Print Page Options
Previous Prev Day Next DayNext

Old/New Testament

Each day includes a passage from both the Old Testament and New Testament.
Duration: 365 days
Kannada Holy Bible: Easy-to-Read Version (KERV)
Version
ಯೆಶಾಯ 20-22

ಅಶ್ಶೂರವು ಈಜಿಪ್ಟ್ ಮತ್ತು ಇಥಿಯೋಪ್ಯವನ್ನು ಸೋಲಿಸುವದು

20 ಸರ್ಗೋನ್ ಅಶ್ಶೂರದ ರಾಜನಾಗಿದ್ದನು. ಇವನು ತರ್ತಾನನ್ನು ಅಷ್ಡೋದಿಗೆ ವಿರುದ್ಧವಾಗಿ ಯುದ್ಧಮಾಡಲು ಕಳುಹಿಸಿದನು. ತರ್ತಾನ್ ಎಂಬವನು ಅಷ್ಡೋದ್ ನಗರಕ್ಕೆ ಹೋಗಿ ಅದನ್ನು ವಶಪಡಿಸಿಕೊಂಡನು. ಆ ಸಮಯದಲ್ಲಿ ಆಮೋಚನ ಮಗನಾದ ಯೆಶಾಯನೊಂದಿಗೆ ಯೆಹೋವನು ಮಾತನಾಡಿದನು. “ನಿನ್ನ ಶೋಕವಸ್ತ್ರಗಳನ್ನು ತೆಗೆದುಹಾಕು. ನಿನ್ನ ಕಾಲುಗಳಿಂದ ಪಾದರಕ್ಷೆಗಳನ್ನು ತೆಗೆದುಬಿಡು” ಎಂದು ಯೆಹೋವನು ಹೇಳಿದಾಗ ಯೆಶಾಯನು ಆತನಿಗೆ ವಿಧೇಯನಾದನು. ಯೆಶಾಯನು ಪಾದರಕ್ಷೆಗಳಿಲ್ಲದೆ, ಬಟ್ಟೆಗಳಿಲ್ಲದೆ ಅಡ್ಡಾಡಿದನು.

ಆಗ ಯೆಹೋವನು, “ಮೂರು ವರ್ಷಗಳ ತನಕ ನನ್ನ ಸೇವಕನಾದ ಯೆಶಾಯನು ಬಟ್ಟೆ ಇಲ್ಲದೆ, ಪಾದರಕ್ಷೆ ಇಲ್ಲದೆ ನಡೆದಾಡಿದ್ದಾನೆ. ಇದು ಈಜಿಪ್ಟಿಗೂ ಇಥಿಯೋಪ್ಯಕ್ಕೂ ಗುರುತಾಗಿದೆ. ಅಶ್ಶೂರದ ಅರಸನು ಈಜಿಪ್ಟನ್ನೂ ಇಥಿಯೋಪ್ಯವನ್ನೂ ಸೋಲಿಸುವನು. ಅಶ್ಶೂರವು ಜನರನ್ನು ಸೆರೆಹಿಡಿದು ಅವರ ರಾಜ್ಯಗಳಿಂದ ಹೊರಗೆ ಕೊಂಡುಹೋಗುವದು. ವೃದ್ಧರೂ ಬಾಲಕರೂ ಬಟ್ಟೆಯಿಲ್ಲದೆಯೂ ಪಾದರಕ್ಷೆಗಳಿಲ್ಲದೆಯೂ ಇರುವರು. ಅವರು ಪೂರ್ಣ ಬೆತ್ತಲೆಯಾಗಿರುವರು. ಈಜಿಪ್ಟಿನ ಜನರು ನಾಚಿಕೆಗೆ ತುತ್ತಾಗುವರು. ಜನರು ಇಥಿಯೋಪ್ಯದ ಕಡೆಗೆ ಸಹಾಯಕ್ಕಾಗಿ ನೋಡುವರು. ಅವರು ಕಂಗೆಟ್ಟು ಹೋಗುವರು. ಈಜಿಪ್ಟಿನ ಮಹಿಮೆಯನ್ನು ಗಮನಿಸಿದವರು ಈಗ ನಾಚಿಕೆಯಲ್ಲಿ ಬೀಳುವರು” ಎನ್ನುವನು.

ಸಮುದ್ರ ತೀರದಲ್ಲಿ ವಾಸಿಸುವವರು ಹೀಗೆ ಹೇಳುವರು: “ಆ ದೇಶದವರು ನಮಗೆ ಸಹಾಯ ಮಾಡುವರೆಂದು ಅವರನ್ನು ನಂಬಿದೆವು. ಅಶ್ಶೂರದ ಅರಸನಿಂದ ನಮ್ಮನ್ನು ಕಾಪಾಡುವಂತೆ ನಾವು ಅವರ ಬಳಿಗೆ ಓಡಿಹೋದೆವು. ಆದರೆ ಈಗ ನೋಡಿ, ಆ ದೇಶದವರು ಸೋತು ಹೋಗಿ ವೈರಿವಶವಾಗಿದ್ದಾರೆ. ಈಗ ನಾವು ಪಾರಾಗಲು ಹೇಗೆ ಸಾಧ್ಯ?”

ಬಾಬಿಲೋನಿಗೆ ದೇವರ ಸಂದೇಶ

21 ಸಮುದ್ರದ ಮರುಭೂಮಿಗೆ ದುಃಖದ ಸಂದೇಶ:

ನೆಗೆವ್ ಮೂಲಕ ಬೀಸುವ ಬಿರುಗಾಳಿಯಂತೆ ಮರುಭೂಮಿಯಿಂದಲೂ
    ಭಯಂಕರ ದೇಶದಿಂದಲೂ ಒಬ್ಬನು ದಂಡೆತ್ತಿ ಬರುವನು.
ನಡೆಯಲಿರುವ ಒಂದು ಭಯಂಕರ ಘಟನೆಯನ್ನು ನಾನು ದರ್ಶನದಲ್ಲಿ ನೋಡಿದ್ದೇನೆ.
    ನಿನಗೆ ವಿರುದ್ಧವಾಗಿ ದ್ರೋಹಿಗಳು ಏಳುತ್ತಿದ್ದಾರೆ.
    ನಿನ್ನ ಧನೈಶ್ವರ್ಯಗಳನ್ನು ಜನರು ಕಿತ್ತುಕೊಳ್ಳುತ್ತಿದ್ದಾರೆ.

ಏಲಾಮೇ, ಹೋಗಿ ಆ ಜನರೊಂದಿಗೆ ಹೋರಾಡು.
    ಮೇದ್ಯವೇ, ಆ ಪಟ್ಟಣವನ್ನು ನಿನ್ನ ಸೈನ್ಯದಿಂದ ಸೋಲಿಸು.
    ಆ ನಗರದ ಎಲ್ಲಾ ದುಷ್ಟತನವನ್ನು ನಾನು ಕೊನೆಗಾಣಿಸುವೆನು.

ನಾನು ಆ ಭಯಂಕರ ಸಂಗತಿಗಳನ್ನು ನೋಡಿದ್ದರಿಂದ ಈಗ ಭಯಪೀಡಿತನಾಗಿದ್ದೇನೆ.
    ಭಯದಿಂದ ನನ್ನ ಹೊಟ್ಟೆಯು ನೋಯುತ್ತಿದೆ. ಆ ನೋವು ಪ್ರಸವವೇದನೆಯಂತಿದೆ.
ನಾನು ಕೇಳುವ ವಿಷಯಗಳು ನನ್ನನ್ನು ಭಯಪಡಿಸಿವೆ;
    ನಾನು ನೋಡುವ ವಿಷಯಗಳು ನನ್ನನ್ನು ನಡುಗಿಸುತ್ತಿವೆ.
ನಾನು ಚಿಂತೆಯಿಂದಲೂ ಭಯದಿಂದಲೂ ನಡುಗುತ್ತಿದ್ದೇನೆ.
    ನನ್ನ ಆನಂದದ ರಾತ್ರಿಯು ಭಯಂಕರವಾಗಿದೆ.

ಜನರಾದರೋ, “ಊಟ ಬಡಿಸಿರಿ!
    ತಿನ್ನೋಣ, ಕುಡಿಯೋಣ” ಎಂದು ಹೇಳುತ್ತಿದ್ದಾರೆ.
ಅದೇ ಸಮಯದಲ್ಲಿ ಸೈನಿಕರು, “ಕಾವಲುಗಾರರನ್ನು ಇರಿಸಿರಿ,
    ಸೇನಾಪತಿಗಳೇ ಎದ್ದೇಳಿರಿ,
    ನಿಮ್ಮ ಗುರಾಣಿಗಳನ್ನು ಉಜ್ಜಿ ನಯಗೊಳಿಸಿರಿ” ಎಂದು ಹೇಳುತ್ತಿದ್ದಾರೆ.

ನನ್ನ ಒಡೆಯನು ನನಗೆ, “ಹೋಗಿ ಈ ನಗರವನ್ನು ಕಾಯಲು ಒಬ್ಬ ಮನುಷ್ಯನನ್ನು ಕಂಡುಹಿಡಿ. ಅವನು ಏನೂ ನೋಡಿದರೂ ನಮಗೆ ತಿಳಿಸಬೇಕು. ಅವನು ಸಾಲಾಗಿ ಬರುತ್ತಿರುವ ಸೈನಿಕರನ್ನೋ, ಕತ್ತೆಗಳನ್ನೋ, ಒಂಟೆಗಳನ್ನೋ ನೋಡಿದರೆ ಬಹಳ ಸೂಕ್ಷ್ಮವಾಗಿ ಆಲಿಸಬೇಕು.”

ಒಂದು ದಿವಸ ಆ ಕಾವಲುಗಾರನು,

“ನನ್ನ ಒಡೆಯನೇ, ಪ್ರತಿ ದಿನವೂ ನಾನು ಹಗಲಿರುಳು
    ಕಾವಲಿನ ಬುರುಜಿನಲ್ಲಿ ನಿಂತುಕೊಂಡು ಕಾವಲು ಕಾಯುತ್ತಿದ್ದೇನೆ;
ನೋಡು, ಅವರು ಬರುತ್ತಿದ್ದಾರೆ. ಅಶ್ವದಳಗಳು ಸಾಲುಸಾಲಾಗಿಯೂ ಬರುತ್ತಿವೆ” ಎಂದು ಕೂಗಿಕೊಂಡನು.

ಆಗ ಒಬ್ಬ ದೂತನು,
    “ಬಾಬಿಲೋನಿಗೆ ಸೋಲಾಯಿತು.
    ಬಾಬಿಲೋನು ನೆಲಕ್ಕೆ ಅಪ್ಪಳಿಸಲ್ಪಟ್ಟಿತು.
ಅದರ ದೇವ ದೇವತೆಯರ ವಿಗ್ರಹಗಳೆಲ್ಲಾ
    ನೆಲದ ಮೇಲೆ ಚೂರುಚೂರಾಗಿ ಬಿದ್ದಿವೆ” ಎಂದು ಹೇಳಿದನು.

10 ನನ್ನ ಬಡಿತಕ್ಕೆ ಈಡಾದ ಜನರೇ, ಸರ್ವಶಕ್ತನೂ ದೇವರೂ ಆಗಿರುವ ಯೆಹೋವನು ಹೇಳಿದ್ದನ್ನೆಲ್ಲಾ ಇಸ್ರೇಲರಾದ ನಿಮಗೆ ತಿಳಿಸಿದ್ದೇನೆ. ಕಣದಲ್ಲಿ ಧಾನ್ಯವು ನುಚ್ಚುನೂರಾಗುವಂತೆ ನೀವು ನಜ್ಜುಗುಜ್ಜಾಗುವಿರಿ.

ಎದೋಮಿಗೆ ದೇವರ ಸಂದೇಶ

11 ದೂಮದ ಕುರಿತು ದುಃಖದ ದೈವೋಕ್ತಿ:

ಸೇಯಿರ್‌ನಿಂದ ಎದೋಮನ್ನು ಯಾರೋ ಒಬ್ಬನು,
    “ಕಾವಲುಗಾರನೇ, ರಾತ್ರಿ ಮುಗಿಯಲು ಎಷ್ಟು ಸಮಯ ಉಂಟು?
    ರಾತ್ರಿಗೆ ಇನ್ನು ಎಷ್ಟು ಕಾಲ ಉಂಟು?” ಎಂದು ಕೇಳಿದನು.

12 ಅದಕ್ಕೆ ಕಾವಲುಗಾರ,
    “ಮುಂಜಾನೆ ಬರುತ್ತಿದೆ. ಆದರೆ ರಾತ್ರಿ ತಿರುಗಿ ಬರುತ್ತಿದೆ.
ನೀನೇನಾದರೋ ಕೇಳಬೇಕಿದ್ದರೆ ಮತ್ತೆ ಬಂದು ವಿಚಾರಿಸು”
    ಎಂದು ಉತ್ತರಿಸಿದನು.

ಅರೇಬಿಯಕ್ಕೆ ದೇವರ ಸಂದೇಶ

13 ಅರೇಬಿಯದ ಬಗ್ಗೆ ದುಃಖಕರವಾದ ಸಂದೇಶ:

ದೇದಾನಿನಿಂದ ಬಂದ ಪ್ರಯಾಣಿಕರು
    ಅರೇಬಿಯ ಮರುಭೂಮಿಯಲ್ಲಿನ ಪೊದೆಗಳಲ್ಲಿ ರಾತ್ರಿ ತಂಗಿದರು.
14 ಬಾಯಾರಿದ ಪ್ರಯಾಣಿಕರಿಗೆ ಅವರು ಕುಡಿಯಲು ನೀರು ಕೊಟ್ಟರು.
    ತೇಮದ ಕೆಲವರು ಹಸಿದ ಪ್ರವಾಸಿಗಳಿಗೆ ಊಟ ಕೊಟ್ಟರು.
15 ಅವರು ತಮ್ಮನ್ನು ಸಾಯಿಸಲಿಕ್ಕಿದ್ದ
    ಕತ್ತಿಯಿಂದ ತಪ್ಪಿಸಿಕೊಂಡು ಬಂದವರು.
ಅವರು ತಮ್ಮನ್ನು ಹೊಡೆಯಲು ಸಿದ್ಧವಾಗಿದ್ದ
    ಬಾಣಗಳಿಂದ ಪಾರಾಗಿ ಬಂದವರು.
ಅವರು ಘೋರ ರಣರಂಗದಿಂದ ಓಡಿಬಂದವರು.

16 ನನ್ನ ಒಡೆಯನಾದ ಯೆಹೋವನು ಈ ವಿಷಯಗಳು ಸಂಭವಿಸುವವೆಂದು ಹೇಳಿದನು. ಆತನು ಹೇಳಿದ್ದೇನೆಂದರೆ: “ಇನ್ನೊಂದು ವರ್ಷದಲ್ಲಿ ಕೂಲಿಗಾರನು ತನ್ನ ಸಮಯವನ್ನು ಲೆಕ್ಕಿಸುವಂತೆ ಕೇದಾರಿನ ಘನತೆಯೆಲ್ಲವೂ ಹೋಗಿ ಬಿಡುವದು. 17 ಆ ಸಮಯದಲ್ಲಿ ಕೆಲವೇ ಮಂದಿ ಬಿಲ್ಲುಗಾರರು ಕೇದಾರಿನ ವೀರರೊಳಗಿಂದ ಉಳಿಯುವರು.” ಇಸ್ರೇಲರ ದೇವರಾದ ಯೆಹೋವನು ಇದನ್ನು ನುಡಿದನು.

ಜೆರುಸಲೇಮಿಗೆ ದೇವರ ಸಂದೇಶ

22 ದಿವ್ಯದರ್ಶನದ ಕಣಿವೆಯ ವಿಷಯವಾಗಿ ದುಃಖದ ಸಂದೇಶ:

ಜನಗಳೇ, ನಿಮಗೆ ಏನಾಯಿತು?
    ನಿಮ್ಮ ಮನೆ ಮಾಳಿಗೆಯ ಮೇಲೆ ಯಾಕೆ ಅಡಗಿರುತ್ತೀರಿ?
ಹಿಂದಿನ ಕಾಲದಲ್ಲಿ ಈ ನಗರವು ಅತ್ಯಂತ ಜನಸಂದಣಿಯಿಂದ ಕೂಡಿತ್ತು.
ಈ ನಗರದಲ್ಲಿ ಗದ್ದಲವೂ ಜನರ ಸಂತಸದ ಧ್ವನಿಯೂ ತುಂಬಿತ್ತು.
    ಆದರೆ ಈಗ ಎಲ್ಲವೂ ಬದಲಾಯಿತು.
ನಿಮ್ಮ ಜನರು ಸತ್ತದ್ದು ಖಡ್ಗದಿಂದಲ್ಲ.
    ಯುದ್ಧದಲ್ಲಿ ಸಾಯದೆ ಬೇರೆ ರೀತಿಯಲ್ಲಿ ಸತ್ತರು.
ಅಧಿಪತಿಗಳೆಲ್ಲಾ ಒಟ್ಟಾಗಿ ಪಲಾಯನಗೈದರು.
    ಆದರೆ ಅವರೆಲ್ಲಾ ಬಿಲ್ಲುಗಳಿಲ್ಲದೆ ಹಿಡಿಯಲ್ಪಟ್ಟರು.
ನಿಮ್ಮ ಎಲ್ಲಾ ಅಧಿಕಾರಿಗಳು ಒಟ್ಟಾಗಿ ಬಹು ದೂರಪ್ರದೇಶಗಳಿಗೆ ಓಡಿದರು.
    ಆದರೆ ಅವರೆಲ್ಲಾ ಹಿಡಿಯಲ್ಪಟ್ಟರು.

ಆದ್ದರಿಂದ ನಾನು ಹೇಳುವುದೇನೆಂದರೆ: “ನೀವು ನನ್ನ ಕಡೆಗೆ ನೋಡಬೇಡಿ!
    ನನ್ನನ್ನು ಅಳಲು ಬಿಡಿರಿ!
ಜೆರುಸಲೇಮಿನ ನಾಶನದ ಕುರಿತಾಗಿ ನನ್ನನ್ನು ಕೂಡಲೇ ಸಂತೈಸಬೇಡಿರಿ.”

ಯೆಹೋವನು ಒಂದು ವಿಶೇಷ ದಿನವನ್ನು ಆರಿಸಿರುತ್ತಾನೆ. ಆ ದಿನದಲ್ಲಿ ಗಲಭೆ ಮತ್ತು ಗಲಿಬಿಲಿಯು ಇರುವದು. ದಿವ್ಯದರ್ಶನದ ಕಣಿವೆಯಲ್ಲಿ ಜನರು ಒಬ್ಬರನ್ನೊಬ್ಬರು ತುಳಿದುಕೊಂಡು ಅವರ ಮೇಲೆಯೇ ನಡೆದುಕೊಂಡು ಹೋಗುವರು. ನಗರದ ಕೋಟೆಗೋಡೆಗಳು ಕೆಡವಲ್ಪಡುವವು. ಕಣಿವೆಯಲ್ಲಿ ವಾಸಿಸುವ ಜನರು ಬೆಟ್ಟದ ಮೇಲಿನ ನಗರದ ಜನರಿಗೆ ಚೀರಾಡುವರು. ಏಲಾಮಿನ ಅಶ್ವಸೈನಿಕರು ತಮ್ಮ ಬತ್ತಳಿಕೆಯನ್ನು ತೆಗೆದುಕೊಂಡು ರಣರಂಗಕ್ಕೆ ಹೊರಡುವರು. ಕೀರ್ ಸ್ಥಳದ ಜನರು ತಮ್ಮ ಗುರಾಣಿಗಳಿಂದ ಶಬ್ದಮಾಡುವರು. ಸೈನ್ಯಗಳು ನಿಮ್ಮ ವಿಶೇಷವಾದ ಕಣಿವೆಯಲ್ಲಿ ಎದುರುಬದುರಾಗಿ ಭೇಟಿಯಾಗುವರು. ಕಣಿವೆಯು ರಥಗಳಿಂದ ತುಂಬಿಹೋಗುವದು. ಅಶ್ವದಳದವರನ್ನು ದ್ವಾರದ ಮುಂದೆ ನಿಲ್ಲಿಸಲಾಗುವದು. ಆ ಸಮಯದಲ್ಲಿ ಯೆಹೂದದ ಜನರು ತಾವು ಕಾಡಿನ ಅರಮನೆಯಲ್ಲಿಟ್ಟಿದ್ದ ಆಯುಧಗಳನ್ನು ಉಪಯೋಗಿಸುವುದಕ್ಕೆ ಮನಸ್ಸು ಮಾಡುವರು. ಯೆಹೂದವನ್ನು ರಕ್ಷಿಸುವ ಗೋಡೆಗಳನ್ನು ಶತ್ರುಗಳು ಕೆಡವಿಹಾಕುವರು.

9-11 ದಾವೀದ ನಗರದ ಕೋಟೆಗೋಡೆಗಳಲ್ಲಿ ಬಿರುಕುಗಳು ಉಂಟಾಗುವವು. ಆ ಬಿರುಕುಗಳನ್ನು ನೀವು ಸ್ಪಷ್ಟವಾಗಿ ಕಾಣಬಹುದು. ಅದರೊಳಗಿರುವ ಮನೆಗಳನ್ನು ಲೆಕ್ಕ ಮಾಡಬಹುದು. ಆ ಮನೆಗಳ ಕಲ್ಲುಗಳನ್ನು ತೆಗೆದು ಬಿರುಕು ಮುಚ್ಚಲಾಗುವದು. ಎರಡು ಸಾಲು ಕೋಟೆಗೋಡೆಗಳ ಮಧ್ಯದಲ್ಲಿ ಹಳೆಯ ಕಾಲುವೆಯ ಮೂಲಕ ನೀರನ್ನು ತರಿಸಿ ಆ ನೀರನ್ನು ಉಳಿತಾಯ ಮಾಡುವಿರಿ.

ಇವೆಲ್ಲವನ್ನು ನೀವು ನಿಮ್ಮನ್ನು ಸಂರಕ್ಷಿಸಿಕೊಳ್ಳುವದಕ್ಕೋಸ್ಕರ ಮಾಡುವಿರಿ. ಆದರೆ ಇವೆಲ್ಲವನ್ನು ನಿರ್ಮಿಸಿದ ದೇವರ ಮೇಲೆ ನೀವು ನಂಬಿಕೆ ಇಡುವದಿಲ್ಲ. ಇದನ್ನು ಬಹಳ ಕಾಲದ ಹಿಂದೆ ನಿರ್ಮಿಸಿದ ದೇವರನ್ನು ನೀವು ನೋಡುವದಿಲ್ಲ. 12 ನನ್ನ ಒಡೆಯನೂ ಸರ್ವಶಕ್ತನೂ ಆಗಿರುವ ಯೆಹೋವನು ಜನರಿಗೆ, ಅವರ ಸತ್ತುಹೋದ ಸ್ನೇಹಿತರಿಗೋಸ್ಕರ ರೋಧಿಸಿ ದುಃಖಿಸಿರಿ ಎಂದು ಹೇಳುವನು. ಜನರು ತಮ್ಮ ತಲೆಗಳನ್ನು ಬೋಳಿಸಿ ಶೋಕವಸ್ತ್ರಗಳನ್ನು ಧರಿಸುವರು. 13 ಇಗೋ, ಈಗ ಜನರು ಸಂತೋಷಪಡುತ್ತಿದ್ದಾರೆ. ಅವರು ಹರ್ಷಿಸುತ್ತಾ:

“ದನಕುರಿಗಳನ್ನು ಕೊಯ್ಯಿರಿ, ನಾವು ಹಬ್ಬ ಆಚರಿಸೋಣ,
ಊಟಮಾಡಿ ದ್ರಾಕ್ಷಾರಸ ಕುಡಿಯೋಣ,
    ತಿಂದು, ಕುಡಿದು ಸಂತೋಷವಾಗಿರೋಣ. ಯಾಕೆಂದರೆ ನಾಳೆ ನಾವು ಸಾಯುವೆವು” ಎಂದು ಹೇಳುವರು.

14 ಸರ್ವಶಕ್ತನಾದ ಯೆಹೋವನು ನನಗೆ ತಿಳಿಸಿದ ಈ ಮಾತುಗಳನ್ನು ಕಿವಿಯಾರೆ ಕೇಳಿದೆನು: “ನೀವು ಕೆಟ್ಟಕಾರ್ಯಗಳನ್ನು ನಡೆಸಿ ಅಪರಾಧಿಗಳಾಗಿರುವಿರಿ. ನಿಮ್ಮ ದುಷ್ಟತ್ವವು ಕ್ಷಮಿಸಲ್ಪಡುವ ಮುಂಚೆ ನೀವು ಸಾಯುವಿರಿ ಎಂದು ಖಂಡಿತವಾಗಿ ಹೇಳುತ್ತೇನೆ” ಇದು ನನ್ನ ಒಡೆಯನಾದ ಸರ್ವಶಕ್ತನ ನುಡಿಗಳು.

ಶೆಬ್ನಕ್ಕೆ ದೇವರ ಸಂದೇಶ

15 ನನ್ನ ಒಡೆಯನೂ ಸರ್ವಶಕ್ತನೂ ಆದ ಯೆಹೋವನು, “ಸೇವಕನಾದ ಶೆಬ್ನನ ಬಳಿಗೆ ಹೋಗು. ಅವನು ಅರಮನೆಯ ಮೇಲ್ವಿಚಾರಕನಾಗಿದ್ದಾನೆ. 16 ಆ ಸೇವಕನನ್ನು ‘ನೀನಿಲ್ಲಿ ಏನು ಮಾಡುತ್ತಿರುವೆ? ನಿನ್ನ ಕುಟುಂಬದವರಲ್ಲಿ ಯಾರನ್ನಾದರೂ ಇಲ್ಲಿ ಸಮಾಧಿ ಮಾಡಿರುವಿಯಾ? ಇಲ್ಲಿ ಸಮಾಧಿಯನ್ನು ಯಾಕೆ ನಿರ್ಮಿಸಿರುವೆ? ಎಂದು ಕೇಳು.’” ಅದಕ್ಕೆ ಯೆಶಾಯನು, “ಈ ಮನುಷ್ಯನನ್ನು ನೋಡು. ಅವನು ತನ್ನ ಸಮಾಧಿಯನ್ನು ಎತ್ತರವಾದ ಸ್ಥಳದಲ್ಲಿ ಸಿದ್ಧಪಡಿಸುತ್ತಿದ್ದಾನೆ. ಅವನು ಸಮಾಧಿ ಸಿದ್ಧಪಡಿಸಲು ಬಂಡೆಯನ್ನು ಕೊರೆಯುತ್ತಿದ್ದಾನೆ.

17-18 “ಮನುಷ್ಯನೇ, ಯೆಹೋವನು ನಿನ್ನನ್ನು ಧ್ವಂಸ ಮಾಡುವನು. ಆತನು ನಿನ್ನನ್ನು ಚೆಂಡಿನಂತೆ ಉರುಳಿಸಿ ಬಹುದೂರಕ್ಕೆ ಅಂದರೆ ಬೇರೊಂದು ದೇಶದ ತೆರೆದ ತೋಳುಗಳಿಗೆ ಎಸೆದುಬಿಡುವನು. ಅಲ್ಲಿ ನೀನು ಸಾಯುವೆ” ಎಂದು ಹೇಳಿದನು.

ಅದಕ್ಕೆ ಯೆಹೋವನು, “ನೀನು ನಿನ್ನ ರಥಗಳಲ್ಲಿ ಹೆಚ್ಚಳಪಡುತ್ತಿರುವೆ. ಆದರೆ ಆ ದೂರದೇಶದಲ್ಲಿರುವ ನಿನ್ನ ಹೊಸ ಅರಸನ ಬಳಿಯಲ್ಲಿ ಇದಕ್ಕಿಂತಲೂ ಶ್ರೇಷ್ಠವಾದ ರಥಗಳಿವೆ. ಅವನ ಅರಮನೆಯಲ್ಲಿ ನಿನ್ನ ರಥಗಳು ಮುಖ್ಯವಾದವುಗಳಾಗಿರುವುದಿಲ್ಲ. 19 ಇಲ್ಲಿ ನೀನಿರುವ ಮುಖ್ಯ ಹುದ್ದೆಯಿಂದ ನಿನ್ನನ್ನು ತಳ್ಳಿಬಿಡುವೆನು. ನಿನ್ನ ಹೊಸ ಅರಸನು ನಿನ್ನನ್ನು ಆ ಹುದ್ದೆಯಿಂದ ತೆಗೆದುಬಿಡುವನು. 20 ಆ ಸಮಯದಲ್ಲಿ ನನ್ನ ಸೇವಕನೂ ಹಿಲ್ಕೀಯನ ಮಗನೂ ಆದ ಎಲ್ಯಾಕೀಮನನ್ನು ನಾನು ಕರೆಯುವೆನು. 21 ನಿನ್ನ ಬಟ್ಟೆಯನ್ನು ತೆಗೆದು ಆ ಸೇವಕನಿಗೆ ಕೊಡುವೆನು. ನಿನ್ನ ರಾಜದಂಡವನ್ನು ಅವನಿಗೆ ಕೊಡುವೆನು. ನಿನ್ನ ವಿಶೇಷ ಹುದ್ದೆಯನ್ನು ಅವನಿಗೆ ಕೊಡುವೆನು. ಆ ಸೇವಕನು ಯೆಹೂದದ ಜನರಿಗೂ ಜೆರುಸಲೇಮಿನ ಜನರಿಗೂ ತಂದೆಯಂತಿರುವನು.

22 “ದಾವೀದನ ಮನೆಯ ಬೀಗದ ಕೈಯನ್ನು ಅವನ ಕುತ್ತಿಗೆಯಲ್ಲಿರಿಸುವೆನು. ಅವನು ಬಾಗಿಲನ್ನು ತೆರೆದರೆ ಅದು ತೆರೆದೇ ಇರುವದು. ಅದನ್ನು ಯಾರೂ ಮುಚ್ಚಲಾರರು. ಅವನು ಬಾಗಿಲನ್ನು ಮುಚ್ಚಿದರೆ ಅದು ಮುಚ್ಚಿಯೇ ಇರುವದು. ಅದನ್ನು ತೆರೆಯಲು ಯಾರಿಂದಲೂ ಆಗುವದಿಲ್ಲ. 23 ಒಂದು ಗಟ್ಟಿಯಾದ ಹಲಗೆಯಲ್ಲಿ ಮೊಳೆಯನ್ನು ಹೊಡೆದು ಗಟ್ಟಿಯಾಗಿರಿಸುವಂತೆ ಅವನನ್ನು ನಾನು ಬಲಪಡಿಸುವೆನು. ಆ ಸೇವಕನು ತನ್ನ ಕುಟುಂಬದವರಿಗೆ ಗೌರವಪೀಠದಂತಿರುವನು. 24 ಅವನ ತಂದೆಯ ಮನೆಯ ಎಲ್ಲಾ ವಿಶೇಷ ಸಂಗತಿಗಳನ್ನು, ವಸ್ತುಗಳನ್ನು ಅವನಿಗೆ ತೂಗುಹಾಕುವರು. ಎಲ್ಲಾ ಹಿರಿಕಿರಿಯರು ಅವನ ಮೇಲೆ ಆತುಕೊಂಡಿರುವರು. ಅವರು ಅವನಿಗೆ ತೂಗುಹಾಕಲ್ಪಟ್ಟ ಚಿಕ್ಕಚಿಕ್ಕ ಪಾತ್ರೆಗಳಂತೆಯೂ ನೀರಿನ ದೊಡ್ಡ ಸೀಸೆಗಳಂತೆಯೂ ಇರುವರು.”

25 ಸರ್ವಶಕ್ತನಾದ ಯೆಹೋವನು ಹೇಳುವುದೇನೆಂದರೆ, “ಆ ಸಮಯದಲ್ಲಿ ಹಲಗೆಗೆ ಬಲವಾಗಿ ಹೊಡೆಯಲ್ಪಟ್ಟ ಆ ಮೊಳೆಯು (ಶೆಬ್ನ) ಬಲಹೀನವಾಗಿ ತುಂಡಾಗುವದು. ಆ ಮೊಳೆಯು ನೆಲಕ್ಕೆ ಬಿದ್ದು ನಾಶವಾಗುವದು. ಆಗ ಆ ಮೊಳೆಗೆ ತೂಗುಹಾಕಿದ್ದೆಲ್ಲವೂ ಅದರೊಂದಿಗೆ ನೆಲಕ್ಕೆ ಬೀಳುವದು. ಆಗ ನಾನು ಈ ಸಂದೇಶದಲ್ಲಿ ಹೇಳಿದ್ದೆಲ್ಲವೂ ಸಂಭವಿಸುವದು. ಅವುಗಳು ನೆರವೇರುತ್ತವೆ ಯಾಕೆಂದರೆ ಅವುಗಳನ್ನು ಹೇಳಿದಾತನು ಯೆಹೋವನೇ.”

ಎಫೆಸದವರಿಗೆ 6

ಮಕ್ಕಳು ಮತ್ತು ತಂದೆತಾಯಿಗಳು

ಮಕ್ಕಳೇ, ಪ್ರಭುವಿನ ಚಿತ್ತಕ್ಕನುಸಾರವಾಗಿ ನಿಮ್ಮ ತಂದೆತಾಯಿಗಳಿಗೆ ವಿಧೇಯರಾಗಿರಿ. ಅದು ನ್ಯಾಯಬದ್ಧವಾದದ್ದಾಗಿದೆ. ದೇವಾಜ್ಞೆಯು ಹೇಳುವಂತೆ, “ನೀವು ನಿಮ್ಮ ತಂದೆತಾಯಿಗಳನ್ನು ಗೌರವಿಸಬೇಕು.”(A) ಈ ಮೊದಲನೆಯ ಆಜ್ಞೆಯು ವಾಗ್ದಾನವನ್ನು ಒಳಗೊಂಡಿದೆ. ಆ ವಾಗ್ದಾನವು ಇಂತಿದೆ: “ಆಗ ನಿಮಗೆ ಒಳ್ಳೆಯದಾಗುವುದು ಮತ್ತು ನೀವು ಭೂಮಿಯ ಮೇಲೆ ಬಹುಕಾಲ ಬದುಕುವಿರಿ.”(B)

ತಂದೆಗಳೇ, ನಿಮ್ಮ ಮಕ್ಕಳನ್ನು ಸಿಟ್ಟಿಗೆಬ್ಬಿಸದೆ ಪ್ರಭುವಿನ ಉಪದೇಶದಿಂದಲೂ ಬಾಲಶಿಕ್ಷೆಯಿಂದಲೂ ಬೆಳೆಸಿರಿ.

ಸೇವಕರು ಮತ್ತು ಯಜಮಾನರು

ಸೇವಕರೇ, ನಿಮ್ಮ ಇಹಲೋಕದ ಯಜಮಾನರಿಗೆ ಭಯದಿಂದಲೂ ಗೌರವದಿಂದಲೂ ವಿಧೇಯರಾಗಿರಿ. ನೀವು ಕ್ರಿಸ್ತನಿಗೆ ವಿಧೇಯರಾಗುವಂತೆ ಯಥಾರ್ಥವಾದ ಹೃದಯದಿಂದ ವಿಧೇಯರಾಗಿರಿ. ಅವರ ಮೆಚ್ಚಿಕೆಯನ್ನು ಗಳಿಸಿಕೊಳ್ಳಬೇಕೆಂದು ಅವರು ಗಮನಿಸುತ್ತಿರುವಾಗ ಮಾತ್ರ ಸೇವೆ ಮಾಡದೆ ನೀವು ಕ್ರಿಸ್ತನಿಗೆ ವಿಧೇಯರಾಗಿರುವಂತೆ ಅವರಿಗೆ ವಿಧೇಯರಾಗಿರಬೇಕು. ದೇವರಿಗೆ ಇಷ್ಟವಾದದ್ದನ್ನು ನೀವು ಪೂರ್ಣಹೃದಯದಿಂದ ಮಾಡಬೇಕು. ನೀವು ಮಾಡತಕ್ಕ ಕೆಲಸವನ್ನು ಸಂತೋಷದಿಂದ ಮಾಡಿರಿ. ಕೇವಲ ಮನುಷ್ಯರ ಸೇವೆಯನ್ನು ಮಾಡುವವರಂತೆ ಮಾಡದೆ ಪ್ರಭುವಿನ ಸೇವೆಯನ್ನು ಮಾಡುವವರಂತೆ ಮಾಡಿರಿ. ಒಳ್ಳೆಯದನ್ನು ಮಾಡುವ ಪ್ರತಿಯೊಬ್ಬನಿಗೂ ದೇವರು ಪ್ರತಿಫಲವನ್ನು ಕೊಡುತ್ತಾನೆಂಬುದನ್ನು ಜ್ಞಾಪಕದಲ್ಲಿಟ್ಟುಕೊಳ್ಳಿರಿ. ಪ್ರತಿಯೊಬ್ಬ ವ್ಯಕ್ತಿಯು ಅವನು ಸೇವಕನಾಗಿರಲಿ ಅಥವಾ ಸ್ವತಂತ್ರನಾಗಿರಲಿ ತಾನು ಮಾಡುವ ಒಳ್ಳೆಯ ಕಾರ್ಯಗಳಿಗೆ ಪ್ರತಿಫಲವನ್ನು ಹೊಂದುವನು.

ಯಜಮಾನರೇ, ಅದೇರೀತಿಯಲ್ಲಿ ನಿಮ್ಮ ಸೇವಕರಿಗೆ ಒಳ್ಳೆಯವರಾಗಿರಿ. ಅವರಿಗೆ ಹೆದರಿಕೆಯಾಗುವಂಥ ಮಾತುಗಳನ್ನಾಡಬೇಡಿ. ನಿಮಗೂ ಅವರಿಗೂ ಒಡೆಯನಾಗಿರುವಾತನು ಪರಲೋಕದಲ್ಲಿದ್ದಾನೆ ಎಂಬುದು ನಿಮಗೆ ತಿಳಿದಿದೆ. ಆತನು ಪ್ರತಿಯೊಬ್ಬನಿಗೂ ಪಕ್ಷಪಾತವಿಲ್ಲದೆ ನ್ಯಾಯತೀರಿಸುವನು.

ದೇವರ ಸರ್ವಾಯುಧಗಳನ್ನು ಧರಿಸಿಕೊಳ್ಳಿರಿ

10 ಕಡೇ ಮಾತೇನೆಂದರೆ, ಪ್ರಭುವಿನಲ್ಲಿಯೂ ಆತನ ಮಹಾಶಕ್ತಿಯಲ್ಲಿಯೂ ಬಲವಾಗಿರಿ. 11 ದೇವರ ಸರ್ವಾಯುಧಗಳನ್ನು ಧರಿಸಿಕೊಳ್ಳಿರಿ. ಆಗ ಸೈತಾನನ ಕುತಂತ್ರಗಳಿಗೆ ವಿರುದ್ಧವಾಗಿ ಹೋರಾಡಲು ನಿಮಗೆ ಸಾಧ್ಯವಾಗುವುದು. 12 ನಮ್ಮ ಹೋರಾಟವು ಜನರ ವಿರುದ್ಧವಲ್ಲ. ನಾವು ಅಂಧಕಾರದ ಅಧಿಪತಿಗಳಿಗೂ ಅಧಿಕಾರಿಗಳಿಗೂ ಮತ್ತು ಈ ಲೋಕದ ಕತ್ತಲೆಯ ಶಕ್ತಿಗಳಿಗೂ ಆಕಾಶಮಂಡಲದ ದುಷ್ಟಶಕ್ತಿಗಳಿಗೂ ವಿರುದ್ಧವಾಗಿ ಹೋರಾಡುತ್ತಿದ್ದೇವೆ. 13 ಆದಕಾರಣವೇ ನೀವು ದೇವರ ಸರ್ವಾಯುಧಗಳನ್ನು ಧರಿಸಿಕೊಳ್ಳಬೇಕು. ಆಗ ಯುದ್ಧದ ದಿನದಲ್ಲಿಯೂ ಹೋರಾಟವು ಸಂಪೂರ್ಣವಾಗಿ ಮುಗಿದಾದ ಮೇಲೆಯೂ ದೃಢವಾಗಿನಿಂತುಕೊಳ್ಳಲು ನಿಮಗೆ ಸಾಧ್ಯವಾಗುವುದು.

14 ಆದ್ದರಿಂದ ಸತ್ಯವೆಂಬ ನಡುಕಟ್ಟನ್ನು ಕಟ್ಟಿಕೊಂಡು ನೀತಿಯೆಂಬ ವಜ್ರಕವಚವನ್ನು ಎದೆಗೆ ಬಿಗಿದುಕೊಂಡು 15 ಸಮಾಧಾನದ ಸುವಾರ್ತೆಯೆಂಬ ಪಾದರಕ್ಷೆಯನ್ನು ಹಾಕಿಕೊಂಡು ದೃಢವಾಗಿ ನಿಂತುಕೊಳ್ಳಿರಿ. 16 ಅಲ್ಲದೆ ನಂಬಿಕೆಯೆಂಬ ಗುರಾಣಿಯನ್ನೂ ಹಿಡಿದುಕೊಳ್ಳಿರಿ. ಕೆಡುಕನ ಅಗ್ನಿಬಾಣಗಳನ್ನೆಲ್ಲಾ ತಡೆಯಲು ನಿಮಗೆ ಇದರಿಂದ ಸಾಧ್ಯವಾಗುವುದು. 17 ದೇವರ ರಕ್ಷಣೆಯನ್ನು ಶಿರಸ್ತ್ರಾಣವನ್ನಾಗಿ ಧರಿಸಿಕೊಳ್ಳಿರಿ. ಪವಿತ್ರಾತ್ಮನ ಖಡ್ಗವನ್ನು ಅಂದರೆ ದೇವರ ವಾಕ್ಯವನ್ನು ತೆಗೆದುಕೊಳ್ಳಿರಿ. 18 ನೀವು ಪವಿತ್ರಾತ್ಮನ ಸಹಾಯದಿಂದ ಯಾವಾಗಲೂ ದೇವರಲ್ಲಿ ಪ್ರಾರ್ಥಿಸುತ್ತಾ ಸಕಲವಿಧವಾದ ವಿಜ್ಞಾಪನೆಗಳನ್ನು ಮಾಡಿರಿ ಮತ್ತು ನಿಮಗೆ ಅಗತ್ಯವಾದವುಗಳಿಗಾಗಿ ಬೇಡಿಕೊಳ್ಳಿರಿ. ಇದಕ್ಕಾಗಿ ಯಾವಾಗಲೂ ಸಿದ್ಧರಾಗಿರಿ. ಪ್ರಾರ್ಥನೆಯನ್ನು ಬಿಟ್ಟುಕೊಡಬೇಡಿರಿ. ದೇವಜನರೆಲ್ಲರಿಗೋಸ್ಕರ ಯಾವಾಗಲೂ ಪ್ರಾರ್ಥಿಸಿರಿ.

19 ಅಲ್ಲದೆ ನನಗಾಗಿಯೂ ಪ್ರಾರ್ಥಿಸಿರಿ. ನಾನು ಮಾತಾಡುವಾಗ ಸುವಾರ್ತೆಯ ರಹಸ್ಯಸತ್ಯವನ್ನು ನಿರ್ಭಯದಿಂದ ತಿಳಿಸಲು ಬೇಕಾದ ಮಾತನ್ನು ದೇವರು ನನಗೆ ಅನುಗ್ರಹಿಸುವಂತೆ ಪ್ರಾರ್ಥಿಸಿರಿ. 20 ಸುವಾರ್ತೆಯನ್ನು ತಿಳಿಸುವುದೇ ನನ್ನ ಕೆಲಸ. ಈಗ ಸೆರೆಮನೆಯಲ್ಲಿಯೂ ನಾನು ಆ ಕೆಲಸವನ್ನು ಮಾಡುತ್ತಿದ್ದೇನೆ. ನಾನು ಯಾವ ರೀತಿ ಮಾತಾಡಬೇಕೋ ಅದೇ ರೀತಿ ನಿರ್ಭಯದಿಂದ ಮಾತಾಡಲು ಸಾಧ್ಯವಾಗುವಂತೆ ಪ್ರಾರ್ಥಿಸಿರಿ.

ವಂದನೆಗಳು

21 ನಮ್ಮ ಪ್ರಿಯ ಸಹೋದರನಾದ ತುಖಿಕನನ್ನು ನಿಮ್ಮ ಬಳಿಗೆ ಕಳುಹಿಸುತ್ತಿದ್ದೇನೆ. ಅವನು ಪ್ರಭುವಿನ ಸೇವೆಯಲ್ಲಿ ನಂಬಿಗಸ್ತನಾದ ಸೇವಕನಾಗಿದ್ದಾನೆ. ಇಲ್ಲಿಯ ಸಂಗತಿಗಳನ್ನೆಲ್ಲಾ ಅವನು ನಿಮಗೆ ತಿಳಿಸುವನು. ನಾನು ಇಲ್ಲಿ ಹೇಗಿದ್ದೇನೆ ಮತ್ತು ಏನು ಮಾಡುತ್ತಿದ್ದೇನೆ ಎಂಬುದು ಆಗ ನಿಮಗೆ ಗೊತ್ತಾಗುವುದು. 22 ನಮ್ಮ ಸ್ಥಿತಿಗತಿಗಳು ನಿಮಗೆ ತಿಳಿದಿರಬೇಕೆಂಬುದು ನನ್ನ ಇಷ್ಟ. ಅಲ್ಲದೆ ಅವನು ನಿಮ್ಮನ್ನು ಪ್ರೋತ್ಸಾಹಿಸುವನು.

23 ತಂದೆಯಾದ ದೇವರಿಂದಲೂ ಪ್ರಭುವಾದ ಯೇಸು ಕ್ರಿಸ್ತನಿಂದಲೂ ನಿಮಗೆ ಶಾಂತಿಯೂ ನಂಬಿಕೆಯಿಂದ ಕೂಡಿದ ಪ್ರೀತಿಯೂ ಉಂಟಾಗಲಿ. 24 ನಮ್ಮ ಪ್ರಭುವಾದ ಯೇಸು ಕ್ರಿಸ್ತನನ್ನು ನಿರಂತರವಾದ ಪ್ರೀತಿಯಿಂದ ಪ್ರೀತಿಸುವ ನಿಮ್ಮೆಲ್ಲರ ಮೇಲೆ ದೇವರ ಕೃಪೆಯಿರಲಿ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International