Print Page Options
Previous Prev Day Next DayNext

Old/New Testament

Each day includes a passage from both the Old Testament and New Testament.
Duration: 365 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 70-71

ಜ್ಞಾಪಕಾರ್ಥ ನೈವೇದ್ಯ. ಸಮರ್ಪಣೆಯ ಹಾಡು. ರಚನೆಗಾರ: ದಾವೀದ.

70 ದೇವರೇ, ನನ್ನನ್ನು ರಕ್ಷಿಸು!
    ದೇವರೇ, ಬೇಗನೆ ನನಗೆ ಸಹಾಯಮಾಡು!
ನನ್ನನ್ನು ಕೊಲ್ಲಲು ಪ್ರಯತ್ನಿಸುವವರು
    ನಿರಾಶೆಗೊಂಡು ಅಪಮಾನ ಹೊಂದಲಿ.
ನನಗೆ ಕೇಡುಮಾಡಬೇಕೆಂದಿರುವವರು
    ಅವಮಾನಗೊಂಡು ಓಡಿಹೋಗಲಿ.
ನನ್ನನ್ನು ಗೇಲಿಮಾಡುವವರು
    ಸೋಲಿನಿಂದ ಅವಮಾನಕ್ಕೀಡಾಗಿ ಓಡಿಹೋಗಲಿ.
ನನ್ನ ಆರಾಧಕರೆಲ್ಲರೂ ನಿನ್ನಲ್ಲಿ ಉಲ್ಲಾಸದಿಂದ ಸಂತೋಷಿಸಲಿ.
ನಿನ್ನ ರಕ್ಷಣೆಯಲ್ಲಿ ಆನಂದಿಸುವವರು ನಿನ್ನನ್ನು ಯಾವಾಗಲೂ ಕೊಂಡಾಡಲಿ.

ನಾನಾದರೋ ಬಡವನೂ ನಿಸ್ಸಹಾಯಕನೂ ಆಗಿರುವೆ!
    ದೇವರೇ, ಬೇಗನೆ ಬಂದು ನನ್ನನ್ನು ರಕ್ಷಿಸು!
ಯೆಹೋವನೇ, ನನ್ನನ್ನು ಬಿಡುಗಡೆ ಮಾಡಬಲ್ಲವನು ನೀನೊಬ್ಬನೇ.
    ಯೆಹೋವನೇ ತಡಮಾಡಬೇಡ!

71 ಯೆಹೋವನೇ, ನಿನ್ನನ್ನೇ ಆಶ್ರಯಿಸಿಕೊಂಡಿದ್ದೇನೆ;
    ಎಂದಿಗೂ ಆಶಾಭಂಗಪಡಿಸಬೇಡ.
ನೀನು ನೀತಿವಂತನಾಗಿರುವುದರಿಂದ ನನ್ನನ್ನು ರಕ್ಷಿಸುವೆ; ಬಿಡುಗಡೆಮಾಡುವೆ.
    ನನಗೆ ಕಿವಿಗೊಟ್ಟು ನನ್ನನ್ನು ರಕ್ಷಿಸು.
ನೀನೇ ನನ್ನ ಸಂರಕ್ಷಣೆಯ ಆಶ್ರಯಗಿರಿಯಾಗಿರು.
    ನನ್ನನ್ನು ರಕ್ಷಿಸಲು ಆಜ್ಞಾಪಿಸು.
ನೀನೇ ನನ್ನ ಬಂಡೆಯೂ ಕೋಟೆಯೂ ಆಗಿರುವೆ.
ನನ್ನ ದೇವರೇ, ದುಷ್ಟರಿಂದಲೂ
    ಕ್ರೂರವಾದ ಕೆಟ್ಟವರಿಂದಲೂ ನನ್ನನ್ನು ರಕ್ಷಿಸು.
ನನ್ನ ಒಡೆಯನೇ, ನನ್ನ ಬಾಲ್ಯದಿಂದಲೂ
    ನೀನೇ ನನ್ನ ನಿರೀಕ್ಷೆಯೂ ಭರವಸವೂ ಆಗಿರುವೆ.
ನಾನು ಹುಟ್ಟಿದಂದಿನಿಂದಲೂ ನಿನ್ನನ್ನೇ ಆಶ್ರಯಿಸಿಕೊಂಡಿದ್ದೇನೆ.
    ನಾನು ಜನಿಸಿದಂದಿನಿಂದಲೂ ನೀನೇ ನನಗೆ ಆಧಾರವಾಗಿರುವೆ.
    ನಾನು ನಿನ್ನನ್ನು ಕೊಂಡಾಡುತ್ತಲೇ ಇರುವೆನು.
ನಾನು ಅನೇಕರಿಗೆ ಮಾದರಿಯಾಗಿದ್ದೇನೆ.
    ಯಾಕೆಂದರೆ ನೀನೇ ನನ್ನ ಶಕ್ತಿಗೆ ಆಧಾರ.
ದಿನವೆಲ್ಲಾ ನಿನ್ನ ಅದ್ಭುತಕಾರ್ಯಗಳ ಬಗ್ಗೆ ನಿನ್ನನ್ನು ಸ್ತುತಿಸಿ ಕೊಂಡಾಡುವೆನು.
ವೃದ್ಧಾಪ್ಯದಲ್ಲಿ ನನ್ನನ್ನು ತಳ್ಳಿಬಿಡಬೇಡ.
    ಬಲವು ಕುಂದಿ ಹೋಗುತ್ತಿರುವಾಗ ಕೈಬಿಡಬೇಡ.
10 ನನ್ನ ಶತ್ರುಗಳು ಒಟ್ಟುಗೂಡಿ
    ನನ್ನನ್ನು ಕೊಲ್ಲಲು ಆಲೋಚಿಸಿಕೊಂಡಿದ್ದಾರೆ.
11 “ದೇವರು ಅವನನ್ನು ಕೈಬಿಟ್ಟಿದ್ದಾನೆ; ಬೆನ್ನಟ್ಟಿ ಅವನನ್ನು ಹಿಡಿಯಿರಿ;
    ಅವನಿಗೆ ಸಹಾಯಕರೇ ಇಲ್ಲ” ಎಂದು ಅವರು ಹೇಳಿಕೊಳ್ಳುತ್ತಿದ್ದಾರೆ.
12 ದೇವರೇ, ನನಗೆ ದೂರವಾಗಿರಬೇಡ.
    ನನ್ನ ದೇವರೇ, ಬೇಗನೇ ನನ್ನನ್ನು ರಕ್ಷಿಸು!
13 ನನ್ನ ಶತ್ರುಗಳನ್ನು ಸೋಲಿಸಿ
    ಅವರನ್ನು ಸಂಪೂರ್ಣವಾಗಿ ನಾಶಮಾಡು!
ನನಗೆ ಕೇಡುಮಾಡಬೇಕೆಂದಿರುವ ಅವರಿಗೆ
    ನಾಚಿಕೆಯೂ ಅವಮಾನವೂ ಆವರಿಸಿಕೊಳ್ಳಲಿ.
14 ನಾನಂತೂ ನಿನ್ನಲ್ಲೇ ಭರವಸವಿಟ್ಟಿರುವೆ.
    ನಿನ್ನನ್ನು ಹೆಚ್ಚೆಚ್ಚಾಗಿ ಕೊಂಡಾಡುತ್ತಿರುವೆ.
15 ನಿನ್ನ ಒಳ್ಳೆಯತನವನ್ನೂ ರಕ್ಷಣೆಯನ್ನೂ
    ನಾನು ಹಗಲೆಲ್ಲಾ ಹೇಳುತ್ತಲೇ ಇರುವೆನು.
    ಅವು ವರ್ಣಿಸಲಸಾಧ್ಯವಾಗಿವೆ.
16 ನನ್ನ ಒಡೆಯನಾದ ಯೆಹೋವನೇ, ನಿನ್ನ ಘನತೆಯ ಕುರಿತು ಹೇಳುತ್ತಲೇ ಇರುವೆನು.
    ನಿನ್ನೊಬ್ಬನ ಒಳ್ಳೆಯತನವನ್ನು ಕುರಿತು ಮಾತಾಡುತ್ತಲೇ ಇರುವೆನು.
17 ದೇವರೇ, ಬಾಲ್ಯದಿಂದಲೂ ನೀನೇ ನನಗೆ ಉಪದೇಶಕನಾಗಿರುವೆ.
    ನಿನ್ನ ಅದ್ಭುತಕಾರ್ಯಗಳ ಕುರಿತು ಇಂದಿನವರೆಗೂ ಪ್ರಚುರಪಡಿಸುತ್ತಿದ್ದೇನೆ.
18 ನಾನು ವೃದ್ಧನಾಗಿರುವೆ; ನನ್ನ ಕೂದಲೂ ನರೆತುಹೋಗಿದೆ.
ನನ್ನ ದೇವರೇ, ನನ್ನನ್ನು ಕೈಬಿಡಬೇಡ.
    ನಿನ್ನ ಬಲವನ್ನೂ ಪ್ರತಾಪವನ್ನೂ ಮುಂದಿನ ತಲೆಮಾರುಗಳವರಿಗೆಲ್ಲಾ ಪ್ರಕಟಿಸುವೆನು.
19 ದೇವರೇ, ನಿನ್ನ ನೀತಿಯು ಆಕಾಶಕ್ಕಿಂತಲೂ ಉನ್ನತವಾಗಿದೆ.
    ನೀನು ಅದ್ಭುತಕಾರ್ಯಗಳನ್ನು ಮಾಡಿರುವೆ.
    ದೇವರೇ, ನಿನ್ನಂಥ ದೇವರು ಬೇರೆಲ್ಲೂ ಇಲ್ಲ.
20 ನನ್ನನ್ನು ಅನೇಕ ಕಷ್ಟಹಿಂಸೆಗಳಿಗೆ ಗುರಿಮಾಡಿದಾತನು ನೀನೇ.
    ಆದರೆ ಅವೆಲ್ಲವುಗಳಿಂದ ನೀನು ನನ್ನನ್ನು ರಕ್ಷಿಸಿ ಜೀವಂತವಾಗಿ ಉಳಿಸಿದೆ.
    ಆಪತ್ತುಗಳಿಂದ ನಾನೆಷ್ಟೇ ಮುಳುಗಿಹೋಗಿದ್ದರೂ ಮೇಲೆತ್ತಿದಾತನು ನೀನೇ.
21 ನೀನು ನನ್ನ ಘನತೆಯನ್ನು ಮೊದಲಿಗಿಂತಲೂ ಹೆಚ್ಚಿಸುವೆ.
    ನೀನೇ ನನ್ನನ್ನು ಸಂತೈಸುವೆ.
22     ನಾನು ಹಾರ್ಪ್‌ವಾದ್ಯವನ್ನು ನುಡಿಸುತ್ತಾ ನಿನ್ನನ್ನು ಕೊಂಡಾಡುವೆನು.
    ನನ್ನ ದೇವರೇ, ನಿನ್ನ ನಂಬಿಕೆಗಸ್ತಿಕೆಯನ್ನು ಕೊಂಡಾಡುವೆನು.
    ಇಸ್ರೇಲಿನ ಪರಿಶುದ್ಧನೇ, ಲೈರ್‌ವಾದ್ಯವನ್ನು ನುಡಿಸುತ್ತಾ ನಿನ್ನನ್ನು ಭಜಿಸುವೆನು.
23 ನೀನು ನನ್ನನ್ನು ರಕ್ಷಿಸಿದ್ದರಿಂದ ನನ್ನ ಪ್ರಾಣವು ಉಲ್ಲಾಸಗೊಂಡಿದೆ.
    ನನ್ನ ತುಟಿಗಳಿಂದ ನಿನ್ನನ್ನು ಹಾಡಿ ಕೊಂಡಾಡುವೆನು.
24 ನನ್ನ ನಾಲಿಗೆಯು ನಿನ್ನ ಒಳ್ಳೆಯತನದ ಬಗ್ಗೆ ಹಾಡುತ್ತಲೇ ಇರುವುದು.
    ನನ್ನನ್ನು ಕೊಲ್ಲಬೇಕೆಂದಿರುವವರು ಸೋತುಹೋಗಿ ಅವಮಾನಕ್ಕೀಡಾಗುವರು.

ರೋಮ್ನಗರದವರಿಗೆ 8:22-39

22 ದೇವರು ಸೃಷ್ಟಿಮಾಡಿದ ಪ್ರತಿಯೊಂದೂ, ಪ್ರಸವವೇದನೆ ಪಡುತ್ತಿರುವ ಸ್ತ್ರೀಯಂತೆ ನೋವಿನಿಂದ ನರಳುತ್ತಾ ಇಂದಿನವರೆಗೂ ಕಾಯುತ್ತಿದೆ ಎಂಬುದು ನಮಗೆ ಗೊತ್ತಿದೆ. 23 ಜಗತ್ತು ಮಾತ್ರವೇ ಅಲ್ಲ, ನಾವು ಸಹ ನಮ್ಮೊಳಗೆ ನೋವಿನಿಂದ ನರಳುತ್ತಾ ಕಾಯುತ್ತಿದ್ದೇವೆ. ದೇವರ ವಾಗ್ದಾನದ ಮೊದಲನೆ ಭಾಗವಾಗಿರುವ ಪವಿತ್ರಾತ್ಮನನ್ನು ನಾವು ಹೊಂದಿಕೊಂಡಿದ್ದೇವೆ. ನಮ್ಮನ್ನು ತನ್ನ ಸ್ವಂತ ಮಕ್ಕಳನ್ನಾಗಿ ಮಾಡಿಕೊಳ್ಳಲು ದೇವರು ಮಾಡುತ್ತಿರುವ ಕಾರ್ಯವು ಸಂಪೂರ್ಣಗೊಳ್ಳುವುದನ್ನೇ ಅಂದರೆ, ನಮ್ಮ ದೇಹಗಳಿಗಾಗುವ ಬಿಡುಗಡೆಯನ್ನೇ ನಾವು ಎದುರು ನೋಡುತ್ತಿದ್ದೇವೆ. 24 ನಾವು ರಕ್ಷಣೆ ಹೊಂದಿದ್ದೇವೆ ಮತ್ತು ನಮಗಿನ್ನೂ ಆ ನಿರೀಕ್ಷೆಯಿದೆ. ನಾವು ಯಾವುದಕ್ಕೋಸ್ಕರ ಕಾಯುತ್ತಿದ್ದೇವೊ ಅದನ್ನು ಕಾಣಬಲ್ಲವರಾಗಿದ್ದರೆ, ಅದು ನಿಜವಾದ ನಿರೀಕ್ಷೆಯಲ್ಲ. ಜನರು ತಾವು ಈಗಾಗಲೇ ಹೊಂದಿರುವ ಯಾವುದನ್ನೂ ನಿರೀಕ್ಷಿಸುವುದಿಲ್ಲ. 25 ಆದರೆ ನಾವಿನ್ನೂ ಹೊಂದಿಕೊಂಡಿಲ್ಲದೆ ಇರುವುದನ್ನು ನಿರೀಕ್ಷಿಸುತ್ತಾ ತಾಳ್ಮೆಯಿಂದ ಅದಕ್ಕಾಗಿ ಕಾಯುತ್ತಿದ್ದೇವೆ.

26 ನಾವು ಬಲಹೀನರಾಗಿರುವುದರಿಂದ ನಮ್ಮ ಬಲಹೀನತೆಯಲ್ಲಿ ಪವಿತ್ರಾತ್ಮನು ನಮಗೆ ಸಹಾಯ ಮಾಡುತ್ತಾನೆ. ನಾವು ಹೇಗೆ ಪ್ರಾರ್ಥಿಸಬೇಕು ಮತ್ತು ಯಾವುದಕ್ಕಾಗಿ ಪ್ರಾರ್ಥಿಸಬೇಕು ಎಂಬುದು ನಮಗೆ ತಿಳಿಯದು. ಆದರೆ ಪವಿತ್ರಾತ್ಮನು ತಾನೇ ನಮಗೋಸ್ಕರ ದೇವರಲ್ಲಿ ವಿವರಿಸಲಾಗದ ಅಂತರ್ಭಾವದಿಂದ ಬೇಡಿಕೊಳ್ಳುತ್ತಾನೆ. 27 ಅಂತರಂಗವನ್ನು ನೋಡಬಲ್ಲ ದೇವರಿಗೆ ಪವಿತ್ರಾತ್ಮನ ಮನಸ್ಸಿನಲ್ಲಿರುವುದೆಲ್ಲಾ ಗೊತ್ತಿದೆ, ಏಕೆಂದರೆ ದೇವರ ಚಿತ್ತಕ್ಕನುಸಾರವಾಗಿಯೇ ಪವಿತ್ರಾತ್ಮನು ದೇವಜನರಿಗೋಸ್ಕರ ದೇವರಲ್ಲಿ ವಿಜ್ಞಾಪಿಸುತ್ತಾನೆ.

28 ದೇವರು ತನ್ನನ್ನು ಪ್ರೀತಿಸುವವರ ಒಳ್ಳೆಯದಕ್ಕಾಗಿ ಪ್ರತಿಯೊಂದು ಕಾರ್ಯವನ್ನೂ ಅನುಕೂಲ ಮಾಡುತ್ತಾನೆಂದು ನಮಗೆ ಗೊತ್ತಿದೆ. ಆ ಜನರನ್ನು ದೇವರೇ ಆರಿಸಿಕೊಂಡನು, ಏಕೆಂದರೆ ಅದು ಆತನ ಯೋಜನೆಯಾಗಿತ್ತು. 29 ದೇವರು ತಾನು ಜಗತ್ತನ್ನು ಸೃಷ್ಟಿಸುವುದಕ್ಕಿಂತ ಮೊದಲೇ ಆ ಜನರನ್ನು ಬಲ್ಲವನಾಗಿದ್ದನು ಮತ್ತು ಆ ಜನರು ತನ್ನ ಮಗನ ಅನುರೂಪಿಗಳಾಗಿರಬೇಕೆಂದು ನಿರ್ಧರಿಸಿದನು. ಹೀಗಿರಲಾಗಿ, ಅನೇಕ ಸಹೋದರ ಸಹೋದರಿಯರಲ್ಲಿ ಯೇಸುವೇ ಹಿರಿಯವನಾಗಿದ್ದಾನೆ. 30 ಆ ಜನರು ತನ್ನ ಮಗನ ಅನುರೂಪಿಗಳಾಗಿರಬೇಕೆಂಬ ತನ್ನ ಯೋಜನೆಗನುಸಾರವಾಗಿ ದೇವರು ಅವರನ್ನು ಕರೆದು, ನೀತಿವಂತರನ್ನಾಗಿ ಮಾಡಿ, ಅವರಿಗೆ ತನ್ನ ಮಹಿಮೆಯನ್ನು ಕೊಟ್ಟನು.

ಕ್ರಿಸ್ತ ಯೇಸುವಿನಲ್ಲಿ ದೇವರ ಪ್ರೀತಿ

31 ಹೀಗಿರುವಲ್ಲಿ ಇದರ ಬಗ್ಗೆ ನಾವು ಏನು ಹೇಳೋಣ? ದೇವರು ನಮ್ಮೊಂದಿಗೆ ಇರುವಾಗ, ನಮ್ಮನ್ನು ಯಾರೂ ಸೋಲಿಸಲಾರರು. 32 ದೇವರು ತನ್ನ ಸ್ವಂತ ಮಗನನ್ನೇ ಉಳಿಸಿಕೊಳ್ಳದೆ ನಮ್ಮೆಲ್ಲರಿಗೊಸ್ಕರ ಕೊಟ್ಟನು. ಆದ್ದರಿಂದ ಈಗ, ದೇವರು ಯೇಸುವಿನೊಂದಿಗೆ ನಮಗೆ ಎಲ್ಲವನ್ನು ಖಂಡಿತವಾಗಿ ಕೊಡುತ್ತಾನೆ. 33 ದೇವರು ಆರಿಸಿಕೊಂಡಿರುವ ಜನರ ಮೇಲೆ ಯಾರು ದೋಷಾರೋಪಣೆ ಮಾಡಬಲ್ಲರು? ಯಾರೂ ಇಲ್ಲ! ಅವರನ್ನು ನೀತಿವಂತರನ್ನಾಗಿ ಮಾಡುವಾತನು ದೇವರೇ. 34 ದೇವಜನರು ದೋಷಿಗಳೆಂದು ಯಾರು ಹೇಳಬಲ್ಲರು? ಯಾರು ಇಲ್ಲ! ಕ್ರಿಸ್ತ ಯೇಸು ನಮಗೋಸ್ಕರ ಪ್ರಾಣಕೊಟ್ಟನು. ಅಷ್ಟೇ ಅಲ್ಲ, ಆತನು ಸತ್ತವರೊಳಗಿಂದ ಜೀವಂತನಾಗಿ ಎದ್ದುಬಂದನು. ಈಗ ಆತನು ದೇವರ ಬಲಗಡೆಯಲ್ಲಿದ್ದಾನೆ ಮತ್ತು ನಮಗೋಸ್ಕರ ದೇವರನ್ನು ಬೇಡಿಕೊಳ್ಳುತ್ತಿದ್ದಾನೆ. 35 ಕ್ರಿಸ್ತನ ಪ್ರೀತಿಯಿಂದ ಯಾವುದು ನಮ್ಮನ್ನು ಬೇರ್ಪಡಿಸಬಲ್ಲದು? ಕಷ್ಟಸಂಕಟಗಳಾಗಲಿ ಇಕ್ಕಟ್ಟುಗಳಾಗಲಿ ಹಿಂಸೆಯಾಗಲಿ ಆಹಾರವಿಲ್ಲದಿರುವುದಾಗಲಿ ಬಟ್ಟೆಯಿಲ್ಲದಿರುವುದಾಗಲಿ ಅಪಾಯವಾಗಲಿ ಮರಣವಾಗಲಿ ನಮ್ಮನ್ನು ಕ್ರಿಸ್ತನ ಪ್ರೀತಿಯಿಂದ ಬೇರ್ಪಡಿಸಬಲ್ಲವೇ? ಇಲ್ಲ! 36 ಪವಿತ್ರ ಗ್ರಂಥದಲ್ಲಿ ಹೀಗೆ ಬರೆಯಲ್ಪಟ್ಟಿದೆ:

“ನಿನಗೋಸ್ಕರವಾಗಿ ನಾವು ಎಲ್ಲಾ ಸಮಯಗಳಲ್ಲಿ ಸಾವಿನ ದವಡೆಯಲ್ಲಿದ್ದೇವೆ.
    ಕೊಯ್ಯಲು ಕೊಂಡೊಯ್ಯುವ ಕುರಿಗಳಿಗಿಂತ ಕಡೆಗಣಿಸಲ್ಪಟ್ಟಿದ್ದೇವೆ.”(A)

37 ಆದರೆ ನಮಗೋಸ್ಕರ ತನ್ನ ಪ್ರೀತಿಯನ್ನು ತೋರಿಸಿದ ದೇವರ ಮೂಲಕವಾಗಿ ಈ ಎಲ್ಲಾ ಸಂಗತಿಗಳಲ್ಲಿ ನಮಗೆ ಪೂರ್ಣ ಜಯವಿದೆ. 38-39 ಹೌದು, ದೇವರ ಪ್ರೀತಿಯಿಂದ ನಮ್ಮನ್ನು ಯಾವುದೂ ಬೇರ್ಪಡಿಸಲಾರದೆಂದು ನನಗೆ ನಿಶ್ಚಯವಾಗಿ ತಿಳಿದಿದೆ. ಮರಣವಾಗಲಿ ಜೀವವಾಗಲಿ ದೇವದೂತರಾಗಲಿ ದುರಾತ್ಮಗಳಾಗಲಿ ಈಗಿನ ಸಂಗತಿಗಳಾಗಲಿ ಮುಂದಿನ ಸಂಗತಿಗಳಾಗಲಿ ಯಾವ ಶಕ್ತಿಗಳೇ ಆಗಲಿ ಮೇಲಿನ ಸಂಗತಿಗಳಾಗಲಿ ಕೆಳಗಿನ ಸಂಗತಿಗಳಾಗಲಿ ಅಥವಾ ಇಡೀ ಜಗತ್ತಿನಲ್ಲಿರುವ ಯಾವುದೇ ಸಂಗತಿಗಳಾಗಲಿ ನಮ್ಮ ಪ್ರಭುವಾದ ಕ್ರಿಸ್ತ ಯೇಸುವಿನಲ್ಲಿ ತೋರಿಬಂದ ದೇವರ ಪ್ರೀತಿಯಿಂದ ನಮ್ಮನ್ನು ಬೇರ್ಪಡಿಸಲು ಸಾಧ್ಯವಿಲ್ಲ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International