Old/New Testament
1 ಸೊಲೊಮೋನನ ಮನೋಹರವಾದ ಗೀತೆ
ಪ್ರಿಯತಮೆ ಪ್ರಿಯಕರನಿಗೆ
2 ನಿನ್ನ ಬಾಯಿಂದ ನನ್ನನ್ನು ಮುದ್ದಾಡು,
ನಿನ್ನ ಪ್ರೀತಿ ದ್ರಾಕ್ಷಾರಸಕ್ಕಿಂತಲೂ ಉತ್ತಮ.
3 ನಿನ್ನ ತೈಲವು ಪರಿಮಳಭರಿತವಾಗಿದೆ;
ನಿನ್ನ ಹೆಸರು ಸುಗಂಧದ್ರವ್ಯದಂತಿದೆ.
ಆದ್ದರಿಂದ ಯುವತಿಯರು ನಿನ್ನನ್ನು ಪ್ರೀತಿಸುವರು.
4 ನನ್ನನ್ನು ಕರೆದುಕೊಂಡು ಹೋಗು!
ನಾವು ಓಡಿಹೋಗೋಣ!
ರಾಜನು ನನ್ನನ್ನು ಅಂತಃಪುರಕ್ಕೆ ಬರಮಾಡಿದ್ದಾನೆ.
ಜೆರುಸಲೇಮಿನ ಸ್ತ್ರೀಯರು
ನಿನ್ನಲ್ಲಿ ಹರ್ಷಿಸಿ ಉಲ್ಲಾಸಿಸುವೆವು.
ನಿನ್ನ ಪ್ರೀತಿಯು ದ್ರಾಕ್ಷಾರಸಕ್ಕಿಂತಲೂ ಉತ್ತಮ.
ಯುವತಿಯರು ನಿನ್ನನ್ನು ಹೃದಯಪೂರ್ವಕವಾಗಿ ಪ್ರೀತಿಸುವರು.
ಪ್ರಿಯತಮೆ ಜೆರುಸಲೇಮಿನ ಸ್ತ್ರೀಯರಿಗೆ
5 ಜೆರುಸಲೇಮಿನ ಸ್ತ್ರೀಯರೇ,
ನಾನು ಕೇದಾರಿನ ಗುಡಾರಗಳಂತೆ ಕಪ್ಪಾಗಿದ್ದರೂ
ಸೊಲೊಮೋನನ ಪರದೆಗಳಂತೆ ಸುಂದರಳಾಗಿರುವೆ.
6 ಸೂರ್ಯನ ತಾಪಕ್ಕೆ ನಾನೆಷ್ಟು ಕಪ್ಪಾಗಿದ್ದೇನೆಂದು ನೋಡಬೇಡಿರಿ.
ನನ್ನ ಸಹೋದರರು ನನ್ನ ಮೇಲೆ ಕೋಪಗೊಂಡು
ದ್ರಾಕ್ಷಿತೋಟಗಳನ್ನು ನೋಡಿಕೊಳ್ಳಲು ನನ್ನನ್ನು ನೇಮಿಸಿದರು.
ಆದರೆ ನಾನು ನನ್ನ ತೋಟವನ್ನು ಕಾಯಲಿಲ್ಲ.
ಪ್ರಿಯತಮೆ ಪ್ರಿಯಕರನಿಗೆ
7 ನನ್ನ ಪ್ರಾಣಪ್ರಿಯನೇ, ನಿನ್ನ ಕುರಿಗಳನ್ನು ಎಲ್ಲಿ ಮೇಯಿಸುವೆ?
ಮಧ್ಯಾಹ್ನದಲ್ಲಿ ಅವುಗಳನ್ನು ಎಲ್ಲಿ ಮಲಗಿಸುವೆ?
ಮುಸುಕುಹಾಕಿಕೊಂಡು
ನಿನ್ನ ಸ್ನೇಹಿತರ ಮಂದೆಗಳ ಹತ್ತಿರ ಅಲೆದಾಡುವ ಹುಡುಗಿಯಂತೆ ನಾನೇಕಿರಬೇಕು?
ಪ್ರಿಯಕರನು ಪ್ರಿಯತಮೆಗೆ
8 ಸ್ತ್ರೀಯರಲ್ಲಿ ಅತ್ಯಂತ ರೂಪವತಿಯೇ,
ನಿನ್ನ ಪ್ರಿಯನು ಎಲ್ಲಿದ್ದಾನೆಂಬುದು ನಿನಗೆ ಗೊತ್ತಿಲ್ಲದಿದ್ದರೆ,
ಹೋಗು, ಕುರಿಗಳನ್ನು ಹಿಂಬಾಲಿಸು.
ಕುರುಬರ ಗುಡಾರಗಳ ಬಳಿಯಲ್ಲಿ ನಿನ್ನ ಮೇಕೆಮರಿಗಳನ್ನು ಮೇಯಿಸು.
9 ನನ್ನ ಪ್ರಿಯೆ, ಫರೋಹನ ರಥಗಳ ಮಧ್ಯದಲ್ಲಿರುವ
ಹೆಣ್ಣು ಕುದುರೆಗಿಂತಲೂ ನೀನು ಸುಂದರಳಾಗಿರುವೆ.
10 ನಿನ್ನ ಕೆನ್ನೆಗಳು ಅಲಂಕಾರಗಳಿಂದ ಸುಂದರವಾಗಿವೆ.
ನಿನ್ನ ಕಂಠವು ಹಾರಗಳಿಂದ ಅಂದವಾಗಿದೆ.
11 ಬೆಳ್ಳಿಯ ತಿರುಪಿನಿಂದ ಕೂಡಿದ ಚಿನ್ನದ ಆಭರಣಗಳನ್ನು
ನಾವು ನಿನಗೋಸ್ಕರ ಮಾಡಿಸುವೆವು.
ಪ್ರಿಯತಮೆ
12 ಓಲಗದ ಮೇಲೆ ಮಲಗಿರುವ ರಾಜನಿಗೆ
ನನ್ನ ಸುಗಂಧದ್ರವ್ಯದ ಪರಿಮಳವು ಹರಡುವುದು.
13 ನನ್ನ ಪ್ರಿಯನು ರಾತ್ರಿಯೆಲ್ಲಾ ನನ್ನ ಸ್ತನಗಳ ನಡುವೆ ಇರುವ
ಗೋಲರಸದ ಚೀಲದಂತಿದ್ದಾನೆ.
14 ನನ್ನ ಪ್ರಿಯನು ನನಗೆ ಏನ್ಗೆದಿಯ ತೋಟಗಳ
ಗೋರಂಟೆಯ ಹೂಗೊಂಚಲು.
ಪ್ರಿಯಕರ
15 ನನ್ನ ಪ್ರಿಯೆ, ನೀನು ರೂಪವತಿ! ನೀನು ಸುಂದರಿ!
ನಿನ್ನ ಕಣ್ಣುಗಳು ಪಾರಿವಾಳಗಳಂತೆ ಕೋಮಲ.
ಪ್ರಿಯತಮೆ
16 ನನ್ನ ಪ್ರಿಯನೇ, ನೀನು ಬಹು ಸುಂದರ!
ಹೌದು, ನೀನು ಎಷ್ಟೋ ಮನೋಹರ!
ನಮ್ಮ ಹಾಸಿಗೆ ಎಷ್ಟೋ ಉಲ್ಲಾಸಕರ!
17 ನಮ್ಮ ಮನೆಯ ತೊಲೆಗಳು ದೇವದಾರು ಮರದ ತೊಲೆಗಳು.
ನಮ್ಮ ಮನೆಯ ಜಂತೆಗಳು ತುರಾಯಿ ಮರದ ಜಂತೆಗಳು.
2 ನಾನು ಶಾರೋನಿನಲ್ಲಿರುವ ಗುಲಾಬಿ;
ತಗ್ಗುಗಳಲ್ಲಿರುವ ತಾವರೆ.
ಪ್ರಿಯಕರ
2 ನನ್ನ ಪ್ರಿಯೆ, ಮುಳ್ಳುಗಳ ನಡುವೆ ಇರುವ ತಾವರೆ ಹೂವಿನಂತೆ
ನೀನು ಯುವತಿಯರಲ್ಲೆಲ್ಲಾ ಶ್ರೇಷ್ಠಳು.
ಪ್ರಿಯತಮೆ
3 ನನ್ನ ಪ್ರಿಯನೇ, ಕಾಡುಮರಗಳ ನಡುವೆ ಇರುವ ಒಂದು ಸೇಬಿನ ಮರದಂತೆ
ನೀನು ಯುವಕರಲ್ಲೆಲ್ಲಾ ಶ್ರೇಷ್ಠನು.
ಪ್ರಿಯತಮೆ ಸ್ತ್ರೀಯರಿಗೆ
ನಾನು ಅವನ ನೆರಳಲ್ಲಿ ಕುಳಿತುಕೊಂಡು ಸಂತೋಷಿಸಿದೆ;
ಅವನ ಫಲವು ನನ್ನ ನಾಲಿಗೆಗೆ ಸಿಹಿಯಾಗಿತ್ತು.
4 ನನ್ನ ಪ್ರಿಯಕರನು ನನ್ನನ್ನು ದ್ರಾಕ್ಷಾರಸದ ಮನೆಗೆ ಕರೆದುಕೊಂಡು ಬಂದನು;
ನನ್ನ ಕುರಿತು ಆತನಿಗಿದ್ದ ಉದ್ದೇಶ ಪ್ರೀತಿಯೇ.
5 ದ್ರಾಕ್ಷಿಯಿಂದ ನನ್ನನ್ನು ಉಪಚರಿಸಿರಿ;
ಸೇಬು ಹಣ್ಣುಗಳಿಂದ ನನ್ನನ್ನು ಆದರಿಸಿರಿ;
ನಾನು ಅನುರಾಗದಿಂದ ಅಸ್ವಸ್ಥಳಾಗಿರುವೆ.
6 ನನ್ನ ಪ್ರಿಯನ ಎಡಗೈ ತಲೆದಿಂಬಾಗಿ
ಅವನ ಬಲಗೈ ನನ್ನನ್ನು ತಬ್ಬಿಕೊಳ್ಳುವುದು!
7 ಜೆರುಸಲೇಮಿನ ಸ್ತ್ರೀಯರೇ, ತಕ್ಕಕಾಲಕ್ಕೆ ಮೊದಲೇ ಪ್ರೀತಿಯನ್ನು ಹುಟ್ಟಿಸಿ,
ಬೆಳೆಯಿಸುವುದಿಲ್ಲವೆಂದು ಜಿಂಕೆಗಳ ಮೇಲೆಯೂ
ಕಾಡುಹುಲ್ಲೆಗಳ ಮೇಲೆಯೂ ನನಗೆ ಪ್ರಮಾಣ ಮಾಡಿರಿ.
ಪ್ರಿಯತಮೆ
8 ಅಗೋ, ನನ್ನ ಪ್ರಿಯನ ಸ್ವರ!
ಅವನು ಬೆಟ್ಟಗಳ ಮೇಲೆ ನೆಗೆಯುತ್ತಾ
ಗುಡ್ಡಗಳ ಮೇಲೆ ಕುಪ್ಪಳಿಸುತ್ತಾ ಬರುತ್ತಿದ್ದಾನೆ.
9 ನನ್ನ ಪ್ರಿಯನು ಸಾರಂಗದಂತೆಯೂ
ಪ್ರಾಯದ ಜಿಂಕೆಯಂತೆಯೂ ಇದ್ದಾನೆ.
ಅಗೋ, ಅವನು ನಮ್ಮ ಗೋಡೆಯ ಆಚೆ ನಿಂತಿದ್ದಾನೆ;
ತಡಕೆಗಳಿಂದ ಇಣಿಕಿಹಾಕುತ್ತಿದ್ದಾನೆ;
ಕಿಟಕಿಗಳಿಂದ ನೋಡುತ್ತಿದ್ದಾನೆ.
10 ನನ್ನ ಪ್ರಿಯನು ನನಗೆ ಹೀಗೆಂದನು:
“ನನ್ನ ಪ್ರಿಯಳೇ, ನನ್ನ ಸುಂದರಿಯೇ,
ಎದ್ದೇಳು, ನಾವು ದೂರ ಹೋಗೋಣ!
11 ಇಗೋ, ಚಳಿಗಾಲ ಕಳೆಯಿತು;
ಮಳೆಗಾಲ ಮುಗಿದುಹೋಯಿತು.
12 ಭೂಮಿಯ ಮೇಲೆ ಹೂವುಗಳು ಕಾಣುತ್ತವೆ;
ಪಕ್ಷಿಗಳು ಹಾಡುವ ಸಮಯವು ಬಂದಿದೆ.
ದೇಶದಲ್ಲಿ ಪಾರಿವಾಳದ ಸ್ವರವು ಕೇಳಿಸುತ್ತದೆ.
13 ಅಂಜೂರದ ಮರ ಕಾಯಿಗಳನ್ನು ಬಿಡುತ್ತಿದೆ;
ದ್ರಾಕ್ಷಿಬಳ್ಳಿಯ ಹೂವುಗಳಿಂದ ಸುವಾಸನೆಯು ಬರುತ್ತಿದೆ.
ನನ್ನ ಪ್ರಿಯಳೇ, ನನ್ನ ಸುಂದರಿಯೇ, ಎದ್ದೇಳು,
ನಾವು ದೂರ ಹೋಗೋಣ!”
ಪ್ರಿಯಕರ
14 ಬಂಡೆಯ ಬಿರುಕುಗಳಲ್ಲಿಯೂ ಜರಿಯ ಮರೆಯಲ್ಲಿಯೂ ಇರುವ
ನನ್ನ ಪಾರಿವಾಳವೇ,
ನಿನ್ನ ರೂಪವನ್ನು ತೋರಿಸು;
ನಿನ್ನ ಸ್ವರವನ್ನು ಕೇಳಿಸು.
ನಿನ್ನ ಸ್ವರ ಎಷ್ಟೋ ಮಧುರ!
ನಿನ್ನ ರೂಪ ಎಷ್ಟೋ ಅಂದ!
ಪ್ರಿಯತಮೆ ಸ್ತ್ರೀಯರಿಗೆ
15 ದ್ರಾಕ್ಷಿತೋಟಗಳನ್ನು ಹಾಳುಮಾಡುವ
ನರಿಗಳನ್ನೂ
ನರಿಮರಿಗಳನ್ನೂ ಹಿಡಿಯಿರಿ!
ನಮ್ಮ ದ್ರಾಕ್ಷಿತೋಟಗಳು ಈಗ ಹೂಬಿಡುತ್ತಿವೆ.
16 ನನ್ನ ಪ್ರಿಯನು ನನ್ನವನೇ!
ನಾನು ಅವನವಳೇ!
ಹಗಲು ತನ್ನ ಕೊನೆ ಉಸಿರೆಳೆಯುವತನಕ, ನೆರಳು ಓಡಿಹೋಗುವ ತನಕ
17 ನನ್ನ ಪ್ರಿಯನು ನೆಲದಾವರೆಗಳ ಮಧ್ಯದಲ್ಲಿ ಮೇಯಿಸುವನು.
ನನ್ನ ಪ್ರಿಯನೇ, ಹೊರಡು,
ಬೆತೇರ್ ಬೆಟ್ಟಗಳ ಮೇಲೆ ಸಾರಂಗದಂತೆಯೂ ಪ್ರಾಯದ ಜಿಂಕೆಯಂತೆಯೂ ಇರು!
ಪ್ರಿಯತಮೆ
3 ರಾತ್ರಿಯಲ್ಲಿಯೂ ನನ್ನ ಪ್ರಾಣಪ್ರಿಯನಿಗಾಗಿ
ಹಾಸಿಗೆಯ ಮೇಲೆ ಹುಡುಕಿದೆನು.
ಎಷ್ಟು ಹುಡುಕಿದರೂ
ಅವನು ಸಿಕ್ಕಲಿಲ್ಲ.
2 ಈಗ ನಾನು ಎದ್ದು
ನಗರದಲ್ಲೆಲ್ಲಾ ಸುತ್ತಾಡುವೆನು.
ನನ್ನ ಪ್ರಿಯನಿಗಾಗಿ
ಬೀದಿಗಳಲ್ಲಿಯೂ ಚೌಕಗಳಲ್ಲಿಯೂ ಹುಡುಕುವೆನು.
ನಾನು ಅವನಿಗಾಗಿ ಹುಡುಕಿದೆ,
ಆದರೆ ಅವನು ಸಿಕ್ಕಲಿಲ್ಲ.
3 ನಗರದಲ್ಲಿ ಗಸ್ತು ತಿರುಗುವ ಕಾವಲುಗಾರರನ್ನು ಕಂಡು,
“ನನ್ನ ಪ್ರಿಯನನ್ನು ನೋಡಿದಿರಾ?” ಎಂದು ಕೇಳಿದೆನು.
4 ಅಲ್ಲಿಂದ ಸ್ವಲ್ಪದೂರ ಹೋದಾಗ,
ನನ್ನ ಪ್ರಿಯನನ್ನು ಕಂಡು ಅಪ್ಪಿಕೊಂಡೆ.
ನನ್ನ ತಾಯಿಯ ಮನೆಗೆ,
ಅಂದರೆ ನನ್ನನ್ನು ಹೆತ್ತವಳ ಕೋಣೆಗೆ ಸೇರುವತನಕ
ಅವನನ್ನು ಬಿಡದೆ ಹಿಡಿದುಕೊಂಡೇ ಹೋದೆನು.
ಪ್ರಿಯತಮೆ ಸ್ತ್ರೀಯರಿಗೆ
5 ಜೆರುಸಲೇಮಿನ ಸ್ತ್ರೀಯರೇ,
ತಕ್ಕಕಾಲಕ್ಕೆ ಮೊದಲೇ ಪ್ರೀತಿಯನ್ನು ಹುಟ್ಟಿಸಿ, ಬೆಳೆಯಿಸುವುದಿಲ್ಲವೆಂದು
ಜಿಂಕೆಗಳ ಮೇಲೆಯೂ ಕಾಡುಹುಲ್ಲೆಗಳ ಮೇಲೆಯೂ
ನನಗೆ ಪ್ರಮಾಣಮಾಡಿರಿ.
ಜೆರುಸಲೇಮಿನ ಸ್ತ್ರೀಯರ ಮಾತುಗಳು
6 ಮಹಾ ಜನಸಮೂಹದೊಡನೆ
ಅಡವಿಯಿಂದ ಬರುತ್ತಿರುವ ಈ ಸ್ತ್ರೀ ಯಾರು?
ಗೋಲರಸ, ಧೂಪ, ವರ್ತಕರ ಸಕಲ ಸುಗಂಧ ದ್ರವ್ಯಗಳನ್ನು ಸುಡುವಾಗ
ಮೇಲೇರುವ ಹೊಗೆಯಂತೆ ಧೂಳು ಮೇಲೇರುತ್ತಿದೆ.
7 ನೋಡಿ, ಅದು ಸೊಲೊಮೋನನ ಪಲ್ಲಕ್ಕಿ.
ಅದರ ಸುತ್ತಲೂ ಅರವತ್ತು ಮಂದಿ ಸೈನಿಕರಿದ್ದಾರೆ.
ಅವರು ಇಸ್ರೇಲಿನ ಸೈನಿಕರು!
8 ಯುದ್ಧವೀರರಾದ ಅವರು ಕೈಯಲ್ಲಿ ಕತ್ತಿ ಹಿಡಿದಿದ್ದಾರೆ;
ರಾತ್ರಿಯ ಅಪಾಯದ ನಿಮಿತ್ತ
ಅವರು ಸೊಂಟಕ್ಕೆ ಕತ್ತಿ ಕಟ್ಟಿಕೊಂಡಿದ್ದಾರೆ.
9 ರಾಜನಾದ ಸೊಲೊಮೋನನು ತನಗೋಸ್ಕರ ಪಲ್ಲಕ್ಕಿಯನ್ನು
ಲೆಬನೋನಿನ ದೇವದಾರು ಮರದಿಂದ ಮಾಡಿಸಿದ್ದಾನೆ.
10 ಅದರ ಕಂಬಗಳನ್ನು ಬೆಳ್ಳಿಯಿಂದಲೂ
ಅದರ ಅಡ್ಡಕಂಬಗಳನ್ನು ಚಿನ್ನದಿಂದಲೂ ಮಾಡಲಾಗಿದೆ.
ಅದರ ಆಸನವನ್ನು ನೇರಳೆ ಬಣ್ಣದ ಬಟ್ಟೆಯಿಂದ ಹೊದಿಸಲಾಗಿದೆ.
ಆ ಬಟ್ಟೆಯನ್ನು ಜೆರುಸಲೇಮಿನ ಸ್ತ್ರೀಯರು ಕಸೂತಿ ಕೆಲಸದಿಂದ ಅಲಂಕರಿಸಿದ್ದಾರೆ.
11 ಚೀಯೋನಿನ ಸ್ತ್ರೀಯರೇ,
ಹೊರಗೆ ಹೋಗಿ ರಾಜನಾದ ಸೊಲೊಮೋನನನ್ನು ನೋಡಿರಿ.
ಅವನ ಮದುವೆಯ ದಿನದಲ್ಲಿ
ಹೃದಯವು ಹರ್ಷಗೊಂಡಿದ್ದಾಗ
ಅವನ ತಾಯಿ ತಲೆಗಿಟ್ಟ ಕಿರೀಟವನ್ನು ಧರಿಸಿಕೊಂಡಿದ್ದಾನೆ.
ಇತರ ಅಪೊಸ್ತಲರು ಪೌಲನನ್ನು ಸ್ವೀಕರಿಸಿಕೊಂಡರು
2 ಹದಿನಾಲ್ಕು ವರ್ಷಗಳ ನಂತರ ಬಾರ್ನಬನ ಜೊತೆಯಲ್ಲಿ ತೀತನನ್ನು ಕರೆದುಕೊಂಡು ಮತ್ತೆ ಜೆರುಸಲೇಮಿಗೆ ಹೋದೆನು. 2 ನಾನು ಹೋಗಲೇಬೇಕೆಂದು ದೇವರು ನನಗೆ ತಿಳಿಸಿದ್ದರಿಂದ ವಿಶ್ವಾಸಿಗಳ ನಾಯಕರಾದ ಈ ಜನರ ಬಳಿಗೆ ಹೋದೆನು. ನಾವಷ್ಟೇ ಇದ್ದಾಗ, ಯೆಹೂದ್ಯರಲ್ಲದವರಿಗೆ ಸಾರುವ ಸುವಾರ್ತೆಯನ್ನು ಇವರಿಗೆ ತಿಳಿಸಿದೆನು. ನಾನು ಮೊದಲು ಮಾಡಿದ ಸೇವೆ ಮತ್ತು ಈಗ ಮಾಡುತ್ತಿರುವ ಸೇವೆ ವ್ಯರ್ಥವಾಗಬಾರದೆಂಬ ಉದ್ದೇಶದಿಂದ ಇವರಿಗೆ ಅರ್ಥವಾಗುವಂತೆ ನನ್ನ ಸೇವೆಯ ಬಗ್ಗೆ ತಿಳಿಸಿದೆನು.
3-4 ತೀತನು ನನ್ನೊಂದಿಗಿದ್ದನು. ಅವನು ಗ್ರೀಕನಾಗಿದ್ದನು. ಆದರೆ ಅವನು ಸುನ್ನತಿ ಮಾಡಿಸಿಕೊಳ್ಳಬೇಕೆಂದು ಯಾರೂ ಬಲವಂತ ಮಾಡಲಿಲ್ಲ. ಈ ಸಮಸ್ಯೆಗಳ ಬಗ್ಗೆ ನಾವು ಮಾತಾಡಲೇಬೇಕಿತ್ತು. ಏಕೆಂದರೆ ಕೆಲವು ಸುಳ್ಳು ಸಹೋದರರು ಬಂದು ನಮ್ಮ ಸಭೆಯೊಳಗೆ ಸೇರಿಕೊಂಡಿದ್ದರು. ಯೇಸು ಕ್ರಿಸ್ತನಲ್ಲಿ ನಮಗಿರುವ ಸ್ವಾತಂತ್ರ್ಯದ ಬಗ್ಗೆ ರಹಸ್ಯವಾಗಿ ತಿಳಿದುಕೊಳ್ಳಲು ಅವರು ಬಂದಿದ್ದರು. 5 ಆದರೆ ಆ ಸುಳ್ಳುಸಹೋದರರು ಬಯಸಿದ ಯಾವುದಕ್ಕೂ ನಾವು ಒಂದು ಕ್ಷಣವಾದರೂ ಒಪ್ಪಿಗೆ ಕೊಡಲಿಲ್ಲ. ಸುವಾರ್ತೆಯ ಸತ್ಯವು ನಿಮ್ಮಲ್ಲಿ ಸ್ಥಿರವಾಗಿರಬೇಕೆಂಬುದೇ ನಮ್ಮ ಅಪೇಕ್ಷೆಯಾಗಿತ್ತು.
6 ನಾನು ಬೋಧಿಸುವ ಸುವಾರ್ತೆಗೆ ಅವರೇನೂ ಸೇರಿಸಲಿಲ್ಲ. (ಅವರು ಪ್ರಮುಖರಾಗಿದ್ದರೊ ಪ್ರಮುಖರಾಗಿರಲಿಲ್ಲವೊ ಅದು ನನಗೆ ಮುಖ್ಯವಲ್ಲ. ದೇವರಿಗೆ ಎಲ್ಲಾ ಜನರು ಒಂದೇ ಆಗಿದ್ದಾರೆ.) 7 ಆದರೆ ಪೇತ್ರನಂತೆ ನನಗೂ ದೇವರು ವಿಶೇಷವಾದ ಕೆಲಸವನ್ನು ಕೊಟ್ಟಿದ್ದಾನೆಂಬುದನ್ನು ಈ ನಾಯಕರು ತಿಳಿದುಕೊಂಡರು. ಯೆಹೂದ್ಯರಿಗೆ ಸುವಾರ್ತೆಯನ್ನು ತಿಳಿಸಬೇಕೆಂಬ ಕೆಲಸವನ್ನು ದೇವರು ಪೇತ್ರನಿಗೆ ಕೊಟ್ಟನು. ಆದರೆ ಯೆಹೂದ್ಯರಲ್ಲದವರಿಗೆ ಸುವಾರ್ತೆಯನ್ನು ತಿಳಿಸಬೇಕೆಂಬ ಕೆಲಸವನ್ನು ದೇವರು ನನಗೆ ಕೊಟ್ಟನು. 8 ಯೆಹೂದ್ಯರಿಗೆ ಅಪೊಸ್ತಲನಾಗಿ ಕೆಲಸ ಮಾಡಲು ದೇವರು ಪೇತ್ರನಿಗೆ ವಹಿಸಿಕೊಟ್ಟಂತೆಯೇ ಯೆಹೂದ್ಯರಲ್ಲದವರಿಗೆ ಅಪೊಸ್ತಲನಾಗಿ ಕೆಲಸ ಮಾಡಲು ನನಗೂ ವಹಿಸಿ ಕೊಟ್ಟನು. 9 ದೇವರು ನನಗೆ ಈ ವಿಶೇಷವಾದ ವರವನ್ನು ಕೊಟ್ಟಿದ್ದಾನೆಂಬುದನ್ನು ನಾಯಕರೆನಿಸಿಕೊಂಡಿದ್ದ ಯಾಕೋಬ, ಪೇತ್ರ, ಯೋಹಾನರು ಕಂಡುಕೊಂಡರು. ಆದ್ದರಿಂದ ಅವರು ಬಾರ್ನಬನನ್ನು ಮತ್ತು ನನ್ನನ್ನು ಸ್ವೀಕರಿಸಿಕೊಂಡರು. ಅವರು ನಮಗೆ, “ಪೌಲ ಮತ್ತು ಬಾರ್ನಬರೇ, ನೀವು ಯೆಹೂದ್ಯರಲ್ಲದವರ ಬಳಿಗೆ ಹೋಗಿರಿ. ನಾವು ಯೆಹೂದ್ಯರ ಬಳಿಗೆ ಹೋಗುತ್ತೇವೆ” ಎಂದು ತಿಳಿಸಿದರು. 10 ಬಡಜನರನ್ನು ಜ್ಞಾಪಕದಲ್ಲಿಟ್ಟುಕೊಂಡು ಅವರಿಗೆ ಸಹಾಯಮಾಡಬೇಕೆಂಬ ಒಂದೇ ಒಂದು ಸಂಗತಿಯನ್ನು ಅವರು ನಮಗೆ ತಿಳಿಸಿದರು. ನಾನೂ ಈ ಕಾರ್ಯವನ್ನು ಮಾಡಬೇಕೆಂದುಕೊಂಡಿದ್ದೆನು.
ಪೇತ್ರನ ತಪ್ಪನ್ನು ಪೌಲನು ತೋರಿಸಿದನು
11 ಪೇತ್ರನು ಅಂತಿಯೋಕ್ಯಕ್ಕೆ ಬಂದಾಗ, ಅವನು ತಪ್ಪಿತಸ್ಥನೆಂದು ಸ್ಪಷ್ಟವಾಗಿ ತೋರಿದ್ದರಿಂದ ನಾನು ಅವನನ್ನು ಮುಖಾಮುಖಿಯಾಗಿ ಖಂಡಿಸಿದೆನು. 12 ನಡೆದ ಸಂಗತಿ ಏನೆಂದರೆ: ಪೇತ್ರನು ಮೊದಲು ಅಂತಿಯೋಕ್ಯಕ್ಕೆ ಬಂದಾಗ ಅವನು ಯೆಹೂದ್ಯರಲ್ಲದವರೊಂದಿಗೆ ಊಟಮಾಡಿದನು ಮತ್ತು ಅನ್ಯೋನ್ಯತೆಯಿಂದಿದ್ದನು. ಆ ಬಳಿಕ ಯಾಕೋಬನಿಂದ ಕಳುಹಿಸಲ್ಪಟ್ಟಿದ್ದ ಕೆಲವು ಯೆಹೂದ್ಯರು ಬಂದರು. ಆಗ, ಪೇತ್ರನು ಯೆಹೂದ್ಯರಲ್ಲದವರೊಂದಿಗೆ ಊಟಮಾಡುವುದನ್ನು ನಿಲ್ಲಿಸಿದನು. ಪೇತ್ರನು ತನ್ನನ್ನು ಯೆಹೂದ್ಯರಲ್ಲದವರಿಂದ ಬೇರ್ಪಡಿಸಿಕೊಂಡನು. ಯೆಹೂದ್ಯರಲ್ಲದವರೆಲ್ಲರೂ ಸುನ್ನತಿ ಮಾಡಿಸಿಕೊಳ್ಳಬೇಕೆಂದು ನಂಬಿಕೊಂಡಿದ್ದ ಯೆಹೂದ್ಯರಿಗೆ ಅವನು ಹೆದರಿಕೊಂಡನು. 13 ಹೀಗೆ ಪೇತ್ರನು ಕಪಟತನದಿಂದ ವರ್ತಿಸಿದನು. ಯೆಹೂದ್ಯರಾದ ವಿಶ್ವಾಸಿಗಳು ಸಹ ಪೇತ್ರನನ್ನೇ ಅನುಸರಿಸಿ ಕಪಟತನದಿಂದ ವರ್ತಿಸಿದರು. ಇವರ ವರ್ತನೆಯಿಂದ ಬಾರ್ನಬನು ಸಹ ಪ್ರಭಾವಿತನಾದನು. 14 ಈ ಯೆಹೂದ್ಯರ ವರ್ತನೆಯನ್ನು ನಾನು ಗಮನಿಸಿದೆನು. ಅವರು ಸುವಾರ್ತೆಯ ಸತ್ಯವನ್ನು ಅನುಸರಿಸದೆ ಇರುವುದನ್ನು ಕಂಡು ಅಲ್ಲಿದ್ದ ಯೆಹೂದ್ಯರೆಲ್ಲರಿಗೂ ಕೇಳಿಸುವಂತೆ ನಾನು ಪೇತ್ರನಿಗೆ, “ನೀನು ಯೆಹೂದ್ಯನಾಗಿರುವೆ. ಆದರೆ ನೀನು ಯೆಹೂದ್ಯನಂತೆ ಜೀವಿಸುತ್ತಿಲ್ಲ. ನೀನು ಯೆಹೂದ್ಯನಲ್ಲದವನಂತೆ ಜೀವಿಸುತ್ತಿರುವೆ. ಹೀಗಿರಲು ನೀನು ಯೆಹೂದ್ಯರಲ್ಲದವರಿಗೆ ಯೆಹೂದ್ಯರಂತೆ ಜೀವಿಸಬೇಕೆಂದು ಒತ್ತಾಯಮಾಡುವುದೇಕೆ?” ಎಂದು ಕೇಳಿದೆನು.
15 ನಾವಂತೂ ಹುಟ್ಟು ಯೆಹೂದ್ಯರು. ನಾವು ಪಾಪಿಗಳೆನಿಸಿಕೊಂಡಿರುವ ಅನ್ಯಜನರಲ್ಲ. 16 ಕೇವಲ ಧರ್ಮಶಾಸ್ತ್ರವನ್ನು ಅನುಸರಿಸುವುದರ ಮೂಲಕ ಒಬ್ಬನು ನೀತಿವಂತನಾಗಲು ಸಾಧ್ಯವಿಲ್ಲವೆಂಬುದು ನಮಗೆ ಗೊತ್ತಿದೆ. ಯೇಸು ಕ್ರಿಸ್ತನಲ್ಲಿ ನಂಬಿಕೆಯಿಡುವುದರಿಂದಲೇ ಒಬ್ಬನು ನೀತಿವಂತನಾಗಲು ಸಾಧ್ಯ. ಆದ್ದರಿಂದ ನೀತಿವಂತರಾಗಲು ನಾವು ಯೇಸು ಕ್ರಿಸ್ತನಲ್ಲಿ ನಂಬಿಕೆ ಇಟ್ಟೆವು. ಹೀಗಿರಲಾಗಿ, ನಾವು ನೀತಿವಂತರಾದದ್ದು ಕ್ರಿಸ್ತನಲ್ಲಿ ನಂಬಿಕೆಯಿಟ್ಟಿದ್ದರಿಂದಲೇ ಹೊರತು ಧರ್ಮಶಾಸ್ತ್ರವನ್ನು ಅನುಸರಿಸಿದ್ದರಿಂದಲ್ಲ. ಇದು ಸತ್ಯ, ಏಕೆಂದರೆ ಧರ್ಮಶಾಸ್ತ್ರವನ್ನು ಅನುಸರಿಸುವುದರಿಂದ ಯಾರೂ ನೀತಿವಂತರಾಗಲು ಸಾಧ್ಯವಿಲ್ಲ.
17 ಯೆಹೂದ್ಯರಾದ ನಾವು ನೀತಿವಂತರಾಗಲು ಕ್ರಿಸ್ತನ ಬಳಿಗೆ ಬಂದೆವು. ಆದ್ದರಿಂದ ನಾವು ಸಹ ಪಾಪಿಗಳಾಗಿದ್ದೇವೆಂಬುದು ಸ್ಪಷ್ಟವಾಗಿದೆ. ಕ್ರಿಸ್ತನು ನಮ್ಮನ್ನು ಪಾಪಿಗಳನ್ನಾಗಿ ಮಾಡುತ್ತಾನೆಂಬುದು ಇದರ ಅರ್ಥವೇ? ಇಲ್ಲ. 18 ಆದರೆ ನಾನು ತೊರೆದುಬಿಟ್ಟ ಆ ಸಂಗತಿಗಳನ್ನು ಮತ್ತೆ ಬೋಧಿಸಲಾರಂಭಿಸಿದರೆ ನಿಜವಾಗಿಯೂ ತಪ್ಪು ಮಾಡಿದವನಾಗುತ್ತೇನೆ. 19 ನಾನು ಧರ್ಮಶಾಸ್ತ್ರಕ್ಕಾಗಿ ಜೀವಿಸುವುದನ್ನು ತೊರೆದುಬಿಟ್ಟೆನು. ನನ್ನನ್ನು ಧರ್ಮಶಾಸ್ತ್ರವೇ ಕೊಂದಿತು. ಈಗ ನಾನು ದೇವರಿಗಾಗಿ ಜೀವಿಸಬೇಕೆಂದು ಧರ್ಮಶಾಸ್ತ್ರದ ಪಾಲಿಗೆ ಸತ್ತುಹೋದೆನು. ನಾನು ಕ್ರಿಸ್ತನೊಂದಿಗೆ ಶಿಲುಬೆಗೇರಿಸಲ್ಪಟ್ಟೆನು. 20 ಆದ್ದರಿಂದ ಈಗ ನನ್ನೊಳಗೆ ಜೀವಿಸುತ್ತಿರುವವನು ನಿಜವಾಗಿಯೂ ನಾನಲ್ಲ, ಕ್ರಿಸ್ತನೇ ನನ್ನೊಳಗೆ ಜೀವಿಸುತ್ತಿದ್ದಾನೆ. ನಾನಿನ್ನೂ ದೇಹಾರೂಢನಾಗಿದ್ದೇನೆ. ಆದರೆ ನಾನು ಜೀವಿಸುತ್ತಿರುವುದು ದೇವರ ಮಗನ ಮೇಲೆ ನನಗಿರುವ ನಂಬಿಕೆಯಿಂದಲೇ. ನನ್ನನ್ನು ಪ್ರೀತಿಸಿದಾತನು ಯೇಸುವೇ ಮತ್ತು ನನ್ನನ್ನು ರಕ್ಷಿಸುವುದಕ್ಕಾಗಿ ಆತನು ತನ್ನನ್ನೇ ಕೊಟ್ಟುಬಿಟ್ಟನು. 21 ಇದು ದೇವರ ವರವಾಗಿದೆ ಮತ್ತು ನನಗೆ ಅತಿಮುಖ್ಯವಾದದ್ದಾಗಿದೆ. ಏಕೆಂದರೆ ಧರ್ಮಶಾಸ್ತ್ರವು ನಮ್ಮನ್ನು ನೀತಿವಂತರನ್ನಾಗಿ ಮಾಡಬಹುದಾಗಿದ್ದರೆ, ಕ್ರಿಸ್ತನು ಸಾಯುವ ಅಗತ್ಯವೇ ಇರಲಿಲ್ಲ.
Kannada Holy Bible: Easy-to-Read Version. All rights reserved. © 1997 Bible League International