Old/New Testament
ತುತಿಗೀತೆ. ರಚನೆಗಾರರು: ಕೋರಹೀಯರು.
87 ದೇವರು ತನ್ನ ಆಲಯವನ್ನು ಜೆರುಸಲೇಮಿನ ಪವಿತ್ರ ಪರ್ವತಗಳ ಮೇಲೆ ಕಟ್ಟಿದ್ದಾನೆ.
2 ಯೆಹೋವನು ಚೀಯೋನಿನ ಬಾಗಿಲುಗಳನ್ನು ಇಸ್ರೇಲಿನ ಇತರ ಸ್ಥಳಗಳಿಗಿಂತಲೂ ಹೆಚ್ಚಾಗಿ ಪ್ರೀತಿಸುವನು.
3 ದೇವರ ಪಟ್ಟಣವೇ, ಜನರು ನಿನ್ನ ಬಗ್ಗೆ ಆಶ್ಚರ್ಯಕರವಾದ ಸಂಗತಿಗಳನ್ನು ಹೇಳುವರು.
4 ದೇವಜನರು ಪ್ರಪಂಚದ ಅನೇಕ ಕಡೆಗಳಲ್ಲಿ ಈಗ ವಾಸವಾಗಿದ್ದಾರೆ.
ಅವರಲ್ಲಿ ಕೆಲವರು ಈಜಿಪ್ಟಿನಲ್ಲಿಯೂ ಬಾಬಿಲೋನಿನಲ್ಲಿಯೂ ನೆಲೆಸಿದ್ದಾರೆ.
ಇನ್ನು ಕೆಲವರು ಫಿಲಿಷ್ಟಿಯದಲ್ಲಿಯೂ ತೂರಿನಲ್ಲಿಯೂ ಇಥಿಯೋಪಿಯದಲ್ಲಿಯೂ ನೆಲೆಸಿದ್ದಾರೆ.
5 ಚೀಯೋನಿನಲ್ಲಿ ಜನಿಸಿದ ಪ್ರತಿಯೊಬ್ಬರೂ ದೇವರಿಗೆ ಗೊತ್ತು.
ಮಹೋನ್ನತನಾದ ದೇವರೇ ಆ ಪಟ್ಟಣವನ್ನು ಕಟ್ಟಿದನು.
6 ದೇವರು ತನ್ನ ಜನರೆಲ್ಲರ ಬಗ್ಗೆ ಪಟ್ಟಿಮಾಡಿದ್ದಾನೆ.
ಪ್ರತಿಯೊಬ್ಬನ ಹುಟ್ಟಿದ ಸ್ಥಳವು ದೇವರಿಗೆ ತಿಳಿದಿದೆ.
7 ದೇವರ ಮಕ್ಕಳು ಹಬ್ಬಗಳನ್ನು ಆಚರಿಸಲು ಜೆರುಸಲೇಮಿಗೆ ಹೋಗುವರು.
ಅವರು ಸಂತೋಷದಿಂದ ಹಾಡುತ್ತಾ ಕುಣಿದಾಡುವರು.
“ಒಳ್ಳೆಯವುಗಳೆಲ್ಲ ಬರುವುದು ಜೆರುಸಲೇಮಿನಿಂದಲೇ” ಎಂದು ಅವರು ಹೇಳುವರು.
ಸ್ತುತಿಗೀತೆ. ರಚನೆಗಾರರು: ಕೋರಹೀಯರಿಗೆ ಸೇರಿದ ಜೇರಹ ಕುಟುಂಬದ ಹೇಮಾನ.
88 ಯೆಹೋವ ದೇವರೇ, ನೀನೇ ನನ್ನ ರಕ್ಷಕನು.
ಹಗಲಿರುಳು ನಿನಗೆ ಪ್ರಾರ್ಥಿಸುತ್ತಿದ್ದೇನೆ.
2 ನನ್ನ ಪ್ರಾರ್ಥನೆಗಳಿಗೆ ದಯವಿಟ್ಟು ಗಮನಕೊಡು.
ಕರುಣೆಗೋಸ್ಕರ ನಾನಿಡುವ ಮೊರೆಗಳನ್ನು ಆಲಿಸು.
3 ನನ್ನ ಜೀವವು ನೋವಿನಿಂದ ತುಂಬಿಹೋಯಿತು.
ಮರಣವು ನನಗೆ ಸಮೀಪವಾಗಿದೆ.
4 ಜನರು ನನ್ನನ್ನು ಸತ್ತವನಂತೆಯೂ
ಬದುಕಲಾರದ ಬಲಹೀನನಂತೆಯೂ ಪರಿಗಣಿಸಿದ್ದಾರೆ.
5 ಸತ್ತವರ ಮಧ್ಯದಲ್ಲಿ ನನಗಾಗಿ ಹುಡುಕು.
ಸಮಾಧಿಯಲ್ಲಿ ಬಿದ್ದಿರುವ ಶವದಂತಾಗಿದ್ದೇನೆ,
ನೀನು ಮರೆತುಬಿಟ್ಟ ಸತ್ತ ಜನರಂತೆ ಆಗಿದ್ದೇನೆ.
ನಿನ್ನಿಂದಲೂ ನಿನ್ನ ಪರಿಪಾಲನೆಯಿಂದಲೂ ದೂರವಾದವನಾಗಿದ್ದೇನೆ.
6 ನೀನು ನನ್ನನ್ನು ಪಾತಾಳಕ್ಕೆ ದಬ್ಬಿರುವೆ;
ನನ್ನನ್ನು ಕತ್ತಲೆಯ ಸ್ಥಳಕ್ಕೆ ನೂಕಿರುವೆ.
7 ನೀನು ನನ್ನ ಮೇಲೆ ಕೋಪಗೊಂಡಿದ್ದರಿಂದಲೇ
ನನ್ನನ್ನು ಶಿಕ್ಷಿಸಿದೆ.
8 ಸ್ನೇಹಿತರು ನನ್ನನ್ನು ತೊರೆದುಬಿಟ್ಟರು.
ಹೊಲೆಯಾದ ಮನುಷ್ಯನಂತೆ ಅವರೆಲ್ಲರೂ ನನ್ನನ್ನು ದೂರ ಮಾಡಿದ್ದಾರೆ.
ನನ್ನನ್ನು ಮನೆಯೊಳಗೆ ದೊಬ್ಬಿ ಬೀಗ ಹಾಕಿದ್ದಾರೆ; ನಾನು ಹೊರಗೆ ಹೋಗಲಾರೆನು.
9 ನನ್ನ ಎಲ್ಲಾ ಸಂಕಟಗಳಿಂದ ಅತ್ತುಅತ್ತು ನನ್ನ ಕಣ್ಣುಗಳು ನೋಯುತ್ತಿವೆ.
ಯೆಹೋವನೇ, ನಾನು ನಿನಗೆ ಎಡಬಿಡದೆ ಪ್ರಾರ್ಥಿಸುವೆನು!
ನನ್ನ ಕೈಗಳನ್ನು ಎತ್ತಿ ನಿನಗೆ ಪ್ರಾರ್ಥಿಸುವೆನು!
10 ಯೆಹೋವನೇ, ಸತ್ತ ಜನರಿಗಾಗಿ ನೀನು ಮಹತ್ಕಾರ್ಯಗಳನ್ನು ಮಾಡುವೆಯಾ?
ಇಲ್ಲ! ದೆವ್ವಗಳು ಎದ್ದುನಿಂತು ನಿನ್ನನ್ನು ಕೊಂಡಾಡುತ್ತವೆಯೋ? ಇಲ್ಲ!
11 ಸತ್ತ ಜನರು ತಮ್ಮ ಸಮಾಧಿಗಳಲ್ಲಿ ನಿನ್ನ ಪ್ರೀತಿಯ ಬಗ್ಗೆ ಮಾತಾಡಲಾರರು.
ಸತ್ತವರು, ಸತ್ತವರ ಲೋಕದಲ್ಲಿ ನಿನ್ನ ನಂಬಿಗಸ್ತಿಕೆಯ ಬಗ್ಗೆ ಮಾತಾಡಲಾರರು.
12 ಸತ್ತು ಕತ್ತಲೆಯಲ್ಲಿ ಬಿದ್ದಿರುವ ಜನರು ನಿನ್ನ ಅದ್ಭುತಕಾರ್ಯಗಳನ್ನು ನೋಡಲಾರರು.
ಸತ್ತವರು, ಮರೆಯಲ್ಪಟ್ಟವರ ಲೋಕದಲ್ಲಿ ನಿನ್ನ ನೀತಿಯ ಬಗ್ಗೆ ಮಾತಾಡಲಾರರು.
13 ಯೆಹೋವನೇ, ನಿನ್ನ ಸಹಾಯಕ್ಕಾಗಿ ಮೊರೆಯಿಡುತ್ತಿದ್ದೇನೆ.
ಪ್ರತಿ ಮುಂಜಾನೆಯೂ ನಿನಗೆ ಪ್ರಾರ್ಥಿಸುತ್ತಿದ್ದೇನೆ.
14 ಯೆಹೋವನೇ, ನೀನು ನನ್ನನ್ನು ತೊರೆದುಬಿಟ್ಟಿದ್ದೇಕೆ?
ನೀನು ನನಗೆ ಕಿವಿಗೊಡದಿರುವುದೇಕೆ?
15 ನಾನು ಚಿಕ್ಕಂದಿನಿಂದಲೂ ಬಲಹೀನನಾಗಿದ್ದೇನೆ ಮತ್ತು ಕಾಯಿಲೆಯವನಾಗಿದ್ದೇನೆ.
ನಿನ್ನ ಕೋಪದಿಂದ ನಾನು ಸಂಕಟಪಡುತ್ತಿರುವೆ.
ನಾನು ನಿಸ್ಸಹಾಯನಾಗಿರುವೆ.
16 ನೀನು ನನ್ನ ಮೇಲೆ ಕೋಪಗೊಂಡಿದ್ದರಿಂದ
ನಿನ್ನ ದಂಡನೆಯು ನನ್ನನ್ನು ಕೊಲ್ಲುತ್ತಿದೆ.
17 ಬಾಧೆಗಳೂ ನೋವುಗಳೂ ಯಾವಾಗಲೂ ನನ್ನೊಂದಿಗಿವೆ.
ಬಾಧೆಗಳಿಂದಲೂ ನೋವುಗಳಿಂದಲೂ ಮುಳುಗಿ ಹೋಗುತ್ತಿದ್ದೇನೆ.
18 ಯೆಹೋವನೇ, ಸ್ನೇಹಿತರೆಲ್ಲರನ್ನೂ ಪ್ರಿಯರನ್ನೂ ನೀನು ನನ್ನಿಂದ ದೂರಮಾಡಿದೆ.
ಕೇವಲ ಕತ್ತಲೆಯೊಂದೇ ನನ್ನೊಂದಿಗೆ ಉಳಿದುಕೊಂಡಿದೆ.
ಸರ್ಕಾರದ ಅಧಿಕಾರಿಗಳಿಗೆ ವಿಧೇಯರಾಗಿರಿ
13 ನೀವೆಲ್ಲರೂ ಸರ್ಕಾರದ ಅಧಿಕಾರಿಗಳಿಗೆ ವಿಧೇಯರಾಗಿರಬೇಕು. ಪ್ರತಿಯೊಬ್ಬ ಅಧಿಕಾರಿಗೆ ಅಧಿಕಾರವನ್ನು ಕೊಟ್ಟಿರುವವನು ದೇವರೇ. ಈಗಿರುವ ಎಲ್ಲಾ ಅಧಿಕಾರಿಗಳಿಗೆ ದೇವರೇ ಅಧಿಕಾರವನ್ನು ಕೊಟ್ಟಿದ್ದಾನೆ. 2 ಆದ್ದರಿಂದ ಸರ್ಕಾರಕ್ಕೆ ವಿರೋಧವಾಗಿರುವ ವ್ಯಕ್ತಿಯು ನಿಜವಾಗಿಯೂ ದೇವರ ಆಜ್ಞೆಗೇ ವಿರೋಧವಾಗಿದ್ದಾನೆ. ಸರ್ಕಾರಕ್ಕೆ ವಿರೋಧವಾಗಿರುವ ಜನರು ತಮ್ಮ ಮೇಲೆ ತಾವೇ ದಂಡನೆಯನ್ನು ಬರಮಾಡಿಕೊಳ್ಳುತ್ತಾರೆ. 3 ಸರಿಯಾದದ್ದನ್ನು ಮಾಡುವ ಜನರಿಗೆ ಅಧಿಕಾರಿಗಳ ಭಯವಿರುವುದಿಲ್ಲ. ಆದರೆ ಕೆಟ್ಟದ್ದನ್ನು ಮಾಡುವ ಜನರಿಗೆ ಅಧಿಕಾರಿಗಳ ಭಯವಿರುತ್ತದೆ. ನೀವು ಅಧಿಕಾರಿಗಳಿಗೆ ಭಯಪಡದವರಾಗಿರಬೇಕೆಂದು ಅಪೇಕ್ಷಿಸುತ್ತೀರೋ? ಹಾಗಾದರೆ ನೀವು ಸರಿಯಾದದ್ದನ್ನೇ ಮಾಡಿರಿ. ಆಗ ಅಧಿಕಾರಿಗಳು ನಿಮ್ಮನ್ನು ಹೊಗಳುವರು.
4 ಅಧಿಕಾರಿಯು ನಿಮ್ಮ ಒಳ್ಳೆಯದಕ್ಕಾಗಿ ನೇಮಕಗೊಂಡಿರುವ ದೇವರ ಸೇವಕನಾಗಿದ್ದಾನೆ. ಆದರೆ ನೀವು ಕೆಟ್ಟದ್ದನ್ನು ಮಾಡಿದರೆ ಭಯಪಡಲೇಬೇಕು. ನಿಮ್ಮನ್ನು ದಂಡಿಸಲು ಅವನಿಗೆ ಅಧಿಕಾರವಿದೆ. ಅವನು ಆ ಅಧಿಕಾರವನ್ನು ಉಪಯೋಗಿಸುವನು. ಅಧಿಕಾರಿಯು ಕೆಟ್ಟದ್ದನ್ನು ಮಾಡುವ ಜನರನ್ನು ದಂಡಿಸುವುದಕ್ಕಾಗಿ ನೇಮಕಗೊಂಡಿರುವ ದೇವರ ಸೇವಕನಾಗಿದ್ದಾನೆ. 5 ಆದ್ದರಿಂದ ನೀವು ಸರ್ಕಾರಕ್ಕೆ ವಿಧೇಯರಾಗಬೇಕು. ನೀವು ದಂಡನೆಗೆ ಗುರಿಯಾಗಬಹುದೆಂಬ ಕಾರಣದಿಂದ ಮಾತ್ರವಲ್ಲದೆ, ನಿಮ್ಮ ಮನಸ್ಸಾಕ್ಷಿಯ ದೆಸೆಯಿಂದಲೂ ನೀವು ಅವರಿಗೆ ವಿಧೇಯರಾಗಬೇಕು.
6 ಈ ಕಾರಣದಿಂದಲೇ ನೀವು ತೆರಿಗೆಯನ್ನು ಸಹ ಕೊಡುತ್ತೀರಿ. ಆ ಅಧಿಕಾರಿಗಳು ದೇವರಿಗೋಸ್ಕರ ಕೆಲಸ ಮಾಡುವವರಾಗಿದ್ದಾರೆ; ತಮ್ಮ ಸಮಯವನ್ನೆಲ್ಲಾ ಆಡಳಿತ ಮಾಡಲು ಉಪಯೋಗಿಸುವವರಾಗಿದ್ದಾರೆ. 7 ನೀವು ಯಾರ್ಯಾರಿಗೆ ಏನೇನು ಕೊಡಬೇಕೋ ಅದನ್ನೆಲ್ಲಾ ಅವರಿಗೆ ಕೊಡಿರಿ. ಯಾವ ತೆರಿಗೆಯನ್ನಾದರೂ ಕೊಡಬೇಕಿದ್ದರೆ ಅದನ್ನು ಕೊಟ್ಟುಬಿಡಿರಿ. ಯಾರಿಗೆ ಗೌರವ ಕೊಡಬೇಕೋ ಅವರಿಗೆ ಗೌರವ ಕೊಡಿರಿ. ಯಾರಿಗೆ ಮರ್ಯಾದೆ ತೋರಿಸಬೇಕೊ ಅವರಿಗೆ ಮರ್ಯಾದೆಯನ್ನು ತೋರಿಸಿರಿ.
ಇತರ ಜನರನ್ನು ಪ್ರೀತಿಸಬೇಕೆಂಬ ಒಂದೇ ಆಜ್ಞೆ
8 ಜನರಿಗೆ ಯಾವ ವಿಷಯದಲ್ಲಿಯೂ ಸಾಲಗಾರರಾಗಿರಬೇಡಿ. ಆದರೆ ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬ ವಿಷಯದಲ್ಲಿ ಮಾತ್ರ ಯಾವಾಗಲೂ ಸಾಲಗಾರರಾಗಿದ್ದೀರಿ. ಇತರ ಜನರನ್ನು ಪ್ರೀತಿಸುವ ವ್ಯಕ್ತಿಯು ಇಡೀ ಧರ್ಮಶಾಸ್ತ್ರಕ್ಕೆ ವಿಧೇಯನಾಗಿದ್ದಾನೆ. 9 ಏಕೆಂದರೆ, “ವ್ಯಭಿಚಾರ ಮಾಡಕೂಡದು; ಕೊಲೆ ಮಾಡಕೂಡದು; ಕದಿಯಕೂಡದು; ಇತರರಿಗೆ ಸೇರಿದ ವಸ್ತುಗಳನ್ನು ಅಪೇಕ್ಷಿಸಕೂಡದು”(A) ಎಂದು ಧರ್ಮಶಾಸ್ತ್ರವು ಹೇಳುತ್ತದೆ. ಈ ಆಜ್ಞೆಗಳನ್ನು ಮೊದಲುಗೊಂಡು ಉಳಿದೆಲ್ಲಾ ಆಜ್ಞೆಗಳು, “ನೀನು ನಿನ್ನನ್ನು ಪ್ರೀತಿಸುವಂತೆ ಇತರ ಜನರನ್ನೂ ಪ್ರೀತಿಸು”(B) ಎಂಬ ಒಂದೇ ಆಜ್ಞೆಯಲ್ಲಿ ಅಡಕವಾಗಿದೆ. 10 ಪ್ರೀತಿಯು ಬೇರೆಯವರಿಗೆ ಕೇಡುಮಾಡುವುದಿಲ್ಲ. ಆದ್ದರಿಂದ ಪ್ರೀತಿಸುವುದಕ್ಕೂ ಎಲ್ಲಾ ಆಜ್ಞೆಗಳಿಗೆ ವಿಧೇಯರಾಗುವುದಕ್ಕೂ ವ್ಯತ್ಯಾಸವೇನೂ ಇಲ್ಲ.
11 ನಾವು ಪ್ರಾಮುಖ್ಯವಾದ ಸಮಯದಲ್ಲಿ ಜೀವಿಸುತ್ತಿರುವುದರಿಂದ ಈ ವಿಷಯಗಳನ್ನು ಹೇಳುತ್ತಿದ್ದೇನೆ ಎಂಬುದು ನಿಮಗೆ ಗೊತ್ತೇ ಇದೆ. ಹೌದು, ನೀವು ನಿದ್ರೆಯಿಂದ ಎಚ್ಚರಗೊಳ್ಳುವ ಕಾಲ ಇದಾಗಿದೆ. ನಾವು ವಿಶ್ವಾಸಿಗಳಾದ ಕಾಲಕ್ಕಿಂತ ಈಗ ನಮ್ಮ ರಕ್ಷಣೆಯು ಸಮೀಪವಾಗಿದೆ. 12 “ರಾತ್ರಿ”ಯು ಬಹುಮಟ್ಟಿಗೆ ಮುಗಿದುಹೋಗಿದೆ. “ಹಗಲು” ಬಹುಮಟ್ಟಿಗೆ ಬಂದಿದೆ. ಆದ್ದರಿಂದ ಕತ್ತಲೆಗೆ ಸೇರಿದ ಕಾರ್ಯಗಳನ್ನು ಇನ್ನು ಮೇಲೆ ಮಾಡದೆ ಬೆಳಕಿಗೆ ಸೇರಿದ ಕಾರ್ಯಗಳನ್ನು ಮಾಡಲು ನಮ್ಮನ್ನು ಸಿದ್ಧಪಡಿಸಿಕೊಳ್ಳಬೇಕು. 13 ಹಗಲಿಗೆ ಸೇರಿದ ಜನರಂತೆ ಸರಿಯಾದ ರೀತಿಯಲ್ಲಿ ಜೀವಿಸೋಣ. ಕೆಟ್ಟದಾದ ಮತ್ತು ವ್ಯರ್ಥವಾದ ಔತಣಕೂಟಗಳನ್ನು ನಾವು ಏರ್ಪಡಿಸಕೂಡದು; ಕುಡಿದು ಮತ್ತರಾಗಕೂಡದು; ನಾವು ಲೈಂಗಿಕ ಪಾಪವನ್ನಾಗಲಿ ನಮ್ಮ ದೇಹದಿಂದ ಯಾವುದೇ ಬಗೆಯ ಪಾಪವನ್ನಾಗಲಿ ಮಾಡಕೂಡದು; ವಾಗ್ವಾದಗಳನ್ನಾಗಲಿ ಜಗಳಗಳನ್ನಾಗಲಿ ಎಬ್ಬಿಸಬಾರದು; ಅಲ್ಲದೆ ಹೊಟ್ಟೆಕಿಚ್ಚುಪಡಬಾರದು. 14 ಪ್ರಭುವಾದ ಯೇಸು ಕ್ರಿಸ್ತನನ್ನೇ ಧರಿಸಿಕೊಳ್ಳಿರಿ. ನಿಮ್ಮ ಪಾಪಸ್ವಭಾವವನ್ನು ಹೇಗೆ ತೃಪ್ತಿಗೊಳಿಸಬೇಕೆಂದಾಗಲಿ ಕೆಟ್ಟಕಾರ್ಯಗಳನ್ನು ಮಾಡಬೇಕೆಂಬ ಬಯಕೆಯನ್ನು ಹೇಗೆ ಪೂರೈಸಿಕೊಳ್ಳಬೇಕೆಂದಾಗಲಿ ಆಲೋಚಿಸಬೇಡಿ.
Kannada Holy Bible: Easy-to-Read Version. All rights reserved. © 1997 Bible League International