Old/New Testament
ಮೊರ್ದೆಕೈಯನ್ನು ಗೌರವಿಸಿದ್ದು
6 ಆ ರಾತ್ರಿ ಅರಸನಿಗೆ ನಿದ್ರಿಸಲಾಗಲಿಲ್ಲ. ಒಬ್ಬ ಸೇವಕನನ್ನು ಕರೆದು ರಾಜಕಾಲವೃತ್ತಾಂತ ಪುಸ್ತಕವನ್ನು ತರಹೇಳಿ ಅವನಿಂದ ಅದನ್ನು ಓದಿಸಿದನು. (ಈ ಪುಸ್ತಕದಲ್ಲಿ ಅರಸರ ರಾಜ್ಯ ಆಳ್ವಿಕೆಯಲ್ಲಿ ನಡೆದ ಘಟನೆಗಳು ಲಿಖಿತವಾಗಿರುತ್ತದೆ.) 2 ಆ ಸೇವಕನು ರಾಜನಿಗೆ ಪುಸ್ತಕದಿಂದ ಓದುತ್ತಾ ಹೋದನು. ರಾಜನನ್ನು ಕೊಲ್ಲುವ ಒಳಸಂಚಿನ ವಿಚಾರವನ್ನೂ ಕೇಳಿದನು. ಬಿಗೆತಾನ್ ಮತ್ತು ತೆರೆಷ್ ಎಂಬ ಇಬ್ಬರು ದ್ವಾರಪಾಲಕರು ರಾಜನನ್ನು ಕೊಲ್ಲಲು ಒಳಸಂಚು ಮಾಡಿದಾಗ ಮೊರ್ದೆಕೈಗೆ ಅದು ತಿಳಿದುಬಂತು. ಕೂಡಲೇ ಅವನು ಬೇರೆಯವರ ಮುಖಾಂತರ ಅರಸನಿಗೆ ತಿಳಿಸಿದನು.
3 ಇದನ್ನು ಕೇಳುತ್ತಿದ್ದ ಅರಸನು, “ಮೊರ್ದೆಕೈ ಹೀಗೆ ಮಾಡಿದುದಕ್ಕೆ ಯಾವ ಗೌರವ ಮತ್ತು ಬಹುಮಾನಗಳು ಕೊಡಲ್ಪಟ್ಟವು?” ಎಂದು ವಿಚಾರಿಸಿದನು. “ಮೊರ್ದೆಕೈಗೆ ಏನೂ ಕೊಡಲಿಲ್ಲ” ಎಂದು ಸೇವಕರು ಉತ್ತರಿಸಿದರು.
4 ಅದೇ ಸಮಯದಲ್ಲಿ ಹಾಮಾನನು ಹೊರಾಂಗಣದಲ್ಲಿದ್ದನು. ಅವನು ತಾನು ತಯಾರಿಸಿಟ್ಟಿರುವ ಗಲ್ಲುಕಂಬದಲ್ಲಿ ಮೊರ್ದೆಕೈಯನ್ನು ಗಲ್ಲಿಗೆ ಹಾಕಲು ಅರಸನಿಂದ ಅಪ್ಪಣೆ ಪಡೆದುಕೊಳ್ಳಲು ಬಂದಿದ್ದನು. ಅರಸನು ಹೊರಾಂಗಣದಲ್ಲಿ “ಈಗ ತಾನೇ ಯಾರು ಬಂದರು?” ಎಂದು ಕೇಳಿದಾಗ 5 ಸೇವಕರು, “ಹಾಮಾನನು ನಿಂತಿದ್ದಾನೆ!” ಎಂದು ಹೇಳಿದರು.
“ಸರಿ, ಒಳಕ್ಕೆ ಕರೆದುಕೊಂಡು ಬನ್ನಿರಿ” ಎಂದು ಆಜ್ಞಾಪಿಸಿದನು.
6 ಹಾಮಾನನು ಒಳಗೆ ಪ್ರವೇಶಮಾಡುವಾಗ ಅರಸನು, “ಹಾಮಾನನೇ, ಅರಸನು ಒಬ್ಬನಿಗೆ ಗೌರವಿಸಬೇಕೆಂದು ಇಚ್ಫಿಸುವಾಗ ಯಾವ ರೀತಿಯಲ್ಲಿ ಅದನ್ನು ಮಾಡಬೇಕು?” ಎಂದು ಕೇಳಿದನು.
ಆಗ ಹಾಮಾನನು, “ಅರಸನು ಗೌರವಿಸುವವನು ನನಗಿಂತ ಹೆಚ್ಚಿನವನು ಯಾರಿರಬಹುದು? ಅವನು ನನ್ನ ವಿಚಾರವಾಗಿಯೇ ನೆನಸುತ್ತಿರಬಹುದು” ಎಂದು ತನ್ನ ಮನಸ್ಸಿನಲ್ಲಿಯೇ ನೆನೆಸಿಕೊಂಡು
7 ಅರಸನಿಗೆ, “ನೀನು ಗೌರವಿಸಬೇಕಾದ ಮನುಷ್ಯನಿಗೆ ಈ ರೀತಿಯಾಗಿ ಮಾಡಬೇಕು. 8 ಅರಸನು ಧರಿಸಿದ ರಾಜವಸ್ತ್ರಗಳನ್ನು ಸೇವಕರ ಮೂಲಕ ತರಿಸು. ಅಲ್ಲದೆ ರಾಜನು ಸವಾರಿ ಮಾಡಿರುವ ಕುದುರೆಯನ್ನು ತರಿಸು. ಸೇವಕರು ಅದರ ಹಣೆಯ ಮೇಲೆ ರಾಜನ ವಿಶೇಷ ಗುರುತನ್ನು ಇಡಲಿ. 9 ಅನಂತರ ಅರಸನ ಮುಖ್ಯ ಅಧಿಕಾರಿಗಳಲ್ಲೊಬ್ಬನನ್ನು ರಾಜವಸ್ತ್ರಗಳಿಗೂ ಕುದುರೆಗೂ ಜವಾಬ್ದಾರನನ್ನಾಗಿ ನೇಮಿಸಿರಿ. ರಾಜನು ಯಾವ ವ್ಯಕ್ತಿಯನ್ನು ಗೌರವಿಸಬೇಕೆಂದಿದ್ದಾನೋ ಆ ವ್ಯಕ್ತಿಯ ಮೇಲೆ ಅವನು ರಾಜವಸ್ತ್ರವನ್ನು ಹಾಕಲಿ. ಆಮೇಲೆ ಅವನನ್ನು ಕುದುರೆಯ ಮೇಲೆ ಕುಳ್ಳಿರಿಸಿಕೊಂಡು ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಿಸುತ್ತಾ, ‘ರಾಜನು ಗೌರವಿಸುವ ಮನುಷ್ಯನಿಗೆ ಹೀಗೆಯೇ ಆಗುವುದು’ ಎಂದು ಪ್ರಕಟಿಸುತ್ತಾ ಹೋಗಲಿ” ಎಂದು ಹೇಳಿದನು.
10 “ಈಗಲೇ,” ಅರಸನು ಹಾಮಾನನಿಗೆ ಆಜ್ಞೆಕೊಟ್ಟು “ಈಗಲೇ ಹೋಗಿ ರಾಜವಸ್ತ್ರಗಳನ್ನೂ ರಾಜನ ಕುದುರೆಯನ್ನೂ ಕೊಂಡುಹೋಗಿ ಯೆಹೂದ್ಯನಾದ ಮೊರ್ದೆಕೈಗೆ ನೀನು ಹೇಳಿದ ಪ್ರಕಾರವೆ ಮಾಡು. ಮೊರ್ದೆಕೈ ಅರಮನೆಯ ಹೆಬ್ಬಾಗಿಲ ಬಳಿಯಲ್ಲಿ ಕುಳಿತುಕೊಂಡಿರುತ್ತಾನೆ. ನಿನ್ನ ಸಲಹೆಯಂತೆಯೇ ಎಲ್ಲವನ್ನೂ ಮಾಡು” ಅಂದನು.
11 ಹಾಮಾನನು ಉಡುಪನ್ನೂ ಕುದುರೆಯನ್ನೂ ತೆಗೆದುಕೊಂಡು ಮೊರ್ದೆಕೈಗೆ ತೊಡಿಸಿ, ಕುದುರೆಯ ಮೇಲೆ ಕುಳ್ಳಿರಿಸಿ ನಗರದ ಮುಖ್ಯರಸ್ತೆಗಳಲ್ಲಿ ಕರೆದುಕೊಂಡು ಹೋಗುತ್ತಿರುವಾಗ, “ಅರಸನು ಸನ್ಮಾನಿಸುವ ಮನುಷ್ಯನಿಗೆ ಹೀಗೆಯೇ ಆಗುವದು” ಎಂದು ಪ್ರಕಟಿಸಿದನು.
12 ಇದಾದ ಬಳಿಕ ಮೊರ್ದೆಕೈ ಹೆಬ್ಬಾಗಿಲ ಬಳಿಯಲ್ಲಿದ್ದ ತನ್ನ ಸ್ಥಾನಕ್ಕೆ ಹೋದನು. ಆದರೆ ಹಮಾನನು ತನ್ನ ಮನೆಗೆ ಅವಸರವಸರವಾಗಿ ನಡೆದನು. ನಾಚಿಕೆಯಿಂದಲೂ ಸಿಟ್ಟಿನಿಂದಲೂ ತನ್ನ ಮುಖವನ್ನು ಮುಚ್ಚಿಕೊಂಡಿದ್ದನು. 13 ತನ್ನ ಹೆಂಡತಿ ಜೆರೆಷಳಿಗೂ ಮತ್ತು ತನಗೆ ಸಲಹೆ ಕೊಟ್ಟಿದ್ದ ಮಿತ್ರವೃಂದದವರಿಗೂ ನಡೆದ ವಿಷಯ ತಿಳಿಸಿದನು. ಆಗ ಅವರು ತಿಳಿಸಿದ್ದೇನೆಂದರೆ: “ಮೊರ್ದೆಕೈಯು ಯೆಹೂದ್ಯನಾಗಿದ್ದರೆ ನೀನು ಜಯಗಳಿಸುವುದಿಲ್ಲ. ಈಗಲೇ ನೀನು ಸೋಲುತ್ತಿರುವಿ. ನಿಜವಾಗಿಯೂ ನೀನೇ ನಾಶವಾಗುವಿ.”
14 ಅವರು ಮಾತಾಡುತ್ತಿರುವಾಗಲೇ ರಾಜಕಂಚುಕಿಗಳು ಅವನನ್ನು ರಾಣಿ ಎಸ್ತೇರಳು ಏರ್ಪಡಿಸಿದ್ದ ಔತಣಕ್ಕೆ ಕರೆದುಕೊಂಡು ಹೋಗಲು ಬಂದರು.
ಹಾಮಾನನು ಗಲ್ಲಿಗೇರಿಸಲ್ಪಟ್ಟನು
7 ಅರಸನೂ ಹಾಮಾನನೂ ರಾಣಿಯ ಅರಮನೆಗೆ ಔತಣಕ್ಕಾಗಿ ಹೋದರು. 2 ಈ ಔತಣ ಸಮಾರಂಭದ ಎರಡನೆಯ ದಿನದಂದು ಅವರಿಬ್ಬರೂ ದ್ರಾಕ್ಷಾರಸ ಸೇವನೆ ಮಾಡುತ್ತಿರುವಾಗ ತಿರಿಗಿ ರಾಜನು ತನ್ನ ರಾಣಿಯನ್ನು ಪ್ರಶ್ನಿಸಿದನು, “ಎಸ್ತೇರ್ ರಾಣಿಯೇ, ನಿನಗೆ ಬೇಕಾದದ್ದನ್ನು ಕೇಳಿಕೊ. ನಾನು ಕೊಡುವೆನು; ಅರ್ಧ ರಾಜ್ಯ ಬೇಕಾದರೂ ನಾನು ಕೊಡುತ್ತೇನೆ” ಎಂದನು.
3 ಆಗ ಎಸ್ತೇರ್ ರಾಣಿಯು, “ರಾಜನೇ, ನೀನು ನನ್ನನ್ನು ಮೆಚ್ಚಿ ಪ್ರೀತಿಸುವದಾದರೆ ದಯಮಾಡಿ ನಾನು ಬದುಕುವಂತೆ ಮಾಡು. ಅಲ್ಲದೇ ನನ್ನ ಜನರನ್ನು ಉಳಿಸು. ಇದೇ ನನ್ನ ಬಿನ್ನಹ. 4 ಯಾಕೆಂದರೆ ನಾನು, ನನ್ನ ಜನರೂ ಕೊಲ್ಲಲ್ಪಡಲು, ನಾಶವಾಗಲು, ಸಂಪೂರ್ಣವಾಗಿ ನಿರ್ಮೂಲವಾಗಲು ಮಾರಲ್ಪಟ್ಟಿರುತ್ತೇವೆ. ನಾವು ಬರೇ ಗುಲಾಮರಾಗಿ ಮಾರಲ್ಪಟ್ಟಿದರೆ ನಾನು ಸುಮ್ಮನಿರುತ್ತಿದ್ದೆ. ಯಾಕೆಂದರೆ ಅದು ರಾಜನನ್ನು ತೊಂದರೆಪಡಿಸುವಂಥ ದೊಡ್ಡ ವಿಷಯವಲ್ಲ” ಎಂದು ಉತ್ತರಿಸಿದಳು.
5 ಆಗ ರಾಜನು ಎಸ್ತೇರಳಿಗೆ, “ಹೀಗೆ ನಿನಗೆ ಯಾರು ಮಾಡಿದರು? ನಿನ್ನ ಜನರಿಗೆ ಇಂಥಾ ಕೆಲಸವನ್ನು ಮಾಡಲು ಯಾರಿಗೆ ಧೈರ್ಯವಾಯಿತು?” ಎಂದು ಕೇಳಿದನು.
6 ಎಸ್ತೇರಳು ಉತ್ತರಿಸುತ್ತಾ, “ನಮ್ಮನ್ನು ದ್ವೇಷಿಸುವ ಮನುಷ್ಯನು ಈ ಕೆಟ್ಟ ಹಾಮಾನನೇ” ಎಂದು ಹೇಳಿದಳು.
ಆಗ ಹಾಮಾನನು ಭಯದಿಂದ ನಡುಗಿದನು. 7 ಅರಸನು ಕೋಪೋದ್ರಿಕ್ತನಾಗಿ, ಪಾನಪಾತ್ರೆಯನ್ನು ಅಲ್ಲಿಯೇ ಬಿಟ್ಟು ಎದ್ದು ಹೂತೋಟಕ್ಕೆ ಹೋದನು. ಹಾಮಾನನು ಕೋಣೆಯಲ್ಲಿಯೇ ಉಳಿದು ತನ್ನ ಪ್ರಾಣವನ್ನು ಉಳಿಸಬೇಕೆಂದು ಎಸ್ತೇರ್ ರಾಣಿಯನ್ನು ಬೇಡುತ್ತಿದ್ದನು. ಯಾಕೆಂದರೆ ರಾಜನು ತನ್ನನ್ನು ಕೊಲ್ಲಲು ತೀರ್ಮಾನಿಸಿರುವುದು ಅವನಿಗೆ ಅರಿವಾಯಿತು. 8 ಅರಸನು ಹೂತೋಟದಿಂದ ಹಿಂದಿರುಗಿ ಕೋಣೆಯೊಳಗೆ ಬಂದಾಗ ಹಾಮಾನನು ಆಸನದ ಮೇಲೆ ಒರಗಿದ್ದ ಎಸ್ತೇರ್ ರಾಣಿಯ ಆಸನದ ಮೇಲೆ ಬೀಳುವದನ್ನು ಕಂಡನು. ಅರಸನು ಸಿಟ್ಟು ತುಂಬಿದವನಾಗಿ, “ನನ್ನ ಮುಂದೆಯೇ ನೀನು ರಾಣಿಯ ಮೇಲೆ ಕೈಮಾಡುತ್ತೀಯಾ?” ಎಂದು ಕೇಳಿದನು.
9 ಇದನ್ನು ಹೇಳಿದೊಡನೆಯೇ ಹತ್ತಿರದಲ್ಲಿದ್ದ ಸೇವಕರು ಬಂದು ಹಾಮಾನನ ಮುಖಕ್ಕೆ ಮುಸುಕುಹಾಕಿದರು. ಅವರಲ್ಲಿದ್ದ ಹರ್ಬೋನ ಎಂಬ ಕಂಚುಕಿಯು, “ಹಾಮಾನನು ತನ್ನ ಮನೆಯ ಬಳಿಯಲ್ಲಿ ಎಪ್ಪತ್ತೈದು ಅಡಿ ಎತ್ತರದ ಗಲ್ಲುಮರವನ್ನು ಮೊರ್ದೆಕೈಗೋಸ್ಕರ ಮಾಡಿಸಿದ್ದಾನೆ. ನಿನ್ನನ್ನು ಕೊಲ್ಲಲು ನಡೆಸಿದ್ದ ಸಂಚನ್ನು ನಿನಗೆ ತಿಳಿಸಿ ನಿನ್ನನ್ನು ಕಾಪಾಡಿದವನೇ ಮೊರ್ದೆಕೈ” ಎಂದು ಹೇಳಿದನು.
ಅದಕ್ಕೆ ರಾಜನು, “ಹಾಮಾನನನ್ನು ಅದೇ ಗಲ್ಲುಮರಕ್ಕೆ ತೂಗುಹಾಕಿರಿ” ಎಂದನು.
10 ಮೊರ್ದೆಕೈಗೋಸ್ಕರ ಸಿದ್ಧಮಾಡಿದ್ದ ಗಲ್ಲುಮರಕ್ಕೆ ಸೇವಕರು ಹಾಮಾನನನ್ನು ತೂಗುಹಾಕಿದರು. ಅನಂತರ ರಾಜನ ಸಿಟ್ಟು ಇಳಿಯಿತು.
ಯೆಹೂದ್ಯರಿಗೆ ಸಹಾಯವಾಗುವ ರಾಜಾಜ್ಞೆ
8 ಅದೇ ದಿವಸದಲ್ಲಿ ರಾಜ ಅಹಷ್ವೇರೋಷನು ಯೆಹೂದ್ಯರ ವೈರಿಯಾದ ಹಾಮಾನನ ಆಸ್ತಿಪಾಸ್ತಿಗಳನ್ನೆಲ್ಲಾ ರಾಣಿ ಎಸ್ತೇರಳಿಗೆ ಕೊಟ್ಟನು. ಎಸ್ತೇರ್ ರಾಣಿಯು ಅರಸನಿಗೆ, “ಮೊರ್ದೆಕೈ ತನ್ನ ಸೋದರಣ್ಣನಾಗ ಬೇಕು” ಎಂದಳು. ನಂತರ ಮೊರ್ದೆಕೈಯು ಅರಸನನ್ನು ಕಾಣಲು ಬಂದನು. 2 ಹಾಮಾನನಿಂದ ತಿರಿಗಿ ಪಡೆದುಕೊಂಡಿದ್ದ ತನ್ನ ಮುದ್ರೆಯುಂಗುರವನ್ನು ರಾಜನು ಮೊರ್ದೆಕೈಗೆ ಕೊಟ್ಟನು. ಎಸ್ತೇರ್ ರಾಣಿಯು ಹಾಮಾನನ ಮನೆಯ ಆಡಳಿತವನ್ನು ಮೊರ್ದೆಕೈಗೆ ಕೊಡಿಸಿದಳು.
3 ಎಸ್ತೇರಳು ತಿರುಗಿ ರಾಜನನ್ನು ಮಾತಾಡಿಸುವುದಕ್ಕೆ ಹೋದಳು. ಎಸ್ತೇರಳು ಅರಸನ ಪಾದಗಳಿಗೆ ಅಡ್ಡಬಿದ್ದು ಅಳಲು ಪ್ರಾರಂಭಿಸಿದಳು. ಅವಳು ಹಾಮಾನನ ದುಷ್ಟ ಯೋಜನೆಯನ್ನು ರದ್ದುಮಾಡಬೇಕೆಂದು ಅರಸನನ್ನು ಬೇಡಿಕೊಂಡಳು. ಅಗಾಗನ ವಂಶಿಕನಾದ ಹಾಮಾನನು ಯೆಹೂದ್ಯರನ್ನು ನಿರ್ಮೂಲ ಮಾಡುವ ಹಂಚಿಕೆಯನ್ನು ಮಾಡಿದ್ದನು.
4 ಎಸ್ತೇರಳಿಗೆ ರಾಜನು ತನ್ನ ರಾಜದಂಡವನ್ನು ತೋರಿಸಿದಾಗ ಆಕೆಯು ಎದ್ದು ರಾಜನಿಗೆದುರಾಗಿ ನಿಂತುಕೊಂಡಳು. 5 ಆಕೆ ಅರಸನಿಗೆ, “ನೀವು ನನ್ನನ್ನು ಇಷ್ಟಪಡುವುದಾದರೆ ಮತ್ತು ನಿಮಗೆ ಮೆಚ್ಚಿಕೆಯಾದರೆ ನೀವು ನನ್ನ ಈ ಬಿನ್ನಹವನ್ನು ಪೂರೈಸಬೇಕು. ಅದೇನೆಂದರೆ, ರಾಜನ ಪ್ರಾಂತ್ಯಗಳಲ್ಲಿರುವ ಎಲ್ಲಾ ಯೆಹೂದ್ಯರನ್ನು ನಾಶಮಾಡಬೇಕೆಂದು ಹಾಮಾನನು ಹೊರಡಿಸಿರುವ ಆಜ್ಞೆಯನ್ನು ರದ್ದುಮಾಡಲು ನೀವು ಇನ್ನೊಂದು ಆಜ್ಞೆಯನ್ನು ಹೊರಡಿಸಬೇಕು. 6 ನನ್ನ ಜನರಿಗೆ ಭಯಂಕರವಾದ ಆ ಪರಿಸ್ಥತಿ ಉಂಟಾಗುವುದನ್ನಾಗಲಿ ನನ್ನ ಕುಟಂಬವು ಕೊಲ್ಲಲ್ಪಡುವುದನ್ನು ಕಣ್ಣಾರೆ ನೋಡುವುದಕ್ಕಾಗಲಿ ನನಗೆ ಸಾಧ್ಯವಿಲ್ಲದಿರುವುದರಿಂದ ರಾಜನಲ್ಲಿ ಬೇಡಿಕೊಳ್ಳುತ್ತಿದ್ದೇನೆ” ಎಂದಳು.
7 ಅಹಷ್ವೇರೋಷನು ಎಸ್ತೇರ್ ರಾಣಿಗೆ ಮತ್ತು ಮೊರ್ದೆಕೈಗೆ, “ಹಾಮಾನನು ಯೆಹೂದ್ಯರನ್ನು ದ್ವೇಷಿಸಿದ ಕಾರಣ ಅವನನ್ನು ಗಲ್ಲಿಗೇರಿಸುವಂತೆ ನನ್ನ ಸಿಪಾಯಿಗಳಿಗೆ ಆಜ್ಞಾಪಿಸಿದೆನು; ಅವನ ಆಸ್ತಿಪಾಸ್ತಿಗಳನ್ನೆಲ್ಲಾ ಎಸ್ತೇರಳ ವಶಕ್ಕೆ ಕೊಟ್ಟೆನು. 8 ಈಗ ಇನ್ನೊಂದು ರಾಜಾಜ್ಞೆಯನ್ನು ಬರೆಯಿಸಲು ನಾನು ನಿಮಗೆ ಅಧಿಕಾರ ಕೊಡುತ್ತೇನೆ. ನಿಮಗೆ ಸರಿತೋಚುವ ರೀತಿಯಲ್ಲಿ ಯೆಹೂದ್ಯರಿಗೆ ಸಹಾಯವಾಗುವಂತೆ ಆ ಆಜ್ಞೆಯನ್ನು ರಾಜನ ಅಧಿಕಾರದೊಡನೆ ಬರೆಯಿಸಿ, ರಾಜನ ಉಂಗುರದಿಂದ ಮುದ್ರೆ ಒತ್ತಿರಿ. ರಾಜ ಮುದ್ರೆಯುಳ್ಳ ಯಾವ ಆಜ್ಞೆಯೂ ರದ್ದಾಗಕೂಡದು” ಎಂದನು.
9 ಕೂಡಲೇ ರಾಜಲೇಖಕರನ್ನು ಕರೆಯಿಸಿ ಅವರಿಂದ ಮೊರ್ದೆಕೈ ಹೇಳಿದಂತೆ ರಾಜಾಜ್ಞೆಯನ್ನು ಸಾಮ್ರಾಜ್ಯದ ನಾನಾ ಭಾಷೆಗಳಲ್ಲಿ ಬರೆಯಿಸಲಾಯಿತು. ಹಿಂದೂಸ್ಥಾನದಿಂದ ಹಿಡಿದು ಇಥಿಯೋಪ್ಯದ ತನಕ ರಾಜ್ಯದ ನೂರಿಪ್ಪತ್ತೇಳು ಸಂಸ್ಥಾನಗಳ ಅಧಿಕಾರಿಗಳಿಗೆ, ಎಲ್ಲಾ ರಾಜ್ಯಪಾಲರಿಗೆ, ಜನನಾಯಕರಿಗೆ ಮತ್ತು ಯೆಹೂದ್ಯರಿಗೆ ಆಯಾ ಭಾಷೆಗಳ ಲಿಪಿಗಳಲ್ಲಿ ಮೂರನೇ ತಿಂಗಳಾದ ಸೀವಾನ್ ಮಾಸದ ಇಪ್ಪತ್ತಮೂರನೇ ದಿವಸದಲ್ಲಿ ಬರೆಯಿಸಲಾಯಿತು. 10 ರಾಜನ ಆಜ್ಞೆಯ ಪ್ರಕಾರ ಮೊರ್ದೆಕೈ ರಾಜಶಾಸನವನ್ನು ಬರೆಯಿಸಿದನು. ಅದಕ್ಕೆ ರಾಜಮುದ್ರೆಯನ್ನು ಒತ್ತಿಸಿ ರಾಜನಿಗಾಗಿ ವಿಶೇಷವಾಗಿ ಬೆಳೆಸಿದ ಅತ್ಯಂತ ವೇಗವಾಗಿ ಓಡುವ ಕುದುರೆಗಳ ಮೂಲಕ ಸಂದೇಶವಾಹಕರಿಂದ ರಾಜ್ಯದ ಮೂಲೆ ಮೂಲೆಗೆ ರಾಜಾಜ್ಞೆಯನ್ನು ಕಳುಹಿಸಿದನು.
11 ಆ ರಾಜಾಜ್ಞೆಯು ಹೀಗಿತ್ತು: “ಪ್ರತಿಯೊಂದು ನಗರಗಳಲ್ಲಿರುವ ಯೆಹೂದ್ಯರು ಸ್ವರಕ್ಷಣೆಗೋಸ್ಕರ ಒಟ್ಟಾಗಿ ಸೇರಿಬರಲು ಅವರಿಗೆ ಹಕ್ಕಿದೆ. ಅಲ್ಲದೆ ಅವರನ್ನು ಕೊಲ್ಲಲು, ಆಸ್ತಿ ಅಪಹರಿಸಲು ಅವರನ್ನು ನಿರ್ಮೂಲ ಮಾಡುವ ಉದ್ದೇಶದಿಂದ ಅವರ ಬಳಿಗೆ ಬರುವವರನ್ನು ಎದುರಿಸಿ, ಕೊಂದು ನಾಶಮಾಡುವ ಹಕ್ಕು ಅವರಿಗಿದೆ. ಯೆಹೂದ್ಯರಿಗೆ ತಮ್ಮನ್ನು ಹಗೆಮಾಡುವ ವೈರಿಗಳನ್ನು ಕೊಂದು ಅವರ ಆಸ್ತಿಪಾಸ್ತಿಗಳನ್ನು ಸೂರೆಮಾಡುವ ಹಕ್ಕಿದೆ.”
12 ಹೀಗೆ ಮಾಡಲು ಅಹಷ್ವೇರೋಷ್ ರಾಜನ ಎಲ್ಲಾ ಸಂಸ್ಥಾನಗಳಲ್ಲಿರುವ ಯೆಹೂದ್ಯರಿಗೆ ಹನ್ನೆರಡನೆಯ ತಿಂಗಳಾದ ಅದಾರ್ ಮಾಸದ ಹದಿಮೂರನೆ ದಿನವನ್ನು ಗೊತ್ತುಪಡಿಸಲಾಯಿತು. 13 ಈ ರಾಜಾಜ್ಞೆಯು ದೇಶದ ಶಾಸನವಾಯಿತು. ಇದನ್ನು ರಾಜ್ಯದ ಎಲ್ಲಾ ಸಂಸ್ಥಾನಗಳ ಎಲ್ಲಾ ಜನರಿಗೆ ಪ್ರಕಟಿಸಲಾಯಿತು. ಯಾವ ದಿವಸದಲ್ಲಿ ಯೆಹೂದ್ಯರನ್ನು ನಿರ್ಮೂಲ ಮಾಡಲು ಆಜ್ಞೆ ಹೊರಡಿತ್ತೋ ಆ ದಿವಸದಲ್ಲಿಯೆ ಯೆಹೂದ್ಯರು ತಮ್ಮ ವೈರಿಗಳನ್ನು ಎದುರಿಸಿ ಅವರನ್ನು ಕೊಲ್ಲುವುದಕ್ಕೆ ತಯಾರಿರಬೇಕೆಂದು ಈ ಆಜ್ಞೆಯನ್ನು ಹೊರಡಿಸಿದ್ದು. 14 ಈ ಆಜ್ಞೆಯನ್ನು ಜನರಿಗೆ ತಲುಪಿಸಲು ಅರಸನು ಸಂದೇಶ ವಾಹಕರನ್ನು ಅವಸರಪಡಿಸಿದನು. ಶೂಷನ್ ನಗರದಲ್ಲೂ ಇದು ಪ್ರಕಟವಾಯಿತು.
15 ರಾಜಸನ್ನಿಧಿಯಿಂದ ಮೊರ್ದೆಕೈ ಹೊರಟಾಗ, ಅರಸನು ಕೊಟ್ಟ ವಿಶೇಷ ವಸ್ತ್ರಗಳನ್ನು ಮೊರ್ದೆಕೈಯು ಧರಿಸಿದ್ದನು. ಅದು ನೀಲಿ ಮತ್ತು ಬಿಳಿ ಬಣ್ಣದಾಗಿತ್ತು. ತಲೆಗೆ ಬಂಗಾರದ ಕಿರೀಟವನ್ನು ತೊಟ್ಟಿದ್ದನು. ಅಲ್ಲದೆ ನೇರಳೇ ಬಣ್ಣದ ವಸ್ತ್ರವೂ ಕೂಡಾ ಅವನಲ್ಲಿದ್ದವು. ರಾಜಧಾನಿಯಾದ ಶೂಷನ್ ನಗರದಲ್ಲಿ ವಿಶೇಷ ಸಮಾರಂಭವಿತ್ತು. ಜನರು ಸಂತೋಷದಿಂದ ನಲಿದಾಡಿದರು. 16 ಯೆಹೂದ್ಯರಿಗೆ ಆ ದಿನ ಅತ್ಯಂತ ಸಂತೋಷದ ದಿನವಾಗಿತ್ತು. ಆ ದಿನ ಅವರಿಗೆ ಬಹಳ ಆನಂದ ಮತ್ತು ಹರ್ಷದ ದಿನವಾಗಿತ್ತು.
17 ರಾಜನ ಸಾಮ್ರಾಜ್ಯದ ಸಂಸ್ಥಾನಗಳಲ್ಲಿ ಎಲ್ಲೆಲ್ಲಿ ರಾಜಶಾಸನವು ತಲಪಿತೋ ಅಲ್ಲಲ್ಲಿ ಯೆಹೂದ್ಯರೆಲ್ಲರೂ ಆನಂದದಿಂದ ನಲಿದಾಡಿದರು. ಅದು ಅವರಿಗೆ ಅತ್ಯಂತ ಸಂತಸದ ದಿವಸವಾಗಿತ್ತು. ತಮ್ಮತಮ್ಮ ಮನೆಗಳಲ್ಲಿ ಔತಣ ಸಿದ್ಧಪಡಿಸಿದರು. ಸಾಮಾನ್ಯ ಜನರಲ್ಲಿ ಎಷ್ಟೋ ಮಂದಿ ಯೆಹೂದ್ಯ ಮತಾವಲಂಭಿಗಳಾದರು. ಯಾಕೆಂದರೆ ಅವರು ಯೆಹೂದ್ಯರಿಗೆ ತುಂಬಾ ಹೆದರಿ ಆ ರೀತಿಯಾಗಿ ಮಾಡಿದರು.
ವಿಶೇಷ ಕಾರ್ಯಕ್ಕೆ ಏಳು ಮಂದಿಯ ಆಯ್ಕೆ
6 ಯೇಸುವಿನ ಶಿಷ್ಯರ ಸಂಖ್ಯೆಯು ಹೆಚ್ಚುಹೆಚ್ಚಾಗುತ್ತಿತ್ತು. ಆದರೆ ಈ ಸಮಯದಲ್ಲಿ ಗ್ರೀಕ್ ಮಾತಾಡುವ ಶಿಷ್ಯರು ಯೆಹೂದ್ಯ ಶಿಷ್ಯರಿಗೆ ದೂರು ಹೇಳಿದರು. ಪ್ರತಿದಿನ ಶಿಷ್ಯರಿಗೆ ಕೊಡುವಂಥವುಗಳಲ್ಲಿ ತಮ್ಮ ವಿಧವೆಯರಿಗೆ ಅವರ ಪಾಲು ದೊರೆಯುತ್ತಿಲ್ಲವೆಂದು ಅವರು ಆಪಾದಿಸಿದರು.
2 ಆಗ ಹನ್ನೆರಡು ಮಂದಿ ಅಪೊಸ್ತಲರು ಇಡೀ ಶಿಷ್ಯಸಮುದಾಯದ ಸಭೆಯನ್ನು ಕರೆದು ಅವರಿಗೆ, “ದೇವರ ವಾಕ್ಯವನ್ನು ಬೋಧಿಸುವುದು ನಮ್ಮ ಕೆಲಸ. ಆದರೆ ಅದು ನಿಂತುಹೋಗುವುದು ಸರಿಯಲ್ಲ! ನಾವು ಜನರಿಗೆ ಊಟವನ್ನು ಒದಗಿಸಲು ಸಹಾಯ ಮಾಡುವುದಕ್ಕಿಂತಲೂ ದೇವರ ವಾಕ್ಯೋಪದೇಶವನ್ನು ಮುಂದುವರಿಸುವುದು ಒಳ್ಳೆಯದು. 3 ಆದ್ದರಿಂದ, ಸಹೋದರರೇ, ನಿಮ್ಮ ಜನರಲ್ಲಿ ಏಳು ಮಂದಿಯನ್ನು ಆರಿಸಿಕೊಳ್ಳಿರಿ. ಅವರು ಜನರಿಂದ ಒಳ್ಳೆಯವರು ಎನಿಸಿಕೊಂಡವರಾಗಿರಬೇಕು; ಜ್ಞಾನಪೂರ್ಣರಾಗಿರಬೇಕು ಮತ್ತು ಪವಿತ್ರಾತ್ಮಭರಿತರಾಗಿರಬೇಕು. ನಾವು ಅವರಿಗೆ ಈ ಕೆಲಸವನ್ನು ಒಪ್ಪಿಸಿಕೊಡುತ್ತೇವೆ. 4 ಆಗ ನಾವು ನಮ್ಮ ಸಮಯವನ್ನೆಲ್ಲಾ ಪ್ರಾರ್ಥನೆಗೂ ದೇವರ ವಾಕ್ಯೋಪದೇಶಕ್ಕೂ ಕೊಡಲು ಸಾಧ್ಯವಾಗುತ್ತದೆ” ಎಂದು ಹೇಳಿದರು.
5 ಇಡೀ ಸಮುದಾಯವು ಈ ಆಲೋಚನೆಯನ್ನು ಇಷ್ಟಪಟ್ಟಿತು. ಆದ್ದರಿಂದ ಅವರು ಈ ಏಳು ಮಂದಿಯನ್ನು ಆರಿಸಿಕೊಂಡರು: ಸ್ತೆಫನ (ಮಹಾನಂಬಿಕೆಯುಳ್ಳ ಮತ್ತು ಪವಿತ್ರಾತ್ಮಭರಿತನಾಗಿದ್ದ ಮನುಷ್ಯ), ಫಿಲಿಪ್ಪ,[a] ಪ್ರೊಖೋರ, ನಿಕನೋರ, ತಿಮೋನ, ಪರ್ಮೇನ ಮತ್ತು ನಿಕೊಲಾಯ (ಮತಾಂತರ ಹೊಂದಿ ಯೆಹೂದ್ಯನಾಗಿದ್ದ ಇವನು ಅಂತಿಯೋಕ್ಯಕ್ಕೆ ಸೇರಿದವನು.) 6 ಬಳಿಕ ಅವರು ಈ ಏಳು ಮಂದಿಯನ್ನು ಅಪೊಸ್ತಲರ ಮುಂದೆ ನಿಲ್ಲಿಸಿದರು. ಅಪೊಸ್ತಲರು ಪ್ರಾರ್ಥಿಸಿ, ಅವರ ತಲೆಗಳ ಮೇಲೆ ತಮ್ಮ ಕೈಗಳನ್ನಿಟ್ಟರು.
7 ದೇವರ ವಾಕ್ಯವು ಹೆಚ್ಚುಹೆಚ್ಚು ಜನರಿಗೆ ತಲುಪತೊಡಗಿತು. ಜೆರುಸಲೇಮಿನ ಶಿಷ್ಯಸಮುದಾಯವು ಹೆಚ್ಚುಹೆಚ್ಚು ದೊಡ್ಡದಾಗ ತೊಡಗಿತು. ಅನೇಕ ಯೆಹೂದ್ಯಯಾಜಕರು ನಂಬಿಕೊಂಡರು ಮತ್ತು ವಿಧೇಯರಾದರು.
ಯೆಹೂದ್ಯರು ಸ್ತೆಫನನಿಗೆ ವಿರುದ್ಧವಾದರು
8 ಸ್ತೆಫನನು (ಏಳು ಮಂದಿಯಲ್ಲಿ ಒಬ್ಬನು) ದೇವರ ಕೃಪೆಯಿಂದಲೂ ಬಲದಿಂದಲೂ ತುಂಬಿದವನಾಗಿ ಅದ್ಭುತಕಾರ್ಯಗಳನ್ನು ಮತ್ತು ಸೂಚಕಕಾರ್ಯಗಳನ್ನು ಮಾಡುತ್ತಾ ಇದ್ದನು. 9 ಆದರೆ ಕೆಲವು ಯೆಹೂದ್ಯರು ಬಂದು ಅವನೊಂದಿಗೆ ವಾದಿಸಿದರು. ಈ ಯೆಹೂದ್ಯರು ಸಭಾಮಂದಿರಕ್ಕೆ ಸೇರಿದವರು. ಅದಕ್ಕೆ “ಬಿಡುಗಡೆ ಹೊಂದಿದವರ[b] ಸಭಾಮಂದಿರ” ಎಂದು ಕರೆಯುತ್ತಿದ್ದರು. (ಸಿರೇನ್ ಮತ್ತು ಅಲೆಕ್ಸಾಂಡ್ರಿಯದಿಂದ ಬಂದ ಯೆಹೂದ್ಯರಿಗೋಸ್ಕರವಾಗಿಯೂ ಈ ಸಭಾಮಂದಿರವಿತ್ತು.) ಸಿಲಿಸಿಯ ಮತ್ತು ಏಷ್ಯಾದಿಂದ ಬಂದ ಯೆಹೂದ್ಯರೂ ಅವರೊಂದಿಗಿದ್ದರು. ಅವರೆಲ್ಲರೂ ಬಂದು ಅವನೊಂದಿಗೆ ವಾದಮಾಡಿದರು. 10 ಆದರೆ ವಿವೇಕದಿಂದ ಮಾತಾಡಲು ಪವಿತ್ರಾತ್ಮನು ಅವನಿಗೆ ಸಹಾಯಮಾಡಿದನು. ಸ್ತೆಫನನ ಮಾತುಗಳು ಬಹು ಶಕ್ತಿಯುತವಾಗಿದ್ದ ಕಾರಣ ಅವನೊಂದಿಗೆ ವಾದಿಸಲು ಅವರಿಗೆ ಸಾಧ್ಯವಾಗದೆ,
11 “ಸ್ತೆಫನನು ಮೋಶೆಗೂ ದೇವರಿಗೂ ವಿರುದ್ಧವಾಗಿ ಕೆಟ್ಟ ಸಂಗತಿಗಳನ್ನು ಹೇಳುತ್ತಾನೆ; ಅವನ್ನು ನಾವೇ ಕೇಳಿದ್ದೇವೆ!” ಎಂದು ತಿಳಿಸುವಂತೆ ಕೆಲವರಿಗೆ ಹಣಕೊಟ್ಟರು. 12 ಹೀಗೆ ಈ ಯೆಹೂದ್ಯರು ಜನರನ್ನೂ ಯೆಹೂದ್ಯರ ಹಿರಿಯನಾಯಕರನ್ನೂ ಧರ್ಮೋಪದೇಶಕರನ್ನೂ ಗಲಿಬಿಲಿಗೊಳಿಸಿದರು. ಅವರು ಬಹು ಸಿಟ್ಟಿನಿಂದ ಬಂದು ಸ್ತೆಫನನನ್ನು ಬಂಧಿಸಿ ಯೆಹೂದ್ಯನಾಯಕರ ಸಭೆಗೆ ಕೊಂಡೊಯ್ದರು.
13 ಈ ಯೆಹೂದ್ಯರು ಕೆಲವು ಮಂದಿ ಸುಳ್ಳುಸಾಕ್ಷಿಗಳನ್ನು ಕರೆದುಕೊಂಡು ಬಂದು, “ಈ ಮನುಷ್ಯನು ಈ ಪವಿತ್ರಸ್ಥಳದ (ದೇವಾಲಯದ) ವಿರುದ್ಧವಾಗಿಯೂ ಮೋಶೆಯ ಧರ್ಮಶಾಸ್ತ್ರದ ವಿರುದ್ಧವಾಗಿಯೂ ಕೆಟ್ಟಸಂಗತಿಗಳನ್ನು ಯಾವಾಗಲೂ ಹೇಳುತ್ತಾನೆ. 14 ನಜರೇತಿನ ಯೇಸು ಈ ದೇವಾಲಯವನ್ನು ಕೆಡವಿ ಮೋಶೆಯ ವಿಧಿಗಳನ್ನು ಬದಲಾಯಿಸುತ್ತಾನೆಂದು ಇವನು ಹೇಳುವುದನ್ನು ನಾವು ಕೇಳಿದ್ದೇವೆ” ಎಂದು ಹೇಳಿಸಿದರು. 15 ಸಭೆಯಲ್ಲಿ ಕುಳಿತಿದ್ದವರೆಲ್ಲರೂ ಸ್ತೆಫನನ ಮುಖವನ್ನು ದಿಟ್ಟಿಸಿ ನೋಡಲು ಅವನ ಮುಖವು ದೇವದೂತನ ಮುಖದಂತೆ ಕಂಗೊಳಿಸಿತು.
Kannada Holy Bible: Easy-to-Read Version. All rights reserved. © 1997 Bible League International