Print Page Options
Previous Prev Day Next DayNext

Old/New Testament

Each day includes a passage from both the Old Testament and New Testament.
Duration: 365 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 84-86

ರಚನೆಗಾರರು: ಕೋರಹೀಯರು.

84 ಸೇನಾಧೀಶ್ವರನಾದ ಯೆಹೋವನೇ, ನಿನ್ನ ಆಲಯವು ಎಷ್ಟೋ ರಮ್ಯವಾಗಿದೆ.
ಯೆಹೋವನೇ, ನಿನ್ನ ಆಲಯದೊಳಗೆ ಪ್ರವೇಶಿಸಲು ಕಾತುರಗೊಂಡಿರುವೆ.
ನನ್ನ ಅಂಗಾಂಗಗಳೆಲ್ಲಾ ಚೈತನ್ಯಸ್ವರೂಪನಾದ ದೇವರೊಂದಿಗೆ ಇರಲು ಬಯಸುತ್ತಿವೆ.
ಸೇನಾಧೀಶ್ವರನಾದ ಯೆಹೋವನೇ, ನನ್ನ ರಾಜನೇ,
    ನನ್ನ ದೇವರೇ, ಗುಬ್ಬಚ್ಚಿಗಳಿಗೂ ಪಾರಿವಾಳಗಳಿಗೂ ನಿನ್ನ ಆಲಯದಲ್ಲಿ ಗೂಡುಗಳಿವೆ.
ನಿನ್ನ ಯಜ್ಞವೇದಿಕೆಯ ಸಮೀಪದಲ್ಲಿಯೇ
    ಗೂಡು ಕಟ್ಟಿಕೊಂಡು ಮರಿ ಮಾಡುತ್ತವೆ.
ನಿನ್ನ ಆಲಯದಲ್ಲಿ ವಾಸಿಸುವವರು ಭಾಗ್ಯವಂತರೇ ಸರಿ!
    ಅವರು ನಿನ್ನನ್ನು ನಿತ್ಯವೂ ಸ್ತುತಿಸುತ್ತಿರುವರು.
ನಿನ್ನ ಶಕ್ತಿಯನ್ನೇ ಆಶ್ರಯಿಸಿಕೊಂಡು ಚೀಯೋನ್ ಪರ್ವತಕ್ಕೆ
    ಯಾತ್ರಿಕರಾಗಿ ಬರಲು ಬಯಸುವವರು ಎಷ್ಟೋ ಭಾಗ್ಯವಂತರು.
ಒರತೆಯನ್ನಾಗಿ ಮಾಡಿರುವ ಬಾಕಾ ಕಣಿವೆಯ ಮೂಲಕ ಅವರು ಪ್ರಯಾಣಮಾಡುವರು.
    ಮುಂಗಾರು ಮಳೆಯು ಅದನ್ನು ನೀರಿನ ತೊರೆಗಳಿಂದ ಸಮೃದ್ಧಿಗೊಳಿಸುವುದು.
ಜನರು ದೇವರನ್ನು ಸಂದರ್ಶಿಸಲು
    ಊರಿಂದ ಊರಿಗೆ ಪ್ರಯಾಣ ಮಾಡುತ್ತಾ ಚೀಯೋನಿಗೆ ಬರುವರು.

ಸೇನಾಧೀಶ್ವರ ಯೆಹೋವ ದೇವರೇ, ನನ್ನ ಪ್ರಾರ್ಥನೆಗೆ ಕಿವಿಗೊಡು.
    ಯಾಕೋಬನ ದೇವರೇ, ನನ್ನ ಮೊರೆಯನ್ನು ಕೇಳು.

ದೇವರೇ, ನಮಗೆ ಗುರಾಣಿಯಾಗಿರುವವನನ್ನು ನೋಡು.
    ನೀನು ಅಭಿಷೇಕಿಸಿದವನಿಗೆ ಕರುಣೆತೋರು.
10 ಬೇರೊಂದು ಸ್ಥಳದಲ್ಲಿ ಸಾವಿರ ದಿನಗಳಿರುವುದಕ್ಕಿಂತಲೂ
    ನಿನ್ನ ಆಲಯದಲ್ಲಿ ಒಂದು ದಿನವಿರುವುದೇ ಉತ್ತಮ.
ದುಷ್ಟರ ಮನೆಯಲ್ಲಿ ವಾಸಿಸುವುದಕ್ಕಿಂತಲೂ
    ನನ್ನ ದೇವರ ಆಲಯದಲ್ಲಿ ದ್ವಾರಪಾಲಕನಾಗಿರುವುದೇ ಉತ್ತಮ.[a]
11 ಯೆಹೋವ ದೇವರು ನಮ್ಮ ಸಂರಕ್ಷಕನೂ ಮಹಿಮಾ ಪೂರ್ಣನಾದ ರಾಜನೂ ಆಗಿದ್ದಾನೆ.[b]
    ಯೆಹೋವನು ನಮಗೆ ದಯೆಯನ್ನೂ ಘನತೆಯನ್ನೂ ಅನುಗ್ರಹಿಸುವನು.
ಆತನು ಎಲ್ಲಾ ಒಳ್ಳೆಯವುಗಳನ್ನು
    ತನ್ನ ಭಕ್ತರಿಗೆ ಕೊಡುವನು.
12 ಸೇನಾಧೀಶ್ವರನಾದ ಯೆಹೋವನೇ, ನಿನ್ನಲ್ಲಿ ಭರವಸವಿಡುವವರು ಭಾಗ್ಯವಂತರೇ ಸರಿ!

ಸ್ತುತಿಗೀತೆ. ರಚನೆಗಾರರು: ಕೋರಹೀಯರು.

85 ಯೆಹೋವನೇ, ನಿನ್ನ ದೇಶಕ್ಕೆ ಕರುಣೆತೋರು.
    ಯಾಕೋಬನ ಜನರು ಪರದೇಶದಲ್ಲಿ ಸೆರೆಯಾಳುಗಳಾಗಿದ್ದಾರೆ.
    ಅವರನ್ನು ಸ್ವದೇಶಕ್ಕೆ ಮತ್ತೆ ಕರೆದುಕೊಂಡು ಬಾ.
ನಿನ್ನ ಜನರ ದ್ರೋಹವನ್ನು ಕ್ಷಮಿಸು!
    ಅವರ ಪಾಪಗಳನ್ನು ಅಳಿಸಿಬಿಡು!

ನಿನ್ನ ರೌದ್ರವನ್ನು ತೊರೆದುಬಿಡು.
    ಉಗ್ರ ಕೋಪದಿಂದಿರಬೇಡ.
ನಮ್ಮ ರಕ್ಷಕನಾದ ದೇವರೇ, ನಮ್ಮ ಮೇಲೆ
    ನಿನಗಿರುವ ಕೋಪವನ್ನು ತೊರೆದು ನಮ್ಮನ್ನು ಮತ್ತೆ ಸ್ವೀಕರಿಸು.
ನಮ್ಮ ಮೇಲೆ ಸದಾಕಾಲ ಕೋಪದಿಂದಿರುವೆಯಾ?
    ನಮ್ಮ ಮೇಲೆ ತಲತಲಾಂತರಗಳವರೆಗೂ ಕೋಪವನ್ನು ಬೆಳೆಸಬೇಕೆಂದಿರುವೆಯಾ?
ದಯವಿಟ್ಟು ನಮ್ಮನ್ನು ಮತ್ತೆ ಜೀವಿಸಮಾಡು!
    ನಿನ್ನ ಜನರನ್ನು ಸಂತೋಷಗೊಳಿಸು.
ಯೆಹೋವನೇ, ನಮ್ಮ ಮೇಲೆ ನಿನಗಿರುವ ಪ್ರೀತಿಯನ್ನು ತೋರಿಸು.
    ನಮ್ಮನ್ನು ರಕ್ಷಿಸು.

ದೇವರಾದ ಯೆಹೋವನು ಹೇಳಿದ್ದು ನನಗೆ ಕೇಳಿಸಿತು.
    ತನ್ನ ಜನರಿಗೂ ತನ್ನ ಸದ್ಭಕ್ತರಿಗೂ ಶಾಂತಿ ಇರುವುದೆಂದು ಆತನು ಹೇಳಿದನು.
    ಆದ್ದರಿಂದ ಅವರು ತಮ್ಮ ಮೂಢಜೀವನಕ್ಕೆ ಹೋಗಕೂಡದು.
ದೇವರು ತನ್ನ ಭಕ್ತರನ್ನು ರಕ್ಷಿಸುವ ಕಾಲ ಸಮೀಪವಾಗಿದೆ.
    ನಾವು ಸ್ವದೇಶದಲ್ಲಿ ಗೌರವದೊಂದಿಗೆ ನೆಲೆಸುವ ಸಮಯ ಹತ್ತಿರವಾಗಿದೆ.
10 ದೇವರ ನಿಜಪ್ರೀತಿಯು ಆತನ ಭಕ್ತರನ್ನು ಸಂಧಿಸುತ್ತದೆ.
    ನೀತಿಯೂ ಸಮಾಧಾನವೂ ಅವರಿಗೆ ಮುದ್ದಿಡುತ್ತವೆ.
11 ನಿವಾಸಿಗಳೆಲ್ಲರೂ ದೇವರಿಗೆ ನಂಬಿಗಸ್ತರಾಗಿರುವರು.
    ಪರಲೋಕದ ದೇವರು ಅವರಿಗೆ ಒಳ್ಳೆಯವನಾಗಿರುವನು.[c]
12 ಯೆಹೋವನು ನಮಗೆ ಒಳ್ಳೆಯವುಗಳನ್ನು ಹೇರಳವಾಗಿ ಒದಗಿಸುವನು.
    ಭೂಮಿಯು ಒಳ್ಳೆಯ ಬೆಳೆಗಳನ್ನು ಬೆಳೆಯಿಸುವುದು.
13 ನೀತಿಯು ಆತನ ಮುಂದೆ ಹೋಗುತ್ತಾ
    ಆತನಿಗಾಗಿ ಹಾದಿಯನ್ನು ಸಿದ್ಧಪಡಿಸುವುದು.

ಪ್ರಾರ್ಥನೆ. ರಚನೆಗಾರ: ದಾವೀದ.

86 ನಾನು ಬಡವನೂ ನಿಸ್ಸಹಾಯಕನೂ ಆಗಿದ್ದೇನೆ.
    ಯೆಹೋವನೇ, ದಯವಿಟ್ಟು ನನಗೆ ಕಿವಿಗೊಡು; ನನ್ನ ಪ್ರಾರ್ಥನೆಗೆ ಉತ್ತರಿಸು.
ಯೆಹೋವನೇ, ನಾನು ನಿನ್ನ ಭಕ್ತನು! ದಯವಿಟ್ಟು ನನ್ನನ್ನು ಸಂರಕ್ಷಿಸು!
    ನಾನು ನಿನ್ನ ಸೇವಕನು, ನೀನು ನನ್ನ ದೇವರು.
    ನಾನು ನಿನ್ನಲ್ಲಿ ಭರವಸವಿಟ್ಟಿರುವೆ, ಆದ್ದರಿಂದ ನನ್ನನ್ನು ರಕ್ಷಿಸು.
ನನ್ನ ಯೆಹೋವನೇ, ನನಗೆ ಕರುಣೆತೋರು.
    ನಾನು ದಿನವೆಲ್ಲಾ ನಿನಗೆ ಪ್ರಾರ್ಥಿಸುತ್ತಿದ್ದೇನೆ.
ಯೆಹೋವನೇ, ನನ್ನ ಜೀವಿತವನ್ನು ನಿನ್ನ ಕೈಗಳಲ್ಲಿಟ್ಟಿದ್ದೇನೆ.
    ನಿನ್ನ ಸೇವಕನಾದ ನನ್ನನ್ನು ಸಂತೋಷಗೊಳಿಸು.
ಯೆಹೋವನೇ, ನೀನು ಒಳ್ಳೆಯವನೂ ಕರುಣಾಮಯನೂ ಆಗಿರುವೆ.
    ನಿನ್ನ ಜನರು ಸಹಾಯಕ್ಕಾಗಿ ನಿನಗೆ ಮೊರೆಯಿಡುವರು.
    ನೀನು ಅವರನ್ನು ನಿಜವಾಗಿಯೂ ಪ್ರೀತಿಸುವಿ.
ಯೆಹೋವನೇ, ನನ್ನ ಪ್ರಾರ್ಥನೆಯನ್ನು ಕೇಳು.
    ಕರುಣೆಗೋಸ್ಕರ ಮೊರೆಯಿಡುತ್ತಿರುವ ನನಗೆ ಕಿವಿಗೊಡು.
ಯೆಹೋವನೇ, ಆಪತ್ತಿನ ಸಮಯದಲ್ಲಿ ನಿನಗೆ ಪ್ರಾರ್ಥಿಸುತ್ತಿದ್ದೇನೆ.
    ನೀನು ಉತ್ತರವನ್ನು ದಯಪಾಲಿಸುವೆಯೆಂದು ನನಗೆ ಗೊತ್ತಿದೆ.
ದೇವರೇ, ನಿನ್ನಂತೆ ಬೇರೆ ಯಾರೂ ಇಲ್ಲ.
    ನೀನು ಮಾಡಿರುವ ಕಾರ್ಯಗಳನ್ನು ಬೇರೆ ಯಾರೂ ಮಾಡಲಾರರು.
ಯೆಹೋವನೇ, ಪ್ರತಿಯೊಬ್ಬ ವ್ಯಕ್ತಿಯನ್ನು ಸೃಷ್ಟಿಸಿದವನು ನೀನೇ.
    ಅವರೆಲ್ಲರೂ ಬಂದು ನಿನ್ನನ್ನು ಆರಾಧಿಸಲಿ.
    ಅವರೆಲ್ಲರೂ ನಿನ್ನ ಹೆಸರನ್ನು ಸನ್ಮಾನಿಸಲಿ.
10 ದೇವರೇ, ನೀನು ಮಹೋನ್ನತನಾಗಿರುವೆ! ನೀನು ಅದ್ಭುತಕಾರ್ಯಗಳನ್ನು ಮಾಡುವಾತನಾಗಿರುವೆ!
    ನೀನೇ, ಹೌದು, ನೀನೊಬ್ಬನೇ ದೇವರು!
11 ಯೆಹೋವನೇ, ನಿನ್ನ ಮಾರ್ಗಗಳನ್ನು ನನಗೆ ಉಪದೇಶಿಸು.
    ನಾನು ಜೀವಿಸುತ್ತಾ ನಿನ್ನ ಸತ್ಯತೆಗಳಿಗೆ ವಿಧೇಯನಾಗುವೆನು.
ನಿನ್ನ ಹೆಸರನ್ನು ಆರಾಧಿಸಲು ನನಗೆ ಸಹಾಯಮಾಡು.
    ನನ್ನ ಜೀವನದಲ್ಲಿ ಅದೇ ಅತ್ಯಂತ ಮುಖ್ಯವಾದದ್ದು.
12 ನನ್ನ ದೇವರಾದ ಯೆಹೋವನೇ, ಪೂರ್ಣಹೃದಯದಿಂದ ನಿನ್ನನ್ನು ಸ್ತುತಿಸುವೆನು;
    ನಿನ್ನ ಹೆಸರನ್ನು ಎಂದೆಂದಿಗೂ ಸನ್ಮಾನಿಸುವೆನು!
13 ನೀನು ನನ್ನ ಮೇಲೆ ಎಷ್ಟೋ ಪ್ರೀತಿಯನ್ನು ಇಟ್ಟಿರುವೆ.
    ನೀನು ನನ್ನನ್ನು ಪಾತಾಳದಿಂದ ರಕ್ಷಿಸಿದೆ.
14 ದೇವರೇ, ಅಹಂಕಾರಿಗಳು ನನಗೆ ವಿರೋಧವಾಗಿ ಎದ್ದಿದ್ದಾರೆ.
    ಕ್ರೂರಜನರು ಗುಂಪುಕೂಡಿಕೊಂಡು ನನ್ನನ್ನು ಕೊಲ್ಲಲು ಪ್ರಯತ್ನಿಸುತ್ತಿದ್ದಾರೆ.
    ಅವರು ನನ್ನನ್ನು ಗೌರವಿಸುವುದಿಲ್ಲ.
15 ಯೆಹೋವನೇ, ಕನಿಕರವೂ ದಯೆಯೂ ಉಳ್ಳ ದೇವರು ನೀನೇ.
    ನೀನು ತಾಳ್ಮೆಯುಳ್ಳವನೂ ನಂಬಿಗಸ್ತನೂ ಪ್ರೀತಿಪೂರ್ಣನೂ ಆಗಿರುವೆ.
16 ನನ್ನ ಮೊರೆಗೆ ಕಿವಿಗೊಟ್ಟು ಕರುಣೆತೋರು.
    ನಿನ್ನ ಸೇವಕನಾದ ನನಗೆ ಬಲವನ್ನು ದಯಪಾಲಿಸು.
    ನಿನ್ನ ಸೇವಕನ ಮಗನನ್ನು ರಕ್ಷಿಸು.
17 ಯೆಹೋವನೇ, ನೀನು ನನಗೆ ಮಾಡಲಿರುವ ಸಹಾಯಕ್ಕಾಗಿ ಸೂಚನೆಯೊಂದನ್ನು ತೋರಿಸು.
    ನನ್ನ ಶತ್ರುಗಳು ಆ ಸೂಚನೆಯನ್ನು ಕಂಡು ನಿರಾಶರಾಗುವರು.
    ನೀನು ನನ್ನ ಪ್ರಾರ್ಥನೆಗೆ ಕಿವಿಗೊಟ್ಟು ಸಹಾಯ ಮಾಡಲಿರುವಿಯೆಂದು ಅದು ತೋರಿಸುತ್ತದೆ.

ರೋಮ್ನಗರದವರಿಗೆ 12

ನಿಮ್ಮ ಜೀವಿತಗಳನ್ನು ದೇವರಿಗೆ ಕೊಡಿರಿ

12 ಆದ್ದರಿಂದ ಸಹೋದರ ಸಹೋದರಿಯರೇ, ದೇವರ ಮಹಾಕನಿಕರವನ್ನು ನಿಮ್ಮ ನೆನಪಿಗೆ ತಂದು ನಿಮ್ಮನ್ನು ಬೇಡಿಕೊಳ್ಳುವುದೇನೆಂದರೆ, ನಿಮ್ಮನ್ನೇ ದೇವರಿಗೆ ಮೀಸಲಾದ, ಮೆಚ್ಚುಗೆಯಾದ ಸಜೀವ ಯಜ್ಞಗಳಾಗಿ ಅರ್ಪಿಸಿರಿ. ಇದೇ ನೀವು ಸಲ್ಲಿಸಬೇಕಾದ ನಿಜವಾದ ಆರಾಧನೆ. ಈ ಲೋಕದವರ ನಡವಳಿಕೆಯನ್ನು ಅನುಸರಿಸದೆ ಅಂತರಂಗದಲ್ಲಿ ಮಾರ್ಪಾಟನ್ನು ಹೊಂದಿದವರಾಗಿದ್ದು ಪರಲೋಕಭಾವದವರಾಗಿರಿ. ಆಗ ನೀವು ದೇವರ ಚಿತ್ತಾನುಸಾರ ಯಾವುದು ಉತ್ತಮವಾದುದು, ಯಾವುದು ಮೆಚ್ಚಿಕೆಯಾದುದು ಯಾವುದು ಉತ್ಕೃಷ್ಟವಾದುದು ಎಂಬುದನ್ನು ಅರಿತುಕೊಳ್ಳುವಿರಿ.

ದೇವರು ನನಗೆ ವಿಶೇಷವಾದ ಒಂದು ವರವನ್ನು ಕೊಟ್ಟಿದ್ದಾನೆ. ಆದಕಾರಣವೇ, ನಿಮ್ಮಲ್ಲಿರುವ ಪ್ರತಿಯೊಬ್ಬರಿಗೂ ಈ ಸಂಗತಿಗಳನ್ನು ತಿಳಿಸುತ್ತಿದ್ದೇನೆ. ನೀವು ನಿಮ್ಮ ನಿಜವಾದ ಯೋಗ್ಯತೆಗಿಂತಲೂ ಹೆಚ್ಚಾಗಿ ನಿಮ್ಮ ವಿಷಯದಲ್ಲಿ ಭಾವಿಸಿಕೊಳ್ಳಬೇಡಿ. ನೀವು ನಿಮ್ಮ ವಿಷಯದಲ್ಲಿ ಏನು ಭಾವಿಸಿಕೊಂಡರೂ ಆ ಭಾವನೆಯು ನಿಮ್ಮ ನಿಜವಾದ ಯೋಗ್ಯತೆಗೆ ಸರಿಸಮಾನವಾಗಿರಬೇಕು. ದೇವರು ನಿಮಗೆ ಎಂಥ ನಂಬಿಕೆಯನ್ನು ಕೊಟ್ಟಿದ್ದಾನೋ ಆ ನಂಬಿಕೆಗೆ ತಕ್ಕಂತೆ ನಿಮ್ಮ ವಿಷಯದಲ್ಲಿ ಭಾವಿಸಿಕೊಳ್ಳಿರಿ. ಪ್ರತಿಯೊಬ್ಬರಿಗೂ ಒಂದು ದೇಹವಿದೆ. ಆ ದೇಹಕ್ಕೆ ಅನೇಕ ಅಂಗಾಂಗಗಳಿವೆ. ಆ ಅಂಗಾಂಗಗಳು ಒಂದೇ ಕಾರ್ಯವನ್ನು ಮಾಡುವುದಿಲ್ಲ. ಹೀಗೆ ನಮ್ಮಲ್ಲಿ ಅನೇಕರಿದ್ದರೂ ಕ್ರಿಸ್ತನಲ್ಲಿ ನಾವೆಲ್ಲರೂ ಒಂದೇ ದೇಹವಾಗಿದ್ದೇವೆ. ನಾವು ಆ ದೇಹದ ಅಂಗಗಳಾಗಿದ್ದೇವೆ. ಆ ದೇಹದ ಪ್ರತಿಯೊಂದು ಅಂಗವು ಇತರ ಅಂಗಗಳಿಗೂ ಸೇರಿಕೊಂಡಿದೆ.

ನಾವೆಲ್ಲರೂ ಬೇರೆಬೇರೆ ವರಗಳನ್ನು ಹೊಂದಿದ್ದೇವೆ. ದೇವರು ನಮಗೆ ಕೊಟ್ಟಿರುವ ಕೃಪೆಯಿಂದಲೇ ಪ್ರತಿಯೊಂದು ವರವು ಬಂದಿದೆ. ಪ್ರವಾದಿಸುವ ವರವನ್ನು ಹೊಂದಿರುವವನು ತನಗಿರುವ ನಂಬಿಕೆಯೊಂದಿಗೆ ಆ ವರವನ್ನು ಉಪಯೋಗಿಸಬೇಕು. ಸೇವೆಮಾಡುವ ವರವನ್ನು ಹೊಂದಿರುವವನು ಸೇವೆಮಾಡಬೇಕು. ಉಪದೇಶಮಾಡುವ ವರವನ್ನು ಹೊಂದಿರುವವನು ಉಪದೇಶ ಮಾಡಬೇಕು. ಸಂತೈಸುವ ವರವನ್ನು ಹೊಂದಿರುವವನು ಬೇರೆಯವರನ್ನು ಸಂತೈಸಬೇಕು. ದಾನಮಾಡುವ ವರವನ್ನು ಹೊಂದಿರುವವನು ಉದಾರವಾಗಿ ಕೊಡಬೇಕು. ನಾಯಕತ್ವದ ವರವನ್ನು ಹೊಂದಿರುವವನು ನಾಯಕತ್ವವನ್ನು ವಹಿಸಿಕೊಂಡಿರುವಾಗ ಕಷ್ಟಪಟ್ಟು ದುಡಿಯಬೇಕು. ಕನಿಕರವನ್ನು ತೋರುವ ವರವನ್ನು ಹೊಂದಿರುವವನು ಆನಂದದಿಂದ ಆ ಕಾರ್ಯವನ್ನು ಮಾಡಬೇಕು.

ನಿಮ್ಮ ಪ್ರೀತಿಯು ಯಥಾರ್ಥವಾಗಿರಲಿ. ದುಷ್ಕೃತ್ಯಗಳನ್ನು ದ್ವೇಷಿಸಿರಿ. ಒಳ್ಳೆಯ ಕಾರ್ಯಗಳನ್ನು ಮಾತ್ರ ಮಾಡಿರಿ. 10 ಸಹೋದರ ಸಹೋದರಿಯರೆಂಬ ಅನ್ಯೋನ್ಯಭಾವದಿಂದ ಒಬ್ಬರನ್ನೊಬ್ಬರು ಪ್ರೀತಿಸಿರಿ. ನೀವು ನಿಮಗೋಸ್ಕರ ಬಯಸುವ ಮರ್ಯಾದೆಗಿಂತಲೂ ಹೆಚ್ಚು ಮರ್ಯಾದೆಯನ್ನು ನಿಮ್ಮ ಸಹೋದರ ಸಹೋದರಿಯರಿಗೆ ಕೊಡಿರಿ. 11 ನೀವು ಪ್ರಭುವಿಗೋಸ್ಕರ ಸೇವೆಮಾಡುವುದು ಅಗತ್ಯವಿರುವಾಗ ಸೋಮಾರಿಗಳಾಗಿರಬೇಡಿರಿ. ಆತ್ಮಿಕವಾದ ಉತ್ಸಾಹದಿಂದ ಆತನ ಸೇವೆಮಾಡಿರಿ. 12 ನಿಮಗೆ ನಿರೀಕ್ಷೆಯಿರುವುದರಿಂದ ಸಂತೋಷವಾಗಿರಿ. ನಿಮಗೆ ಸಂಕಟಗಳಿರುವಾಗ ತಾಳ್ಮೆಯಿಂದಿರಿ. ಎಲ್ಲಾ ಸಮಯದಲ್ಲಿ ಪ್ರಾರ್ಥಿಸಿರಿ. 13 ಕೊರತೆಯಲ್ಲಿರುವ ದೇವಜನರಿಗೆ ಸಹಾಯ ಮಾಡಿರಿ. ಅತಿಥಿಸತ್ಕಾರದ ಅಗತ್ಯವಿರುವವರನ್ನು ಗುರುತಿಸಿ, ನಿಮ್ಮ ಮನೆಗಳಿಗೆ ಆಹ್ವಾನಿಸಿರಿ.

14 ನಿಮಗೆ ಕೇಡುಮಾಡುವವರನ್ನು ಶಪಿಸದೆ ಆಶೀರ್ವದಿಸಿರಿ. 15 ಸಂತೋಷಪಡುವವರ ಸಂಗಡ ಸಂತೋಷಪಡಿರಿ. ದುಃಖಪಡುವವರೊಂದಿಗೆ ದುಃಖಪಡಿರಿ. 16 ನೀವು ಒಬ್ಬರಿಗೊಬ್ಬರು ಸಮಾಧಾನದಿಂದ ಒಟ್ಟಾಗಿ ಜೀವಿಸಿರಿ. ಗರ್ವಪಡಬೇಡಿರಿ. ಸಮಾಜದಲ್ಲಿ ಗಣನೆಗೆ ಬಾರದ ಜನರೊಂದಿಗೆ ಸ್ನೇಹದಿಂದಿರಲು ಅಪೇಕ್ಷಿಸಿರಿ. ನಿಮ್ಮನ್ನು ನೀವೆ, ಬುದ್ಧಿವಂತರೆಂದು ಎಣಿಸಿಕೊಳ್ಳಬೇಡಿರಿ.

17 ಯಾವನಾದರು ನಿಮಗೆ ಕೇಡುಮಾಡಿದರೆ, ಅದಕ್ಕೆ ಪ್ರತಿಯಾಗಿ ಅವನಿಗೆ ಕೇಡುಮಾಡಬೇಡಿ. ಎಲ್ಲಾ ಜನರು ಒಳ್ಳೆಯದೆಂದು ಯೋಚಿಸುವ ಕಾರ್ಯಗಳನ್ನು ಮಾಡಲು ಪ್ರಯತ್ನಿಸಿರಿ. 18 ಎಲ್ಲಾ ಜನರೊಂದಿಗೆ ಶಾಂತಿಯಿಂದ ಜೀವಿಸಲು ನಿಮ್ಮಿಂದ ಸಾಧ್ಯವಾದಷ್ಟರ ಮಟ್ಟಿಗೆ ಪ್ರಯತ್ನಿಸಿರಿ. 19 ನನ್ನ ಸ್ನೇಹಿತರೇ, ನಿಮಗೆ ಕೇಡುಮಾಡುವ ಜನರನ್ನು ದಂಡಿಸಲು ಪ್ರಯತ್ನಿಸಬೇಡಿ. ದೇವರು ತನ್ನ ಕೋಪದಿಂದ ಅವರನ್ನು ದಂಡಿಸುವವರೆಗೆ ಕಾದುಕೊಂಡಿರಿ. “ನಾನೇ ದಂಡಿಸುವವನು; ನಾನೇ ಜನರಿಗೆ ಮುಯ್ಯಿತೀರಿಸುವವನು ಎಂದು ಪ್ರಭುವು ಹೇಳುತ್ತಾನೆ”(A) ಎಂಬುದಾಗಿ ಬರೆಯಲ್ಪಟ್ಟಿದೆ. 20 ನೀವು ಮಾಡಬೇಕಾದದ್ದೇನೆಂದರೆ,

“ನಿಮ್ಮ ವೈರಿಯು ಹಸಿವೆಗೊಂಡಿದ್ದರೆ,
    ಅವನಿಗೆ ಊಟ ಕೊಡಿರಿ.
ನಿಮ್ಮ ವೈರಿಯು ಬಾಯಾರಿದ್ದರೆ,
    ಅವನಿಗೆ ಕುಡಿಯಲು ನೀರು ಕೊಡಿರಿ.
ನೀವು ಹೀಗೆ ಮಾಡಿದರೆ, ಅವನಿಗೆ ನಾಚಿಕೆಯಾಗುವುದು.”(B)

21 ಕೆಟ್ಟತನವು ನಿಮ್ಮನ್ನು ಸೋಲಿಸುವುದಕ್ಕೆ ಅವಕಾಶಕೊಡದೆ ಒಳ್ಳೆಯದನ್ನು ಮಾಡುವುದರ ಮೂಲಕವಾಗಿ ಕೆಟ್ಟತನವನ್ನು ಸೋಲಿಸಿರಿ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International