Print Page Options
Previous Prev Day Next DayNext

Old/New Testament

Each day includes a passage from both the Old Testament and New Testament.
Duration: 365 days
Kannada Holy Bible: Easy-to-Read Version (KERV)
Version
ಯೆಶಾಯ 5-6

ಇಸ್ರೇಲು ದೇವರ ವಿಶೇಷವಾದ ತೋಟ

ನನ್ನ ಪ್ರಿಯನನ್ನೂ ಆತನ ತೋಟವನ್ನೂ ಕುರಿತು ಗೀತೆಯೊಂದನ್ನು ಹಾಡುವೆ.

ಫಲವತ್ತಾದ ಪ್ರದೇಶದಲ್ಲಿ
    ನನ್ನ ಪ್ರಿಯನಿಗೆ ದ್ರಾಕ್ಷಿತೋಟವಿತ್ತು.
ಆತನು ಭೂಮಿಯನ್ನು ಅಗೆದು ಹಸನು ಮಾಡಿದನು;
    ಅದರಲ್ಲಿ ಉತ್ತಮವಾದ ದ್ರಾಕ್ಷಿಯ ಸಸಿಗಳನ್ನು ನೆಟ್ಟನು.
ತೋಟದ ಮಧ್ಯದಲ್ಲಿ ಒಂದು ಗೋಪುರವನ್ನು ಕಟ್ಟಿಸಿ
    ದ್ರಾಕ್ಷಿಯ ತೊಟ್ಟಿಯನ್ನು ಮಾಡಿಸಿದನು.
ತೋಟವು ಒಳ್ಳೆಯ ದ್ರಾಕ್ಷಿಹಣ್ಣನ್ನು ಕೊಡುವುದೆಂದು ಎದುರುನೋಡತೊಡಗಿದನು.
    ಆದರೆ ಅದು ಹೊಲಸು ಹಣ್ಣನ್ನು ಬಿಟ್ಟಿತು.

ಆಗ ಆತನು, “ಜೆರುಸಲೇಮಿನ ನಿವಾಸಿಗಳೇ, ಯೆಹೂದದ ಜನರೇ, ನನ್ನ ವಿಚಾರವಾಗಿಯೂ
    ನನ್ನ ದ್ರಾಕ್ಷಿತೋಟದ ವಿಚಾರವಾಗಿಯೂ ಯೋಚಿಸಿರಿ.
ನನ್ನ ದ್ರಾಕ್ಷಿತೋಟಕ್ಕೆ ನಾನು ಇನ್ನೇನು ಮಾಡಬೇಕಿತ್ತು.
    ನಾನು ಮಾಡಬೇಕಿದ್ದನ್ನೆಲ್ಲಾ ಮಾಡಿದೆನು.
ಒಳ್ಳೆಯ ದ್ರಾಕ್ಷಿಹಣ್ಣು ಬಿಡುವುದೆಂದು ಆಶಿಸಿದ್ದೆನು.
    ಆದರೆ ಅದು ಹೊಲಸು ದ್ರಾಕ್ಷಿಗಳನ್ನೇ ಬಿಟ್ಟಿತು.
    ಹೀಗೆ ಆದದ್ದೇಕೆ?

“ನಾನೀಗ ನನ್ನ ದ್ರಾಕ್ಷಿತೋಟಕ್ಕೆ ಏನು ಮಾಡುವೆನೆಂದು ತಿಳಿಸುವೆನು:
ಅದರ ಸುತ್ತಲೂ ರಕ್ಷಣೆಗಾಗಿ ಹಾಕಿದ್ದ ಮುಳ್ಳಿನ ಬೇಲಿಯನ್ನು
    ಕಿತ್ತು ಸುಟ್ಟುಬಿಡುವೆನು.
ಅದರ ಕಲ್ಲಿನ ಗೋಡೆಯನ್ನು ಕೆಡವಿ
    ತುಳಿದಾಟಕ್ಕೆ ಈಡುಮಾಡುವೆನು.
ನಾನು ಅದನ್ನು ಬೆಂಗಾಡಾಗಿ ಮಾಡುವೆನು.
    ಅದರಲ್ಲಿರುವ ಸಸಿಗಳನ್ನು ಯಾರೂ ಲಕ್ಷಿಸರು.
    ತೋಟದಲ್ಲಿ ಯಾರೂ ಕೆಲಸ ಮಾಡುವದಿಲ್ಲ.
    ಮುಳ್ಳುಗಳೂ ಹಣಜಿಗಳೂ ಅಲ್ಲಿ ಬೆಳೆಯುವವು.
ಅಲ್ಲಿ ಮಳೆಗರೆಯದಂತೆ ಮೋಡಗಳಿಗೆ ಆಜ್ಞಾಪಿಸುವೆನು.”

ಸರ್ವಶಕ್ತನಾದ ಯೆಹೋವನ ದ್ರಾಕ್ಷಿತೋಟವೇ ಇಸ್ರೇಲ್ ದೇಶ. ಯೆಹೋವನು ಪ್ರೀತಿಸುವ ದ್ರಾಕ್ಷಿಬಳ್ಳಿಯೇ ಯೆಹೂದದ ಪ್ರಜೆ.

ಯೆಹೋವನು ನ್ಯಾಯವನ್ನು ಅಪೇಕ್ಷಿಸಿದರೂ
    ಸಿಕ್ಕಿದ್ದು ನರಹತ್ಯವೇ.
ಯೆಹೋವನು ಧರ್ಮವನ್ನು ಅಪೇಕ್ಷಿಸಿದರೂ
    ದೊರಕಿದ್ದು ಗೋಳಾಟವೇ.

ನೀವು ಒಬ್ಬರಿಗೊಬ್ಬರು ಸಮೀಪದಲ್ಲಿ ವಾಸಿಸುತ್ತೀರಿ. ಬೇರೆ ಯಾವುದಕ್ಕೂ ಸ್ಧಳ ಸಿಗದಂತೆ ನೀವು ಹತ್ತಿರಹತ್ತಿರವಾಗಿ ಮನೆಗಳನ್ನು ಕಟ್ಟಿಕೊಳ್ಳುತ್ತೀರಿ. ಆದರೆ ಯೆಹೋವನು ನಿಮ್ಮನ್ನು ಶಿಕ್ಷಿಸಿ ಇಡೀ ದೇಶದಲ್ಲಿಯೇ ನೀವು ಒಬ್ಬಂಟಿಗರಾಗಿ ವಾಸಿಸುವಂತೆ ಮಾಡುವನು. ಸರ್ವಶಕ್ತನಾದ ಯೆಹೋವನ ನುಡಿಗಳಿವು. ನಾನು ಈ ಮಾತುಗಳನ್ನು ಕಿವಿಯಾರೆ ಕೇಳಿದೆನು: “ಈಗ ಅನೇಕ ಮನೆಗಳಿವೆ, ಆದರೆ ನಾನು ಖಂಡಿತವಾಗಿ ಹೇಳುವುದೇನೆಂದರೆ ಎಲ್ಲಾ ಮನೆಗಳು ಕೆಡವಲ್ಪಡುವವು. ಈಗ ಭವ್ಯವಾದ ಬಂಗಲೆಗಳಿವೆ, ಆದರೆ ಅವುಗಳೆಲ್ಲಾ ಬರಿದಾಗುವವು. 10 ಆ ದಿವಸಗಳಲ್ಲಿ ಹತ್ತು ಎಕರೆ ವಿಶಾಲವಾದ ದ್ರಾಕ್ಷಿತೋಟದಲ್ಲಿ ಸ್ವಲ್ಪ ಮಾತ್ರವೇ ದ್ರಾಕ್ಷಾರಸವು ದೊರಕುವದು. ಅನೇಕ ಚೀಲ ಬೀಜವನ್ನು ಬಿತ್ತಿದರೆ ಸ್ವಲ್ಪ ಧಾನ್ಯ ಮಾತ್ರ ಸಿಗುವುದು.”

11 ನೀವು ಮುಂಜಾನೆ ಎದ್ದು ಮದ್ಯಕ್ಕಾಗಿ ಹುಡುಕಾಡುವಿರಿ. ಮಧ್ಯರಾತ್ರಿಯವರೆಗೆ ಎಚ್ಚರವಿದ್ದು ಕುಡಿದು ಮತ್ತರಾಗುವಿರಿ. 12 ನೀವು ಕುಡಿಯುತ್ತಾ ಹಾರ್ಪ್‌ವಾದ್ಯಗಳನ್ನೂ ದಮ್ಮಡಿಗಳನ್ನೂ ಕೊಳಲುಗಳನ್ನೂ ಬಾರಿಸುತ್ತಾ ನೃತ್ಯಮಾಡುವಿರಿ. ಆದರೆ ಯೆಹೋವನು ಮಾಡಿದ ಕಾರ್ಯಗಳನ್ನು ನೀವು ಗಮನಿಸುವುದಿಲ್ಲ. ಯೆಹೋವನ ಹಸ್ತವು ಅನೇಕಾನೇಕ ಕಾರ್ಯಗಳನ್ನು ಮಾಡಿದೆ. ಆದರೆ ನೀವು ಅವುಗಳನ್ನು ಲಕ್ಷಿಸುವುದಿಲ್ಲ. ಆದ್ದರಿಂದ ನಿಮಗೆ ಕೇಡಾಗುವುದು.

13 ಯೆಹೋವನು ಹೇಳುವುದೇನೆಂದರೆ: “ನನ್ನ ಜನರು ಸೆರೆಹಿಡಿಯಲ್ಪಟ್ಟು ಒಯ್ಯಲ್ಪಡುವರು. ಯಾಕೆಂದರೆ ಅವರು ನಿಜವಾಗಿಯೂ ನನ್ನನ್ನು ಅರಿತಿಲ್ಲ. ಇಸ್ರೇಲಿನಲ್ಲಿ ವಾಸಿಸುವ ಕೆಲವು ಜನರು ಈಗ ಪ್ರಮುಖರಾಗಿದ್ದಾರೆ. ತಮ್ಮ ಸುಖಜೀವಿತದಲ್ಲಿ ಆನಂದಿಸುತ್ತಾರೆ. ಆದರೆ ಆ ಗಣ್ಯವ್ಯಕ್ತಿಗಳೆಲ್ಲಾ ಬಾಯಾರಿಕೆಯಿಂದಲೂ ಹಸಿವೆಯಿಂದಲೂ ನರಳುವರು. 14 ಬಳಿಕ ಅವರು ಸತ್ತು ಪಾತಾಳಕ್ಕೆ ಇಳಿದುಹೋಗುವರು. ಪಾತಾಳವು ತನ್ನ ಬಾಯನ್ನು ಅಗಲವಾಗಿ ತೆರೆದು ಅವರನ್ನೆಲ್ಲಾ ನುಂಗಿಬಿಡುವುದು.”

15 ಆ ಜನರು ತಗ್ಗಿಸಲ್ಪಡುವರು. ಆ ಗಣ್ಯವ್ಯಕ್ತಿಗಳು ತಮ್ಮ ತಲೆಗಳನ್ನು ಕೆಳಗೆ ಮಾಡಿ ನೆಲದ ಕಡೆಗೆ ನೋಡುವರು. 16 ಸರ್ವಶಕ್ತನಾದ ಯೆಹೋವನು ನೀತಿಯಿಂದ ನ್ಯಾಯತೀರಿಸುವನು. ಯೆಹೋವನು ಉನ್ನತೋನ್ನತನೆಂದು ಜನರೆಲ್ಲರೂ ಅರಿತುಕೊಳ್ಳುವರು. ಪರಿಶುದ್ಧನಾದ ದೇವರು ನ್ಯಾಯವಾದದ್ದನ್ನೇ ಮಾಡುವನು. ಜನರು ಆತನನ್ನು ಗೌರವಿಸುವರು. 17 ಆತನು ಇಸ್ರೇಲ್ ದೇಶದ ಜನರನ್ನು ದೇಶಭ್ರಷ್ಟರನ್ನಾಗಿ ಮಾಡುವನು. ಆಗ ದೇಶವು ಬರಿದಾಗುವುದು. ಕುರಿಗಳು ತಮ್ಮ ಮನಸ್ಸು ಬಂದೆಡೆಗೆ ಹೋಗುವವು. ಐಶ್ವರ್ಯವಂತರಿಗೆ ಸೇರಿದ್ದ ಜಮೀನಿನ ಮೇಲೆ ಕುರಿಮರಿಗಳು ನಡೆದಾಡುವವು.

18 ಆ ಜನರನ್ನು ನೋಡಿರಿ. ಜನರು ಹಗ್ಗಗಳಿಂದ ಗಾಡಿಯನ್ನು ಎಳೆದುಕೊಂಡು ಹೋಗುವಂತೆ ಅವರು ತಮ್ಮ ಪಾಪಗಳನ್ನು ಎಳೆದುಕೊಂಡು ಹೋಗುತ್ತಿದ್ದಾರೆ. 19 ಅವರು, “ದೇವರು ತಾನು ಮಾಡಲಿಕ್ಕಿರುವುದನ್ನು ಬೇಗನೇ ಮಾಡಿಮುಗಿಸಲಿ. ಆಗ ಏನಾಗುವದೋ ನೋಡೋಣ. ಆತನ ಯೋಜನೆ ಬೇಗನೆ ಕಾರ್ಯರೂಪಕ್ಕೆ ಬರಲಿ. ಆಗ ಆತನ ಯೋಜನೆ ಏನೆಂಬುದು ನಮಗೆ ತಿಳಿಯುವುದು” ಎಂದು ಹೇಳುತ್ತಿದ್ದಾರೆ.

20 ಆ ಜನರು ಒಳ್ಳೆಯವುಗಳನ್ನು ಕೆಟ್ಟವುಗಳೆಂದೂ ಕೆಟ್ಟವುಗಳನ್ನು ಒಳ್ಳೆಯವುಗಳೆಂದೂ ಹೇಳುತ್ತಾರೆ. ಅವರು ಬೆಳಕನ್ನು ಕತ್ತಲೆಯೆಂದೂ ಕತ್ತಲೆಯನ್ನು ಬೆಳಕೆಂದೂ ಅನ್ನುತ್ತಾರೆ. ಅವರು ಸಿಹಿಯನ್ನು ಕಹಿಯೆಂದೂ ಕಹಿಯನ್ನು ಸಿಹಿಯೆಂದೂ ಹೇಳುವರು. 21 ಅವರು ತಾವು ತುಂಬಾ ಬುದ್ಧಿವಂತರೆಂದೂ ಜ್ಞಾನಿಗಳೆಂದೂ ಹೇಳಿಕೊಳ್ಳುವರು. 22 ಅವರು ಮದ್ಯವನ್ನು ಬೆರೆಸುವುದರಲ್ಲಿ ಪರಿಣಿತರು; ಮದ್ಯಸೇವನೆ ಮಾಡುವದಕ್ಕೆ ಹೆಸರಾದವರು. 23 ಅವರಿಗೆ ಹಣಕೊಟ್ಟರೆ, ಅಪರಾಧಿಯನ್ನೂ ಬಿಟ್ಟುಬಿಡುವರು; ಆದರೆ ಒಳ್ಳೆಯವರಿಗೆ ಸರಿಯಾದ ನ್ಯಾಯತೀರ್ಪು ದೊರಕಲು ಅವರು ಅವಕಾಶ ಕೊಡುವುದಿಲ್ಲ. 24 ಆದ್ದರಿಂದ ಅವರಿಗೆ ಕೇಡುಗಳಾಗುವವು. ಅವರ ಸಂತತಿಯವರು ತರಗೆಲೆಯೂ ಹುಲ್ಲೂ ಬೆಂಕಿಯಲ್ಲಿ ಸುಟ್ಟುಹೋಗುವಂತೆ ನಾಶವಾಗುವರು. ಅವರ ಸಂತತಿಯವರು ಸತ್ತು ಧೂಳಾಗುವ ಬೇರಿನಂತೆ ನಾಶವಾಗುವರು. ಬೆಂಕಿಯಲ್ಲಿ ಸುಟ್ಟುಹೋದ ಹೂವಿನ ಬೂದಿಯು ಗಾಳಿಯಲ್ಲಿ ಹಾರಿಹೋಗುವಂತೆ ಅವರ ಸಂತತಿಯವರು ನಾಶವಾಗುವರು.

ಅವರು ಸರ್ವಶಕ್ತನಾದ ಯೆಹೋವನ ಬೋಧನೆಗಳನ್ನು ಅನುಸರಿಸಲು ನಿರಾಕರಿಸಿದ್ದಾರೆ. ಇಸ್ರೇಲಿನ ಪರಿಶುದ್ಧನ ವಾಕ್ಯವನ್ನು ಅವರು ದ್ವೇಷಿಸುತ್ತಾರೆ. 25 ಆದ್ದರಿಂದ ಯೆಹೋವನು ತನ್ನ ಜನರ ಮೇಲೆ ಬಹಳವಾಗಿ ಕೋಪಗೊಂಡಿದ್ದಾನೆ. ಯೆಹೋವನು ತನ್ನ ಕೈಗಳನ್ನೆತ್ತಿ ಅವರನ್ನು ಶಿಕ್ಷಿಸುವನು. ಆಗ ಪರ್ವತಗಳೂ ಹೆದರಿಕೊಳ್ಳುವವು; ಹೆಣಗಳು ಕಸದಂತೆ ರಸ್ತೆಗಳಲ್ಲಿ ಬಿದ್ದುಕೊಂಡಿರುವವು. ಆದರೆ ದೇವರು ಅವರ ಮೇಲೆ ಕೋಪಿಸಿಕೊಂಡೇ ಇರುವನು. ಜನರನ್ನು ಶಿಕ್ಷಿಸಲು ಆತನ ಕೈಗಳು ಮೇಲೆತ್ತಲ್ಪಟ್ಟಿರುವವು.

ಇಸ್ರೇಲರನ್ನು ಶಿಕ್ಷಿಸಲು ದೇವರು ಸೈನ್ಯವನ್ನು ತರುವನು

26 ಎದ್ದು ನೋಡು! ದೂರದೇಶದ ಜನಾಂಗಗಳಿಗೆ ದೇವರು ಗುರುತನ್ನು ಕೊಡುತ್ತಿದ್ದಾನೆ. ಆತನು ಧ್ವಜವನ್ನೆತ್ತಿ ಆ ಜನರನ್ನು ಸಿಳ್ಳುಹಾಕಿ ಕರೆಯುತ್ತಿದ್ದಾನೆ.

ಶತ್ರುಗಳು ದೂರದೇಶದಿಂದ ಬರುತ್ತಿದ್ದಾರೆ. ಅವರು ಬೇಗನೆ ನಿನ್ನ ದೇಶವನ್ನು ಪ್ರವೇಶಿಸುವರು. ಅವರು ಬಹುವೇಗವಾಗಿ ಬರುತ್ತಿದ್ದಾರೆ. 27 ಶತ್ರುಗಳು ಆಯಾಸಗೊಳ್ಳುವುದಿಲ್ಲ, ನೆಲಕ್ಕೆ ಬೀಳುವುದಿಲ್ಲ. ಅವರು ತೂಕಡಿಸುವುದಿಲ್ಲ, ನಿದ್ರೆ ಮಾಡುವುದಿಲ್ಲ. ಅವರ ಸೊಂಟಪಟ್ಟಿಯು ಆಯುಧದೊಂದಿಗೆ ಯಾವಾಗಲೂ ಸಿದ್ಧವಾಗಿರುವುದು. ಅವರ ಪಾದರಕ್ಷೆಗಳ ದಾರವು ಎಂದಿಗೂ ತುಂಡಾಗುವದಿಲ್ಲ. 28 ವೈರಿಗಳ ಬಾಣಗಳು ಬಹು ಹರಿತವಾದದ್ದು. ಅವರ ಬಿಲ್ಲುಗಳೆಲ್ಲವೂ ಬಾಣವೆಸೆಯಲು ತಯಾರಾಗಿವೆ. ಅವರ ಕುದುರೆಗಳ ಪಾದಗಳು ಬಂಡೆಯಂತೆ ಗಟ್ಟಿಯಾಗಿವೆ. ಅವರ ರಥಗಳ ಹಿಂದಿನಿಂದ ಧೂಳಿನ ಮೋಡವೇ ಹಾರುವದು.

29 ಶತ್ರುಗಳು ಆರ್ಭಟಿಸುವರು, ಆ ಆರ್ಭಟವು ಪ್ರಾಯದ ಸಿಂಹಗಳ ಗರ್ಜನೆಯಂತಿರುವುದು. ಶತ್ರುಗಳು ಹೂಂಕರಿಸುತ್ತಾ ತಮ್ಮೊಂದಿಗೆ ಯುದ್ಧ ಮಾಡುತ್ತಿರುವವರನ್ನು ಹಿಡಿದುಬಿಡುವರು. ಜನರು ಹೋರಾಡಿ ಪಾರಾಗಲು ಪ್ರಯತ್ನಿಸುವರು. ಆದರೆ ಅವರನ್ನು ರಕ್ಷಿಸುವವರು ಯಾರೂ ಇರುವುದಿಲ್ಲ. 30 ಆದ್ದರಿಂದ ಸಮುದ್ರವು ಭೋರ್ಗರೆಯವಂತೆ ಆ ದಿನದಲ್ಲಿ ಗರ್ಜನೆಯಿರುವುದು. ಸೆರೆಹಿಡಿಯಲ್ಪಟ್ಟ ಜನರು ನೆಲದ ಕಡೆ ನೋಡುವರು. ಅಲ್ಲಿ ಬರೇ ಕತ್ತಲೆಯೇ. ಆ ದಟ್ಟವಾದ ಮೋಡಗಳಲ್ಲಿ ಎಲ್ಲವೂ ಕಪ್ಪಾಗಿಯೇ ಕಾಣುತ್ತದೆ.

ಪ್ರವಾದಿಯಾಗಲು ಯೆಶಾಯನಿಗೆ ದೇವರಿಂದ ಕರೆ

ಅರಸನಾದ ಉಜ್ಜೀಯನು ಮರಣಹೊಂದಿದ ವರ್ಷದಲ್ಲಿ ನಾನು ನನ್ನ ಒಡೆಯನನ್ನು ಕಂಡೆನು. ಆತನು ಅದ್ಭುತವೂ ಉನ್ನತವೂ ಆಗಿರುವ ಸಿಂಹಾಸನದ ಮೇಲೆ ಕುಳಿತಿದ್ದನು. ಆತನ ಉದ್ದವಾದ ನಿಲುವಂಗಿಯು ಆಲಯವನ್ನು ತುಂಬಿಕೊಂಡಿತ್ತು. ಆರು ರೆಕ್ಕೆಗಳುಳ್ಳ ಸೆರಾಫಿಯರು ಯೆಹೋವನ ಸುತ್ತ್ತಲೂ ನಿಂತಿದ್ದರು. ಆ ದೇವದೂತರು ಎರಡು ರೆಕ್ಕೆಗಳಿಂದ ತಮ್ಮ ಮುಖಗಳನ್ನು ಮುಚ್ಚಿಕೊಂಡಿದ್ದರು; ಎರಡು ರೆಕ್ಕೆಗಳಿಂದ ತಮ್ಮ ಕಾಲುಗಳನ್ನು ಮುಚ್ಚಿಕೊಂಡಿದ್ದರು; ಉಳಿದ ಎರಡು ರೆಕ್ಕೆಗಳಿಂದ ಹಾರಾಡುತ್ತಿದ್ದರು. ಪ್ರತಿಯೊಬ್ಬ ದೂತನು ಇನ್ನೊಬ್ಬ ದೂತನನ್ನು ಕರೆದು, “ಪರಿಶುದ್ಧನು, ಪರಿಶುದ್ಧನು, ಪರಿಶುದ್ಧನು, ಸರ್ವಶಕ್ತನಾದ ಯೆಹೋವನು ಮಹಾ ಪರಿಶುದ್ಧನು. ಆತನ ಮಹಿಮೆಯು ಇಡೀ ಭೂಮಂಡಲವನ್ನು ಆವರಿಸಿಕೊಂಡಿದೆ” ಎಂದು ಗಟ್ಟಿಯಾದ ಸ್ವರದಲ್ಲಿ ಹೇಳುತ್ತಿದ್ದರು. ಅವರ ಗಟ್ಟಿಯಾದ ಸ್ವರಕ್ಕೆ ಬಾಗಿಲಿನ ನಿಲುವುಗಳು ಅಲುಗಾಡುತ್ತಿದ್ದವು; ಆಲಯವು ಹೊಗೆಯಿಂದ ತುಂಬಿಹೋಯಿತು.

ಆಗ ನಾನು ಬಹು ಭಯಗೊಂಡು, “ಅಯ್ಯೋ, ನಾನು ನಾಶವಾಗುತ್ತಿದ್ದೇನೆ. ನಾನು ದೇವರೊಂದಿಗೆ ಮಾತನಾಡುವಷ್ಟು ಯೋಗ್ಯನಲ್ಲ. ದೇವರೊಂದಿಗೆ ಮಾತಾಡಲು ಯೋಗ್ಯರಲ್ಲದ ಜನರೊಂದಿಗೆ ನಾನು ಜೀವಿಸುತ್ತಿದ್ದೇನೆ. ಆದರೂ ನಾನು ಸರ್ವಶಕ್ತನಾದ ಯೆಹೋವನನ್ನು, ರಾಜಾಧಿರಾಜನನ್ನು ನೋಡಿದೆನು” ಎಂದೆನು.

ಯಜ್ಞವೇದಿಕೆಯ ಮೇಲೆ ಬೆಂಕಿ ಇತ್ತು. ಸೆರಾಫಿಯರಲ್ಲೊಬ್ಬನು ಇಕ್ಕುಳಿಯಲ್ಲಿ ಬೆಂಕಿಯೊಳಗಿಂದ ಉರಿಯುವ ಕೆಂಡವನ್ನು ತೆಗೆದು ನನ್ನ ಬಳಿಗೆ ಹಾರಿಬಂದನು. ಆ ಸೆರಾಫಿಯನು ಉರಿಯುವ ಕೆಂಡವನ್ನು ನನ್ನ ಬಾಯಿಗೆ ಮುಟ್ಟಿಸಿದನು. ಆಗ ಆ ದೂತನು, “ಇಗೋ, ಈ ಉರಿಯುವ ಕೆಂಡವು ನಿನ್ನ ತುಟಿಗಳಿಗೆ ತಗಲಿದ್ದರಿಂದ ನೀನು ಮಾಡಿದ ಕೆಟ್ಟಕಾರ್ಯಗಳೆಲ್ಲಾ ನಿನ್ನಿಂದ ತೊಲಗಿ ಹೋದವು. ಈಗ ನಿನ್ನ ಪಾಪವು ಅಳಿಸಿಹಾಕಲ್ಪಟ್ಟಿದೆ”[a] ಎಂದು ಹೇಳಿದನು.

ಆಗ ನಾನು ನನ್ನ ಒಡೆಯನಾದ ಯೆಹೋವನ ಸ್ವರವನ್ನು ಕೇಳಿದೆನು. ಆತನು, “ನಾನು ಯಾರನ್ನು ಕಳುಹಿಸಲಿ? ನಮಗೋಸ್ಕರ ಯಾರು ಹೋಗುವರು?” ಎಂದು ಕೇಳಿದನು.

ಆಗ ನಾನು, “ನಾನಿದ್ದೇನೆ, ನನ್ನನ್ನು ಕಳುಹಿಸು” ಎಂದು ಹೇಳಿದೆನು.

ಆಗ ಯೆಹೋವನು, “ನೀನು ಹೋಗಿ ಇದನ್ನು ಜನರಿಗೆ ಸಾರು: ‘ಸರಿಯಾಗಿ ಕೇಳಿಸಿಕೊಳ್ಳಿ, ಆದರೆ ಅರ್ಥಮಾಡಿಕೊಳ್ಳಬೇಡಿ. ಸೂಕ್ಷ್ಮವಾಗಿ ನೋಡಿ, ಆದರೆ ಕಲಿತುಕೊಳ್ಳಬೇಡಿ.’ 10 ಜನರಲ್ಲಿ ಗಲಿಬಿಲಿಯನ್ನು ಉಂಟುಮಾಡು. ಜನರು ತಾವು ನೋಡಿದ್ದನ್ನು, ಕೇಳಿದ್ದನ್ನು ಅರ್ಥಮಾಡಿಕೊಳ್ಳದ ಹಾಗೆ ಮಾಡು. ನೀನು ಹೀಗೆ ಮಾಡದಿದ್ದಲ್ಲಿ ಜನರು ತಾವು ಕೇಳಿದ್ದನ್ನು ಅರ್ಥಮಾಡಿಕೊಳ್ಳುವರು; ಜನರು ತಮ್ಮ ಮನಸ್ಸಿನಲ್ಲಿ ಅರ್ಥಮಾಡಿಕೊಳ್ಳುವರು. ಅವರು ಹಾಗೆ ಮಾಡಿದ್ದಲ್ಲಿ, ಅವರು ನನ್ನ ಬಳಿಗೆ ಹಿಂದಿರುಗಿ ಬಂದು ಗುಣಹೊಂದುವರು” ಎಂದು ಹೇಳಿದನು.

11 ಆಗ ನಾನು, “ಒಡೆಯನೇ, ಎಷ್ಟರ ತನಕ ನಾನು ಹೀಗೆ ಮಾಡಬೇಕು?” ಎಂದು ವಿಚಾರಿಸಿದೆನು.

ಅದಕ್ಕೆ ಯೆಹೋವನು, “ನಗರಗಳು ನಾಶವಾಗುವ ತನಕ ಹೀಗೆಯೇ ಮಾಡು. ಮನೆಗಳಲ್ಲಿ ಜನರು ಇಲ್ಲದೆ ಹೋಗುವವರೆಗೆ ಹೀಗೆಯೇ ಮಾಡು. ಇಡೀ ದೇಶವು ಹಾಳಾಗಿ ಬೆಂಗಾಡಾಗುವ ತನಕ ಹೀಗೆಯೇ ಮಾಡುತ್ತಿರು” ಎಂದು ಹೇಳಿದನು.

12 ಜನರು ಬಹುದೂರ ಹೋಗುವಂತೆ ಯೆಹೋವನು ಮಾಡುವನು. ದೇಶದೊಳಗೆ ನಿರ್ಜನವಾದ ಸ್ಥಳಗಳು ಬೇಕಾದಷ್ಟು ಇರುವವು. 13 ಆದರೆ ದೇಶದಲ್ಲಿ ಹತ್ತನೆ ಒಂದು ಭಾಗದಷ್ಟು ಜನರು ಮಾತ್ರ ಉಳಿಯುವರು. ಇವರು ನಾಶವಾಗುವುದಿಲ್ಲ. ಯಾಕೆಂದರೆ ಇವರು ಯೆಹೋವನ ಬಳಿಗೆ ಹಿಂತಿರುಗಿ ಬಂದವರು. ಇವರು ಓಕ್ ಮರದಂತಿರುವರು. ಆ ಮರವು ಕಡಿಯಲ್ಪಟ್ಟರೂ ಅದರ ಬುಡವು ಹಾಗೆಯೇ ಉಳಿಯುವದು. ಈ ಕಾಂಡದ ಬುಡವು ಬಹು ವಿಶೇಷವಾದ ಬೀಜವಾಗಿರುವದು ಮತ್ತು ಅದು ಪುನಃ ಬೆಳೆಯುವುದು.

ಎಫೆಸದವರಿಗೆ 1

ಕ್ರಿಸ್ತ ಯೇಸುವಿನ ಅಪೊಸ್ತಲನಾಗಿರುವ ಪೌಲನು ಬರೆಯುವ ಪತ್ರ. ನಾನು ದೇವರ ಇಷ್ಟಾನುಸಾರವಾಗಿ ಅಪೊಸ್ತಲನಾಗಿದ್ದೇನೆ. ಎಫೆಸ[a] ಪಟ್ಟಣದಲ್ಲಿ ವಾಸವಾಗಿರುವ ಮತ್ತು ಕ್ರಿಸ್ತಯೇಸುವಿನಲ್ಲಿ ನಂಬಿಕೆಯಿಟ್ಟಿರುವ ಪರಿಶುದ್ಧ ದೇವಜನರಿಗೆ ನಾನು ಈ ಪತ್ರವನ್ನು ಬರೆಯುತ್ತಿದ್ದೇನೆ.

ನಮ್ಮ ತಂದೆಯಾದ ದೇವರು ಮತ್ತು ಪ್ರಭುವಾದ ಯೇಸು ಕ್ರಿಸ್ತನು ನಿಮಗೆ ಕೃಪೆಯನ್ನೂ ಶಾಂತಿಯನ್ನೂ ದಯಪಾಲಿಸಲಿ.

ಕ್ರಿಸ್ತನಲ್ಲಿರುವ ಆತ್ಮಿಕ ಆಶೀರ್ವಾದಗಳು

ನಮ್ಮ ಪ್ರಭುವಾದ ಯೇಸು ಕ್ರಿಸ್ತನ ದೇವರೂ ತಂದೆಯೂ ಆಗಿರುವಾತನಿಗೆ ಸ್ತೋತ್ರವಾಗಲಿ. ಪರಲೋಕದಲ್ಲಿರುವ ಪ್ರತಿಯೊಂದು ಆಶೀರ್ವಾದಗಳನ್ನು ದೇವರು ನಮಗೆ ಕ್ರಿಸ್ತನಲ್ಲಿ ದಯಪಾಲಿಸಿದ್ದಾನೆ. ಜಗತ್ತು ಸೃಷ್ಟಿಯಾಗುವುದಕ್ಕಿಂತ ಮೊದಲೇ ದೇವರು ನಮ್ಮನ್ನು ಕ್ರಿಸ್ತನಲ್ಲಿ ಆರಿಸಿಕೊಂಡನು. ತನ್ನ ಸನ್ನಿಧಿಯಲ್ಲಿ ನಾವು ಪರಿಶುದ್ಧರೂ ನಿರ್ದೋಷಿಗಳೂ ಆಗಿರಬೇಕೆಂಬುದು ಆತನ ಉದ್ದೇಶವಾಗಿತ್ತು. ನಮ್ಮ ಮೇಲಿನ ಪ್ರೀತಿಯಿಂದ ಕ್ರಿಸ್ತ ಯೇಸುವಿನ ಮೂಲಕ ನಮ್ಮನ್ನು ತನ್ನ ಸ್ವಂತ ಮಕ್ಕಳನ್ನಾಗಿ ಮಾಡಿಕೊಳ್ಳಲು ಆತನು ಆಗಲೇ ನಿರ್ಧರಿಸಿದ್ದನು. ಅದು ಆತನ ಚಿತ್ತವಾಗಿತ್ತು ಮತ್ತು ಆತನಿಗೆ ಮೆಚ್ಚಿಕೆಕರವಾಗಿತ್ತು. ದೇವರ ಅದ್ಭುತವಾದ ಕೃಪೆಯಿಂದಾದ ಈ ನಿರ್ಧಾರವು ಆತನಿಗೆ ಸ್ತೋತ್ರವನ್ನು ಉಂಟುಮಾಡುತ್ತದೆ. ದೇವರು ಆ ಕೃಪೆಯನ್ನು ತನ್ನ ಪ್ರಿಯನಾದ ಕ್ರಿಸ್ತನಲ್ಲಿ ನಮಗೆ ಉಚಿತವಾಗಿ ದಯಪಾಲಿಸಿದ್ದಾನೆ.

ಕ್ರಿಸ್ತನ ರಕ್ತದ ಮೂಲಕವಾಗಿ ನಮಗೆ ಬಿಡುಗಡೆಯಾಯಿತು. ದೇವರ ಮಹಾ ಕೃಪೆಯಿಂದ ನಮ್ಮ ಪಾಪಗಳು ಕ್ಷಮಿಸಲ್ಪಟ್ಟವು. ದೇವರು ನಮಗೆ ಆ ಕೃಪೆಯನ್ನು ಸಂಪೂರ್ಣವಾಗಿಯೂ ಉಚಿತವಾಗಿಯೂ ತೋರಿದನು. ದೇವರು ತನ್ನ ರಹಸ್ಯವಾದ ಯೋಜನೆಯನ್ನು ನಮಗೆ ತಿಳಿಸುವುದರ ಮೂಲಕ ನಮಗೆ ಸಂಪೂರ್ಣವಾದ ಜ್ಞಾನವನ್ನೂ ತಿಳುವಳಿಕೆಯನ್ನೂ ಕೊಟ್ಟನು. ಇದು ದೇವರ ಚಿತ್ತವಾಗಿತ್ತು. ಕ್ರಿಸ್ತನ ಮೂಲಕ ಇದನ್ನು ನೆರವೇರಿಸಲು ಆತನು ಯೋಜನೆ ಮಾಡಿದನು. 10 ಕಾಲವು ಪರಿಪೂರ್ಣವಾದಾಗ ಭೂಪರಲೋಕಗಳಲ್ಲಿರುವ ಸಮಸ್ತವನ್ನೂ ಕ್ರಿಸ್ತನಲ್ಲಿ ಒಂದುಗೂಡಿಸಿ ಆತನಿಗೆ ಅಧೀನ ಪಡಿಸಬೇಕೆಂಬುದೇ ದೇವರ ಯೋಜನೆಯಾಗಿತ್ತು.

11 ನಾವು ದೇವರ ಮಕ್ಕಳಾಗಿರಬೇಕೆಂದು ಕ್ರಿಸ್ತನಲ್ಲಿ ನಮ್ಮನ್ನು ಆರಿಸಿಕೊಳ್ಳಲಾಯಿತು. ನಾವು ತನ್ನ ಮಕ್ಕಳಾಗಿರಬೇಕೆಂದು ದೇವರು ತನ್ನ ಚಿತ್ತಾನುಸಾರವಾಗಿ ಮೊದಲೇ ಯೋಜನೆ ಮಾಡಿದ್ದನು. ತನ್ನ ನಿರ್ಧಾರ ಮತ್ತು ಇಷ್ಟಗಳಿಗನುಸಾರವಾಗಿ ಪ್ರತಿಯೊಂದನ್ನು ನೆರವೇರಿಸುವಾತನು ದೇವರೇ. 12 ಕ್ರಿಸ್ತನನ್ನು ನಿರೀಕ್ಷಿಸಿಕೊಂಡಿರುವವರಲ್ಲಿ ನಾವೇ ಮೊದಲಿಗರು. ದೇವರ ಮಹಿಮೆಗೆ ಸ್ತೋತ್ರವನ್ನು ಉಂಟುಮಾಡಬೇಕೆಂದೇ ನಮ್ಮನ್ನು ಆರಿಸಿಕೊಳ್ಳಲಾಯಿತು. 13 ಇದು ನಿಮಗೂ ಅನ್ವಯಿಸುತ್ತದೆ. ನೀವು ಸತ್ಯ ಬೋಧನೆಯ ಬಗ್ಗೆ ಅಂದರೆ ನಿಮ್ಮ ರಕ್ಷಣೆಯ ಕುರಿತಾದ ಸುವಾರ್ತೆಯ ಬಗ್ಗೆ ಕೇಳಿದಾಗ ಕ್ರಿಸ್ತನಲ್ಲಿ ನಂಬಿಕೆಯಿಟ್ಟಿರಿ. ದೇವರು ತನ್ನ ವಾಗ್ದಾನಕ್ಕನುಸಾರವಾಗಿ ನಿಮಗೆ ಪವಿತ್ರಾತ್ಮನನ್ನು ದಯಪಾಲಿಸುವುದರ ಮೂಲಕ ನಿಮ್ಮ ಮೇಲೆ ತನ್ನ ವಿಶೇಷವಾದ ಮುದ್ರೆಯನ್ನು ಹಾಕಿದನು. 14 ದೇವರು ತನ್ನ ಜನರಿಗೆ ವಾಗ್ದಾನ ಮಾಡಿದವುಗಳನ್ನು ನಾವು ಹೊಂದಿಕೊಳ್ಳುತ್ತೇವೆ ಎಂಬುದಕ್ಕೆ ಆ ಪವಿತ್ರಾತ್ಮನೇ ಪ್ರಮಾಣವಾಗಿದ್ದಾನೆ. ದೇವರು ಸಂಪಾದಿಸಿಕೊಂಡ ಜನರಿಗೆ ಇದು ಸಂಪೂರ್ಣ ವಿಮೋಚನೆಯನ್ನು ಉಂಟುಮಾಡುತ್ತದೆ. ದೇವರ ಮಹಿಮೆಗೆ ಸ್ತೋತ್ರವಾಗ ಬೇಕೆಂಬುದೇ ಇದೆಲ್ಲದರ ಉದ್ದೇಶವಾಗಿದೆ.

ಪೌಲನ ಪ್ರಾರ್ಥನೆ

15-16 ಆದಕಾರಣವೇ ನನ್ನ ಪ್ರಾರ್ಥನೆಗಳಲ್ಲಿ ನಾನು ನಿಮ್ಮನ್ನು ಜ್ಞಾಪಿಸಿಕೊಂಡು ನಿಮ್ಮ ವಿಷಯದಲ್ಲಿ ದೇವರಿಗೆ ಯಾವಾಗಲೂ ಸ್ತೋತ್ರ ಸಲ್ಲಿಸುತ್ತೇನೆ. ಪ್ರಭುವಾದ ಯೇಸುವಿನಲ್ಲಿ ನಿಮಗಿರುವ ನಂಬಿಕೆಯ ಬಗ್ಗೆ ಮತ್ತು ಎಲ್ಲಾ ದೇವಜನರ ಮೇಲೆ ನಿಮಗಿರುವ ಪ್ರೀತಿಯ ಬಗ್ಗೆ ಕೇಳಿದಂದಿನಿಂದ ನಾನು ನಿಮ್ಮ ವಿಷಯದಲ್ಲಿ ದೇವರಿಗೆ ಸ್ತೋತ್ರ ಸಲ್ಲಿಸುತ್ತೇನೆ. 17 ನಮ್ಮ ಪ್ರಭುವಾದ ಯೇಸು ಕ್ರಿಸ್ತನ ದೇವರೂ ಮಹಿಮಾ ಸ್ವರೂಪನಾದ ತಂದೆಯೂ ಆಗಿರುವಾತನಿಗೆ ನಾನು ಯಾವಾಗಲೂ ಪ್ರಾರ್ಥಿಸುತ್ತೇನೆ. ದೇವರ ಜ್ಞಾನದಿಂದ ಅಂದರೆ ಆತನು ನಿಮಗೆ ತಿಳಿಯಪಡಿಸಿದ ಜ್ಞಾನದಿಂದ ನಿಮ್ಮನ್ನು ವಿವೇಕಿಗಳನ್ನಾಗಿ ಮಾಡುವಂಥ ಆತ್ಮವನ್ನು ಆತನು ನಿಮಗೆ ಅನುಗ್ರಹಿಸಲೆಂದು ನಾನು ಪ್ರಾರ್ಥಿಸುತ್ತೇನೆ.

18 ನೀವು ನಿಮ್ಮ ಹೃದಯದಲ್ಲಿ ಇನ್ನೂ ಹೆಚ್ಚಿನ ತಿಳುವಳಿಕೆಯನ್ನು ಹೊಂದಿಕೊಳ್ಳಲೆಂದು ಪ್ರಾರ್ಥಿಸುತ್ತೇನೆ. ನಾವು ಎಂಥ ನಿರೀಕ್ಷೆಯನ್ನು ಹೊಂದಿಕೊಳ್ಳಬೇಕೆಂದು ದೇವರು ನಮ್ಮನ್ನು ಆರಿಸಿಕೊಂಡನೆಂಬುದನ್ನು ಆಗ ತಿಳಿದುಕೊಳ್ಳುವಿರಿ; ಆತನು ತನ್ನ ಪರಿಶುದ್ಧ ಜನರಿಗೆ ವಾಗ್ದಾನ ಮಾಡಿದ ಆಶೀರ್ವಾದಗಳು ಎಷ್ಟು ಮಹಿಮಾತಿಶಯವಾಗಿವೆ ಎಂಬುದನ್ನು ತಿಳಿದುಕೊಳ್ಳುವಿರಿ. 19 ನಂಬಿಕೆಯಿಡುವಂಥ ನಮಗೆ ದೇವರ ಶಕ್ತಿಯು ಎಷ್ಟು ಮಹತ್ವವುಳ್ಳದ್ದಾಗಿದೆ ಎಂಬುದನ್ನೂ ಆಗ ನೀವು ತಿಳಿದುಕೊಳ್ಳುವಿರಿ. ಕ್ರಿಸ್ತನನ್ನು ಮರಣದಿಂದ ಜೀವಂತನಾಗಿ ಎಬ್ಬಿಸಲು ದೇವರು ಉಪಯೋಗಿಸಿದ ಮಹಾಶಕ್ತಿ ಅದೇ. 20 ದೇವರು ಕ್ರಿಸ್ತನನ್ನು ಪರಲೋಕದೊಳಗೆ ತನ್ನ ಬಲಗಡೆಯಲ್ಲಿ ಕುಳ್ಳಿರಿಸಿಕೊಂಡನು. 21 ದೇವರು ಕ್ರಿಸ್ತನನ್ನು ಎಲ್ಲಾ ಅಧಿಪತಿಗಳಿಗಿಂತಲೂ ಅಧಿಕಾರಿಗಳಿಗಿಂತಲೂ ಶಕ್ತಿಗಳಿಗಿಂತಲೂ ರಾಜರುಗಳಿಗಿಂತಲೂ ಪ್ರಮುಖನನ್ನಾಗಿ ಮಾಡಿದನು. ಈ ಲೋಕದಲ್ಲಾಗಲಿ ಮುಂದಿನ ಲೋಕದಲ್ಲಾಗಲಿ ಕೊಡಲ್ಪಟ್ಟಿರುವ ಯಾವುದೇ ಹೆಸರುಳ್ಳವರಿಗಿಂತಲೂ ಕ್ರಿಸ್ತನು ಪ್ರಮುಖನಾಗಿದ್ದಾನೆ. 22 ದೇವರು ಪ್ರತಿಯೊಂದನ್ನು ಕ್ರಿಸ್ತನ ಅಧಿಕಾರಕ್ಕೆ ಒಳಪಡಿಸಿದನು. ಸಭೆಗೋಸ್ಕರವಾಗಿ ದೇವರು ಆತನನ್ನು ಪ್ರತಿಯೊಂದರ ಮೇಲೆ ಶಿರಸ್ಸನ್ನಾಗಿ ಮಾಡಿದನು. 23 ಸಭೆಯು ಕ್ರಿಸ್ತನ ದೇಹವಾಗಿದೆ. ಸಭೆಯು ಕ್ರಿಸ್ತನಿಂದ ಆವರಿಸಲ್ಪಟ್ಟಿದೆ. ಆತನು ಸಮಸ್ತವನ್ನು ಪ್ರತಿಯೊಂದು ವಿಷಯದಲ್ಲಿಯೂ ಸಂಪೂರ್ಣಗೊಳಿಸುತ್ತಾನೆ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International