Old/New Testament
ಯೆಹೂದದ ಅರಸನಾದ ಆಹಾಜ
28 ಆಹಾಜನು ಪಟ್ಟಕ್ಕೆ ಬಂದಾಗ ಇಪ್ಪತ್ತು ವರ್ಷದವನಾಗಿದ್ದನು. ಅವನು ಜೆರುಸಲೇಮಿನಲ್ಲಿದ್ದು ಹದಿನಾರು ವರ್ಷ ರಾಜ್ಯಭಾರ ಮಾಡಿದನು. ಆಹಾಜನು ತನ್ನ ಪೂರ್ವಿಕನಾದ ದಾವೀದನಂತೆ ಸರಿಯಾದ ರೀತಿಯಲ್ಲಿ ನಡೆದುಕೊಳ್ಳಲಿಲ್ಲ. ದೇವರ ಚಿತ್ತದ ಪ್ರಕಾರ ಜೀವಿಸಲಿಲ್ಲ. 2 ಅವನು ಇಸ್ರೇಲರ ಅರಸರಂತೆ ಕೆಟ್ಟದಾರಿಯಲ್ಲಿ ನಡೆದನು. ಅವನು ಎರಕದ ಬೊಂಬೆಗಳನ್ನು ಮಾಡಿಸಿ ಬಾಳ್ ದೇವರ ವಿಗ್ರಹಗಳನ್ನು ಪೂಜಿಸಿದನು. 3 ಬೆನ್‌ಹಿನ್ನೋಮ್ ಕಣಿವೆಯಲ್ಲಿ ಧೂಪಹಾಕಿದನು. ತನ್ನ ಸ್ವಂತ ಮಕ್ಕಳನ್ನು ಬೆಂಕಿಯಲ್ಲಿ ಸುಟ್ಟು ವಿಗ್ರಹಗಳಿಗೆ ಆಹುತಿಕೊಟ್ಟನು. ಆ ದೇಶದ ಜನರು ಮಾಡಿದ ಭಯಂಕರ ಪಾಪಗಳನ್ನು ತಾನೂ ಮಾಡಿದನು. ಇಸ್ರೇಲ್ ಜನರು ಆ ದೇಶವನ್ನು ಪ್ರವೇಶಿಸಿದಾಗ ದೇವರು ಅವರನ್ನು ಹೊರಗೆ ಹೊರಡಿಸಿದ್ದನು. 4 ಆಹಾಜನು ಬೆಟ್ಟದ ಮೇಲೆ ಪ್ರತಿಯೊಂದು ಹಸಿರು ಮರದಡಿಯಲ್ಲಿದ್ದ ಉನ್ನತಸ್ಥಳಗಳಲ್ಲಿ ಧೂಪಹಾಕಿ ಯಜ್ಞಗಳನ್ನರ್ಪಿಸುತ್ತಿದ್ದನು.
5-6 ಆಹಾಜನು ಪಾಪಮಾಡಿದ್ದರಿಂದ ದೇವರು ಅರಾಮ್ಯರನ್ನು ಅವನ ವಿರುದ್ಧವಾಗಿ ಕಳುಹಿಸಿ ಅವನು ಸೋತು ಹೋಗುವಂತೆ ಮಾಡಿದನು. ಅವರಲ್ಲಿ ಬಹುಮಂದಿ ಸೆರೆಹಿಡಿಯಲ್ಪಟ್ಟರು. ಅರಾಮ್ಯರ ಅರಸನು ಅವರನ್ನೆಲ್ಲಾ ದಮಸ್ಕಕ್ಕೆ ಒಯ್ದನು. ಇಸ್ರೇಲರ ಅರಸನಾದ ಪೆಕಹನು ಬಂದು ಆಹಾಜನನ್ನು ಸೋಲಿಸುವಂತೆ ಯೆಹೋವನು ಮಾಡಿದನು. ಪೆಕಹನ ತಂದೆಯ ಹೆಸರು ರೆಮಲ್ಯ. ಪೆಕಹನೂ ಅವನ ಸೈನ್ಯವೂ ಯೆಹೂದ ಸೈನಿಕರಲ್ಲಿ ಒಂದೇ ದಿವಸದಲ್ಲಿ ಒಂದು ಲಕ್ಷದ ಇಪ್ಪತ್ತು ಸಾವಿರ ಮಂದಿ ಧೈರ್ಯಶಾಲಿ ಸೈನಿಕರನ್ನು ಕೊಂದರು. ಯೆಹೂದದ ಜನರನ್ನು ಪೆಕಹನು ಸೋಲಿಸಿದನು. ಯಾಕೆಂದರೆ ಅವರು ತಮ್ಮ ಪೂರ್ವಿಕರ ದೇವರಾದ ಯೆಹೋವನಿಗೆ ವಿಧೇಯರಾಗಲು ನಿರಾಕರಿಸಿದರು. 7 ಎಫ್ರಾಯೀಮಿನ ಜಿಕ್ರಿಯು ಧೈರ್ಯಶಾಲಿಯಾದ ಸಿಪಾಯಿ. ಅವನು ಅರಸನಾದ ಆಹಾಜನ ಮಗನಾದ ಮಾಸೇಯನನ್ನು, ಅರಮನೆಯ ಅಧಿಕಾರಿಯಾದ ಅಜ್ರೀಕಾಮನನ್ನು ಮತ್ತು ಅಧಿಕಾರದಲ್ಲಿ ಅರಸನಿಗೆ ಎರಡನೆಯವನಾಗಿದ್ದ ಎಲ್ಕಾನನನ್ನು ಕೊಂದನು.
8 ಇಸ್ರೇಲರ ಸೈನ್ಯದವರು ಯೆಹೂದದಲ್ಲಿ ವಾಸಿಸುವ ಅವರ ಸ್ವಂತ ಕುಟುಂಬದವರಲ್ಲಿ ಎರಡು ಲಕ್ಷ ಮಂದಿಯನ್ನು ಸೆರೆಹಿಡಿದರು. ಅವರ ಹೆಂಗಸರು, ಮಕ್ಕಳು ಮತ್ತು ಅಧಿಕವಾದ ಬೆಲೆಬಾಳುವ ವಸ್ತುಗಳನ್ನು ಸೂರೆಮಾಡಿದರು. ಇಸ್ರೇಲರು ಇವರೆಲ್ಲರನ್ನೂ, ಅಮೂಲ್ಯ ವಸ್ತುಗಳನ್ನೂ ಸಮಾರ್ಯಕ್ಕೆ ತಂದರು. 9 ಆಗ ಯೆಹೋವನ ಪ್ರವಾದಿಯವರಲ್ಲೊಬ್ಬನು ಅಲ್ಲಿದ್ದನು. ಅವನ ಹೆಸರು ಓದೇದ್. ಓದೇದನು ಸಮಾರ್ಯಕ್ಕೆ ಬರುತ್ತಿದ್ದ ಇಸ್ರೇಲ್ ಸೈನ್ಯದವರನ್ನು ಎದುರುಗೊಂಡು ಅವರಿಗೆ, “ನಿಮ್ಮ ಪೂರ್ವಿಕರ ದೇವರಾದ ಯೆಹೋವನು ಯೆಹೂದದ ಜನರು ಸೋತುಹೋಗುವಂತೆ ಮಾಡಿದನು. ಯಾಕೆಂದರೆ ಆತನು ಅವರ ಮೇಲೆ ಸಿಟ್ಟಿಗೆದ್ದಿದ್ದನು. ನೀವು ಯೆಹೂದದ ಜನರನ್ನು ನಿಷ್ಕರುಣೆಯಿಂದ ಕೊಂದುಹಾಕಿದಿರಿ. ಈಗ ದೇವರು ನಿಮ್ಮ ಮೇಲೆ ಕೋಪಗೊಂಡಿದ್ದಾನೆ. 10 ನೀವು ಯೆಹೂದದ ಮತ್ತು ಜೆರುಸಲೇಮಿನ ಜನರನ್ನು ಗುಲಾಮರನ್ನಾಗಿ ಮಾಡಿಕೊಳ್ಳಲು ಯೋಚಿಸುತ್ತಿದ್ದೀರಿ. ನೀವು ಕೂಡ ಯೆಹೋವನಿಗೆ ವಿರೋಧವಾಗಿ ಪಾಪಮಾಡಲಿಲ್ಲವೇ? ಹೀಗೆ ಮಾಡುವದರಿಂದ ನೀವು ಸಹ ದೇವರ ದೃಷ್ಟಿಯಲ್ಲಿ ಪಾಪಮಾಡುತ್ತಿದ್ದೀರಿ. 11 ಈಗ ನೀವು ನನ್ನ ಮಾತನ್ನು ಕೇಳಿರಿ, ನೀವು ಸೆರೆಹಿಡಿದ ನಿಮ್ಮ ಸಹೋದರ ಸಹೋದರಿಯರನ್ನು ಹಿಂದಕ್ಕೆ ಕಳುಹಿಸಿರಿ. ಯಾಕೆಂದರೆ ಯೆಹೋವನು ನಿಮ್ಮ ಮೇಲೆ ಬಹಳವಾಗಿ ಕೋಪಗೊಂಡಿದ್ದಾನೆ” ಎಂದು ಹೇಳಿದನು.
12 ಆಗ ಇಸ್ರೇಲರ ಸೈನಿಕರು ತಮ್ಮ ಮನೆಗೆ ಯುದ್ಧದಿಂದ ಹಿಂತಿರುಗುವುದನ್ನು ಎಫ್ರಾಯೀಮಿನ ಕೆಲವು ನಾಯಕರು ನೋಡಿದರು. ಆ ನಾಯಕರು ಅವರನ್ನು ಎಚ್ಚರಿಸಿದರು. ಆ ನಾಯಕರುಗಳು ಯಾರೆಂದರೆ: ಯೆಹೋಹಾನಾನನ ಮಗನಾದ ಅಜರ್ಯ, ಮೆಷಿಲ್ಲೇಮೋತನ ಮಗನಾದ ಬೆರೆಕ್ಯ, ಶಲ್ಲೂಮನ ಮಗನಾದ ಹಿಜ್ಕೀಯ ಮತ್ತು ಹೆದ್ಲ್ಯೆಯನ ಮಗನಾದ ಅಮಾಸ. 13 ಈ ನಾಯಕರುಗಳು ಇಸ್ರೇಲರ ಸೈನಿಕರಿಗೆ, “ಯೆಹೂದದೇಶದಿಂದ ಸೆರೆಯವರನ್ನು ಇಲ್ಲಿಗೆ ತರಬೇಡಿ. ನೀವು ಹಾಗೆ ಮಾಡಿದರೆ ಅದು ನಿಮ್ಮ ಪಾಪವನ್ನೂ ದೋಷವನ್ನೂ ಮತ್ತಷ್ಟು ಹೆಚ್ಚಿಸುತ್ತದೆ. ಯೆಹೋವನು ಇಸ್ರೇಲರ ಮೇಲೆ ತುಂಬಾ ಸಿಟ್ಟುಗೊಳ್ಳುವನು” ಎಂದು ಹೇಳಿದರು.
14 ಆಗ ಆ ಸೈನಿಕರು ತಮ್ಮ ಬಳಿಯಲ್ಲಿದ್ದ ಸೆರೆಯವರನ್ನು, ಬೆಲೆಬಾಳುವ ವಸ್ತುಗಳನ್ನು ಆ ನಾಯಕರ ಮತ್ತು ಇಸ್ರೇಲರ ಕೈಯಲ್ಲಿ ಕೊಟ್ಟುಬಿಟ್ಟರು. 15 ಆ ನಾಯಕರುಗಳು ಎದ್ದು ಸೆರೆಯವರಿಗೆ ಸಹಾಯ ಮಾಡಿದರು. ಇಸ್ರೇಲ್ ಸೈನಿಕರು ಸೂರೆಮಾಡಿದ ಬಟ್ಟೆಬರೆಗಳನ್ನು ಈ ನಾಯಕರು ಪಡೆದುಕೊಂಡು ಬೆತ್ತಲೆಯಾಗಿದ್ದ ಸೆರೆಯವರಿಗೆ ಕೊಟ್ಟರು. ಅವರ ಕಾಲಿಗೆ ಕೆರಗಳನ್ನು ಕೊಟ್ಟು, ಊಟೋಪಚಾರಗಳಿಂದ ಸತ್ಕರಿಸಿದರು. ಗಾಯಗೊಂಡವರಿಗೆ ಎಣ್ಣೆ ಹಚ್ಚಿ ಅವರಲ್ಲಿದ್ದ ಬಲಹೀನರನ್ನು ಕತ್ತೆಯ ಮೇಲೆ ಕುಳ್ಳಿರಿಸಿ ಜೆರಿಕೊವಿನಲ್ಲಿದ್ದ ಅವರವರ ಮನೆಗಳಿಗೆ ಕರೆದುಕೊಂಡು ಹೋದರು. ಜೆರಿಕೊವಿಗೆ “ಖರ್ಜೂರ ಮರಗಳ ಊರು” ಎಂಬ ಹೆಸರಿದೆ. ಅನಂತರ ಆ ನಾಲ್ಕು ಮಂದಿ ನಾಯಕರು ಸಮಾರ್ಯದಲ್ಲಿದ್ದ ತಮ್ಮ ಮನೆಗೆ ಹೋದರು.
16-17 ಅದೇ ಸಮಯದಲ್ಲಿ ಎದೋಮ್ಯರು ಬಂದು ಯೆಹೂದ ಜನರ ಮೇಲೆ ಧಾಳಿಮಾಡಿ ಅವರನ್ನು ಸೋಲಿಸಿದರು. ಯೆಹೂದ ಜನರನ್ನು ಸೆರೆಹಿಡಿದು ತಮ್ಮ ದೇಶಕ್ಕೊಯ್ದರು. ಆಗ ಅರಸನಾದ ಆಹಾಜನು ಅಶ್ಶೂರದ ಅರಸನ ಸಹಾಯ ಕೇಳಿದನು. 18 ಫಿಲಿಷ್ಟಿಯರು ಸಹ ಬೆಟ್ಟಪ್ರದೇಶಗಳ ಪಟ್ಟಣಗಳ ಮೇಲೆಯೂ ಧಾಳಿ ಮಾಡಿದರು. ಬೇತ್ಷಮೆಷ್, ಅಯ್ಯಾಲೋನ್, ಗೆದೇರೋತ್, ಸೋಕೋ, ತಿಮ್ನಾ ಮತ್ತು ಗಿಮ್ಜೋ ಪಟ್ಟಣಗಳನ್ನು ಅವರು ವಶಪಡಿಸಿಕೊಂಡರು. ಅಲ್ಲದೆ ಆ ಪಟ್ಟಣಗಳ ಸುತ್ತಮುತ್ತಲಿನ ಊರುಗಳನ್ನೂ ವಶಪಡಿಸಿಕೊಂಡರು. ಫಿಲಿಷ್ಟಿಯರು ಆ ಪಟ್ಟಣಗಳಲ್ಲಿ ವಾಸ ಮಾಡತೊಡಗಿದರು. 19 ಅರಸನಾದ ಆಹಾಜನು ತನ್ನ ಜನರನ್ನು ಪಾಪಮಾಡಲು ಪ್ರೋತ್ಸಾಹಿಸಿದ್ದಕ್ಕಾಗಿ ಯೆಹೋವನು ಯೆಹೂದ ದೇಶಕ್ಕೆ ಕಷ್ಟವನ್ನು ಕೊಟ್ಟನು. ಆಹಾಜನು ದೇವರಿಗೆ ದ್ರೋಹಮಾಡಿದನು. 20 ಅಶ್ಶೂರದ ಅರಸನಾದ ತಿಗ್ಲತ್ಪಿಲೆಸರನು ಆಹಾಜನಿಗೆ ಸಹಾಯ ಕೊಡುವ ಬದಲು ಅವನಿಗೇ ಕಷ್ಟಕೊಡಲು ಯೆಹೂದಕ್ಕೆ ಬಂದನು. 21 ಆಹಾಜನು ದೇವರ ಆಲಯದಿಂದಲೂ ರಾಜ ನಿವಾಸದಿಂದಲೂ ಮತ್ತು ರಾಜಕುಮಾರರ ಮನೆಯಿಂದಲೂ ಎಲ್ಲಾ ಬೆಳ್ಳಿಬಂಗಾರಗಳನ್ನು ತೆಗೆದು ಅಶ್ಶೂರದ ಅರಸನಿಗೆ ಕೊಟ್ಟರೂ ಅಶ್ಶೂರದ ಅರಸನು ಆಹಾಜನಿಗೆ ಸಹಾಯ ಮಾಡದೆ ಹೋದನು.
22 ಆಹಾಜನಿಗೆ ಸಂಕಟ ಬಂದಾಗಲೂ ಇನ್ನೂ ಹೆಚ್ಚಾಗಿ ಪಾಪ ಮಾಡುತ್ತಾ ಯೆಹೋವನಿಗೆ ಇನ್ನೂ ಹೆಚ್ಚಾಗಿ ದ್ರೋಹಿಯಾದನು. 23 ದಮಸ್ಕದ ಜನರು ಆರಾಧಿಸುವ ಆ ದೇವರುಗಳಿಗೆ ಆಹಾಜನು ಯಜ್ಞಗಳನ್ನರ್ಪಿಸಿದನು. ದಮಸ್ಕದ ಜನರು ಆಹಾಜನನ್ನು ಸೋಲಿಸಿದ್ದರು. ಆಗ ಆಹಾಜನು, “ಅರಾಮ್ಯರು ಪೂಜಿಸುವ ದೇವರು ಅವರಿಗೆ ಸಹಾಯ ಮಾಡಿದನು. ಆದ್ದರಿಂದ ನಾನು ಆ ದೇವರಿಗೆ ಯಜ್ಞವನ್ನರ್ಪಿಸಿ ಆರಾಧಿಸಿದರೆ ಆ ದೇವರು ನನಗೂ ಸಹಾಯ ಮಾಡುವನು” ಎಂದುಕೊಂಡನು. ಆಹಾಜನು ಆ ದೇವರುಗಳನ್ನು ಪೂಜಿಸುವುದರ ಮೂಲಕ ತಾನೂ ಪಾಪಮಾಡಿ ತನ್ನ ಪ್ರಜೆಗಳನ್ನೂ ಪಾಪಮಾಡುವದಕ್ಕೆ ಪ್ರೋತ್ಸಾಹಿಸಿದನು.
24 ಇದಲ್ಲದೆ ದೇವಾಲಯದಿಂದ ಉಪಕರಣಗಳನ್ನೆಲ್ಲಾ ಆಹಾಜನು ಹೊರತೆಗೆದು ಅವುಗಳನ್ನು ಒಡೆದು ಚೂರುಚೂರು ಮಾಡಿದನು; ದೇವಾಲಯದ ಬಾಗಿಲನ್ನು ಮುಚ್ಚಿಸಿದನು. ಅವನು ವೇದಿಕೆಗಳನ್ನು ಮಾಡಿಸಿ ಜೆರುಸಲೇಮಿನ ರಸ್ತೆಗಳ ಮೂಲೆ ಮೂಲೆಗಳಲ್ಲಿ ಕಟ್ಟಿಸಿದನು. 25 ಯೆಹೂದದ ಪ್ರತಿಯೊಂದು ಪಟ್ಟಣಗಳಲ್ಲಿ ಆಹಾಜನು ಧೂಪಹಾಕಲು ಮತ್ತು ಬೇರೆ ದೇವರುಗಳನ್ನು ಪೂಜಿಸಲು ಉನ್ನತಸ್ಥಳಗಳನ್ನು ಮಾಡಿಸಿದನು; ಅನ್ಯ ದೇವರುಗಳಿಗೆ ಧೂಪಹಾಕಲು ಜನರನ್ನು ಪ್ರೋತ್ಸಾಹಿಸಿದನು. ಈ ರೀತಿಯಾಗಿ ತನ್ನ ಪೂರ್ವಿಕರು ಆರಾಧಿಸಿದ ದೇವರಾದ ಯೆಹೋವನನ್ನು ಆಹಾಜನು ರೇಗಿಸಿದನು.
26 ಆರಂಭದಿಂದ ಕೊನೆಯ ತನಕ ಆಹಾಜನು ಮಾಡಿದ ಇತರ ಕಾರ್ಯಗಳೆಲ್ಲವನ್ನು ಕುರಿತು ಯೆಹೂದದ ಮತ್ತು ಇಸ್ರೇಲರ ಅರಸರ ಗ್ರಂಥದಲ್ಲಿ ಬರೆದಿರುತ್ತವೆ. 27 ಆಹಾಜನು ಸತ್ತಾಗ ಅವನನ್ನು ಪೂರ್ವಿಕರೊಂದಿಗೆ ಜೆರುಸಲೇಮಿನಲ್ಲಿ ಸಮಾಧಿಮಾಡಿದರು; ಅವನನ್ನು ಇಸ್ರೇಲ್ ರಾಜರುಗಳ ಸ್ಮಶಾನದಲ್ಲಿ ಸಮಾಧಿಮಾಡಲಿಲ್ಲ. ಆಹಾಜನ ಬದಲಿಗೆ ಅವನ ಮಗನಾದ ಹಿಜ್ಕೀಯನು ಅರಸನಾದನು.
ಯೆಹೂದದ ಅರಸನಾದ ಹಿಜ್ಕೀಯ
29 ಹಿಜ್ಕೀಯನು ತನ್ನ ಇಪ್ಪತ್ತೈದನೆಯ ವರ್ಷದಲ್ಲಿ ಪಟ್ಟಕ್ಕೆ ಬಂದನು. ಅವನು ಜೆರುಸಲೇಮಿನಲ್ಲಿದ್ದುಕೊಂಡು ಇಪ್ಪತ್ತೊಂಭತ್ತು ವರ್ಷ ರಾಜ್ಯಭಾರ ಮಾಡಿದನು. ಅವನ ತಾಯಿ ಜೆಕರ್ಯನ ಮಗಳಾದ ಅಬೀಯಳು. 2 ಹಿಜ್ಕೀಯನು ತನ್ನ ಪೂರ್ವಿಕನಾದ ದಾವೀದನಂತೆ ಯೆಹೋವನಿಗೆ ಸರಿಯಾಗಿ ನಡೆದುಕೊಂಡನು. ಅವನು ದೇವರ ದೃಷ್ಟಿಯಲ್ಲಿ ಒಳ್ಳೆಯವನಾಗಿ ನಡೆದುಕೊಂಡನು.
3 ಹಿಜ್ಕೀಯನು ದೇವಾಲಯದ ಬಾಗಿಲುಗಳನ್ನು ದುರಸ್ತಿಮಾಡಿ ಭದ್ರಪಡಿಸಿದನು; ತನ್ನ ಆಳ್ವಿಕೆಯ ಮೊದಲನೇ ವರ್ಷದ ಮೊದಲಿನ ತಿಂಗಳಿನಲ್ಲಿಯೇ ದೇವಾಲಯವನ್ನು ಮತ್ತೆ ತೆರೆಯಿಸಿದನು. 4-5 ಹಿಜ್ಕೀಯನು ಎಲ್ಲಾ ಯಾಜಕರನ್ನೂ ಲೇವಿಯರನ್ನೂ ಕರೆದು ದೇವಾಲಯದ ಪೂರ್ವದಿಕ್ಕಿನಲ್ಲಿದ್ದ ಅಂಗಳದಲ್ಲಿ ಒಟ್ಟುಗೂಡಿಸಿ ಅವರಿಗೆ, “ನನ್ನ ಮಾತುಗಳನ್ನು ಕೇಳಿರಿ. ಲೇವಿಯರೇ, ನೀವು ನಿಮ್ಮನ್ನು ಪವಿತ್ರ ಸೇವೆಗೆ ಸಿದ್ಧಮಾಡಿಕೊಳ್ಳಿರಿ. ಯೆಹೋವ ದೇವರ ಆಲಯವನ್ನು ಪವಿತ್ರ ಸೇವೆಗಾಗಿ ಶುದ್ಧಮಾಡಿರಿ. ನಮ್ಮ ಪೂರ್ವಿಕರು ಸೇವೆಮಾಡಿದ ದೇವರು ಆತನೇ. ದೇವಾಲಯದೊಳಗೆ ಇರಬಾರದ ವಸ್ತುಗಳನ್ನು ತೆಗೆದು ಹೊರಗೆಹಾಕಿರಿ. ಅವು ದೇವರ ಆಲಯವನ್ನು ಹೊಲಸು ಮಾಡುತ್ತವೆ. 6 ನಮ್ಮ ಪೂರ್ವಿಕರು ಯೆಹೋವನನ್ನು ತೊರೆದು ಆತನ ದೃಷ್ಟಿಯಲ್ಲಿ ಪಾಪಮಾಡಿದರು; ಆತನ ಆಲಯಕ್ಕೆ ವಿಮುಖರಾದರು. 7 ಅವರು ದೇವಾಲಯದ ಮಂಟಪದ ಬಾಗಿಲನ್ನು ಮುಚ್ಚಿ ಉರಿಯುತ್ತಿದ್ದ ದೀಪಗಳನ್ನು ನಂದಿಸಿಬಿಟ್ಟರು. ಇಸ್ರೇಲ್ ದೇವರಾದ ಯೆಹೋವನಿಗೆ ಪವಿತ್ರ ಸ್ಥಳದಲ್ಲಿ ಧೂಪಸುಡುವದನ್ನೂ ಸರ್ವಾಂಗಹೋಮಗಳನ್ನು ಅರ್ಪಿಸುವದನ್ನೂ ನಿಲ್ಲಿಸಿದರು. 8 ಆದ್ದರಿಂದ ಯೆಹೋವನು ಯೆಹೂದದ ಮತ್ತು ಜೆರುಸಲೇಮಿನ ಜನರ ಮೇಲೆ ಬಹು ಕೋಪಗೊಂಡು ಅವರನ್ನು ಶಿಕ್ಷಿಸಿದನು. ಯೆಹೋವನು ಯೆಹೂದ ಮತ್ತು ಜೆರುಸಲೇಮಿನ ಜನರಿಗೆ ಮಾಡಿದ್ದ ಸಂಗತಿಗಳನ್ನು ನೋಡಿದ ಅನ್ಯರು ಗೇಲಿ ಮಾಡುತ್ತ ವೈರತ್ವದಿಂದ ತಲೆಯಾಡಿಸಿದರು. ಇವೆಲ್ಲಾ ಸತ್ಯವೆಂದು ನಿಮಗೆ ತಿಳಿದದೆ. ಇದನ್ನು ನಿಮ್ಮ ಸ್ವಂತ ಕಣ್ಣುಗಳಿಂದ ನೋಡಿದ್ದೀರಿ. 9 ನಮ್ಮ ಜನರು ರಣರಂಗದಲ್ಲಿ ಕೊಲ್ಲಲ್ಪಟ್ಟರು; ನಮ್ಮ ಹೆಂಡತಿಮಕ್ಕಳು ಸೆರೆಹಿಡಿಯಲ್ಪಟ್ಟರು. 10 ಆದ್ದರಿಂದ ಹಿಜ್ಕೀಯನಾದ ನಾನು ಇಸ್ರೇಲರ ದೇವರಾದ ಯೆಹೋವನೊಂದಿಗೆ ಒಡಂಬಡಿಕೆ ಮಾಡುತ್ತೇನೆ. ಆತನು ಇನ್ನು ಮುಂದೆ ನಮ್ಮ ಮೇಲೆ ಸಿಟ್ಟುಗೊಳ್ಳುವುದಿಲ್ಲ. 11 ಆದ್ದರಿಂದ ನನ್ನ ಪ್ರಿಯ ಮಕ್ಕಳೇ, ಉದಾಸೀನ ಮಾಡಬೇಡಿರಿ; ಸಮಯವನ್ನು ಹಾಳುಮಾಡಬೇಡಿ. ತನ್ನ ಸೇವೆಮಾಡುವದಕ್ಕಾಗಿ ಆತನು ನಿಮ್ಮನ್ನು ಆರಿಸಿರುತ್ತಾನೆ. ತನ್ನ ಆಲಯದಲ್ಲಿ ಸೇವೆಮಾಡುವುದಕ್ಕೂ ಧೂಪವನ್ನು ಆತನ ಮುಂದೆ ಸುಡುವದಕ್ಕೂ ನಿಮ್ಮನ್ನು ನೇಮಿಸಿರುತ್ತಾನೆ” ಎಂದು ಹೇಳಿದನು.
12-14 ದೇವಾಲಯದಲ್ಲಿ ಸೇವೆಮಾಡಲು ಪ್ರಾರಂಭಿಸಿದ ಲೇವಿಯರ ಪಟ್ಟಿ:
ಕೆಹಾತ್ಯನ ಕುಟುಂಬದ ಅಮಾಸೈಯ ಮಗನಾದ ಮಹತ್ ಮತ್ತು ಅಜರ್ಯನ ಮಗನಾದ ಯೋವೇಲ್;
ಮೆರಾರೀಯ ಸಂತತಿಯಲ್ಲಿ ಅಬ್ದೀಯ ಮಗನಾದ ಕೀಷ, ಯೆಹಲ್ಲೆಲೇಲನ ಮಗನಾದ ಅಜರ್ಯ;
ಗೆರ್ಷೋನ್ಯನ ಸಂತತಿಯಲ್ಲಿ ಜಿಮ್ಮನ ಮಗನಾದ ಯೋವಾಹ,
ಯೋವಾಹನ ಮಗನಾದ ಏದೆನ್; ಎಲೀಚಾಫಾನ್ಯನ ಸಂತತಿಯಲ್ಲಿ ಶಿಮ್ರಿ ಮತ್ತು ಯೆಗೀಯೇಲ್;
ಆಸಾಫಾನ ಸಂತತಿಯವರಿಂದ ಜೆಕರ್ಯ ಮತ್ತು ಮತ್ತನ್ಯ;
ಹೇಮಾನನ ಸಂತತಿಯಿಂದ ಯೆಹೀಯೇಲ್ ಮತ್ತು ಶಿಮ್ಮೀ;
ಯೆದೂತೂನನ ಸಂತತಿಯಲ್ಲಿ ಶೆಮಾಯ ಮತ್ತು ಉಜ್ಜೀಯೇಲ್.
15 ಈ ಲೇವಿಯರೆಲ್ಲಾ ಒಟ್ಟಾಗಿ ಸೇರಿ ತಮ್ಮ ಸಹೋದರರೊಂದಿಗೆ ದೇವಾಲಯದ ಪವಿತ್ರ ಸೇವೆಯನ್ನು ಆರಂಭಿಸಲು ಸಿದ್ಧರಾದರು; ಅರಸನ ಮೂಲಕವಾಗಿ ಬಂದ ದೇವರ ಆಜ್ಞೆಗೆ ವಿಧೇಯರಾದರು; ದೇವಾಲಯವನ್ನು ಶುದ್ಧೀಕರಿಸಲು ಪ್ರಾರಂಭಿಸಿದರು. 16 ಯಾಜಕರು ದೇವಾಲಯದ ಒಳಭಾಗವನ್ನು ಪ್ರವೇಶಿಸಿ ಶುಚಿಮಾಡಿದರು. ದೇವಾಲಯದೊಳಗೆ ಇದ್ದ ಎಲ್ಲಾ ಹೊಲಸು ವಸ್ತುಗಳನ್ನು ಹೊರತೆಗೆದರು. ದೇವಾಲಯದ ಅಂಗಳಕ್ಕೆ ತಂದು ಅಲ್ಲಿಂದ ಕಿದ್ರೋನ್ ಹಳ್ಳಕ್ಕೆ ತೆಗೆದುಕೊಂಡು ಹೋಗಿ ಬಿಸಾಡಿದರು. 17 ಮೊದಲನೆಯ ತಿಂಗಳಿನ ಮೊದಲನೆಯ ದಿವಸದಲ್ಲಿ ಲೇವಿಯರು ಪವಿತ್ರ ಸೇವೆಯನ್ನು ಮಾಡಲು ಸಿದ್ಧರಾದರು. ತಿಂಗಳಿನ ಎಂಟನೆಯ ದಿನದಲ್ಲಿ ದೇವಾಲಯದ ಮಂಟಪಕ್ಕೆ ಲೇವಿಯರು ಬಂದರು. ಎಂಟು ದಿನಗಳಲ್ಲಿ ಅವರು ದೇವಾಲಯವನ್ನೆಲ್ಲಾ ಶುಚಿಮಾಡಿದರು. ಮೊದಲನೆಯ ತಿಂಗಳಿನ ಹದಿನಾರನೆಯ ದಿನದಲ್ಲಿ ಅವರು ಶುಚಿಮಾಡುವ ಕಾರ್ಯವನ್ನು ಮುಗಿಸಿದರು.
18 ಅನಂತರ ಅವರು ಅರಸನಾದ ಹಿಜ್ಕೀಯನ ಬಳಿಗೆ ಹೋಗಿ, “ಅರಸನಾದ ಹಿಜ್ಕೀಯನೇ, ನಾವು ದೇವಾಲಯವನ್ನೂ ಯಜ್ಞವೇದಿಕೆಯನ್ನೂ ದೇವಾಲಯದ ಸಾಮಾಗ್ರಿಗಳನ್ನೂ ಶುದ್ಧ ಮಾಡಿದೆವು. ರೊಟ್ಟಿಯನ್ನಿಡುವ ಮೇಜನ್ನೂ ಶುದ್ಧ ಮಾಡಿದೆವು. 19 ಆಹಾಜನು ಅರಸನಾಗಿದ್ದ ಕಾಲದಲ್ಲಿ ಅವನು ದೇವರಿಗೆ ವಿರುದ್ಧವಾಗಿ ಎದ್ದನು. ದೇವಾಲಯದೊಳಗಿದ್ದ ಅನೇಕ ವಸ್ತುಗಳನ್ನು ಎತ್ತಿ ಬಿಸಾಡಿದನು. ಆದರೆ ನಾವು ಅವುಗಳನ್ನೆಲ್ಲಾ ಮತ್ತೆ ಯಥಾಸ್ಥಾನದಲ್ಲಿರಿಸಿ ಅದರ ವಿಶೇಷ ಉಪಯೋಗಕ್ಕಾಗಿ ಸಿದ್ಧಪಡಿಸಿದೆವು. ಈಗ ಅವು ಯೆಹೋವನ ವೇದಿಕೆಯ ಮುಂದೆ ಇಡಲ್ಪಟ್ಟಿವೆ” ಎಂದು ಹೇಳಿದರು.
20 ಹಿಜ್ಕೀಯ ಅರಸನು ಪಟ್ಟಣದ ಅಧಿಕಾರಿಗಳನ್ನು ಮುಂಜಾನೆ ಕರೆಯಿಸಿ ಅವರೊಡನೆ ಯೆಹೋವನ ಆಲಯಕ್ಕೆ ಹೋದನು. 21 ಅವರು ಏಳು ಹೋರಿಗಳನ್ನೂ ಏಳು ಟಗರುಗಳನ್ನೂ ಏಳು ಕುರಿಮರಿಗಳನ್ನೂ ಏಳು ಆಡುಗಳನ್ನೂ ತಂದರು. ಈ ಪ್ರಾಣಿಗಳನ್ನೆಲ್ಲಾ ಇಡೀ ಯೆಹೂದ ಪ್ರಾಂತ್ಯದಲ್ಲಿರುವ ಪ್ರಜೆಯವರಿಗಾಗಿ, ದೇವಾಲಯದ ಶುದ್ಧೀಕರಣಕ್ಕಾಗಿ ಮತ್ತು ಯೆಹೂದ ರಾಜ್ಯಕ್ಕಾಗಿ ಪಾಪಪರಿಹಾರ ಯಜ್ಞವಾಗಿ ಅರ್ಪಿಸಿದರು. ಅರಸನಾದ ಹಿಜ್ಕೀಯನು ಆರೋನನ ಸಂತತಿಯವರಾದ ಯಾಜಕರಿಗೆ ಆ ಪಶುಗಳನ್ನು ಯೆಹೋವನ ಯಜ್ಞವೇದಿಕೆಯ ಮೇಲೆ ಸರ್ವಾಂಗಹೋಮಮಾಡಲು ಆಜ್ಞಾಪಿಸಿದನು. 22 ಯಾಜಕರು ಹೋರಿಗಳನ್ನು ವಧಿಸಿ ಅದರ ರಕ್ತವನ್ನು ಯಜ್ಞವೇದಿಕೆಯ ಮೇಲೆ ಚಿಮಿಕಿಸಿದರು. ಅನಂತರ ಕುರಿಮರಿಗಳನ್ನು ವಧಿಸಿ ಅದರ ರಕ್ತವನ್ನೂ ಯಜ್ಞವೇದಿಕೆಯ ಮೇಲೆ ಚಿಮಿಕಿಸಿದರು. 23-24 ಆ ಬಳಿಕ ಯಾಜಕರು ಹೋತಗಳನ್ನು ಅರಸನ ಮತ್ತು ಸೇರಿಬಂದ ಜನಗಳ ಮುಂದೆ ಪಾಪಪರಿಹಾರಕ ಯಜ್ಞಕ್ಕಾಗಿ ತಂದರು. ಯಾಜಕರು ಅವುಗಳ ಮೇಲೆ ಕೈಯಿಟ್ಟು ವಧಿಸಿದರು. ಅದರ ರಕ್ತವನ್ನು ಯಜ್ಞವೇದಿಕೆಯ ಮೇಲೆ ಪಾಪಪರಿಹಾರಕ ಯಜ್ಞವಾಗಿ ಸಮರ್ಪಿಸಿದರು. ದೇವರು ಇಸ್ರೇಲರ ಪಾಪಗಳನ್ನು ಕ್ಷಮಿಸುವಂತೆ ಅವರು ಹೀಗೆ ಮಾಡಿದರು. ಸರ್ವಾಂಗಹೋಮಗಳನ್ನೂ ಪಾಪಪರಿಹಾರಕ ಯಜ್ಞಗಳನ್ನೂ ಇಸ್ರೇಲಿನ ಸಮಸ್ತ ಜನರಿಗಾಗಿ ಅರ್ಪಿಸಬೇಕೆಂದು ರಾಜನು ಆಜ್ಞಾಪಿಸಿದ್ದನು.
25 ದಾವೀದನೂ ಅರಸನ ದರ್ಶಿಯಾಗಿದ್ದ ಗಾದನೂ ಮತ್ತು ಪ್ರವಾದಿಯಾಗಿದ್ದ ನಾತಾನನೂ ಆಜ್ಞಾಪಿಸಿದಂತೆ, ಅರಸನಾದ ಹಿಜ್ಕೀಯನು ಲೇವಿಯರನ್ನು ತಾಳ, ತಂತಿವಾದ್ಯ ಮತ್ತು ಕಿನ್ನರಿಗಳೊಂದಿಗೆ ದೇವಾಲಯದಲ್ಲಿ ಇರಿಸಿದನು. ಈ ಆಜ್ಞೆಯು ಯೆಹೋವನಿಂದ ಪ್ರವಾದಿಗಳ ಮೂಲಕ ಬಂದಿತ್ತು. 26 ಹೀಗೆ ಲೇವಿಯರು ದಾವೀದನ ಸಂಗೀತ ವಾದ್ಯಗಳೊಡನೆ ತಯಾರಾಗಿ ನಿಂತರು ಮತ್ತು ಯಾಜಕರು ತುತ್ತೂರಿಗಳೊಂದಿಗೆ ತಯಾರಾಗಿ ನಿಂತರು. 27 ಆ ಬಳಿಕ ಹಿಜ್ಕೀಯನು ಸರ್ವಾಂಗಹೋಮವನ್ನು ಅರ್ಪಿಸಲು ಆಜ್ಞಾಪಿಸಿದನು. ಸರ್ವಾಂಗಹೋಮ ಆರಂಭವಾದ ಕೂಡಲೇ ದೇವರಿಗೆ ಸ್ತೋತ್ರಗಾನ ಹಾಡುವದೂ ಪ್ರಾರಂಭವಾಯಿತು. ತುತ್ತೂರಿಯನ್ನು ಊದಿ ದಾವೀದನ ವಾದ್ಯಗಳನ್ನು ಬಾರಿಸಿದರು. 28 ಸೇರಿ ಬಂದಿದ್ದ ಜನಸಮೂಹದವರು ಸಾಷ್ಟಾಂಗನಮಸ್ಕಾರ ಮಾಡಿದರು. ಯಜ್ಞವು ಮುಗಿಯುವ ತನಕ ದೇವರ ಸ್ತೋತ್ರಗಾನ ಮುಂದುವರಿಯಿತು.
29 ಯಜ್ಞಸಮರ್ಪಣೆ ಮುಗಿದ ಬಳಿಕ ಅರಸನಾದ ಹಿಜ್ಕೀಯನೂ ಪ್ರಜೆಗಳೂ ಯೆಹೋವನಿಗೆ ಸಾಷ್ಟಾಂಗನಮಸ್ಕಾರ ಮಾಡಿದರು. 30 ರಾಜನಾದ ಹಿಜ್ಕೀಯನು ಮತ್ತು ಅವನ ಅಧಿಕಾರಿಗಳು ಯೆಹೋವನಿಗೆ ಸ್ತೋತ್ರ ಮಾಡಬೇಕೆಂದು ಲೇವಿಯರಿಗೆ ಆಜ್ಞಾಪಿಸಿದರು. ಆಸಾಫ ಮತ್ತು ಅರಸನಾಗಿದ್ದ ದಾವೀದನು ರಚಿಸಿದ್ದ ಹಾಡುಗಳನ್ನು ಗಾಯಕರು ಹಾಡಿ ದೇವರನ್ನು ಸ್ತುತಿಸಿದರು. ಹೀಗೆ ಜನರೆಲ್ಲಾ ಸಂತೋಷಪಟ್ಟರು. ಅವರೆಲ್ಲರು ಅಡ್ಡಬಿದ್ದು ದೇವರನ್ನು ಆರಾಧಿಸಿದರು. 31 ಹಿಜ್ಕೀಯನು ಜನರಿಗೆ, “ಯೆಹೂದದ ಜನರೇ, ನೀವೀಗ ನಿಮ್ಮನ್ನು ಯೆಹೋವನಿಗೆ ಒಪ್ಪಿಸಿದ್ದೀರಿ. ನೀವೀಗ ಬಂದು ದೇವಾಲಯದಲ್ಲಿ ನಿಮ್ಮನಿಮ್ಮ ಯಜ್ಞಗಳನ್ನೂ ಕೃತಜ್ಞತಾಯಜ್ಞಗಳನ್ನೂ ಸಮರ್ಪಿಸಿರಿ” ಎಂದು ಹೇಳಲು ಜನರು ತಮ್ಮ ಯಜ್ಞಗಳನ್ನು ಸಮರ್ಪಿಸಲು ಮುಂದೆ ಬಂದರು. ಸರ್ವಾಂಗಹೋಮ ಅರ್ಪಿಸಬೇಕೆಂದಿದ್ದವರು ಸರ್ವಾಂಗಹೋಮಗಳನ್ನು ಅರ್ಪಿಸಿದರು. 32 ಹೀಗೆ ಒಟ್ಟು ಎಪ್ಪತ್ತು ಹೋರಿಗಳನ್ನೂ ನೂರು ಟಗರುಗಳನ್ನೂ ಇನ್ನೂರು ಕುರಿಗಳನ್ನೂ ಯೆಹೋವನಿಗೆ ಸರ್ವಾಂಗಹೋಮವಾಗಿ ಸಮರ್ಪಿಸಿದರು. 33 ಪವಿತ್ರ ಯಜ್ಞಕ್ಕಾಗಿ ಆರುನೂರು ಹೋರಿಗಳನ್ನೂ ಮೂರುಸಾವಿರ ಆಡುಕುರಿಗಳನ್ನೂ ಸಮರ್ಪಿಸಿದರು. 34 ಅಲ್ಲಿ ಪಶುಗಳನ್ನು ವಧಿಸಿ ಅದರ ಚರ್ಮಸುಲಿದು ಯಜ್ಞಕ್ಕಾಗಿ ಸಿದ್ಧಪಡಿಸಲು ಸಾಕಷ್ಟು ಯಾಜಕರು ಇರಲಿಲ್ಲ. ಆಗ ಅವರ ಬಂಧುಗಳಾದ ಲೇವಿಯರು ಬಂದು ಆ ಕೆಲಸ ಮುಗಿಯುವ ತನಕ ಅವರಿಗೆ ಸಹಾಯಮಾಡಿದರು. ಯೆಹೋವನ ಸೇವೆಗೆ ತಮ್ಮನ್ನು ಸಿದ್ಧಪಡಿಸಿಕೊಳ್ಳಲು ಲೇವಿಯರು ಯಾಜಕರಿಗಿಂತ ಹೆಚ್ಚು ಉತ್ಸುಕತೆಯಲ್ಲಿದ್ದರು. 35 ಆ ದಿವಸ ಎಷ್ಟೋ ಸರ್ವಾಂಗಹೋಮಗಳನ್ನೂ ಸಮಾಧಾನಯಜ್ಞಗಳನ್ನೂ ಪಾನದ್ರವ್ಯದ ಹೋಮಗಳನ್ನೂ ಸಮರ್ಪಿಸಿದರು. ಹೀಗೆ ದೇವಾಲಯದಲ್ಲಿ ಆರಾಧನೆಯು ಮತ್ತೆ ಪ್ರಾರಂಭವಾಯಿತು. 36 ದೇವರು ಅವುಗಳನ್ನು ತನ್ನ ಜನರಿಗಾಗಿ ಸಿದ್ಧಪಡಿಸಿದ್ದಕ್ಕಾಗಿಯೂ ಅದನ್ನು ಅಲ್ಪಕಾಲಾವಧಿಯಲ್ಲಿ ಮಾಡಿದ್ದಕ್ಕಾಗಿಯೂ ಹಿಜ್ಕೀಯನು ಮತ್ತು ಯೆಹೂದದ ಜನರು ಸಂತೋಷಪಟ್ಟರು.
ಶಿಷ್ಯರಿಗೋಸ್ಕರ ಯೇಸುವಿನ ಪ್ರಾರ್ಥನೆ
17 ಯೇಸು ಈ ಸಂಗತಿಗಳನ್ನು ಹೇಳಿದ ಮೇಲೆ ಪರಲೋಕದ ಕಡೆಗೆ ನೋಡಿ ಹೀಗೆ ಪ್ರಾರ್ಥಿಸಿದನು: “ತಂದೆಯೇ, ಸಮಯವು ಬಂದಿದೆ. ನಿನ್ನ ಮಗನನ್ನು ಮಹಿಮೆಪಡಿಸು. ಆಗ ಮಗನು ನಿನ್ನನ್ನು ಮಹಿಮೆಪಡಿಸಬಲ್ಲನು. 2 ನೀನು ಮಗನಿಗೆ ಯಾರ್ಯಾರನ್ನು ಕೊಟ್ಟೆಯೋ ಅವರೆಲ್ಲರಿಗೂ ಮಗನು ನಿತ್ಯಜೀವವನ್ನು ಕೊಡಬೇಕೆಂದು ನೀನು ಮಗನಿಗೆ ಅಧಿಕಾರವನ್ನು ಕೊಟ್ಟಿರುವೆ. 3 ಒಬ್ಬನೇ ಸತ್ಯದೇವರಾಗಿರುವ ನಿನ್ನನ್ನು ಮತ್ತು ನೀನು ಕಳುಹಿಸಿದ ಯೇಸು ಕ್ರಿಸ್ತನನ್ನು ತಿಳಿದುಕೊಳ್ಳುವುದೇ ನಿತ್ಯಜೀವ. 4 ನೀನು ನನಗೆ ಕೊಟ್ಟ ಕೆಲಸವನ್ನು ನಾನು ಮಾಡಿ ಪೂರೈಸಿದ್ದೇನೆ. ನಾನು ಭೂಲೋಕದಲ್ಲಿ ನಿನ್ನನ್ನು ಮಹಿಮೆ ಪಡಿಸಿದೆನು. 5 ಈಗ, ತಂದೆಯೇ, ನೀನು ನಿನ್ನ ಸನ್ನಿಧಿಯಲ್ಲಿ ನನ್ನನ್ನು ಮಹಿಮೆಪಡಿಸು. ಈ ಲೋಕವು ಸೃಷ್ಟಿಯಾಗುವುದಕ್ಕಿಂತ ಮೊದಲು ನಾನು ನಿನ್ನೊಂದಿಗೆ ಹೊಂದಿದ್ದ ಮಹಿಮೆಯನ್ನು ನನಗೆ ಕೊಡು.
6 “ನೀನು ಈ ಲೋಕದೊಳಗಿಂದ ಕೆಲವು ಜನರನ್ನು ನನಗೆ ಕೊಟ್ಟೆ. ನಿನ್ನ ಸ್ವರೂಪವನ್ನು ನಾನು ಇವರಿಗೆ ತೋರಿಸಿದೆನು. ಇವರು ನಿನ್ನವರಾಗಿದ್ದಾರೆ ಮತ್ತು ನೀನೇ ಇವರನ್ನು ನನಗೆ ಕೊಟ್ಟೆ. ಇವರು ನಿನ್ನ ಆಜ್ಞೆಗಳಿಗೆ ವಿಧೇಯರಾದರು. 7 ನೀನು ನನಗೆ ಕೊಟ್ಟ ಪ್ರತಿಯೊಂದೂ ನಿನ್ನಿಂದಲೇ ಬಂದಿದೆ ಎಂಬುದು ಇವರಿಗೆ ಈಗ ತಿಳಿದಿದೆ. 8 ನೀನು ನನಗೆ ಕೊಟ್ಟ ಮಾತುಗಳನ್ನು ನಾನು ಇವರಿಗೆ ಕೊಟ್ಟಿದ್ದೇನೆ. ಇವರು ಆ ಮಾತುಗಳನ್ನು ಸ್ವೀಕರಿಸಿಕೊಂಡಿದ್ದಾರೆ. ನಾನು ನಿಜವಾಗಿಯೂ ನಿನ್ನ ಬಳಿಯಿಂದ ಬಂದಿರುವುದಾಗಿಯೂ ನೀನೇ ನನ್ನನ್ನು ಕಳುಹಿಸಿರುವುದಾಗಿಯೂ ಇವರು ನಂಬಿದ್ದಾರೆ. 9 ಈಗ ನಾನು ಇವರಿಗಾಗಿ ಪ್ರಾರ್ಥಿಸುವೆನು. ಈ ಲೋಕದಲ್ಲಿರುವ ಜನರಿಗೋಸ್ಕರ ನಾನು ಪ್ರಾರ್ಥಿಸುತ್ತಿಲ್ಲ. ಆದರೆ ನೀನು ನನಗೆ ಕೊಟ್ಟ ಇವರಿಗಾಗಿ ಪ್ರಾರ್ಥಿಸುತ್ತಿದ್ದೇನೆ, ಏಕೆಂದರೆ ಇವರು ನಿನ್ನವರಾಗಿದ್ದಾರೆ. 10 ನನ್ನಲ್ಲಿರುವುದೆಲ್ಲಾ ನಿನ್ನದೇ ಮತ್ತು ನಿನ್ನಲ್ಲಿರುವುದೆಲ್ಲಾ ನನ್ನದೇ. ಇವರಿಂದ ನನಗೆ ಮಹಿಮೆ ಉಂಟಾಗಿದೆ.
11 “ಈಗ ನಾನು ನಿನ್ನ ಬಳಿಗೆ ಬರುತ್ತಿದ್ದೇನೆ. ಇನ್ನು ನಾನು ಈ ಲೋಕದಲ್ಲಿರುವುದಿಲ್ಲ. ಆದರೆ ಇವರು ಇನ್ನೂ ಈ ಲೋಕದಲ್ಲಿರುತ್ತಾರೆ. ಪವಿತ್ರನಾದ ತಂದೆಯೇ, (ನೀನು ನನಗೆ ಕೊಟ್ಟ) ನಿನ್ನ ಹೆಸರಿನ ಶಕ್ತಿಯಿಂದ ಇವರನ್ನು ಕಾಯ್ದು ಕಾಪಾಡು. ನೀನೂ ನಾನೂ ಒಂದಾಗಿರುವಂತೆ ಇವರೂ ಒಂದಾಗಿರಲು ಆಗ ಸಾಧ್ಯವಾಗುವುದು. 12 ನಾನು ಇವರೊಂದಿಗೆ ಇದ್ದಾಗ, ನಿನ್ನ ಹೆಸರಿನ ಶಕ್ತಿಯಿಂದ ಇವರನ್ನು ಕಾಯ್ದು ಕಾಪಾಡಿದೆನು. ಪವಿತ್ರ ಗ್ರಂಥದ ಹೇಳಿಕೆಯು ನೆರವೇರುವಂತೆ ಕಳೆದುಹೋಗುವುದಕ್ಕಾಗಿಯೇ ಆರಿಸಲ್ಪಟ್ಟಿದ್ದ (ಯೂದನೆಂಬ) ಒಬ್ಬನೇ ಒಬ್ಬನು ಇವರಲ್ಲಿ ನಾಶವಾದನು.
13 “ಈಗ ನಾನು ನಿನ್ನ ಬಳಿಗೆ ಬರುತ್ತಿದ್ದೇನೆ. ಆದರೆ ನಾನು ಈ ಲೋಕದಲ್ಲಿ ಇನ್ನೂ ಇರುವಾಗಲೇ ಈ ಸಂಗತಿಗಳಿಗಾಗಿ ಪ್ರಾರ್ಥಿಸುತ್ತಿದ್ದೇನೆ. ಈ ಜನರು ನನ್ನ ಆನಂದವನ್ನು ಹೊಂದಿದವರಾಗಿರಬೇಕೆಂದು ಮತ್ತು ನನ್ನ ಆನಂದವು ಇವರಲ್ಲಿ ಪರಿಪೂರ್ಣವಾಗಿರಬೇಕೆಂದು ಈ ಸಂಗತಿಗಳನ್ನು ಹೇಳುತ್ತಿದ್ದೇನೆ. 14 ನಾನು ಇವರಿಗೆ ನಿನ್ನ ವಾಕ್ಯಗಳನ್ನು ಕೊಟ್ಟಿದ್ದೇನೆ. ಈ ಲೋಕವು ಇವರನ್ನು ದ್ವೇಷಿಸುತ್ತದೆ. ನಾನು ಈ ಲೋಕಕ್ಕೆ ಯಾವ ರೀತಿ ಸೇರಿದವನಾಗಿಲ್ಲವೋ ಅದೇ ರೀತಿ ಇವರೂ ಈ ಲೋಕಕ್ಕೆ ಸೇರಿದವರಾಗಿಲ್ಲ. ಆದ್ದರಿಂದ ಈ ಲೋಕವು ಇವರನ್ನು ದ್ವೇಷಿಸಿದೆ.
15 “ನೀನು ಇವರನ್ನು ಈ ಲೋಕದಿಂದ ತೆಗೆದುಕೊಳ್ಳಬೇಕೆಂದು ನಾನು ಕೇಳುತ್ತಿಲ್ಲ. ಆದರೆ ಇವರನ್ನು ಕೆಡುಕನಿಂದ (ಸೈತಾನನಿಂದ) ತಪ್ಪಿಸಿ ಸುರಕ್ಷಿತವಾಗಿರಿಸಬೇಕೆಂದು ನಾನು ಕೇಳಿಕೊಳ್ಳುತ್ತಿದ್ದೇನೆ. 16 ನಾನು ಈ ಲೋಕಕ್ಕೆ ಯಾವ ರೀತಿ ಸೇರಿದವನಾಗಿಲ್ಲವೋ ಅದೇ ರೀತಿ ಇವರೂ ಈ ಲೋಕಕ್ಕೆ ಸೇರಿದವರಾಗಿಲ್ಲ. 17 ನಿನ್ನ ಸತ್ಯದ ಮೂಲಕ ನೀನು ಇವರನ್ನು ನಿನ್ನ ಸೇವೆಗೆ ಸಿದ್ಧಪಡಿಸು. ನಿನ್ನ ವಾಕ್ಯವು ಸತ್ಯವಾದದ್ದು. 18 ನೀನು ನನ್ನನ್ನು ಈ ಲೋಕಕ್ಕೆ ಕಳುಹಿಸಿದಂತೆ ನಾನೂ ಇವರನ್ನು ಈ ಲೋಕಕ್ಕೆ ಕಳುಹಿಸಿದ್ದೇನೆ. 19 ಇವರು ನಿಜವಾಗಿ ನಿನ್ನ ಸೇವೆಗೆ ಪ್ರತಿಷ್ಠಿತರಾಗಬೇಕೆಂದು ನಾನು ನನ್ನನ್ನೇ ಪ್ರತಿಷ್ಠಿಸಿಕೊಂಡಿದ್ದೇನೆ.
20 “ನಾನು ಇವರಿಗಾಗಿಯೂ ಇವರ ವಾಕ್ಯದಿಂದ ನನ್ನಲ್ಲಿ ನಂಬಿಕೆ ಇಡುವ ಎಲ್ಲರಿಗಾಗಿಯೂ ಪ್ರಾರ್ಥಿಸುತ್ತಿದ್ದೇನೆ. 21 ತಂದೆಯೇ, ನನ್ನಲ್ಲಿ ನಂಬಿಕೆ ಇಡುವ ಎಲ್ಲಾ ಜನರು ಒಂದಾಗಿರಬೇಕೆಂದು ನಾನು ಪ್ರಾರ್ಥಿಸುತ್ತೇನೆ. ನೀನು ನನ್ನಲ್ಲಿ ನೆಲೆಸಿರುವೆ ಮತ್ತು ನಾನು ನಿನ್ನಲ್ಲಿ ನೆಲೆಸಿರುವೆ. ನೀನು ನನ್ನನ್ನು ಕಳುಹಿಸಿರುವೆಯೆಂದು ಈ ಲೋಕವು ನಂಬಿಕೊಳ್ಳುವುದಕ್ಕಾಗಿ ಈ ಜನರು ಸಹ ನಮ್ಮೊಂದಿಗೆ ಒಂದಾಗಿರಬೇಕೆಂದು ನಾನು ಪ್ರಾರ್ಥಿಸುತ್ತೇನೆ. 22 ನೀನು ನನಗೆ ಕೊಟ್ಟ ಮಹಿಮೆಯನ್ನು ನಾನು ಈ ಜನರಿಗೆ ಕೊಟ್ಟಿದ್ದೇನೆ. ನೀನು ಮತ್ತು ನಾನು ಒಂದಾಗಿರುವಂತೆ ಇವರೂ ಒಂದಾಗಿರಬೇಕೆಂದು ನಾನು ಇವರಿಗೆ ಈ ಮಹಿಮೆಯನ್ನು ಕೊಟ್ಟೆನು. 23 ನಾನು ಅವರಲ್ಲಿ ಇರುವೆನು ಮತ್ತು ನೀನು ನನ್ನಲ್ಲಿರುವೆ. ಆದ್ದರಿಂದ ಅವರು ಸಂಪೂರ್ಣವಾಗಿ ಒಂದಾಗಿರುವರು. ನೀನೇ ನನ್ನನ್ನು ಕಳುಹಿಸಿರುವುದಾಗಿ ಮತ್ತು ನೀನು ನನ್ನನ್ನು ಪ್ರೀತಿಸಿದಂತೆಯೇ ಈ ಜನರನ್ನೂ ಪ್ರೀತಿಸಿರುವುದಾಗಿ ಈ ಲೋಕವು ಆಗ ತಿಳಿದುಕೊಳ್ಳುವುದು.
24 “ತಂದೆಯೇ, ನೀನು ನನಗೆ ಕೊಟ್ಟಿರುವ ಇವರು, ನಾನು ಇರುವಲ್ಲೆಲ್ಲಾ ನನ್ನೊಂದಿಗೆ ಇರಬೇಕೆಂದು ಮತ್ತು ನನ್ನ ಮಹಿಮೆಯನ್ನು ನೋಡಬೇಕೆಂದು ಅಪೇಕ್ಷಿಸುತ್ತೇನೆ. ಈ ಲೋಕವು ಸೃಷ್ಟಿಯಾಗುವುದಕ್ಕಿಂತ ಮೊದಲೇ ನೀನು ನನ್ನನ್ನು ಪ್ರೀತಿಸಿದ್ದರಿಂದ ನೀನೇ ನನಗೆ ಈ ಮಹಿಮೆಯನ್ನು ಕೊಟ್ಟೆ. 25 ನೀತಿಯುಳ್ಳ ತಂದೆಯೇ, ಈ ಲೋಕವು ನಿನ್ನನ್ನು ತಿಳಿದಿಲ್ಲ. ಆದರೆ ನಾನು ನಿನ್ನನ್ನು ತಿಳಿದಿರುವೆ ಮತ್ತು ನೀನೇ ನನ್ನನ್ನು ಕಳುಹಿಸಿರುವೆ ಎಂಬುದು ಈ ಜನರಿಗೆ ತಿಳಿದಿದೆ. 26 ನಾನು ನಿನ್ನ ನಿಜಸ್ವಭಾವವನ್ನು ಇವರಿಗೆ ಗೊತ್ತುಪಡಿಸಿದೆನು. ನಾನು ನಿನ್ನ ಸ್ವರೂಪವನ್ನು ಇವರಿಗೆ ಮತ್ತೆ ತೋರಿಸುವೆನು. ಆಗ ನನ್ನ ಮೇಲೆ ನಿನಗೆ ಯಾವ ಪ್ರೀತಿಯಿದೆಯೋ, ಅದೇ ಪ್ರೀತಿಯು ಇವರಲ್ಲಿಯೂ ಇರುವುದು ಮತ್ತು ನಾನು ಇವರಲ್ಲಿ ಇರುವೆನು.”
Kannada Holy Bible: Easy-to-Read Version. All rights reserved. © 1997 Bible League International