Print Page Options
Previous Prev Day Next DayNext

Old/New Testament

Each day includes a passage from both the Old Testament and New Testament.
Duration: 365 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 97-99

97 ಯೆಹೋವನು ಆಳುತ್ತಿರುವನು! ಭೂಮಿಯು ಸಂತೋಷಿಸಲಿ.
    ದೂರ ದೇಶಗಳೆಲ್ಲಾ ಹರ್ಷಿಸಲಿ.
ಕಾರ್ಮೋಡಗಳು ಆತನನ್ನು ಕವಿದುಕೊಂಡಿವೆ.
    ನೀತಿಯೂ ನ್ಯಾಯವೂ ಆತನ ರಾಜ್ಯದ ಬಲವಾಗಿವೆ.
ಬೆಂಕಿಯು ಆತನ ಮುಂದೆ ಹೋಗಿ
    ಆತನ ಶತ್ರುಗಳನ್ನು ನಾಶಮಾಡುವುದು.
ಆತನ ಮಿಂಚು ಆಕಾಶದಲ್ಲಿ ಹೊಳೆಯುತ್ತದೆ.
    ಜನರು ಅದನ್ನು ನೋಡಿ ಭಯಗೊಂಡಿದ್ದಾರೆ.
ಸಾರ್ವಭೌಮನಾದ ಯೆಹೋವನ ಎದುರಿನಲ್ಲಿ
    ಬೆಟ್ಟಗಳು ಮೇಣದಂತೆ ಕರಗಿಹೋಗುತ್ತವೆ.
ಆಕಾಶಗಳೇ, ಆತನ ನೀತಿಯ ಕುರಿತು ಹೇಳಿರಿ!
    ದೇವರ ಮಹಿಮೆಯನ್ನು ಪ್ರತಿಯೊಬ್ಬನೂ ಕಾಣಲಿ!

ಜನರು ತಮ್ಮ ವಿಗ್ರಹಗಳನ್ನು ಪೂಜಿಸುವರು.
    ಅವರು ತಮ್ಮ “ದೇವರುಗಳ” ಬಗ್ಗೆ ಜಂಬಕೊಚ್ಚುವರು.
ಆದರೆ ಅವರು ನಾಚಿಕೆಗೀಡಾಗುವರು.
    ಅವರ “ದೇವರುಗಳು” ಯೆಹೋವನಿಗೆ ಅಡ್ಡಬಿದ್ದು ಆರಾಧಿಸುತ್ತವೆ.
ಚೀಯೋನೇ, ಕೇಳಿ ಸಂತೋಷಪಡು!
    ಯೆಹೂದದ ಪಟ್ಟಣಗಳೇ, ಆನಂದಿಸಿರಿ.
    ಯಾಕೆಂದರೆ ಯೆಹೋವನ ತೀರ್ಪುಗಳು ನ್ಯಾಯವಾಗಿವೆ.
ಮಹೋನ್ನತನಾದ ಯೆಹೋವನೇ, ಭೂಲೋಕದ ಸರ್ವಾಧಿಪತಿ ನೀನೇ.
    ಎಲ್ಲಾ ದೇವರುಗಳಲ್ಲಿ ನೀನೇ ಮಹೋನ್ನತನು.
10 ಯೆಹೋವನನ್ನು ಪ್ರೀತಿಸುವವರೇ, ದುಷ್ಟತನವನ್ನು ದ್ವೇಷಿಸಿರಿ.
    ದೇವರು ತನ್ನ ಭಕ್ತರನ್ನು ಸಂರಕ್ಷಿಸುವನು.
    ದೇವರು ತನ್ನ ಸದ್ಭಕ್ತರನ್ನು ಕೆಡುಕರಿಂದ ರಕ್ಷಿಸುವನು.
11 ನೀತಿವಂತರಿಗೋಸ್ಕರ ಬೆಳಕೂ ಯಥಾರ್ಥಹೃದಯವುಳ್ಳವರಿಗೆ ಸಂತೋಷವೂ ಪ್ರಕಾಶಿಸುತ್ತವೆ.
12 ನೀತಿವಂತರೇ, ಯೆಹೋವನಲ್ಲಿ ಸಂತೋಷಪಡಿರಿ!
    ಆತನ ಪವಿತ್ರ ಹೆಸರನ್ನು ಸನ್ಮಾನಿಸಿರಿ!

ಸ್ತುತಿಗೀತೆ.

98 ಯೆಹೋವನಿಗೆ ಹೊಸಹಾಡನ್ನು ಹಾಡಿರಿ.
    ಆತನು ಅಮೋಘವಾದ ಕಾರ್ಯಗಳನ್ನು ಮಾಡಿದ್ದಾನೆ!
ಆತನ ಬಲಗೈಯೂ ಪರಿಶುದ್ಧ ಬಾಹುವೂ
    ಆತನಿಗೆ ಜಯವನ್ನು ಉಂಟುಮಾಡಿವೆ.
ಯೆಹೋವನು ತನ್ನ ರಕ್ಷಣಾಶಕ್ತಿಯನ್ನು ಜನಾಂಗಗಳಿಗೆ ತೋರಿದನು.
    ಆತನು ತನ್ನ ನೀತಿಯನ್ನು ಅವರಿಗೆ ಪ್ರಕಟಿಸಿದ್ದಾನೆ.
ಇಸ್ರೇಲರ ಕಡೆಗಿದ್ದ ಆತನ ಪ್ರೀತಿಸತ್ಯತೆಗಳನ್ನು ಆತನ ಜನರು ಜ್ಞಾಪಿಸಿಕೊಂಡಿದ್ದಾರೆ.
    ದೂರದೇಶಗಳ ಜನರು ನಮ್ಮ ದೇವರ ರಕ್ಷಣಾಶಕ್ತಿಯನ್ನು ಕಂಡಿದ್ದಾರೆ.
ಭೂನಿವಾಸಿಗಳೆಲ್ಲರೇ, ಯೆಹೋವನಿಗೆ ಆನಂದ ಘೋಷಮಾಡಿರಿ.
    ಆತನಿಗೆ ಸ್ತುತಿಗೀತೆಗಳನ್ನು ಹಾಡಿರಿ!
ಹಾರ್ಪ್‌ವಾದ್ಯಗಳೊಡನೆ, ಯೆಹೋವನನ್ನು ಕೊಂಡಾಡಿರಿ.
    ಹಾರ್ಪ್‌ವಾದ್ಯಗಳನ್ನು ನುಡಿಸುತ್ತಾ ಆತನನ್ನು ಸುತ್ತಿಸಿರಿ.
ತುತ್ತೂರಿಗಳನ್ನೂ ಕೊಂಬುಗಳನ್ನೂ ಊದಿರಿ.
    ನಮ್ಮ ರಾಜನಾದ ಯೆಹೋವನಿಗೆ ಆನಂದಘೋಷ ಮಾಡಿರಿ!
ಸಮುದ್ರವೂ ಭೂಮಿಯೂ
    ಅವುಗಳಲ್ಲಿರುವ ಸಮಸ್ತವೂ ಗಟ್ಟಿಯಾಗಿ ಹಾಡಲಿ.
ನದಿಗಳೇ, ಚಪ್ಪಾಳೆ ತಟ್ಟಿರಿ!
    ಬೆಟ್ಟಗಳೇ, ಒಟ್ಟಾಗಿ ಹಾಡಿರಿ!
ಯೆಹೋವನ ಎದುರಿನಲ್ಲಿ ಹಾಡಿರಿ,
    ಯಾಕೆಂದರೆ ಆತನು ಭೂಲೋಕವನ್ನು ಆಳಲು[a] ಬರುತ್ತಿದ್ದಾನೆ.
ಆತನು ಪ್ರಪಂಚವನ್ನು ನ್ಯಾಯವಾಗಿ ಆಳುತ್ತಾನೆ.
    ಆತನು ಜನರನ್ನು ನೀತಿಯಿಂದ ಆಳುತ್ತಾನೆ.

99 ಯೆಹೋವನೇ ರಾಜನು!
    ಜನಾಂಗಗಳು ಭಯದಿಂದ ನಡುಗಲಿ.
ಆತನು ಕೆರೂಬಿಗಳ ಮೇಲೆ ರಾಜನಂತೆ ಕುಳಿತುಕೊಂಡಿದ್ದಾನೆ.
    ಭೂಮಿಯು ಭಯದಿಂದ ನಡುಗಲಿ.
ಚೀಯೋನಿನ ಯೆಹೋವನು ದೊಡ್ಡವನು!
    ಆತನು ಜನಾಂಗಗಳಿಗೆಲ್ಲಾ ಮಹಾನಾಯಕನಾಗಿದ್ದಾನೆ.
ಅವರೆಲ್ಲರೂ ನಿನ್ನ ಭಯಂಕರವಾದ ಹೆಸರನ್ನು ಕೊಂಡಾಡಲಿ.
    ಆತನೇ ಪರಿಶುದ್ಧನು.
ಶಕ್ತಿಪೂರ್ಣನಾದ ರಾಜನು ನ್ಯಾಯವನ್ನು ಪ್ರೀತಿಸುವನು.
    ದೇವರೇ, ನೀತಿಯನ್ನು ಸೃಷ್ಟಿಸಿದಾತನು ನೀನೇ.
    ಯಾಕೋಬ್ಯರಲ್ಲಿ ನ್ಯಾಯನೀತಿಗಳನ್ನು ಸ್ಥಾಪಿಸಿದವನು ನೀನೇ.
ನಮ್ಮ ದೇವರಾದ ಯೆಹೋವನನ್ನು ಕೊಂಡಾಡಿರಿ,
    ಆತನ ಪವಿತ್ರ ಪಾದಪೀಠಕ್ಕೆ[b] ಅಡ್ಡಬೀಳಿರಿ.
ಮೋಶೆಯೂ ಆರೋನನೂ ದೇವರ ಯಾಜಕರುಗಳಾಗಿದ್ದರು.
    ಸಮುವೇಲನೂ ಆತನ ಹೆಸರಿನಲ್ಲಿ ಪ್ರಾರ್ಥಿಸಿದನು.
ಆತನು ಅವರೆಲ್ಲರ ಪ್ರಾರ್ಥನೆಗಳಿಗೆ ಉತ್ತರಿಸಿದನು.
ಆತನು ಮೇಘಸ್ತಂಭದಿಂದ ಅವರೊಂದಿಗೆ ಮಾತಾಡಿದನು.
    ಅವರು ಆಜ್ಞೆಗಳಿಗೆ ವಿಧೇಯರಾದರು.
    ಆತನು ಅವರಿಗೆ ಧರ್ಮಶಾಸ್ತ್ರವನ್ನು ಕೊಟ್ಟನು.
ನಮ್ಮ ದೇವರಾದ ಯೆಹೋವನೇ, ನೀನು ಅವರ ಪ್ರಾರ್ಥನೆಗಳಿಗೆ ಉತ್ತರಿಸಿದೆ.
    ನೀನು ಕ್ಷಮಿಸುವ ದೇವರೆಂದೂ
    ದುಷ್ಕೃತ್ಯಗಳಿಗೆ ದಂಡಿಸುವವನೆಂದೂ ಅವರಿಗೆ ತೋರ್ಪಡಿಸಿದೆ.
ನಮ್ಮ ದೇವರಾದ ಯೆಹೋವನನ್ನು ಕೊಂಡಾಡಿರಿ.
    ಆತನ ಪವಿತ್ರ ಪರ್ವತದ ಕಡೆಗೆ ಅಡ್ಡಬಿದ್ದು ಆತನನ್ನು ಆರಾಧಿಸಿರಿ.
    ನಮ್ಮ ದೇವರಾದ ಯೆಹೋವನೇ ಪರಿಶುದ್ಧನು!

ರೋಮ್ನಗರದವರಿಗೆ 16

ಪೌಲನ ಕೊನೆ ಮಾತುಗಳು

16 ಕ್ರಿಸ್ತನಲ್ಲಿ ನಮ್ಮ ಸಹೋದರಿಯಾದ ಪೊಯಿಬೆಯನ್ನು ನಾನು ನಿಮಗೆ ಶಿಫಾರಸು ಮಾಡಲಿಚ್ಛಿಸುತ್ತೇನೆ. ಈಕೆಯು ಕೆಂಕ್ರೆಯ ಪಟ್ಟಣದ ಸಭೆಯಲ್ಲಿ ವಿಶೇಷ ಸಹಾಯಕಳಾಗಿದ್ದಾಳೆ. ನೀವು ಆಕೆಯನ್ನು ಪ್ರಭುವಿನ ಹೆಸರಿನಲ್ಲಿ ಸ್ವೀಕರಿಸಿಕೊಳ್ಳಬೇಕೆಂದು ನಾನು ನಿಮ್ಮನ್ನು ಕೇಳಿಕೊಳ್ಳುತ್ತೇನೆ. ದೇವಜನರಿಗೆ ತಕ್ಕಂತೆ ಈಕೆಯನ್ನು ಸ್ವೀಕರಿಸಿಕೊಳ್ಳಿರಿ. ಆಕೆಗೆ ಬೇಕಾದ ಸಹಾಯಗಳನ್ನೆಲ್ಲಾ ಮಾಡಿರಿ. ಆಕೆಯು ನನಗೆ ಬಹಳವಾಗಿ ಸಹಾಯ ಮಾಡಿದ್ದಾಳೆ. ಅಲ್ಲದೆ ಇತರ ಅನೇಕ ಜನರಿಗೂ ಆಕೆ ಸಹಾಯ ಮಾಡಿದ್ದಾಳೆ.

ಪ್ರಿಸ್ಕಿಲ್ಲಳಿಗೂ ಅಕ್ವಿಲನಿಗೂ ನನ್ನ ವಂದನೆ ತಿಳಿಸಿರಿ. ಅವರು ಕ್ರಿಸ್ತ ಯೇಸುವಿನಲ್ಲಿ ನನ್ನೊಂದಿಗೆ ಸೇವೆ ಮಾಡುತ್ತಿದ್ದಾರೆ. ಅವರು ನನ್ನ ಪ್ರಾಣವನ್ನು ಉಳಿಸುವುದಕ್ಕಾಗಿ ತಮ್ಮ ಪ್ರಾಣಗಳನ್ನೇ ಅಪಾಯಕ್ಕೆ ಈಡುಮಾಡಿದರು. ನಾನು ಅವರಿಗೆ ಕೃತಜ್ಞನಾಗಿದ್ದೇನೆ. ಯೆಹೂದ್ಯರಲ್ಲದ ಸಭೆಗಳವರೆಲ್ಲರೂ ಅವರಿಗೆ ಕೃತಜ್ಞರಾಗಿದ್ದಾರೆ.

ಅಲ್ಲದೆ ಅವರ ಮನೆಯಲ್ಲಿ ಸೇರಿಬರುವ ಸಭೆಯವರಿಗೂ ನನ್ನ ವಂದನೆಗಳನ್ನು ತಿಳಿಸಿರಿ. ನನ್ನ ಪ್ರಿಯ ಸ್ನೇಹಿತನಾದ ಎಪೈನೆತನಿಗೆ ನನ್ನ ವಂದನೆ ತಿಳಿಸಿರಿ.

ಏಷ್ಯಾದಲ್ಲಿ ಕ್ರಿಸ್ತನನ್ನು ಹಿಂಬಾಲಿಸಿದವರಲ್ಲಿ ಅವನೇ ಮೊಟ್ಟಮೊದಲನೆಯವನಾಗಿದ್ದಾನೆ.

ಮರಿಯಳಿಗೆ ನನ್ನ ವಂದನೆ ತಿಳಿಸಿರಿ. ಆಕೆ ನಿಮಗೋಸ್ಕರ ಬಹು ಕಷ್ಟಪಟ್ಟು ಕೆಲಸ ಮಾಡಿದಳು.

ಆಂದ್ರೋನಿಕನಿಗೆ ಮತ್ತು ಯೂನ್ಯನಿಗೆ ನನ್ನ ವಂದನೆ ತಿಳಿಸಿರಿ. ಅವರು ನನ್ನ ಸಂಬಂಧಿಕರಾಗಿದ್ದಾರೆ. ಅಲ್ಲದೆ ಅವರು ನನ್ನೊಂದಿಗೆ ಸೆರೆಮನೆಯಲ್ಲಿದ್ದರು. ದೇವರ ಅತ್ಯಂತ ಮುಖ್ಯಸೇವಕರುಗಳಲ್ಲಿ[a] ಅವರೂ ಸೇರಿದ್ದಾರೆ. ಅವರು ನನಗಿಂತ ಮೊದಲೇ ಕ್ರಿಸ್ತನ ವಿಶ್ವಾಸಿಗಳಾಗಿದ್ದಾರೆ.

ಪ್ರಭುವಿನಲ್ಲಿ ನನ್ನ ಪ್ರಿಯ ಸ್ನೇಹಿತನಾದ ಅಂಪ್ಲಿಯಾತನಿಗೆ ನನ್ನ ವಂದನೆ ತಿಳಿಸಿರಿ. ಉರ್ಬಾನನಿಗೆ ನನ್ನ ವಂದನೆ ತಿಳಿಸಿರಿ.

ಅವನು ಕ್ರಿಸ್ತನಿಗೋಸ್ಕರ ನನ್ನ ಸಹೋದ್ಯೋಗಿಯಾಗಿದ್ದಾನೆ.

ನನ್ನ ಪ್ರಿಯ ಗೆಳೆಯನಾದ ಸ್ತಾಖುನಿಗೆ ನನ್ನ ವಂದನೆ ತಿಳಿಸಿರಿ. 10 ಅಪೆಲ್ಲನಿಗೆ ನನ್ನ ವಂದನೆ ತಿಳಿಸಿರಿ. ಅವನು ಕ್ರಿಸ್ತನನ್ನು ನಿಜವಾಗಿಯೂ ಪ್ರೀತಿಸುತ್ತಾನೆಂಬುದನ್ನು ಪರೀಕ್ಷಿಸಿ ನಿರೂಪಿಸಲಾಗಿದೆ.

ಅರಿಸ್ತೊಬೂಲನ ಕುಟುಂಬದಲ್ಲಿ ಇರುವವರಿಗೆಲ್ಲ ನನ್ನ ವಂದನೆ ತಿಳಿಸಿರಿ.

11 ನನ್ನ ಸಂಬಂಧಿಕರಾದ ಹೆರೋಡಿಯೊನನಿಗೂ ಪ್ರಭುವಿಗೆ ಸೇರಿದವನಾದ ನಾರ್ಕಿಸ್ಸನ ಕುಟುಂಬದಲ್ಲಿರುವವರೆಲ್ಲರಿಗೂ ನನ್ನ ವಂದನೆ ತಿಳಿಸಿರಿ. 12 ತ್ರುಫೈನಳಿಗೂ ತ್ರುಫೋಸಳಿಗೂ ನನ್ನ ವಂದನೆ ತಿಳಿಸಿರಿ.

ಅವರು ಪ್ರಭುವಿಗಾಗಿ ಬಹು ಕಷ್ಟಪಟ್ಟು ಸೇವೆ ಮಾಡುತ್ತಿದ್ದಾರೆ. ನನ್ನ ಪ್ರಿಯ ಸಹೋದರಿಯಾದ ಪೆರ್ಸೀಸಳಿಗೂ ನನ್ನ ವಂದನೆ ತಿಳಿಸಿರಿ. ಆಕೆಯು ಸಹ ಪ್ರಭುವಿಗೋಸ್ಕರ ಬಹು ಕಷ್ಟಪಟ್ಟು ಸೇವೆ ಮಾಡಿದಳು.

13 ರೂಫನಿಗೆ ನನ್ನ ವಂದನೆ ತಿಳಿಸಿರಿ. ಅವನು ಪ್ರಭುವಿನಲ್ಲಿ ವಿಶೇಷವಾದ ವ್ಯಕ್ತಿ. ಅವನ ತಾಯಿಗೂ ನನ್ನ ವಂದನೆ ತಿಳಿಸಿರಿ. ಆಕೆ ನನ್ನನ್ನು ಸ್ವಂತ ಮಗನಂತೆ ನೋಡಿಕೊಂಡಳು.

14 ಅಸುಂಕ್ರಿತನಿಗೂ ಪ್ಲೆಗೋನನಿಗೂ ಹೆರ್ಮೇಯನಿಗೂ ಪತ್ರೋಬನಿಗೂ ಹೆರ್ಮಾನನಿಗೂ ಮತ್ತು ಅವರೊಂದಿಗಿರುವ ಎಲ್ಲಾ ಕ್ರೈಸ್ತ ಸಹೋದರರಿಗೂ

15 ಫಿಲೊಲೋಗನಿಗೂ ಯೂಲ್ಯಳಿಗೂ ನೇರ್ಯನಿಗೂ ಅವನ ಸಹೋದರಿಗೂ ಮತ್ತು ಒಲುಂಪನಿಗೂ ಮತ್ತು ಅವರೊಂದಿಗಿರುವ ಎಲ್ಲಾ ಭಕ್ತರಿಗೆ ನನ್ನ ವಂದನೆ ತಿಳಿಸಿರಿ.

16 ನೀವು ಪರಸ್ಪರ ಸಂಧಿಸುವಾಗ ಪವಿತ್ರವಾದ ಮುದ್ದನ್ನಿಟ್ಟು ವಂದಿಸಿರಿ.

ಕ್ರಿಸ್ತನ ಸಭೆಗಳವರೆಲ್ಲಾ ನಿಮಗೆ ವಂದನೆ ತಿಳಿಸುತ್ತಾರೆ.

17 ಸಹೋದರ ಸಹೋದರಿಯರೇ, ನಿಮ್ಮಲ್ಲಿ ಒಡಕುಗಳನ್ನು ಉಂಟುಮಾಡುವ ಜನರ ವಿಷಯದಲ್ಲಿ ನೀವು ಬಹು ಜಾಗ್ರತೆಯಿಂದ ಇರಬೇಕೆಂದು ನಾನು ನಿಮ್ಮನ್ನು ಕೇಳಿಕೊಳ್ಳುತ್ತೇನೆ. ಇತರರ ನಂಬಿಕೆಯನ್ನು ಕೆಡಿಸುವಂಥವರ ಬಗ್ಗೆ ಬಹು ಎಚ್ಚರದಿಂದಿರಿ. ನೀವು ಕಲಿತಿರುವ ಉಪದೇಶಕ್ಕೆ ಅವರು ವಿರುದ್ಧವಾಗಿದ್ದಾರೆ. ನೀವು ಅವರಿಂದ ದೂರವಿರಿ. 18 ಅಂಥ ಜನರು ನಮ್ಮ ಪ್ರಭುವಾದ ಕ್ರಿಸ್ತನ ಸೇವೆ ಮಾಡುತ್ತಿಲ್ಲ. ಅವರು ಕೇವಲ ತಮ್ಮ ಸುಖಕ್ಕಾಗಿ ಈ ಕಾರ್ಯಗಳನ್ನು ಮಾಡುತ್ತಿದ್ದಾರೆ. ಕೆಟ್ಟದರ ಬಗ್ಗೆ ತಿಳಿದಿಲ್ಲದ ಜನರ ಮನಸ್ಸುಗಳನ್ನು ಮೋಸಗೊಳಿಸುವುದಕ್ಕಾಗಿ ಅವರು ನಯನಾಜುಕಿನ ನುಡಿಗಳನ್ನಾಡುತ್ತಾರೆ ಮತ್ತು ಮುಖಸ್ತುತಿಯ ಮಾತುಗಳನ್ನಾಡುತ್ತಾರೆ. 19 ನಿಮ್ಮ ವಿಧೇಯತ್ವವು ಎಲ್ಲಾ ವಿಶ್ವಾಸಿಗಳಿಗೆ ತಿಳಿದಿದೆ. ಆದ್ದರಿಂದ ನಿಮ್ಮ ವಿಷಯದಲ್ಲಿ ನಾನು ಬಹು ಸಂತೋಷಪಡುತ್ತೇನೆ. ಆದರೆ ಒಳ್ಳೆಯ ಸಂಗತಿಗಳ ಬಗ್ಗೆ ನೀವು ವಿವೇಕಿಗಳಾಗಿರಬೇಕೆಂದು ಮತ್ತು ಕೆಟ್ಟಸಂಗತಿಗಳ ಬಗ್ಗೆ ಏನೂ ತಿಳಿದಿಲ್ಲದವರಾಗಿರಬೇಕೆಂದು ನಾನು ಅಪೇಕ್ಷಿಸುತ್ತೇನೆ.

20 ಶಾಂತಿಯನ್ನು ಕೊಡುವ ದೇವರು ಬೇಗನೆ ಸೈತಾನನನ್ನು ಸೋಲಿಸಿ, ಅವನ ಮೇಲೆ ನಿಮಗೆ ಅಧಿಕಾರವನ್ನು ಕೊಡುವನು.

ನಮ್ಮ ಪ್ರಭುವಾದ ಯೇಸುವಿನ ಕೃಪೆಯು ನಿಮ್ಮೊಂದಿಗಿರಲಿ.

21 ನನ್ನ ಸಹೋದ್ಯೋಗಿಯಾದ ತಿಮೊಥೆಯನು ಮತ್ತು ನನ್ನ ಸಂಬಂಧಿಕರಾದ ಲೂಕ್ಯ, ಯಾಸೋನ ಮತ್ತು ಸೋಸಿಪತ್ರ ನಿಮಗೆ ವಂದನೆ ತಿಳಿಸಿದ್ದಾರೆ.

22 ಪೌಲನು ಹೇಳುತ್ತಿರುವ ಸಂಗತಿಗಳನ್ನು ಬರೆಯುತ್ತಿರುವ ತೆರ್ತ್ಯೆನೆಂಬ ನಾನು ನಿಮ್ಮನ್ನು ಪ್ರಭುವಿನಲ್ಲಿ ವಂದಿಸುತ್ತೇನೆ.

23 ಗಾಯನು ನನಗೆ ಅತಿಥಿಸತ್ಕಾರ ಮಾಡುತ್ತಿದ್ದಾನೆ. ಅಲ್ಲದೆ ಸಭಾಕೂಟಕ್ಕಾಗಿ ಅವನ ಮನೆಯನ್ನೇ ಉಪಯೋಗಿಸಲಾಗುತ್ತಿದೆ. ಅವನು ಸಹ ನಿಮಗೆ ವಂದನೆ ತಿಳಿಸುತ್ತಾನೆ. ಈ ಪಟ್ಟಣದ ಖಜಾಂಚಿಯಾದ ಎರಸ್ತನು ಮತ್ತು ಸಹೋದರನಾದ ಕ್ವರ್ತನು ನಿಮಗೆ ವಂದನೆಯನ್ನು ತಿಳಿಸುತ್ತಾರೆ. 24 [b]

25 ದೇವರಿಗೆ ಮಹಿಮೆಯಾಗಲಿ. ನಿಮ್ಮನ್ನು ನಂಬಿಕೆಯಲ್ಲಿ ಬಲಗೊಳಿಸಬಲ್ಲಾತನು ದೇವರೊಬ್ಬನೇ. ನಾನು ಉಪದೇಶಿಸುವ ಸುವಾರ್ತೆಯ ಮೂಲಕ ದೇವರು ನಿಮ್ಮನ್ನು ಬಲಗೊಳಿಸಬಲ್ಲನು. ನಾನು ಯೇಸು ಕ್ರಿಸ್ತನ ಬಗ್ಗೆ ಜನರಿಗೆ ತಿಳಿಸುತ್ತಿರುವುದೇ ಆ ಸುವಾರ್ತೆ. ದೇವರು ತಿಳಿಯಪಡಿಸಿದ ಆ ಸುವಾರ್ತೆಯು ರಹಸ್ಯವಾದ ಸತ್ಯವಾಗಿತ್ತು ಮತ್ತು ಆರಂಭದಿಂದಲೂ ಮರೆಯಾಗಿತ್ತು. 26 ಆದರೆ ರಹಸ್ಯವಾದ ಆ ಸತ್ಯವನ್ನು ಈಗ ನಮಗೆ ತೋರಿಸಲಾಗಿದೆ. ಮತ್ತು ಆ ಸತ್ಯವನ್ನು ಎಲ್ಲಾ ಜನರಿಗೆ ತಿಳಿಸಲಾಗಿದೆ. ದೇವರು ಆಜ್ಞಾಪಿಸಿರುವುದು ಇದನ್ನೇ. ಎಲ್ಲಾ ಜನರು ನಂಬಿಕೊಂಡು ದೇವರಿಗೆ ವಿಧೇಯರಾಗಲೆಂದು ರಹಸ್ಯವಾದ ಈ ಸತ್ಯವನ್ನು ಎಲ್ಲಾ ಜನರಿಗೆ ತಿಳಿಸಲಾಗಿದೆ. ದೇವರು ಸದಾಕಾಲ ಜೀವಿಸುತ್ತಾನೆ. 27 ಒಬ್ಬನೇ ಜ್ಞಾನಿಯಾದ ದೇವರಿಗೆ ಯೇಸು ಕ್ರಿಸ್ತನ ಮೂಲಕ ಎಂದೆಂದಿಗೂ ಮಹಿಮೆ ಉಂಟಾಗಲಿ. ಆಮೆನ್.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International