Old/New Testament
ದಾರ್ಯಾವೆಷನ ಆಜ್ಞೆ
6 ತನಗಿಂತ ಮೊದಲು ರಾಜರಾಗಿದ್ದವರ ವೃತ್ತಾಂತ ಪುಸ್ತಕಗಳನ್ನು ತರಿಸಿ ದಾರ್ಯಾವೆಷನು ಶೋಧಿಸಿದನು. ಈ ಪುಸ್ತಕಗಳು ರಾಜ ಖಜಾನೆಯಲ್ಲಿ ಇಡಲ್ಪಟ್ಟಿದ್ದವು. 2 ಮೇದ್ಯ ಪ್ರಾಂತ್ಯದ ಎಕ್‌ಬಟಾನ ಎಂಬ ಕೋಟೆಯೊಳಗೆ ಒಂದು ಸುರುಳಿಯು ದೊರಕಿತು. ಆ ಸುರುಳಿಯಲ್ಲಿ ಈ ರೀತಿಯಾಗಿ ಬರೆದಿತ್ತು:
ಸರಕಾರದ ಆಜ್ಞೆ: 3 ರಾಜನಾದ ಸೈರಸನ ಆಳ್ವಿಕೆಯ ಮೊದಲನೆಯ ವರ್ಷದಲ್ಲಿ ಜೆರುಸಲೇಮಿನಲ್ಲಿರುವ ದೇವಾಲಯದ ವಿಷಯವಾಗಿ ಸೈರಸ್ ರಾಜನು ಹೊರಡಿಸಿದ ರಾಜಾಜ್ಞೆ:
ದೇವಾಲಯವು ಮತ್ತೆ ಕಟ್ಟಲ್ಪಡಲಿ. ಅದು ಹೋಮಯಜ್ಞಾದಿಗಳನ್ನು ಸಮರ್ಪಿಸುವ ಸ್ಥಳವಾಗಲಿ. ದೇವಾಲಯದ ಅಸ್ತಿವಾರವು ಬಲವಾಗಿರಬೇಕು. ಅದರ ಎತ್ತರ ತೊಂಭತ್ತು ಅಡಿ ಇರಬೇಕು. ಅದರ ಅಗಲ ತೊಂಭತ್ತು ಅಡಿ ಇರಬೇಕು. 4 ಅದರ ಗೋಡೆಯಲ್ಲಿ ಮೂರುಸಾಲು ದೊಡ್ಡ ಗಾತ್ರದ ಕಲ್ಲುಗಳಿರಬೇಕು; ಒಂದು ಸಾಲಿನಲ್ಲಿ ಮರದ ತೊಲೆಗಳಿರಬೇಕು. ದೇವಾಲಯ ಕಟ್ಟಲು ತಗಲುವ ಖರ್ಚುವೆಚ್ಚವೆಲ್ಲವನ್ನು ರಾಜನ ಖಜಾನೆಯಿಂದ ಕೊಡಬೇಕು. 5 ಬೆಳ್ಳಿಬಂಗಾರಗಳ ವಸ್ತುಗಳೆಲ್ಲವನ್ನು ಜೆರುಸಲೇಮಿನ ದೇವಾಲಯದಿಂದ ನೆಬೂಕದ್ನೆಚ್ಚರನು ಸೂರೆಮಾಡಿ ಬಾಬಿಲೋನಿಗೆ ತಂದದ್ದನ್ನು ದೇವಾಲಯದಲ್ಲಿ ಇಡಬೇಕು.
6 ಹೀಗಿರುವದರಿಂದ, ದಾರ್ಯಾವೇಷನಾದ ನಾನು,
ಯೂಫ್ರೇಟೀಸ್ ನದಿಯ ಪಶ್ಚಿಮ ಪ್ರಾಂತ್ಯಕ್ಕೆ ರಾಜ್ಯಪಾಲನಾಗಿರುವ ತತ್ತೆನೈ ಎಂಬ ನಿನಗೂ ಶೆತರ್ಬೋಜೆನೈ ಮತ್ತು ಆ ಪ್ರಾಂತ್ಯದ ಎಲ್ಲಾ ಅಧಿಕಾರಿಗಳಿಗೂ ಆಜ್ಞೆ ಕೊಡುವದೇನೆಂದರೆ, ಜೆರುಸಲೇಮಿನಿಂದ ನೀವು ದೂರವಾಗಿರಿ. 7 ಕೆಲಸ ಮಾಡುವವರನ್ನು ತೊಂದರೆಪಡಿಸಬೇಡಿ. ದೇವಾಲಯ ಕಟ್ಟುವ ಕೆಲಸವನ್ನು ನಿಲ್ಲಿಸುವ ಪ್ರಯತ್ನ ಮಾಡಬೇಡಿ. ಯೆಹೂದ್ಯರ ದೇಶಾಧಿಪತಿ ಮತ್ತು ಯೆಹೂದ್ಯ ನಾಯಕರು ಅದನ್ನು ಮತ್ತೆ ಕಟ್ಟಲಿ. ಹಿಂದಿನ ದೇವಾಲಯವಿದ್ದಲ್ಲಿಯೇ ಹೊಸದನ್ನು ಕಟ್ಟಲಿ.
8 ಈಗ ನಾನು ನಿಮಗೆ ಕೊಡುವ ಆಜ್ಞೆ ಏನೆಂದರೆ, ದೇವಾಲಯ ಕಟ್ಟುವ ಯೆಹೂದ್ಯ ನಾಯಕರಿಗೆ ನೀವು ಸಂಪೂರ್ಣ ಖರ್ಚನ್ನು ಸರಕಾರದ ಖಜಾನೆಯಿಂದ ಕೊಡಬೇಕು. ಇದಕ್ಕೆ ಬೇಕಾದ ಹಣವನ್ನು ಯೂಫ್ರೇಟೀಸ್ ನದಿಯ ಪಶ್ಚಿಮ ಪ್ರಾಂತ್ಯದ ಜನರಿಂದ ತೆರಿಗೆವಸೂಲಿ ಮಾಡಿದ ಹಣದಿಂದ ಕೊಡಬೇಕು. ಈ ಕೆಲಸವನ್ನು ನೀವು ಬೇಗನೆ ಮಾಡಬೇಕು. ದೇವಾಲಯದ ಕೆಲಸ ನಿಂತುಹೋಗಬಾರದು. 9 ಆ ಜನರಿಗೆ ಏನು ಅವಶ್ಯಕತೆಯಿದೆಯೋ ಅದನ್ನು ಪೂರೈಸಬೇಕು. ಅವರಿಗೆ ಎಳೆಹೋರಿಗಳು, ಟಗರುಗಳು, ಗಂಡುಕುರಿಗಳು ಪರಲೋಕದ ದೇವರಿಗೆ ಯಜ್ಞವನ್ನರ್ಪಿಸಲು ಬೇಕಾಗಿದ್ದರೆ ಅವುಗಳನ್ನು ಕೊಡಿರಿ. ಜೆರುಸಲೇಮಿನ ಯಾಜಕರು ಗೋಧಿ, ಉಪ್ಪು, ದ್ರಾಕ್ಷಾರಸ, ಎಣ್ಣೆ ಬೇಕು ಎಂದು ಹೇಳಿದರೆ ಅದನ್ನು ಪ್ರತಿದಿನ ತಪ್ಪದೆ ಒದಗಿಸಿರಿ. 10 ಅವುಗಳನ್ನು ಜೆರುಸಲೇಮಿನ ಯಾಜಕರಿಗೆ ಕೊಡಿರಿ. ಅವುಗಳನ್ನು ಯಜ್ಞವಾಗಿ ಸಮರ್ಪಿಸಿದಾಗ ಪರಲೋಕದ ದೇವರು ಅದನ್ನು ಮೆಚ್ಚುವನು. ಯಾಜಕರು ನನಗಾಗಿಯೂ ನನ್ನ ಮಕ್ಕಳಿಗಾಗಿಯು ಪ್ರಾರ್ಥಿಸಲಿ.
11 ಮಾತ್ರವಲ್ಲದೆ, ನನ್ನ ಆಜ್ಞೆ ಏನೆಂದರೆ: ಯಾವನಾದರೂ ನನ್ನ ಆಜ್ಞೆಯನ್ನು ಬದಲಾಯಿಸಿದರೆ ಅವನ ಮನೆಯಿಂದಲೇ ಒಂದು ತೊಲೆಯನ್ನು ಎಳೆದು ಅದನ್ನು ಶೂಲವನ್ನಾಗಿ ಮಾಡಿ, ಅವನನ್ನು ಅದಕ್ಕೆ ನೇತು ಹಾಕಬೇಕು; ಅವನ ಮನೆಯನ್ನು ಕೆಡವಿ ಅದನ್ನು ಮಣ್ಣುದಿಬ್ಬವನ್ನಾಗಿ ಮಾಡಬೇಕು.
12 ಜೆರುಸಲೇಮಿನಲ್ಲಿ ದೇವರು ತನ್ನ ಹೆಸರನ್ನು ಸ್ಥಾಪಿಸಿರುತ್ತಾನೆ. ಆದ್ದರಿಂದ ಯಾವ ಅರಸನಾಗಲಿ ಅಧಿಕಾರಿಯಾಗಲಿ ಈ ಆಜ್ಞೆಗೆ ವಿರುದ್ಧವಾಗಿ ನಡೆದರೆ ದೇವರೇ ಅವನನ್ನು ಸೋಲಿಸುವನು; ಯಾರಾದರೂ ಆ ದೇವಾಲಯವನ್ನು ಕೆಡವಲು ಪ್ರಯತ್ನಿಸಿದರೆ ಅಂಥವರನ್ನು ದೇವರೇ ನಾಶಮಾಡುವನು.
ಇದನ್ನು ದಾರ್ಯಾವೆಷನೆಂಬ ನಾನೇ ಆಜ್ಞಾಪಿಸಿರುತ್ತೇನೆ. ಈ ಆಜ್ಞೆಯನ್ನು ಬೇಗನೆ ಮತ್ತು ಸಂಪೂರ್ಣವಾಗಿ ನೆರವೇರಿಸಬೇಕು.
ದೇವಾಲಯ ಸಂಪೂರ್ಣವಾದದ್ದು ಮತ್ತು ಅದರ ಪ್ರತಿಷ್ಠೆ
13 ಯೂಫ್ರೇಟೀಸ್ ನದಿಯ ಪಶ್ಚಿಮ ಪ್ರಾಂತ್ಯದ ರಾಜ್ಯಪಾಲನಾದ ತತ್ತೆನೈ, ಶೆತರ್ಬೋಜೆನೈ ಮತ್ತು ಅವರ ಸಂಗಡವಿರುವ ಜನರು ರಾಜನಾದ ದಾರ್ಯಾವೆಷನ ಆಜ್ಞೆಗೆ ಅತ್ಯಂತ ಶೀಘ್ರವಾಗಿ ಮತ್ತು ಸಂಪೂರ್ಣವಾಗಿ ವಿಧೇಯರಾದರು. 14 ಹೀಗೆ ಯೆಹೂದ್ಯರ ಹಿರಿಯರು ದೇವಾಲಯದ ಕಟ್ಟಡ ಕೆಲಸವನ್ನು ಮುಂದುವರಿಸಿದರು. ಪ್ರವಾದಿಯಾದ ಹಗ್ಗೈನಂತೆ ಮತ್ತು ಇದ್ದೋವಿನ ಮಗನಾದ ಜೆಕರೀಯನಂತೆ ಅವರನ್ನು ಪ್ರೋತ್ಸಾಹಿಸುತ್ತಾ ಇದ್ದರು. ಆದ್ದರಿಂದ ಅವರು ಯಶಸ್ವಿಯಾದರು. ದೇವಾಲಯದ ಕೆಲಸ ಮುಗಿಯಿತು. ಇಸ್ರೇಲಿನ ದೇವರ ಆಜ್ಞೆಗೆ ವಿಧೇಯರಾಗಿಯೂ, ಸೈರಸ್, ದಾರ್ಯಾವೆಷ ಮತ್ತು ಅರ್ತಷಸ್ತ ಎಂಬ ಪರ್ಶಿಯ ಅರಸರ ಆಜ್ಞೆಗೆ ವಿಧೇಯರಾಗಿಯೂ ಕಟ್ಟಡದ ಕೆಲಸವನ್ನು ಸಂಪೂರ್ಣ ಮಾಡಿದರು. 15 ಆದಾರ್ ತಿಂಗಳಿನ ಮೂರನೆಯ ದಿನದಲ್ಲಿ ಅಂದರೆ ರಾಜ ದಾರ್ಯಾವೆಷನ ಆಳ್ವಿಕೆಯ ಆರನೆಯ ವರ್ಷದಲ್ಲಿ ದೇವಾಲಯವು ಸಂಪೂರ್ಣವಾಯಿತು.
16 ಅನಂತರ ಇಸ್ರೇಲರೆಲ್ಲರೂ ಸೇರಿ ದೇವಾಲಯವನ್ನು ಅತ್ಯಂತ ಹರ್ಷದಿಂದ ಪ್ರತಿಷ್ಠೆ ಮಾಡಿದರು. ಸೆರೆವಾಸದಿಂದ ಹಿಂತಿರುಗಿ ಬಂದಿದ್ದ ಯಾಜಕರು, ಲೇವಿಯರು ಮತ್ತು ಎಲ್ಲಾ ಜನರು ಈ ಆಚರಣೆಯಲ್ಲಿ ಭಾಗವಹಿಸಿದರು.
17 ಆ ದಿವಸ ಸರ್ವಾಂಗಹೋಮವಾಗಿ ನೂರು ಹೋರಿಗಳನ್ನೂ, ಇನ್ನೂರು ಟಗರುಗಳನ್ನೂ ನಾನೂರು ಕುರಿಮರಿಗಳನ್ನೂ ಸಮರ್ಪಿಸಿದರು. ಎಲ್ಲಾ ಇಸ್ರೇಲರ ದೋಷ ಪರಿಹಾರಕ್ಕಾಗಿ ಕುಲಕ್ಕೆ ಒಂದರಂತೆ ಹನ್ನೆರಡು ಹೋತಗಳನ್ನು ಅರ್ಪಿಸಿದರು. 18 ಅನಂತರ ಯಾಜಕರನ್ನು ಮತ್ತು ಲೇವಿಯರನ್ನು ಅವರವರ ವರ್ಗಗಳಿಗನುಸಾರವಾಗಿ, ಮೋಶೆಯ ವಿಧಿಯಂತೆ ದೇವಾಲಯದಲ್ಲಿ ಸೇವೆಮಾಡುವುದಕ್ಕಾಗಿ ಆರಿಸಿದರು.
ಪಸ್ಕಹಬ್ಬ
19 ಮೊದಲನೇ ತಿಂಗಳ ಹದಿನಾಲ್ಕನೆಯ ದಿನದಂದು ಸೆರೆಯಿಂದ ಹಿಂತಿರುಗಿಬಂದಿದ್ದ ಯೆಹೂದ್ಯರು ಪಸ್ಕಹಬ್ಬವನ್ನು ಆಚರಿಸಿದರು. 20 ಯಾಜಕರೂ ಲೇವಿಯರೂ ತಮ್ಮನ್ನು ಶುದ್ಧಮಾಡಿಕೊಂಡು ಹಬ್ಬವನ್ನು ಆಚರಿಸಲು ಸಿದ್ಧರಾದರು. ಪಸ್ಕದ ಕುರಿಮರಿಯನ್ನು ಎಲ್ಲಾ ಇಸ್ರೇಲರಿಗಾಗಿಯೂ ತಮಗಾಗಿಯೂ ಯಾಜಕರಿಗಾಗಿಯೂ ಲೇವಿಯರು ವಧಿಸಿದರು. 21 ಸೆರೆಯಿಂದ ಹಿಂತಿರುಗಿ ಬಂದಿದ್ದ ಇಸ್ರೇಲರೆಲ್ಲರೂ ಪಸ್ಕದ ಊಟವನ್ನು ಮಾಡಿದರು. ಉಳಿದವರು ಅನ್ಯರ ಜೊತೆಯಲ್ಲಿ ವಾಸಿಸುವುದರಿಂದ ತಮ್ಮನ್ನು ಶುದ್ಧಪಡಿಸಿಕೊಂಡವರೆಲ್ಲರೂ ಪಸ್ಕದ ಊಟದಲ್ಲಿ ಪಾಲು ತೆಗೆದುಕೊಂಡರು. ಇಸ್ರೇಲರ ದೇವರಾದ ಯೆಹೋವನ ಬಳಿಗೆ ಸಹಾಯಕ್ಕಾಗಿ ಹೋಗಲು ಸಾಧ್ಯವಾಗುವಂತೆ ಅವರು ಹೀಗೆ ಮಾಡಿದರು. 22 ಹುಳಿಯಿಲ್ಲದ ರೊಟ್ಟಿಯ ಹಬ್ಬವನ್ನು ಅವರು ಏಳು ದಿನಗಳ ತನಕ ಸಂತಸದಿಂದ ಆಚರಿಸಿದರು. ಯಾಕೆಂದರೆ ಅಶ್ಶೂರದ ಅರಸನ ಮನಸ್ಸನ್ನು ಮಾರ್ಪಡಿಸುವುದರ ಮೂಲಕ ಯೆಹೋವನು ಯೆಹೂದ್ಯರನ್ನು ಬಹಳ ಸಂತೋಷಗೊಳಿಸಿದ್ದನು. ಇಸ್ರೇಲ್ ದೇವರ ಆಲಯದ ಕಟ್ಟಡವು ಪೂರ್ಣಗೊಳ್ಳಲು ಅಶ್ಶೂರದ ಅರಸನು ಸಹಾಯ ಮಾಡಿದನು.
ಜೆರುಸಲೇಮಿಗೆ ಎಜ್ರನ ಆಗಮನ
7 ಇವೆಲ್ಲವೂ ಕಳೆದ ಬಳಿಕ, ಪರ್ಶಿಯ ರಾಜನಾದ ಅರ್ತಷಸ್ತನ ಆಳ್ವಿಕೆಯ ಕಾಲದಲ್ಲಿ ಎಜ್ರನು ಬಾಬಿಲೋನಿನಿಂದ ಜೆರುಸಲೇಮಿಗೆ ಬಂದನು. ಎಜ್ರನು ಸೆರಾಯನ ಮಗನು; ಸೆರಾಯನು ಅಜರ್ಯನ ಮಗನು; ಅಜರ್ಯನು ಹಿಲ್ಕೀಯನ ಮಗನು. 2 ಹಿಲ್ಕೀಯನು ಶಲ್ಲೂಮನ ಮಗನು. ಶಲ್ಲೂಮನು ಚಾದೋಕನ ಮಗನು; ಚಾದೋಕನು ಅಹೀಟೂಬನ ಮಗನು. 3 ಅಹೀಟೂಬನು ಅಮರ್ಯನ ಮಗನು; ಅಮರ್ಯನು ಅಜರ್ಯನ ಮಗನು. ಅಜರ್ಯನು ಮೆರಾಯೋತನ ಮಗನು; 4 ಮೆರಾಯೋತನು ಜೆರಹ್ಯನ ಮಗನು; ಜೆರಹ್ಯನು ಉಜ್ಜೀಯನ ಮಗನು; ಉಜ್ಜೀಯನು ಬುಕ್ಕೀಯ ಮಗನು. 5 ಬುಕ್ಕೀಯು ಅಬೀಷೂವನ ಮಗನು; ಅಬೀಷೂವನು ಫೀನೆಹಾಸನ ಮಗನು; ಫೀನೆಹಾಸನು ಎಲ್ಲಾಜಾರನ ಮಗನು. ಎಲ್ಲಾಜಾರನು ಪ್ರಧಾನಯಾಜಕನಾದ ಆರೋನನ ಮಗನು.
6 ಎಜ್ರನು ಬಾಬಿಲೋನಿನಿಂದ ಜೆರುಸಲೇಮಿಗೆ ಬಂದನು. ಅವನು ವಿದ್ವಾಂಸನಾಗಿದ್ದನು. ಇಸ್ರೇಲರ ದೇವರಾದ ಯೆಹೋವನು ಮೋಶೆಗೆ ಕೊಟ್ಟಿದ್ದ ಧರ್ಮಶಾಸ್ತ್ರವನ್ನು ಅವನು ಚೆನ್ನಾಗಿ ಬಲ್ಲವನಾಗಿದ್ದನು. ಯೆಹೋವನು ಎಜ್ರನೊಂದಿಗಿದ್ದುದರಿಂದ ಅವನು ಕೇಳಿದ್ದೆಲ್ಲವನ್ನು ಅರ್ತಷಸ್ತ ರಾಜನು ಅವನಿಗೆ ಕೊಟ್ಟನು. 7 ಎಜ್ರನೊಂದಿಗೆ ಇಸ್ರೇಲರ ಬಹುಮಂದಿ ಜೆರುಸಲೇಮಿಗೆ ಬಂದರು. ಅವರಲ್ಲಿ ಯಾಜಕರೂ ಲೇವಿಯರೂ ಗಾಯಕರೂ ದ್ವಾರಪಾಲಕರೂ ದೇವಾಲಯದ ಸೇವಕರೂ ಇದ್ದರು. ಅರಸನಾದ ಅರ್ತಷಸ್ತನ ಆಳ್ವಿಕೆಯ ಏಳನೆಯ ವರ್ಷದಲ್ಲಿ ಅವರು ಜೆರುಸಲೇಮಿಗೆ ಬಂದು ತಲುಪಿದರು. 8 ಅರ್ತಷಸ್ತನ ಆಳ್ವಿಕೆಯ ಏಳನೆಯ ವರ್ಷದ ಐದನೆಯ ತಿಂಗಳಲ್ಲಿ ಎಜ್ರನು ಜೆರುಸಲೇಮನ್ನು ತಲುಪಿದನು. 9 ಅವರು ಬಾಬಿಲೋನನ್ನು ಮೊದಲನೆಯ ತಿಂಗಳಿನ ಮೊದಲನೆಯ ದಿನದಂದು ಬಿಟ್ಟು ಐದನೆಯ ತಿಂಗಳಿನ ಮೊದಲನೆಯ ದಿನದಲ್ಲಿ ಜೆರುಸಲೇಮನ್ನು ಸೇರಿದರು. ದೇವರಾದ ಯೆಹೋವನು ಎಜ್ರನ ಸಂಗಡವಿದ್ದನು. 10 ಧರ್ಮಶಾಸ್ತ್ರವನ್ನು ಓದಲೂ, ಅಭ್ಯಾಸಿಸಲೂ ಮತ್ತು ಅದಕ್ಕೆ ವಿಧೇಯನಾಗಲು ಎಜ್ರನು ತನ್ನ ಸಮಯವನ್ನೆಲ್ಲಾ ವಿನಿಯೋಗಿಸಿದನು. ಯೆಹೋವನ ಆಜ್ಞೆಗಳನ್ನು, ವಿಧಿನಿಯಮಗಳನ್ನು ಇಸ್ರೇಲ್ ಜನರಿಗೆ ಕಲಿಸಬೇಕೆಂಬ ಇಚ್ಫೆ ಅವನಲ್ಲಿತ್ತು. ಯೆಹೋವನ ಕಟ್ಟಳೆಗಳಿಗೆ ವಿಧೇಯರಾಗುವಂತೆ ಇಸ್ರೇಲರೆಲ್ಲರಿಗೆ ಸಹಾಯ ಮಾಡಬೇಕೆಂಬ ಅಭಿಲಾಷೆಯು ಅವನಲ್ಲಿತ್ತು.
ಎಜ್ರನಿಗೆ ಅರಸನಾದ ಅರ್ತಷಸ್ತನ ಪತ್ರ
11 ಎಜ್ರನು ಯಾಜಕನೂ ಬೋಧಕನೂ ಆಗಿದ್ದನು. ಯೆಹೋವನು ಇಸ್ರೇಲರಿಗೆ ಕೊಟ್ಟಿರುವ ಕಟ್ಟಳೆಗಳನ್ನು, ವಿಧಿಗಳನ್ನು ಅವನು ಚೆನ್ನಾಗಿ ಅಭ್ಯಾಸ ಮಾಡಿಕೊಂಡಿದ್ದನು. ರಾಜನಾದ ಅರ್ತಷಸ್ತನು ಅವನಿಗೆ ಕೊಟ್ಟಿದ್ದ ಪತ್ರದಲ್ಲಿ ಹೀಗೆ ಬರೆದಿತ್ತು:
12 ಅರಸನಾದ ಅರ್ತಷಸ್ತನಿಂದ:
ಪರಲೋಕದ ದೇವರ ಕಟ್ಟಳೆಗಳ ಬೋಧಕನೂ ಯಾಜಕನೂ ಆಗಿರುವ ಎಜ್ರನಿಗೆ
ವಂದನೆಗಳು.
13 ಈ ಆಜ್ಞೆಯನ್ನು ಕೊಡುವ ನಾನು ತಿಳಿಸುವುದೇನೆಂದರೆ, ನನ್ನ ಸಾಮ್ರಾಜ್ಯದಲ್ಲಿರುವ ಇಸ್ರೇಲರ ಯಾಜಕರು, ಲೇವಿಯರು, ಜನರೆಲ್ಲರೂ ಎಜ್ರನೊಂದಿಗೆ ಜೆರುಸಲೇಮಿಗೆ ಹೋಗಲು ಇಚ್ಛಿಸುವುದಾದರೆ ಅವರು ಹೋಗಬಹುದು.
14 ಎಜ್ರನೇ, ನಾನೂ ನನ್ನ ಏಳು ಮಂದಿ ಸಲಹೆಗಾರರೂ ನಿನ್ನನ್ನು ಯೆಹೂದಕ್ಕೆ ಮತ್ತು ಜೆರುಸಲೇಮಿಗೆ ಕಳುಹಿಸುತ್ತೇವೆ. ಅಲ್ಲಿ ನೀನೂ ನಿನ್ನ ಜನರೂ ದೇವರ ಕಟ್ಟಳೆಗಳಿಗೆ ವಿಧೇಯರಾಗಿರುವಂತೆ ನೋಡಿಕೊ. ಆ ಕಟ್ಟಳೆಗಳು ನಿನ್ನ ಬಳಿಯಲ್ಲಿ ಇವೆ.
15 ನಾನೂ ನನ್ನ ಸಲಹೆಗಾರರೂ ಜೆರುಸಲೇಮಿನಲ್ಲಿರುವ ಇಸ್ರೇಲಿನ ದೇವರಿಗೆ ಬೆಳ್ಳಿಬಂಗಾರಗಳನ್ನು ಅರ್ಪಿಸುತ್ತೇವೆ. ನೀನು ಹೋಗುವಾಗ ಅವುಗಳನ್ನು ತೆಗೆದುಕೊಂಡು ಹೋಗಬೇಕು. 16 ದಾರಿಯಲ್ಲಿ ಬಾಬಿಲೋನ್ ಸಾಮ್ರಾಜ್ಯದ ಎಲ್ಲಾ ಸಂಸ್ಥಾನಗಳನ್ನು ಸಂದರ್ಶಿಸಬೇಕು. ಅಲ್ಲಿ ವಾಸಿಸುವ ನಿನ್ನ ಜನರಿಂದಲೂ ಯಾಜಕರಿಂದಲೂ ಲೇವಿಯರಿಂದಲೂ ಬೆಳ್ಳಿಬಂಗಾರಗಳನ್ನು ಕಾಣಿಕೆಯಾಗಿ ಸ್ವೀಕರಿಸು. ಆ ಕಾಣಿಕೆಗಳು ಜೆರುಸಲೇಮಿನಲ್ಲಿರುವ ದೇವಾಲಯಕ್ಕಾಗಿರುವುದು.
17 ಆ ಹಣದಿಂದ ಹೋರಿಗಳನ್ನು, ಟಗರುಗಳನ್ನು, ಗಂಡು ಕುರಿಗಳನ್ನು ಖರೀದಿಸಲು ಉಪಯೋಗಿಸು. ಪಾನಾರ್ಪಣೆಗಳಿಗೆ ಮತ್ತು ಧಾನ್ಯಸಮರ್ಪಣೆಗಳಿಗೆ ಬೇಕಾಗುವ ಗೋಧಿಯನ್ನೂ ದ್ರಾಕ್ಷಾರಸವನ್ನೂ ತೆಗೆದುಕೊಂಡು ಜೆರುಸಲೇಮಿನ ಯಜ್ಞವೇದಿಕೆಯ ಮೇಲೆ ನಿನ್ನ ದೇವರಿಗೆ ಸಮರ್ಪಿಸು. 18 ಉಳಿದ ಬೆಳ್ಳಿಬಂಗಾರಗಳನ್ನು ನಿನಗೂ ನಿನ್ನೊಂದಿಗಿರುವ ಇತರರಿಗೂ ಸರಿತೋರುವ ರೀತಿಯಲ್ಲಿ ವಿನಿಯೋಗಿಸಿರಿ. ಅದು ದೇವರಿಗೆ ಮೆಚ್ಚಿಕೆಯಾಗುವಂತೆ ಉಪಯೋಗಿಸಿರಿ. 19 ಅವೆಲ್ಲವುಗಳನ್ನು ಜೆರುಸಲೇಮಿನ ದೇವರ ಬಳಿಗೆ ತೆಗೆದುಕೊಂಡು ಹೋಗಿ ಆತನನ್ನು ಆರಾಧಿಸಲು ಅವುಗಳನ್ನು ಉಪಯೋಗಿಸಿರಿ. 20 ಜೆರುಸಲೇಮಿನ ದೇವಾಲಯಕ್ಕೆ ಇನ್ನೂ ವಸ್ತುಗಳು ಬೇಕಾಗಿದ್ದಲ್ಲಿ ರಾಜನ ಖಜಾನೆಯಿಂದ ಹಣ ತೆಗೆದುಕೊಂಡು ಅವುಗಳನ್ನು ಖರೀದಿಮಾಡು.
21 ಅರಸನಾದ ಅರ್ತಷಸ್ತನೆಂಬ ನಾನು ಈ ರಾಜಾಜ್ಞೆಯನ್ನು ಹೊರಡಿಸುತ್ತಿದ್ದೇನೆ: ಯೂಫ್ರೇಟೀಸ್ ನದಿಯ ಪಶ್ಚಿಮ ಪ್ರಾಂತ್ಯದಲ್ಲಿ ರಾಜಧನವನ್ನು ಇಟ್ಟುಕೊಂಡಿರುವ ಎಲ್ಲಾ ಸಂಸ್ಥಾನಾಧಿಕಾರಿಗಳಿಗೆ ನನ್ನ ಆಜ್ಞೆ ಏನೆಂದರೆ, ಎಜ್ರನಿಗೆ ಬೇಕಾದುದನ್ನು ಅವರು ಒದಗಿಸಬೇಕು. ಎಜ್ರನು ಪರಲೋಕದ ದೇವರ ಯಾಜಕನೂ ಆತನ ಕಟ್ಟಳೆಗಳ ಬೋಧಕನೂ ಆಗಿದ್ದಾನೆ. ನನ್ನ ಈ ಆಜ್ಞೆಗೆ ಸಂಪೂರ್ಣವಾಗಿಯೂ ತ್ವರಿತವಾಗಿಯೂ ವಿಧೇಯರಾಗಬೇಕು. 22 ಇವುಗಳನ್ನು ನೀವು ಎಜ್ರನಿಗೆ ಕೊಡಬೇಕು: ಮೂರು ಸಾವಿರದ ನಾನೂರು ಕಿಲೋಗ್ರಾಂ ಬೆಳ್ಳಿ, ಇಪ್ಪತ್ತೆರಡು ಸಾವಿರ ಕಿಲೋಗ್ರಾಂ ಗೋಧಿ, ಎರಡು ಸಾವಿರದ ಇನ್ನೂರು ಲೀಟರ್ ದ್ರಾಕ್ಷಾರಸ, ಎರಡು ಸಾವಿರದ ಇನ್ನೂರು ಲೀಟರ್ ಆಲಿವ್ ಎಣ್ಣೆ ಮತ್ತು ಬೇಕಾಗುವಷ್ಟು ಉಪ್ಪು. 23 ಪರಲೋಕದ ದೇವರು ಯಾವಯಾವ ವಸ್ತುಗಳಿಗಾಗಿ ಎಜ್ರನಿಗೆ ಆಜ್ಞಾಪಿಸಿರುವನೊ ಅವುಗಳನ್ನೆಲ್ಲ ನೀವು ಎಜ್ರನಿಗೆ ಸಂಪೂರ್ಣವಾಗಿಯೂ ಶೀಘ್ರವಾಗಿಯೂ ಒದಗಿಸಬೇಕು. ಇವುಗಳನ್ನು ಪರಲೋಕದ ದೇವರ ಆಲಯಕ್ಕಾಗಿ ಮಾಡಿರಿ. ನನ್ನ ರಾಜ್ಯದ ಮೇಲಾಗಲಿ ನನ್ನ ಮಕ್ಕಳ ಮೇಲಾಗಲಿ ದೇವರು ಸಿಟ್ಟುಗೊಳ್ಳುವುದು ನಮಗೆ ಇಷ್ಟವಿಲ್ಲ.
24 ನಾನು ನಿಮಗೆ ತಿಳಿಯಪಡಿಸುವುದೇನೆಂದರೆ: ಯಾಜಕರಿಂದ, ಲೇವಿಯರಿಂದ, ಗಾಯಕರಿಂದ, ದ್ವಾರಪಾಲಕರಿಂದ ಮತ್ತು ದೇವಾಲಯದ ಸೇವಕರಿಂದ ತೆರಿಗೆವಸೂಲಿ ಮಾಡುವುದು ನ್ಯಾಯಬಾಹಿರವಾದದ್ದು. ಅವರು ಯಾವ ರೀತಿಯ ತೆರಿಗೆಯನ್ನಾಗಲಿ ಸುಂಕವನ್ನಾಗಲಿ ಕಪ್ಪಕಾಣಿಕೆಯನ್ನಾಗಲಿ ಅರಸನಿಗೆ ಸಲ್ಲಿಸಬೇಕಿಲ್ಲ. 25 ಎಜ್ರನೇ, ನಿನ್ನ ದೇವರು ನಿನಗೆ ಕೊಟ್ಟಿರುವ ಜ್ಞಾನಶಕ್ತಿಯನ್ನು ಉಪಯೋಗಿಸಿ ನ್ಯಾಯಾಧೀಶರನ್ನೂ ನ್ಯಾಯಶಾಸ್ತ್ರಿಗಳನ್ನೂ ಆರಿಸಿ ನೇಮಿಸಲು ನಿನಗೆ ಅಧಿಕಾರ ಕೊಟ್ಟಿದ್ದೇನೆ. ಯೂಫ್ರೇಟೀಸ್ ನದಿಯ ಪಶ್ಚಿಮ ಪ್ರಾಂತ್ಯಗಳಲ್ಲಿ ವಾಸಮಾಡುವ ಜನರಿಗೆಲ್ಲಾ ಅವರು ನ್ಯಾಯತೀರಿಸುವರು. ನಿನ್ನ ದೇವರ ಕಟ್ಟಳೆಗಳನ್ನು ಅರಿತವರಿಗೆಲ್ಲಾ ಅವರು ನ್ಯಾಯತೀರಿಸುವರು. ಯಾರಿಗಾದರೂ ದೇವರ ಕಟ್ಟಳೆ ಗೊತ್ತಿಲ್ಲದಿದ್ದಲ್ಲಿ ಆ ನ್ಯಾಯಶಾಸ್ತ್ರಿಗಳು ಅವರಿಗೆ ಕಲಿಸಬೇಕು. 26 ದೇವರ ಕಟ್ಟಳೆಗಳಿಗಾಗಲಿ ಅರಸನ ಆಜ್ಞೆಗಳಿಗಾಗಲಿ ಅವಿಧೇಯನಾಗುವವನಿಗೆ ದಂಡನೆಯಾಗಬೇಕು. ಅವರವರ ಅಪರಾಧಗಳ ಪ್ರಕಾರ ಮರಣಶಿಕ್ಷೆಯಿಂದಾಗಲಿ ಗಡಿಪಾರಿನಿಂದಾಗಲಿ ಅವರ ಆಸ್ತಿಪಾಸ್ತಿಗಳ ಜಪ್ತಿಯಿಂದಾಗಲಿ ಸೆರೆಮನೆವಾಸದಿಂದಾಗಲಿ ಅವರಿಗೆ ದಂಡನೆಯಾಗಬೇಕು.
ಎಜ್ರನು ದೇವರನ್ನು ಕೊಂಡಾಡಿದನು
27 ನಮ್ಮ ಪೂರ್ವಿಕರ ದೇವರಾದ ಯೆಹೋವನಿಗೆ ಸ್ತೋತ್ರವಾಗಲಿ! ಜೆರುಸಲೇಮಿನಲ್ಲಿರುವ ದೇವಾಲಯವನ್ನು ಗೌರವಿಸುವ ಮನಸ್ಸನ್ನು ರಾಜನ ಹೃದಯದಲ್ಲಿರಿಸಿದ್ದಕ್ಕೆ ಆತನಿಗೆ ಸ್ತೋತ್ರ! 28 ರಾಜನ, ಅವನ ಮುಖ್ಯಾಧಿಕಾರಿಗಳ ಮತ್ತು ಅವನ ಸಲಹೆಗಾರರ ಸಮ್ಮುಖದಲ್ಲಿ ಯೆಹೋವನು ನನ್ನ ಮೇಲಿಟ್ಟಿರುವ ಅಗಾಧ ಪ್ರೀತಿಯನ್ನು ಪ್ರಕಟಪಡಿಸಿದನು. ದೇವರಾದ ಯೆಹೋವನು ನನ್ನ ಸಂಗಡವಿದ್ದುದರಿಂದ ನಾನು ಧೈರ್ಯಗೊಂಡೆನು. ನನ್ನೊಂದಿಗೆ ಜೆರುಸಲೇಮಿಗೆ ಹೋಗಲು ಮನಸ್ಸುಳ್ಳ ಇಸ್ರೇಲ್ ನಾಯಕರನ್ನು ನಾನು ಒಟ್ಟುಗೂಡಿಸಿದೆನು.
ಎಜ್ರನೊಂದಿಗೆ ಹಿಂದಿರುಗಿದ ನಾಯಕರು
8 ಬಾಬಿಲೋನಿನಿಂದ ಜೆರುಸಲೇಮಿಗೆ ನನ್ನೊಂದಿಗೆ (ಎಜ್ರ) ಹೊರಟ ಇಸ್ರೇಲರ ಕುಲಪ್ರಧಾನರ ಮತ್ತು ಇತರ ಜನರ ವಿವರಗಳು ಹೀಗಿದೆ. ಅರಸನಾದ ಅರ್ತಷಸ್ತನ ಆಳ್ವಿಕೆಯ ಕಾಲದಲ್ಲಿ ನಾವು ಜೆರುಸಲೇಮಿಗೆ ಬಂದು ಸೇರಿದೆವು. ಬಂದವರ ಹೆಸರುಗಳು ಹೀಗಿವೆ:
2 ಫೀನೆಹಾಸನ ಸಂತತಿಯವರಲ್ಲಿ ಗೇರ್ಷೋಮ್; ಈತಾಮಾರನ ಸಂತತಿಯವರಲ್ಲಿ ದಾನಿಯೇಲನು; ದಾವೀದನ ಸಂತತಿಯವರಲ್ಲಿ ಹಟ್ಟೂಷ್;
3 ಶೆಕನ್ಯನ ಸಂತತಿಯವರಲ್ಲಿ ಪರೋಷ್, ಜೆಕರ್ಯ ಮತ್ತು ಬೇರೆ ನೂರೈವತ್ತು ಮಂದಿ ಗಂಡಸರು;
4 ಪಹತ್‌ಮೋವಾಬ್ ಸಂತತಿಯವರಲ್ಲಿ ಜೆರಹ್ಯನ ಮಗನಾದ ಎಲ್ಯೆಹೊವೇನೈ ಮತ್ತು ಇತರ ಇನ್ನೂರು ಮಂದಿ ಗಂಡಸರು;
5 ಜತ್ತೂವಿನ ಸಂತತಿಯವರಲ್ಲಿ ಯಹಜೀಯೇಲನ ಮಗನಾದ ಶೆಕನ್ಯ ಮತ್ತು ಇತರ ಮುನ್ನೂರು ಮಂದಿ ಗಂಡಸರು;
6 ಆದೀನನ ಸಂತತಿಯವರಲ್ಲಿ ಯೋನಾತಾನನ ಮಗನಾದ ಎಬೆದ್ ಮತ್ತು ಇತರ ಐವತ್ತು ಮಂದಿ ಗಂಡಸರು;
7 ಏಲಾಮಿನ ಸಂತತಿಯವರಲ್ಲಿ ಅತಲ್ಯನ ಮಗನಾದ ಯೆಶಾಯ ಮತ್ತು ಬೇರೆ ಎಪ್ಪತ್ತು ಮಂದಿ ಗಂಡಸರು;
8 ಶೆಫಟ್ಯನ ಸಂತತಿಯವರಲ್ಲಿ ಮೀಕಾಯೇಲನ ಮಗನಾದ ಜೆಬದ್ಯ ಮತ್ತು ಬೇರೆ ಎಂಭತ್ತು ಮಂದಿ ಗಂಡಸರು;
9 ಯೋವಾಬನ ಸಂತತಿಯವರಲ್ಲಿ ಯೆಹೀಯೇಲನ ಮಗನಾದ ಓಬದ್ಯ ಮತ್ತು ಇನ್ನೂರ ಹದಿನೆಂಟು ಮಂದಿ ಬೇರೆ ಗಂಡಸರು;
10 ಬಾನೀಯ ಸಂತತಿಯವರಲ್ಲಿ ಯೋಸಿಫ್ಯನ ಮಗನಾದ ಶೆಲೋಮೀತ್ ಮತ್ತು ನೂರ ಅರವತ್ತು ಮಂದಿ ಇತರ ಗಂಡಸರು;
11 ಬೇಬೈಯ ಸಂತತಿಯವರಿಂದ ಬೇಬೈಯ ಮಗನಾದ ಜೆಕರ್ಯ ಮತ್ತು ಇಪ್ಪತ್ತೆಂಟು ಮಂದಿ ಇತರರು;
12 ಅಜ್ಗಾದನ ಸಂತತಿಯವರಿಂದ ಹಕ್ಕಾಟಾನನ ಮಗನಾದ ಯೋಹಾನಾನ್ ಮತ್ತು ಇತರ ನೂರಹತ್ತು ಮಂದಿ ಗಂಡಸರು;
13 ಅದೋನೀಕಾಮಾನ ಕೊನೆಯ ಸಂತತಿಯವರಿಂದ ಎಲೀಫೆಲೆಟ್, ಎಮೀಯೇಲ್, ಶೆಮಾಯ ಮತ್ತು ಬೇರೆ ಅರವತ್ತು ಮಂದಿ ಗಂಡಸರು;
14 ಬಿಗ್ವೈಯ ಸಂತಿಯವರಲ್ಲಿ ಊತೈ, ಜಕ್ಕೂರ ಮತ್ತು ಎಪ್ಪತ್ತು ಮಂದಿ ಇತರ ಗಂಡಸರು.
ಮರಳಿ ಜೆರುಸಲೇಮಿಗೆ
15 ಎಜ್ರನಾದ ನಾನು ಅಹವಾ ಕಡೆಗೆ ಹರಿಯುವ ನದಿಯ ಬಳಿಗೆ ಬರುವಂತೆ ಮೇಲಿನ ಎಲ್ಲಾ ಜನರಿಗೆ ಹೇಳಿದೆ. ಆ ಸ್ಥಳದಲ್ಲಿ ನಾವು ಮೂರು ದಿನ ಇದ್ದೆವು. ಆ ಗುಂಪಿನಲ್ಲಿ ಯಾಜಕರೂ ಇದ್ದರು ಎಂದು ನಮಗೆ ತಿಳಿದುಬಂತು. ಆದರೆ ಲೇವಿಯರು ಅವರಲ್ಲಿ ಇರಲಿಲ್ಲ. 16 ಆಗ ನಾನು ಎಲಿಯೆಜರ್, ಅರೀಯೇಲ್, ಶೆಮಾಯ, ಎಲ್ನಾತಾನ್, ಯಾರೀಬ್, ಎಲ್ನಾತಾನ್, ನಾತಾನ್, ಜೆಕರ್ಯ ಮತ್ತು ಮೆಷುಲ್ಲಾಮ್ ಎಂಬ ನಾಯಕರನ್ನು ಕರೆದೆನು. ಅಲ್ಲದೆ (ಬೋಧಕರುಗಳಾದ) ಯೋಯಾರೀಬ್ ಮತ್ತು ಎಲ್ನಾತಾನ್ ಎಂಬವರನ್ನು ಕರೆದು 17 ಕಾಸಿಫ್ಯದ ಇದ್ದೋ ಎಂಬವರಲ್ಲಿಗೆ ಕಳುಹಿಸಿದೆನು. ಇವನು ಕಾಸಿಫ್ಯದ ನಿವಾಸಿಗಳ ನಾಯಕನಾಗಿದ್ದನು. ಇವನ ಸಂಬಂಧಿಕರು ಕಾಸಿಫ್ಯದ ದೇವಾಲಯದ ಸೇವಕರಾಗಿದ್ದಾರೆ. ನಾವು ಕಟ್ಟುವ ದೇವಾಲಯದಲ್ಲಿ ಸೇವೆ ಮಾಡುವವರನ್ನು ಇದ್ದೋ ಕಳುಹಿಸಬೇಕೆಂಬ ಉದ್ದೇಶದಿಂದಲೇ ನಾನು ಅವರನ್ನು ಅವರ ಬಳಿಗೆ ಕಳುಹಿಸಿದೆನು. 18 ದೇವರು ನಮ್ಮ ಸಂಗಡವಿದ್ದ ಕಾರಣ, ಇದ್ದೋವಿನ ಸಂಬಂಧಿಕರು ಇವರನ್ನು ಕಳುಹಿಸಿಕೊಟ್ಟರು: ಮಹ್ಲೀಯ ಸಂತತಿಯವರಲ್ಲಿ ಜಾಣನಾದ ಶೇರೇಬ್ಯ, ಮಹ್ಲೀಯು ಲೇವಿಯ ವಂಶದವನಾಗಿದ್ದನು. ಲೇವಿಯು ಇಸ್ರೇಲನ ಒಬ್ಬ ಮಗನಾಗಿದ್ದನು. ಅವರು ಸಹ ತಮ್ಮ ಗಂಡುಮಕ್ಕಳನ್ನು ಮತ್ತು ಸಹೋದರರನ್ನು ಕಳುಹಿಸಿದರು. ಒಟ್ಟಿನಲ್ಲಿ ಆ ಕುಟುಂಬದಿಂದ 18 ಮಂದಿ ಗಂಡಸರಿದ್ದರು. 19 ಅಲ್ಲದೆ ಮೆರಾರೀ ಸಂತತಿಯವರಾದ ಹಷಬ್ಯ ಮತ್ತು ಯೆಶಾಯ; ಇವರು ಸಹ ತಮ್ಮ ಸಹೋದರರನ್ನು ಮತ್ತು ಸಂಬಂಧಿಕರನ್ನು ಕಳುಹಿಸಿದರು. ಒಟ್ಟಿನಲ್ಲಿ ಆ ಕುಟುಂಬದಿಂದ ಇಪ್ಪತ್ತು ಮಂದಿ ಗಂಡಸರಿದ್ದರು. 20 ಇನ್ನೂರಿಪ್ಪತ್ತು ಮಂದಿ ದೇವಾಲಯದ ಸೇವಕರು; (ಇವರ ಪೂರ್ವಿಕರು ದಾವೀದನ ಕಾಲದಲ್ಲಿ ಲೇವಿಯರಿಗೆ ಸಹಾಯಕರಾಗಿ ಆರಿಸಲ್ಪಟ್ಟವರಾಗಿದ್ದರು. ಅವರೆಲ್ಲರ ಹೆಸರುಗಳನ್ನು ಪಟ್ಟಿಮಾಡಲಾಗಿದೆ.)
21 ಅಹವಾ ನದಿಯ ದಡದಲ್ಲಿದ್ದಾಗ ನಮಗೆ ಸುಖ ಪ್ರಯಾಣ ದೊರೆಯುವಂತೆ ಎಲ್ಲಾ ತರದ ತೊಂದರೆಗಳಿಂದ ಪಾರು ಮಾಡುವಂತೆ ಮತ್ತು ನಮ್ಮಲ್ಲಿರುವ ಸ್ವತ್ತುಗಳನ್ನು ಕಾಪಾಡುವಂತೆ ನಮ್ಮ ದೇವರಲ್ಲಿ ದೀನತೆಯಿಂದ ಉಪವಾಸ ಪ್ರಾರ್ಥನೆ ಮಾಡಬೇಕೆಂದು ನೆರೆದುಬಂದ ಜನರಿಗೆ ಪ್ರಕಟಿಸಿದೆನು. 22 ನಾವು ಪ್ರಯಾಣ ಮಾಡುವಾಗ ದಾರಿಯಲ್ಲಿ ಶತ್ರುಗಳಿದ್ದುದರಿಂದ ನಮ್ಮ ಸಂರಕ್ಷಣೆಗಾಗಿ ಸಿಪಾಯಿಗಳನ್ನು ಮತ್ತು ರಾಹುತರನ್ನು ಅರಸನಿಂದ ಕೇಳಲು ನನಗೆ ಸಂಕೋಚವಾಯಿತು. ಯಾಕೆಂದರೆ, “ನಮ್ಮ ದೇವರು ತನ್ನನ್ನು ನಂಬಿದವರೊಂದಿಗಿದ್ದಾನೆ; ಆತನಿಂದ ದೂರಹೋಗುವವರ ಮೇಲೆ ಆತನು ಕೋಪವುಳ್ಳವನಾಗಿದ್ದಾನೆ” ಎಂದು ರಾಜನಾದ ಅರ್ತಷಸ್ತನಿಗೆ ನಾವು ಹೇಳಿದ್ದೆವು. 23 ಹಾಗೆ ನಾವು ನಮ್ಮ ಪ್ರಯಾಣದ ಕುರಿತು ದೇವರಿಗೆ ಉಪವಾಸ ಪ್ರಾರ್ಥನೆ ಮಾಡಿದೆವು. ಆತನು ಅದನ್ನು ಅನುಗ್ರಹಿಸಿದನು.
24 ಆಮೇಲೆ ನಾನು ಯಾಜಕರಲ್ಲಿ ಹನ್ನೆರಡು ಮಂದಿಯನ್ನು ಆರಿಸಿಕೊಂಡೆನು. ಅವರು ಶೇರೇಬ್ಯ, ಹಷಬ್ಯ ಮತ್ತು ಅವರ ಹತ್ತು ಮಂದಿ ಸಹೋದರರು. 25 ದೇವಾಲಯಕ್ಕೆ ಕೊಟ್ಟಿರುವ ಬೆಳ್ಳಿಬಂಗಾರಗಳನ್ನು ಮತ್ತು ಇತರ ವಸ್ತುಗಳನ್ನು ನಾನು ತೂಗಿ ಆರಿಸಲ್ಪಟ್ಟಿದ್ದ ಹನ್ನೆರಡು ಮಂದಿಗೆ ಕೊಟ್ಟೆನು. ಅವುಗಳನ್ನು ಅರ್ತಷಸ್ತ ರಾಜನೂ ಅವನ ಸಲಹೆಗಾರರೂ ಉನ್ನತಾಧಿಕಾರಿಗಳೂ ಅಲ್ಲದೆ ಬಾಬಿಲೋನಿನಲ್ಲಿದ್ದ ಎಲ್ಲಾ ಇಸ್ರೇಲರು ದೇವಾಲಯಕ್ಕಾಗಿ ಕೊಟ್ಟಿದ್ದರು. 26 ನಾನು ಅವುಗಳನ್ನು ತೂಗಿದಾಗ ಇಪ್ಪತ್ತೆರಡು ಸಾವಿರದ ನೂರು ಕಿಲೋಗ್ರಾಂ ಬೆಳ್ಳಿಯೂ ಮೂರು ಸಾವಿರದ ನಾನೂರು ಕಿಲೋಗ್ರಾಂ ತೂಕದ ಬೆಳ್ಳಿಪಾತ್ರೆಗಳೂ ಮೂರು ಸಾವಿರದ ನಾನೂರು ಕಿಲೋಗ್ರಾಂ ತೂಕದ ಬಂಗಾರವೂ ಇದ್ದವು. 27 ನಾನು ಇಪ್ಪತ್ತು ಬಂಗಾರದ ಬೋಗುಣಿಗಳನ್ನು ಕೊಟ್ಟಿದ್ದೆನು. ಅವುಗಳ ಒಟ್ಟು ತೂಕ ಎಂಟುವರೆ ಕಿಲೋಗ್ರಾಂ ಆಮೇಲೆ ಎರಡು ಶ್ರೇಷ್ಠವಾದ ಶುದ್ಧ ತಾಮ್ರದ ಎರಡು ಪಾತ್ರೆಗಳನ್ನೂ ಕೊಟ್ಟೆನು. ಇವು ಬಂಗಾರದಷ್ಟೇ ಬೆಲೆ ಬಾಳುವಂತಹದ್ದಾಗಿದ್ದವು. 28 ಆ ಹನ್ನೆರಡು ಮಂದಿ ಯಾಜಕರಿಗೆ ನಾನು ಹೇಳಿದ್ದೇನೆಂದರೆ, “ನೀವು ಮತ್ತು ಈ ವಸ್ತುಗಳು ಯೆಹೋವನಿಗೆ ಪರಿಶುದ್ಧವಾದವುಗಳಾಗಿವೆ. ನಮ್ಮ ಪೂರ್ವಿಕರ ದೇವರಾದ ಯೆಹೋವನಿಗೆ ಜನರು ಕಾಣಿಕೆ ಕೊಟ್ಟರು. 29 ಆದ್ದರಿಂದ ಭದ್ರವಾಗಿ ಇಟ್ಟುಕೊಳ್ಳಿರಿ. ಜೆರುಸಲೇಮಿನಲ್ಲಿರುವ ದೇವಾಲಯದ ಅಧಿಕಾರಿಗಳಿಗೆ, ಲೇವಿಯರಿಗೆ ಮತ್ತು ಇಸ್ರೇಲ್ ಕುಲಪ್ರಧಾನರಿಗೆ ಇವುಗಳನ್ನು ತಲುಪಿಸುವ ತನಕ ನೀವು ಇದಕ್ಕೆ ಜವಾಬ್ದಾರರಾಗಿದ್ದೀರಿ. ಅವರು ಇವುಗಳನ್ನು ತೂಗಿ ದೇವಾಲಯದ ಕೋಣೆಯಲ್ಲಿ ಭದ್ರವಾಗಿಡುವರು.”
30 ಎಜ್ರನು ತೂಕಮಾಡಿ ಕೊಟ್ಟ ಬೆಳ್ಳಿಬಂಗಾರಗಳನ್ನು ಮತ್ತು ಇತರ ವಿಶೇಷ ವಸ್ತುಗಳನ್ನು ಯಾಜಕರು ಮತ್ತು ಲೇವಿಯರು ಸ್ವೀಕರಿಸಿ ಜೆರುಸಲೇಮಿನಲ್ಲಿರುವ ದೇವಾಲಯಕ್ಕೆ ತಲುಪಿಸುವ ಜವಾಬ್ದಾರಿಕೆ ಹೊತ್ತರು.
31 ಮೊದಲನೆಯ ತಿಂಗಳಿನ ಹನ್ನೆರಡನೆಯ ದಿನ ನಾವು ಅಹವಾ ನದಿಯ ದಡವನ್ನು ಬಿಟ್ಟು ಜೆರುಸಲೇಮಿಗೆ ಹೊರಟೆವು. ದೇವರು ನಮ್ಮೊಂದಿಗಿದ್ದು ಶತ್ರುಗಳಿಂದಲೂ ಕಳ್ಳರಿಂದಲೂ ನಮ್ಮನ್ನು ಸಂರಕ್ಷಿಸಿ ಕಾಪಾಡಿದನು. 32 ಜೆರುಸಲೇಮಿಗೆ ಬಂದು ಮೂರು ದಿನ ವಿಶ್ರಾಂತಿ ತೆಗೆದುಕೊಂಡೆವು. 33 ನಾಲ್ಕನೆಯ ದಿನ ನಾವು ದೇವಾಲಯಕ್ಕೆ ಹೋಗಿ ಅಲ್ಲಿ ಬೆಳ್ಳಿ, ಚಿನ್ನ ಮತ್ತು ಇತರ ಶ್ರೇಷ್ಠವಸ್ತುಗಳನ್ನು ತೂಗಿ ಯಾಜಕನಾದ ಊರೀಯನ ಮಗನಾದ ಮೆರೇಮೋತನಿಗೆ ಒಪ್ಪಿಸಿದೆವು. ಫೀನೆಹಾಸನ ಮಗನಾದ ಎಲ್ಲಾಜಾರನು ಮೆರೇಮೋತನ ಸಂಗಡವಿದ್ದನು. ಲೇವಿಯರಾದ ಯೇಷೂವನ ಮಗನಾದ ಯೋಜಾಬಾದನು ಮತ್ತು ಬಿನ್ನೂಯನ ಮಗನಾದ ನೋವದ್ಯನು ಅವರ ಸಂಗಡ ಇದ್ದರು. 34 ನಾವು ಎಲ್ಲಾ ವಸ್ತುಗಳನ್ನು ತೂಗಿ ಪಟ್ಟಿಯಲ್ಲಿ ಬರೆದಿಟ್ಟೆವು.
35 ಆಮೇಲೆ ಸೆರೆಯಿಂದ ಹಿಂತಿರುಗಿಬಂದ ಯೆಹೂದ್ಯರು ಇಸ್ರೇಲ್ ದೇವರಿಗೆ ಇಸ್ರೇಲರ ಎಲ್ಲಾ ಕುಲಗಳವರಿಗಾಗಿ ಹನ್ನೆರಡು ಹೋರಿಗಳನ್ನು, ತೊಂಭತ್ತಾರು ಟಗರುಗಳನ್ನು, ಎಪ್ಪತ್ತೇಳು ಗಂಡು ಕುರಿಗಳನ್ನು ಮತ್ತು ಹನ್ನೆರಡು ಗಂಡು ಆಡುಗಳನ್ನು ಸರ್ವಾಂಗಹೋಮ ಯಜ್ಞವನ್ನಾಗಿಯೂ ಮತ್ತು ಪಾಪಪರಿಹಾರಕ ಯಜ್ಞವನ್ನಾಗಿಯೂ ಸಮರ್ಪಿಸಿದರು.
36 ಅರಸನಾದ ಅರ್ತಷಸ್ತನು ಕೊಟ್ಟಿದ್ದ ರಾಜಾಜ್ಞೆಯ ಪತ್ರವನ್ನು ಯೂಫ್ರೇಟೀಸ್ ನದಿಯ ಪಶ್ಚಿಮಪ್ರಾಂತ್ಯದ ರಾಜ್ಯಪಾಲರಿಗೂ ಸಂಸ್ಥಾನಾಧಿಕಾರಿಗಳಿಗೂ ಕೊಟ್ಟಾಗ ಅವರು ಇಸ್ರೇಲ್ ಜನರಿಗೂ ಅವರ ದೇವಾಲಯಕ್ಕೂ ಸಂಪೂರ್ಣ ಸಹಕಾರವನ್ನೂ ಬೆಂಬಲವನ್ನೂ ಕೊಟ್ಟರು.
ಏಳು ಮಂದಿ ಶಿಷ್ಯರಿಗೆ ಯೇಸುವಿನ ದರ್ಶನ
21 ತರುವಾಯ, ಯೇಸು ತನ್ನ ಶಿಷ್ಯರಿಗೆ ತಿಬೇರಿಯ (ಗಲಿಲಾಯ) ಸರೋವರದ ಬಳಿ ಕಾಣಿಸಿಕೊಂಡನು. ಅದು ಹೀಗೆ ನಡೆಯಿತು: 2 ಕೆಲವು ಶಿಷ್ಯರು ಒಟ್ಟಾಗಿ ಸೇರಿದ್ದರು. ಅವರು ಯಾರೆಂದರೆ, ಸೀಮೋನ್ ಪೇತ್ರ, ದಿದುಮನೆಂಬ ತೋಮ, ಗಲಿಲಾಯಕ್ಕೆ ಸೇರಿದ ಕಾನಾ ಊರಿನವನಾದ ನತಾನಿಯೇಲ, ಜೆಬೆದಾಯನ ಇಬ್ಬರು ಗಂಡುಮಕ್ಕಳು ಮತ್ತು ಇನ್ನಿಬ್ಬರು ಶಿಷ್ಯರು. 3 ಪೇತ್ರನು ಅವರಿಗೆ, “ನಾನು ಮೀನು ಹಿಡಿಯಲು ಹೋಗುತ್ತಿದ್ದೇನೆ” ಎಂದನು.
ಉಳಿದ ಶಿಷ್ಯರು, “ನಾವೂ ನಿನ್ನೊಂದಿಗೆ ಬರುತ್ತೇವೆ” ಎಂದು ಹೇಳಿದರು. ಅಂತೆಯೇ ಶಿಷ್ಯರೆಲ್ಲಾ ಹೊರಟು ದೋಣಿಯನ್ನು ಹತ್ತಿದರು. ಅವರು ರಾತ್ರಿಯೆಲ್ಲಾ ಬಲೆ ಬೀಸಿದರೂ ಒಂದು ಮೀನೂ ಸಿಗಲಿಲ್ಲ.
4 ಅಂದು ಮುಂಜಾನೆಯಾದಾಗ, ಯೇಸು ತೀರದಲ್ಲಿ ನಿಂತುಕೊಂಡಿದ್ದನು. ಆದರೆ ಆತನೇ ಯೇಸು ಎಂಬುದು ಶಿಷ್ಯರಿಗೆ ಗೊತ್ತಿರಲಿಲ್ಲ. 5 ಆಗ ಆತನು ತನ್ನ ಶಿಷ್ಯರಿಗೆ, “ಮಕ್ಕಳೇ, ನಿಮಗೆ ಮೀನು ಸಿಕ್ಕಿತೋ?” ಎಂದು ಕೇಳಿದನು.
ಶಿಷ್ಯರು, “ಇಲ್ಲ” ಎಂದು ಉತ್ತರಕೊಟ್ಟರು.
6 ಯೇಸು, “ನಿಮ್ಮ ದೋಣಿಯ ಬಲಭಾಗದಲ್ಲಿ ನಿಮ್ಮ ಬಲೆ ಬೀಸಿರಿ. ಅಲ್ಲಿ ಕೆಲವು ಮೀನುಗಳು ಸಿಕ್ಕುತ್ತವೆ” ಎಂದು ಹೇಳಿದನು. ಶಿಷ್ಯರು ಹಾಗೆಯೇ ಮಾಡಿದರು. ಬಹಳ ಮೀನುಗಳು ಸಿಕ್ಕಿಕೊಂಡದ್ದರಿಂದ ಅವರು ಬಲೆಯನ್ನು ದೋಣಿಯೊಳಗೆ ಎಳೆದುಕೊಳ್ಳಲಾಗಲಿಲ್ಲ.
7 ಯೇಸುವಿನ ಪ್ರೀತಿಯ ಶಿಷ್ಯನು ಪೇತ್ರನಿಗೆ, “ಆ ಮನುಷ್ಯನು ಪ್ರಭುವೇ!” ಎಂದು ಹೇಳಿದನು. ಕೂಡಲೇ ಪೇತ್ರನು ತನ್ನ ಅಂಗಿಯನ್ನು ಹಾಕಿಕೊಂಡು, ನೀರಿಗೆ ಧುಮುಕಿದನು. (ಪೇತ್ರನು ಮೀನು ಹಿಡಿಯುವುದಕ್ಕಾಗಿ ತನ್ನ ಅಂಗಿಯನ್ನು ಬಿಚ್ಚಿಟ್ಟಿದ್ದನು.) 8 ಉಳಿದ ಶಿಷ್ಯರು ದೋಣಿಯಲ್ಲಿ ತೀರಕ್ಕೆ ಹೋದರು. ಅವರು ಬಲೆತುಂಬ ಮೀನುಗಳನ್ನು ದಡಕ್ಕೆ ಎಳೆದುಕೊಂಡು ಹೋದರು. ಅವರು ದಡದಿಂದ ಬಹುದೂರದಲ್ಲೇನೂ ಇರಲಿಲ್ಲ. ಕೇವಲ ಮುನ್ನೂರು ಅಡಿಗಳಷ್ಟು ದೂರದಲ್ಲಿದ್ದರು. 9 ಶಿಷ್ಯರು ದೋಣಿಯಿಂದ ಇಳಿದು ದಡಕ್ಕೆ ಹೋದಾಗ, ಬೆಂಕಿಯ ಕೆಂಡಗಳನ್ನು ಕಂಡರು. ಬೆಂಕಿಯ ಮೇಲೆ ಮೀನುಗಳಿದ್ದವು ಮತ್ತು ಕೆಲವು ರೊಟ್ಟಿಗಳೂ ಅಲ್ಲಿದ್ದವು. 10 ಬಳಿಕ ಯೇಸು, “ನೀವು ಹಿಡಿದ ಮೀನುಗಳಲ್ಲಿ ಕೆಲವನ್ನು ತನ್ನಿರಿ” ಎಂದು ಹೇಳಿದನು.
11 ಸೀಮೋನ್ ಪೇತ್ರನು ದೋಣಿಯೊಳಕ್ಕೆ ಹೋಗಿ ಬಲೆಯನ್ನು ದಡಕ್ಕೆ ಎಳೆದುಕೊಂಡು ಬಂದನು. ಬಲೆಯು ದೊಡ್ಡ ಮೀನುಗಳಿಂದ ತುಂಬಿತ್ತು. ಅದರಲ್ಲಿ 153 ಮೀನುಗಳಿದ್ದವು. ಅವು ಬಹಳ ಭಾರವಾಗಿದ್ದರೂ ಬಲೆಯು ಹರಿದುಹೋಗಲಿಲ್ಲ. 12 ಯೇಸು ಅವರಿಗೆ, “ಬಂದು ಊಟ ಮಾಡಿ” ಎಂದು ಹೇಳಿದನು. ಶಿಷ್ಯರಲ್ಲಿ ಒಬ್ಬರಾದರೂ, “ನೀನು ಯಾರು?” ಎಂದು ಆತನನ್ನು ಕೇಳಲಿಲ್ಲ. ಆತನು ಪ್ರಭುವೆಂದು ಅವರಿಗೆ ತಿಳಿದಿತ್ತು. 13 ಯೇಸುವು ಸಮೀಪಕ್ಕೆ ಬಂದು ರೊಟ್ಟಿಯನ್ನು ಮತ್ತು ಮೀನುಗಳನ್ನು ತೆಗೆದುಕೊಂಡು ಅವರಿಗೆ ಕೊಟ್ಟನು.
14 ಯೇಸು ಪುನರುತ್ಥಾನ ಹೊಂದಿದ ಮೇಲೆ ತನ್ನ ಶಿಷ್ಯರಿಗೆ ಕಾಣಿಸಿಕೊಂಡದ್ದು ಇದು ಮೂರನೆಯ ಸಲ.
ಪೇತ್ರನೊಂದಿಗೆ ಯೇಸುವಿನ ಸಂಭಾಷಣೆ
15 ಅವರು ಊಟಮಾಡಿದ ಮೇಲೆ, ಯೇಸು ಸೀಮೋನ್ ಪೇತ್ರನಿಗೆ, “ಯೋಹಾನನ ಮಗನಾದ ಸೀಮೋನನೇ, ಇಲ್ಲಿರುವ ಇವರು ನನ್ನನ್ನು ಪ್ರೀತಿಸುವುದಕ್ಕಿಂತಲೂ ಹೆಚ್ಚಾಗಿ ನೀನು ನನ್ನನ್ನು ಪ್ರೀತಿಸುವೆಯೋ?” ಎಂದು ಕೇಳಿದನು.
ಪೇತ್ರನು, “ಹೌದು ಪ್ರಭುವೇ, ನಾನು ನಿನ್ನ ಮೇಲೆ ಮಮತೆ ಇಟ್ಟಿದ್ದೇನೆಂಬುದು ನಿನಗೆ ಗೊತ್ತಿದೆ” ಎಂದನು.
ಯೇಸು ಪೇತ್ರನಿಗೆ, “ನನ್ನ ಕುರಿಮರಿಗಳನ್ನು[a] ಮೇಯಿಸು” ಎಂದನು.
16 ಎರಡನೆಯ ಸಾರಿ ಯೇಸು ಪೇತ್ರನಿಗೆ, “ಯೋಹಾನನ ಮಗನಾದ ಸೀಮೋನನೇ, ನೀನು ನನ್ನನ್ನು ಪ್ರೀತಿಸುವೆಯೋ?” ಎಂದು ಕೇಳಿದನು.
ಪೇತ್ರನು, “ಹೌದು, ಪ್ರಭುವೇ, ನಾನು ನಿನ್ನ ಮೇಲೆ ಮಮತೆ ಇಟ್ಟಿದ್ದೇನೆಂಬುದು ನಿನಗೆ ಗೊತ್ತಿದೆ” ಎಂದನು.
ಯೇಸು ಪೇತ್ರನಿಗೆ, “ನನ್ನ ಕುರಿಗಳನ್ನು ಕಾಯಿ” ಎಂದನು.
17 ಯೇಸು ಮೂರನೆಯ ಸಾರಿ, “ಯೋಹಾನನ ಮಗನಾದ ಸೀಮೋನನೇ, ನೀನು ನನ್ನನ್ನು ಪ್ರೀತಿಸುವೆಯೋ?” ಎಂದು ಕೇಳಿದನು.
ಯೇಸು, “ನೀನು ನನ್ನನ್ನು ಪ್ರೀತಿಸುವೆಯೋ?” ಎಂದು ಮೂರು ಸಾರಿ ಕೇಳಿದ್ದರಿಂದ ಪೇತ್ರನಿಗೆ ದುಃಖವಾಯಿತು. ಪೇತ್ರನು, “ಪ್ರಭುವೇ, ನಿನಗೆ ಪ್ರತಿಯೊಂದೂ ತಿಳಿದಿದೆ. ನಾನು ನಿನ್ನ ಮೇಲೆ ಮಮತೆ ಇಟ್ಟಿದ್ದೇನೆಂಬುದು ನಿನಗೆ ಗೊತ್ತಿದೆ” ಎಂದನು.
ಯೇಸು ಪೇತ್ರನಿಗೆ, “ನನ್ನ ಕುರಿಗಳನ್ನು ಮೇಯಿಸು. 18 ನಾನು ನಿನಗೆ ಸತ್ಯವನ್ನು ಹೇಳುತ್ತೇನೆ. ನೀನು ಯೌವನಸ್ಥನಾಗಿದ್ದಾಗ, ನಡುಕಟ್ಟಿಕೊಂಡು ನಿನಗೆ ಇಷ್ಟವಾದ ಕಡೆಗೆಲ್ಲಾ ಹೋದೆ. ಆದರೆ ನೀನು ಮುದುಕನಾದಾಗ, ನಿನ್ನ ಕೈಗಳನ್ನು ಚಾಚುವೆ ಮತ್ತು ಬೇರೊಬ್ಬನು ನಿನ್ನ ನಡುಕಟ್ಟಿ ನಿನಗೆ ಇಷ್ಟವಿಲ್ಲದ ಕಡೆಗೆ ನಿನ್ನನ್ನು ನಡೆಸಿಕೊಂಡು ಹೋಗುವನು” ಎಂದು ಹೇಳಿದನು. 19 (ದೇವರನ್ನು ಮಹಿಮೆಪಡಿಸುವುದಕ್ಕಾಗಿ ಪೇತ್ರನು ಯಾವ ರೀತಿ ಸಾಯುತ್ತಾನೆ ಎಂಬುದನ್ನು ಸೂಚಿಸಲು ಯೇಸು ಹೀಗೆ ಹೇಳಿದನು.) ಬಳಿಕ ಯೇಸು ಪೇತ್ರನಿಗೆ, “ನನ್ನನ್ನು ಹಿಂಬಾಲಿಸು!” ಎಂದನು.
20 ಪೇತ್ರನು ಹಿಂತಿರುಗಿ ನೋಡಿದಾಗ, ಯೇಸುವಿನ ಪ್ರೀತಿಯ ಶಿಷ್ಯನು ತಮ್ಮ ಹಿಂದೆ ನಡೆದುಕೊಂಡು ಬರುತ್ತಿರುವುದನ್ನು ಕಂಡನು. (ರಾತ್ರಿಭೋಜನದ ಸಮಯದಲ್ಲಿ ಯೇಸುವಿನ ಎದೆಯ ಕಡೆಗೆ ಬಾಗಿ, “ಪ್ರಭುವೇ, ನಿನಗೆ ದ್ರೋಹ ಮಾಡುವವನು ಯಾರು?” ಎಂದು ಕೇಳಿದ ಶಿಷ್ಯನೇ ಇವನು.) 21 ಪೇತ್ರನು ತಮ್ಮ ಹಿಂದೆ ಬರುತ್ತಿದ್ದ ಈ ಶಿಷ್ಯನನ್ನು ಕಂಡಾಗ ಯೇಸುವಿಗೆ, “ಪ್ರಭುವೇ, ಇವನ ವಿಷಯವೇನು?” ಎಂದು ಕೇಳಿದನು.
22 ಯೇಸು, “ನಾನು ಬರುವ ತನಕ ಅವನು ಜೀವದಿಂದ ಇರಬೇಕೆಂಬುದು ನನ್ನ ಇಷ್ಟವಾಗಿದ್ದರೆ ಅದರಿಂದ ನಿನಗೇನು? ನೀನು ನನ್ನನ್ನು ಹಿಂಬಾಲಿಸು!” ಎಂದು ಉತ್ತರಕೊಟ್ಟನು.
23 ಆದ್ದರಿಂದ ಸಹೋದರರ (ಶಿಷ್ಯರ) ಮಧ್ಯೆ ಒಂದು ಕಥೆಯೇ ಹರಡಿಕೊಂಡಿತು. ಯೇಸುವಿನ ಪ್ರೀತಿಯ ಈ ಶಿಷ್ಯನು ಸಾಯುವುದಿಲ್ಲವೆಂದು ಅವರು ಹೇಳುತ್ತಿದ್ದರು. ಆದರೆ ಅವನು ಸಾಯುವುದಿಲ್ಲವೆಂದು ಯೇಸು ಹೇಳಲಿಲ್ಲ. “ನಾನು ಬರುವ ತನಕ ಅವನು ಜೀವದಿಂದ ಇರಬೇಕೆಂಬುದು ನನ್ನ ಇಷ್ಟವಾಗಿದ್ದರೆ ಅದರಿಂದ ನಿನಗೇನು?” ಎಂದಷ್ಟೇ ಆತನು ಹೇಳಿದ್ದನು.
24 ಈ ಸಂಗತಿಗಳನ್ನು ಈಗ ಬರೆದಿರುವವನು ಮತ್ತು ಇವುಗಳ ವಿಷಯವಾಗಿ ಈಗ ಸಾಕ್ಷಿ ಹೇಳಿರುವ ಶಿಷ್ಯನು ಅವನೇ. ಅವನು ಹೇಳುವುದು ಸತ್ಯವೆಂದು ನಮಗೆ ಗೊತ್ತಿದೆ.
25 ಯೇಸು ಇತರ ಅನೇಕ ಕಾರ್ಯಗಳನ್ನು ಮಾಡಿದನು. ಅವುಗಳಲ್ಲಿ ಪ್ರತಿಯೊಂದನ್ನೂ ಬರೆಯುವುದಾದರೆ, ಬರೆಯಲ್ಪಡುವ ಪುಸ್ತಕಗಳನ್ನು ಇಡೀ ಪ್ರಪಂಚವೇ ಹಿಡಿಸಲಾರದೆಂದು ನಾನು ನೆನಸುತ್ತೇನೆ.
Kannada Holy Bible: Easy-to-Read Version. All rights reserved. © 1997 Bible League International