Print Page Options
Previous Prev Day Next DayNext

Old/New Testament

Each day includes a passage from both the Old Testament and New Testament.
Duration: 365 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 107-109

ಐದನೆಯ ಭಾಗ

(ಕೀರ್ತನೆಗಳು 107–150)

107 ಯೆಹೋವನಿಗೆ ಕೃತಜ್ಞತಾಸ್ತುತಿಮಾಡಿರಿ! ಆತನು ಒಳ್ಳೆಯವನು!
    ಆತನ ಪ್ರೀತಿ ಶಾಶ್ವತವಾದದ್ದು!
ಯೆಹೋವನಿಂದ ರಕ್ಷಿಸಲ್ಪಟ್ಟ ಪ್ರತಿಯೊಬ್ಬರೂ ಆತನಿಗೆ ಕೃತಜ್ಞತಾಸ್ತುತಿ ಮಾಡಲಿ.
    ಯೆಹೋವನು ಅವರನ್ನು ವೈರಿಗಳಿಂದ ಬಿಡಿಸಿದನು.
ಯೆಹೋವನು ತನ್ನ ಜನರನ್ನು ಅನೇಕ ದೇಶಗಳಿಂದ ಒಟ್ಟುಗೂಡಿಸಿದನು;
    ಪೂರ್ವಪಶ್ಚಿಮಗಳಿಂದಲೂ ಉತ್ತರ ದಕ್ಷಿಣಗಳಿಂದಲೂ ಬರಮಾಡಿದನು.

ಅವರಲ್ಲಿ ಕೆಲವರು ಮರುಭೂಮಿಯಲ್ಲಿ ಅಲೆದಾಡಿದರು.
    ತಾವು ನೆಲೆಸತಕ್ಕ ಪಟ್ಟಣಕ್ಕಾಗಿ ಅವರು ಹುಡುಕಿದರೂ ಅದು ಅವರಿಗೆ ಕಾಣಲಿಲ್ಲ.
ಅವರು ಹಸಿವೆಯಿಂದಲೂ
    ಬಾಯಾರಿಕೆಯಿಂದಲೂ ಬಲಹೀನರಾಗತೊಡಗಿದರು.
ಆಗ ಅವರು ಯೆಹೋವನಿಗೆ ಮೊರೆಯಿಡಲು
    ಆತನು ಅವರನ್ನು ಎಲ್ಲಾ ಆಪತ್ತುಗಳಿಂದ ರಕ್ಷಿಸಿದನು.
ಅವರು ನೆಲಸತಕ್ಕ ಪಟ್ಟಣಕ್ಕೆ ದೇವರು ಅವರನ್ನು ನೇರವಾಗಿ ನಡೆಸಿದನು.
ಯೆಹೋವನ ಪ್ರೀತಿಗಾಗಿಯೂ ತನ್ನ ಜನರಿಗೋಸ್ಕರ ಆತನು ಮಾಡುವ
    ಅದ್ಭುತಕಾರ್ಯಗಳಿಗಾಗಿಯೂ ಆತನಿಗೆ ಕೃತಜ್ಞತಾಸ್ತುತಿಮಾಡಿರಿ.
ಆತನು ಬಾಯರಿದವರನ್ನು ನೀರಿನಿಂದಲೂ
    ಹಸಿದವರನ್ನು ಮೃಷ್ಟಾನ್ನದಿಂದಲೂ ತೃಪ್ತಿಗೊಳಿಸುವನು.

10 ದೇವಜನರಲ್ಲಿ ಕೆಲವರು ಸೆರೆಯಾಳುಗಳಾಗಿದ್ದರು;
    ಕಾರ್ಗತ್ತಲೆಯ ಸೆರೆಮನೆಗಳಲ್ಲಿ ಬಂಧಿತರಾಗಿದ್ದರು.
11 ಯಾಕೆಂದರೆ ಅವರು ಯೆಹೋವನ ಆಜ್ಞೆಗಳಿಗೆ ವಿರೋಧವಾಗಿ ದಂಗೆ ಎದ್ದರು.
    ಮಹೋನ್ನತನಾದ ದೇವರ ಉಪದೇಶವನ್ನು ತಿರಸ್ಕರಿಸಿದರು.
12 ಅವರ ಕಾರ್ಯಗಳ ನಿಮಿತ್ತವೇ
    ದೇವರು ಅವರ ಜೀವನವನ್ನು ಸಂಕಷ್ಟಕ್ಕೆ ಒಳಪಡಿಸಿದನು.
ಅವರು ಎಡವಿಬಿದ್ದರು,
    ಅವರಿಗೆ ಸಹಾಯಮಾಡಲು ಯಾರೂ ಇರಲಲ್ಲ.
13 ಅವರು ಆಪತ್ತಿನಲ್ಲಿದ್ದಾಗ ಯೆಹೋವನಿಗೆ ಮೊರೆಯಿಟ್ಟರು.
    ಆತನು ಅವರನ್ನು ಆಪತ್ತುಗಳಿಂದ ಬಿಡಿಸಿದನು.
14 ಆತನು ಅವರನ್ನು ಕಾರ್ಗತ್ತಲೆಯ ಸೆರೆಮನೆಗಳಿಂದ ಹೊರತಂದನು;
    ಕಟ್ಟಿದ ಹಗ್ಗಗಳನ್ನು ಕಿತ್ತುಹಾಕಿದನು.
15 ಯೆಹೋವನ ಪ್ರೀತಿಗಾಗಿಯೂ ತನ್ನ ಜನರಿಗೋಸ್ಕರ
    ಆತನು ಮಾಡುವ ಅದ್ಭುತಕಾರ್ಯಗಳಿಗಾಗಿಯೂ ಆತನಿಗೆ ಕೃತಜ್ಞತಾಸ್ತುತಿಮಾಡಿರಿ.
16 ನಮ್ಮ ಶತ್ರುಗಳನ್ನು ಸೋಲಿಸಲು ದೇವರು ನಮಗೆ ಸಹಾಯಮಾಡುವನು.
    ಅವರ ತಾಮ್ರದ ಬಾಗಿಲುಗಳನ್ನು ಆತನು ಮುರಿದುಹಾಕಬಲ್ಲನು.
    ಅವರ ಬಾಗಿಲುಗಳ ಮೇಲಿರುವ ಕಬ್ಬಿಣದ ಸರಳುಗಳನ್ನು ಆತನು ನುಚ್ಚುನೂರು ಮಾಡಬಲ್ಲನು.

17 ಕೆಲವರು ತಮ್ಮ ಪಾಪಗಳಿಂದಲೂ
    ದೋಷಗಳಿಂದಲೂ ಮೂಢರಾದರು.
18 ಆ ಜನರು ಊಟವನ್ನು ನಿರಾಕರಿಸಿದ್ದರಿಂದ
    ಮರಣಾವಸ್ಥೆಗೆ ಬಂದರು.
19 ಅವರು ಆಪತ್ತಿನಲ್ಲಿ ಯೆಹೋವನಿಗೆ ಮೊರೆಯಿಟ್ಟರು.
    ಆತನು ಅವರನ್ನು ಆಪತ್ತುಗಳಿಂದ ಬಿಡಿಸಿದನು.
20 ಆತನು ಆಜ್ಞಾಪಿಸಲು ಜನರು ಗುಣಹೊಂದಿದರು.
    ಸಮಾಧಿಯಿಂದ ತಪ್ಪಿಸಿಕೊಂಡರು.
21 ಯೆಹೋವನ ಪ್ರೀತಿಗಾಗಿಯೂ ತನ್ನ ಜನರಿಗೋಸ್ಕರ
    ಆತನು ಮಾಡುವ ಅದ್ಭುತಕಾರ್ಯಗಳಿಗಾಗಿಯೂ ಆತನಿಗೆ ಕೃತಜ್ಞತಾಸ್ತುತಿಮಾಡಿರಿ.
22 ಯೆಹೋವನ ಕಾರ್ಯಗಳಿಗೆ ಕೃತಜ್ಞತಾ ಯಜ್ಞಗಳನ್ನು ಅರ್ಪಿಸಿರಿ.
    ಆತನ ಕಾರ್ಯಗಳ ಬಗ್ಗೆ ಹರ್ಷದಿಂದ ತಿಳಿಸಿರಿ.

23 ಕೆಲವರು ತಮ್ಮ ಉದ್ಯೋಗಗಳ ನಿಮಿತ್ತ
    ಸಮುದ್ರಯಾನ ಮಾಡಿದರು.
24 ಯೆಹೋವನು ಮಾಡಬಲ್ಲ ಕಾರ್ಯಗಳನ್ನು ಅವರು ನೋಡಿದರು.
    ಆತನು ಸಮುದ್ರದಲ್ಲಿ ಮಾಡಿದ ಅದ್ಭುತಕಾರ್ಯಗಳನ್ನು ಅವರು ಕಣ್ಣಾರೆ ಕಂಡರು.
25 ಆತನು ಆಜ್ಞಾಪಿಸಲು ಬಲವಾದ ಗಾಳಿ ಬೀಸತೊಡಗಿತು;
    ಅಲೆಗಳು ದೊಡ್ಡದಾಗತೊಡಗಿದವು.
26 ಅಲೆಗಳು ಆಕಾಶದಷ್ಟು ಎತ್ತರವಾಗಿದ್ದವು.
    ಭಯಂಕರವಾದ ಬಿರುಗಾಳಿಯಿಂದ ಅವರು ಭಯಗೊಂಡರು.
27     ಅವರು ಅಮಲೇರಿದವರಂತೆ ಎಡವಿಬೀಳತೊಡಗಿದರು;
    ನಾವಿಕರಾಗಿದ್ದ ಅವರ ಕೌಶಲ್ಯವು ನಿಷ್ಪ್ರಯೋಜಕವಾಯಿತು.
28 ಆಗ ಅವರು ಯೆಹೋವನಿಗೆ ಮೊರೆಯಿಡಲು
    ಆತನು ಅವರನ್ನು ಆಪತ್ತುಗಳಿಂದ ಬಿಡಿಸಿದನು.
29 ಆತನು ಬಿರುಗಾಳಿಯನ್ನು ನಿಲ್ಲಿಸಿ
    ಅಲೆಗಳನ್ನು ಶಾಂತಗೊಳಿಸಿದನು.
30 ಸಮುದ್ರವು ಶಾಂತವಾದದ್ದರಿಂದ ನಾವಿಕರು ಬಹು ಸಂತೋಷಪಟ್ಟರು.
    ಅವರು ತಲುಪಬೇಕಿದ್ದ ಸ್ಥಳಕ್ಕೆ ಆತನು ಅವರನ್ನು ಸುರಕ್ಷಿತವಾಗಿ ನಡೆಸಿದನು.
31 ಯೆಹೋವನ ಪ್ರೀತಿಗಾಗಿಯೂ ತನ್ನ ಜನರಿಗೋಸ್ಕರ
    ಆತನು ಮಾಡುವ ಅದ್ಭುತಕಾರ್ಯಗಳಿಗಾಗಿಯೂ ಆತನಿಗೆ ಕೃತಜ್ಞತಾಸ್ತುತಿ ಮಾಡಿರಿ.
32 ಆತನನ್ನು ಮಹಾಸಭೆಯಲ್ಲಿ ಸ್ತುತಿಸಿರಿ.
    ಹಿರಿಯರ ಸಭೆಯಲ್ಲಿ ಆತನನ್ನು ಕೊಂಡಾಡಿರಿ.

33 ಆತನು ನದಿಗಳನ್ನು ಮರಳುಗಾಡನ್ನಾಗಿ ಮಾರ್ಪಡಿಸಿದನು;
    ಹರಿಯುವ ಒರತೆಗಳನ್ನು ತಡೆದು ನಿಲ್ಲಿಸಿದನು.
34 ಆತನು ಫಲವತ್ತಾದ ಭೂಮಿಯನ್ನು ಉಪಯೋಗವಿಲ್ಲದ ಉಪ್ಪುಭೂಮಿಯನ್ನಾಗಿ ಪರಿವರ್ತಿಸಿದನು,
    ಯಾಕೆಂದರೆ ಅಲ್ಲಿ ಕೆಟ್ಟಜನರು ನೆಲೆಸಿದ್ದರು.
35 ಆತನು ಮರಳುಗಾಡನ್ನು ಸರೋವರಗಳುಳ್ಳ ನಾಡನ್ನಾಗಿ ಪರಿವರ್ತಿಸಿದನು;
    ಒಣನೆಲದಿಂದ ನೀರಿನ ಒರತೆಗಳನ್ನು ಹರಿಯಮಾಡಿದನು.
36 ಆತನು ಹಸಿದವರನ್ನು ಒಳ್ಳೆಯ ನಾಡಿಗೆ ನಡೆಸಿದನು.
    ಅವರು ಅಲ್ಲಿ ನೆಲೆಸಿ ಪಟ್ಟಣವನ್ನು ಕಟ್ಟಿದರು.
37 ಅವರು ಹೊಲಗಳಲ್ಲಿ ಬೀಜ ಬಿತ್ತಿ
    ತೋಟಗಳಲ್ಲಿ ದ್ರಾಕ್ಷಾಲತೆಗಳನ್ನು ನೆಟ್ಟು ಒಳ್ಳೆಯ ಸುಗ್ಗಿಗಳನ್ನು ಪಡೆದರು.
38 ಆತನ ಆಶೀರ್ವಾದದಿಂದ ಅವರ ಕುಟುಂಬಗಳು ವೃದ್ಧಿಯಾದವು.
    ಅವರ ಪಶುಗಳು ಅಸಂಖ್ಯಾತಗೊಂಡವು.
39 ವಿಪತ್ತುಗಳಿಂದಲೂ ತೊಂದರೆಗಳಿಂದಲೂ
    ಅವರ ಕುಟುಂಬಗಳು ಚಿಕ್ಕದಾಗಿದ್ದವು; ಬಲಹೀನವಾಗಿದ್ದವು.
40 ಆತನು ಅವರ ನಾಯಕರುಗಳಿಗೆ ಅವಮಾನ ಮಾಡಿದನು;
    ದಾರಿಗಳಿಲ್ಲದ ಅರಣ್ಯದಲ್ಲಿ ಅಲೆದಾಡುವಂತೆ ಅವರನ್ನು ತೊರೆದುಬಿಟ್ಟನು.
41 ಬಳಿಕ ಆತನು ದೀನರನ್ನು ಅವರ ಸಂಕಟದಿಂದ ಬಿಡಿಸಿದನು.
    ಈಗ ಅವರ ಕುಟುಂಬಗಳು ಕುರಿಮಂದೆಗಳಂತೆ ದೊಡ್ಡದಾದವು.
42 ಒಳ್ಳೆಯವರು ಇದನ್ನು ಕಂಡು ಸಂತೋಷಪಡುವರು.
    ದುಷ್ಟರು ಇದನ್ನು ಕಂಡು ತಮ್ಮ ಬಾಯಿಗಳನ್ನು ಮುಚ್ಚಿಕೊಳ್ಳುವರು.
43 ಜ್ಞಾನಿಯು ಇವುಗಳನ್ನು ನೆನಪು ಮಾಡಿಕೊಂಡು
    ದೇವರ ನಿಜಪ್ರೀತಿಯನ್ನು ಅರ್ಥಮಾಡಿಕೊಳ್ಳುವನು.

ದಾವೀದನ ಕೀರ್ತನೆ.

108 ದೇವರೇ, ನನ್ನ ಹೃದಯವು ಸ್ಥಿರವಾಗಿದೆ;
    ನಾನು ಹೃದಯಪೂರ್ವಕವಾಗಿ ವಾದ್ಯ ನುಡಿಸುತ್ತಾ ಹಾಡುವೆನು.
    ಹಾರ್ಪ್‌ವಾದ್ಯಗಳೇ, ಲೈರ್‌ವಾದ್ಯಗಳೇ,
    ನಾವು ಸೂರ್ಯನನ್ನು ಎಚ್ಚರಗೊಳಿಸೋಣ!
ಯೆಹೋವನೇ, ಜನಾಂಗಗಳಲ್ಲಿಯೂ
    ವಿದೇಶಿಯರಲ್ಲಿಯೂ ನಿನ್ನನ್ನು ಕೊಂಡಾಡುವೆನು.
ಯಾಕೆಂದರೆ ನಿನ್ನ ಪ್ರೀತಿಯು ಆಕಾಶಕ್ಕಿಂತಲೂ ಉನ್ನತವಾಗಿದೆ;
    ನಿನ್ನ ನಂಬಿಗಸ್ತಿಕೆಯು ಮೋಡಗಳಿಗಿಂತಲೂ ಎತ್ತರವಾಗಿದೆ.
ದೇವರೇ, ಪರಲೋಕದಲ್ಲಿ ನಿನ್ನ ಪ್ರಭಾವವು ಮೆರೆಯಲಿ.
    ನಿನ್ನ ಮಹಿಮೆಯು ಭೂಮಂಡಲವನ್ನೆಲ್ಲಾ ಆವರಿಸಿಕೊಳ್ಳಲಿ.
ನಿನ್ನ ಸ್ನೇಹಿತರಾದ ನಮ್ಮ ಪ್ರಾರ್ಥನೆಗೆ ಕಿವಿಗೊಟ್ಟು ನಮ್ಮನ್ನು ರಕ್ಷಿಸು.
    ನಿನ್ನ ಬಲಗೈಯಿಂದ ನಮ್ಮನ್ನು ಕಾಪಾಡು.

ದೇವರು ತನ್ನ ಆಲಯದೊಳಗಿಂದ ಹೀಗೆಂದನು:
    “ನಾನು ಯುದ್ಧದಲ್ಲಿ ಗೆದ್ದು ಜಯಘೋಷ ಮಾಡುವೆನು;
    ಶೆಕೆಮ್ ಪ್ರದೇಶವನ್ನೂ ಸುಕ್ಕೋತ್ ಬಯಲನ್ನೂ ನನ್ನ ಜನರಿಗೆ ಕೊಡುವೆನು.
    ಗಿಲ್ಯಾದ್ ಪ್ರಾಂತವೂ ಮನಸ್ಸೆ ಪ್ರಾಂತವೂ ನನ್ನದಾಗಿರುತ್ತವೆ.
    ಎಫ್ರಾಯೀಮ್ ನನ್ನ ಶಿರಸ್ತ್ರಾಣವಾಗಿರುತ್ತದೆ.
    ಯೆಹೂದವು ನನ್ನ ರಾಜದಂಡವಾಗಿರುತ್ತದೆ.
    ಮೋವಾಬ್ ನನ್ನ ಪಾದತೊಳೆಯುವ ಬೋಗುಣಿಯಂತಿರುತ್ತದೆ.
    ಎದೋಮ್ ನನ್ನ ಪಾದರಕ್ಷೆಗಳನ್ನು ಹೊತ್ತುಕೊಂಡು ಹೋಗುವ ಗುಲಾಮನಾಗಿರುತ್ತದೆ.
    ಫಿಲಿಷ್ಟಿಯರನ್ನು ಸೋಲಿಸಿದ ಮೇಲೆ ನಾನು ಜಯಘೋಷ ಮಾಡುವೆನು.”

10 ವೈರಿಗಳ ಆಶ್ರಯದುರ್ಗಕ್ಕೆ ನನ್ನನ್ನು ನಡೆಸುವವರು ಯಾರು?
    ಎದೋಮನ್ನು ಸೋಲಿಸಲು ನನಗೆ ಸಹಾಯ ಮಾಡುವವರು ಯಾರು?
11 ದೇವರೇ, ನೀನು ನಮ್ಮನ್ನು ತ್ಯಜಿಸಿ,
    ನಮ್ಮ ಸೈನ್ಯದೊಡನೆ ಹೋಗದಿರುವುದು ನಿಜವೇ?
12 ನಮ್ಮ ಶತ್ರುವನ್ನು ಸೋಲಿಸಲು ದಯವಿಟ್ಟು ನಮಗೆ ಸಹಾಯಮಾಡು.
    ಜನರು ನಮಗೆ ಸಹಾಯಮಾಡಲಾರರು!
13 ದೇವರು ಮಾತ್ರ ನಮ್ಮನ್ನು ಬಲಪಡಿಸಬಲ್ಲನು.
    ಆತನು ಮಾತ್ರ ನಮ್ಮ ಶತ್ರುಗಳನ್ನು ಸೋಲಿಸಬಲ್ಲನು.

ಸ್ತುತಿಗೀತೆ. ರಚನೆಗಾರ: ದಾವೀದ.

109 ನಾನು ಸ್ತುತಿಸುವ ದೇವರೇ,
    ನನ್ನ ಪ್ರಾರ್ಥನೆಗೆ ಕಿವಿಗೊಡದಿರಬೇಡ.
ದುಷ್ಟರು ನನ್ನ ವಿಷಯವಾಗಿ ಸುಳ್ಳಾಡುತ್ತಿದ್ದಾರೆ.
    ಅವರು ಅಸತ್ಯವಾದವುಗಳನ್ನು ಹೇಳುತ್ತಿದ್ದಾರೆ.
ಅವರು ನನ್ನನ್ನು ದ್ವೇಷಿಸುತ್ತಾರೆ;
    ನಿಷ್ಕಾರಣವಾಗಿ ನನಗೆ ಎದುರಾಗಿದ್ದಾರೆ.
ನಾನು ಅವರನ್ನು ಪ್ರೀತಿಸಿದರೂ ಅವರು ನನ್ನನ್ನು ದ್ವೇಷಿಸುವರು.
    ನಾನಾದರೋ ನಿನಗೆ ಪ್ರಾರ್ಥಿಸುತ್ತಿದ್ದೇನೆ.
ನಾನು ಉಪಕಾರವನ್ನು ಮಾಡಿದ್ದರೂ
    ಅವರು ನನಗೆ ಅಪಕಾರವನ್ನು ಮಾಡುತ್ತಿದ್ದಾರೆ.
ನಾನು ಅವರನ್ನು ಪ್ರೀತಿಸಿದರೂ
    ಅವರು ನನ್ನನ್ನು ದ್ವೇಷಿಸುವರು.

ನನ್ನ ವೈರಿಯನ್ನು ಅವನ ದುಷ್ಕೃತ್ಯಗಳಿಗೆ ತಕ್ಕಂತೆ ದಂಡಿಸು.
    ಅವನ ಮೇಲೆ ತಪ್ಪು ಹೊರಿಸಲು ದೂಷಕನನ್ನು ಅವನ ಬಲಗಡೆಯಲ್ಲಿ ನಿಲ್ಲಿಸು.
ನ್ಯಾಯವಿಚಾರಣೆಯಲ್ಲಿ ನ್ಯಾಯಾಧೀಶನು ಅವನನ್ನು ಅಪರಾಧಿಯೆಂದು ನಿರ್ಣಯಿಸಲಿ.
    ನನ್ನ ಶತ್ರುವಿನ ಪ್ರತಿವಾದವು ಅವನಿಗೆ ಮತ್ತಷ್ಟು ಕೇಡು ಮಾಡಲಿ.
ನನ್ನ ಶತ್ರುವು ಬೇಗನೆ ಸಾಯಲಿ.
    ಅವನ ಉದ್ಯೋಗವು ಮತ್ತೊಬ್ಬನಿಗೆ ದೊರೆಯಲಿ.
ಅವನ ಮಕ್ಕಳನ್ನು ಅನಾಥರನ್ನಾಗಿಯೂ ಅವನ ಹೆಂಡತಿಯನ್ನು ವಿಧವೆಯನ್ನಾಗಿಯೂ ಮಾಡು.
10 ಅವನ ಮಕ್ಕಳು ತಮ್ಮ ಮನೆಯನ್ನು ಕಳೆದುಕೊಂಡು
    ತಿರುಕರಂತೆ ಅಲೆಯುತ್ತಾ ಭಿಕ್ಷುಕರಾಗಲಿ.
11 ಅವನಿಗೆ ಸಾಲಕೊಟ್ಟವರು ಅವನ ಆಸ್ತಿಯನ್ನೆಲ್ಲಾ ಕಸಿದುಕೊಳ್ಳಲಿ.
    ಅವನು ದುಡಿದು ಸಂಪಾದಿಸಿದ್ದೆಲ್ಲವನ್ನು ಪರರು ಸುಲಿದುಕೊಳ್ಳಲಿ.
12 ಅವನಿಗೆ ಯಾರೂ ಕೃಪೆತೋರದಿರಲಿ;
    ಅವನ ಮಕ್ಕಳಿಗೂ ಯಾರೂ ಕರುಣೆತೋರದಿರಲಿ.
13 ಅವನನ್ನು ಸಂಪೂರ್ಣವಾಗಿ ನಾಶಮಾಡು.
    ಮುಂದಿನ ತಲೆಮಾರಿನಲ್ಲಿಯೇ ಅವನ ಹೆಸರು ಇಲ್ಲವಾಗಲಿ.
14 ಯೆಹೋವನು ನನ್ನ ಶತ್ರುವಿನ ತಂದೆಯ ಪಾಪವನ್ನು ಮರೆಯದಿರಲಿ;
    ಅವನ ತಾಯಿಯ ಪಾಪವು ಅಳಿದುಹೋಗದಿರಲಿ.
15 ಆ ಪಾಪಗಳನ್ನು ಯೆಹೋವನು ಯಾವಾಗಲೂ ಜ್ಞಾಪಕಮಾಡಿಕೊಳ್ಳಲಿ;
    ಭೂಮಿಯ ಮೇಲೆ ಅವರ ನೆನಪೇ ಉಳಿಯದಂತೆ ಯೆಹೋವನು ಮಾಡಲಿ.
16 ಯಾಕೆಂದರೆ, ಆ ದುಷ್ಟನು ಯಾವ ಒಳ್ಳೆಯದನ್ನೂ ಮಾಡಲಿಲ್ಲ;
    ಯಾರನ್ನೂ ಪ್ರೀತಿಸಲಿಲ್ಲ.
    ಅವನು ಬಡಜನರಿಗೂ ಮತ್ತು ಅಸಹಾಯಕರಿಗೂ ಜೀವನವನ್ನು ಕಷ್ಟಕರವನ್ನಾಗಿ ಮಾಡಿದನು.
17 ಜನರನ್ನು ಶಪಿಸುವುದೇ ಅವನಿಗೆ ಇಷ್ಟವಾಗಿತ್ತು.
    ಆದ್ದರಿಂದ ಆ ಶಾಪಗಳು ಅವನಿಗೇ ಸಂಭವಿಸಲಿ.
ಅವನು ಜನರನ್ನು ಆಶೀರ್ವದಿಸಲೇ ಇಲ್ಲ.
    ಆದ್ದರಿಂದ ಅವನಿಗೆ ಒಳ್ಳೆಯದಾಗದಂತೆ ಮಾಡು.
18 ಅವನು ಉಡುಪುಗಳನ್ನು ಧರಿಸುವಂತೆ
    ಶಪಿಸುವುದೇ ಅವನ ದಿನನಿತ್ಯ ಜೀವಿತದ ಕೆಲಸವಾಗಿತ್ತು.
19 ಆದ್ದರಿಂದ ಅವನು ಧರಿಸಿಕೊಳ್ಳುವ ನಿಲುವಂಗಿಯಂತೆ
    ಶಾಪಗಳು ಅವನನ್ನು ಆವರಿಸಿಕೊಳ್ಳಲಿ;
    ನಡುಪಟ್ಟಿಯಂತೆ ಯಾವಾಗಲೂ ಸುತ್ತಿಕೊಳ್ಳಲಿ.

20 ನನ್ನ ಶತ್ರುವಿಗೂ ನನ್ನನ್ನು ಕೊಲ್ಲಬೇಕೆಂದಿರುವವರಿಗೂ
    ಯೆಹೋವನು ಅವುಗಳನ್ನು ಮಾಡಲಿ.
21 ಯೆಹೋವನೇ, ನೀನೇ ನನ್ನ ಒಡೆಯನು.
    ಆದ್ದರಿಂದ ನಿನ್ನ ಹೆಸರಿನ ಘನತೆಗಾಗಿ ನನಗೆ ಸಹಾಯಮಾಡು.
    ನಿನ್ನ ಶಾಶ್ವತವಾದ ಪ್ರೀತಿಯಿಂದ ನನ್ನನ್ನು ರಕ್ಷಿಸು.
22 ನಾನು ಕೇವಲ ಬಡವನೂ ಅಸಹಾಯಕನೂ ಆಗಿರುವೆ.
    ನನ್ನ ಹೃದಯವು ನೊಂದು ದುಃಖಗೊಂಡಿದೆ.
23 ಸಂಜೆಯ ನೆರಳಿನಂತೆ ನನ್ನ ಜೀವಮಾನವು ಕೊನೆಗೊಳ್ಳುತ್ತಿದೆ;
    ಗಾಳಿಯು ಬಡಿದುಕೊಂಡು ಹೋಗುವ ಮಿಡತೆಯಂತಾಗಿದ್ದೇನೆ.
24 ಹಸಿವೆಯಿಂದ ನನ್ನ ಮೊಣಕಾಲುಗಳು ಬಲಹೀನವಾಗಿವೆ.
    ನನ್ನ ತೂಕ ಕಡಿಮೆಯಾಗುತ್ತಿದೆ; ನಾನು ತೆಳ್ಳಗಾಗುತ್ತಿದ್ದೇನೆ.
25 ಕೆಡುಕರು ನನ್ನನ್ನು ಗೇಲಿ ಮಾಡುವರು.
    ಅವರು ನನ್ನನ್ನು ನೋಡಿ ತಲೆಯಾಡಿಸುವರು.
26 ನನ್ನ ದೇವರಾದ ಯೆಹೋವನೇ, ನನಗೆ ಸಹಾಯಮಾಡು!
    ನಿನ್ನ ಶಾಶ್ವತವಾದ ಪ್ರೀತಿಯಿಂದ ನನ್ನನ್ನು ರಕ್ಷಿಸು.
27 ಯೆಹೋವನೇ, ಆಗ ಅವರು ಅದು ನಿನ್ನ ಕೈಕೆಲಸವೆಂದೂ
    ಅದನ್ನು ಮಾಡಿದ್ದು ನೀನೇ ಎಂದೂ ತಿಳಿದುಕೊಳ್ಳುವರು.
28 ಆ ದುಷ್ಟರು ನನ್ನನ್ನು ಶಪಿಸುತ್ತಾರೆ; ಯೆಹೋವನೇ, ನೀನಾದರೋ ನನ್ನನ್ನು ಆಶೀರ್ವದಿಸುವೆ.
    ನನಗೆ ವಿರೋಧವಾಗಿ ಎದ್ದಿರುವ ಅವರನ್ನು ಸೋಲಿಸು.
    ಆಗ, ನಿನ್ನ ಸೇವಕನಾದ ನಾನು ಸಂತೋಷವಾಗಿರುವೆನು.
29 ನನ್ನ ಶತ್ರುಗಳಿಗೆ ಅವಮಾನವೇ ವಸ್ತ್ರವಾಗಲಿ!
    ನಾಚಿಕೆಯೇ ಅವರ ಮೇಲಂಗಿಯಾಗಲಿ.
30 ನಾನು ಯೆಹೋವನಿಗೆ ಕೃತಜ್ಞತಾಸ್ತುತಿ ಮಾಡುವೆನು.
    ಜನಸಮೂಹದಲ್ಲಿ ಆತನನ್ನು ಕೊಂಡಾಡುವೆನು.
31 ಯಾಕೆಂದರೆ, ಆತನು ಅಸಹಾಯಕರ ಬಲಗಡೆಯಲ್ಲಿ ನಿಂತುಕೊಳ್ಳುವನು;
    ಮರಣದಂಡನೆ ವಿಧಿಸಬೇಕೆಂದಿರುವ ಜನರಿಂದ ಅವರನ್ನು ರಕ್ಷಿಸುವನು.

1 ಕೊರಿಂಥದವರಿಗೆ 4

ಕ್ರಿಸ್ತನ ಅಪೊಸ್ತಲರು

ಜನರು ನಮ್ಮನ್ನು ಕ್ರಿಸ್ತನ ಸೇವಕರೆಂತಲೂ ದೇವರು ತನ್ನ ರಹಸ್ಯವಾದ ಸತ್ಯಗಳನ್ನು ನಮಗೆ ವಹಿಸಿಕೊಟ್ಟಿದ್ದಾನೆಂತಲೂ ಎಣಿಸಬೇಕು. ಹೀಗಿರಲು, ಜವಾಬ್ದಾರಿಕೆಯನ್ನು ವಹಿಸಿಕೊಂಡವರು ತಾವು ತಮ್ಮ ಕೆಲಸದಲ್ಲಿ ನಂಬಿಗಸ್ತರೆಂಬುದನ್ನು ತೋರಿಸಬೇಕು. ನೀವೇ ನನಗೆ ವಿಚಾರಣೆ ಮಾಡಿದರೂ ಯಾವುದೇ ಮಾನವ ನೇಮಿತ ನ್ಯಾಯಾಲಯದಲ್ಲಿ ನನಗೆ ವಿಚಾರಣೆಯಾದರೂ ನಾನು ಚಿಂತಿಸುವುದಿಲ್ಲ. ಅಲ್ಲದೆ ನನಗೆ ನಾನೇ ವಿಚಾರಣೆ ಮಾಡಿಕೊಳ್ಳುವುದಿಲ್ಲ. ನಾನು ತಪ್ಪುಮಾಡಿದ್ದೇನೆಂದು ನನ್ನ ಮನಸ್ಸಾಕ್ಷಿಗೆ ತೋರುತ್ತಿಲ್ಲ. ಅದು ನನ್ನನ್ನು ನಿರ್ದೋಷಿಯನ್ನಾಗಿ ಮಾಡಲಾರದು. ನನಗೆ ನ್ಯಾಯನಿರ್ಣಯ ಮಾಡುವವನು ಪ್ರಭುವೊಬ್ಬನೇ. ಆದ್ದರಿಂದ ಸರಿಯಾದ ಸಮಯಕ್ಕಿಂತ ಮೊದಲೇ ತೀರ್ಪುಮಾಡಬೇಡಿ. ಪ್ರಭುವು ಬರುವ ತನಕ ಕಾದುಕೊಂಡಿರಿ. ಕತ್ತಲೆಯಲ್ಲಿ ಅಡಗಿಕೊಂಡಿರುವವುಗಳ ಮೇಲೆ ಆತನು ಬೆಳಕನ್ನು ಬೆಳಗಿಸುವನು. ಮನುಷ್ಯರ ಹೃದಯಗಳ ರಹಸ್ಯವಾದ ಉದ್ದೇಶಗಳನ್ನು ಆತನು ಬಹಿರಂಗಪಡಿಸುವನು. ಆಗ ಪ್ರತಿಯೊಬ್ಬನಿಗೂ ಬರತಕ್ಕ ಹೊಗಳಿಕೆಯು ದೇವರಿಂದಲೇ ಬರುವುದು.

ಸಹೋದರ ಸಹೋದರಿಯರೇ, ನಾನು ನಿಮಗೋಸ್ಕರ ಈ ವಿಷಯಗಳಲ್ಲಿ ಅಪೊಲ್ಲೋಸನನ್ನು ಮತ್ತು ನನ್ನನ್ನು ಉದಾಹರಿಸಿದ್ದೇನೆ. ಏಕೆಂದರೆ, “ಬರೆಯಲ್ಪಟ್ಟಿರುವ ನಿಯಮಗಳನ್ನು ಮಾತ್ರ ಅನುಸರಿಸು” ಎಂಬ ವಾಕ್ಯದ ಅರ್ಥವನ್ನು ನೀವು ನಮ್ಮಿಂದ ಕಲಿತುಕೊಳ್ಳಬೇಕು. ಆಗ ನೀವು ಒಬ್ಬನ ವಿಷಯದಲ್ಲಿ ಹೆಚ್ಚಳಪಟ್ಟು ಮತ್ತೊಬ್ಬನನ್ನು ದ್ವೇಷಿಸುವುದಿಲ್ಲ. ನಿಮ್ಮನ್ನು ಇತರ ಜನರಿಗಿಂತಲೂ ಉತ್ತಮರೆಂದು ಯಾರು ಹೇಳುತ್ತಾರೆ? ನಿಮ್ಮಲ್ಲಿರುವ ಪ್ರತಿಯೊಂದನ್ನೂ ದೇವರೇ ನಿಮಗೆ ಕೊಟ್ಟಿದ್ದಾನೆ. ಹೀಗಿರುವಾಗ, ನಿಮ್ಮ ಸ್ವಂತ ಶಕ್ತಿಯಿಂದ ಅವುಗಳನ್ನು ಪಡೆದುಕೊಂಡವರಂತೆ ಏಕೆ ಜಂಬಕೊಚ್ಚಿಕೊಳ್ಳುವಿರಿ?

ನಿಮಗೆ ಅಗತ್ಯವಾದ ಪ್ರತಿಯೊಂದೂ ನಿಮಗಿದೆಯೆಂದು ನೀವು ಭಾವಿಸಿಕೊಂಡಿದ್ದೀರಿ. ನೀವು ನಿಮ್ಮನ್ನು ಐಶ್ವರ್ಯವಂತರೆಂದೂ ರಾಜರುಗಳೆಂದೂ ಭಾವಿಸಿಕೊಂಡಿದ್ದೀರಿ. ನೀವು ನಿಜವಾಗಿಯೂ ರಾಜರುಗಳಾಗಿದ್ದರೆ ನನಗೆ ಎಷ್ಟೋ ಸಂತೋಷವಾಗುತ್ತಿತ್ತು. ಆಗ ನಾವೂ ನಿಮ್ಮೊಂದಿಗೆ ರಾಜರುಗಳಾಗುತ್ತಿದ್ದೆವು. ಆದರೆ ದೇವರು ನನಗೂ ಉಳಿದ ಅಪೊಸ್ತಲರಿಗೂ ಕಡೆಯ ಸ್ಥಾನವನ್ನು ಕೊಟ್ಟಿದ್ದಾನೆಂದು ನನಗೆ ತೋರುತ್ತದೆ. ಜನರೆಲ್ಲರ ಎದುರಿನಲ್ಲಿ ನಾವು ಮರಣದಂಡನೆಗೆ ಗುರಿಯಾದಂಥವರಾಗಿದ್ದೇವೆ. ನಾವು ದೇವದೂತರಿಗೂ ಮನುಷ್ಯರಿಗೂ ಒಟ್ಟಿನಲ್ಲಿ ಇಡೀ ಜಗತ್ತಿಗೇ ನೋಟವಾಗಿದ್ದೇವೆ. 10 ನಾವು ಕ್ರಿಸ್ತನಿಗೋಸ್ಕರ ಮೂರ್ಖರಾಗಿದ್ದೇವೆ. ಆದರೆ ನೀವು ನಿಮ್ಮನ್ನು ಕ್ರಿಸ್ತನಲ್ಲಿ ಬಹು ಜ್ಞಾನಿಗಳೆಂದು ಭಾವಿಸಿಕೊಂಡಿದ್ದೀರಿ. ನಾವು ಬಲಹೀನರಾಗಿದ್ದೇವೆ, ಆದರೆ ನೀವು ನಿಮ್ಮನ್ನು ಬಲಿಷ್ಠರೆಂದು ಭಾವಿಸಿಕೊಂಡಿದ್ದೀರಿ. ಜನರು ನಿಮಗೆ ಗೌರವವನ್ನು ಕೊಡುತ್ತಾರೆ; ನಮಗಾದರೋ ಅವರು ಗೌರವವನ್ನು ಕೊಡುವುದಿಲ್ಲ. 11 ಈಗಲೂ ಸಹ ನಾವು ಹಸಿದವರಾಗಿದ್ದೇವೆ; ಬಾಯಾರಿದವರಾಗಿದ್ದೇವೆ; ಧರಿಸಿಕೊಳ್ಳಲು ಸಾಕಷ್ಟು ಬಟ್ಟೆಯಿಲ್ಲದವರಾಗಿದ್ದೇವೆ. ಆಗಾಗ್ಗೆ ನಮಗೆ ಪೆಟ್ಟುಗಳು ಬೀಳುತ್ತಿರುತ್ತವೆ; ನಮಗೆ ಮನೆಗಳೂ ಇಲ್ಲ. 12 ನಾವು ಊಟಕ್ಕಾಗಿ ನಮ್ಮ ಕೈಯಾರೆ ಕಷ್ಟಪಟ್ಟು ದುಡಿಯುತ್ತೇವೆ. ಜನರು ನಮ್ಮನ್ನು ಶಪಿಸುತ್ತಾರೆ, ನಾವಾದರೋ ಅವರನ್ನು ಆಶೀರ್ವದಿಸುತ್ತೇವೆ. ಜನರು ನಮಗೆ ಹಿಂಸೆ ಕೊಟ್ಟರೂ ತಾಳಿಕೊಳ್ಳುತ್ತೇವೆ. 13 ಜನರು ನಮ್ಮ ಬಗ್ಗೆ ಕೆಟ್ಟ ವಿಷಯಗಳನ್ನು ಮಾತಾಡುತ್ತಾರೆ. ನಾವಾದರೋ ಅವರಿಗೆ ಒಳ್ಳೆಯ ವಿಷಯಗಳನ್ನು ಹೇಳುತ್ತೇವೆ. ಇಂದಿನವರೆಗೂ ಜನರು ನಮ್ಮನ್ನು ಲೋಕದ ಕಸವೋ ಭೂಮಿಯ ಹೊಲಸೋ ಎಂಬಂತೆ ಪರಿಗಣಿಸಿದ್ದಾರೆ.

14 ನಿಮ್ಮನ್ನು ನಾಚಿಕೆಪಡಿಸುವುದಕ್ಕಾಗಿ ನಾನು ಪ್ರಯತ್ನಿಸುತ್ತಿಲ್ಲ. ಆದರೆ ನೀವು ನನ್ನ ಪ್ರಿಯ ಮಕ್ಕಳಾಗಿರುವುದರಿಂದ ನಿಮ್ಮನ್ನು ಎಚ್ಚರಿಸುವುದಕ್ಕಾಗಿ ಈ ಸಂಗತಿಗಳನ್ನು ಬರೆಯುತ್ತಿದ್ದೇನೆ. 15 ನಿಮಗೆ ಕ್ರಿಸ್ತನಲ್ಲಿ ಹತ್ತುಸಾವಿರ ಮಂದಿ ಉಪದೇಶಕರಿರಬಹುದು, ಆದರೆ ಬಹು ಮಂದಿ ತಂದೆಗಳು ಇಲ್ಲ. ಸುವಾರ್ತೆಯ ಮೂಲಕವಾಗಿ ಕ್ರಿಸ್ತ ಯೇಸುವಿನಲ್ಲಿ ನಾನೇ ನಿಮಗೆ ಆತ್ಮಿಕ ತಂದೆಯಾಗಿದ್ದೇನೆ. 16 ಆದ್ದರಿಂದ ನೀವು ನನ್ನಂತೆಯೇ ಇರಬೇಕೆಂದು ನಾನು ನಿಮ್ಮನ್ನು ಬೇಡಿಕೊಳ್ಳುತ್ತೇನೆ. 17 ಆದಕಾರಣವೇ, ನಾನು ನಿಮ್ಮ ಬಳಿಗೆ ತಿಮೊಥೆಯನನ್ನು ಕಳುಹಿಸುತ್ತಿದ್ದೇನೆ, ಅವನು ಪ್ರಭುವಿನಲ್ಲಿ ನನ್ನ ಮಗನಾಗಿದ್ದಾನೆ. ನಾನು ಅವನನ್ನು ಪ್ರೀತಿಸುತ್ತೇನೆ. ಅವನು ನಂಬಿಗಸ್ತನಾಗಿದ್ದಾನೆ. ನಾನು ಕ್ರಿಸ್ತ ಯೇಸುವಿನಲ್ಲಿ ಜೀವಿಸುವ ರೀತಿಯನ್ನು ಅವನು ನಿಮ್ಮ ಜ್ಞಾಪಕಕ್ಕೆ ತರುವನು. ಪ್ರತಿಯೊಂದು ಕಡೆಯಲ್ಲಿಯೂ ಎಲ್ಲಾ ಸಭೆಗಳಲ್ಲಿಯೂ ನಾನು ಅದೇ ರೀತಿಯ ಜೀವನವನ್ನು ಉಪದೇಶಿಸುತ್ತೇನೆ.

18 ನಿಮ್ಮಲ್ಲಿ ಕೆಲವರು ಜಂಬಕೊಚ್ಚಿಕೊಳ್ಳುತ್ತಿದ್ದಾರೆ. ನಾನು ನಿಮ್ಮ ಬಳಿಗೆ ಮತ್ತೆ ಬರುವುದಿಲ್ಲವೆಂದು ಯೋಚಿಸಿ, ನೀವು ಜಂಬಪಡುತ್ತಿದ್ದೀರಿ. 19 ಆದರೆ ನಾನು ಬಹುಬೇಗನೆ ನಿಮ್ಮ ಬಳಿಗೆ ಬರುತ್ತೇನೆ. ಪ್ರಭುವಿನ ಚಿತ್ತವಾದರೆ, ನಾನು ಬಂದು ಜಂಬಕೊಚ್ಚಿಕೊಳ್ಳುವವರು ಹೇಳುವ ಮಾತನ್ನಲ್ಲ, ಅವರು ಏನು ಮಾಡಬಲ್ಲರೆಂಬುದನ್ನು ಗೊತ್ತುಮಾಡಿಕೊಳ್ಳುವೆನು. 20 ಏಕೆಂದರೆ ದೇವರ ರಾಜ್ಯವು ಕೇವಲ ಮಾತಲ್ಲ, ಅದು ಶಕ್ತಿಯಾಗಿದೆ. 21 ನೀವು ಯಾವುದನ್ನು ಇಷ್ಟಪಡುತ್ತೀರಿ? ನಾನು ಬೆತ್ತವನ್ನು ತೆಗೆದುಕೊಂಡು ಬರಬೇಕೇ? ಅಥವಾ ಪ್ರೀತಿ ಮತ್ತು ಸೌಮ್ಯಭಾವಗಳಿಂದ ಕೂಡಿದವನಾಗಿ ಬರಬೇಕೆ?

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International