Print Page Options
Previous Prev Day Next DayNext

Old/New Testament

Each day includes a passage from both the Old Testament and New Testament.
Duration: 365 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 123-125

ದೇವಾಲಯಕ್ಕೆ ಹೋಗುವಾಗ ಹಾಡುವ ಗೀತೆ.

123 ಪರಲೋಕದಲ್ಲಿ ಸಿಂಹಾಸನಾರೂಢನಾಗಿರುವಾತನೇ,
    ನಿನ್ನ ಕಡೆಗೆ ಕಣ್ಣೆತ್ತಿ ನೋಡುತ್ತಾ ಪ್ರಾರ್ಥಿಸುವೆನು.
ಸೇವಕರು ತಮಗೆ ಬೇಕಾದವುಗಳಿಗಾಗಿ ತಮ್ಮ ಯಜಮಾನರನ್ನು ಅವಲಂಬಿಸಿಕೊಳ್ಳುವರು;
    ಸೇವಕಿಯರು ತಮ್ಮ ಯಜಮಾನಿಯರನ್ನು ಅವಲಂಬಿಸಿಕೊಳ್ಳುವರು.
ಅಂತೆಯೇ, ನಾವು ನಮ್ಮ ದೇವರಾದ ಯೆಹೋವನನ್ನು ಅವಲಂಬಿಸಿಕೊಳ್ಳುವೆವು.
    ಆತನ ಕರುಣೆಯನ್ನೇ ನಿರೀಕ್ಷಿಸುವೆವು.
ಯೆಹೋವನೇ, ನಮಗೆ ಕರುಣೆತೋರು,
    ಬಹುಕಾಲದಿಂದ ನಾವು ಅವಮಾನಿತರಾಗಿದ್ದೇವೆ.
ಗರ್ವಿಷ್ಠರೂ ಮೊಂಡರೂ
    ನಮ್ಮನ್ನು ಸಾಕಷ್ಟು ಗೇಲಿ ಮಾಡಿದ್ದಾರೆ.

ದೇವಾಲಯಕ್ಕೆ ಹೋಗುವಾಗ ಹಾಡುವ ಗೀತೆ. ರಚನೆಗಾರ: ದಾವೀದ.

124 ಯೆಹೋವನು ನಮ್ಮ ಕಡೆ ಇಲ್ಲದಿದ್ದಿದ್ದರೆ ನಮ್ಮ ಗತಿ ಏನಾಗುತ್ತಿತ್ತು?
    ಇಸ್ರೇಲರೇ, ನನಗೆ ಉತ್ತರಹೇಳಿ.
ವೈರಿಗಳು ನಮ್ಮ ಮೇಲೆ ಆಕ್ರಮಣ ಮಾಡಿದಾಗ
    ಯೆಹೋವನು ನಮ್ಮ ಕಡೆ ಇಲ್ಲದಿದ್ದಿದ್ದರೆ ನಮ್ಮ ಗತಿ ಏನಾಗುತ್ತಿತ್ತು?
ಶತ್ರುಗಳು ನಮ್ಮಮೇಲೆ ಕೋಪಗೊಂಡಾಗಲೆಲ್ಲಾ
    ನಮ್ಮನ್ನು ಜೀವಂತವಾಗಿ ನುಂಗಿಬಿಡುತ್ತಿದ್ದರು.
ಶತ್ರುಸೈನ್ಯಗಳು ನಮ್ಮನ್ನು ಕೊಚ್ಚಿಕೊಂಡು ಹೋಗುವ
    ಪ್ರವಾಹದಂತೆಯೂ ಮುಳುಗಿಸುವ ನದಿಯಂತೆಯೂ ಆಗಿರುತ್ತಿದ್ದರು.
ಆ ಗರ್ವಿಷ್ಠರು ನಮ್ಮ ಪಾಲಿಗೆ ಬಾಯಿಯವರೆಗೂ
    ಮೇಲೇರಿ ಮುಳುಗಿಸುವ ನೀರಿನಂತಾಗುತ್ತಿದ್ದರು.

ಯೆಹೋವನಿಗೆ ಸ್ತೋತ್ರವಾಗಲಿ!
    ನಮ್ಮ ಶತ್ರುಗಳು ನಮ್ಮನ್ನು ಹಿಡಿದು ಕೊಲ್ಲಲು ಆತನು ಅವಕಾಶ ಕೊಡಲಿಲ್ಲ.

ನಾವು ಬಲೆಯಿಂದ ತಪ್ಪಿಸಿಕೊಂಡ ಪಕ್ಷಿಯಂತಿದ್ದೇವೆ.
    ಬಲೆಯು ಹರಿದುಹೋದದ್ದರಿಂದ ನಾವು ತಪ್ಪಿಸಿಕೊಂಡೆವು.
ನಮಗೆ ಸಹಾಯವು ಯೆಹೋವನಿಂದಲೇ ಬಂದಿತು.
    ಭೂಮ್ಯಾಕಾಶಗಳನ್ನು ಸೃಷ್ಟಿಮಾಡಿದವನು ಆತನೇ.

ದೇವಾಲಯಕ್ಕೆ ಹೋಗುವಾಗ ಹಾಡುವ ಗೀತೆ.

125 ಯೆಹೋವನಲ್ಲಿ ಭರವಸವಿಟ್ಟಿರುವವರು ಚೀಯೋನ್ ಪರ್ವತದಂತಿರುವರು.
    ಅವರೆಂದಿಗೂ ಕದಲದೆ ಶಾಶ್ವತವಾಗಿರುವರು.
ಪರ್ವತಗಳು ಜೆರುಸಲೇಮಿನ ಸುತ್ತಲೂ ಇವೆ.
    ಯೆಹೋವನು ತನ್ನ ಜನರ ಸುತ್ತಲೂ ಇರುವನು.
    ಆತನು ತನ್ನ ಜನರನ್ನು ಸದಾಕಾಲ ಸಂರಕ್ಷಿಸುವನು.
ದುಷ್ಟರು ನೀತಿವಂತರನ್ನು ಶಾಶ್ವತವಾಗಿ ಆಳುವುದಿಲ್ಲ.
    ಅವರು ಶಾಶ್ವತವಾಗಿ ಆಳಿದರೆ ನೀತಿವಂತರೂ ದುಷ್ಕೃತ್ಯಗಳನ್ನು ಮಾಡತೊಡಗಬಹುದು.

ಯೆಹೋವನೇ, ನೀತಿವಂತರಿಗೂ
    ಯಥಾರ್ಥವಂತರಿಗೂ ಉಪಕಾರಮಾಡು.
ದುಷ್ಟರು ಕುತಂತ್ರಗಳನ್ನು ಮಾಡುವರು.
    ಯೆಹೋವನು ಅವರನ್ನು ದಂಡಿಸುವನು.

ಇಸ್ರೇಲಿನಲ್ಲಿ ಶಾಂತಿ ನೆಲೆಸಿರಲಿ.

1 ಕೊರಿಂಥದವರಿಗೆ 10:1-18

ಯೆಹೂದ್ಯರಂತಿರಬೇಡಿ

10 ಸಹೋದರ ಸಹೋದರಿಯರೇ, ಮೋಶೆಯನ್ನು ಅನುಸರಿಸಿದ ನಮ್ಮ ಪಿತೃಗಳಿಗೆ ಏನು ಸಂಭವಿಸಿತೆಂಬುದನ್ನು ನೀವು ತಿಳಿದುಕೊಳ್ಳಬೇಕೆಂದು ನಾನು ಅಪೇಕ್ಷಿಸುತ್ತೇನೆ. ಅವರೆಲ್ಲರೂ ಮೋಡದ ಕೆಳಗಿದ್ದರು; ಸಮುದ್ರದ ಮೂಲಕ ನಡೆದುಕೊಂಡು ಹೋದರು; ಮೋಶೆಯ ಶಿಷ್ಯರಾಗುವುದಕ್ಕಾಗಿ ಮೋಡದಲ್ಲಿಯೂ ಸಮುದ್ರದಲ್ಲಿಯೂ ದೀಕ್ಷಾಸ್ನಾನ ಹೊಂದಿದರು; ಒಂದೇ ಆತ್ಮಿಕ ಆಹಾರವನ್ನು ಊಟ ಮಾಡಿದರು; ತಮ್ಮೊಂದಿಗಿದ್ದ ಆತ್ಮಿಕ ಬಂಡೆಯ ನೀರನ್ನು ಕುಡಿದರು. ಆ ಬಂಡೆಯೇ ಕ್ರಿಸ್ತನು. ಆದರೂ ಅವರಲ್ಲಿ ಅನೇಕರು ದೇವರ ಮೆಚ್ಚುಗೆಗೆ ಪಾತ್ರರಾಗಲಿಲ್ಲ. ಅವರು ಮರುಭೂಮಿಯಲ್ಲಿ ಕೊಲ್ಲಲ್ಪಟ್ಟರು.

ಅವರು ಮಾಡಿದಂತೆ ನಾವು ಕೆಟ್ಟವುಗಳನ್ನು ಆಶಿಸಬಾರದೆಂಬುದಕ್ಕೆ ಈ ಘಟನೆಗಳು ನಮಗೆ ಎಚ್ಚರಿಕೆ ನೀಡುವ ನಿದರ್ಶನಗಳಾಗಿವೆ. ಅವರಲ್ಲಿ ಕೆಲವರು ಮಾಡಿದಂತೆ ನೀವು ವಿಗ್ರಹಗಳನ್ನು ಪೂಜಿಸಬೇಡಿ. “ಜನರು ತಿನ್ನಲು, ಕುಡಿಯಲು ಕುಳಿತುಕೊಂಡರು; ನೃತ್ಯ ಮಾಡಲು ಎದ್ದುನಿಂತರು”(A) ಎಂದು ಪವಿತ್ರ ಗ್ರಂಥದಲ್ಲಿ ಬರೆದಿದೆ. ಅವರಲ್ಲಿ ಕೆಲವರು ಮಾಡಿದಂತೆ ನಾವು ಲೈಂಗಿಕ ಪಾಪಗಳನ್ನು ಮಾಡಬಾರದು. ಅವರಲ್ಲಿ ಇಪ್ಪತ್ತಮೂರು ಸಾವಿರ ಮಂದಿ ತಮ್ಮ ಆ ಪಾಪದ ಫಲವಾಗಿ ಒಂದೇ ದಿನದಲ್ಲಿ ಸತ್ತುಹೋದರು. ಅವರಲ್ಲಿ ಕೆಲವರು ಮಾಡಿದಂತೆ ನಾವು ಪ್ರಭುವನ್ನು ಪರೀಕ್ಷಿಸಬಾರದು. ಅದರ ಫಲವಾಗಿ ಅವರು ಹಾವುಗಳಿಂದ ಮರಣಹೊಂದಿದರು. 10 ಅವರಲ್ಲಿ ಕೆಲವರು ಮಾಡಿದಂತೆ ಗುಣುಗುಟ್ಟಬೇಡಿ. ಆ ಜನರು ಸಂಹಾರಕ ದೂತನಿಂದ ಕೊಲ್ಲಲ್ಪಟ್ಟರು.

11 ಆ ಜನರಿಗೆ ಸಂಭವಿಸಿದ ಸಂಗತಿಗಳು ನಮಗೆ ನಿದರ್ಶನಗಳಾಗಿವೆ. ನಮ್ಮನ್ನು ಎಚ್ಚರಿಸುವುದಕ್ಕಾಗಿ ಆ ಸಂಗತಿಗಳನ್ನು ಬರೆದಿಡಲಾಗಿದೆ. ಈಗ ನಾವು ಯುಗದ ಅಂತಿಮ ಕಾಲದಲ್ಲಿ ಜೀವಿಸುತ್ತಿದ್ದೇವೆ. 12 ಆದ್ದರಿಂದ ತಾನು ದೃಢವಾಗಿ ನಿಂತಿದ್ದೇನೆ ಎಂದು ಯೋಚಿಸುವ ವ್ಯಕ್ತಿಯು ಬೀಳದಂತೆ ಎಚ್ಚರಿಕೆಯಿಂದಿರಬೇಕು. 13 ಎಲ್ಲಾ ಜನರಿಗೆ ಬರುವಂತೆ ನಿಮಗೂ ಶೋಧನೆಗಳು ಬರುತ್ತವೆ. ಆದರೆ ದೇವರು ನಂಬಿಗಸ್ತನಾಗಿದ್ದಾನೆ. ನೀವು ಸಹಿಸಿಕೊಳ್ಳಲಾರದ ಶೋಧನೆಯನ್ನು ಆತನು ನಿಮಗೆ ಬರಗೊಡಿಸುವುದಿಲ್ಲ. ಶೋಧನೆಗಳು ಬಂದಾಗ, ಅವುಗಳಿಂದ ಪಾರಾಗುವ ಮಾರ್ಗವನ್ನು ಸಹ ದೇವರು ನಿಮಗೆ ಒದಗಿಸುತ್ತಾನೆ. ಆಗ ನೀವು ಅದನ್ನು ಸಹಿಸಿಕೊಳ್ಳುವುದಕ್ಕೆ ಶಕ್ತರಾಗುವಿರಿ.

14 ಆದ್ದರಿಂದ, ನನ್ನ ಪ್ರಿಯ ಸ್ನೇಹಿತರೇ, ವಿಗ್ರಹಗಳ ಪೂಜೆಯ ಬಗ್ಗೆ ಯೋಚಿಸಲೂಬೇಡಿ. 15 ನೀವು ಬುದ್ಧಿವಂತರೆಂದು ನಾನು ನಿಮ್ಮೊಂದಿಗೆ ಮಾತಾಡುತ್ತಿದ್ದೇನೆ. ನಾನು ಹೇಳುವುದನ್ನು ಸ್ವತಃ ನೀವೇ ವಿಚಾರಣೆ ಮಾಡಿ. 16 ನಾವು ದ್ರಾಕ್ಷಾರಸದ ಪಾತ್ರೆಗಾಗಿ ದೇವರಿಗೆ ಸ್ತೋತ್ರ ಸಲ್ಲಿಸಿ ಕುಡಿಯುವಾಗ ಕ್ರಿಸ್ತನ ರಕ್ತದಲ್ಲಿ ಪಾಲುಗಾರರಾಗಲಿಲ್ಲವೇ? ನಾವು ರೊಟ್ಟಿಯನ್ನು ಮುರಿದು ತಿನ್ನುವಾಗ ಕ್ರಿಸ್ತನ ದೇಹದಲ್ಲಿ ಪಾಲುಗಾರರಾಗಲಿಲ್ಲವೇ? 17 ರೊಟ್ಟಿಯು ಒಂದೇ. ಆದ್ದರಿಂದ ನಮ್ಮಲ್ಲಿ ಅನೇಕರಿದ್ದರೂ ನಾವು ಒಂದೇ ದೇಹವಾಗಿದ್ದೇವೆ. ಯಾಕೆಂದರೆ ನಾವೆಲ್ಲಾ ಆ ಒಂದೇ ರೊಟ್ಟಿಯಲ್ಲಿ ಪಾಲು ತೆಗೆದುಕೊಳ್ಳುತ್ತೇವೆ.

18 ಇಸ್ರೇಲ್ ಜನರ ಬಗ್ಗೆ ಯೋಚಿಸಿ. ಯಜ್ಞವಾಗಿ ಅರ್ಪಿತವಾದುದನ್ನು ತಿನ್ನುವ ಆ ಜನರು ಯಜ್ಞವೇದಿಕೆಯಲ್ಲಿ ಪಾಲುಗಾರರಾಗಿಲ್ಲವೇ?

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International