Print Page Options
Previous Prev Day Next DayNext

Old/New Testament

Each day includes a passage from both the Old Testament and New Testament.
Duration: 365 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 46-48

ರಚನೆಗಾರರು: ಕೋರಹೀಯರು.

46 ದೇವರು ನಮಗೆ ಆಶ್ರಯವೂ ಬಲವೂ ಆಗಿದ್ದಾನೆ.
    ಆತನು ಆಪತ್ತಿನಲ್ಲಿ ನಮಗೆ ಸಹಾಯಮಾಡಲು ಸದಾ ಸಿದ್ಧನಾಗಿರುವನು.
ಆದ್ದರಿಂದ ಭೂಮಿಯು ನಡುಗಿದರೂ ಬೆಟ್ಟಗಳು
    ಸಮುದ್ರದೊಳಗೆ ಮುಳುಗಿಹೋದರೂ ನಮಗೇನೂ ಭಯವಿಲ್ಲ.
ಸಮುದ್ರಗಳು ಭೋರ್ಗರೆಯುತ್ತಾ ನೊರೆಕಾರಿದರೂ
    ಅವುಗಳ ಅಲ್ಲೋಲಕಲ್ಲೋಲಗಳಿಂದ ಬೆಟ್ಟಗಳು ನಡುಗಿದರೂ ನಮಗೇನೂ ಭಯವಿಲ್ಲ.

ಒಂದು ನದಿ ಅದೆ; ಅದರ ಕಾಲುವೆಗಳು ಮಹೋನ್ನತನಾದ ದೇವರ ಪವಿತ್ರ ಪಟ್ಟಣವಾಗಿರುವ
    ದೇವನಗರವನ್ನು ಸಂತೋಷಪಡಿಸುತ್ತದೆ.
ದೇವರು ಆ ಪಟ್ಟಣದಲ್ಲಿದ್ದಾನೆ, ಆದ್ದರಿಂದ ಅದೆಂದಿಗೂ ನಾಶವಾಗುವುದಿಲ್ಲ.
    ಸೂರ್ಯೋದಯಕ್ಕಿಂತ ಮೊದಲೇ ದೇವರು ಅದರ ಸಹಾಯಕ್ಕಾಗಿ ಬರುವನು.
ಆತನು ಗರ್ಜಿಸಲು, ಜನಾಂಗಗಳು ಭಯದಿಂದ ನಡುಗುತ್ತವೆ, ರಾಷ್ಟ್ರಗಳು ಬಿದ್ದುಹೋಗುತ್ತವೆ;
    ಭೂಮಿಯು ಕರಗಿಹೋಗುವುದು.
ಸೇನಾಧೀಶ್ವರನಾದ ಯೆಹೋವನು ನಮ್ಮೊಂದಿಗಿದ್ದಾನೆ.
    ಯಾಕೋಬನ ದೇವರು ನಮ್ಮ ಆಶ್ರಯದುರ್ಗವಾಗಿದ್ದಾನೆ.
ಬನ್ನಿರಿ, ಯೆಹೋವನ ಕಾರ್ಯಗಳನ್ನು ನೋಡಿರಿ;
    ಭೂಮಿಯ ಮೇಲೆ ಆತನು ಮಾಡುತ್ತಿರುವ ಭಯಂಕರವಾದ ಕಾರ್ಯಗಳನ್ನು ನೋಡಿರಿ.
ಇಡೀ ಪ್ರಪಂಚದಲ್ಲಿ ಆತನು ಯುದ್ಧವನ್ನು ನಿಲ್ಲಿಸುವನು;
    ಬಿಲ್ಲುಗಳನ್ನೂ ಗುರಾಣಿಗಳನ್ನೂ[a] ಮುರಿದುಹಾಕುವನು; ಗುರಾಣಿಗಳನ್ನು ಬೆಂಕಿಯಿಂದ ಸುಟ್ಟುಹಾಕುವನು.

10 ದೇವರು ಹೀಗೆನ್ನುವನು: “ಹೋರಾಡುವುದನ್ನು ನಿಲ್ಲಿಸಿ, ನಾನೇ ದೇವರೆಂಬುದನ್ನು ಕಲಿತುಕೊಳ್ಳಿ!
    ನಾನು ಜನಾಂಗಗಳನ್ನು ಸೋಲಿಸುವೆನು!
    ಇಡೀ ಲೋಕವನ್ನು ಹತೋಟಿಗೆ ತೆಗೆದುಕೊಳ್ಳುವೆನು!”

11 ಸೇನಾಧೀಶ್ವರನಾದ ಯೆಹೋವನು ನಮ್ಮೊಂದಿಗಿದ್ದಾನೆ.
    ಯಾಕೋಬನ ದೇವರು ನಮಗೆ ಆಶ್ರಯದುರ್ಗವಾಗಿದ್ದಾನೆ.

ರಚನೆಗಾರರು: ಕೋರಹೀಯರು.

47 ಸರ್ವಜನಾಂಗಗಳೇ, ಚಪ್ಪಾಳೆ ತಟ್ಟಿರಿ;
    ದೇವರಿಗೆ ಆನಂದಘೋಷ ಮಾಡಿರಿ!
ಮಹೋನ್ನತನಾದ ಯೆಹೋವನು ಭಯಂಕರನಾಗಿದ್ದಾನೆ.
    ಆತನು ಭೂಲೋಕಕ್ಕೆಲ್ಲಾ ಮಹಾರಾಜನಾಗಿದ್ದಾನೆ.
ಆತನು ಜನಾಂಗಗಳನ್ನು ಸೋಲಿಸಲು ನಮಗೆ ಸಹಾಯಮಾಡಿ
    ಅವುಗಳನ್ನು ನಮಗೆ ಅಧೀನಪಡಿಸಿದ್ದಾನೆ.
ದೇವರು ಈ ದೇಶವನ್ನು ನಮಗೋಸ್ಕರವಾಗಿ ಆರಿಸಿಕೊಂಡನು;
    ತನಗೆ ಪ್ರಿಯರಾದ ಯಾಕೋಬನ ವಂಶಸ್ಥರಿಗಾಗಿ ಆತನು ಮನೋಹರವಾದ ಈ ದೇಶವನ್ನು ಆರಿಸಿಕೊಂಡನು.

ಯೆಹೋವನು ಆನಂದಘೋಷದೊಡನೆಯೂ
    ತುತ್ತೂರಿಗಳ ಧ್ವನಿಯೊಡನೆಯೂ ಸಿಂಹಾಸನಾರೂಢನಾಗುವನು.
ದೇವರನ್ನು ಸಂಕೀರ್ತಿಸಿರಿ, ಕೀರ್ತಿಸಿರಿ.
    ನಮ್ಮ ರಾಜನನ್ನು ಸಂಕೀರ್ತಿಸಿರಿ, ಸಂಕೀರ್ತಿಸಿರಿ.
ದೇವರು ಇಡೀಲೋಕಕ್ಕೆ ರಾಜನಾಗಿದ್ದಾನೆ;
    ಆತನಿಗೆ ಸ್ತುತಿಗೀತೆಗಳನ್ನು ಹಾಡಿರಿ.
ದೇವರು ತನ್ನ ಪರಿಶುದ್ಧ ಸಿಂಹಾಸನದ ಮೇಲೆ ಕುಳಿತುಕೊಂಡಿದ್ದಾನೆ;
    ದೇವರು ಎಲ್ಲಾ ಜನಾಂಗಗಳನ್ನು ಆಳುವನು.
ಜನಾಂಗಗಳ ನಾಯಕರು
    ಅಬ್ರಹಾಮನ ದೇವಜನರೊಡನೆ ಕೂಡಿಬರುವರು.
ಎಲ್ಲಾ ಜನಾಂಗಗಳ ಎಲ್ಲಾ ನಾಯಕರುಗಳು ದೇವರಿಗೆ ಅಧೀನರಾಗಿದ್ದಾರೆ.
    ದೇವರು ಅವರಿಗೆ ಸರ್ವಾಧಿಕಾರಿ!

ರಚನೆಗಾರರು: ಕೋರಹೀಯರು.

48 ಯೆಹೋವನೇ ಮಹೋನ್ನತನು.
    ನಮ್ಮ ದೇವರನ್ನು ಆತನ ಪವಿತ್ರ ಪರ್ವತ ಪಟ್ಟಣದಲ್ಲಿ ಜನರು ಬಹಳವಾಗಿ ಕೊಂಡಾಡುವರು.
ದೇವರ ಪವಿತ್ರ ಪಟ್ಟಣವು ರಮ್ಯವಾಗಿದೆ.
    ಭೂಲೋಕದಲ್ಲೆಲ್ಲಾ ಇರುವ ಜನರನ್ನು ಅದು ಸಂತೋಷಗೊಳಿಸುವುದು.
ಸಿಯೋನ್ ಪರ್ವತವೇ ದೇವರ ನಿಜವಾದ ಪರ್ವತ.
    ಅದೇ ಆ ಮಹಾರಾಜನ ಪರ್ವತ.
ದೇವರು ಆ ಪಟ್ಟಣಗಳ ಅರಮನೆಗಳಲ್ಲಿ,
    ತಾನೇ ಆಶ್ರಯದುರ್ಗವೆಂದು ಹೆಸರುವಾಸಿಯಾಗಿದ್ದಾನೆ.
ಒಮ್ಮೆ, ಕೆಲವು ರಾಜರು ಒಟ್ಟಾಗಿ ಸೇರಿಬಂದರು.
    ಆ ಪಟ್ಟಣದ ಮೇಲೆ ದಾಳಿ ಮಾಡಲೆಂದು ಅವರೆಲ್ಲ ಅದರತ್ತ ನಡೆದರು.
ಆದರೆ ಅವರು ಅದನ್ನು ಕಂಡಾಗ ದಿಗ್ಭ್ರಮೆಗೊಂಡರು;
    ಭಯದಿಂದ ಓಡಿಹೋದರು.
ಭಯವು ಅವರನ್ನು
    ಪ್ರಸವವೇದನೆಯಂತೆ ಆವರಿಸಿಕೊಂಡಿತು.
ಪೂರ್ವದ ಬಿರುಗಾಳಿಯಿಂದ ಒಡೆದುಹೋದ ಹಡಗುಗಳಂತೆ
    ನೀನು ಅವರನ್ನು ನಾಶಮಾಡಿದೆ.
ಹೌದು, ಆ ರಾಜರುಗಳಿಗೆ ಸಂಭವಿಸಿದ್ದನ್ನು ನಾವು ಕಿವಿಯಾರೆ ಕೇಳಿದಂತೆಯೇ ಕಣ್ಣಾರೆಯೂ ಕಂಡೆವು.
    ನಮ್ಮ ದೇವರೂ ಸೇನಾಧೀಶ್ವರನೂ ಆಗಿರುವ ಯೆಹೋವನ ಪಟ್ಟಣದಲ್ಲಿ ನಾವು ಅದನ್ನು ನೋಡಿದ್ದೇವೆ.
ದೇವರು ಆ ಪಟ್ಟಣವನ್ನು ಶಾಶ್ವತವಾಗಿ ಭದ್ರಗೊಳಿಸುವನು.

ದೇವರೇ, ನಿನ್ನ ಆಲಯದಲ್ಲಿ ನಿನ್ನ ಶಾಶ್ವತ ಪ್ರೀತಿಯ ಕುರಿತು ಧ್ಯಾನಿಸುವೆವು.
10 ದೇವರೇ, ನೀನು ಪ್ರಖ್ಯಾತನಾಗಿರುವೆ.
    ಭೂಮಿಯ ಮೇಲೆಲ್ಲಾ ಜನರು ನಿನ್ನನ್ನು ಕೊಂಡಾಡುವರು.
    ನೀನು ಎಷ್ಟು ಒಳ್ಳೆಯವನೆಂಬುದು ಪ್ರತಿಯೊಬ್ಬರಿಗೂ ತಿಳಿದಿದೆ.
11 ನಿನ್ನ ನ್ಯಾಯನಿರ್ಣಯಗಳಿಂದ ಚೀಯೋನ್ ಪರ್ವತವು ಹರ್ಷಿಸಲಿ;
    ಯೆಹೂದದ ಊರುಗಳು ಉಲ್ಲಾಸಿಸಲಿ.
12 ಚೀಯೋನಿನ ಸುತ್ತಲೂ ಸಂಚರಿಸಿ, ಆ ಪಟ್ಟಣವನ್ನು ನೋಡಿರಿ.
    ಅದರ ಬುರುಜುಗಳನ್ನು ಎಣಿಸಿರಿ.
13 ಅದರ ಕೋಟೆಗಳನ್ನು ನೋಡಿರಿ.
    ಚೀಯೋನಿನ ಅರಮನೆಗಳನ್ನು ಹೊಗಳಿರಿ.
ಆಗ ನೀವು ನಿಮ್ಮ ಮುಂದಿನ ಸಂತತಿಯವರಿಗೆ ಅದರ ಬಗ್ಗೆ ಹೇಳಬಲ್ಲಿರಿ.
14 ಈ ದೇವರೇ ಎಂದೆಂದಿಗೂ ನಮ್ಮ ದೇವರು!
    ನಮ್ಮನ್ನು ಶಾಶ್ವತವಾಗಿ ನಡೆಸುವಾತನು ಆತನೇ!

ಅಪೊಸ್ತಲರ ಕಾರ್ಯಗಳು 28

ಮಾಲ್ಟ ದ್ವೀಪದಲ್ಲಿ ಪೌಲನು

28 ನಾವು ಸುರಕ್ಷಿತವಾಗಿ ದಡವನ್ನು ಸೇರಿದ ಮೇಲೆ ಅದು ಮಾಲ್ಟ ದ್ವೀಪವೆಂದು ನಮಗೆ ತಿಳಿಯಿತು. ಆಗ ಮಳೆಯು ಸುರಿಯುತ್ತಿತ್ತು ಮತ್ತು ತುಂಬ ಚಳಿಯಿತ್ತು. ಆದರೆ ಅಲ್ಲಿನ ಜನರು ನಮಗೆ ವಿಶೇಷವಾದ ಕರುಣೆತೋರಿ ನಮಗಾಗಿ ಬೆಂಕಿಹೊತ್ತಿಸಿ ನಮ್ಮೆಲ್ಲರನ್ನು ಆಹ್ವಾನಿಸಿದರು. ಪೌಲನು ಒಂದು ಹೊರೆ ಕಟ್ಟಿಗೆಯನ್ನು ಕೂಡಿಸಿ ಅದನ್ನು ಬೆಂಕಿಯ ಮೇಲೆ ಹಾಕುತ್ತಿರಲು ಅದರ ಕಾವಿನ ದೆಸೆಯಿಂದ ವಿಷದ ಹಾವೊಂದು ಹೊರಗೆ ಬಂದು ಪೌಲನ ಕೈಗೆ ಸುತ್ತಿಕೊಂಡಿತು. ಪೌಲನ ಕೈಗೆ ಸುತ್ತಿಕೊಂಡಿದ್ದ ಆ ಹಾವನ್ನು ಅಲ್ಲಿನ ಜನರು ನೋಡಿ, “ಇವನು ಕೊಲೆಗಾರನೇ ಸರಿ! ಇವನು ಸಮುದ್ರದಲ್ಲಿ ಸಾಯದಿದ್ದರೂ ಇವನು ಬದುಕುವುದು ನ್ಯಾಯಕ್ಕೆ[a] ಇಷ್ಟವಿಲ್ಲ” ಎಂದು ಹೇಳಿದರು.

ಆದರೆ ಪೌಲನು ಆ ಹಾವನ್ನು ಬೆಂಕಿಯೊಳಕ್ಕೆ ಝಾಡಿಸಿ ಬಿಟ್ಟನು. ಪೌಲನಿಗೆ ಯಾವ ಹಾನಿಯೂ ಆಗಲಿಲ್ಲ. ಪೌಲನ ಮೈ ಊದಿಕೊಂಡು ಇದ್ದಕ್ಕಿದ್ದಂತೆ ಸತ್ತುಬೀಳುತ್ತಾನೆ ಎಂದು ಅವರು ತಿಳಿದುಕೊಂಡಿದ್ದರು. ಅವರು ಪೌಲನನ್ನೇ ಬಹು ಹೊತ್ತಿನವರೆಗೆ ದಿಟ್ಟಿಸಿ ನೋಡುತ್ತಿದ್ದರೂ ಪೌಲನಿಗೆ ಯಾವ ಹಾನಿಯೂ ಆಗಲಿಲ್ಲ. ಆದ್ದರಿಂದ ಅವರು ತಮ್ಮ ಅಭಿಪ್ರಾಯವನ್ನು ಬದಲಿಸಿ, “ಇವನೊಬ್ಬ ದೇವರು!” ಎಂದು ಹೇಳಿದರು.

ಆ ಸ್ಥಳದ ಸುತ್ತಮುತ್ತ ಕೆಲವು ಹೊಲಗಳು ಇದ್ದವು. ಆ ದ್ವೀಪದ ಪ್ರಮುಖ ವ್ಯಕ್ತಿಯೊಬ್ಬನಿಗೆ ಆ ಹೊಲಗಳು ಸೇರಿದ್ದವು. ಅವನ ಹೆಸರು ಪೊಪ್ಲಿಯ. ಅವನು ನಮ್ಮನ್ನು ತನ್ನ ಮನೆಗೆ ಸ್ವಾಗತಿಸಿದನು. ಪೊಪ್ಲಿಯನು ಕನಿಕರ ತೋರಿದನು. ನಾವು ಅವನ ಮನೆಯಲ್ಲಿ ಮೂರು ದಿನವಿದ್ದೆವು. ಪೊಪ್ಲಿಯನ ತಂದೆಯು ಬಹಳ ಅಸ್ವಸ್ಥನಾಗಿದ್ದನು. ಅವನಿಗೆ ಜ್ವರವಿತ್ತು ಮತ್ತು ರಕ್ತಭೇದಿಯಾಗುತ್ತಿತ್ತು. ಪೌಲನು ಅವನ ಬಳಿಗೆ ಹೋಗಿ ಅವನಿಗಾಗಿ ಪ್ರಾರ್ಥಿಸಿ ಅವನ ಮೇಲೆ ತನ್ನ ಕೈಗಳನ್ನಿಟ್ಟು ಗುಣಪಡಿಸಿದನು. ಇದಾದ ನಂತರ ದ್ವೀಪದಲ್ಲಿದ್ದ ಇತರ ರೋಗಿಗಳೆಲ್ಲ ಪೌಲನ ಬಳಿಗೆ ಬಂದರು. ಪೌಲನು ಅವರನ್ನು ಸಹ ಗುಣಪಡಿಸಿದನು.

10-11 ಆ ದ್ವೀಪ ನಿವಾಸಿಗಳು ನಮ್ಮನ್ನು ಬಹಳವಾಗಿ ಸನ್ಮಾನಿಸಿದರು. ನಾವು ಅಲ್ಲಿ ಮೂರು ತಿಂಗಳಿದ್ದೆವು. ನಾವು ಅಲ್ಲಿಂದ ಹೊರಡಲು ಸಿದ್ಧರಾದಾಗ ಅವರು ನಮಗೆ ಬೇಕಾದ ವಸ್ತುಗಳನ್ನು ಕೊಟ್ಟರು.

ರೋಮಿಗೆ ಪೌಲನ ಪ್ರಯಾಣ

ಅಲೆಕ್ಸಾಂಡ್ರಿಯ ಪಟ್ಟಣದಿಂದ ಬಂದ ಹಡಗೊಂದನ್ನು ನಾವು ಹತ್ತಿದೆವು. ಆ ಹಡಗು ಚಳಿಗಾಲದ ನಿಮಿತ್ತ ಮಾಲ್ಟ ದ್ವೀಪದಲ್ಲೇ ತಂಗಿತ್ತು. ಆ ಹಡಗಿನ ಮುಂಭಾಗದಲ್ಲಿ ಎರಡು ಗ್ರೀಕ್ ದೇವತೆಗಳ ಚಿಹ್ನೆಯಿತ್ತು. 12 ನಾವು ಸಿರಾಕೊಸ್ ಪಟ್ಟಣಕ್ಕೆ ಬಂದು ಅಲ್ಲಿ ಮೂರು ದಿನವಿದ್ದೆವು. ಬಳಿಕ ಅಲ್ಲಿಂದ ಹೊರಟು 13 ರೇಗಿಯ ಎಂಬ ಪಟ್ಟಣಕ್ಕೆ ಬಂದೆವು. ಮರುದಿನ ನೈರುತ್ಯ[b] ಗಾಳಿಯು ಬೀಸತೊಡಗಿತು. ಆದ್ದರಿಂದ ಅಲ್ಲಿಂದ ಹೊರಡಲು ಸಾಧ್ಯವಾಯಿತು. ಒಂದು ದಿನವಾದ ಮೇಲೆ ಪುತೋಲಿ ಎಂಬ ಪಟ್ಟಣಕ್ಕೆ ಬಂದೆವು. 14 ಅಲ್ಲಿ ಕೆಲವು ಮಂದಿ ವಿಶ್ವಾಸಿಗಳನ್ನು ಕಂಡೆವು. ತಮ್ಮೊಂದಿಗೆ ಒಂದು ವಾರವಾದರೂ ಇರಬೇಕೆಂದು ಅವರು ನಮ್ಮನ್ನು ಕೇಳಿಕೊಂಡರು. ಕೊನೆಗೆ ನಾವು ರೋಮಿಗೆ ಹೊರಟೆವು. 15 ನಾವು ಇಲ್ಲಿರುವುದು ರೋಮಿನಲ್ಲಿದ್ದ ವಿಶ್ವಾಸಿಗಳಿಗೆ ತಿಳಿಯಿತು. ಅವರು ನಮ್ಮನ್ನು ಭೇಟಿಯಾಗುವುದಕ್ಕಾಗಿ “ಅಪ್ಪಿಯ” ಮಾರುಕಟ್ಟೆಗೂ[c] ಮತ್ತು “ತ್ರಿಛತ್ರ”[d] ಎಂಬ ಸ್ಥಳಕ್ಕೂ ಬಂದರು. ಈ ವಿಶ್ವಾಸಿಗಳನ್ನು ಕಂಡಾಗ ಪೌಲನು ಧೈರ್ಯಗೊಂಡು ದೇವರಿಗೆ ಸ್ತೋತ್ರ ಸಲ್ಲಿಸಿದನು.

ರೋಮಿನಲ್ಲಿ ಪೌಲನು

16 ಬಳಿಕ ನಾವು ರೋಮಿಗೆ ಹೋದೆವು. ಅಲ್ಲಿ ಪ್ರತ್ಯೇಕವಾಗಿರಲು ಪೌಲನಿಗೆ ಅವಕಾಶವನ್ನು ಕೊಡಲಾಯಿತು. ಆದರೆ ಪೌಲನನ್ನು ಕಾಯುವುದಕ್ಕಾಗಿ ಸೈನಿಕನೊಬ್ಬನು ಅವನೊಂದಿಗಿದ್ದನು.

17 ಮೂರು ದಿನಗಳಾದ ಮೇಲೆ ಪೌಲನು ಯೆಹೂದ್ಯರಲ್ಲಿ ಪ್ರಧಾನರಾಗಿದ್ದವರನ್ನು ಕರೆಯಿಸಿದನು. ಅವರು ಬಂದು ಒಟ್ಟಾಗಿ ಸೇರಿದಾಗ ಪೌಲನು ಅವರಿಗೆ, “ನನ್ನ ಯೆಹೂದ್ಯ ಸಹೋದರರೇ, ನಮ್ಮ ಜನರಿಗೂ ನಮ್ಮ ಪಿತೃಗಳ ಸಂಪ್ರದಾಯಗಳಿಗೂ ವಿರುದ್ಧವಾಗಿ ನಾನೇನೂ ಮಾಡಿಲ್ಲ. ಆದರೆ ನನ್ನನ್ನು ಜೆರುಸಲೇಮಿನಲ್ಲಿ ಬಂಧಿಸಿ ರೋಮಿನವರಿಗೆ ಒಪ್ಪಿಸಲಾಗಿದೆ. 18 ರೋಮಿನವರು ನನಗೆ ಅನೇಕ ಪ್ರಶ್ನೆಗಳನ್ನು ಕೇಳಿದರು. ಆದರೆ ನನ್ನನ್ನು ಮರಣದಂಡನೆಗೆ ಗುರಿಮಾಡುವಂಥ ಯಾವ ಅಪರಾಧವನ್ನೂ ಅವರು ನನ್ನಲ್ಲಿ ಕಾಣಲಿಲ್ಲ. ಆದ್ದರಿಂದ ಅವರು ನನ್ನನ್ನು ಬಿಡುಗಡೆಮಾಡಬೇಕೆಂದಿದ್ದರು. 19 ಆದರೆ ಅಲ್ಲಿದ್ದ ಯೆಹೂದ್ಯರು ಅದಕ್ಕೆ ಆಕ್ಷೇಪಿಸಿದರು. ಆದ್ದರಿಂದ ನನಗೆ ರೋಮಿನಲ್ಲಿ ಸೀಸರನ ಮುಂದೆ ವಿಚಾರಣೆಯಾಗಲಿ ಎಂದು ಕೇಳಿಕೊಳ್ಳಬೇಕಾಯಿತು. ಆದರೆ ನನ್ನ ಜನರು ಮಾಡಿದ್ದು ತಪ್ಪೆಂದು ನಾನು ನಿಮಗೆ ಹೇಳುತ್ತಿಲ್ಲ. 20 ಆದಕಾರಣವೇ ನಾನು ನಿಮ್ಮನ್ನು ನೋಡಲು ಮತ್ತು ನಿಮ್ಮ ಸಂಗಡ ಮಾತಾಡಲು ಬಯಸಿದೆ. ಇಸ್ರೇಲಿನ ನಿರೀಕ್ಷೆಯಲ್ಲಿ ನಾನು ನಂಬಿಕೆ ಇಟ್ಟಿರುವುದರಿಂದಲೇ ಈ ಸರಪಣಿಗಳಿಂದ ಬಂಧಿತನಾಗಿದ್ದೇನೆ” ಎಂದು ಹೇಳಿದನು.

21-22 ಯೆಹೂದ್ಯರು ಪೌಲನಿಗೆ, “ನಿನ್ನ ಬಗ್ಗೆ ಜುದೇಯದಿಂದ ನಮಗೆ ಯಾವ ಪತ್ರಗಳೂ ಬಂದಿಲ್ಲ. ಅಲ್ಲಿಂದ ಪ್ರಯಾಣ ಮಾಡಿ ಬಂದ ನಮ್ಮ ಯೆಹೂದ್ಯ ಸಹೋದರರಲ್ಲಿ ಯಾರೂ ನಿನ್ನ ಬಗ್ಗೆ ಸುದ್ದಿಯನ್ನು ತರಲಿಲ್ಲ ಮತ್ತು ಕೆಟ್ಟದ್ದನ್ನು ಹೇಳಲಿಲ್ಲ. ನಿನ್ನ ಆಲೋಚನೆಗಳನ್ನು ನಾವು ಕೇಳಬಯಸುತ್ತೇವೆ. ಎಲ್ಲಾ ಕಡೆಗಳಲ್ಲಿರುವ ಜನರು ಈ ಗುಂಪಿನ (ಕ್ರೈಸ್ತರ) ವಿರೋಧವಾಗಿ ಮಾತಾಡುತ್ತಿದ್ದಾರೆ ಎಂಬುದು ನಮಗೆ ಗೊತ್ತಿದೆ” ಎಂದು ಹೇಳಿದರು.

23 ಪೌಲನು ಮತ್ತು ಯೆಹೂದ್ಯರು ಸಭೆಸೇರಲು ಒಂದು ದಿನವನ್ನು ಗೊತ್ತುಮಾಡಿದರು. ಅಂದು ಇನ್ನೂ ಅನೇಕ ಮಂದಿ ಯೆಹೂದ್ಯರು ಪೌಲನ ಮನೆಯಲ್ಲಿ ಸಭೆಸೇರಿದರು. ಪೌಲನು ಬೆಳಗ್ಗೆಯಿಂದ ಸಂಜೆಯವರೆಗೂ ಅವರೊಂದಿಗೆ ಮಾತಾಡಿದನು; ದೇವರ ರಾಜ್ಯದ ಬಗ್ಗೆ ಅವರಿಗೆ ವಿವರಿಸಿದನು. ಯೇಸುವಿನ ವಿಷಯವಾದ ಸಂಗತಿಗಳಲ್ಲಿ ನಂಬಿಕೆ ಇಡುವಂತೆ ಅವರನ್ನು ಒಪ್ಪಿಸಲು ಪ್ರಯತ್ನಿಸಿದನು. ಇದಕ್ಕಾಗಿ ಅವನು ಮೋಶೆಯ ಧರ್ಮಶಾಸ್ತ್ರವನ್ನೂ ಪ್ರವಾದಿಗಳ ಗ್ರಂಥಗಳನ್ನೂ ಬಳಸಿಕೊಂಡನು. 24 ಪೌಲನು ಹೇಳಿದ ಕೆಲವು ಸಂಗತಿಗಳನ್ನು ಕೆಲವು ಮಂದಿ ಯೆಹೂದ್ಯರು ನಂಬಿದರು. ಆದರೆ ಉಳಿದವರು ನಂಬಲಿಲ್ಲ. 25 ಅವರು ವಾದಮಾಡಿ ಅಲ್ಲಿಂದ ಹೊರಡಲು ಸಿದ್ಧರಾದಾಗ ಪೌಲನು ಅವರಿಗೆ ಹೀಗೆಂದನು: “ಪವಿತ್ರಾತ್ಮನು ಪ್ರವಾದಿಯಾದ ಯೆಶಾಯನ ಮೂಲಕ ಪಿತೃಗಳಿಗೆ ಸತ್ಯವನ್ನು ತಿಳಿಸಿದನು. ಆತನು ಹೀಗೆ ಹೇಳಿದ್ದಾನೆ:

26 ‘ಈ ಜನರ ಬಳಿಗೆ ಹೋಗಿ ಇಂತೆನ್ನಿರಿ:
ನೀನು ಕಿವಿಗೊಟ್ಟು ಕೇಳಿದರೂ
    ಅರ್ಥಮಾಡಿಕೊಳ್ಳವುದಿಲ್ಲ;
ಕಣ್ಣಾರೆ ಕಂಡರೂ
    ಗ್ರಹಿಸಿಕೊಳ್ಳುವುದಿಲ್ಲ.
27 ಹೌದು, ಈ ಜನರ ಹೃದಯಗಳು ಕಠಿಣವಾಗಿವೆ.
    ಈ ಜನರಿಗೆ ಕಿವಿಗಳಿದ್ದರೂ ಕೇಳುವುದಿಲ್ಲ.
    ಸತ್ಯವಿದ್ದರೂ ನೋಡಬಯಸರು.
ಅಲ್ಲದಿದ್ದರೆ ಇವರು
    ಕಣ್ಣಾರೆ ಕಂಡು,
    ಕಿವಿಯಾರೆ ಕೇಳಿ,
    ಮನಸಾರೆ ಗ್ರಹಿಸಿಕೊಂಡು
ನನ್ನತ್ತ ತಿರುಗಿಕೊಳ್ಳುತ್ತಿದ್ದರು; ನನ್ನಿಂದ ಗುಣಹೊಂದುತ್ತಿದ್ದರು.’(A)

28 “ದೇವರು ತನ್ನ ರಕ್ಷಣೆಯನ್ನು ಯೆಹೂದ್ಯರಲ್ಲದವರಿಗೆ ಕಳುಹಿಸಿದ್ದಾನೆ. ಅವರು ಅದಕ್ಕೆ ಕಿವಿಗೊಡುವರು. ಯೆಹೂದ್ಯರಾದ ನಿಮಗೆ ಇದು ತಿಳಿದಿರಲಿ!” 29 [e]

30 ಪೌಲನು ತನ್ನ ಬಾಡಿಗೆ ಮನೆಯಲ್ಲಿ ಎರಡು ವರ್ಷಗಳವರೆಗೆ ವಾಸವಾಗಿದ್ದನು. ತನ್ನನ್ನು ಸಂದರ್ಶಿಸಲು ಬಂದ ಜನರೆಲ್ಲರನ್ನು ಆದರದಿಂದ ಬರಮಾಡಿಕೊಂಡು, 31 ದೇವರ ರಾಜ್ಯದ ಬಗ್ಗೆ ಬೋಧಿಸುತ್ತಿದ್ದನು; ಪ್ರಭು ಯೇಸುಕ್ರಿಸ್ತನ ಬಗ್ಗೆ ಉಪದೇಶಿಸುತ್ತಿದ್ದನು; ಬಹು ಧೈರ್ಯದಿಂದ ಮಾತಾಡುತ್ತಿದ್ದನು. ಅವನಿಗೆ ಅಡ್ಡಿಮಾಡಲು ಯಾರೂ ಪ್ರಯತ್ನಿಸಲಿಲ್ಲ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International