Old/New Testament
ಅರಾಮ್ಯರ ಕುರಿತು ದೇವರ ಸಂದೇಶ
17 ದಮಸ್ಕಕ್ಕೆ ಇದು ದುಃಖಕರವಾದ ಸಂದೇಶ. ಯೆಹೋವನು ಹೇಳುವುದೇನೆಂದರೆ,
“ದಮಸ್ಕವು ಈಗ ಒಂದು ದೊಡ್ಡ ನಗರವಾಗಿದೆ. ಆದರೆ ಅದು ನಾಶವಾಗುವದು.
ಕೆಡವಲ್ಪಟ್ಟ ಕಟ್ಟಡಗಳು ಮಾತ್ರವೇ ದಮಸ್ಕದಲ್ಲಿರುವವು.
2 ಅರೋಯೇರ್ ಪ್ರಾಂತ್ಯದ ನಗರಗಳನ್ನು ಜನರು ಬಿಟ್ಟುಹೋಗುವರು.
ಆ ಪಾಳುಬಿದ್ದ ನಗರಗಳಲ್ಲಿ ಕುರಿಮಂದೆಗಳು ತಿರುಗಾಡುವವು.
ಅವುಗಳಿಗೆ ತೊಂದರೆ ಕೊಡಲು ಯಾರೂ ಇರುವದಿಲ್ಲ.
3 ಕೋಟೆಗೋಡೆಯುಳ್ಳ ಎಫ್ರಾಯೀಮನ ಪಟ್ಟಣಗಳು ನಾಶವಾಗುವವು.
ದಮಸ್ಕದಲ್ಲಿರುವ ಸರ್ಕಾರವು ಕೊನೆಗೊಳ್ಳುವದು.
ಇಸ್ರೇಲರಿಗೆ ಆದಂತೆಯೇ ಅರಾಮ್ಯರಿಗೂ ಆಗುವದು.
ಪ್ರಮುಖ ನಗರವಾಸಿಗಳು ಸೆರೆಹಿಡಿಯಲ್ಪಟ್ಟು ಒಯ್ಯಲ್ಪಡುವರು” ಇದು ಸರ್ವಶಕ್ತನಾದ ಯೆಹೋವನ ನುಡಿ.
4 “ಆ ಸಮಯದಲ್ಲಿ ಯಾಕೋಬಿನ ಸಂಪತ್ತೆಲ್ಲಾ ಕೊಳ್ಳೆಹೊಡೆಯಲ್ಪಡುವದು.
ಯಾಕೋಬನು ರೋಗಗ್ರಸ್ಥನಾದವನಂತೆ ಬಲಹೀನನಾಗಿಯೂ ತೆಳುವಾಗಿಯೂ ಇರುವನು.
5 “ಆ ಸಮಯದಲ್ಲಿ ರೆಫಾಯೀಮ್ ಕಣಿವೆಯಲ್ಲಿ ಧಾನ್ಯದ ಸುಗ್ಗಿಯಂತಿರುವದು. ಕೆಲಸಗಾರರು ಹೊಲಗಳಲ್ಲಿ ಬೆಳೆಯನ್ನು ಕೊಯ್ದು ಧಾನ್ಯವನ್ನು ಶೇಖರಿಸುವರು.
6 “ಆ ಸಮಯವು ಆಲೀವ್ ಬೀಜಗಳನ್ನು ಜನರು ಕೂಡಿಸಿಕೊಳ್ಳುವಂತೆ ಇರುವುದು. ಆಲೀವ್ ಮರಗಳಿಂದ ಜನರು ಕಾಯಿಗಳನ್ನು ಉದುರಿಸುವರು. ಆದರೆ ಕೆಲವು ಕಾಯಿಗಳು ಮರಗಳ ತುದಿಯಲ್ಲಿ ಉಳಿದುಕೊಳ್ಳುವವು. ಎತ್ತರದ ಕೊಂಬೆಗಳಲ್ಲಿ ನಾಲ್ಕೈದು ಕಾಯಿಗಳು ಉಳಿಯುವವು. ಅದೇ ರೀತಿಯಲ್ಲಿ ಆ ನಗರಗಳ ಸ್ಥಿತಿಯೂ ಇರುವುದು” ಇದು ಸರ್ವಶಕ್ತನಾದ ಯೆಹೋವನ ನುಡಿಗಳು.
7 ಮಯಗಳಲ್ಲಿ ಜನರು ತಮ್ಮ ನಿರ್ಮಾಣಿಕನಾದ ದೇವರ ಕಡೆಗೆ ದೃಷ್ಟಿಸಿ ನೋಡುವರು. ಅವರ ಕಣ್ಣುಗಳು ಇಸ್ರೇಲಿನ ಪರಿಶುದ್ಧನನ್ನು ನೋಡುತ್ತವೆ. 8 ಜನರು ತಮ್ಮ ಮಹಾಕಾರ್ಯಗಳ ಮೇಲೆ ನಂಬಿಕೆ ಇಡುವದಿಲ್ಲ. ಸುಳ್ಳುದೇವರುಗಳಿಗೆ, ತಾವು ಮಾಡಿದ ಬಲಿಪೀಠಗಳಿಗೆ, ಪೂಜಾಸ್ಥಳಗಳಿಗೆ ಅವರು ಹೋಗುವದಿಲ್ಲ. 9 ಆ ಸಮಯದಲ್ಲಿ ಕೋಟೆಗೋಡೆಗಳಿರುವ ಎಲ್ಲಾ ಪಟ್ಟಣಗಳು ನಿರ್ಜನವಾಗುವದು. ಇಸ್ರೇಲರು ಆ ದೇಶವನ್ನು ಸ್ವಾಧೀನ ಮಾಡಿಕೊಳ್ಳುವ ಕಾಲದಲ್ಲಿ ಹೇಗೆ ಅಡವಿಗಳಂತೆಯೂ ಬೆಟ್ಟಗಳಂತೆಯೂ ಇದ್ದವೋ ಅದೇ ರೀತಿಯಲ್ಲಿ ಇರುವವು. ಆ ಸಮಯದಲ್ಲಿ ಇಸ್ರೇಲರು ದೇಶದೊಳಗೆ ಪ್ರವೇಶಿಸುವಾಗ ಅಲ್ಲಿಯ ನಿವಾಸಿಗಳೆಲ್ಲರೂ ಓಡಿಹೋದರು. ಮುಂಬರುವ ದಿವಸಗಳಲ್ಲಿ ದೇಶವು ಮತ್ತೆ ನಿರ್ಜನವಾಗುವದು. 10 ನೀವು ನಿಮ್ಮ ರಕ್ಷಕನಾದ ದೇವರನ್ನು ಮರೆತುಬಿಟ್ಟಿದ್ದರಿಂದ ನಿಮಗೆ ಹೀಗೆ ಆಗುವದು. ದೇವರು ನಿಮ್ಮ ಆಶ್ರಯದುರ್ಗವಾಗಿದ್ದಾನೆಂಬುದನ್ನು ನೀವು ನೆನಪು ಮಾಡಿಕೊಳ್ಳಲಿಲ್ಲ.
ದೂರದ ಪ್ರಾಂತ್ಯದಿಂದ ನೀವು ಉತ್ತಮ ತಳಿಯ ದ್ರಾಕ್ಷಿಯನ್ನು ತಂದಿರಿ. ಅದನ್ನು ನೀವು ನೆಟ್ಟರೂ ಅವು ಚಿಗುರುವದಿಲ್ಲ. 11 ಒಂದು ದಿವಸ ಆ ಕೊಂಬೆಗಳನ್ನು ನೆಟ್ಟು ಅದು ಚಿಗುರುವಂತೆ ಮಾಡುವಿರಿ. ಮರುದಿವಸ ಅದು ಚಿಗುರುವದು. ಸುಗ್ಗಿಯ ಕಾಲದಲ್ಲಿ ನೀವು ದ್ರಾಕ್ಷಿತೋಟಕ್ಕೆ ಹೋದಾಗ ದ್ರಾಕ್ಷಿಬಳ್ಳಿಗಳೆಲ್ಲಾ ರೋಗದಿಂದ ಸತ್ತುಹೋಗಿರುವವು.
12 ಇಗೋ! ಸಮುದ್ರವು ಭೋರ್ಗರೆಯುವ ಶಬ್ದದಂತೆ
ಅನೇಕ ಜನಾಂಗಗಳು ರೋಧಿಸುವ ಶಬ್ದ ಕೇಳಿಸುತ್ತದೆ.
ಆ ಶಬ್ದವು ಸಮುದ್ರದ ತೆರೆಗಳು ದಡಕ್ಕೆ ಅಪ್ಪಳಿಸುವಂತಿದೆ.
13 ದೇವರು ಗದರಿಸಿದಾಗ
ಜನರು ಓಡಿಹೋಗುವರು.
ಆ ಜನರು ಗಾಳಿಯಲ್ಲಿ ಹಾರಿಹೋಗುವ ಹೊಟ್ಟಿನಂತಿರುವರು;
ಬಿರುಗಾಳಿಯು ಬಹುದೂರಕ್ಕೆ ಕೊಂಡೊಯ್ಯುವ ಬೇರಿಲ್ಲದ ಹಣಜಿಗಳಂತಿರುವರು.
14 ಆ ರಾತ್ರಿ ಜನರು ಭಯಗ್ರಸ್ತರಾಗುವರು.
ಬೆಳಗಾಗುವದರೊಳಗೆ ಏನೂ ಉಳಿಯುವದಿಲ್ಲ.
ಹಾಗೆಯೇ ನಮ್ಮ ವೈರಿಗಳಿಗೆ ಏನೂ ದೊರಕುವದಿಲ್ಲ.
ಅವರು ನಮ್ಮ ದೇಶಕ್ಕೆ ನುಗ್ಗಿದರೂ ಅವರಿಗೆ ಏನೂ ಸಿಗದು.
ಇಥಿಯೋಪ್ಯಕ್ಕೆ ದೇವರ ಸಂದೇಶ
18 ಇಥಿಯೋಪ್ಯದ ನದಿಯ ದಡದಲ್ಲಿರುವ ಪ್ರಾಂತ್ಯಗಳನ್ನು ಗಮನಿಸಿರಿ. ಆ ಪ್ರಾಂತ್ಯವು ಕ್ರಿಮಿಕೀಟಗಳಿಂದ ತುಂಬಿದೆ. ಅವುಗಳ ರೆಕ್ಕೆಗಳ ಝೇಂಕಾರವನ್ನು ನೀವು ಕೇಳಬಹುದು. 2 ಆ ದೇಶದವರು ಬೆಂಡಿನ ದೋಣಿಗಳಲ್ಲಿ ಜನರನ್ನು ಸಮುದ್ರದಾಚೆ ಕಳುಹಿಸುವರು.
ವೇಗವುಳ್ಳ ದೂತರೇ, ಉನ್ನತವಾಗಿಯೂ
ಬಲಶಾಲಿಗಳಾಗಿಯೂ ಇರುವ ಜನರ ಬಳಿಗೆ ಹೋಗಿರಿ.
ಎಲ್ಲಾ ದೇಶಗಳವರು ಉನ್ನತರಾದ ಬಲಶಾಲಿಗಳಾದ ಜನರಿಗೆ ಭಯಪಡುತ್ತಾರೆ.
ಅವರು ಬಲಾಢ್ಯ ಜನಾಂಗ.
ಅವರ ಜನಾಂಗವು ಬೇರೆ ಜನಾಂಗಗಳನ್ನು ಸೋಲಿಸಿಬಿಡುತ್ತದೆ.
ಅವರ ದೇಶವು ನದಿಯ ಶಾಖೆಗಳಿಂದ ತುಂಬಿರುತ್ತದೆ.
ಆ ಜನರಿಗೆ ಕೇಡು ಸಂಭವಿಸಲಿದೆ ಎಂಬ ಎಚ್ಚರಿಕೆಯನ್ನು ಕೊಡು.
ಪ್ರಪಂಚದ ಎಲ್ಲಾ ಜನರು ಆ ದೇಶಕ್ಕೆ ಸಂಭವಿಸುವದನ್ನು ನೋಡುವರು.
3 ಪರ್ವತದ ತುದಿಯಲ್ಲಿ ಧ್ವಜವೇರಿಸಿದರೆ ಹೇಗೆ ಎಲ್ಲರಿಗೂ ಕಾಣಿಸುತ್ತದೋ
ಹಾಗೆಯೇ ಜನರು ಅದನ್ನು ಸ್ಪಷ್ಟವಾಗಿ ನೋಡುವರು.
ಲೋಕದೊಳಗೆ ವಾಸಿಸುವ ಜನರೆಲ್ಲಾ ಆ ಉನ್ನತ ಬಲಶಾಲಿಗಳಾದ ಜನರಿಗೆ
ಸಂಭವಿಸುವ ವಿಷಯಗಳ ವಾರ್ತೆಯನ್ನು ಕೇಳುವರು.
ರಣರಂಗದಲ್ಲಿ ತುತ್ತೂರಿಯು ಮೊಳಗುವುದು
ಹೇಗೆ ಸ್ಪಷ್ಟವಾಗಿ ಕೇಳಿಸುತ್ತದೋ ಹಾಗೇ ಕೇಳಿಸಿಕೊಳ್ಳುವರು.
4 ಯೆಹೋವನು ಹೀಗೆನ್ನುತ್ತಾನೆ: “ನನಗಾಗಿ ಸಿದ್ಧಪಡಿಸಲ್ಪಟ್ಟ ಸ್ಥಳದಲ್ಲಿ ಮೌನವಾಗಿದ್ದು ಇವುಗಳನ್ನೆಲ್ಲಾ ವೀಕ್ಷಿಸುವೆನು. ಬೇಸಿಗೆಯ ಮಧ್ಯಾಹ್ನದ ಹೊತ್ತಿನಲ್ಲಿ ಜನರು ವಿಶ್ರಮಿಸುತ್ತಿರುವರು. ಅದು ಬೇಸಿಗೆಯ ಸುಗ್ಗಿಕಾಲವಾಗಿರುವದು; ಮಳೆ ಇರುವದಿಲ್ಲ, ಕೇವಲ ಮುಂಜಾನೆಯ ಇಬ್ಬನಿ ಇರುವದು. 5 ಆಗ ಭಯಂಕರವಾದ ಒಂದು ಘಟನೆಯು ನಡೆಯುವದು. ಅದು ಪುಷ್ಪಗಳು ಅರಳುವ ಕಾಲದ ನಂತರ ನಡೆಯುವದು. ಹೊಸ ದ್ರಾಕ್ಷಾಲತೆಗಳು ಚಿಗುರುತ್ತಾ ಬೆಳೆಯುವವು. ಆದರೆ ಅವು ಫಲಕೊಡುವದಕ್ಕಿಂತ ಮೊದಲೇ ಶತ್ರುಗಳು ಬಂದು ಬಳ್ಳಿಗಳನ್ನು ಕೊಯ್ದುಹಾಕುವರು. ಬಳ್ಳಿಗಳನ್ನು ನಾಶಮಾಡಿ ವೈರಿಗಳು ಅವುಗಳನ್ನು ದೂರ ಬಿಸಾಡಿಬಿಡುವರು. 6 ಅವುಗಳನ್ನು ಅಡವಿಯ ಪ್ರಾಣಿಗಳಿಗೂ ಬೆಟ್ಟದಹಕ್ಕಿಗಳಿಗೂ ತಿನ್ನಲು ಬಿಡುವರು. ಪಕ್ಷಿಗಳು ಬೇಸಿಗೆಕಾಲದಲ್ಲಿ ದ್ರಾಕ್ಷಾಲತೆಗಳ ಮೇಲೆ ವಾಸಿಸುತ್ತವೆ; ಚಳಿಗಾಲದಲ್ಲಿ ಕಾಡುಪ್ರಾಣಿಗಳು ದ್ರಾಕ್ಷಾಲತೆಗಳನ್ನು ತಿನ್ನುತ್ತವೆ.”
7 ಆ ಸಮಯದಲ್ಲಿ ಸರ್ವಶಕ್ತನಾದ ಯೆಹೋವನಿಗೆ ವಿಶೇಷವಾದ ಕಾಣಿಕೆಯು ಸಮರ್ಪಿಸಲ್ಪಡುವದು. ಆ ಕಾಣಿಕೆಯು ಉನ್ನತವಾಗಿರುವ ಬಲಶಾಲಿಗಳಾದ ಜನರಿಂದ ಬರುವದು. ಎಲ್ಲಾ ದೇಶಗಳ ಜನರು ಈ ಉನ್ನತವಾದ ಈ ಬಲಿಷ್ಠರಿಗೆ ಹೆದರುವರು. ಅವರು ಬಲಾಢ್ಯ ಜನಾಂಗವಾಗಿದ್ದಾರೆ. ಅವರ ಜನಾಂಗವು ಇತರ ಜನಾಂಗಗಳನ್ನು ಸೋಲಿಸುತ್ತದೆ. ಅವರ ದೇಶವು ನದಿಯ ಶಾಖೆಗಳಿಂದ ತುಂಬಿದೆ. ಈ ಕಾಣಿಕೆಯನ್ನು ಚೀಯೋನ್ ಪರ್ವತದಲ್ಲಿರುವ ಯೆಹೋವನ ಸ್ಥಳಕ್ಕೆ ತರುವರು.
ಈಜಿಪ್ಟಿಗೆ ದೇವರ ಸಂದೇಶ
19 ಈಜಿಪ್ಟಿನ ವಿಷಯವಾಗಿ ದುಃಖಕರವಾದ ಸಂದೇಶ: ಯೆಹೋವನು ವೇಗವಾಗಿ ಬರುವ ಮೋಡದೊಂದಿಗೆ ಬರುತ್ತಿದ್ದಾನೆ. ಆತನು ಈಜಿಪ್ಟನ್ನು ಪ್ರವೇಶಿಸುವಾಗ ಈಜಿಪ್ಟಿನ ಸುಳ್ಳುದೇವರುಗಳೆಲ್ಲಾ ಹೆದರಿ ನಡುಗುವವು. ಈಜಿಪ್ಟು ಧೈರ್ಯಶಾಲಿ ದೇಶವಾಗಿದ್ದರೂ, ಅದರ ಧೈರ್ಯ ಮೇಣದಂತೆ ಕರಗಿಹೋಗುವದು.
2 ದೇವರು ಹೇಳುವುದೇನೆಂದರೆ: “ನಾನು ಈಜಿಪ್ಟಿನ ಜನರಲ್ಲಿ ಒಳಜಗಳವನ್ನು ಹುಟ್ಟಿಸುವೆನು. ಜನರು ತಮ್ಮ ಸಹೋದರರೊಂದಿಗೆ ಜಗಳವಾಡುವರು. ನೆರೆಹೊರೆಯವರು ಪರಸ್ಪರ ಜಗಳವಾಡುವರು. ನಗರವು ನಗರದೊಂದಿಗೆ ಯುದ್ಧ ಮಾಡುವದು. ಒಂದು ರಾಷ್ಟ್ರವು ಇನ್ನೊಂದು ರಾಷ್ಟ್ರದೊಂದಿಗೆ ಯುದ್ಧಮಾಡುವದು. 3 ಈಜಿಪ್ಟಿನ ಜನರಲ್ಲಿ ಗಲಿಬಿಲಿ ಉಂಟಾಗುವದು. ಆ ಜನರು ತಮ್ಮ ಸುಳ್ಳುದೇವರುಗಳ ಬಳಿಗೂ ಪಂಡಿತರ ಬಳಿಗೂ ಓಡಿ ತಾವು ಏನು ಮಾಡಬೇಕೆಂದು ವಿಚಾರಿಸುವರು. ಮಂತ್ರವಾದಿಗಳನ್ನೂ ಪ್ರೇತವಿಚಾರಕರನ್ನೂ ಬೇತಾಳಿಕರನ್ನೂ ಕೇಳುವರು. ಆದರೆ ಅವರ ಯಾವ ಸಲಹೆಗಳೂ ಪ್ರಯೋಜನಕ್ಕೆ ಬರುವದಿಲ್ಲ.” 4 ಸರ್ವಶಕ್ತನೂ ಒಡೆಯನೂ ಆಗಿರುವ ಯೆಹೋವನು ಹೇಳುವುದೇನೆಂದರೆ: “ನಾನು ಈಜಿಪ್ಟನ್ನು ಕಠಿಣನಾದ ಒಡೆಯನಿಗೆ ಒಪ್ಪಿಸುವೆನು. ಬಲಿಷ್ಠ ಒಡೆಯನು ಅವರನ್ನು ಆಳುವನು.”
5 ನೈಲ್ ನದಿಯು ಬತ್ತಿಹೋಗುವದು. ಪ್ರವಾಹದ ನೀರು ಇಲ್ಲವಾಗುವದು. 6 ಎಲ್ಲಾ ನದಿಗಳಿಂದ ದುರ್ವಾಸನೆ ಹೊರಡುವದು. ಈಜಿಪ್ಟಿನ ಕಾಲಿವೆಗಳು ಬತ್ತಿಹೋಗುತ್ತವೆ; ಜಲಸಸ್ಯಗಳೆಲ್ಲ ಒಣಗಿಹೋಗುತ್ತವೆ. 7 ನದಿಯ ದಡದಲ್ಲಿರುವ ಮರಗಳೆಲ್ಲಾ ಒಣಗಿಹೋಗಿ ಗಾಳಿಯಲ್ಲಿ ಹಾರಿಹೋಗುವವು. ನದಿಯ ತೀರದಲ್ಲಿರುವ ಮರಗಳೂ ಒಣಗಿಹೋಗುವವು.
8 ಬೆಸ್ತರೂ ಮೀನು ಹಿಡಿಯುವವರೂ ನೈಲ್ ನದಿಯ ನೀರು ಬತ್ತಿಹೋದದ್ದಕ್ಕಾಗಿ ದುಃಖಿಸುತ್ತಾ ಅಳುವರು. ಅವರು ಜೀವನೋಪಾಯಕ್ಕಾಗಿ ನೈಲ್ ನದಿಯನ್ನು ಆಧಾರ ಮಾಡಿಕೊಂಡಿದ್ದರು. 9 ಬಟ್ಟೆಗಳನ್ನು ನೇಯುವವರು ದುಃಖಿಸುವರು. ನದಿ ಬತ್ತಿಹೋದದ್ದರಿಂದಲೂ ನದಿಯ ತೀರದಲ್ಲಿ ನಾರಿನ ಗಿಡಗಳು ಬೆಳೆಯದೆ ಇರುವದರಿಂದಲೂ ಅವರಿಗೆ ಬಟ್ಟೆ ನೇಯಲು ನಾರು ಸಿಗುವುದಿಲ್ಲ. 10 ನೀರನ್ನು ಉಳಿಸುವದಕ್ಕಾಗಿ ನದಿಗೆ ಅಣೆಕಟ್ಟನ್ನು ಕಟ್ಟುವ ಜನರೂ ದುಃಖಿಸುವರು. ಯಾಕೆಂದರೆ ನದಿಯಲ್ಲಿ ನೀರಿಲ್ಲದ ನಿಮಿತ್ತ ಅವರಿಗೆ ಕೆಲಸವಿರುವುದಿಲ್ಲ.
11 ಚೋಯನಿನ ನಗರದ ಪ್ರಮುಖರು ಮೂರ್ಖರಾಗಿದ್ದಾರೆ. ಫರೋಹನ “ಜ್ಞಾನಿಗಳಾದ ಸಲಹೆಗಾರರು” ತಪ್ಪು ಸಲಹೆ ಕೊಡುತ್ತಾರೆ. ಅವರು ತಾವೇ ಬುದ್ಧಿವಂತರೆಂದೂ ರಾಜವಂಶದವರೆಂದೂ ಹೇಳಿಕೊಳ್ಳುವರು. ಆದರೆ ತಾವು ನೆನಸುವಷ್ಟರ ಮಟ್ಟಿಗೆ ಅವರು ಬುದ್ಧಿವಂತರಲ್ಲ. 12 ಈಜಿಪ್ಟೇ, ನಿನ್ನ ಜ್ಞಾನಿಗಳು ಎಲ್ಲಿ? ಸರ್ವಶಕ್ತನಾದ ಯೆಹೋವನು ಈಜಿಪ್ಟ್ ದೇಶಕ್ಕೆ ಮಾಡಿರುವ ಯೋಜನೆಯನ್ನು ನಿನ್ನ ಜ್ಞಾನಿಗಳು ಮೊದಲು ತಿಳಿದುಕೊಳ್ಳಬೇಕು. ನಿಮಗೆ ಸಂಭವಿಸಲಿರುವುದನ್ನು ಅವರು ನಿನಗೆ ತಿಳಿಸಬೇಕು.
13 ಚೋಯನಿನ ಅಧಿಪತಿಗಳು ಮೋಸಹೋದರು. ನೋಫಿನ ಪ್ರಮುಖರು ಸುಳ್ಳನ್ನು ನಂಬಿದರು. ಆದ್ದರಿಂದ ನಾಯಕರು ಈಜಿಪ್ಟನ್ನು ತಪ್ಪುದಾರಿಗೆ ನಡೆಸಿದರು. 14 ಯೆಹೋವನು ಆ ನಾಯಕರನ್ನು ಗಲಿಬಿಲಿಪಡಿಸಿದನು. ಅವರು ಈಜಿಪ್ಟನ್ನು ತಪ್ಪಾದ ದಾರಿಯಲ್ಲಿ ನಡೆಸಿದರು. ಅವರು ಮಾಡುವ ಪ್ರತಿಯೊಂದು ಕಾರ್ಯವೂ ತಪ್ಪಾದದ್ದೇ. ಅವರು ಕುಡಿದು ಮತ್ತರಾದವರಂತೆ ನೆಲದ ಮೇಲೆ ಬಿದ್ದು ಹೊರಳಾಡುತ್ತಾರೆ. 15 ಆ ನಾಯಕರುಗಳಿಗೆ ಏನೂ ಮಾಡಲಾಗದು. (ಈ ನಾಯಕರುಗಳು “ತಲೆಯೂ ಬಾಲವೂ” ಆಗಿದ್ದಾರೆ; “ಮರದ ಕೊಂಬೆಯೂ ಕಾಂಡವೂ” ಆಗಿದ್ದಾರೆ.)
16 ಆ ಸಮಯದಲ್ಲಿ ಈಜಿಪ್ಟಿನವರು ಭಯದಿಂದ ಕಂಗೆಟ್ಟ ಹೆಂಗಸರಂತಿರುವರು. ಅವರು ಸರ್ವಶಕ್ತನಾದವನಿಗೆ ಭಯಪಡುವರು. ಯೆಹೋವನು ಜನರನ್ನು ಶಿಕ್ಷಿಸಲು ತನ್ನ ಕೈಯನ್ನೆತ್ತುವನು. ಆಗ ಅವರೆಲ್ಲರೂ ಹೆದರಿಹೋಗುವರು. 17 ಯೆಹೂದ ಪ್ರಾಂತ್ಯದವರೂ ಈಜಿಪ್ಟಿನಲ್ಲಿರುವವರೂ ಭಯಪಡಬೇಕಾಗಿದೆ. ಈಜಿಪ್ಟಿನಲ್ಲಿ ಯಾರೇ ಆಗಲಿ ಯೆಹೂದದ ಹೆಸರು ಕೇಳಿದಾಗ ಭಯಪಡುವರು. ಯಾಕೆಂದರೆ ಭಯಂಕರ ಘಟನೆಗಳು ಈಜಿಪ್ಟಿನಲ್ಲಿ ಸಂಭವಿಸುವಂತೆ ಸರ್ವಶಕ್ತನಾದ ಯೆಹೋವನು ಮಾಡುತ್ತಾನೆ. 18 ಆ ಸಮಯದಲ್ಲಿ ಈಜಿಪ್ಟಿನಲ್ಲಿ ಕಾನಾನ್ ದೇಶದ (ಯೆಹೂದ್ಯರ) ಭಾಷೆಯನ್ನಾಡುವ ಐದು ಪಟ್ಟಣಗಳಿರುವವು. ಅದರಲ್ಲಿ ಒಂದರ ಹೆಸರು “ನಾಶನದ ನಗರ.” ಆ ಜನರು ಸರ್ವಶಕ್ತನಾದ ಯೆಹೋವನನ್ನು ಹಿಂಬಾಲಿಸಲು ತೀರ್ಮಾನಿಸುವರು.
19 ಆ ಸಮಯದಲ್ಲಿ ಈಜಿಪ್ಟಿನ ಮಧ್ಯದಲ್ಲಿ ಯೆಹೋವನಿಗಾಗಿ ಒಂದು ವೇದಿಕೆ ಇರುವದು. ಈಜಿಪ್ಟಿನ ಗಡಿಯಲ್ಲಿ ಯೆಹೋವನ ಗೌರವಾರ್ಥವಾಗಿ ಸ್ಮಾರಕಸ್ತಂಭ ಇರುವದು. 20 ಇದು ಸರ್ವಶಕ್ತನಾದ ಯೆಹೋವನು ಅದ್ಭುತವನ್ನು ನಡಿಸುತ್ತಾನೆಂಬುದಕ್ಕೆ ಗುರುತಾಗಿದೆ. ಜನರು ಯಾವಾಗಲಾದರೂ ಸರಿಯೇ ಸಹಾಯಕ್ಕಾಗಿ ಮೊರೆಯಿಟ್ಟರೆ ಆತನು ಸಹಾಯವನ್ನು ಕಳುಹಿಸುವನು. ಯೆಹೋವನು ಅವರನ್ನು ರಕ್ಷಿಸಲೂ ಕಾಪಾಡಲೂ ಒಬ್ಬನನ್ನು ಕಳುಹಿಸುವನು. ಆ ಮನುಷ್ಯನು ಬೇರೆಯವರಿಂದ ಶೋಷಿತರಾದವರನ್ನು ಸಂರಕ್ಷಿಸುವನು.
21 ಆ ಸಮಯದಲ್ಲಿ ಈಜಿಪ್ಟಿನ ಜನರು ಯೆಹೋವನನ್ನು ನಿಜವಾಗಿಯೂ ಅರಿತುಕೊಳ್ಳುವರು. ಅವರು ದೇವರನ್ನು ಪ್ರೀತಿಸುವರು. ಅವರು ಯೆಹೋವನನ್ನು ಸೇವಿಸಿ ಅನೇಕ ಯಜ್ಞಗಳನ್ನು ಸಮರ್ಪಿಸುವರು. ಯೆಹೋವನಿಗೆ ಹರಕೆ ಹೊತ್ತು ಸಲ್ಲಿಸುವರು. 22 ಯೆಹೋವನು ಈಜಿಪ್ಟಿನ ಜನರನ್ನು ಶಿಕ್ಷಿಸುವನು. ಆಮೇಲೆ ಆತನು ಅವರನ್ನು ಕ್ಷಮಿಸುವನು. ಆಗ ಅವರು ಆತನ ಬಳಿಗೆ ಹಿಂದಿರುಗಿ ಬರುವರು. ಯೆಹೋವನು ಅವರ ಪ್ರಾರ್ಥನೆಯನ್ನು ಕೇಳಿ ಅವರನ್ನು ಕ್ಷಮಿಸುವನು.
23 ಆ ಸಮಯದಲ್ಲಿ ಈಜಿಪ್ಟಿನಿಂದ ಅಶ್ಶೂರದವರೆಗೆ ಹೆದ್ದಾರಿ ಇರುವುದು. ಆಗ ಅಶ್ಶೂರದವರು ಈಜಿಪ್ಟಿಗೂ, ಈಜಿಪ್ಟಿನವರು ಅಶ್ಶೂರಕ್ಕೂ ಪ್ರಯಾಣ ಮಾಡುವರು. ಈಜಿಪ್ಟಿನವರು ಅಶ್ಶೂರದವರೊಟ್ಟಿಗೆ ಕೆಲಸ ಮಾಡುವರು. 24 ಆ ಸಮಯದಲ್ಲಿ ಇಸ್ರೇಲ್, ಅಶ್ಶೂರ ಮತ್ತು ಈಜಿಪ್ಟು ಒಟ್ಟಾಗಿ ಸೇರಿ ದೇಶವನ್ನು ನಿಯಂತ್ರಿಸುವರು. ಇದು ದೇಶಕ್ಕೆ ಆಶೀರ್ವಾದದಾಯಕವಾಗಿರುವದು. 25 ಸರ್ವಶಕ್ತನಾದ ಯೆಹೋವನು ಈ ದೇಶಗಳನ್ನು ಆಶೀರ್ವದಿಸುವನು. ಆತನು, “ಈಜಿಪ್ಟೇ, ನೀನು ನನ್ನವನು; ಅಶ್ಶೂರವೇ, ನಾನು ನಿನ್ನನ್ನು ನಿರ್ಮಿಸಿದೆನು. ಇಸ್ರೇಲೇ, ನೀನು ನನ್ನ ಸ್ವಾಸ್ತ್ಯ. ನೀವೆಲ್ಲರೂ ಆಶೀರ್ವದಿಸಲ್ಪಟ್ಟವರು” ಎನ್ನುವನು.
17 ನಿಮ್ಮ ಜೀವಿತಗಳ ಬಗ್ಗೆ ಮೂರ್ಖರಾಗಿರದೆ ದೇವರ ಚಿತ್ತವೇನೆಂಬುದನ್ನು ತಿಳಿದುಕೊಳ್ಳಿರಿ. 18 ಮದ್ಯಪಾನಮಾಡಿ ಮತ್ತರಾಗಬೇಡಿ, ಅದು ಪಾಪಕೃತ್ಯಗಳಿಗೆ ನಡೆಸುತ್ತದೆ, ಆದರೆ ಯಾವಾಗಲೂ ಪವಿತ್ರಾತ್ಮಭರಿತರಾಗಿರಿ. 19 ಕೀರ್ತನೆಗಳಿಂದಲೂ ಸಂಗೀತಗಳಿಂದಲೂ ಆತ್ಮಿಕ ಹಾಡುಗಳಿಂದಲೂ ಒಬ್ಬರಿಗೊಬ್ಬರು ಮಾತಾಡಿರಿ. ನಿಮ್ಮ ಹೃದಯಗಳಲ್ಲಿ ಪ್ರಭುವಿಗೆ ವಾದ್ಯ ನುಡಿಸುತ್ತಾ ಹಾಡಿರಿ. 20 ಪ್ರತಿಯೊಂದು ವಿಷಯದಲ್ಲಿಯೂ ತಂದೆಯಾದ ದೇವರಿಗೆ ನಮ್ಮ ಪ್ರಭುವಾದ ಯೇಸು ಕ್ರಿಸ್ತನ ಹೆಸರಿನಲ್ಲಿ ಯಾವಾಗಲೂ ಸ್ತೋತ್ರಮಾಡಿರಿ.
ಗಂಡ ಹೆಂಡತಿಯರು
21 ನೀವು ಒಬ್ಬರಿಗೊಬ್ಬರು ವಿಧೇಯರಾಗಿರಬೇಕು. ಏಕೆಂದರೆ ನೀವು ಕ್ರಿಸ್ತನಲ್ಲಿ ಭಯಭಕ್ತಿ ಉಳ್ಳವರಾಗಿರಬೇಕು.
22 ಸ್ತ್ರೀಯರೇ, ನೀವು ಪ್ರಭುವಿಗೆ ಅಧೀನರಾಗಿರುವಂತೆ ನಿಮ್ಮ ಗಂಡಂದಿರಿಗೂ ಅಧೀನರಾಗಿರಿ. 23 ಕ್ರಿಸ್ತನು ಸಭೆಗೆ ಶಿರಸ್ಸಾಗಿರುವಂತೆ ಗಂಡನು ಹೆಂಡತಿಗೆ ಶಿರಸ್ಸಾಗಿದ್ದಾನೆ. ಸಭೆಯು ಕ್ರಿಸ್ತನ ದೇಹವಾಗಿದೆ. ಕ್ರಿಸ್ತನು ಆ ದೇಹದ ರಕ್ಷಕನಾಗಿದ್ದಾನೆ. 24 ಸಭೆಯು ಕ್ರಿಸ್ತನ ಅಧೀನದಲ್ಲಿದೆ. ಇದೇ ನಿಯಮವು ಸ್ತ್ರೀಯರಿಗೆ ಅನ್ವಯಿಸುತ್ತದೆ. ಪ್ರತಿಯೊಂದು ವಿಷಯದಲ್ಲಿಯೂ ಸ್ತ್ರೀಯರು ತಮ್ಮ ಗಂಡಂದಿರಿಗೆ ಅಧೀನರಾಗಿರಬೇಕು.
25 ಪುರುಷರೇ, ಕ್ರಿಸ್ತನು ಸಭೆಯನ್ನು ಪ್ರೀತಿಸಿದಂತೆ ನೀವು ನಿಮ್ಮ ಹೆಂಡತಿಯರನ್ನು ಪ್ರೀತಿಸಬೇಕು. 26 ಕ್ರಿಸ್ತನು ಸಭೆಯನ್ನು ಪರಿಶುದ್ಧಗೊಳಿಸುವುದಕ್ಕಾಗಿ ಪ್ರಾಣಕೊಟ್ಟನು. ಸುವಾರ್ತೆಯನ್ನು ತಿಳಿಸುವುದರ ಮೂಲಕ ಜಲಸ್ನಾನವನ್ನು ಮಾಡಿಸಿ ಆತನು ಸಭೆಯನ್ನು ಶುದ್ಧಗೊಳಿಸಿದನು. 27 ಮಹಿಮಾಪೂರ್ಣಳಾದ ಕನ್ನಿಕೆಯೋ ಎಂಬಂತಿರುವ ಸಭೆಯನ್ನು ತನಗೇ ಕೊಡಬೇಕೆಂದು ಆತನು ಪ್ರಾಣಕೊಟ್ಟನು. ಸಭೆಯು ದೋಷವಿಲ್ಲದೆ ಶುದ್ಧವಾಗಿರಬೇಕೆಂದು ಮತ್ತು ದುಷ್ಟತ್ವವಾಗಲಿ ಪಾಪವಾಗಲಿ ಅಥವಾ ಬೇರೆ ಯಾವುದೇ ತಪ್ಪಾಗಲಿ ಸಭೆಯಲ್ಲಿರಕೂಡದೆಂದು ಆತನು ಪ್ರಾಣಕೊಟ್ಟನು.
28 ಆದ್ದರಿಂದ ಪುರುಷರು ತಮ್ಮ ಸ್ವಂತ ದೇಹಗಳನ್ನು ಪ್ರೀತಿಸುವಂತೆ ತಮ್ಮ ಹೆಂಡತಿಯರನ್ನು ಪ್ರೀತಿಸಬೇಕು. ತನ್ನ ಹೆಂಡತಿಯನ್ನು ಪ್ರೀತಿಸುವವನು ತನ್ನನ್ನೇ ಪ್ರೀತಿಸುವವನಾಗಿದ್ದಾನೆ. 29 ಏಕೆಂದರೆ ಯಾವನೂ ತನ್ನ ದೇಹವನ್ನು ದ್ವೇಷಿಸುವುದಿಲ್ಲ. ಪ್ರತಿಯೊಬ್ಬನು ತನ್ನ ದೇಹವನ್ನು ಪೋಷಿಸಿ ಜಾಗ್ರತೆಯಿಂದ ನೋಡಿಕೊಳ್ಳುತ್ತಾನೆ. ಕ್ರಿಸ್ತನು ಸಭೆಗೋಸ್ಕರ ಮಾಡುವಂಥದ್ದು ಅದೇ ಆಗಿದೆ. 30 ಏಕೆಂದರೆ ನಾವು ಆತನ ದೇಹದ ಅಂಗಗಳಾಗಿದ್ದೇವೆ. 31 ಪವಿತ್ರ ಗ್ರಂಥವು ಹೇಳುವಂತೆ, “ಪುರುಷನು ತನ್ನ ತಂದೆತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಸೇರಿಕೊಳ್ಳುವನು ಮತ್ತು ಅವರಿಬ್ಬರು ಒಂದೇ ದೇಹವಾಗುವರು.”(A) 32 ನಾನು ಕ್ರಿಸ್ತನಿಗೂ ಸಭೆಗೂ ಇರುವ ಸಂಬಂಧವನ್ನು ಕುರಿತು ಮಾತಾಡುತ್ತಿದ್ದೇನೆ. ರಹಸ್ಯವಾದ ಈ ಸತ್ಯವು ಬಹು ಮುಖ್ಯವಾದದ್ದು. 33 ಆದರೆ ನಿಮ್ಮಲ್ಲಿ ಪ್ರತಿ ಪುರುಷನು ತನ್ನನ್ನು ತಾನು ಪ್ರೀತಿಸುವಂತೆ ತನ್ನ ಹೆಂಡತಿಯನ್ನು ಪ್ರೀತಿಸಬೇಕು ಮತ್ತು ಸ್ತ್ರೀಯು ತನ್ನ ಗಂಡನಿಗೆ ಭಯಭಕ್ತಿಯಿಂದರಬೇಕು.
Kannada Holy Bible: Easy-to-Read Version. All rights reserved. © 1997 Bible League International