Old/New Testament
119 ಯೆಹೋವನ ಧರ್ಮಶಾಸ್ತ್ರವನ್ನು ಅನುಸರಿಸುತ್ತಾ
ಪವಿತ್ರರಾಗಿ ಜೀವಿಸುವವರು ಧನ್ಯರಾಗಿದ್ದಾರೆ.
2 ಆತನ ಒಡಂಬಡಿಕೆಗೆ ಸಂಪೂರ್ಣಹೃದಯದಿಂದ
ವಿಧೇಯರಾಗುವವರು ಧನ್ಯರು.
3 ಅವರು ಕೆಟ್ಟದ್ದನ್ನು ಮಾಡದೆ
ಆತನಿಗೆ ವಿಧೇಯರಾಗಿರುವರು.
4 ಯೆಹೋವನೇ, ನಮಗೆ ಆಜ್ಞೆಗಳನ್ನು ಕೊಟ್ಟವನೂ ನೀನೇ.
ಅವುಗಳಿಗೆ ಸಂಪೂರ್ಣವಾಗಿ ವಿಧೇಯರಾಗಬೇಕೆಂದು ನಮಗೆ ಹೇಳಿದವನೂ ನೀನೇ.
5 ನಿನ್ನ ಕಟ್ಟಳೆಗಳಿಗೆ
ನಾನು ಯಾವಾಗಲೂ ವಿಧೇಯನಾಗಿದ್ದರೆ,
6 ನಿನ್ನ ಆಜ್ಞೆಗಳನ್ನು ಕಲಿಯುವಾಗ
ನನಗೆ ನಾಚಿಕೆಯಾಗದು.
7 ನಾನು ನಿನ್ನ ನ್ಯಾಯವನ್ನೂ
ನೀತಿಯನ್ನೂ ಕಲಿತಂತೆಲ್ಲಾ ನಿನ್ನನ್ನು ಕೊಂಡಾಡುವೆನು.
8 ನಾನು ನಿನ್ನ ಕಟ್ಟಳೆಗಳಿಗೆ ವಿಧೇಯನಾಗಿದ್ದೇನೆ.
ದಯವಿಟ್ಟು ನನ್ನನ್ನು ಕೈಬಿಡಬೇಡ!
9 ಯೌವನಸ್ಥನು ಪವಿತ್ರನಾಗಿ ಜೀವಿಸುವುದು ಯಾವುದರಿಂದ?
ನಿನ್ನ ಆಜ್ಞೆಗಳಿಗೆ ವಿಧೇಯನಾಗುವುದರಿಂದಲೇ.
10 ನಾನು ಪೂರ್ಣಹೃದಯದಿಂದ ದೇವರ ಸೇವೆಮಾಡುವೆ;
ದೇವರೇ, ನಿನ್ನ ಆಜ್ಞೆಗಳಿಗೆ ವಿಧೇಯನಾಗಲು ನನಗೆ ಸಹಾಯಮಾಡು.
11 ನಾನು ನಿನಗೆ ವಿರೋಧವಾಗಿ ಪಾಪಮಾಡದಂತೆ
ನಿನ್ನ ಉಪದೇಶಗಳನ್ನು ಹೃದಯದಲ್ಲಿ ಇಟ್ಟುಕೊಂಡಿದ್ದೇನೆ.
12 ಯೆಹೋವನೇ, ನಿನಗೆ ಸ್ತೋತ್ರವಾಗಲಿ.
ನಿನ್ನ ಕಟ್ಟಳೆಗಳನ್ನು ನನಗೆ ಉಪದೇಶಿಸು.
13 ನನ್ನ ತುಟಿಗಳು
ನಿನ್ನ ಜ್ಞಾನದ ನಿರ್ಧಾರಗಳ ಕುರಿತು ವರ್ಣಿಸುತ್ತವೆ.
14 ಸಕಲ ಸಂಪತ್ತಿನಲ್ಲಿ ಹೇಗೋ
ಹಾಗೆಯೇ ನಿನ್ನ ಒಡಂಬಡಿಕೆಯನ್ನು ಅಭ್ಯಾಸ ಮಾಡುವುದರಲ್ಲಿ ಆನಂದಿಸುವೆನು.
15 ನಾನು ನಿನ್ನ ನಿಯಮಗಳನ್ನು ಚರ್ಚಿಸುವೆನು
ನಿನ್ನ ಜೀವಮಾರ್ಗವನ್ನು ಅನುಸರಿಸುವೆನು.
16 ನಾನು ನಿನ್ನ ಕಟ್ಟಳೆಗಳಲ್ಲಿ ಆನಂದಿಸುವೆನು,
ನಿನ್ನ ಮಾತುಗಳನ್ನು ಮರೆಯುವುದಿಲ್ಲ.
17 ನಿನ್ನ ಸೇವಕನಾದ ನನಗೆ ದಯೆತೋರು.
ಆಗ ನಾನು ಜೀವದಿಂದಿದ್ದು ನಿನ್ನ ಆಜ್ಞೆಗಳಿಗೆ ವಿಧೇಯನಾಗುವೆನು.
18 ನನ್ನ ಕಣ್ಣುಗಳನ್ನು ತೆರೆ, ಆಗ ನಾನು ನಿನ್ನ ಉಪದೇಶಗಳನ್ನು ಕಾಣುವೆ;
ನೀನು ಮಾಡಿದ ಅದ್ಭುತಕಾರ್ಯಗಳ ಕುರಿತು ಓದುವೆ.
19 ನಾನು ಈ ದೇಶದಲ್ಲಿ ಅಪರಿಚಿತನಾಗಿದ್ದೇನೆ.
ನಿನ್ನ ಆಜ್ಞೆಗಳನ್ನು ನನಗೆ ಮರೆಮಾಡಬೇಡ.
20 ನಿನ್ನ ನಿರ್ಧಾರಗಳನ್ನು ತಿಳಿದುಕೊಳ್ಳಲು
ಯಾವಾಗಲೂ ನಾನು ಹಂಬಲಿಸುತ್ತಿದ್ದೇನೆ.
21 ನೀನು ಗರ್ವಿಷ್ಠರನ್ನು ಖಂಡಿಸುವೆ.
ನಿನ್ನ ಆಜ್ಞೆಗಳಿಗೆ ವಿಧೇಯರಾಗದ ಅವರು ಶಾಪಗ್ರಸ್ತರಾಗಿದ್ದಾರೆ.
22 ನನ್ನನ್ನು ಅವಮಾನಕ್ಕೂ ನಾಚಿಕೆಗೂ ಗುರಿಮಾಡಬೇಡ.
ನಾನು ನಿನ್ನ ಒಡಂಬಡಿಕೆಗೆ ವಿಧೇಯನಾಗಿದ್ದೇನೆ.
23 ನಾಯಕರುಗಳು ಸಹ ನನ್ನನ್ನು ದೂಷಿಸಿದರು.
ನಾನು ನಿನ್ನ ಸೇವಕ, ನಾನು ನಿನ್ನ ಕಟ್ಟಳೆಗಳನ್ನು ಧ್ಯಾನಿಸುವೆ.
24 ನಿನ್ನ ಒಡಂಬಡಿಕೆಯು ನನಗೆ ಉತ್ತಮ ಸ್ನೇಹಿತನಂತಿದೆ.
ಅದು ನನಗೆ ಬುದ್ಧಿಮಾತನ್ನು ಹೇಳಿಕೊಡುವುದು.
25 ನನಗೆ ಸಾವು ಸಮೀಪಿಸಿದೆ.
ಯೆಹೋವನೇ, ನಿನ್ನ ವಾಗ್ದಾನಕ್ಕನುಸಾರವಾಗಿ ನನ್ನನ್ನು ಉಜ್ಜೀವಿಸಮಾಡು.
26 ನನ್ನ ಜೀವಿತದ ಬಗ್ಗೆ ನಿನ್ನೊಂದಿಗೆ ಹೇಳಿಕೊಂಡೆ.
ಆಗ ನೀನು ನನಗೆ ಉತ್ತರಿಸಿದೆ.
ಈಗ ನಿನ್ನ ಕಟ್ಟಳೆಗಳನ್ನು ನನಗೆ ಉಪದೇಶಿಸು.
27 ನಿನ್ನ ಕಟ್ಟಳೆಗಳನ್ನು ಅರ್ಥಮಾಡಿಕೊಳ್ಳಲು ನನಗೆ ಸಹಾಯಮಾಡು.
ನೀನು ಮಾಡಿದ ಅದ್ಭುತಕಾರ್ಯಗಳನ್ನು ನನಗೆ ತಿಳಿಯಪಡಿಸು.
28 ನಾನು ದುಃಖಗೊಂಡಿರುವೆ ಮತ್ತು ಆಯಾಸಗೊಂಡಿರುವೆ.
ನೀನು ನನ್ನನ್ನು ಜ್ಞಾಪಿಸಿಕೊಂಡು ಮತ್ತೆ ಬಲಗೊಳಿಸು.
29 ಮೋಸಮಾರ್ಗದಲ್ಲಿ ಜೀವಿಸಲು ನನ್ನನ್ನು ಬಿಡಬೇಡ.
ನಿನ್ನ ಉಪದೇಶಗಳಿಂದ ಮಾರ್ಗದರ್ಶನ ಮಾಡು.
30 ನಾನು ಸತ್ಯಮಾರ್ಗವನ್ನು ಆರಿಸಿಕೊಂಡಿದ್ದೇನೆ.
ನಿನ್ನ ಜ್ಞಾನದ ನಿರ್ಧಾರಗಳನ್ನು ಎಚ್ಚರಿಕೆಯಿಂದ ತಿಳಿದುಕೊಳ್ಳುವೆನು.
31 ನಿನ್ನ ಒಡಂಬಡಿಕೆಗೆ ಅಂಟಿಕೊಂಡಿದ್ದೇನೆ.
ನನ್ನನ್ನು ನಿರಾಶೆಗೊಳಿಸಬೇಡ.
32 ನಿನ್ನ ಆಜ್ಞೆಗಳಿಗೆ ಹರ್ಷದಿಂದ ವಿಧೇಯನಾಗುವೆನು.
ನಿನ್ನ ಆಜ್ಞೆಗಳು ನನ್ನನ್ನು ಉಲ್ಲಾಸಗೊಳಿಸುತ್ತವೆ.
33 ಯೆಹೋವನೇ, ನಿನ್ನ ಕಟ್ಟಳೆಗಳನ್ನು ನನಗೆ ಉಪದೇಶಿಸು,
ಆಗ ಅವುಗಳನ್ನು ಅನುಸರಿಸುವೆನು.
34 ಅರ್ಥಮಾಡಿಕೊಳ್ಳಲು ನನಗೆ ಸಹಾಯಮಾಡು.
ಆಗ ನಿನ್ನ ಉಪದೇಶಗಳಿಗೆ ಸಂಪೂರ್ಣವಾಗಿ ವಿಧೇಯನಾಗುವೆನು.
35 ನಿನ್ನ ಆಜ್ಞೆಗಳ ಮಾರ್ಗದಲ್ಲಿ ನನ್ನನ್ನು ನಡೆಸು.
ಆ ಮಾರ್ಗವೇ ನನಗೆ ಬಹು ಇಷ್ಟ.
36 ಐಶ್ವರ್ಯದ ಮೇಲೆ ಮನಸ್ಸಿಡದೆ
ನಿನ್ನ ಒಡಂಬಡಿಕೆಯ ಬಗ್ಗೆ ಧ್ಯಾನಿಸಲು ನನಗೆ ಸಹಾಯಮಾಡು.
37 ನಿಷ್ಪ್ರಯೋಜಕವಾದವುಗಳ ಮೇಲೆ ದೃಷ್ಟಿಸದಂತೆ ನನ್ನನ್ನು ಕಾಪಾಡು.
ನಿನ್ನ ಮಾರ್ಗದಲ್ಲಿ ಜೀವಿಸಲು ನನಗೆ ಸಹಾಯಮಾಡು.
38 ನಿನ್ನ ಸೇವಕನಾದ ನನಗೆ ನೀನು ಮಾಡಿದ ವಾಗ್ದಾನಗಳನ್ನು ನೆರವೇರಿಸು.
ಆಗ ಜನರು ನಿನ್ನನ್ನು ಗೌರವಿಸುವರು.
39 ಅವಮಾನವನ್ನು ನನ್ನಿಂದ ತೊಲಗಿಸು. ನಾನು ಅದಕ್ಕೆ ಹೆದರಿಕೊಂಡಿದ್ದೇನೆ.
ನಿನ್ನ ಜ್ಞಾನದ ನಿರ್ಧಾರಗಳು ಒಳ್ಳೆಯವುಗಳಾಗಿವೆ.
40 ಇಗೋ, ನಿನ್ನ ಆಜ್ಞೆಗಳನ್ನು ಪ್ರೀತಿಸುವೆನು.
ನನಗೆ ಒಳ್ಳೆಯವನಾಗಿದ್ದು ನನ್ನನ್ನು ಉಜ್ಜೀವನಗೊಳಿಸು.
41 ಯೆಹೋವನೇ, ನಿನ್ನ ಶಾಶ್ವತ ಪ್ರೀತಿಯನ್ನು ನನಗೆ ತೋರಿಸು.
ನಿನ್ನ ವಾಗ್ದಾನದಂತೆ ನನ್ನನ್ನು ರಕ್ಷಿಸು.
42 ನನ್ನನ್ನು ಗೇಲಿಮಾಡುವ ಜನರಿಗೆ ಆಗ ನಾನು ಉತ್ತರ ಕೊಡುವೆನು.
ಯೆಹೋವನೇ, ನಿನ್ನ ಮಾತುಗಳಲ್ಲೇ ನಾನು ಭರವಸವಿಟ್ಟಿದ್ದೇನೆ.
43 ನಿನ್ನ ಸತ್ಯೋಪದೇಶಗಳನ್ನು ನಾನು ಯಾವಾಗಲೂ ಮಾತಾಡುವಂತಾಗಲಿ.
ನಿನ್ನ ಜ್ಞಾನದ ನಿರ್ಧಾರಗಳನ್ನೇ ನಾನು ಆಶ್ರಯಿಸಿಕೊಂಡಿದ್ದೇನೆ.
44 ನಿನ್ನ ಉಪದೇಶಗಳನ್ನು ಎಂದೆಂದಿಗೂ ಅನುಸರಿಸುವೆನು.
45 ಯಾಕೆಂದರೆ, ನಿನ್ನ ನಿಯಮಗಳಿಗೆ ವಿಧೇಯನಾಗಲು
ನಾನು ಬಹಳವಾಗಿ ಪ್ರಯತ್ನಿಸುತ್ತಿರುವುದರಿಂದ ಯಾರ ಹಂಗಿಲ್ಲದೆ ನಡೆಯುವೆನು.
46 ರಾಜರುಗಳ ಮುಂದೆಯೂ
ಯೆಹೋವನ ಒಡಂಬಡಿಕೆಯ ಕುರಿತು ಚರ್ಚಿಸುವೆನು, ನಾಚಿಕೆಪಡುವುದಿಲ್ಲ.
47 ನಿನ್ನ ಆಜ್ಞೆಗಳಲ್ಲಿ ಆನಂದಿಸುವೆನು;
ಅವು ನನಗೆ ಇಷ್ಟವಾಗಿವೆ.
48 ನಿನ್ನ ಆಜ್ಞೆಗಳನ್ನು ಕೊಂಡಾಡುವೆನು, ಅವುಗಳನ್ನು ಧ್ಯಾನಿಸುವೆನು.
ಅವು ನನಗೆ ಇಷ್ಟವಾಗಿವೆ.
49 ನಿನ್ನ ವಾಗ್ದಾನವನ್ನು ನನಗೋಸ್ಕರ ನೆನಪು ಮಾಡಿಕೋ.
ಆ ವಾಗ್ದಾನವೇ ನನ್ನ ನಿರೀಕ್ಷೆಯಾಗಿದೆ.
50 ಸಂಕಟಪಡುತ್ತಿರುವಾಗ ನೀನು ನನ್ನನ್ನು ಸಂತೈಸಿದೆ.
ನಿನ್ನ ನುಡಿಗಳು ನನ್ನನ್ನು ಉಜ್ಜೀವನಗೊಳಿಸಲಿ.
51 ಗರ್ವಿಷ್ಠರು ನನ್ನನ್ನು ಗೇಲಿಮಾಡುತ್ತಲೇ ಇದ್ದರು.
ನಾನಾದರೋ ನಿನ್ನ ಉಪದೇಶಗಳನ್ನು ಅನುಸರಿಸುತ್ತಲೇ ಇದ್ದೆನು.
52 ನಿನ್ನ ಜ್ಞಾನದ ನಿರ್ಧಾರಗಳನ್ನು ಯಾವಾಗಲೂ ಜ್ಞಾಪಿಸಿಕೊಳ್ಳುವೆ.
ಅವು ನನ್ನನ್ನು ಸಂತೈಸುತ್ತವೆ.
53 ನಿನ್ನ ಉಪದೇಶಗಳನ್ನು ಅನುಸರಿಸದ ದುಷ್ಟರನ್ನು
ನಾನು ಕಾಣುವಾಗ ಬಹುಕೋಪಗೊಳ್ಳುವೆ.
54 ನನಗಂತೂ, ನಿನ್ನ ಕಟ್ಟಳೆಗಳು
ನನ್ನ ಮನೆಯಲ್ಲಿ[a] ಹಾಡುಗಳಾಗಿವೆ.
55 ರಾತ್ರಿಯಲ್ಲಿ ನಾನು ನಿನ್ನ ಹೆಸರನ್ನೂ
ನಿನ್ನ ಉಪದೇಶಗಳನ್ನೂ ಜ್ಞಾಪಿಸಿಕೊಳ್ಳುವೆ.
56 ಯಾಕೆಂದರೆ, ನಾನು ನಿನ್ನ ನಿಯಮಗಳಿಗೆ ಎಚ್ಚರಿಕೆಯಿಂದ ವಿಧೇಯನಾಗುವೆನು.
57 ಯೆಹೋವನೇ, ನನ್ನ ಪಾಲು ನೀನೇ;
ನಿನ್ನ ಆಜ್ಞೆಗಳಿಗೆ ವಿಧೇಯನಾಗುವುದೇ ನನ್ನ ಕರ್ತವ್ಯವೆಂದು ನಿರ್ಧರಿಸಿರುವೆ.
58 ನಿನ್ನನ್ನೇ ಸಂಪೂರ್ಣವಾಗಿ ಆಶ್ರಯಿಸಿಕೊಂಡಿದ್ದೇನೆ.
ನಿನ್ನ ವಾಗ್ದಾನದಂತೆ ನನಗೆ ಕರುಣೆತೋರು.
59 ನನ್ನ ಜೀವಿತದ ಕುರಿತು ಎಚ್ಚರಿಕೆಯಿಂದ ಆಲೋಚಿಸಿ
ನಿನ್ನ ಕಟ್ಟಳೆಗಳನ್ನು ಅನುಸರಿಸಲು ನಿರ್ಧರಿಸಿದ್ದೇನೆ.
60 ನಿನ್ನ ಆಜ್ಞೆಗಳಿಗೆ ವಿಧೇಯನಾಗಲು
ತಡಮಾಡದೆ ಬೇಗನೆ ಹಿಂತಿರುಗಿದೆನು.
61 ಗುಂಪಾಗಿ ಸೇರಿದ್ದ ದುಷ್ಟರು ನನ್ನನ್ನು ದೂಷಿಸಿದರೂ
ನಿನ್ನ ಉಪದೇಶಗಳನ್ನು ನಾನು ಮರೆಯಲಿಲ್ಲ.
62 ನಿನ್ನ ಒಳ್ಳೆಯ ನಿರ್ಧಾರಗಳಿಗಾಗಿ ಕೃತಜ್ಞತೆ ಸಲ್ಲಿಸಲು
ನಾನು ಮಧ್ಯರಾತ್ರಿಯಲ್ಲಿ ಎದ್ದೇಳುವೆನು.
63 ನಿನ್ನಲ್ಲಿ ಭಯಭಕ್ತಿಯುಳ್ಳವರಿಗೆ ನಾನು ಸ್ನೇಹಿತನಾಗಿದ್ದೇನೆ.
ನಿನ್ನ ನಿಯಮಗಳಿಗೆ ವಿಧೇಯರಾಗುವ ಪ್ರತಿಯೊಬ್ಬರಿಗೂ ನಾನು ಸ್ನೇಹಿತನಾಗಿದ್ದೇನೆ.
64 ನಿನ್ನ ಶಾಶ್ವತ ಪ್ರೀತಿಯು ಭೂಮಿಯನ್ನು ತುಂಬಿಕೊಂಡಿದೆ.
ನಿನ್ನ ಕಟ್ಟಳೆಗಳನ್ನು ನನಗೆ ಉಪದೇಶಿಸು.
65 ಯೆಹೋವನೇ, ನಿನ್ನ ವಾಗ್ದಾನಕ್ಕೆ ತಕ್ಕಂತೆ
ನಿನ್ನ ಸೇವಕನಿಗೆ ಒಳ್ಳೆಯದನ್ನೇ ಮಾಡಿರುವೆ.
66 ಜ್ಞಾನದ ನಿರ್ಧಾರಗಳನ್ನು ಮಾಡಲು ನನಗೆ ಜ್ಞಾನವನ್ನು ಕೊಡು.
ನಾನು ನಿನ್ನ ಆಜ್ಞೆಗಳಲ್ಲಿ ಭರವಸವಿಟ್ಟಿರುವೆ.
67 ನಾನು ಸಂಕಟಪಡುವುದಕ್ಕಿಂತ ಮೊದಲು ಅನೇಕ ಕೆಟ್ಟಕಾರ್ಯಗಳನ್ನು ಮಾಡಿದೆ;
ಈಗಲಾದರೋ ನಾನು ನಿನ್ನ ಆಜ್ಞೆಗಳಿಗೆ ಎಚ್ಚರಿಕೆಯಿಂದ ವಿಧೇಯನಾಗುವೆನು.
68 ನೀನು ಒಳ್ಳೆಯವನೂ ಒಳ್ಳೆಯ ಕಾರ್ಯಗಳನ್ನು ಮಾಡುವವನೂ ಆಗಿರುವೆ.
ನಿನ್ನ ಕಟ್ಟಳೆಗಳನ್ನು ನನಗೆ ಉಪದೇಶಿಸು.
69 ಗರ್ವಿಷ್ಠರು ನನಗೆ ವಿರೋಧವಾಗಿ ಸುಳ್ಳು ಹೇಳಿದರು.
ನಾನಾದರೋ ನಿನ್ನ ಆಜ್ಞೆಗಳಿಗೆ ಪೂರ್ಣಹೃದಯದಿಂದ ವಿಧೇಯನಾಗಿರುವೆ.
70 ಅವರು ಬಹು ಮೂಢರು.
ನಾನಾದರೋ ನಿನ್ನ ಉಪದೇಶಗಳನ್ನು ಕಲಿಯುವುದರಲ್ಲಿ ಆನಂದಿಸುವೆ.
71 ನಿನ್ನ ಕಟ್ಟಳೆಗಳನ್ನು ಕಲಿಯಲು
ನಾನು ಪಟ್ಟ ಪ್ರಯಾಸವು ಒಳ್ಳೆಯದಾಯಿತು.
72 ನಿನ್ನ ಉಪದೇಶಗಳು ನನಗೆ ಒಳ್ಳೆಯದಾಗಿವೆ.
ಅವು ಹತ್ತುಸಾವಿರ ಬೆಳ್ಳಿಬಂಗಾರಗಳ ನಾಣ್ಯಗಳಿಗಿಂತಲೂ ಅಮೂಲ್ಯವಾಗಿವೆ.
73 ನಿನ್ನ ಕೈಗಳು ನನ್ನನ್ನು ರೂಪಿಸಿದವು.
ನಿನ್ನ ಆಜ್ಞೆಗಳನ್ನು ಕಲಿತುಕೊಳ್ಳಲು ನನಗೆ ಸಹಾಯಿಸು.
74 ನಾನು ನಿನ್ನ ವಾಕ್ಯದಲ್ಲಿ ಭರವಸವಿಟ್ಟಿರುವುದರಿಂದ
ನಿನ್ನ ಭಕ್ತರು ನನ್ನನ್ನು ಕಂಡಾಗ ಸಂತೋಷಿಸಲಿ.
75 ಯೆಹೋವನೇ, ನಿನ್ನ ತೀರ್ಪುಗಳು ನ್ಯಾಯವಾದವುಗಳೆಂದು ನನಗೆ ತಿಳಿದಿದೆ.
ನೀನು ನನ್ನನ್ನು ಶಿಕ್ಷಿಸಿದ್ದು ನನ್ನ ದೃಷ್ಟಿಯಲ್ಲಿ ನ್ಯಾಯವಾಗಿತ್ತು.
76 ಈಗ, ನಿನ್ನ ಶಾಶ್ವತ ಪ್ರೀತಿಯಿಂದ ನನ್ನನ್ನು ಸಂತೈಸು.
ನಿನ್ನ ವಾಗ್ದಾನದಂತೆ ನನ್ನನ್ನು ಸಂತೈಸು.
77 ನನ್ನನ್ನು ಸಂತೈಸಿ ಉಜ್ಜೀವನಗೊಳಿಸು;
ನಾನು ನಿನ್ನ ಉಪದೇಶಗಳಲ್ಲಿಯೇ ಆನಂದಿಸುತ್ತಿರುವೆ.
78 ಗರ್ವಿಷ್ಠರಿಗೆ ಅವಮಾನವಾಗಲಿ; ಅವರು ನನ್ನ ಬಗ್ಗೆ ಸುಳ್ಳು ಹೇಳಿದ್ದಾರೆ.
ನಾನಾದರೋ ನಿನ್ನ ನಿಯಮಗಳನ್ನು ಧ್ಯಾನಿಸುವೆನು.
79 ನಿನ್ನ ಭಕ್ತರು ನನ್ನ ಬಳಿಗೆ ಹಿಂತಿರುಗಿಬರಲಿ.
ನಿನ್ನ ಒಡಂಬಡಿಕೆಯನ್ನು ಅವರು ಕಲಿತುಕೊಳ್ಳಲಿ.
80 ನಾನು ನಿನ್ನ ಕಟ್ಟಳೆಗಳಿಗೆ ಪೂರ್ಣವಾಗಿ ವಿಧೇಯನಾಗಿರುವಂತೆ ಮಾಡು.
ಆಗ ನನಗೆ ಅವಮಾನವಾಗುವುದಿಲ್ಲ.
81 ನಿನ್ನ ರಕ್ಷಣೆಗಾಗಿ ಕಾಯುತ್ತಾ ಸಾಯುವಂತಾಗಿದ್ದೇನೆ.
ನಿನ್ನ ವಾಕ್ಯಗಳಲ್ಲಿಯೇ ಭರವಸವಿಟ್ಟಿದ್ದೇನೆ.
82 ನಿನ್ನ ವಾಗ್ದಾನಗಳಿಗಾಗಿ ಎದುರುನೋಡುತ್ತಾ ನನ್ನ ಕಣ್ಣುಗಳು ಆಯಾಸಗೊಳ್ಳುತ್ತಿವೆ.
ನೀನು ಯಾವಾಗ ನನ್ನನ್ನು ಸಂತೈಸುವೆ?
83 ಬಿಸಾಕಲ್ಪಟ್ಟ ದ್ರಾಕ್ಷಾರಸದ ಬುದ್ದಲಿಯಂತಿದ್ದೇನೆ,
ಆದರೂ ನಾನು ನಿನ್ನ ಕಟ್ಟಳೆಗಳನ್ನು ಮರೆಯುವುದಿಲ್ಲ.
84 ನಾನು ಇನ್ನೆಷ್ಟುಕಾಲ ಬದುಕಲಿ?
ನನ್ನನ್ನು ಹಿಂಸಿಸುವವರನ್ನು ಯಾವಾಗ ದಂಡಿಸುವೆ?
85 ನಿನ್ನ ಕಟ್ಟಳೆಗಳಿಗೆ ವಿರೋಧವಾಗಿ
ಗರ್ವಿಷ್ಠರು ನನಗೆ ಗುಂಡಿಗಳನ್ನು ಅಗೆದಿದ್ದಾರೆ.
86 ನಿನ್ನ ಆಜ್ಞೆಗಳೆಲ್ಲಾ ನಂಬಿಕೆಗೆ ಯೋಗ್ಯವಾಗಿವೆ.
ಅವರಾದರೋ ನನ್ನನ್ನು ನಿಷ್ಕಾರಣವಾಗಿ ಹಿಂಸಿಸುತ್ತಾರೆ;
ನನಗೆ ಸಹಾಯಮಾಡು!
87 ಅವರು ನನ್ನನ್ನು ನಾಶಮಾಡಿಯೇ ಬಿಟ್ಟಿದ್ದರು.
ನಾನಾದರೋ ನಿನ್ನ ನಿಯಮಗಳನ್ನು ಮರೆತುಬಿಡಲೇ ಇಲ್ಲ.
88 ನಿನ್ನ ಶಾಶ್ವತ ಪ್ರೀತಿಯನ್ನು ತೋರಿ ನನ್ನನ್ನು ಉಜ್ಜೀವಿಸಮಾಡು.
ಆಗ, ನಾನು ನಿನ್ನ ಕಟ್ಟಳೆಗಳಿಗೆ ವಿಧೇಯನಾಗುವೆನು.
20 ದೇವರು ಕರೆದಾಗ ಪ್ರತಿಯೊಬ್ಬನು ಯಾವ ಸ್ಥಿತಿಯಲ್ಲಿದ್ದನೋ ಅದೇ ಸ್ಥಿತಿಯಲ್ಲಿ ಇರಬೇಕು. 21 ದೇವರು ನಿನ್ನನ್ನು ಕರೆದಾಗ ನೀನು ಗುಲಾಮನಾಗಿದ್ದರೆ, ಚಿಂತಿಸಬೇಡ. ಆದರೆ ನೀನು ಬಿಡುಗಡೆಯಾಗಲು ಸಾಧ್ಯವಿದ್ದರೆ, ಬಿಡುಗಡೆಯಾಗು. 22 ದೇವರು ಕರೆದಾಗ ಗುಲಾಮನಾಗಿದ್ದವನು ಪ್ರಭುವಿನಲ್ಲಿ ಬಿಡುಗಡೆಯಾಗಿದ್ದಾನೆ. ಅವನು ಪ್ರಭುವಿಗೆ ಸೇರಿದವನಾಗಿದ್ದಾನೆ. ಅದೇರೀತಿಯಲ್ಲಿ ದೇವರು ಕರೆದಾಗ ಸ್ವತಂತ್ರನಾಗಿದ್ದವನು ಈಗ ಕ್ರಿಸ್ತನ ಗುಲಾಮನಾಗಿದ್ದಾನೆ. 23 ನಿಮ್ಮನ್ನು ಕ್ರಯಕ್ಕೆ ಕೊಂಡುಕೊಳ್ಳಲಾಗಿದೆ. ಆದ್ದರಿಂದ ನೀವು ಮನುಷ್ಯರ ಗುಲಾಮರಾಗಬೇಡಿ. 24 ಸಹೋದರ ಸಹೋದರಿಯರೇ, ದೇವರು ನಿಮ್ಮನ್ನು ಕರೆದಾಗ ನಿಮ್ಮಲ್ಲಿ ಪ್ರತಿಯೊಬ್ಬರು ಯಾವ ಸ್ಥಿತಿಯಲ್ಲಿದ್ದಿರೋ ಅದೇ ಸ್ಥಿತಿಯಲ್ಲಿ ದೇವರೊಂದಿಗೆ ಹೊಸ ಜೀವನದಲ್ಲಿ ಮುಂದುವರಿಯಬೇಕು.
ಮದುವೆ ಮಾಡಿಕೊಳ್ಳುವುದರ ಬಗ್ಗೆ ಪ್ರಶ್ನೆಗಳು
25 ಮದುವೆಯಾಗಿಲ್ಲದ ಜನರ ಬಗ್ಗೆ ಈಗ ನಾನು ಬರೆಯುತ್ತೇನೆ. ಇದರ ಬಗ್ಗೆ ಪ್ರಭುವಿನಿಂದ ಬಂದ ಯಾವ ಆಜ್ಞೆಯೂ ನನ್ನಲ್ಲಿಲ್ಲ. ಆದರೆ ನಾನು ನನ್ನ ಅಭಿಪ್ರಾಯವನ್ನು ನಿಮಗೆ ಕೊಡುತ್ತೇನೆ. ನಾನು ಪ್ರಭುವಿನಿಂದ ಕರುಣೆಯನ್ನು ಹೊಂದಿಕೊಂಡಿರುವುದರಿಂದ ನಂಬಿಕೆಗೆ ಅರ್ಹನಾಗಿದ್ದೇನೆ. 26 ಇದು ಕಷ್ಟಕಾಲವಾಗಿದೆ. ಆದ್ದರಿಂದ, ನೀವು ಯಾವ ಸ್ಥಿತಿಯಲ್ಲಿದ್ದೀರೋ ಅದೇ ಸ್ಥಿತಿಯಲ್ಲಿರುವುದು ಒಳ್ಳೆಯದೆಂಬುದು ನನ್ನ ಆಲೋಚನೆ. 27 ನಿನಗೆ ಹೆಂಡತಿಯಿದ್ದರೆ, ಆಕೆಯಿಂದ ಬಿಡುಗಡೆ ಹೊಂದಲು ಪ್ರಯತ್ನಿಸಬೇಡ. ನಿನಗೆ ಮದುವೆಯಾಗಿಲ್ಲದಿದ್ದರೆ, ಹೆಂಡತಿಯನ್ನು ಹುಡುಕಲು ಪ್ರಯತ್ನಿಸಬೇಡ. 28 ಆದರೆ ನೀನು ಮದುವೆಯಾಗಲು ನಿರ್ಧರಿಸಿದರೆ, ಅದು ಪಾಪವೇನಲ್ಲ. ಮದುವೆಯಾಗಿಲ್ಲದ ಹುಡುಗಿಯು ಮದುವೆಯಾಗುವುದು ಪಾಪವಲ್ಲ. ಆದರೆ ಮದುವೆಯಾಗುವ ಜನರಿಗೆ ಈ ಲೋಕದಲ್ಲಿ ಕಷ್ಟವಿದೆ. ನೀವು ಈ ಕಷ್ಟದಿಂದ ವಿಮುಕ್ತರಾಗಿರಬೇಕೆಂಬುದು ನನ್ನ ಅಪೇಕ್ಷೆಯಾಗಿದೆ.
29 ಸಹೋದರ ಸಹೋದರಿಯರೇ, ನನ್ನ ಅಭಿಪ್ರಾಯ ಇದು: ನಮಗೆ ಹೆಚ್ಚು ಸಮಯ ಉಳಿದಿಲ್ಲ. ಆದ್ದರಿಂದ, ಹೆಂಡತಿಯರನ್ನು ಹೊಂದಿರುವ ಜನರು ಹೆಂಡತಿಯರಿಲ್ಲದವರಂತೆ ಪ್ರಭುವಿನ ಸೇವೆಗಾಗಿ ತಮ್ಮ ಸಮಯವನ್ನು ಉಪಯೋಗಿಸಬೇಕು. 30 ದುಃಖದಿಂದಿರುವ ಜನರು ದುಃಖವಿಲ್ಲದವರಂತೆ ಜೀವಿಸಬೇಕು. ಸಂತೋಷದಿಂದ ಇರುವ ಜನರು ಸಂತೋಷವಿಲ್ಲದ ಜನರಂತೆ ಜೀವಿಸಬೇಕು. ವಸ್ತುಗಳನ್ನು ಕೊಂಡುಕೊಳ್ಳುವ ಜನರು ಏನೂ ಇಲ್ಲದವರಂತೆ ಜೀವಿಸಬೇಕು. 31 ಈ ಲೋಕದ ವಸ್ತುಗಳನ್ನು ಉಪಯೋಗಿಸುವ ಜನರು ತಮಗೆ ಆ ವಸ್ತುಗಳು ಮುಖ್ಯವಲ್ಲವೆಂಬಂತೆ ಜೀವಿಸಬೇಕು. ಏಕೆಂದರೆ, ಈ ಲೋಕದ ಇಂದಿನ ಸ್ಥಿತಿಯು ಬಹು ಬೇಗನೆ ಗತಿಸಿಹೋಗುವುದು.
32 ನೀವು ಚಿಂತೆ ಇಲ್ಲದೆ ಇರಬೇಕೆಂಬುದೇ ನನ್ನ ಬಯಕೆಯಾಗಿದೆ. ಮದುವೆಯಾಗಿಲ್ಲದ ವ್ಯಕ್ತಿಯು ಪ್ರಭುವಿನ ಸೇವೆಯಲ್ಲಿ ನಿರತನಾಗಿರುತ್ತಾನೆ. ಅವನು ಪ್ರಭುವನ್ನು ಮೆಚ್ಚಿಸಲು ಪ್ರಯತ್ನಿಸುತ್ತಿರುತ್ತಾನೆ. 33 ಆದರೆ ಮದುವೆಯಾಗಿರುವ ವ್ಯಕ್ತಿಯು ಈ ಲೋಕದ ಕಾರ್ಯಗಳಲ್ಲಿ ನಿರತನಾಗಿರುತ್ತಾನೆ. ಅವನು ತನ್ನ ಹೆಂಡತಿಯನ್ನು ಮೆಚ್ಚಿಸಲು ಪ್ರಯತ್ನಿಸುತ್ತಿರುತ್ತಾನೆ. 34 ಅವನು ತನ್ನ ಹೆಂಡತಿಯನ್ನು ಮತ್ತು ಪ್ರಭುವನ್ನು ಮೆಚ್ಚಿಸುವುದರ ಬಗ್ಗೆ ಆಲೋಚಿಸಬೇಕಾಗುತ್ತದೆ. ಮದುವೆಯಾಗಿಲ್ಲದ ಸ್ತ್ರೀಯಾಗಲಿ ಹುಡುಗಿಯಾಗಲಿ ಪ್ರಭುವಿನ ಸೇವೆಯಲ್ಲಿ ನಿರತಳಾಗಿರುತ್ತಾಳೆ. ಆಕೆ ತನ್ನ ದೇಹ ಮತ್ತು ಆತ್ಮಗಳನ್ನು ಸಂಪೂರ್ಣವಾಗಿ ಪ್ರಭುವಿಗೆ ಕೊಡಲು ಬಯಸುತ್ತಾಳೆ. ಆದರೆ ಮದುವೆಯಾದ ಸ್ತ್ರೀಯು ಈ ಲೋಕದ ಕಾರ್ಯಗಳಲ್ಲಿ ನಿರತಳಾಗಿರುತ್ತಾಳೆ. ಆಕೆ ತನ್ನ ಗಂಡನನ್ನು ಮೆಚ್ಚಿಸಲು ಪ್ರಯತ್ನಿಸುತ್ತಿರುತ್ತಾಳೆ. 35 ನಿಮಗೆ ಸಹಾಯವಾಗಲೆಂದು ಈ ಸಂಗತಿಗಳನ್ನು ಹೇಳುತ್ತಿದ್ದೇನೆ. ನಾನು ನಿಮ್ಮನ್ನು ನಿಯಂತ್ರಿಸುವುದಕ್ಕೆ ಪ್ರಯತ್ನಿಸುತ್ತಿಲ್ಲ. ಆದರೆ ನೀವು ಸರಿಯಾದ ಮಾರ್ಗದಲ್ಲಿ ಜೀವಿಸಬೇಕೆಂಬುದೇ ನನ್ನ ಬಯಕೆಯಾಗಿದೆ. ನೀವು ನಿಮ್ಮ ಸಮಯವನ್ನು ಬೇರೆ ಕಾರ್ಯಗಳಿಗೆ ಕೊಡದೆ ನಿಮ್ಮನ್ನು ಸಂಪೂರ್ಣವಾಗಿ ಪ್ರಭುವಿಗೆ ಅರ್ಪಿಸಿಕೊಳ್ಳಬೇಕೆಂಬುದು ನನ್ನ ಅಪೇಕ್ಷೆಯಾಗಿದೆ.
36 ತನ್ನ ಮಗಳ (ಕನ್ನಿಕೆಯ) ಮದುವೆಯ ವಯಸ್ಸು ಮೀರಿ ಹೋಗುವಂತೆ ಬಿಟ್ಟುಕೊಡುವುದು ಒಳ್ಳೆಯದಲ್ಲವೆಂದೂ, ಆಕೆಗೆ ಮದುವೆ ಮಾಡಿಸುವುದು ಅವಶ್ಯಕವೆಂದೂ ಒಬ್ಬನು ಭಾವಿಸಿದರೆ, ಅವನು ತನ್ನ ಇಚ್ಛೆಗನುಸಾರವಾಗಿ ಮಾಡಲಿ. ಅವನು ಅವರಿಗೆ ಮದುವೆ ಮಾಡಿಕೊಡಲಿ. ಅದು ಪಾಪವಲ್ಲ. 37 ಆದರೆ ಮತ್ತೊಬ್ಬನು ಮದುವೆಯ ಅಗತ್ಯವಿಲ್ಲವೆಂದು ತನ್ನ ಮನಸ್ಸಿನಲ್ಲಿ ದೃಢವಾಗಿ ನಿಶ್ಚಯಿಸಿಕೊಂಡಿದ್ದರೆ ಅವನು ತನ್ನ ಇಚ್ಛೆಗನುಸಾರವಾಗಿ ಮಾಡಲು ಸ್ವತಂತ್ರನಾಗಿದ್ದಾನೆ. ಅವನು ತನ್ನ ಮಗಳಿಗೆ ಮದುವೆ ಮಾಡುವುದಿಲ್ಲವೆಂದು ತನ್ನ ಹೃದಯದಲ್ಲಿ ನಿರ್ಧರಿಸಿದ್ದರೆ ಅವನು ಒಳ್ಳೆಯದನ್ನೇ ಮಾಡುತ್ತಿದ್ದಾನೆ. 38 ಆದ್ದರಿಂದ ಒಬ್ಬನು ತನ್ನ ಮಗಳಿಗೆ ಮದುವೆ ಮಾಡಿಕೊಡುವುದು ಒಳ್ಳೆಯದಾಗಿದೆ. ಅಲ್ಲದೆ ತನ್ನ ಮಗಳಿಗೆ ಮದುವೆ ಮಾಡಿಕೊಡದಿರುವುದು ಮತ್ತಷ್ಟು ಒಳ್ಳೆಯದಾಗಿದೆ.[a]
39 ಗಂಡನು ಬದುಕಿರುವ ತನಕ ಹೆಂಡತಿಯು ಅವನೊಂದಿಗೆ ಬಾಳ್ವೆ ನಡೆಸಬೇಕು. ಆದರೆ ಗಂಡನು ಸತ್ತುಹೋದರೆ, ಆ ಸ್ತ್ರೀಯು ತಾನು ಬಯಸಿದವರನ್ನು ಮದುವೆಯಾಗಲು ಸ್ವತಂತ್ರಳಾಗಿದ್ದಾಳೆ. ಆದರೆ ಅವನು ಪ್ರಭುವನ್ನು ಅನುಸರಿಸುವವನಾಗಿರಬೇಕು. 40 ಆಕೆಯು ಮತ್ತೆ ಮದುವೆ ಮಾಡಿಕೊಳ್ಳದಿದ್ದರೆ ಹೆಚ್ಚು ಸಂತೋಷದಿಂದಿರುವಳು. ಇದು ನನ್ನ ಅಭಿಪ್ರಾಯವಾಗಿದೆ. ದೇವರಾತ್ಮನು ನನ್ನೊಳಗಿದ್ದಾನೆಂದು ನಾನು ನಂಬುತ್ತೇನೆ.
Kannada Holy Bible: Easy-to-Read Version. All rights reserved. © 1997 Bible League International