Old/New Testament
ಜ್ಞಾನದ ಬೆಲೆ
28 “ಬೆಳ್ಳಿಯ ಗಣಿಗಳು ಇವೆ;
ಚಿನ್ನವನ್ನು ಶುದ್ಧೀಕರಿಸುವ ಸ್ಥಳಗಳೂ ಇವೆ.
2 ಮಣ್ಣಿನೊಳಗಿಂದ ಕಬ್ಬಿಣವನ್ನು ತೆಗೆಯುವರು,
ಕಲ್ಲನ್ನು ಕರಗಿಸಿ ತಾಮ್ರವನ್ನು ಪಡೆಯುವರು.
3 ಕಾರ್ಮಿಕರು ದೀಪಗಳನ್ನು ತೆಗೆದುಕೊಂಡು
ಆಳವಾದ ಗುಹೆಗಳಲ್ಲಿಯೂ ಕಾರ್ಗತ್ತಲೆಯಲ್ಲಿಯೂ ಕಲ್ಲುಗಳಿಗಾಗಿ ಹುಡುಕುವರು.
4 ಲೋಹದ ಅದುರುಗಳು ಸಿಕ್ಕುವ ಸ್ಥಳಗಳಲ್ಲಿ ಅಗೆಯುತ್ತಾ ಹೋಗುವರು;
ಜನರು ವಾಸವಾಗಿರುವುದಕ್ಕಿಂತ ಆಳವಾದ ಸ್ಥಳಕ್ಕೆ ಇಳಿದುಹೋಗುವರು;
ಆಳವಾದ ಆ ಸ್ಥಳಗಳನ್ನು ಜನರು ಹಿಂದೆಂದೂ ನೋಡಿಯೇ ಇಲ್ಲ.
ಅವರು ಹಗ್ಗಗಳನ್ನು ಕಟ್ಟಿಕೊಂಡು ಜನರಿಗೆ ಬಹುದೂರವಾದ ಆಳವಾದ ಗಣಿಗಳಲ್ಲಿ ನೇತಾಡುತ್ತಾ ದುಡಿಯುವರು.
5 ಭೂಮಿಯ ಮೇಲ್ಭಾಗದಿಂದ ಆಹಾರವು ಬೆಳೆಯುತ್ತದೆ.
ಭೂಮಿಯ ಕೆಳಭಾಗವಾದರೋ ಬೆಂಕಿಯಿಂದ ಕರಗಿಹೋದಂತಿರುವುದು.
6 ಭೂಮಿಯ ಕೆಳಭಾಗದಲ್ಲಿ
ಇಂದ್ರನೀಲಮಣಿಗಳೂ ಚಿನ್ನದ ಅದಿರೂ ಸಿಕ್ಕುತ್ತವೆ.
7 ಕಾಡುಪಕ್ಷಿಗಳಿಗೆ ಗಣಿಯ ಮಾರ್ಗವು ಗೊತ್ತಿಲ್ಲ.
ಯಾವ ಗಿಡುಗವೂ ಕತ್ತಲೆಯ ಆ ಮಾರ್ಗಗಳನ್ನು ನೋಡಿಲ್ಲ.
8 ಕಾಡುಪ್ರಾಣಿಗಳು ಆ ಮಾರ್ಗಗಳಲ್ಲಿ ನಡೆದಿಲ್ಲ.
ಸಿಂಹಗಳು ಆ ಮಾರ್ಗದ ಮೇಲೆ ಹಾದುಹೋಗಿಲ್ಲ.
9 ಕಾರ್ಮಿಕರು ಅತ್ಯಂತ ಗಟ್ಟಿಯಾದ ಬಂಡೆಗಳನ್ನು ಅಗೆಯುವರು.
ಅವರು ಬೆಟ್ಟಗಳನ್ನು ಹೊಡೆದು ನೆಲಸಮ ಮಾಡುವರು.
10 ಕಾರ್ಮಿಕರು ಬಂಡೆಗಳಲ್ಲಿ ಸುರಂಗಗಳನ್ನು ಕೊರೆದು
ಬಂಡೆಯ ಭಂಡಾರಗಳನ್ನು ನೋಡುವರು.
11 ಕಾರ್ಮಿಕರು ಹರಿಯುವ ನೀರನ್ನು ತಡೆದು ಜಲಾಶಯವನ್ನು ಕಟ್ಟುವರು;
ಮರೆಯಾಗಿರುವ ವಸ್ತುಗಳನ್ನು ಬೆಳಕಿಗೆ ತರುವರು.
12 “ಆದರೆ ಮನುಷ್ಯನು ಜ್ಞಾನವನ್ನು ಕಂಡುಕೊಳ್ಳುವುದೆಲ್ಲಿ?
ವಿವೇಕವು ದೊರೆಯುವ ಸ್ಥಳವೆಲ್ಲಿ?
13 ಜ್ಞಾನದ ಬೆಲೆಯು ಯಾರಿಗೂ ಗೊತ್ತಿಲ್ಲ.
ಜನರು ನೆಲವನ್ನು ಅಗೆದು ಜ್ಞಾನವನ್ನು ಕಂಡುಕೊಳ್ಳಲು ಸಾಧ್ಯವಿಲ್ಲ.
14 ‘ಜ್ಞಾನವು ನನ್ನೊಂದಿಗಿಲ್ಲ’ ಎಂದು ಆಳವಾದ ಸಾಗರವು ಹೇಳುತ್ತದೆ.
‘ಜ್ಞಾನವು ನನ್ನೊಂದಿಗಿಲ್ಲ’ ಎಂದು ಸಮುದ್ರವು ಹೇಳುತ್ತದೆ.
15 ಬಂಗಾರವನ್ನು ಕೊಟ್ಟು ಜ್ಞಾನವನ್ನು ಕೊಂಡುಕೊಳ್ಳಲು ಸಾಧ್ಯವಿಲ್ಲ.
ಇಡೀ ಲೋಕದ ಬೆಳ್ಳಿಯನ್ನು ಕೊಟ್ಟು ಜ್ಞಾನವನ್ನು ಕೊಂಡುಕೊಳ್ಳಲು ಸಾಧ್ಯವಿಲ್ಲ.
16 ಓಫೀರ್ ದೇಶದ ಬಂಗಾರದಿಂದಾಗಲಿ ಅಮೂಲ್ಯವಾದ ಗೋಮೇಧಕ ರತ್ನದಿಂದಾಗಲಿ
ಇಂದ್ರನೀಲಮಣಿಗಳಿಂದಾಗಲಿ ಜ್ಞಾನವನ್ನು ಕೊಂಡುಕೊಳ್ಳಲಾಗದು.
17 ಜ್ಞಾನವು ಬಂಗಾರಕ್ಕಿಂತಲೂ ಶ್ರೇಷ್ಠವಾದ ಗಾಜಿಗಿಂತಲೂ ಹೆಚ್ಚು ಬೆಲೆಬಾಳುತ್ತದೆ.
ಬಂಗಾರದ ಆಭರಣಗಳು ಜ್ಞಾನವನ್ನು ಕೊಂಡುಕೊಳ್ಳಲಾರವು.
18 ಜ್ಞಾನವು ಹವಳಕ್ಕಿಂತಲೂ ಸ್ಪಟಿಕಕ್ಕಿಂತಲೂ ಹೆಚ್ಚು ಬೆಲೆ ಬಾಳುತ್ತದೆ.
ಜ್ಞಾನವು ಮಾಣಿಕ್ಯಕ್ಕಿಂತಲೂ ಅಮೂಲ್ಯವಾಗಿದೆ.
19 ಇಥಿಯೋಪಿಯಾ ದೇಶದ ಪುಷ್ಯರಾಗವೂ ಜ್ಞಾನದಷ್ಟು ಅಮೂಲ್ಯವಲ್ಲ.
ಶುದ್ಧಬಂಗಾರವನ್ನು ಕೊಟ್ಟು ಜ್ಞಾನವನ್ನು ಕೊಂಡುಕೊಳ್ಳಲು ಅಸಾಧ್ಯ.
20 “ಹೀಗಿರುವಲ್ಲಿ ಜ್ಞಾನವು ಎಲ್ಲಿಂದ ಬರುವುದು?
ವಿವೇಕವು ಎಲ್ಲಿ ದೊರಕುವುದು?
21 ಜ್ಞಾನವು ಎಲ್ಲಾ ಜೀವಿಗಳಿಗೂ ಮರೆಯಾಗಿದೆ.
ಆಕಾಶದ ಪಕ್ಷಿಗಳು ಸಹ ಅದನ್ನು ಕಾಣಲಾರವು.
22 ನಾಶಲೋಕವೂ ಮೃತ್ಯುವೂ,
‘ನಾವು ಜ್ಞಾನದ ಬಗ್ಗೆ ಸುದ್ದಿಗಳನ್ನು ಮಾತ್ರ ಕೇಳಿದ್ದೇವೆ’ ಎಂದು ಹೇಳುತ್ತವೆ.
23 “ಜ್ಞಾನದ ಮಾರ್ಗವನ್ನು ತಿಳಿದಿರುವವನು ದೇವರೊಬ್ಬನೇ.
ಅದರ ವಾಸಸ್ಥಳವು ಗೊತ್ತಿರುವುದು ಆತನಿಗೊಬ್ಬನಿಗೇ.
24 ದೇವರು ಭೂಮಿಯ ಕಟ್ಟಕಡೆಯತನಕ ದೃಷ್ಟಿಸಿ
ಆಕಾಶದ ಕೆಳಗಿರುವ ಪ್ರತಿಯೊಂದನ್ನೂ ನೋಡುವವನಾಗಿದ್ದಾನೆ.
25 ಆತನು ಗಾಳಿಗೆ ಶಕ್ತಿಯನ್ನು ಕೊಟ್ಟಾಗಲೂ
ಸಾಗರಗಳ ವಿಸ್ತೀರ್ಣವನ್ನು ನಿರ್ಧರಿಸಿದಾಗಲೂ
26 ಮಳೆಯನ್ನೂ ಗುಡುಗುಸಿಡಿಲುಗಳ ಮಳೆಯನ್ನೂ
ಎಲ್ಲಿಗೆ ಕಳುಹಿಸಬೇಕೆಂದು ನಿರ್ಧರಿಸಿದಾಗಲೂ
27 ಜ್ಞಾನವನ್ನು ಕಂಡುಕೊಂಡನು;
ಅದರ ಬೆಲೆಯನ್ನು ಪರೀಕ್ಷಿಸಿ ತಿಳಿದುಕೊಂಡನು; ಅದಕ್ಕೆ ತನ್ನ ಒಪ್ಪಿಗೆಯನ್ನು ಸೂಚಿಸಿದನು.
28 ಇದಲ್ಲದೆ ದೇವರು ಮನುಷ್ಯರಿಗೆ,
‘ಯೆಹೋವನಲ್ಲಿ ಭಯಭಕ್ತಿಯಿಂದಿರುವುದೇ ಜ್ಞಾನ;
ದುಷ್ಟತನವನ್ನು ತೊರೆದುಬಿಡುವುದೇ ವಿವೇಕ’ ಎಂದು ಹೇಳಿದನು.”
ಯೋಬನು ಮುಂದುವರಿಸಿದ ಮಾತು
29 ಯೋಬನು ಮಾತನ್ನು ಮುಂದುವರಿಸಿ ಹೀಗೆಂದನು:
2 “ನನ್ನ ಜೀವಿತವು ಕೆಲವು ತಿಂಗಳುಗಳ ಮುಂಚೆ ಇದ್ದಂತೆ ಈಗಲೂ ಇದ್ದಿದ್ದರೆ ಎಷ್ಟೋ ಒಳ್ಳೆಯದಿತ್ತು.
ಆ ದಿನಗಳಲ್ಲಿ ದೇವರು ನನ್ನನ್ನು ಕಾಯುತ್ತಾ ಪರಿಪಾಲಿಸುತ್ತಿದ್ದನು.
3 ಆ ದಿನಗಳಲ್ಲಿ ದೇವರ ದೀಪವು ನನ್ನ ಮೇಲೆ ಪ್ರಕಾಶಿಸುತ್ತಿದ್ದ ಕಾರಣ
ನಾನು ಕಾರ್ಗತ್ತಲೆಯಲ್ಲೂ ಸಂಚರಿಸುತ್ತಿದ್ದೆನು.
4 ಆ ದಿನಗಳು ನನ್ನ ಜೀವಿತದ ಸುಗ್ಗಿಕಾಲವಾಗಿದ್ದವು;
ಆ ದಿನಗಳಲ್ಲಿ ದೇವರ ಸ್ನೇಹವು ನನ್ನೊಂದಿಗೂ ನನ್ನ ಮನೆಯವರೊಂದಿಗೂ ಇತ್ತು.
5 ಆ ದಿನಗಳಲ್ಲಿ ಸರ್ವಶಕ್ತನಾದ ದೇವರು ಇನ್ನೂ ನನ್ನೊಂದಿಗಿದ್ದನು;
ನನ್ನ ಮಕ್ಕಳು ನನ್ನ ಸುತ್ತಲೂ ಇದ್ದರು.
6 ಆ ದಿನಗಳಲ್ಲಿ ನನ್ನ ಜೀವಿತವು ತುಂಬ ಚೆನ್ನಾಗಿತ್ತು.
ನನ್ನ ಮಾರ್ಗಗಳು ಕೆನೆಯಿಂದ ತುಂಬಿರುವಂತೆಯೂ
ಬಂಡೆಗಳು ನನಗಾಗಿ ಆಲೀವ್ ಎಣ್ಣೆಯ ನದಿಗಳನ್ನೇ ಹರಿಸುತ್ತಿರುವಂತೆಯೂ ನನ್ನ ಜೀವಿತವಿತ್ತು.
7 “ಆ ದಿನಗಳಲ್ಲಿ ನಾನು ನಗರದ ಹೆಬ್ಬಾಗಿಲಿನ ಬಳಿಗೆ ಹೋಗಿ,
ಸಾರ್ವಜನಿಕ ಸಭಾಸ್ಥಳದಲ್ಲಿ ಪಟ್ಟಣದ ಹಿರಿಯರೊಂದಿಗೆ ಕುಳಿತುಕೊಳ್ಳುತ್ತಿದ್ದೆನು.
8 ಅಲ್ಲಿದ್ದ ಜನರೆಲ್ಲರೂ ನನ್ನನ್ನು ಗೌರವಿಸುತ್ತಿದ್ದರು;
ಯೌವನಸ್ಥರು ನನ್ನನ್ನು ಕಂಡು ಹಿಂದಕ್ಕೆ ಸರಿದು ದಾರಿಮಾಡಿಕೊಡುತ್ತಿದ್ದರು;
ವೃದ್ಧರು ಗೌರವದಿಂದ ಎದ್ದುನಿಂತುಕೊಳ್ಳುತ್ತಿದ್ದರು.
9 ಮಾತಾಡುತ್ತಿದ್ದ ಜನನಾಯಕರು
ತಮ್ಮ ಬಾಯಿ ಮೇಲೆ ಕೈಯಿಟ್ಟುಕೊಂಡು ಮೌನವಾಗುತ್ತಿದ್ದರು.
10 ಪ್ರಮುಖನಾಯಕರುಗಳು ಸಹ ನಾಲಿಗೆಯು ಸಿಕ್ಕಿಕೊಂಡಂತೆ
ತಮ್ಮ ಧ್ವನಿಯನ್ನು ಕಡಿಮೆಮಾಡುತ್ತಿದ್ದರು.
11 ನನ್ನ ಮಾತನ್ನು ಕೇಳಿದವರೆಲ್ಲರೂ ನನ್ನನ್ನು ಪ್ರಶಂಸಿಸುತ್ತಿದ್ದರು;
ನಾನು ಮಾಡಿದ್ದನ್ನು ಕಂಡವರೆಲ್ಲರೂ ನನ್ನನ್ನು ಹೊಗಳುತ್ತಿದ್ದರು.
12 ಯಾಕೆಂದರೆ ಬೇಡಿಕೊಂಡ ಬಡವರಿಗೆ ಸಹಾಯ ಮಾಡಿದೆನು;
ಗತಿಯಿಲ್ಲದ ಅನಾಥರನ್ನು ರಕ್ಷಿಸಿದೆನು.
13 ಜನರು ತಮ್ಮ ಸಾವಿನ ಗಳಿಗೆಯಲ್ಲೂ ನನ್ನನ್ನು ಆಶೀರ್ವದಿಸಿದರು.
ಕಷ್ಟದಲ್ಲಿದ್ದ ವಿಧವೆಯರಿಗೆ ನನ್ನಿಂದ ಆನಂದವಾಯಿತು.
14 ನೀತಿಯೇ ನನ್ನ ಉಡುಪಾಗಿತ್ತು; ಅದೇ ನನ್ನ ನಿಲುವಂಗಿಯಾಗಿತ್ತು.
ನ್ಯಾಯವು ನನಗೆ ನಿಲುವಂಗಿಯೂ ಪೇಟವಾಗಿಯೂ ಇತ್ತು.
15 ನಾನು ಕುರುಡನಿಗೆ ಕಣ್ಣಾಗಿಯೂ
ಕುಂಟನಿಗೆ ಕಾಲಾಗಿಯೂ ಇದ್ದೆನು.
16 ನಾನು ಬಡವರಿಗೆ ತಂದೆಯಂತಿದ್ದೆನು.
ತೊಂದರೆಯಲ್ಲಿದ್ದ ಅಪರಿಚಿತರ ವ್ಯಾಜ್ಯವನ್ನು ವಿಚಾರಿಸುತ್ತಿದ್ದೆನು.
17 ನಾನು ದುಷ್ಟರ ಕೋರೆಗಳನ್ನು ಮುರಿದು
ಅವರ ಬಾಯೊಳಗಿಂದ ಬೇಟೆಗಳನ್ನು ಕಿತ್ತು ತರುತ್ತಿದ್ದೆನು.
18 “ನನ್ನ ಬಗ್ಗೆ ಆಲೋಚಿಸುತ್ತಾ, ‘ನನ್ನ ದಿನಗಳು ಮರಳಿನ ಕಣಗಳಷ್ಟು ಅಸಂಖ್ಯಾತವಾಗಿವೆ;
ನಾನು ನನ್ನ ಸ್ವಂತ ಮನೆಯಲ್ಲಿ ಮರಣಹೊಂದುವೆನು.
19 ನನ್ನ ಬೇರುಗಳು ನೀರಿನವರೆಗೂ ವ್ಯಾಪಿಸಿಕೊಂಡಿರುತ್ತವೆ;
ನನ್ನ ಕೊಂಬೆಗಳು ಇಬ್ಬನಿಯಿಂದ ಹಸಿಯಾಗಿರುತ್ತವೆ;
20 ಜನರು ನನ್ನನ್ನು ಹೊಗಳುತ್ತಲೇ ಇರುವರು;
ಕೈಯಲ್ಲಿ ಹೊಸಬಿಲ್ಲು ಇರುವಂತೆ ನಾನು ಬಲಿಷ್ಠನಾಗಿದ್ದೇನೆ’ ಎಂದುಕೊಂಡೆನು.
21 “ಆ ದಿನಗಳಲ್ಲಿ ಜನರು ನನಗೆ ಕಿವಿಗೊಡುತ್ತಿದ್ದರು;
ನನ್ನ ಆಲೋಚನೆಯನ್ನು ಕೇಳಲು ಮೌನದಿಂದ ಕಾದುಕೊಂಡಿರುತ್ತಿದ್ದರು.
22 ನನ್ನ ಮಾತುಗಳು ಪರಿಪೂರ್ಣವಾಗಿದ್ದ ಕಾರಣ ಅದಕ್ಕೆ ಬೇರೇನೂ ಸೇರಿಸಲು ಅವರಿಗೆ ಸಾಧ್ಯವಿರಲಿಲ್ಲ.
ನನ್ನ ಮಾತುಗಳು ಅವರ ಕಿವಿಗಳಿಗೆ ಕೋಮಲವಾಗಿದ್ದವು.
23 ಮಳೆಗಾಗಿಯೋ ಎಂಬಂತೆ ಅವರು ನನ್ನ ಮಾತುಗಳಿಗಾಗಿ ಎದುರುನೋಡುತ್ತಿದ್ದರು.
ವಸಂತ ಕಾಲದಲ್ಲಿ ಬೀಳುವ ಮಳೆಯ ನೀರನ್ನೋ ಎಂಬಂತೆ ಅವರು ನನ್ನ ಮಾತುಗಳನ್ನು ಕುಡಿಯುತ್ತಿದ್ದರು.
24 ನಾನು ಅವರನ್ನು ಕಂಡು ಮುಗುಳ್ನಗೆ ಬೀರಿದಾಗ ಅವರಿಗೆ ನಂಬುವುದಕ್ಕೇ ಆಗುತ್ತಿರಲಿಲ್ಲ.
ನನ್ನ ಸಂತೋಷದ ಮುಖವು ಅವರನ್ನು ಪ್ರೋತ್ಸಾಹಗೊಳಿಸಿತು.
25 ನಾನು ನಾಯಕನಾಗಿದ್ದರೂ ಅವರೊಂದಿಗೇ ಇರುತ್ತಿದ್ದೆನು;
ಪಾಳೆಯದಲ್ಲಿ ಸೈನ್ಯಗಳೊಂದಿಗಿರುವ ರಾಜನಂತೆ ನಾನು ದುಃಖಿತರನ್ನು ಆದರಿಸುತ್ತಿದ್ದೆನು.
ಬಾರ್ನಬ ಮತ್ತು ಸೌಲರಿಗೆ ವಹಿಸಲಾದ ವಿಶೇಷಕಾರ್ಯ
13 ಅಂತಿಯೋಕ್ಯದ ಸಭೆಯಲ್ಲಿ ಕೆಲವು ಪ್ರವಾದಿಗಳು ಮತ್ತು ಉಪದೇಶಕರಿದ್ದರು. ಅವರು ಯಾರೆಂದರೆ: ಬಾರ್ನಬ, ಸಿಮೆಯೋನ್ (ಇವನನ್ನು ನೀಗರ್ ಎಂತಲೂ ಕರೆಯುತ್ತಿದ್ದರು.) ಲೂಸಿಯಸ್ (ಸಿರೇನ್ ಪಟ್ಟಣದವನು) ಮೆನಹೇನ (ಹೆರೋದ ರಾಜನೊಂದಿಗೆ ಬೆಳೆದವನು) ಮತ್ತು ಸೌಲ. 2 ಇವರೆಲ್ಲರು ಪ್ರಭುವಿನ ಸೇವೆ ಮಾಡುತ್ತಿದ್ದರು ಮತ್ತು ಉಪವಾಸ ಮಾಡುತ್ತಿದ್ದರು. ಪವಿತ್ರಾತ್ಮನು ಅವರಿಗೆ, “ನಾನು ವಿಶೇಷವಾದ ಕಾರ್ಯಕ್ಕಾಗಿ ಬಾರ್ನಬ ಮತ್ತು ಸೌಲರನ್ನು ಆರಿಸಿಕೊಂಡಿದ್ದೇನೆ. ಆ ಕಾರ್ಯಕ್ಕಾಗಿ ಅವರನ್ನು ಪ್ರತ್ಯೇಕಿಸಿರಿ” ಎಂದು ಹೇಳಿದನು.
3 ಆದ್ದರಿಂದ ಸಭೆಯವರು ಉಪವಾಸವಿದ್ದು ಪ್ರಾರ್ಥನೆ ಮಾಡಿದರು. ಅವರು ಬಾರ್ನಬ ಮತ್ತು ಸೌಲರ ಮೇಲೆ ಹಸ್ತಾರ್ಪಣೆ ಮಾಡಿ ಅವರನ್ನು ಕಳುಹಿಸಿಕೊಟ್ಟರು.
ಸೈಪ್ರಸ್‌ನಲ್ಲಿ ಬಾರ್ನಬ ಮತ್ತು ಸೌಲರು
4 ಬಾರ್ನಬ ಮತ್ತು ಸೌಲರನ್ನು ಪವಿತ್ರಾತ್ಮನೇ ಕಳುಹಿಸಿಕೊಟ್ಟನು. ಅವರು ಸೆಲೂಸಿಯಾ ಪಟ್ಟಣಕ್ಕೆ ಹೋದರು. ಬಳಿಕ ಅವರು ಸೆಲೂಸಿಯಾದಿಂದ ಸೈಪ್ರಸ್ ದ್ವೀಪಕ್ಕೆ ಹಡಗಿನಲ್ಲಿ ಪ್ರಯಾಣ ಮಾಡಿದರು. 5 ಬಾರ್ನಬ ಮತ್ತು ಸೌಲರು ಸಲಾಮಿಸ್ ಪಟ್ಟಣಕ್ಕೆ ಬಂದಾಗ ಯೆಹೂದ್ಯರ ಸಭಾಮಂದಿರದಲ್ಲಿ ದೇವರ ಸಂದೇಶವನ್ನು ಸಾರಿದರು. (ಮಾರ್ಕನೆನಿಸಿಕೊಳ್ಳುವ ಯೋಹಾನನು ಸಹಾಯ ಮಾಡುವುದಕ್ಕಾಗಿ ಅವರೊಂದಿಗಿದ್ದನು.)
6 ಅವರು ಆ ದ್ವೀಪದಲ್ಲೆಲ್ಲಾ ಪ್ರಯಾಣ ಮಾಡುತ್ತಾ ಪಾಫೋಸ್ ಎಂಬ ಊರಿಗೆ ಹೋದರು. ಮಂತ್ರತಂತ್ರಗಳನ್ನು ಮಾಡುತ್ತಿದ್ದ ಒಬ್ಬ ಯೆಹೂದ್ಯನನ್ನು ಅವರು ಪಾಫೋಸಿನಲ್ಲಿ ಕಂಡರು. ಅವನ ಹೆಸರು “ಬಾರ್ ಯೇಸು.” ಅವನೊಬ್ಬ ಸುಳ್ಳುಪ್ರವಾದಿ. 7 ಸೆರ್ಗ್ಯಪೌಲನೆಂಬ ರಾಜ್ಯಪಾಲನ ಹತ್ತಿರದಲ್ಲೇ ಅವನು ಯಾವಾಗಲೂ ಇರುತ್ತಿದ್ದನು. ಸೆರ್ಗ್ಯಪೌಲನು ಜ್ಞಾನವಂತನಾಗಿದ್ದನು. ಅವನು ದೇವರ ವಾಕ್ಯವನ್ನು ಕೇಳಲು ಬಾರ್ನಬ ಮತ್ತು ಸೌಲರನ್ನು ಆಮಂತ್ರಿಸಿದನು. 8 ಆದರೆ ಮಂತ್ರವಾದಿಯಾದ ಎಲಿಮನು ಬಾರ್ನಬ ಮತ್ತು ಸೌಲರಿಗೆ ವಿರೋಧವಾಗಿದ್ದನು. (ಬಾರ್ ಯೇಸುವನ್ನು ಗ್ರೀಕ್ ಭಾಷೆಯಲ್ಲಿ ಎಲಿಮ ಎಂದು ಕರೆಯುತ್ತಿದ್ದರು.) ರಾಜ್ಯಪಾಲನು ಯೇಸುವಿನಲ್ಲಿ ನಂಬಿಕೆ ಇಡದ ಹಾಗೆ ಮಾಡಲು ಎಲಿಮನು ಪ್ರಯತ್ನಿಸಿದನು. 9 ಆದರೆ ಪೌಲನು (ಸೌಲನ ಮತ್ತೊಂದು ಹೆಸರು ಪೌಲ.) ಪವಿತ್ರಾತ್ಮಭರಿತನಾದನು. ಪೌಲನು ಎಲಿಮನನ್ನು ದಿಟ್ಟಿಸಿ ನೋಡಿ, 10 ಅವನಿಗೆ, “ನೀನು ಸೈತಾನನ ಮಗ! ಪ್ರತಿಯೊಂದು ಒಳ್ಳೆಯದಕ್ಕೂ ನೀನು ಶತ್ರು! ನೀನು ದುಷ್ಟತಂತ್ರಗಳಿಂದಲೂ ಸುಳ್ಳುಗಳಿಂದಲೂ ತುಂಬಿದವನಾಗಿರುವೆ. ಪ್ರಭುವಿನ ಸತ್ಯಗಳನ್ನು ಸುಳ್ಳುಗಳನ್ನಾಗಿ ಪರಿವರ್ತಿಸಲು ನೀನು ಯಾವಾಗಲೂ ಪ್ರಯತ್ನಿಸುತ್ತಿರುವೆ! 11 ಇಗೋ, ಪ್ರಭುವು ಕೈ ಎತ್ತಿದ್ದಾನೆ. ನೀನು ಕುರಡನಾಗಿ ಸ್ವಲ್ಪಕಾಲದವರೆಗೆ ಏನನ್ನೂ ನೋಡಲಾರೆ; ಸೂರ್ಯನ ಬೆಳಕನ್ನು ಸಹ ಕಾಣಲಾರೆ” ಎಂದನು.
ಆಗ ಎಲಿಮನಿಗೆ ಎಲ್ಲವೂ ಕತ್ತಲಾಯಿತು. ತನ್ನನ್ನು ಯಾರಾದರೂ ಕೈಹಿಡಿದು ನಡೆಸಲೆಂದು ಅವನು ತಡವರಿಸುತ್ತಾ ಸುತ್ತಮುತ್ತ ನಡೆದನು. 12 ಇದನ್ನು ಕಂಡ ರಾಜ್ಯಪಾಲನು ಪ್ರಭುವನ್ನು ನಂಬಿಕೊಂಡನು. ಪ್ರಭುವಿನ ವಿಷಯವಾದ ಉಪದೇಶವನ್ನು ಕೇಳಿ ವಿಸ್ಮಿತನಾದನು.
ಪೌಲ ಬಾರ್ನಬರು ಸೈಪ್ರಸ್‌ನಿಂದ ತೆರಳುವರು
13 ಪೌಲ ಮತ್ತು ಅವನ ಸಂಗಡಿಗರು ಪಾಫೋಸಿನಿಂದ ನೌಕಾಯಾನ ಮಾಡಿದರು. ಪಾಂಫೀಲಿಯ ಪ್ರಾಂತ್ಯದಲ್ಲಿದ್ದ ಪೆರ್ಗ ಎಂಬ ಪಟ್ಟಣಕ್ಕೆ ಅವರು ಬಂದರು. ಆದರೆ ಮಾರ್ಕನೆನಿಸಿಕೊಳ್ಳುವ ಯೋಹಾನನು ಅವರನ್ನು ಬಿಟ್ಟು ಜೆರುಸಲೇಮಿಗೆ ಹಿಂತಿರುಗಿದನು. 14 ಅವರು ತಮ್ಮ ಪ್ರಯಾಣವನ್ನು ಪೆರ್ಗದಿಂದ ಮುಂದುವರಿಸಿ, ಪಿಸಿದಿಯ ಸೀಮೆಗೆ ಸೇರಿದ ಅಂತಿಯೋಕ್ಯಕ್ಕೆ ಹೋದರು.
ಅವರು ಅಂತಿಯೋಕ್ಯಕ್ಕೆ ಸಬ್ಬತ್ ದಿನದಂದು ಯೆಹೂದ್ಯರ ಸಭಾಮಂದಿರದೊಳಗೆ ಹೋಗಿ ಕುಳಿತುಕೊಂಡರು. 15 ಮೋಶೆಯ ಧರ್ಮಶಾಸ್ತ್ರವನ್ನು ಮತ್ತು ಪ್ರವಾದಿಗಳ ಗ್ರಂಥಗಳನ್ನು ಓದಲಾಯಿತು. ಬಳಿಕ ಸಭಾಮಂದಿರದ ನಾಯಕರು ಪೌಲ ಬಾರ್ನಬರಿಗೆ, “ಸಹೋದರರೇ, ಇಲ್ಲಿರುವ ಜನರಿಗೆ ಸಹಾಯವಾಗುವಂತೆ ಏನನ್ನಾದರೂ ನೀವು ಹೇಳಬೇಕೆಂದಿದ್ದರೆ, ದಯವಿಟ್ಟು ಹೇಳಿ!” ಎಂಬ ಸಂದೇಶವನ್ನು ಕಳುಹಿಸಿದರು.
16 ಪೌಲನು ಎದ್ದುನಿಂತುಕೊಂಡು ತನ್ನ ಮಾತುಗಳನ್ನು ಕೇಳಬೇಕೆಂದು ಜನರಿಗೆ ಕೈಸನ್ನೆ ಮಾಡಿ ಹೀಗೆಂದನು: “ನನ್ನ ಯೆಹೂದ್ಯ ಸಹೋದರರೇ, ನಿಜ ದೇವರನ್ನು ಆರಾಧಿಸುವ ಇತರ ಜನರೇ, ದಯವಿಟ್ಟು ನನಗೆ ಕಿವಿಗೊಡಿರಿ! 17 ಇಸ್ರೇಲರ ದೇವರು ನಮ್ಮ ಪಿತೃಗಳನ್ನು ಆರಿಸಿಕೊಂಡನು. ಈಜಿಪ್ಟಿನಲ್ಲಿ ಪ್ರವಾಸಿಗರಾಗಿ ವಾಸಿಸುತ್ತಿದ್ದ ತನ್ನ ಜನರಿಗೆ ದೇವರು ಸಹಾಯಮಾಡಿ ಅಭಿವೃದ್ಧಿಪಡಿಸಿದನು. ದೇವರು ತನ್ನ ಮಹಾಶಕ್ತಿಯಿಂದ ಅವರನ್ನು ಆ ದೇಶದೊಳಗಿಂದ ಬರಮಾಡಿದನು. 18 ಮರಳುಗಾಡಿನಲ್ಲಿ ನಲವತ್ತು ವರ್ಷಗಳ ಕಾಲ ಅವರನ್ನು ಸಹಿಸಿಕೊಂಡನು. 19 ಕಾನಾನ್ ನಾಡಿನ ಏಳು ಜನಾಂಗಗಳನ್ನು ನಾಶಮಾಡಿ ತನ್ನ ಜನರಿಗೆ ಆ ನಾಡನ್ನು ಸ್ವಾಸ್ತ್ಯವಾಗಿ ಕೊಟ್ಟನು. 20 ಇವೆಲ್ಲಾ ಸುಮಾರು ನಾನೂರ ಐವತ್ತು ವರ್ಷಗಳ ಅವಧಿಯಲ್ಲಿ ನಡೆದವು.
“ಇದಾದ ಮೇಲೆ ಪ್ರವಾದಿಯಾದ ಸಮುವೇಲನ ಕಾಲದವರೆಗೆ ದೇವರು ನಮ್ಮ ಜನರಿಗೆ ನ್ಯಾಯಸ್ಥಾಪಕರನ್ನು ಕೊಟ್ಟನು. 21 ಬಳಿಕ ಜನರು ತಮಗೆ ರಾಜನು ಬೇಕೆಂದು ಕೇಳಿಕೊಂಡರು. ದೇವರು ಅವರಿಗೆ ಕೀಷನ ಮಗನಾದ ಸೌಲನನ್ನು ಕೊಟ್ಟನು. ಸೌಲನು ಬೆನ್ಯಾಮಿನ್ ಕುಲದವನು. ಅವನು ನಲವತ್ತು ವರ್ಷಗಳ ಕಾಲ ರಾಜನಾಗಿದ್ದನು. 22 ದೇವರು ಸೌಲನನ್ನು ತೆಗೆದುಹಾಕಿದ ಮೇಲೆ ದಾವೀದನನ್ನು ಅವರ ರಾಜನನ್ನಾಗಿ ಮಾಡಿದನು. ‘ಇಷಯನ ಮಗನಾದ ದಾವೀದನು ನನಗೆ ಮೆಚ್ಚಿಗೆಯಾದವನು. ಅವನು ನನ್ನ ಅಪೇಕ್ಷೆಗೆ ತಕ್ಕಂತೆ ಕಾರ್ಯಗಳನ್ನು ಮಾಡುತ್ತಾನೆ’ ಎಂದು ದೇವರು ದಾವೀದನ ಬಗ್ಗೆ ಹೇಳಿದ್ದಾನೆ.
23 “ದೇವರು ತನ್ನ ವಾಗ್ದಾನಕ್ಕನುಸಾರವಾಗಿ ದಾವೀದನ ಸಂತಾನದವರಲ್ಲಿ ಒಬ್ಬನನ್ನು ಇಸ್ರೇಲರ ರಕ್ಷಕನನ್ನಾಗಿ ಕಳುಹಿಸಿ ಕೊಟ್ಟಿದ್ದಾನೆ. ಆತನೇ ಯೇಸು. 24 ಯೇಸು ಬರುವುದಕ್ಕಿಂತ ಮೊದಲು (ಸ್ನಾನಿಕ) ಯೋಹಾನನು ಯೆಹೂದ್ಯ ಜನರಿಗೆಲ್ಲಾ ‘ನಿಮ್ಮ ಪಾಪಗಳಿಗಾಗಿ ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಂಡು ದೀಕ್ಷಾಸ್ನಾನ ಮಾಡಿಸಿಕೊಳ್ಳಿರಿ’ ಎಂದು ಬೋಧಿಸಿದನು. 25 ‘ನಾನು ಯಾರೆಂದು ನೀವು ಯೋಚಿಸುತ್ತೀರಿ? ನಾನು ಕ್ರಿಸ್ತನಲ್ಲ. ಆತನು ನನ್ನ ತರುವಾಯ ಬರುತ್ತಾನೆ. ಆತನ ಪಾದರಕ್ಷೆಗಳನ್ನು ಬಿಚ್ಚುವುದಕ್ಕೂ ನಾನು ಯೋಗ್ಯನಲ್ಲ’ ಎಂದು ಯೋಹಾನನು ತನ್ನ ಕಾರ್ಯವನ್ನು ಮಾಡಿ ಪೂರೈಸುತ್ತಿದ್ದಾಗ ಹೇಳಿಕೊಂಡಿದ್ದಾನೆ.
Kannada Holy Bible: Easy-to-Read Version. All rights reserved. © 1997 Bible League International