Print Page Options
Previous Prev Day Next DayNext

Old/New Testament

Each day includes a passage from both the Old Testament and New Testament.
Duration: 365 days
Kannada Holy Bible: Easy-to-Read Version (KERV)
Version
1 ಪೂರ್ವಕಾಲವೃತ್ತಾಂತ 13-15

ಒಡಂಬಡಿಕೆಯ ಪೆಟ್ಟಿಗೆಯನ್ನು ಹಿಂದಕ್ಕೆ ತರಲು ಮಾಡಿದ ತೀರ್ಮಾನ

13 ದಾವೀದನು ತನ್ನ ಎಲ್ಲಾ ಸೇನಾಧಿಪತಿಗಳೊಂದಿಗೆ ಮಾತನಾಡಿದನು. ಅವನು ಸಹಸ್ರಾಧಿಪತಿಗಳೊಂದಿಗೆ, ಶತಾಧಿಪತಿಗಳೊಂದಿಗೆ ಮತ್ತು ಪ್ರತಿಯೊಬ್ಬ ನಾಯಕನೊಂದಿಗೆ ಚರ್ಚಿಸಿದನು. ಆಮೇಲೆ ಇಸ್ರೇಲ್ ಜನರನ್ನು ಕರೆದು ಅವರಿಗೆ ಹೀಗೆಂದನು: “ಇದು ನಿಮಗೆ ಒಳ್ಳೆಯ ಆಲೋಚನೆ ಎನಿಸಿದರೆ ಮತ್ತು ಇದು ಯೆಹೋವನ ಚಿತ್ತಕ್ಕನುಸಾರವಾಗಿದ್ದರೆ, ಇಸ್ರೇಲಿನ ಎಲ್ಲಾ ಸ್ಥಳಗಳಲ್ಲಿರುವ ನಮ್ಮ ಸಹೋದರರಿಗೆ ಒಂದು ಸಂದೇಶವನ್ನು ಕಳುಹಿಸೋಣ. ನಮ್ಮ ಸಹೋದರರೊಂದಿಗೆ ಊರುಗಳಲ್ಲಿಯೂ ಊರುಗಳ ಸಮೀಪದಲ್ಲಿರುವ ಹೊಲಗಳಲ್ಲಿಯೂ ವಾಸವಾಗಿರುವ ಯಾಜಕರಿಗೂ ಲೇವಿಯರಿಗೂ ಈ ಸಂದೇಶವನ್ನು ಕಳುಹಿಸಿಕೊಡೋಣ: ನೀವು ಬಂದು ನಮ್ಮೊಂದಿಗೆ ಸೇರಿಕೊಳ್ಳಿ. ನಾವೆಲ್ಲರೂ ಹೋಗಿ ಒಡಂಬಡಿಕೆಯ ಪೆಟ್ಟಿಗೆಯನ್ನು ಜೆರುಸಲೇಮಿಗೆ ತರೋಣ. ಸೌಲನು ಅರಸನಾಗಿದ್ದಾಗ ನಾವು ಒಡಂಬಡಿಕೆಯ ಪೆಟ್ಟಿಗೆಯ ಬಗ್ಗೆ ಆಸಕ್ತಿವಹಿಸಲಿಲ್ಲ.” ಆದ್ದರಿಂದ ಇಸ್ರೇಲರೆಲ್ಲರೂ ದಾವೀದನ ಸಲಹೆಗೆ ಒಪ್ಪಿದರು ಮತ್ತು ಅದು ಯೋಗ್ಯವಾದದ್ದೆಂದು ತೀರ್ಮಾನಿಸಿದರು.

ಆಗ ದಾವೀದನು ಈಜಿಪ್ಟಿನ ಶೀಹೋರ್ ನದಿಯಿಂದ ಹಿಡಿದು ಲೆಬೊಹಮಾತ್ ಪಟ್ಟಣದ ತನಕ ಇದ್ದ ಇಸ್ರೇಲರನ್ನೆಲ್ಲಾ ಒಟ್ಟು ಸೇರಿಸಿದನು; ಅವರೆಲ್ಲರೂ ಯೆಹೋವನ ಒಡಂಬಡಿಕೆಯ ಪೆಟ್ಟಿಗೆಯನ್ನು ಕಿರ್ಯತ್ಯಾರೀಮಿನಿಂದ ತರಲು ಹೊರಟರು. ಇಸ್ರೇಲಿನ ಎಲ್ಲಾ ಜನರು ದಾವೀದನೊಂದಿಗೆ ಯೆಹೂದದ ಬಾಳಾ ಎಂಬ ಸ್ಥಳಕ್ಕೆ (ಕೀರ್ಯಾತ್ಯಾರೀಮಿನ ಇನ್ನೊಂದು ಹೆಸರು ಬಾಳಾ.) ಯೆಹೋವನ ಒಡಂಬಡಿಕೆಯ ಪೆಟ್ಟಿಗೆಯನ್ನು ತರಲು ನಡೆದರು. ಆತನು ಕೆರೂಬಿಗಳ ನಡುವೆ ಆಸೀನನಾಗಿರುತ್ತಾನೆ. ಆ ಪೆಟ್ಟಿಗೆಯು ಯೆಹೋವನ ಹೆಸರಿನಲ್ಲಿ ಕರೆಯಲ್ಪಡುತ್ತದೆ.

ಅಬೀನಾದಾಬನ ಮನೆಯಲ್ಲಿದ್ದ ಒಡಂಬಡಿಕೆಯ ಪೆಟ್ಟಿಗೆಯನ್ನು ಜನರು ಎತ್ತಿ ಒಂದು ಹೊಸ ಬಂಡಿಯಲ್ಲಿಟ್ಟರು. ಉಜ್ಜನೂ ಅಹಿಯೋವನೂ ಆ ಬಂಡಿಯನ್ನು ನಡೆಸಿದರು.

ದಾವೀದನೂ ಎಲ್ಲಾ ಇಸ್ರೇಲರೂ ದೇವರ ಮುಂದೆ ಸಂತೋಷದಿಂದ ಹಾಡುತ್ತಾ ಕುಣಿಯುತ್ತಾ ಹೋದರು. ಹಾರ್ಪ್‌ವಾದ್ಯವನ್ನು, ಲೈರ್‌ವಾದ್ಯವನ್ನು, ತಬಲವನ್ನು, ತಾಳವನ್ನು ಮತ್ತು ತುತ್ತೂರಿಯನ್ನು ಬಾರಿಸುತ್ತಾ ಹಾಡುತ್ತಾ ದೇವರಿಗೆ ಸ್ತೋತ್ರ ಮಾಡಿದರು.

ಅವರು ಕೀದೋನನ ಕಣಕ್ಕೆ ಬಂದಾಗ ಗಾಡಿ ಎಳೆಯುತ್ತಿದ್ದ ಎತ್ತುಗಳು ಮುಗ್ಗರಿಸಿದವು. ಆಗ ಯೆಹೋವನ ಒಡಂಬಡಿಕೆಯ ಪೆಟ್ಟಿಗೆಯು ಬೀಳುವುದರಲ್ಲಿತ್ತು. ಉಜ್ಜನು ತನ್ನ ಕೈಯನ್ನು ಚಾಚಿ ಪೆಟ್ಟಿಗೆಯನ್ನು ಹಿಡಿಯಲು ಹೋದನು. 10 ಆದರೆ ಯೆಹೋವನು ಅವನ ಮೇಲೆ ಕೋಪಗೊಂಡು ಆ ಪವಿತ್ರವಾದ ಪೆಟ್ಟಿಗೆಯನ್ನು ಮುಟ್ಟಿದ್ದಕ್ಕೆ ಅವನನ್ನು ಅಲ್ಲಿಯೇ ಸಾಯಿಸಿದನು. 11 ದಾವೀದನು ಇದನ್ನು ನೋಡಿ ತುಂಬಾ ಬೇಸರಗೊಂಡನು. ಆ ಸಮಯದಿಂದ ಈ ತನಕವೂ ಆ ಸ್ಥಳಕ್ಕೆ, “ಪೆರೆಚ್‌ಉಜ್ಜ” ಎಂಬ ಹೆಸರೇ ಇದೆ.

12 ಆ ದಿವಸದಲ್ಲಿ ದಾವೀದನು ಯೆಹೋವನಿಗೆ ತುಂಬಾ ಭಯಪಟ್ಟು, “ನಾನು ಯೆಹೋವನ ಒಡಂಬಡಿಕೆಯ ಪೆಟ್ಟಿಗೆಯನ್ನು ಜೆರುಸಲೇಮಿಗೆ ತರಲು ಆಗುವುದಿಲ್ಲ” ಅಂದುಕೊಂಡನು. 13 ದಾವೀದನು ದೇವರಿಗೆ ಭಯಪಟ್ಟನು. ದೇವರ ಒಡಂಬಡಿಕೆಯ ಪೆಟ್ಟಿಗೆಯನ್ನು ಓಬೇದೆದೋಮನ ಮನೆಯಲ್ಲಿಯೇ ಬಿಟ್ಟನು. ಓಬೇದೆದೋಮನು ಗತ್ ಊರಿನವನು. 14 ಆ ಮನೆಯಲ್ಲಿ ದೇವರ ಒಡಂಬಡಿಕೆಯ ಪೆಟ್ಟಿಗೆಯು ಮೂರು ತಿಂಗಳ ಕಾಲವಿತ್ತು. ಯೆಹೋವನು ಆ ಮನೆಯನ್ನು ಆಶೀರ್ವದಿಸಿ ಅಭಿವೃದ್ಧಿಪಡಿಸಿದನು.

ದಾವೀದನ ರಾಜ್ಯವಿಸ್ತರಣೆ

14 ತೂರ್ ಪಟ್ಟಣದ ರಾಜನಾದ ಹೀರಾಮನು ದಾವೀದನ ಬಳಿಗೆ ತನ್ನ ಸಂದೇಶಕರನ್ನು ಕಳುಹಿಸಿದನು. ಇವರೊಂದಿಗೆ ದೇವದಾರು ಮರದ ತೊಲೆಗಳನ್ನು, ಕಲ್ಲುಕುಟಿಗರನ್ನು ಮತ್ತು ಬಡಗಿಯರನ್ನು ಕಳುಹಿಸಿದನು. ದಾವೀದನಿಗೊಂದು ಮನೆಯನ್ನು ಕಟ್ಟಲು ಇವರನ್ನು ಕಳುಹಿಸಿದನು. ದೇವರು ತನ್ನನ್ನು ಇಸ್ರೇಲರ ಅರಸನನ್ನಾಗಿ ಆಗಲೇ ಮಾಡಿದ್ದಾನೆಂದು ದಾವೀದನಿಗೆ ತಿಳಿದುಬಂತು. ಆತನು ದಾವೀದನ ಸಾಮ್ರಾಜ್ಯವನ್ನು ವಿಸ್ತರಿಸಿ ಬಲಿಷ್ಠಗೊಳಿಸಿದನು. ಯೆಹೋವನು ದಾವೀದನನ್ನೂ ಇಸ್ರೇಲರನ್ನೂ ಪ್ರೀತಿಸಿದ್ದರಿಂದ ಹಾಗೆ ಮಾಡಿದನು.

ಜೆರುಸಲೇಮಿನಲ್ಲಿ ದಾವೀದನು ಇನ್ನೂ ಹಲವು ಸ್ತ್ರೀಯರನ್ನು ಮದುವೆಯಾದನು. ಅವನಿಗೆ ಅನೇಕ ಗಂಡುಹೆಣ್ಣು ಮಕ್ಕಳು ಹುಟ್ಟಿದರು. ಜೆರುಸಲೇಮಿನಲ್ಲಿ ಅವನಿಗೆ ಹುಟ್ಟಿದ ಮಕ್ಕಳು ಯಾರೆಂದರೆ: ಶಮ್ಮೂವ, ಶೋಬಾಬ್, ನಾತಾನ್, ಸೊಲೊಮೋನ, ಇಬ್ಹಾರ್, ಎಲೀಷೂವ, ಎಲ್ಪೆಲೆಟ್, ನೋಗಹ, ನೆಫೆಗ್, ಯಾಫೀಯ, ಎಲೀಷಾಮಾ, ಬೇಲ್ಯಾದ ಮತ್ತು ಎಲೀಫೆಲೆಟ್.

ದಾವೀದನು ಫಿಲಿಷ್ಟಿಯರನ್ನು ಸೋಲಿಸಿದ್ದು

ದಾವೀದನು ಇಸ್ರೇಲರ ಅರಸನಾಗಿ ಆರಿಸಲ್ಪಟ್ಟಿದ್ದನ್ನು ಕೇಳಿ ಎಲ್ಲಾ ಫಿಲಿಷ್ಟಿಯರು ಅವನೊಂದಿಗೆ ಯುದ್ಧಮಾಡಲು ಬಂದರು. ದಾವೀದನು ಇದನ್ನು ಅರಿತು ಯುದ್ಧಸನ್ನದ್ಧನಾಗಿ ಫಿಲಿಷ್ಟಿಯರ ವಿರುದ್ಧವಾಗಿ ಯುದ್ಧಕ್ಕೆ ಹೊರಟನು. ಫಿಲಿಷ್ಟಿಯರು ರೆಫಾಯೀಮ್ ತಗ್ಗಿನಲ್ಲಿ ವಾಸಿಸುತ್ತಿದ್ದ ಇಸ್ರೇಲರ ಮೇಲೆ ದಾಳಿಮಾಡಿ ಅವರದನ್ನೆಲ್ಲಾ ದೋಚಿಕೊಂಡರು. 10 ದಾವೀದನು ಯೆಹೋವನಿಗೆ, “ನಾನು ಫಿಲಿಷ್ಟಿಯರ ಸಂಗಡ ಯುದ್ಧಕ್ಕೆ ಹೋಗಬಹುದೇ?” ಎಂದು ವಿಚಾರಿಸಲಾಗಿ ಯೆಹೋವನು ಅವನಿಗೆ, “ಹೋಗು, ನಾನು ನಿನಗೆ ಫಿಲಿಷ್ಟಿಯರ ಮೇಲೆ ಜಯ ಕೊಡುವೆನು” ಎಂದು ಹೇಳಿದನು.

11 ಆಗ ದಾವೀದನೂ ಅವನ ಸಂಗಡಿಗರೂ ಬಾಳ್ ಪೆರಾಚೀಮ್ ಎಂಬ ಸ್ಥಳದವರೆಗೆ ಹೋಗಿ ಫಿಲಿಷ್ಟಿಯರನ್ನು ನಾಶಮಾಡಿದನು. “ದೇವರು ಕಟ್ಟೆಯೊಡೆದ ಪ್ರವಾಹದಂತೆ ತನ್ನ ಶತ್ರುಗಳ ಮೇಲೆ ದಾಳಿಮಾಡಿ ಅವರನ್ನು ನನ್ನ ಮುಖಾಂತರವಾಗಿ ನಾಶಮಾಡಿದ್ದಾನೆ” ಎಂದು ದಾವೀದನು ಹೇಳಿದನು. ಆದ್ದರಿಂದ ಆ ಸ್ಥಳಕ್ಕೆ ಬಾಳ್‌ಪೆರಾಚೀಮ್ ಎಂದು ಹೆಸರಾಯಿತು. 12 ಫಿಲಿಷ್ಟಿಯರು ತಮ್ಮ ವಿಗ್ರಹಗಳನ್ನು ಅಲ್ಲಿಯೇ ಬಿಟ್ಟು ಓಡಿಹೋಗಿದ್ದರು. ದಾವೀದನು ಅವುಗಳನ್ನೆಲ್ಲಾ ಒಟ್ಟುಸೇರಿಸಿ ಸುಡಿಸಿಬಿಟ್ಟನು.

ಫಿಲಿಷ್ಟಿಯರ ಮೇಲೆ ಇನ್ನೊಂದು ಜಯ

13 ಫಿಲಿಷ್ಟಿಯರು ಮತ್ತೆ ರೆಫಾಯೀಮ್ ತಗ್ಗಿನಲ್ಲಿ ವಾಸಮಾಡುತ್ತಿದ್ದ ಇಸ್ರೇಲರ ಮೇಲೆ ದಾಳಿಮಾಡಿದರು. 14 ದಾವೀದನು ಮತ್ತೆ ಯೆಹೋವನಿಗೆ ಪ್ರಾರ್ಥಿಸಿ ವಿಚಾರಿಸಿದನು. ಯೆಹೋವನು ಅವನ ಪ್ರಾರ್ಥನೆಗೆ ಉತ್ತರಕೊಟ್ಟು, “ದಾವೀದನೇ, ಫಿಲಿಷ್ಟಿಯರನ್ನು ಬೆಟ್ಟದ ಮೇಲೆ ನೀನು ಹಿಂಬಾಲಿಸದಿರು. ಅವರ ಹಿಂದಿನಿಂದ ಹೋಗಿ ಬಾಲ್ಸಾಮ್ ಮರಗಳ ಹಿಂದೆ ಅವಿತುಕೊಂಡಿರು. 15 ಒಬ್ಬ ಕಾವಲುಗಾರನನ್ನು ಮರಕ್ಕೆ ಹತ್ತಿಸು; ಫಿಲಿಷ್ಟಿಯರು ಬರುವ ಸಪ್ಪಳ ಕೇಳಿದೊಡನೆ ಅವರ ಮೇಲೆ ದಾಳಿಮಾಡು. ನಾನು ನಿನ್ನ ಮುಂದಾಗಿ ಹೋಗಿ ಫಿಲಿಷ್ಟಿಯರ ಸೈನ್ಯವನ್ನು ಸೋಲಿಸುವೆನು” ಎಂದು ಹೇಳಿದನು. 16 ಯೆಹೋವನು ಹೇಳಿದಂತೆಯೇ ದಾವೀದನು ಮಾಡಿದನು. ದಾವೀದನೂ ಅವನ ಸೈನಿಕರೂ ಫಿಲಿಷ್ಟಿಯರನ್ನು ಸೋಲಿಸಿ ಗಿಬ್ಯೋನಿನಿಂದ ಹಿಡಿದು ಗೆಜೆರ್ ಪಟ್ಟಣದವರೆಗೂ ಅವರನ್ನು ಕೊಲ್ಲುತ್ತಾ ಹೋದರು. 17 ಹೀಗೆ ದಾವೀದನು ಎಲ್ಲಾ ದೇಶಗಳಲ್ಲಿ ಹೆಸರುವಾಸಿಯಾದನು. ಎಲ್ಲಾ ಜನಾಂಗಗಳವರು ಅವನಿಗೆ ಭಯಪಡುವಂತೆ ಯೆಹೋವನು ಮಾಡಿದನು.

ಜೆರುಸಲೇಮಿನಲ್ಲಿ ಒಡಂಬಡಿಕೆಯ ಮಂಜೂಷ

15 ದಾವೀದನಗರದಲ್ಲಿ ದಾವೀದನು ತನಗಾಗಿ ಮನೆಗಳನ್ನು ಕಟ್ಟಿಸಿದನು. ಆಮೇಲೆ ಅವನು ಒಡಂಬಡಿಕೆಯ ಪೆಟ್ಟಿಗೆಯನ್ನು ಇಡಲು ಒಂದು ಸ್ಥಳವನ್ನು ಏರ್ಪಡಿಸಿ ಗುಡಾರವನ್ನು ನಿರ್ಮಿಸಿದನು. “ಲೇವಿಯರು ಮಾತ್ರ ಒಡಂಬಡಿಕೆಯ ಪೆಟ್ಟಿಗೆಯನ್ನು ಹೊತ್ತುಕೊಂಡು ಬರಬೇಕು. ಯೆಹೋವನು ಅವರನ್ನೇ ತನ್ನ ನಿರಂತರವಾದ ಸೇವೆಗಾಗಿ ನೇಮಿಸಿದ್ದಾನೆ” ಎಂದು ದಾವೀದನು ಹೇಳಿದನು.

ಎಲ್ಲಾ ಇಸ್ರೇಲರು ಜೆರುಸಲೇಮಿಗೆ ಬರಬೇಕೆಂದು ದಾವೀದನು ಪ್ರಕಟಿಸಿದನು. ಲೇವಿಯರು ಒಡಂಬಡಿಕೆಯ ಪೆಟ್ಟಿಗೆಯನ್ನು ಹೊತ್ತುಕೊಂಡು ದಾವೀದನು ಸಿದ್ಧಪಡಿಸಿದ್ದ ಸ್ಥಳಕ್ಕೆ ತಂದರು. ದಾವೀದನು ಆರೋನನ ಸಂತತಿಯವರನ್ನೂ ಲೇವಿಯರನ್ನೂ ಕರೆದನು.

ಕೆಹಾತ್ಯನ ಕುಲದವರಲ್ಲಿ ನೂರಿಪ್ಪತ್ತು ಮಂದಿ; ಊರಿಯೇಲ್ ಇವರ ಮುಖ್ಯಸ್ಥನು.

ಮೆರಾರೀಯ ಕುಲದವರಲ್ಲಿ ಇನ್ನೂರಿಪ್ಪತ್ತು ಮಂದಿ; ಇವರ ಮುಖ್ಯಸ್ಥನು ಅಸಾಯನು.

ಗೇರ್ಷೋಮನ ಕುಲದವರಲ್ಲಿ ನೂರಮೂವತ್ತು ಮಂದಿ; ಅವರ ನಾಯಕನು ಯೋವೇಲ್.

ಎಲೀಚಾಫಾನನ ಕುಲದವರಲ್ಲಿ ಇನ್ನೂರು ಮಂದಿ; ಅವರ ನಾಯಕನು ಶೆಮಾಯ.

ಹೆಬ್ರೋನಿನ ಕುಲದವರಲ್ಲಿ ಎಂಭತ್ತು ಮಂದಿ; ಎಲೀಯೇಲನು ಅವರ ನಾಯಕನು.

10 ಉಜ್ಜೀಯೇಲನ ಕುಲದವರಲ್ಲಿ ನೂರಹನ್ನೆರಡು ಮಂದಿ; ಅಮ್ಮೀನಾದಾಬನು ಅವರ ನಾಯಕ.

ದಾವೀದನು ಯಾಜಕರೊಂದಿಗೆ ಮತ್ತು ಲೇವಿಯರೊಂದಿಗೆ ಮಾತಾಡಿದ್ದು

11 ನಂತರ ದಾವೀದನು ಯಾಜಕರಾದ ಚಾದೋಕನನ್ನು ಮತ್ತು ಎಬ್ಯಾತಾರನನ್ನು ಮತ್ತು ಕೆಳಕಂಡ ಲೇವಿಯರನ್ನು ಸಹ ಕರೆಸಿದನು: ಊರೀಯೇಲ್, ಅಸಾಯ, ಯೋವೇಲ್, ಶೆಮಾಯ, ಎಲೀಯೇಲ್ ಮತ್ತು ಅಮ್ಮೀನಾದಾಬ್. 12 ದಾವೀದನು ಅವರಿಗೆ, “ನೀವು ಲೇವಿಕುಲದ ನಾಯಕರು. ನೀವೂ ಉಳಿದ ಲೇವಿಯರೂ ನಿಮ್ಮನ್ನು ಶುದ್ಧಪಡಿಸಿಕೊಳ್ಳಬೇಕು. ಅನಂತರ ಇಸ್ರೇಲಿನ ದೇವರಾದ ಯೆಹೋವನ ಒಡಂಬಡಿಕೆಯ ಪೆಟ್ಟಿಗೆಯನ್ನು ನಾನು ಅದಕ್ಕಾಗಿ ಸಿದ್ಧಮಾಡಿರುವ ಸ್ಥಳಕ್ಕೆ ತರಬೇಕು. 13 ಕಳೆದ ಸಲ, ನಾವು ಒಡಂಬಡಿಕೆಯ ಪೆಟ್ಟಿಗೆಯನ್ನು ಹೇಗೆ ತೆಗೆದುಕೊಂಡು ಹೋಗಬೇಕೆಂದು ಯೆಹೋವನಲ್ಲಿ ವಿಚಾರಿಸಲಿಲ್ಲ. ಲೇವಿಯರಾದ ನೀವು ಅದನ್ನು ಹೊರಲಿಲ್ಲ. ಆದ್ದರಿಂದಲೇ ನಮ್ಮ ದೇವರಾದ ಯೆಹೋವನು ನಮ್ಮನ್ನು ಶಿಕ್ಷಿಸಿದನು” ಎಂದು ಹೇಳಿದನು.

14 ಆಗ ಯಾಜಕರೂ ಲೇವಿಯರೂ ತಮ್ಮನ್ನು ಶುದ್ಧಿಮಾಡಿಕೊಂಡರು. ಇಸ್ರೇಲರ ದೇವರಾದ ಯೆಹೋವನ ಒಡಂಬಡಿಕೆಯ ಪೆಟ್ಟಿಗೆಯನ್ನು ತರಲು ತಮ್ಮನ್ನು ಸಿದ್ಧಪಡಿಸಿಕೊಂಡರು. 15 ಮೋಶೆಯು ಆಜ್ಞಾಪಿಸಿದ್ದ ಪ್ರಕಾರವೇ ಒಡಂಬಡಿಕೆಯ ಪೆಟ್ಟಿಗೆಯನ್ನು ಹೊತ್ತುಕೊಂಡು ಹೋಗಲು ಬೇಕಾದ ಕೋಲುಗಳನ್ನು ಲೇವಿಯರು ಸಿದ್ಧಪಡಿಸಿದರು. ಯೆಹೋವನು ಹೇಳಿದಂತೆಯೇ ಅವರು ಪೆಟ್ಟಿಗೆಯನ್ನು ಹೊತ್ತುಕೊಂಡು ಹೋದರು.

ಗಾಯಕರು

16 ದಾವೀದನು ಲೇವಿಯರಿಗೆ ತಮ್ಮ ಸಹೋದರರಾದ ಗಾಯಕರನ್ನು ಕರೆದುಕೊಂಡು ಬರಲು ಹೇಳಿದನು. ಹಾರ್ಪ್ ವಾದ್ಯಗಳನ್ನು, ಲೈರ್ ವಾದ್ಯಗಳನ್ನು ಮತ್ತು ತಾಳಗಳನ್ನು ತಂದು ಆನಂದಗೀತೆಗಳನ್ನು ಹಾಡುವಂತೆ ಅವರಿಗೆ ತಿಳಿಸಿದನು.

17 ಲೇವಿಯರು ಹೋಗಿ ಹೇಮಾನನನ್ನೂ ಅವನ ಸಹೋದರರನ್ನೂ ಆಸಾಫನನ್ನೂ ಏತಾನನನ್ನೂ ಕರೆತಂದರು. ಹೇಮಾನನು ಯೋವೇಲನ ಮಗ. ಆಸಾಫನು ಬೆರೆಕ್ಯನ ಮಗ. ಏತಾನನು ಕೂಷಾಯನ ಮಗ. ಇವರೆಲ್ಲಾ ಮೆರಾರೀಯ ಸಂತತಿಯವರು. 18 ಲೇವಿಯರ ಇನ್ನೊಂದು ಗುಂಪು ಇತ್ತು. ಅವರು ಯಾರೆಂದರೆ: ಜೆಕರ್ಯ, ಬೇನ್, ಯಾಜೀಯೇಲ್, ಶೆಮೀರಾಮೋತ್, ಯೆಹೀಯೇಲ್, ಉನ್ನೀ, ಎಲೀಯಾಬ್, ಬೆನಾಯ, ಮಾಸೇಯ, ಮತ್ತಿತ್ಯ, ಎಲೀಫೆಲೇಹು, ಮಿಕ್ನೇಯ, ಓಬೇದೆದೋಮ್ ಮತ್ತು ಯೆಗೀಯೇಲ್. ಇವರೆಲ್ಲಾ ಲೇವಿಯರ ಕಾವಲುಗಾರರಾಗಿದ್ದರು.

19 ಗಾಯಕರಾದ ಹೇಮಾನ್, ಆಸಾಫ್ ಮತ್ತು ಏತಾನ್ ಕಂಚಿನ ತಾಳವನ್ನು ಬಾರಿಸಿದರು. 20 ಜೆಕರ್ಯ, ಅಜೀಯೇಲ್, ಶೆಮೀರಾಮೋತ್, ಯೆಹೀಯೇಲ್, ಉನ್ನೀ, ಎಲೀಯಾಬ್, ಮಾಸೇಯ ಮತ್ತು ಬೆನಾಯ ಇವರುಗಳು ಅಲಾಮೋತ್ ಹಾರ್ಪ್ ವಾದ್ಯಗಳನ್ನು ಬಾರಿಸಿದರು. 21 ಮತ್ತಿತ್ಯ, ಎಲೀಫೆಲೇಹು, ಮಿಕ್ನೇಯ, ಓಬೇದೆದೋಮ್, ಯೆಗೀಯೇಲ್ ಮತ್ತು ಅಜಜ್ಯ ಇವರುಗಳು ಶೆಮೀನೀತ್ ಹಾರ್ಪ್ ವಾದ್ಯಗಳನ್ನು ಬಾರಿಸಿದರು. ಇದು ಇವರ ಖಾಯಂ ಕೆಲಸವಾಗಿತ್ತು. 22 ಲೇವಿಯರ ನಾಯಕನಾದ ಕೆನನ್ಯನು ಗಾಯಕರ ಮುಖಂಡನಾಗಿದ್ದನು. ಇವನು ತುಂಬಾ ಅನುಭವಶಾಲಿಯಾಗಿದ್ದನು.

23 ಬೆರಕ್ಯನು ಮತ್ತು ಎಲ್ಕಾನನು ಒಡಂಬಡಿಕೆ ಪೆಟ್ಟಿಗೆಯ ಕಾವಲುಗಾರರಾಗಿದ್ದರು. 24 ಯಾಜಕರಾದ ಶೆಬನ್ಯ, ಯೋಷಾಫಾಟ್, ನೆತನೇಲ್, ಅಮಾಸೈ, ಜೆಕರ್ಯ, ಬೆನಾಯ ಮತ್ತು ಎಲೀಯೆಜೆರ್ ಇವರಿಗೆ ಯೆಹೋವನ ಒಡಂಬಡಿಕೆಯ ಪೆಟ್ಟಿಗೆಯನ್ನು ಹೊತ್ತುಕೊಂಡು ಹೋಗುವಾಗ ತುತ್ತೂರಿ ಊದುವ ಕೆಲಸವನ್ನು ಕೊಟ್ಟನು. ಓಬೇದೆದೋಮ್ ಮತ್ತು ಯೆಹೀಯ ಒಡಂಬಡಿಕೆಯ ಪೆಟ್ಟಿಗೆಗೆ ಕಾವಲುಗಾರರಾದರು.

25 ದಾವೀದನೂ ಇಸ್ರೇಲಿನ ಹಿರಿಯರೂ ಮುಖಂಡರೂ ಒಡಂಬಡಿಕೆಯ ಪೆಟ್ಟಿಗೆಯನ್ನು ತರಲು ಹೋದರು. ಅವರು ಅದನ್ನು ಓಬೇದೆದೋಮನ ಮನೆಯಿಂದ ಹೊರತಂದರು. ಎಲ್ಲರಿಗೂ ಸಂತೋಷವಾಯಿತು. 26 ಒಡಂಬಡಿಕೆಯ ಪೆಟ್ಟಿಗೆಯನ್ನು ಹೊತ್ತಿದ್ದ ಲೇವಿಯರಿಗೆ ದೇವರು ಸಹಾಯ ಮಾಡಿದನು. ಅಲ್ಲಿ ಏಳು ಹೋರಿಗಳನ್ನೂ ಏಳು ಟಗರುಗಳನ್ನೂ ಯಜ್ಞ ಮಾಡಿದರು. 27 ಒಡಂಬಡಿಕೆಯ ಪೆಟ್ಟಿಗೆಯನ್ನು ಹೊತ್ತ ಯಾಜಕರು ಉತ್ತಮವಾದ ನಾರಿನ ನಿಲುವಂಗಿಗಳನ್ನು ಧರಿಸಿದ್ದರು. ಕೆನನ್ಯನೂ ಅವನ ಜೊತೆಯಲ್ಲಿದ್ದ ಗಾಯಕರೆಲ್ಲರೂ ಉತ್ತಮವಾದ ನಾರಿನ ಬಟ್ಟೆಗಳನ್ನು ಧರಿಸಿದ್ದರು. ದಾವೀದನೂ ಉತ್ತಮವಾದ ನಾರಿನ ಬಟ್ಟೆ ಧರಿಸಿ, ಉತ್ತಮವಾದ ನಾರಿನಿಂದ ಮಾಡಿದ ಏಫೋದನ್ನು ಅದರ ಮೇಲೆ ಧರಿಸಿಕೊಂಡಿದ್ದನು.

28 ಹೀಗೆ ಎಲ್ಲಾ ಇಸ್ರೇಲರು ದೇವರ ಒಡಂಬಡಿಕೆಯ ಪೆಟ್ಟಿಗೆಯನ್ನು ಹೊತ್ತುಕೊಂಡು ಬಂದರು. ಅವರು ಕೊಂಬುಗಳನ್ನೂ ತುತ್ತೂರಿಗಳನ್ನೂ ಊದಿದರು; ಹಾರ್ಪ್ ವಾದ್ಯಗಳನ್ನು, ಲೈರ್ ವಾದ್ಯಗಳನ್ನು ಮತ್ತು ತಾಳಗಳನ್ನು ಬಾರಿಸಿದರು; ಆನಂದದಿಂದ ಆರ್ಭಟಿಸಿದರು.

29 ದಾವೀದನ ನಗರದಲ್ಲಿ ಮೆರವಣಿಗೆಯು ಬಂದಾಗ ದಾವೀದನ ಹೆಂಡತಿಯಾದ ಮೀಕಲಳು ಕಿಟಿಕಿಯಿಂದ ನೋಡಿದಳು. (ಇವಳು ಸೌಲನ ಮಗಳು.) ದಾವೀದನು ಕುಣಿಯುತ್ತಾ ಹಾಡುವದನ್ನು ಆಕೆ ಕಂಡಳು. ತನ್ನ ಗಂಡನ ಮೇಲೆ ಆಕೆಗಿದ್ದ ಗೌರವವು ಕಡಿಮೆಯಾಯಿತು. ಯಾಕೆಂದರೆ ದಾವೀದನು ಒಬ್ಬ ಸಾಮಾನ್ಯ ವ್ಯಕ್ತಿಯಂತೆ ಬುದ್ಧಿ ಇಲ್ಲದ ಕೆಲಸ ಮಾಡುತ್ತಿರುವನೆಂದು ಆಕೆಯು ಅಂದುಕೊಂಡಳು.

ಯೋಹಾನ 7:1-27

ಯೇಸು ಮತ್ತು ಆತನ ಸಹೋದರರು

ಇದಾದ ಮೇಲೆ, ಯೇಸು ಗಲಿಲಾಯ ಪ್ರಾಂತ್ಯದಲ್ಲೆಲ್ಲಾ ಸಂಚರಿಸಿದನು. ಜುದೇಯದಲ್ಲಿ ಸಂಚರಿಸಲು ಯೇಸುವಿಗೆ ಇಷ್ಟವಿರಲಿಲ್ಲ. ಏಕೆಂದರೆ ಅಲ್ಲಿನ ಯೆಹೂದ್ಯರು ಆತನನ್ನು ಕೊಲ್ಲಲು ಅವಕಾಶಕ್ಕಾಗಿ ಕಾಯುತ್ತಿದ್ದರು. ಆಗ ಯೆಹೂದ್ಯರ ಪರ್ಣಕುಟೀರಗಳ ಹಬ್ಬದ ಸಮಯವಾಗಿತ್ತು. ಆದ್ದರಿಂದ ಯೇಸುವಿನ ಸಹೋದರರು ಆತನಿಗೆ, “ನೀನು ಇಲ್ಲಿಂದ ಜುದೇಯಕ್ಕೆ ಹೋಗು. ಆಗ ಅಲ್ಲಿರುವ ನಿನ್ನ ಹಿಂಬಾಲಕರು ನೀನು ಮಾಡುವ ಅದ್ಭುತಕಾರ್ಯಗಳನ್ನು ನೋಡುವರು. ತನ್ನ ಬಗ್ಗೆ ಜನರಿಗೆ ತಿಳಿಯಬೇಕೆಂದು ಅಪೇಕ್ಷಿಸುವವನು ತಾನು ಮಾಡುವ ಕಾರ್ಯಗಳನ್ನು ಮರೆಮಾಡಕೂಡದು. ನಿನ್ನನ್ನು ಈ ಲೋಕಕ್ಕೆ ತೋರಿಸಿಕೊ. ನೀನು ಮಾಡುವ ಕಾರ್ಯಗಳನ್ನು ಅವರು ನೋಡಲಿ” ಎಂದು ಹೇಳಿದರು. (ಯೇಸುವಿನ ಸಹೋದರರು ಸಹ ಆತನನ್ನು ನಂಬಲಿಲ್ಲ.)

ಯೇಸು ತನ್ನ ಸಹೋದರರಿಗೆ, “ನನಗೆ ಸರಿಯಾದ ಸಮಯವು ಇನ್ನೂ ಬಂದಿಲ್ಲ. ನಿಮಗಾದರೋ ಹೋಗಲು ಎಲ್ಲಾ ಸಮಯವೂ ಸರಿಯಾಗಿರುತ್ತದೆ. ಈ ಲೋಕವು ನಿಮ್ಮನ್ನು ದ್ವೇಷಿಸಲಾರದು. ಆದರೆ ಈ ಲೋಕವು ನನ್ನನ್ನು ದ್ವೇಷಿಸುತ್ತದೆ. ಏಕೆಂದರೆ ನಾನು ಈ ಲೋಕದ ಜನರಿಗೆ, ಅವರು ಮಾಡುತ್ತಿರುವುದು ಕೆಟ್ಟಕಾರ್ಯಗಳೆಂದು ಹೇಳುವೆನು. ಆದ್ದರಿಂದ ನೀವು ಹಬ್ಬಕ್ಕೆ ಹೋಗಿರಿ. ನಾನು ಈ ಹಬ್ಬಕ್ಕೆ ಹೋಗುವುದಿಲ್ಲ. ನನಗೆ ಸರಿಯಾದ ಸಮಯವು ಇನ್ನೂ ಬಂದಿಲ್ಲ” ಎಂದು ಹೇಳಿದನು. ಯೇಸು ಹೀಗೆ ಹೇಳಿ ಗಲಿಲಾಯದಲ್ಲೇ ಉಳಿದುಕೊಂಡನು.

10 ಆದ್ದರಿಂದ ಯೇಸುವಿನ ಸಹೋದರರು ಹಬ್ಬಕ್ಕಾಗಿ ಹೊರಟರು. ಅವರು ಹೋದನಂತರ ಆತನು ಸಹ ಗುಟ್ಟಾಗಿಹೋದನು. 11 ಹಬ್ಬದಲ್ಲಿ ಯೆಹೂದ್ಯರು, “ಆತನು ಎಲ್ಲಿದ್ದಾನೆ” ಎಂದು ಕೇಳುತ್ತಾ ಆತನಿಗಾಗಿ ಹುಡುಕುತ್ತಿದ್ದರು.

12 ಅಲ್ಲಿ ಜನರ ದೊಡ್ಡ ಗುಂಪೊಂದು ನೆರೆದಿದ್ದಿತು. ಆ ಜನರಲ್ಲಿ ಅನೇಕರು ಯೇಸುವಿನ ಬಗ್ಗೆ ಒಬ್ಬರಿಗೊಬ್ಬರು ಮಾತಾಡಿಕೊಳ್ಳುತ್ತಿದ್ದರು. “ಆತನು ಒಳ್ಳೆಯವನು” ಎಂದು ಕೆಲವರು ಹೇಳಿದರು. ಇತರರು, “ಇಲ್ಲ, ಆತನು ಜನರನ್ನು ಮೋಸಗೊಳಿಸುತ್ತಿದ್ದಾನೆ” ಎಂದು ಟೀಕಿಸಿದರು. 13 ಆದರೆ ಯೇಸುವಿನ ಬಗ್ಗೆ ಬಹಿರಂಗವಾಗಿ ಮಾತಾಡಲು ಆ ಜನರಲ್ಲಿ ಯಾರಿಗೂ ಸಾಕಷ್ಟು ಧೈರ್ಯವಿರಲಿಲ್ಲ. ಜನರು ಯೆಹೂದ್ಯ ನಾಯಕರುಗಳಿಗೆ ಹೆದರಿಕೊಂಡಿದ್ದರು.

ಯೆಹೂದ್ಯರ ಹಬ್ಬದಲ್ಲಿ ಯೇಸುವಿನ ಉಪದೇಶ

14 ಹಬ್ಬದಲ್ಲಿ ಸುಮಾರು ಅರ್ಧಭಾಗ ಮುಗಿದುಹೋಗಿತ್ತು. ಆಗ ಯೇಸು ದೇವಾಲಯಕ್ಕೆ ಹೋಗಿ ಉಪದೇಶಿಸಲು ಆರಂಭಿಸಿದನು. 15 ಯೆಹೂದ್ಯರಿಗೆ ಆಶ್ಚರ್ಯವಾಯಿತು. “ಈ ಮನುಷ್ಯನು ಎಂದೂ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಲಿಲ್ಲ. ಇವನು ಇಷ್ಟೆಲ್ಲವನ್ನೂ ಹೇಗೆ ಕಲಿತನು?” ಎಂದು ವಿಚಾರಿಸತೊಡಗಿದರು.

16 ಯೇಸು, “ನಾನು ಉಪದೇಶಿಸುವ ಸಂಗತಿಗಳು ನನ್ನ ಸ್ವಂತವಾದವುಗಳಲ್ಲ. ನನ್ನ ಉಪದೇಶವು ನನ್ನನ್ನು ಕಳುಹಿಸಿದಾತನಿಂದ (ದೇವರು) ಬರುತ್ತದೆ. 17 ದೇವರು ಅಪೇಕ್ಷಿಸುವುದನ್ನು ಮಾಡಬಯಸುವವನಿಗೆ ನನ್ನ ಉಪದೇಶವು ದೇವರಿಂದ ಬಂದದ್ದೇ ಹೊರತು ನನ್ನ ಸ್ವಂತದ್ದಲ್ಲವೆಂದು ಗೊತ್ತಾಗುವುದು. 18 ತನ್ನ ಸ್ವಂತ ಆಲೋಚನೆಗಳನ್ನು ಉಪದೇಶಿಸುವವನು, ತನಗೇ ಘನತೆಯನ್ನು ಉಂಟುಮಾಡಿಕೊಳ್ಳಲು ಪ್ರಯತ್ನಿಸುತ್ತಾನೆ. ಆದರೆ ತನ್ನನ್ನು ಕಳುಹಿಸಿದಾತನಿಗೆ ಘನತೆಯನ್ನು ಉಂಟುಮಾಡಲು ಪ್ರಯತ್ನಿಸುವವನು ಸತ್ಯವನ್ನೇ ಹೇಳುತ್ತಾನೆ. ಆತನಲ್ಲಿ ಯಾವ ಸುಳ್ಳೂ ಇಲ್ಲ. 19 ಮೋಶೆಯು ನಿಮಗೆ ಧರ್ಮಶಾಸ್ತ್ರವನ್ನು ಕೊಟ್ಟನು. ಹೌದಲ್ಲವೇ? ಆದರೆ ನಿಮ್ಮಲ್ಲಿ ಒಬ್ಬರೂ ಧರ್ಮಶಾಸ್ತ್ರಕ್ಕೆ ವಿಧೇಯರಾಗುತ್ತಿಲ್ಲ. ನೀವು ನನ್ನನ್ನು ಕೊಲ್ಲಲು ಏಕೆ ಪ್ರಯತ್ನಿಸುತ್ತಿದ್ದೀರಿ?” ಎಂದು ಉತ್ತರಕೊಟ್ಟನು.

20 ಜನರು, “ದೆವ್ವವು ನಿನ್ನೊಳಗೆ ಸೇರಿಕೊಂಡು ನಿನ್ನನ್ನು ಹುಚ್ಚನನ್ನಾಗಿ ಮಾಡಿದೆ! ನಾವು ನಿನ್ನನ್ನು ಕೊಲ್ಲಲು ಪ್ರಯತ್ನಿಸುತ್ತಿಲ್ಲ” ಎಂದು ಉತ್ತರಕೊಟ್ಟರು.

21 ಯೇಸು ಅವರಿಗೆ, “ನಾನು ಮಾಡಿದ ಒಂದು ಅದ್ಭುತಕಾರ್ಯವನ್ನು ಕಂಡು ನೀವೆಲ್ಲರೂ ಆಶ್ಚರ್ಯಗೊಂಡಿದ್ದೀರಿ. 22 ಮೋಶೆಯು ನಿಮಗೆ ಸುನ್ನತಿಯ ಬಗ್ಗೆ ಕಟ್ಟಳೆಯನ್ನು ಕೊಟ್ಟನು. (ಆದರೆ ನಿಜವಾಗಿಯೂ ಸುನ್ನತಿ ಎಂಬ ಸಂಸ್ಕಾರವನ್ನು ನಿಮಗೆ ಕೊಟ್ಟವನು ಮೋಶೆಯಲ್ಲ. ಅವನಿಗಿಂತ ಮೊದಲೇ ಜೀವಿಸಿದ್ದ ನಮ್ಮ ಜನರಿಂದ ಈ ಸಂಸ್ಕಾರವು ಬಂದಿದೆ.) ಆದ್ದರಿಂದ ಕೆಲವೊಮ್ಮೆ ನೀವು ಸಬ್ಬತ್‌ದಿನದಲ್ಲಿ ಮಗುವಿಗೆ ಸುನ್ನತಿಮಾಡುತ್ತೀರಿ. 23 ಒಬ್ಬ ವ್ಯಕ್ತಿಯು ಮೋಶೆಯ ಕಟ್ಟಳೆಗೆ ವಿಧೇಯನಾಗುವುದಕ್ಕಾಗಿ ಸಬ್ಬತ್‌ದಿನದಂದು ಸುನ್ನತಿ ಮಾಡಬಹುದು ಎಂಬುದನ್ನು ಇದು ತೋರಿಸುತ್ತದೆ. ಹೀಗಿರುವಲ್ಲಿ, ಸಬ್ಬತ್‌ದಿನದಂದು ಒಬ್ಬನ ಇಡೀ ದೇಹವನ್ನು ಗುಣಪಡಿಸಿದ್ದಕ್ಕೋಸ್ಕರ ನೀವು ಏಕೆ ಕೋಪಗೊಂಡಿದ್ದೀರಿ? 24 ಹೊರತೋರಿಕೆಯ ಆಧಾರದ ಮೇಲೆ ತೀರ್ಪುಮಾಡದೆ ನ್ಯಾಯಾನುಸಾರವಾಗಿ ತೀರ್ಪುಮಾಡಿರಿ” ಎಂದು ಹೇಳಿದನು.

ಯೇಸುವೇ ಕ್ರಿಸ್ತನೋ?

25 ಬಳಿಕ, ಜೆರುಸಲೇಮಿನಲ್ಲಿ ವಾಸವಾಗಿದ್ದ ಕೆಲವರು, “ಅವರು ಕೊಲ್ಲಲು ಪ್ರಯತ್ನಿಸುತ್ತಿರುವುದು ಈ ವ್ಯಕ್ತಿಯನ್ನೇ 26 ಆದರೆ ಇವನು ಪ್ರತಿಯೊಬ್ಬರಿಗೂ ಕಾಣುವ ಮತ್ತು ಕೇಳುವ ಸ್ಥಳದಲ್ಲಿ ಉಪದೇಶಿಸುತ್ತಿದ್ದಾನೆ. ಅಲ್ಲದೆ ಉಪದೇಶ ಮಾಡದಂತೆ ಯಾರೂ ಅವನನ್ನು ತಡೆಯುತ್ತಿಲ್ಲ. ಒಂದುವೇಳೆ ಈತನೇ ಕ್ರಿಸ್ತನು ಎಂಬ ನಿರ್ಧಾರಕ್ಕೆ ನಾಯಕರುಗಳು ಬಂದಿರಬಹುದು. 27 ಆದರೆ ಈ ಮನುಷ್ಯನ ಮನೆಯು ಎಲ್ಲಿದೆ ಎಂಬುದು ನಮಗೆ ಗೊತ್ತಿದೆ. ಅಲ್ಲದೆ, ಕ್ರಿಸ್ತನು ಬಂದಾಗ, ಆತನು ಎಲ್ಲಿಂದ ಬಂದನೆಂದು ಯಾರಿಗೂ ತಿಳಿಯುವುದಿಲ್ಲ” ಎಂದು ಮಾತಾಡಿಕೊಂಡರು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International