದಕ್ಕಾಗಿ ಹಣವನ್ನು ಯಾಕೆ ವೆಚ್ಚ ಮಾಡುತ್ತೀರಿ?
ತೃಪ್ತಿಗೊಳಿಸದ ಆಹಾರಕ್ಕಾಗಿ ನೀವು ಯಾಕೆ ಶ್ರಮಿಸುತ್ತೀರಿ?
ಗಮನವಿಟ್ಟು ಕೇಳಿರಿ.
ನೀವು ಒಳ್ಳೆಯ ಆಹಾರವನ್ನು ತಿನ್ನುವಿರಿ; ನಿಮ್ಮ ಊಟದಲ್ಲಿ ಆನಂದಿಸುವಿರಿ.
ಅವು ನಿಮ್ಮ ಆತ್ಮವನ್ನು ತೃಪ್ತಿಗೊಳಿಸುತ್ತವೆ.
3 ನಾನು ಹೇಳುವ ವಿಷಯಗಳಿಗೆ ಸರಿಯಾಗಿ ಕಿವಿಗೊಡಿರಿ.
ನಿಮ್ಮ ಆತ್ಮಗಳು ಜೀವಿಸುವಂತೆ ನನ್ನ ಮಾತುಗಳನ್ನು ಕೇಳಿರಿ.
ನನ್ನ ಬಳಿಗೆ ಬನ್ನಿರಿ, ನಾನು ನಿಮ್ಮೊಂದಿಗೆ ಶಾಶ್ವತವಾದ ಒಡಂಬಡಿಕೆಯನ್ನು ಮಾಡಿಕೊಳ್ಳುವೆನು.
ನಾನು ದಾವೀದನೊಂದಿಗೆ ಮಾಡಿಕೊಂಡ ಒಡಂಬಡಿಕೆಯಂತೆ ಅದಿರುವುದು.
ನಾನು ದಾವೀದನಿಗೆ ಅವನನ್ನು ಪ್ರೀತಿಸುವೆನೆಂದೂ ಅವನಿಗೆ ಪ್ರಾಮಾಣಿಕನಾಗಿರುವೆನೆಂದೂ ವಾಗ್ದಾನ ಮಾಡಿದ್ದೆನು.
ಆ ಒಡಂಬಡಿಕೆಯನ್ನು ನೀವು ಖಂಡಿತವಾಗಿ ನಂಬಬಹುದು.
4 ದಾವೀದನು ನನ್ನ ಸಾಮರ್ಥ್ಯದ ವಿಷಯದಲ್ಲಿ ಎಲ್ಲ ಜನಾಂಗಗಳವರಿಗೆ ಸಾಕ್ಷಿಯಾಗಿರುವಂತೆ ನಾನೇ ಮಾಡಿದೆನು.
ನಾನು ದಾವೀದನಿಗೆ, ‘ನೀನು ಅಧಿಪತಿಯಾಗುವೆ ಮತ್ತು ಅನೇಕ ಜನಾಂಗಗಳಿಗೆ ನೀನು ಸೈನ್ಯಾಧಿಪತಿಯಾಗುವೆ’ ಎಂದು ಪ್ರಮಾಣ ಮಾಡಿದೆ.”
5 ನಿನಗೆ ಗೊತ್ತಿರದ ಸ್ಥಳಗಳಲ್ಲಿ ಜನಾಂಗಗಳು ನೆಲೆಸಿವೆ.
ಆ ದೇಶಗಳನ್ನು ನೀನು ಕರೆಯುವೆ.
ಆ ದೇಶಗಳಿಗೆ ನಿನ್ನ ಪರಿಚಯವಿರುವದಿಲ್ಲ.
ಆದರೆ ಅವುಗಳು ನಿನ್ನ ಬಳಿಗೆ ಓಡಿಬರುವವು.
ಇವೆಲ್ಲಾ ನಿನ್ನ ದೇವರಾದ ಯೆಹೋವನ ಚಿತ್ತಕ್ಕನುಸಾರವಾಗಿ ಆಗುತ್ತವೆ.
ಇಸ್ರೇಲಿನ ಪರಿಶುದ್ಧ ದೇವರು ನಿನ್ನನ್ನು ಗೌರವಿಸುವದರಿಂದ ಇದನ್ನು ನೆರವೇರಿಸುವನು.
6 ಆದ್ದರಿಂದ ಸಮಯವು ದಾಟುವ ಮೊದಲು
ನೀವು ಯೆಹೋವನಿಗಾಗಿ ಹುಡುಕಿರಿ.
ಆತನು ಹತ್ತಿರವಿರುವಾಗಲೇ ಕರೆಯಿರಿ.
7 ಕೆಟ್ಟಜನರು ಕೆಟ್ಟತನದಲ್ಲಿ ಜೀವಿಸುವದನ್ನು ನಿಲ್ಲಿಸಲಿ.
ಅವರು ಕೆಟ್ಟ ಆಲೋಚನೆಗಳನ್ನು ಮಾಡದಿರಲಿ.
ಅವರು ಯೆಹೋವನ ಬಳಿಗೆ ಹಿಂತಿರುಗಲಿ.
ಆಗ ಯೆಹೋವನು ಅವರನ್ನು ಆದರಿಸುವನು.
ದೇವರಾದ ಯೆಹೋವನು ಕ್ಷಮಿಸುವುದರಿಂದ
ಅವರು ಆತನ ಬಳಿಗೆ ಬರಲಿ.
ಜನರು ದೇವರನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ
8 ಯೆಹೋವನು ಹೇಳುವುದೇನೆಂದರೆ: “ನಿಮ್ಮ ಆಲೋಚನೆಗಳು ನನ್ನ ಆಲೋಚನೆಗಳಲ್ಲ.
ನಿಮ್ಮ ಮಾರ್ಗಗಳು ನನ್ನ ಮಾರ್ಗಗಳಲ್ಲ.
9 ಆಕಾಶವು ಭೂಮಿಗಿಂತ ಎಷ್ಟು ಎತ್ತರವಾಗಿದೆಯೋ
ನನ್ನ ಆಲೋಚನೆಗಳು ನಿಮ್ಮ ಆಲೋಚನೆಗಳಿಗಿಂತ ಅಷ್ಟೇ ಉನ್ನತವಾಗಿವೆ;
ನನ್ನ ಮಾರ್ಗಗಳು ನಿಮ್ಮ ಮಾರ್ಗಗಳಿಗಿಂತ ಅಷ್ಟೇ ಉನ್ನತವಾಗಿವೆ.” ಇದು ಯೆಹೋವನ ನುಡಿ.
10 “ಮಳೆಯೂ ಹಿಮವೂ ಆಕಾಶದಿಂದ ಬೀಳುವವು.
ಅವು ನೆಲವನ್ನು ತೇವಮಾಡದೆ ಆಕಾಶಕ್ಕೆ ಹಿಂತಿರುಗುವುದಿಲ್ಲ.
ಆಗ ನೆಲವು ಬೀಜವನ್ನು ತೋಯಿಸಿ ಸಸಿ ಚಿಗುರುವಂತೆ ಮಾಡುವದು.
ಆ ಸಸಿಗಳು ವ್ಯವಸಾಯಗಾರನಿಗೆ ಧಾನ್ಯವನ್ನು ಫಲಿಸುತ್ತವೆ.
ಜನರು ಆ ಧಾನ್ಯದಿಂದ ರೊಟ್ಟಿಗಳನ್ನು ಮಾಡುವರು.
11 ಅದೇ ಪ್ರಕಾರ ನನ್ನ ಬಾಯಿಂದ ಹೊರಟ ಮಾತುಗಳು
ಯೋಚಿಸಿದ ಕಾರ್ಯಗಳನ್ನು ಮಾಡದೆ ಹಿಂತಿರುಗುವುದಿಲ್ಲ.
ನನ್ನ ಮಾತುಗಳು ನನ್ನ ಆಲೋಚನೆಗೆ ಸರಿಯಾಗಿ ಕಾರ್ಯ ಮಾಡುವವು.
ನನ್ನ ಮಾತುಗಳು ತಮಗೆ ನೇಮಕವಾದ ಆ ಕಾರ್ಯಗಳನ್ನು ಮಾಡಿಮುಗಿಸುವವು.
12 “ಆದ್ದರಿಂದ ನೀವು ಸಂತೋಷದಿಂದ ಹೊರಡುವಿರಿ
ಮತ್ತು ಸಮಾಧಾನದಿಂದ ಮೆರವಣಿಗೆಯಾಗಿ ಬರುವಿರಿ.
ಪರ್ವತಗಳೂ ಬೆಟ್ಟಗಳೂ ಸಂತೋಷದಿಂದ ನಿಮ್ಮ ಮುಂದೆ ಕುಣಿದಾಡುವವು.
ಭೂಮಿಯ ಮೇಲಿರುವ ಮರಗಳೆಲ್ಲಾ ಚಪ್ಪಾಳೆ ತಟ್ಟುವವು.
13 ಪೊದೆಗಳು ಇದ್ದ ಸ್ಥಳಗಳಲ್ಲಿ ಎತ್ತರವಾದ ದೇವದಾರು ಮರಗಳು ಬೆಳೆಯುವವು.
ಹಣಜಿಯಿರುವ ಸ್ಥಳಗಳಲ್ಲಿ ಸುಗಂಧ ಮರಗಳು ಬೆಳೆಯುವವು.
ಇವು ಯೆಹೋವನಾಮವನ್ನು ಪ್ರಸಿದ್ಧಿಪಡಿಸುವವು.
ಯೆಹೋವನೇ ಸರ್ವಶಕ್ತನೆಂದು ಇವು ತೋರಿಸುವವು.
ಈ ಸಾಕ್ಷಿಯು ಎಂದಿಗೂ ನಾಶವಾಗುವದಿಲ್ಲ.”
1 ತಂದೆಯಾದ ದೇವರಲ್ಲಿಯೂ ಮತ್ತು ಪ್ರಭುವಾದ ಯೇಸು ಕ್ರಿಸ್ತನಲ್ಲಿಯೂ ಇರುವ ಥೆಸಲೋನಿಕದವರ ಸಭೆಗೆ ಪೌಲನು, ಸಿಲ್ವಾನನು ಮತ್ತು ತಿಮೊಥೆಯನು ಬರೆಯುವ ಪತ್ರ.
2 ತಂದೆಯಾದ ದೇವರ ಮತ್ತು ಪ್ರಭುವಾದ ಯೇಸು ಕ್ರಿಸ್ತನ ಕೃಪೆಯೂ ಶಾಂತಿಯೂ ನಿಮಗಿರಲಿ.
3 ನಿಮ್ಮ ವಿಷಯದಲ್ಲಿ ಯಾವಾಗಲೂ ದೇವರಿಗೆ ಸ್ತೋತ್ರ ಸಲ್ಲಿಸುತ್ತೇವೆ. ನಿಮ್ಮ ನಂಬಿಕೆಯು ಮತ್ತು ಇತರರ ಮೇಲೆ ನಿಮಗಿರುವ ಪ್ರೀತಿಯು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ ನಿಮ್ಮ ವಿಷಯದಲ್ಲಿ ಸ್ತೋತ್ರ ಸಲ್ಲಿಸುವುದು ಯೋಗ್ಯವಾದ ಕಾರ್ಯವಾಗಿದೆ. 4 ದೇವರ ಇತರ ಸಭೆಗಳಲ್ಲಿ ನಿಮ್ಮನ್ನು ಕುರಿತು ಹೆಚ್ಚಳಪಡುತ್ತೇವೆ. ನಿಮ್ಮಲ್ಲಿರುವ ನಂಬಿಕೆ ಮತ್ತು ಸಹನೆಗಳನ್ನು ಕುರಿತು ಇತರ ಸಭೆಗಳಿಗೆ ಹೇಳುತ್ತೇವೆ. ನೀವು ಹಿಂಸೆಗೆ ಒಳಗಾಗಿದ್ದರೂ ಅನೇಕ ಸಂಕಟಗಳನ್ನು ಅನುಭವಿಸುತ್ತಿದ್ದರೂ ನಂಬಿಕೆಯಿಂದಲೂ ಸಹನೆಯಿಂದಲೂ ಜೀವಿಸುತ್ತಿದ್ದೀರಿ.
ದೇವರ ತೀರ್ಪನ್ನು ಕುರಿತು ಪೌಲನ ವಿವರಣೆ
5 ದೇವರು ನ್ಯಾಯವಾದ ತೀರ್ಪನ್ನು ನೀಡುತ್ತಾನೆಂಬುದಕ್ಕೆ ಅದೇ ಪ್ರಮಾಣವಾಗಿದೆ. ದೇವರ ರಾಜ್ಯಕ್ಕೆ ನೀವು ಯೋಗ್ಯರಾಗಿರಬೇಕೆಂಬುದು ಆತನ ಅಪೇಕ್ಷೆ. ನೀವು ಹಿಂಸೆಪಡುತ್ತಿರುವುದು ಆ ರಾಜ್ಯಕ್ಕೋಸ್ಕರವೇ. 6 ದೇವರು ಯೋಗ್ಯವಾದುದ್ದನ್ನೇ ಮಾಡುತ್ತಾನೆ. ನಿಮಗೆ ತೊಂದರೆ ಕೊಡುವ ಜನರಿಗೆ ದೇವರು ತೊಂದರೆ ಕೊಡುತ್ತಾನೆ. 7 ತೊಂದರೆಗೆ ಒಳಗಾಗಿರುವ ನಿಮಗೆ ದೇವರು ಶಾಂತಿಯನ್ನು ನೀಡುತ್ತಾನೆ. ಆತನು ನಮಗೂ ಶಾಂತಿಯನ್ನು ನೀಡುವನು. ಪ್ರಭುವಾದ ಯೇಸು ತನ್ನ ಶಕ್ತಿಶಾಲಿಗಳಾದ ದೂತರೊಂದಿಗೆ ಪರಲೋಕದಿಂದ ಪ್ರತ್ಯಕ್ಷನಾದಾಗ ಈ ಶಾಂತಿಯನ್ನು ದಯಪಾಲಿಸುತ್ತಾನೆ. 8 ಪ್ರಭು ಯೇಸು ಪರಲೋಕದಿಂದ ಬೆಂಕಿಯ ಜ್ವಾಲೆಗಳೊಡನೆ ಪ್ರತ್ಯಕ್ಷನಾದಾಗ ದೇವರನ್ನು ತಿಳಿದಿಲ್ಲದವರಿಗೂ ಸುವಾರ್ತೆಗೆ ವಿಧೇಯರಾಗಿಲ್ಲದವರಿಗೂ ದಂಡನೆಯನ್ನು ಬರಮಾಡುತ್ತಾನೆ. 9 ಅವರಿಗೆ ನಿತ್ಯವಾದ ದಂಡನೆಯಾಗುವುದು. ಪ್ರಭುವಿನೊಂದಿಗಿರಲು ಅವರಿಗೆ ಅವಕಾಶ ದೊರೆಯುವುದಿಲ್ಲ. ಆತನು ತನ್ನ ಮಹಾಶಕ್ತಿಯಿಂದ ಅವರನ್ನು ದೂರವಿರಿಸುತ್ತಾನೆ. 10 ಪ್ರಭುವಾದ ಯೇಸು ಪ್ರತ್ಯಕ್ಷನಾದಾಗ ಇದು ಸಂಭವಿಸುತ್ತದೆ. ಆತನು ತನಗೆ ದೊರೆಯ ಬೇಕಾದ ವೈಭವವನ್ನು ಸ್ವೀಕರಿಸಲು ತನ್ನ ಪರಿಶುದ್ಧ ಜನರೊಂದಿಗೆ ಪ್ರತ್ಯಕ್ಷನಾಗುತ್ತಾನೆ. ಆತನನ್ನು ನಂಬಿದ ಜನರೆಲ್ಲರೂ ಆತನನ್ನು ಕಂಡು ಆಶ್ಚರ್ಯಚಕಿತರಾಗುವರು. ನಾವು ಹೇಳಿದ್ದನ್ನು ನಂಬಿದ ನೀವೆಲ್ಲರೂ ವಿಶ್ವಾಸಿಗಳ ಆ ಸಮೂಹದಲ್ಲಿರುವಿರಿ.
11 ಆದಕಾರಣವೇ ಯಾವಾಗಲೂ ನಿಮಗಾಗಿ ಪ್ರಾರ್ಥಿಸುತ್ತೇವೆ. ಯಾವ ಒಳ್ಳೆಯ ಮಾರ್ಗದಲ್ಲಿ ನೀವು ಜೀವಿಸಬೇಕೆಂದು ದೇವರು ನಿಮ್ಮನ್ನು ಕರೆದನೋ, ಆ ಮಾರ್ಗದಲ್ಲೇ ನೀವು ಜೀವಿಸಲಿಕ್ಕಾಗುವಂತೆ ಪ್ರಾರ್ಥಿಸುತ್ತೇವೆ. ನಿಮ್ಮಲ್ಲಿರುವ ಒಳ್ಳೆಯ ತನವು ಒಳ್ಳೆಯದನ್ನು ಮಾಡುವಂತೆ ನಿಮ್ಮನ್ನು ಪ್ರೇರೇಪಿಸುತ್ತದೆ. ನಿಮ್ಮಲ್ಲಿರುವ ನಂಬಿಕೆಯು ನಿಮ್ಮಿಂದ ಕಾರ್ಯ ಸಾಧಿಸುತ್ತದೆ. ಈ ಕಾರ್ಯಗಳನ್ನು ನೀವು ಹೆಚ್ಚುಹೆಚ್ಚಾಗಿ ಮಾಡಲು ದೇವರು ತನ್ನ ಶಕ್ತಿಯಿಂದ ನಿಮಗೆ ಸಹಾಯ ಮಾಡಲೆಂದು ಬೇಡಿಕೊಳ್ಳುತ್ತೇವೆ. 12 ನಮ್ಮ ಪ್ರಭುವಾದ ಯೇಸು ಕ್ರಿಸ್ತನ ಹೆಸರು ನಿಮ್ಮಲ್ಲಿ ಮಹಿಮೆ ಹೊಂದಲೆಂದು ಮತ್ತು ನೀವೂ ಆತನಲ್ಲಿ ಮಹಿಮೆ ಹೊಂದಲೆಂದು ನಾವು ಪ್ರಾರ್ಥಿಸುತ್ತೇವೆ. ಆ ಮಹಿಮೆಯು ನಮ್ಮ ದೇವರ ಮತ್ತು ಪ್ರಭು ಯೇಸು ಕ್ರಿಸ್ತನ ಕೃಪೆಯಿಂದ ಬರುತ್ತದೆ.
Kannada Holy Bible: Easy-to-Read Version. All rights reserved. © 1997 Bible League International