Old/New Testament
ಸೊಲೊಮೋನನ ಜ್ಞಾನೋಕ್ತಿಗಳು
10 ಇವು ಸೊಲೊಮೋನನ ಜ್ಞಾನೋಕ್ತಿಗಳು:
ಜ್ಞಾನಿಯಾದ ಮಗನಿಂದ ತಂದೆಗೆ ಸಂತೋಷ. ಮೂಢನಾದ ಮಗನಿಂದ ತಾಯಿಗೆ ದುಃಖ.
2 ಅನ್ಯಾಯದ ಹಣವು ನಿಷ್ಪ್ರಯೋಜಕವಾಗಿದೆ. ನೀತಿಯ ಜೀವಿತವು ಮರಣದಿಂದ ರಕ್ಷಿಸಬಲ್ಲದು.
3 ನೀತಿವಂತರು ಹಸಿವೆಯಿಂದಿರಲು ಯೆಹೋವನು ಬಿಡುವುದಿಲ್ಲ. ದುಷ್ಟರ ಆಸೆಯನ್ನಾದರೋ ಆತನು ಭಂಗಪಡಿಸುತ್ತಾನೆ.
4 ಸೋಮಾರಿಯು ಬಡವನಾಗಿರುತ್ತಾನೆ. ಕಷ್ಟಪಟ್ಟು ಕೆಲಸ ಮಾಡುವವನು ಐಶ್ವರ್ಯವಂತನಾಗುತ್ತಾನೆ.
5 ಬುದ್ಧಿವಂತನು ತಕ್ಕಕಾಲದಲ್ಲಿ ಬೆಳೆಯನ್ನು ಕೊಯ್ಯುತ್ತಾನೆ. ಸುಗ್ಗೀಕಾಲದಲ್ಲಿ ತೂಕಡಿಸುವವನು ನಾಚಿಕೆಗೆಟ್ಟವನು.
6 ಒಳ್ಳೆಯವನನ್ನು ಆಶೀರ್ವದಿಸುವಂತೆ ಜನರು ದೇವರನ್ನು ಪ್ರಾರ್ಥಿಸುವರು. ದುಷ್ಟನ ಮಾತುಗಳಲ್ಲಾದರೋ ಕುತಂತ್ರವೇ ಅಡಗಿಕೊಂಡಿದೆ.
7 ನೀತಿವಂತರ ನೆನಪು ಆಶೀರ್ವಾದದಾಯಕ. ಕೆಡುಕರಾದರೋ ಬಹುಬೇಗನೆ ಮರೆಯಲ್ಪಡುವರು.
8 ಜ್ಞಾನಿಯು ಆಜ್ಞೆಗಳಿಗೆ ವಿಧೇಯನಾಗುತ್ತಾನೆ. ಮೂಢನಾದರೋ ವಾದಮಾಡಿ ತನಗೇ ತೊಂದರೆ ತಂದುಕೊಳ್ಳುತ್ತಾನೆ.
9 ಒಳ್ಳೆಯವನೂ ಯಥಾರ್ಥನೂ ಆದ ಮನುಷ್ಯನು ಕ್ಷೇಮವಾಗಿರುವನು. ಮೋಸಮಾಡುವ ಕುಟಿಲ ಮನುಷ್ಯನಾದರೋ ಸಿಕ್ಕಿಕೊಳ್ಳುವನು.
10 ಸತ್ಯವನ್ನು ಅಡಗಿಸಿಕೊಳ್ಳುವವನು ತೊಂದರೆಯನ್ನು ಉಂಟುಮಾಡುವನು. ಧೈರ್ಯದಿಂದ ಮಾತಾಡುವವನು ಸಮಾಧಾನಕರನು.
11 ಒಳ್ಳೆಯವನ ಮಾತುಗಳು ನೀರಿನ ಬುಗ್ಗೆಯಂತೆ ಜೀವದಾಯಕ. ಕೆಡುಕನ ಮಾತುಗಳಲ್ಲಿ ಕೆಟ್ಟದ್ದೇ ಅಡಗಿಕೊಂಡಿರುತ್ತದೆ.
12 ದ್ವೇಷವು ವಾದವನ್ನು ಉಂಟುಮಾಡುತ್ತದೆ. ಆದರೆ ಪ್ರೀತಿಯು ಎಲ್ಲಾ ತಪ್ಪುಗಳನ್ನು ಕ್ಷಮಿಸುತ್ತದೆ.
13 ಬುದ್ಧಿವಂತನು ವಿವೇಕದಿಂದ ಮಾತಾಡುತ್ತಾನೆ. ಆದರೆ ಬುದ್ಧಿಹೀನನಿಗೆ ಹೊಡೆತ ಬೀಳುವುದು.
14 ಜ್ಞಾನಿಗಳು ಮೌನವಾಗಿದ್ದು ಹೊಸ ಸಂಗತಿಗಳನ್ನು ಕಲಿತುಕೊಳ್ಳುತ್ತಾರೆ. ಮೂಢರಾದರೋ ಮಾತಾಡಿ ತಮಗೇ ತೊಂದರೆಯನ್ನು ತಂದುಕೊಳ್ಳುತ್ತಾರೆ.
15 ಐಶ್ವರ್ಯವು ಸಾಹುಕಾರನನ್ನು ಕಾಪಾಡುತ್ತದೆ. ಬಡತನವಾದರೋ ಬಡವನನ್ನು ನಾಶಗೊಳಿಸುತ್ತದೆ.
16 ಒಳ್ಳೆಯವರಿಗೆ ಪ್ರತಿಫಲವಾಗಿ ಜೀವ ದೊರೆಯುವುದು. ಕೆಡುಕರಿಗೆ ದಂಡನೆಯೇ ಸಂಬಳ.
17 ಶಿಸ್ತನ್ನು ಸ್ವೀಕರಿಸಿಕೊಳ್ಳುವವನು ಜೀವಮಾರ್ಗವನ್ನು ತೋರಿಸುತ್ತಾನೆ. ತಿದ್ದುಪಡಿಯನ್ನು ಅಲಕ್ಷಿಸುವವನು ಇತರರನ್ನು ದಾರಿ ತಪ್ಪಿಸುತ್ತಾನೆ.
18 ದ್ವೇಷವನ್ನು ಮರೆಮಾಡಲು ಒಬ್ಬನು ಸುಳ್ಳು ಹೇಳಬೇಕಾಗಬಹುದು. ಆದರೆ ಹರಟೆಗಾರನು ನಿಜವಾಗಿಯೂ ಮೂಢನಾಗಿದ್ದಾನೆ.
19 ಅತಿಯಾಗಿ ಮಾತಾಡುವವನು ತನ್ನನ್ನೇ ತೊಂದರೆಗೆ ಸಿಕ್ಕಿಸಿಕೊಳ್ಳುತ್ತಾನೆ. ವಿವೇಕಿಯು ಮೌನವಾಗಿರಲು ಕಲಿತುಕೊಳ್ಳುತ್ತಾನೆ.
20 ಒಳ್ಳೆಯವನ ಮಾತುಗಳು ಶುದ್ಧ ಬೆಳ್ಳಿಯಂತಿವೆ. ಕೆಡುಕನ ಆಲೋಚನೆಗಳಾದರೋ ಪ್ರಯೋಜನಕ್ಕೆ ಬಾರವು.
21 ಒಳ್ಳೆಯವನ ಮಾತುಗಳು ಅನೇಕರಿಗೆ ಸಹಾಯಮಾಡುತ್ತವೆ. ಮೂಢನ ಮೂಢತನವಾದರೋ ಅನೇಕರನ್ನು ಕೊಲ್ಲುವುದು.
22 ಐಶ್ವರ್ಯವು ಯೆಹೋವನ ಆಶೀರ್ವಾದವೇ. ಶ್ರಮದ ಕೆಲಸವು ಅದನ್ನು ಹೆಚ್ಚಿಸಲಾರದು.
23 ಅವಿವೇಕಿಯು ಕೆಟ್ಟದ್ದನ್ನು ಮಾಡುವುದರಲ್ಲಿ ಸಂತೋಷಿಸುತ್ತಾನೆ. ವಿವೇಕಿಯು ಜ್ಞಾನದಲ್ಲಿ ಸಂತೋಷಿಸುತ್ತಾನೆ.
24 ಕೆಡುಕನಿಗೆ ಅವನು ಭಯಪಡುವುದೇ ಸಂಭವಿಸುವುದು. ಒಳ್ಳೆಯವನಾದರೋ ತನಗೆ ಬೇಕಾದದ್ದನ್ನೆಲ್ಲ ಪಡೆದುಕೊಳ್ಳುವನು.
25 ಆಪತ್ತು ಬಂದಾಗ ದುಷ್ಟನು ನಾಶವಾಗುವನು. ಆದರೆ ಒಳ್ಳೆಯವನು ಸದಾಕಾಲ ಬಲವಾಗಿ ನಿಲ್ಲುವನು.
26 ಸೋಮಾರಿಗೆ ಯಾವ ಕೆಲಸವನ್ನೂ ಒಪ್ಪಿಸಬೇಡಿ. ಅವನು ಬಾಯಿಗೆ ಹುಳಿಯಂತೆಯೂ ಕಣ್ಣುಗಳಿಗೆ ಹೊಗೆಯಂತೆಯೂ ನಿಮ್ಮನ್ನು ಬೇಸರಗೊಳಿಸುವನು.
27 ನೀವು ಯೆಹೋವನಲ್ಲಿ ಭಯಭಕ್ತಿಯುಳ್ಳವರಾಗಿದ್ದರೆ ಬಹುಕಾಲ ಬದುಕುವಿರಿ. ಆದರೆ ಕೆಡುಕರು ತಮ್ಮ ಜೀವಮಾನದ ವರ್ಷಗಳನ್ನು ಕಳೆದುಕೊಳ್ಳುವರು.
28 ಒಳ್ಳೆಯವರ ನಿರೀಕ್ಷೆಗೆ ಸಂತೋಷವೇ ಫಲಿತಾಂಶ. ಕೆಟ್ಟವರ ನಿರೀಕ್ಷೆಗೆ ಶೂನ್ಯವೇ ಫಲಿತಾಂಶ.
29 ಯೆಹೋವನು ಒಳ್ಳೆಯವರನ್ನು ಕೋಟೆಯಂತೆ ಕಾಪಾಡುತ್ತಾನೆ, ಕೆಡುಕರನ್ನಾದರೋ ನಾಶಮಾಡುತ್ತಾನೆ.
30 ಒಳ್ಳೆಯವರು ಯಾವಾಗಲೂ ಕ್ಷೇಮವಾಗಿರುವರು. ಆದರೆ ಕೆಡುಕರನ್ನು ದೇಶದಿಂದ ಬಲವಂತವಾಗಿ ಹೊರಗಟ್ಟಲಾಗುವುದು.
31 ಒಳ್ಳೆಯವರು ಯಾವಾಗಲೂ ಜ್ಞಾನದ ಮಾತುಗಳನ್ನು ಹೇಳುತ್ತಾರೆ; ಕೆಡುಕರ ಮಾತನ್ನು ಜನರು ಕೇಳುವುದಿಲ್ಲ.
32 ಒಳ್ಳೆಯವನು ಯೋಗ್ಯವಾದವುಗಳನ್ನು ಹೇಳುವನು. ಕೆಡುಕನು ಸುಳ್ಳನ್ನು ಮಾತ್ರ ಹೇಳುತ್ತಾನೆ.
11 ಯೆಹೋವನು ಮೋಸದ ತಕ್ಕಡಿಗಳನ್ನು ದ್ವೇಷಿಸುತ್ತಾನೆ. ನ್ಯಾಯವಾದ ತಕ್ಕಡಿಗಳಾದರೋ ಆತನನ್ನು ಸಂತೋಷಗೊಳಿಸುತ್ತವೆ.
2 ದುರಾಭಿಮಾನಿಗಳು ನಾಚಿಕೆಗೀಡಾಗುವರು; ದೀನರು ಜ್ಞಾನಿಗಳಾಗಿದ್ದಾರೆ.
3 ಯಥಾರ್ಥವಂತರಿಗೆ ಸರಳತೆಯು ಮಾರ್ಗದರ್ಶಕ. ಕೆಡುಕರು ತಮ್ಮ ಮೋಸಕೃತ್ಯಗಳ ಮೂಲಕ ತಮ್ಮನ್ನೇ ನಾಶಮಾಡಿಕೊಳ್ಳುತ್ತಾರೆ.
4 ದೇವರು ಜನರಿಗೆ ನ್ಯಾಯತೀರ್ಪು ಮಾಡುವ ದಿನದಲ್ಲಿ, ಹಣದಿಂದ ಯಾವ ಲಾಭವೂ ಇಲ್ಲ. ಆದರೆ ನೀತಿಯು ಜನರನ್ನು ಮರಣದಿಂದ ಕಾಪಾಡುತ್ತದೆ.
5 ನೀತಿವಂತನು ಯಥಾರ್ಥನಾಗಿದ್ದರೆ ಅವನ ಜೀವನವು ಸರಾಗವಾಗಿರುವುದು. ಆದರೆ ಕೆಡುಕನು ತನ್ನ ಕೆಟ್ಟಕಾರ್ಯಗಳಿಂದ ನಾಶವಾಗುವನು.
6 ನೀತಿಯು ಯಥಾರ್ಥವಂತರನ್ನು ಕಾಪಾಡುತ್ತದೆ. ಆದರೆ ವಂಚಕರು ತಮ್ಮ ಆಸೆಗಳಿಂದಲೇ ಸಿಕ್ಕಿಬೀಳುವರು.
7 ದುಷ್ಟನು ಸಾಯುವಾಗ ಅವನ ನಿರೀಕ್ಷೆಗಳೆಲ್ಲಾ ನಾಶವಾಗುತ್ತವೆ. ಅವನ ಅಪೇಕ್ಷೆಗಳೆಲ್ಲಾ ಕೊನೆಗೊಳ್ಳುತ್ತವೆ.
8 ಶಿಷ್ಟನು ಇಕ್ಕಟ್ಟಿನಿಂದ ಪಾರಾಗುವನು. ಅವನ ಬದಲಾಗಿ ದುಷ್ಟನು ಇಕ್ಕಟ್ಟಿನಲ್ಲಿ ಸಿಕ್ಕಿಬೀಳುವನು.
9 ಕೆಡುಕರು ತಮ್ಮ ಮಾತಿನಿಂದಲೇ ಬೇರೆಯವರನ್ನು ನಾಶಪಡಿಸುತ್ತಾರೆ. ಸಜ್ಜನರಿಗಾದರೋ ಅವರ ತಿಳುವಳಿಕೆಯೇ ರಕ್ಷಣೆ ನೀಡುವುದು.
10 ಸಜ್ಜನರಿಗೆ ಜಯವಾದರೆ ನಗರಕ್ಕೆಲ್ಲ ಸಂತಸ. ಕೆಡುಕರು ನಾಶವಾದರೆ ಜನರು ಜಯಘೋಷ ಮಾಡುವರು.
11 ಪಟ್ಟಣವು ತನ್ನಲ್ಲಿ ವಾಸವಾಗಿರುವ ಯಥಾರ್ಥವಂತರ ಆಶೀರ್ವಾದದಿಂದ ಏಳಿಗೆ ಹೊಂದುವುದು. ಕೆಡುಕರ ಮಾತುಗಳು ಪಟ್ಟಣವನ್ನು ನಾಶಮಾಡುತ್ತವೆ.
12 ಬುದ್ಧಿಹೀನನು ಇತರರನ್ನು ಹೀನೈಸುತ್ತಾನೆ. ಆದರೆ ಬುದ್ಧಿವಂತನು ಮೌನವಾಗಿರುತ್ತಾನೆ.
13 ಗುಟ್ಟು ರಟ್ಟುಮಾಡುವವನನ್ನು ನಂಬಲಾಗದು. ಆದರೆ ನಂಬಿಗಸ್ತನು ವಿಷಯಗಳನ್ನು ರಹಸ್ಯವಾಗಿಡುವನು.
14 ಜ್ಞಾನದ ಮಾರ್ಗದರ್ಶನವಿಲ್ಲದ ದೇಶವು ಬಿದ್ದುಹೋಗುವುದು. ಆದರೆ ಒಳ್ಳೆಯ ಸಲಹೆಗಾರರನ್ನು ಹೊಂದಿರುವ ದೇಶವು ಕ್ಷೇಮವಾಗಿರುವುದು.
15 ಬೇರೊಬ್ಬನ ಸಾಲಕ್ಕೆ ನೀನು ಜಾಮೀನಾಗಿದ್ದರೆ ಕಷ್ಟಕ್ಕೀಡಾಗಿರುವೆ; ನೀನು ಜಾಮೀನಾಗಿಲ್ಲದಿದ್ದರೆ ಕ್ಷೇಮವಾಗಿರುವೆ.
16 ದಯೆಯುಳ್ಳ ಸ್ತ್ರೀಯು ಗೌರವವನ್ನು ಪಡೆಯುವಳು. ಬಲಾತ್ಕಾರಿಗಳಾದ ಗಂಡಸರು ಕೇವಲ ಹಣವನ್ನು ಗಳಿಸುವರು.
17 ದಯೆಯುಳ್ಳವನು ತನಗೆ ಲಾಭ ಮಾಡಿಕೊಳ್ಳುವನು. ಕ್ರೂರಿಯು ತನಗೇ ಕೇಡುಮಾಡಿಕೊಳ್ಳುವನು.
18 ಕೆಡುಕನು ತಾತ್ಕಾಲಿಕವಾದ ಲಾಭವನ್ನು ಮಾಡಿಕೊಳ್ಳುತ್ತಾನೆ. ಆದರೆ ನೀತಿವಂತನು ಯೋಗ್ಯವಾದ ಪ್ರತಿಫಲವನ್ನು ಹೊಂದಿಕೊಳ್ಳುವನು.
19 ನೀತಿವಂತನು ನಿಜವಾಗಿಯೂ ಜೀವವನ್ನು ಹೊಂದಿಕೊಳ್ಳುವನು, ಆದರೆ ಕೆಡುಕನನ್ನು ಹಿಂಬಾಲಿಸುತ್ತಾ ಹೋಗುವವನು ಸಾವಿಗೀಡಾಗುವನು.
20 ಕೆಡುಕರು ಯೆಹೋವನಿಗೆ ಅಸಹ್ಯರು. ಆದರೆ ಸನ್ಮಾರ್ಗಿಗಳು ಆತನ ಮೆಚ್ಚಿಕೆಗೆ ಪಾತ್ರರಾಗಿದ್ದಾರೆ.
21 ದುಷ್ಟರಿಗೆ ದಂಡನೆ ಖಂಡಿತ. ಶಿಷ್ಟರಿಗೆ ಬಿಡುಗಡೆ ನಿಶ್ಚಯ.
22 ಅವಿವೇಕಳಿಗೆ ಸೌಂದರ್ಯವು ಹಂದಿಯ ಮೂಗಿನಲ್ಲಿರುವ ಸುಂದರವಾದ ಚಿನ್ನದ ಮೂಗುತಿಯಂತಿರುವುದು.
23 ಒಳ್ಳೆಯವರ ಬಯಕೆ ಅವರನ್ನು ಕ್ಷೇಮಕ್ಕೆ ನಡೆಸುತ್ತದೆ. ಆದರೆ ದುಷ್ಟರ ಆಕಾಂಕ್ಷೆ ಅವರನ್ನು ದಂಡನೆಗೆ ನಡೆಸುತ್ತದೆ.
24 ಉಚಿತವಾಗಿ ಕೊಡುವವನು ಅದಕ್ಕಿಂತಲೂ ಹೆಚ್ಚುಗಳಿಸುವನು. ಆದರೆ ಕೊಡಲೊಲ್ಲದವನು ಬಡವನಾಗುವನು.
25 ಉದಾರಿಯು ಅಭಿವೃದ್ಧಿಯಾಗುವನು. ಬೇರೆಯವರಿಗೆ ಸಹಾಯಮಾಡುವವನು ಸಹಾಯವನ್ನು ಹೊಂದಿಕೊಳ್ಳುವನು.
26 ಧಾನ್ಯವನ್ನು ಮಾರದೆ ಕೂಡಿಟ್ಟುಕೊಳ್ಳುವವನನ್ನು ಜನರು ಶಪಿಸುವರು. ಧಾನ್ಯ ಮಾರುವವನನ್ನು ಜನರು ಆಶೀರ್ವದಿಸುವರು.
27 ಒಳ್ಳೆಯದನ್ನು ಮಾಡುವವನನ್ನು ಜನರು ಗೌರವಿಸುವರು. ಕೇಡನ್ನು ಮಾಡುವವನಿಗೆ ಕೇವಲ ಕೇಡೇ ಆಗುವುದು.
28 ಐಶ್ವರ್ಯದ ಮೇಲೆ ಭರವಸೆಯಿಟ್ಟಿರುವವನು ಎಲೆಯಂತೆ ಉದುರಿಹೋಗುವನು. ಆದರೆ ಸಧರ್ಮಿಯು ಚಿಗುರಿದ ಎಲೆಯಂತೆ ಬೆಳೆಯುವನು.
29 ತನ್ನ ಕುಟುಂಬಕ್ಕೆ ತೊಂದರೆ ಕೊಡುವವನಿಗೆ ಆಸ್ತಿಯು ದೊರೆಯುವುದಿಲ್ಲ. ಮೂಢನು ಬಲವಂತಕ್ಕೊಳಗಾಗಿ ಜ್ಞಾನಿಯ ಸೇವೆ ಮಾಡಬೇಕಾಗುವುದು.
30 ನೀತಿವಂತನ ಕಾರ್ಯಗಳು ಜೀವವುಳ್ಳ ಮರಗಳಂತಿವೆ. ಜ್ಞಾನಿಯು ಆತ್ಮಗಳನ್ನು ಗೆದ್ದುಕೊಳ್ಳುವನು.
31 ಶಿಷ್ಟರು ಭೂಮಿಯ ಮೇಲೆ ಪ್ರತಿಫಲವನ್ನು ಹೊಂದುವುದಾದರೆ ಕೆಡುಕರು ಸಹ ತಮಗೆ ಬರತಕ್ಕ ದಂಡನೆಯನ್ನು ಹೊಂದುವುದು ನಿಶ್ಚಯ.
12 ಶಿಸ್ತನ್ನು ಇಷ್ಟಪಡುವವನು ಕಲಿಯಲು ಇಷ್ಟಪಡುತ್ತಾನೆ; ತಿದ್ದುಪಡಿಯನ್ನು ದ್ವೇಷಿಸುವವನು ಬುದ್ಧಿಹೀನ.
2 ಯೆಹೋವನು ಒಳ್ಳೆಯವನನ್ನು ಸ್ವೀಕರಿಸಿಕೊಳ್ಳುವನು; ಕುಯುಕ್ತಿಯುಳ್ಳವನನ್ನು ಖಂಡಿಸುವನು.
3 ಕೆಡುಕರಿಗೆ ಎಂದಿಗೂ ಕ್ಷೇಮವಿಲ್ಲ; ಒಳ್ಳೆಯವರಾದರೋ ಸಮಾಧಾನದಿಂದಿರುವರು.
4 ಗುಣವಂತಳಾದ ಹೆಂಡತಿಯು ಗಂಡನಿಗೆ ಕಿರೀಟದಂತಿರುವಳು; ಗಂಡನನ್ನು ನಾಚಿಕೆಗೆ ಗುರಿಮಾಡುವ ಹೆಂಡತಿಯು ಗಂಡನ ಎಲುಬಿಗೆ ಕ್ಷಯದಂತಿರುವಳು.
5 ಶಿಷ್ಟರ ಆಲೋಚನೆ ನ್ಯಾಯವಾಗಿವೆ. ದುಷ್ಟರ ಉಪದೇಶ ಮೋಸಕರ.
6 ಕೆಡುಕರು ತಮ್ಮ ಮಾತುಗಳಿಂದ ಬೇರೆಯವರನ್ನು ನೋಯಿಸುತ್ತಾರೆ. ಒಳ್ಳೆಯವರ ಮಾತುಗಳಾದರೋ ಜನರನ್ನು ಅಪಾಯದಿಂದ ರಕ್ಷಿಸುತ್ತವೆ.
7 ದುರ್ಜನರು ಸರ್ವನಾಶವಾಗುವರು; ಆದರೆ ಸಜ್ಜನರ ಕುಟುಂಬವು ಸ್ಥಿರವಾಗಿರುವುದು.
8 ಜನರು ಜ್ಞಾನಿಗಳನ್ನು ಹೊಗಳುವರು; ಮೂಢನನ್ನು ಕಡೆಗಣಿಸುವರು.
9 ಪ್ರಮುಖನಂತೆ ವರ್ತಿಸುತ್ತಾ ಆಹಾರವಿಲ್ಲದಿರುವುದಕ್ಕಿಂತ ಪ್ರಮುಖನಲ್ಲದವನಾಗಿದ್ದು ಸೇವಕನಂತೆ ಇರುವುದು ಮೇಲು.
10 ಶಿಷ್ಟನು ತನ್ನ ಪಶುಗಳನ್ನು ನೋಡಿಕೊಳ್ಳುತ್ತಾನೆ. ಆದರೆ ದುಷ್ಟನ ವಾತ್ಸಲ್ಯವು ಕ್ರೂರವಾಗಿದೆ.
11 ತನ್ನ ಜಮೀನಿನಲ್ಲಿ ದುಡಿಯುವ ರೈತನಿಗೆ ಸಾಕಷ್ಟು ಆಹಾರವಿರುವುದು. ಆದರೆ ಮೂಢನು ಪ್ರಯೋಜನವಿಲ್ಲದ ಸಂಗತಿಗಳಲ್ಲಿ ತನ್ನ ಸಮಯವನ್ನು ಹಾಳುಮಾಡುವನು.
12 ಕಳವು ಮಾಲುಗಳಲ್ಲಿ ದುಷ್ಟರಿಗೆ ಆಸೆ. ಒಳ್ಳೆಯವರಿಗಾದರೋ ತಮ್ಮಲ್ಲಿರುವುದನ್ನು ಬೇರೆಯವರಿಗೆ ಕೊಡಬೇಕೆಂಬ ಆಸೆ.
13 ಕೆಡುಕನು ತನ್ನ ಕೆಟ್ಟಮಾತುಗಳಿಂದಲೇ ಸಿಕ್ಕಿಕೊಳ್ಳುವನು. ಆದರೆ ಒಳ್ಳೆಯವನು ಇಕ್ಕಟ್ಟುಗಳಿಂದ ಪಾರಾಗುವನು.
14 ಮನುಷ್ಯನು ತನ್ನ ಒಳ್ಳೆಯ ಮಾತುಗಳಿಗೆ ಪ್ರತಿಫಲವನ್ನು ಪಡೆಯುವನು. ಅದೇ ರೀತಿಯಲ್ಲಿ, ಅವನ ಕೆಲಸವು ಅವನಿಗೆ ಲಾಭವನ್ನು ಕೊಡುವುದು.
15 ಮೂಢನು ತನ್ನ ದಾರಿಯನ್ನೇ ಒಳ್ಳೆಯದೆಂದು ಭಾವಿಸಿಕೊಂಡಿರುತ್ತಾನೆ. ಜ್ಞಾನಿಯಾದರೋ ಉಪದೇಶಕ್ಕೆ ಕಿವಿಗೊಡುತ್ತಾನೆ.
16 ಮೂಢನು ತನ್ನ ಸಿಟ್ಟನ್ನು ತಟ್ಟನೆ ತೋರಿಸುವನು. ಆದರೆ ಜ್ಞಾನಿಯು ಅವಮಾನವನ್ನು ಕಡೆಗಣಿಸುವನು.
17 ಸತ್ಯಸಾಕ್ಷಿಯು ನ್ಯಾಯವನ್ನು ಪ್ರತಿಪಾದಿಸುವನು. ಆದರೆ ಸುಳ್ಳುಸಾಕ್ಷಿಯು ಅನ್ಯಾಯವನ್ನು ಪ್ರಕಟಿಸುವನು.
18 ದುಡುಕಿದ ಮಾತು ಖಡ್ಗದಂತೆ ನೋವು ಮಾಡುತ್ತದೆ; ಜ್ಞಾನಿಯ ಮಾತು ಗುಣಪಡಿಸುತ್ತದೆ.
19 ಸುಳ್ಳುತುಟಿಗಳು ಕ್ಷಣಿಕ. ಆದರೆ ಸತ್ಯವು ಶಾಶ್ವತ.
20 ಕೆಡುಕರು ಯಾವಾಗಲೂ ಕೇಡು ಮಾಡಲಿಚ್ಛಿಸುವರು. ಸಮಾಧಾನವನ್ನು ಅಪೇಕ್ಷಿಸುವವರು ಸಂತೋಷವಾಗಿರುವರು.
21 ಸಜ್ಜನರು ಯೆಹೋವನಿಂದ ಕ್ಷೇಮವಾಗಿರುವರು. ಆದರೆ ದುರ್ಜನರಿಗೆ ಅನೇಕ ತೊಂದರೆಗಳಿರುತ್ತವೆ.
22 ಸುಳ್ಳುಗಾರರು ಯೆಹೋವನಿಗೆ ಅಸಹ್ಯ. ಆದರೆ ಸತ್ಯವಂತರು ಆತನಿಗೆ ಇಷ್ಟಕರ.
23 ಜಾಣನು ತನ್ನ ಜ್ಞಾನದ ಬಗ್ಗೆ ಜಂಬಕೊಚ್ಚಿಕೊಳ್ಳುವುದಿಲ್ಲ. ಆದರೆ ಮೂಢನು ದುಡುಕಿ ಮಾತಾಡಿ ತಾನು ಮೂಢನೆಂದು ತೋರಿಸಿಕೊಳ್ಳುತ್ತಾನೆ.
24 ಕಷ್ಟಪಟ್ಟು ಕೆಲಸ ಮಾಡುವವನು ಅಧಿಪತಿಯಾಗುವನು. ಸೋಮಾರಿಯನ್ನು ಗುಲಾಮನನ್ನಾಗಿ ಮಾಡಲಾಗುವುದು.
25 ಚಿಂತೆಯು ಮನುಷ್ಯನ ಸಂತೋಷವನ್ನು ತೆಗೆದುಹಾಕುತ್ತದೆ; ಕನಿಕರದ ಮಾತು ಮನುಷ್ಯನನ್ನು ಸಂತೋಷಗೊಳಿಸುತ್ತದೆ.
26 ಸನ್ಮಾರ್ಗಿಯು ತನ್ನ ನೆರೆಯವನಿಗೆ ಒಳ್ಳೆಯ ಮಾರ್ಗವನ್ನು ತೋರಿಸುತ್ತಾನೆ; ದುರ್ಮಾರ್ಗಿಯು ಬೇರೆಯವರನ್ನು ದಾರಿ ತಪ್ಪಿಸುವನು.
27 ಸೋಮಾರಿಯಾದ ಬೇಟೆಗಾರನು ಬೇಟೆಯಾಡುವುದಿಲ್ಲ. ಐಶ್ವರ್ಯವು ಕಷ್ಟಪಟ್ಟು ಕೆಲಸ ಮಾಡುವವನಿಗೆ ಬರುತ್ತದೆ.
28 ನೀತಿಯ ಮಾರ್ಗದಲ್ಲಿ ಜೀವವಿದೆ. ಆದರೆ ಮರಣಕ್ಕೆ ನಡೆಸುವ ಮತ್ತೊಂದು ಮಾರ್ಗವಿದೆ.
ಮಡಕೆಗಳಲ್ಲಿರುವ ಆತ್ಮಿಕ ಭಂಡಾರ
4 ದೇವರು ತನ್ನ ಕೃಪೆಯಿಂದ ಈ ಸೇವೆಯನ್ನು ನಮಗೆ ಒಪ್ಪಿಸಿದ್ದಾನೆ. ಆದ್ದರಿಂದ ನಾವು ಧೈರ್ಯಗೆಡುವುದಿಲ್ಲ. 2 ರಹಸ್ಯವಾದ ಮತ್ತು ನಾಚಿಕೆಕರವಾದ ಮಾರ್ಗಗಳಿಗೆ ನಾವು ವಿಮುಖರಾಗಿದ್ದೇವೆ. ನಾವು ಕುತಂತ್ರವನ್ನು ಉಪಯೋಗಿಸುವುದೂ ಇಲ್ಲ, ದೇವರ ಉಪದೇಶವನ್ನು ಬದಲಾಯಿಸುವುದೂ ಇಲ್ಲ. ನಾವು ಸತ್ಯವನ್ನು ಸ್ಪಷ್ಟವಾಗಿ ಬೋಧಿಸುತ್ತೇವೆ. ನಾವು ಯಾರೆಂಬುದನ್ನು ಜನರಿಗೆ ಈ ರೀತಿ ತೋರಿಸಿಕೊಡುತ್ತೇವೆ. ಹೀಗೆ ನಾವು ದೇವರ ಸಮ್ಮುಖದಲ್ಲಿ ಎಂಥಾ ಜನರಾಗಿದ್ದೇವೆ ಎಂಬುದನ್ನು ಅವರು ತಮ್ಮ ಹೃದಯಗಳಲ್ಲಿ ತಿಳಿದುಕೊಳ್ಳಬಲ್ಲರು. 3 ನಾವು ಬೋಧಿಸುವ ಸುವಾರ್ತೆಯು ಮರೆಯಾಗಿರಬಹುದು. ಆದರೆ ನಾಶನದ ಮಾರ್ಗದಲ್ಲಿರುವವರಿಗೆ ಮಾತ್ರ ಅದು ಮರೆಯಾಗಿದೆ. 4 ಈ ಲೋಕದ ಅಧಿಪತಿಯು (ಸೈತಾನನು) ನಂಬದವರ ಮನಸ್ಸುಗಳನ್ನು ಕುರುಡುಗೊಳಿಸಿದ್ದಾನೆ. ಕ್ರಿಸ್ತನ ಮಹಿಮೆಯ ವಿಷಯವಾದ ಸುವಾರ್ತೆಯ ಬೆಳಕನ್ನು (ಸತ್ಯವನ್ನು) ಅವರು ಕಾಣಲಾರರು. ಕ್ರಿಸ್ತನೊಬ್ಬನೇ ದೇವರಿಗೆ ಪ್ರತಿರೂಪವಾಗಿದ್ದಾನೆ. 5 ನಾವು ನಮ್ಮ ಬಗ್ಗೆ ಬೋಧಿಸುವುದಿಲ್ಲ. ಆದರೆ ಯೇಸು ಕ್ರಿಸ್ತನೇ ಪ್ರಭುವೆಂದು ಮತ್ತು ಯೇಸುವಿಗೋಸ್ಕರ ನಿಮ್ಮ ಸೇವಕರಾಗಿದ್ದೇವೆಂದು ಬೋಧಿಸುತ್ತೇವೆ. 6 “ಬೆಳಕು ಕತ್ತಲೆಯೊಳಗಿಂದ ಪ್ರಕಾಶಿಸಲಿ!” ಎಂದು ದೇವರು ಒಮ್ಮೆ ಹೇಳಿದ್ದಾನೆ. ಈ ದೇವರೇ ನಮ್ಮ ಹೃದಯಗಳಲ್ಲಿ ತನ್ನ ಬೆಳಕನ್ನು ಬೆಳಗಿಸಿದ್ದಾನೆ. ಕ್ರಿಸ್ತನ ಮುಖದಲ್ಲಿರುವ ದೇವರ ಮಹಿಮೆಯನ್ನು ನಮಗೆ ತಿಳಿಯಪಡಿಸುವುದರ ಮೂಲಕ ಆತನು ನಮಗೆ ಬೆಳಕನ್ನು ಕೊಟ್ಟಿದ್ದಾನೆ.
7 ನಮಗೆ ಈ ನಿಕ್ಷೇಪವು ದೇವರಿಂದ ದೊರೆತಿದೆ. ನಾವಾದರೋ ನಿಕ್ಷೇಪವನ್ನು ತುಂಬಿ ಕೊಂಡಿರುವ ಕೇವಲ ಮಡಕೆಗಳಂತಿದ್ದೇವೆ. ಈ ಮಹಾಶಕ್ತಿಯು ಬಂದದ್ದು ದೇವರಿಂದಲೇ ಹೊರತು ನಮ್ಮಿಂದಲ್ಲವೆಂಬುದನ್ನು ಇದು ತೋರಿಸುತ್ತದೆ. 8 ನಮ್ಮ ಸುತ್ತಮುತ್ತಲೆಲ್ಲಾ ಇಕ್ಕಟ್ಟುಗಳಿವೆ, ಆದರೆ ಸೋತುಹೋಗಿಲ್ಲ. ಅನೇಕಸಲ, ಏನು ಮಾಡಬೇಕೋ ನಮಗೆ ತಿಳಿಯದು, ಆದರೂ ನಾವು ಧೈರ್ಯಗೆಡುವುದಿಲ್ಲ. 9 ನಾವು ಹಿಂಸೆಗೆ ಗುರಿಯಾದೆವು, ಆದರೆ ದೇವರು ನಮ್ಮನ್ನು ತೊರೆದುಬಿಡಲಿಲ್ಲ. ಕೆಲವು ಸಲ ನಮಗೆ ನೋವಾಯಿತು, ಆದರೂ ನಾಶವಾಗಲಿಲ್ಲ. 10 ನಮ್ಮ ದೇಹಗಳಲ್ಲಿ ಯೇಸುವಿನ ಜೀವವು ತೋರಿಬರಲೆಂದು ಆತನ ಮರಣಾವಸ್ಥೆಯನ್ನು ಅನುಭವಿಸುತ್ತಿದ್ದೇವೆ. 11 ನಾವು ಜೀವಂತವಾಗಿದ್ದರೂ ಯೇಸುವಿಗೋಸ್ಕರ ಯಾವಾಗಲೂ ಮರಣದ ಅಪಾಯದಲ್ಲಿದ್ದೇವೆ. ಸತ್ತುಹೋಗುವ ನಮ್ಮ ದೇಹಗಳಲ್ಲಿ ಆತನ ಜೀವವು ಕಾಣಬರಲೆಂದು ಇದು ನಮಗೆ ಸಂಭವಿಸುತ್ತದೆ. 12 ಆದ್ದರಿಂದ ಮರಣವು ನಮ್ಮಲ್ಲಿ ಕಾರ್ಯಮಾಡುತ್ತಿದೆ, ಆದರೆ ನಿಮ್ಮಲ್ಲಿ ಜೀವವು ಕಾರ್ಯಮಾಡುತ್ತಿದೆ.
13 “ನಾನು ನಂಬಿದ್ದರಿಂದಲೇ ಮಾತಾಡಿದೆನು.” ಎಂದು ಪವಿತ್ರ ಗ್ರಂಥದಲ್ಲಿ ಬರೆದಿದೆ. ನಮ್ಮ ನಂಬಿಕೆಯು ಸಹ ಅದೇ ರೀತಿಯಲ್ಲಿದೆ. ನಾವು ನಂಬುವುದರಿಂದಲೇ ಮಾತಾಡುತ್ತೇವೆ. 14 ಪ್ರಭುವಾದ ಯೇಸುವನ್ನು ಸತ್ತವರೊಳಗಿಂದ ಎಬ್ಬಿಸಿದ ದೇವರು ನಮ್ಮನ್ನು ಸಹ ಕ್ರಿಸ್ತನೊಂದಿಗೆ ಎಬ್ಬಿಸುತ್ತಾನೆ ಎಂಬುದು ನಮಗೆ ಗೊತ್ತಿದೆ. ದೇವರು ನಮ್ಮನ್ನು ನಿಮ್ಮ ಜೊತೆಯಲ್ಲಿ ತನ್ನ ಮುಂದೆ ನಿಲ್ಲಿಸುವನು. 15 ಇವುಗಳೆಲ್ಲ ನಿಮಗೋಸ್ಕರವಾಗಿಯೇ. ಹೀಗೆ ದೇವರ ಕೃಪೆಯು ಹೆಚ್ಚುಹೆಚ್ಚು ಜನರಿಗೆ ಕೊಡಲ್ಪಡುವುದು. ಇದರಿಂದಾಗಿ, ಹೆಚ್ಚುಹೆಚ್ಚು ಜನರು ದೇವರ ಮಹಿಮೆಗಾಗಿ ಕೃತಜ್ಞತಾಸುತ್ತಿ ಸಲ್ಲಿಸುವರು.
ನಂಬಿಕೆಯ ಜೀವನ
16 ಆದಕಾರಣವೇ, ನಾವೆಂದಿಗೂ ಬಲಹೀನರಾಗುವುದಿಲ್ಲ. ನಮ್ಮ ಭೌತಿಕ ದೇಹಕ್ಕೆ ವಯಸ್ಸಾಗುತ್ತಿದೆ ಮತ್ತು ಅದು ಬಲಹೀನವಾಗುತ್ತಿದೆ. ಆದರೆ ನಮ್ಮ ಆಂತರ್ಯವು ಪ್ರತಿದಿನ ಹೊಸದಾಗುತ್ತಿದೆ. 17 ಸ್ವಲ್ಪಕಾಲದವರೆಗೆ ನಮಗೆ ಚಿಕ್ಕಪುಟ್ಟ ಇಕ್ಕಟ್ಟುಗಳಿರುತ್ತವೆ. ಆದರೆ ನಿತ್ಯವಾದ ಮಹಿಮೆಯನ್ನು ಹೊಂದಿಕೊಳ್ಳಲು ಅವು ನಮಗೆ ಸಹಾಯಕವಾಗಿವೆ. ಆ ಮಹಿಮೆಯು ಇಂದಿನ ಇಕ್ಕಟ್ಟುಗಳಿಗಿಂತಲೂ ಮಹತ್ವವುಳ್ಳದ್ದಾಗಿದೆ. 18 ಆದ್ದರಿಂದ ನಮಗೆ ಕಾಣುವಂಥವುಗಳ ಬಗ್ಗೆ ಯೋಚಿಸದೆ ನಮಗೆ ಕಾಣದಿರುವಂಥವುಗಳ ಬಗ್ಗೆ ಯೋಚಿಸುತ್ತೇವೆ. ನಮಗೆ ಕಾಣುವಂಥವುಗಳು ಕೇವಲ ಸ್ವಲ್ಪಕಾಲ ಮಾತ್ರ ಇರುತ್ತವೆ. ಆದರೆ ನಮಗೆ ಕಾಣದಂಥವುಗಳು ಎಂದೆಂದಿಗೂ ಇರುತ್ತವೆ.
Kannada Holy Bible: Easy-to-Read Version. All rights reserved. © 1997 Bible League International