Print Page Options
Previous Prev Day Next DayNext

Old/New Testament

Each day includes a passage from both the Old Testament and New Testament.
Duration: 365 days
Kannada Holy Bible: Easy-to-Read Version (KERV)
Version
ಎಸ್ತೇರಳು 3-5

ಯೆಹೂದ್ಯರನ್ನು ನಿರ್ಮೂಲ ಮಾಡಲು ಹಾಮಾನನ ಸಂಚು

ಇದಾದ ಬಳಿಕ ರಾಜನಾದ ಅಹಷ್ವೇರೋಷನು ಹಾಮಾನನನ್ನು ಗೌರವಿಸಿದನು. ಹಾಮಾನನು ಹಮ್ಮೆದಾತನೆಂಬವನ ಮಗನು. ಇವನು ಅಗಾಗನ ವಂಶಕ್ಕೆ ಸೇರಿದವನಾಗಿದ್ದನು. ಅರಸನು ಹಾಮಾನನನ್ನು ಉನ್ನತಸ್ಥಾನಕ್ಕೆ ನೇಮಿಸಿ ಬೇರೆ ಅಧಿಕಾರಿಗಳಿಗಿಂತ ವಿಶೇಷವಾದ ಗೌರವವನ್ನು ಕೊಡಿಸಿದನು. ರಾಜ್ಯದ ಎಲ್ಲಾ ಅಧಿಕಾರಿಗಳೂ ಅರಮನೆಯ ಹೆಬ್ಬಾಗಿಲ ಬಳಿಯಲ್ಲಿದ್ದವರೆಲ್ಲರೂ ಅವನಿಗೆ ಅಡ್ಡಬೀಳುತ್ತಿದ್ದರು. ಇದು ರಾಜಾಜ್ಞೆಯಾಗಿತ್ತು. ಆದರೆ ಮೊರ್ದೆಕೈ ಮಾತ್ರ ಅವನಿಗೆ ಅಡ್ಡಬೀಳಲೂ ಇಲ್ಲ ಗೌರವಿಸಲೂ ಇಲ್ಲ. ಅರಮನೆಯ ಹೆಬ್ಬಾಗಿಲ ಬಳಿಯಲ್ಲಿದ್ದ ಅಧಿಕಾರಿಗಳು, “ಮೊರ್ದೆಕೈ, ಅರಸನ ಆಜ್ಞೆಯ ಪ್ರಕಾರ ಹಾಮಾನನಿಗೆ ನೀನು ಏಕೆ ಬಗ್ಗಿ ನಮಸ್ಕರಿಸುವುದಿಲ್ಲ?” ಎಂದು ಪ್ರಶ್ನಿಸಿದರು.

ಪ್ರತಿದಿನ ಆ ಅಧಿಕಾರಿಗಳು ಮೊರ್ದೆಕೈಗೆ ಹೇಳಿದರೂ ಅವನು ಹಾಮಾನನಿಗೆ ಅಡ್ಡಬೀಳಲೂ ಇಲ್ಲ, ಗೌರವಿಸಲೂ ಇಲ್ಲ. ಈ ವಿಷಯವನ್ನು ಅಧಿಕಾರಿಗಳು ಹಾಮಾನನಿಗೆ ತಿಳಿಸಿದರು. ಮೊರ್ದೆಕೈಗೆ ಹಾಮಾನನು ಮಾಡುವದನ್ನು ನೋಡಲು ಕಾದಿದ್ದರು. ಮೊರ್ದೆಕೈ ಅವರಿಗೆ ತಾನು ಯೆಹೂದ್ಯನೆಂದು ತಿಳಿಸಿದ್ದನು. ಮೊರ್ದೆಕೈ ತನಗೆ ಅಡ್ಡಬೀಳದಿರುವುದರಿಂದ ಮತ್ತು ಗೌರವಿಸದಿರುವುದರಿಂದ ಹಾಮಾನನು ಬಹಳ ಕೋಪಗೊಂಡನು. ಮೊರ್ದೆಕೈ ಯೆಹೂದ್ಯ ಜನಾಂಗಕ್ಕೆ ಸೇರಿದವನೆಂದು ಹಾಮಾನನಿಗೆ ತಿಳಿದುಬಂತು. ಕೇವಲ ಮೊರ್ದೆಕೈಯನ್ನು ಮಾತ್ರವೇ ಕೊಲ್ಲದೆ ಅಹಷ್ವೇರೋಷನ ಸಾಮ್ರಾಜ್ಯದಲ್ಲಿರುವ ಎಲ್ಲಾ ಯೆಹೂದ್ಯರನ್ನು ಕೊಲ್ಲುವ ಉಪಾಯವನ್ನು ಹೂಡಿದನು.

ಅಹಷ್ವೇರೋಷನ ಆಳ್ವಿಕೆಯ ಹನ್ನೆರಡನೆಯ ವರ್ಷದ ಮೊದಲನೆ ತಿಂಗಳಾದ ನೀಸಾನ್ ತಿಂಗಳಲ್ಲಿ ಒಂದು ನಿರ್ದಿಷ್ಟ ದಿವಸಕ್ಕಾಗಿ ಹಾಮಾನನು ಚೀಟು ಹಾಕಿದನು. ಆಗ ಹನ್ನೆರಡನೆ ತಿಂಗಳಾದ ಅದಾರ್ ಮಾಸವು ಆರಿಸಲ್ಪಟ್ಟಿತು. (ಆ ದಿವಸಗಳಲ್ಲಿ ಚೀಟು ಹಾಕುವದಕ್ಕೆ “ಪೂರ್” ಎಂದು ಅನ್ನುತ್ತಿದ್ದರು.) ಹಾಮಾನನು ಅರಸನಾದ ಅಹಷ್ವೇರೋಷನ ಬಳಿಗೆ ಬಂದು, “ಅರಸನೇ, ನಿನ್ನ ಸಾಮ್ರಾಜ್ಯದ ಎಲ್ಲಾ ಸಂಸ್ಥಾನಗಳಲ್ಲಿ ಒಂದು ಜನಾಂಗದವರು ಹಬ್ಬಿರುತ್ತಾರೆ. ಇವರು ಇತರ ಎಲ್ಲಾ ಜನರಿಂದ ಪ್ರತ್ಯೇಕವಾಗಿ ಇರುತ್ತಾರೆ. ಅವರ ನೀತಿರೀತಿಗಳೆಲ್ಲಾ ಬೇರೆ ಜನರಿಗಿಂತ ವಿಭಿನ್ನವಾಗಿರುತ್ತದೆ. ಅವರು ರಾಜನ ಕಟ್ಟಳೆಗೆ ವಿಧೇಯರಾಗುವುದಿಲ್ಲ. ನಿನ್ನ ರಾಜ್ಯದಲ್ಲಿ ಅವರು ಹೀಗೆಯೇ ಇರುವದು ಒಳ್ಳೆಯದಲ್ಲ.

“ರಾಜನೇ, ನೀನು ಸಮ್ಮತಿಸುವದಾದರೆ ನನ್ನ ಸಲಹೆ ಏನೆಂದರೆ, ಆ ಜನರನ್ನು ನಿರ್ಮೂಲ ಮಾಡಲು ಅಪ್ಪಣೆ ಕೊಡು. ನಾನು ಹತ್ತು ಸಾವಿರ ಬೆಳ್ಳಿನಾಣ್ಯಗಳನ್ನು ರಾಜ ಖಜಾನೆಯಲ್ಲಿ ಹಾಕುವೆನು. ಆ ಹಣವನ್ನು ಆ ಕಾರ್ಯ ಮಾಡುವ ಜನರ ಸಂಬಳಕ್ಕಾಗಿ ವಿನಿಯೋಗಿಸಬಹುದು” ಎಂದು ಹೇಳಿದನು.

10 ಆಗ ಅರಸನು ತನ್ನ ಮುದ್ರೆಯುಂಗುರವನ್ನು ಬೆರಳಿನಿಂದ ತೆಗೆದು ಹಾಮಾನನಿಗೆ ಕೊಟ್ಟನು. ಹಾಮಾನನು ಅಗಾಗನ ವಂಶದವನಾದ ಹಮ್ಮೆದಾತನ ಮಗನು. ಈ ಹಾಮಾನನು ಯೆಹೂದ್ಯರ ಕಡುವೈರಿಯಾಗಿದ್ದನು. 11 ಅರಸನು ಹಾಮಾನನಿಗೆ, “ನಿನ್ನ ಹಣವು ನಿನ್ನ ಹತ್ರವೇ ಇರಲಿ. ಆ ಜನರನ್ನು ನಿನಗೆ ಇಷ್ಟಬಂದ ಹಾಗೆ ಮಾಡಬಹುದು” ಅಂದನು.

12 ಮೊದಲನೆ ತಿಂಗಳಿನ ಹದಿಮೂರನೇ ದಿವಸದಂದು ರಾಜಲೇಖಕರನ್ನು ಕರೆಯಿಸಿ ಹಾಮಾನನ ಆಜ್ಞೆಯನ್ನು ಆಯಾಭಾಷೆಗಳಲ್ಲಿ ಬರೆಯಿಸಿದನು. ರಾಜನ ಸಂಸ್ಥಾನಾಧಿಕಾರಿಗಳಿಗೆ, ರಾಜ್ಯಪಾಲರಿಗೆ ಮತ್ತು ವಿವಿಧ ಜನಾಂಗದ ಅಧಿಕಾರಿಗಳಿಗೆ ಅರಸನಾದ ಅಹಷ್ವೇರೋಷನ ಹೆಸರಿನಲ್ಲಿ ಬರೆದು ಅದಕ್ಕೆ ರಾಜನ ಮುದ್ರೆಯನ್ನೊತ್ತಲಾಯಿತು.

13 ರಾಜಾಜ್ಞೆಯನ್ನು ಹೊತ್ತ ಸಂದೇಶವಾಹಕರು ದೇಶದ ಎಲ್ಲಾ ಕಡೆಗಳಲ್ಲಿ ಹೊತ್ತುಕೊಂಡು ಬಂದರು. ಆ ಪತ್ರದಲ್ಲಿ ಹನ್ನೆರಡನೇ ತಿಂಗಳಿನ ಹದಿಮೂರನೇ ದಿವಸದಂದು ಆಯಾ ಪ್ರಾಂತ್ಯಗಳಲ್ಲಿರುವ ಎಲ್ಲಾ ಯೆಹೂದ್ಯರನ್ನು ಚಿಕ್ಕವರು ದೊಡ್ಡವರು ಎನ್ನದೆ ಕೊಂದು ಅವರ ವಸ್ತುಗಳನ್ನೆಲ್ಲ ಸೂರೆ ಮಾಡಬೇಕೆಂಬದಾಗಿ ಬರೆದಿತ್ತು.

14 ಈ ಪತ್ರದ ಒಂದೊಂದು ಪ್ರತಿಯು ಪ್ರತಿಯೊಂದು ಸಂಸ್ಥಾನದಲ್ಲಿ ರಾಜವಿಧಿಯೆಂದು ಎಲ್ಲಾ ಜನರಲ್ಲಿ ಪ್ರಕಟಿಸಲ್ಪಡಬೇಕು ಅಲ್ಲದೆ ಆ ದಿನಕ್ಕಾಗಿ ಎಲ್ಲಾ ಜನರೂ ಸಿದ್ಧರಾಗಿರಬೇಕೆಂಬುದಾಗಿ ಬರೆದಿತ್ತು. 15 ರಾಜನ ಆಜ್ಞೆಯ ಪ್ರಕಾರ ಸಂದೇಶವಾಹಕರು ದೇಶದೇಶಗಳಿಗೆ ಚದರಿದರು. ರಾಜಧಾನಿಯಾದ ಶೂಷನ್ ನಗರದಲ್ಲೂ ಆ ಸಂದೇಶವನ್ನು ಪ್ರಕಟಿಸಲಾಯಿತು. ಅರಸನೂ ಹಾಮಾನನೂ ಮದ್ಯಪಾನ ಮಾಡಲು ಕುಳಿತರು. ಆದರೆ ರಾಜಧಾನಿಯಲ್ಲಿನ ಜನರು ಗಲಿಬಿಲಿಗೊಂಡಿದ್ದರು.

ಎಸ್ತೇರಳು ಸಹಾಯ ಮಾಡಲು ಮೊರ್ದೆಕೈಯ ಒತ್ತಾಯ

ನಡೆದ ಎಲ್ಲಾ ಸಂಗತಿಗಳನ್ನು ಮೊರ್ದೆಕೈ ಕೇಳಿಕೊಂಡನು. ಯೆಹೂದ್ಯರನ್ನೆಲ್ಲಾ ಕೊಲ್ಲಲು ರಾಜಾಜ್ಞೆ ಹೊರಟಿದೆ ಎಂದು ಕೇಳಿದಾಗ ಅವನು ತನ್ನ ಬಟ್ಟೆಗಳನ್ನು ಹರಿದುಕೊಂಡು ಶೋಕದ ಬಟ್ಟೆಗಳನ್ನು ಧರಿಸಿ ತಲೆಯ ಮೇಲೆ ಬೂದಿಯನ್ನು ಸುರಿದುಕೊಂಡನು. ಆಮೇಲೆ ಗಟ್ಟಿಯಾಗಿ ಅಳುತ್ತಾ ನಗರ ಬೀದಿಗಳಲ್ಲಿ ನಡೆದನು. ಅವನು ಶೋಕವನ್ನು ಸೂಚಿಸುವ ಬಟ್ಟೆಗಳನ್ನು ಧರಿಸಿದ್ದ ಕಾರಣ ಅರಮನೆಯ ಹೆಬ್ಬಾಗಿಲ ತನಕ ಮಾತ್ರವೇ ಅವನಿಗೆ ಹೋಗಲು ಸಾಧ್ಯವಾಯಿತು. ಅರಮನೆಯ ಪ್ರಾಕಾರದೊಳಗೆ ಶೋಕವಸ್ತ್ರವನ್ನು ಧರಿಸಿ ಯಾರೂ ಹೋಗುವ ಹಾಗಿಲ್ಲ. ಪ್ರತಿಯೊಂದು ಸಂಸ್ಥಾನದಲ್ಲೂ ರಾಜನ ಆಜ್ಞೆ ಪ್ರಕಟಿಸಲ್ಪಟ್ಟಾಗ ಯೆಹೂದ್ಯರೊಳಗೆ ಕೂಗಾಟವೂ ದುಃಖವೂ ತುಂಬಿತು. ಉಪವಾಸ ಮಾಡುತ್ತಾ ಅವರು ಗಟ್ಟಿಯಾಗಿ ರೋಧಿಸಿದರು. ಎಷ್ಟೋ ಮಂದಿ ಯೆಹೂದ್ಯರು ಶೋಕವಸ್ತ್ರವನ್ನು ಧರಿಸಿ ತಲೆಗೆ ಬೂದಿ ಸುರಿದು ನೆಲದ ಮೇಲೆ ಬಿದ್ದುಕೊಂಡು ಗಟ್ಟಿಯಾಗಿ ಅತ್ತರು.

ಎಸ್ತೇರಳ ಸೇವಕಿಯರು ಮತ್ತು ಕಂಚುಕಿಯರು ಮೊರ್ದೆಕೈ ವಿಚಾರವಾಗಿ ಆಕೆಗೆ ತಿಳಿಸಿದರು. ಇದನ್ನು ಕೇಳಿ ಎಸ್ತೇರ್ ರಾಣಿಗೆ ತುಂಬಾ ಗಲಿಬಿಲಿಯೂ ದುಃಖವೂ ಆಯಿತು. ಆಕೆ ಅವನಿಗೋಸ್ಕರ ಬಟ್ಟೆಗಳನ್ನು ಕಳುಹಿಸಿ ಶೋಕದ ಬಟ್ಟೆಯನ್ನು ತೆಗೆದುಹಾಕಲು ಹೇಳಿಸಿದಳು. ಆದರೆ ಅವನು ಅವಳ ಬಟ್ಟೆಗಳನ್ನು ಸ್ವೀಕರಿಸಲಿಲ್ಲ. ಆಗ ಎಸ್ತೇರಳು ಹತಾಕನನ್ನು ಬರಹೇಳಿದಳು. ಹತಾಕನು ರಾಜಕಂಚುಕಿಯಾಗಿದ್ದು ಎಸ್ತೇರ್ ರಾಣಿಯ ಸೇವೆಯನ್ನು ಮಾಡುವವನಾಗಿದ್ದನು. ಹತಾಕನಿಗೆ ಹೋಗಿ ಮೊರ್ದೆಕೈಗೆ ಏನು ತೊಂದರೆಯಾಯಿತು; ಅವನು ಯಾತಕ್ಕಾಗಿ ದುಃಖತಪ್ತನಾಗಿದ್ದಾನೆ ಎಂಬುದನ್ನು ವಿಚಾರಿಸಿಕೊಂಡು ಬರಲು ಆಜ್ಞಾಪಿಸಿದಳು. ಅರಮನೆಯ ಹೆಬ್ಬಾಗಿಲು ಎದುರಿನಲ್ಲಿದ್ದ ಬಯಲಿನಲ್ಲಿ ಮೊರ್ದೆಕೈಯನ್ನು ಹತಾಕನು ಸಂಧಿಸಿದಾಗ ಮೊರ್ದೆಕೈ ನಡೆದ ಸಂಗತಿಗಳನ್ನೆಲ್ಲಾ ಹೇಳಿದನು. ಹಾಮಾನನು ರಾಜನಿಗೆ ಯೆಹೂದ್ಯರನ್ನು ಕೊಲ್ಲಿಸಲು ಆಜ್ಞೆ ಹೊರಡಿಸಿದ್ದುದಕ್ಕಾಗಿ ಕೊಟ್ಟ ಹಣದ ಸರಿಯಾದ ಮೊತ್ತವನ್ನು ತಿಳಿಸಿದನು. ಯೆಹೂದ್ಯರನ್ನು ಕೊಲ್ಲಬೇಕೆಂಬುವ ಅರಸನ ಆಜ್ಞಾಪತ್ರದ ಒಂದು ಪ್ರತಿಯನ್ನು ಹತಾಕನ ಕೈಯಲ್ಲಿ ಮೊರ್ದೆಕೈ ಕೊಟ್ಟನು. ಈ ಆಜ್ಞಾಪತ್ರವನ್ನು ಶೂಷನ್ ನಗರದ ಎಲ್ಲೆಡೆಯಲ್ಲಿಯೂ ಕಳುಹಿಸಲ್ಪಟ್ಟಿತ್ತು. ಹತಾಕನು ಆ ಪ್ರತಿಯನ್ನು ಎಸ್ತೇರಳಿಗೆ ತೋರಿಸಿ ಎಲ್ಲವನ್ನು ವಿವರಿಸಬೇಕೆಂದು ಮೊರ್ದೆಕೈ ಉದ್ದೇಶಿಸಿದನು. ಅಷ್ಟೇ ಅಲ್ಲ. ಎಸ್ತೇರ್ ರಾಣಿ ಅರಸನ ಬಳಿಗೆ ಹೋಗಿ ತನಗೂ ಆಕೆಯ ಜನರಿಗೂ ದಯೆ ತೋರಿಸಲು ಅರಸನೊಡನೆ ಬೇಡಲಿ ಎಂದು ಹತಾಕನೊಡನೆ ಹೇಳಿ ಕಳುಹಿಸಿದನು.

ಹತಾಕನು ಹಿಂತಿರುಗಿ ಹೋಗಿ ಎಸ್ತೇರಳಿಗೆ ಮೊರ್ದೆಕೈ ಹೇಳಿದ್ದೆಲ್ಲವನ್ನು ತಿಳಿಸಿದನು.

10 ಎಸ್ತೇರಳು ಹತಾಕನಿಗೆ, “ಮೊರ್ದೆಕೈ ಹತ್ತಿರ ಹೋಗಿ ಹೀಗೆ ಹೇಳು: 11 ಮೊರ್ದೆಕೈ, ಸಾಮ್ರಾಜ್ಯದಲ್ಲಿರುವ ಎಲ್ಲಾ ಅಧಿಕಾರಿಗಳಿಗೂ ಪ್ರಜೆಗಳಿಗೂ ತಿಳಿದಿರುವ ಒಂದು ವಿಷಯವೇನೆಂದರೆ, ರಾಜನು ಕರೆಯದೆ ಯಾರಾದರೂ ಆತನ ಬಳಿಗೆ ಹೋದರೆ ಅದಕ್ಕೆ ಮರಣದಂಡನೆಯೇ ಶಿಕ್ಷೆ ಎಂಬುದು. ರಾಜನು ತನ್ನ ಬಂಗಾರದ ದಂಡವನ್ನು ಯಾರ ಮೇಲೆ ತೋರಿಸುವನೋ ಅವನು ಮರಣಶಿಕ್ಷೆಯಿಂದ ಪಾರಾಗುವನು. ಈಗ ರಾಜನು ನನ್ನನ್ನು ಕರೆದು ಮೂವತ್ತು ದಿವಸಗಳಾದವು.”

12-13 ಎಸ್ತೇರಳ ಸಂದೇಶವು ಮೊರ್ದೆಕೈಗೆ ತಲುಪಿತು. ಅದಕ್ಕುತ್ತರವಾಗಿ ಮೊರ್ದೆಕೈ ಹೀಗೆ ಹೇಳಿ ಕಳುಹಿಸಿದನು: “ಎಸ್ತೇರಳೇ, ನೀನು ಅರಮನೆಯಲ್ಲಿ ವಾಸವಾಗಿರುವುದರಿಂದ ಯೆಹೂದ್ಯಳಾದ ನೀನೊಬ್ಬಳೇ ಸಾಮೂಹಿಕ ಹತ್ಯೆಯಿಂದ ಪಾರಾಗುವೆ ಎಂದು ನೆನೆಸಬೇಡ. 14 ನೀನು ಈಗ ಸುಮ್ಮನಿದ್ದರೆ ಯೆಹೂದ್ಯರಿಗೆ ಸಹಾಯವೂ ಸ್ವಾತಂತ್ರ್ಯವೂ ಬೇರೆ ದಿಕ್ಕಿನಿಂದ ಬರುವವು. ಆದರೆ ನೀನೂ ನಿನ್ನ ತಂದೆಯ ಬಳಗದವರೆಲ್ಲರೂ ಸಾಯುವರು. ಇಂಥ ಸಮಯದಲ್ಲಿ ನೀನು ರಾಣಿಯಾಗಿ ಆಯ್ಕೆಯಾದದ್ದು ಇದಕ್ಕೋಸ್ಕರವೋ ಎಂದು ಯಾರಿಗೆ ಹೇಳಲು ಸಾಧ್ಯ?”

15-16 ಆಗ ಎಸ್ತೇರಳು ಈ ಉತ್ತರವನ್ನು ಮೊರ್ದೆಕೈಗೆ ಕಳುಹಿಸಿದಳು: “ಮೊರ್ದೆಕೈ, ನೀನು ಹೋಗಿ ಶೂಷನ್‌ನಲ್ಲಿರುವ ಎಲ್ಲಾ ಯೆಹೂದ್ಯರನ್ನು ಒಟ್ಟಿಗೆ ಸೇರಿಸಿ ನನಗಾಗಿ ಉಪವಾಸವಿರಲು ಅವರಿಗೆ ಹೇಳು. ಮೂರು ದಿನ ಹಗಲುರಾತ್ರಿ ಊಟಮಾಡಲೂಬಾರದು ಕುಡಿಯಲೂಬಾರದು. ನಾನೂ ನಿಮ್ಮ ಹಾಗೆ ಉಪವಾಸದಿಂದಿರುವೆನು. ನನ್ನೊಂದಿಗೆ ನನ್ನ ಸೇವಕಿಯರೂ ಉಪವಾಸ ಮಾಡುವರು. ನಾವು ಉಪವಾಸ ಮಾಡಿದ ಬಳಿಕ ನಾನು ರಾಜನ ಬಳಿಗೆ ಹೋಗುವೆನು. ಆತನು ಕರೆಯದೆ ನಾನು ಆತನ ಬಳಿಗೆ ಹೋಗುವುದು ನ್ಯಾಯಬಾಹಿರ. ಆದರೂ ನಾನು ಹೋಗುವೆನು, ನಾನು ಸಾಯಬೇಕಾದರೆ ಸಾಯುವೆನು.”

17 ಮೊರ್ದೆಕೈ ಹೊರಟುಹೋಗಿ ಎಸ್ತೇರಳು ಹೇಳಿದ ಪ್ರಕಾರ ಮಾಡಿದನು.

ಎಸ್ತೇರಳು ರಾಜನನ್ನು ಸಂದರ್ಶಿಸಿದ್ದು

ಮೂರನೇ ದಿವಸದಲ್ಲಿ ಎಸ್ತೇರಳು ವಿಶೇಷ ಬಟ್ಟೆಗಳನ್ನು ಧರಿಸಿ ಅರಸನ ಅರಮನೆಯ ಒಳಾಂಗಣದಲ್ಲಿ ನಿಂತುಕೊಂಡಳು. ಅದು ರಾಜ ದರ್ಬಾರಿನ ಮುಂದೆ ಇತ್ತು. ರಾಜನು ಸಿಂಹಾಸನದ ಮೇಲೆ, ಪ್ರಜೆಗಳು ಪ್ರವೇಶಿಸುವ ಬಾಗಿಲಿಗೆ ಎದುರಾಗಿ ಕುಳಿತಿದ್ದನು. ಅರಸನು ಒಳಾಂಗಣದಲ್ಲಿ ನಿಂತಿದ್ದ ಎಸ್ತೇರಳನ್ನು ಕಂಡ ಕೂಡಲೇ ಆಕೆಯನ್ನು ಮೆಚ್ಚಿಕೊಂಡು ತನ್ನ ಕೈಯಲ್ಲಿದ್ದ ರಾಜದಂಡವನ್ನು ಆಕೆಯ ಕಡೆಗೆ ಚಾಚಿದನು. ಆಗ ಎಸ್ತೇರಳು ಒಳಾಂಗಣವನ್ನು ಪ್ರವೇಶಿಸಿ ರಾಜನ ಬಳಿ ಹೋದಳು ಮತ್ತು ರಾಜದಂಡದ ತುದಿಯನ್ನು ತನ್ನ ಬೆರಳಿನಿಂದ ಮುಟ್ಟಿದಳು.

“ಎಸ್ತೇರ್ ರಾಣಿಯೇ, ಯಾವುದು ನಿನ್ನ ಮನಸ್ಸನ್ನು ಭಾದಿಸುತ್ತದೆ? ನನ್ನನ್ನು ಏನು ಕೇಳಲು ಬಂದಿರುವಿ? ಕೇಳು, ನಾನು ನಿನಗೆ ಅರ್ಧ ರಾಜ್ಯವನ್ನು ಕೇಳಿದರೂ ಕೊಡುವೆನು” ಎಂದು ರಾಜನು ಅಂದನು.

ಅದಕ್ಕೆ ಎಸ್ತೇರಳು, “ನಾನು ಒಂದು ಔತಣವನ್ನು ಸಿದ್ಧಪಡಿಸಿರುತ್ತೇನೆ. ಅದಕ್ಕೆ ನೀವೂ, ಹಾಮಾನನೂ ಬರಬೇಕು ಎಂದು ವಿನಂತಿಸುತ್ತೇನೆ” ಎಂದಳು.

ಆಗ ಅರಸನು, “ಹಾಮಾನನನ್ನು ಬೇಗನೇ ಕರೆಯಿಸಿರಿ, ಎಸ್ತೇರಳು ಹೇಳಿದಂತೆ ನಾವು ಮಾಡುವೆವು” ಅಂದನು.

ಹಾಗೆ ಅರಸನೂ ಹಾಮಾನನೂ ಎಸ್ತೇರಳು ಅವರಿಗಾಗಿ ಮಾಡಿದ ಔತಣಕ್ಕೆ ಹೋದರು. ಅವರು ದ್ರಾಕ್ಷಾರಸವನ್ನು ಸೇವಿಸುತ್ತಿರುವಾಗ ರಾಜನು ಎಸ್ತೇರಳನ್ನು ತಿರಿಗಿ ವಿಚಾರಿಸಿದನು, “ನೀನು ನನ್ನನ್ನು ಏನು ಕೇಳಬೇಕೆಂದಿದ್ದೀ? ಏನೂ ಬೇಕಾದರೂ ಕೇಳು. ನಾನು ಕೊಡುತ್ತೇನೆ. ಹೇಳು ಏನುಬೇಕು? ನನ್ನ ಅರ್ಧ ರಾಜ್ಯವನ್ನು ಕೇಳಿದರೂ ನಾನು ಕೊಡುತ್ತೇನೆ” ಅಂದನು.

ಅದಕ್ಕೆ ಎಸ್ತೇರಳು, “ನನ್ನ ಬಿನ್ನಹವೇನೆಂದರೆ: ರಾಜನು ಸಮ್ಮತಿಸುವದಾದರೆ ಮತ್ತು ನಾನು ಕೇಳಿಕೊಳ್ಳುವುದನ್ನು ಕೊಡಲು ರಾಜನಿಗೆ ಇಷ್ಟವಾದರೆ, ನಾಳೆ ನಾನು ಇನ್ನೊಂದು ಔತಣ ಸಮಾರಂಭವನ್ನು ಏರ್ಪಡಿಸುತ್ತೇನೆ. ಅದಕ್ಕೆ ನೀವೂ ಹಾಮಾನನೂ ಬರಬೇಕು. ಆಗ ನಾನು ನನಗೇನುಬೇಕೆಂದು ತಿಳಿಸುವೆನು” ಅಂದಳು.

ಮೊರ್ದೆಕೈ ಮೇಲೆ ಹಾಮಾನನ ರೋಷ

ಹಾಮಾನನು ಹರ್ಷ ತುಂಬಿದವನಾಗಿ ರಾಜ ಸನ್ನಿಧಿಯಿಂದ ತನ್ನ ಮನೆಗೆ ತೆರಳಿದನು. ಆದರೆ ಹೆಬ್ಬಾಗಿಲ ಬಳಿಯಲ್ಲಿ ಮೊರ್ದೆಕೈಯನ್ನು ನೋಡಿದಾಗ ಅವನ ಮೇಲೆ ಹಾಮಾನನ ಕೋಪ ಉಕ್ಕಿ ಬಂತು. ಯಾಕೆಂದರೆ ಮೊರ್ದೆಕೈ ಹಾಮಾನನಿಗೆ ಯಾವ ಗೌರವವನ್ನೂ ಕೊಟ್ಟಿರಲಿಲ್ಲ ಮತ್ತು ಅವನಿಗೆ ಭಯಪಡಲಿಲ್ಲ. ಇದು ಹಾಮಾನನನ್ನು ಸಿಟ್ಟಿಗೇರುವಂತೆ ಮಾಡಿತು. 10 ಆದರೆ ಹಾಮಾನನು ತನ್ನ ಕೋಪವನ್ನು ಹಿಡಿತದಲ್ಲಿಟ್ಟುಕೊಂಡು ತನ್ನ ಮನೆಗೆ ಹೋದನು. ಅಲ್ಲಿ ತನ್ನ ಸ್ನೇಹಿತರನ್ನೂ ತನ್ನ ಹೆಂಡತಿಯಾದ ಜೆರೆಷಳನ್ನೂ ಕರೆದು 11 ತನ್ನ ಸಂಪತ್ತಿನ ವಿಷಯ ಕೊಚ್ಚಿಗೊಂಡನು. ತನ್ನ ಸ್ನೇಹಿತರಲ್ಲಿ ತನ್ನ ಮಕ್ಕಳ ವಿಚಾರವಾಗಿ ಹೆಗ್ಗಳಿಕೆಯಿಂದ ಮಾತಾಡುತ್ತಿದ್ದನು. ಮಾತ್ರವಲ್ಲದೆ ಅರಸನು ತನ್ನನ್ನು ಅತ್ಯುನ್ನತ ಸ್ಥಾನಕ್ಕೆ ಏರಿಸಿ ಇತರ ಎಲ್ಲಾ ನಾಯಕರುಗಳ ಮೇಲೆ ನೇಮಿಸಿದನು. 12 “ಅಷ್ಟೇ ಅಲ್ಲ” ಹಾಮಾನನು ಮುಂದುವರಿಸುತ್ತಾ, “ಎಸ್ತೇರ್ ರಾಣಿಯು ಅರಸನೊಡನೆ ನನ್ನೊಬ್ಬನನ್ನೇ ಕರೆದು ಔತಣ ಮಾಡಿಸಿದಳು. ನಾಳೆಯ ಔತಣ ಸಮಾರಂಭಕ್ಕೂ ಅರಸನೊಡನೆ ನನ್ನನ್ನು ತಿರಿಗಿ ಬರಲು ಆಮಂತ್ರಿಸಿರುತ್ತಾಳೆ. 13 ಆದರೆ ನಾನು ಹೆಬ್ಬಾಗಿಲ ಬಳಿಯಲ್ಲಿ ಕುಳಿತುಕೊಳ್ಳುತ್ತಿರುವ ಮೊರ್ದೆಕೈಯನ್ನು ನೋಡುವಾಗ ನನ್ನ ಸಂತೋಷವೆಲ್ಲವೂ ಮಾಯವಾಗುತ್ತದೆ” ಎಂದು ಹೇಳಿದನು.

14 ಇದನ್ನು ಕೇಳಿದ ಹಾಮಾನನ ಹೆಂಡತಿ ಜೆರೆಷಳೂ ಮತ್ತು ಅವನ ಮಿತ್ರವೃಂದದವರೂ ಅವನಿಗೊಂದು ಸಲಹೆಯನ್ನಿತ್ತರು. “ಒಂದು ಗಲ್ಲುಮರವನ್ನು ನೆಡಿಸು. ಅದು ಎಪ್ಪತ್ತೈದು ಅಡಿ ಎತ್ತರವಿರಲಿ. ನಾಳೆ ಮುಂಜಾನೆ ಮೊರ್ದೆಕೈಯನ್ನು ಗಲ್ಲಿಗೇರಿಸಲು ಅರಸನಿಂದ ಅಪ್ಪಣೆ ತೆಗೆದುಕೋ. ಅನಂತರ ಅರಸನೊಂದಿಗೆ ಔತಣ ಸಮಾರಂಭಕ್ಕೆ ಹೋಗಿ ಸಂತೋಷಪಡು.”

ಇದನ್ನು ಕೇಳಿ ಹಾಮಾನನು ಸಂತೋಷಗೊಂಡನು. ಕೂಡಲೇ ಸೇವಕನನ್ನು ಕರೆಸಿ ಗಲ್ಲುಮರವನ್ನು ಸಿದ್ಧಮಾಡಲು ಆಜ್ಞಾಪಿಸಿದನು.

ಅಪೊಸ್ತಲರ ಕಾರ್ಯಗಳು 5:22-42

22 ದೇವಾಲಯದ ಸಿಪಾಯಿಗಳು ಸೆರೆಮನೆಗೆ ಹೋದಾಗ ಅಲ್ಲಿ ಅಪೊಸ್ತಲರನ್ನು ಕಾಣಲಿಲ್ಲ. ಆದ್ದರಿಂದ ಅವರು ಹಿಂತಿರುಗಿ ಬಂದು ಯೆಹೂದ್ಯನಾಯಕರಿಗೆ, 23 “ಸೆರೆಮನೆ ಮುಚ್ಚಿತ್ತು ಮತ್ತು ಬೀಗವನ್ನು ಹಾಕಲಾಗಿತ್ತು. ಕಾವಲುಗಾರರು ಬಾಗಿಲ ಬಳಿ ನಿಂತುಕೊಂಡಿದ್ದರು. ಆದರೆ ನಾವು ಬಾಗಿಲುಗಳನ್ನು ತೆರೆದಾಗ ಸೆರೆಮನೆಯು ಬರಿದಾಗಿತ್ತು!” ಎಂದು ತಿಳಿಸಿದರು. 24 ದೇವಾಲಯದ ಕಾವಲುಗಾರರ ನಾಯಕನು ಮತ್ತು ಮಹಾಯಾಜಕರು ಇದನ್ನು ಕೇಳಿ ಗಲಿಬಿಲಿಗೊಂಡರು. ಇದರಿಂದ ಏನಾಗುವುದೋ ಎಂದು ಅವರು ಭಯಪಟ್ಟರು.

25 ಬಳಿಕ ಬೇರೊಬ್ಬನು ಬಂದು ಅವರಿಗೆ, “ಕೇಳಿ! ನೀವು ಸೆರೆಮನೆಯಲ್ಲಿ ಹಾಕಿದ್ದ ಜನರು ದೇವಾಲಯದಲ್ಲಿ ನಿಂತಿದ್ದಾರೆ. ಅವರು ಜನರಿಗೆ ಉಪದೇಶ ಮಾಡುತ್ತಿದ್ದಾರೆ!” ಎಂದು ಹೇಳಿದನು. 26 ಆಗ ದಳಪತಿ ಮತ್ತು ಅವನ ಜನರು ಹೋಗಿ ಅಪೊಸ್ತಲರನ್ನು ಮರಳಿ ಕರೆತಂದರು. ಆದರೆ ಸೈನಿಕರು ಒತ್ತಾಯ ಮಾಡಲಿಲ್ಲ. ಯಾಕೆಂದರೆ ಅವರು ಜನರಿಗೆ ಭಯಪಟ್ಟರು. ಜನರು ಕೋಪಗೊಂಡು ಕಲ್ಲೆಸೆದು ತಮ್ಮನ್ನು ಕೊಲ್ಲಬಹುದೆಂದು ಅವರು ಹೆದರಿದರು.

27 ಸೈನಿಕರು ಅಪೊಸ್ತಲರನ್ನು ಸಭೆಗೆ ಕರೆದುಕೊಂಡು ಬಂದು ಯೆಹೂದ್ಯನಾಯಕರ ಮುಂದೆ ನಿಲ್ಲಿಸಿದರು. ಪ್ರಧಾನಯಾಜಕನು ಅಪೊಸ್ತಲರಿಗೆ, 28 “ಈ ಮನುಷ್ಯನ (ಯೇಸುವಿನ) ಬಗ್ಗೆ ನೀವು ಬೋಧಿಸಕೂಡದೆಂದು ನಾವು ನಿಮಗೆ ಆಜ್ಞಾಪಿಸಿದೆವು. ಆದರೆ ನೀವು ಮಾಡಿರುವುದೇನು? ನೀವು ಜೆರುಸಲೇಮನ್ನು ನಿಮ್ಮ ಉಪದೇಶದಿಂದ ತುಂಬಿಸಿಬಿಟ್ಟಿದ್ದೀರಿ. ಈ ಮನುಷ್ಯನ (ಯೇಸುವಿನ) ಸಾವಿಗೆ ನಮ್ಮನ್ನೇ ಜವಾಬ್ದಾರರನ್ನಾಗಿ ಮಾಡಲು ನೀವು ಪ್ರಯತ್ನಿಸುತ್ತಿದ್ದೀರಿ” ಎಂದರು.

29 ಪೇತ್ರ ಮತ್ತು ಉಳಿದ ಅಪೊಸ್ತಲರು, “ನಾವು ವಿಧೇಯರಾಗಬೇಕಾದದ್ದು ದೇವರಿಗೇ ಹೊರತು ನಿಮಗಲ್ಲ! 30 ನೀವು ಯೇಸುವನ್ನು ಕೊಂದಿರಿ. ನೀವು ಆತನನ್ನು ಶಿಲುಬೆಯ ಮೇಲೆ ನೇತುಹಾಕಿದಿರಿ. ಆದರೆ ದೇವರು, ಅಂದರೆ ನಮ್ಮ ಪಿತೃಗಳ ದೇವರೇ ಯೇಸುವನ್ನು ಸತ್ತವರೊಳಗಿಂದ ಜೀವಂತವಾಗಿ ಎಬ್ಬಿಸಿದನು! 31 ದೇವರಿಂದ ಆತನ ಬಲಗಡೆಗೆ ಏರಿಸಲ್ಪಟ್ಟಾತನೇ ಯೇಸು. ಎಲ್ಲಾ ಯೆಹೂದ್ಯರು ತಮ್ಮ ಪಾಪಗಳಿಗಾಗಿ ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಳ್ಳುವುದರ ಮೂಲಕ ಪಾಪಕ್ಷಮೆ ಹೊಂದಿಕೊಳ್ಳಲೆಂದು ದೇವರು ಯೇಸುವನ್ನು ನಮ್ಮ ನಾಯಕನನ್ನಾಗಿಯೂ ರಕ್ಷಕನನ್ನಾಗಿಯೂ ಮಾಡಿದ್ದಾನೆ. 32 ಈ ಘಟನೆಗಳಿಗೆ ನಾವೇ ಸಾಕ್ಷಿಗಳು. ನಾವು ಮಾತ್ರವಲ್ಲದೆ ವಿಧೇಯರಾಗುವ ಎಲ್ಲಾ ಜನರಿಗೆ ದೇವರು ದಯಪಾಲಿಸಿರುವ ಪವಿತ್ರಾತ್ಮನೂ ಸಾಕ್ಷಿಯಾಗಿದ್ದಾನೆ” ಎಂದನು.

33 ಯೆಹೂದ್ಯನಾಯಕರು ಈ ಮಾತುಗಳನ್ನು ಕೇಳಿ ಬಹು ಕೋಪಗೊಂಡು, ಅಪೊಸ್ತಲರನ್ನು ಕೊಲ್ಲಬೇಕೆಂದಿದ್ದರು. 34 ಆಗ ಫರಿಸಾಯರಲ್ಲಿ ಒಬ್ಬನು ಸಭೆಯಲ್ಲಿ ಎದ್ದು ನಿಂತುಕೊಂಡನು. ಅವನ ಹೆಸರು ಗಮಲಿಯೇಲ. ಅವನು ಧರ್ಮೋಪದೇಶಕನಾಗಿದ್ದನು ಮತ್ತು ಜನರೆಲ್ಲಾ ಅವನನ್ನು ಗೌರವಿಸುತ್ತಿದ್ದರು. ಕೆಲವು ನಿಮಿಷಗಳವರೆಗೆ ಅಪೊಸ್ತಲರನ್ನು ಸಭೆಯಿಂದ ಹೊರಗೆ ಕಳುಹಿಸಬೇಕೆಂದು ಅವನು ಜನರಿಗೆ ಹೇಳಿದನು. 35 ಬಳಿಕ ಅವನು ಅವರಿಗೆ, “ಇಸ್ರೇಲ್ ಜನರೇ, ನೀವು ಇವರಿಗೆ ಮಾಡಬೇಕೆಂದಿರುವುದರ ಬಗ್ಗೆ ಎಚ್ಚರಿಕೆಯಾಗಿರಿ! 36 ಒಮ್ಮೆ, ತೈದ ಎಂಬುವನು ಬಂದದ್ದು ನಿಮ್ಮ ನೆನಪಿನಲ್ಲಿದೆಯೋ? ಅವನು ತನ್ನನ್ನು ಮಹಾಪುರುಷನೆಂದು ಹೇಳಿಕೊಂಡನು. ಸುಮಾರು ನಾನೂರು ಮಂದಿ ಅವನ ಜೊತೆ ಸೇರಿದರು. ಆದರೆ ಅವನು ಕೊಲ್ಲಲ್ಪಟ್ಟನು. ಅವನನ್ನು ಹಿಂಬಾಲಿಸುತ್ತಿದ್ದವರೆಲ್ಲ ಚದರಿ ಓಡಿಹೋದರು. ಅವರಿಂದ ಏನೂ ಮಾಡಲಾಗಲಿಲ್ಲ. 37 ಬಳಿಕ, ಯೂದ ಎಂಬುವನು ಗಲಿಲಾಯದಿಂದ ಬಂದನು. ಅದು ಜನಗಣತಿಯ ಕಾಲವಾಗಿತ್ತು. ಅವನು ಸಹ ಅನುಯಾಯಿಗಳ ಒಂದು ಗುಂಪನ್ನೇ ಕಟ್ಟಿದ. ಅವನು ಸಹ ಕೊಲ್ಲಲ್ಪಟ್ಟನು. ಅವನ ಅನುಯಾಯಿಗಳೆಲ್ಲಾ ಚದರಿ ಓಡಿಹೋದರು. 38 ಆದ್ದರಿಂದ ಈಗ ನಾನು ನಿಮಗೆ ಹೇಳುವುದೇನೆಂದರೆ, ಈ ಜನರಿಂದ ದೂರವಾಗಿರಿ. ಅವರನ್ನು ಅವರಷ್ಟಕ್ಕೇ ಬಿಟ್ಟುಬಿಡಿರಿ. ಅವರ ಯೋಜನೆಯು ಮನುಷ್ಯರಿಂದ ಬಂದದ್ದಾಗಿದ್ದರೆ, ಅದು ಉರುಳಿಹೋಗುವುದು. 39 ಆದರೆ ಅದು ದೇವರಿಂದ ಬಂದದ್ದಾಗಿದ್ದರೆ, ನೀವು ಅವರನ್ನು ತಡೆಯಲು ಸಾಧ್ಯವಾಗುವುದಿಲ್ಲ. ನೀವು ದೇವರಿಗೇ ವಿರುದ್ಧವಾಗಿ ಹೋರಾಡಿದಂತಾದೀತು!” ಎಂದು ಹೇಳಿದನು.

ಗಮಲಿಯೇಲನ ಸಲಹೆಗೆ ಯೆಹೂದ್ಯ ನಾಯಕರು ಒಪ್ಪಿಕೊಂಡರು. 40 ಅವರು ಅಪೊಸ್ತಲರನ್ನು ಒಳಗೆ ಕರೆಸಿ, ಹೊಡೆಸಿ, ಯೇಸುವಿನ ಬಗ್ಗೆ ಜನರಿಗೆ ಹೇಳಕೂಡದೆಂದು ಎಚ್ಚರಿಸಿ ಕಳುಹಿಸಿ ಬಿಟ್ಟರು. 41 ಅಪೊಸ್ತಲರು ಸಭೆಯಿಂದ ಹೊರಟುಹೋದರು. ಯೇಸುವಿನ ಹೆಸರಿಗಾಗಿ ಅಪಮಾನವನ್ನು ಅನುಭವಿಸುವ ಅರ್ಹತೆಯನ್ನು ಪಡೆದುಕೊಂಡೆವೆಂದು ಅವರು ಸಂತೋಷಪಟ್ಟರು. 42 ಅವರು ಜನರಿಗೆ ಉಪದೇಶಿಸುವುದನ್ನು ನಿಲ್ಲಿಸಲಿಲ್ಲ. ಯೇಸುವೇ ಕ್ರಿಸ್ತನೆಂಬ ಶುಭವಾರ್ತೆಯನ್ನು ಜನರಿಗೆ ಹೇಳುವುದನ್ನು ಮುಂದುವರಿಸಿದರು. ಅವರು ಪ್ರತಿದಿನ ದೇವಾಲಯದಲ್ಲಿಯೂ ಜನರ ಮನೆಗಳಲ್ಲಿಯೂ ಉಪದೇಶಿಸುತ್ತಿದ್ದರು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International