Print Page Options
Previous Prev Day Next DayNext

Old/New Testament

Each day includes a passage from both the Old Testament and New Testament.
Duration: 365 days
Kannada Holy Bible: Easy-to-Read Version (KERV)
Version
2 ಪೂರ್ವಕಾಲವೃತ್ತಾಂತ 17-18

ಯೆಹೂದದ ಅರಸನಾದ ಯೆಹೋಷಾಫಾಟನು

17 ಆಸನ ಮಗನಾದ ಯೆಹೋಷಾಫಾಟನು ಪಟ್ಟಕ್ಕೆ ಬಂದನು. ಅವನು ತನ್ನ ರಾಜ್ಯವನ್ನು ಬಲಪಡಿಸಿ ಇಸ್ರೇಲರಿಂದ ತನಗೆ ಅಪಾಯವಾಗದಂತೆ ಸುರಕ್ಷೆಯ ವ್ಯವಸ್ಥೆ ಮಾಡಿಕೊಂಡನು. ಯೆಹೂದದ ಎಲ್ಲಾ ಕೋಟೆಗಳುಳ್ಳ ಪಟ್ಟಣಗಳಲ್ಲಿಯೂ ತನ್ನ ತಂದೆಯು ವಶಪಡಿಸಿಕೊಂಡಿದ್ದ ಎಫ್ರಾಯೀಮ್ ಪ್ರಾಂತ್ಯದ ಪಟ್ಟಣಗಳಲ್ಲಿಯೂ ಸೈನ್ಯವನ್ನಿಟ್ಟನು.

ಯೆಹೋವನು ಯೆಹೋಷಾಫಾಟನೊಂದಿಗೆ ಇದ್ದನು; ಯಾಕೆಂದರೆ ಯೆಹೋಷಾಫಾಟನು ತನ್ನ ಯೌವನ ಕಾಲದಲ್ಲಿಯೇ ತನ್ನ ಪೂರ್ವಿಕನಾದ ದಾವೀದನಂತೆ ಯೆಹೋವನ ದೃಷ್ಟಿಯಲ್ಲಿ ಒಳ್ಳೆಯವನಾಗಿ ಜೀವಿಸಿದನು. ಅವನು ಬಾಳನ ಪೂಜೆಯನ್ನು ಮಾಡಲಿಲ್ಲ. ತನ್ನ ಪೂರ್ವಿಕರು ಅನುಸರಿಸಿದ ದೇವರನ್ನು ನಿರೀಕ್ಷಿಸಿದನು. ಆತನ ಆಜ್ಞೆಗಳನ್ನು ಅನುಸರಿಸಿದನು. ಇಸ್ರೇಲಿ ಅರಸರು ನಡೆದಂತೆ ಇವನು ನಡೆಯಲಿಲ್ಲ. ಯೆಹೋವನು ಯೆಹೋಷಾಫಾಟನಿಗಾಗಿ ರಾಜ್ಯದ ಅಧಿಕಾರವನ್ನು ಸ್ಥಿರಪಡಿಸಿದನು. ಯೆಹೂದದ ಜನರೆಲ್ಲರು ಅವನಿಗೆ ಕಾಣಿಕೆಗಳನ್ನು ತಂದುಕೊಟ್ಟರು. ಆದ್ದರಿಂದ ಅವನಿಗೆ ಐಶ್ವರ್ಯವೂ ಘನತೆಯೂ ದೊರಕಿತು. ಅವನ ಹೃದಯವು ಯೆಹೋವನ ಮಾರ್ಗಗಳಲ್ಲಿ ಆನಂದವನ್ನು ಕಂಡುಕೊಂಡಿತು.[a] ಯೆಹೂದ ಪ್ರಾಂತ್ಯದಲ್ಲಿ ವಿಗ್ರಹಗಳ ಪೂಜಾಸ್ಥಳಗಳನ್ನೆಲ್ಲಾ ತೆಗೆದುಹಾಕಿಸಿ ಅಶೇರಸ್ತಂಭಗಳನ್ನು ಕಡಿದುಹಾಕಿಸಿ ಅವುಗಳನ್ನು ನಿರ್ಮೂಲ ಮಾಡಿದನು.

ತನ್ನ ಆಳ್ವಿಕೆಯ ಮೂರನೆಯ ವರ್ಷದಲ್ಲಿ ಯೆಹೂದದ ಎಲ್ಲಾ ಪಟ್ಟಣಗಳಿಗೆ ನಾಯಕರನ್ನು ಕಳುಹಿಸಿ ಜನರಿಗೆ ದೇವರ ವಿಧಿನಿಯಮಗಳು ಬೋಧಿಸಲ್ಪಡುವಂತೆ ಮಾಡಿದನು. ಆ ನಾಯಕರು ಯಾರೆಂದರೆ: ಬೆನ್ಹೈಲ್, ಓಬದ್ಯ, ಜೆಕರ್ಯನೆತನೇಲ್ ಮತ್ತು ಮೀಕಾಯ. ಯೆಹೋಷಾಫಾಟನು ಅವರೊಂದಿಗೆ ಲೇವಿಯರನ್ನೂ ಕಳುಹಿಸಿದನು. ಅವರು ಯಾರೆಂದರೆ: ಶೆಮಾಯ, ನೆತನ್ಯ, ಜೆಬದ್ಯ, ಅಸಾಹೇಲ್, ಶೆಮೀರಾಮೋತ್, ಯೆಹೋನಾತಾನ್, ಅದೋನೀಯ ಮತ್ತು ಟೋಬೀಯ. ಅವರೊಂದಿಗೆ ಕಳುಹಿಸಲ್ಪಟ್ಟ ಯಾಜಕರು ಯಾರೆಂದರೆ: ಎಲೀಷಾಮಾ ಮತ್ತು ಯೆಹೋರಾಮ. ಇವರೆಲ್ಲಾ ಯೆಹೂದದ ಜನರಿಗೆ ಯೆಹೋವನ ಧರ್ಮೋಪದೇಶ ಪುಸ್ತಕದಿಂದ ಆತನ ಕಟ್ಟಳೆ ವಿಧಿನಿಯಮಗಳನ್ನು ಯೆಹೂದದ ಪಟ್ಟಣಗಳಲ್ಲೆಲ್ಲಾ ಸಂಚರಿಸಿ ಕಲಿಸಿದರು.

10 ಯೆಹೂದದ ಸುತ್ತಮುತ್ತಲಿನ ದೇಶಗಳ ಜನಾಂಗಗಳು ಯೆಹೋವನಿಗೆ ಭಯಪಟ್ಟರು. ಆದ್ದರಿಂದ ಅವರು ಯೆಹೋಷಾಫಾಟನ ಮೇಲೆ ಯುದ್ಧಕ್ಕೆ ಹೋಗಲಿಲ್ಲ. 11 ಫಿಲಿಷ್ಟಿಯರಲ್ಲಿ ಕೆಲವರು ಅವನಿಗೆ ಬೆಳ್ಳಿಬಂಗಾರಗಳ ಕಾಣಿಕೆಗಳನ್ನು ತಂದುಕೊಟ್ಟರು; ಅವನೊಬ್ಬ ಬಲಿಷ್ಠನಾದ ರಾಜನೆಂದು ಅವರು ತಿಳಿದುಕೊಂಡಿದ್ದರು. ಅರಬಿಯದ ಜನರು ಯೆಹೋಷಾಫಾಟನಿಗೆ ಪಶುಗಳ ಹಿಂಡುಗಳನ್ನು ತಂದುಕೊಟ್ಟರು. ಅವುಗಳಲ್ಲಿ ಏಳು ಸಾವಿರದ ಏಳುನೂರು ಟಗರುಗಳು ಮತ್ತು ಏಳು ಸಾವಿರದ ಏಳುನೂರು ಹೋತಗಳು ಇದ್ದವು.

12 ಯೆಹೋಷಾಫಾಟನು ಅತ್ಯಧಿಕವಾಗಿ ಅಭಿವೃದ್ಧಿಹೊಂದಿ ದೊಡ್ಡ ಅರಸನಾದನು. ಅವನು ಯೆಹೂದ ದೇಶದಲ್ಲೆಲ್ಲಾ ಕೋಟೆಗಳನ್ನು ಕಟ್ಟಿಸಿದನು. ಉಗ್ರಾಣ ನಗರಗಳನ್ನು ಕಟ್ಟಿಸಿದನು. 13 ಅವುಗಳಲ್ಲಿ ಬೇಕಾದ ಸಾಮಾಗ್ರಿಗಳನ್ನು ಸಂಗ್ರಹಿಸಿಟ್ಟನು. ಜೆರುಸಲೇಮಿನಲ್ಲಿ ನುರಿತ ಸೈನ್ಯವನ್ನು ಇರಿಸಿದನು. 14 ಅವರು ಬೇರೆಬೇರೆ ಕುಲಗಳಿಂದ ಬಂದವರಾಗಿದ್ದರು.

ಯೆಹೂದಕುಲದ ಅದ್ನನು ಮೂರುಲಕ್ಷ ಸೈನಿಕರಿಗೆ ಸೇನಾಪತಿಯಾಗಿದ್ದನು.

15 ಯೆಹೋಹಾನಾನನು ಎರಡು ಲಕ್ಷ ಎಂಭತ್ತು ಸಾವಿರ ಸೈನಿಕರಿಗೆ ಸೇನಾಪತಿಯಾಗಿದ್ದನು.

16 ಅಮಸ್ಯನು ಎರಡು ಲಕ್ಷ ಸೈನಿಕರಿಗೆ ಸೇನಾಪತಿಯಾಗಿದ್ದನು. ಅಮಸ್ಯನು ಜಿಕ್ರಿಯ ಮಗ. ಯೆಹೋವನ ಸೇವೆಮಾಡುವದಕ್ಕೆ ಅವನು ತನ್ನನ್ನು ಒಪ್ಪಿಸಿಕೊಟ್ಟಿದ್ದನು.

17 ಬೆನ್ಯಾಮೀನನ ಕುಲದ ಎಲ್ಯಾದನು ಎರಡು ಲಕ್ಷ ಸೈನಿಕರಿಗೆ ಸೇನಾಪತಿಯಾಗಿದ್ದನು. ಇವರು ಬಿಲ್ಲು, ಬಾಣ, ಗುರಾಣಿಗಳನ್ನು ಬಳಸಬಲ್ಲವರಾಗಿದ್ದರು. ಎಲ್ಯಾದನು ಶೂರನಾದ ಸೇನಾಪತಿ.

18 ಯೆಹೋಜಾಬಾದನು ಒಂದುಲಕ್ಷ ಎಂಭತ್ತು ಸಾವಿರ ಸೈನಿಕರಿಗೆ ಸೇನಾಪತಿಯಾಗಿದ್ದನು.

19 ಈ ಸೈನಿಕರೆಲ್ಲಾ ಯೆಹೋಷಾಫಾಟನ ಸೇವೆಮಾಡಿದರು. ಇವರಲ್ಲದೆ ಯೆಹೂದ ದೇಶದಲ್ಲೆಲ್ಲಾ ಇದ್ದ ಕೋಟೆಗಳಲ್ಲಿಯೂ ಸೈನಿಕರಿದ್ದರು.

ಅಹಾಬನಿಗೆ ಮೀಕಾಯೆಹುವಿನ ಎಚ್ಚರ

18 ಯೆಹೋಷಾಫಾಟನಿಗೆ ಅತ್ಯಧಿಕವಾದ ಐಶ್ವರ್ಯವೂ ಘನತೆಯೂ ಇದ್ದವು. ಅವನು ಅರಸನಾದ ಅಹಾಬನೊಂದಿಗೆ ತನ್ನ ಮದುವೆಯ ಮೂಲಕ ಸಂಬಂಧ ಬೆಳೆಸಿಕೊಂಡನು. ಕೆಲವು ವರ್ಷಗಳ ನಂತರ ಯೆಹೋಷಾಫಾಟನು ಸಮಾರ್ಯ ಪಟ್ಟಣದಲ್ಲಿ ಅಹಾಬನನ್ನು ಸಂಧಿಸಲು ಹೋದನು. ಯೆಹೋಷಾಫಾಟನಿಗೂ ಅವನೊಂದಿಗೆ ಬಂದಿದ್ದ ಜನರಿಗೂ ಅಹಾಬನು ಅನೇಕ ದನಕುರಿಗಳನ್ನು ವಧಿಸಿ ಔತಣಮಾಡಿಸಿದನು. ರಾಮೋತ್‌ಗಿಲ್ಯೋದ್ ಪಟ್ಟಣದ ಮೇಲೆ ಯುದ್ಧಮಾಡಲು ಅಹಾಬನು ಯೆಹೋಷಾಫಾಟನನ್ನು ಪ್ರೇರೇಪಿಸಿದನು. ಇಸ್ರೇಲರ ಅರಸನಾದ ಅಹಾಬನು ಯೆಹೂದದ ಅರಸನಾದ ಯೆಹೋಷಾಫಾಟನಿಗೆ, “ನೀನು ನನ್ನೊಂದಿಗೆ ರಾಮೋತ್‌ಗಿಲ್ಯಾದಿಗೆ ಯುದ್ಧಮಾಡಲು ಬರುವಿಯಾ?” ಎಂದು ಕೇಳಲು, ಯೆಹೋಷಾಫಾಟನು, “ನಾನು ನಿನ್ನವನೆ, ನನ್ನ ಜನರು ನಿನ್ನ ಜನರೇ ಆಗಿದ್ದಾರೆ. ನಾವು ಯುದ್ಧಮಾಡಲು ನಿಮ್ಮೊಂದಿಗೆ ಬರುತ್ತೇವೆ” ಎಂದು ಅಹಾಬನಿಗೆ ಉತ್ತರಿಸಿದನು. ಯೆಹೋಷಾಫಾಟನು ಅಹಾಬನಿಗೆ, “ಆದರೆ ಮೊದಲು ನಾವು ಯೆಹೋವನನ್ನು ವಿಚಾರಿಸೋಣ” ಅಂದನು.

ಆಗ ಅಹಾಬನು ನಾನೂರು ಮಂದಿ ಪ್ರವಾದಿಗಳನ್ನು ಒಟ್ಟಾಗಿ ಸೇರಿಸಿ ಅವರಿಗೆ, “ನಾವು ರಾಮೋತ್‌ಗಿಲ್ಯಾದಿನ ಮೇಲೆ ಯುದ್ಧಕ್ಕೆ ಹೊರಡಬೇಕೋ ಬೇಡವೋ?” ಎಂದು ಕೇಳಿದಾಗ

ಆ ಪ್ರವಾದಿಗಳು ಅಹಾಬನಿಗೆ, “ಹೋಗು, ದೇವರು ರಾಮೋತ್‌ಗಿಲ್ಯಾದನ್ನು ಸೋಲಿಸುವಂತೆ ಮಾಡುವನು” ಎಂದು ಹೇಳಿದರು.

ಆಗ ಯೆಹೋಷಾಫಾಟನು, “ಈ ಪ್ರವಾದಿಗಳಲ್ಲದೆ ಬೇರೆ ಪ್ರವಾದಿಗಳಿಲ್ಲವೆ? ಅವರ ಮೂಲಕ ನಾವು ಯೆಹೋವನನ್ನು ಕೇಳೋಣ” ಎಂದನು.

ಆಗ ಅರಸನಾದ ಅಹಾಬನು, “ಇನ್ನೂ ಒಬ್ಬನು ಇದ್ದಾನೆ. ನಾವು ಅವನಿಂದ ಯೆಹೋವನನ್ನು ವಿಚಾರಿಸಬಹುದು. ಆದರೆ ನಾನು ಅವನನ್ನು ದ್ವೇಷಿಸುತ್ತೇನೆ. ಯಾಕೆಂದರೆ ನನ್ನ ವಿಷಯವಾಗಿ ಯೆಹೋವನಿಂದ ಯಾವ ಒಳ್ಳೆಯ ಸಂದೇಶವನ್ನೂ ಅವನು ಕೊಡುವದಿಲ್ಲ. ನನ್ನ ಬಗ್ಗೆ ಯಾವಾಗಲೂ ಕೆಟ್ಟದ್ದನ್ನೇ ನುಡಿಯುತ್ತಾನೆ. ಅವನು ಇಮ್ಲನ ಮಗನಾದ ಮೀಕಾಯೆಹುವು” ಅಂದನು.

ಅದಕ್ಕೆ ಯೆಹೋಷಾಫಾಟನು, “ಅಹಾಬನೇ, ನೀನು ಹಾಗೆ ಹೇಳಬಾರದು” ಅಂದನು.

ಆಗ ಅಹಾಬನು ತನ್ನ ಸೇವಕರಲ್ಲೊಬ್ಬನನ್ನು ಕರೆದು, “ಬೇಗ ಹೋಗಿ ಇಮ್ಲನ ಮಗನಾದ ಮೀಕಾಯೆಹುವನ್ನು ಕರೆದುಕೊಂಡು ಬಾ” ಎಂದು ಆಜ್ಞಾಪಿಸಿದನು.

ಇಸ್ರೇಲರ ಅರಸನಾದ ಅಹಾಬನೂ ಯೆಹೂದ್ಯರ ಅರಸನಾದ ಯೆಹೋಷಾಫಾಟನೂ ತಮ್ಮ ರಾಜವಸ್ತ್ರಗಳನ್ನು ಧರಿಸಿದ್ದರು. ಅವರು ಸಮಾರ್ಯ ಪಟ್ಟಣದ ಮುಂಭಾಗದ ಬಾಗಿಲಿನೆದುರು ಸಿಂಹಾಸನಗಳ ಮೇಲೆ ಕುಳಿತಿದ್ದರು. ಆ ನಾನೂರು ಮಂದಿ ಪ್ರವಾದಿಗಳು ಅವರ ಮುಂದೆ ನಿಂತುಕೊಂಡು ಪ್ರವಾದಿಸುತ್ತಿದ್ದರು. 10 ಚಿದ್ಕೀಯನು ಕೆನಾನನ ಮಗ. ಚಿದ್ಕೀಯನು ಕಬ್ಬಿಣದ ಕೊಂಬುಗಳನ್ನು ತಯಾರಿಸಿ, “ಇದು ಯೆಹೋವನ ನುಡಿ. ಈ ಕಬ್ಬಿಣದ ಕೊಂಬುಗಳಿಂದಲೋ ಎಂಬಂತೆ ನೀನು ಅರಾಮ್ಯರನ್ನು ನಾಶಮಾಡುವೆ” ಎಂದು ಹೇಳಿದನು. 11 ಅಲ್ಲಿದ್ದ ಪ್ರವಾದಿಗಳೆಲ್ಲರೂ ಅದನ್ನೇ ನುಡಿದರು. ಅವರು, “ನೀನು ರಾಮೋತ್‌ಗಿಲ್ಯಾದಿಗೆ ಹೋಗು. ನಿನಗಲ್ಲಿ ಜಯವಾಗುವದು. ಯೆಹೋವನು ಅರಾಮ್ಯರನ್ನು ಸೋಲಿಸುವಂತೆ ನಿನಗೆ ಸಹಾಯಮಾಡುವನು” ಎಂದರು.

12 ಮೀಕಾಯೆಹುವಿನ ಬಳಿಗೆ ಹೋದ ರಾಜನ ಸೇವಕನು ಅವನಿಗೆ, “ಮೀಕಾಯೆಹುವೇ ಕೇಳು, ಎಲ್ಲಾ ಪ್ರವಾದಿಗಳೂ ರಾಜನು ಗೆಲ್ಲುವನು ಎಂದು ಪ್ರವಾದಿಸುತ್ತಿದ್ದಾರೆ. ಅದನ್ನೇ ನೀನು ಹೇಳಿ ಅರಸನಿಗೆ ಶುಭವನ್ನು ಹಾರೈಸಬೇಕು” ಅಂದನು.

13 ಆದರೆ ಮೀಕಾಯೆಹುವು, “ಯೆಹೋವನಾಣೆ, ಆತನು ಹೇಳಿದ್ದನ್ನೇ ನಾನು ಹೇಳುವೆನು” ಎಂದನು.

14 ಮೀಕಾಯೆಹುವು ಅಹಾಬನ ಬಳಿಗೆ ಬಂದಾಗ ಅರಸನು, “ಮೀಕಾಯೆಹುವೇ, ನಾವು ರಾಮೋತ್‌ಗಿಲ್ಯಾದಿನ ಮೇಲೆ ಯುದ್ಧಕ್ಕೆ ಹೊರಡಬಹುದೋ?” ಎಂದು ವಿಚಾರಿಸಿದಾಗ

ಮೀಕಾಯೆಹುವು, “ಹೋಗಿ, ಯುದ್ಧಮಾಡು. ದೇವರು ಅವರನ್ನು ನಿನ್ನ ಕೈಗಳಿಗೆ ಒಪ್ಪಿಸುವನು” ಎಂದು ಹೇಳಿದನು.

15 ಆಗ ಅಹಾಬನು ಮೀಕಾಯೆಹುವಿಗೆ, “ನೀನು ಯೆಹೋವನ ಹೆಸರಿನಲ್ಲಿ ನನಗೆ ಸತ್ಯವನ್ನೇ ತಿಳಿಸಬೇಕೆಂದು ಎಷ್ಟೋ ಸಲ ನಿನ್ನಿಂದ ಪ್ರಮಾಣ ಮಾಡಿಸಿರುತ್ತೇನೆ” ಎಂದು ಹೇಳಿದಾಗ ಮೀಕಾಯೆಹುವು,

16 “ಇಸ್ರೇಲಿನ ಜನರೆಲ್ಲರೂ ಬೆಟ್ಟಪ್ರದೇಶಗಳಲ್ಲಿ ಚದರಿರುವದನ್ನು ಕಂಡೆನು. ಅವರು ಕುರುಬನಿಲ್ಲದ ಕುರಿಗಳಂತಿದ್ದರು. ಕರ್ತನು ಹೇಳಿದ್ದೇನೆಂದರೆ, ‘ಅವರಿಗೆ ನಾಯಕರಿಲ್ಲ, ಆದ್ದರಿಂದ ಸುರಕ್ಷಿತವಾಗಿ ಮನೆಗೆ ಹಿಂದಿರುಗಲಿ’” ಎಂದು ಹೇಳಿದನು.

17 ಇಸ್ರೇಲಿನ ರಾಜನಾದ ಅಹಾಬನು ಯೆಹೋಷಾಫಾಟನಿಗೆ, “ಮೀಕಾಯೆಹುವು ನನ್ನ ಬಗ್ಗೆ ಯೆಹೋವನಿಂದ ಒಳ್ಳೆಯ ಸಂದೇಶವನ್ನು ಕೊಡುವದೇ ಇಲ್ಲವೆಂದು ನಿನಗೆ ಹೇಳಿದೆನಲ್ಲಾ? ಅವನಲ್ಲಿ ನನ್ನ ವಿಷಯವಾಗಿ ಕೆಟ್ಟ ಸಂದೇಶವೇ ಇರುವದು” ಎಂದು ಹೇಳಿದನು.

18 ಮೀಕಾಯೆಹುವು, “ಯೆಹೋವನಿಂದ ಬಂದ ಸಂದೇಶವನ್ನು ಕೇಳು. ಯೆಹೋವನು ಸಿಂಹಾಸನದಲ್ಲಿ ಕುಳಿತಿರುವದನ್ನು ನಾನು ಕಂಡೆನು. ಅವನ ಎಡಬಲಗಳಲ್ಲಿ ಪರಲೋಕದ ಸೈನ್ಯವು ನಿಂತಿತ್ತು. 19 ‘ರಾಮೋತ್‌ಗಿಲ್ಯಾದಿನ ಮೇಲೆ ಯುದ್ಧಮಾಡಲು ಅಹಾಬನನ್ನು ಯಾರು ಮರುಳುಗೊಳಿಸುವರು? ಯಾಕೆಂದರೆ ಅಲ್ಲಿ ಅವನು ಸಾಯಬೇಕು’ ಎಂದು ಯೆಹೋವನು ಕೇಳಿದಾಗ ಅಲ್ಲಿ ನಿಂತಿದ್ದವರು ಬೇರೆಬೇರೆ ವಿಧಾನವನ್ನು ತಿಳಿಸಿದರು. 20 ಆಗ ಒಂದು ಆತ್ಮವು ದೇವರ ಮುಂದೆ ನಿಂತು, ‘ನಾನು ಅಹಾಬನನ್ನು ಮರುಳುಗೊಳಿಸುತ್ತೇನೆ’ ಎಂದು ಹೇಳಿತು. ‘ಹೇಗೆ?’ ಎಂದು ಆತನು ಕೇಳಿದನು. 21 ಅದಕ್ಕೆ ಆತ್ಮವು, ‘ನಾನು ಹೋಗಿ ಅಹಾಬನ ಪ್ರವಾದಿಗಳಿಗೆ ಸುಳ್ಳುಹೇಳುವ ಆತ್ಮವಾಗುತ್ತೇನೆ’ ಎಂದು ಹೇಳಿತು. ಅದಕ್ಕೆ ಆತನು ‘ಸರಿ, ಹಾಗೆಯೇ ಮಾಡು. ನೀನು ನಿನ್ನ ಕಾರ್ಯದಲ್ಲಿ ಸಫಲವಾಗುವೆ’ ಎಂದು ಹೇಳಿದನು.

22 “ಆದ್ದರಿಂದ ಅಹಾಬನೇ, ನಿನ್ನ ಪ್ರವಾದಿಗಳ ಬಾಯಿಯಲ್ಲಿ ಸುಳ್ಳುಹೇಳುವ ಆತ್ಮವನ್ನು ಯೆಹೋವನೇ ಇರಿಸಿದ್ದಾನೆ; ನಿನಗೆ ಕೇಡಾಗುವುದೆಂದು ಯೆಹೋವನೇ ತಿಳಿಸುತ್ತಾನೆ” ಎಂದನು.

23 ಆಗ ಚಿದ್ಕೀಯನು ಮುಂದೆ ಬಂದು ಮೀಕಾಯೆಹುವಿನ ಕೆನ್ನೆಗೆ ಹೊಡೆದು, “ಮೀಕಾಯೆಹುವೇ, ಯೆಹೋವನ ಆತ್ಮನು ನಿನ್ನೊಂದಿಗೆ ಮಾತಾಡಲು ನನ್ನ ಬಳಿಯಿಂದ ಬಂದಾಗ ಯಾವ ಕಡೆಗೆ ಹೋದನು?” ಎಂದು ಗೇಲಿಮಾಡಿದಾಗ,

24 ಮೀಕಾಯೆಹುವು, “ಚಿದ್ಕೀಯನೇ, ನೀನು ಒಳಕೋಣೆಯೊಳಗೆ ಅವಿತು ಕುಳಿತಿರುವ ದಿನದಲ್ಲಿ ನಿನಗೆ ತಿಳಿಯುವದು” ಎಂದು ಹೇಳಿದನು.

25 ಆಗ ಅರಸನಾದ ಅಹಾಬನು, ಮೀಕಾಯೆಹುವನ್ನು ತೆಗೆದುಕೊಂಡು ನಗರಪಾಲಕನಾದ ಅಮೋನನಿಗೂ ಮತ್ತು ರಾಜಕುಮಾರನಾದ ಯೋವಾಷನಿಗೂ ಕೊಟ್ಟು, 26 ಅವರಿಗೆ “ಮೀಕಾಯೆಹುವನ್ನು ಸೆರೆಮನೆಗೆ ಹಾಕಿ. ನಾನು ಯುದ್ಧದಿಂದ ಸುರಕ್ಷಿತವಾಗಿ ಹಿಂತಿರುಗುವ ತನಕ ಬರಿ ರೊಟ್ಟಿ ಮತ್ತು ನೀರನ್ನು ಮಾತ್ರ ಅವನಿಗೆ ಕೊಡಿ ಎಂದು ಅರಸನು ಆಜ್ಞಾಪಿಸುತ್ತಾನೆ ಎಂದು ಹೇಳಿ” ಎಂದನು.

27 ಆಗ ಮೀಕಾಯೆಹುವು, “ಅಹಾಬನೇ, ನೀನು ರಣರಂಗದಿಂದ ಸುರಕ್ಷಿತವಾಗಿ ಬಂದರೆ ಯೆಹೋವನು ನನ್ನ ಮೂಲಕ ಮಾತನಾಡಲಿಲ್ಲವೆಂದು ತಿಳಿದುಕೋ. ಜನರೇ, ನನ್ನ ಮಾತನ್ನು ಕೇಳಿ ನೆನಪಿನಲ್ಲಿಡಿರಿ” ಎಂದು ಉತ್ತರಕೊಟ್ಟನು.

ರಾಮೋತ್‌ಗಿಲ್ಯಾದಿನಲ್ಲಿ ಅಹಾಬನು ಕೊಲ್ಲಲ್ಪಟ್ಟದ್ದು

28 ಇಸ್ರೇಲಿನ ರಾಜನಾದ ಅಹಾಬನೂ ಯೆಹೂದದ ರಾಜನಾದ ಯೆಹೋಷಾಫಾಟನೂ ರಾಮೋತ್‌ಗಿಲ್ಯಾದ್ ಪಟ್ಟಣದ ಮೇಲೆ ಧಾಳಿ ಮಾಡಿದರು. 29 ಯೆಹೋಷಾಫಾಟನಿಗೆ ಅಹಾಬನು, “ನಾನು ಯುದ್ಧರಂಗಕ್ಕೆ ಹೋಗುವ ಮೊದಲು ವೇಷ ಬದಲಾಯಿಸುತ್ತೇನೆ. ನೀನು ರಾಜವಸ್ತ್ರದಲ್ಲಿಯೇ ಇರು” ಎಂದು ಹೇಳಿ ತನ್ನ ರೂಪವನ್ನು ಬದಲಾಯಿಸಿದನು. ಇಬ್ಬರು ರಾಜರೂ ಯುದ್ಧರಂಗಕ್ಕಿಳಿದರು.

30 ಅರಾಮ್ಯರ ರಾಜನು ತನ್ನ ರಥದ ಅಧಿಪತಿಗಳಿಗೆ, “ನೀವು ಜನರೊಂದಿಗೆ ಯುದ್ಧಮಾಡಬೇಡಿರಿ, ಅಧಿಕಾರಿಗಳ ಮತ್ತು ಸಾಮಾನ್ಯ ಸೈನಿಕರ ಗೊಡವೆಗೆ ಹೋಗಬೇಡಿರಿ. ಆದರೆ ನೀವು ಇಸ್ರೇಲಿನ ರಾಜನಾದ ಅಹಾಬನೊಂದಿಗೇ ಯುದ್ಧಮಾಡಿರಿ” ಎಂದು ಹೇಳಿದನು. 31 ರಥಾಧಿಪತಿಗಳು ಯೆಹೋಷಾಫಾಟನನ್ನು ನೋಡಿದಾಗ ಅವನೇ ಅಹಾಬನೆಂದೆಣಿಸಿ ಅವನ ಮೇಲೆ ದಾಳಿ ನಡೆಸಿದರು. ಆದರೆ ಯೆಹೋಷಾಫಾಟನು ಗಟ್ಟಿಯಾಗಿ ಕೂಗಿಕೊಂಡನು. ಆಗ ಯೆಹೋವನು ಅವನಿಗೆ ಸಹಾಯಮಾಡಿ ರಥಾಧಿಪತಿಗಳು ಅವನಿಂದ ಬೇರೆ ಕಡೆಗೆ ತಿರುಗುವಂತೆ ಮಾಡಿದನು. 32 ಯೆಹೋಷಾಫಾಟನು ಇಸ್ರೇಲಿನ ರಾಜನಲ್ಲವೆಂದು ಅವರು ತಿಳಿದು ಅವನ ಮೇಲೆ ದಾಳಿ ಮಾಡುವುದನ್ನು ನಿಲ್ಲಿಸಿದರು.

33 ಆದರೆ ಒಬ್ಬ ಸಿಪಾಯಿಯು ಬಿಲ್ಲು ತೆಗೆದು ಬಾಣವನ್ನು ಹೂಡಿ ಗುರಿಯಿಲ್ಲದೆ ಹೊಡೆದಾಗ ಆ ಬಾಣವು ಬಂದು ಇಸ್ರೇಲರ ರಾಜನಾದ ಅಹಾಬನಿಗೆ ತಾಗಿತು. ಅವನ ಕವಚದ ಸಂದಿನಿಂದ ಅವನ ದೇಹದೊಳಗೆ ಹೊಕ್ಕಿತು. ಆಗ ಅವನು ತನ್ನ ರಥವನ್ನೋಡಿಸುವ ರಾಹುತನಿಗೆ, “ರಥವನ್ನು ಹಿಂದಕ್ಕೆ ತಿರುಗಿಸಿ ನನ್ನನ್ನು ರಣರಂಗದಿಂದ ಹೊರಕ್ಕೆ ಕರೆದುಕೊಂಡು ಹೋಗು. ನಾನು ಗಾಯಗೊಂಡಿದ್ದೇನೆ” ಅಂದನು.

34 ಆ ದಿವಸ ಯುದ್ಧವು ಬಲುಘೋರವಾಗಿ ನಡೆಯಿತು. ಅಹಾಬನು ರಥದ ಕಂಬಕ್ಕೆ ಒರಗಿ ಸಂಜೆಯ ತನಕ ಹಾಗೆಯೇ ಅರಾಮ್ಯರ ಎದುರು ನಿಂತುಕೊಂಡಿದ್ದನು. ಸೂರ್ಯಾಸ್ತಮಾನವಾದಾಗ ಅಹಾಬನು ಸತ್ತನು.

ಯೋಹಾನ 13:1-20

ಯೇಸು ತನ್ನ ಶಿಷ್ಯರ ಪಾದಗಳನ್ನು ತೊಳೆಯುವನು

13 ಯೆಹೂದ್ಯರ ಪಸ್ಕಹಬ್ಬವು ಬಹು ಸಮೀಪವಾಗಿತ್ತು. ತಾನು ಈ ಲೋಕವನ್ನು ಬಿಟ್ಟು ತಂದೆಯ ಬಳಿಗೆ ಹೋಗುವ ಸಮಯ ಬಂದಿರುವುದಾಗಿ ಯೇಸುವಿಗೆ ತಿಳಿದಿತ್ತು. ಈ ಲೋಕದಲ್ಲಿದ್ದ ತನ್ನವರನ್ನು ಆತನು ಯಾವಾಗಲೂ ಪ್ರೀತಿಸುತ್ತಿದ್ದನು. ಈಗಲಾದರೋ ಅವರ ಮೇಲೆ ತನಗಿರುವ ಅಪಾರ ಪ್ರೀತಿಯನ್ನು ತೋರಿಸುವ ಕಾಲ ಆತನಿಗೆ ಬಂದಿತ್ತು.

ಯೇಸು ಮತ್ತು ಆತನ ಶಿಷ್ಯರು ರಾತ್ರಿಯ ಊಟಕ್ಕಾಗಿ ಕುಳಿತುಕೊಂಡಿದ್ದರು. ಯೇಸುವಿಗೆ ದ್ರೋಹ ಮಾಡುವಂತೆ ಸೈತಾನನು ಇಸ್ಕರಿಯೋತ ಯೂದನನ್ನು ಈಗಾಗಲೇ ಪ್ರೇರೇಪಿಸಿದ್ದನು. (ಯೂದನು ಸಿಮೋನನ ಮಗ.) ತಂದೆಯು ಪ್ರತಿಯೊಂದರ ಮೇಲೆ ತನಗೆ ಅಧಿಕಾರವನ್ನು ಕೊಟ್ಟಿದ್ದಾನೆಂಬುದು ಯೇಸುವಿಗೆ ತಿಳಿದಿತ್ತು. ಅಲ್ಲದೆ ತಾನು ದೇವರ ಬಳಿಯಿಂದ ಬಂದಿರುವುದಾಗಿಯೂ ಮತ್ತು ಈಗ ದೇವರ ಬಳಿಗೆ ಮರಳಿಹೋಗುತ್ತಿರುವುದಾಗಿಯೂ ಆತನಿಗೆ ಗೊತ್ತಿತ್ತು. ಅವರು ಊಟಮಾಡುತ್ತಿದ್ದಾಗ ಯೇಸು ಎದ್ದು ತನ್ನ ಮೇಲಂಗಿಯನ್ನು ತೆಗೆದಿಟ್ಟನು; ಅಂಗವಸ್ತ್ರವನ್ನು ಸೊಂಟಕ್ಕೆ ಕಟ್ಟಿಕೊಂಡನು. ಅನಂತರ ಒಂದು ಬೋಗುಣಿಗೆ ನೀರು ಸುರಿದುಕೊಂಡು ಶಿಷ್ಯರ ಕಾಲುಗಳನ್ನು ತೊಳೆದು ತಾನು ಕಟ್ಟಿಕೊಂಡಿದ್ದ ಅಂಗವಸ್ತ್ರದಿಂದ ಅವರ ಪಾದಗಳನ್ನು ಒರಸಿದನು.

ಯೇಸು ಸೀಮೋನ್ ಪೇತ್ರನ ಬಳಿಗೆ ಬಂದಾಗ ಪೇತ್ರನು, “ಪ್ರಭುವೇ, ನನ್ನ ಪಾದಗಳನ್ನು ನೀನು ತೊಳೆಯಕೂಡದು” ಎಂದನು.

ಯೇಸು, “ಈಗ ನಾನು ಏನು ಮಾಡುತ್ತಿರುವೆನೆಂದು ನಿನಗೆ ಗೊತ್ತಿಲ್ಲ. ಆದರೆ ಮುಂದೆ ನೀನು ಅರ್ಥಮಾಡಿಕೊಳ್ಳುವೆ” ಎಂದು ಉತ್ತರಕೊಟ್ಟನು.

ಪೇತ್ರನು, “ಇಲ್ಲ! ನನ್ನ ಪಾದಗಳನ್ನು ನೀನು ಎಂದಿಗೂ ತೊಳೆಯಕೂಡದು” ಎಂದು ಪ್ರತಿಭಟಿಸಿದನು.

ಯೇಸು, “ನಿನ್ನ ಪಾದಗಳನ್ನು ನಾನು ತೊಳೆಯದಿದ್ದರೆ, ನನ್ನಲ್ಲಿ ನಿನಗೆ ಪಾಲು ಇಲ್ಲ” ಎಂದು ಹೇಳಿದನು.

ಆಗ ಸೀಮೋನ್ ಪೇತ್ರನು, “ಪ್ರಭುವೇ, ನನ್ನ ಪಾದಗಳನ್ನು ಮಾತ್ರವಲ್ಲದೆ ನನ್ನ ಕೈಗಳನ್ನು ಮತ್ತು ತಲೆಯನ್ನೂ ತೊಳೆ!” ಎಂದು ಕೇಳಿಕೊಂಡನು.

10 ಯೇಸು, “ಸ್ನಾನಮಾಡಿಕೊಂಡವನ ದೇಹವೆಲ್ಲಾ ಶುದ್ಧವಾಗಿರುತ್ತದೆ. ಅವನು ತನ್ನ ಪಾದಗಳನ್ನು ತೊಳೆದುಕೊಂಡರೆ ಸಾಕು. ನೀವು ಸಹ ಶುದ್ಧರಾಗಿದ್ದೀರಿ, ಆದರೆ ನಿಮ್ಮಲ್ಲಿ ಪ್ರತಿಯೊಬ್ಬನೂ ಶುದ್ಧನಲ್ಲ” ಎಂದು ಹೇಳಿದನು. 11 ತನಗೆ ದ್ರೋಹ ಮಾಡುವ ವ್ಯಕ್ತಿ ಯಾರೆಂದು ಯೇಸುವಿಗೆ ತಿಳಿದಿತ್ತು. ಆದಕಾರಣ ಆತನು, “ನಿಮ್ಮಲ್ಲಿ ಪ್ರತಿಯೊಬ್ಬನೂ ಶುದ್ಧನಲ್ಲ” ಎಂದು ಹೇಳಿದನು.

12 ಯೇಸು ಅವರ ಪಾದಗಳನ್ನು ತೊಳೆದ ಮೇಲೆ ತನ್ನ ಮೇಲಂಗಿಯನ್ನು ಧರಿಸಿಕೊಂಡು ಮತ್ತೆ ಕುಳಿತುಕೊಂಡು ಹೀಗೆಂದನು: “ನಾನು ನಿಮಗೆ ಮಾಡಿದ್ದು ಏನೆಂದು ಅರ್ಥವಾಯಿತೇ? 13 ನೀವು ನನ್ನನ್ನು, ‘ಗುರುವೇ, ಪ್ರಭುವೇ’ ಎಂದು ಕರೆಯುತ್ತೀರಿ. ನೀವು ಹಾಗೆ ಕರೆಯುವುದು ಸರಿ. ಏಕೆಂದರೆ ನಾನು ಗುರುವೂ ಹೌದು, ಪ್ರಭುವೂ ಹೌದು. 14 ನಿಮ್ಮ ಪ್ರಭುವೂ ಗುರುವೂ ಆಗಿರುವ ನಾನು ನಿಮ್ಮ ಪಾದಗಳನ್ನು ಸೇವಕನಂತೆ ತೊಳೆದೆನು. ಆದ್ದರಿಂದ ನೀವು ಸಹ ಒಬ್ಬರ ಪಾದಗಳನ್ನು ಇನ್ನೊಬ್ಬರು ತೊಳೆಯಬೇಕು. 15 ಈ ಕಾರ್ಯಕ್ಕೆ ನಾನೇ ನಿಮಗೆ ಮಾದರಿಯಾಗಿದ್ದೇನೆ. ನಾನು ನಿಮಗೆ ಮಾಡಿದಂತೆ ನೀವೂ ಒಬ್ಬರಿಗೊಬ್ಬರು ಮಾಡಬೇಕು. 16 ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ಸೇವಕನು ಒಡೆಯನಿಗಿಂತ ದೊಡ್ಡವನಲ್ಲ. ಆದ್ದರಿಂದ ಕೆಲಸಕ್ಕಾಗಿ ಕಳುಹಿಸಲ್ಪಟ್ಟವನು ಕಳುಹಿಸಿದವನಿಗಿಂತ ದೊಡ್ಡವನಲ್ಲ. 17 ನೀವು ಈ ಸಂಗತಿಗಳನ್ನು ತಿಳಿದುಕೊಂಡು ಇವುಗಳನ್ನು ಕೈಕೊಂಡು ನಡೆದರೆ ಸಂತೋಷದಿಂದಿರುವಿರಿ.

18 “ನಾನು ನಿಮ್ಮೆಲ್ಲರ ಬಗ್ಗೆ ಮಾತಾಡುತ್ತಿಲ್ಲ. ನಾನು ಆರಿಸಿಕೊಂಡಿರುವ ಜನರ ಬಗ್ಗೆ ನನಗೆ ಗೊತ್ತಿದೆ. ಆದರೆ ‘ನನ್ನೊಂದಿಗೆ ಊಟ ಮಾಡುವವನೇ ನನಗೆ ದ್ರೋಹ ಬಗೆದನು.’[a] ಎಂಬ ಪವಿತ್ರ ಗ್ರಂಥದ ಮಾತು ನೆರವೇರಬೇಕು. 19 ಅದು ನೆರವೇರುವಾಗ ನಾನೇ ಕ್ರಿಸ್ತನೆಂದು ನೀವು ನಂಬಬೇಕೆಂದು, ಅದು ನೆರವೇರವುದಕ್ಕಿಂತ ಮೊದಲೇ ಅದನ್ನು ನಿಮಗೆ ತಿಳಿಸುತ್ತಿದ್ದೇನೆ. 20 ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ನಾನು ಕಳುಹಿಸುವ ಯಾರನ್ನಾದರೂ ಸ್ವೀಕರಿಸಿಕೊಳ್ಳುವವನು ನನ್ನನ್ನೇ ಸ್ವೀಕರಿಸಿಕೊಳ್ಳುವವನಾಗಿದ್ದಾನೆ. ನನ್ನನ್ನು ಸ್ವೀಕರಿಸಿಕೊಳ್ಳುವವನು ನನ್ನನ್ನು ಕಳುಹಿಸಿದಾತನನ್ನೇ ಸ್ವೀಕರಿಸಿಕೊಳ್ಳುವವನಾಗಿದ್ದಾನೆ.”

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International