Print Page Options
Previous Prev Day Next DayNext

Old/New Testament

Each day includes a passage from both the Old Testament and New Testament.
Duration: 365 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 91-93

91 ಮಹೋನ್ನತನ ಮೊರೆಹೊಕ್ಕಿರುವವನು
    ಸರ್ವಶಕ್ತನ ಆಶ್ರಯದಲ್ಲಿ ಸುರಕ್ಷಿತನಾಗಿರುವನು.
ನಾನು ಯೆಹೋವನಿಗೆ, “ನೀನೇ ನನ್ನ ಆಶ್ರಯಸ್ಥಾನವೂ
    ನನ್ನ ಕೋಟೆಯೂ ನಾನು ಭರವಸವಿಟ್ಟಿರುವ ನನ್ನ ದೇವರೂ” ಎಂದು ಹೇಳುವೆನು.
ನಿನ್ನನ್ನು ಬೇಟೆಗಾರನ ಬಲೆಯಿಂದಲೂ
    ಮರಣಕರವಾದ ವ್ಯಾಧಿಯಿಂದಲೂ ತಪ್ಪಿಸುವವನು ಆತನೇ.
ಆತನು ನಿನ್ನನ್ನು ತನ್ನ ರೆಕ್ಕೆಗಳಿಂದ ಹೊದಗಿಸಿಕೊಳ್ಳುವನು.
    ಆತನ ರೆಕ್ಕೆಗಳನ್ನು ನೀನು ಆಶ್ರಯಿಸಿಕೊಳ್ಳುವೆ.
    ಆತನ ನಂಬಿಗಸ್ತಿಕೆಯು ನಿನಗೆ ಗುರಾಣಿಯೂ ಕೋಟೆಯೂ ಆಗಿದೆ.
ಇರುಳಲ್ಲಿ ನೀನು ಯಾವುದಕ್ಕೂ ಭಯಪಡಬೇಕಿಲ್ಲ;
    ಹಗಲಲ್ಲಿ ಶತ್ರುಗಳ ಬಾಣಗಳಿಗೂ ನೀನು ಹೆದರಬೇಕಿಲ್ಲ.
ಕತ್ತಲೆಯಲ್ಲಿ ಬರುವ ರೋಗಗಳಿಗಾಗಲಿ
    ಮಧ್ಯಾಹ್ನದಲ್ಲಿ ಬರುವ ಭಯಂಕರ ಕಾಯಿಲೆಗಳಿಗಾಗಲಿ ನೀನು ಹೆದರಬೇಕಿಲ್ಲ.
ನೀನು ಸಾವಿರ ವೈರಿಗಳನ್ನು ಸೋಲಿಸುವೆ.
    ನಿನ್ನ ಬಲಗೈ ಹತ್ತುಸಾವಿರ ಶತ್ರು ಸೈನಿಕರನ್ನು ಸೋಲಿಸುವುದು.
    ನಿನ್ನ ಶತ್ರುಗಳಿಗೆ ನಿನ್ನನ್ನು ಮುಟ್ಟಲೂ ಸಾಧ್ಯವಾಗದು.
ನೀನು ಅದನ್ನು ಕಣ್ಣಾರೆ ಕಂಡು
    ದುಷ್ಟರಿಗೆ ದಂಡನೆಯಾಯಿತೆಂದು ತಿಳಿದುಕೊಳ್ಳುವೆ.
ಯಾಕೆಂದರೆ ನಿನ್ನ ಭರವಸವು ಯೆಹೋವನಲ್ಲಿಯೇ.
    ನಿನ್ನ ಆಶ್ರಯಸ್ಥಾನವು ಮಹೋನ್ನತನಾದ ದೇವರೇ.
10 ಯಾವ ಕೇಡೂ ನಿನಗೆ ಸಂಭವಿಸದು.
    ನಿನ್ನ ಮನೆಯಲ್ಲಿ ಯಾವ ರೋಗಗಳೂ ಇರದು.
11 ನೀನು ಹೋದಲ್ಲೆಲ್ಲಾ ನಿನ್ನನ್ನು ಕಾಯಲು ಆತನು ತನ್ನ ದೂತರಿಗೆ ಆಜ್ಞಾಪಿಸುವನು.
12 ನಿನ್ನ ಪಾದಗಳು ಕಲ್ಲಿಗೆ ತಗಲದಂತೆ ದೇವದೂತರುಗಳು
    ನಿನ್ನನ್ನು ಕೈಗಳಲ್ಲಿ ಎತ್ತಿಕೊಳ್ಳುವರು.
13 ಸಿಂಹಗಳ ಮೇಲೆಯೂ ಮತ್ತು
    ವಿಷಸರ್ಪಗಳ ಮೇಲೆಯೂ ನಡೆಯಲು ನೀನು ಶಕ್ತನಾಗಿರುವೆ.
14 ಯೆಹೋವನು ಹೇಳುವುದೇನೆಂದರೆ: “ನನ್ನಲ್ಲಿ ಭರವಸವಿಡುವವನನ್ನು ರಕ್ಷಿಸುವೆನು;
    ನನ್ನ ಹೆಸರನ್ನು ಆರಾಧಿಸುವ ಭಕ್ತರನ್ನು ಸಂರಕ್ಷಿಸುವೆನು.
15 ನನ್ನ ಭಕ್ತರು ಸಹಾಯಕ್ಕಾಗಿ ಮೊರೆಯಿಡುವಾಗ, ಸದುತ್ತರವನ್ನು ದಯಪಾಲಿಸುವೆನು.
    ಆಪತ್ತಿನಲ್ಲಿಯೂ ನಾನು ಅವರೊಂದಿಗಿರುವೆನು;
    ಅವರನ್ನು ತಪ್ಪಿಸಿ ಘನಪಡಿಸುವೆನು.
16 ನನ್ನ ಭಕ್ತರಿಗೆ ದೀರ್ಘಾಯುಷ್ಯವನ್ನು ನೀಡಿ ತೃಪ್ತಿಪಡಿಸುವೆನು;
    ನನ್ನ ವಿಶೇಷವಾದ ರಕ್ಷಣೆಯನ್ನು ತೋರಿಸಿ ಕಾಪಾಡುವೆನು.”

ಸಬ್ಬತ್ ದಿನದ ಸ್ತುತಿಗೀತೆ.

92 ಯೆಹೋವನೇ, ನಿನ್ನನ್ನು ಸ್ತುತಿಸುವುದೂ
    ಮಹೋನ್ನತನಾದ ದೇವರೇ, ನಿನ್ನ ಹೆಸರನ್ನು ಕೊಂಡಾಡುವುದೂ ಯುಕ್ತವಾಗಿದೆ.
2-3 ಹತ್ತು ತಂತಿವಾದ್ಯಗಳನ್ನೂ ಹಾರ್ಪ್ ಮತ್ತು ಲೈರ್ ವಾದ್ಯಗಳನ್ನೂ ನುಡಿಸುತ್ತಾ
    ನಿನ್ನ ಪ್ರೀತಿಯ ಕುರಿತು ಮುಂಜಾನೆಯಲ್ಲಿಯೂ
    ನಿನ್ನ ನಂಬಿಗಸ್ತಿಕೆಯ ಕುರಿತು ರಾತ್ರಿಯಲ್ಲಿಯೂ ಹಾಡುವುದು ಯುಕ್ತವಾಗಿದೆ.
ಯೆಹೋವನೇ, ನಿನ್ನ ಕಾರ್ಯಗಳಿಂದ ನಮ್ಮನ್ನು ನಿಜವಾಗಿಯೂ ಸಂತೋಷಗೊಳಿಸಿರುವೆ.
    ಅವುಗಳ ಕುರಿತು ನಾವು ಹರ್ಷದಿಂದ ಹಾಡುವೆವು.
ಯೆಹೋವನೇ, ನೀನು ಅಂತಹ ಮಹಾಕಾರ್ಯಗಳನ್ನು ಮಾಡಿರುವೆ.
    ನಿನ್ನ ಆಲೋಚನೆಗಳನ್ನು ಗ್ರಹಿಸಿಕೊಳ್ಳಲು ನಮ್ಮಿಂದಾಗದು.
ನಿನಗೆ ಹೋಲಿಸಿದರೆ, ಜನರು ದಡ್ಡ ಪ್ರಾಣಿಗಳಂತಿದ್ದಾರೆ.
    ನಾವು ಯಾವುದನ್ನೂ ಅರ್ಥಮಾಡಿಕೊಳ್ಳಲಾಗದ ಮೂಢರಂತಿದ್ದೇವೆ.
ದುಷ್ಟರು ಹುಲ್ಲಿನಂತೆಯೂ
    ಕೆಡುಕರು ಹೂವಿನಂತೆಯೂ ಬದುಕಿ ಸಾಯುವರು.
    ಅವರ ನಿರರ್ಥಕ ಕಾರ್ಯಗಳು ನಿತ್ಯ ನಾಶವಾಗುತ್ತವೆ.
ಯೆಹೋವನೇ, ನೀನಾದರೋ ಸದಾಕಾಲ ಸನ್ಮಾನ ಹೊಂದುವೆ.
ಯೆಹೋವನೇ, ನಿನ್ನ ಶತ್ರುಗಳೆಲ್ಲ ನಾಶವಾಗುವರು;
    ಕೆಟ್ಟಕಾರ್ಯಗಳನ್ನು ಮಾಡುವ ಅವರೆಲ್ಲರೂ ನಾಶವಾಗುವರು.
10 ನನ್ನನ್ನಾದರೋ ನೀನು ಕಾಡುಕೋಣ ಬಲಿಷ್ಠನನ್ನಾಗಿ ಮಾಡಿರುವೆ.
    ನಿನ್ನ ಚೈತನ್ಯ ತೈಲವನ್ನು ನನ್ನ ಮೇಲೆ ಸುರಿದಾತನು ನೀನೇ.
11 ವೈರಿಗಳು ನನ್ನ ಸುತ್ತಲೂ ಸೇರಿಬಂದಿದ್ದಾರೆ.
    ಅವರು ಆಕ್ರಮಣಕ್ಕೆ ಸಿದ್ಧವಾಗಿರುವ ಬಲಿಷ್ಠವಾದ ಹೋರಿಗಳಂತಿದ್ದಾರೆ.
    ಅವರು ನನ್ನ ಬಗ್ಗೆ ಹೇಳುತ್ತಿರುವುದೂ ನನಗೆ ಕೇಳುತ್ತಿದೆ.

12-13 ನೀತಿವಂತರಾದರೋ ಯೆಹೋವನ ಆಲಯದಲ್ಲಿ
    ಬೆಳೆಯುತ್ತಿರುವ ಲೆಬನೋನಿನ ದೇವದಾರು ವೃಕ್ಷದಂತಿರುವರು.
ನೀತಿವಂತರಾದರೋ ನಮ್ಮ ದೇವಾಲಯದ ಅಂಗಳದಲ್ಲಿ
    ಮೊಗ್ಗು ಬಿಡುತ್ತಿರುವ ಖರ್ಜೂರದ ಮರಗಳಂತಿರುವರು.
14 ಅವರು ಮುಪ್ಪಿನಲ್ಲಿಯೂ ಪುಷ್ಟಿಯಾಗಿ ಬೆಳೆದಿರುವ
    ಎಲೆಮರಗಳಂತೆ ಫಲಿಸುವರು.
15 ಯೆಹೋವನು ಒಳ್ಳೆಯವನೆಂಬುವುದಕ್ಕೆ
    ಅವರು ದೃಷ್ಟಾಂತವಾಗಿರುವರು.
ಆತನೇ ನನ್ನ ಬಂಡೆ.
    ಆತನು ಎಂದಿಗೂ ತಪ್ಪು ಮಾಡನು.

93 ಯೆಹೋವನೇ ರಾಜನು.
    ಆತನು ವೈಭವವನ್ನೂ ಬಲವನ್ನೂ ವಸ್ತ್ರದಂತೆ ಧರಿಸಿಕೊಂಡಿದ್ದಾನೆ.
ಆತನು ಸಿದ್ಧನಾಗಿರುವುದರಿಂದ ಇಡೀ ಪ್ರಂಪಚವೇ ಸುರಕ್ಷಿತವಾಗಿರುವುದು.
    ಅದು ಕದಲುವುದೇ ಇಲ್ಲ.
ದೇವರೇ, ಆದಿಯಿಂದಲೂ ನಿನ್ನ ರಾಜ್ಯವು ಶಾಶ್ವತವಾಗಿದೆ.
    ಆದಿಯಿಂದಲೂ ಇರುವಾತನು ನೀನೊಬ್ಬನೇ!
ಯೆಹೋವನೇ, ನದಿಗಳ ಶಬ್ದವು ಮೊರೆಯುತ್ತಿದೆ.
    ರಭಸದಿಂದ ಬಡಿಯುತ್ತಿರುವ ಅಲೆಗಳು ಭೋರ್ಗರೆಯುತ್ತಿವೆ.
ಬಿರುಸಾಗಿ ಬಡಿಯುತ್ತಿರುವ ಸಮುದ್ರದ ಅಲೆಗಳು ಭೋರ್ಗರೆಯುತ್ತಾ ಪ್ರಬಲವಾಗಿವೆ.
    ಆದರೆ ಉನ್ನತದಲ್ಲಿರುವ ಯೆಹೋವನು ಅದಕ್ಕಿಂತ ಎಷ್ಟೋ ಬಲಿಷ್ಠನಾಗಿದ್ದಾನೆ.
ಯೆಹೋವನೇ, ನಿನ್ನ ಕಟ್ಟಳೆಗಳು ಶಾಶ್ವತವಾಗಿವೆ.
    ನಿನ್ನ ಪವಿತ್ರಾಲಯವು ಬಹುಕಾಲದವರೆಗೆ ಇರುತ್ತದೆ.

ರೋಮ್ನಗರದವರಿಗೆ 15:1-13

15 ಆದ್ದರಿಂದ ನಂಬಿಕೆಯಲ್ಲಿ ಬಲಹೀನವಾಗಿರುವವರ ಬಲಹೀನತೆಗಳನ್ನು ನಾವು ಸಹಿಸಿಕೊಳ್ಳಬೇಕು. ನಾವು ಕೇವಲ ನಮ್ಮ ಹಿತವನ್ನು ಮಾತ್ರ ನೋಡಿಕೊಳ್ಳಬಾರದು. ನಮ್ಮಲ್ಲಿ ಪ್ರತಿಯೊಬ್ಬರು ತಮ್ಮ ನೆರೆಯವರ ಹಿತವನ್ನು ನೋಡಿಕೊಳ್ಳಬೇಕು. ನಂಬಿಕೆಯಲ್ಲಿ ಬಲಹೀನರಾಗಿರುವವರನ್ನು ಬಲಗೊಳಿಸಲು ನೆರವಾಗಿರಬೇಕು. ಕ್ರಿಸ್ತನು ಸಹ ತನ್ನ ಜೀವಮಾನದಲ್ಲಿ ತನ್ನ ಹಿತಕ್ಕಾಗಿ ಪ್ರಯತ್ನಿಸಲಿಲ್ಲ. “ನಿನಗೆ ಅವಮಾನ ಮಾಡಿದ ಜನರು ನನಗೂ ಅವಮಾನ ಮಾಡಿದರು”(A) ಎಂಬುದಾಗಿ ಆತನ ಬಗ್ಗೆ ಪವಿತ್ರ ಗ್ರಂಥದಲ್ಲಿ ಬರೆಯಲ್ಪಟ್ಟಿದೆ. ಹಿಂದಿನ ಕಾಲದಲ್ಲಿ ಬರೆಯಲ್ಪಟ್ಟಿರುವ ಪ್ರತಿಯೊಂದೂ ನಮ್ಮ ಉಪದೇಶಕ್ಕಾಗಿಯೇ ಬರೆಯಲ್ಪಟ್ಟಿದೆ. ನಾವು ನಿರೀಕ್ಷೆ ಉಳ್ಳವರಾಗಿರಬೇಕೆಂದು ಆ ಸಂಗತಿಗಳು ಬರೆಯಲ್ಪಟ್ಟಿವೆ. ಪವಿತ್ರ ಗ್ರಂಥವು ನಮಗೆ ಕೊಡುವ ತಾಳ್ಮೆಯಿಂದಲೂ ಶಕ್ತಿಯಿಂದಲೂ ಈ ನಿರೀಕ್ಷೆ ಬರುತ್ತದೆ. ತಾಳ್ಮೆ ಮತ್ತು ಶಕ್ತಿ ದೇವರಿಂದ ಬರುತ್ತವೆ. ಕ್ರಿಸ್ತ ಯೇಸು ಬಯಸುವ ಮಾರ್ಗವನ್ನು ನೀವೆಲ್ಲರೂ ಒಟ್ಟಾಗಿ ಒಪ್ಪಿಕೊಳ್ಳಲು ದೇವರು ನಿಮಗೆ ಸಹಾಯ ಮಾಡಲೆಂದು ನಾನು ಪ್ರಾರ್ಥಿಸುತ್ತೇನೆ. ಹೀಗೆ ನೀವೆಲ್ಲರೂ ಒಂದೇ ಹೃದಯದಿಂದಲೂ ಒಂದೇ ಮನಸ್ಸಿನಿಂದಲೂ ನಮ್ಮ ಪ್ರಭುವಾದ ಯೇಸು ಕ್ರಿಸ್ತನ ತಂದೆಯಾದ ದೇವರನ್ನು ಮಹಿಮೆಪಡಿಸುವಿರಿ. ಕ್ರಿಸ್ತನು ನಿಮ್ಮನ್ನು ಸ್ವೀಕರಿಸಿಕೊಂಡನು. ಆದ್ದರಿಂದ ನೀವು ಒಬ್ಬರನ್ನೊಬ್ಬರು ಸ್ವೀಕರಿಸಿಕೊಳ್ಳಬೇಕು. ಇದು ದೇವರಿಗೆ ಮಹಿಮೆಯನ್ನು ಉಂಟು ಮಾಡುತ್ತದೆ. ದೇವರು ನಮ್ಮ ಪಿತೃಗಳಿಗೆ ಮಾಡಿದ ವಾಗ್ದಾನಗಳು ಸತ್ಯವಾದುವುಗಳೆಂದು ತೋರಿಸುವುದಕ್ಕಾಗಿಯೂ ದೇವರು ಆ ವಾಗ್ದಾನಗಳನ್ನು ನೆರವೇರಿಸುತ್ತಾನೆ ಎಂಬುದನ್ನು ನಿರೂಪಿಸುವುದಕ್ಕಾಗಿಯೂ ದೇವರು ತಮಗೆ ತೋರುವ ಕರುಣೆಗಾಗಿ ಯೆಹೂದ್ಯರಲ್ಲದವರು ಆತನನ್ನು ಮಹಿಮೆಪಡಿಸಲೆಂದು ಕ್ರಿಸ್ತನು ಯೆಹೂದ್ಯರ ಸೇವಕನಾದನು. ಪವಿತ್ರ ಗ್ರಂಥದಲ್ಲಿ ಈ ರೀತಿ ಬರೆಯಲ್ಪಟ್ಟಿದೆ:

“ಆದ್ದರಿಂದ ಯೆಹೂದ್ಯರಲ್ಲದ ಜನರ ಮಧ್ಯದಲ್ಲಿ ನಾನು ನಿನ್ನನ್ನು ಸ್ತುತಿಸುವೆನು:
    ನಾನು ನಿನ್ನ ಹೆಸರನ್ನು ಸಂಕೀರ್ತಿಸುವೆನು.”(B)

10 ಇದಲ್ಲದೆ ಪವಿತ್ರ ಗ್ರಂಥವು ಹೀಗೆನ್ನುತ್ತದೆ:

“ಯೆಹೂದ್ಯರಲ್ಲದ ನೀವು ದೇವರ ಸ್ವಂತ ಜನರೊಂದಿಗೆ ಸೇರಿ ಸಂತೋಷದಿಂದಿರಬೇಕು.”(C)

11 ಮತ್ತೊಂದು ಕಡೆ ಪವಿತ್ರ ಗ್ರಂಥವು ಹೀಗೆ ಹೇಳುತ್ತದೆ:

“ಯೆಹೂದ್ಯರಲ್ಲದ ನೀವೆಲ್ಲರೂ ಪ್ರಭುವನ್ನು ಸ್ತುತಿಸಿರಿ.
    ಎಲ್ಲಾ ಜನರು ಪ್ರಭುವಿಗೆ ಸ್ತೋತ್ರ ಮಾಡಲಿ.”(D)

12 ಯೆಶಾಯನು ಹೀಗೆ ಹೇಳಿದ್ದಾನೆ:

“ಇಷಯನ ಕುಟುಂಬದಿಂದ ಒಬ್ಬ ವ್ಯಕ್ತಿಯು ಬರುವನು.
    ಆತನು ಯೆಹೂದ್ಯರಲ್ಲದವರನ್ನು ಆಳುವುದಕ್ಕಾಗಿ ಬರುವನು.
    ಯೆಹೂದ್ಯರಲ್ಲದ ಜನರು ಆತನಲ್ಲಿ ನಿರೀಕ್ಷೆಯನ್ನು ಹೊಂದಿಕೊಳ್ಳುವರು.”(E)

13 ನಿರೀಕ್ಷೆಯನ್ನು ಕೊಡುವ ದೇವರು ನಂಬಿಕೆಯಿಂದ ಉಂಟಾಗುವ ಆನಂದವನ್ನೂ ಸಮಾಧಾನವನ್ನೂ ನಿಮಗೆ ಸಂಪೂರ್ಣವಾಗಿ ದಯಪಾಲಿಸಲೆಂದು ನಾನು ಪ್ರಾರ್ಥಿಸುತ್ತೇನೆ. ಆಗ ಪವಿತ್ರಾತ್ಮನ ಶಕ್ತಿಯ ಮೂಲಕ ನಿರೀಕ್ಷೆಯು ನಿಮ್ಮಲ್ಲಿ ತುಂಬಿ ಹೊರಸೂಸುವುದು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International