Print Page Options
Previous Prev Day Next DayNext

Old/New Testament

Each day includes a passage from both the Old Testament and New Testament.
Duration: 365 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 63-65

ದಾವೀದನು ಯೆಹೂದದ ಅರಣ್ಯದಲ್ಲಿದ್ದಾಗ ರಚಿಸಲ್ಪಟ್ಟಿತು. ರಚನೆಗಾರ: ದಾವೀದ.

63 ದೇವರೇ, ನೀನೇ ನನ್ನ ದೇವರು.
    ನಿನಗಾಗಿ ಕುತೂಹಲದಿಂದ ಎದುರು ನೋಡುತ್ತೇನೆ.
ನೀರಿಲ್ಲದೆ ಒಣಗಿದ ಭೂಮಿಯಂತೆ ನನ್ನ ಆತ್ಮವು ನಿನಗಾಗಿ ಬಾಯಾರಿದೆ;
    ನನ್ನ ದೇಹವು ನಿನಗಾಗಿ ಬಯಸಿದೆ.
ಹೌದು, ನಿನ್ನನ್ನು ನಿನ್ನ ಆಲಯದಲ್ಲಿ ನೋಡಿದ್ದೇನೆ,
    ನಿನ್ನ ಶಕ್ತಿಯನ್ನೂ ಮಹಿಮೆಯನ್ನೂ ಕಂಡಿದ್ದೇನೆ.
ನಿನ್ನ ಪ್ರೀತಿಯು ಜೀವಕ್ಕಿಂತಲೂ ಶ್ರೇಷ್ಠ.
    ನನ್ನ ತುಟಿಗಳು ನಿನ್ನನ್ನು ಕೊಂಡಾಡುತ್ತವೆ.
ಹೌದು, ನನ್ನ ಜೀವಮಾನವೆಲ್ಲಾ ನಿನ್ನನ್ನು ಕೊಂಡಾಡುವೆನು.
    ನಿನ್ನ ಹೆಸರಿನಲ್ಲಿ ಕೈಮುಗಿದು ಪ್ರಾರ್ಥಿಸುವೆನು.
ಮೃಷ್ಟಾನ್ನವನ್ನು ತಿಂದಿರುವವನಂತೆ ತೃಪ್ತನಾಗಿರುವೆನು.
    ನನ್ನ ಬಾಯಿ ನಿನ್ನನ್ನು ಕೊಂಡಾಡುವುದು.
ಹಾಸಿಗೆಯು ಮೇಲೆ ಮಲಗಿರುವಾಗಲೂ ನಿನ್ನನ್ನು ಜ್ಞಾಪಿಸಿಕೊಳ್ಳುವೆನು.
    ಮಧ್ಯರಾತ್ರಿಯಲ್ಲಿಯೂ ನಿನ್ನನ್ನು ನೆನಸಿಕೊಳ್ಳುವೆನು.
ನಿಜವಾಗಿಯೂ ನೀನೇ ನನಗೆ ಸಹಾಯಕ.
    ನಿನ್ನ ರೆಕ್ಕೆಗಳ ಮರೆಯಲ್ಲಿ ಆನಂದಘೋಷ ಮಾಡುವೆನು.
ನನ್ನ ಆತ್ಮವು ನಿನ್ನನ್ನು ಅಂಟಿಕೊಂಡಿರುವುದು.
    ನಿನ್ನ ಬಲಗೈ ನನ್ನ ಕೈಹಿಡಿದು ನಡೆಸುವುದು.

ನನ್ನನ್ನು ಕೊಲ್ಲಬೇಕೆಂದಿರುವವರು
    ಪಾತಾಳಕ್ಕೆ ಇಳಿದುಹೋಗುವರು.
10 ಅವರು ಖಡ್ಗಗಳಿಂದ ಕೊಲ್ಲಲ್ಪಡುವರು.
    ಅವರ ಶವಗಳು ನರಿಗಳ ಪಾಲಾಗುವವು.
11 ರಾಜನಾದರೋ ತನ್ನ ದೇವರಲ್ಲಿಯೇ ಸಂತೋಷಿಸುವನು.
    ಹರಕೆಹೊತ್ತು ಅವನಿಗೆ ವಿಧೇಯರಾಗಿರುವವರು ದೇವರನ್ನು ಕೊಂಡಾಡುವರು,
    ಯಾಕೆಂದರೆ ಆ ಸುಳ್ಳುಗಾರರನ್ನೆಲ್ಲಾ ಆತನು ಸೋಲಿಸಿದ್ದಾನೆ.

ರಚನೆಗಾರ: ದಾವೀದ.

64 ದೇವರೇ, ನನಗೆ ಕಿವಿಗೊಡು.
    ವೈರಿಯು ನನಗೆ ಬೆದರಿಕೆ ಹಾಕಿದ್ದಾನೆ.
    ನನ್ನ ಪ್ರಾಣವನ್ನು ರಕ್ಷಿಸು.
ನನ್ನ ಶತ್ರುಗಳ ಒಳಸಂಚುಗಳಿಂದ ನನ್ನನ್ನು ಸಂರಕ್ಷಿಸು.
    ಆ ದುಷ್ಟರಿಗೆ ಸಿಕ್ಕದಂತೆ ನನ್ನನ್ನು ಮರೆಮಾಡು.
ಅವರು ನನ್ನ ಬಗ್ಗೆ ಕಡುಸುಳ್ಳುಗಳನ್ನು ಹೇಳಿದ್ದಾರೆ.
    ಅವರ ನಾಲಿಗೆಗಳು ಹರಿತವಾದ ಖಡ್ಗಗಳಂತಿವೆ.
    ಅವರ ಮಾತುಗಳು ವಿಷಬಾಣಗಳಂತಿವೆ.
ಗುಪ್ತಸ್ಥಳಗಳಲ್ಲಿ ಅಡಗಿಕೊಂಡಿದ್ದು ನಿರ್ಭಯದಿಂದ[a]
    ನೀತಿವಂತನ ಮೇಲೆ ಆ ಬಾಣಗಳನ್ನು ಎಸೆಯುತ್ತಾರೆ.
ಕೇಡುಮಾಡಲು ಒಬ್ಬರನ್ನೊಬ್ಬರು ಪ್ರೋತ್ಸಾಹಿಸಿ ಬಲೆಯೊಡ್ಡಲು ಆಲೋಚಿಸುವರು.
    “ತಮ್ಮ ಬಲೆಗಳು ಯಾರಿಗೂ ಕಾಣುವುದಿಲ್ಲ” ಎಂದು ಮಾತಾಡಿಕೊಳ್ಳುವರು.
ಅವರು ತಮ್ಮ ಬಲೆಗಳನ್ನು ಅಡಗಿಸಿಟ್ಟಿದ್ದಾರೆ; ಬೇಟೆಗಳಿಗಾಗಿ ಎದುರುನೋಡುತ್ತಿದ್ದಾರೆ.
    ಜನರು ಕುತಂತ್ರಿಗಳಾಗಿದ್ದರೆ, ಅವರ ಆಲೋಚನೆಗಳನ್ನು ತಿಳಿದುಕೊಳ್ಳುವುದು ಬಹು ಕಷ್ಟ.[b]
ಆದರೆ ದೇವರು ಇದ್ದಕ್ಕಿದ್ದಂತೆ ತನ್ನ ಬಾಣಗಳನ್ನು ಎಸೆಯುವನು.
    ಆಗ ಆ ದುಷ್ಟರು ಗಾಯಗೊಳ್ಳುವರು.
ದುಷ್ಟರು ಬೇರೆಯವರಿಗೆ ಕೇಡುಮಾಡಲು ಆಲೋಚಿಸುವರು.
    ಆದರೆ ಆ ಕೇಡುಗಳು ಅವರಿಗೇ ಸಂಭವಿಸುವಂತೆ ದೇವರು ಮಾಡುವನು.
ಆಗ ಅವರನ್ನು ಕಂಡ ಪ್ರತಿಯೊಬ್ಬನೂ
    ಆಶ್ಚರ್ಯದಿಂದ ತಲೆಯಾಡಿಸುವನು.
ದೇವರ ಕಾರ್ಯವನ್ನು ಜನರು ಕಂಡು
    ಅದರ ಬಗ್ಗೆ ಬೇರೆಯವರಿಗೂ ತಿಳಿಸುವರು.
ಹೀಗೆ ಪ್ರತಿಯೊಬ್ಬರೂ ದೇವರ ಬಗ್ಗೆ ಹೆಚ್ಚಾಗಿ ಕಲಿತುಕೊಂಡು
    ಆತನಲ್ಲಿ ಭಯಭಕ್ತಿಯುಳ್ಳವರಾಗುವರು.
10 ಸಜ್ಜನರು ಯೆಹೋವನಲ್ಲಿ ಸಂತೋಷಿಸುತ್ತಾ
    ಆತನನ್ನೇ ಆಶ್ರಯಿಸಿಕೊಳ್ಳುವರು.
ಯಥಾರ್ಥವಂತರು ಯೆಹೋವನನ್ನು ಕೊಂಡಾಡುವರು.

ರಚನೆಗಾರ: ದಾವೀದ.

65 ದೇವರೇ, ಚೀಯೋನಿನಲ್ಲಿ ನಾವು ನಿನ್ನನ್ನು ಸ್ತುತಿಸುವೆವು.
    ನಾವು ಮಾಡಿದ ಹರಕೆಗಳನ್ನು ನಿನಗೆ ಸಲ್ಲಿಸುವೆವು.
ಪ್ರಾರ್ಥನೆಯನ್ನು ಕೇಳುವಾತನೇ,
    ಜನರೆಲ್ಲರೂ ನಿನ್ನ ಬಳಿಗೆ ಬರುವರು.
ನಮ್ಮ ಪಾಪಗಳು ಹೊರಲಾರದಷ್ಟು ಭಾರವಾಗಿವೆ;
    ನಮ್ಮನ್ನು ಆ ಪಾಪಗಳಿಂದ ಬಿಡಿಸು.
ನಿನ್ನ ಸೇವಕರನ್ನು ಆರಿಸಿಕೊಂಡಾತನು ನೀನೇ.
ನಿನ್ನ ಆಲಯಕ್ಕೆ ಬಂದು ನಿನ್ನನ್ನು ಆರಾಧಿಸಲು
    ನಮ್ಮನ್ನು ಆರಿಸಿಕೊಂಡಾತನು ನೀನೇ.
ನಿನ್ನ ಮಹಾಪವಿತ್ರ ಆಲಯದ ಸೌಭಾಗ್ಯದಿಂದ
    ನಾವು ಉಲ್ಲಾಸಗೊಂಡಿದ್ದೇವೆ.
ನಮ್ಮ ರಕ್ಷಕನಾದ ದೇವರೇ,
    ನೀತಿವಂತರ ಪ್ರಾರ್ಥನೆಗೆ ಸದುತ್ತರವನ್ನು ದಯಪಾಲಿಸು;
ಅವರಿಗೋಸ್ಕರ ಮಹತ್ಕಾರ್ಯಗಳನ್ನು ನಡೆಸು.
    ಸರ್ವಭೂನಿವಾಸಿಗಳ ನಂಬಿಕೆಗೆ ನೀನೇ ಆಧಾರ.
ಸ್ವಬಲದಿಂದ ಪರ್ವತಗಳನ್ನು ನಿರ್ಮಿಸಿದಾತನು ದೇವರೇ.
    ಆತನು “ಶೌರ್ಯ” ಎಂಬ ನಡುಕಟ್ಟನ್ನು ಬಿಗಿದುಕೊಂಡಿದ್ದಾನೆ.
ಭೋರ್ಗರೆಯುವ ಸಮುದ್ರಗಳನ್ನೂ
    ಅನ್ಯಜನಾಂಗಗಳ ದಂಗೆಯನ್ನೂ ಶಾಂತಗೊಳಿಸುವಾತನು ದೇವರೇ.
ಭೂಲೋಕದಾದ್ಯಂತದಲ್ಲಿರುವ ಜನರು ನಿನ್ನ ಮಹತ್ಕಾರ್ಯಗಳಿಂದ ಆಶ್ಚರ್ಯಚಕಿತರಾಗಿದ್ದಾರೆ.
    ಸೂರ್ಯೋದಯವೂ ಸೂರ್ಯಸ್ತಮಾನವೂ ನಮ್ಮನ್ನು ಹರ್ಷಗೊಳಿಸುತ್ತವೆ.
ದೇವರೇ, ಭೂಪಾಲಕನು ನೀನೇ.
    ಭೂಮಿಗೆ ನೀರೆರೆದು ಹದಗೊಳಿಸುವಾತನು ನೀನೇ.
ತೊರೆಗಳನ್ನು ತುಂಬಿಸಿ
    ಸುಗ್ಗಿಯನ್ನು ಬರಮಾಡುವಾತನು ನೀನೇ.
10 ಉತ್ತಿರುವ ಹೊಲಗಳ ಮೇಲೆ ಮಳೆ ಸುರಿಸಿ,
    ಹೆಂಟೆಗಳನ್ನು ಕರಗಿಸಿ,
ಭೂಮಿಯನ್ನು ಮೃದುಗೊಳಿಸಿ,
    ಎಳೆ ಸಸಿಗಳನ್ನು ಬೆಳೆಸುವಾತನು ನೀನೇ.
11 ಹೊಸ ವರ್ಷವನ್ನು ಸಮೃದ್ಧಿಕರವಾದ ಸುಗ್ಗಿಯೊಂದಿಗೆ ಆರಂಭಿಸುವಾತನು ನೀನೇ.
    ಅನೇಕ ಬೆಳೆಗಳಿಂದ ಬಂಡಿಗಳನ್ನು ತುಂಬಿಸುವಾತನು ನೀನೇ.
12 ಅರಣ್ಯವು ಹುಲ್ಲಿನಿಂದ ಆವೃತವಾಗಿದೆ.
    ಬೆಟ್ಟಗುಡ್ಡಗಳು ಸಮೃದ್ಧಿಕರ ಫಸಲಿನಿಂದ ಕಂಗೊಳಿಸುತ್ತವೆ.
13 ಹುಲ್ಲುಗಾವಲುಗಳು ಕುರಿಗಳಿಂದ ತುಂಬಿಹೋಗಿವೆ.
    ಕಣಿವೆಗಳು ಧಾನ್ಯದಿಂದ ತುಂಬಿತುಳುಕುತ್ತಿವೆ.
ಎಲ್ಲರೂ ಹಾಡುತ್ತಾ ಆನಂದಘೋಷ ಮಾಡುತ್ತಿದ್ದಾರೆ.

ರೋಮ್ನಗರದವರಿಗೆ 6

ಪಾಪದ ಪಾಲಿಗೆ ಸತ್ತವರು, ಆದರೆ ಕ್ರಿಸ್ತನಲ್ಲಿ ಜೀವಂತರು

ಹಾಗಾದರೆ ನಿಮ್ಮ ಅಭಿಪ್ರಾಯವೇನು? ದೇವರು ನಮಗೆ ಹೆಚ್ಚುಹೆಚ್ಚು ಕೃಪೆಯನ್ನು ತೋರಿಸಲೆಂದು ನಾವು ಪಾಪದಲ್ಲೇ ಮುಂದುವರಿಯಬೇಕೇ? ಇಲ್ಲ! ನಾವು ನಮ್ಮ ಹಿಂದಿನ ಪಾಪಮಯ ಜೀವಿತಗಳ ಪಾಲಿಗೆ ಸತ್ತುಹೋದೆವು. ಹೀಗಿರಲು, ನಾವು ಪಾಪದಲ್ಲೇ ಜೀವಿಸಲು ಹೇಗೆ ಸಾಧ್ಯ? ನಾವು ದೀಕ್ಷಾಸ್ನಾನ ಮಾಡಿಸಿಕೊಂಡಾಗ ಕ್ರಿಸ್ತನಲ್ಲಿ ಪಾಲುಗಾರರಾದೆವು ಎಂಬುದನ್ನು ನೀವು ಮರೆತುಬಿಟ್ಟಿರಾ? ನಮ್ಮ ದೀಕ್ಷಾಸ್ನಾನದ ಮೂಲಕ ನಾವು ಆತನ ಮರಣದಲ್ಲಿ ಪಾಲುಗಾರರಾದೆವು. ಹೀಗಿರಲಾಗಿ, ನಾವು ದೀಕ್ಷಾಸ್ನಾನ ಮಾಡಿಸಿಕೊಂಡಾಗ, ನಮಗೆ ಕ್ರಿಸ್ತನೊಂದಿಗೆ ಸಮಾಧಿಯಾಯಿತು ಮತ್ತು ನಾವು ಆತನ ಮರಣದಲ್ಲಿ ಪಾಲುಗಾರರಾದೆವು. ನಾವು ಜೀವಂತವಾಗಿ ಎದ್ದು ಹೊಸ ಜೀವಿತವನ್ನು ನಡೆಸಬೇಕೆಂದು ನಮಗೆ ಕ್ರಿಸ್ತನೊಂದಿಗೆ ಸಮಾಧಿಯಾಯಿತು. ಕ್ರಿಸ್ತನು ತಂದೆಯ ಅದ್ಭುತವಾದ ಶಕ್ತಿಯ ಮೂಲಕ ಸತ್ತವರೊಳಗಿಂದ ಜೀವಂತವಾಗಿ ಎದ್ದುಬಂದಂತೆಯೇ ನಾವು ಜೀವಂತವಾಗಿ ಎದ್ದುಬಂದೆವು.

ಕ್ರಿಸ್ತನ ಮರಣಕ್ಕೆ ಸದೃಶ್ಯವಾದ ಮರಣದ ಮೂಲಕ ನಾವು ಸಹ ಆತನೊಂದಿಗೆ ಐಕ್ಯರಾದೆವು. ಆದ್ದರಿಂದ ಕ್ರಿಸ್ತನು ಸತ್ತವರೊಳಗಿಂದ ಜೀವಂತವಾಗಿ ಎದ್ದುಬಂದಂತೆಯೇ ನಾವು ಸಹ ಜೀವಂತವಾಗಿ ಎದ್ದುಬರುವುದರ ಮೂಲಕವಾಗಿ ಆತನೊಂದಿಗೆ ಐಕ್ಯರಾಗುವೆವು. ನಮ್ಮ ಹಳೆಯ ಜೀವಿತವು ಕ್ರಿಸ್ತನೊಂದಿಗೆ ಶಿಲುಬೆಯ ಮೇಲೆ ಸತ್ತುಹೋಯಿತೆಂಬುದು ನಮಗೆ ಗೊತ್ತಿದೆ. ನಮ್ಮ ಪಾಪಸ್ವಭಾವಕ್ಕೆ ನಮ್ಮ ಮೇಲೆ ಯಾವ ಅಧಿಕಾರ ಇರಬಾರದೆಂತಲೂ ನಾವು ಪಾಪಕ್ಕೆ ಗುಲಾಮರಾಗಿರಬಾರದೆಂತಲೂ ಹೀಗಾಯಿತು. ಪಾಪದ ಪಾಲಿಗೆ ಸತ್ತವನು ಪಾಪದ ಹಿಡಿತದಿಂದ ಬಿಡುಗಡೆ ಹೊಂದಿದ್ದಾನೆ.

ನಾವು ಕ್ರಿಸ್ತನೊಂದಿಗೆ ಸತ್ತಿದ್ದರೆ, ಆತನೊಂದಿಗೆ ಜೀವಿಸುತ್ತೇವೆ ಎಂಬುದೂ ನಿಶ್ಚಯವಾಗಿದೆ. ಕ್ರಿಸ್ತನು ಸತ್ತವರೊಳಗಿಂದ ಜೀವಂತನಾಗಿ ಎದ್ದುಬಂದನು. ಆತನು ಮತ್ತೆ ಸಾಯಲು ಸಾಧ್ಯವಿಲ್ಲವೆಂಬುದು ನಮಗೆ ತಿಳಿದಿದೆ. ಈಗ ಮರಣಕ್ಕೆ ಆತನ ಮೇಲೆ ಯಾವ ಅಧಿಕಾರವೂ ಇಲ್ಲ. 10 ಹೌದು, ಕ್ರಿಸ್ತನು ಪಾಪದ ಶಕ್ತಿಯನ್ನು ಸೋಲಿಸುವುದಕ್ಕಾಗಿ ಒಂದೇ ಸಲ ಸತ್ತನು; ಅದು ಎಲ್ಲಾ ಕಾಲಕ್ಕೂ ಸಾಕಾಗಿದೆ. ಈಗ ಆತನಲ್ಲಿ ಹೊಸ ಜೀವಿತವಿದೆ. ದೇವರೊಂದಿಗೆ ಜೀವಿಸುವುದೇ ಆ ಹೊಸ ಜೀವಿತ. 11 ಅದೇ ರೀತಿಯಲ್ಲಿ ನೀವು ಸಹ ನಿಮ್ಮನ್ನು ಪಾಪದ ಶಕ್ತಿಯ ಪಾಲಿಗೆ ಸತ್ತವರೆಂದು ಮತ್ತು ಕ್ರಿಸ್ತ ಯೇಸುವಿನ ಮೂಲಕ ದೇವರಿಗಾಗಿ ಜೀವಿಸುವವರೆಂದು ಪರಿಗಣಿಸಿರಿ.

12 ಆದರೆ ನೀವು ಭೂಲೋಕದ ಜೀವನದಲ್ಲಿ ಪಾಪಕ್ಕೆ ಅಧೀನರಾಗಿರಬೇಡಿ; ನಿಮ್ಮ ಪಾಪಾಧೀನಸ್ವಭಾವದ ದುರಾಶೆಗಳ ಆಡಳಿತಕ್ಕೆ ಒಳಗಾಗಬೇಡಿ. 13 ನಿಮ್ಮ ದೇಹದ ಅಂಗಗಳನ್ನು ಪಾಪದ ಸೇವೆಗೆ ಒಪ್ಪಿಸಬೇಡಿ; ನಿಮ್ಮ ದೇಹಗಳನ್ನು ಪಾಪಕ್ಕೆ ಒಪ್ಪಿಸಿ ದುಷ್ಟತ್ವವನ್ನು ನಡೆಸುವ ಸಾಧನಗಳಾಗಬೇಡಿ. ಅದಕ್ಕೆ ಬದಲಾಗಿ, ನಿಮ್ಮನ್ನೇ ದೇವರಿಗೆ ಸಮರ್ಪಿಸಿಕೊಳ್ಳಿರಿ; ಸತ್ತು ಈಗ ಜೀವಂತವಾಗಿ ಎದ್ದುಬಂದಿರುವವರಂತೆ ಜೀವಿಸಿರಿ; ಒಳ್ಳೆಯ ಕಾರ್ಯಗಳನ್ನು ಮಾಡುವ ಸಾಧನಗಳನ್ನಾಗಿ ನಿಮ್ಮ ದೇಹದ ಅಂಗಗಳನ್ನು ದೇವರಿಗೆ ಸಮರ್ಪಿಸಿರಿ. 14 ಪಾಪವು ನಿಮ್ಮ ಒಡೆಯನಾಗಿರುವುದಿಲ್ಲ. ಏಕೆಂದರೆ, ನೀವು ಧರ್ಮಶಾಸ್ತ್ರಕ್ಕೆ ಅಧೀನರಲ್ಲ. ಈಗ ನೀವು ದೇವರ ಕೃಪೆಯಲ್ಲಿ ಜೀವಿಸುವವರಾಗಿದ್ದೀರಿ.

ನೀತಿಯ ಗುಲಾಮರು

15 ಹೀಗಿರಲಾಗಿ ನಾವೇನು ಮಾಡಬೇಕು? ನಾವು ಧರ್ಮಶಾಸ್ತ್ರದ ಅಧೀನದಲ್ಲಿರದೆ ಕೃಪೆಯ ಅಧೀನದಲ್ಲಿರುವುದರಿಂದ ಪಾಪ ಮಾಡಬೇಕೇ? ಇಲ್ಲ! 16 ನೀವು ಯಾವನಿಗೆ ಗುಲಾಮರಂತೆ ವಿಧೇಯರಾಗುತ್ತೇವೆ ಎಂದು ನಿಮ್ಮನ್ನು ಒಪ್ಪಿಸಿಕೊಡುತ್ತೀರೋ ಆ ವ್ಯಕ್ತಿಗೆ ನೀವು ನಿಜವಾಗಿಯೂ ಗುಲಾಮರಾಗಿದ್ದೀರಿ ಎಂಬುದು ನಿಮಗೆ ಖಂಡಿತವಾಗಿ ತಿಳಿದಿದೆ. ನೀವು ಯಾವನಿಗೆ ವಿಧೇಯರಾಗುತ್ತೀರೋ ಅವನೇ ನಿಮ್ಮ ಒಡೆಯನಾಗಿದ್ದಾನೆ. ನೀವು ಪಾಪವನ್ನಾದರೂ ಅನುಸರಿಸಬಹುದು ಅಥವಾ ದೇವರಿಗಾದರೂ ವಿಧೇಯರಾಗಬಹುದು. ಪಾಪವು ಆತ್ಮಿಕ ಮರಣವನ್ನು ಉಂಟುಮಾಡುತ್ತದೆ. ಆದರೆ ನೀವು ದೇವರಿಗೆ ವಿಧೇಯರಾದರೆ, ಆ ವಿಧೇಯತೆಯು ನಿಮ್ಮನ್ನು ನೀತಿವಂತರನ್ನಾಗಿ ಮಾಡುತ್ತದೆ. 17 ಹಿಂದಿನ ಕಾಲದಲ್ಲಿ ನೀವು ಪಾಪಕ್ಕೆ ಗುಲಾಮರಾಗಿದ್ದಿರಿ. ಪಾಪವು ನಿಮ್ಮನ್ನು ತನ್ನ ಹಿಡಿತದಲ್ಲಿಟ್ಟುಕೊಂಡಿತ್ತು. ನಿಮಗೆ ಬೋಧಿಸಿದ ವಿಷಯಗಳಿಗೆ ನೀವು ಸಂಪೂರ್ಣವಾಗಿ ವಿಧೇಯರಾದ್ದರಿಂದ ದೇವರಿಗೆ ಸ್ತೋತ್ರವಾಗಲಿ. 18 ನೀವು ಪಾಪದಿಂದ ಬಿಡುಗಡೆ ಹೊಂದಿದ್ದೀರಿ. ಈಗ ನೀವು ನೀತಿಗೆ ಗುಲಾಮರಾಗಿದ್ದೀರಿ. 19 ಜನರಿಗೆ ತಿಳಿದಿರುವ ಉದಾಹರಣೆಯ ಮೂಲಕ ನಾನು ಇದನ್ನು ನಿಮಗೆ ವಿವರಿಸುತ್ತೇನೆ. ಹಿಂದಿನ ಕಾಲದಲ್ಲಿ ನೀವು ನಿಮ್ಮ ದೇಹದ ಅಂಗಗಳನ್ನು ಪಾಪಕ್ಕೂ ದುಷ್ಟತ್ವಕ್ಕೂ ಗುಲಾಮರನ್ನಾಗಿ ಒಪ್ಪಿಸಿಕೊಟ್ಟಿದ್ದಿರಿ. ನೀವು ದುಷ್ಟತ್ವಕ್ಕಾಗಿ ಮಾತ್ರ ಜೀವಿಸಿದಿರಿ. ಅದೇ ರೀತಿಯಲ್ಲಿ ಈಗ ನೀವು ನಿಮ್ಮ ದೇಹದ ಅಂಗಗಳನ್ನು ನೀತಿಗೆ ಗುಲಾಮರನ್ನಾಗಿ ಒಪ್ಪಿಸಿಕೊಡಬೇಕು. ಆಗ ನೀವು ದೇವರಿಗಾಗಿ ಮಾತ್ರ ಜೀವಿಸುತ್ತೀರಿ.

20 ಹಿಂದಿನ ಕಾಲದಲ್ಲಿ ನೀವು ಪಾಪಕ್ಕೆ ಗುಲಾಮರಾಗಿದ್ದಿರಿ ಮತ್ತು ನೀತಿಯ ಹತೋಟಿಗೆ ಒಳಗಾಗಿರಲಿಲ್ಲ. 21 ನೀವು ದುಷ್ಕೃತ್ಯಗಳನ್ನು ಮಾಡಿದಿರಿ. ಈಗ ನೀವು ಆ ಕಾರ್ಯಗಳ ವಿಷಯದಲ್ಲಿ ನಾಚಿಕೆಪಡುತ್ತೀರಿ. ಆ ಕಾರ್ಯಗಳು ನಿಮಗೆ ಸಹಾಯ ಮಾಡಿದವೇ? ಇಲ್ಲ. ಆ ಕಾರ್ಯಗಳು ಆತ್ಮಿಕ ಮರಣವನ್ನು ಮಾತ್ರ ಉಂಟುಮಾಡುತ್ತವೆ. 22 ಆದರೆ ಈಗ ನೀವು ಪಾಪದಿಂದ ಬಿಡುಗಡೆಯಾಗಿ ದೇವರ ಗುಲಾಮರಾಗಿದ್ದೀರಿ. ಇದರಿಂದ ನಿಮಗೆ ಪರಿಶುದ್ಧ ಜೀವನವೂ ನಿತ್ಯಜೀವವೂ ದೊರೆಯುತ್ತವೆ. 23 ಜನರು ಮಾಡುವ ಪಾಪಕ್ಕೆ ಮರಣವೇ ಸಂಬಳ. ಆದರೆ ದೇವರ ಉಚಿತವಾದ ಕೊಡುಗೆಯು ನಮ್ಮ ಪ್ರಭುವಾದ ಕ್ರಿಸ್ತ ಯೇಸುವಿನಲ್ಲಿರುವ ನಿತ್ಯಜೀವ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International