Print Page Options
Previous Prev Day Next DayNext

Old/New Testament

Each day includes a passage from both the Old Testament and New Testament.
Duration: 365 days
Kannada Holy Bible: Easy-to-Read Version (KERV)
Version
ಯೆಶಾಯ 26-27

ದೇವರಿಗೆ ಸ್ತೋತ್ರ ಗೀತೆ

26 ಆ ಸಮಯದಲ್ಲಿ ಜನರು ಈ ಹಾಡನ್ನು ಯೆಹೂದದಲ್ಲಿ ಹಾಡುವರು:

ಯೆಹೋವನು ನಮಗೆ ರಕ್ಷಣೆಯನ್ನು ಕೊಡುತ್ತಾನೆ.
    ನಮಗೆ ಬಲವಾದ ಪಟ್ಟಣವಿದೆ. ಅದಕ್ಕೆ ಬಲವಾದ ಗೋಡೆಗಳೂ ಕೋಟೆಗಳೂ ಇವೆ.
ದ್ವಾರಗಳನ್ನು ತೆರೆಯಿರಿ. ಒಳ್ಳೆಯ ಜನರು ಅದರಲ್ಲಿ ಪ್ರವೇಶಿಸುವರು.
    ಅವರು ದೇವರ ನಿಯಮಗಳನ್ನು ಅನುಸರಿಸುತ್ತಾರೆ.

ಯೆಹೋವನೇ, ನಿನ್ನಲ್ಲಿ ಭರವಸವಿಟ್ಟವರಿಗೆ
    ನೀನು ನಿಜವಾದ ಸಮಾಧಾನವನ್ನು ಅನುಗ್ರಹಿಸುವೆ.

ಆದ್ದರಿಂದ ಯೆಹೋವನ ಮೇಲೆ ಯಾವಾಗಲೂ ಭರವಸವಿಡಿರಿ.
    ಯಾಕೆಂದರೆ ನಿಮಗೆ ದೇವರಾದ ಯೆಹೋವನಲ್ಲಿ ಸುರಕ್ಷತೆಯ ಸ್ಥಳವಿದೆ.
ಆದರೆ ಯೆಹೋವನು ಗರ್ವದ ನಗರವನ್ನು ನಾಶಮಾಡುವನು.
    ಅಲ್ಲಿ ವಾಸಿಸುವವರನ್ನು ಆತನು ಶಿಕ್ಷಿಸುತ್ತಾನೆ.
ಯೆಹೋವನು ಆ ಉನ್ನತವಾದ ನಗರವನ್ನು ಧೂಳಿಗೆ ಹಾಕಿಬಿಡುವನು.
    ಅದು ಕಾಲುತುಳಿತಕ್ಕೆ ಈಡಾಗಿದೆ.
ಆಗ ದೀನರೂ ಬಡಜನರೂ ಆ ಅವಶೇಷಗಳ ಮೇಲೆ ನಡೆಯುವರು.

ಪ್ರಾಮಾಣಿಕತೆಯು ಒಳ್ಳೆಯವರ ಜೀವನ ಶೈಲಿ.
    ಅವರು ನೇರವಾದ ಮತ್ತು ಸತ್ಯವಾದ ಮಾರ್ಗವನ್ನು ಅನುಸರಿಸುವರು.
ಯೆಹೋವನೇ, ನೀನು ಆ ಮಾರ್ಗವನ್ನು ಅನುಸರಿಸಲು
    ಸುಲಭವಾಗುವಂತೆ ಮಾಡುವೆ.
ಆದರೆ ಯೆಹೋವನೇ, ನಾವು ನಿನ್ನ ನ್ಯಾಯವಿಚಾರಣೆಯ ರೀತಿಗಾಗಿ ಕಾಯುತ್ತಿದ್ದೇವೆ.
    ನಮ್ಮ ಆತ್ಮಗಳು ನಿನ್ನನ್ನೂ ನಿನ್ನ ನಾಮವನ್ನೂ ನೆನಪು ಮಾಡುತ್ತವೆ.
ನಮ್ಮ ಆತ್ಮವು ನಿನ್ನೊಂದಿಗೆ ರಾತ್ರಿಯಲ್ಲಿರಲು ಆಶಿಸುತ್ತದೆ.
    ನಮ್ಮೊಳಗಿರುವ ಆತ್ಮವು ನಿನ್ನ ಸಹವಾಸವನ್ನು ಬಯಸುತ್ತದೆ.
ಹೊಸ ದಿವಸಗಳ ಮುಂಜಾನೆಯಲ್ಲಿ ನಿನ್ನೊಂದಿಗಿರಲು ಆಶಿಸುತ್ತದೆ.
    ನಿನ್ನ ನ್ಯಾಯವು ಈ ಭೂಮಿಗೆ ಬಂದಾಗ ಜನರು ಜೀವನದ ಸತ್ಯಮಾರ್ಗವನ್ನು ಅರಿಯುವರು.
10 ದುಷ್ಟರಿಗೆ ದಯೆತೋರಿಸಿದರೆ
    ಅವರು ಸುಕಾರ್ಯಗಳನ್ನು ಮಾಡಲು ಕಲಿಯುವುದಿಲ್ಲ.
ದುಷ್ಟರು ಯಥಾರ್ಥರ ಲೋಕದಲ್ಲಿ ಜೀವಿಸಿದರೂ ಅವರು ದುಷ್ಕೃತ್ಯಗಳನ್ನೇ ಮಾಡುವರು.
    ಆ ದುಷ್ಟರು ಯೆಹೋವನ ಮಹತ್ವವನ್ನು ಎಂದೂ ಗಮನಿಸಲಾರರು.
11 ಆದರೆ ದೇವರೇ, ನೀನು ಅವರನ್ನು ಶಿಕ್ಷಿಸಿದರೆ
    ಅವರು ಅದನ್ನು ನೋಡುವರು.
ನಿನ್ನ ಜನರ ಮೇಲೆ ನಿನಗಿರುವ ಗಾಢಪ್ರೀತಿಯನ್ನು ಆ ದುಷ್ಟಜನರು ನೋಡಲಿ.
    ಆಗ ಅವರು ಅವಮಾನ ಹೊಂದುವರು.
    ನಿನ್ನ ಶತ್ರುಗಳು ತಮ್ಮ ದುಷ್ಟತನದ ಬೆಂಕಿಯಲ್ಲಿಯೇ ಸುಟ್ಟುಹೋಗುವರು.
12 ಯೆಹೋವನೇ, ನೀನು ಮಾಡಬಯಸಿದ ಎಲ್ಲವುಗಳಲ್ಲಿ ಯಶಸ್ವಿಯಾಗಿರುವೆ.
    ಆದ್ದರಿಂದ ನಮಗೆ ಶಾಂತಿಯನ್ನು ಅನುಗ್ರಹಿಸು.

ದೇವರು ತನ್ನ ಜನರಿಗೆ ಹೊಸ ಜೀವವನ್ನು ಕೊಡುವನು

13 ಯೆಹೋವನೇ, ನೀನೇ ನಮ್ಮ ದೇವರು. ಆದರೆ ಹಿಂದಿನ ಕಾಲದಲ್ಲಿ ನಾವು ಇತರ ಪ್ರಭುಗಳನ್ನು ಅನುಸರಿಸಿದೆವು.
ನಾವು ನಮ್ಮ ಒಡೆಯರುಗಳಿಗೆ ಸೇರಿದ್ದೆವು.
    ಆದರೆ ಈಗ ಜನರು ಒಂದೇ ಹೆಸರನ್ನು, ಅಂದರೆ ನಿನ್ನ ಹೆಸರನ್ನೇ ನೆನಪುಮಾಡಲಿ.
14 ಇತರ ದೇವರುಗಳಿಗೆ ಜೀವವಿಲ್ಲ.
    ಪ್ರೇತಗಳು ಸತ್ತವರೊಳಗಿಂದ ಏಳುವದಿಲ್ಲ.
ನೀನು ಅವುಗಳನ್ನು ನಾಶಮಾಡಲು ತೀರ್ಮಾನಿಸಿದೆ.
    ಅದರ ಬಗ್ಗೆ ನಮಗೆ ನೆನಪು ಹುಟ್ಟಿಸುವ ಎಲ್ಲಾ ವಿಚಾರಗಳನ್ನು ನೀನು ನಾಶಮಾಡಿದೆ.
15 ನೀನು ಪ್ರೀತಿಸುವ ಜನಾಂಗಕ್ಕೆ ನೀನು ಸಹಾಯ ಮಾಡಿದೆ.
    ಬೇರೆ ಜನಾಂಗದವರು ಅವರನ್ನು ಸೋಲಿಸದಂತೆ ಮಾಡಿದೆ.
16 ಯೆಹೋವನೇ, ಕಷ್ಟ ಬಂದಾಗ
    ಜನರಿಗೆ ನಿನ್ನ ನೆನಪಾಗುವುದು.
ನೀನು ಅವರನ್ನು ಶಿಕ್ಷಿಸಿದಾಗ
    ಅವರು ನಿನಗೆ ಮೌನ ಪ್ರಾರ್ಥನೆ ಮಾಡುವರು.
17 ಯೆಹೋವನೇ, ನಾವು ನಿನ್ನೊಂದಿಗೆ ಇಲ್ಲದಿರುವಾಗ
    ಪ್ರಸವವೇದನೆಯಿಂದ ನರಳುವ ಸ್ತ್ರೀಯರಂತಿದ್ದೇವೆ.
18 ಅದೇ ರೀತಿಯಲ್ಲಿ ನಾವು ನೋವನ್ನು ಅನುಭವಿಸುತ್ತೇವೆ.
    ನಾವು ಹೆರುವದು ಕೇವಲ ಗಾಳಿಯನ್ನೇ.
ನಾವು ಈ ಲೋಕದೊಳಗೆ ಹೊಸಜೀವಿಗಳನ್ನು ನಿರ್ಮಿಸುವದಿಲ್ಲ.
    ನಾವು ದೇಶಕ್ಕೆ ರಕ್ಷಣೆಯನ್ನು ತರುವದಿಲ್ಲ.
19 ಆದರೆ ಯೆಹೋವನು ಹೇಳುವುದೇನೆಂದರೆ,
“ನಿನ್ನ ಜನರು ಸತ್ತಿದ್ದಾರೆ.
    ಆದರೆ ಅವರು ಮತ್ತೆ ಬದುಕುವರು.
ನನ್ನ ಜನರ ದೇಹಗಳು
    ಸತ್ತವರೊಳಗಿಂದ ಏಳುವವು.
ಭೂಮಿಯ ಮೇಲೆ ಸತ್ತಿರುವ ಜನರೇ,
    ಎದ್ದುನಿಂತು ಸಂತೋಷಿಸಿರಿ.
ನಿಮ್ಮನ್ನು ಆವರಿಸಿದ ಮಂಜು
    ಮುಂಜಾನೆಯ ಬೆಳಕಿನಂತೆ ಪ್ರಕಾಶಿಸುತ್ತದೆ.
ಭೂಮಿಯು ತನ್ನಲ್ಲಿರುವ ಸತ್ತವರನ್ನು ಒಪ್ಪಿಸಿಕೊಡುವಾಗ
    ಪ್ರಾರಂಭವಾಗುವ ಹೊಸ ದಿನವನ್ನು ಅದು ಸೂಚಿಸುವದು.”

ಶಿಕ್ಷೆ ಅಥವಾ ಬಹುಮಾನ

20 ನನ್ನ ಜನರೇ, ನಿಮ್ಮ ನಿಮ್ಮ ಕೋಣೆಯೊಳಗೆ
    ಹೋಗಿ ಕದಮುಚ್ಚಿರಿ.
ಸ್ವಲ್ಪಕಾಲ ನೀವು ಅಲ್ಲಿಯೇ ಅಡಗಿಕೊಳ್ಳಿರಿ.
    ದೇವರ ಕೋಪ ತೀರುವ ತನಕ ಅಲ್ಲಿಯೇ ಅವಿತುಕೊಳ್ಳಿರಿ.
21 ಇಗೋ, ಈ ಲೋಕದ ಜನರು ಮಾಡಿದ ಪಾಪಕೃತ್ಯಗಳಿಗೆ
    ನ್ಯಾಯತೀರಿಸಲು ಯೆಹೋವನು ತನ್ನ ಸ್ಥಳದಿಂದ ಎದ್ದಿದ್ದಾನೆ.
ಭೂಮಿಯು ತನ್ನಲ್ಲಿರುವ ರಕ್ತವನ್ನು ತೋರಿಸುವದು.
    ಭೂಮಿಯು ಇನ್ನುಮುಂದೆ ಸತ್ತವರನ್ನು ಮರೆಮಾಡುವುದಿಲ್ಲ.

27 ಆ ಸಮಯದಲ್ಲಿ ಯೆಹೋವನು ವಂಚನೆಯ ಸರ್ಪವಾದ ಲಿವ್ಯಾತಾನನಿಗೆ ನ್ಯಾಯತೀರಿಸುವನು.
ಯೆಹೋವನು ಕಠಿಣವೂ ಮಹತ್ವವೂ ಬಲವೂ ಆಗಿರುವ ತನ್ನ ಖಡ್ಗದಿಂದ
    ಸುತ್ತಿಕೊಂಡಿರುವ ಸರ್ಪವಾದ ಲಿವ್ಯಾತಾನನನ್ನು ಕೊಲ್ಲುವನು.
    ಯೆಹೋವನು ಸಮುದ್ರದಲ್ಲಿರುವ ಘಟಸರ್ಪವನ್ನು ಕೊಲ್ಲುವನು.

ಆ ಸಮಯದಲ್ಲಿ ಜನರು ಮನೋಹರವಾದ ದ್ರಾಕ್ಷಿತೋಟದ ವಿಷಯವಾಗಿ ಹಾಡುವರು.
“ಯೆಹೋವನಾದ ನಾನು ಆ ತೋಟವನ್ನು ಚೆನ್ನಾಗಿ ನೋಡಿಕೊಳ್ಳುವೆನು;
    ಸರಿಯಾದ ಕಾಲದಲ್ಲಿ ತೋಟಕ್ಕೆ ನೀರು ಹೊಯ್ಯುವೆನು.
ಹಗಲಿರುಳು ತೋಟವನ್ನು ಕಾಯುವೆನು.
    ಆ ತೋಟವನ್ನು ಯಾರೂ ಹಾಳುಮಾಡುವದಿಲ್ಲ.
ನಾನು ಕೋಪಗೊಂಡಿಲ್ಲ.
ಆದರೆ ಯುದ್ಧ ನಡೆಯುತ್ತಿರುವಾಗ ಯಾರಾದರೂ ಮುಳ್ಳುಬೇಲಿಯನ್ನು ಹಾಕಿದರೆ,
    ನಾನು ಮುನ್ನುಗ್ಗಿ ಅದನ್ನು ಸುಟ್ಟುಹಾಕುವೆನು.
ಆದರೆ ಯಾವನಾದರೂ ಆಶ್ರಯಕ್ಕಾಗಿ ನನ್ನ ಬಳಿಗೆ ಬಂದು ನನ್ನೊಡನೆ ಸಮಾಧಾನ ಮಾಡಿಕೊಳ್ಳುವುದಾದರೆ
    ಅವನು ನನ್ನ ಬಳಿಗೆ ಬಂದು ಸಮಾಧಾನದಲ್ಲಿರಲಿ.
ಜನರು ನನ್ನ ಬಳಿಗೆ ಬರುವರು.
    ಆ ಜನರು ಮುಂದಿನ ಕಾಲದಲ್ಲಿ ಯಾಕೋಬನನ್ನು ಆಳವಾದ ಬೇರುಳ್ಳ ಗಿಡದಂತೆ ಬಲಶಾಲಿಯನ್ನಾಗಿ ಮಾಡುವರು.
ಬೆಳೆದು ಹೂಬಿಡುವ ಗಿಡದಂತೆ ಅವರು ಇಸ್ರೇಲಿಗೆ ಮಾಡುವರು.
    ಹಣ್ಣುಗಳಂತೆ ಇಸ್ರೇಲರ ಮಕ್ಕಳು ಭೂಮಿಯ ಮೇಲೆ ತುಂಬಿಹೋಗುವರು.”

ದೇವರು ಇಸ್ರೇಲರನ್ನು ಕಳುಹಿಸಿ ಬಿಡುವನು

ಯೆಹೋವನು ತನ್ನ ಜನರನ್ನು ಹೇಗೆ ಶಿಕ್ಷಿಸುವನು? ಹಿಂದಿನ ಕಾಲದಲ್ಲಿ ಶತ್ರುಗಳು ಜನರನ್ನು ಗಾಯಪಡಿಸಿದರು. ಯೆಹೋವನೂ ಹಾಗೆ ಮಾಡುವನೇ? ಹಿಂದಿನ ಕಾಲದಲ್ಲಿ ಅನೇಕ ಮಂದಿ ಕೊಲ್ಲಲ್ಪಟ್ಟರು. ಹಾಗೆಯೇ ಯೆಹೋವನು ಜನರನ್ನು ಕೊಲ್ಲುವನೇ?

ಯೆಹೋವನು ತನ್ನ ಜನರನ್ನು ದೂರದೇಶಕ್ಕೆ ಕಳುಹಿಸುವದರ ಮೂಲಕ ಅವರನ್ನು ಶಿಕ್ಷಿಸುವನು. ಇಸ್ರೇಲರೊಂದಿಗೆ ಯೆಹೋವನು ಕಟುವಾಗಿ ಮಾತನಾಡುವನು. ಆತನ ಮಾತುಗಳು ಮರುಭೂಮಿಯ ಬಿಸಿಗಾಳಿಯಂತೆ ಸುಡುವವು.

ಯಾಕೋಬನ ದೋಷವು ಹೇಗೆ ಕ್ಷಮಿಸಲ್ಪಡುವದು? ಅವನ ಪಾಪಗಳು ನಿವಾರಣೆಯಾಗುವದಕ್ಕೆ ಏನು ಮಾಡಬೇಕಾಗುವದು? ಇತರ ದೇವತೆಗಳ ಪೂಜಾಸ್ಥಳಗಳೂ ವೇದಿಕೆಯ ಕಲ್ಲುಗಳೂ ಪುಡಿಪುಡಿಯಾಗಿ ನಾಶವಾಗುವವು.

10 ಆ ಸಮಯದಲ್ಲಿ ಆ ಮಹಾನಗರವು ನಿರ್ಜನವಾಗಿರುವದು. ಅದು ಮರುಭೂಮಿಯಂತಿರುವದು. ಜನರೆಲ್ಲರೂ ಹೊರಟುಹೋಗಿರುವರು. ಅವರು ಪಲಾಯನಗೈದಿದ್ದಾರೆ. ನಗರವು ತೆರೆದ ಹುಲ್ಲುಗಾವಲಿನಂತಿರುವುದು. ಪಶುಗಳು ಅಲ್ಲಿ ಹುಲ್ಲನ್ನು ಮೇಯುತ್ತವೆ. ದನಗಳು ದ್ರಾಕ್ಷಾಲತೆಯ ಚಿಗುರೆಲೆಗಳನ್ನು ತಿನ್ನುವವು. 11 ದ್ರಾಕ್ಷಿಬಳ್ಳಿ ಒಣಗಿಹೋಗುವದು. ಅದರ ಕೊಂಬೆಗಳು ಮುರಿದುಬೀಳುವವು. ಹೆಂಗಸರು ಆ ಕೊಂಬೆಗಳನ್ನು ಸೌದೆಯಾಗಿ ಉಪಯೋಗಿಸುವರು.

ಜನರು ತಿಳಿದುಕೊಳ್ಳುವದಕ್ಕೆ ಮನಸ್ಸು ಕೊಡುವದಿಲ್ಲ. ಆದ್ದರಿಂದ ಅವರ ನಿರ್ಮಾಣಿಕನಾದ ದೇವರು ಅವರನ್ನು ಸಂತೈಸುವದಿಲ್ಲ. ಅವರ ನಿರ್ಮಾಣಿಕನು ಅವರಿಗೆ ದಯೆ ತೋರುವದಿಲ್ಲ.

12 ಆ ಸಮಯದಲ್ಲಿ, ಯೆಹೋವನು ತನ್ನ ಜನರನ್ನು ಬೇರೆಯವರಿಂದ ಬೇರ್ಪಡಿಸುವನು. ಆತನು ಯೂಫ್ರೇಟೀಸ್ ನದಿಯಿಂದ ಪ್ರಾರಂಭಿಸಿ ಈಜಿಪ್ಟಿನ ನದಿಯತನಕ ಎಲ್ಲಾ ಜನರನ್ನು ಒಟ್ಟುಗೂಡಿಸುವನು.

ಇಸ್ರೇಲ್ ಜನರೇ, ನೀವು ಒಬ್ಬೊಬ್ಬರಾಗಿಯೇ ಒಟ್ಟುಗೂಡಿಸಲ್ಪಡುವಿರಿ. 13 ನನ್ನ ಜನರಲ್ಲಿ ಹೆಚ್ಚಿನವರು ಅಶ್ಶೂರದಲ್ಲಿ ಈಗ ಕಳೆದುಹೋಗಿರುತ್ತಾರೆ; ಕೆಲವರು ಈಜಿಪ್ಟಿಗೆ ಓಡಿಹೋಗಿದ್ದಾರೆ. ಆ ಸಮಯದಲ್ಲಿ ಮಹಾದೊಡ್ಡ ತುತ್ತೂರಿಯ ಶಬ್ದವು ಕೇಳಿಸುವದು. ಆಗ ಆ ಜನರೆಲ್ಲರೂ ಜೆರುಸಲೇಮಿಗೆ ಹಿಂತಿರುಗುವರು. ಆ ಜನರು ಪರಿಶುದ್ಧ ಪರ್ವತದ ಮೇಲೆ ಯೆಹೋವನ ಮುಂದೆ ಅಡ್ಡಬೀಳುವರು.

ಫಿಲಿಪ್ಪಿಯವರಿಗೆ 2

ಐಕ್ಯಮತದಿಂದಿದ್ದು ಒಬ್ಬರನ್ನೊಬ್ಬರು ಪರಾಂಬರಿಸಿರಿ

ನಿಮ್ಮಲ್ಲಿ ಕ್ರಿಸ್ತನಿಂದಾದ ಉತ್ತೇಜನ, ಪ್ರೀತಿಯ ಪ್ರೇರಣೆ, ಪವಿತ್ರಾತ್ಮನ ಅನ್ಯೋನ್ಯತೆ, ಕಾರುಣ್ಯ ದಯಾರಸಗಳು ಇವೆಯೋ? ನಿಮ್ಮಲ್ಲಿ ಇವುಗಳು ಇರುವುದಾದರೆ, ನೀವೆಲ್ಲರೂ ಏಕಮನಸ್ಸುಳ್ಳವರಾಗಿರಿ. ಆಗ ನನ್ನ ಸಂತೋಷವು ಪರಿಪೂರ್ಣವಾಗುವುದು. ಒಬ್ಬರಿಗೊಬ್ಬರು ಒಂದೇ ಪ್ರೀತಿ ಉಳ್ಳವರಾಗಿರಿ. ಅನ್ಯೋನ್ಯಭಾವವುಳ್ಳವರಾಗಿದ್ದು ಒಂದೇ ಗುರಿಯಿಂದ ಜೀವಿಸಿರಿ. ನೀವು ಯಾವುದನ್ನೇ ಮಾಡುವಾಗ, ಸ್ವಾರ್ಥವಾಗಲಿ ಅಹಂಕಾರವಾಗಲಿ ನಿಮಗೆ ಮಾರ್ಗದರ್ಶಕವಾಗದಂತೆ ನೋಡಿಕೊಳ್ಳಿರಿ. ದೀನಭಾವವುಳ್ಳವರಾಗಿದ್ದು ನಿಮಗಿಂತಲೂ ಹೆಚ್ಚಾಗಿ ಬೇರೆಯವರಿಗೆ ಗೌರವವನ್ನು ಕೊಡಿರಿ. ನಿಮ್ಮ ಅಭಿಲಾಷೆಗಳ ಬಗ್ಗೆ ಮಾತ್ರ ಚಿಂತಿಸದೆ ಇತರರ ಜೀವಿತದ ಬಗ್ಗೆಯೂ ಚಿಂತಿಸಿರಿ.

ನಿಸ್ವಾರ್ಥರಾಗಿರುವುದನ್ನು ಕ್ರಿಸ್ತನಿಂದ ಕಲಿತುಕೊಳ್ಳಿರಿ

ಕ್ರಿಸ್ತ ಯೇಸುವಿನಲ್ಲಿದ್ದಂಥ ಮನಸ್ಸು ನಿಮ್ಮಲ್ಲಿಯೂ ಇರಲಿ.

ಆತನು ದೇವಸ್ವರೂಪನಾಗಿದ್ದರೂ ದೇವರಿಗೆ ಸರಿಸಮನಾಗಿದ್ದರೂ
    ಆ ಪದವಿಯನ್ನು ಬಿಡಲಾರೆ ಎನ್ನಲಿಲ್ಲ.
ಆ ಪದವಿಯನ್ನು ಆತನು ಬಿಟ್ಟುಕೊಟ್ಟು
    ಸೇವಕನ ಸ್ವಭಾವವನ್ನು ಧರಿಸಿಕೊಂಡು ಮಾನವ ರೂಪದಲ್ಲಿ ಬಂದನು.
ಆತನು ಮನುಷ್ಯನಾಗಿ ಜೀವಿಸುತ್ತಿದ್ದಾಗ
    ತನ್ನನ್ನು ತಗ್ಗಿಸಿಕೊಂಡು ಮರಣವನ್ನೂ ಕಡೆಗಣಿಸಿ ದೇವರಿಗೆ ಸಂಪೂರ್ಣ ವಿಧೇಯನಾಗಿ,
    ಶಿಲುಬೆಯ ಮೇಲೆ ಪ್ರಾಣವನ್ನೇ ಕೊಟ್ಟನು.
ಆದ್ದರಿಂದ ದೇವರು ಆತನನ್ನು ಅತ್ಯುನ್ನತವಾದ ಸ್ಥಾನಕ್ಕೇರಿಸಿ
    ಉಳಿದೆಲ್ಲ ಹೆಸರುಗಳಿಗಿಂತ ಶ್ರೇಷ್ಠವಾದ ಹೆಸರನ್ನು ಆತನಿಗೆ ದಯಪಾಲಿಸಿದ್ದಾನೆ.
10 ಆದ್ದರಿಂದ ಪರಲೋಕದಲ್ಲಿಯೂ ಭೂಲೋಕದಲ್ಲಿಯೂ ಪಾತಾಳದಲ್ಲಿಯೂ ಇರುವ ಪ್ರತಿಯೊಬ್ಬರು
    ಯೇಸುವಿನ ಹೆಸರಿನಲ್ಲಿ ಅಡ್ಡಬಿದ್ದು,
11 “ಯೇಸು ಕ್ರಿಸ್ತನೇ ಪ್ರಭು”ವೆಂದು ಹೇಳುವರು.
    ಇದರಿಂದ ತಂದೆಯಾದ ದೇವರಿಗೆ ಮಹಿಮೆ ಉಂಟಾಗುವುದು.

ದೇವರ ಇಷ್ಟಕ್ಕನುಸಾರವಾದ ಜನರಾಗಿರಿ

12 ನನ್ನ ಪ್ರಿಯ ಸ್ನೇಹಿತರೇ, ನಾನು ನಿಮ್ಮಲ್ಲಿದ್ದಾಗ ನೀವು ಯಾವಾಗಲೂ ನನ್ನ ಮಾತಿನಂತೆ ನಡೆದುಕೊಂಡಿರಿ. ಈಗ ನಾನು ದೂರವಿರುವಾಗಲೂ ಇನ್ನೂ ಹೆಚ್ಚಿನ ಆಸಕ್ತಿಯಿಂದ ನಡೆದುಕೊಳ್ಳಿರಿ. ನೀವು ದೇವರಿಗೆ ಭಯಭಕ್ತಿಯಿಂದಿದ್ದು ನಿಮ್ಮ ರಕ್ಷಣೆಯನ್ನು ಸಾಧಿಸಿಕೊಳ್ಳಿರಿ. 13 ಹೌದು, ಆತನಿಗೆ ಮೆಚ್ಚಿಕೆಕರವಾದ ಕಾರ್ಯಗಳನ್ನು ಮಾಡಬೇಕೆಂಬ ಅಪೇಕ್ಷೆಯನ್ನು ಆತನೇ ನಿಮ್ಮಲ್ಲಿ ಹುಟ್ಟಿಸುತ್ತಾನೆ ಅಲ್ಲದೆ ಅವುಗಳನ್ನು ಮಾಡಲು ಆತನೇ ನಿಮಗೆ ಶಕ್ತಿಯನ್ನು ಕೊಡುತ್ತಾನೆ.

14 ನೀವು ಮಾಡುವ ಪ್ರತಿಯೊಂದನ್ನು ಗುಣಗುಟ್ಟದೆಯೂ ವಿವಾದವಿಲ್ಲದೆಯೂ ಮಾಡಿರಿ. 15 ಆಗ ಮುಗ್ಧರೂ ಪರಿಶುದ್ಧರೂ ಆಗಿದ್ದು ಕಳಂಕರಹಿತವಾದ ದೇವಮಕ್ಕಳಾಗಿರುತ್ತೀರಿ. ದುಷ್ಟಜನರ ಮಧ್ಯದಲ್ಲಿ ವಾಸವಾಗಿರುವ ನೀವು ಕಾರ್ಗತ್ತಲೆಯಲ್ಲಿ ಪ್ರಕಾಶಿಸುವ ನಕ್ಷತ್ರಮಂಡಲದಂತಿದ್ದೀರಿ. 16 ಜೀವದಾಯಕವಾದ ವಾಕ್ಯವನ್ನು ನೀವು ಆ ಜನರಿಗೆ ಕೊಟ್ಟರೆ, ಕ್ರಿಸ್ತನು ಬಂದಾಗ ನಾನು ಹೆಮ್ಮೆಯಿಂದಿರಲು ಸಾಧ್ಯವಾಗುತ್ತದೆ, ಏಕೆಂದರೆ ನನ್ನ ಕೆಲಸವು ವ್ಯರ್ಥವಾಗಲಿಲ್ಲ. ನಾನು ಪಂದ್ಯದಲ್ಲಿ ಓಡಿ ಗೆದ್ದೆನು.

17 ನೀವು ನಿಮ್ಮ ಜೀವಿತಗಳನ್ನು ದೇವರ ಸೇವೆಗಾಗಿ ಯಜ್ಞದೋಪಾದಿಯಲ್ಲಿ ಅರ್ಪಿಸಿಕೊಳ್ಳಲು ನಿಮ್ಮ ನಂಬಿಕೆಯು ನಿಮ್ಮನ್ನು ಪ್ರೇರೇಪಿಸುತ್ತದೆ. ಒಂದುವೇಳೆ, ನಿಮ್ಮ ಯಜ್ಞದೊಡನೆ ನಾನೇ ಪಾನದ್ರವ್ಯವಾಗಿ ಅರ್ಪಿತವಾಗಬೇಕಾದರೂ ಸಂತೋಷಿಸುತ್ತೇನೆ, ನಿಮ್ಮೆಲ್ಲರೊಂದಿಗೆ ಸಂತೋಷಿಸುತ್ತೇನೆ. 18 ಹಾಗೆಯೇ ನೀವು ಸಹ ಸಂತೋಷಿಸಿರಿ, ನನ್ನೊಂದಿಗೆ ಸಂತೋಷಿಸಿರಿ.

ತಿಮೊಥೆ ಮತ್ತು ಎಪಫ್ರೊದೀತರ ಸುದ್ದಿ

19 ನಿಮ್ಮ ಬಳಿಗೆ ತಿಮೊಥೆಯನನ್ನು ಆದಷ್ಟು ಬೇಗನೆ ಕಳುಹಿಸಿಕೊಡಲು ಪ್ರಭುವಾದ ಯೇಸುವಿನಲ್ಲಿ ನಿರೀಕ್ಷಿಸುತ್ತಿದ್ದೇನೆ. ಅವನ ಮೂಲಕ ನಿಮ್ಮ ಯೋಗಕ್ಷೇವುವನ್ನು ತಿಳಿದುಕೊಳ್ಳುವುದರಿಂದ ನನಗೆ ಪ್ರೋತ್ಸಾಹವಾಗಬಹುದು. 20 ಅವನಂತೆ ನಿಮ್ಮ ವಿಷಯದಲ್ಲಿ ನಿಜವಾಗಿಯೂ ಚಿಂತಿಸುವವರು ನನ್ನ ಬಳಿ ಯಾರೂ ಇಲ್ಲ. 21 ಉಳಿದವರು ಕೇವಲ ತಮ್ಮ ಬಗ್ಗೆ ಚಿಂತಿಸುತ್ತಾರೆಯೇ ಹೊರತು ಕ್ರಿಸ್ತ ಯೇಸುವಿನ ಸೇವೆಯ ಬಗ್ಗೆ ಚಿಂತಿಸುವುದಿಲ್ಲ. 22 ತಿಮೊಥೆಯನು ಎಂಥವನೆಂಬುದು ನಿಮಗೆ ಗೊತ್ತಿದೆ. ಮಗನು ತನ್ನ ತಂದೆಯೊಡನೆ ಸೇವೆ ಮಾಡುವಂತೆ ಅವನು ಸುವಾರ್ತೆಯನ್ನು ತಿಳಿಸುವುದರಲ್ಲಿ ನನ್ನೊಂದಿಗೆ ಸೇವೆ ಮಾಡಿದನು. 23 ನನ್ನ ಬಗ್ಗೆ ನಡೆಯುತ್ತಿರುವ ವಿಚಾರಣೆಯ ಫಲಿತಾಂಶವು ತಿಳಿದಕೂಡಲೇ ಅವನನ್ನು ನಿಮ್ಮ ಬಳಿಗೆ ಕಳುಹಿಸುತ್ತೇನೆ. 24 ಅಲ್ಲದೆ ಪ್ರಭುವಿನ ಸಹಾಯದಿಂದ ನಿಮ್ಮ ಬಳಿಗೆ ಅದಷ್ಟು ಬೇಗನೆ ಬರುತ್ತೇನೆ ಎಂಬ ಭರವಸೆ ನನಗಿದೆ.

25 ಎಪಫ್ರೊದೀತನು ಕ್ರಿಸ್ತನಲ್ಲಿ ನನ್ನ ಸಹೋದರನಾಗಿದ್ದಾನೆ. ಕ್ರಿಸ್ತನ ಸೈನ್ಯದಲ್ಲಿ ಅವನು ನನ್ನೊಂದಿಗೆ ಕೆಲಸ ಮಾಡುತ್ತಿದ್ದಾನೆ ಮತ್ತು ಸೇವೆ ಮಾಡುತ್ತಿದ್ದಾನೆ. ನನಗೆ ಸಹಾಯಬೇಕಿದ್ದಾಗ, ನೀವು ಅವನನ್ನು ನನ್ನ ಬಳಿಗೆ ಕಳುಹಿಸಿಕೊಟ್ಟಿರಿ. ಈಗ ನಾನು ಅವನನ್ನು ನಿಮ್ಮ ಬಳಿಗೆ ಮತ್ತೆ ಕಳುಹಿಸಬೇಕೆಂದಿದ್ದೇನೆ. 26 ಏಕೆಂದರೆ ಅವನು ನಿಮ್ಮೆಲ್ಲರನ್ನು ನೋಡಲು ಬಹು ತವಕಪಡುತ್ತಿದ್ದಾನೆ. ತಾನು ಅಸ್ವಸ್ಥನಾಗಿದ್ದದ್ದು ನಿಮಗೆ ತಿಳಿದದ್ದರಿಂದ ಅವನಿಗೆ ಚಿಂತೆಯಾಗಿದೆ. 27 ಅವನು ಅನಾರೋಗ್ಯದಿಂದ ಸಾಯುವ ಸ್ಥಿತಿಯಲ್ಲಿದ್ದನು. ಆದರೆ ದೇವರು ಅವನನ್ನು ಕರುಣಿಸಿದನು; ಅವನನ್ನು ಮಾತ್ರವಲ್ಲದೆ ನನ್ನನ್ನು ಸಹ ಕರುಣಿಸಿದನು. 28 ಆದ್ದರಿಂದ ಅವನನ್ನು ನಿಮ್ಮ ಬಳಿಗೆ ಕಳುಹಿಸಿಕೊಡಲು ನಾನು ಬಹಳ ತವಕಪಡುತ್ತಿದ್ದೇನೆ. ನೀವು ಅವನನ್ನು ನೋಡಿದಾಗ ಸಂತೋಷಪಡುತ್ತೀರಿ ಮತ್ತು ನಿಮ್ಮ ವಿಷಯದಲ್ಲಿ ನನಗಿರುವ ಚಿಂತೆಯು ಕೊನೆಗೊಳ್ಳುತ್ತದೆ. 29 ಮಹಾ ಆನಂದದಿಂದ ಪ್ರಭುವಿನಲ್ಲಿ ಅವನನ್ನು ಸ್ವಾಗತಿಸಿರಿ. ಎಪಫ್ರೊದೀತನಂಥ ಜನರನ್ನು ಗೌರವಿಸಿರಿ. 30 ಅವನು ಕ್ರಿಸ್ತನ ಕೆಲಸಕ್ಕಾಗಿ ಬಹುಮಟ್ಟಿಗೆ ತನ್ನ ಪ್ರಾಣವನ್ನೇ ಕೊಟ್ಟದ್ದರಿಂದ ಅವನಿಗೆ ಮಾನ್ಯತೆ ದೊರೆಯಬೇಕು. ನನಗೆ ಸಹಾಯಮಾಡಲು ಅವನು ತನ್ನ ಪ್ರಾಣವನ್ನೇ ಅಪಾಯಕ್ಕೆ ಈಡುಮಾಡಿಕೊಂಡನು. ಈ ರೀತಿಯ ಸಹಾಯ ಮಾಡಲು ನಿಮಗೆ ಸಾಧ್ಯವಾಗಲಿಲ್ಲ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International