Old/New Testament
ಜ್ಞಾನೋಪದೇಶಗಳ ಭಂಡಾರ
7 ಸುಗಂಧತೈಲಕ್ಕಿಂತಲೂ ಒಳ್ಳೆಯ ಹೆಸರೇ ಉತ್ತಮ.
ಜನನ ದಿನಕ್ಕಿಂತಲೂ ಮರಣ ದಿನವೇ ಉತ್ತಮ.
2 ಔತಣಕೂಟಕ್ಕೆ ಹೋಗುವುದಕ್ಕಿಂತ ಶವಸಂಸ್ಕಾರಕ್ಕೆ ಹೋಗುವುದು ಇನ್ನೂ ಉತ್ತಮ.
ಯಾಕೆಂದರೆ ಎಲ್ಲರೂ ಒಂದು ದಿನ ಸಾಯಲೇಬೇಕು.
ಸಾವನ್ನು ಕಂಡ ಪ್ರತಿಯೊಬ್ಬನು ಇದನ್ನು ಸ್ಮರಿಸಿಕೊಳ್ಳುವನು.
3 ನಗುವಿಗಿಂತ ವ್ಯಸನವು ಇನ್ನೂ ಉತ್ತಮ.
ಯಾಕೆಂದರೆ ನಮ್ಮ ಮುಖವು ವ್ಯಸನದಿಂದಿರುವಾಗ ನಮ್ಮ ಹೃದಯಕ್ಕೆ ಒಳ್ಳೆಯದಾಗುವುದು.
4 ಜ್ಞಾನಿಯು ಮರಣದ ಬಗ್ಗೆ ಆಲೋಚಿಸುವನು;
ಮೂಢನಾದರೋ ಉಲ್ಲಾಸ ಸಮಯದ ಬಗ್ಗೆ ಆಲೋಚಿಸುವನು.
5 ಮೂಢರ ಹೊಗಳಿಕೆಗಿಂತ
ಜ್ಞಾನಿಗಳ ಗದರಿಕೆಯೇ ಉತ್ತಮ.
6 ಮೂಢರ ನಗು ಉಪಯೋಗವಿಲ್ಲದ್ದು.
ಅದು ಮಡಕೆಯ ಕೆಳಗೆ ಚಟಪಟನೆ ಉರಿದುಹೋಗುವ ಮುಳ್ಳುಕಡ್ಡಿಯಂತಿದೆ.
7 ಹಣವು ಜ್ಞಾನಿಯನ್ನೂ ಮೂರ್ಖನನ್ನಾಗಿ ಮಾಡುವುದು.
ಲಂಚವು ಅವನ ವಿವೇಕವನ್ನು ಕೆಡಿಸುವುದು.
8 ಆರಂಭಿಸುವ ಸಮಯಕ್ಕಿಂತಲೂ
ಪೂರ್ಣಗೊಳಿಸುವ ಸಮಯವೇ ಮೇಲು.
ಗರ್ವಕ್ಕಿಂತಲೂ ತಾಳ್ಮೆಯೇ ಉತ್ತಮ.
9 ಮುಂಗೋಪಿಯಾಗಿರಬೇಡ.
ಯಾಕೆಂದರೆ ಕೋಪವು ಕೇವಲ ಮೂಢತನ.
10 “ಈ ಕಾಲಕ್ಕಿಂತ ‘ಹಿಂದಿನ ಕಾಲವೇ’ ಚೆನ್ನಾಗಿತ್ತಲ್ಲವೇ?” ಎನ್ನಬೇಡ.
ಅದು ಜ್ಞಾನವುಳ್ಳವರ ಪ್ರಶ್ನೆಯಲ್ಲ.
11 ನಿನಗೆ ಆಸ್ತಿಯಿದ್ದರೆ ಜ್ಞಾನವು ಮತ್ತಷ್ಟು ಉಪಯುಕ್ತವಾಗಿದೆ. ನಿಜವಾಗಿಯೂ ಜ್ಞಾನಿಗಳು ಐಶ್ವರ್ಯವನ್ನು ಹೇರಳವಾಗಿ ಪಡೆದುಕೊಳ್ಳುವರು. 12 ಜ್ಞಾನಿಯು ಐಶ್ವರ್ಯವಂತನಾಗುವನು; ಜ್ಞಾನವು ತನ್ನ ಯಜಮಾನನನ್ನು ನೋಡಿಕೊಳ್ಳುವುದು.
13 ದೇವರ ಕಾರ್ಯಗಳನ್ನು ನೋಡು. ಆತನು ಸೊಟ್ಟಗೆ ಮಾಡಿದ್ದನ್ನು ನೆಟ್ಟಗೆ ಮಾಡಲು ಯಾರಿಗೆ ಸಾಧ್ಯ? 14 ಸುಖದ ದಿನಗಳಲ್ಲಿ ಸಂತೋಷಿಸು. ದುಃಖದ ದಿನಗಳಲ್ಲಿ, ಸುಖದುಃಖಗಳನ್ನು ಕೊಡುವವನು ದೇವರೇ ಎಂಬುದನ್ನು ಜ್ಞಾಪಿಸಿಕೊ. ಮುಂದೆ ಏನಾಗುವುದೋ ಯಾರಿಗೂ ಗೊತ್ತಿಲ್ಲ.
ಪಾಪವನ್ನೇ ಮಾಡದವರಿಲ್ಲ
15 ನನ್ನ ಅಲ್ಪಕಾಲದ ಜೀವನದಲ್ಲಿ ನಾನು ಪ್ರತಿಯೊಂದನ್ನೂ ನೋಡಿದ್ದೇನೆ. ನೀತಿವಂತರು ಯೌವನ ಪ್ರಾಯದಲ್ಲಿ ಸಾಯುವುದನ್ನೂ ನೋಡಿದ್ದೇನೆ. ದುಷ್ಟರು ಬಹುಕಾಲ ಬದುಕುವುದನ್ನೂ ನೋಡಿದ್ದೇನೆ. 16-17 ಆದ್ದರಿಂದ ನೀನು ನಿನ್ನನ್ನೇ ಯಾಕೆ ನಾಶಮಾಡಿಕೊಳ್ಳುವೆ? ಬಹಳ ನೀತಿವಂತನಾಗಿಯೂ ಇರಬೇಡ; ಬಹಳ ಕೆಟ್ಟವನಾಗಿಯೂ ಇರಬೇಡ. ಬಹು ಜ್ಞಾನಿಯಾಗಿಯೂ ಇರಬೇಡ; ಬಹು ಮೂಢನಾಗಿಯೂ ಇರಬೇಡ. ನಿನ್ನ ಕಾಲಕ್ಕಿಂತ ಮೊದಲೇ ನೀನು ಯಾಕೆ ಸಾಯಬೇಕು?
18 ಇವೆರಡರಲ್ಲಿಯೂ ಮಿತವಾಗಿರಬೇಕು. ದೇವಭಕ್ತರಲ್ಲಿ ಇವೆರಡೂ ಅತಿಯಾಗಿರುವುದಿಲ್ಲ. 19-20 ಒಳ್ಳೆಯದನ್ನೇ ಮಾಡುವ ಮತ್ತು ಪಾಪವನ್ನೇ ಮಾಡದ ನೀತಿವಂತನು ಭೂಮಿಯ ಮೇಲೆ ಇಲ್ಲವೇ ಇಲ್ಲ. ಜ್ಞಾನವು ಒಬ್ಬನಿಗೆ ಶಕ್ತಿಯನ್ನು ಕೊಡುತ್ತದೆ. ಒಬ್ಬ ಜ್ಞಾನಿಯು ನಗರದಲ್ಲಿರುವ ಹತ್ತುಮಂದಿ ಮೂಢ ನಾಯಕರುಗಳಿಗಿಂತಲೂ ಬಲಶಾಲಿ.
21 ಜನರ ಮಾತಿಗೆಲ್ಲಾ ಕಿವಿಗೊಡಬೇಡ. ನಿನ್ನ ಸ್ವಂತ ಸೇವಕನೇ ನಿನ್ನನ್ನು ಶಪಿಸಬಹುದು. 22 ನೀನು ಸಹ ಅನೇಕಸಲ ಬೇರೆಯವರನ್ನು ಶಪಿಸಿರುವುದಕ್ಕೆ ನಿನ್ನ ಮನಸ್ಸೇ ಸಾಕ್ಷಿಯಾಗಿದೆ.
23 ನನ್ನ ಜ್ಞಾನದಿಂದ ಇವೆಲ್ಲವುಗಳ ಕುರಿತಾಗಿ ಆಲೋಚಿಸಿದೆನು; ಜ್ಞಾನಿಯಾಗುವೆನು ಎಂದುಕೊಂಡೆನು; ಆದರೆ ಅದು ಅಸಾಧ್ಯವಾಗಿತ್ತು. 24 ಪ್ರತಿಯೊಂದು ತನ್ನದೇ ಆದ ವಿಶಿಷ್ಟತೆಯನ್ನು ಹೊಂದಿದೆ. ಅದನ್ನು ಅರ್ಥಮಾಡಿಕೊಳ್ಳುವುದಕ್ಕೂ ಕಷ್ಟ. 25 ನಿಜವಾದ ಜ್ಞಾನವನ್ನು ಕಂಡುಕೊಳ್ಳಲು ನಾನು ವ್ಯಾಸಂಗ ಮಾಡಿದೆ ಮತ್ತು ತುಂಬ ಕಷ್ಟಪಟ್ಟು ಪ್ರಯತ್ನಿಸಿದೆ. ಪ್ರತಿಯೊಂದಕ್ಕೂ ಕಾರಣವನ್ನು ಕಂಡುಕೊಳ್ಳಲು ನಾನು ಪ್ರಯತ್ನಿಸಿದೆ.
ನಾನು ಕಲಿತಿದ್ದೇನು? ಕೆಡುಕನಾಗಿರುವುದು ಮೂಢತನ ಮತ್ತು ಮೂಢನಂತೆ ವರ್ತಿಸುವುದು ಹುಚ್ಚುತನ ಎಂಬುದನ್ನು ನಾನು ಕಲಿತುಕೊಂಡೆ. 26 ಇದಲ್ಲದೆ ಕೆಲವು ಸ್ತ್ರೀಯರು ಅಪಾಯಕರವಾದ ಬೋನುಗಳಂತಿರುವರು ಎಂಬುದನ್ನು ನಾನು ಕಂಡುಕೊಂಡೆ. ಅವರ ಹೃದಯಗಳು ಬಲೆಗಳಂತಿವೆ; ಅವರ ಕೈಗಳು ಸರಪಣಿಗಳಂತಿವೆ. ಆ ಸ್ತ್ರೀಯರಿಗೆ ಸಿಕ್ಕಿಬೀಳುವುದು ಮರಣಕ್ಕಿಂತಲೂ ಅಪಾಯಕರ. ದೇವರ ಭಕ್ತನು ಆ ಸ್ತ್ರೀಯರ ಬಳಿಯಿಂದ ಓಡಿಹೋಗುವನು; ಪಾಪಿಯಾದರೋ ಅವರಿಗೆ ಸಿಕ್ಕಿಕೊಳ್ಳುವನು.
27-28 ಪ್ರಸಂಗಿಯು ಹೀಗೆನ್ನುತ್ತಾನೆ: “ಒಂದು ತೀರ್ಮಾನಕ್ಕೆ ಬರಬೇಕೆಂದು ಇವೆಲ್ಲವುಗಳನ್ನು ಒಟ್ಟಾಗಿ ಸೇರಿಸಿದೆ. ಆದರೂ ಒಂದು ತೀರ್ಮಾನಕ್ಕೆ ಬರಲಾಗುತ್ತಿಲ್ಲ. ಆದರೆ ನಾನು ಒಂದನ್ನು ಕಂಡುಕೊಂಡೆ. ಅದೇನೆಂದರೆ, ಸಾವಿರ ಪುರುಷರಲ್ಲಿ ಒಬ್ಬ ನೀತಿವಂತನು ಇದ್ದರೂ ಇರಬಹುದು; ಆದರೆ ಸಾವಿರ ಸ್ತ್ರೀಯರಲ್ಲಿ ಒಬ್ಬ ನೀತಿವಂತಳನ್ನೂ ನಾನು ಕಾಣಲಿಲ್ಲ.
29 “ನಾನು ಮತ್ತೊಂದು ವಿಷಯವನ್ನು ತಿಳಿದುಕೊಂಡೆನು. ಅದೇನೆಂದರೆ, ದೇವರು ಮನುಷ್ಯರನ್ನು ನೀತಿವಂತರನ್ನಾಗಿ ಸೃಷ್ಟಿಸಿದನು. ಆದರೆ ಜನರು ಕೆಟ್ಟವರಾಗಿರಲು ಅನೇಕ ದಾರಿಗಳನ್ನು ಕಂಡುಕೊಂಡರು.”
ಜ್ಞಾನ ಮತ್ತು ಶಕ್ತಿ
8 ಜ್ಞಾನಿಯು ವಿಷಯಗಳನ್ನು ಅರ್ಥಮಾಡಿಕೊಳ್ಳುವಂತೆ ಮತ್ತು ವಿವರಿಸುವಂತೆ ಬೇರೆ ಯಾರೂ ಅರ್ಥಮಾಡಿಕೊಳ್ಳಲಾರರು ಮತ್ತು ವಿವರಿಸಲಾರರು. ಜ್ಞಾನಿಯ ಮುಖವು ಜ್ಞಾನದಿಂದ ಪ್ರಕಾಶಮಾನವಾಗಿರುವುದು; ಅದು ವ್ಯಸನದ ಮುಖವನ್ನು ಸಂತೋಷದ ಮುಖವನ್ನಾಗಿ ಮಾರ್ಪಡಿಸುವುದು.
2 ನೀವು ದೇವರ ಮೇಲೆ ಆಣೆಯಿಟ್ಟಿರುವುದರಿಂದ ರಾಜನ ಆಜ್ಞೆಗೆ ವಿಧೇಯರಾಗಿರಬೇಕು. 3 ರಾಜನಿಗೆ ನಿಮ್ಮ ಆಲೋಚನೆಗಳನ್ನು ತಿಳಿಸಲು ಭಯಪಡಬಾರದು; ನೀವು ಯಾವ ತಪ್ಪಿಗೂ ಬೆಂಬಲ ಕೊಡಬಾರದು. ಆದರೆ ರಾಜನು ತನಗೆ ಇಷ್ಟಬಂದಂತೆ ಆಜ್ಞೆಗಳನ್ನು ಕೊಡುತ್ತಾನೆಂಬುದು ಜ್ಞಾಪಕದಲ್ಲಿರಲಿ. 4 ಆಜ್ಞೆಗಳನ್ನು ಕೊಡಲು ರಾಜನಿಗೆ ಅಧಿಕಾರವಿದೆ. ಅವನನ್ನು ಬಲವಂತ ಮಾಡಲು ಯಾರಿಗೂ ಸಾಧ್ಯವಿಲ್ಲ. 5 ರಾಜನ ಆಜ್ಞೆಗೆ ವಿಧೇಯನಾಗುವವನು ಸುರಕ್ಷಿತವಾಗಿರುವನು. ಆದರೆ ಜ್ಞಾನಿಯು ಸೂಕ್ತ ಸಮಯದಲ್ಲಿ ಸೂಕ್ತ ಕಾರ್ಯವನ್ನು ಮಾಡಲು ತಿಳಿದಿದ್ದಾನೆ.
6 ಪ್ರತಿಯೊಂದು ಕಾರ್ಯಕ್ಕೂ ಸೂಕ್ತ ಸಮಯವೂ ಸೂಕ್ತ ಮಾರ್ಗವೂ ಮನುಷ್ಯನಿಗೆ ಇವೆ. ಮನುಷ್ಯನು ತನ್ನ ಅನೇಕ ತೊಂದರೆಗಳಲ್ಲಿಯೂ ಅವುಗಳಿಗೆ ತಕ್ಕಂತೆ ನಿರ್ಧಾರವನ್ನು ಕೈಕೊಳ್ಳಬೇಕು. 7 ಯಾಕೆಂದರೆ ಮುಂದೆ ಏನಾಗುವುದೋ ಅವನಿಗೆ ತಿಳಿಯದು. ಮುಂದೆ ಅದು ಹೇಗೆ ಆಗುವುದೋ ಎಂದು ಅವನಿಗೆ ತಿಳಿಸುವವರು ಯಾರು ಇಲ್ಲ.
8 ಯಾರಿಗೂ ತಮ್ಮ ಆತ್ಮವನ್ನು ತಡೆದು ನಿಲ್ಲಿಸಿಕೊಳ್ಳುವ ಶಕ್ತಿ ಇಲ್ಲ. ಯಾರಿಗೂ ತಮ್ಮ ಮರಣವನ್ನು ತಡೆದು ನಿಲ್ಲಿಸುವ ಶಕ್ತಿಯಿಲ್ಲ. ಯುದ್ಧಕಾಲದಲ್ಲಿ ಸೈನಿಕರಿಗೆ ರಜೆ ದೊರೆಯುವುದಿಲ್ಲ. ಅದೇ ರೀತಿಯಲ್ಲಿ, ಪಾಪವು ಪಾಪಿಯನ್ನು ಬಿಟ್ಟುಹೋಗುವುದಿಲ್ಲ.
9 ನಾನು ಇವುಗಳನ್ನೆಲ್ಲಾ ನೋಡಿ ಈ ಲೋಕದ ಕಾರ್ಯಗಳನ್ನು ಪರಿಶೀಲಿಸಿದೆನು. ಮನುಷ್ಯರು ಇನ್ನೊಬ್ಬರ ಮೇಲೆ ಅಧಿಪತಿಗಳಾಗಿರಲು ಪ್ರಯಾಸಪಡುತ್ತಾರೆ. ಇದು ಅವರಿಗೆ ಹಾನಿಕರ.
10 ಇದಲ್ಲದೆ ದುಷ್ಟರಿಗೆ ಶವಸಂಸ್ಕಾರವನ್ನು ವೈಭವದಿಂದ ಮಾಡುವುದನ್ನು ನಾನು ನೋಡಿದ್ದೇನೆ. ಶವಸಂಸ್ಕಾರವಾದ ಮೇಲೆ ಜನರು ಸತ್ತುಹೋದ ದುಷ್ಟರನ್ನು ಹೊಗಳುತ್ತಾ ತಮ್ಮ ಮನೆಗಳಿಗೆ ಹೋದರು; ನೀತಿವಂತರಾದರೋ ಪರಿಶುದ್ಧ ಸ್ಥಾನದಿಂದ ತೊಲಗಬೇಕಾಯಿತು. ನಗರದಲ್ಲಿ ಅವರ ಜ್ಞಾಪಕವೇ ಇಲ್ಲವಾಯಿತು. ಇದು ಸಹ ವ್ಯರ್ಥ.
ನ್ಯಾಯ, ಪ್ರತಿಫಲ ಮತ್ತು ದಂಡನೆ
11 ಜನರ ಅಪರಾಧಗಳಿಗೆ ದಂಡನೆಯು ಕೂಡಲೇ ಬರದಿರುವುದರಿಂದ ದುಷ್ಕೃತ್ಯಗಳನ್ನು ಮಾಡಲು ಇತರರು ಸಹ ಪ್ರೇರಿತರಾಗುತ್ತಾರೆ.
12 ಒಬ್ಬ ಪಾಪಿಯು ನೂರು ದುಷ್ಕೃತ್ಯಗಳನ್ನು ಮಾಡಿ ಬಹುಕಾಲ ಬದುಕಬಹುದು. ಆದರೆ ದೇವರಲ್ಲಿ ಭಯಭಕ್ತಿಯುಳ್ಳವರಿಗೆ ಅದಕ್ಕಿಂತಲೂ ಮೇಲೇ ಆಗುವುದು. 13 ದುಷ್ಟರಿಗೆ ದೇವರಲ್ಲಿ ಭಯಭಕ್ತಿಯಿಲ್ಲದಿರುವುದರಿಂದ ಅವರಿಗೆ ಒಳ್ಳೆಯದಾಗುವುದಿಲ್ಲ; ಅವರ ಜೀವಿತವು ಸಾಯಂಕಾಲದ ನೆರಳಿನಂತೆ ಇಲ್ಲವಾಗುವುದು.
14 ಲೋಕದಲ್ಲಿ ಮತ್ತೊಂದು ಅನ್ಯಾಯವಿದೆ. ದುಷ್ಟರಿಗೆ ಕೇಡಾಗಬೇಕು, ಕೆಟ್ಟವುಗಳು ಕೆಟ್ಟ ಜನರಿಗೆ ಆಗಬೇಕು. ನೀತಿವಂತರಿಗೆ ಒಳ್ಳೆಯದಾಗಬೇಕು. ಆದರೆ ಕೆಲವು ಸಲ ನೀತಿವಂತರಿಗೆ ಕೇಡಾಗುತ್ತದೆ. ದುಷ್ಟರಿಗೆ ಒಳ್ಳೆಯದಾಗುತ್ತದೆ. ಅದು ನ್ಯಾಯವಲ್ಲ. 15 ಆದ್ದರಿಂದ ಜೀವನದಲ್ಲಿ ಅನ್ನಪಾನಗಳನ್ನು ತೆಗೆದುಕೊಂಡು ಸಂತೋಷಪಡುವುದೇ ಉತ್ತಮವೆಂದು ನಿರ್ಧರಿಸಿದೆನು. ಯಾಕೆಂದರೆ ದೇವರು ಮನುಷ್ಯನಿಗೆ ಈ ಲೋಕದಲ್ಲಿ ಅನುಗ್ರಹಿಸಿರುವ ಪ್ರಯಾಸಕರ ಕೆಲಸಗಳಲ್ಲಿಯೂ ಮನುಷ್ಯನು ಸಂತೋಷವಾಗಿರಬೇಕು.
ದೇವರ ಕಾರ್ಯ ಗ್ರಹಿಕೆಗೆ ಮೀರಿದೆ
16 ಈ ಲೋಕದಲ್ಲಿ ಜನರ ಕಾರ್ಯಗಳನ್ನು ಎಚ್ಚರಿಕೆಯಿಂದ ಅಧ್ಯಯನ ಮಾಡಿದೆ. ಅವರು ಹಗಲುರಾತ್ರಿ ಕೆಲಸ ಮಾಡುವರು; ಕೆಲವೊಮ್ಮೆ ನಿದ್ರೆಯನ್ನೂ ಮಾಡುವುದಿಲ್ಲ. 17 ಇದಲ್ಲದೆ ದೇವರ ಅನೇಕ ಕಾರ್ಯಗಳನ್ನು ಸಹ ನಾನು ನೋಡಿದ್ದೇನೆ. ಭೂಮಿಯ ಮೇಲೆ ದೇವರು ಮಾಡುವ ಕಾರ್ಯಗಳನ್ನೆಲ್ಲಾ ಜನರು ಅರ್ಥಮಾಡಿಕೊಳ್ಳಲಾರರು. ಒಬ್ಬನು ಅರ್ಥಮಾಡಿಕೊಳ್ಳಲು ಎಷ್ಟೇ ಪ್ರಯತ್ನಿಸಿದರೂ ಅವನು ಅರ್ಥಮಾಡಿಕೊಳ್ಳಲಾರನು. ದೇವರ ಕಾರ್ಯವನ್ನು ಅರ್ಥಮಾಡಿಕೊಳ್ಳಬಲ್ಲೆನೆಂದು ಜ್ಞಾನಿಯು ಹೇಳಿಕೊಂಡರೂ ಅದು ಸತ್ಯವಲ್ಲ. ಅವುಗಳನ್ನೆಲ್ಲ ಯಾರೂ ಅರ್ಥಮಾಡಿಕೊಳ್ಳಲಾರರು.
ಸಾವು ನ್ಯಾಯವಾದದ್ದೇ?
9 ನಾನು ಇವೆಲ್ಲವುಗಳ ಬಗ್ಗೆ ಬಹಳ ಎಚ್ಚರಿಕೆಯಿಂದ ಆಲೋಚಿಸಿದೆ. ಒಳ್ಳೆಯವರಿಗೂ ಜ್ಞಾನಿಗಳಿಗೂ ಅವರ ಕಾರ್ಯಗಳಿಗೂ ಸಂಭವಿಸುವುದೆಲ್ಲಾ ದೇವರ ಹತೋಟಿಯಲ್ಲಿದೆ. ತಾವು ಪ್ರೀತಿಗೆ ಗುರಿಯಾಗುವರೋ ದ್ವೇಷಕ್ಕೆ ಗುರಿಯಾಗುವರೋ ಅವರಿಗೆ ಗೊತ್ತಿಲ್ಲ. ಮುಂದೆ ಸಂಭವಿಸುವುದೂ ಅವರಿಗೆ ಗೊತ್ತಿಲ್ಲ.
2 ಆದರೆ ಎಲ್ಲರಿಗೂ ಸಂಭವಿಸುವುದು ಒಂದೇ. ಅದೇ ಮರಣ. ಒಳ್ಳೆಯವರಿಗೂ ಕೆಟ್ಟವರಿಗೂ ಶುದ್ಧರಿಗೂ ಅಶುದ್ಧರಿಗೂ ಯಜ್ಞಗಳನ್ನು ಅರ್ಪಿಸುವವರಿಗೂ ಅರ್ಪಿಸದವರಿಗೂ ಮರಣವಾಗುತ್ತದೆ. ಒಳ್ಳೆಯವನು ಸಹ ಕೇವಲ ಪಾಪಿಯಂತೆ ಸಾಯುವನು. ದೇವರಿಗೆ ವಿಶೇಷವಾದ ಹರಕೆಗಳನ್ನು ಮಾಡುವವನು ಸಹ ಆ ಹರಕೆಗಳನ್ನು ಮಾಡಲು ಭಯಪಡುವ ವ್ಯಕ್ತಿಯಂತೆ ಸಾಯುವನು.
3 ಈ ಲೋಕದ ಎಲ್ಲಾ ಕಾರ್ಯಗಳಲ್ಲಿ ಎಲ್ಲಕ್ಕಿಂತಲೂ ದುಃಖಕರವಾದದ್ದೇನೆಂದರೆ, ಎಲ್ಲರೂ ಒಂದೇ ರೀತಿಯಲ್ಲಿ ಅಂತ್ಯವಾಗುವರು. ಆದರೆ ಜನರು ದುಷ್ಟತನವನ್ನೂ ಮೂರ್ಖತನವನ್ನೂ ಆಲೋಚಿಸುತ್ತಲೇ ಇರುವುದು ಅಪಾಯಕರ. ಆಲೋಚನೆಗಳು ಅವರನ್ನು ಮರಣಕ್ಕೆ ನಡೆಸುತ್ತವೆ. 4 ಇನ್ನೂ ಜೀವದಿಂದಿರುವ ಪ್ರತಿಯೊಬ್ಬರಿಗೂ ನಿರೀಕ್ಷೆಯಿದೆ.
ಜೀವಂತವಾಗಿರುವ ನಾಯಿ ಸತ್ತ ಸಿಂಹಕ್ಕಿಂತಲೂ ಉತ್ತಮ
ಎಂಬ ನುಡಿ ಎಷ್ಟೋ ಸತ್ಯ.
5 ಜೀವಿತರಿಗೆ ಸಾಯುತ್ತೇವೆಂಬ ತಿಳುವಳಿಕೆಯಿದೆ. ಆದರೆ ಸತ್ತವರಿಗೆ ಯಾವ ತಿಳುವಳಿಕೆಯೂ ಇಲ್ಲ. ಸತ್ತವರಿಗೆ ಯಾವ ಪ್ರತಿಫಲವೂ ಇಲ್ಲ. ಜನರು ಅವರನ್ನು ಬೇಗನೆ ಮರೆತುಬಿಡುವರು. 6 ಅವರು ಸತ್ತಾಗಲೇ, ಅವರ ಪ್ರೀತಿ, ದ್ವೇಷ ಮತ್ತು ಹೊಟ್ಟೆಕಿಚ್ಚು ಅಳಿದುಹೋದವು; ಸತ್ತವರು ಭೂಲೋಕದ ಕಾರ್ಯಗಳಲ್ಲಿ ಇನ್ನೆಂದಿಗೂ ಪಾಲುಗಾರರಾಗುವುದಿಲ್ಲ.
ಜೀವನದಲ್ಲಿ ಆನಂದಿಸಿ
7 ಆದ್ದರಿಂದ ಹೋಗು, ಊಟಮಾಡಿ ಸಂತೋಷಪಡು; ದ್ರಾಕ್ಷಾರಸವನ್ನು ಕುಡಿದು ಉಲ್ಲಾಸಿಸು; ನಿನ್ನ ಈ ನಡತೆಯು ದೇವರಿಗೆ ಮೆಚ್ಚಿಕೆಯಾಗಿದೆ. 8 ಒಳ್ಳೆಯ ಉಡುಪುಗಳನ್ನು ಧರಿಸಿಕೊಂಡು ನಿನ್ನನ್ನು ಅಲಂಕರಿಸಿಕೊ. 9 ನೀನು ಪ್ರಿಯ ಪತ್ನಿಯೊಡನೆ ಸುಖಪಡು. ನಿನ್ನ ಅಲ್ಪಕಾಲ ಜೀವಿತದ ದಿನಗಳಲ್ಲೆಲ್ಲಾ ಸುಖಪಡು. ಈ ಜೀವಿತವನ್ನು ನಿನಗೆ ಅನುಗ್ರಹಿಸಿರುವಾತನು ದೇವರೇ, ಇದೇ ನಿನ್ನ ಪಾಲು. ನಿನ್ನ ಈ ಜೀವಿತದ ಕೆಲಸಕಾರ್ಯಗಳನ್ನು ಸಂತೋಷದಿಂದ ಮಾಡು. 10 ನಿನ್ನ ಕೆಲಸಕಾರ್ಯಗಳನ್ನು ನಿನ್ನಿಂದಾದಷ್ಟು ಉತ್ತಮವಾಗಿ ಮಾಡು. ಸಮಾಧಿಯಲ್ಲಿ ನಿನಗೆ ಕೆಲಸವಿಲ್ಲ. ಅಲ್ಲಿ ಆಲೋಚನೆಯಾಗಲಿ ಜ್ಞಾನವಾಗಲಿ ವಿವೇಕವಾಗಲಿ ಇರುವುದಿಲ್ಲ. ನಾವೆಲ್ಲರೂ ಮರಣದ ಆ ಸ್ಥಳಕ್ಕೆ ಹೋಗುತ್ತಿದ್ದೇವೆ.
ಅದೃಷ್ಟವೇ? ನತಾದೃಷ್ಟವೇ?
11 ಇದಲ್ಲದೆ ಲೋಕದಲ್ಲಿ ಇನ್ನೂ ಕೆಲವು ಅನ್ಯಾಯಗಳನ್ನು ಗಮನಿಸಿದ್ದೇನೆ. ಅತಿವೇಗದ ಓಟಗಾರನಿಗೆ ಓಟದಲ್ಲಿ ಯಾವಾಗಲೂ ಗೆಲುವಾಗದು; ಬಲಿಷ್ಠವಾದ ಸೈನ್ಯಕ್ಕೆ ಯುದ್ಧದಲ್ಲಿ ಯಾವಾಗಲೂ ಜಯವಾಗದು; ಜ್ಞಾನಿಗೆ ಯಾವಾಗಲೂ ಆಹಾರ ದೊರಕದು; ಜಾಣನಿಗೆ ಯಾವಾಗಲೂ ಐಶ್ವರ್ಯ ದೊರೆಯದು; ಪ್ರವೀಣರಿಗೆ ಯಾವಾಗಲೂ ಹೊಗಳಿಕೆಬಾರದು; ಸಮಯ ಬಂದಾಗ, ಪ್ರತಿಯೊಬ್ಬರಿಗೂ ಕೇಡುಗಳಾಗುತ್ತವೆ.
12 ಮನುಷ್ಯನಿಗೆ ಮುಂದೆ ಏನಾಗುವುದೋ ತಿಳಿಯದು. ಬಲೆಯಲ್ಲಿ ಸಿಕ್ಕಿಕೊಂಡಿರುವ ಮೀನಿನಂತೆಯೂ ಬೋನಿನಲ್ಲಿ ಸಿಕ್ಕಿಕೊಂಡ ಪಕ್ಷಿಯಂತೆಯೂ ಮನುಷ್ಯನು ತನಗೆ ಸಂಭವಿಸುವ ಕೇಡುಗಳಿಗೆ ಗುರಿಯಾಗುವನು.
ಜ್ಞಾನದ ಶಕ್ತಿ
13 ಇದಲ್ಲದೆ ಲೋಕದಲ್ಲಿ ಜ್ಞಾನದ ಕಾರ್ಯವನ್ನು ಮಾಡುವ ಒಬ್ಬನನ್ನು ನಾನು ಕಂಡೆನು. ಅದು ತುಂಬ ಮುಖ್ಯವಾದದ್ದೆಂದು ನನಗೆ ತೋರಿತು. 14 ಕೆಲವು ಜನರಿದ್ದ ಒಂದು ಚಿಕ್ಕ ನಗರವಿತ್ತು. ಒಬ್ಬ ದೊಡ್ಡ ರಾಜನು ಆ ನಗರದ ಮೇಲೆ ದಂಡೆತ್ತಿ ಬಂದು ಮುತ್ತಿಗೆ ಹಾಕಿದನು. 15 ಆ ನಗರದಲ್ಲಿ ಒಬ್ಬ ಜ್ಞಾನಿ ಇದ್ದನು. ಆದರೆ ಅವನು ಬಡವನಾಗಿದ್ದನು, ಅವನು ತನ್ನ ಜ್ಞಾನದಿಂದ ಆ ನಗರವನ್ನು ಕಾಪಾಡಿದನು; ಆದರೆ ಜನರು ಅವನನ್ನು ಮರೆತೇಬಿಟ್ಟರು. 16 ನಾನು ಹೇಳುವುದೇನೆಂದರೆ, ಜ್ಞಾನವು ಶಕ್ತಿಗಿಂತಲೂ ಉತ್ತಮ. ಅವರು ಆ ಬಡವನ ಜ್ಞಾನವನ್ನು ಮರೆತುಬಿಟ್ಟರೂ ಅವನ ಮಾತುಗಳನ್ನು ಕೇಳದಿದ್ದರೂ ಜ್ಞಾನವು ಉತ್ತಮವಾದದ್ದೇ.
17 ಜ್ಞಾನಿಯ ಮೆಲ್ಲನೆಯ ಮಾತುಗಳು
ಮೂಢನಾದ ಅಧಿಪತಿಯು ಕೂಗಿಹೇಳಿದ ಮಾತುಗಳಿಗಿಂತಲೂ ಎಷ್ಟೋ ಉತ್ತಮ.
18 ಜ್ಞಾನವು ಯುದ್ಧಾಯುಧಗಳಿಗಿಂತಲೂ ಉತ್ತಮ,
ಆದರೆ ಮೂಢನು ಒಳ್ಳೆಯದನ್ನು ಹಾಳು ಮಾಡುವನು.
ಕಡೆಯ ಎಚ್ಚರಿಕೆಗಳು ಮತ್ತು ವಂದನೆಗಳು
13 ನಾನು ಮತ್ತೆ ನಿಮ್ಮ ಬಳಿಗೆ ಮೂರನೆ ಸಾರಿ ಬರುತ್ತೇನೆ. ನೆನಪಿಟ್ಟುಕೊಳ್ಳಿರಿ, “ಪ್ರತಿಯೊಂದು ದೂರಿಗೂ ಇಬ್ಬರಾಗಲಿ ಮೂವರಾಗಲಿ ಸಾಕ್ಷಿಗಳಿದ್ದು ತಮಗೆ ಗೊತ್ತಿರುವುದಾಗಿ ಮತ್ತು ಅದು ಸತ್ಯವೆಂದು”(A) ಹೇಳಬೇಕು. 2 ನಾನು ನಿಮ್ಮ ಬಳಿಗೆ ಎರಡನೆ ಸಲ ಬಂದಿದ್ದಾಗ ಪಾಪಕ್ಕೆ ಒಳಗಾಗಿದ್ದವರನ್ನು ಮತ್ತು ಉಳಿದವರೆಲ್ಲರನ್ನು ಎಚ್ಚರಿಸಿದೆನು. ಈಗ ನಾನು ದೂರದಲ್ಲಿದ್ದೇನೆ. ಈ ಪಾಪಕ್ಕೆ ಒಳಗಾಗಿರುವ ಎಲ್ಲರಿಗೂ ನಾನು ಕೊಡುವ ಎಚ್ಚರಿಕೆ ಏನೆಂದರೆ, ನಾನು ನಿಮ್ಮ ಬಳಿಗೆ ಬಂದಾಗ, ನಿಮ್ಮ ಪಾಪಕ್ಕೆ ತಕ್ಕ ದಂಡನೆಯನ್ನು ವಿಧಿಸುವೆನು. 3 ಕ್ರಿಸ್ತನು ನನ್ನ ಮೂಲಕ ಮಾತಾಡುತ್ತಿದ್ದಾನೆ ಎಂಬುದಕ್ಕೆ ನಿಮಗೆ ಸಾಕ್ಷಿಬೇಕು. ನನಗಿರುವ ಸಾಕ್ಷಿ ಏನೆಂದರೆ, ಕ್ರಿಸ್ತನು ನಿಮ್ಮನ್ನು ದಂಡಿಸುವುದರಲ್ಲಿ ಬಲಹೀನನಲ್ಲ. ಕ್ರಿಸ್ತನು ನಿಮ್ಮ ಮಧ್ಯದಲ್ಲಿ ಬಲಿಷ್ಠನಾಗಿದ್ದಾನೆ. 4 ಕ್ರಿಸ್ತನು ಶಿಲುಬೆಯ ಮೇಲೆ ಕೊಲ್ಲಲ್ಪಟ್ಟಾಗ ಬಲಹೀನನಾಗಿದ್ದನು ಎಂಬುದೇನೊ ನಿಜ. ಆದರೆ ಈಗ ಆತನು ದೇವರ ಶಕ್ತಿಯಿಂದ ಜೀವಿಸುತ್ತಿದ್ದಾನೆ. ಅಲ್ಲದೆ ನಾವು ಕ್ರಿಸ್ತನಲ್ಲಿ ಬಲಹೀನರೆಂಬುದೂ ನಿಜ. ಆದರೆ ನಾವು ನಿಮಗೋಸ್ಕರವಾಗಿ ಕ್ರಿಸ್ತನಲ್ಲಿ ದೇವರ ಶಕ್ತಿಯಿಂದ ಜೀವಿಸುತ್ತೇವೆ.
5 ನೀವು ನಂಬಿಕೆಯಲ್ಲಿ ಜೀವಿಸುತ್ತಿದ್ದೀರೋ ಎಂಬುದನ್ನು ತಿಳಿದುಕೊಳ್ಳಲು ನಿಮ್ಮನ್ನು ನೀವೇ ಪರೀಕ್ಷಿಸಿಕೊಳ್ಳಿರಿ. ಕ್ರಿಸ್ತಯೇಸುವು ನಿಮ್ಮೊಳಗೆ ಇದ್ದಾನೆಂಬುದು ನಿಮಗೆ ಗೊತ್ತಿದೆ. ಆತನು ನಿಮ್ಮಲ್ಲಿಲ್ಲದಿದ್ದರೆ ನೀವು ಅಯೋಗ್ಯರಾಗಿದ್ದೀರಿ. 6 ಆದರೆ ನಾವು ಅಯೋಗ್ಯರಲ್ಲವೆಂದು ನಿಮಗೆ ಖಚಿತವಾಗುವುದರಲ್ಲಿ ನಮಗೆ ಸಂದೇಹವಿಲ್ಲ. 7 ನೀವು ಯಾವ ತಪ್ಪನ್ನೂ ಮಾಡದಿರಲಿ ಎಂಬುದಾಗಿ ನಾವು ದೇವರಲ್ಲಿ ಪ್ರಾರ್ಥಿಸುತ್ತೇವೆ. ನಮ್ಮನ್ನು ಅಯೋಗ್ಯರೆಂದು ಜನರು ಭಾವಿಸಿಕೊಂಡರೂ ನೀವು ಒಳ್ಳೆಯದನ್ನು ಮಾಡುವುದೇ ಮುಖ್ಯ. 8 ಸತ್ಯಕ್ಕೆ ವಿರೋಧವಾದ ಸಂಗತಿಗಳನ್ನು ಮಾಡಲು ನಮಗೆ ಸಾಧ್ಯವಿಲ್ಲ. ಸತ್ಯದ ಪರವಾದ ಕಾರ್ಯಗಳನ್ನು ಮಾತ್ರ ಮಾಡಲು ನಮಗೆ ಸಾಧ್ಯ. 9 ನೀವು ಶಕ್ತರಾಗಿರುವುದಾದರೆ, ನಾವು ಬಲಹೀನರಾಗಿರಲು ಸಂತೋಷಿಸುತ್ತೇವೆ. ನೀವು ನಂಬಿಕೆಯಲ್ಲಿ ಪರಿಪೂರ್ಣರಾಗಬೇಕೆಂಬುದೇ ನಮ್ಮ ಉದ್ದೇಶ. 10 ನಾನು ನಿಮ್ಮೊಂದಿಗೆ ಇಲ್ಲದಿರುವಾಗ ಈ ಸಂಗತಿಗಳನ್ನು ಬರೆಯುತ್ತಿದ್ದೇನೆ. ಏಕೆಂದರೆ ನಾನು ಬಂದಾಗ ನಿಮ್ಮನ್ನು ದಂಡಿಸುವುದಕ್ಕಾಗಿ ನನ್ನ ಅಧಿಕಾರವನ್ನು ಉಪಯೋಗಿಸುವ ಅಗತ್ಯವಿರುವುದಿಲ್ಲ. ಪ್ರಭುವು ನನಗೆ ಅಧಿಕಾರವನ್ನು ಕೊಟ್ಟಿರುವುದು ನಿಮ್ಮನ್ನು ಬಲಗೊಳಿಸುವುದಕ್ಕಾಗಿಯೇ ಹೊರತು ನಾಶಮಾಡುವುದಕ್ಕಾಗಿಯಲ್ಲ.
11 ಸಹೋದರ ಸಹೋದರಿಯರೇ, ನಿಮಗೆ ವಂದನೆಗಳು. ಪರಿಪೂರ್ಣರಾಗಿರಲು ಪ್ರಯತ್ನಿಸಿ. ನಾನು ಕೇಳಿಕೊಂಡ ಕಾರ್ಯಗಳನ್ನು ಮಾಡಿರಿ. ಒಂದೇ ಮನಸ್ಸು ಉಳ್ಳವರಾಗಿದ್ದು ಸಮಾಧಾನದಿಂದ ಜೀವಿಸಿರಿ. ಆಗ ಪ್ರೀತಿಸ್ವರೂಪನೂ ಶಾಂತಿದಾಯಕನೂ ಆದ ದೇವರು ನಿಮ್ಮೊಂದಿಗೆ ಇರುವನು.
12 ನೀವು ಒಬ್ಬರನ್ನೊಬ್ಬರು ವಂದಿಸುವಾಗ ಪವಿತ್ರವಾದ ಮುದ್ದಿಟ್ಟು ವಂದಿಸಿರಿ. ದೇವರ ಪವಿತ್ರ ಜನರೆಲ್ಲರೂ ನಿಮಗೆ ವಂದನೆ ತಿಳಿಸಿದ್ದಾರೆ.
13 ನಮ್ಮ ಪ್ರಭುವಾದ ಯೇಸುಕ್ರಿಸ್ತನ ಕೃಪೆಯೂ ದೇವರ ಪ್ರೀತಿಯೂ ಪವಿತ್ರಾತ್ಮನ ಅನ್ಯೋನ್ಯತೆಯೂ ನಿಮ್ಮೆಲ್ಲರೊಂದಿಗಿರಲಿ.
Kannada Holy Bible: Easy-to-Read Version. All rights reserved. © 1997 Bible League International