Print Page Options
Previous Prev Day Next DayNext

Old/New Testament

Each day includes a passage from both the Old Testament and New Testament.
Duration: 365 days
Kannada Holy Bible: Easy-to-Read Version (KERV)
Version
ಯೆಶಾಯ 43-44

ದೇವರು ಯಾವಾಗಲೂ ತನ್ನ ಜನರೊಂದಿಗಿರುವನು

43 ಯಾಕೋಬೇ, ಯೆಹೋವನು ನಿನ್ನನ್ನು ನಿರ್ಮಿಸಿದನು. ಇಸ್ರೇಲೇ, ಯೆಹೋವನು ನಿನ್ನನ್ನು ನಿರ್ಮಿಸಿದನು. ಈಗ ಆತನು ಹೇಳುವುದೇನೆಂದರೆ: “ಭಯಪಡಬೇಡ. ನಾನೇ ನಿನ್ನನ್ನು ರಕ್ಷಿಸಿದ್ದೇನೆ. ನಾನು ನಿನಗೆ ಹೆಸರಿಟ್ಟೆನು. ನೀನು ನನ್ನವನೇ. ನಿನ್ನ ಕಷ್ಟಕಾಲದಲ್ಲಿ ನಾನು ನಿನ್ನೊಂದಿಗಿರುವೆನು. ನೀನು ಜಲರಾಶಿಯನ್ನು ಹಾದುಹೋಗುವಾಗ ನಾನೇ ನಿನ್ನೊಂದಿಗಿರುವೆ. ನೀನು ನದಿಗಳನ್ನು ದಾಟುವಾಗ ಅಪಾಯಕ್ಕೆ ಗುರಿಯಾಗದಿರುವೆ. ಬೆಂಕಿಯೊಳಗಿಂದ ನಡೆಯುವಾಗ ನಿನಗೆ ಹಾನಿಯಾಗದು. ಯಾಕೆಂದರೆ ಯೆಹೋವನಾದ ನಾನೇ ನಿನ್ನ ದೇವರು. ಇಸ್ರೇಲಿನ ಪರಿಶುದ್ಧನಾದ ನಾನೇ ನಿನ್ನ ರಕ್ಷಕನು. ಈಜಿಪ್ಟನ್ನು ನಿನ್ನ ವಿಮೋಚನೆಗೆ ಈಡುಮಾಡಿದ್ದೇನೆ; ನಿನ್ನನ್ನು ನನ್ನವನನ್ನಾಗಿ ಮಾಡಿಕೊಳ್ಳಲು ನಿನಗೆ ಕೂಷ್ ಮತ್ತು ಸೆಬಾ ಸೀಮೆಗಳನ್ನು ಕೊಟ್ಟೆನು. ನೀನು ನನಗೆ ಅಮೂಲ್ಯನಾದುದರಿಂದ ನಾನು ನಿನ್ನನ್ನು ಗೌರವಿಸಿ ಪ್ರೀತಿಸುವೆನು. ನೀನು ವಾಸಿಸುವಂತೆ ನಾನು ನಿನಗೆ ಎಲ್ಲಾ ಜನರನ್ನು ಮತ್ತು ಜನಾಂಗಗಳನ್ನು ಕೊಡುವೆನು.

“ಆದ್ದರಿಂದ ಭಯಪಡಬೇಡ, ನಾನೇ ನಿನ್ನೊಂದಿಗಿದ್ದೇನೆ. ನಾನು ನಿನ್ನ ಮಕ್ಕಳನ್ನು ಒಟ್ಟುಗೂಡಿಸಿ ನಿನ್ನ ಬಳಿಗೆ ಕರೆತರುವೆನು. ನಾನು ಪೂರ್ವಪಶ್ಚಿಮ ದಿಕ್ಕುಗಳಿಂದ ಅವರನ್ನು ಒಟ್ಟುಗೂಡಿಸುವೆನು. ನಾನು ಉತ್ತರಕ್ಕೆ ‘ನನ್ನ ಜನರನ್ನು ಬಿಟ್ಟುಕೊಡು’ ಎಂದು ಹೇಳುವೆನು. ದಕ್ಷಿಣಕ್ಕೆ, ‘ನನ್ನ ಜನರನ್ನು ಸೆರೆಮನೆಯಲ್ಲಿರಿಸಬೇಡ’ ಎಂದು ಹೇಳುವೆನು. ಬಹುದೂರ ದೇಶಗಳಿಂದ ನನ್ನ ಮಕ್ಕಳನ್ನು ನನ್ನ ಬಳಿಗೆ ಕರೆದುಕೊಂಡು ಬಾ. ನನ್ನ ಹೆಸರನ್ನು ಹೊಂದಿರುವ ನನ್ನ ಜನರನ್ನೆಲ್ಲಾ ನನ್ನ ಬಳಿಗೆ ಕರೆದುಕೊಂಡು ಬಾ. ನನಗಾಗಿಯೇ ನಿರ್ಮಿಸಿದ ನನ್ನ ಜನರನ್ನು ನನ್ನ ಬಳಿಗೆ ಕರೆದುಕೊಂಡು ಬಾ. ಅವರನ್ನು ನಿರ್ಮಿಸಿದಾತನು ನಾನೇ, ಅವರು ನನ್ನವರೇ!

“ಕಣ್ಣಿದ್ದೂ ಕುರುಡರಂತಿರುವ ಜನರನ್ನು ನನ್ನ ಬಳಿಗೆ ಕರೆದುಕೊಂಡು ಬನ್ನಿರಿ. ಕಿವಿಯಿದ್ದೂ ಕಿವುಡರಂತಿರುವ ಜನರನ್ನು ನನ್ನ ಬಳಿಗೆ ಕರೆದುಕೊಂಡು ಬನ್ನಿರಿ. ಎಲ್ಲಾ ಜನಾಂಗದವರೂ ಎಲ್ಲಾ ಜನರೂ ಒಟ್ಟುಗೂಡಬೇಕು. ಅವರ ಸುಳ್ಳುದೇವರಲ್ಲಿ ಒಬ್ಬನು ಆದಿಯಲ್ಲಿ ಸಂಭವಿಸಿದ್ದನ್ನು ಹೇಳುವದಾಗಿದ್ದರೆ ತನ್ನ ಸಾಕ್ಷಿಗಳನ್ನು ಕರೆದು ತರಲಿ. ಆ ಸಾಕ್ಷಿಗಳು ಸತ್ಯವನ್ನಾಡಲಿ. ಆಗ ಅವರು ಸತ್ಯವಂತರೋ ಇಲ್ಲವೋ ಎಂದು ಗೊತ್ತಾಗುವದು.”

10 ಯೆಹೋವನು ಹೇಳುವುದೇನೆಂದರೆ: “ನೀವು ನನ್ನ ಸಾಕ್ಷಿಗಳಾಗಿದ್ದೀರಿ. ನಾನು ಆರಿಸಿಕೊಂಡ ಸೇವಕನು ನೀನೇ. ಜನರು ನನ್ನನ್ನು ನಂಬುವಂತೆ ನಾನು ನಿಮ್ಮನ್ನು ಆರಿಸಿಕೊಂಡೆನು. ನಾನು ನಿಜ ದೇವರು ಎಂದು ನೀವು ತಿಳಿಯಬೇಕೆಂದು ನಿಮ್ಮನ್ನು ಆರಿಸಿಕೊಂಡೆನು. ನಾನೇ ನಿಜವಾದ ದೇವರು. ನನಗಿಂತ ಮೊದಲು ಯಾರೂ ಇರಲಿಲ್ಲ, ಇನ್ನು ಮುಂದೆಯೂ ನನ್ನ ಹೊರತು ಯಾವ ದೇವರೂ ಇರುವದಿಲ್ಲ. 11 ನಾನೇ, ನಾನೇ ಯೆಹೋವನು! ನನ್ನ ಹೊರತು ಬೇರೆ ರಕ್ಷಕನಿಲ್ಲ! 12 ನಾನೇ ನಿಮ್ಮೊಂದಿಗೆ ಮಾತನಾಡಿದೆನು. ನಾನೇ ನಿಮ್ಮನ್ನು ರಕ್ಷಿಸಿದೆನು. ನಾನು ಆ ವಿಷಯಗಳನ್ನು ನಿಮಗೆ ತಿಳಿಸಿದೆನು. ನಿಮ್ಮೊಂದಿಗೆ ಇದ್ದಾತನು ಅಪರಿಚಿತನಾಗಿರಲಿಲ್ಲ. ನೀವು ನನ್ನ ಸಾಕ್ಷಿಗಳಾಗಿದ್ದೀರಿ. ನಾನೇ ನಿಮ್ಮ ದೇವರು.” (ಯೆಹೋವನು ತಾನೇ ಈ ವಿಷಯಗಳನ್ನು ಹೇಳಿದ್ದಾನೆ.) 13 “ನಾನು ಯಾವಾಗಲೂ ದೇವರಾಗಿದ್ದೇನೆ. ನನ್ನ ಕಾರ್ಯವನ್ನು ತಡೆಯಲು ಯಾರಿಗೆ ಸಾಧ್ಯ? ನನ್ನ ಬಲವಾದ ಹಸ್ತದಿಂದ ಯಾರು ಬಿಡಿಸಬಲ್ಲರು?”

14 ಇಸ್ರೇಲರ ಪರಿಶುದ್ಧನೇ, ನಿಮ್ಮನ್ನು ರಕ್ಷಿಸುವಾತನು. ಯೆಹೋವನು ಹೇಳುವುದೇನೆಂದರೆ: “ನಾನು ನಿಮಗೋಸ್ಕರ ಬಾಬಿಲೋನಿಗೆ ಸೈನ್ಯವನ್ನು ಕಳುಹಿಸುವೆನು. ಎಷ್ಟೋ ಮಂದಿ ಸೆರೆಹಿಡಿಯಲ್ಪಡುವರು. ಕಲ್ದೀಯ ಜನರು ಅವರ ಹಡಗುಗಳಿಂದಲೇ ಒಯ್ಯಲ್ಪಡುವರು. (ಅವರು ಆ ಹಡಗುಗಳ ಬಗ್ಗೆ ಬಹು ಹೆಮ್ಮೆಯಿಂದಿದ್ದಾರೆ.) 15 ನಾನೇ ನಿಮ್ಮ ಪರಿಶುದ್ಧನಾದ ಯೆಹೋವನು. ನಾನು ಇಸ್ರೇಲನ್ನು ಸೃಷ್ಟಿಸಿದೆನು; ನಾನೇ ನಿಮ್ಮ ಅರಸನು.”

ದೇವರು ತನ್ನ ಜನರಾದ ಇಸ್ರೇಲನ್ನು ಮತ್ತೆ ರಕ್ಷಿಸುವನು

16 ಯೆಹೋವನು ಸಮುದ್ರದ ಮೂಲಕ ಮಾರ್ಗವನ್ನು ನಿರ್ಮಿಸುವನು. ಅಲ್ಲೋಲಕಲ್ಲೋಲವಾಗಿರುವ ನೀರಿನ ಮೂಲಕ ತನ್ನ ಜನರಿಗೆ ಮಾರ್ಗವನ್ನು ಮಾಡುವನು. ಯೆಹೋವನು ಹೇಳುವುದೇನೆಂದರೆ, 17 “ನನ್ನ ವಿರುದ್ಧವಾಗಿ ಯುದ್ಧಮಾಡುವ ಅಶ್ವದಳ, ರಥಬಲ ಮತ್ತು ಭೂದಳವು ಸೋತುಹೋಗುವವು. ಮತ್ತೆ ಅವರು ಏಳುವದೇ ಇಲ್ಲ. ಅವರೆಲ್ಲರೂ ನಾಶವಾಗುವರು. ಮೇಣದ ಬತ್ತಿಯ ಬೆಂಕಿಯು ಆರಿಸಲ್ಪಡುವಂತೆಯೇ ಅವರು ನಂದಿಸಲ್ಪಡುವರು. 18 ಆದ್ದರಿಂದ ಆದಿಯಲ್ಲಿ ನಡೆದ ಸಂಗತಿಗಳನ್ನು ಜ್ಞಾಪಕಮಾಡಿಕೊಳ್ಳಬೇಡ. ಬಹಳ ಕಾಲದ ಹಿಂದೆ ನಡೆದ ಸಂಗತಿಗಳನ್ನು ನೆನೆಸಬೇಡ. 19 ಯಾಕೆಂದರೆ, ನಾನು ಹೊಸ ಕಾರ್ಯಗಳನ್ನು ಮಾಡುವೆನು. ನೀವು ಹೊಸ ಸಸಿಯ ರೀತಿಯಲ್ಲಿ ಬೆಳೆಯುವಿರಿ. ಇದು ಸತ್ಯವೆಂದು ನಿಮಗೆ ಗೊತ್ತಿದೆ. ನಾನು ಮರುಭೂಮಿಯಲ್ಲಿ ಖಂಡಿತವಾಗಿಯೂ ರಸ್ತೆಯನ್ನು ಮಾಡುತ್ತೇನೆ; ಒಣನೆಲದಲ್ಲಿ ನದಿ ಹರಿಯುವಂತೆ ಮಾಡುತ್ತೇನೆ. 20 ವನ್ಯಜೀವಿಗಳೂ ನನಗೆ ಕೃತಜ್ಞತೆಯಿಂದ ಇರುತ್ತವೆ. ದೊಡ್ಡ ಗಾತ್ರದ ಪ್ರಾಣಿಗಳೂ ಪಕ್ಷಿಗಳೂ ನನ್ನನ್ನು ಗೌರವಿಸುವವು. ನಾನು ಮರುಭೂಮಿಯಲ್ಲಿ ನೀರನ್ನು ಬರಮಾಡುವಾಗ ಅವು ನನ್ನನ್ನು ಗೌರವಿಸುವವು. ನಾನು ಆರಿಸಿಕೊಂಡ ನನ್ನ ಜನರಿಗೆ ನೀರನ್ನು ಕೊಡುವುದಕ್ಕಾಗಿ ನಾನು ಇದನ್ನು ಮಾಡುವೆನು. 21 ನಾನು ನಿರ್ಮಿಸಿದ ಈ ಜನರು ನನಗೆ ಸ್ತೋತ್ರಗಾನ ಹಾಡುವರು.

22 “ಯಾಕೋಬೇ, ನೀನು ನನಗೆ ಪ್ರಾರ್ಥಿಸಲಿಲ್ಲ. ಇಸ್ರೇಲೇ, ನೀನು ನನ್ನ ವಿಷಯದಲ್ಲಿ ಆಯಾಸಗೊಂಡಿದ್ದೀ. 23 ನಿನ್ನ ಕುರಿಗಳನ್ನು ನನ್ನ ಬಳಿಗೆ ಯಜ್ಞಮಾಡುವದಕ್ಕಾಗಿ ತರಲಿಲ್ಲ. ನೀನು ನನ್ನನ್ನು ಸನ್ಮಾನಿಸಲಿಲ್ಲ. ನೀನು ನನಗೆ ಬಲಿಯರ್ಪಣೆ ಮಾಡಲಿಲ್ಲ. ನೀನು ಬಲಿಯರ್ಪಣೆ ಮಾಡಬೇಕೆಂದು ನಾನು ನಿನ್ನನ್ನು ಬಲವಂತಪಡಿಸಲಿಲ್ಲ. ನೀನು ಆಯಾಸಗೊಳ್ಳುವ ತನಕ ಧೂಪಹಾಕಬೇಕೆಂದು ನಾನು ನಿನ್ನನ್ನು ಒತ್ತಾಯಪಡಿಸಲಿಲ್ಲ. 24 ನೀನು ನನ್ನ ಗೌರವಾರ್ಥವಾಗಿ ಕಾಣಿಕೆಗಳನ್ನು ಮತ್ತು ಧೂಪವನ್ನು ಖರೀದಿ ಮಾಡಲು ನಿನ್ನ ಹಣವನ್ನು ಖರ್ಚು ಮಾಡಲಿಲ್ಲ. ಆದರೆ ನೀನು ನನ್ನನ್ನು ನಿನ್ನ ಗುಲಾಮನಾಗುವಂತೆ ಬಲವಂತಪಡಿಸಿದೆ. ನೀನು ನಿನ್ನ ಪಾಪಗಳಿಂದ ನನಗೆ ಭಾರವನ್ನುಂಟುಮಾಡಿರುವೆ ಮತ್ತು ನಿನ್ನ ಅಪರಾಧಗಳಿಂದ ನನ್ನನ್ನು ಕುಗ್ಗಿಸಿರುವೆ.

25 “ನಿಮ್ಮ ಪಾಪಗಳನ್ನೆಲ್ಲಾ ಅಳಿಸಿ ಹಾಕುವಾತನು ನಾನೇ. ನಾನು ಇದನ್ನು ನನಗೋಸ್ಕರವಾಗಿ ಮಾಡುತ್ತೇನೆ. ನಾನು ನಿಮ್ಮ ಪಾಪಗಳನ್ನು ಜ್ಞಾಪಿಸಿಕೊಳ್ಳುವುದಿಲ್ಲ. 26 ಆದರೆ ನೀನು ನನ್ನನ್ನು ಜ್ಞಾಪಿಸಿಕೊಳ್ಳಬೇಕು. ನಾವು ಒಟ್ಟಾಗಿ ಸೇರಿ ಯಾವದು ಸರಿ ಎಂದು ನಿರ್ಧರಿಸಬೇಕು. ನೀನು ಮಾಡಿದ್ದು ಸರಿಯಾಗಿದ್ದರೆ ರುಜುವಾತು ಮಾಡಬೇಕು. 27 ನಿನ್ನ ಮೊದಲನೆ ತಂದೆಯು ಪಾಪದಲ್ಲಿ ಬಿದ್ದನು. ನಿನ್ನ ವಕೀಲರು[a] ನನಗೆ ವಿರುದ್ಧವಾಗಿ ಕಾರ್ಯ ಮಾಡಿದರು. 28 ಪರಿಶುದ್ಧವಾಗಿ ಆಳುವ ನಿನ್ನವರನ್ನು ನಾನು ಅಪರಿಶುದ್ಧ ಮಾಡುವೆನು. ಯಾಕೋಬನನ್ನು ಸಂಪೂರ್ಣವಾಗಿ ನಾಶಮಾಡುವೆನು. ಇಸ್ರೇಲಿಗೆ ಕೆಟ್ಟ ವಿಷಯಗಳು ಸಂಭವಿಸುವವು.”

ಯೆಹೋವನೇ ದೇವರು

44 “ಯಾಕೋಬೇ, ನೀನೇ ನನ್ನ ಸೇವಕ. ನನ್ನ ಮಾತುಗಳನ್ನು ಕೇಳು. ಇಸ್ರೇಲೇ, ನಾನು ನಿನ್ನನ್ನು ಆರಿಸಿಕೊಂಡಿದ್ದೇನೆ. ನಾನು ಹೇಳುವುದನ್ನು ಕೇಳು. ಯೆಹೋವನಾದ ನಾನೇ ನಿನ್ನನ್ನು ನಿರ್ಮಿಸಿದಾತನು. ನೀನು ತಾಯಿಯ ಗರ್ಭದಲ್ಲಿರುವಾಗಲೇ ನಾನು ನಿನಗೆ ಸಹಾಯ ಮಾಡಿದೆನು. ಯಾಕೋಬೇ, ನನ್ನ ಸೇವಕನೇ, ಹೆದರದಿರು. ಯೆಶುರೂನೇ (ಇಸ್ರೇಲೇ), ನಾನು ನಿನ್ನನ್ನು ಆರಿಸಿಕೊಂಡಿದ್ದೇನೆ.

“ಬಾಯಾರಿದ ಜನರಿ ಗೆ ನಾನು ನೀರು ಹೊಯ್ಯುವೆನು. ಬಂಜ ರು ಭೂಮಿಯಲ್ಲಿ ನಾನು ಹೊಳೆ ಹರಿಯುವಂತೆ ಮಾಡುವೆನು. ನಿನ್ನ ಸಂತಾನದ ಮೇಲೆ ನಾನು ನನ್ನ ಆತ್ಮವನ್ನು ಸುರಿಸುವೆನು; ನಿನ್ನ ಸಂತತಿಯವರ ಮೇಲೆ ನನ್ನ ಆಶೀರ್ವಾದವನ್ನು ಸುರಿಸುವೆನು. ಅದು ಹರಿಯುವ ಬುಗ್ಗೆಯ ನೀರಿನಂತಿರುವುದು. ಅವರು ಈ ಲೋಕದ ಜನರೊಂದಿಗೆ ಬೆಳೆಯುವರು. ಅವರು ನೀರಿನ ಕಾಲುವೆಗಳ ಬಳಿಯಲ್ಲಿ ಬೆಳೆದಿರುವ ಮರದಂತಿರುವರು.

“ಒಬ್ಬನು: ‘ನಾನು ಯೆಹೋವನಿಗೆ ಸೇರಿದವನು’ ಎಂದು ಹೇಳುತ್ತಾನೆ. ಇನ್ನೊಬ್ಬನು ಯಾಕೋಬನ ಹೆಸರನ್ನು ಬಳಸುವನು. ಮತ್ತೊಬ್ಬನು, ‘ನಾನು ಯೆಹೋವನವನು’ ಎಂದು ಸಹಿ ಹಾಕುವನು. ಮತ್ತೊಬ್ಬನು, ನಾನು ‘ಇಸ್ರೇಲನು’ ಎಂಬ ಹೆಸರನ್ನು ಬಳಸಿಕೊಳ್ಳುವನು.”

ಯೆಹೋವನು ಇಸ್ರೇಲರ ಅರಸನಾಗಿದ್ದಾನೆ. ಸರ್ವಶಕ್ತನಾದ ಯೆಹೋವನು ಇಸ್ರೇಲನ್ನು ರಕ್ಷಿಸುತ್ತಾನೆ. ಆತನು ಹೇಳುವುದೇನೆಂದರೆ: “ನಾನೊಬ್ಬನೇ ದೇವರು. ನನ್ನ ಹೊರತು ಬೇರೆ ದೇವರುಗಳಿಲ್ಲ. ನಾನೇ ಆದಿಯೂ ಅಂತ್ಯವೂ ಆಗಿದ್ದೇನೆ. ನನ್ನಂತಹ ಬೇರೆ ದೇವರುಗಳಿಲ್ಲ. ಬೇರೆ ದೇವರುಗಳು ಇದ್ದರೆ ಅವು ಈಗ ಮಾತನಾಡಲಿ. ಆ ದೇವರುಗಳು ಬಂದು ತಾವು ನನ್ನಂತಿರುವುದಾಗಿ ರುಜುವಾತು ಮಾಡಲಿ. ಎಂದೆಂದಿಗೂ ಇರುವ ಈ ಜನರನ್ನು ನಾನು ಸೃಷ್ಟಿಸಿದಂದಿನಿಂದ ಏನಾಯಿತೆಂಬುದನ್ನು ನನಗೆ ತಿಳಿಸಬೇಕು. ಆ ದೇವರು ಮುಂದೆ ಸಂಭವಿಸಲಿಕ್ಕಿರುವ ವಿಷಯಗಳನ್ನು ತಿಳಿಸಬೇಕು.

“ನೀವು ಭಯಪಡಬೇಡಿ, ಚಿಂತಿಸಬೇಡಿ. ನಾನು ಭವಿಷ್ಯದ ಸಂಭವಗಳನ್ನು ಯಾವಾಗಲೂ ನಿಮಗೆ ತಿಳಿಸುತ್ತಾ ಬಂದಿದ್ದೇನೆ. ನೀವೇ ನನ್ನ ಸಾಕ್ಷಿಗಳು. ನನ್ನ ಹೊರತು ಬೇರೆ ದೇವರುಗಳಿಲ್ಲ. ನನ್ನ ಹೊರತು ಬೇರೆ ಯಾವ ‘ಬಂಡೆ’ಯೂ ಇಲ್ಲ. ನಾನೊಬ್ಬನೇ!”

ಸುಳ್ಳುದೇವರುಗಳು ಪ್ರಯೋಜನಕ್ಕೆ ಬಾರದವುಗಳು

ಜನರು ವಿಗ್ರಹಗಳನ್ನು ಮಾಡಿಕೊಳ್ಳುವರು. ಆದರೆ ಅವು ನಿಷ್ಪ್ರಯೋಜಕವಾದ ವಸ್ತುಗಳಾಗಿವೆ. ಜನರು ಆ ವಿಗ್ರಹಗಳನ್ನು ಪ್ರೀತಿಸುತ್ತಾರೆ. ಆದರೆ ಅವುಗಳು ಯಾವ ಪ್ರಯೋಜನಕ್ಕೂ ಬಾರವು. ಆ ಜನರು ಆ ವಿಗ್ರಹದ ಸಾಕ್ಷಿಗಳಾಗಿದ್ದಾರೆ. ಆದರೆ ಅವುಗಳಿಗೆ ದೃಷ್ಟಿ ಇಲ್ಲ. ಅವುಗಳಿಗೆ ಏನೂ ಗೊತ್ತಿಲ್ಲ. ತಮ್ಮ ಕಾರ್ಯಗಳು ನಾಚಿಕೆಗೆಟ್ಟವುಗಳೆಂಬ ತಿಳುವಳಿಕೆಯೂ ಅವರಲ್ಲಿಲ್ಲ.

10 ಈ ಸುಳ್ಳುದೇವರುಗಳನ್ನು ಮಾಡಿದವರ್ಯಾರು? ಇಂಥ ಉಪಯೋಗವಿಲ್ಲದ ವಿಗ್ರಹಗಳನ್ನು ಮಾಡಿದವರ್ಯಾರು? 11 ಕುಶಲಕರ್ಮಿಗಳು ಆ ದೇವರುಗಳನ್ನು ಮಾಡಿದರು. ಆ ಕುಶಲಕರ್ಮಿಗಳೆಲ್ಲಾ ಜನರೇ, ಅವರು ದೇವರುಗಳಲ್ಲ. ಆ ದೇವರುಗಳೆಲ್ಲಾ ಒಟ್ಟಾಗಿ ಸೇರಿ ತಮ್ಮೊಳಗೆ ಮಾತಾಡಿಕೊಂಡರೆ ಆಗ ಅವುಗಳಿಗೆ ನಾಚಿಕೆಯೂ ಭಯವೂ ಉಂಟಾಗುವದು.

12 ಒಬ್ಬನು ಕುಲಿಮೆಯ ಬೆಂಕಿಯ ಮೇಲೆ ಕಬ್ಬಿಣವನ್ನು ಕಾಯಿಸುತ್ತಾನೆ. ಅವನು ತನ್ನ ಸುತ್ತಿಗೆಯಿಂದ ಆ ಲೋಹವನ್ನು ವಿಗ್ರಹವನ್ನಾಗಿ ಮಾಡುತ್ತಾನೆ. ಅವನು ಅದನ್ನು ತನ್ನ ತೋಳ್ಬಲದಿಂದ ಮಾಡುತ್ತಾನೆ. ಆದರೆ ಅವನು ಹಸಿದಾಗ ಅವನ ಶಕ್ತಿಯು ಕಡಿಮೆಯಾಗುತ್ತದೆ. ಆ ಮನುಷ್ಯನು ನೀರನ್ನು ಕುಡಿಯದಿದ್ದರೆ ಅವನು ಬಲಹೀನನಾಗುವನು.

13 ಇನ್ನೊಬ್ಬ ಕುಶಲಕರ್ಮಿಯು ತನ್ನ ನೂಲಿನಿಂದಲೂ ಅಡಿಕೋಲುಗಳಿಂದಲೂ ಮರದ ಮೇಲೆ ಗುರುತು ಮಾಡುವನು. ತಾನು ಎಲ್ಲಿ ಮರವನ್ನು ತುಂಡುಮಾಡಬೇಕೆಂದು ಇದರಿಂದ ಗೊತ್ತುಪಡಿಸಿಕೊಳ್ಳುತ್ತಾನೆ. ಅವನು ತನ್ನ ಉಳಿಗಳಿಂದ ಒಂದು ವಿಗ್ರಹವನ್ನು ಮನುಷ್ಯಾಕಾರದಲ್ಲಿ ಕೆತ್ತುತ್ತಾನೆ. ಈ ವಿಗ್ರಹವು ಬೇರೆ ಏನೂ ಮಾಡದೆ ಮನೆಯೊಳಗೆ ಇಟ್ಟ ಸ್ಥಳದಲ್ಲಿಯೇ ಇರುವದು.

14 ಅವನು ತನ್ನ ಕೆಲಸಕ್ಕಾಗಿ ದೇವದಾರು ಮರಗಳನ್ನು, ತುರಾಯಿ ಮರಗಳನ್ನು, ಓಕ್ ಮರಗಳನ್ನು ಕಡಿಯುತ್ತಾನೆ. (ಅವನು ಆ ಮರಗಳನ್ನು ಬೆಳೆಯಿಸಲಿಲ್ಲ. ಅವು ತಾವಾಗಿಯೇ ಅಡವಿಯಲ್ಲಿ ಬೆಳೆದವು. ಅವನು ಮರದ ಸಸಿಯನ್ನು ನೆಟ್ಟರೆ ಮಳೆಯು ಆ ಸಸಿಯನ್ನು ಮರವನ್ನಾಗಿ ಬೆಳೆಯಿಸುವುದು.)

15 ಅವನು ಮರವನ್ನು ಕಡಿದು, ತನ್ನನ್ನು ಬೆಚ್ಚಗೆ ಮಾಡಲು ಅಗ್ಗಿಷ್ಟಿಕೆಗಾಗಿ ಉಪಯೋಗಿಸುತ್ತಾನೆ; ಸಣ್ಣಸಣ್ಣ ತುಂಡುಗಳನ್ನಾಗಿ ಮಾಡಿ ಆಹಾರವನ್ನು ಬೇಯಿಸುತ್ತಾನೆ; ತನ್ನನ್ನು ಬೆಚ್ಚಗೆ ಮಾಡಿಕೊಳ್ಳುತ್ತಾನೆ. ರೊಟ್ಟಿಯನ್ನು ಸುಡುತ್ತಾನೆ; ಉಳಿದ ಮರದ ತುಂಡಿನಿಂದ ಒಂದು ವಿಗ್ರಹವನ್ನು ಕೆತ್ತುತ್ತಾನೆ. ಆ ವಿಗ್ರಹಕ್ಕೆ ದೇವರೆಂದು ಹೇಳುತ್ತಾನೆ; ಆ ದೇವರು ಮನುಷ್ಯನು ತಯಾರಿಸಿದ ವಿಗ್ರಹ. ಆದರೆ ಅವನು ಆ ವಿಗ್ರಹದ ಮುಂದೆ ಅಡ್ಡಬೀಳುವನು. 16 ಮರದ ಅರ್ಧಭಾಗವನ್ನು ಬೆಂಕಿಯಲ್ಲಿ ಉರಿಸುವನು; ಆ ಬೆಂಕಿಯಲ್ಲಿ ಮಾಂಸವನ್ನು ಬೇಯಿಸಿ ಹೊಟ್ಟೆತುಂಬಾ ತಿನ್ನುವನು; ಆ ಮರದ ಸೌದೆಯನ್ನು ಸುಟ್ಟು ಚಳಿಕಾಯಿಸಿಕೊಳ್ಳುವನು. ಆಗ ಅವನು, “ಈಗ ನನಗೆ ಬೆಚ್ಚಗಾಯಿತು. ಬೆಂಕಿಯ ಪ್ರಕಾಶದಲ್ಲಿ ನಾನು ನೋಡಬಲ್ಲೆನು!” ಎಂದು ಹೇಳುವನು. 17 ಅದರಲ್ಲಿ ಸ್ವಲ್ಪ ಮರದ ತುಂಡು ಉಳಿದಿರುತ್ತದೆ. ಅದನ್ನು ನೋಡಿ ಆ ಮನುಷ್ಯನು ಅದರಿಂದ ವಿಗ್ರಹವನ್ನು ತಯಾರಿಸುವನು. ಅದನ್ನು ದೇವರೆಂದು ಕರೆಯುವನು. ಅದರ ಮುಂದೆ ಅಡ್ಡಬಿದ್ದು ಆರಾಧಿಸುವನು. ಅದರ ಮುಂದೆ ಪ್ರಾರ್ಥಿಸಿ, “ನೀನೇ ನನ್ನ ದೇವರು, ನನ್ನನ್ನು ರಕ್ಷಿಸು” ಎಂದು ಹೇಳುತ್ತಾನೆ.

18 ಅವರಿಗೆ ತಾವು ಮಾಡುವುದು ಗೊತ್ತಿಲ್ಲ. ಅವರು ಅರ್ಥಮಾಡಿಕೊಳ್ಳುವುದಿಲ್ಲ. ಅವರು ಕಾಣಲಾರದಂತೆ ಅವರ ಕಣ್ಣುಗಳು ಮುಚ್ಚಲ್ಪಟ್ಟಿವೆಯೋ ಎಂಬಂತಿವೆ. ಅವರ ಹೃದಯಗಳು ಅರ್ಥಮಾಡಿಕೊಳ್ಳಲು ಪ್ರಯತ್ನಿಸುವುದಿಲ್ಲ. 19 “ನಾನು ಆ ಮರದ ತುಂಡುಗಳನ್ನು ಬೆಂಕಿಯಲ್ಲಿ ಉರಿಸಿ ಚಳಿಕಾಯಿಸಿಕೊಂಡೆನು; ಅದರ ಕೆಂಡದಲ್ಲಿ ರೊಟ್ಟಿ ಸುಟ್ಟೆನು; ಮಾಂಸ ಬೇಯಿಸಿದೆನು; ಆ ಮಾಂಸವನ್ನು ತಿಂದೆನು; ಉಳಿದ ಮರದ ತುಂಡಿನಿಂದ ಅಸಹ್ಯವಾದ ಈ ವಿಗ್ರಹವನ್ನು ಮಾಡಿದೆನು; ನಾನು ಮರದ ತುಂಡನ್ನು ಪೂಜಿಸುತ್ತೇನೆ” ಎಂದು ಅವರೆಂದೂ ಯೋಚಿಸುವದಿಲ್ಲ.

20 ಆ ಮನುಷ್ಯನಿಗೆ ತಾನು ಮಾಡುತ್ತಿರುವುದೇ ತಿಳಿಯದು. ಅವನು ಗಲಿಬಿಲಿಗೊಂಡಿದ್ದಾನೆ. ಅವನ ಹೃದಯವು ಅವನನ್ನು ತಪ್ಪುದಾರಿಯಲ್ಲಿ ನಡಿಸುತ್ತದೆ. ಅವನು ತನ್ನನ್ನು ತಾನೇ ರಕ್ಷಿಸಿಕೊಳ್ಳಲಾರನು. ತಾನು ಮಾಡುತ್ತಿರುವುದು ತಪ್ಪೆಂದು ಅವನು ಕಾಣಲಾರನು. “ನನ್ನ ಕೈಯಲ್ಲಿರುವ ಈ ವಿಗ್ರಹವು ಸುಳ್ಳು ದೇವರಾಗಿದೆ” ಎಂದು ಅವನು ಹೇಳುವದಿಲ್ಲ.

ನಿಜದೇವರಾದ ಯೆಹೋವನು ಇಸ್ರೇಲರ ಸಹಾಯಕನು

21 “ಯಾಕೋಬೇ, ಈ ವಿಷಯಗಳನ್ನು ನೆನಪಿನಲ್ಲಿಟ್ಟುಕೊ!
    ಇಸ್ರೇಲೇ, ನೀನು ನನ್ನ ಸೇವಕನೆಂಬುದನ್ನು ನೆನಪಿನಲ್ಲಿಟ್ಟುಕೊ!
ನಾನೇ ನಿನ್ನನ್ನು ನಿರ್ಮಿಸಿದೆನು; ನೀನೇ ನನ್ನ ಸೇವಕನು.
    ಆದ್ದರಿಂದ ಇಸ್ರೇಲೇ, ನನ್ನನ್ನು ಮರೆತುಬಿಡಬೇಡ.
22 ನಿನ್ನ ಪಾಪಗಳು ದೊಡ್ಡ ಮೋಡದಂತಿವೆ.
    ಆದರೆ ನಾನು ಅವುಗಳನ್ನು ಅಳಿಸಿಬಿಟ್ಟಿದ್ದೇನೆ.
ನಿನ್ನ ಪಾಪಗಳನ್ನು ಗಾಳಿಯಲ್ಲಿ ಹಾರಿಹೋದ
    ಮೋಡದಂತೆ ಹಾರಿಸಿಬಿಟ್ಟಿದ್ದೇನೆ.
ನಾನು ನಿನ್ನನ್ನು ರಕ್ಷಿಸಿದೆನು.
    ಆದ್ದರಿಂದ ನನ್ನ ಬಳಿಗೆ ಹಿಂತಿರುಗಿ ಬಾ.”

23 ಯೆಹೋವನು ಮಹಾ ಕಾರ್ಯಗಳನ್ನು ಮಾಡಿದ್ದರಿಂದ ಆಕಾಶವು ಹರ್ಷಿಸುತ್ತದೆ.
    ಭೂಮಿಯೂ ಭೂಮಿಯ ಅಧೋಭಾಗವೂ ಸಂತೋಷಿಸುತ್ತದೆ.
ಪರ್ವತಗಳು ಕೃತಜ್ಞತಾಸ್ತುತಿಗಳನ್ನು ಮಾಡುತ್ತವೆ.
    ಅರಣ್ಯದಲ್ಲಿರುವ ಎಲ್ಲಾ ಮರಗಳು ಹರ್ಷಿಸುತ್ತವೆ.
ಯಾಕೆಂದರೆ ಯೆಹೋವನು ಯಾಕೋಬನನ್ನು ರಕ್ಷಿಸಿದನು,
    ಇಸ್ರೇಲಿಗೆ ಆತನು ಅದ್ಭುತಕಾರ್ಯವನ್ನು ಮಾಡಿದ್ದಾನೆ.
24 ಯೆಹೋವನು ನಿನ್ನನ್ನು ರೂಪಿಸಿದನು.
    ನೀನು ನಿನ್ನ ತಾಯಿಯ ಗರ್ಭದಲ್ಲಿರುವಾಗಲೇ ಆತನು ನಿನ್ನನ್ನು ರೂಪಿಸಿದನು.
ಆತನು ಹೇಳುವುದೇನೆಂದರೆ, “ಯೆಹೋವನಾದ ನಾನು ಸಮಸ್ತವನ್ನೂ ಸೃಷ್ಟಿಸಿದೆನು.
    ಆಕಾಶಮಂಡಲವನ್ನು ಅದರ ಸ್ಥಳದಲ್ಲಿ ಇಟ್ಟೆನು;
    ಭೂಮಿಯನ್ನು ನನ್ನ ಮುಂದೆ ಹರಡಿದೆನು.”

25 ಸುಳ್ಳುಪ್ರವಾದಿಗಳು ಸುಳ್ಳನ್ನೇ ಹೇಳುತ್ತಾರೆ. ಅವರು ಹೇಳಿದ್ದೆಲ್ಲವೂ ಸುಳ್ಳು ಎಂದು ಯೆಹೋವನು ತೋರಿಸಿಕೊಡುತ್ತಾನೆ. ಮಂತ್ರಗಾರರನ್ನು ದೇವರು ಮೂರ್ಖರನ್ನಾಗಿ ಮಾಡುತ್ತಾನೆ. ಆತನು ಜ್ಞಾನಿಗಳನ್ನು ಗಲಿಬಿಲಿಗೊಳಿಸುತ್ತಾನೆ. ಅವರು ತಮಗೆ ಎಲ್ಲವೂ ಗೊತ್ತಿದೆ ಎಂದು ತಿಳಿದುಕೊಳ್ಳುತ್ತಾರೆ. ಆದರೆ ದೇವರು ಅವರನ್ನು ಮೂಢರನ್ನಾಗಿ ಮಾಡುತ್ತಾನೆ. 26 ಯೆಹೋವನು ತನ್ನ ಸೇವಕರನ್ನು ಜನರಿಗೆ ಸಂದೇಶ ತಿಳಿಸುವದಕ್ಕಾಗಿ ಉಪಯೋಗಿಸಿಕೊಳ್ಳುತ್ತಿದ್ದಾನೆ. ಆತನ ಸಂದೇಶಗಳು ಸತ್ಯವಾದವುಗಳಾಗಿವೆ. ಜನರು ಮಾಡಬೇಕಾದ ಕಾರ್ಯಗಳ ಬಗ್ಗೆ ಯೆಹೋವನು ಸಂದೇಶಕರನ್ನು ಕಳುಹಿಸುತ್ತಾನೆ. ಅವರ ಸಲಹೆಯು ಒಳ್ಳೆಯದೆಂದು ಯೆಹೋವನು ತೋರಿಸಿಕೊಡುತ್ತಾನೆ.

ಯೆಹೂದದ ಪುನರ್ ನಿರ್ಮಾಣದಲ್ಲಿ ಸೈರಸನ ಪಾತ್ರ

ಯೆಹೋವನು ಜೆರುಸಲೇಮಿಗೆ, “ಜನರು ನಿನ್ನಲ್ಲಿ ಮತ್ತೆ ವಾಸಮಾಡುವರು” ಎಂತಲೂ
    ಯೆಹೂದದ ನಗರಗಳಿಗೆ, “ನೀವು ತಿರುಗಿ ಕಟ್ಟಲ್ಪಡುವಿರಿ” ಎಂತಲೂ
    ಕೆಡವಲ್ಪಟ್ಟ ನಗರಗಳಿಗೆ, “ನಾನು ತಿರುಗಿ ನಿಮ್ಮನ್ನು ನಗರಗಳನ್ನಾಗಿ ಮಾಡುತ್ತೇನೆ” ಎಂತಲೂ ಹೇಳುತ್ತಾನೆ.
27 ಆಳವಾದ ನೀರಿಗೆ, “ಒಣಗಿಹೋಗು,
    ನಿನ್ನ ಬುಗ್ಗೆಗಳನ್ನು ನಾನು ಬತ್ತಿಸುವೆನು” ಎಂದು ಯೆಹೋವನು ಅನ್ನುತ್ತಾನೆ.
28 ಸೈರಸನಿಗೆ ಯೆಹೋವನು ಹೀಗೆನ್ನುತ್ತಾನೆ, “ನೀನೇ ನನ್ನ ಕುರುಬನು.
    ನಾನು ಬಯಸುವ ಕಾರ್ಯಗಳನ್ನು ನೀನು ಮಾಡುವೆ.
    ನೀನು ಜೆರುಸಲೇಮಿಗೆ, ‘ನೀನು ಕಟ್ಟಲ್ಪಡುವೆ’ ಎಂದೂ
    ದೇವಾಲಯಕ್ಕೆ ‘ನಿನ್ನ ಅಸ್ತಿವಾರವು ಮತ್ತೆ ಹಾಕಲ್ಪಡುವದು’ ಎಂದೂ ಹೇಳುವೆ.”

1 ಥೆಸಲೋನಿಕದವರಿಗೆ 2

ಥೆಸಲೋನಿಕದಲ್ಲಿ ಪೌಲನ ಕಾರ್ಯ

ಸಹೋದರ ಸಹೋದರಿಯರೇ, ನಾವು ನಿಮ್ಮಲ್ಲಿಗೆ ಬಂದದ್ದು ವ್ಯರ್ಥವಾಗಲಿಲ್ಲ ಎಂಬುದು ನಿಮಗೆ ತಿಳಿದಿದೆ. ನಿಮ್ಮಲ್ಲಿಗೆ ಬರುವುದಕ್ಕೆ ಮೊದಲೇ ಫಿಲಿಪ್ಪಿಯಲ್ಲಿ ಹಿಂಸೆಯನ್ನು ಅನುಭವಿಸಿದೆವು. ಅಲ್ಲಿಯ ಜನರು ನಮ್ಮ ವಿರುದ್ಧವಾಗಿ ಕೆಟ್ಟದ್ದನ್ನು ಹೇಳಿದರು. ಅದೆಲ್ಲವೂ ನಿಮಗೆ ತಿಳಿದಿದೆ. ನಿಮ್ಮ ಬಳಿಗೆ ಬಂದಾಗ, ಅನೇಕ ಜನರು ನಮಗೆ ವಿರುದ್ಧವಾಗಿದ್ದರು. ಆದರೆ ಧೈರ್ಯದಿಂದ ಇರಲು ಮತ್ತು ನಿಮಗೆ ಸುವಾರ್ತೆಯನ್ನು ತಿಳಿಸಲು ದೇವರು ನಮಗೆ ಸಹಾಯ ಮಾಡಿದನು. ನಮ್ಮ ಬೋಧನೆಯು ತಪ್ಪೂ ಅಲ್ಲ ಮತ್ತು ಅಶುದ್ಧವಾದ ಉದ್ದೇಶವನ್ನು ಹೊಂದಿಯೂ ಇಲ್ಲ ಮತ್ತು ನಿಮ್ಮನ್ನು ಮೋಸಗೊಳಿಸುವ ಪ್ರಯತ್ನವೂ ಅಲ್ಲ. ನಾವು ಸುವಾರ್ತೆಯನ್ನು ತಿಳಿಸುತ್ತೇವೆ. ಏಕೆಂದರೆ ದೇವರು ನಮ್ಮನ್ನು ಪರಿಶೋಧಿಸಿದ್ದಾನೆ ಮತ್ತು ಸುವಾರ್ತೆಯನ್ನು ತಿಳಿಸಲು ನಮ್ಮನ್ನು ನೇಮಿಸಿದ್ದಾನೆ. ಆದುದರಿಂದ ಜನರನ್ನು ಮೆಚ್ಚಿಸಲು ಪ್ರಯತ್ನಿಸದೆ ನಮ್ಮ ಹೃದಯಗಳನ್ನು ಪರೀಕ್ಷಿಸುವಾತನಾದ ದೇವರನ್ನೇ ಮೆಚ್ಚಿಸಲು ಪ್ರಯತ್ನಿಸುತ್ತೇವೆ.

ನಿಮ್ಮ ಬಗ್ಗೆ ಒಳ್ಳೆಯದನ್ನು ಹೇಳಿ ನಿಮ್ಮನ್ನು ಮರುಳು ಮಾಡಬೇಕೆಂದು ನಾವೆಂದೂ ಪ್ರಯತ್ನಿಸಿಲ್ಲವೆಂಬುದು ನಿಮಗೆ ತಿಳಿದಿದೆ. ನಾವು ನಿಮ್ಮ ಹಣವನ್ನು ಕಸಿದುಕೊಳ್ಳಲು ಪ್ರಯತ್ನಿಸಿಲ್ಲ; ನಮ್ಮ ಸ್ವಾರ್ಥವನ್ನು ಮರೆಮಾಡಿಕೊಂಡು ವೇಶಧಾರಿಗಳಾಗಿರಲಿಲ್ಲ. ಇದು ನಿಜವೆಂಬುದು ದೇವರಿಗೆ ತಿಳಿದಿದೆ. ಜನರಿಂದ ಬರುವ ಮಾನಮರ್ಯಾದೆಗಳನ್ನು ನಿಮ್ಮಿಂದಾಗಲಿ ಇತರ ಜನರಿಂದಾಗಲಿ ನಾವೆಂದೂ ಬಯಸಲಿಲ್ಲ.

ನಾವು ಕ್ರಿಸ್ತನ ಅಪೊಸ್ತಲರಾಗಿ ನಿಮ್ಮೊಡಗಿದ್ದಾಗ, ನಿಮ್ಮಿಂದ ದುಡಿಸಿಕೊಳ್ಳಲು ನಮ್ಮ ಅಧಿಕಾರವನ್ನು ಬಳಸಬಹುದಾಗಿತ್ತು. ಆದರೆ ನಿಮ್ಮೊಡನೆ ಬಹಳ ಸಾತ್ವಿಕರಾಗಿದ್ದೆವು. ತಾಯಿಯು ತನ್ನ ಸ್ವಂತ ಚಿಕ್ಕ ಮಕ್ಕಳನ್ನು ಎಚ್ಚರಿಕೆಯಿಂದ ನೋಡಿಕೊಳ್ಳುವಂತೆ ನಾವು ನಡೆದುಕೊಂಡೆವು. ನಿಮ್ಮನ್ನು ಬಹಳವಾಗಿ ಪ್ರೀತಿಸಿದೆವು. ಆದುದರಿಂದ ದೇವರ ಸುವಾರ್ತೆಯನ್ನು ನಿಮ್ಮೊಡನೆ ಹಂಚಿಕೊಳ್ಳಲು, ಮಾತ್ರವೇ ಅಲ್ಲ, ನಿಮಗೋಸ್ಕರ ಸ್ವಂತ ಪ್ರಾಣವನ್ನೇ ಕೊಡಲು ಸಿದ್ಧರಾಗಿದ್ದೆವು. ಸಹೋದರ ಸಹೋದರಿಯರೇ, ನಾವು ಅನುಭವಿಸಿದ ಕಷ್ಟ ಕಾರ್ಪಣ್ಯಗಳು ನಿಮ್ಮ ನೆನಪಿನಲ್ಲೇ ಇವೆ. ನಿಮಗೆ ದೇವರ ಸುವಾರ್ತೆಯನ್ನು ಉಪದೇಶಿಸಿದಾಗ ನೀವು ನಮಗೆ ವೇತನ ನೀಡುವ ಭಾರವನ್ನು ನಿಮ್ಮ ಮೇಲೆ ಹಾಕಬಾರದೆಂದು ಹಗಲಿರುಳು ದುಡಿದು ಜೀವನ ಸಾಗಿಸಿದೆವು.

10 ವಿಶ್ವಾಸಿಗಳಾದ ನಿಮ್ಮೊಡನೆ ನಾವಿದ್ದಾಗ ತಪ್ಪಿಲ್ಲದವರಾಗಿಯೂ ಪರಿಶುದ್ಧರಾಗಿಯೂ ಮತ್ತು ನಿರ್ದೋಷಿಗಳಾಗಿಯೂ ಜೀವಿಸಿದ್ದೆವು. ಇದು ನಿಜವೆಂಬುದು ನಿಮಗೂ ತಿಳಿದಿದೆ ಮತ್ತು ದೇವರಿಗೂ ತಿಳಿದಿದೆ. 11 ತಂದೆಯು ತನ್ನ ಸ್ವಂತ ಮಕ್ಕಳೊಡನೆ ನಡೆದುಕೊಳ್ಳುವಂತೆ ನಿಮ್ಮಲ್ಲಿ ಪ್ರತಿಯೊಬ್ಬರೊಡನೆಯೂ ನಡೆದುಕೊಂಡೆವೆಂಬುದು ನಿಮಗೆ ತಿಳಿದಿದೆ. 12 ನಿಮ್ಮನ್ನು ಬಲಗೊಳಿಸಿದೆವು ಮತ್ತು ಸಂತೈಸಿದೆವು. ನಿಮ್ಮನ್ನು ತನ್ನ ರಾಜ್ಯಕ್ಕೂ ಮಹಿಮೆಗೂ ಕರೆದ ದೇವರಿಗಾಗಿ ಯೋಗ್ಯವಾದ ರೀತಿಯಲ್ಲಿ ಜೀವಿಸಿರಿ ಎಂದು ನಾವು ನಿಮಗೆ ತಿಳಿಸಿದೆವು.

13 ನೀವು ದೇವರ ಸಂದೇಶವನ್ನು ಸ್ವೀಕರಿಸಿಕೊಂಡದ್ದಕ್ಕಾಗಿ ದೇವರಿಗೆ ಯಾವಾಗಲೂ ಕೃತಜ್ಞತಾಸ್ತುತಿ ಸಲ್ಲಿಸುತ್ತೇವೆ. ನೀವು ಆ ಸಂದೇಶವನ್ನು ನಮ್ಮಿಂದ ಕೇಳಿ, ಅದನ್ನು ದೇವರ ವಾಕ್ಯದಂತೆ ಒಪ್ಪಿಕೊಂಡಿರೇ ಹೊರತು ಮಾನವನ ವಾಕ್ಯಗಳೆಂದಲ್ಲ. ಅದು ನಿಜವಾಗಿಯೂ ದೇವರ ಸಂದೇಶ. ಆ ಸಂದೇಶವು ನಂಬುವವರಾದ ನಿಮ್ಮಲ್ಲಿ ಕಾರ್ಯಮಾಡುತ್ತದೆ. 14 ಸಹೋದರ ಸಹೋದರಿಯರೇ, ನೀವು ಜುದೇಯದಲ್ಲಿರುವ ದೇವರ ಸಭೆಗಳಂತಿದ್ದೀರಿ. ಕ್ರಿಸ್ತ ಯೇಸುವಿನಲ್ಲಿ ವಿಶ್ವಾಸವಿಟ್ಟಿರುವ ಅವರು ಇತರ ಯೆಹೂದ್ಯರಿಂದ ಹಿಂಸಿಸಲ್ಪಟ್ಟರು. ಅದೇ ರೀತಿಯಲ್ಲಿ ನೀವೂ ನಿಮ್ಮ ದೇಶದ ಇತರ ಜನರಿಂದ ಹಿಂಸಿಸಲ್ಪಟ್ಟವರಾಗಿದ್ದೀರಿ. 15 ಆ ಯೆಹೂದ್ಯರು ಪ್ರಭುವಾದ ಯೇಸುವನ್ನೂ ಪ್ರವಾದಿಗಳನ್ನೂ ಕೊಂದುಹಾಕಿದರು. ತಮ್ಮ ದೇಶದಿಂದ (ಜುದೇಯ) ನಮ್ಮನ್ನು ಬಲವಂತವಾಗಿ ಹೊರಗಟ್ಟಿದರು. ಅವರು ದೇವರಿಗೆ ಮೆಚ್ಚಿಕೆಯಾದವರಾಗಿಲ್ಲ ಮತ್ತು ಜನರೆಲ್ಲರ ವಿರುದ್ಧವಾಗಿದ್ದಾರೆ. 16 ಹೌದು, ಯೆಹೂದ್ಯರಲ್ಲದವರಿಗೆ ರಕ್ಷಣೆ ನೀಡುವ ಸುವಾರ್ತೆಯನ್ನು ನಾವು ಉಪದೇಶಿಸದಂತೆ ನಮ್ಮನ್ನು ತಡೆಯಲು ಅವರು ಪ್ರಯತ್ನಿಸುತ್ತಿದ್ದಾರೆ. ಹೀಗೆ ಅವರು ತಮ್ಮ ಪಾಪಗಳಿಗೆ ಮತ್ತಷ್ಟು ಪಾಪಗಳನ್ನು ಕೂಡಿಸುತ್ತಿದ್ದಾರೆ. ಕೊನೆಗೆ, ದೇವರ ಕೋಪವು ಅವರ ಮೇಲೆ ಬರುತ್ತದೆ.

ಥೆಸಲೋನಿಕದವರನ್ನು ಮತ್ತೆ ನೋಡಲು ಪೌಲನ ಆಸೆ

17 ಸಹೋದರ ಸಹೋದರಿಯರೇ, ನಿಮ್ಮಿಂದ ಸ್ವಲ್ಪಕಾಲ ಅಗಲಿ ಹೋಗಿದ್ದೆವು. (ನಾವು ನಿಮ್ಮೊಡನೆ ಇರಲಿಲ್ಲ. ಆದರೆ ನಮ್ಮ ಆಲೋಚನೆಗಳು ನಿಮ್ಮೊಡನೆ ಇನ್ನೂ ಇವೆ.) ನಿಮ್ಮನ್ನು ನೋಡಲು ಅತ್ಯಾಸೆಯಿಂದ ಬಹಳ ಪ್ರಯತ್ನಪಟ್ಟೆವು. 18 ಹೌದು, ನಾವು ನಿಮ್ಮಲ್ಲಿಗೆ ಬರಬೇಕೆಂದಿದ್ದೆವು. ಪೌಲನಾದ ನಾನು, ನಿಜವಾಗಿಯೂ ಅನೇಕ ಸಲ ಬರಲು ಪ್ರಯತ್ನಿಸಿದೆನು, ಆದರೆ ನಮ್ಮನ್ನು ಸೈತಾನನು ನಿಲ್ಲಿಸಿದನು. 19 ನಮ್ಮ ಪ್ರಭುವಾದ ಯೇಸು ಕ್ರಿಸ್ತನು ಪ್ರತ್ಯಕ್ಷನಾದಾಗ ನಾವು ಹೊಗಳಿಕೊಳ್ಳುವ ನಮ್ಮ ನಿರೀಕ್ಷೆ, ನಮ್ಮ ಸಂತೋಷ, ನಮ್ಮ ಕಿರೀಟ ನೀವೇ ಆಗಿದ್ದೀರಿ. 20 ನಿಜವಾಗಿಯೂ ನೀವೇ ನಮ್ಮ ಸಂತೋಷ ಮತ್ತು ಗೌರವವಾಗಿದ್ದೀರಿ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International