Old/New Testament
ಒಳ್ಳೆಯ ಮನುಷ್ಯನಾದ ಯೋಬನು
1 ಊಚ್ ದೇಶದಲ್ಲಿ ಯೋಬನೆಂಬ ಒಬ್ಬ ಮನುಷ್ಯನಿದ್ದನು. ಅವನು ದೇವರಲ್ಲಿ ಭಯಭಕ್ತಿಯುಳ್ಳವನಾಗಿದ್ದನು; ಕೆಟ್ಟಕಾರ್ಯಗಳನ್ನು ಮಾಡದೆ ನಿರ್ದೋಷಿಯೂ ಯಥಾರ್ಥವಂತನೂ ಆಗಿದ್ದನು. 2 ಯೋಬನಿಗೆ ಏಳು ಗಂಡುಮಕ್ಕಳೂ ಮೂರು ಹೆಣ್ಣುಮಕ್ಕಳೂ ಇದ್ದರು. 3 ಯೋಬನಿಗೆ ಏಳು ಸಾವಿರ ಕುರಿಗಳೂ ಮೂರು ಸಾವಿರ ಒಂಟೆಗಳೂ ಒಂದು ಸಾವಿರ ಎತ್ತುಗಳೂ[a] ಮತ್ತು ಐನೂರು ಹೆಣ್ಣುಕತ್ತೆಗಳೂ ಇದ್ದವು. ಅವನಿಗೆ ಅನೇಕ ಮಂದಿ ಸೇವಕರಿದ್ದರು. ಪೂರ್ವ ದೇಶದವರಲ್ಲೆಲ್ಲಾ ಯೋಬನು ಮಹಾ ಐಶ್ವರ್ಯವಂತನಾಗಿದ್ದನು.
4 ಯೋಬನ ಗಂಡುಮಕ್ಕಳು ಯಾವಾಗಲೂ ಸರದಿಯ ಪ್ರಕಾರ ಔತಣಕೂಟಗಳನ್ನು ತಮ್ಮ ಮನೆಗಳಲ್ಲಿ ಏರ್ಪಡಿಸುತ್ತಿದ್ದರು; ಆ ಔತಣಕೂಟಗಳಿಗೆ ತಮ್ಮ ಸಹೋದರಿಯರನ್ನು ಸಹ ಆಹ್ವಾನಿಸುತ್ತಿದ್ದರು. 5 ಪ್ರತಿಯೊಂದು ಔತಣಕೂಟದ ದಿನಗಳು ಮುಗಿದ ಮೇಲೆ ಯೋಬನು ಅವರನ್ನು ಶುದ್ಧೀಕರಿಸುತ್ತಿದ್ದನು. ಅದಕ್ಕಾಗಿ ಅವನು ಮುಂಜಾನೆಯಲ್ಲಿಯೇ ಎದ್ದು ತನ್ನ ಪ್ರತಿಯೊಬ್ಬ ಮಕ್ಕಳ ಹೆಸರಿನಲ್ಲಿ ಒಂದೊಂದು ಸರ್ವಾಂಗಹೋಮವನ್ನು ಅರ್ಪಿಸುತ್ತಿದ್ದನು. ಯಾಕೆಂದರೆ, “ಒಂದುವೇಳೆ ನನ್ನ ಮಕ್ಕಳು ಹೃದಯದಲ್ಲಿ ದೇವರನ್ನು ದೂಷಿಸಿ ಪಾಪಮಾಡಿರಬಹುದು” ಎಂಬುದು ಯೋಬನ ಆಲೋಚನೆಯಾಗಿತ್ತು. ತನ್ನ ಮಕ್ಕಳ ಪಾಪಕ್ಷಮೆಗಾಗಿ ಯೋಬನು ಯಾವಾಗಲೂ ಹೀಗೆ ಮಾಡುತ್ತಿದ್ದನು.
6 ದೇವದೂತರು ಯೆಹೋವನನ್ನು ಭೇಟಿಯಾಗುವ ದಿನ ಬಂದಿತು. ಆಗ ಸೈತಾನನು ಸಹ ಆ ದೂತರೊಂದಿಗೆ ಬಂದನು. 7 ಯೆಹೋವನು ಸೈತಾನನಿಗೆ, “ನೀನು ಎಲ್ಲಿಗೆ ಹೋಗಿದ್ದೆ?” ಎಂದು ಕೇಳಿದನು.
ಸೈತಾನನು ಯೆಹೋವನಿಗೆ, “ನಾನು ಭೂಮಿಯ ಮೇಲೆಲ್ಲಾ ಅಲೆದಾಡುತ್ತಿದ್ದೆ” ಎಂದು ಉತ್ತರಕೊಟ್ಟನು.
8 ಆಗ ಯೆಹೋವನು, “ನನ್ನ ಸೇವಕನಾದ ಯೋಬನ ಬಗ್ಗೆ ಆಲೋಚಿಸಿದೆಯಾ? ಭೂಮಿಯ ಮೇಲೆ ಅವನಂತೆ ಯಾರೂ ಇಲ್ಲ. ಅವನು ದೇವರಲ್ಲಿ ಭಯಭಕ್ತಿಯುಳ್ಳವನಾಗಿದ್ದಾನೆ; ಕೆಟ್ಟಕಾರ್ಯಗಳನ್ನು ಮಾಡದೆ ನಿರ್ದೋಷಿಯೂ ಯಥಾರ್ಥವಂತನೂ ಆಗಿದ್ದಾನೆ” ಎಂದು ಹೇಳಿದನು.
9 ಅದಕ್ಕೆ ಸೈತಾನನು, “ಹೌದು! ಯೋಬನು ದೇವರಲ್ಲಿ ಭಯಭಕ್ತಿಯಿಟ್ಟಿರುವುದಕ್ಕೆ ಒಳ್ಳೆಯ ಕಾರಣವೊಂದಿದೆ! 10 ನೀನು ಅವನನ್ನೂ ಅವನ ಕುಟುಂಬವನ್ನೂ ಅವನ ಆಸ್ತಿಯನ್ನೂ ಸಂರಕ್ಷಿಸುತ್ತಿರುವೆ. ಅವನ ಕೆಲಸಕಾರ್ಯಗಳನ್ನು ಸಫಲಪಡಿಸುತ್ತಿರುವುದರಿಂದ ಅವನ ಸಂಪತ್ತು ದೇಶದಲ್ಲೆಲ್ಲಾ ವೃದ್ಧಿಯಾಗುತ್ತಿದೆ. 11 ಆದರೆ ಈಗ ನೀನು ನಿನ್ನ ಕೈಚಾಚಿ ಅವನ ಆಸ್ತಿಯನ್ನೆಲ್ಲಾ ನಾಶಮಾಡು. ಆಗ ಅವನು ನಿನ್ನ ಮುಖದೆದುರಿಗೆ ನಿನ್ನನ್ನು ಖಂಡಿತವಾಗಿ ದೂಷಿಸುವನು” ಎಂದು ಉತರಕೊಟ್ಟನು.
12 ಯೆಹೋವನು ಸೈತಾನನಿಗೆ, “ಸರಿ, ಯೋಬನ ಆಸ್ತಿಗೆಲ್ಲಾ ನೀನು ಏನು ಬೇಕಾದರೂ ಮಾಡು. ಆದರೆ ಅವನ ದೇಹಕ್ಕೆ ಮಾತ್ರ ನೋವನ್ನು ಮಾಡಬೇಡ” ಎಂದು ಹೇಳಿದನು.
ಬಳಿಕ ಸೈತಾನನು ಯೆಹೋವನ ಬಳಿಯಿಂದ ಹೊರಟುಹೋದನು.
ಯೋಬನಿಗಾದ ಸರ್ವನಾಶ
13 ಒಂದು ದಿನ, ಯೋಬನ ಗಂಡುಹೆಣ್ಣುಮಕ್ಕಳು ತಮ್ಮ ಹಿರಿಯ ಅಣ್ಣನ ಮನೆಯಲ್ಲಿ ಊಟಮಾಡುತ್ತಾ ದ್ರಾಕ್ಷಾರಸ ಕುಡಿಯುತ್ತಾ ಇದ್ದರು. 14 ಆಗ ಸೇವಕನೊಬ್ಬನು ಯೋಬನ ಬಳಿಗೆ ಬಂದು, “ಎತ್ತುಗಳು ಉಳುತ್ತಿದ್ದವು; ಕತ್ತೆಗಳು ಸಮೀಪದಲ್ಲಿ ಹುಲ್ಲನ್ನು ಮೇಯುತ್ತಿದ್ದವು. 15 ಆದರೆ ಶೆಬ ದೇಶದವರು ನಮ್ಮ ಮೇಲೆ ಆಕ್ರಮಣ ಮಾಡಿ ನಿನ್ನ ಪಶುಗಳನ್ನೆಲ್ಲಾ ಹೊಡೆದುಕೊಂಡು ಹೋದರು; ನಿನ್ನ ಸೇವಕರುಗಳನ್ನೆಲ್ಲಾ ಕೊಂದು ಹಾಕಿದರು; ನಾನೊಬ್ಬನು ಮಾತ್ರ ತಪ್ಪಿಸಿಕೊಂಡೆನು! ಈ ವಿಷಯವನ್ನು ತಿಳಿಸುವುದಕ್ಕಾಗಿಯೇ ನಾನು ಬಂದೆನು” ಎಂದು ಹೇಳಿದನು.
16 ಆ ಸೇವಕನು ಮಾತಾಡುತ್ತಿರುವಾಗಲೇ ಮತ್ತೊಬ್ಬ ಸೇವಕನು ಬಂದು ಯೋಬನಿಗೆ, “ಆಕಾಶದಿಂದ ಸಿಡಿಲೊಡೆದು ನಿನ್ನ ಕುರಿಗಳನ್ನೂ ಸೇವಕರುಗಳನ್ನೂ ಸಂಪೂರ್ಣವಾಗಿ ಸುಟ್ಟುಹಾಕಿತು. ನಾನೊಬ್ಬನು ಮಾತ್ರ ತಪ್ಪಿಸಿಕೊಂಡೆನು! ಇದನ್ನು ತಿಳಿಸುವುದಕ್ಕಾಗಿಯೇ ನಾನು ಬಂದೆನು” ಎಂದು ಹೇಳಿದನು.
17 ಆ ಸೇವಕನು ಮಾತಾಡುತ್ತಿರುವಾಗಲೇ ಮತ್ತೊಬ್ಬ ಸೇವಕನು ಬಂದು ಯೋಬನಿಗೆ, “ಕಸ್ದೀಯರು ಮೂರು ಗುಂಪುಗಳಾಗಿ ಬಂದು, ನಮ್ಮ ಮೇಲೆ ಆಕ್ರಮಣಮಾಡಿ, ಒಂಟೆಗಳನ್ನು ಹೊಡೆದುಕೊಂಡು ಹೋದರು! ಅಲ್ಲದೆ ನಿನ್ನ ಸೇವಕರುಗಳನ್ನು ಕೊಂದುಹಾಕಿದರು. ನಾನೊಬ್ಬನು ಮಾತ್ರ ತಪ್ಪಿಸಿಕೊಂಡೆನು. ಇದನ್ನು ನಿನಗೆ ತಿಳಿಸುವುದಕ್ಕಾಗಿಯೇ ಬಂದೆನು” ಎಂದು ಹೇಳಿದನು.
18 ಮೂರನೆಯ ಸೇವಕನು ಮಾತಾಡುತ್ತಿರುವಾಗಲೇ ಮತ್ತೊಬ್ಬ ಸೇವಕನು ಬಂದು ಯೋಬನಿಗೆ, “ನಿನ್ನ ಗಂಡು ಹೆಣ್ಣುಮಕ್ಕಳು ತಮ್ಮ ಹಿರಿಯ ಅಣ್ಣನ ಮನೆಯಲ್ಲಿ ಊಟ ಮಾಡುತ್ತಾ ದ್ರಾಕ್ಷಾರಸ ಕುಡಿಯುತ್ತಾ ಇದ್ದರು. 19 ಆಗ ಇದ್ದಕ್ಕಿದಂತೆ ಮರುಭೂಮಿಯಿಂದ ಬಿರುಗಾಳಿ ಬೀಸಿದ್ದರಿಂದ ಮನೆಯು ನಿನ್ನ ಗಂಡು ಹೆಣ್ಣುಮಕ್ಕಳ ಮೇಲೆ ಕುಸಿದು ಬಿದ್ದಿತು; ಅವರೆಲ್ಲಾ ಸತ್ತುಹೋದರು. ನಾನೊಬ್ಬನು ಮಾತ್ರ ತಪ್ಪಿಸಿಕೊಂಡೆನು! ಇದನ್ನು ನಿನಗೆ ತಿಳಿಸುವುದಕ್ಕಾಗಿಯೇ ಬಂದೆನು” ಎಂದು ಹೇಳಿದನು.
20 ಆಗ ಯೋಬನು ತನ್ನ ಮೇಲಂಗಿಯನ್ನು ಹರಿದುಕೊಂಡು, ತಲೆಯನ್ನು ಬೋಳಿಸಿಕೊಂಡು, ನೆಲದ ಮೇಲೆ ಮೊಣಕಾಲೂರಿ ದೇವರಿಗೆ ಸ್ತೋತ್ರಸಲ್ಲಿಸುತ್ತಾ,
21 “ನಾನು ತಾಯಿಯ ಗರ್ಭದಿಂದ ಜನಿಸಿದಾಗ
ಏನೂ ಇಲ್ಲದವನಾಗಿದ್ದೆನು;
ಈ ಲೋಕವನ್ನು ಬಿಟ್ಟು ಹೋಗುವಾಗಲೂ
ಏನೂ ಇಲ್ಲದವನಾಗಿಯೇ ಹೋಗುವೆನು.
ಯೆಹೋವನೇ ಕೊಟ್ಟನು,
ಯೆಹೋವನೇ ತೆಗೆದುಕೊಂಡನು.
ಆತನ ನಾಮಕ್ಕೆ ಸ್ತೋತ್ರವಾಗಲಿ!” ಎಂದು ಹೇಳಿದನು.
22 ಇಷ್ಟೆಲ್ಲಾ ಕಳೆದುಕೊಂಡರೂ ಯೋಬನು ಪಾಪ ಮಾಡಲಿಲ್ಲ; ದೇವರನ್ನೂ ದೂಷಿಸಲಿಲ್ಲ.
ಯೋಬನಿಗೆ ಎರಡನೆ ಪರೀಕ್ಷೆ
2 ಮತ್ತೊಂದು ದಿನ ಯೆಹೋವನನ್ನು ಭೇಟಿಯಾಗಲು ದೇವದೂತರು ಬಂದರು. ಸೈತಾನನು ಸಹ ಯೆಹೋವನನ್ನು ಭೇಟಿಯಾಗಲು ಅವರೊಂದಿಗೆ ಬಂದನು. 2 ಯೆಹೋವನು ಸೈತಾನನಿಗೆ, “ನೀನು ಎಲ್ಲಿಂದ ಬರುತ್ತಿರುವೆ?” ಎಂದು ಕೇಳಿದನು.
ಸೈತಾನನು ಯೆಹೋವನಿಗೆ, “ನಾನು ಭೂಮಿಯ ಮೇಲೆಲ್ಲಾ ಅಲೆದಾಡುತ್ತಾ ಬಂದೆನು” ಎಂದು ಉತ್ತರಕೊಟ್ಟನು.
3 ಅದಕ್ಕೆ ಯೆಹೋವನು, “ನನ್ನ ಸೇವಕನಾದ ಯೋಬನನ್ನು ಗಮನಿಸಿದೆಯಾ? ಭೂಮಿಯ ಮೇಲೆ ಅವನಂತೆ ಯಾರೂ ಇಲ್ಲ. ಅವನು ದೇವರಲ್ಲಿ ಭಯಭಕ್ತಿಯುಳ್ಳವನಾಗಿದ್ದಾನೆ; ಕೆಟ್ಟಕಾರ್ಯಗಳನ್ನು ಮಾಡದೆ ನಿರ್ದೋಷಿಯೂ ಯಥಾರ್ಥವಂತನೂ ಆಗಿದ್ದಾನೆ. ನಿಷ್ಕಾರಣವಾಗಿ ಅವನನ್ನು ನಾಶಪಡಿಸುವಂತೆ ನೀನು ನನ್ನನ್ನು ಒತ್ತಾಯಪಡಿಸಿದೆ. ಆದರೆ ಅವನು ನನಗೆ ಇನ್ನೂ ನಂಬಿಗಸ್ತನಾಗಿದ್ದಾನೆ” ಎಂದು ಹೇಳಿದನು.
4 ಅದಕ್ಕೆ ಸೈತಾನನು, “ಚರ್ಮಕ್ಕೆ ಚರ್ಮ![b] ಎಂಬಂತೆ ಮನುಷ್ಯನು ತನ್ನ ಪ್ರಾಣವನ್ನು ಉಳಿಸಿಕೊಳ್ಳುವುದಕ್ಕೆ ತನ್ನ ಸರ್ವಸ್ವವನ್ನೂ ಕೊಡುವನು. 5 ಆದರೆ ನೀನು ಕೈಚಾಚಿ ಅವನ ಮಾಂಸವನ್ನೂ ಮೂಳೆಗಳನ್ನೂ ಹೊಡೆ. ಅವನು ನಿನ್ನ ಮುಖದೆದುರಿಗೆ ನಿನ್ನನ್ನು ಖಂಡಿತವಾಗಿ ದೂಷಿಸುವನು” ಎಂದು ಉತ್ತರಕೊಟ್ಟನು.
6 ಅದಕ್ಕೆ ಯೆಹೋವನು ಸೈತಾನನಿಗೆ, “ಸರಿ, ಯೋಬನನ್ನು ನಿನ್ನ ಕೈಗೆ ಒಪ್ಪಿಸಿದ್ದೇನೆ; ಆದರೆ ಅವನ ಪ್ರಾಣವನ್ನು ಮಾತ್ರ ತೆಗೆಯಬೇಡ” ಎಂದು ಅಪ್ಪಣೆಕೊಟ್ಟನು.
7 ಆಗ, ಸೈತಾನನು ಯೆಹೋವನ ಬಳಿಯಿಂದ ಹೊರಟುಹೋಗಿ ಯೋಬನಿಗೆ ಬಾಧಿಸುವ ಕುರುಗಳನ್ನು ಹುಟ್ಟಿಸಿದನು. ಯೋಬನ ದೇಹದ ಮೇಲೆಲ್ಲಾ ಅಂದರೆ ಅವನ ಪಾದದಿಂದಿಡಿದು ತಲೆಯ ಮೇಲ್ಭಾಗದವರೆಗೂ ಬಾಧಿಸುವ ಕುರುಗಳು ತುಂಬಿಕೊಂಡವು. 8 ಯೋಬನು ಬೂದಿಯಲ್ಲಿ ಕುಳಿತುಕೊಂಡು ತನ್ನ ಕುರುಗಳನ್ನು ಮಡಕೆಯ ಚೂರಿನಿಂದ ಕೆರೆದುಕೊಳ್ಳುತ್ತಿದ್ದನು. 9 ಯೋಬನ ಹೆಂಡತಿಯು ಅವನಿಗೆ, “ನೀನು ಇನ್ನೂ ದೇವರಿಗೆ ನಂಬಿಗಸ್ತನಾಗಿರುವೆಯೋ? ದೇವರನ್ನು ದೂಷಿಸಿ ಸಾಯಿ” ಎಂದು ಹೇಳಿದಳು.
10 ಯೋಬನು ತನ್ನ ಹೆಂಡತಿಗೆ, “ನೀನು ಮೂರ್ಖಳಂತೆ ಮಾತಾಡುತ್ತಿರುವೆ! ದೇವರು ಒಳ್ಳೆಯವುಗಳನ್ನು ಕೊಡುವಾಗ ನಾವು ಅವುಗಳನ್ನು ಸ್ವೀಕರಿಸಿಕೊಳ್ಳುತ್ತೇವೆ. ಆತನು ಕೆಟ್ಟದ್ದನ್ನು ಕೊಡುವಾಗ ನಾವು ಸ್ವೀಕರಿಸಿಕೊಳ್ಳಬಾರದೋ?” ಎಂದು ಉತ್ತರಕೊಟ್ಟನು. ಈ ಸಂಕಟದಲ್ಲಿಯೂ ಯೋಬನು ಪಾಪ ಮಾಡಲಿಲ್ಲ ಹಾಗೂ ದೇವರ ವಿರುದ್ಧ ಯಾವ ಮಾತನ್ನು ಆಡಲಿಲ್ಲ.
ಯೋಬನ ಮೂವರು ಸ್ನೇಹಿತರು
11 ಯೋಬನ ಮೂವರು ಗೆಳೆಯರು ಯಾರೆಂದರೆ: ತೇಮಾನಿನ ಎಲೀಫಜನು, ಶೂಹದ ಬಿಲ್ದದನು ಮತ್ತು ನಾಮಾಥದ ಚೋಫರನು. ಯೋಬನಿಗೆ ಸಂಭವಿಸಿದ ಆಪತ್ತುಗಳ ಬಗ್ಗೆ ಈ ಮೂವರು ಗೆಳೆಯರು ಕೇಳಿದಾಗ ತಮ್ಮ ಮನೆಯಿಂದ ಹೊರಟು ಒಟ್ಟಾಗಿ ಭೇಟಿಯಾದರು. ಯೋಬನ ಬಳಿಗೆ ಹೋಗಿ ಅನುತಾಪ ಸೂಚಿಸಿ ಸಂತೈಸಲು ಒಪ್ಪಿಕೊಂಡರು. 12 ಆದರೆ ಆ ಮೂವರು ಸ್ನೇಹಿತರು ಬಹು ದೂರದಿಂದ ಯೋಬನನ್ನು ಕಂಡಾಗ ಅವನ ಗುರುತೇ ಹಿಡಿಯಲಾರದೆ ಗಟ್ಟಿಯಾಗಿ ಅಳತೊಡಗಿದರು; ತಮ್ಮ ತಮ್ಮ ಮೇಲಂಗಿಗಳನ್ನು ಹರಿದುಕೊಂಡು ಮಣ್ಣನ್ನು ಮೇಲಕ್ಕೆ ತೂರಿ ತಮ್ಮ ತಲೆಗಳ ಮೇಲೆ ಸುರಿಸಿಕೊಂಡರು. 13 ಬಳಿಕ ಆ ಮೂವರು ಸ್ನೇಹಿತರು ಏಳುದಿನ ಹಗಲಿರುಳು ಯೋಬನೊಂದಿಗೆ ನೆಲದ ಮೇಲೆ ಕುಳಿತುಕೊಂಡಿದ್ದರು. ಯೋಬನು ವಿಪರೀತ ನೋವಿನಲ್ಲಿದ್ದ ಕಾರಣ ಅವರು ಒಂದು ಮಾತನ್ನೂ ಅವನಿಗೆ ಹೇಳಲಿಲ್ಲ.
22 ಈಜಿಪ್ಟಿನವರು ತಮಗೆ ಗೊತ್ತಿದ್ದ ಸಕಲ ವಿದ್ಯೆಗಳನ್ನು ಮೋಶೆಗೆ ಕಲಿಸಿದರು. ಅವನು ವಿಷಯಗಳನ್ನು ಹೇಳುವುದರಲ್ಲಿಯೂ ಕಾರ್ಯಗಳನ್ನು ಮಾಡುವು ದರಲ್ಲಿಯೂ ಬಹು ಸಮರ್ಥನಾಗಿದ್ದನು.
23 “ಮೋಶೆಗೆ ನಲವತ್ತು ವರ್ಷ ವಯಸ್ಸಾಗಿದ್ದಾಗ, ತನ್ನ ಸಹೋದರರಾದ ಯೆಹೂದ್ಯ ಜನರನ್ನು ಸಂದರ್ಶಿಸುವುದು ಒಳ್ಳೆಯದೆಂದು ಯೋಚಿಸಿಕೊಂಡನು. 24 ಈಜಿಪ್ಟಿನವನೊಬ್ಬನು ಯೆಹೂದ್ಯನೊಬ್ಬನಿಗೆ ಅನ್ಯಾಯ ಮಾಡಿ ಹಿಂಸಿಸುತ್ತಿರುವುದನ್ನು ಕಂಡ ಮೋಶೆಯು ಆ ಈಜಿಪ್ಟಿನವನಿಗೆ ಬಲವಾಗಿ ಹೊಡೆದು ಕೊಂದುಹಾಕಿದನು. 25 ತಮ್ಮನ್ನು ರಕ್ಷಿಸಲು ದೇವರು ಮೋಶೆಯನ್ನು ಉಪಯೋಗಿಸುತ್ತಿದ್ದಾನೆ ಎಂಬುದಾಗಿ ತನ್ನ ಯೆಹೂದ್ಯ ಸಹೋದರರು ಅರ್ಥಮಾಡಿಕೊಳ್ಳುತ್ತಾರೆ ಎಂದು ಮೋಶೆ ಭಾವಿಸಿಕೊಂಡನು. ಆದರೆ ಅವರು ಅರ್ಥಮಾಡಿಕೊಳ್ಳಲಿಲ್ಲ.
26 “ಮರುದಿನ, ಇಬ್ಬರು ಯೆಹೂದ್ಯರು ಹೊಡೆದಾಡುವುದನ್ನು ಮೋಶೆಯು ಕಂಡನು. ಅವರನ್ನು ಸಮಾಧಾನಪಡಿಸಲು ಅವನು ಪ್ರಯತ್ನಿಸಿ ‘ಗೆಳೆಯರೇ, ನೀವು ಸಹೋದರರಾಗಿದ್ದೀರಿ! ನೀವು ಒಬ್ಬರಿಗೊಬ್ಬರು ಅನ್ಯಾಯ ಮಾಡುವುದೇಕೆ?’ ಎಂದು ಅವರನ್ನು ಕೇಳಿದನು. 27 ಮತ್ತೊಬ್ಬನಿಗೆ ಅನ್ಯಾಯ ಮಾಡುತ್ತಿದ್ದವನು ಮೋಶೆಯನ್ನು ಹಿಂದಕ್ಕೆ ತಳ್ಳಿ, ‘ನಿನ್ನನ್ನು ನಮ್ಮ ಅಧಿಪತಿ ಎಂದಾಗಲಿ ನ್ಯಾಯಾಧೀಶ ಎಂದಾಗಲಿ ಯಾರಾದರೂ ಹೇಳಿದರೇ? ಇಲ್ಲ! 28 ನಿನ್ನೆ ಆ ಈಜಿಪ್ಟಿನವನನ್ನು ಕೊಂದಂತೆ ನನ್ನನ್ನೂ ಕೊಲ್ಲುವೆಯಾ?’(A) ಎಂದು ಹೇಳಿದನು. 29 ಇದನ್ನು ಕೇಳಿದ್ದೇ ಮೋಶೆಯು ಈಜಿಪ್ಟನ್ನು ಬಿಟ್ಟು ಮಿದ್ಯಾನ್ಯರ ನಾಡಿಗೆ ಹೋಗಿ ವಿದೇಶಿಯವನಂತೆ ವಾಸಿಸತೊಡಗಿದನು. ಅಲ್ಲಿ ಅವನಿಗೆ ಇಬ್ಬರು ಗಂಡುಮಕ್ಕಳು ಹುಟ್ಟಿದರು.
30 “ನಲವತ್ತು ವರ್ಷಗಳಾದ ಮೇಲೆ ಮೋಶೆಯು ಸಿನಾಯ್ ಬೆಟ್ಟದ ಸಮೀಪದಲ್ಲಿರುವ ಮರಳುಗಾಡಿನಲ್ಲಿದ್ದಾಗ ಉರಿಯುತ್ತಿದ್ದ ಪೊದೆಯ ಜ್ವಾಲೆಯಲ್ಲಿ ದೇವದೂತನೊಬ್ಬನು ಕಾಣಿಸಿಕೊಂಡನು. 31 ಮೋಶೆಯು ಆಶ್ಚರ್ಯದಿಂದ ನೋಡಲು ಸಮೀಪಕ್ಕೆ ಹೋದನು. ಆಗ ಮೋಶೆಗೆ ವಾಣಿಯೊಂದು ಕೇಳಿಸಿತು. ಅದು ಪ್ರಭುವಿನ ವಾಣಿಯಾಗಿತ್ತು. 32 ಪ್ರಭುವು ಅವನಿಗೆ, ‘ನಾನೇ ನಿನ್ನ ಪಿತೃಗಳ ದೇವರು. ನಾನೇ ಅಬ್ರಹಾಮನ ದೇವರು, ಇಸಾಕನ ದೇವರು ಮತ್ತು ಯಾಕೋಬನ ದೇವರು’(B) ಎಂದು ಹೇಳಿದನು. ಮೋಶೆಯು ಭಯದಿಂದ ನಡುಗ ತೊಡಗಿದನು; ಪೊದೆಯನ್ನು ನೋಡಲು ಹೆದರಿದನು.
33 “ಪ್ರಭುವು ಅವನಿಗೆ, ‘ನಿನ್ನ ಪಾದರಕ್ಷೆಗಳನ್ನು ತೆಗೆದುಹಾಕು, ಈಗ ನೀನು ನಿಂತುಕೊಂಡಿರುವ ಸ್ಥಳ ಪರಿಶುದ್ಧವಾದದ್ದು. 34 ಜನರು ಈಜಿಪ್ಟಿನಲ್ಲಿ ಬಹಳ ಸಂಕಟಪಡುತ್ತಿರುವುದನ್ನು ನಾನು ನೋಡಿದ್ದೇನೆ; ನನ್ನ ಜನರ ಗೋಳಾಟವನ್ನು ನಾನು ಕೇಳಿದ್ದೇನೆ. ನಾನು ಅವರನ್ನು ರಕ್ಷಿಸುವುದಕ್ಕಾಗಿ ಇಳಿದುಬಂದಿದ್ದೇನೆ. ಮೋಶೆಯೇ, ಈಗ ನಾನು ನಿನ್ನನ್ನು ಈಜಿಪ್ಟಿಗೆ ಕಳುಹಿಸುತ್ತಿದ್ದೇನೆ’(C) ಎಂದು ಹೇಳಿದನು.
35 “ಆ ಯೆಹೂದ್ಯರಿಂದ ತಿರಸ್ಕೃತನಾದವನೇ ಈ ಮೋಶೆ. ಅವರು ಅವನಿಗೆ, ‘ನಿನ್ನನ್ನು ನಮ್ಮ ಅಧಿಪತಿ ಎಂದಾಗಲಿ ನ್ಯಾಯಾಧೀಶ ಎಂದಾಗಲಿ ನಿನಗೆ ಯಾರಾದರೂ ಹೇಳಿದರೇ?’ ಎಂದು ಪ್ರಶ್ನಿಸಿದ್ದರು. ಆದರೆ ದೇವರು ಅಧಿಪತಿಯನ್ನಾಗಿಯೂ ವಿಮೋಚಕನನ್ನಾಗಿಯೂ ಕಳುಹಿಸಿದ್ದು ಆ ಮೋಶೆಯನ್ನೇ. ದೇವರು ತನ್ನ ದೂತನ ಮೂಲಕವಾಗಿ ಮೋಶೆಯನ್ನು ಕಳುಹಿಸಿದನು. ಉರಿಯುವ ಪೊದೆಯಲ್ಲಿ ಮೋಶೆಯು ಕಂಡದ್ದು ಈ ದೇವದೂತನನ್ನೇ. 36 ಆದ್ದರಿಂದ ಮೋಶೆಯು ಜನರನ್ನು ಈಜಿಪ್ಟಿನಿಂದ ಕರೆದುಕೊಂಡು ಬಂದನು. ಅವನು ಸೂಚಕಕಾರ್ಯಗಳನ್ನೂ ಅದ್ಭುತಕಾರ್ಯಗಳನ್ನೂ ಈಜಿಪ್ಟಿನಲ್ಲಿಯೂ ಕೆಂಪುಸಮುದ್ರದಲ್ಲಿಯೂ ಮತ್ತು ನಲವತ್ತು ವರ್ಷಗಳ ಕಾಲ ಅರಣ್ಯದಲ್ಲಿಯೂ ಮಾಡಿದನು.
37 “ಈ ಮೋಶೆಯೇ ಯೆಹೂದ್ಯ ಜನರಿಗೆ, ‘ದೇವರು ನಿಮಗೊಬ್ಬ ಪ್ರವಾದಿಯನ್ನು ಕೊಡುವನು. ಆ ಪ್ರವಾದಿಯು ನಿಮ್ಮ ಸ್ವಜನರ ಮಧ್ಯದಿಂದಲೇ ಬರುವನು. ಅವನು ನನ್ನಂತೆಯೇ ಇರುವನು’(D) ಎಂದು ಹೇಳಿದನು. 38 ಅರಣ್ಯದಲ್ಲಿ ಯೆಹೂದ್ಯರ ಸಮೂಹದೊಂದಿಗೆ ಇದ್ದವನು ಈ ಮೋಶೆಯೇ. ಸಿನಾಯ್ ಬೆಟ್ಟದ ಬಳಿ ತನ್ನೊಂದಿಗೆ ಮಾತಾಡಿದ ದೇವದೂತನೊಂದಿಗೆ ಅವನಿದ್ದನು. ಅಲ್ಲದೆ ಅವನು ನಮ್ಮ ಪಿತೃಗಳೊಂದಿಗೆ ಇದ್ದನು. ಜೀವಕರವಾದ ಆಜ್ಞೆಗಳನ್ನು ಮೋಶೆಯು ದೇವರಿಂದ ಸ್ವೀಕರಿಸಿಕೊಂಡು ಅವುಗಳನ್ನು ನಮಗೆ ಕೊಟ್ಟನು.
39 “ಆದರೆ ಮೋಶೆಗೆ ವಿಧೇಯರಾಗಲು ನಮ್ಮ ಪಿತೃಗಳಿಗೆ ಇಷ್ಟವಿರಲಿಲ್ಲ. ಅವರು ಅವನನ್ನು ತಿರಸ್ಕರಿಸಿ, ಈಜಿಪ್ಟಿಗೆ ಹಿಂತಿರುಗಬೇಕೆಂದಿದ್ದರು. 40 ನಮ್ಮ ಪಿತೃಗಳು ಆರೋನನಿಗೆ, ‘ಮೋಶೆಯು ನಮ್ಮನ್ನು ಈಜಿಪ್ಟ್ ದೇಶದಿಂದ ಕರೆದುಕೊಂಡು ಬಂದನು. ಆದರೆ ಅವನಿಗೆ ಏನಾಯಿತೋ ನಮಗೆ ಗೊತ್ತಿಲ್ಲ. ಆದ್ದರಿಂದ ನಮ್ಮ ಮುಂದೆ ಹೋಗಲು ಮತ್ತು ನಮ್ಮನ್ನು ನಡೆಸಲು ಕೆಲವು ದೇವರುಗಳನ್ನು ಮಾಡು’(E) ಎಂದರು. 41 ಆದ್ದರಿಂದ ಆ ಜನರು ಕರುವಿನಾಕೃತಿಯಲ್ಲಿ ಒಂದು ವಿಗ್ರಹವನ್ನು ಮಾಡಿ, ಅದಕ್ಕೆ ಯಜ್ಞಗಳನ್ನು ಅರ್ಪಿಸಿದರು. ಆ ಜನರು ತಮ್ಮ ಕೈಯಾರೆ ಮಾಡಿಕೊಂಡ ವಿಗ್ರಹದ ವಿಷಯದಲ್ಲಿ ಬಹು ಸಂತೋಷಪಟ್ಟರು! 42 ಆದರೆ ದೇವರು ಅವರಿಗೆ ವಿರೋಧವಾಗಿ, ಆಕಾಶದ ಸುಳ್ಳುದೇವರುಗಳನ್ನು ಪೂಜಿಸುವಂತೆ ಅವರನ್ನು ಬಿಟ್ಟುಬಿಟ್ಟನು. ಇದರ ಬಗ್ಗೆ ಪ್ರವಾದಿಗಳ ಪುಸ್ತಕದಲ್ಲಿ ಹೀಗೆ ಬರೆದಿದೆ: ದೇವರು ಹೀಗೆನ್ನುತ್ತಾನೆ,
‘ಯೆಹೂದ್ಯ ಜನರಾದ ನೀವು ನಲವತ್ತು ವರ್ಷಗಳ ಕಾಲ ಮರಳುಗಾಡಿನಲ್ಲಿದ್ದಾಗ
ನನಗೆ ಯಜ್ಞಗಳನ್ನು ಅರ್ಪಿಸಲಿಲ್ಲ; ಕಾಣಿಕೆಗಳನ್ನು ತರಲಿಲ್ಲ.
43 ನೀವು ನಿಮ್ಮೊಂದಿಗೆ ಮೊಲೋಖನ (ಸುಳ್ಳುದೇವರ) ಗುಡಾರವನ್ನು
ಮತ್ತು ನಿಮ್ಮ ರೇಫಾ ದೇವತೆಯ ನಕ್ಷತ್ರರೂಪವನ್ನು ಹೊತ್ತುಕೊಂಡು ಹೋದಿರಿ.
ಆರಾಧಿಸುವುದಕ್ಕಾಗಿ ನೀವು ಮಾಡಿಕೊಂಡ ವಿಗ್ರಹಗಳೇ ಇವು.
ಆದ್ದರಿಂದ ನಾನು ನಿಮ್ಮನ್ನು ಬಾಬಿಲೋನಿನ ಆಚೆಗೆ ಕಳುಹಿಸಿಬಿಡುವೆನು.’(F)
Kannada Holy Bible: Easy-to-Read Version. All rights reserved. © 1997 Bible League International