Old/New Testament
ಆಸನ ಪರಿವರ್ತನೆ
15 1-2 ಓಬೇದನ ಮಗನಾದ ಅಜರ್ಯನ ಮೇಲೆ ದೇವರಾತ್ಮವು ಬಂದಿತು. ಅಜರ್ಯನು ಆಸನನ್ನು ಸಂಧಿಸಿ ಹೀಗೆ ಹೇಳಿದನು: “ಆಸನೇ, ನನ್ನ ಮಾತನ್ನು ಕೇಳು. ಯೆಹೂದದ ಜನರೇ, ಬೆನ್ಯಾಮೀನ್ ಜನರೇ, ನನ್ನ ಮಾತನ್ನು ಕೇಳಿರಿ. ನೀವು ಯೆಹೋವನೊಡನೆ ಇದ್ದರೆ ಆತನು ನಿಮ್ಮ ಸಂಗಡ ಇರುವನು. ನೀವು ಆತನನ್ನು ಹುಡುಕಿದರೆ ಆತನು ನಿಮಗೆ ಸಿಕ್ಕುವನು. ಆದರೆ ನೀವು ಆತನನ್ನು ತೊರೆದರೆ ಆತನು ನಿಮ್ಮನ್ನೂ ತೊರೆಯುವನು. 3 ಬಹಳಕಾಲದ ತನಕ ಇಸ್ರೇಲರಲ್ಲಿ ನಿಜವಾದ ದೇವರಿರಲಿಲ್ಲ; ಬೋಧಕನಿರಲಿಲ್ಲ; ಧರ್ಮಶಾಸ್ತ್ರವೂ ಇರಲಿಲ್ಲ. 4 ಆದರೆ ಇಸ್ರೇಲರು ತಮಗೆ ಕಷ್ಟಬಂದಾಗ ದೇವರ ಕಡೆಗೆ ತಿರುಗಿದರು. ಆತನೇ ಇಸ್ರೇಲಿನ ದೇವರು. ಅವರು ಆತನನ್ನು ಹುಡುಕಿದಾಗ ಆತನು ಅವರಿಗೆ ಸಿಕ್ಕಿದನು. 5 ಆ ಕಷ್ಟದ ಸಮಯದಲ್ಲಿ ಯಾರೂ ಸುರಕ್ಷಿತವಾಗಿ ಪ್ರಯಾಣ ಮಾಡುವಂತಿರಲಿಲ್ಲ. ಎಲ್ಲಾ ದೇಶಗಳಲ್ಲಿಯೂ ಕಷ್ಟ ತೊಂದರೆಗಳು ತುಂಬಿದ್ದವು. 6 ಒಂದು ದೇಶವು ಇನ್ನೊಂದು ದೇಶವನ್ನು ನಾಶಮಾಡುತ್ತಿತ್ತು; ಒಂದು ಪಟ್ಟಣವು ಇನ್ನೊಂದು ಪಟ್ಟಣವನ್ನು ಸೂರೆಮಾಡುತ್ತಿತ್ತು. ಹೀಗೆ ದೇವರು ಎಲ್ಲಾ ಬಗೆಯ ತೊಂದರೆಗಳಿಂದ ಅವರನ್ನು ತಳಮಳಗೊಳಿಸಿದನು. 7 ಯೆಹೂದದ ಜನರೇ, ಬೆನ್ಯಾಮೀನ್ ಜನರೇ, ನೀವು ಶಕ್ತರಾಗಿರಿ, ನಿರಾಶರಾಗಬೇಡಿರಿ; ಯಾಕೆಂದರೆ ನಿಮ್ಮ ಒಳ್ಳೆಯ ಕೆಲಸಕ್ಕೆ ನಿಮಗೆ ಪ್ರತಿಫಲ ದೊರೆಯುವುದು.”
8 ಪ್ರವಾದಿಯಾದ ಓಬೇದನು ತಂದ ಸಂದೇಶವನ್ನು ಆಸನು ಕೇಳಿ ತುಂಬಾ ಪ್ರೋತ್ಸಾಹಗೊಂಡನು. ಅನಂತರ ಯೆಹೂದ ಮತ್ತು ಬೆನ್ಯಾಮೀನ್ ಪ್ರಾಂತ್ಯದಲ್ಲಿದ್ದ ಎಲ್ಲಾ ವಿಗ್ರಹಗಳನ್ನು ತೆಗೆದುಹಾಕಿಸಿದನು. ಗೆದ್ದಿದ್ದ ಎಫ್ರಾಯೀಮ್ ಬೆಟ್ಟಪ್ರದೇಶಗಳಲ್ಲಿದ್ದ ವಿಗ್ರಹಗಳನ್ನು ತೆಗೆದುಹಾಕಿಸಿದನು. ದೇವಾಲಯದ ಮಂಟಪದೆದುರು ಇದ್ದ ಯೆಹೋವನ ಯಜ್ಞವೇದಿಕೆಯನ್ನು ಸರಿಪಡಿಸಿದನು.
9 ಆಮೇಲೆ ಆಸನು ಯೆಹೂದ ಮತ್ತು ಬೆನ್ಯಾಮೀನ್ ಪ್ರಾಂತ್ಯದ ಜನರನ್ನೆಲ್ಲಾ ಒಟ್ಟಾಗಿ ಸೇರಿಸಿದನು. ಅದೇ ಪ್ರಕಾರ ಅವನು ಇಸ್ರೇಲನ್ನು ಬಿಟ್ಟು ಯೆಹೂದದಲ್ಲಿ ನೆಲೆಸಲು ಬಂದಿದ್ದ ಎಫ್ರಾಯೀಮ್, ಮನಸ್ಸೆ ಮತ್ತು ಸಿಮೆಯೋನ್ ಪ್ರಾಂತ್ಯಗಳವರನ್ನೂ ಒಟ್ಟಾಗಿ ಸೇರಿಸಿದನು. ದೇವರಾದ ಯೆಹೋವನು ಆಸನ ಕೂಡ ಇರುವದನ್ನು ನೋಡಿ ಅವನೊಂದಿಗೆ ಸೇರಲು ಅನೇಕ ಜನರು ಬಂದಿದ್ದರು.
10 ಅವರೆಲ್ಲರೂ ಆಸನ ಆಳ್ವಿಕೆಯ ಹದಿನೈದನೆಯ ವರ್ಷದ ಮೂರನೆಯ ತಿಂಗಳಲ್ಲಿ ಜೆರುಸಲೇಮಿನಲ್ಲಿ ಸೇರಿಬಂದರು. 11 ಆ ಸಮಯದಲ್ಲಿ ಅವರು ಏಳುನೂರು ಹೋರಿಗಳನ್ನೂ ಏಳುಸಾವಿರ ಆಡುಕುರಿಗಳನ್ನೂ, ಯೆಹೋವನಿಗೆ ಸಮರ್ಪಿಸಿದರು. ಇವುಗಳನ್ನು ಆಸನ ಸೈನ್ಯವು ಶತ್ರುಗಳಿಂದ ಸುಲಿದುಕೊಂಡಿದ್ದರು. 12 ತಮ್ಮ ಪೂರ್ವಿಕರು ಸೇವೆಮಾಡಿದ ದೇವರೊಂದಿಗೆ ಅಲ್ಲಿ ಅವರು ಒಡಂಬಡಿಕೆ ಮಾಡಿಕೊಂಡು ತಾವು ಪೂರ್ಣ ಹೃದಯದಿಂದಲೂ ಪೂರ್ಣ ಆತ್ಮದಿಂದಲೂ ಆತನ ಸೇವೆ ಮಾಡುವುದಾಗಿ ಪ್ರಮಾಣಮಾಡಿದರು. 13 ಯಾವನಾದರೂ ದೇವರಾದ ಯೆಹೋವನ ಸೇವೆಮಾಡಲು ನಿರಾಕರಿಸುವದಾದರೆ ಆ ವ್ಯಕ್ತಿಯು ಗಂಡಸಾಗಿದ್ದರೂ ಹೆಂಗಸಾಗಿದ್ದರೂ ಮುಖ್ಯವಾದವನಾಗಿದ್ದರೂ ಮುಖ್ಯವಲ್ಲದವನಾಗಿದ್ದರೂ ಕೊಲ್ಲಲ್ಪಡಬೇಕು ಎಂಬುದಾಗಿ ಹೇಳಿದರು. 14 ಆಮೇಲೆ ಆಸನೂ ಅವನ ಜನರೂ ದೇವರಿಗೆ ಪ್ರಮಾಣಮಾಡಿ ಸಂತೋಷದಿಂದ ಹರ್ಷಧ್ವನಿ ಮಾಡಿದರು. ಅಲ್ಲದೆ ತುತ್ತೂರಿಗಳನ್ನೂ ಕೊಂಬುಗಳನ್ನೂ ಊದಿದರು. 15 ಯೆಹೂದದ ಎಲ್ಲಾ ಜನರು ತಾವು ಯೆಹೋವನಿಗೆ ಮಾಡಿದ ಪ್ರಮಾಣದ ನಿಮಿತ್ತ ಸಂತೋಷಪಟ್ಟರು. ಯಾಕೆಂದರೆ ಅವರು ತಮ್ಮ ಪೂರ್ಣ ಹೃದಯದಿಂದ ಪ್ರಮಾಣಮಾಡಿದ್ದರು. ಅವರು ಯೆಹೋವನನ್ನು ಪೂರ್ಣ ಮನಸ್ಸಿನಿಂದ ಹಿಂಬಾಲಿಸಿದರು. ಅವರು ಆತನನ್ನು ಹುಡುಕಿದಾಗ ಆತನು ಅವರಿಗೆ ಪ್ರಸನ್ನನಾಗಿ ಅವರಿಗೆ ಸಮಾಧಾನವನ್ನು ಕೊಟ್ಟನು.
16 ಆಸನು ತನ್ನ ತಾಯಿಯಾದ ಮಾಕಳನ್ನು ರಾಜಮಾತೆ ಎಂಬ ಪದವಿಯಿಂದ ತಳ್ಳಿಬಿಟ್ಟನು. ಯಾಕೆಂದರೆ ಆಕೆಯು ಅಶೇರ್ ದೇವತೆಯ ಅಸಹ್ಯವಾದ ಕಂಬವನ್ನು ಮಾಡಿಸಿದ್ದಳು. ಆಸನು ಅದನ್ನು ಕಡಿದು ಚೂರುಚೂರಾಗಿ ಮಾಡಿಸಿದನು. ನಂತರ ಅದನ್ನು ಕಿದ್ರೋನ್ ಕಣಿವೆಯಲ್ಲಿ ಸುಟ್ಟುಬಿಟ್ಟನು. 17 ಆದರೂ ಯೆಹೂದದ ಎಲ್ಲಾ ಉನ್ನತಸ್ಥಳಗಳು ತೆಗೆಯಲ್ಪಡಲಿಲ್ಲ, ಆದರೆ ಆಸನು ತನ್ನ ಜೀವಮಾನದಲ್ಲೆಲ್ಲಾ ಯೆಹೋವನಿಗೆ ನಂಬಿಗಸ್ತನಾಗಿದ್ದನು.
18 ಆಸನು ತನ್ನ ತಂದೆಯು ಕೊಟ್ಟ ಪರಿಶುದ್ಧ ಕಾಣಿಕೆಗಳನ್ನು ದೇವಾಲಯದಲ್ಲಿ ಇಡಿಸಿದನು. ಅವು ಬೆಳ್ಳಿಬಂಗಾರಗಳ ವಸ್ತುಗಳಾಗಿದ್ದವು. 19 ಆಸನ ಆಳ್ವಿಕೆಯ ಮೂವತ್ತೈದನೆಯ ವರ್ಷದ ತನಕ ದೇಶದಲ್ಲಿ ಯುದ್ಧವೇ ಇರಲಿಲ್ಲ.
ಆಸನ ಕೊನೆಯ ವರ್ಷಗಳು
16 ಆಸನ ಆಳ್ವಿಕೆಯ ಮೂವತ್ತಾರನೆಯ ವರ್ಷದಲ್ಲಿ ಇಸ್ರೇಲಿನ ರಾಜನಾದ ಬಾಷನು ಆಸನ ಸಂಗಡ ಯುದ್ಧಕ್ಕೆ ಹೊರಟನು. ಅವನು ರಾಮ ಎಂಬ ಪಟ್ಟಣವನ್ನು ಕೋಟೆಯನ್ನಾಗಿ ಪರಿವರ್ತಿಸಿ, ಯೆಹೂದದ ರಾಜನಾದ ಆಸನ ಬಳಿಗೆ ಹೋಗುವುದಕ್ಕಾಗಲಿ ಬರುವುದಕ್ಕಾಗಲಿ ಯಾರಿಗೂ ಆಗದಂತೆ ಮಾಡಿದನು. 2 ಆಗ ಆಸನು ದೇವಾಲಯದಲ್ಲಿಯೂ ಅರಮನೆಯಲ್ಲಿಯೂ ಶೇಖರಿಸಿಟ್ಟಿದ್ದ ಬೆಳ್ಳಿಬಂಗಾರಗಳನ್ನೆಲ್ಲಾ ಒಟ್ಟಾಗಿ ಸೇರಿಸಿ ದಮಸ್ಕದಲ್ಲಿದ್ದ ಅರಾಮ್ಯರ ಅರಸನಾದ ಬೆನ್ಹದದನಿಗೆ ಈ ಸಂದೇಶದೊಡನೆ ಕಳುಹಿಸಿದನು, 3 “ಬೆನ್ಹದದನೇ, ನಮ್ಮೊಂದಿಗೆ ಒಂದು ಒಪ್ಪಂದವಿರಲಿ. ನನ್ನ ತಂದೆಯೂ ನಿನ್ನ ತಂದೆಯೂ ಮಾಡಿದ್ದ ಒಪ್ಪಂದವನ್ನು ನಾವು ಮುಂದುವರಿಸೋಣ. ನೋಡು, ನಾನೀಗ ನಿನಗೆ ಬೆಳ್ಳಿಬಂಗಾರಗಳನ್ನು ಕಳುಹಿಸುತ್ತಿದ್ದೇನೆ. ನೀನೀಗ ಇಸ್ರೇಲಿನ ರಾಜನಾದ ಬಾಷನೊಡನೆ ಮಾಡಿದ್ದ ಒಪ್ಪಂದವನ್ನು ಮುರಿದುಹಾಕು. ಆಗ ಅವನು ನನಗೆ ತೊಂದರೆ ಕೊಡುವುದನ್ನು ನಿಲ್ಲಿಸುವನು.”
4 ಇದಕ್ಕೆ ಬೆನ್ಹದದನು ಒಪ್ಪಿ ತನ್ನ ಸೇನಾಪತಿಗಳನ್ನು ಇಸ್ರೇಲಿನ ಪಟ್ಟಣಗಳ ಮೇಲೆ ಆಕ್ರಮಣಮಾಡಲು ಕಳುಹಿಸಿದನು. ಅವರು ಹೋಗಿ ಇಯ್ಯೋನ್, ದಾನ್, ಅಬೇಲ್ಮಯಿಮ್ ಎಂಬ ಪಟ್ಟಣಗಳ ಮೇಲೆಯೂ ಭಂಡಾರಗಳನ್ನು ಇಟ್ಟಿದ ನಫ್ತಾಲಿ ಪ್ರಾಂತ್ಯದ ಎಲ್ಲಾ ಪಟ್ಟಣಗಳ ಮೇಲೆಯೂ ಆಕ್ರಮಣ ಮಾಡಿದರು. 5 ಇದನ್ನು ಕೇಳಿದ ಬಾಷನು ರಾಮ ಪಟ್ಟಣವನ್ನು ಕೋಟೆಯಾಗಿ ಕಟ್ಟುವ ಕೆಲಸವನ್ನು ಬಿಟ್ಟುಬಿಟ್ಟನು. 6 ಆಗ ಆಸನೂ ಇಸ್ರೇಲಿನ ಎಲ್ಲಾ ಜನರೂ ಒಟ್ಟಿಗೆ ರಾಮಕ್ಕೆ ಹೋಗಿ ಅಲ್ಲಿ ಬಾಷನು ಕೋಟೆಕಟ್ಟಲು ತಂದಿಟ್ಟಿದ್ದ ಕಲ್ಲುಮರಗಳನ್ನೆಲ್ಲಾ ತೆಗೆದು ಮಿಚ್ಪ ಮತ್ತು ಗೆಬ ಪಟ್ಟಣಗಳನ್ನು ಭದ್ರಪಡಿಸಿದರು.
7 ಆಗ ದೇವದರ್ಶಿಯಾದ ಹನಾನಿಯು ಯೆಹೂದದ ರಾಜನಾದ ಆಸನ ಬಳಿಗೆ ಬಂದು, “ಆಸನೇ, ನೀನು ದೇವರಾದ ಯೆಹೋವನ ಮೇಲೆ ಭರವಸವನ್ನಿಡುವ ಬದಲು ಅರಾಮ್ಯರ ಅರಸನ ಮೇಲೆ ಭರವಸವನ್ನಿಟ್ಟಿದ್ದರಿಂದ ಅರಾಮ್ಯರ ಸೈನ್ಯವು ನಿನ್ನ ಕೈಗೆ ಬೀಳದಂತೆ ತಪ್ಪಿಸಿಕೊಂಡಿತು. 8 ಇಥಿಯೋಪಿಯಾದವರಿಗೆ ಮತ್ತು ಲಿಬ್ಯದವರಿಗೆ ಮಹಾದೊಡ್ಡ ಸೈನ್ಯವಿತ್ತು. ಅಪರಿಮಿತವಾದ ರಥಾಶ್ವಗಳಿದ್ದವು. ಆದರೆ ಅವರನ್ನು ಸೋಲಿಸುವಂತೆ ಯೆಹೋವನು ನಿನಗೆ ಸಹಾಯಿಸಿದನು. 9 ದೇವರು ಲೋಕವನ್ನೆಲ್ಲಾ ದೃಷ್ಟಿಸಿ ನೋಡಿ ತನ್ನ ನಂಬಿಗಸ್ತರನ್ನು ಕಂಡುಕೊಂಡು ಅವರನ್ನು ಬಲಿಷ್ಠರನ್ನಾಗಿ ಮಾಡುವನು. ಆಸನೇ, ನೀನು ಮೂರ್ಖ ಕೆಲಸ ಮಾಡಿದೆ. ಇಂದಿನಿಂದ ಯಾವಾಗಲೂ ನಿನಗೆ ಯುದ್ಧಗಳಿರುತ್ತವೆ.”
10 ಇದನ್ನು ಕೇಳಿದ ಆಸನು ಹನಾನಿಯ ಮೇಲೆ ಬಹುಕೋಪಗೊಂಡು ಅವನನ್ನು ಸೆರೆಮನೆಯಲ್ಲಿ ಹಾಕಿಸಿದನು. ಆಸನು ಅದೇ ಸಮಯದಲ್ಲಿ ದೇವಜನರಾದ ಕೆಲವರೊಂದಿಗೆ ಕ್ರೂರವಾಗಿ ವರ್ತಿಸಿದನು.
11 ಆಸನು ಪ್ರಾರಂಭದಿಂದ ಕೊನೆಯವರೆಗೆ ಮಾಡಿದ ಎಲ್ಲಾ ವಿಷಯಗಳು ಯೆಹೂದ ಮತ್ತು ಇಸ್ರೇಲ್ ರಾಜರ ಗ್ರಂಥದಲ್ಲಿ ಬರೆಯಲ್ಪಟ್ಟಿವೆ. 12 ಆಸನ ಆಳ್ವಿಕೆಯ ಮೂವತ್ತೊಂಭತ್ತನೆಯ ವರ್ಷದಲ್ಲಿ ಅವನ ಕಾಲಿಗೆ ರೋಗ ಬಂದಿತು. ಅದು ಅಧಿಕವಾಗಿ ಹೆಚ್ಚಿದ್ದರಿಂದ ಅವನು ಯೆಹೋವನ ಸಹಾಯವನ್ನು ಕೇಳದೆ ವೈದ್ಯರ ನೆರವನ್ನೇ ಪಡೆದನು. 13 ಆಸನು ತನ್ನ ಆಳ್ವಿಕೆಯ ನಲವತ್ತೊಂದನೆಯ ವರ್ಷದಲ್ಲಿ ತನ್ನ ಪೂರ್ವಿಕರ ಬಳಿ ಸೇರಿದನು. 14 ಅವನು ತನಗಾಗಿ ದಾವೀದನಗರದಲ್ಲಿ ಮಾಡಿಸಿದ್ದ ಸಮಾಧಿಯಲ್ಲಿಯೇ ಅವನಿಗೆ ಸಮಾಧಿಮಾಡಿದರು. ನಾನಾತರದ ಪರಿಮಳದ್ರವ್ಯಗಳಿಂದ ತುಂಬಿದ್ದ ಹಾಸಿಗೆಯ ಮೇಲೆ ಮಲಗಿಸಿದ್ದರು. ಆಮೇಲೆ ಅವನ ಗೌರವಾರ್ಥವಾಗಿ ಒಂದು ದೊಡ್ಡ ಬೆಂಕಿಕೊಂಡವನ್ನು ಮಾಡಿ ಪರಿಮಳಧೂಪವನ್ನು ಸುಟ್ಟರು.
ತನ್ನ ಮರಣದ ಕುರಿತು ಯೇಸುವಿನ ಹೇಳಿಕೆ
27 ಯೇಸು ಮಾತನ್ನು ಮುಂದುವರಿಸಿ, “ನನ್ನ ಪ್ರಾಣವು ತತ್ತರಿಸುತ್ತಿದೆ. ನಾನೇನು ಹೇಳಲಿ? ‘ತಂದೆಯೇ, ನನ್ನನ್ನು ಈ ಸಂಕಟ ಕಾಲದಿಂದ ರಕ್ಷಿಸು ಎನ್ನಬೇಕೇ?’ ಇಲ್ಲ! ಸಂಕಟಪಡುವುದಕ್ಕೋಸ್ಕರವೇ ನಾನು ಬಂದಿದ್ದೇನೆ. 28 ತಂದೆಯೇ, ನಿನ್ನ ಹೆಸರನ್ನು ಮಹಿಮೆಪಡಿಸಿಕೊ!” ಎಂದು ಹೇಳಿದನು.
ಆಗ ಪರಲೋಕದಿಂದ, “ನನ್ನ ಹೆಸರನ್ನು ಮಹಿಮೆಪಡಿಸಿಕೊಂಡಿದ್ದೇನೆ. ನಾನು ಮತ್ತೆ ಮಹಿಮೆಪಡಿಸಿಕೊಳ್ಳುವೆನು” ಎಂಬ ವಾಣಿ ಆಯಿತು.
29 ಅಲ್ಲಿ ನಿಂತಿದ್ದ ಜನರು ಈ ವಾಣಿಯನ್ನು ಕೇಳಿ “ಅದು ಗುಡುಗು” ಎಂದರು.
ಆದರೆ ಇತರರು, “ದೇವದೂತನೊಬ್ಬನು ಯೇಸುವಿನೊಂದಿಗೆ ಮಾತಾಡಿದನು!” ಎಂದರು.
30 ಯೇಸು ಜನರಿಗೆ, “ಆ ವಾಣಿಯಾದದ್ದು ನನಗೋಸ್ಕರವಲ್ಲ, ನಿಮಗೋಸ್ಕರ. 31 ಈ ಲೋಕಕ್ಕೆ ತೀರ್ಪಾಗುವ ಕಾಲ ಇದೇ ಆಗಿದೆ. ಈಗ ಈ ಲೋಕದ ಅಧಿಪತಿಯನ್ನು (ಸೈತಾನ) ಹೊರಗೆ ದಬ್ಬಲಾಗುವುದು. 32 ನಾನು ಭೂಮಿಯಿಂದ ಮೇಲೆತ್ತಲ್ಪಡುವೆನು. ಆಗ ನಾನು ಎಲ್ಲಾ ಜನರನ್ನು ನನ್ನ ಬಳಿಗೆ ಸೆಳೆದುಕೊಳ್ಳುವೆನು” ಎಂದು ಹೇಳಿದನು. 33 ತಾನು ಸಾಯುವ ರೀತಿಯನ್ನು ಯೇಸು ಈ ಮಾತಿನ ಮೂಲಕ ಸೂಚಿಸಿದನು.
34 ಜನರು, “ಕ್ರಿಸ್ತನು ಸದಾಕಾಲ ಜೀವಿಸುತ್ತಾನೆ ಎಂದು ನಮ್ಮ ಧರ್ಮಶಾಸ್ತ್ರವು ಹೇಳುತ್ತದೆ. ಹೀಗಿರಲಾಗಿ, ‘ಮನುಷ್ಯಕುಮಾರನು ಮೇಲೆತ್ತಲ್ಪಡುವನು’ ಎಂದು ನೀನು ಹೇಳುವುದೇಕೆ? ಈ ಮನುಷ್ಯಕುಮಾರನು ಯಾರು?” ಎಂದು ಕೇಳಿದರು.
35 ಅದಕ್ಕೆ ಯೇಸು, “ಇನ್ನು ಸ್ವಲ್ಪಕಾಲ ಮಾತ್ರ ಬೆಳಕು ನಿಮ್ಮೊಂದಿಗಿರುತ್ತದೆ. ಆದ್ದರಿಂದ ಬೆಳಕು ನಿಮ್ಮೊಂದಿಗೆ ಇರುವಾಗಲೇ ನಡೆಯಿರಿ. ಆಗ ಕತ್ತಲೆಯು (ಪಾಪ) ನಿಮ್ಮನ್ನು ಕವಿದುಕೊಳ್ಳುವುದಿಲ್ಲ. ಕತ್ತಲೆಯಲ್ಲಿ ನಡೆಯುವವನಿಗೆ ತಾನು ಎಲ್ಲಿಗೆ ಹೋಗುತ್ತಿದ್ದೇನೆಂಬುದು ತಿಳಿಯದು. 36 ಆದ್ದರಿಂದ ನೀವು ಬೆಳಕನ್ನು ಇನ್ನೂ ಹೊಂದಿರುವಾಗಲೇ ಅದರಲ್ಲಿ ನಂಬಿಕೆ ಇಡಿರಿ. ಆಗ ನೀವು ಬೆಳಕಿನವರಾಗುವಿರಿ” ಎಂದು ಹೇಳಿದನು. ಈ ಸಂಗತಿಗಳನ್ನು ಹೇಳಿದ ಮೇಲೆ ಯೇಸು ಅಲ್ಲಿಂದ ಹೊರಟು, ತನ್ನನ್ನು ಜನರು ಕಂಡುಕೊಳ್ಳಲಾಗದ ಸ್ಥಳಕ್ಕೆ ಹೋದನು.
ಯೆಹೂದ್ಯರ ಅಪನಂಬಿಕೆ
37 ಯೇಸು ಅನೇಕ ಮಹತ್ಕಾರ್ಯಗಳನ್ನು ಮಾಡಿದನು. ಜನರು ಆ ಕಾರ್ಯಗಳನ್ನೆಲ್ಲಾ ನೋಡಿದರೂ ಆತನಲ್ಲಿ ನಂಬಿಕೆ ಇಡಲಿಲ್ಲ. 38 ಇದರಿಂದಾಗಿ, ಪ್ರವಾದಿಯಾದ ಯೆಶಾಯನು ಹೇಳಿದ್ದ ಮಾತುಗಳು ನೆರವೇರಿದವು. ಅದೇನೆಂದರೆ:
“ಪ್ರಭುವೇ, ನಾವು ಹೇಳಿದ ಸಂಗತಿಗಳನ್ನು ಯಾರು ನಂಬಿದರು?
ಪ್ರಭುವಿನ ಬಾಹುಬಲವು ಯಾರಿಗೆ ಗೋಚರವಾಯಿತು?”(A)
39 ಆದಕಾರಣವೇ ಜನರು ನಂಬಲಾಗಲಿಲ್ಲ. ಏಕೆಂದರೆ ಯೆಶಾಯನು ಮತ್ತೊಂದು ಕಡೆಯಲ್ಲಿ ಹೀಗೆ ಹೇಳಿದ್ದಾನೆ:
40 “ತಮ್ಮ ಕಣ್ಣುಗಳಿಂದ ಕಾಣದಂತೆ
ತಮ್ಮ ಮನಸ್ಸುಗಳಿಂದ ಅರ್ಥಮಾಡಿಕೊಳ್ಳದಂತೆ
ಪರಿವರ್ತನೆಗೊಂಡು ಗುಣಹೊಂದದಂತೆ ಆತನು ಅವರನ್ನು ಕುರುಡರನ್ನಾಗಿ ಮಾಡಿದ್ದಾನೆ,
ಅವರ ಮನಸ್ಸುಗಳನ್ನು ಕಲ್ಲಾಗಿಸಿದ್ದಾನೆ.”(B)
41 ಯೆಶಾಯನು ಆತನ (ಯೇಸುವಿನ) ಮಹಿಮೆಯನ್ನು ನೋಡಿದ್ದರಿಂದಲೇ ಹೀಗೆ ಹೇಳಿದನು.
42 ಆದರೆ ಅನೇಕ ಜನರು ಯೇಸುವಿನಲ್ಲಿ ನಂಬಿಕೆ ಇಟ್ಟರು. ಅನೇಕ ಯೆಹೂದ್ಯನಾಯಕರು ಸಹ ಯೇಸುವಿನಲ್ಲಿ ನಂಬಿಕೆಯಿಟ್ಟರು. ಆದರೆ ಅವರು ಫರಿಸಾಯರಿಗೆ ಹೆದರಿಕೊಂಡು ತಮ್ಮ ನಂಬಿಕೆಯನ್ನು ಬಹಿರಂಗಪಡಿಸಲಿಲ್ಲ. ತಮ್ಮನ್ನು ಫರಿಸಾಯರು ಸಭಾಮಂದಿರದಿಂದ ಬಹಿಷ್ಕರಿಸುತ್ತಾರೆ ಎಂಬ ಭಯ ಅವರಿಗಿತ್ತು. 43 ಈ ಜನರು ದೇವರ ಹೊಗಳಿಕೆಗಿಂತಲೂ ಜನರ ಹೊಗಳಿಕೆಯನ್ನೇ ಹೆಚ್ಚಾಗಿ ಪ್ರೀತಿಸಿದರು.
ಯೇಸುವಿನ ಉಪದೇಶ ಜನರಿಗೆ ತೀರ್ಪು ಮಾಡುವುದು
44 ಬಳಿಕ ಯೇಸು ಗಟ್ಟಿಯಾಗಿ ಹೀಗೆಂದನು: “ನನ್ನಲ್ಲಿ ನಂಬಿಕೆ ಇಡುವವನು ನನ್ನನ್ನು ಕಳುಹಿಸಿದಾತನಲ್ಲಿ (ದೇವರು) ನಿಜವಾಗಿಯೂ ನಂಬಿಕೆ ಇಡುವವನಾಗಿದ್ದಾನೆ. 45 ನನ್ನನ್ನು ನೋಡುವವನು ನನ್ನನ್ನು ಕಳುಹಿಸಿದಾತನನ್ನು ನಿಜವಾಗಿಯೂ ನೋಡುವವನಾಗಿದ್ದಾನೆ. 46 ನಾನೇ ಬೆಳಕಾಗಿದ್ದೇನೆ. ನನ್ನಲ್ಲಿ ನಂಬಿಕೆ ಇಡುವವರು ಕತ್ತಲೆಯಲ್ಲಿ ಇರಬಾರದೆಂದು ನಾನೇ ಈ ಲೋಕಕ್ಕೆ ಬಂದಿದ್ದೇನೆ.
47 “ನಾನು ಈ ಲೋಕಕ್ಕೆ ಬಂದದ್ದು ಜನರಿಗೆ ತೀರ್ಪು ಮಾಡುವುದಕ್ಕಾಗಿಯಲ್ಲ. ಈ ಲೋಕದಲ್ಲಿರುವ ಜನರನ್ನು ರಕ್ಷಿಸುವುದಕ್ಕಾಗಿ ನಾನು ಬಂದೆನು. ಆದ್ದರಿಂದ ನನ್ನ ಮಾತುಗಳನ್ನು ಕೇಳಿಯೂ ನಂಬದಿರುವ ಜನರಿಗೆ ತೀರ್ಪು ಮಾಡುವವನು ನಾನಲ್ಲ. 48 ನನ್ನಲ್ಲಿ ನಂಬಿಕೆ ಇಡದಿರುವವನಿಗೆ ಮತ್ತು ನಾನು ಹೇಳುವುದನ್ನು ತಿರಸ್ಕರಿಸುವವನಿಗೆ ತೀರ್ಪುಮಾಡುವಂಥದ್ದು ನಾನು ಆಡಿದ ಮಾತುಗಳೇ. ಅಂತಿಮ ದಿನದಂದು ಅವೇ ಅವನಿಗೆ ತೀರ್ಪುಮಾಡುತ್ತವೆ. 49 ಏಕೆಂದರೆ, ನನ್ನ ಮಾತುಗಳು ನನ್ನಿಂದ ಬಂದವುಗಳಲ್ಲ. ನನ್ನನ್ನು ಕಳುಹಿಸಿದ ತಂದೆಯೇ ನಾನು ಏನು ಹೇಳಬೇಕು, ಏನು ಮಾತಾಡಬೇಕು ಎಂದು ನನಗೆ ಹೇಳಿಕೊಟ್ಟಿದ್ದಾನೆ. 50 ತಂದೆಯ ಆಜ್ಞೆಯು ನಿತ್ಯಜೀವಕ್ಕೆ ನಡೆಸುತ್ತದೆ ಎಂದು ನಾನು ಬಲ್ಲೆನು. ಆದ್ದರಿಂದ ತಂದೆಯು ನನಗೆ ಹೇಳಿಕೊಟ್ಟ ಸಂಗತಿಗಳನ್ನೇ ನಾನು ತಿಳಿಸುತ್ತೇನೆ.”
Kannada Holy Bible: Easy-to-Read Version. All rights reserved. © 1997 Bible League International