Print Page Options
Previous Prev Day Next DayNext

Old/New Testament

Each day includes a passage from both the Old Testament and New Testament.
Duration: 365 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 105-106

105 ಯೆಹೋವನಿಗೆ ಕೃತಜ್ಞತಾಸ್ತುತಿಮಾಡಿರಿ. ಆತನ ಹೆಸರನ್ನು ಆರಾಧಿಸಿರಿ.
    ಆತನ ಅದ್ಭುತಕಾರ್ಯಗಳ ಕುರಿತು ಜನಾಂಗಗಳಿಗೆ ಸಾರಿ ಹೇಳಿರಿ.
ಯೆಹೋವನಿಗೆ ಗಾನಮಾಡಿರಿ; ಆತನನ್ನು ಸಂಕೀರ್ತಿಸಿರಿ.
    ಆತನ ಮಹತ್ಕಾರ್ಯಗಳ ಕುರಿತು ಕೊಂಡಾಡಿರಿ.
ಆತನ ಪವಿತ್ರ ನಾಮದಲ್ಲಿ ಹೆಮ್ಮೆಪಡಿರಿ.
    ಯೆಹೋವನ ಆರಾಧಕರೇ, ಸಂತೋಷಪಡಿರಿ.
ಯೆಹೋವನನ್ನೂ ಆತನ ಬಲವನ್ನೂ ಆಶ್ರಯಿಸಿಕೊಳ್ಳಿರಿ;
    ಸಹಾಯಕ್ಕಾಗಿ ಆತನ ಬಳಿಗೇ ಹೋಗಿರಿ.
ಆತನ ಅದ್ಭುತಕಾರ್ಯಗಳನ್ನು ಜ್ಞಾಪಿಸಿಕೊಳ್ಳಿರಿ.
    ಆತನ ಮಹತ್ಕಾರ್ಯಗಳನ್ನೂ ವಿವೇಕದ ನಿರ್ಧಾರಗಳನ್ನೂ ಜ್ಞಾಪಿಸಿಕೊಳ್ಳಿರಿ.
ನೀವು ಆತನ ಸೇವಕನಾದ ಅಬ್ರಹಾಮನ ಸಂತತಿಯವರಾಗಿದ್ದೀರಿ;
    ಆತನು ಆರಿಸಿಕೊಂಡ ಯಾಕೋಬನ ಸಂತತಿಯವರಾಗಿದ್ದೀರಿ.
ಯೆಹೋವನೇ ನಮ್ಮ ದೇವರು.
    ಆತನು ಇಡೀ ಪ್ರಪಂಚವನ್ನು ಆಳುವನು.[a]
ಆತನು ತನ್ನ ಒಡಂಬಡಿಕೆಯನ್ನು ಯಾವಾಗಲೂ ಜ್ಞಾಪಿಸಿಕೊಳ್ಳುವನು.
    ಆತನು ತನ್ನ ಆಜ್ಞೆಗಳನ್ನು ಸಾವಿರ ತಲೆಮಾರುಗಳವರೆಗೂ ಜ್ಞಾಪಿಸಿಕೊಳ್ಳುವನು.
ಆತನು ಅಬ್ರಹಾಮನೊಡನೆ ಒಡಂಬಡಿಕೆ ಮಾಡಿಕೊಂಡನು.
    ಆತನು ಇಸಾಕನಿಗೆ ವಾಗ್ದಾನ ಮಾಡಿದನು.
10 ಆತನು ಅದನ್ನು ಯಾಕೋಬನಿಗೆ ಕಟ್ಟಳೆಯನ್ನಾಗಿ ಮಾಡಿದನು.
    ದೇವರು ಇಸ್ರೇಲನೊಂದಿಗೆ ತನ್ನ ಶಾಶ್ವತವಾದ ಒಡಂಬಡಿಕೆಯನ್ನು ಮಾಡಿಕೊಂಡನು.
11 “ನಾನು ನಿನಗೆ ಕಾನಾನ್ ದೇಶವನ್ನು ಕೊಡುವೆನು.
    ಆ ದೇಶವು ನಿನ್ನದಾಗಿರುತ್ತದೆ” ಎಂದು ಆತನು ಹೇಳಿದನು.
12 ಅಬ್ರಹಾಮನ ಕುಟುಂಬವು ಚಿಕ್ಕದಾಗಿದ್ದಾಗ
    ಅವರು ಪ್ರಯಾಣಿಕರಂತೆ ಕಾನಾನಿನಲ್ಲಿ ವಾಸವಾಗಿದ್ದಾಗ,
    ಆತನು ಅವರಿಗೆ ಈ ವಾಗ್ದಾನವನ್ನು ಮಾಡಿದನು.
13 ಅವರು ದೇಶದಿಂದ ದೇಶಕ್ಕೂ
    ರಾಜ್ಯದಿಂದ ರಾಜ್ಯಕ್ಕೂ ಪ್ರಯಾಣ ಮಾಡಿದರು.
14 ಆದರೆ ಅವರಿಗೆ ಯಾರಿಂದಲೂ ಅನ್ಯಾಯವಾಗದಂತೆ ನೋಡಿಕೊಂಡನು.
    ಅವರನ್ನು ನೋಯಿಸಕೂಡದೆಂದು ಆತನು ರಾಜರುಗಳಿಗೆ ಎಚ್ಚರಿಕೆ ನೀಡಿದನು.
15 “ನಾನು ಆರಿಸಿಕೊಂಡಿರುವ ಜನರಿಗೆ ಕೇಡುಮಾಡಬೇಡಿ.
    ನನ್ನ ಪ್ರವಾದಿಗಳಿಗೆ ಯಾವ ಕೆಟ್ಟದ್ದನ್ನೂ ಮಾಡಬೇಡಿ” ಎಂದು ಆತನು ಹೇಳಿದನು.
16 ದೇವರು ಆ ದೇಶಕ್ಕೆ ಬರಗಾಲವನ್ನು ಬರಮಾಡಿದನು.
    ಜನರಿಗೆ ತಿನ್ನುವುದಕ್ಕೂ ಸಾಕಷ್ಟು ಆಹಾರವಿರಲಿಲ್ಲ.
17 ಆದರೆ ದೇವರು ಒಬ್ಬನನ್ನು ಅವರಿಗಿಂತ ಮುಂಚಿತವಾಗಿ ಕಳುಹಿಸಿಕೊಟ್ಟನು.
    ಗುಲಾಮತನಕ್ಕೆ ಮಾರಲ್ಪಟ್ಟ ಯೋಸೇಫನೇ ಅವನು.
18 ಅವರು ಯೋಸೇಫನ ಕಾಲುಗಳನ್ನು ಹಗ್ಗಗಳಿಂದ ಕಟ್ಟಿದರು;
    ಅವನ ಕೊರಳಿಗೆ ಕಬ್ಬಿಣದ ಬೇಡಿಯನ್ನು ಹಾಕಿದರು.
19 ಅವನ ಪ್ರವಾದನೆಯು ನೆರವೇರುವ ತನಕ ಅವನು ಗುಲಾಮನಾಗಿದ್ದನು.
    ಯೋಸೇಫನು ಸತ್ಯವಂತನೆಂದು ಯೆಹೋವನ ಸಂದೇಶವು ನಿರೂಪಿಸಿತು.
20 ಆದ್ದರಿಂದ ಈಜಿಪ್ಟಿನ ರಾಜನು ಅವನನ್ನು ಬಿಡುಗಡೆ ಮಾಡಿದನು.
    ಆ ದೇಶದ ರಾಜನು ಅವನನ್ನು ಸೆರೆಮನೆಯಿಂದ ಬಿಡಿಸಿದನು.
21 ಅರಮನೆಯ ಮೇಲ್ವಿಚಾರಕನನ್ನಾಗಿ ನೇಮಿಸಿದನು.
    ರಾಜನ ಆಸ್ತಿಯನ್ನೆಲ್ಲಾ ಯೋಸೇಫನು ನೋಡಿಕೊಂಡನು.
22 ಯೋಸೇಫನು ಇತರ ನಾಯಕರುಗಳಿಗೆ ಸಲಹೆಗಳನ್ನು ಕೊಟ್ಟನು;
    ಹಿರಿಯರಿಗೆ ಉಪದೇಶಿಸಿದನು.
23 ಬಳಿಕ ಇಸ್ರೇಲನು ಈಜಿಪ್ಟಿಗೆ ಬಂದನು.
    ಯಾಕೋಬನು ಹಾಮನ ದೇಶದಲ್ಲಿ ವಾಸಿಸಿದನು.
24 ಯಾಕೋಬನ ಕುಟುಂಬ ಬಹು ದೊಡ್ಡದಾಯಿತು.
    ಅವರು ಈಜಿಪ್ಟಿನವರಿಗಿಂತಲೂ ಬಲಿಷ್ಠರಾದರು.
25 ಆದ್ದರಿಂದ ಈಜಿಪ್ಟಿನವರು ಯಾಕೋಬನ ಕುಟುಂಬವನ್ನು ದ್ವೇಷಿಸತೊಡಗಿದರು.
    ಅವರು ತಮ್ಮ ಗುಲಾಮರ ವಿರೋಧವಾಗಿ ಸಂಚುಗಳನ್ನು ಮಾಡತೊಡಗಿದರು.
26 ಆದ್ದರಿಂದ ದೇವರು ತನ್ನ ಸೇವಕನಾದ ಮೋಶೆಯನ್ನೂ
    ತಾನು ಆರಿಸಿಕೊಂಡ ಯಾಜಕನಾದ ಆರೋನನನ್ನೂ ಕಳುಹಿಸಿದನು.
27 ಹಾಮನ ದೇಶದಲ್ಲಿ ದೇವರು ಅನೇಕ ಮಹತ್ಕಾರ್ಯಗಳನ್ನು
    ಮೋಶೆ ಆರೋನರ ಮೂಲಕವಾಗಿ ಮಾಡಿದನು.
28 ದೇವರು ಕಾರ್ಗತ್ತಲೆಯನ್ನು ಕಳುಹಿಸಿದನು;
    ಆದರೂ ಈಜಿಪ್ಟಿನವರು ಆತನಿಗೆ ಕಿವಿಗೊಡಲಿಲ್ಲ.
29 ಆದ್ದರಿಂದ ಆತನು ನೀರನ್ನು ರಕ್ತವನ್ನಾಗಿ ಮಾರ್ಪಡಿಸಿದನು,
    ಆಗ ಅವರ ಮೀನುಗಳೆಲ್ಲಾ ಸತ್ತುಹೋದವು.
30 ಬಳಿಕ ಈಜಿಪ್ಟಿನವರ ದೇಶವು ಕಪ್ಪೆಗಳಿಂದ ತುಂಬಿಹೋಯಿತು.
    ರಾಜನು ಮಲಗುವ ಕೋಣೆಯಲ್ಲಿಯೂ ಕಪ್ಪೆಗಳಿದ್ದವು.
31 ಆತನು ಆಜ್ಞಾಪಿಸಲು
    ವಿಷದ ಹುಳಗಳೂ ಹೇನುಗಳೂ ಬಂದವು.
    ಅವು ಎಲ್ಲೆಲ್ಲಿಯೂ ಹರಡಿಕೊಂಡವು.
32 ಆತನು ಮಳೆಯನ್ನು ಕಲ್ಮಳೆಯನ್ನಾಗಿ ಪರಿವರ್ತಿಸಿದನು.
    ಅವರ ದೇಶದಲ್ಲಿ ಸಿಡಿಲುಗಳು ಹೊಡೆದವು.
33 ದೇವರು ಅವರ ದ್ರಾಕ್ಷಾಲತೆಗಳನ್ನೂ ಅಂಜೂರದ ಮರಗಳನ್ನೂ ನಾಶಮಾಡಿದನು.
    ಅವರ ದೇಶದ ಪ್ರತಿಯೊಂದು ಮರವನ್ನೂ ಆತನು ನಾಶಮಾಡಿದನು.
34 ಆತನು ಆಜ್ಞಾಪಿಸಲು ಮಿಡತೆಗಳೂ
    ಜಿಟ್ಟೆಹುಳಗಳೂ ಅಸಂಖ್ಯಾತವಾಗಿ ಬಂದವು.
35 ಮಿಡತೆಗಳೂ ಜಿಟ್ಟೆಹುಳಗಳೂ ದೇಶದಲ್ಲಿದ್ದ ಸಸಿಗಳನ್ನೆಲ್ಲಾ ತಿಂದುಬಿಟ್ಟವು.
    ಭೂಮಿಯ ಮೇಲಿದ್ದ ಬೆಳೆಗಳನ್ನೆಲ್ಲಾ ಅವು ತಿಂದುಬಿಟ್ಟವು.
36 ಬಳಿಕ ದೇವರು ಈಜಿಪ್ಟ್ ದೇಶದ
    ಎಲ್ಲಾ ಚೊಚ್ಚಲು ಗಂಡುಮಕ್ಕಳನ್ನು ಕೊಂದುಹಾಕಿದನು.
37 ಆತನು ತನ್ನ ಜನರನ್ನು ಈಜಿಪ್ಟಿನಿಂದ ಕರೆದುಕೊಂಡು ಹೋದನು.
    ಅವರು ತಮ್ಮೊಂದಿಗೆ ಬೆಳ್ಳಿಬಂಗಾರಗಳನ್ನು ತೆಗೆದುಕೊಂಡು ಬಂದರು.
    ದೇವಜನರಲ್ಲಿ ಯಾರೂ ಎಡವಿಬೀಳಲಿಲ್ಲ.
38 ದೇವಜನರು ಈಜಿಪ್ಟಿನಿಂದ ಹೊರಟಾಗ ಸಂತೋಷಪಟ್ಟರು;
    ಯಾಕೆಂದರೆ ಅವರು ದೇವಜನರಿಗೆ ಹೆದರಿಕೊಂಡಿದ್ದರು.
39 ಆತನು ಹಗಲಿನಲ್ಲಿ ನೆರಳಿಗೋಸ್ಕರ ಮೋಡವನ್ನು ಕಂಬಳಿಯಂತೆ ಹರಡಿದನು;
    ರಾತ್ರಿಯಲ್ಲಿ ಬೆಳಕಿಗಾಗಿ ಅಗ್ನಿಸ್ತಂಭವನ್ನು ದಯಪಾಲಿಸಿದನು.
40 ಜನರು ಮಾಂಸಕ್ಕಾಗಿ ಕೇಳಿಕೊಂಡಾಗ ಆತನು ಅವರಿಗೆ ಲಾವಕ್ಕಿಗಳನ್ನು ಬರಮಾಡಿದನು;
    ಪರಲೋಕದಿಂದ ಮನ್ನವನ್ನು ದಯಪಾಲಿಸಿದನು.
41 ಆತನು ಬಂಡೆಯನ್ನು ಸೀಳಿದಾಗ ನೀರು ಚಿಮ್ಮುತ್ತಾ ಹೊರಬಂದಿತು;
    ಅರಣ್ಯದಲ್ಲಿ ನದಿಯು ಹರಿಯತೊಡಗಿತು!

42 ಆತನು ತನ್ನ ಸೇವಕನಾದ ಆಬ್ರಹಾಮನಿಗೆ
    ತಾನು ಮಾಡಿದ ವಾಗ್ದಾನವನ್ನು ಜ್ಞಾಪಿಸಿಕೊಂಡನು.
43 ಆತನು ತನ್ನ ಜನರನ್ನು ಈಜಿಪ್ಟಿನಿಂದ ಹೊರತಂದನು.
    ಜನರು ಉಲ್ಲಾಸಪಡುತ್ತಾ ಹರ್ಷಗೀತೆಗಳನ್ನು ಹಾಡುತ್ತಾ ಹೊರಬಂದರು!
44 ಅನ್ಯಜನರು ವಾಸವಾಗಿದ್ದ ದೇಶವನ್ನು ದೇವರು ತನ್ನ ಜನರಿಗೆ ಕೊಟ್ಟನು.
    ಅನ್ಯಜನರು ದುಡಿದು ಸಂಪಾದಿಸಿದ್ದವುಗಳನ್ನು ದೇವಜನರು ಪಡೆದುಕೊಂಡರು.
45 ತನ್ನ ಜನರು ತನ್ನ ಕಟ್ಟಳೆಗಳಿಗೆ ವಿಧೇಯರಾಗಲೆಂದೂ
    ತನ್ನ ಉಪದೇಶಗಳನ್ನು ಎಚ್ಚರಿಕೆಯಿಂದ ಪಾಲಿಸಲೆಂದೂ ಆತನು ಹೀಗೆ ಮಾಡಿದನು.

ಯೆಹೋವನನ್ನು ಕೊಂಡಾಡಿರಿ.

106 ಯೆಹೋವನನ್ನು ಸ್ತುತಿಸಿರಿ!
ಆತನು ಒಳ್ಳೆಯವನು! ಆತನಿಗೆ ಕೃತಜ್ಞತಾಸ್ತುತಿಮಾಡಿರಿ.
    ಆತನ ಪ್ರೀತಿಯು ಶಾಶ್ವತವಾದದ್ದು!
ಯೆಹೋವನ ಮಹತ್ವವನ್ನು ಸಂಪೂರ್ಣವಾಗಿ ವರ್ಣಿಸಲು ಯಾರಿಗೂ ಆಗದು;
    ಆತನನ್ನು ಸಂಪೂರ್ಣವಾಗಿ ಸ್ತುತಿಸುವುದಕ್ಕೂ ಯಾರಿಗೂ ಸಾಧ್ಯವಿಲ್ಲ.
ದೇವರ ಆಜ್ಞೆಗಳಿಗೆ ವಿಧೇಯರಾಗಿರುವವರು ಭಾಗ್ಯವಂತರೇ ಸರಿ!
    ಅವರು ಸತ್ಕಾರ್ಯಗಳನ್ನು ಯಾವಾಗಲೂ ಮಾಡುತ್ತಿರುವರು.

ಯೆಹೋವನೇ, ನಿನ್ನ ಜನರಿಗೆ ದಯೆತೋರುವಾಗ ನನ್ನನ್ನು ಜ್ಞಾಪಿಸಿಕೊಂಡು ದಯೆತೋರು.
    ನಿನ್ನ ಜನರನ್ನು ರಕ್ಷಿಸುವಾಗ ನನ್ನನ್ನು ನೆನಪು ಮಾಡಿಕೊಂಡು ರಕ್ಷಿಸು.
ಯೆಹೋವನೇ, ನಿನ್ನ ಜನರಿಗೋಸ್ಕರ ನೀನು ಮಾಡುವ
    ಒಳ್ಳೆಯವುಗಳಲ್ಲಿ ನನಗೂ ಪಾಲು ದೊರೆಯಲಿ.
ನಿನ್ನ ಜನರೊಂದಿಗೆ ನಾನೂ ಸಂತೋಷಪಡುವಂತೆ ಮಾಡು.
    ನಿನ್ನ ಜನರೊಂದಿಗೆ ನಾನೂ ನಿನ್ನ ಬಗ್ಗೆ ಹೆಮ್ಮೆಪಡುವಂತಾಗಲಿ.

ನಮ್ಮ ಪೂರ್ವಿಕರು ಪಾಪಮಾಡಿದಂತೆಯೇ ನಾವು ಪಾಪ ಮಾಡಿದೆವು.
    ನಾವು ಅಪರಾಧಿಗಳಾಗಿದ್ದೆವು; ದುಷ್ಕೃತ್ಯಗಳನ್ನು ಮಾಡಿದೆವು!
ನೀನು ಈಜಿಪ್ಟಿನಲ್ಲಿ ಮಾಡಿದ ಮಹತ್ಕಾರ್ಯಗಳಿಂದ
    ನಮ್ಮ ಪೂರ್ವಿಕರು ಏನೂ ಕಲಿತುಕೊಳ್ಳಲಿಲ್ಲ.
ಕೆಂಪು ಸಮುದ್ರದ ಬಳಿಯಲ್ಲಿ
    ನಮ್ಮ ಪೂರ್ವಿಕರು ನಿನಗೆ ವಿರೋಧವಾಗಿ ತಿರುಗಿದರು.

ಆದರೆ ಆತನು ತನ್ನ ಹೆಸರಿನ ನಿಮಿತ್ತವಾಗಿ ನಮ್ಮ ಪೂರ್ವಿಕರನ್ನು ರಕ್ಷಿಸಿದನು;
    ತನ್ನ ಮಹಾಶಕ್ತಿಯನ್ನು ತೋರಿಸುವುದಕ್ಕಾಗಿ ಅವರನ್ನು ರಕ್ಷಿಸಿದನು.
ಆತನು ಆಜ್ಞಾಪಿಸಲು ಕೆಂಪು ಸಮುದ್ರವು ಒಣಗಿಹೋಯಿತು.
    ಆತನು ಆಳವಾದ ಸಮುದ್ರವನ್ನು ಇಬ್ಭಾಗ ಮಾಡಿ ಮರಳುಗಾಡಿನಂತೆ ಒಣಗಿಹೋಗಿದ್ದ ಭೂಮಿಯ ಮೇಲೆ ನಮ್ಮ ಪೂರ್ವಿಕರನ್ನು ನಡೆಸಿದನು.
10 ನಮ್ಮ ಪೂರ್ವಿಕರನ್ನು ಅವರ ಶತ್ರುಗಳಿಂದ ರಕ್ಷಿಸಿದನು!
    ವೈರಿಗಳಿಂದ ಪಾರುಮಾಡಿದನು!
11 ಅವರ ಶತ್ರುಗಳನ್ನು ಸಮುದ್ರದಲ್ಲಿ ಮುಳುಗಿಸಿಬಿಟ್ಟನು.
    ಅವರ ಶತ್ರುಗಳಲ್ಲಿ ಒಬ್ಬರೂ ತಪ್ಪಿಸಿಕೊಳ್ಳಲಾಗಲಿಲ್ಲ!

12 ನಮ್ಮ ಪೂರ್ವಿಕರು ಆತನ ಆಜ್ಞೆಗಳನ್ನು
    ನಂಬಿ ಆತನನ್ನು ಸಂಕೀರ್ತಿಸಿದರು.
13 ಆದರೆ ಆತನ ಕಾರ್ಯಗಳನ್ನು ಅವರು ಬೇಗನೆ ಮರೆತುಬಿಟ್ಟರು;
    ಆತನ ಉಪದೇಶಗಳಿಗೆ ಕಿವಿಗೊಡಲಿಲ್ಲ.
14 ನಮ್ಮ ಪೂರ್ವಿಕರು ಮರಳುಗಾಡಿನಲ್ಲಿ
    ಆಶಾತುರರಾಗಿ ಆತನನ್ನು ಪರೀಕ್ಷಿಸಿದರು.
15 ಆತನು ಅವರ ಆಸೆಯನ್ನು ಪೂರೈಸಿದರೂ
    ಅವರಿಗೆ ಭಯಂಕರವಾದ ರೋಗವನ್ನು ಬರಮಾಡಿದನು.
16 ಅವರು ಮೋಶೆಯ ಮೇಲೆಯೂ
    ಯೆಹೋವನ ಪವಿತ್ರ ಯಾಜಕನಾದ ಆರೋನನ ಮೇಲೆಯೂ ಹೊಟ್ಟೆಕಿಚ್ಚುಪಟ್ಟರು.
17 ಭೂಮಿಯು ಬಾಯ್ದೆರೆದು ಹೊಟ್ಟೆಕಿಚ್ಚುಪಟ್ಟ ದಾತಾನನನ್ನೂ
    ಅಬಿರಾಮನ ಪಂಗಡದವರನ್ನೂ ನುಂಗಿಬಿಟ್ಟಿತು.
18 ಬಳಿಕ ಅವರ ಮಧ್ಯದಲ್ಲಿ ಬೆಂಕಿಯುಂಟಾಯಿತು;
    ಅಗ್ನಿಜ್ವಾಲೆಯು ಆ ದುಷ್ಟರನ್ನು ದಹಿಸಿಬಿಟ್ಟಿತು.
19 ಹೋರೇಬ್ ಬೆಟ್ಟದ ಬಳಿಯಲ್ಲಿ
    ಅವರು ಚಿನ್ನದ ಬಸವನನ್ನು ಮಾಡಿ ಅದಕ್ಕೆ ಅಡ್ಡಬಿದ್ದರು.
20 ಹುಲ್ಲುತಿನ್ನುವ ಹೋರಿಯ ಮೂರ್ತಿಗಾಗಿ
    ಅವರು ಮಹಿಮಾಸ್ವರೂಪನಾದ ದೇವರನ್ನೇ ಬಿಟ್ಟುಕೊಟ್ಟರು!
21 ಆತನು ನಮ್ಮ ಪೂರ್ವಿಕರನ್ನು ರಕ್ಷಿಸಿದರೂ ಅವರು ಆತನನ್ನು ಮರೆತುಬಿಟ್ಟರು!
    ಈಜಿಪ್ಟಿನಲ್ಲಿ ಮಹತ್ಕಾರ್ಯಗಳನ್ನು ಮಾಡಿದ ದೇವರನ್ನು ಅವರು ಮರೆತುಬಿಟ್ಟರು.
22 ಆತನು ಹಾಮನ ದೇಶದಲ್ಲಿ ಅದ್ಭುತಕಾರ್ಯಗಳನ್ನು ಮಾಡಿದನು.
    ಆತನು ಕೆಂಪು ಸಮುದ್ರದ ಸಮೀಪದಲ್ಲಿ ಭಯಂಕರವಾದ ಕಾರ್ಯಗಳನ್ನು ಮಾಡಿದನು!

23 ಆತನು ಅವರನ್ನು ನಾಶಮಾಡಬೇಕೆಂದಿದ್ದನು.
    ಆದರೆ ಆತನು ಆರಿಸಿಕೊಂಡಿದ್ದ ಮೋಶೆಯು ಮಧ್ಯಸ್ಥನಾಗಿ
    ಅವರನ್ನು ನಾಶಮಾಡದಂತೆ ಆತನ ಕೋಪವನ್ನು ಶಾಂತಪಡಿಸಿದನು.

24 ಬಳಿಕ ಅವರು ರಮಣೀಯವಾದ ಕಾನಾನ್ ದೇಶಕ್ಕೆ ಹೋಗಲು ಒಪ್ಪಲಿಲ್ಲ.
    ಅಲ್ಲಿಯ ನಿವಾಸಿಗಳನ್ನು ಸೋಲಿಸಲು ಆತನು ತಮಗೆ ಸಹಾಯ ಮಾಡುತ್ತಾನೆಂಬ ನಂಬಿಕೆ ಅವರಲ್ಲಿರಲಿಲ್ಲ.
25 ನಮ್ಮ ಪೂರ್ವಿಕರು ತಮ್ಮತಮ್ಮ ಗುಡಾರಗಳಲ್ಲಿ ಗುಣುಗುಟ್ಟಿ
    ದೇವರ ಮಾತಿಗೆ ವಿಧೇಯರಾಗಲಿಲ್ಲ.
26 ಆದ್ದರಿಂದ ಅವರು ಅರಣ್ಯದಲ್ಲಿ ಸಾಯುವುದಾಗಿ
    ದೇವರು ಪ್ರಮಾಣ ಮಾಡಿದನು.
27 ಅವರ ಸಂತತಿಗಳವರು ಬೇರೆಯವರಿಂದ ಸೋಲಿಸಲ್ಪಡುವುದಾಗಿ ಆತನು ಪ್ರಮಾಣ ಮಾಡಿದನು.
    ನಮ್ಮ ಪೂರ್ವಿಕರನ್ನು ಜನಾಂಗಗಳ ಮಧ್ಯೆ ಚದರಿಸುವುದಾಗಿ ಆತನು ಪ್ರಮಾಣ ಮಾಡಿದನು.

28 ಬಳಿಕ ಬಾಳ್ ಪೆಗೋರಿನಲ್ಲಿ ದೇವಜನರು ಬಾಳನನ್ನು ಪೂಜಿಸಲು ಸೇರಿಕೊಂಡರು.
    ಜೀವವಿಲ್ಲದ ವಿಗ್ರಹಗಳಿಗೆ ಅರ್ಪಿಸಿದ ಮಾಂಸವನ್ನು ದೇವಜನರು ತಿಂದರು.[b]
29 ಯೆಹೋವನು ತನ್ನ ಜನರ ಮೇಲೆ ಬಹು ಕೋಪಗೊಂಡು ಅವರಿಗೆ ಭಯಂಕರವಾದ ಕಾಯಿಲೆಯನ್ನು ಬರಮಾಡಿದನು.
30 ಆದರೆ ಫೀನೆಹಾಸನು ಎದ್ದು ಅವರನ್ನು ದಂಡಿಸಲು
    ಆತನು (ಯೆಹೋವನು) ಆ ಕಾಯಿಲೆಯನ್ನು ನಿಲ್ಲಿಸಿದನು.
31 ಫೀನೆಹಾಸನ ಈ ಕಾರ್ಯವು
    ಅವನನ್ನು ತಲೆತಲೆಮಾರುಗಳವರೆಗೂ ನೀತಿವಂತನನ್ನಾಗಿ ಮಾಡಿತು.

32 ಮೆರೀಬಾದಲ್ಲಿ ಜನರು ಮತ್ತೆ ಆತನನ್ನು ರೇಗಿಸಿದರು.
    ಅವರ ದೆಸೆಯಿಂದ ಮೋಶೆಗೆ ಕೇಡಾಯಿತು.
33 ಅವರು ಆತನಿಗೆ (ದೇವಾರಾತ್ಮನಿಗೆ) ವಿರೋಧವಾಗಿ ನಿಂತರು.
    ಇದರಿಂದ ಬೇಸರಗೊಂಡಿದ್ದ ಮೋಶೆಯು ದುಡುಕಿ ಮಾತಾಡಿದನು.

34 ಕಾನಾನಿನಲ್ಲಿ ವಾಸವಾಗಿದ್ದ ಅನ್ಯ ಜನಾಂಗಗಳನ್ನು ನಾಶಮಾಡಲು ಯೆಹೋವನು ಅವರಿಗೆ ಹೇಳಿದನು.
    ಆದರೆ ಇಸ್ರೇಲರು ದೇವರಿಗೆ ವಿಧೇಯರಾಗಲಿಲ್ಲ.
35 ಅವರು ಬೇರೆಯವರೊಂದಿಗೆ ಸೇರಿಕೊಂಡು
    ಅವರ ದುರಾಚಾರಗಳನ್ನೇ ಮಾಡಿದರು.
36 ಅವರು ದೇವಜನರಿಗೆ ಉರುಲಿನಂತಾದರು.
    ಅವರ ದೇವರುಗಳನ್ನು ದೇವಜನರು ಪೂಜಿಸತೊಡಗಿದರು.
37 ದೇವಜನರು ತಮ್ಮ ಸ್ವಂತ ಮಕ್ಕಳನ್ನೂ
    ಆ ದೆವ್ವಗಳಿಗೆ ಬಲಿಕೊಟ್ಟರು.
38 ದೇವಜನರು ನಿರಪರಾಧಿಗಳಾದ ತಮ್ಮ ಮಕ್ಕಳ ರಕ್ತವನ್ನು
    ಆ ಸುಳ್ಳುದೇವರುಗಳಿಗೆ ಅರ್ಪಿಸಿದರು.
39 ತಮ್ಮ ಪಾಪಕೃತ್ಯಗಳಿಂದ ದೇವಜನರು ಮಲಿನಗೊಂಡರು.
    ಅವರು ದೇವರಿಗೆ ಅಪನಂಬಿಗಸ್ತರಾಗಿ ಅನ್ಯಜನರು ಮಾಡಿದವುಗಳನ್ನು ಮಾಡಿದರು.
40 ಆತನು ತನ್ನ ಜನರ ಮೇಲೆ ಕೋಪಗೊಂಡನು;
    ಅವರ ವಿಷಯದಲ್ಲಿ ಬೇಸರಗೊಂಡನು!
41 ಆತನು ತನ್ನ ಜನರನ್ನು ಅನ್ಯಜನಾಂಗಗಳಿಗೆ ಒಪ್ಪಿಸಿದನು;
    ಅವರ ಮೇಲೆ ದೊರೆತನ ಮಾಡುವಂತೆ ವೈರಿಗಳಿಗೆ ಅವರನ್ನು ಬಿಟ್ಟುಕೊಟ್ಟನು.
42 ಶತ್ರುಗಳು ಅವರನ್ನು ತಮ್ಮ ಅಧೀನದಲ್ಲಿಟ್ಟುಕೊಂಡು
    ಅವರ ಜೀವಿತವನ್ನು ಸಂಕಷ್ಟಕ್ಕೆ ಗುರಿಮಾಡಿದರು.
43 ಆತನು ತನ್ನ ಜನರನ್ನು ಅನೇಕ ಸಲ ರಕ್ಷಿಸಿದರೂ
    ಅವರು ಆತನಿಗೆ ವಿರೋಧವಾಗಿ ತಿರುಗಿ ತಮ್ಮ ಇಷ್ಟಾನುಸಾರವಾಗಿ ಮಾಡಿದರು.
    ಅವರು ಅನೇಕಾನೇಕ ಕೆಟ್ಟಕಾರ್ಯಗಳನ್ನು ಮಾಡಿದರು.
44 ಆದರೆ ಅವರು ಆಪತ್ತಿನಲ್ಲಿದ್ದಾಗಲೆಲ್ಲಾ ದೇವರಿಗೆ ಮೊರೆಯಿಟ್ಟರು;
    ಆತನು ಅವರ ಪ್ರಾರ್ಥನೆಗಳಿಗೆ ಸದುತ್ತರವನ್ನು ದಯಪಾಲಿಸಿದನು.
45 ಆತನು ತನ್ನ ಒಡಂಬಡಿಕೆಯನ್ನು ಯಾವಾಗಲೂ ಜ್ಞಾಪಿಸಿಕೊಂಡನು.
    ತನ್ನ ಮಹಾಪ್ರೀತಿಯಿಂದ ಅವರನ್ನು ಸಂತೈಸಿದನು.
46 ಅನ್ಯ ಜನಾಂಗಗಳು ಆತನ ಜನರನ್ನು ಸೆರೆಯಾಳುಗಳನ್ನಾಗಿ ಎಳೆದೊಯ್ದರು.
    ಅನ್ಯಜನಾಂಗಗಳು ತನ್ನ ಜನರಿಗೆ ದಯೆತೋರುವಂತೆ ಆತನು ಮಾಡಿದನು.
47 ನಮ್ಮ ದೇವರಾದ ಯೆಹೋವನು ನಮ್ಮನ್ನು ರಕ್ಷಿಸಿದನು!
    ಅನ್ಯಜನಾಂಗಗಳಿಂದ ನಮ್ಮನ್ನು ಬಿಡಿಸಿಕೊಂಡು ಬಂದನು.
ಆಗ ನಾವು ಆತನ ಪವಿತ್ರ ಹೆಸರನ್ನು ಕೊಂಡಾಡುವುದಕ್ಕೂ
    ಆತನನ್ನು ಸಂಕೀರ್ತಿಸುವುದಕ್ಕೂ ಸಾಧ್ಯವಾಯಿತು.
48 ಇಸ್ರೇಲಿನ ದೇವರಾದ ಯೆಹೋವನನ್ನು ಕೊಂಡಾಡಿರಿ.
    ಆತನು ಯಾವಾಗಲೂ ಇದ್ದವನೂ ಎಂದೆಂದಿಗೂ ಇರುವಾತನೂ ಆಗಿದ್ದಾನೆ.
“ಆಮೆನ್! ಯೆಹೋವನಿಗೆ ಸ್ತೋತ್ರವಾಗಲಿ!”
    ಎಂದು ಜನರೆಲ್ಲರೂ ಹೇಳಲಿ.

1 ಕೊರಿಂಥದವರಿಗೆ 3

ಮನುಷ್ಯರನ್ನು ಅನುಸರಿಸುವುದು ತಪ್ಪು

ಸಹೋದರ ಸಹೋದರಿಯರೇ, ನಾನು ಆತ್ಮಿಕ ಜನರೊಂದಿಗೆ ಮಾತಾಡುವಂತೆ ಮೊದಲು ನಿಮ್ಮೊಂದಿಗೆ ಮಾತಾಡಲಾಗಲಿಲ್ಲ. ಪ್ರಾಪಂಚಿಕರೂ ಕ್ರಿಸ್ತನಲ್ಲಿ ಎಳೆಕೂಸುಗಳೂ ಆಗಿರುವಂಥವರೊಂದಿಗೆ ಮಾತಾಡುವಂತೆ ನಾನು ನಿಮ್ಮೊಂದಿಗೆ ಮಾತಾಡಬೇಕಾಯಿತು. ನಾನು ನಿಮಗೆ ಮಾಡಿದ ಉಪದೇಶವು ಗಟ್ಟಿಯಾದ ಆಹಾರದಂತಿರದೆ ಹಾಲಿನಂತಿತ್ತು; ಏಕೆಂದರೆ ಗಟ್ಟಿಯಾದ ಆಹಾರವನ್ನು ತೆಗೆದುಕೊಳ್ಳಲು ನೀವಿನ್ನೂ ಸಿದ್ಧರಾಗಿರಲಿಲ್ಲ. ಈಗಲೂ ಸಹ ಗಟ್ಟಿಯಾದ ಆಹಾರವನ್ನು ತೆಗೆದುಕೊಳ್ಳಲು ನೀವು ಸಿದ್ಧರಾಗಿಲ್ಲ. ನೀವಿನ್ನೂ ಆತ್ಮಿಕರಾಗಿಲ್ಲ. ನಿಮ್ಮ ನಡುವೆ ಹೊಟ್ಟೆಕಿಚ್ಚಿದೆ; ವಾಗ್ವಾದಗಳಿವೆ; ಜಗಳಗಳಿವೆ. ನೀವು ಆತ್ಮಿಕರಲ್ಲವೆಂಬುದನ್ನು ಇವು ಸೂಚಿಸುತ್ತವೆ. ನೀವು ಲೋಕದ ಜನರಂತೆಯೇ ವರ್ತಿಸುತ್ತಿದ್ದೀರಿ. ನಿಮ್ಮಲ್ಲಿ ಒಬ್ಬನು, “ನಾನು ಪೌಲನನ್ನು ಹಿಂಬಾಲಿಸುತ್ತೇನೆ” ಎನ್ನುತ್ತಾನೆ. ಮತ್ತೊಬ್ಬನು “ನಾನು ಅಪೊಲ್ಲೋಸನನ್ನು ಹಿಂಬಾಲಿಸುತ್ತೇನೆ” ಎನ್ನುತ್ತಾನೆ. ನೀವು ಹೀಗೆ ವಾಗ್ವಾದ ಮಾಡುವಾಗ ಲೋಕದ ಜನರಂತೆಯೇ ವರ್ತಿಸುವವರಾಗಿದ್ದೀರಿ.

ಅಪೊಲ್ಲೋಸನು ಮುಖ್ಯವಾದವನೇ? ಇಲ್ಲ! ಪೌಲನು ಮುಖ್ಯವಾದವನೇ? ಇಲ್ಲ! ನೀವು ನಂಬಿಕೊಳ್ಳಲು ಸಹಾಯ ಮಾಡುವ ನಾವು ಕೇವಲ ದೇವರ ಸೇವಕರಾಗಿದ್ದೇವೆ. ದೇವರು ನಮಗೆ ಕೊಟ್ಟ ಕೆಲಸವನ್ನು ನಮ್ಮಲ್ಲಿ ಪ್ರತಿಯೊಬ್ಬರೂ ಮಾಡಿದೆವು. ನಾನು ಬೀಜವನ್ನು ಬಿತ್ತಿದೆನು; ಅಪೊಲ್ಲೋಸನು ನೀರನ್ನು ಹಾಕಿದನು. ಆದರೆ ಬೀಜವನ್ನು ಬೆಳೆಯಿಸಿದವನು ದೇವರೇ. ಆದ್ದರಿಂದ ಬೀಜ ಬಿತ್ತುವವನಾಗಲಿ ನೀರು ಹಾಕುವವನಾಗಲಿ ಮುಖ್ಯನಲ್ಲ. ದೇವರೊಬ್ಬನು ಮಾತ್ರ ಮುಖ್ಯವಾದವನು, ಏಕೆಂದರೆ ಬೀಜಗಳನ್ನು ಬೆಳೆಯಿಸುವವನು ಆತನೊಬ್ಬನೇ. ಬೀಜ ಬಿತ್ತುವವನ ಮತ್ತು ನೀರನ್ನು ಹಾಕುವವನ ಉದ್ದೇಶವು ಒಂದೇ ಆಗಿದೆ. ಮತ್ತು ಪ್ರತಿಯೊಬ್ಬನಿಗೂ ಅವನವನ ಕೆಲಸಕ್ಕೆ ತಕ್ಕ ಪ್ರತಿಫಲ ದೊರೆಯುವುದು. ನಾವು ದೇವರ ಜೊತೆಕೆಲಸದವರಾಗಿದ್ದೇವೆ. ನೀವು ದೇವರ ಹೊಲವಾಗಿದ್ದೀರಿ.

ಇದಲ್ಲದೆ ನೀವು ದೇವರ ಕಟ್ಟಡವಾಗಿದ್ದೀರಿ. 10 ದೇವರು ನನಗೆ ಕೊಟ್ಟ ವರದಾನಗಳನ್ನು ಉಪಯೋಗಿಸಿ ಚತುರ ಶಿಲ್ಪಿಯಂತೆ ನಾನು ಆ ಮನೆಗೆ ಅಸ್ತಿವಾರವನ್ನು ಹಾಕಿದೆನು. ಇತರ ಜನರು ಆ ಅಸ್ತಿವಾರದ ಮೇಲೆ ಕಟ್ಟುತ್ತಿದ್ದಾರೆ. ಆದರೆ ಪ್ರತಿಯೊಬ್ಬ ವ್ಯಕ್ತಿಯು ತಾನು ಹೇಗೆ ಕಟ್ಟುತ್ತಿದ್ದಾನೆ ಎಂಬುದರ ಬಗ್ಗೆ ಎಚ್ಚರದಿಂದಿರಬೇಕು. 11 ಅಸ್ತಿವಾರವನ್ನು ಆಗಲೇ ಹಾಕಲಾಗಿದೆ. ಆ ಅಸ್ತಿವಾರವು ಯೇಸು ಕ್ರಿಸ್ತನೇ. ಆ ಅಸ್ತಿವಾರವನ್ನಲ್ಲದೆ ಬೇರೊಂದು ಅಸ್ತಿವಾರವನ್ನು ಬೇರೆ ಯಾರೂ ಹಾಕಲಾರರು. 12 ಒಬ್ಬ ವ್ಯಕ್ತಿಯು ಆ ಅಸ್ತಿವಾರದ ಮೇಲೆ ಚಿನ್ನ, ಬೆಳ್ಳಿ, ರತ್ನ, ಮರ, ಹುಲ್ಲು ಮತ್ತು ಜೊಂಡುಗಳಿಂದ ಕಟ್ಟಬಹುದು. 13 ಆದರೆ ಪ್ರತಿಯೊಬ್ಬನ ಕೆಲಸವು ಸ್ಪಷ್ಟವಾಗಿ ಕಾಣುವುದು; ಏಕೆಂದರೆ, ಕ್ರಿಸ್ತನು ಬರುವ ದಿನವು ಅದನ್ನು ಸ್ಪಷ್ಟಪಡಿಸುವುದು. ಆ ದಿನವು ಬೆಂಕಿಯೊಂದಿಗೆ ಉದಯಿಸುವುದು. ಆ ಬೆಂಕಿಯು ಪ್ರತಿಯೊಬ್ಬ ವ್ಯಕ್ತಿಯ ಕೆಲಸವನ್ನು ಪರೀಕ್ಷಿಸುವುದು. 14 ಅಸ್ತಿವಾರದ ಮೇಲೆ ಕಟ್ಟಿದ ಕಟ್ಟಡವು ಸ್ಥಿರವಾಗಿದ್ದರೆ, ಕಟ್ಟಿದವನು ಪ್ರತಿಫಲವನ್ನು ಹೊಂದಿಕೊಳ್ಳುವನು. 15 ಆದರೆ ಕಟ್ಟಡವು ಸುಟ್ಟುಹೋದರೆ, ಕಟ್ಟಿದವನಿಗೆ ನಷ್ಟವಾಗುವುದು. ಅವನು ರಕ್ಷಣೆ ಹೊಂದುವನು, ಆದರೆ ಅವನು ಬೆಂಕಿಯಿಂದ ತಪ್ಪಿಸಿಕೊಂಡವನಂತಿರುವನು.

16 ನೀವೇ ದೇವರ ಆಲಯವಾಗಿದ್ದೀರಿ. ಇದು ನಿಮಗೆ ಚೆನ್ನಾಗಿ ತಿಳಿದಿದೆ. ದೇವರಾತ್ಮನು ನಿಮ್ಮೊಳಗೆ ವಾಸವಾಗಿದ್ದಾನೆ. 17 ಯಾವನಾದರೂ ದೇವರ ಆಲಯವನ್ನು ನಾಶಮಾಡಿದರೆ ದೇವರು ಅವನನ್ನು ನಾಶಮಾಡುವನು. ಏಕೆಂದರೆ ದೇವರ ಆಲಯವು ಪರಿಶುದ್ಧವಾದದ್ದು. ನೀವೇ ದೇವರ ಆಲಯವಾಗಿದ್ದೀರಿ.

18 ನಿಮಗೆ ನೀವೇ ಮೋಸಮಾಡಿಕೊಳ್ಳಬೇಡಿ. ನಿಮ್ಮಲ್ಲಿರುವ ಯಾವನಾದರೂ ತಾನು ಈ ಲೋಕದಲ್ಲಿ ಜ್ಞಾನಿಯೆಂದು ಆಲೋಚಿಸಿಕೊಂಡರೆ ಅವನು ಮೂಢನಾಗಲೇಬೇಕು. ಆಗ ಆ ವ್ಯಕ್ತಿಯು ನಿಜವಾಗಿಯೂ ಜ್ಞಾನಿಯಾಗಬಲ್ಲನು. 19 ಏಕೆಂದರೆ ಈ ಲೋಕದ ಜ್ಞಾನವು ದೇವರಿಗೆ ಮೂರ್ಖತನವಾಗಿದೆ. “ದೇವರು ಜಾಣರನ್ನು ಅವರ ಕುತಂತ್ರದ ಮಾರ್ಗಗಳಲ್ಲೇ ಹಿಡಿದುಕೊಳ್ಳುವನು”(A) ಎಂದು ಪವಿತ್ರ ಗ್ರಂಥದಲ್ಲಿ ಬರೆಯಲಾಗಿದೆ. 20 “ಪ್ರಭುವು ಜ್ಞಾನಿಗಳ ಆಲೋಚನೆಗಳನ್ನು ತಿಳಿದಿದ್ದಾನೆ. ಅವರ ಆಲೋಚನೆಗಳು ನಿಷ್ಪ್ರಯೋಜಕವೆಂದು ಆತನಿಗೆ ಗೊತ್ತಿದೆ”(B) ಎಂದು ಸಹ ಪವಿತ್ರ ಗ್ರಂಥದಲ್ಲಿ ಬರೆಯಲ್ಪಟ್ಟಿದೆ. 21 ಆದ್ದರಿಂದ ನೀವು ಜನರ ಬಗ್ಗೆ ಹೆಚ್ಚಳಪಡಬಾರದು. ಸಮಸ್ತವೂ ನಿಮ್ಮದೇ. 22 ಪೌಲ, ಅಪೊಲ್ಲೋಸ್ ಮತ್ತು ಕೇಫ ನಿಮ್ಮವರಾಗಿದ್ದಾರೆ. ಜಗತ್ತು, ಜೀವ, ಮರಣ ಮತ್ತು ವರ್ತಮಾನ ಹಾಗೂ ಭವಿಷ್ಯತ್ ಕಾಲಗಳ ಸಂಗತಿಗಳು ನಿಮ್ಮವೇ. 23 ನೀವು ಕ್ರಿಸ್ತನಿಗೆ ಸೇರಿದವರಾಗಿದ್ದೀರಿ. ಕ್ರಿಸ್ತನು ದೇವರಿಗೆ ಸೇರಿದವನಾಗಿದ್ದಾನೆ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International