Old/New Testament
7 ಗೋಡೆಯ ಕೆಲಸ ಪೂರ್ತಿಯಾದ ಬಳಿಕ ದ್ವಾರಗಳಿಗೆ ಬಾಗಿಲುಗಳನ್ನು ಇಡಲು ಪ್ರಾರಂಭಿಸಿದೆವು; ಬಾಗಿಲುಗಳಿಗೆ ಕಾವಲುಗಾರರನ್ನು ನೇಮಿಸಿದೆವು. ದೇವಾಲಯದಲ್ಲಿ ಬೇಕಾಗಿರುವ ಗಾಯಕರನ್ನು ಮತ್ತು ಯಾಜಕರಿಗೆ ಬೇಕಾದ ಸಹಾಯಕರನ್ನು ಆರಿಸಿದೆವು. 2 ಇದಾದ ಬಳಿಕ ನನ್ನ ಸಹೋದರ ಹಾನಾನಿಯನನ್ನು ಜೆರುಸಲೇಮಿನ ಆಡಳಿತಗಾರನನ್ನಾಗಿ ನೇಮಿಸಿದೆನು. ಹನನ್ಯನನ್ನು ಜೆರುಸಲೇಮಿನ ಕೋಟೆಗೆ ಅಧಿಪತಿಯನ್ನಾಗಿ ಆರಿಸಿದೆನು. ಹಾನಾನಿಯು ನಂಬಿಗಸ್ತನೂ ದೇವರಿಗೆ ಭಯಪಡುವವನೂ ಆಗಿದ್ದುದರಿಂದ ನಾನು ಅವನನ್ನು ಆರಿಸಿಕೊಂಡೆನು. 3 ಹನಾನಿಗೆ ಮತ್ತು ಹನನ್ಯನಿಗೆ ನಾನು ಆಜ್ಞಾಪಿಸಿದ್ದೇನೆಂದರೆ: “ಸೂರ್ಯೋದಯವಾಗಿ ಕೆಲವು ತಾಸು ಕಳೆದ ಮೇಲೆಯೇ ನೀವು ಜೆರುಸಲೇಮಿನ ಬಾಗಿಲುಗಳನ್ನು ತೆರೆಯಬೇಕು; ಸೂರ್ಯನು ಮುಳುಗುವ ಮೊದಲೇ ನೀವು ಬಾಗಿಲುಗಳನ್ನು ಮುಚ್ಚಿ ಬೀಗ ಹಾಕಬೇಕು. ಜೆರುಸಲೇಮಿನಲ್ಲಿ ವಾಸವಾಗಿರುವವರನ್ನೇ ಕಾವಲುಗಾರರನ್ನಾಗಿ ಆರಿಸಿಕೊಳ್ಳಿರಿ. ವಿಶೇಷವಾದ ಸ್ಥಳಗಳಲ್ಲಿ ಪಟ್ಟಣವನ್ನು ಕಾಯುವುದಕ್ಕಾಗಿ ಅವರಲ್ಲಿ ಕೆಲವರನ್ನು ನೇಮಿಸಿರಿ; ಉಳಿದವರನ್ನು ಅವರವರ ಮನೆಯ ಸಮೀಪದಲ್ಲಿಯೇ ಕಾಯಲು ನೇಮಿಸಿರಿ.”
ಸೆರೆಹಿಡಿಯಲ್ಪಟ್ಟವರಲ್ಲಿ ಹಿಂತಿರುಗಿಬಂದವರ ಪಟ್ಟಿ
4 ಜೆರುಸಲೇಮ್ ಪಟ್ಟಣವು ವಿಸ್ತಾರವಾಗಿದ್ದರೂ ಅದರಲ್ಲಿ ವಾಸಿಸುವ ಜನರು ಸ್ವಲ್ಪವೇ ಆಗಿದ್ದರು. ಕೆಡವಲ್ಪಟ್ಟಿದ್ದ ಮನೆಗಳು ತಿರುಗಿ ಕಟ್ಟಲ್ಪಡಲಿಲ್ಲ. 5 ಆದ್ದರಿಂದ ನನ್ನ ದೇವರು ನಮ್ಮ ಜನರನ್ನು ಒಟ್ಟುಗೂಡಿಸುವಂತೆ ನನ್ನನ್ನು ಪ್ರೇರೇಪಿಸಿದನು. ಅಂತೆಯೇ ನಾನು ಎಲ್ಲಾ ಗಣ್ಯರನ್ನು, ಅಧಿಕಾರಿಗಳನ್ನು ಮತ್ತು ಸಾಮಾನ್ಯರನ್ನು ಒಟ್ಟಾಗಿ ಸೇರಿಬರಲು ಆಮಂತ್ರಿಸಿದೆನು. ಇವರ ಕುಟುಂಬಗಳ ಪಟ್ಟಿಯನ್ನು ನಾನು ಮಾಡಬೇಕಿತ್ತು. ಮೊಟ್ಟಮೊದಲನೆಯ ಸಾರಿ ಸೆರೆಯಿಂದ ಹಿಂತಿರುಗಿ ಬಂದ ಸಂಸಾರಗಳ ಪಟ್ಟಿಯು ನನಗೆ ದೊರೆಯಿತು. ಅದರ ವಿವರ ಹೀಗಿದೆ:
6 ಬಹಳ ಕಾಲದ ಹಿಂದೆ ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನು ಇವರನ್ನು ಸೆರೆಯಾಳುಗಳನ್ನಾಗಿ ಬಾಬಿಲೋನಿಗೆ ಒಯ್ದಿದ್ದನು. ಇವರು ಹಿಂದೆ ಜೆರುಸಲೇಮಿಗೂ ಯೆಹೂದ ಪ್ರಾಂತ್ಯಕ್ಕೂ ಹಿಂತಿರುಗಿ ತಮ್ಮತಮ್ಮ ಊರುಗಳಿಗೆ ಹೋಗಿ ನೆಲೆಸಿದರು. 7 ಇವರು ಜೆರುಬ್ಬಾಬೆಲ್‌ನೊಂದಿಗೆ ಹಿಂತಿರುಗಿದರು. ಯೇಷೂವ, ನೆಹೆಮೀಯ, ಅಜರ್ಯ, ರಗಮ್ಯ, ನಹಮಾನೀ, ಮೊರ್ದೆಕೈ, ಬಿಲ್ಷಾನ್, ಮಿಸ್ಪೆರೆತ್, ಬಿಗ್ವೈ, ನೆಹೂಮ್ ಮತ್ತು ಬಾಣ. ಇಸ್ರೇಲಿನ ಜನರಲ್ಲಿ ಹಿಂದೆ ಬಂದವರ ವಿವರ:
8 ಪರೋಷನ ಸಂತಾನದವರು | 2,172 |
9 ಶೆಫಟ್ಯನ ಸಂತಾನದವರು | 372 |
10 ಆರಹನ ಸಂತಾನದವರು | 652 |
11 ಪಹತ್ ಮೋವಾಬಿನವರಾದ ಯೇಷೂವನ ಮತ್ತು ಯೋವಾಬನ ಸಂತಾನದವರು | 2,818 |
12 ಏಲಾಮನ ಸಂತಾನದವರು | 1,254 |
13 ಜತ್ತೂವಿನ ಸಂತಾನದವರು | 845 |
14 ಜಕ್ಕೈನ ಸಂತಾನದವರು | 760 |
15 ಬಿನ್ನೂಯನ ಸಂತಾನದವರು | 648 |
16 ಬೇಬೈಯ ಸಂತಾನದವರು | 628 |
17 ಅಜ್ಗಾದಿನ ಸಂತಾನದವರು | 2,322 |
18 ಅದೋನಿಕಾಮನ ಸಂತಾನದವರು | 667 |
19 ಬಿಗ್ವೈನ ಸಂತಾನದವರು | 2,067 |
20 ಆದೀನನ ಸಂತಾನದವರು | 655 |
21 ಹಿಜ್ಕೀಯ ಕುಟುಂಬಕ್ಕೆ ಸೇರಿದ ಆಟೇರಿನ ಸಂತಾನದವರು | 98 |
22 ಹಾಷುಮಿನ ಸಂತಾನದವರು | 328 |
23 ಬೇಚೈಯ ಸಂತಾನದವರು | 324 |
24 ಹಾರಿಫನ ಸಂತಾನದವರು | 112 |
25 ಗಿಬ್ಯೋನನ ಸಂತಾನದವರು | 95 |
26 ಬೆತ್ಲೆಹೇಮ್ ಮತ್ತು ನೆಟೋಫ ಊರಿನವರು | 188 |
27 ಅನಾತೋತ್ ಊರಿನವರು | 128 |
28 ಬೇತಜ್ಮಾವೇತ್ ಪಟ್ಟಣದವರು | 42 |
29 ಕಿರ್ಯತ್ಯಾರೀಮ್, ಕೆಫೀರಾ ಮತ್ತು ಬೇರೋತ್ ಪಟ್ಟಣದವರು | 743 |
30 ರಾಮಾ ಮತ್ತು ಗೆಬ ಪಟ್ಟಣದವರು | 621 |
31 ಮಿಕ್ಮಾಸಿಯ ಪಟ್ಟಣದವರು | 122 |
32 ಬೇತೇಲ್ ಮತ್ತು ಆಯಿ ಪಟ್ಟಣದವರು | 123 |
33 ನೆಬೋ ಎಂಬ ಇನ್ನೊಂದು ಪಟ್ಟಣದವರು | 52 |
34 ಏಲಾಮ್ ಎಂಬ ಇನ್ನೊಂದು ಊರಿನವರು | 1,254 |
35 ಹಾರಿಮ್ ಪಟ್ಟಣದವರು | 320 |
36 ಜೆರಿಕೊ ಪಟ್ಟಣದವರು | 345 |
37 ಲೋದ್, ಹಾದೀದ್ ಮತ್ತು ಓನೋ ಪಟ್ಟಣದವರು | 721 |
38 ಸೆನಾಹ ಪಟ್ಟಣದವರು | 3,930 |
39 ಯಾಜಕರಲ್ಲಿ:
ಯೆದಾಯನವರಾದ ಯೇಷೂವನ ಸಂತಾನದವರು | 973 |
40 ಇಮ್ಮೇರನ ಸಂತಾನದವರು | 1,052 |
41 ಪಷ್ಹೂರನ ಸಂತಾನದವರು | 1,247 |
42 ಹಾರಿಮನ ಸಂತಾನದವರು | 1,017 |
43 ಲೇವಿಕುಲದವರಲ್ಲಿ:
ಹೋದವ್ಯನವರಾದ ಯೇಷೂವನ ಮತ್ತು ಕದ್ಮೀಯೇಲನ ಸಂತಾನದವರು | 74 |
44 ಗಾಯಕರಲ್ಲಿ:
ಆಸಾಫನ ಸಂತಾನದವರು | 148 |
45 ದ್ವಾರಪಾಲಕರಲ್ಲಿ:
ಶಲ್ಲೂಮ್, ಆಟೇರ್, ಟಲ್ಮೋನ್, ಅಕ್ಕೂಬ್, ಹಟೀಟಾ ಮತ್ತು ಶೋಬೈಯ ಸಂತಾನದವರು | 138 |
46 ದೇವಾಲಯದ ಸೇವಕರಲ್ಲಿ:
ಜೀಹನ ಸಂತಾನದವರು, ಹಸೂಫ, ಟಬ್ಬಾವೋತ್,
47 ಕೇರೋಸ್, ಸೀಯ, ಪಾದೋನ್,
48 ಲೆಬಾನ, ಹಗಾಬ, ಸಲ್ಮೈ,
49 ಹಾನಾನ್, ಗಿದ್ದೇಲ್, ಗಹರ್,
50 ರೆವಾಯ, ರೆಚೀನ್, ನೆಕೋದ,
51 ಗಜ್ಜಾಮ್, ಉಜ್ಜ, ಪಾಸೇಹ,
52 ಬೇಸೈ, ಮೆಯನೀಮ್, ನೆಫೀಷೆಸೀಮ್,
53 ಬಕ್ಬೂಕ್, ಹಕ್ಕೂಫ, ಹರ್ಹೂರ್,
54 ಬಚ್ಲೂತ್, ಮೆಹೀದ್, ಹರ್ಷ,
55 ಬರ್ಕೋಸ್, ಸೀಸೆರ, ತೆಮಹ,
56 ನೆಚೀಹ ಮತ್ತು ಹಟೀಫ.
57 ಇವರು ಸೊಲೊಮೋನನ ಸೇವಕರ ಸಂತಾನದವರು:
ಸೋಟೈ, ಸೋಫೆರೆತ್, ಪೆರೀದ,
58 ಯಾಲ, ದರ್ಕೋನ್, ಗಿದ್ದೇಲ್,
59 ಶೆಫಟ್ಯ, ಹಟ್ಟೀಲ್, ಪೋಕೆರೆತ್ ಹಚ್ಚೆಬಾಯೀಮ್ ಮತ್ತು ಆಮೋನ್.
60 ದೇವಾಲಯದ ಸೇವಕರು ಮತ್ತು ಸೊಲೊಮೋನನ ಸೇವಕರ ಸಂತಾನದವರು | 392 |
61 ತೇಲ್ಮೆಲಹ ತೇಲ್ಹರ್ಷ, ಕೆರೂಬದ್ದೋನ್ ಮತ್ತು ಇಮ್ಮೇರ್ ಪಟ್ಟಣಗಳಿಂದ ಜೆರುಸಲೇಮಿಗೆ ಕೆಲವು ಮಂದಿ ಬಂದರು. ಆದರೆ ಇವರು ನಿಜವಾಗಿಯೂ ಇಸ್ರೇಲ್ ಜನಾಂಗದವರೆಂಬದಾಗಿ ಅವರಿಗೆ ರುಜುವಾತು ಮಾಡಲಾಗಲಿಲ್ಲ.
62 ದೆಲಾಯ, ಟೋಬೀಯ ಮತ್ತು ನೆಕೋದನ ಸಂತಾನದವರು | 642 |
63 ಯಾಜಕರಲ್ಲಿ:
ಹೋಬಾಯ, ಹಕ್ಕೋಚ್ ಮತ್ತು ಬರ್ಜಿಲ್ಲೈ (ಗಿಲ್ಯಾದ್ಯನಾದ ಬರ್ಜಿಲ್ಲೈಯ ಮಗಳನ್ನು ಮದುವೆಯಾದವನು ಬರ್ಜಿಲ್ಲೈ ಎಂಬ ಹೆಸರನ್ನು ಇಟ್ಟುಕೊಂಡಿದ್ದನು.) ಸಂತಾನದವರು.
64 ಇವರು ತಮ್ಮ ವಂಶಾವಳಿಯ ಪತ್ರಗಳನ್ನು ಹುಡುಕಾಡಿದರೂ ಸಿಗಲಿಲ್ಲ. ತಮ್ಮ ಪೂರ್ವಿಕರು ಯಾಜಕರೆಂದು ರುಜುವಾತು ಮಾಡಲು ಅವರಿಗೆ ಸಾಧ್ಯವಾಗಲಿಲ್ಲ. ಆದ್ದರಿಂದ ಯಾಜಕ ಪಟ್ಟಿಯಲ್ಲಿ ಅವರನ್ನು ಸೇರಿಸಲಿಲ್ಲ. 65 ಒಬ್ಬ ಪ್ರಧಾನ ಯಾಜಕನು ಊರೀಮ್ ತುಮ್ಮೀಮ್ ಧರಿಸಿ ದೇವರಿಂದ ಉತ್ತರವನ್ನು ಹೊಂದುವ ತನಕ ಅವರಲ್ಲಿ ಯಾರೂ ಪವಿತ್ರ ಆಹಾರದಲ್ಲಿ ಯಾವುದನ್ನೂ ತಿನ್ನಬಾರದೆಂದು ರಾಜ್ಯಪಾಲನು ಆಜ್ಞಾಪಿಸಿದನು.
66-67 ಹೀಗೆ ಹಿಂತಿರುಗಿ ಬಂದವರ ಒಟ್ಟು ಸಂಖ್ಯೆ 42,360. ಇವರಲ್ಲಿ 7,337 ಮಂದಿ ಅವರ ಸೇವಕಸೇವಕಿಯರಾಗಿದ್ದರು. 245 ಮಂದಿ ಗಾಯಕಗಾಯಕಿಯರು ಈ ಸಂಖ್ಯೆಯಲ್ಲಿ ಸೇರಿರಲಿಲ್ಲ. 68-69 ಅವರಲ್ಲಿ 736 ಕುದುರೆಗಳು, 245 ಹೇಸರಕತ್ತೆಗಳು, 435 ಒಂಟೆಗಳು ಮತ್ತು 6,720 ಕತ್ತೆಗಳು ಇದ್ದವು.
70 ಇವರ ಗೋತ್ರಪ್ರಧಾನರಲ್ಲಿ ಕೆಲವರು ಕೆಲಸಕ್ಕಾಗಿ ಹಣವನ್ನು ದಾನವಾಗಿ ಕೊಟ್ಟರು. ರಾಜ್ಯಪಾಲನು ಹತ್ತೊಂಭತ್ತು ಪೌಂಡು ಬಂಗಾರವನ್ನು. ಐವತ್ತು ಬೋಗುಣಿಗಳನ್ನು ಮತ್ತು ಐನೂರ ಮೂವತ್ತು ಯಾಜಕರ ವಸ್ತ್ರಗಳನ್ನು ಕೊಟ್ಟನು. 71 ಗೋತ್ರಪ್ರಧಾನರು ಮೂನ್ನೂರ ಎಪ್ಪತ್ತೈದು ಪೌಂಡು ಬಂಗಾರವನ್ನು, ಹದಿಮೂರುವರೆ ಕ್ವಿಂಟಾಲ್ ಬೆಳ್ಳಿಯನ್ನು ದಾನವಾಗಿ ಕೊಟ್ಟರು. 72 ಒಟ್ಟು ಇತರರು ಮುನ್ನೂರ ಎಪ್ಪತ್ತೈದು ಪೌಂಡು ಬಂಗಾರ, ಹದಿಮೂರುವರೆ ಕ್ವಿಂಟಾಲ್ ಬೆಳ್ಳಿ ಮತ್ತು ಅರವತ್ತೇಳು ಯಾಜಕರ ಬಟ್ಟೆಯನ್ನು ದಾನವಾಗಿ ಕೊಟ್ಟರು.
73 ಯಾಜಕರು, ಲೇವಿಯರು, ದ್ವಾರಪಾಲಕರು, ಗಾಯಕರು ಮತ್ತು ದೇವಾಲಯದ ಸೇವಕರು ತಮ್ಮ ತಮ್ಮ ಊರುಗಳಿಗೆ ಹೋಗಿ ನೆಲೆಸಿದರು. ಇತರ ಎಲ್ಲಾ ಇಸ್ರೇಲರು ತಮ್ಮ ಪಟ್ಟಣಗಳಲ್ಲಿ ನೆಲೆಸಿದರು. ಆ ವರ್ಷದ ಏಳನೆಯ ತಿಂಗಳಲ್ಲಿ ಎಲ್ಲಾ ಇಸ್ರೇಲರು ತಮ್ಮತಮ್ಮ ಪಟ್ಟಣಗಳಲ್ಲಿ ನೆಲೆಸಿದರು.
ಎಜ್ರನ ಧರ್ಮಶಾಸ್ತ್ರ ಪಠಣ
8 ಆ ವರ್ಷದ ಏಳನೆಯ ತಿಂಗಳಲ್ಲಿ ಎಲ್ಲಾ ಇಸ್ರೇಲರು ಒಂದೇ ಮನಸ್ಸುಳ್ಳವರಾಗಿ ಕೂಡಿಬಂದರು. ಅವರು ಬುಗ್ಗೆ ಬಾಗಿಲಿನ ಮುಂದಿದ್ದ ಜಾಗದಲ್ಲಿ ಸೇರಿಬಂದರು. ಇಸ್ರೇಲರಿಗೆ ಮೋಶೆಯ ಮೂಲಕವಾಗಿ ಯೆಹೋವನು ಕೊಟ್ಟಿದ್ದ ಧರ್ಮಶಾಸ್ತ್ರವನ್ನು ಓದಲು ಜನರು ಎಜ್ರನನ್ನು ಕೇಳಿಕೊಂಡರು. 2 ಹೀಗೆ ಆ ವರ್ಷದ ಏಳನೆಯ ತಿಂಗಳಿನ ಮೊದಲನೆಯ ದಿನದಲ್ಲಿ ಎಜ್ರನು ಧರ್ಮಶಾಸ್ತ್ರವನ್ನು ಆ ಜನರ ಮುಂದೆ ತಂದನು. ಆ ಜನಸಮೂಹದಲ್ಲಿ ಧರ್ಮಶಾಸ್ತ್ರಕ್ಕೆ ಕಿವಿಗೊಟ್ಟು ಗ್ರಹಿಸಿಕೊಳ್ಳಬಲ್ಲ ಸ್ತ್ರೀಪುರುಷರಿದ್ದರು. 3 ಎಜ್ರನು ಮುಂಜಾನೆಯಿಂದ ಹಿಡಿದು ಮಧ್ಯಾಹ್ನದವರೆಗೆ ಬುಗ್ಗೆಬಾಗಿಲಿನ ಮುಂದೆ ಇರುವ ಮೈದಾನದಲ್ಲಿ ಸೇರಿ ಬಂದಿದ್ದ ಜನರೆದುರಾಗಿ ನಿಂತು ಗಟ್ಟಿಯಾಗಿ ಧರ್ಮಶಾಸ್ತ್ರವನ್ನು ಓದಿದನು. ಎಲ್ಲಾ ಜನರು ಎಚ್ಚರಿಕೆಯಿಂದ ಕೇಳಿ ಧರ್ಮಶಾಸ್ತ್ರವನ್ನು ಗ್ರಹಿಸಿಕೊಂಡರು.
4 ಆ ಸಮಯಕ್ಕೋಸ್ಕರವೇ ಕಟ್ಟಿದ ಮರದ ವೇದಿಕೆಯ ಮೇಲೆ ಎಜ್ರನು ನಿಂತಿದ್ದನು. ಅವನ ಬಲಬದಿಯಲ್ಲಿ ಮತ್ತಿತ್ಯ, ಶೆಮ, ಅನಾಯ, ಊರೀಯ, ಹಿಲ್ಕೀಯ ಮತ್ತು ಮಾಸೇಯ; ಎಡಬದಿಯಲ್ಲಿ ಪೆದಾಯ, ಮಿಷಾಯೇಲ್, ಮಲ್ಕೀಯ, ಹಾಷುಮ್, ಹಷ್ಬದ್ದಾನ, ಜೆಕರ್ಯ ಮತ್ತು ಮೆಷುಲ್ಲಾಮ್ ನಿಂತಿದ್ದರು.
5 ಎಜ್ರನು ಎತ್ತರವಾದ ವೇದಿಕೆಯ ಮೇಲೆ ನಿಂತಿದ್ದರಿಂದ ಎಲ್ಲರೂ ಅವನನ್ನು ನೋಡಲು ಸಾಧ್ಯವಾಯಿತು. ಎಜ್ರನು ಧರ್ಮಶಾಸ್ತ್ರವನ್ನು ತೆರೆಯುವಾಗ ಎಲ್ಲಾ ಜನರು ನಿಂತರು. 6 ಎಜ್ರನು ಮಹೋನ್ನತ ದೇವರಾದ ಯೆಹೋವನನ್ನು ಸ್ತುತಿಸಿದನು. ಆಗ ಜನರೆಲ್ಲರೂ ಕೈಗಳನ್ನೆತ್ತಿ, “ಆಮೆನ್! ಆಮೆನ್!” ಎಂದು ಹೇಳಿದರು; ತಲೆಬಾಗಿ ಯೆಹೋವನನ್ನು ಆರಾಧಿಸಿದರು.
7 ಅವರೆಲ್ಲಾ ನಿಂತಿರುವಾಗ ಲೇವಿಯರು ಧರ್ಮಶಾಸ್ತ್ರವನ್ನು ಅವರಿಗೆ ಓದಿತಿಳಿಸಿದರು. ಅವರು ಯಾರೆಂದರೆ: ಯೇಷೂವ, ಬಾನೀ, ಶೇರಬ್ಯ, ಯಾಮೀನ್, ಅಕ್ಕೂಬ್, ಶಬ್ಬೆತೈ, ಹೋದೀಯ, ಮಾಸೇಯ, ಕೆಲೀಟ, ಅಜರ್ಯ, ಯೋಜಾಬಾದ್, ಹಾನಾನ್ ಮತ್ತು ಪೆಲಾಯ. 8 ಈ ಲೇವಿಯರು ಜನರಿಗೆ ಅರ್ಥವಾಗುವ ರೀತಿಯಲ್ಲಿ ದೇವರ ಧರ್ಮಶಾಸ್ತ್ರವನ್ನು ವಿವರಿಸಿ ಹೇಳಿದರು.
9 ಆಗ ಜನರೆಲ್ಲಾ ಅಳಲು ಪ್ರಾರಂಭಿಸಿದರು. ಆಗ ರಾಜ್ಯಪಾಲನಾದ ನೆಹೆಮೀಯನೂ ಯಾಜಕನೂ ಮತ್ತು ಉಪದೇಶಕನೂ ಆಗಿದ್ದ ಎಜ್ರನೂ ಲೇವಿಯರೂ ಎದ್ದುನಿಂತು ಜನರಿಗೆ, “ಈ ದಿನವು ನಿಮ್ಮ ದೇವರಾದ ಯೆಹೋವನಿಗೆ ವಿಶೇಷ ದಿನವಾಗಿದೆ. ಆದ್ದರಿಂದ ದುಃಖಿಸಬೇಡಿ ಮತ್ತು ಅಳಬೇಡಿರಿ” ಎಂದು ಹೇಳಿದರು.
10 “ಹೋಗಿ ಮೃಷ್ಟಾನ್ನ ಭೋಜನ ಮಾಡಿ ಸಿಹಿ ಪಾನೀಯಗಳನ್ನು ಕುಡಿಯಿರಿ. ಅಡಿಗೆ ಮಾಡದೆ ಇದ್ದವರಿಗೂ ಅವುಗಳನ್ನು ಕೊಡಿರಿ. ಈ ದಿನ ಯೆಹೋವನಿಗೆ ವಿಶೇಷ ದಿನವಾಗಿದೆ. ದುಃಖಿಸಬೇಡಿರಿ. ಯಾಕೆಂದರೆ ಯೆಹೋವನ ಸಂತೋಷವು ನಮ್ಮನ್ನು ಬಲಗೊಳಿಸುತ್ತದೆ” ಎಂದು ನೆಹೆಮೀಯನು ಜನರಿಗೆ ಹೇಳಿದನು.
11 ಲೇವಿಯರು ಜನರಿಗೆ, “ದುಃಖಿಸಬೇಡಿರಿ, ಈ ದಿನ ವಿಶೇಷ ದಿನ. ಸಮಾಧಾನ ಮಾಡಿಕೊಳ್ಳಿ” ಎಂದು ಹೇಳಿದರು.
12 ಅನಂತರ ಎಲ್ಲರೂ ವಿಶೇಷ ಊಟಕ್ಕೆ ಹೋದರು, ಅವರು ತಮ್ಮ ಆಹಾರವನ್ನು ಮತ್ತು ಪಾನೀಯವನ್ನು ಹಂಚಿಕೊಂಡರು. ಅವರೆಲ್ಲರೂ ಸಂತೋಷದಿಂದ ಆ ವಿಶೇಷ ದಿನವನ್ನು ಆಚರಿಸಿದರು, ಧರ್ಮೋಪದೇಶಕರು ಉಪದೇಶಿಸಿದ ಯೆಹೋವನ ಕಟ್ಟಳೆಗಳನ್ನು ಅವರು ಅರ್ಥಮಾಡಿಕೊಂಡರು.
13 ಆ ತಿಂಗಳ ಎರಡನೆಯ ದಿನದಲ್ಲಿ ಗೋತ್ರಪ್ರಧಾನರೂ ಯಾಜಕರೂ ಲೇವಿಯರೂ ಧರ್ಮಶಾಸ್ತ್ರವನ್ನು ಅಭ್ಯಾಸಿಸಲು ಉಪದೇಶಕನಾದ ಎಜ್ರನ ಸುತ್ತಲೂ ಸೇರಿಬಂದರು.
14-15 ಅವರು ಅಭ್ಯಾಸಿಸಿದಾಗ ಧರ್ಮಶಾಸ್ತ್ರದಲ್ಲಿ ಈ ಆಜ್ಞೆಗಳನ್ನು ಕಂಡುಕೊಂಡರು: ಏಳನೆಯ ತಿಂಗಳಲ್ಲಿ ಯೆಹೋವನ ಆಜ್ಞೆಗನುಸಾರವಾಗಿ ವಿಶೇಷ ಹಬ್ಬವನ್ನು ಆಚರಿಸಲು ಜೆರುಸಲೇಮಿನಲ್ಲಿ ಸೇರಿಬಂದು ತಾತ್ಕಾಲಿಕವಾದ ಬಿಡಾರಗಳಲ್ಲಿ ವಾಸಿಸಬೇಕು. ಅವರು ತಮ್ಮ ಊರುಗಳ ಮತ್ತು ಜೆರುಸಲೇಮಿನ, “ಬೆಟ್ಟಪ್ರದೇಶಗಳಿಗೆ ಹೋಗಿ ಆಲೀವ್, ಖರ್ಜೂರ, ಕಾಡು ಆಲೀವ್, ಸುಗಂಧ ಮುಂತಾದ ಮರಗಳ ರೆಂಬೆಗಳನ್ನು ತೆಗೆದುಕೊಂಡು ಬಂದು ಅವುಗಳಿಂದ ಆ ಬಿಡಾರಗಳನ್ನು ಮಾಡಬೇಕು” ಎಂಬುದಾಗಿ ಯೆಹೋವನು ಮೋಶೆಗೆ ಕೊಟ್ಟಿದ್ದ ಆಜ್ಞೆಗಳೇ ಅವು.
16 ಜನರು ಹೋಗಿ ರೆಂಬೆಗಳನ್ನು ತಂದು ತಮಗಾಗಿ ತಾತ್ಕಾಲಿಕ ಬಿಡಾರಗಳನ್ನು ಮಾಡಿಕೊಂಡರು. ಅವರು ಈ ಬಿಡಾರಗಳನ್ನು ತಮ್ಮ ಮನೆಯ ಮೇಲ್ಛಾವಣಿಗೆಯಲ್ಲೂ ಮನೆಯ ಅಂಗಳಗಳಲ್ಲಿಯೂ, ದೇವಾಲಯದ ಅಂಗಳದಲ್ಲಿಯೂ “ಬುಗ್ಗೆ” ಮತ್ತು “ಎಫ್ರಾಯೀಮ್” ಎಂಬ ದ್ವಾರಗಳ ಸಮೀಪದಲ್ಲಿದ್ದ ಬಯಲುಗಳಲ್ಲಿಯೂ ಹಾಕಿಕೊಂಡರು. 17 ಸೆರೆವಾಸದಿಂದ ಮರಳಿಬಂದ ಇಸ್ರೇಲರು ಬಿಡಾರಗಳನ್ನು ಹಾಕಿಕೊಂಡು ಅವುಗಳಲ್ಲಿ ವಾಸಿಸಿದರು. ನೂನನ ಮಗನಾದ ಯೆಹೋಶುವನ ಕಾಲದಿಂದ ಇಂದಿನವರೆಗೂ ಇಸ್ರೇಲರು ಇಂಥ ಪರ್ಣಶಾಲೆಗಳ ಹಬ್ಬವನ್ನು ಆಚರಿಸಲಿಲ್ಲ. ಪ್ರತಿಯೊಬ್ಬರೂ ಬಹು ಸಂತೋಷಗೊಂಡಿದ್ದರು.
18 ಆ ಹಬ್ಬದ ದಿನಗಳ ಪ್ರತಿಯೊಂದು ದಿನದಲ್ಲಿ ಎಜ್ರನು ಧರ್ಮಶಾಸ್ತ್ರ ಪಾರಾಯಣ ಮಾಡಿದನು. ಮೊದಲನೆ ದಿನದಿಂದ ಪ್ರಾರಂಭಿಸಿ ಕಡೆಯ ದಿನದ ತನಕ ಇಸ್ರೇಲರೆಲ್ಲರೂ ಈ ಹಬ್ಬವನ್ನು ಏಳು ದಿನಗಳವರೆಗೆ ಆಚರಿಸಿದರು. ಎಂಟನೆಯ ದಿನದಲ್ಲಿ ಧರ್ಮಶಾಸ್ತ್ರದ ಪ್ರಕಾರ ವಿಶೇಷಕೂಟಗಳಿಗಾಗಿ ಜನರು ಒಟ್ಟಾಗಿ ಸೇರಿಬಂದರು.
ಇಸ್ರೇಲ್ ಜನರು ತಮ್ಮ ಪಾಪಗಳನ್ನು ಅರಿಕೆ ಮಾಡಿದ್ದು
9 ಅದೇ ತಿಂಗಳಿನ ಇಪ್ಪತ್ತನಾಲ್ಕನೆಯ ದಿನದಲ್ಲಿ ಇಸ್ರೇಲರು ತಿರಿಗಿ ಸೇರಿಬಂದು ಒಂದು ದಿನದ ಉಪವಾಸ ಮಾಡಿದರು. ಶೋಕಬಟ್ಟೆಯನ್ನು ಧರಿಸಿ, ತಲೆಗೆ ಬೂದಿಯನ್ನು ಹಾಕಿ ತಮ್ಮತಮ್ಮ ದುಃಖವನ್ನು ವ್ಯಕ್ತಪಡಿಸಿದರು. 2 ಅನ್ಯರ ಮಧ್ಯದಿಂದ ಇಸ್ರೇಲರು ತಮ್ಮನ್ನು ಪ್ರತ್ಯೇಕಿಸಿಕೊಂಡರು. ಅವರು ದೇವಾಲಯದೊಳಗೆ ನಿಂತು ತಮ್ಮ ಮತ್ತು ತಮ್ಮ ಪೂರ್ವಿಕರ ಪಾಪಗಳನ್ನು ಅರಿಕೆ ಮಾಡಿದರು. 3 ಮೂರು ತಾಸಿನ ತನಕ ಅವರು ನಿಂತುಕೊಂಡೇ ತಮ್ಮ ದೇವರಾದ ಯೆಹೋವನ ಧರ್ಮಶಾಸ್ತ್ರವನ್ನು ಕೇಳಿದರು; ಇನ್ನು ಮೂರು ತಾಸಿನ ತನಕ ತಮ್ಮತಮ್ಮ ಪಾಪಗಳನ್ನು ಅರಿಕೆ ಮಾಡಿಕೊಂಡು ತಮ್ಮ ದೇವರಾದ ಯೆಹೋವನಿಗೆ ತಲೆಬಾಗಿ ಆರಾಧಿಸಿದರು.
4 ಆಮೇಲೆ ಲೇವಿಯರಾದ ಯೇಷೂವ, ಬಾನೀ, ಕದ್ಮೀಯೇಲ್, ಶೆಬನ್ಯ, ಬುನ್ನೀ, ಶೇರೇಬ್ಯ, ಬಾನೀ ಮತ್ತು ಕೆನಾನೀ ಎಂಬವರು ಮೆಟ್ಟಿಲ ಮೇಲೆ ನಿಂತುಕೊಂಡು ಗಟ್ಟಿಯಾದ ಸ್ವರದಲ್ಲಿ ತಮ್ಮ ದೇವರಾದ ಯೆಹೋವನಿಗೆ ಮೊರೆಯಿಟ್ಟರು. 5 ಆ ಬಳಿಕ, ಲೇವಿಯರಾದ ಯೇಷೂವ, ಕದ್ಮೀಯೇಲ್, ಬಾನೀ, ಹಷಬ್ನೆಯ, ಶೇರೇಬ್ಯ, ಹೋದೀಯ, ಶೆಬನ್ಯ ಮತ್ತು ಪೆತಹ್ಯ ಎಂಬವರು, “ಎದ್ದುನಿಂತುಕೊಂಡು ನಿಮ್ಮ ದೇವರಾದ ಯೆಹೋವನನ್ನು ಸ್ತುತಿಸಿರಿ” ಎಂದು ಹೇಳಿದರು.
“ದೇವರು ಯಾವಾಗಲೂ ಇದ್ದಾತನಾಗಿದ್ದಾನೆ ಮತ್ತು ಯಾವಾಗಲೂ ಇರುವಾತನಾಗಿದ್ದಾನೆ.
ನಿನ್ನ ಮಹಿಮಾಪೂರ್ಣವಾದ ಹೆಸರನ್ನು ಜನರು ಕೊಂಡಾಡಲಿ;
ನಿನ್ನ ಹೆಸರು ಎಲ್ಲಾ ಸ್ತುತಿಕೀರ್ತನೆಗಳಿಗೆ ಮಿಗಿಲಾಗಿ ಎತ್ತಲ್ಪಡಲಿ.
6 ನೀನು ದೇವರಾಗಿರುವೆ.
ಯೆಹೋವನೇ, ನೀನೊಬ್ಬನೇ ದೇವರು.
ನೀನು ಆಕಾಶವನ್ನು ಉಂಟುಮಾಡಿರುವೆ.
ಪರಲೋಕವನ್ನು ನೀನೇ ಮಾಡಿರುವೆ.
ಅದರಲ್ಲಿರುವದನ್ನೆಲ್ಲಾ ನೀನೇ ನಿರ್ಮಿಸಿರುವೆ.
ಭೂಮಿಯನ್ನೂ ಅದರಲ್ಲಿರುವ
ಸಮಸ್ತವನ್ನೂ ಸೃಷ್ಟಿಸಿದ್ದು ನೀನೇ.
ಸಮುದ್ರಗಳನ್ನೂ ಅವುಗಳಲ್ಲಿರುವ
ಸಮಸ್ತವನ್ನೂ ಸೃಷ್ಟಿಸಿದಾತನು ನೀನೇ.
ಎಲ್ಲಾದಕ್ಕೂ ಜೀವಕೊಡುವಾತನು ನೀನೇ.
ಪರಲೋಕದ ದೂತರು ನಿನಗಡ್ಡಬಿದ್ದು ಆರಾಧಿಸುವರು.
7 ನೀನೇ ದೇವರಾದ ಯೆಹೋವನು.
ಅಬ್ರಾಮನನ್ನು ನೀನೇ ಆರಿಸಿಕೊಂಡೆ.
ಬಾಬಿಲೋನಿನ ಊರ್ ಎಂಬಲ್ಲಿಂದ ನೀನು ಅವನನ್ನು ನಡೆಸಿದೆ.
ಅವನ ಹೆಸರನ್ನು ಬದಲಾಯಿಸಿ ಅಬ್ರಹಾಮನೆಂದು ಕರೆದೆ.
8 ಅವನು ನ್ಯಾಯವಂತನೂ ಪ್ರಾಮಾಣಿಕನೂ ಆಗಿದ್ದಾನೆಂದು ತಿಳಿದು
ಅವನೊಂದಿಗೆ ಒಡಂಬಡಿಕೆ ಮಾಡಿಕೊಂಡೆ.
ಹಿತ್ತಿಯರ, ಕಾನಾನ್ಯರ, ಅಮೋರಿಯರ, ಪೆರಿಜ್ಜೀಯರ, ಯೆಬೂಸಿಯರ ಮತ್ತು ಗಿರ್ಗಾಷಿಯರ ನಾಡನ್ನು
ಅವನಿಗೂ ಅವನ ಸಂತತಿಯವರಿಗೂ ಕೊಡುವುದಾಗಿ ವಾಗ್ದಾನ ಮಾಡಿದೆ.
ನೀನು ನಿನ್ನ ವಾಗ್ದಾನವನ್ನು ನೆರವೇರಿಸಿದೆ.
ಯಾಕೆಂದರೆ ನೀನು ಒಳ್ಳೆಯವನಾಗಿರುವೆ.
9 ನಮ್ಮ ಪೂರ್ವಿಕರು ಈಜಿಪ್ಟಿನಲ್ಲಿ ಸಂಕಟ ಅನುಭವಿಸುವುದನ್ನು ನೀನು ನೋಡಿದೆ.
ಕೆಂಪು ಸಮುದ್ರದ ಬಳಿ ಸಹಾಯಕ್ಕಾಗಿ ಅವರು ಮೊರೆಯಿಟ್ಟಾಗ ನೀನು ಅವರಿಗೆ ಕಿವಿಗೊಟ್ಟೆ.
10 ಫರೋಹನಿಗೂ ಅವನ ಅಧಿಕಾರಿಗಳಿಗೂ ಅವನ ಜನರಿಗೂ
ವಿರೋಧವಾಗಿ ನೀನು ಅದ್ಭುತಕಾರ್ಯಗಳನ್ನೂ ಸೂಚಕಕಾರ್ಯಗಳನ್ನೂ ಮಾಡಿದೆ.
ಈಜಿಪ್ಟಿನವರು ತಮ್ಮನ್ನು ನಮ್ಮ ಪೂರ್ವಿಕರಿಗಿಂತ ಉತ್ತಮರೆಂದು
ಭಾವಿಸಿಕೊಂಡದ್ದು ನಿನಗೆ ಗೊತ್ತಿತ್ತು.
ಆದರೆ ನೀನು ಎಂಥಾ ಮಹಾ ವ್ಯಕ್ತಿಯೆಂದು ಅವರಿಗೆ ರುಜುವಾತುಪಡಿಸಿದೆ!
ಅದನ್ನು ಈಗಲೂ ಅವರು ನೆನಪು ಮಾಡುತ್ತಿರುತ್ತಾರೆ.
11 ಕೆಂಪುಸಮುದ್ರವನ್ನು ಅವರ ಕಣ್ಣು ಮುಂದೆಯೇ ಇಬ್ಬಾಗ ಮಾಡಿದೆ.
ಅವರು ಆ ಒಣನೆಲದಲ್ಲಿ ನಡೆದರು.
ಈಜಿಪ್ಟಿನ ವೈರಿಗಳು ಅವರನ್ನು ಹಿಂಬಾಲಿಸುತ್ತಿದ್ದರು.
ಆದರೆ ಆ ವೈರಿಗಳನ್ನು ನೀನು ಸಮುದ್ರದೊಳಗೆ ಬಿಸಾಡಿದೆ;
ಅವರು ಗುಂಡುಕಲ್ಲಿನಂತೆ ಸಮುದ್ರದಲ್ಲಿ ಮುಳುಗಿದರು.
12 ಹಗಲಿನಲ್ಲಿ ಅವರನ್ನು ನಡೆಸಲು ಮೇಘಸ್ತಂಭವನ್ನು ಉಪಯೋಗಿಸಿದೆ.
ರಾತ್ರಿವೇಳೆಯಲ್ಲಿ ಅಗ್ನಿಸ್ತಂಭವನ್ನು ಉಪಯೋಗಿಸಿದೆ.
ಹೀಗೆ ಅವರ ಮಾರ್ಗವನ್ನು ಬೆಳಕಿನಿಂದ ಹೊದಿಸಿದೆ.
ಎಲ್ಲಿಗೆ ಹೋಗಬೇಕೆಂದು ಅವರಿಗೆ ತೋರಿಸಿದಿ.
13 ಆಮೇಲೆ ಸೀನಾಯ ಬೆಟ್ಟಕ್ಕೆ ಇಳಿದುಬಂದೆ.
ಪರಲೋಕದಿಂದ ಅವರೊಂದಿಗೆ ಮಾತನಾಡಿದೆ.
ಅವರಿಗೆ ಒಳ್ಳೆಯ ಕಟ್ಟಳೆಗಳನ್ನು ದಯಪಾಲಿಸಿದೆ;
ಸತ್ಯಬೋಧನೆಯನ್ನು ನೀಡಿದೆ,
ವಿಧಿನಿಯಮಗಳನ್ನು ಕಲಿಸಿದೆ. ಅವುಗಳೆಲ್ಲಾ ಉತ್ತಮವಾದವುಗಳೇ.
14 ಅವರಿಗೆ ನಿನ್ನ ವಿಶೇಷ ದಿನವಾದ ಸಬ್ಬತ್ತನ್ನು ತಿಳಿಸಿದೆ.
ನಿನ್ನ ಸೇವಕನಾದ ಮೋಶೆಯ ಮುಖಾಂತರ
ಅವರಿಗೆ ಕಟ್ಟಳೆಗಳನ್ನು ತಿಳಿಸಿದೆ.
15 ಅವರು ಹಸಿದಿದ್ದಾಗ
ಪರಲೋಕದಿಂದ ಊಟವನ್ನು ಅವರಿಗೆ ದಯಪಾಲಿಸಿದೆ.
ಅವರು ಬಾಯಾರಿದಾಗ
ಬಂಡೆಯಿಂದ ಅವರಿಗೆ ನೀರನ್ನು ಕೊಟ್ಟೆ.
ನೀನು ಅವರಿಗೆ,
‘ಬನ್ನಿ, ಈ ದೇಶವನ್ನು ತೆಗೆದುಕೊಳ್ಳಿರಿ’ ಎಂದು ಹೇಳಿದೆ.
ನಿನ್ನ ಪರಾಕ್ರಮವನ್ನು ತೋರಿಸಿದೆ.
ಅವರಿಗಾಗಿ ಭೂಮಿಯನ್ನು ತೆಗೆದುಕೊಂಡೆ.
16 ನಮ್ಮ ಪೂರ್ವಿಕರು ಹೆಮ್ಮೆಯಿಂದ ತುಂಬಿದರು; ಅವರು ಹಠಮಾರಿಗಳಾದರು;
ನಿನ್ನ ಆಜ್ಞೆಯನ್ನು ಪರಿಪಾಲಿಸಲು ನಿರಾಕರಿಸಿದರು.
17 ನಿನ್ನ ಮಾತನ್ನು ಕೇಳಲು ನಿರಾಕರಿಸಿದರು.
ಅವರಿಗಾಗಿ ಅದ್ಭುತಕಾರ್ಯಗಳನ್ನು ಮಾಡಿದ್ದನ್ನು ಅವರು ಮರೆತರು.
ಅವರು ಹಠಮಾರಿಗಳಾಗಿದ್ದರಿಂದ
ತಮ್ಮನ್ನು ಈಜಿಪ್ಟಿನ ಗುಲಾಮಗಿರಿಗೆ ಮತ್ತೆ ಕರೆದೊಯ್ಯಲು ಒಬ್ಬ ನಾಯಕನನ್ನು ನೇಮಿಸಲು ಅವರು ನಿರ್ಧರಿಸಿದರು.[a]
“ಆದರೆ ನೀನು ಕ್ಷಮಿಸುವ ದೇವರಾಗಿರುವೆ.
ನೀನು ಕನಿಕರ ಉಳ್ಳವನಾಗಿರುವೆ.
ನೀನು ತಾಳ್ಮೆಯುಳ್ಳವನೂ ಪ್ರೀತಿಸ್ವರೂಪನೂ ಆಗಿರುವೆ.
ಆದ್ದರಿಂದ ನೀನು ಅವರನ್ನು ತೊರೆಯಲಿಲ್ಲ.
18 ಅವರು ಬಂಗಾರದಿಂದ ಕರುವಿನಾಕೃತಿಯ ವಿಗ್ರಹವನ್ನು ಮಾಡಿ,
‘ಈ ವಿಗ್ರಹವೇ ನಮ್ಮನ್ನು ಈಜಿಪ್ಟಿನಿಂದ ಕರೆದುಕೊಂಡು ಬಂದದ್ದು’ ಎಂದು ಹೇಳಿದರೂ
ನೀನು ಅವರನ್ನು ತೊರೆದುಬಿಡಲಿಲ್ಲ.
ಅವರು ನಿನಗೆ ವಿರೋಧವಾಗಿ ದೂಷಿಸಿ ಪಾಪಮಾಡಿದರು.
19 ನೀನು ತುಂಬಾ ಕನಿಕರವುಳ್ಳ ದೇವರು.
ಆದ್ದರಿಂದ ಅವರನ್ನು ಮರುಭೂಮಿಯಲ್ಲಿಯೇ ಬಿಡಲಿಲ್ಲ.
ಹಗಲಿನಲ್ಲಿ ಅವರಿಂದ ಎತ್ತರವಾದ
ಮೋಡವನ್ನು ತೆಗೆದುಬಿಡಲಿಲ್ಲ.
ನೀನು ಅವರನ್ನು ಮುನ್ನಡೆಸಿಕೊಂಡೇ ಹೋದೆ.
ರಾತ್ರಿಯಲ್ಲಿ ಅವರಿಂದ
ಅಗ್ನಿಸ್ತಂಭವನ್ನು ತೆಗೆದುಬಿಡಲಿಲ್ಲ.
ಅವರ ದಾರಿಗೆ ಬೆಳಕನ್ನು ನೀಡುತ್ತಾ
ಅವರು ಹೋಗತಕ್ಕ ದಾರಿಯಲ್ಲಿ ಮುನ್ನಡೆಸಿದೆ.
20 ಅವರು ಬುದ್ಧಿವಂತರಾಗುವಂತೆ ನಿನ್ನ ಒಳ್ಳೆಯ ಆತ್ಮನನ್ನು ಕೊಟ್ಟೆ.
ಮನ್ನವನ್ನು ಅವರಿಗೆ ಆಹಾರವಾಗಿ ಕೊಟ್ಟೆ.
ಅವರು ಬಾಯಾರಿದಾಗ ನೀರು ಕೊಟ್ಟೆ.
21 ನಲವತ್ತು ವರ್ಷ ಅವರನ್ನು ಸಾಕಿದೆ.
ಆ ಮರುಭೂಮಿಯಲ್ಲಿ ಅವರಿಗೆ ಬೇಕಾದದ್ದೇ ದೊರಕಿತು.
ಅವರ ಬಟ್ಟೆಗಳು ಹರಿದುಹೋಗಲಿಲ್ಲ.
ಅವರ ಪಾದಗಳು ನೋವಿನಿಂದ ಊದಿಕೊಳ್ಳಲಿಲ್ಲ.
22 ಯೆಹೋವನೇ, ನೀನು ಅವರಿಗೆ ರಾಜ್ಯಗಳನ್ನೂ ಜನಾಂಗಗಳನ್ನೂ ಕೊಟ್ಟೆ.
ಕೆಲವೇ ಜನರು ವಾಸವಾಗಿದ್ದ ಬಹುದೂರದ ಸ್ಥಳಗಳನ್ನು ಕೊಟ್ಟೆ.
ಹೆಷ್ಬೋನಿನ ರಾಜನಾದ ಸೀಹೋನನ ನಾಡನ್ನು
ಮತ್ತು ಬಾಷಾನಿನ ರಾಜನಾದ ಓಗನ ನಾಡನ್ನು ಅವರು ಪಡೆದುಕೊಂಡರು.
23 ಅವರ ಸಂತತಿಯವರನ್ನು
ಆಕಾಶದ ನಕ್ಷತ್ರಗಳಷ್ಟು ಮಾಡಿದೆ.
ಅವರ ಪೂರ್ವಿಕರಿಗೆ ಕೊಡುತ್ತೇನೆಂದು
ವಾಗ್ದಾನ ಮಾಡಿದ ದೇಶಕ್ಕೆ ತಂದೆ.
ಅವರು ಒಳಹೊಕ್ಕು ದೇಶವನ್ನು ಆಕ್ರಮಿಸಿದರು.
24 ಆ ಮಕ್ಕಳು ದೇಶವನ್ನು ಸ್ವಾಧೀನಪಡಿಸಿಕೊಂಡರು;
ಅಲ್ಲಿ ವಾಸಿಸಿದ್ದ ಕಾನಾನ್ಯರನ್ನು ಓಡಿಸಿದರು.
ಅವರನ್ನು ಸೋಲಿಸುವಂತೆ ನೀನೇ ಮಾಡಿದೆ.
ಆ ರಾಜ್ಯಗಳಿಗೆ, ರಾಜರುಗಳಿಗೆ ಅವರು ಮಾಡಬೇಕೆಂದಿದ್ದನ್ನು
ಮಾಡುವಂತೆ ಅವರಿಗೇ ಅವಕಾಶಮಾಡಿಕೊಟ್ಟೆ.
25 ಬಲಾಢ್ಯ ನಗರಗಳನ್ನು ಸ್ವಾಧೀನಪಡಿಸಿಕೊಂಡರು.
ಉತ್ತಮವಾದ ಭೂಮಿಯನ್ನು ವಶಪಡಿಸಿಕೊಂಡರು.
ಒಳ್ಳೆಯ ವಸ್ತುಗಳಿಂದ ತುಂಬಿದ್ದ ಮನೆಗಳನ್ನು ಅವರು ವಶಪಡಿಸಿಕೊಂಡರು.
ಅಗೆದು ತಯಾರಾಗಿದ್ದ ಬಾವಿಗಳನ್ನು ಅವರಿಗೆ ನೀನು ಕೊಟ್ಟೆ,
ದ್ರಾಕ್ಷಿತೋಟವನ್ನು, ಎಣ್ಣೆಮರಗಳ ತೋಪನ್ನು, ಬೇಕಾದಷ್ಟು ಹಣ್ಣಿನ ಮರಗಳನ್ನು ನೀನು ಅವರಿಗೆ ಕೊಟ್ಟೆ.
ಅವರ ಹೊಟ್ಟೆ ತುಂಬಿ ಕೊಬ್ಬೇರುವಷ್ಟು ಅವರಿಗೆ ಕೊಟ್ಟೆ.
ನೀನು ಕೊಟ್ಟ ಉತ್ತಮವಾದ ವಸ್ತುಗಳಲ್ಲಿ ಅವರು ಆನಂದಿಸಿದರು.
26 ಅವರು ನಿನಗೆ ಎದುರುಬಿದ್ದು
ನಿನ್ನ ಬೋಧನೆಯನ್ನು ತಾತ್ಸಾರ ಮಾಡಿದರು;
ನಿನ್ನ ಪ್ರವಾದಿಗಳನ್ನು ಕೊಂದರು.
ಆ ಪ್ರವಾದಿಗಳಾದರೋ ಜನರನ್ನು ಎಚ್ಚರಿಸಿದರು;
ನಿನ್ನ ಬಳಿಗೆ ಹಿಂತಿರುಗುವಂತೆ ಜನರನ್ನು ಪ್ರೋತ್ಸಾಹಿಸಿದರು.
ಆದರೆ ನಮ್ಮ ಪೂರ್ವಿಕರು ನಿನಗೆ ವಿರೋಧವಾಗಿ ಭಯಂಕರವಾದ ಕೃತ್ಯಗಳನ್ನು ಮಾಡಿದರು.
27 ಆದ್ದರಿಂದ ಅವರ ಶತ್ರುಗಳು ಅವರನ್ನು ಸದೆಬಡಿಯುವಂತೆ ಮಾಡಿದೆ.
ವೈರಿಗಳು ಅವರಿಗೆ ತುಂಬಾ ಕಷ್ಟಕೊಟ್ಟರು.
ಕಷ್ಟಬಂದಾಗ ನಮ್ಮ ಪೂರ್ವಿಕರು ನಿನಗೆ ಮೊರೆಯಿಟ್ಟರು.
ಪರಲೋಕದಿಂದ ನೀನು ಅವರನ್ನು ಆಲೈಸಿದೆ.
ನಿನ್ನ ಮಹಾಕರುಣೆಗನುಸಾರವಾಗಿ ನೀನು ಅವರ ಬಳಿಗೆ ಜನರನ್ನು ಕಳುಹಿಸಿ
ಅವರನ್ನು ಅವರ ವೈರಿಗಳ ಕೈಗಳಿಂದ ರಕ್ಷಿಸಿದೆ.
28 ನಮ್ಮ ಪೂರ್ವಿಕರಿಗೆ ವಿಶ್ರಾಂತಿ ಸಿಕ್ಕಿದ ಕೂಡಲೇ
ಅವರು ಮತ್ತೆ ದುಷ್ಕೃತ್ಯಗಳನ್ನು ಮಾಡಲಾರಂಭಿಸಿದರು.
ಆದ್ದರಿಂದ ಆ ವೈರಿಗಳು ಅವರನ್ನು ಸೋಲಿಸಿ
ಶಿಕ್ಷಿಸುವಂತೆ ನೀನು ಮಾಡಿದೆ.
ಅವರು ನಿನ್ನ ಸಹಾಯಕ್ಕಾಗಿ ಮೊರೆಯಿಟ್ಟರು.
ಪರಲೋಕದಲ್ಲಿ ನೀನು ಅವರ ಮೊರೆಯನ್ನು ಕೇಳಿ ಅವರಿಗೆ ಸಹಾಯಮಾಡಿದೆ.
ನೀನು ದಯಾಳು!
ಈ ರೀತಿ ಅನೇಕಸಲ ಆಯಿತು.
29 ನೀನು ಅವರನ್ನು ಎಚ್ಚರಿಸಿದೆ.
ನನ್ನ ಕಡೆಗೆ ತಿರುಗಿರಿ ಎಂದು ಎಚ್ಚರಿಸಿದೆ.
ಆದರೆ ಅವರು ಗರ್ವಿಷ್ಟರಾಗಿ ನಿನ್ನ ಆಜ್ಞೆಗಳನ್ನು ನಿರಾಕರಿಸಿದರು.
ನಿನ್ನ ಆಜ್ಞೆಗಳನ್ನು ಅನುಸರಿಸುವ ಜನರು ನಿಜವಾಗಿಯೂ ಬಾಳುವರು.
ನಮ್ಮ ಪೂರ್ವಿಕರು ನಿನ್ನ ಆಜ್ಞೆಯನ್ನು ಮುರಿದುಹಾಕಿದರು;
ಅವರು ಹಠಮಾರಿಗಳಾಗಿ ನಿನಗೆ ವಿಮುಖರಾದರು;
ನಿನ್ನ ಮಾತುಗಳನ್ನು ಕೇಳದೆಹೋದರು.
30 “ನೀನು ನಮ್ಮ ಪೂರ್ವಿಕರ ವಿಷಯದಲ್ಲಿ ತಾಳ್ಮೆಯಿಂದಿದ್ದೆ.
ನಿನ್ನ ವಿಷಯದಲ್ಲಿ ತಪ್ಪಾಗಿ ನಡೆದುಕೊಳ್ಳಲು ಅನೇಕ ವರ್ಷಗಳವರೆಗೆ ಅವರನ್ನು ಬಿಟ್ಟುಬಿಟ್ಟೆ.
ನೀನು ಅವರನ್ನು ನಿನ್ನ ಆತ್ಮನಿಂದ ಎಚ್ಚರಿಸಿದೆ;
ಅವರನ್ನು ಎಚ್ಚರಿಸಲು ನಿನ್ನ ಪ್ರವಾದಿಗಳನ್ನು ಕಳುಹಿಸಿದೆ.
ಆದರೆ ನಮ್ಮ ಪೂರ್ವಿಕರು ಕಿವಿಗೊಡಲಿಲ್ಲ.
ಆದ್ದರಿಂದ ಪರರಾಜ್ಯದ ಜನರಿಗೆ ಅವರನ್ನು ಒಪ್ಪಿಸಿದೆ.
31 “ಆದರೂ ನೀನು ದಯಾವಂತನು,
ಅವರನ್ನು ಸಂಪೂರ್ಣವಾಗಿ ನಾಶಮಾಡಲಿಲ್ಲ.
ಅವರನ್ನು ತೊರೆಯಲಿಲ್ಲ.
ನೀನು ಅಂಥಾ ದಯಾಪರನಾದ ದೇವರು.
32 ನಮ್ಮ ದೇವರೇ, ನೀನು ಮಹಾ ದೇವರು,
ಭಯಂಕರನೂ ಬಲಿಷ್ಠ ಸೈನಿಕನೂ ಆಗಿರುವ ದೇವರು!
ನೀನು ದಯಾಪರನೂ ನಂಬಿಗಸ್ತನೂ ಆಗಿರುವಿ.
ನಿನ್ನ ಒಡಂಬಡಿಕೆಯನ್ನು ನೆರವೇರಿಸುವ ದೇವರು.
ನಾವು ತುಂಬಾ ಸಂಕಟಗಳನ್ನು ಅನುಭವಿಸಿದೆವು.
ನಮ್ಮ ಸಂಕಟಗಳು ನಿನಗೆ ವಿಶೇಷವಾದವುಗಳಾಗಿವೆ.
ನಮ್ಮ ಜನರಿಗೆಲ್ಲಾ ತೊಂದರೆಗಳುಂಟಾದವು.
ನಮ್ಮ ನಾಯಕರಿಗೂ ರಾಜನಿಗೂ ನಮ್ಮ ಯಾಜಕರಿಗೂ ಪ್ರವಾದಿಗಳಿಗೂ
ಅಶ್ಶೂರ್ಯದ ರಾಜನ ಸಮಯದಿಂದ ಈ ದಿವಸದ ತನಕ ಭಯಂಕರ ಕಷ್ಟಗಳು ಬಂದೊದಗಿದವು.
33 ಆದರೆ ದೇವರೇ, ನಮಗೆ ಸಂಭವಿಸುವ ಪ್ರತಿಯೊಂದರಲ್ಲೂ ನಿನ್ನದೇನೂ ತಪ್ಪಿಲ್ಲ.
ನೀನು ನ್ಯಾಯವಂತನೇ ಸರಿ. ನಾವೇ ತಪ್ಪಿತಸ್ಥರು.
34 ನಮ್ಮ ರಾಜರುಗಳು, ನಾಯಕರು, ಯಾಜಕರು ಮತ್ತು ನಮ್ಮ ಪೂರ್ವಿಕರು ನಿನ್ನ ಆಜ್ಞೆಯನ್ನು ಅನುಸರಿಸಲಿಲ್ಲ.
ನಿನ್ನ ಎಚ್ಚರಿಕೆಯನ್ನು ಲಕ್ಷ್ಯಕ್ಕೆ ತರಲಿಲ್ಲ.
35 ನಮ್ಮ ಪೂರ್ವಿಕರು ನಿನ್ನ ಸೇವೆಮಾಡಲಿಲ್ಲ. ತಮ್ಮ ಸ್ವಂತ ದೇಶದಲ್ಲಿ ವಾಸಿಸುವಾಗಲೂ ನಿನ್ನ ಸೇವೆಮಾಡಲಿಲ್ಲ;
ಕೆಟ್ಟತನವನ್ನು ನಿಲ್ಲಿಸಲಿಲ್ಲ.
ನೀನು ಕೊಟ್ಟ ಉತ್ತಮ ವಸ್ತುಗಳಲ್ಲಿಯೂ ಉತ್ತಮ ಭೂಮಿಯಲ್ಲಿಯೂ ಆನಂದಿಸಿದರು.
ಅವರಿಗೆ ಬೇಕಾದಷ್ಟು ಜಮೀನಿತ್ತು.
ಆದರೂ ಅವರು ತಮ್ಮ ದುಷ್ಟತನವನ್ನು ನಿಲ್ಲಿಸಲಿಲ್ಲ.
36 ಈಗ ನಾವು ಈ ನಾಡಿನಲ್ಲಿ ಗುಲಾಮರಾಗಿದ್ದೇವೆ.
ಈ ನಾಡಿನ ಫಲವನ್ನು ಮತ್ತು ಇದರಲ್ಲಿ ಬೆಳೆಯುವ ಒಳ್ಳೆಯ ಫಸಲುಗಳನ್ನು
ಅನುಭವಿಸಲು ನೀನು ಈ ನಾಡನ್ನು ನಮ್ಮ ಪೂರ್ವಿಕರಿಗೆ ಕೊಟ್ಟೆ.
37 ಫಸಲು ಇಲ್ಲಿ ಉತ್ತಮವಾಗಿದೆ.
ನಾವು ಪಾಪಮಾಡಿದ್ದರಿಂದ ನಮ್ಮ ಸುಗ್ಗಿಯು ನಮ್ಮನ್ನಾಳುವ ರಾಜರಿಗೆ ಹೋಗಿಬಿಡುತ್ತದೆ.
ಆ ರಾಜರುಗಳು ನಮ್ಮನ್ನೂ ನಮ್ಮ ದನಕರುಗಳನ್ನೂ ತಮ್ಮ ಹತೋಟಿಯೊಳಗೆ ಇಟ್ಟಿರುತ್ತಾರೆ.
ನಮ್ಮನ್ನು ತಮಗೆ ಇಷ್ಟಬಂದಂತೆ ನಡಿಸುತ್ತಾರೆ.
ಆದ್ದರಿಂದ ನಾವು ಬಹಳ ಸಂಕಟದಲ್ಲಿ ಸಿಕ್ಕಿಕೊಂಡಿದ್ದೇವೆ.”
38 “ಈ ಕಾರಣಗಳಿಂದ ಶಾಶ್ವತವಾದ ಒಡಂಬಡಿಕೆಯನ್ನು ನಾವು ನಿನ್ನೊಂದಿಗೆ ಮಾಡುತ್ತೇವೆ. ಆ ಒಡಂಬಡಿಕೆಯನ್ನು ನಾವು ಬರವಣಿಗೆಯಲ್ಲಿ ಮಾಡುತ್ತೇವೆ. ನಮ್ಮ ನಾಯಕರೂ, ಯಾಜಕರೂ, ಲೇವಿಯರೂ ಅದಕ್ಕೆ ಸಹಿ ಮಾಡುವರು ಮತ್ತು ಅದಕ್ಕೆ ಮುದ್ರೆಯನ್ನು ಹಾಕುವರು.”
ಪೇತ್ರನಿಂದ ಗುಣಹೊಂದಿದ ಕುಂಟ
3 ಒಂದು ದಿನ ಪೇತ್ರ ಮತ್ತು ಯೋಹಾನ ದೇವಾಲಯಕ್ಕೆ ಹೋದರು. ಆಗ ಮಧ್ಯಾಹ್ನ ಮೂರು ಗಂಟೆಯ ಸಮಯವಾಗಿತ್ತು. ಈ ವೇಳೆಯಲ್ಲೇ ಪ್ರತಿದಿನ ಪ್ರಾರ್ಥನಾಕೂಟ ನಡೆಯುತ್ತಿತ್ತು. 2 ಅವರು ದೇವಾಲಯಕ್ಕೆ ಹೋಗುತ್ತಿದ್ದಾಗ ಅಲ್ಲೊಬ್ಬ ಹುಟ್ಟುಕುಂಟನಿದ್ದನು. ಅವನಿಗೆ ನಡೆಯಲಾಗುತ್ತಿರಲಿಲ್ಲ. ಆದ್ದರಿಂದ ಅವನ ಕೆಲವು ಸ್ನೇಹಿತರು ಅವನನ್ನು ಪ್ರತಿದಿನ ದೇವಾಲಯಕ್ಕೆ ಹೊತ್ತುಕೊಂಡು ಬಂದು, ದೇವಾಲಯದ ಹೊರ ಬಾಗಿಲುಗಳ ಒಂದರ ಸಮೀಪದಲ್ಲಿ ಕುಳ್ಳಿರಿಸುತ್ತಿದ್ದರು. ಆ ಬಾಗಿಲಿನ ಹೆಸರು “ಸುಂದರ ದ್ವಾರ.” ಅವನು ದೇವಾಲಯಕ್ಕೆ ಹೋಗುವ ಜನರಿಂದ ಭಿಕ್ಷೆ ಬೇಡುತ್ತಿದ್ದನು. 3 ಅಂದು ದೇವಾಲಯದೊಳಕ್ಕೆ ಹೋಗುತ್ತಿದ್ದ ಪೇತ್ರ ಮತ್ತು ಯೋಹಾನರನ್ನು ಕಂಡು ಭಿಕ್ಷೆ ಕೇಳಿದನು.
4 ಪೇತ್ರ ಮತ್ತು ಯೋಹಾನ ಆ ಕುಂಟನಿಗೆ, “ನಮ್ಮನ್ನು ನೋಡು!” ಎಂದರು. 5 ಅವನು ಅವರನ್ನು ನೋಡಿದನು. ಅವರು ಸ್ವಲ್ಪ ಹಣಕೊಡಬಹುದೆಂದು ಅವನು ಭಾವಿಸಿಕೊಂಡನು. 6 ಆದರೆ ಪೇತ್ರನು, “ನನ್ನಲ್ಲಿ ಬೆಳ್ಳಿಬಂಗಾರಗಳಿಲ್ಲ, ಆದರೆ ನನ್ನಲ್ಲಿರುವುದನ್ನು ನಿನಗೆ ಕೊಡಬಲ್ಲೆನು. ನಜರೇತಿನ ಯೇಸು ಕ್ರಿಸ್ತನ ಹೆಸರಿನಲ್ಲಿ ಎದ್ದುನಡೆ!” ಎಂದು ಹೇಳಿ,
7 ಆ ಮನುಷ್ಯನ ಕೈಹಿಡಿದು ಎತ್ತಿದನು. ಆ ಕೂಡಲೇ ಅವನ ಕಾಲುಗಳು ಮತ್ತು ಪಾದಗಳು ಬಲಗೊಂಡವು. 8 ಅವನು ಜಿಗಿದು, ತನ್ನ ಪಾದಗಳ ಮೇಲೆ ನಿಂತುಕೊಂಡು ನಡೆಯತೊಡಗಿದನು. ಅವನೂ ಅವರೊಂದಿಗೆ ದೇವಾಲಯಕ್ಕೆ ಹೋದನು. ಅವನು ನಡೆಯುತ್ತಾ ಜಿಗಿಯುತ್ತಾ ದೇವರನ್ನು ಕೊಂಡಾಡುತ್ತಿದ್ದನು. 9-10 ಜನರೆಲ್ಲರೂ ಅವನನ್ನು ಗುರುತಿಸಿದರು. ಸುಂದರ ದ್ವಾರದ ಬಳಿಯಲ್ಲಿ ಯಾವಾಗಲೂ ಕುಳಿತುಕೊಂಡು ಭಿಕ್ಷೆ ಬೇಡುತ್ತಿದ್ದ ಕುಂಟನೇ ಇವನೆಂದು ಜನರಿಗೆ ತಿಳಿದಿತ್ತು. ಈಗ ಅದೇ ವ್ಯಕ್ತಿಯು ನಡೆಯುತ್ತಾ ದೇವರನ್ನು ಕೊಂಡಾಡುತ್ತಿರುವುದನ್ನು ಕಂಡು ಅವರು ಆಶ್ಚರ್ಯಗೊಂಡು ಬೆರಗಾದರು.
ಜನರಿಗೆ ಪೇತ್ರನ ವಿವರಣೆ
11 ಆ ಮನುಷ್ಯನು ಪೇತ್ರ ಮತ್ತು ಯೋಹಾನರನ್ನು ಹಿಡಿದುಕೊಂಡೇ ನಿಂತಿದ್ದನು. ಅವನಿಗೆ ಗುಣವಾದದ್ದರಿಂದ ಜನರೆಲ್ಲರೂ ಆಶ್ಚರ್ಯಗೊಂಡಿದ್ದರು. ಸೊಲೊಮೋನನ ಮಂಟಪದ ಬಳಿ ನಿಂತಿದ್ದ ಪೇತ್ರ ಮತ್ತು ಯೋಹಾನರ ಬಳಿ ಅವರು ಓಡಿಬಂದರು.
12 ಆಗ ಪೇತ್ರನು ಅವರಿಗೆ, “ನನ್ನ ಯೆಹೂದ್ಯ ಸಹೋದರರೇ, ಇದನ್ನು ಕಂಡು ನೀವು ಯಾಕೆ ಆಶ್ಚರ್ಯಗೊಂಡಿರುವಿರಿ? ಈ ಮನುಷ್ಯನನ್ನು ನಡೆಯುವಂತೆ ಮಾಡಿದ್ದು ನಮ್ಮ ಶಕ್ತಿಯೆಂದು ನೀವು ನಮ್ಮನ್ನು ನೋಡುತ್ತಿರುವಿರಾ? ನಾವು ಒಳ್ಳೆಯವರಾಗಿರುವುದರಿಂದ ಈ ಕಾರ್ಯವಾಯಿತೆಂದು ಭಾವಿಸಿಕೊಂಡಿದ್ದೀರಾ? 13 ಈ ಕಾರ್ಯವನ್ನು ಮಾಡಿದ್ದು ನಾವಲ್ಲ! ದೇವರು! ಆತನೇ ಅಬ್ರಹಾಮನ ದೇವರು, ಇಸಾಕನ ದೇವರು ಮತ್ತು ಯಾಕೋಬನ[a] ದೇವರು. ಆತನೇ ನಮ್ಮ ಪಿತೃಗಳೆಲ್ಲರ ದೇವರು. ಆತನು ತನ್ನ ವಿಶೇಷ ಸೇವಕನಾದ ಯೇಸುವನ್ನು ಮಹಿಮೆಪಡಿಸಿದ್ದಾನೆ. ಆದರೆ ನೀವು ಯೇಸುವನ್ನು ಕೊಲ್ಲಲು ಒಪ್ಪಿಸಿಕೊಟ್ಟಿರಿ. ಯೇಸುವನ್ನು ಬಿಡುಗಡೆ ಮಾಡಲು ಪಿಲಾತನು ನಿರ್ಧರಿಸಿದನು. ಆದರೆ ನೀವು ಪಿಲಾತನಿಗೆ, ನಮಗೆ ಯೇಸು ಬೇಕಿಲ್ಲವೆಂದು ಹೇಳಿದಿರಿ. 14 ಯೇಸು ಪರಿಶುದ್ಧನಾಗಿದ್ದನು ಮತ್ತು ಒಳ್ಳೆಯವನಾಗಿದ್ದನು. ಆದರೆ ನೀವು ಆತನನ್ನು ತಿರಸ್ಕರಿಸಿದಿರಿ. ಆತನ ಬದಲಾಗಿ ಕೊಲೆಗಾರನನ್ನು[b] ಬಿಡುಗಡೆ ಮಾಡಬೇಕೆಂದು ಪಿಲಾತನನ್ನು ಬೇಡಿಕೊಂಡಿರಿ. 15 ಹೀಗೆ ನೀವು ಜೀವದಾಯಕನನ್ನೇ ಕೊಂದುಹಾಕಿದಿರಿ! ಆದರೆ ದೇವರು ಆತನನ್ನು ಸತ್ತವರೊಳಗಿಂದ ಜೀವಂತವಾಗಿ ಎಬ್ಬಿಸಿದನು. ಇದಕ್ಕೆ ನಾವೇ ಸಾಕ್ಷಿಗಳು. ಇದನ್ನು ನಾವು ಕಣ್ಣಾರೆ ಕಂಡಿದ್ದೇವೆ.
16 “ನಿಮ್ಮ ಕಣ್ಣೆದುರಿಗಿರುವ ಇವನ ಪರಿಚಯ ನಿಮ್ಮೆಲ್ಲರಿಗೂ ಇದೆ. ಇವನು ಗುಣವಾದದ್ದಕ್ಕೆ ಇವನು ಯೇಸುವಿನ ಹೆಸರಿನಲ್ಲಿ ಇಟ್ಟ ನಂಬಿಕೆಯೇ ಕಾರಣ. ಆ ಹೆಸರೇ ಇವನನ್ನು ಬಲಪಡಿಸಿತು. ಆತನ ಮೂಲಕ ಉಂಟಾಗಿರುವ ನಂಬಿಕೆಯೇ ಇವನನ್ನು ನಿಮ್ಮೆಲ್ಲರ ಮುಂದೆ ಗುಣಪಡಿಸಿತು.
17 “ಸಹೋದರರೇ, ನೀವು ತಿಳಿಯದೆ ಯೇಸುವಿಗೆ ಹೀಗೆ ಮಾಡಿದಿರೆಂದು ನನಗೆ ಗೊತ್ತಿದೆ. ನಿಮ್ಮ ನಾಯಕರು ಸಹ ಅರ್ಥಮಾಡಿಕೊಳ್ಳಲಿಲ್ಲ. 18 ಹೀಗಾಗುತ್ತದೆ ಎಂದು ದೇವರು ಮೊದಲೇ ತಿಳಿಸಿದ್ದನು. ಕ್ರಿಸ್ತನು ಶ್ರಮೆ ಅನುಭವಿಸಿ ಸಾಯುವನೆಂದು ದೇವರು ತನ್ನ ಪ್ರವಾದಿಗಳ ಮೂಲಕ ಮೊದಲೇ ತಿಳಿಸಿದ್ದನ್ನು ಹೀಗೆ ನೆರವೇರಿಸಿದ್ದಾನೆ. 19 ಆದ್ದರಿಂದ ನೀವು ನಿಮ್ಮ ಪಾಪಗಳಿಗಾಗಿ ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಳ್ಳಿ. ಆಗ ಆತನು ನಿಮ್ಮ ಪಾಪಗಳನ್ನು ಕ್ಷಮಿಸುವನು. 20 ಪ್ರಭುವು ನಿಮಗೆ ಆತ್ಮಿಕ ವಿಶ್ರಾಂತಿಯನ್ನು ಕೊಡುವನು. ಆತನು ಕ್ರಿಸ್ತನನ್ನಾಗಿ ಆರಿಸಿಕೊಂಡ ಯೇಸುವನ್ನು ನಿಮಗೆ ಕೊಡುವನು.
21 “ಆದರೆ ಎಲ್ಲವನ್ನು ಸರಿಪಡಿಸುವ ಕಾಲ ಬರುವ ತನಕ ಯೇಸು ಪರಲೋಕದಲ್ಲೇ ಇರಬೇಕು. ದೇವರು ಬಹುಕಾಲದ ಹಿಂದೆ ತನ್ನ ಪವಿತ್ರ ಪ್ರವಾದಿಗಳ ಸಂದೇಶದ ಮೂಲಕ ಮಾತಾಡಿದಾಗ, ಈ ಕಾಲದ ಬಗ್ಗೆ ಹೇಳಿದನು. 22 ಮೋಶೆಯು ಇಂತೆಂದಿದ್ದಾನೆ: ‘ನಿಮ್ಮ ದೇವರಾದ ಪ್ರಭುವು ನಿಮಗೊಬ್ಬ ಪ್ರವಾದಿಯನ್ನು ಕೊಡುವನು. ನಿಮ್ಮ ಸ್ವಂತ ಜನರ ಮಧ್ಯದಿಂದಲೇ ಆ ಪ್ರವಾದಿ ಬರುವನು. ಆತನು ನನ್ನಂತೆ ಇರುವನು. ಆ ಪ್ರವಾದಿ ಹೇಳುವ ಪ್ರತಿಯೊಂದಕ್ಕೂ ನೀವು ವಿಧೇಯರಾಗಬೇಕು. 23 ಆತನಿಗೆ ವಿಧೇಯನಾಗದವನು ದೇವಜನರಿಂದ ಬೇರ್ಪಟ್ಟು ಮರಣ ಹೊಂದುವನು.’(A)
24 “ಸಮುವೇಲನು ಮತ್ತು ಅವನ ನಂತರದ ಪ್ರವಾದಿಗಳು ಇಂದಿನ ಈ ಕಾಲದ ಬಗ್ಗೆ ಮಾತಾಡಿದರು. 25 ಆ ಪ್ರವಾದಿಗಳು ಹೇಳಿದ ಸಂಗತಿಗಳನ್ನು ನೀವು ಸ್ವೀಕರಿಸಿಕೊಂಡಿರುವಿರಿ. ದೇವರು ನಿಮ್ಮ ಪಿತೃಗಳೊಂದಿಗೆ ಮಾಡಿಕೊಂಡ ಒಪ್ಪಂದವನ್ನು ನೀವು ಸ್ವೀಕರಿಸಿಕೊಂಡಿರುವಿರಿ. ದೇವರು ನಿಮ್ಮ ಪಿತೃವಾದ ಅಬ್ರಹಾಮನಿಗೆ, ‘ನಿನ್ನ ಸಂತತಿಯಿಂದ ಭೂಮಿಯ ಮೇಲಿರುವ ಜನರೆಲ್ಲರು ಆಶೀರ್ವಾದ ಹೊಂದುವರು’(B) ಎಂದು ಹೇಳಿದನು. 26 ದೇವರು ತನ್ನ ವಿಶೇಷ ಸೇವಕನನ್ನು (ಯೇಸುವನ್ನು) ಮೊಟ್ಟಮೊದಲು ನಿಮ್ಮ ಬಳಿಗೆ ಕಳುಹಿಸಿದನು. ನಿಮ್ಮನ್ನು ಆಶೀರ್ವದಿಸುವುದಕ್ಕಾಗಿ ದೇವರು ಯೇಸುವನ್ನು ಕಳುಹಿಸಿದನು. ಆತನು ನಿಮ್ಮನ್ನು ನಿಮ್ಮ ಕೆಟ್ಟಕಾರ್ಯಗಳಿಂದ ದೂರಮಾಡಿ ಆಶೀರ್ವದಿಸುತ್ತಾನೆ.”
Kannada Holy Bible: Easy-to-Read Version. All rights reserved. © 1997 Bible League International