Old/New Testament
17 “ನನ್ನ ಆತ್ಮವು ಒಡೆದುಹೋಗಿದೆ;
ನನ್ನ ಜೀವಿತವು ಮುಗಿದುಹೋಗಿದೆ;
ಸಮಾಧಿಯು ನನಗೋಸ್ಕರ ಕಾಯುತ್ತಿದೆ.
2 ಜನರು ನನ್ನ ಸುತ್ತಲೂ ನಿಂತುಕೊಂಡು ನನ್ನನ್ನು ನೋಡಿ ನಗುತ್ತಿದ್ದಾರೆ.
ಅವರು ನನ್ನ ಕಣ್ಣೆದುರಿನಲ್ಲೇ ಗೇಲಿ ಮಾಡುತ್ತಾ ಅವಮಾನ ಮಾಡುತ್ತಿದ್ದಾರೆ.
3 “ದೇವರೇ, ಕೃಪೆ ತೋರಿ ನಾನು ನಿರಪರಾಧಿಯೆಂಬುದಕ್ಕೆ ನೀನೇ ನನಗೆ ಜಾಮೀನಾಗು.
ನಾನು ನಿರಪರಾಧಿ ಎಂಬುದಕ್ಕೆ ಜಾಮೀನಾಗಲು ಯಾರೂ ಒಪ್ಪುತ್ತಿಲ್ಲ.
4 ನೀನು ನನ್ನ ಸ್ನೇಹಿತರ ಮನಸ್ಸುಗಳನ್ನು ಮುಚ್ಚಿಬಿಟ್ಟಿರುವೆ;
ಅವರು ನನ್ನನ್ನು ಅರ್ಥಮಾಡಿಕೊಳ್ಳುವುದಿಲ್ಲ.
ಅವರಿಗೆ ಜಯವಾಗದಂತೆ ನೋಡಿಕೊ.
5 ‘ಮನುಷ್ಯನು ತನ್ನ ಸ್ನೇಹಿತರಿಗೆ ಸಹಾಯಮಾಡಲು ತನ್ನ ಮಕ್ಕಳನ್ನೇ ಅಲಕ್ಷಿಸುತ್ತಾನೆ’[a]
ಎಂಬ ಗಾದೆಯಿದೆ.
ಆದರೆ ಈಗ ನನ್ನ ಸ್ನೇಹಿತರು ನನಗೆ ವಿರೋಧವಾಗಿ ಎದ್ದಿದ್ದಾರೆ.
6 ದೇವರು ನನ್ನ ಹೆಸರನ್ನು ಪ್ರತಿಯೊಬ್ಬರಿಗೂ ಕೆಟ್ಟಪದವನ್ನಾಗಿ ಮಾಡಿದ್ದಾನೆ.
ಜನರು ನನ್ನ ಮುಖಕ್ಕೆ ಉಗುಳುತ್ತಿದ್ದಾರೆ.
7 ನನ್ನ ಕಣ್ಣುಗಳು ಕುರುಡಾಗಿವೆ, ನಾನು ಬಹು ದುಃಖಿತನಾಗಿದ್ದೇನೆ.
ಅತ್ಯಧಿಕವಾದ ನೋವಿನಲ್ಲಿದ್ದೇನೆ; ನನ್ನ ದೇಹವು ನೆರಳಿನಂತೆ ಬಹು ತೆಳ್ಳಗಾಗಿದೆ.
8 ನೀತಿವಂತರು ಇದನ್ನು ಕಂಡು ಗಲಿಬಿಲಿಗೊಂಡಿದ್ದಾರೆ.
ನಿರಪರಾಧಿಗಳು ದೇವದೂಷಕರ ವಿಷಯದಲ್ಲಿ ಗಲಿಬಿಲಿಗೊಂಡಿದ್ದಾರೆ.
9 ನೀತಿವಂತರು ಸನ್ಮಾರ್ಗದಲ್ಲಿ ಜೀವಿಸುವರು.
ನಿರಪರಾಧಿಗಳು ಸದ್ಗುಣದಲ್ಲಿ ಬಲವಾಗುತ್ತಲೇ ಇರುವರು.
10 “ಆದರೆ ನೀವೆಲ್ಲರೂ ಬನ್ನಿರಿ, ನನ್ನ ತಪ್ಪನ್ನು ತೋರಿಸಿರಿ.
ನಿಮ್ಮಲ್ಲಿ ಒಬ್ಬ ಜ್ಞಾನಿಯೂ ಇಲ್ಲ.
11 ನನ್ನ ಜೀವಿತವು ಮುಗಿದುಹೋಗುತ್ತಿದೆ, ನನ್ನ ಯೋಜನೆಗಳು ನಾಶವಾಗಿವೆ;
ನನ್ನ ನಿರೀಕ್ಷೆಯು ಇಲ್ಲವಾಗಿದೆ.
12 ರಾತ್ರಿಯನ್ನು ಹಗಲನ್ನಾಗಿ ಪರಿವರ್ತಿಸುವ,
ಬೆಳಕನ್ನು ಕತ್ತಲೆಯನ್ನಾಗಿ ಮಾಡುವ ನನ್ನ ನಿರೀಕ್ಷೆಗಳು ಇಲ್ಲವಾಗಿವೆ.
13 “ನಾನು ನಿರೀಕ್ಷಿಸುತ್ತಿರುವ ಮನೆಯು ಕೇವಲ ಸಮಾಧಿಯಾಗಿದ್ದರೆ,
ನನ್ನ ಹಾಸಿಗೆಯನ್ನು ಕತ್ತಲೆಯಲ್ಲಿ ಹಾಸಿಕೊಂಡಿದ್ದರೆ,
14 ನಾನು ಸಮಾಧಿಗೆ, ‘ನೀನೇ ನನ್ನ ತಂದೆ’ಯೆಂದು
ಹುಳವಿಗೆ, ‘ನೀನೇ ನನ್ನ ತಾಯಿ, ನೀನೇ ನನ್ನ ತಂಗಿ’ ಎಂದು ಹೇಳುವುದಾದರೆ,
15 ನನಗೆ ನಿರೀಕ್ಷೆಯೇ ಇಲ್ಲ.
ನನ್ನ ನಿರೀಕ್ಷೆಯನ್ನು ಯಾರೂ ನೋಡಲಾರರು.
16 ನನ್ನ ನಿರೀಕ್ಷೆಯು ಮರಣದ ಸ್ಥಳಕ್ಕೆ ಇಳಿದು ಹೋಗುವುದೇ?
ನಾವು ಒಟ್ಟಾಗಿ ಧೂಳಿಗೆ ಇಳಿದುಹೋಗುತ್ತೇವೋ?”
ಬಿಲ್ದದನಿಗೆ ಯೋಬನ ಉತ್ತರ
18 ಬಳಿಕ ಶೂಹ ದೇಶದ ಬಿಲ್ದದನು ಹೀಗೆ ಉತ್ತರಕೊಟ್ಟನು:
2 “ಈ ಮಾತುಗಳನ್ನೆಲ್ಲಾ ಯಾವಾಗ ನಿಲ್ಲಿಸುವೆ?
ಪ್ರಜ್ಞೆವುಳ್ಳವನಾಗು, ಆಗ ನಾವು ಮಾತಾಡಲು ಸಾಧ್ಯ.
3 ನಮ್ಮನ್ನು ದಡ್ಡ ಪ್ರಾಣಿಗಳಂತೆ
ಯೋಚಿಸಿಕೊಂಡಿರುವುದೇಕೆ?
4 ಯೋಬನೇ, ನಿನ್ನ ಕೋಪದಿಂದ ನಿನ್ನನ್ನೇ ಗಾಯಮಾಡಿಕೊಳ್ಳುತ್ತಿರುವೆ.
ಕೇವಲ ನಿನಗೋಸ್ಕರ ಜನರು ಲೋಕವನ್ನು ಬಿಟ್ಟುಹೋಗಬೇಕೇ?
ಕೇವಲ ನಿನ್ನನ್ನು ತೃಪ್ತಿಪಡಿಸುವುದಕ್ಕಾಗಿ ದೇವರು ಬೆಟ್ಟಗಳನ್ನು ಜರುಗಿಸುತ್ತಾನೆಂದು ಭಾವಿಸಿಕೊಂಡಿರುವಿಯಾ?
5 “ಹೌದು, ದುಷ್ಟನ ದೀಪವು ಆರಿಹೋಗುವುದು;
ಅವನ ಬೆಂಕಿಯು ಉರಿಯುವುದಿಲ್ಲ.
6 ಅವನ ಗುಡಾರದಲ್ಲಿರುವ ಬೆಳಕು ಕತ್ತಲಾಗುವುದು;
ಅವನ ಪಕ್ಕದಲ್ಲಿರುವ ದೀಪವು ಆರಿಹೋಗುವುದು.
7 ಅವನ ಹೆಜ್ಜೆಗಳಲ್ಲಿ ಬಲವಿರುವುದಿಲ್ಲ;
ಅವನ ದುಷ್ಟ ಯೋಜನೆಗಳೇ ಅವನನ್ನು ಬೀಳಿಸುತ್ತವೆ.
8 ಅವನ ಸ್ವಂತ ಕಾಲುಗಳೇ ಅವನನ್ನು ಬಲೆಗೆ ನಡೆಸುತ್ತದೆ.
ಅವನು ಬಲೆಯೊಳಗೆ ನಡೆದುಹೋಗಿ ಸಿಕ್ಕಿಕೊಳ್ಳುವನು.
9 ಬೋನು ಅವನ ಹಿಮ್ಮಡಿಯನ್ನು ಹಿಡಿದುಕೊಳ್ಳುವುದು.
ಉರುಲು ಅವನನ್ನು ಗಟ್ಟಿಯಾಗಿ ಹಿಡಿದುಕೊಳ್ಳುವುದು.
10 ಅವನಿಗಾಗಿ ಹಗ್ಗವು ನೆಲದ ಮೇಲೆ ಅಡಗಿಕೊಂಡಿರುತ್ತದೆ.
ಅವನ ದಾರಿಯಲ್ಲಿ ಉರುಲು ಕಾದುಕೊಂಡಿರುತ್ತದೆ.
11 ಎಲ್ಲಾ ಕಡೆಗಳಿಂದಲೂ ಅಪಾಯವು ಅವನನ್ನು ಭಯಪಡಿಸುತ್ತದೆ.
ಅವನಿಡುವ ಪ್ರತಿಯೊಂದು ಹೆಜ್ಜೆಯನ್ನೂ ಭಯವು ಹಿಂಬಾಲಿಸುತ್ತದೆ.
12 ವಿಪತ್ತುಗಳು ಅವನಿಗಾಗಿ ಹಸಿವೆಯಿಂದ ಕಾದುಕೊಂಡಿವೆ.
ಅವನು ಬೀಳುವಾಗ ನಾಶನವು ಅವನಿಗಾಗಿ ಸಿದ್ಧವಾಗಿರುತ್ತದೆ.
13 ಭಯಂಕರವಾದ ಕಾಯಿಲೆಯು ಅವನ ಚರ್ಮದ ಭಾಗಗಳನ್ನು ತಿಂದುಬಿಡುತ್ತದೆ.
ಅದು ಅವನ ತೋಳುಗಳನ್ನೂ ಕಾಲುಗಳನ್ನೂ ಕೊಳೆಸಿಬಿಡುತ್ತದೆ.
14 ದುಷ್ಟನನ್ನು ಅವನ ಸುರಕ್ಷಿತವಾದ ಮನೆಯಿಂದ ಹೊರಗೆ ಹಾಕಲಾಗುವುದು.
ಅವನು ಮರಣವೆಂಬ ಅಪಾಯಗಳ ರಾಜನ ಕಡೆಗೆ ಮುನ್ನಡೆಯುತ್ತಾ ಹೋಗುವನು.
15 ಅವನ ಮನೆಯಲ್ಲಿ ಅವನದೇನೂ ಉಳಿದಿರುವುದಿಲ್ಲ.
ಉರಿಯುವ ಗಂಧಕವು ಅವನ ಆಸ್ತಿಯಲ್ಲೆಲ್ಲಾ ಹರಡಿಕೊಂಡಿರುತ್ತದೆ.
16 ಅವನ ಬೇರುಗಳು ಕೆಳಗೆ ಒಣಗಿಹೋಗುತ್ತವೆ.
ಅವನ ಕೊಂಬೆಗಳು ಮೇಲೆ ಸತ್ತುಹೋಗುತ್ತವೆ.
17 ಭೂಮಿಯ ಮೇಲಿರುವ ಜನರು ಅವನನ್ನು ಜ್ಞಾಪಿಸಿಕೊಳ್ಳುವುದಿಲ್ಲ;
ಇನ್ನು ಮೇಲೆ ಅವನನ್ನು ಯಾರೂ ಜ್ಞಾಪಿಸಿಕೊಳ್ಳುವುದಿಲ್ಲ.
18 ಜನರು ಅವನನ್ನು ಬೆಳಕಿನಿಂದ ತಳ್ಳಿಬಿಡುವರು; ಅವನನ್ನು ಕತ್ತಲೆಯೊಳಗೆ ನೂಕಿಬಿಡುವರು.
ಅವರು ಅವನನ್ನು ಲೋಕದಿಂದಲೇ ಅಟ್ಟಿಬಿಡುವರು.
19 ಅವನಿಗೆ ಸ್ವಜನರ ಮಧ್ಯದಲ್ಲಿ ಮಕ್ಕಳಾಗಲಿ ಸಂತತಿಯವರಾಗಲಿ ಇರುವುದಿಲ್ಲ.
ಅವನ ಮನೆಯಲ್ಲಿ ಯಾರೂ ಉಳಿದಿರುವುದಿಲ್ಲ.
20 ಪಶ್ಚಿಮದಲ್ಲಿ ವಾಸವಾಗಿರುವ ಜನರು ದುಷ್ಟನಿಗೆ ಸಂಭವಿಸಿದ್ದನ್ನು ಕೇಳಿ ಬೆರಗಾಗುವರು;
ಪೂರ್ವದಲ್ಲಿ ವಾಸವಾಗಿರುವ ಜನರು ಭೀತಿಯಿಂದ ನಡುಗುವರು.
21 ಇದು ಸತ್ಯ, ದುಷ್ಟನ ಮನೆಗೆ ಇದೇ ಸಂಭವಿಸುವುದು.
ದೇವರ ಬಗ್ಗೆ ಗಮನಕೊಡದ ವ್ಯಕ್ತಿಗೆ ಇದೇ ಸಂಭವಿಸುವುದು.”
ಯೋಬನ ಉತ್ತರ
19 ಬಳಿಕ ಯೋಬನು ಹೀಗೆ ಉತ್ತರಕೊಟ್ಟನು:
2 “ಇನ್ನೆಷ್ಟರವರೆಗೆ ನೀವು ನನ್ನನ್ನು ನೋಯಿಸುವಿರಿ?
ನಿಮ್ಮ ಮಾತುಗಳಿಂದ ನನ್ನನ್ನು ಜಜ್ಜುವಿರಿ?
3 ಇದುವರೆಗೆ ನೀವು ನನ್ನನ್ನು ಹತ್ತಾರು ಸಲ ಅವಮಾನ ಮಾಡಿರುವಿರಿ.
ನೀವು ನಾಚಿಕೆಯಿಲ್ಲದೆ ನನ್ನನ್ನು ಎದುರಿಸುತ್ತೀರಿ!
4 ಒಂದುವೇಳೆ ನಾನು ಪಾಪಮಾಡಿದ್ದರೂ
ಆ ತಪ್ಪು ನನ್ನದೇ.
5 ನಿಮ್ಮನ್ನು ನನಗಿಂತಲೂ ಉತ್ತಮರೆಂದು ತೋರಿಸಿಕೊಳ್ಳಬೇಕೆಂದಿದ್ದೀರಿ;
ನನ್ನ ತೊಂದರೆಗಳೇ ನನ್ನನ್ನು ದೋಷಿಯೆಂದು ನಿರೂಪಿಸುತ್ತವೆಯೆಂದು ಭಾವಿಸಿಕೊಂಡಿದ್ದೀರಿ.
6 ಆದರೆ ನನ್ನನ್ನು ದೋಷಿಯೋ ಎಂಬಂತೆ ಮಾಡಿದಾತನು ದೇವರೇ.
ಆತನು ನನಗೆ ವಿರೋಧವಾಗಿ ಬಲೆಯನ್ನು ಒಡ್ಡಿದ್ದಾನೆ.
7 ‘ನನಗೆ ಹಿಂಸೆಯಾಗುತ್ತಿದೆ’ ಎಂದು ಕೂಗಿಕೊಂಡರೂ ನನಗೆ ಯಾರೂ ಉತ್ತರ ಕೊಡುತ್ತಿಲ್ಲ.
ನಾನು ಸಹಾಯಕ್ಕಾಗಿ ಗಟ್ಟಿಯಾಗಿ ಕೂಗಿಕೊಂಡರೂ ನ್ಯಾಯ ದೊರೆಯುತ್ತಿಲ್ಲ.
8 ದೇವರು ನನ್ನ ಮಾರ್ಗವನ್ನು ಮುಚ್ಚಿಬಿಟ್ಟಿದ್ದಾನೆ; ಆದ್ದರಿಂದ ನಾನು ಮುಂದೆ ಹೋಗಲಾರೆ.
ಆತನು ನನ್ನ ಮಾರ್ಗವನ್ನು ಕತ್ತಲೆಯಲ್ಲಿ ಮರೆಮಾಡಿದ್ದಾನೆ.
9 ದೇವರು ನನ್ನ ಗೌರವವನ್ನು ತೆಗೆದುಹಾಕಿದ್ದಾನೆ.
ಆತನು ನನ್ನ ತಲೆಯಿಂದ ಕಿರೀಟವನ್ನು ತೆಗೆದುಹಾಕಿದ್ದಾನೆ.
10 ನಾನು ಸಾಯುವ ತನಕ ದೇವರು ನನ್ನನ್ನು ಎಲ್ಲಾ ಕಡೆಗಳಿಂದಲೂ ಅಪ್ಪಳಿಸಿ ಕೆಡುವುತ್ತಿದ್ದಾನೆ.
ಬೇರುಗಳ ಸಹಿತ ಕೀಳಲ್ಪಟ್ಟ ಮರದ ಹಾಗೆ
ಆತನು ನನ್ನ ನಿರೀಕ್ಷೆಯನ್ನು ತೆಗೆದುಹಾಕಿದ್ದಾನೆ.
11 ದೇವರ ಕೋಪವು ನನಗೆ ವಿರೋಧವಾಗಿ ಉರಿಯುತ್ತಿದೆ.
ಆತನು ನನ್ನನ್ನು ತನ್ನ ಶತ್ರುವೆಂದು ಪರಿಗಣಿಸಿದ್ದಾನೆ.
12 ನನ್ನ ಮೇಲೆ ಆಕ್ರಮಣಮಾಡಲು ದೇವರು ತನ್ನ ಸೈನ್ಯವನ್ನು ಕಳುಹಿಸಿದ್ದಾನೆ.
ಅವರು ನನಗೆ ವಿರುದ್ಧವಾಗಿ ದಿಬ್ಬಹಾಕಿದ್ದಾರೆ.
ಅವರು ನನ್ನ ಗುಡಾರದ ಸುತ್ತಲೂ ಪಾಳೆಯ ಮಾಡಿಕೊಂಡಿದ್ದಾರೆ.
13 “ನನ್ನ ಸಹೋದರರು ನನ್ನನ್ನು ತೊರೆದುಬಿಡುವಂತೆ ದೇವರು ಮಾಡಿದ್ದಾನೆ.
ನಾನು ನನ್ನ ಸ್ನೇಹಿತರಿಗೆಲ್ಲಾ ಅಪರಿಚಿತನಾಗಿದ್ದೇನೆ.
14 ನನ್ನ ಸಂಬಂಧಿಕರು ನನ್ನನ್ನು ತೊರೆದುಬಿಟ್ಟರು.
ನನ್ನ ಸ್ನೇಹಿತರು ನನ್ನನ್ನು ಮರೆತುಬಿಟ್ಟರು.
15 ನನ್ನ ಮನೆಯಲ್ಲಿರುವ ಸಂದರ್ಶಕರೂ ನನ್ನ ದಾಸಿಯರೂ
ನನ್ನನ್ನು ಅಪರಿಚಿತನಂತೆ ಮತ್ತು ಪರದೇಶಿಯಂತೆ ಕಾಣುತ್ತಾರೆ.
16 ನಾನು ನನ್ನ ಸೇವಕನನ್ನು ಕರೆದರೂ ಅವನು ನನಗೆ ಉತ್ತರಿಸುವುದಿಲ್ಲ.
ನಾನು ಸಹಾಯಕ್ಕಾಗಿ ಬೇಡಿಕೊಂಡರೂ ನನ್ನ ಸೇವಕನು ಉತ್ತರ ಕೊಡುವುದಿಲ್ಲ.
17 ನನ್ನ ಹೆಂಡತಿಗೂ ನನ್ನ ಉಸಿರು ಅಸಹ್ಯವಾಗಿದೆ.
ನನ್ನ ಸ್ವಂತ ಮಕ್ಕಳೂ ನನ್ನನ್ನು ಕಂಡು ಹೇಸಿಗೆಪಡುತ್ತಾರೆ.
18 ಚಿಕ್ಕಮಕ್ಕಳೂ ನನ್ನನ್ನು ಗೇಲಿ ಮಾಡುತ್ತಾರೆ;
ನನ್ನನ್ನು ಕಂಡಾಗ ನಗುತ್ತಾರೆ.
19 ನನ್ನನ್ನು ನೋಡಿ ನನ್ನ ಆಪ್ತಸ್ನೇಹಿತರೂ ಅಸಹ್ಯಪಡುತ್ತಾರೆ.
ನಾನು ಯಾರನ್ನು ಪ್ರೀತಿಸಿದೆನೋ ಅವರೂ ನನಗೆ ವಿರೋಧವಾಗಿ ಎದ್ದಿದ್ದಾರೆ.
20 “ನನ್ನ ಶಕ್ತಿಯೆಲ್ಲಾ ಕಳೆದುಹೋಗಿದೆ; ನಾನು ಅಸ್ಥಿಪಂಜರದಂತೆ ಆಗಿರುವೆ.
ನನ್ನಲ್ಲಿ ಸ್ವಲ್ಪ ಜೀವ ಮಾತ್ರ ಉಳಿದುಕೊಂಡಿದೆ.
21 “ನನ್ನ ಸ್ನೇಹಿತರೇ, ಕರುಣಿಸಿರಿ, ನೀವಾದರೂ ನನ್ನನ್ನು ಕರುಣಿಸಿರಿ.
ದೇವರ ಹಸ್ತವು ನನ್ನನ್ನು ಹೊಡೆದಿದೆ.
22 ದೇವರು ಹಿಂಸಿಸುವಂತೆ ನೀವೂ ನನ್ನನ್ನು ಯಾಕೆ ಹಿಂಸಿಸುತ್ತೀರಿ?
ನೀವು ಹಿಂಸೆಪಡಿಸಿದ್ದು ಸಾಕಾಗಲಿಲ್ಲವೇ?
23 “ನನ್ನ ಮಾತುಗಳನ್ನು ನೆನಪಿನಲ್ಲಿಟ್ಟುಕೊಂಡು ಬರೆದಿಟ್ಟರೆ ಎಷ್ಟೋ ಒಳ್ಳೆಯದು.
ಸುರುಳಿಯಲ್ಲಿ ಬರೆದಿಟ್ಟರೆ ಅದೆಷ್ಟೋ ಮೇಲು.
24 ನನ್ನ ಮಾತುಗಳನ್ನು ಸೀಸದ ಹಲಗೆಯ ಮೇಲೆಯೂ ಬಂಡೆಯ ಮೇಲೆಯೂ ಕೆತ್ತಿದರೆ ಎಷ್ಟೋ ಒಳ್ಳೆಯದು.
ಆಗ ಅವು ಶಾಶ್ವತವಾಗಿರುತ್ತವೆ.
25 ಜೀವಸ್ವರೂಪನಾದ ಒಬ್ಬನು ನನ್ನ ಪರವಾಗಿ ವಾದಿಸುತ್ತಾನೆಂದು ನನಗೆ ಗೊತ್ತಿದೆ;
ಕೊನೆಯಲ್ಲಿ, ಆತನು ಭೂಮಿಯ ಮೇಲೆ ನಿಂತುಕೊಂಡು ನನಗೋಸ್ಕರ ವಾದಿಸುವನು.
26 ನನ್ನ ಚರ್ಮವು ನಾಶವಾದ ಮೇಲೆಯೂ
ನಾನು ಈ ದೇಹದಲ್ಲಿ ದೇವರನ್ನು ನೋಡುವೆನು.
27 ನಾನು ಕಣ್ಣಾರೆ ದೇವರನ್ನು ನೋಡುವೆನು.
ಬೇರೆ ಯಾರೂ ಅಲ್ಲದೆ ನಾನೇ ಆತನನ್ನು ನೋಡುವೆನು.
ಈ ನಿರೀಕ್ಷೆಯಿಂದ ನನ್ನ ಹೃದಯವು ಉಲ್ಲಾಸಗೊಂಡಿದೆ.
28 “‘ನಾವು ಯೋಬನಿಗೆ ತೊಂದರೆ ಕೊಡೋಣ!
ಅವನನ್ನು ದೂಷಿಸಲು ಕಾರಣವೊಂದನ್ನು ಹುಡುಕೋಣ’ ಎಂದು ನೀವು ಹೇಳಬಹುದು.
29 ಆದರೆ ನೀವೇ ಖಡ್ಗಕ್ಕೆ ಭಯಪಡಬೇಕಾಗಿದೆ!
ಯಾಕೆಂದರೆ ದೇವರು ದೋಷಿಗಳನ್ನು ಖಡ್ಗದಿಂದ ದಂಡಿಸುತ್ತಾನೆ;
ನ್ಯಾಯತೀರ್ಪಿನ ಕಾಲ ಉಂಟೆಂದು ಆಗ ನಿಮಗೆ ತಿಳಿಯುವುದು.”
ಪೇತ್ರ ಮತ್ತು ಕೊರ್ನೇಲಿಯ
10 ಸೆಜರೇಯ ಪಟ್ಟಣದಲ್ಲಿ ಕೊರ್ನೇಲಿಯ ಎಂಬವನಿದ್ದನು. ರೋಮಿನ ಸೈನ್ಯಕ್ಕೆ ಸೇರಿದ “ಇಟಲಿಯ ದಳ”ದಲ್ಲಿ ಅವನು ಅಧಿಕಾರಿಯಾಗಿದ್ದನು. 2 ಕೊರ್ನೇಲಿಯನು ದೈವಭಕ್ತನಾಗಿದ್ದನು. ಅವನು ಮತ್ತು ಅವನ ಕುಟುಂಬದಲ್ಲಿ ವಾಸವಾಗಿದ್ದ ಇತರ ಎಲ್ಲಾ ಜನರು ನಿಜದೇವರನ್ನು ಆರಾಧಿಸುತ್ತಿದ್ದರು. ಅವನು ಬಡವರಿಗೆ ಧಾರಾಳವಾಗಿ ಹಣವನ್ನು ಕೊಡುತ್ತಿದ್ದನು. ಯಾವಾಗಲೂ ದೇವರಲ್ಲಿ ಪ್ರಾರ್ಥಿಸುತ್ತಿದ್ದನು. 3 ಒಂದು ಮಧ್ಯಾಹ್ನ ಸುಮಾರು ಮೂರು ಗಂಟೆಯಲ್ಲಿ ಕೊರ್ನೇಲಿಯನಿಗೆ ಒಂದು ದರ್ಶನವಾಯಿತು. ಅವನು ಅದನ್ನು ಸ್ಪಷ್ಟವಾಗಿ ಕಂಡನು. ಆ ದರ್ಶನದಲ್ಲಿ ದೇವದೂತನೊಬ್ಬನು ಅವನ ಬಳಿಗೆ ಬಂದು, “ಕೊರ್ನೇಲಿಯನೇ” ಎಂದು ಕರೆದನು.
4 ಕೊರ್ನೇಲಿಯನು ದೇವದೂತನನ್ನು ಕಂಡು ಭಯದಿಂದ “ಸ್ವಾಮೀ, ನಿಮಗೇನು ಬೇಕು?” ಎಂದು ಕೇಳಿದನು.
ಆ ದೇವದೂತನು ಅವನಿಗೆ, “ದೇವರು ನಿನ್ನ ಪ್ರಾರ್ಥನೆಗಳನ್ನು ಕೇಳಿದ್ದಾನೆ. ನೀನು ಬಡವರಿಗೆ ಕೊಟ್ಟವುಗಳನ್ನು ಆತನು ನೋಡಿದ್ದಾನೆ. ದೇವರು ನಿನ್ನನ್ನು ಮೆಚ್ಚಿಕೊಂಡಿದ್ದಾನೆ. 5 ಈಗ ಸೀಮೋನ ಎಂಬ ವ್ಯಕ್ತಿಯನ್ನು ಕರೆದುಕೊಂಡು ಬರುವುದಕ್ಕಾಗಿ ನೀನು ಜನರನ್ನು ಜೊಪ್ಪ ಪಟ್ಟಣಕ್ಕೆ ಕಳುಹಿಸು. ಸೀಮೋನನನ್ನು ‘ಪೇತ್ರ’ ಎಂತಲೂ ಕರೆಯುತ್ತಾರೆ. 6 ಸೀಮೋನನು ಚರ್ಮಕಾರನ ಮನೆಯಲ್ಲಿ ಇಳಿದುಕೊಂಡಿದ್ದಾನೆ. ಅವನ ಮನೆಯು ಸಮುದ್ರ ತೀರದಲ್ಲಿದೆ” ಎಂದು ಹೇಳಿದನು. 7 ಕೊರ್ನೇಲಿಯನೊಂದಿಗೆ ಮಾತಾಡಿದ ದೇವದೂತನು ಹೊರಟುಹೋದನು. ಬಳಿಕ ಕೊರ್ನೇಲಿಯನು ತನ್ನ ಸೇವಕರಲ್ಲಿ ಇಬ್ಬರನ್ನೂ ಒಬ್ಬ ಸೈನಿಕನನ್ನೂ ಕರೆದನು. ಈ ಸೈನಿಕನು ದೈವಭಕ್ತನಾಗಿದ್ದನು. ಕೊರ್ನೇಲಿಯನ ಆಪ್ತಸಹಾಯಕರಲ್ಲಿ ಇವನೂ ಒಬ್ಬನಾಗಿದ್ದನು. 8 ಕೊರ್ನೇಲಿಯನು ಈ ಮೂವರಿಗೆ ಪ್ರತಿಯೊಂದನ್ನೂ ವಿವರಿಸಿದನು. ಬಳಿಕ ಅವರನ್ನು ಜೊಪ್ಪಕ್ಕೆ ಕಳುಹಿಸಿದನು.
9 ಮರುದಿನ ಈ ಜನರು ಜೊಪ್ಪಕ್ಕೆ ಸಮೀಪಿಸಿದಾಗ ಮಧ್ಯಾಹ್ನದ ಸಮಯವಾಗಿತ್ತು. ಆ ಸಮಯದಲ್ಲಿ ಪೇತ್ರನು ಪ್ರಾರ್ಥಿಸುವುದಕ್ಕಾಗಿ ಮಾಳಿಗೆಯ ಮೇಲೆ ಹೋದನು. 10 ಪೇತ್ರನಿಗೆ ಹಸಿವೆಯಾಗಿ ಊಟಮಾಡಬೇಕೆನಿಸಿತು. ಅಲ್ಲಿ ಅವನಿಗಾಗಿ ಅಡಿಗೆ ಮಾಡುತ್ತಿದ್ದರು. ಇತ್ತ, ಪೇತ್ರನಿಗೊಂದು ದರ್ಶನವಾಯಿತು. 11 ತೆರೆದ ಆಕಾಶದಿಂದ ಯಾವುದೋ ಒಂದು ವಸ್ತು ಇಳಿದು ಬರುತ್ತಿರುವುದನ್ನು ಅವನು ಕಂಡನು. ಅದು ದೊಡ್ಡ ತಟ್ಟೆಯಂತಿತ್ತು. ಅದರ ನಾಲ್ಕು ಮೂಲೆಗಳಲ್ಲಿ ಹಗ್ಗಗಳನ್ನು ಕಟ್ಟಿ ಭೂಮಿಯ ಮೇಲೆ ಇಳಿಯಬಿಡಲಾಗಿತ್ತು. 12 ಅದರಲ್ಲಿ ಎಲ್ಲಾ ಬಗೆಯ ಪ್ರಾಣಿಗಳಿದ್ದವು. ಅಂದರೆ ನಡೆದಾಡುವ ಪ್ರಾಣಿಗಳು, ಹರಿದಾಡುವ ಕ್ರಿಮಿಕೀಟಗಳು ಮತ್ತು ಹಾರಾಡುವ ಪಕ್ಷಿಗಳು ಇದ್ದವು. 13 ಆಗ ವಾಣಿಯೊಂದು, “ಪೇತ್ರನೇ, ಎದ್ದೇಳು! ಕೊಯ್ದು ತಿನ್ನು” ಎಂದು ಹೇಳಿತು.
14 ಆದರೆ ಪೇತ್ರನು, “ಪ್ರಭುವೇ, ನಾನು ಹಾಗೆ ಮಾಡಲಾರೆ! ಅಪವಿತ್ರವಾದದ್ದನ್ನು ಮತ್ತು ಅಶುದ್ಧವಾದದ್ದನ್ನು ನಾನೆಂದೂ ತಿಂದವನಲ್ಲ” ಎಂದು ಹೇಳಿದನು.
15 ಆದರೆ ಆ ವಾಣಿಯು ಅವನಿಗೆ, “ದೇವರು ಇವುಗಳನ್ನು ಶುದ್ಧೀಕರಿಸಿದ್ದಾನೆ. ಇವುಗಳನ್ನು ‘ಅಪವಿತ್ರ’ವೆಂದು ಹೇಳಬೇಡ” ಎಂದು ಮತ್ತೆ ಹೇಳಿತು. 16 ಹೀಗೆ ಮೂರು ಸಾರಿ ಆಯಿತು. ಬಳಿಕ ಅವುಗಳನ್ನೆಲ್ಲ ಆಕಾಶಕ್ಕೆ ಹಿಂತೆಗೆದುಕೊಳ್ಳಲಾಯಿತು. 17 ಪೇತ್ರನು ತಾನು ಕಂಡ ಈ ದರ್ಶನದ ಅರ್ಥವೇನಿರಬಹುದೆಂದು ಆಶ್ಚರ್ಯಗೊಂಡನು.
ಅಷ್ಟರಲ್ಲಿಯೇ, ಕೊರ್ನೇಲಿಯನು ಕಳುಹಿಸಿದ್ದ ಜನರು ಸೀಮೋನನ ಮನೆಯನ್ನು ಕಂಡುಕೊಂಡಿದ್ದರು. ಅವರು ಬಾಗಿಲ ಬಳಿಯಲ್ಲಿ ನಿಂತುಕೊಂಡು, 18 “ಸೀಮೋನ್ ಪೇತ್ರನು ಇಲ್ಲಿ ವಾಸವಾಗಿರುವನೇ?” ಎಂದು ಕೇಳಿದರು.
19 ಈ ದರ್ಶನದ ಬಗ್ಗೆ ಪೇತ್ರನು ಇನ್ನೂ ಆಲೋಚಿಸುತ್ತಿದ್ದನು. ಆದರೆ ಪವಿತ್ರಾತ್ಮನು ಅವನಿಗೆ, “ಇಗೋ, ನಿನ್ನನ್ನು ಮೂರು ಜನರು ಹುಡುಕುತ್ತಾ ಬಂದಿದ್ದಾರೆ. 20 ನೀನೆದ್ದು ಕೆಳಗಿಳಿದು ಅವರೊಂದಿಗೆ ಹೋಗು. ಯಾವ ಪ್ರಶ್ನೆಗಳನ್ನೂ ಕೇಳಬೇಡ. ನಾನೇ ಅವರನ್ನು ನಿನ್ನ ಬಳಿಗೆ ಕಳುಹಿಸಿದ್ದೇನೆ” ಎಂದು ಹೇಳಿದನು. 21 ಆದ್ದರಿಂದ ಪೇತ್ರನು ಕೆಳಗಿಳಿದು ಆ ಜನರ ಬಳಿಗೆ ಹೋಗಿ, “ನೀವು ಹುಡುಕುತ್ತಿರುವ ವ್ಯಕ್ತಿ ನಾನೇ, ನೀವು ಇಲ್ಲಿಗೇಕೆ ಬಂದಿರಿ?” ಎಂದು ಕೇಳಿದನು.
22 ಆ ಜನರು, “ಕೊರ್ನೇಲಿಯ ಎಂಬ ಒಬ್ಬ ಸೇನಾಧಿಕಾರಿ ಇದ್ದಾನೆ. ಅವನು ಧಾರ್ಮಿಕ ವ್ಯಕ್ತಿ. ಅವನು ದೇವರನ್ನು ಆರಾಧಿಸುತ್ತಾನೆ. ಯೆಹೂದ್ಯ ಜನರೆಲ್ಲರೂ ಅವನನ್ನು ಗೌರವಿಸುತ್ತಾರೆ. ನಿನ್ನನ್ನು ತನ್ನ ಮನೆಗೆ ಆಹ್ವಾನಿಸಿ ನೀನು ಹೇಳುವ ಸಂಗತಿಗಳನ್ನು ಕೇಳಬೇಕೆಂದು ದೇವದೂತನೊಬ್ಬನು ಕೊರ್ನೇಲಿಯನಿಗೆ ತಿಳಿಸಿದ್ದಾನೆ” ಎಂದು ಹೇಳಿದರು. 23 ಪೇತ್ರನು ಅವರನ್ನು ಒಳಗೆ ಕರೆದು, ಆ ರಾತ್ರಿ ಅಲ್ಲೇ ಇರಬೇಕೆಂದು ಕೇಳಿಕೊಂಡನು.
ಮರುದಿನ ಪೇತ್ರನು ಸಿದ್ಧನಾಗಿ, ಆ ಮೂವರೊಂದಿಗೆ ಹೊರಟನು. ಜೊಪ್ಪದ ವಿಶ್ವಾಸಿಗಳಲ್ಲಿ ಕೆಲವರು ಅವನೊಂದಿಗೆ ಹೋದರು.
Kannada Holy Bible: Easy-to-Read Version. All rights reserved. © 1997 Bible League International