Print Page Options
Previous Prev Day Next DayNext

Old/New Testament

Each day includes a passage from both the Old Testament and New Testament.
Duration: 365 days
Kannada Holy Bible: Easy-to-Read Version (KERV)
Version
ಯೆಶಾಯ 50-52

ಜನರು ಪಾಪ ಮಾಡಿದ್ದರಿಂದ ಇಸ್ರೇಲು ಶಿಕ್ಷಿಸಲ್ಪಟ್ಟಿತು

50 ಯೆಹೋವನು ಹೇಳುವುದೇನೆಂದರೆ:
“ಇಸ್ರೇಲ್ ಜನರೇ, ನಾನು ನಿಮ್ಮ ತಾಯಿಯಾದ ಜೆರುಸಲೇಮಿಗೆ ವಿವಾಹವಿಚ್ಛೇದನ ಕೊಟ್ಟಿರುವುದಾಗಿ ಹೇಳುತ್ತೀರಿ.
    ಆದರೆ ನಾನು ಆಕೆಗೆ ವಿವಾಹವಿಚ್ಛೇದನ ಕೊಟ್ಟಿರುವುದಕ್ಕೆ ದಾಖಲೆ ಪತ್ರವೆಲ್ಲಿದೆ?
ನನ್ನ ಮಕ್ಕಳೇ, ನಿಮ್ಮಲ್ಲಿ ಯಾರಿಗಾದರೂ ನಾನು ಸಾಲ ತೀರಿಸಬೇಕಿತ್ತೇ?
    ಆ ಸಾಲವನ್ನು ತೀರಿಸಲು ನಾನು ನಿಮ್ಮನ್ನು ಮಾರಿದ್ದೆನೋ,
ಇಲ್ಲ. ನಾನು ನಿಮ್ಮನ್ನು ಮಾರಿಬಿಟ್ಟಿದ್ದು ನೀವು ಮಾಡಿದ ದುಷ್ಟತನಕ್ಕಾಗಿಯೇ.
    ನಿಮ್ಮ ತಾಯಿಯಾದ ಜೆರುಸಲೇಮನ್ನು ಕಳುಹಿಸಿಬಿಟ್ಟದ್ದು ನಿಮ್ಮ ಅಪರಾಧಗಳಿಗಾಗಿಯೇ.
ನಾನು ಮನೆಗೆ ಬಂದಾಗ ಅಲ್ಲಿ ಯಾರೂ ಇರಲಿಲ್ಲ.
    ನಾನು ಎಷ್ಟು ಕರೆದರೂ ಯಾರೂ ಉತ್ತರ ಕೊಡಲಿಲ್ಲ.
ನಿಮ್ಮನ್ನು ರಕ್ಷಿಸಲು ನನ್ನಿಂದ ಸಾಧ್ಯವಿಲ್ಲವೆಂದು ನೀವು ನೆನಸುತ್ತೀರಾ?
    ನಿಮ್ಮ ಎಲ್ಲಾ ಕಷ್ಟಗಳಿಂದ ನಿಮ್ಮನ್ನು ಪಾರುಮಾಡಲು ನನಗೆ ಸಾಮರ್ಥ್ಯವಿದೆ.
ಇಗೋ, ನಾನು ಸಮುದ್ರಕ್ಕೆ ಒಣಗಿಹೋಗು ಎಂದು ಹೇಳಿದರೆ ಹಾಗೆಯೇ ಆಗುವದು.
    ಮೀನುಗಳು ನೀರಿಲ್ಲದೆ ಸತ್ತು ನಾರುವವು.
ಆಕಾಶವನ್ನು ನಾನು ಕತ್ತಲೆ ಮಾಡುವೆನು.
    ಅದನ್ನು ಕತ್ತಲೆಯಿಂದ ಮುಚ್ಚಿಬಿಡುವೆನು.
    ಅದು ಶೋಕವಸ್ತ್ರದಂತೆ ಕಪ್ಪಾಗಿ ಇರುವದು.”

ದೇವರ ಸೇವಕನು ದೇವರ ಮೇಲೆ ಅವಲಂಬಿಸಿರುವನು

ನನ್ನ ಒಡೆಯನಾದ ಯೆಹೋವನು ನನಗೆ ಬೋಧಿಸುವ ಸಾಮರ್ಥ್ಯವನ್ನು ಅನುಗ್ರಹಿಸಿದ್ದಾನೆ. ಈಗ ನಾನು ದುಃಖದಲ್ಲಿರುವ ಈ ಜನರಿಗೆ ಬೋಧಿಸುತ್ತಿದ್ದೇನೆ. ಪ್ರತೀ ಮುಂಜಾನೆ ವಿದ್ಯಾರ್ಥಿಯೋ ಎಂಬಂತೆ ಆತನು ನನ್ನನ್ನು ಎಬ್ಬಿಸಿ ನನಗೆ ಬೋಧಿಸುತ್ತಾನೆ. ನನ್ನ ಒಡೆಯನಾದ ಯೆಹೋವನು ನನಗೆ ಕಲಿಯಲು ಸಹಾಯ ಮಾಡುತ್ತಾನೆ. ನಾನು ಆತನಿಗೆ ವಿರುದ್ಧವಾಗಿ ದಂಗೆ ಏಳಲಿಲ್ಲ. ಆತನನ್ನು ಹಿಂಬಾಲಿಸುವದನ್ನು ನಿಲ್ಲಿಸುವದಿಲ್ಲ. ನನ್ನ ಬೆನ್ನಿಗೆ ಹೊಡೆಯಲೂ ನನ್ನ ಗಡ್ಡವನ್ನು ಕೀಳಲೂ ಅವರಿಗೆ ನನ್ನನ್ನು ಒಪ್ಪಿಸಿಕೊಡುತ್ತೇನೆ. ಅವರು ನನ್ನನ್ನು ಬೈದು ನನ್ನ ಮುಖಕ್ಕೆ ಉಗುಳಿದರೂ ನಾನು ನನ್ನ ಮುಖವನ್ನು ಅಡಗಿಸುವದಿಲ್ಲ. ನನ್ನ ಒಡೆಯನಾದ ಯೆಹೋವನು ನನಗೆ ಸಹಾಯ ಮಾಡುವನು. ಆದ್ದರಿಂದ ಅವರ ಶಾಪಗಳು ನನಗೆ ಯಾವ ಹಾನಿಯನ್ನು ಮಾಡುವದಿಲ್ಲ. ನಾನು ಬಲವಾಗಿರುವೆನು. ನಾನು ನಿರಾಶನಾಗುವದಿಲ್ಲವೆಂದು ನನಗೆ ಗೊತ್ತಿದೆ.

ಯೆಹೋವನು ನನ್ನೊಂದಿಗಿದ್ದಾನೆ. ನಾನು ತಪ್ಪಿತಸ್ಥನಲ್ಲವೆಂದು ಆತನು ತೋರಿಸುವನು. ಆದ್ದರಿಂದ ಯಾರೂ ನನ್ನನ್ನು ಅಪರಾಧಿ ಎಂದು ಹೇಳಲಾಗುವದಿಲ್ಲ. ಯಾರಾದರೂ ನನ್ನನ್ನು ತಪ್ಪಿತಸ್ಥನೆಂದು ದೃಢಪಡಿಸಬೇಕೆಂದಿದ್ದರೆ ಅವರು ಮೊದಲು ನನ್ನ ಬಳಿಗೆ ಬರಲಿ, ನಮಗೆ ವಿಚಾರಣೆಯಾಗಲಿ! ಆದರೆ ನನ್ನ ಒಡೆಯನು ಸಹಾಯ ಮಾಡುತ್ತಾನೆ. ಯಾರೂ ನನ್ನ ಮೇಲೆ ದೋಷಾರೋಪಣೆ ಹೊರಿಸಲಾಗದು. ಈ ಜನರೆಲ್ಲರೂ ಬೆಲೆಯಿಲ್ಲದ ಹಳೆಯ ಬಟ್ಟೆಯಂತಾಗುವರು, ನುಸಿಯು ಅವುಗಳನ್ನು ತಿಂದುಬಿಡುವವು.

10 ಯೆಹೋವನನ್ನು ಗೌರವಿಸುವ ಜನರು ಆತನ ಸೇವಕನ ಮಾತನ್ನು ಕೇಳುವರು. ಆ ಸೇವಕನು ಮುಂದೆ ಸಂಭವಿಸುವುದರ ಬಗ್ಗೆ ಚಿಂತೆ ಇಲ್ಲದೆ ಸಂಪೂರ್ಣವಾಗಿ ದೇವರ ಮೇಲೆ ನಂಬಿಕೆ ಇಡುವನು. ಅವನು ಪರಿಪೂರ್ಣವಾಗಿ ಯೆಹೋವನ ಹೆಸರಿನಲ್ಲಿ ನಂಬಿಕೆ ಇಟ್ಟು ತನ್ನ ದೇವರ ಮೇಲೆ ಅವಲಂಬಿಸಿಕೊಳ್ಳುವನು.

11 “ಆದರೆ ನೀವು ನಿಮ್ಮ ದಾರಿಯಲ್ಲಿಯೇ ಜೀವಿಸಬೇಕೆಂದಿದ್ದೀರಿ, ನೀವು ನಿಮ್ಮ ಬೆಂಕಿಗಳನ್ನೂ ದೀವಟಿಗೆಗಳನ್ನೂ ಹಚ್ಚುತ್ತೀರಿ, ನಿಮಗೆ ಇಷ್ಟಬಂದ ರೀತಿಯಲ್ಲಿ ಜೀವಿಸುತ್ತೀರಿ. ಆದ್ದರಿಂದ ನೀವು ಶಿಕ್ಷಿಸಲ್ಪಡುವಿರಿ. ನಿಮ್ಮ ಬೆಂಕಿಯಲ್ಲಿಯೂ ದೀವಟಿಗೆಗಳಲ್ಲಿಯೂ ನೀವೇ ಬಿದ್ದು ಸುಟ್ಟುಹೋಗುವಿರಿ. ಇದನ್ನು ನಾನೇ ನೆರವೇರಿಸುವೆನು.”

ಇಸ್ರೇಲ್ ಅಬ್ರಹಾಮನಂತೆ ಇರಬೇಕು

51 “ಒಳ್ಳೆಯವರಾಗಿ ಜೀವಿಸಲು ಬಹಳವಾಗಿ ಪ್ರಯತ್ನಿಸುತ್ತಿರುವ ಯೆಹೋವನ ಭಕ್ತರೇ, ನನ್ನ ಮಾತನ್ನು ಕೇಳಿರಿ. ನಿಮ್ಮ ಪಿತೃವಾದ ಅಬ್ರಹಾಮನನ್ನೇ ದೃಷ್ಟಿಸಿ ನೋಡಿರಿ; ಆ ಬಂಡೆಯೊಳಗಿಂದಲೇ ನೀವು ತೆಗೆಯಲ್ಪಟ್ಟಿದ್ದೀರಿ. ನಿಮ್ಮ ಪಿತೃವಾದ ಅಬ್ರಹಾಮನನ್ನೂ ನಿಮ್ಮ ಮಾತೆಯಾದ ಸಾರಳನ್ನೂ ದೃಷ್ಟಿಸಿರಿ; ನಾನು ಕರೆದಾಗ ಅಬ್ರಹಾಮನು ಒಬ್ಬಂಟಿಗನಾಗಿದ್ದನು. ನಾನು ಅವನನ್ನು ಆಶೀರ್ವದಿಸಿ, ಅವನ ಸಂತಾನವನ್ನು ಅಭಿವೃದ್ಧಿಪಡಿಸಿ, ಅವನನ್ನು ಮಹಾಜನಾಂಗದ ಮೂಲಪುರುಷನನ್ನಾಗಿ ಮಾಡಿದೆನು.”

ಅದೇ ರೀತಿಯಲ್ಲಿ ಯೆಹೋವನು ಚೀಯೋನನ್ನು ಮತ್ತು ನಿರ್ಜನವಾದ ಅದರ ಸ್ಥಳಗಳನ್ನು ಆದರಿಸುವನು; ಅವರಿಗಾಗಿ ಮಹಾದೊಡ್ಡ ಕಾರ್ಯವನ್ನು ಮಾಡುವನು. ಯೆಹೋವನು ಮರುಭೂಮಿಯನ್ನು ಏದೆನ್ ಉದ್ಯಾನವನದಂತೆ ಮಾಡುವನು. ಆ ದೇಶವು ಬರಿದಾಗಿತ್ತು. ಆದರೆ ಅದು ಯೆಹೋವನ ಉದ್ಯಾನವನವಾಗುವದು. ಅದರೊಳಗಿರುವ ಜನರು ಸಂತೋಷಭರಿತರಾಗುವರು. ಅವರು ತಮ್ಮ ಸಂತೋಷವನ್ನು ವ್ಯಕ್ತಪಡಿಸುವರು. ಅವರು ಕೃತಜ್ಞತಾಸ್ತುತಿ ಮಾಡುವರು, ಜಯಗೀತೆಯನ್ನು ಹಾಡುವರು.

“ನನ್ನ ಜನರೇ, ನನ್ನ ಮಾತನ್ನು ಕೇಳಿರಿ.
    ನನ್ನ ಕಟ್ಟಳೆ ಮತ್ತು ನ್ಯಾಯ ಬೆಳಕಿನಂತಿದ್ದು ಹೇಗೆ ಜೀವಿಸಬೇಕೆಂಬುದನ್ನು ಜನರಿಗೆ ತೋರಿಸುತ್ತವೆ.
ನಾನು ನ್ಯಾಯವಂತನೆಂದು ನಿಮಗೆ ಬೇಗನೆ ತೋರಿಸುವೆನು. ನಿಮ್ಮನ್ನು ಬೇಗನೆ ರಕ್ಷಿಸುವೆನು.
    ನಾನು ನನ್ನ ಸಾಮರ್ಥ್ಯದಿಂದ ಎಲ್ಲಾ ಜನಾಂಗಗಳಿಗೆ ನ್ಯಾಯತೀರಿಸುವೆನು.
ದೂರದೇಶದವರು ನನಗೋಸ್ಕರ ಕಾಯುತ್ತಿದ್ದಾರೆ.
    ಅವರು ತಮ್ಮ ರಕ್ಷಣೆಗಾಗಿ ನನ್ನ ಶಕ್ತಿಯನ್ನು ಎದುರುನೋಡುತ್ತಿದ್ದಾರೆ.
ಪರಲೋಕದ ಕಡೆಗೆ ದೃಷ್ಟಿಸಿರಿ.
    ನಿಮ್ಮ ಸುತ್ತಲೂ ಇರುವ ಭೂಮಿಯನ್ನು ನೋಡಿರಿ.
ಹೊಗೆಯ ಮೋಡದಂತೆ ಆಕಾಶವು ಇಲ್ಲದೆಹೋಗುವದು.
    ಭೂಮಿಯು ಬೆಲೆಯಿಲ್ಲದ ಹಳೆಯ ಬಟ್ಟೆಯಂತಾಗುವುದು.
ಭೂಮಿಯ ಮೇಲಿರುವ ಜನರು ಸಾಯುವರು.
    ಆದರೆ ನನ್ನ ರಕ್ಷಣೆಯು ನಿರಂತರವಾಗಿರುವದು.
    ನನ್ನ ಕರುಣೆಯು ಅಂತ್ಯವಾಗದು.
ಒಳ್ಳೆಯತನವನ್ನು ಅರ್ಥಮಾಡಿಕೊಂಡ ನೀವು ನನ್ನ ಮಾತುಗಳನ್ನು ಕೇಳಿರಿ.
    ನನ್ನ ಬೋಧನೆಯನ್ನು ಅನುಸರಿಸುವ ನೀವು ನನ್ನ ಮಾತಿಗೆ ಕಿವಿಗೊಡಿರಿ.
ದುಷ್ಟಜನರಿಗೆ ಭಯಪಡಬೇಡಿರಿ.
    ಅವರು ನಿಮಗೆ ಹೇಳುವ ಕೆಟ್ಟಮಾತುಗಳಿಗೆ ಭಯಪಡಬೇಡಿ.
ಯಾಕೆಂದರೆ ನುಸಿಯು ಅವರನ್ನು ಬಟ್ಟೆಯಂತೆ ತಿಂದುಹಾಕುವುದು. ಅವರು ಉಣ್ಣೆಯಂತಿರುವರು,
    ನುಸಿಯು ಅದನ್ನು ತಿಂದುಬಿಡುವುದು.
ಆದರೆ ನನ್ನ ಒಳ್ಳೆಯತನವು ಶಾಶ್ವತವಾದದ್ದು.
    ನನ್ನ ರಕ್ಷಣೆಯು ಸದಾಕಾಲವಿರುವುದು.”

ದೇವರ ಶಕ್ತಿಯೇ ಜನರನ್ನು ರಕ್ಷಿಸುವದು

ಯೆಹೋವನ ಭುಜಬಲವೇ, ಎಚ್ಚರಗೊಳ್ಳು ಎಚ್ಚರಗೊಳ್ಳು,
    ಬಲವನ್ನು ಹೊಂದಿಕೊ!
ಪುರಾತನ ಕಾಲದಲ್ಲಿ ಮಾಡಿದಂತೆಯೇ
    ನಿನ್ನ ಶಕ್ತಿಯನ್ನು ತೋರು.
ನಿನ್ನ ಶಕ್ತಿಯಿಂದ ನೀನು ರಹಬನ್ನು ಸೋಲಿಸಿರುವೆ.
    ದೈತ್ಯಾಕಾರದ ಮೃಗವನ್ನು ಸೋಲಿಸಿರುವೆ.
10 ನೀನು ಸಮುದ್ರವನ್ನು ಬತ್ತಿಸಿರುವೆ. ಮಹಾ ಆಳದ ಗುಂಡಿಗಳ ನೀರನ್ನು ನೀನು ಬತ್ತಿಸಿರುವೆ.
    ಅತ್ಯಂತ ಆಳವಾದ ಸಮುದ್ರದ ತಳವನ್ನು ನೀನು ರಸ್ತೆಯನ್ನಾಗಿ ಮಾಡಿರುವೆ.
    ನಿನ್ನ ಜನರು ಆ ರಸ್ತೆಯಲ್ಲಿ ಸಮುದ್ರವನ್ನು ದಾಟಿ ರಕ್ಷಿಸಲ್ಪಟ್ಟರು.
11 ಯೆಹೋವನು ತನ್ನ ಜನರನ್ನು ರಕ್ಷಿಸುತ್ತಾನೆ.
    ಅವರು ಚೀಯೋನಿಗೆ ಸಂತೋಷದಿಂದ ಮರಳಿ ಬರುತ್ತಾರೆ.
ಅವರು ಬಹಳ ಸಂತೋಷಪಡುವರು.
    ಅವರ ಹರ್ಷವು ಅವರ ತಲೆಯ ಮೇಲೆ ಕಿರೀಟದಂತೆ ನಿತ್ಯಕಾಲಕ್ಕೂ ಇರುವುದು.
ಅವರು ಹರ್ಷದಿಂದ ಹಾಡುವರು.
    ಅವರ ದುಃಖವೆಲ್ಲಾ ಬಹುದೂರವಾಗುವುದು.

12 ಯೆಹೋವನು ಹೇಳುವುದೇನೆಂದರೆ, “ನಿನ್ನನ್ನು ಸಂತೈಸುವಾತನು ನಾನೇ.
    ಆದ್ದರಿಂದ ನೀನು ಜನರಿಗೆ ಯಾಕೆ ಹೆದರಬೇಕು.
    ಅವರು ಹುಟ್ಟಿ ಸಾಯುವ ನರರಾಗಿದ್ದಾರೆ.
    ಅವರು ಹುಲ್ಲಿನಂತೆ ಸಾಯುವ ಕೇವಲ ಮಾನವರಾಗಿದ್ದಾರೆ.”

13 ಯೆಹೋವನು ನಿನ್ನನ್ನು ಸೃಷ್ಟಿಸಿದ್ದಾನೆ.
    ತನ್ನ ಶಕ್ತಿಯಿಂದ ಭೂಮಿಯನ್ನು ಸೃಷ್ಟಿಸಿದವನು ಆತನೇ.
ಆತನು ತನ್ನ ಶಕ್ತಿಯಿಂದ
    ಭೂಮಿಯ ಮೇಲೆ ಆಕಾಶವನ್ನು ಹರಡಿದ್ದಾನೆ.
ಆದರೆ ನೀನು ಆತನನ್ನೂ ಆತನ ಶಕ್ತಿಯನ್ನೂ ಮರೆತುಬಿಟ್ಟೆ
    ಆದ್ದರಿಂದಲೇ ನಿನಗೆ ಕೇಡುಮಾಡುವ ದುಷ್ಟರಿಗೆ ನೀನು ಯಾವಾಗಲೂ ಹೆದರಿಕೊಂಡಿರುವೆ.
ಅವರು ನಿನ್ನನ್ನು ನಾಶಮಾಡಲು ಆಲೋಚಿಸಿದ್ದಾರೆ.
    ಈಗ ಅವರೆಲ್ಲಿದ್ದಾರೆ? ಅವರೆಲ್ಲಾ ಹೋಗಿಬಿಟ್ಟಿದ್ದಾರೆ.

14 ಸೆರೆಯಲ್ಲಿರುವವರು ಬೇಗನೆ ಬಿಡುಗಡೆ ಹೊಂದುವರು.
    ಅವರು ಸೆರೆಮನೆಯಲ್ಲಿ ಸತ್ತು ಕೊಳೆಯುವುದಿಲ್ಲ.
    ಅವರಿಗೆ ತಿನ್ನಲು ಬೇಕಾದಷ್ಟು ಊಟವಿರುವದು.

15 “ಯೆಹೋವನೆಂಬ ನಾನೇ ನಿಮ್ಮ ದೇವರು.
    ನಾನು ಸಾಗರವನ್ನು ಕದಡಿಸಿ ತೆರೆಗಳನ್ನು ಬರಮಾಡುತ್ತೇನೆ.”
(ಸರ್ವಶಕ್ತನು ಎಂಬುದೇ ನನ್ನ ಹೆಸರು.)

16 “ನನ್ನ ಸೇವಕನೇ, ನೀನು ಹೇಳತಕ್ಕ ಇಷ್ಟವಾದ ಮಾತುಗಳನ್ನು ನಿನ್ನ ಬಾಯಲ್ಲಿಡುತ್ತೇನೆ. ನಾನು ನನ್ನ ಕೈಗಳಿಂದ ನಿನ್ನನ್ನು ಮುಚ್ಚಿ ಕಾಪಾಡುವೆನು. ಹೊಸ ಭೂಮ್ಯಾಕಾಶಗಳನ್ನು ನಿರ್ಮಿಸಲು ನಾನು ನಿನ್ನನ್ನು ಉಪಯೋಗಿಸುತ್ತೇನೆ. ಚೀಯೋನಿಗೆ, ‘ನೀವು ನನ್ನ ಜನರು’ ಎಂದು ಹೇಳುವದಕ್ಕೆ ನಿನ್ನನ್ನು ಉಪಯೋಗಿಸುತ್ತೇನೆ.”

ದೇವರು ಇಸ್ರೇಲರನ್ನು ಶಿಕ್ಷಿಸಿದನು

17 ಜೆರುಸಲೇಮೇ, ಎಚ್ಚರಗೊಳ್ಳು; ಎದ್ದೇಳು;
ಯೆಹೋವನು ನಿನ್ನ ಮೇಲೆ ಬಹಳವಾಗಿ ಕೋಪಗೊಂಡು
    ನಿನ್ನನ್ನು ಶಿಕ್ಷಿಸಿದ್ದಾನೆ.
ಆ ಶಿಕ್ಷೆಯು ವಿಷತುಂಬಿದ ಪಾತ್ರೆಯಂತಿದೆ. ನೀನು ಅದನ್ನು ಕುಡಿಯಲೇಬೇಕಿತ್ತು.
    ಈಗ ನೀನು ಅದನ್ನು ಕುಡಿದಿರುವೆ.

18 ಜೆರುಸಲೇಮಿನಲ್ಲಿ ಅನೇಕ ಜನರಿದ್ದರೂ ಅವರಲ್ಲಿ ಯಾರೂ ಅವಳಿಗಾಗಿ ನಾಯಕರಾಗಲಿಲ್ಲ. ಆಕೆಯು ಅನೇಕ ಮಕ್ಕಳನ್ನು ಪಡೆದವಳಾಗಿದ್ದರೂ ಆಕೆಯನ್ನು ನಡೆಸಲು ಮಾರ್ಗದರ್ಶಕರು ಯಾರೂ ಆಗಲಿಲ್ಲ. 19 ಜೆರುಸಲೇಮಿಗೆ ತೊಂದರೆಗಳು ಎರಡು ಗುಂಪುಗಳಾಗಿ ಬಂದವು: ಲೂಟಿ ಮತ್ತು ಕೊರತೆ; ಕ್ಷಾಮ ಮತ್ತು ಖಡ್ಗ.

ನೀನು ಸಂಕಟ ಅನುಭವಿಸುವಾಗ ಯಾರೂ ನಿನಗೆ ಸಹಾಯ ಮಾಡಲಿಲ್ಲ. ಯಾರೂ ನಿನಗೆ ಕರುಣೆ ತೋರಿಸಲಿಲ್ಲ. 20 ನಿನ್ನ ಜನರು ಬಲಹೀನರಾದರು. ಅವರು ನೆಲದ ಮೇಲೆ ಬಿದ್ದು ಅಲ್ಲಿಯೇ ಮಲಗಿದರು. ಆ ಜನರು ರಸ್ತೆಯ ಮೂಲೆಮೂಲೆಗಳಲ್ಲಿ ಬಿದ್ದುಕೊಂಡಿರುತ್ತಾರೆ. ಅವರು ಬಲೆಯೊಳಗೆ ಸಿಕ್ಕಿಬಿದ್ದ ಜಿಂಕೆಯಂತಿರುವರು. ಯೆಹೋವನ ಕೋಪದಿಂದ ಇನ್ನೂ ಹೆಚ್ಚಿನ ಶಿಕ್ಷೆಯನ್ನು, ತಾಳಲಾರದಷ್ಟು ಶಿಕ್ಷೆಯನ್ನು ಅನುಭವಿಸಿದರು. ದೇವರು ಇನ್ನೂ ಹೆಚ್ಚಾಗಿ ಶಿಕ್ಷೆಕೊಡುವುದಾಗಿ ಹೇಳಿದಾಗ ಅವರು ಕಂಗಾಲಾದರು.

21 ಜೆರುಸಲೇಮೇ, ನನಗೆ ಕಿವಿಗೊಡು. ನೀನು ಅಮಲೇರಿದವಳಂತೆ ಶಕ್ತಿಹೀನಳಾಗಿರುವೆ. ನೀನು ಕುಡಿದು ಅಮಲೇರುವುದು ದ್ರಾಕ್ಷಾರಸದಿಂದಲ್ಲ, “ವಿಷದಿಂದಷ್ಟೇ.”

22 ನಿನ್ನ ದೇವರೂ ಒಡೆಯನೂ ಆಗಿರುವ ಯೆಹೋವನು ತನ್ನ ಜನರಿಗಾಗಿ ಯುದ್ಧ ಮಾಡುವನು. ಅವನು ನಿನಗೆ ಹೇಳುವುದೇನೆಂದರೆ, “ಇಗೋ, ನಾನು ನಿನ್ನಿಂದ ವಿಷದ ಪಾತ್ರೆಯನ್ನು (ಶಿಕ್ಷೆ) ತೆಗೆದುಬಿಡುತ್ತೇನೆ. ಇನ್ನು ಮುಂದೆ ನನ್ನ ಸಿಟ್ಟಿನಿಂದ ನೀನು ಶಿಕ್ಷಿಸಲ್ಪಡುವದಿಲ್ಲ. 23 ಈಗ ನನ್ನ ಕೋಪದ ದೆಸೆಯಿಂದ ನಿನಗೆ ಹಾನಿ ಮಾಡಿದವರನ್ನು ಶಿಕ್ಷಿಸುವೆನು. ಅವರು ನಿನ್ನನ್ನು ಕೊಲ್ಲಲು ಪ್ರಯತ್ನಿಸಿದರು. ‘ನಮ್ಮ ಮುಂದೆ ಸಾಷ್ಟಾಂಗಬೀಳು. ಆಗ ನಿನ್ನ ಮೇಲೆ ನಾವು ನಡೆಯುವೆವು’ ಎಂದು ಹೇಳಿದರು. ಅವರಿಗೆ ಅಡ್ಡಬೀಳಲು ನಿನ್ನನ್ನು ಬಲಾತ್ಕರಿಸಿದರು. ಆ ಬಳಿಕ ಅವರು ನೀನು ಮಣ್ಣಿನ ಧೂಳೋ ಎಂಬಂತೆ ನಿನ್ನ ಬೆನ್ನಿನ ಮೇಲೆ ನಡೆದಾಡಿದರು. ನೀನು ಅವರಿಗೆ ನಡೆಯಲು ಬೀದಿಯಾದಿ.”

ಇಸ್ರೇಲ್ ರಕ್ಷಿಸಲ್ಪಡುವದು

52 ಚೀಯೋನೇ, ಎಚ್ಚರಗೊಳ್ಳು, ಎದ್ದೇಳು!
    ನಿನ್ನ ಉಡುಪನ್ನು ಹಾಕಿಕೊ; ನಿನ್ನ ಪ್ರತಾಪವನ್ನು ಧರಿಸಿಕೊ.
ಪರಿಶುದ್ಧ ಜೆರುಸಲೇಮೇ, ಎದ್ದುನಿಲ್ಲು.
    ಸುನ್ನತಿಯಿಲ್ಲದವರೂ ಅಶುದ್ಧರೂ ನಿನ್ನಲ್ಲಿಗೆ ಮತ್ತೇ ಪ್ರವೇಶಿಸರು.
ನಿನ್ನ ಧೂಳನ್ನು ಝಾಡಿಸು.
ನಿನ್ನ ಮನೋಹರವಾದ ವಸ್ತ್ರಗಳನ್ನು ಧರಿಸಿಕೊ.
    ಚೀಯೋನಿನ ಕುಮಾರ್ತೆಯಾದ ಜೆರುಸಲೇಮೇ, ನೀನು ಒಮ್ಮೆ ಸೆರೆಯಾಳಾಗಿದ್ದೆ.
    ಈಗ ನೀನು ನಿನ್ನ ಕುತ್ತಿಗೆಗೆ ಬಂಧಿಸಲ್ಪಟ್ಟ ಸಂಕೋಲೆಗಳಿಂದ ಬಿಡಿಸಿಕೊ.
ಯೆಹೋವನು ಹೇಳುವುದೇನೆಂದರೆ:
    “ನಾನು ನಿನ್ನನ್ನು ಮಾರಿದ್ದು ಹಣಕ್ಕಾಗಿಯಲ್ಲ;
    ಆದ್ದರಿಂದ ನಾನು ನಿನ್ನನ್ನು ಹಣ ಕೊಡದೆ ಬಿಡುಗಡೆ ಮಾಡುವೆನು.”

ನನ್ನ ಒಡೆಯನಾದ ಯೆಹೋವನು ಹೇಳುವುದೇನೆಂದರೆ: “ನನ್ನ ಜನರು ಮೊದಲು ಈಜಿಪ್ಟಿನಲ್ಲಿ ನೆಲೆಸಲು ಹೋಗಿ, ನಂತರ ಅಲ್ಲಿ ಅವರು ದಾಸರಾದರು. ಆ ಬಳಿಕ ಅಶ್ಶೂರವು ಅವರನ್ನು ಗುಲಾಮರನ್ನಾಗಿ ಮಾಡಿತು. ಈಗ ನೋಡು, ಸಂಭವಿಸಿದ್ದನ್ನು ಗಮನಿಸು. ಇನ್ನೊಂದು ಜನಾಂಗವು ಅವರನ್ನು ಗುಲಾಮರನ್ನಾಗಿ ಮಾಡಿತು. ಈ ದೇಶವು ನನ್ನ ಜನರನ್ನು ತೆಗೆದುಕೊಂಡು ಹೋಗಲು ಹಣ ಕೊಡಲಿಲ್ಲ. ಈ ದೇಶವು ನನ್ನ ಜನರ ಮೇಲೆ ದಬ್ಬಾಳಿಕೆ ನಡಿಸಿ ನಕ್ಕಿತ್ತು. ಈಗ ಜನರು ನನ್ನನ್ನೂ ನನ್ನ ಹೆಸರನ್ನೂ ಯಾವಾಗಲೂ ಗೇಲಿ ಮಾಡುತ್ತಾರೆ.”

ಯೆಹೋವನು ಹೇಳುವುದೇನೆಂದರೆ, “ಜನರು ನನ್ನನ್ನು ತಿಳಿದುಕೊಳ್ಳಲೆಂದು ಹೀಗಾಯಿತು. ನಾನು ಯಾರೆಂದು ನನ್ನ ಜನರಿಗೆ ಗೊತ್ತಾಗುವದು. ನನ್ನ ಜನರಿಗೆ ನನ್ನ ಹೆಸರಿನ ಪರಿಚಯವಾಗುವದು. ‘ನಾನೇ’ ಎಂಬಾತನಾದ ನಾನೇ ಅವರ ಸಂಗಡ ಮಾತನಾಡುತ್ತಿದ್ದೇನೆ ಎಂದು ಅವರಿಗೆ ಗೊತ್ತಾಗುವದು.”

ಒಬ್ಬ ಸಂದೇಶವಾಹಕನು ಬೆಟ್ಟದ ಮೇಲಿನಿಂದ ಒಳ್ಳೆಯ ಸಮಾಚಾರವನ್ನು ತರುವದು ಎಷ್ಟೋ ಅಂದವಾಗಿದೆ. ಸಂದೇಶಕಾರನು, “ನಮಗೆ ಸಮಾಧಾನವಿದೆ, ನಾವು ರಕ್ಷಿಸಲ್ಪಟ್ಟಿದ್ದೇವೆ. ಚೀಯೋನೇ, ನಿನ್ನ ದೇವರು ಅರಸನಾಗಿದ್ದಾನೆ!” ಎಂಬ ಸಂದೇಶವನ್ನು ಕೇಳುವದು ಎಷ್ಟೋ ಸಂತೋಷ ಕೊಡುವದಾಗಿದೆ.

ಪಟ್ಟಣವನ್ನು ಕಾಯುವವರು ಸಂತೋಷದಿಂದ ಹರ್ಷಧ್ವನಿ ಮಾಡುತ್ತಾರೆ.
    ಒಟ್ಟಾಗಿ ಸಂತಸಪಡುತ್ತಿದ್ದಾರೆ.
ಯಾಕೆಂದರೆ ಯೆಹೋವನು ಚೀಯೋನಿಗೆ ಹಿಂದಿರುಗುವದನ್ನು ಪ್ರತಿಯೊಬ್ಬನು ನೋಡುವನು.

ಜೆರುಸಲೇಮೇ, ನಿನ್ನ ಕೆಡವಲ್ಪಟ್ಟ ಕಟ್ಟಡಗಳು ಮತ್ತೆ ಸಂತೋಷಿಸುವವು.
ನೀವೆಲ್ಲರೂ ಒಟ್ಟಾಗಿ ಹರ್ಷಿಸುವಿರಿ.
    ಯಾಕೆಂದರೆ ಯೆಹೋವನು ಜೆರುಸಲೇಮನ್ನು ಬಿಡಿಸಿ ತನ್ನ ಜನರನ್ನು ಸಂತೈಸುವನು.
10 ಯೆಹೋವನು ತನ್ನ ಪರಿಶುದ್ಧ ಸಾಮರ್ಥ್ಯವನ್ನು ಎಲ್ಲಾ ಜನಾಂಗಗಳಿಗೆ ಪ್ರದರ್ಶಿಸುವನು.
    ಯೆಹೋವನು ತನ್ನ ಜನರನ್ನು ರಕ್ಷಿಸುವದನ್ನು ದೂರದೇಶದವರು ನೋಡುವರು.

11 ನೀವು ಬಾಬಿಲೋನಿನಿಂದ ಹೊರಟುಹೋಗಬೇಕು;
    ನೀವು ಆ ಸ್ಥಳವನ್ನು ಬಿಟ್ಟುಹೋಗಬೇಕು.
ಯಾಜಕರೇ, ಆರಾಧನೆಗೆ ಬೇಕಾದ ಸಾಮಗ್ರಿಗಳನ್ನು ಹೊತ್ತುಕೊಳ್ಳಿರಿ.
    ನಿಮ್ಮನ್ನು ಶುದ್ಧಿ ಮಾಡಿಕೊಳ್ಳಿರಿ;
    ಅಶುದ್ಧವಾದ ಯಾವುದನ್ನೂ ಮುಟ್ಟದಿರಿ.
12 ನೀವು ಬಾಬಿಲೋನಿನಿಂದ ಹೊರಗೆ ಬರುವಿರಿ.
    ತ್ವರೆಪಟ್ಟು ಬರುವಂತೆ ಅವರು ಬಲವಂತ ಮಾಡುವದಿಲ್ಲ.
    ನೀವು ಓಡಿ ಹೋಗುವಂತೆ ಅವರು ಒತ್ತಾಯಪಡಿಸುವದಿಲ್ಲ.
    ನೀವು ಹೊರಗೆ ನಡೆಯುವಿರಿ.
ಯೆಹೋವನು ನಿಮ್ಮೊಂದಿಗೆ ನಡೆಯುವನು.
    ಯೆಹೋವನು ನಿಮ್ಮ ಮುಂದೆ ಇರುವನು.
    ಇಸ್ರೇಲರ ದೇವರು ನಿಮ್ಮ ಹಿಂದೆಯೂ ಇರುವನು.

ದೇವಸೇವಕನ ಸಂಕಟ

13 ಯೆಹೋವನು ಹೇಳುವುದೇನೆಂದರೆ, “ನನ್ನ ಸೇವಕನನ್ನು ದೃಷ್ಟಿಸಿರಿ. ಆತನು ಯಶಸ್ವಿಯಾಗುವನು. ಅವನು ಬಹಳ ಮುಖ್ಯವಾದವನಾಗಿರುವನು. ಮುಂದಿನ ದಿವಸಗಳಲ್ಲಿ ಜನರು ಆತನನ್ನು ಸನ್ಮಾನಿಸಿ ಗೌರವಿಸುವರು. 14 ಆದರೆ ನನ್ನ ಜನರು ನನ್ನ ಸೇವಕನನ್ನು ನೋಡಿದಾಗ ಆಶ್ಚರ್ಯಗೊಂಡರು. ಆತನು ಮನುಷ್ಯನೆಂಬ ಗುರುತೇ ಅವರಿಗೆ ಸಿಕ್ಕಲಿಲ್ಲ. ಆತನ ರೂಪವು ವಿಕಾರವಾಗುವಷ್ಟರ ಮಟ್ಟಿಗೆ ಆತನು ಗಾಯಗೊಂಡಿದ್ದನು. 15 ಅನೇಕ ಜನಾಂಗಗಳವರು ಆತನನ್ನು ಕಂಡು ಆಶ್ಚರ್ಯಪಡುವರು. ಅರಸರು ದಿಗ್ಭ್ರಮೆಯಿಂದ ಆತನನ್ನು ದೃಷ್ಟಿಸಿ ನೋಡುವರು. ಅವರು ನನ್ನ ಸೇವಕನ ಬಗ್ಗೆ ಕೇಳಲಿಲ್ಲ. ಆತನಿಗೆ ಸಂಭವಿಸಿದ್ದನ್ನೇ ನೋಡಿದರು. ಅವರು ಆತನ ವಿಚಾರ ಕೇಳದಿದ್ದರೂ ಅವರಿಗೆ ತಿಳಿದುಬಂತು.”

1 ಥೆಸಲೋನಿಕದವರಿಗೆ 5

ಪ್ರಭುವು ಪ್ರತ್ಯಕ್ಷನಾಗುವಾಗ ಸಿದ್ಧರಾಗಿರಿ

ಸಹೋದರ ಸಹೋದರಿಯರೇ, ಈಗ ನಾವು ಕಾಲ ಮತ್ತು ದಿನಗಳ ಬಗ್ಗೆ ನಿಮಗೆ ಬರೆಯುವ ಅವಶ್ಯವಿಲ್ಲ. ಪ್ರಭುವು ಪ್ರತ್ಯಕ್ಷನಾಗುವ ದಿನವು ರಾತ್ರಿಕಾಲದಲ್ಲಿ ಕಳ್ಳನು ಬರುವಂತೆ ಇದ್ದಕ್ಕಿದ್ದಂತೆ ಬರುತ್ತದೆ ಎಂಬುದು ನಿಮಗೆಲ್ಲ ಚೆನ್ನಾಗಿ ತಿಳಿದಿದೆ. “ನಮಗೆ ಶಾಂತಿಯಿದೆ. ನಾವು ಸುರಕ್ಷಿತರಾಗಿದ್ದೇವೆ” ಎಂದು ಜನರು ಹೇಳುವಾಗಲೇ ಅವರಿಗೆ ವಿನಾಶವು ಗರ್ಭಿಣಿಗೆ ಪ್ರಸವವೇದನೆ ಉಂಟಾಗುವಂತೆ ಬರುತ್ತದೆ. ಆ ಜನರು ತಪ್ಪಿಸಿಕೊಳ್ಳಲಾಗುವುದಿಲ್ಲ.

ಆದರೆ ಸಹೋದರ ಸಹೋದರಿಯರೇ, ನೀವು ಕತ್ತಲಿನಲ್ಲಿ (ಪಾಪದಲ್ಲಿ) ವಾಸಿಸುತ್ತಿಲ್ಲ. ಆ ದಿನವು ನಿಮಗೆ ಕಳ್ಳನಂತೆ ಇದ್ದಕ್ಕಿದ್ದಂತೆ ಬರುವುದಿಲ್ಲ. ನೀವೆಲ್ಲರೂ ಬೆಳಕಿಗೆ ಸೇರಿದವರು ಮತ್ತು ಹಗಲಿಗೆ ಸೇರಿದವರು. ನಾವು ರಾತ್ರಿಗಾಗಲಿ ಅಥವಾ ಕತ್ತಲೆಗಾಗಲಿ ಸೇರಿದವರಲ್ಲ. ಆದುದರಿಂದ ನಾವು ಇತರ ಜನರಂತಿರಬಾರದು. ನಾವು ನಿದ್ರೆ ಮಾಡುವುದೇ ಬೇಡ. ನಾವು ಎಚ್ಚರದಿಂದ ಇದ್ದು, ನಮ್ಮನ್ನು ಹತೋಟಿಯಲ್ಲಿ ಇಟ್ಟುಕೊಂಡಿರಬೇಕು. ನಿದ್ದೆ ಮಾಡುವ ಜನರು ರಾತ್ರಿಯಲ್ಲಿ ನಿದ್ರಿಸುತ್ತಾರೆ. ಕುಡಿದು ಅಮಲೇರುವವರು ರಾತ್ರಿಯಲ್ಲಿ ಕುಡಿದು ಅಮಲೇರುತ್ತಾರೆ. ಆದರೆ ನಾವು ಹಗಲಿಗೆ ಸೇರಿದವರಾದ್ದರಿಂದ ನಮ್ಮನ್ನು ಹತೋಟಿಯಲ್ಲಿ ಇಟ್ಟುಕೊಳ್ಳಬೇಕು. ನಾವು ನಮ್ಮನ್ನು ರಕ್ಷಿಸಿಕೊಳ್ಳುವುದಕ್ಕಾಗಿ ಪ್ರೀತಿಯನ್ನೂ ನಂಬಿಕೆಯನ್ನೂ ಧರಿಸಿಕೊಳ್ಳಬೇಕು. ರಕ್ಷಣೆಯ ನಿರೀಕ್ಷೆಯು ನಮಗೆ ಶಿರಸ್ತ್ರಾಣವಾಗಿರಬೇಕು.

ದೇವರು ನಮ್ಮನ್ನು ಆರಿಸಿಕೊಂಡದ್ದು ತನ್ನ ಕೋಪಕ್ಕೆ ಗುರಿಯಾಗಲಿ ಎಂದಲ್ಲ. ಪ್ರಭುವಾದ ಯೇಸು ಕ್ರಿಸ್ತನ ಮೂಲಕ ನಮಗೆ ರಕ್ಷಣೆಯಾಗಲೆಂದೇ ದೇವರು ನಮ್ಮನ್ನು ಆರಿಸಿಕೊಂಡನು. 10 ನಾವು ತನ್ನೊಂದಿಗೆ ಜೀವಿಸಲೆಂದು ಯೇಸು ನಮಗಾಗಿ ಸತ್ತನು. ಯೇಸು ಪ್ರತ್ಯಕ್ಷನಾದಾಗ, ನಾವು ಜೀವಿಸುತ್ತಿರುತ್ತೇವೋ ಇಲ್ಲವೆ ಸತ್ತಿರುತ್ತೇವೋ ಎಂಬುದು ಮುಖ್ಯವಲ್ಲ. 11 ಆದ್ದರಿಂದ ಒಬ್ಬರನ್ನೊಬ್ಬರು ಸಂತೈಸಿ ಬಲಪಡಿಸಿರಿ. ಈಗ ನೀವು ಮಾಡುತ್ತಿರುವುದು ಅದನ್ನೇ.

ಕೊನೆಯ ಮಾತುಗಳು ಮತ್ತು ವಂದನೆಗಳು

12 ಸಹೋದರ ಸಹೋದರಿಯರೇ, ಈಗ ನಿಮ್ಮಲ್ಲಿ ಪ್ರಯಾಸದಿಂದ ಕೆಲಸ ಮಾಡುತ್ತಾ ನಿಮ್ಮನ್ನು ಪ್ರಭುವಿನ ಮಾರ್ಗದಲ್ಲಿ ನಡೆಸುವವರನ್ನು ಮತ್ತು ಉಪದೇಶಿಸುವವರನ್ನು ಗೌರವಿಸಬೇಕೆಂದು ನಿಮ್ಮನ್ನು ಕೇಳಿಕೊಳ್ಳುತ್ತೇವೆ. 13 ಅವರು ನಿಮ್ಮಲ್ಲಿ ಮಾಡುವ ಸೇವೆಗಾಗಿ ಅವರನ್ನು ವಿಶೇಷವಾದ ಪ್ರೀತಿಯಿಂದ ಗೌರವಿಸಿರಿ.

ನೀವೆಲ್ಲರೂ ಸಮಾಧಾನದಿಂದ ಜೀವಿಸಿರಿ. 14 ಸಹೋದರ ಸಹೋದರಿಯರೇ, ಕೆಲಸ ಮಾಡದೆ ಇರುವ ಜನರಿಗೆ ಎಚ್ಚರಿಕೆ ನೀಡಬೇಕೆಂದು ನಾವು ನಿಮ್ಮನ್ನು ಕೇಳಿಕೊಳ್ಳುತ್ತೇವೆ. ಹೆದರಿಕೊಂಡಿರುವವರನ್ನು ಪ್ರೋತ್ಸಾಹಿಸಿರಿ; ಬಲಹೀನರಿಗೆ ಸಹಾಯ ಮಾಡಿ; ಎಲ್ಲರ ಜೊತೆಯಲ್ಲಿ ತಾಳ್ಮೆಯಿಂದಿರಿ; 15 ಯಾರೂ ಅಪಕಾರಕ್ಕೆ ಅಪಕಾರ ಮಾಡದಂತೆ ನೋಡಿಕೊಳ್ಳಿರಿ; ಒಬ್ಬರಿಗೊಬ್ಬರಿಗೆ ಮತ್ತು ಎಲ್ಲರಿಗೆ ಯಾವಾಗಲೂ ಒಳ್ಳೆಯದನ್ನು ಮಾಡಲು ಪ್ರಯತ್ನಿಸಿರಿ.

16 ಯಾವಾಗಲೂ ಸಂತೋಷದಿಂದಿರಿ. 17 ಎಡೆಬಿಡದೆ ಪ್ರಾರ್ಥಿಸಿರಿ. 18 ದೇವರಿಗೆ ಎಲ್ಲಾ ಕಾಲದಲ್ಲಿಯೂ ಕೃತಜ್ಞತೆಗಳನ್ನು ಸಲ್ಲಿಸಿರಿ. ಇದುವೇ ನಿಮ್ಮ ವಿಷಯವಾಗಿ ಯೇಸು ಕ್ರಿಸ್ತನಲ್ಲಿ ತೋರಿಬಂದ ದೇವರ ಚಿತ್ತ.

19 ಪವಿತ್ರಾತ್ಮನ ಕಾರ್ಯವನ್ನು ನಂದಿಸಬೇಡಿ. 20 ಪ್ರವಾದನೆಯನ್ನು ಹೀನೈಸಬೇಡಿ. 21 ಎಲ್ಲವನ್ನೂ ಪರಿಶೋಧಿಸಿ, ಒಳ್ಳೆಯದನ್ನು ಭದ್ರವಾಗಿ ಹಿಡಿದುಕೊಳ್ಳಿರಿ. 22 ಎಲ್ಲಾ ವಿಧವಾದ ಕೆಟ್ಟತನದಿಂದ ದೂರವಾಗಿರಿ.

23 ಶಾಂತಿದಾಯಕನಾದ ದೇವರು ತಾನೇ ನಿಮ್ಮನ್ನು ಸಂಪೂರ್ಣವಾಗಿ ಪರಿಶುದ್ಧಗೊಳಿಸಲೆಂದು ಪ್ರಾರ್ಥಿಸುತ್ತೇವೆ. ಪ್ರಭುವಾದ ಯೇಸು ಕ್ರಿಸ್ತನು ಪ್ರತ್ಯಕ್ಷನಾದಾಗ ನಿಮ್ಮ ಆತ್ಮ, ಶರೀರ, ಪ್ರಾಣಗಳು ದೋಷರಹಿತವಾಗಿರಲೆಂದು ಪ್ರಾರ್ಥಿಸುತ್ತೇವೆ. 24 ನಿಮ್ಮನ್ನು ಕರೆಯುವಾತನೇ ಅದನ್ನು ನಿಮಗಾಗಿ ಮಾಡುತ್ತಾನೆ. ಆತನು ನಂಬಿಗಸ್ತನು.

25 ಸಹೋದರ ಸಹೋದರಿಯರೇ, ದಯಮಾಡಿ ನಮಗಾಗಿ ಪ್ರಾರ್ಥಿಸಿರಿ. 26 ಸಹೋದರ ಸಹೋದರಿಯರನ್ನು ಸಂಧಿಸಿದಾಗ ಪವಿತ್ರವಾದ ಮುದ್ದಿಟ್ಟು ವಂದಿಸಿರಿ. 27 ಈ ಪತ್ರವನ್ನು ಸಹೋದರ ಸಹೋದರಿಯರಿಗೆಲ್ಲಾ ಓದಿ ತಿಳಿಸಬೇಕೆಂದು ನಾನು ನಿಮಗೆ ಪ್ರಭುವಿನ ಅಧಿಕಾರದಿಂದ ಹೇಳುತ್ತಿದ್ದೇನೆ. 28 ಪ್ರಭು ಯೇಸು ಕ್ರಿಸ್ತನ ಕೃಪೆಯು ನಿಮ್ಮೊಡನೆ ಇರಲಿ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International