Print Page Options
Previous Prev Day Next DayNext

Old/New Testament

Each day includes a passage from both the Old Testament and New Testament.
Duration: 365 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 29-30

ರಚನೆಗಾರ: ದಾವೀದ.

29 ದೇವಪುತ್ರರೇ,[a] ಯೆಹೋವನನ್ನು ಸ್ತುತಿಸಿರಿ!
    ಆತನ ಮಹಿಮೆಯನ್ನೂ ಶಕ್ತಿಯನ್ನೂ ಸ್ತುತಿಸಿರಿ.
ಯೆಹೋವನನ್ನು ಸ್ತುತಿಸುತ್ತಾ ಆತನ ಹೆಸರನ್ನು ಘನಪಡಿಸಿರಿ.
    ಪರಿಶುದ್ಧ ವಸ್ತ್ರಗಳನ್ನು ಧರಿಸಿಕೊಂಡು ಆತನನ್ನು ಆರಾಧಿಸಿರಿ.[b]
ಯೆಹೋವನ ಸ್ವರವು ಸಮುದ್ರದ ಮೇಲೆ ಕೇಳಿ ಬರುವುದು.
    ಮಹಾಸಾಗರದ ಮೇಲಿನ ಗುಡುಗಿನಂತೆ ಮಹಿಮಾಸ್ವರೂಪನಾದ ದೇವರ ಸ್ವರವು ಕೇಳಿಬರುವುದು.
ಯೆಹೋವನ ಸ್ವರವು
    ಆತನ ಶಕ್ತಿಯನ್ನೂ ಮಹಿಮೆಯನ್ನೂ ತೋರ್ಪಡಿಸುವುದು.
ಯೆಹೋವನ ಸ್ವರವು ದೇವದಾರು ವೃಕ್ಷಗಳನ್ನು ತುಂಡುತುಂಡು ಮಾಡುತ್ತದೆ.
    ಯೆಹೋವನು ಲೆಬನೋನಿನ ದೇವದಾರು ವೃಕ್ಷಗಳನ್ನೂ ಮುರಿದುಹಾಕುವನು.
ಯೆಹೋವನು ಲೆಬನೋನನ್ನು ನಡುಗಿಸಲು ಅದು ನರ್ತಿಸುತ್ತಿರುವ ಎಳೆಕರುವಿನಂತೆ ಕಾಣುತ್ತದೆ;
    ಸಿರ್ಯೋನ್ ಪರ್ವತವು ಕಂಪಿಸುವಾಗ ಕುಣಿದಾಡುವ ಎಳೆ ಹೋರಿಯಂತೆ ಕಾಣುತ್ತದೆ.
ಯೆಹೋವನ ಗರ್ಜನಕ್ಕೆ ಮಿಂಚುಗಳು ಥಳಥಳನೆ ಹೊಳೆಯುತ್ತವೆ.
ಯೆಹೋವನ ಗರ್ಜನದಿಂದ ಅರಣ್ಯವು ಕಂಪಿಸುವುದು.
    ಆತನ ಗರ್ಜನಕ್ಕೆ ಕಾದೇಶ್ ಅರಣ್ಯವು ನಡುಗುವುದು.
ಯೆಹೋವನ ಗರ್ಜನಕ್ಕೆ ಜಿಂಕೆಗಳು ಹೆದರಿಕೊಳ್ಳುತ್ತವೆ;
    ಕಾಡಿನ ಮರಗಳು ಬರಿದಾಗುತ್ತವೆ;
    ಆದರೆ ಆತನ ಆಲಯದಲ್ಲಿ ಜನರು ಆತನ ಮಹಿಮೆಯನ್ನು ಹಾಡಿಕೊಂಡಾಡುವರು.

10 ಜಲಪ್ರಳಯದ ಕಾಲದಲ್ಲೂ ಯೆಹೋವನು ರಾಜನಾಗಿದ್ದನು.
    ಯೆಹೋವನು ಸದಾಕಾಲ ರಾಜನಾಗಿರುವನು.
11 ಯೆಹೋವನು ತನ್ನ ಜನರಿಗೆ ಬಲವನ್ನು ದಯಪಾಲಿಸಲಿ.
    ಆತನು ತನ್ನ ಜನರಿಗೆ ಶಾಂತಿಯನ್ನು ಸ್ಥಾಪಿಸಲಿ.

ದೇವಾಲಯದ ಪ್ರತಿಷ್ಠೆಗಾಗಿ ರಚಿಸಲ್ಪಟ್ಟಿದೆ. ರಚನೆಗಾರ: ದಾವೀದ.

30 ಯೆಹೋವನೇ, ನನ್ನನ್ನು ಇಕ್ಕಟ್ಟುಗಳಿಂದ ಮೇಲೆತ್ತಿದವನು ನೀನೇ;
    ಶತ್ರುಗಳಿಗೆ ಸೋತುಹೋಗಿ ಅವರ ಹಾಸ್ಯಕ್ಕೆ ಗುರಿಯಾಗದಂತೆ ಮಾಡಿದವನು ನೀನೇ;
    ಆದ್ದರಿಂದ ನಿನ್ನನ್ನು ಕೊಂಡಾಡುವೆನು.
ನನ್ನ ದೇವರಾದ ಯೆಹೋವನೇ, ನಾನು ನಿನಗೆ ಪ್ರಾರ್ಥಿಸಿದಾಗ
    ನೀನು ನನ್ನನ್ನು ಗುಣಪಡಿಸಿದೆ.
ಯೆಹೋವನೇ, ನೀನು ನನ್ನನ್ನು ಸಾವಿನಿಂದ ಬದುಕಿಸಿದೆ;
    ಪಾತಾಳಕ್ಕೆ ಇಳಿದುಹೋಗದಂತೆ ನನ್ನನ್ನು ಕಾಪಾಡಿದೆ.[c]

ಯೆಹೋವನ ಭಕ್ತರೇ, ಆತನನ್ನು ಕೀರ್ತಿಸಿರಿ!
    ಆತನ ಪರಿಶುದ್ಧ ಹೆಸರನ್ನು[d] ಕೊಂಡಾಡಿರಿ.
ಆತನ ಕೋಪವು ಕ್ಷಣಮಾತ್ರವಿರುವುದು.
    ಆತನ ಪ್ರೀತಿಯಾದರೋ ಶಾಶ್ವತವಾದದ್ದು.
ನಾನು ಸಂಜೆಯಲ್ಲಿ ದುಃಖದಿಂದ ಮಲಗಿಕೊಂಡರೂ
    ಮುಂಜಾನೆ ಹರ್ಷದಿಂದ ಎಚ್ಚರಗೊಳ್ಳುವೆನು.

ನಾನು ಸುರಕ್ಷಿತವಾಗಿದ್ದಾಗ
    ನನಗೆ ಕೇಡೇ ಇಲ್ಲವೆಂದುಕೊಂಡೆನು.
ಯೆಹೋವನೇ, ನಾನು ನಿನ್ನ ಕೃಪೆಗೆ ಪಾತ್ರನಾಗಿದ್ದಾಗ
    ನನ್ನನ್ನು ಯಾವುದೂ ಸೋಲಿಸಲಾರದು ಎಂದುಕೊಂಡೆನು.
ಆದರೆ ನೀನು ನನಗೆ ವಿಮುಖನಾದಾಗ
    ಭಯದಿಂದ ನಡುಗತೊಡಗಿದೆ.
ಯೆಹೋವನೇ, ನಾನು ನಿನಗೆ ಅಭಿಮುಖನಾಗಿ ಪ್ರಾರ್ಥಿಸಿದೆ;
    ಕರುಣೆತೋರು ಎಂದು ನಿನ್ನನ್ನು ಕೇಳಿಕೊಂಡೆ.
“ದೇವರೇ, ನಾನು ಸತ್ತು ಸಮಾಧಿಯೊಳಗೆ ಹೋದರೆ,
    ಅದರಿಂದ ಒಳ್ಳೆಯದೇನಾದೀತು?
ಸತ್ತವರು ಕೇವಲ ಮಣ್ಣಿನಲ್ಲಿ ಬಿದ್ದಿರುವರು!
    ಅವರು ನಿನ್ನನ್ನು ಸ್ತುತಿಸುವುದಿಲ್ಲ!
    ಶಾಶ್ವತವಾದ ನಿನ್ನ ನಂಬಿಗಸ್ತಿಕೆಯ ಕುರಿತು ಅವರು ಹೇಳುವುದಿಲ್ಲ.
10 ಯೆಹೋವನೇ, ನನ್ನ ಪ್ರಾರ್ಥನೆಯನ್ನು ಕೇಳಿ ನನಗೆ ಕರುಣೆತೋರು!
    ಯೆಹೋವನೇ, ನನಗೆ ಸಹಾಯಮಾಡು!” ಎಂದು ಕೇಳಿಕೊಂಡೆನು.

11 ಆಗ ನೀನು ನನಗೆ ಸಹಾಯಮಾಡಿ ನನ್ನ ಗೋಳಾಟವನ್ನು
    ಸಂತೋಷದ ನರ್ತನವನ್ನಾಗಿ ಮಾರ್ಪಡಿಸಿದೆ.
ನನ್ನ ಶೋಕವಸ್ತ್ರಗಳನ್ನು ತೆಗೆದುಹಾಕಿ
    ಹರ್ಷವಸ್ತ್ರಗಳನ್ನು ಹೊದಿಸಿದೆ.
12 ನಾನು ಮೌನವಾಗಿರದೆ ಸದಾಕಾಲ ನಿನ್ನನ್ನು ಸ್ತುತಿಸುವೆನು.
    ನನ್ನ ದೇವರಾದ ಯೆಹೋವನೇ, ನಿನ್ನನ್ನು ಸದಾಕಾಲ ಸ್ತುತಿಸುವೆನು.

ಅಪೊಸ್ತಲರ ಕಾರ್ಯಗಳು 23:1-15

23 ಪೌಲನು ಯೆಹೂದ್ಯರ ನ್ಯಾಯಸಭೆಯನ್ನು ದೃಷ್ಟಿಸಿ ನೋಡಿ, “ಸಹೋದರರೇ, ನಾನು ಈ ದಿನದವರೆಗೂ ಒಳ್ಳೆಯ ಮನಸ್ಸಾಕ್ಷಿಯಿಂದ ದೇವರ ಮುಂದೆ ನಡೆದುಕೊಂಡಿದ್ದೇನೆ” ಎಂದು ಹೇಳಿದನು. ಪ್ರಧಾನಯಾಜಕನಾದ ಅನನೀಯನು ಅಲ್ಲಿದ್ದನು. ಪೌಲನು ಹೇಳಿದ್ದನ್ನು ಕೇಳಿದ ಅನನೀಯನು ಪೌಲನ ಪಕ್ಕದಲ್ಲಿ ನಿಂತಿದ್ದವರಿಗೆ ಪೌಲನ ಬಾಯಿಯ ಮೇಲೆ ಹೊಡೆಯಲು ಹೇಳಿದನು. ಪೌಲನು ಅನನೀಯನಿಗೆ, “ದೇವರು ನಿನ್ನನ್ನು ಸಹ ಹೊಡೆಯುವನು! ಸುಣ್ಣ ಬಳಿದ ಗೋಡೆ ನೀನು! ಮೋಶೆಯ ಧರ್ಮಶಾಸ್ತ್ರಕ್ಕನುಸಾರವಾಗಿ ನ್ಯಾಯತೀರ್ಪು ಮಾಡಲು ಅಲ್ಲಿ ಕುಳಿತುಕೊಂಡು ನನಗೆ ಹೊಡೆಯಲು ಅವರಿಗೆ ಹೇಳುತ್ತಿರುವೆಯಾ! ಮೋಶೆಯ ಧರ್ಮಶಾಸ್ತ್ರಕ್ಕೆ ಅದು ವಿರುದ್ಧವಾದದ್ದು” ಎಂದು ಹೇಳಿದನು.

ಪೌಲನ ಸಮೀಪದಲ್ಲಿ ನಿಂತಿದ್ದ ಜನರು ಅವನಿಗೆ, “ದೇವರ ಪ್ರಧಾನಯಾಜಕನಿಗೆ ನೀನು ಈ ರೀತಿ ಮಾತಾಡಕೂಡದು! ನೀನು ಅವನಿಗೆ ಅವಮಾನ ಮಾಡುತ್ತಿರುವೆ!” ಎಂದು ಹೇಳಿದರು.

ಪೌಲನು, “ಸಹೋದರರೇ, ಈ ಮನುಷ್ಯನು ಪ್ರಧಾನಯಾಜಕನೆಂದು ನನಗೆ ಗೊತ್ತಿರಲ್ಲಿಲ್ಲ. ‘ನಿಮ್ಮ ಜನನಾಯಕರ ಬಗ್ಗೆ ಕೆಟ್ಟಮಾತುಗಳುನ್ನು ಆಡಬಾರದು’(A) ಎಂದು ಧರ್ಮಶಾಸ್ತ್ರದಲ್ಲಿ ಬರೆದಿದೆ” ಎಂದು ಹೇಳಿದನು.

ಸಭೆಯಲ್ಲಿದ್ದ ಜನರಲ್ಲಿ ಕೆಲವರು ಸದ್ದುಕಾಯರಾಗಿದ್ದರು; ಮತ್ತೆ ಕೆಲವರು ಫರಿಸಾಯರಾಗಿದ್ದರು. ಆದ್ದರಿಂದ ಪೌಲನು, “ನನ್ನ ಸಹೋದರರೇ, ನಾನು ಫರಿಸಾಯನು! ನನ್ನ ತಂದೆಯೂ ಫರಿಸಾಯನಾಗಿದ್ದನು! ಸತ್ತವರು ಪುನರುತ್ಥಾನ ಹೊಂದುತ್ತಾರೆಂದು ನಾನು ನಂಬುವುದರಿಂದ ಇಲ್ಲಿ ನ್ಯಾಯವಿಚಾರಣೆಗೆ ಗುರಿಯಾಗಿದ್ದೇನೆ!” ಎಂದು ಕೂಗಿ ಹೇಳಿದನು.

ಪೌಲನು ಹೀಗೆ ಹೇಳಿದಾಗ, ಫರಿಸಾಯರಿಗೂ ಸದ್ದುಕಾಯರಿಗೂ ದೊಡ್ಡ ವಾಗ್ವಾದವಾಯಿತು. ಸಭೆಯಲ್ಲಿ ಭೇದ ಉಂಟಾಯಿತು. (ಸತ್ತವರಿಗೆ ಪುನರುತ್ಥಾನವಿಲ್ಲ; ದೇವದೂತರುಗಳಾಗಲಿ ಆತ್ಮಗಳಾಗಲಿ ಇಲ್ಲವೇ ಇಲ್ಲ ಎಂಬುದು ಸದ್ದುಕಾಯರ ನಂಬಿಕೆ. ಫರಿಸಾಯರ ನಂಬಿಕೆ ಇದಕ್ಕೆ ತದ್ವಿರುದ್ಧವಾಗಿದೆ.) ಈ ಯೆಹೂದ್ಯರೆಲ್ಲರೂ ಹೆಚ್ಚುಹೆಚ್ಚು ಗಟ್ಟಿಯಾಗಿ ಆರ್ಭಟಿಸಿತೊಡಗಿದರು. ಫರಿಸಾಯರ ಗುಂಪಿಗೆ ಸೇರಿದ್ದ ಕೆಲವು ಮಂದಿ ಧರ್ಮೋಪದೇಶಕರು ಎದ್ದುನಿಂತುಕೊಂಡು, “ಈ ಮನುಷ್ಯನಲ್ಲಿ ನಮಗೇನೂ ತಪ್ಪು ಕಂಡುಬರುತ್ತಿಲ್ಲ! ದಮಸ್ಕಕ್ಕೆ ಹೋಗುವ ದಾರಿಯಲ್ಲಿ ದೇವದೂತನಾಗಲಿ ಆತ್ಮವಾಗಲಿ ಅವನೊಂದಿಗೆ ಮಾತಾಡಿದ್ದಿರಬೇಕು!” ಎಂದು ವಾದಿಸಿದರು.

10 ಈ ವಾಗ್ವಾದವು ಜಗಳವಾಯಿತು. ಯೆಹೂದ್ಯರು ಪೌಲನನ್ನು ತುಂಡುತುಂಡು ಮಾಡುವರೆಂಬ ಭಯದಿಂದ ಸೇನಾಧಿಪತಿಯು ಸಿಪಾಯಿಗಳಿಗೆ, “ಕೆಳಗೆ ಇಳಿದುಹೋಗಿ ಪೌಲನನ್ನು ಯೆಹೂದ್ಯರ ಬಳಿಯಿಂದ ಕೊಂಡೊಯ್ದು ಸೈನ್ಯದ ಕೋಟೆಯೊಳಗೆ ಇರಿಸಿರಿ” ಎಂದು ಆಜ್ಞಾಪಿಸಿದನು.

11 ಮರುದಿನ ರಾತ್ರಿ ಪ್ರಭು ಯೇಸುವು ಬಂದು ಪೌಲನ ಬಳಿ ನಿಂತುಕೊಂಡು, “ಧೈರ್ಯದಿಂದಿರು! ನೀನು ನನ್ನ ಬಗ್ಗೆ ಜೆರುಸಲೇಮಿನ ಜನರಿಗೆ ತಿಳಿಸಿರುವೆ. ನೀನು ರೋಮಿಗೂ ಹೋಗಿ ಅಲ್ಲಿರುವ ಜನರಿಗೆ ನನ್ನ ಬಗ್ಗೆ ತಿಳಿಸಬೇಕು!” ಎಂದು ಹೇಳಿದನು.

ಪೌಲನನ್ನು ಕೊಲ್ಲಲು ಕೆಲವು ಯೆಹೂದ್ಯರ ಸಂಚು

12 ಮರುದಿನ ಮುಂಜಾನೆ ಯೆಹೂದ್ಯರಲ್ಲಿ ಕೆಲವರು, ತಾವು ಪೌಲನನ್ನು ಕೊಲ್ಲದ ಹೊರತು ಏನನ್ನೂ ತಿನ್ನುವುದಿಲ್ಲ ಮತ್ತು ಏನನ್ನೂ ಕುಡಿಯುವುದಿಲ್ಲ ಎಂಬುದಾಗಿ ಹರಕೆ ಮಾಡಿಕೊಂಡರು. 13 ಹೀಗೆ ಸುಮಾರು ನಲವತ್ತಕ್ಕಿಂತಲೂ ಹೆಚ್ಚು ಮಂದಿ ಹರಕೆ ಮಾಡಿಕೊಂಡಿದ್ದರು. 14 ಈ ಯೆಹೂದ್ಯರು ಮಹಾಯಾಜಕರ ಮತ್ತು ಯೆಹೂದ್ಯರ ಹಿರಿಯ ನಾಯಕರ ಬಳಿಗೆ ಹೋಗಿ, “ನಾವು ಪೌಲನನ್ನು ಕೊಲ್ಲುವ ತನಕ ತಿನ್ನುವುದೂ ಇಲ್ಲ ಕುಡಿಯುವುದೂ ಇಲ್ಲ ಎಂಬ ಕಠಿಣವಾದ ಹರಕೆ ಮಾಡಿಕೊಂಡಿದ್ದೇವೆ! 15 ಆದ್ದರಿಂದ ಈಗ ನೀವು ಮಾಡಬೇಕಾದದ್ದೇನೆಂದರೆ, ಸೇನಾಧಿಪತಿಗೂ ಎಲ್ಲಾ ಯೆಹೂದ್ಯ ನಾಯಕರಿಗೂ ಒಂದು ಸಂದೇಶವನ್ನು ಕಳುಹಿಸಿಕೊಡಿರಿ. ಪೌಲನಿಗೆ ಇನ್ನೂ ಹೆಚ್ಚು ಪ್ರಶ್ನೆಗಳನ್ನು ಕೇಳಬೇಕಾಗಿರುವುದರಿಂದ ಪೌಲನನ್ನು ನಮ್ಮ ಬಳಿಗೆ ಕರೆದುಕೊಂಡು ಬರಬೇಕೆಂದು ಸೇನಾಧಿಪತಿಗೆ ತಿಳಿಸಿರಿ. ಪೌಲನು ಇಲ್ಲಿಗೆ ಬರುತ್ತಿರುವಾಗಲೇ ನಾವು ಮಾರ್ಗದಲ್ಲಿ ಕಾದುಕೊಂಡಿದ್ದು ಅವನನ್ನು ಕೊಲ್ಲುತ್ತೇವೆ” ಎಂದು ಹೇಳಿದರು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International