Old/New Testament
ದೇವಾಲಯದ ವಸ್ತುಗಳು
4 ಸೊಲೊಮೋನನು ತಾಮ್ರದ ಯಜ್ಞವೇದಿಕೆಯನ್ನು ಮಾಡಿಸಿದನು. ಅದು ಇಪ್ಪತ್ತು ಮೊಳ ಉದ್ದ; ಇಪ್ಪತ್ತು ಮೊಳ ಅಗಲ; ಮತ್ತು ಹತ್ತು ಮೊಳ ಎತ್ತರವಿತ್ತು. 2 ಅವನು ಎರಕಹೊಯ್ದ ದೊಡ್ಡ ಗಾತ್ರದ ನೀರಿನ ಪಾತ್ರೆಯನ್ನು ಮಾಡಿಸಿದನು. ಇದು ದುಂಡಾಕಾರವಾಗಿದ್ದು ಅದರ ಬಾಯಿಯ ಅಂಚಿನಿಂದ ಅಂಚಿಗೆ ಹತ್ತು ಮೊಳ ಅಗಲವಿತ್ತು; ಅದರ ಸುತ್ತಳತೆ ಮೂವತ್ತು ಮೊಳ; ಎತ್ತರ ಐದು ಮೊಳ. 3 ಆ ನೀರಿನ ಪಾತ್ರೆಯನ್ನು ಎರಕ ಹೊಯ್ಯುವಾಗ ಅದರ ಬಾಯಿಯ ಅಂಚಿನ ಕೆಳಗೆ ಸುತ್ತಲೂ ಹೋರಿಯ ಚಿತ್ರವನ್ನು ಎರಡು ಸಾಲಾಗಿ ಹತ್ತು ಮೊಳ ಎರಕ ಹೊಯ್ಸಿದನು. 4 ಆ ಬೃಹದಾಕಾರದ ಪಾತ್ರೆಯನ್ನು ಹನ್ನೆರಡು ದೊಡ್ಡ ಎರಕದ ಹೋರಿಗಳ ಮೇಲೆ ಇಡಲಾಗಿತ್ತು. ಇವುಗಳಲ್ಲಿ ಮೂರು ಹೋರಿಗಳು ಪೂರ್ವದ ಕಡೆಗೂ ಮೂರು ಹೋರಿಗಳು ಪಶ್ಚಿಮದ ಕಡೆಗೂ ಮೂರು ಹೋರಿಗಳು ಉತ್ತರದ ಕಡೆಗೂ ಮೂರು ಹೋರಿಗಳು ದಕ್ಷಿಣದ ಕಡೆಗೂ ಮುಖಮಾಡಿ ನಿಂತಿದ್ದವು. ಎಲ್ಲಾ ಹೋರಿಗಳು ಒಂದಕ್ಕೊಂದಕ್ಕೆ ಮತ್ತು ಮಧ್ಯಭಾಗಕ್ಕೆ ಹಿಮ್ಮುಖವಾಗಿ ನಿಂತುಕೊಂಡಿದ್ದವು. 5 ಈ ತಾಮ್ರದ ಎರಕದ ಪಾತ್ರೆಯು ಮೂರು ಇಂಚು ದಪ್ಪವಾಗಿತ್ತು. ಅದರ ಅಂಚು ಕಮಲಾಕಾರದ ಬಟ್ಟಲನ್ನು ಹೋಲುತ್ತಿತ್ತು. ಅದರಲ್ಲಿ ಅರವತ್ತಾರು ಸಾವಿರ ಲೀಟರ್ ನೀರನ್ನು ತುಂಬ ಬಹುದಾಗಿತ್ತು.
6 ಸೊಲೊಮೋನನು ಹತ್ತು ಗಂಗಾಳಗಳನ್ನು ಮಾಡಿಸಿದನು. ಐದು ಗಂಗಾಳಗಳನ್ನು ತಾಮ್ರದ ನೀರಿನ ತೊಟ್ಟಿಯ ಬಲಗಡೆಯಲ್ಲಿಡಿಸಿದನು. ಉಳಿದ ಐದು ಗಂಗಾಳಗಳನ್ನು ಪಾತ್ರೆಯ ಎಡಗಡೆಯಲ್ಲಿಡಿಸಿದನು. ಈ ಗಂಗಾಳಗಳ ನೀರನ್ನು ಯಜ್ಞ ಮಾಡಲಿಕ್ಕಿರುವ ಪದಾರ್ಥಗಳನ್ನು ತೊಳೆಯುವದಕ್ಕಾಗಿ ಉಪಯೋಗಿಸಿದರು. ಯಾಜಕರು ಯಜ್ಞಗಳನ್ನು ಅರ್ಪಿಸುವ ಮೊದಲು ತಮ್ಮನ್ನು ಶುದ್ಧ ಮಾಡಿಕೊಳ್ಳುವದಕ್ಕಾಗಿ ದೊಡ್ಡ ತಾಮ್ರದ ಪಾತ್ರೆಯ ನೀರನ್ನು ಉಪಯೋಗಿಸುತ್ತಿದ್ದರು.
7 ಸೊಲೊಮೋನನು ಹತ್ತು ದೀಪಸ್ತಂಭಗಳನ್ನು ಬಂಗಾರದಿಂದ ಮಾಡಿಸಿದನು. ಮೊದಲೇ ತೋರಿಸಿದ ಮಾದರಿಯ ಮೇರೆಗೆ ದೀಪಸ್ತಂಭಗಳನ್ನು ಮಾಡಿಸಿದನು. ಇವುಗಳಲ್ಲಿ ಐದನ್ನು ದೇವಾಲಯದೊಳಗೆ ಬಲಗಡೆಯಲ್ಲಿಯೂ ಐದನ್ನು ಎಡಗಡೆಯಲ್ಲಿಯೂ ಇಡಿಸಿದನು. 8 ಅವನು ಹತ್ತು ಮೇಜುಗಳನ್ನು ಮಾಡಿಸಿ ಅವುಗಳಲ್ಲಿ ಐದನ್ನು ದೇವಾಲಯದ ಬಲಗಡೆಯಲ್ಲಿಯೂ ಉಳಿದ ಐದನ್ನು ಎಡಗಡೆಯಲ್ಲಿಯೂ ಇರಿಸಿದನು. ಅನಂತರ ಸೊಲೊಮೋನನು ನೂರು ಬಂಗಾರದ ಬೋಗುಣಿಗಳನ್ನು ಮಾಡಿಸಿದನು. 9 ಇದಲ್ಲದೆ ಸೊಲೊಮೋನನು ಯಾಜಕರ ಅಂಗಳವನ್ನೂ ಮಹಾಅಂಗಳವನ್ನೂ ಮಹಾಅಂಗಳಕ್ಕೆ ಬಾಗಿಲುಗಳನ್ನೂ ಸಿದ್ಧಪಡಿಸಿದನು. ಅವುಗಳ ಕದಗಳನ್ನು ತಾಮ್ರದ ತಗಡಿನಿಂದ ಹೊದಿಸಲಾಗಿದ್ದವು. 10 ಅವನು ಆ ದೊಡ್ಡ ನೀರಿನ ಪಾತ್ರೆಯನ್ನು ದೇವಾಲಯದ ಬಲ ಬದಿಯಲ್ಲಿ ಆಗ್ನೇಯ ದಿಕ್ಕಿನಲ್ಲಿ ಇರಿಸಿದನು.
11 ಹೂರಾಮನು ಪಾತ್ರೆಗಳನ್ನೂ ಸಲಿಕೆಗಳನ್ನೂ ಬೋಗುಣಿಗಳನ್ನೂ[a] ಮತ್ತು ದೇವಾಲಯದ ಉಪಕರಣಗಳನ್ನೂ ಸೊಲೊಮೋನನು ಹೇಳಿದಂತೆಯೇ ಮಾಡಿ ಮುಗಿಸಿದನು.
12 ಹೂರಾಮನು ದೇವಾಲಯದ ಎದುರಿನಲ್ಲಿಟ್ಟಿದ್ದ ಎತ್ತರದ ಕಂಬಗಳನ್ನೂ
ಅವುಗಳ ತುತ್ತತುದಿಯಲ್ಲಿ ಎರಡು ಬೋಗುಣಿಗಳನ್ನೂ ಮಾಡಿಸಿದನು. ಆ ಬೋಗುಣಿಗಳಿಗೆ ಅಲಂಕೃತವಾದ ಜಾಲರಿಗಳನ್ನು ಹೊದಿಸಿದನು.
13 ಆ ಜಾಲರಿಯಲ್ಲಿ ಸಿಕ್ಕಿಸಲು ನಾನೂರು ದಾಳಿಂಬೆಗಳನ್ನು ಮಾಡಿದನು. ಪ್ರತಿಯೊಂದು ಜಾಲರಿಯಲ್ಲಿ ಎರಡು ಸಾಲಾಗಿ ದಾಳಿಂಬೆಗಳನ್ನು ಸಿಕ್ಕಿಸಿಟ್ಟನು. ಈ ಜಾಲರಿಯು ಕಂಬದ ಮೇಲ್ಭಾಗವನ್ನು ಮುಚ್ಚಿತ್ತು.
14 ಹೂರಾಮನು ಪೀಠಗಳನ್ನೂ ಅವುಗಳ ಮೇಲೆ ಬೋಗುಣಿಗಳನ್ನೂ ಮಾಡಿದನು.
15 ಎರಕಹೊಯ್ದ ತಾಮ್ರದ ದೊಡ್ಡ ಪಾತ್ರೆಯನ್ನೂ ಅದನ್ನು ಹೊರುವ ಹನ್ನೆರಡು ಎರಕದ ಹೋರಿಗಳನ್ನೂ ತಯಾರಿಸಿದನು.
16 ಹಂಡೆ, ಸಲಿಕೆ, ಮುಳ್ಳು ಇವುಗಳನ್ನೆಲ್ಲಾ ದೇವಾಲಯಕ್ಕಾಗಿ ಸೊಲೊಮೋನನು ಹೇಳಿದಂತೆಯೇ ಮಾಡಿದನು.
ಇವೆಲ್ಲವನ್ನು ಹೊಳೆಯುವ ತಾಮ್ರದಿಂದ ಮಾಡಿ ಮುಗಿಸಿದನು. 17 ರಾಜನಾದ ಸೊಲೊಮೋನನು ಈ ಉಪಕರಣಗಳನ್ನೆಲ್ಲಾ ಮೊದಲು ಜೋರ್ಡನ್ ತಗ್ಗಿನ ಸುಕ್ಕೋತ್ ಮತ್ತು ಚೆರೇದ ಸ್ಥಳಗಳಲ್ಲಿ ದೊರಕುವ ಆವೆಮಣ್ಣಿನಿಂದ ಆಕಾರಗಳನ್ನು ಸಿದ್ಧಪಡಿಸಿ ಅದಕ್ಕೆ ಎರಕಹೊಯಿಸಿದನು. 18 ಸೊಲೊಮೋನನು ತಾಮ್ರದಿಂದ ಮಾಡಿಸಿದ ಉಪಕರಣಗಳ ತೂಕಕ್ಕೆ ಲೆಕ್ಕವೇ ಇರಲಿಲ್ಲ.
19 ಸೊಲೊಮೋನನು ದೇವಾಲಯದೊಳಗೆ ಉಪಯೋಗಿಸುವ ಉಪಕರಣಗಳನ್ನು ಮಾಡಿಸಿದನು. ಅವನು ಬಂಗಾರದ ಯಜ್ಞವೇದಿಕೆಯನ್ನು ಮಾಡಿಸಿದನು; ನೈವೇದ್ಯದ ರೊಟ್ಟಿಗಳನ್ನು ಇಡಲು ಮೇಜುಗಳನ್ನು ಮಾಡಿಸಿದನು; 20 ಅಪ್ಪಟ ಬಂಗಾರದಿಂದ ದೀಪಸ್ತಂಭಗಳನ್ನೂ ದೀಪಗಳನ್ನೂ ಮಾಡಿಸಿದನು. ಈ ದೀಪಸ್ತಂಭಗಳು ಮಹಾಪವಿತ್ರ ಸ್ಥಳದ ಎದುರಿನಲ್ಲಿ ನೇಮಕವಾದ ರೀತಿಯಲ್ಲಿ ಉರಿಯಬೇಕು. 21 ಸೊಲೊಮೋನನು ಹಣತೆ, ಹೂವು, ಅಗ್ಗಿಷ್ಟಿಕೆ ಇವುಗಳನ್ನು ಅಪ್ಪಟ ಬಂಗಾರದಿಂದ ಮಾಡಿಸಿದನು; 22 ಕತ್ತರಿ, ಬೋಗುಣಿ, ಧೂಪಾರತಿ, ಅಗ್ಗಿಷ್ಟಿಕೆ, ದೇವಾಲಯದ ಮಹಾ ಪವಿತ್ರಸ್ಥಳದೊಳಗಣ ಬಾಗಿಲಿನ ಕದಗಳು; ಪವಿತ್ರಸ್ಥಳದ ಕದಗಳು ಇವುಗಳನ್ನೆಲ್ಲಾ ಅಪ್ಪಟ ಬಂಗಾರದಿಂದ ಮಾಡಿಸಿದನು.
5 ಯೆಹೋವದೇವರ ಆಲಯಕ್ಕೆ ಸೊಲೊಮೋನನು ಮಾಡಬೇಕಾಗಿದ್ದ ಕೆಲಸವೆಲ್ಲವೂ ಮುಗಿಯಿತು. ದಾವೀದನು ದೇವಾಲಯಕ್ಕಾಗಿ ಕೊಟ್ಟಿದ್ದ ವಸ್ತುಗಳನ್ನೆಲ್ಲಾ ಸೊಲೊಮೋನನು ತಂದಿರಿಸಿದನು; ಬೆಳ್ಳಿಬಂಗಾರಗಳಿಂದ ಮಾಡಿದ ಸಾಮಾನುಗಳನ್ನು ಸೊಲೊಮೋನನು ದೇವಾಲಯದ ಭಂಡಾರದ ಕೋಣೆಗಳಲ್ಲಿ ಇಡಿಸಿದನು.
ದೇವಾಲಯಕ್ಕೆ ಪವಿತ್ರ ಪೆಟ್ಟಿಗೆಯ ಆಗಮನ
2 ದಾವೀದನಗರದಲ್ಲಿದ್ದ ಅಂದರೆ ಚೀಯೋನಿನಲ್ಲಿದ್ದ ಒಡಂಬಡಿಕೆಯ ಪೆಟ್ಟಿಗೆಯನ್ನು ತರುವದಕ್ಕಾಗಿ ಸೊಲೊಮೋನನು ಇಸ್ರೇಲರ ಎಲ್ಲಾ ಹಿರಿಯರನ್ನು ಮತ್ತು ಕುಲಾಧಿಪತಿಗಳನ್ನು ಜೆರುಸಲೇಮಿಗೆ ಒಟ್ಟಾಗಿ ಕರೆಸಿದನು. 3 ಪರ್ಣಶಾಲೆಗಳ ಹಬ್ಬದ ದಿವಸ ಇಸ್ರೇಲರೆಲ್ಲರೂ ಅರಸನಾದ ಸೊಲೊಮೋನನ ಮುಂದೆ ಸೇರಿಬಂದರು. ಈ ಹಬ್ಬವು ವರ್ಷದ ಏಳನೆಯ ತಿಂಗಳಲ್ಲಿ ನಡೆಯಿತು.
4 ಇಸ್ರೇಲಿನ ಹಿರಿಯರೆಲ್ಲರೂ ಒಟ್ಟಾಗಿ ಸೇರಿಬಂದಾಗ ಲೇವಿಯರು ಯೆಹೋವನ ಒಡಂಬಡಿಕೆಯ ಪೆಟ್ಟಿಗೆಯನ್ನು ಹೊತ್ತುಕೊಂಡು ಜೆರುಸಲೇಮಿಗೆ ತಂದರು. 5 ಯಾಜಕರೂ ಲೇವಿಯರೂ ದೇವದರ್ಶನದ ಗುಡಾರವನ್ನು, ಅದರ ಪವಿತ್ರ ವಸ್ತುಗಳನ್ನು ಹೊತ್ತು ಜೆರುಸಲೇಮಿಗೆ ತಂದರು. 6 ಸೊಲೊಮೋನನು ಮತ್ತು ಇಸ್ರೇಲರೆಲ್ಲರೂ ಆ ಒಡಂಬಡಿಕೆಯ ಪೆಟ್ಟಿಗೆಯ ಮುಂದೆ ನೆರೆದು ಬಂದರು. ಸೊಲೊಮೋನನು ಮತ್ತು ಎಲ್ಲಾ ಇಸ್ರೇಲರೂ ಲೆಕ್ಕವಿಲ್ಲದಷ್ಟು ಕುರಿಗಳನ್ನೂ ಹೋರಿಗಳನ್ನೂ ಯಜ್ಞ ಮಾಡಿದರು. 7 ಆಮೇಲೆ ಯಾಜಕರು ಒಡಂಬಡಿಕೆಯ ಪೆಟ್ಟಿಗೆಯನ್ನು ಅದಕ್ಕಾಗಿ ಮಾಡಿದ್ದ ಮಹಾಪರಿಶುದ್ಧ ಸ್ಥಳದ ಕೆರೂಬಿಗಳ ರೆಕ್ಕೆಗಳ ಕೆಳಗೆ ಇಟ್ಟರು. 8 ಕೆರೂಬಿಗಳ ರೆಕ್ಕೆಗಳು ಒಡಂಬಡಿಕೆಯ ಪೆಟ್ಟಿಗೆಯ ಮೇಲೆ ಚಾಚಿಕೊಂಡಿದ್ದವು. ಕೆರೂಬಿಗಳು ಆ ಪೆಟ್ಟಿಗೆಯ ಮೇಲೆಯೂ ಪೆಟ್ಟಿಗೆಯನ್ನು ಹೊತ್ತುಕೊಂಡು ಹೋಗಲು ಉಪಯೋಗಿಸುತ್ತಿದ್ದ ಕಂಬಗಳ ಮೇಲೆಯೂ ನಿಂತುಕೊಂಡಿದ್ದವು. 9 ಆ ಪೆಟ್ಟಿಗೆಯನ್ನು ಹೊರಲು ಜೋಡಿಸಿದ್ದ ಕೋಲುಗಳು ಉದ್ದವಾಗಿದ್ದ ಕಾರಣ ಅದರ ಕೊನೆಗಳು ಮಹಾಪರಿಶುದ್ಧ ಸ್ಥಳದ ಮುಂಭಾಗದಲ್ಲಿ ಕಾಣುತ್ತಿದ್ದವು. ಆದರೆ ದೇವಾಲಯದ ಹೊರಗಿನಿಂದ ಆ ಕೋಲುಗಳು ಯಾರಿಗೂ ಕಾಣುತ್ತಿರಲಿಲ್ಲ. ಇಂದಿಗೂ ಆ ಕೋಲುಗಳು ಅಲ್ಲಿಯೇ ಅವೆ. 10 ಒಡಂಬಡಿಕೆಯ ಪೆಟ್ಟಿಗೆಯೊಳಗೆ ಎರಡು ಕಲ್ಲಿನ ಹಲಗೆಗಳು ಮಾತ್ರ ಇದ್ದವು. ಹೋರೇಬ್ ಬೆಟ್ಟದಲ್ಲಿ ಮೋಶೆಯು ಈ ಕಲ್ಲಿನ ಹಲಗೆಗಳನ್ನು ಪೆಟ್ಟಿಗೆಯೊಳಗಿಟ್ಟನು. ಆ ಬೆಟ್ಟದಲ್ಲಿ ಯೆಹೋವನು ಈಜಿಪ್ಟಿನಿಂದ ಬಿಡುಗಡೆ ಹೊಂದಿದ ಇಸ್ರೇಲರೊಂದಿಗೆ ಒಡಂಬಡಿಕೆಯನ್ನು ಮಾಡಿಕೊಂಡನು.
11 ಅಲ್ಲಿ ನೆರೆದುಬಂದಿದ್ದ ಯಾಜಕರೆಲ್ಲರೂ ಯಾವ ವರ್ಗವ್ಯತ್ಯಾಸವಿಲ್ಲದೆ ಆಚಾರಕ್ಕನುಸಾರವಾಗಿ ತಮ್ಮನ್ನು ಶುದ್ಧೀಕರಿಸಿಕೊಂಡರು. ಬಳಿಕ ಅವರು ಪವಿತ್ರ ಸ್ಥಳದಿಂದ ಹೊರಬಂದು ಒಟ್ಟಾಗಿ ನಿಂತುಕೊಂಡರು. 12 ಯಜ್ಞವೇದಿಕೆಯ ಪೂರ್ವ ಭಾಗದಲ್ಲಿ ಲೇವಿಯರ ಗಾಯಕರು ನಿಂತರು. ಆಸಾಫನ, ಹೇಮಾನನ ಮತ್ತು ಯೆದುತೂನನ ಗಾಯಕ ವೃಂದದವರೆಲ್ಲರೂ ಅಲ್ಲಿ ಇದ್ದರು. ಅವರ ಗಂಡುಮಕ್ಕಳೂ ಕುಟುಂಬದವರೂ ಅಲ್ಲಿದ್ದರು. ಗಾಯಕರೆಲ್ಲರೂ ಬಿಳೀ ನಾರುಮಡಿಯ ಬಟ್ಟೆಗಳನ್ನು ಉಟ್ಟಿದ್ದರು. ತಾಳ, ತಂತಿವಾದ್ಯಗಳನ್ನು ಹಿಡಿದುಕೊಂಡಿದ್ದರು. ಗಾಯಕರೊಂದಿಗೆ ನೂರಿಪ್ಪತ್ತು ಮಂದಿ ಯಾಜಕರು ತುತ್ತೂರಿಯನ್ನೂದಿದರು. 13 ಗಾಯಕರ ಸ್ವರವೂ ತುತ್ತೂರಿಗಳ ಶಬ್ದವೂ ಒಬ್ಬನದೆಯೋ ಎಂಬಂತೆ ತೋರಿಬಂತು. ಅವರು ದೇವರನ್ನು ಸ್ತುತಿಸಿ ಕೊಂಡಾಡಿದಾಗ ಒಂದೇ ಶಬ್ದವು ಹೊರಟಿತ್ತು. ಅವರು ತಮ್ಮ ತಾಳ, ತಂತಿವಾದ್ಯಗಳನ್ನು ಗಟ್ಟಿಯಾಗಿ ಬಾರಿಸಿದರು.
“ಯೆಹೋವನಿಗೆ ಸ್ತೋತ್ರವಾಗಲಿ; ಆತನು ಒಳ್ಳೆಯವನು;
ಆತನ ಪ್ರೀತಿಯು ಶಾಶ್ವತವಾದದ್ದು”
ಎಂದು ಗಾಯಕರು ಹಾಡಿದರು.
ಆಗ ದೇವಾಲಯವು ಯೆಹೋವನ ತೇಜಸ್ಸಿನಿಂದ ಕೂಡಿದ ಮೋಡದಿಂದ ತುಂಬಿಹೋಯಿತು. 14 ಆಗ ಯಾಜಕರು ನಿಂತುಕೊಂಡು ಸೇವೆಯನ್ನು ಮಾಡಲಾಗಲಿಲ್ಲ. ಯಾಕೆಂದರೆ ದೇವರ ಮಹಿಮೆಯು ದೇವಾಲಯವನ್ನು ತುಂಬಿಕೊಂಡಿತ್ತು.
6 ಆಗ ಸೊಲೊಮೋನನು, “ಯೆಹೋವನೇ, ಕಾರ್ಗತ್ತಲಿನಲ್ಲಿ ವಾಸಿಸುತ್ತೇನೆ ಎಂದು ಹೇಳಿರುವೆಯಲ್ಲಾ! 2 ನಾನು ನಿನಗೋಸ್ಕರ ಆಲಯವನ್ನು ಕಟ್ಟಿಸಿದ್ದೇನೆ. ಅದು ನಿನಗೆ ಶಾಶ್ವತವಾದ ವಾಸಸ್ಥಳವಾಗಲಿ” ಎಂದು ಪ್ರಾರ್ಥಿಸಿದನು.
ಸೊಲೊಮೋನನ ಭಾಷಣ
3 ಸೊಲೊಮೋನನು ತನ್ನ ಮುಂದೆ ನೆರೆದಿದ್ದ ಎಲ್ಲಾ ಇಸ್ರೇಲ್ ಸಮೂಹದವರ ಕಡೆಗೆ ತಿರುಗಿ ಅವರನ್ನು ಆಶೀರ್ವದಿಸಿ,
4 “ಇಸ್ರೇಲಿನ ದೇವರಾದ ಯೆಹೋವನಿಗೆ ಸ್ತೋತ್ರವಾಗಲಿ. ಆತನು ನನ್ನ ತಂದೆಯಾದ ದಾವೀದನಿಗೆ ಮಾಡಿದ ವಾಗ್ದಾನವನ್ನು ನೆರವೇರಿಸಿದ್ದಾನೆ. ಆತನು ದಾವೀದನಿಗೆ, 5 ‘ಈಜಿಪ್ಟಿನಿಂದ ನನ್ನ ಜನರನ್ನು ಬಿಡಿಸಿ ಹೊರ ತಂದಂದಿನಿಂದ ನನ್ನ ಆಲಯಕೋಸ್ಕರ ಇಸ್ರೇಲರ ಕುಲಗಳ ಯಾವ ಪಟ್ಟಣವನ್ನೂ ನಾನು ಆರಿಸಿಕೊಳ್ಳಲಿಲ್ಲ. ಇಸ್ರೇಲರನ್ನು ನಡಿಸುವುದಕ್ಕಾಗಿ ಒಬ್ಬ ನಾಯಕನನ್ನೂ ನಾನು ಆರಿಸಿಕೊಳ್ಳಲಿಲ್ಲ. 6 ಆದರೆ ಈಗ ನಾನು ನನ್ನ ಹೆಸರನ್ನು ಸ್ಥಾಪಿಸಲು ಜೆರುಸಲೇಮನ್ನು ಆರಿಸಿಕೊಂಡಿದ್ದೇನೆ; ದಾವೀದನನ್ನು ನನ್ನ ಜನರ ನಾಯಕನನ್ನಾಗಿ ಆರಿಸಿಕೊಂಡಿದ್ದೇನೆ’ ಎಂದು ಹೇಳಿದನು.
7 “ಇಸ್ರೇಲರ ದೇವರಾದ ಯೆಹೋವನಿಗೆ ಆಲಯವನ್ನು ಕಟ್ಟಲು ನನ್ನ ತಂದೆಯಾದ ದಾವೀದನಿಗೆ ಮನಸ್ಸಿತ್ತು. 8 ಆದರೆ ದೇವರು ನನ್ನ ತಂದೆಗೆ, ‘ದಾವೀದನೇ, ನೀನು ನನಗಾಗಿ ಒಂದು ಆಲಯವನ್ನು ಕಟ್ಟಲು ಮನಸ್ಸು ಮಾಡಿರುವದು ಒಳ್ಳೆಯದೇ ಸರಿ! 9 ಆದರೆ ನೀನು ಆಲಯವನ್ನು ಕಟ್ಟಬಾರದು. ನಿನ್ನ ಸ್ವಂತ ಮಗನು ನನ್ನ ಹೆಸರಿಗಾಗಿ ಆಲಯವನ್ನು ಕಟ್ಟುವನು’ ಎಂದು ಹೇಳಿದನು. 10 ಯೆಹೋವನು ತಾನು ಕೊಟ್ಟ ಮಾತನ್ನು ಈಗ ನೆರವೇರಿಸಿದನು. ನಾನು ನನ್ನ ತಂದೆಯ ಸ್ಥಾನದಲ್ಲಿ ಅರಸನಾಗಿದ್ದೇನೆ. ದಾವೀದನು ನನ್ನ ತಂದೆ. ಈಗ ನಾನು ಇಸ್ರೇಲರ ರಾಜನು. ಇದು ದೇವರ ವಾಗ್ದಾನಕ್ಕನುಸಾರವಾಗಿದೆ. ನಾನು ಇಸ್ರೇಲರ ದೇವರಾದ ಯೆಹೋವನ ನಾಮಕ್ಕಾಗಿ ದೇವಾಲಯವನ್ನು ಕಟ್ಟಿರುತ್ತೇನೆ. 11 ಇದಲ್ಲದೆ ನಿಬಂಧನ ಶಾಸನವಿರುವ ದೇವರ ಒಡಂಬಡಿಕೆಯ ಪೆಟ್ಟಿಗೆಯನ್ನು ದೇವಾಲಯದೊಳಗೆ ಇಟ್ಟಿರುತ್ತೇನೆ” ಎಂದು ಹೇಳಿದನು.
ಸೊಲೊಮೋನನ ಪ್ರಾರ್ಥನೆ
12 ಯಜ್ಞವೇದಿಕೆಯ ಮುಂದೆ ಸೊಲೊಮೋನನು ಇಸ್ರೇಲರ ಜನರೆದುರಿಗೆ ನಿಂತುಕೊಂಡು ತನ್ನ ಕೈಗಳನ್ನೆತ್ತಿಕೊಂಡು ನಿಂತನು. 13 ಸೊಲೊಮೋನನು ಒಂದು ತಾಮ್ರದ ಪೀಠವನ್ನು ತಯಾರಿಸಿದನು. ಅದರ ಉದ್ದ ಐದು ಮೊಳ; ಅಗಲ ಐದು ಮೊಳ; ಎತ್ತರ ಮೂರು ಮೊಳ; ಅದನ್ನು ಪ್ರಾಕಾರದ ಮಧ್ಯದಲ್ಲಿಟ್ಟು ಅದರ ಮೇಲೆ ಇಸ್ರೇಲಿನ ಸರ್ವಜನರ ಮುಂದೆ ಮೊಣಕಾಲೂರಿ ತನ್ನ ಕೈಗಳನ್ನು ಆಕಾಶದ ಕಡೆ ಎತ್ತಿ,
14 “ಇಸ್ರೇಲರ ದೇವರಾದ ಯೆಹೋವನೇ, ಭೂಪರಲೋಕಗಳಲ್ಲಿ ನಿನಗೆ ಸಮಾನರಾದ ಬೇರೆ ದೇವರುಗಳಿಲ್ಲ. ನೀನು ನಿನ್ನ ಪ್ರೀತಿ ಕರುಣೆಯಿಂದೊಡಗೂಡಿದ ವಾಗ್ದಾನಗಳನ್ನು ನೆರವೇರಿಸುವೆ. ನಿನ್ನ ಸೇವಕರು ಹೃದಯಪೂರ್ವಕವಾಗಿ ನಿನಗೆ ಯೋಗ್ಯರಾಗಿ ನಡೆದು, ನಿನ್ನ ಆಜ್ಞೆಗಳಿಗೆ ವಿಧೇಯರಾಗುವದಾದರೆ ಅವರ ವಿಷಯದಲ್ಲಿ ನಿನ್ನ ವಾಗ್ದಾನವನ್ನು ನೆರವೇರಿಸುವೆ. 15 ನಿನ್ನ ಸೇವಕನಾದ ದಾವೀದನಿಗೆ ನೀನು ಮಾಡಿದ ವಾಗ್ದಾನವನ್ನು ನೆರವೇರಿಸಿರುವೆ. ದಾವೀದನು ನನ್ನ ತಂದೆ. ಅವನಿಗೆ ನೀನು ವಾಗ್ದಾನವನ್ನು ಮಾಡಿರುವೆ. ಈ ದಿನ ನಿನ್ನ ವಾಗ್ದಾನವು ನಿನ್ನ ಹಸ್ತದ ಮೂಲಕ ನೆರವೇರಿತು. 16 ಇಸ್ರೇಲರ ದೇವರಾದ ಯೆಹೋವನೇ, ನೀನು ನನ್ನ ತಂದೆಯಾದ ದಾವೀದನಿಗೆ, ‘ನಿನ್ನ ಸಂತಾನದವರು ನಿನ್ನಂತೆ ನನ್ನ ಆಜ್ಞೆಗಳಿಗೆ ವಿಧೇಯರಾಗಿದ್ದರೆ, ನಿನ್ನ ಸಂತಾನದವರೇ ಇಸ್ರೇಲ್ ಸಿಂಹಾಸನದ ಮೇಲೆ ಕುಳಿತುಕೊಳ್ಳುವರು.’ ಎಂದು ವಾಗ್ದಾನ ಮಾಡಿದೆಯಲ್ಲಾ? 17 ಇಸ್ರೇಲರ ದೇವರಾದ ಯೆಹೋವನೇ, ನೀನು ನಿನ್ನ ಸೇವಕನಾದ ದಾವೀದನಿಗೆ ಕೊಟ್ಟಿರುವ ನಿನ್ನ ವಾಗ್ದಾನವು ನೆರವೇರಲಿ.
18 “ದೇವರೇ, ನೀನು ಭೂಮಿಯ ಮೇಲೆ ಜನರೊಂದಿಗೆ ವಾಸಿಸುವವನಲ್ಲವೆಂದು ತಿಳಿದಿದ್ದೇವೆ. ಆಕಾಶಮಂಡಲವಾಗಲಿ ಅತ್ಯುನ್ನತವಾದ ಆಕಾಶವಾಗಲಿ ನಿನಗೆ ವಾಸಸ್ಥಾನವಾಗಲು ಸಾಧ್ಯವಿಲ್ಲ. ಈಗ ನಾನು ಕಟ್ಟಿರುವ ಈ ಆಲಯವು ಸಹ ನಿನ್ನ ವಾಸಕ್ಕೆ ಸಾಲದು. 19 ನನ್ನ ಪ್ರಾರ್ಥನೆಗೆ ಲಕ್ಷ್ಯಕೊಡು ಎಂದು ನಿನ್ನನ್ನು ಬೇಡುತ್ತೇನೆ. ದೇವರಾದ ಯೆಹೋವನೇ, ನನ್ನ ಬೇಡಿಕೆಗಳನ್ನು ಮತ್ತು ಸ್ತೋತ್ರಗಳನ್ನು ಲಾಲಿಸು. ನಾನು ನಿನ್ನ ಸೇವಕನಾಗಿದ್ದೇನೆ. 20 ನಿನ್ನ ಕಣ್ಣುಗಳು ಹಗಲಿರುಳು ಈ ಆಲಯವನ್ನು ದೃಷ್ಟಿಸುತ್ತಲೇ ಇರಲಿ. ನೀನು ನಿನ್ನ ನಾಮವನ್ನು ಇಲ್ಲಿ ಸ್ಥಾಪಿಸುತ್ತೇನೆ ಎಂದು ಹೇಳಿರುವೆ. ನಾನು ಈ ದೇವಾಲಯದ ಕಡೆಗೆ ತಿರುಗಿಕೊಂಡು ಪ್ರಾರ್ಥಿಸುವಾಗ ಆಲೈಸು. 21 ನಿನ್ನ ಜನರಾದ ಇಸ್ರೇಲರು ಮತ್ತು ನಾನು ಮಾಡುವ ಪ್ರಾರ್ಥನೆಯನ್ನು ಆಲೈಸು. ನಾವು ಈ ದೇವಾಲಯದ ಕಡೆಗೆ ತಿರುಗಿಕೊಂಡು ನಿನಗೆ ಪ್ರಾರ್ಥಿಸುವಾಗ ನಿನ್ನ ನಿವಾಸವಾದ ಪರಲೋಕದಿಂದ ನಮ್ಮ ಪ್ರಾರ್ಥನೆಯನ್ನು ಆಲೈಸು; ನಮ್ಮ ಪಾಪಗಳನ್ನು ಕ್ಷಮಿಸು.
22 “ಒಬ್ಬನು ಇನ್ನೊಬ್ಬನಿಗೆ ವಿರುದ್ಧವಾಗಿ ದುಷ್ಕೃತ್ಯ ನಡೆಸಿದ್ದರೂ ನಿನ್ನ ಯಜ್ಞವೇದಿಕೆಯ ಮುಂದೆ ಬಂದು ತಾನು ಮಾಡಿಲ್ಲವೆಂದು ನಿನ್ನ ಹೆಸರಿನಲ್ಲಿ ಪ್ರಮಾಣ ಮಾಡಿದರೆ 23 ಅದನ್ನು ನೀನು ಪರಲೋಕದಿಂದ ಆಲೈಸಿ ನಿನ್ನ ಸೇವಕರ ನ್ಯಾಯತೀರಿಸು. ಕೇಡುಮಾಡಿದವನನ್ನು ಶಿಕ್ಷಿಸು; ಅವನು ಇನ್ನೊಬ್ಬನಿಗೆ ಮಾಡಿದ ದುಷ್ಕೃತ್ಯವು ಅವನಿಗೇ ತಟ್ಟುವಂತೆ ಮಾಡು. ಯಾವನು ನಿರಪರಾಧಿಯೆಂಬುದನ್ನು ತೋರಿಸಿಕೊಟ್ಟು ಅವನ ನೀತಿಗೆ ತಕ್ಕಂತೆ ಪ್ರತಿಫಲ ಕೊಡು.
24 “ನಿನ್ನ ಜನರಾದ ಇಸ್ರೇಲರು ನಿನಗೆ ವಿರುದ್ಧವಾಗಿ ಪಾಪಮಾಡಿದಾಗ ವೈರಿಗಳು ಬಂದು ಅವರನ್ನು ಯುದ್ಧದಲ್ಲಿ ಸೋಲಿಸಿದರೂ ನಿನ್ನ ಜನರು ನಿನ್ನ ಕಡೆಗೆ ತಿರುಗಿ ತಮ್ಮ ಪಾಪಗಳನ್ನು ಒಪ್ಪಿಕೊಂಡು ಈ ದೇವಾಲಯಕ್ಕೆ ಬಂದು ನಿನ್ನ ಹೆಸರನ್ನು ಹೇಳಿಕೊಂಡು ನಿನಗೆ ಪ್ರಾರ್ಥಿಸಿ ಬೇಡಿಕೊಂಡರೆ 25 ಆಗ ನೀನು ಪರಲೋಕದಿಂದ ಅವರ ಮೊರೆಯನ್ನು ಲಾಲಿಸಿ, ನಿನ್ನ ಜನರ ಪಾಪಗಳನ್ನು ಮನ್ನಿಸು. ಅವರ ಪೂರ್ವಿಕರಿಗೆ ನೀನು ಕೊಟ್ಟ ದೇಶಕ್ಕೆ ಅವರನ್ನು ಮತ್ತೆ ಬರಮಾಡು.
26 “ನಿನ್ನ ಜನರಾದ ಇಸ್ರೇಲರು ನಿನಗೆ ವಿರುದ್ಧವಾಗಿ ಪಾಪಮಾಡಿದಾಗ ನೀನು ಆಕಾಶದಿಂದ ಮಳೆ ಬೀಳದಂತೆ ತಡೆದಾಗ ನಿನ್ನ ಜನರು ಪಶ್ಚಾತ್ತಾಪಪಟ್ಟು ಈ ದೇವಾಲಯದ ಕಡೆಗೆ ತಿರುಗಿ ನಿನ್ನನ್ನು ಪ್ರಾರ್ಥಿಸಿ ತಮ್ಮ ಪಾಪಗಳನ್ನು ಬಿಟ್ಟುಬಿಟ್ಟರೆ 27 ನೀನು ಪರಲೋಕದಿಂದ ಅವರನ್ನು ಆಲೈಸು. ಇಸ್ರೇಲರು ನಿನ್ನ ಸೇವಕರೂ ಪ್ರಜೆಗಳೂ ಆಗಿದ್ದಾರೆ. ಅವರು ಬದುಕುವಂತೆ ಸರಿಯಾದ ಮಾರ್ಗವನ್ನು ಅವರಿಗೆ ತೋರ್ಪಡಿಸು. ಅವರ ದೇಶದ ಮೇಲೆ ಮಳೆಯನ್ನು ಸುರಿಸು. ನಿನ್ನ ಜನರಿಗೆ ನೀನು ಆ ದೇಶವನ್ನೇ ಸ್ವಾಸ್ತ್ಯವಾಗಿ ಕೊಟ್ಟಿರುವೆ.
28 “ಆ ದೇಶದಲ್ಲಿ ಬರಗಾಲ ಬಂದಾಗ ಅಥವಾ ಸೋಂಕುರೋಗ ತಗಲಿದಾಗ, ಅಥವಾ ಮಿಡತೆಗಳಿಂದ ಬಾಧಿಸಲ್ಪಟ್ಟಾಗ, ವೈರಿಗಳು ಬಂದು ನಿನ್ನ ಜನರ ಮೇಲೆ ಅವರ ನಗರಗಳಲ್ಲಿಯೇ ಯುದ್ಧಮಾಡಿದಾಗ, ಅಥವಾ ಭಯಂಕರವಾದ ಕಾಯಿಲೆಯು ದೇಶದ ಜನರನ್ನು ಕಾಡಿದಾಗ 29 ತಮ್ಮ ಸಂಕಟಗಳ ಕುರಿತು ಈ ಆಲಯದ ಕಡೆಗೆ ಕೈಯೆತ್ತಿ ನಿನಗೆ ಮೊರೆಯಿಡುವದಾದರೆ, 30 ನೀನು ಪರಲೋಕದಿಂದ ಅವರ ಮೊರೆಯನ್ನು ಆಲೈಸಿ ಅವರ ಪ್ರಾರ್ಥನೆಗೆ ಉತ್ತರವನ್ನು ದಯಪಾಲಿಸು; ಪ್ರತಿಯೊಬ್ಬನಿಗೂ ತಕ್ಕ ಪ್ರತಿಫಲವನ್ನು ಕೊಡು. ಯಾಕೆಂದರೆ ಪ್ರತಿಯೊಬ್ಬನ ಹೃದಯವನ್ನು ನೀನೊಬ್ಬನೇ ತಿಳಿದಿರುವೆ. 31 ಆಗ, ನಮ್ಮ ಪೂರ್ವಿಕರಿಗೆ ನೀನು ಅನುಗ್ರಹಿಸಿದ ದೇಶದಲ್ಲಿರುವ ನಿನ್ನ ಜನರು ನಿನಗೆ ಭಯಭಕ್ತಿಯಿಂದ ಸೇವೆ ಮಾಡುವರು.
32 “ಇಸ್ರೇಲಿನವನಲ್ಲದ ಪರದೇಶಿಯು ನಿನ್ನ ಪರಾಕ್ರಮವನ್ನೂ ನಿನ್ನ ಸಾಮರ್ಥ್ಯವನ್ನೂ ಕಂಡು ಕೇಳಿ ಇಲ್ಲಿಗೆ ಬಂದು ಈ ಆಲಯದ ಮುಂದೆ ನಿಂತುಕೊಂಡು ನಿನಗೆ ಪ್ರಾರ್ಥಿಸುವದಾದರೆ, 33 ಪರಲೋಕದಲ್ಲಿ ವಾಸಿಸುವ ನೀನು ಆ ಪರದೇಶಿಯ ಪ್ರಾರ್ಥನೆಯನ್ನು ಕೇಳಿ ಉತ್ತರಿಸು. ಆಗ ಇಸ್ರೇಲ್ ಜನರಂತೆ ಈ ಲೋಕದಲ್ಲಿರುವ ಜನರೆಲ್ಲಾ ನಿನ್ನ ವಿಷಯ ಕೇಳಿ ನಿನ್ನನ್ನು ಗೌರವಿಸುವರು. ನಾನು ಕಟ್ಟಿದ ಈ ದೇವಾಲಯವು ನಿನ್ನ ಹೆಸರಿನಿಂದ ಕರೆಯಲ್ಪಟ್ಟಿದೆ ಎಂಬದು ಆಗ ಅವರಿಗೆ ಗೊತ್ತಾಗುವುದು.
34 “ನೀನು ನಿನ್ನ ಜನರನ್ನು ಅವರ ವೈರಿಗಳ ವಿರುದ್ಧವಾಗಿ ಯುದ್ಧಮಾಡಲು ಒಂದು ಸ್ಥಳಕ್ಕೆ ಕಳುಹಿಸುವಾಗ ನೀನು ಆರಿಸಿಕೊಂಡ ಈ ಪಟ್ಟಣದ ಕಡೆಗೂ ನಿನ್ನ ಹೆಸರಿಗಾಗಿ ನಾನು ಕಟ್ಟಿದ ಈ ದೇವಾಲಯದ ಕಡೆಗೂ ಅವರು ತಿರುಗಿಕೊಂಡು ನಿನಗೆ ಪ್ರಾರ್ಥಿಸಿದರೆ 35 ಪರಲೋಕದಿಂದ ನೀನು ಅವರ ಪ್ರಾರ್ಥನೆಯನ್ನು ಕೇಳಿ ಅವರಿಗೆ ಸಹಾಯ ಮಾಡು.
36 “ಜನರು ನಿನಗೆ ವಿರುದ್ಧವಾಗಿ ಪಾಪಮಾಡಬಹುದು; ಪಾಪಮಾಡದೆ ಇರುವವನು ಯಾವನೂ ಇಲ್ಲ. ಆಗ ನೀನು ಅವರ ಮೇಲೆ ಉರಿಗೊಂಡು ಅವರನ್ನು ಶಿಕ್ಷಿಸಲು ನೀನು ವೈರಿಗಳನ್ನು ಅವರ ಮೇಲೆ ಕಳುಹಿಸಿ ಅವರನ್ನು ಸೆರೆಹಿಡಿದು ದೂರದೇಶಕ್ಕೆ ಒಯ್ಯಲ್ಪಡುವಂತೆ ಮಾಡಿದಾಗ 37 ಒಂದುವೇಳೆ ಅವರು ಪಶ್ಚಾತ್ತಾಪಪಟ್ಟು ನಿನ್ನ ಕಡೆಗೆ ತಿರುಗಿಕೊಂಡು ತಾವು ಸೆರೆಯಲ್ಲಿರುವ ದೇಶದಿಂದ ನಿನಗೆ ಮೊರೆಯಿಟ್ಟು, ‘ನಿನಗೆ ವಿರುದ್ಧವಾಗಿ ನಾವು ಪಾಪಮಾಡಿದ್ದೇವೆ. ನಾವು ದುಷ್ಟತ್ವದಲ್ಲಿ ಜೀವಿಸಿದ್ದೇವೆ’ ಎಂದು ಅರಿಕೆಮಾಡಿ 38 ತಮ್ಮ ಹೃದಯಪೂರ್ವಕವಾಗಿ ತಮ್ಮ ದೇಶದ ಕಡೆಗೆ, ಅಂದರೆ ನೀನು ಅವರ ಪೂರ್ವಿಕರಿಗೆ ಕೊಟ್ಟ ಈ ದೇಶದ ಕಡೆಗೂ ನೀನು ಆರಿಸಿಕೊಂಡ ಪಟ್ಟಣದ ಕಡೆಗೂ ನಿನ್ನ ಹೆಸರಿಗಾಗಿ ನಾನು ಕಟ್ಟಿಸಿದ ಈ ದೇವಾಲಯದ ಕಡೆಗೂ ಮುಖಮಾಡಿಕೊಂಡು ಪ್ರಾರ್ಥಿಸುವಾಗ, 39 ನಿನ್ನ ವಾಸಸ್ಥಾನವಾಗಿರುವ ಪರಲೋಕದಿಂದ ನೀನು ಅವರ ಪ್ರಾರ್ಥನೆಯನ್ನು ಕೇಳಿ ಅವರಿಗೆ ಸಹಾಯಮಾಡು. ನಿನಗೆ ವಿರುದ್ಧವಾಗಿ ಪಾಪಮಾಡಿದವರನ್ನು ಕ್ಷಮಿಸು. 40 ನನ್ನ ದೇವರೇ, ಈ ಸ್ಥಳದಲ್ಲಿ ಪ್ರಾರ್ಥಿಸುವ ನಮ್ಮನ್ನು ವೀಕ್ಷಿಸಿ ನಮ್ಮ ಪ್ರಾರ್ಥನೆಗೆ ಕಿವಿಗೊಡು.
41 “ದೇವರಾದ ಯೆಹೋವನೇ, ಎದ್ದು ನಿನ್ನ ಸಾಮರ್ಥ್ಯವನ್ನು
ತೋರಿಸುವ ಒಡಂಬಡಿಕೆಯ ಪೆಟ್ಟಿಗೆಯೊಡನೆ ನಿನ್ನ ವಾಸಸ್ಥಳಕ್ಕೆ ಬಾ.
ನಿನ್ನ ಯಾಜಕರು ರಕ್ಷಣಾವಸ್ತ್ರವನ್ನು ಧರಿಸಿಕೊಂಡಿರಲಿ;
ನಿನ್ನನ್ನು ಪ್ರೀತಿಸುವವರು ನಿನ್ನ ಒಳ್ಳೆಯತನದಲ್ಲಿ ಸಂತೋಷಪಡಲಿ.
42 ದೇವರಾದ ಯೆಹೋವನೇ, ನಿನ್ನಿಂದ ಅಭಿಷೇಕಿಸಲ್ಪಟ್ಟಿರುವ ಅರಸನನ್ನು ತಳ್ಳಿಬಿಡಬೇಡ.
ನಿನಗೆ ನಂಬಿಗಸ್ತನಾದ ಸೇವಕನಾಗಿದ್ದ ದಾವೀದನನ್ನು ನೆನಪುಮಾಡಿಕೊ”
ಎಂದು ಪ್ರಾರ್ಥಿಸಿದನು.
24 ಯೆಹೂದ್ಯರು ಯೇಸುವಿನ ಸುತ್ತಲೂ ನೆರೆದರು. ಅವರು ಆತನಿಗೆ, “ಇನ್ನೆಷ್ಟುಕಾಲ ನೀನು ನಿನ್ನ ಬಗ್ಗೆ ನಮ್ಮನ್ನು ಆಶ್ಚರ್ಯಗೊಳಿಸುವೆ? ನೀನು ಕ್ರಿಸ್ತನಾಗಿದ್ದರೆ, ನಮಗೆ ಸ್ಪಷ್ಟವಾಗಿ ತಿಳಿಸು” ಎಂದು ಹೇಳಿದರು.
25 ಯೇಸು, “ನಾನು ಆಗಲೇ ನಿಮಗೆ ಹೇಳಿದೆನು. ಆದರೆ ನೀವು ನಂಬಲಿಲ್ಲ. ನನ್ನ ತಂದೆಯ ಹೆಸರಿನಲ್ಲಿ ನಾನು ಅದ್ಭುತಕಾರ್ಯಗಳನ್ನು ಮಾಡುತ್ತೇನೆ. ನಾನು ಯಾರೆಂಬುದನ್ನು ಆ ಅದ್ಭುತಕಾರ್ಯಗಳು ತೋರಿಸುತ್ತವೆ. 26 ಆದರೆ ನೀವು ನಂಬುವುದಿಲ್ಲ. ಏಕೆಂದರೆ ನೀವು ನನ್ನ ಕುರಿಗಳಲ್ಲ (ಜನರಲ್ಲ). 27 ನನ್ನ ಕುರಿಗಳು ನನ್ನ ಸ್ವರಕ್ಕೆ ಕಿವಿಗೊಡುತ್ತವೆ. ನಾನು ಅವುಗಳನ್ನು ಬಲ್ಲೆನು ಮತ್ತು ಅವುಗಳು ನನ್ನನ್ನು ಹಿಂಬಾಲಿಸುತ್ತವೆ. 28 ನನ್ನ ಕುರಿಗಳಿಗೆ ನಾನು ನಿತ್ಯಜೀವವನ್ನು ಕೊಡುತ್ತೇನೆ. ಅವು ಎಂದಿಗೂ ಸಾಯುವುದಿಲ್ಲ, ಮತ್ತು ಅವುಗಳನ್ನು ಯಾರೂ ನನ್ನಿಂದ ಕಸಿದುಕೊಳ್ಳಲಾರರು. 29 ನನ್ನ ಕುರಿಗಳನ್ನು ನನ್ನ ತಂದೆಯೇ ನನಗೆ ಕೊಟ್ಟನು. ಆತನು ಎಲ್ಲರಿಗಿಂತಲೂ ದೊಡ್ಡವನಾಗಿದ್ದಾನೆ. ನನ್ನ ಕುರಿಗಳನ್ನು ನನ್ನ ತಂದೆಯ ಕೈಯಿಂದ ಯಾರೂ ಕದ್ದುಕೊಳ್ಳಲಾರರು. 30 ತಂದೆಯು ಮತ್ತು ನಾನು ಒಂದೇ ಆಗಿದ್ದೇವೆ” ಎಂದು ಉತ್ತರಕೊಟ್ಟನು.
31 ಯೆಹೂದ್ಯರು ಯೇಸುವನ್ನು ಕೊಲ್ಲಲು ಮತ್ತೆ ಕಲ್ಲುಗಳನ್ನು ತೆಗೆದುಕೊಂಡರು. 32 ಆದರೆ ಯೇಸು ಅವರಿಗೆ, “ನಾನು ತಂದೆಯಿಂದ ಅನೇಕ ಒಳ್ಳೆಯ ಕಾರ್ಯಗಳನ್ನು ಮಾಡಿದ್ದೇನೆ. ನೀವು ಆ ಕಾರ್ಯಗಳನ್ನು ನೋಡಿದ್ದೀರಿ. ಆ ಒಳ್ಳೆಯ ಕಾರ್ಯಗಳಲ್ಲಿ ಯಾವುದರ ನಿಮಿತ್ತ ನೀವು ನನ್ನನ್ನು ಕೊಲ್ಲಬೇಕೆಂದಿದ್ದೀರಿ?” ಎಂದು ಹೇಳಿದನು.
33 ಯೆಹೂದ್ಯರು, “ನಾವು ನಿನ್ನನ್ನು ಕೊಲ್ಲುತ್ತಿರುವುದು ನೀನು ಮಾಡಿದ ಯಾವುದೇ ಒಳ್ಳೆಯ ಕಾರ್ಯದ ನಿಮಿತ್ತದಿಂದಲ್ಲ. ನೀನು ಮಾಡುತ್ತಿರುವ ದೇವದೂಷಣೆಗಾಗಿ. ನೀನು ಕೇವಲ ಒಬ್ಬ ಮನುಷ್ಯ. ನೀನು ನಿನ್ನನ್ನೇ ದೇವರೆಂದು ಹೇಳಿಕೊಳ್ಳುತ್ತಿರುವೆ! ಆದಕಾರಣ ಕಲ್ಲುಗಳಿಂದ ನಿನ್ನನ್ನು ಕೊಲ್ಲಬೇಕೆಂದಿದ್ದೇವೆ!” ಎಂದು ಉತ್ತರಕೊಟ್ಟರು.
34 ಅದಕ್ಕೆ ಯೇಸು, “ನಿಮ್ಮ ಧರ್ಮಶಾಸ್ತ್ರದಲ್ಲಿ, ‘ನಾನು ನಿಮ್ಮನ್ನು ದೇವರುಗಳೆಂದು ಹೇಳಿದೆನು’(A) ಎಂಬುದಾಗಿ ಬರೆದಿದೆ. 35 ದೇವರ ಸಂದೇಶವನ್ನು ಹೊಂದಿದ್ದ ಜನರನ್ನು ಈ ಪವಿತ್ರ ಗ್ರಂಥವು ದೇವರುಗಳೆಂದು ಕರೆದಿದೆ. ಪವಿತ್ರ ಗ್ರಂಥವು ಯಾವಾಗಲೂ ಸತ್ಯವಾದದ್ದು. 36 ತಂದೆಯೇ ನನ್ನನ್ನು ಪ್ರತಿಷ್ಠಿಸಿ ಈ ಲೋಕಕ್ಕೆ ಕಳುಹಿಸಿಕೊಟ್ಟಿರುವುದರಿಂದ ನಾನು ದೇವರ ಮಗನು ಎಂದು ಹೇಳಿದ್ದಕ್ಕೆ ನೀವು ನನ್ನನ್ನು ದೇವದೂಷಣೆ ಮಾಡುವವನೆಂದು ಹೇಳುವುದೇಕೆ? 37 ನನ್ನ ತಂದೆಯು ಮಾಡುವುದನ್ನು ನಾನು ಮಾಡದಿದ್ದರೆ, ನಾನು ಹೇಳುವುದನ್ನು ನಂಬಬೇಡಿ. 38 ಆದರೆ ನನ್ನ ತಂದೆಯು ಮಾಡುವ ಕಾರ್ಯಗಳನ್ನೇ ನಾನು ಮಾಡಿದರೆ, ಆ ಕಾರ್ಯಗಳಲ್ಲಿ ನೀವು ನಂಬಿಕೆ ಇಡಬೇಕು. ನೀವು ನನ್ನಲ್ಲಿ ನಂಬಿಕೆ ಇಡದಿದ್ದರೂ ನನ್ನ ಕಾರ್ಯಗಳಲ್ಲಾದರೂ ನಂಬಿಕೆ ಇಡಿರಿ. ತಂದೆಯು ನನ್ನಲ್ಲಿದ್ದಾನೆ ಮತ್ತು ನಾನು ತಂದೆಯಲ್ಲಿದ್ದೇನೆ ಎಂಬುದನ್ನು ಆಗ ನೀವು ತಿಳಿದುಕೊಳ್ಳುವಿರಿ ಮತ್ತು ಅರ್ಥಮಾಡಿಕೊಳ್ಳುವಿರಿ” ಎಂದು ಹೇಳಿದನು.
39 ಯೇಸುವನ್ನು ಬಂಧಿಸಲು ಯೆಹೂದ್ಯರು ಮತ್ತೆ ಪ್ರಯತ್ನಿಸಿದರು. ಆದರೆ ಯೇಸು ಅವರಿಂದ ತಪ್ಪಿಸಿಕೊಂಡನು.
40 ಬಳಿಕ ಯೇಸು ಜೋರ್ಡನ್ ನದಿಯ ಆಚೆಯ ದಡಕ್ಕೆ ಹೋದನು. ಯೋಹಾನನು ಮೊದಲು ದೀಕ್ಷಾಸ್ನಾನ ಕೊಡುತ್ತಿದ್ದ ಸ್ಥಳಕ್ಕೆ ಯೇಸು ಹೋಗಿ ಅಲ್ಲಿ ತಂಗಿದನು. 41 ಆಗ ಅನೇಕ ಜನರು ಆತನ ಬಳಿಗೆ ಬಂದರು. “ಯೋಹಾನನು ಎಂದೂ ಅದ್ಭುತಕಾರ್ಯವನ್ನು ಮಾಡಲಿಲ್ಲ. ಆದರೆ ಯೋಹಾನನು ಈ ಮನುಷ್ಯನ (ಯೇಸುವಿನ) ಬಗ್ಗೆ ಹೇಳಿದ ಪ್ರತಿಯೊಂದೂ ಸತ್ಯವಾದದ್ದು” ಎಂದು ಅವರು ಮಾತಾಡಿಕೊಂಡರು. 42 ಮತ್ತು ಅಲ್ಲಿ ಅನೇಕ ಜನರು ಯೇಸುವಿನಲ್ಲಿ ನಂಬಿಕೆ ಇಟ್ಟರು.
Kannada Holy Bible: Easy-to-Read Version. All rights reserved. © 1997 Bible League International