Print Page Options
Previous Prev Day Next DayNext

Old/New Testament

Each day includes a passage from both the Old Testament and New Testament.
Duration: 365 days
Kannada Holy Bible: Easy-to-Read Version (KERV)
Version
2 ರಾಜರುಗಳು 24-25

ರಾಜನಾದ ನೆಬೂಕದ್ನೆಚ್ಚರನು ಯೆಹೂದಕ್ಕೆ ಬರುವನು

24 ಯೆಹೋಯಾಕೀಮನ ಕಾಲದಲ್ಲಿ ಬಾಬಿಲೋನಿನ ರಾಜನಾದ ನೆಬೂಕದ್ನೆಚ್ಚರನು ಯೆಹೂದ ದೇಶಕ್ಕೆ ಬಂದನು. ಯೆಹೋಯಾಕೀಮನು ಮೂರು ವರ್ಷಗಳವರೆಗೆ ನೆಬೂಕದ್ನೆಚ್ಚರನ ಸೇವೆಮಾಡಿದನು. ನಂತರ ಯೆಹೋಯಾಕೀಮನು ನೆಬೂಕದ್ನೆಚ್ಚರನಿಗೆ ವಿರುದ್ಧವಾಗಿ ದಂಗೆ ಎದ್ದು ಅವನ ಆಳ್ವಿಕೆಯಿಂದ ದೂರವಾದನು. ಯೆಹೋವನು ಬಾಬಿಲೋನಿನವರನ್ನು, ಅರಾಮ್ಯರನ್ನು, ಮೋವಾಬ್ಯರನ್ನು ಮತ್ತು ಅಮ್ಮೋನಿಯರನ್ನು ಯೆಹೋಯಾಕೀಮನ ವಿರುದ್ಧ ಹೋರಾಡಲು ಕಳುಹಿಸಿದನು. ಯೆಹೋವನು ಯೆಹೂದವನ್ನು ನಾಶಗೊಳಿಸಲು ಈ ಗುಂಪುಗಳನ್ನು ಕಳುಹಿಸಿದನು. ಯೆಹೋವನು ತನ್ನ ಸೇವಕರಾದ ಪ್ರವಾದಿಗಳ ಮೂಲಕ ತಿಳಿಸಿದ್ದಂತೆಯೇ ಇದು ಸಂಭವಿಸಿತು.

ಆತನು ಯೆಹೂದ್ಯರನ್ನು ತನ್ನ ಸನ್ನಿಧಿಯಿಂದ ತೆಗೆದುಹಾಕಬೇಕೆಂದಿದ್ದ ಕಾರಣ ಆತನ ಆಜ್ಞೆಯ ಪ್ರಕಾರ ಈ ಶಿಕ್ಷೆಯು ಅವರಿಗಾಯಿತು. ಜೆರುಸಲೇಮನ್ನು ನಿರಪರಾಧದ ರಕ್ತದಿಂದ ತುಂಬಿಸಿದ ಮನಸ್ಸೆಯ ದುಷ್ಕೃತ್ಯಗಳನ್ನು ಯೆಹೋವನು ಕ್ಷಮಿಸಲಿಲ್ಲ.

“ಯೆಹೂದದ ರಾಜರುಗಳ ಇತಿಹಾಸ” ಎಂಬ ಪುಸ್ತಕದಲ್ಲಿ ಯೆಹೋಯಾಕೀಮನು ಮಾಡಿದ ಇತರ ಕಾರ್ಯಗಳನ್ನು ಬರೆಯಲಾಗಿದೆ. ಯೆಹೋಯಾಕೀಮನು ತೀರಿಕೊಂಡಾಗ ಅವನನ್ನು ಅವನ ಪೂರ್ವಿಕರ ಜೊತೆಯಲ್ಲಿ ಸಮಾಧಿಮಾಡಿದರು. ಯೆಹೋಯಾಕೀಮನ ಮಗನಾದ ಯೆಹೋಯಾಖೀನನು ಅವನ ನಂತರ ಹೊಸ ರಾಜನಾದನು.

ಈಜಿಪ್ಟಿನ ರಾಜನು ಈಜಿಪ್ಟನ್ನು ಬಿಟ್ಟು ಹೊರಗೆ ಹೋಗಲಿಲ್ಲ. ಏಕೆಂದರೆ ಬಾಬಿಲೋನ್ ರಾಜನು, ಈಜಿಪ್ಟಿನ ಹಳ್ಳದಿಂದ ಯೂಫ್ರೇಟೀಸ್ ನದಿಯವರೆಗಿನ ದೇಶವನ್ನೆಲ್ಲಾ ಆಕ್ರಮಿಸಿಕೊಂಡಿದ್ದನು.

ನೆಬೂಕದ್ನೆಚ್ಚರನು ಜೆರುಸಲೇಮನ್ನು ಆಕ್ರಮಿಸಿಕೊಂಡನು

ಯೆಹೋಯಾಖೀನನು ಆಳಲಾರಂಭಿಸಿದಾಗ ಅವನಿಗೆ ಹದಿನೆಂಟು ವರ್ಷ ವಯಸ್ಸಾಗಿತ್ತು. ಅವನು ಜೆರುಸಲೇಮಿನಲ್ಲಿ ಮೂರು ತಿಂಗಳ ಕಾಲ ಆಳಿದನು. ಅವನ ತಾಯಿಯು ಜೆರುಸಲೇಮಿನ ಎಲ್ನಾತಾನನ ಮಗಳಾದ ನೆಹುಷ್ಟಾ ಎಂಬ ಹೆಸರಿನವಳು. ಯೆಹೋವನು ಕೆಟ್ಟದ್ದೆಂದು ಹೇಳಿದ ಕಾರ್ಯಗಳನ್ನು ಯೆಹೋಯಾಖೀನನು ಮಾಡಿದನು. ಅವನು ತನ್ನ ತಂದೆಯು ಮಾಡಿದಂತಹ ಕಾರ್ಯಗಳನ್ನೆಲ್ಲ ಮಾಡಿದನು.

10 ಆ ಸಮಯದಲ್ಲಿ ಬಾಬಿಲೋನ್ ರಾಜನಾದ ನೆಬೂಕದ್ನೆಚ್ಚರನ ಅಧಿಕಾರಿಗಳು ಜೆರುಸಲೇಮಿಗೆ ಮುತ್ತಿಗೆ ಹಾಕಿದರು. 11 ಆಗ ಬಾಬಿಲೋನ್ ರಾಜನಾದ ನೆಬೂಕದ್ನೆಚ್ಚರನು ಆ ನಗರಕ್ಕೆ ಬಂದನು. 12 ಯೆಹೂದದ ರಾಜನಾದ ಯೆಹೋಯಾಖೀನನು ಬಾಬಿಲೋನ್ ರಾಜನನ್ನು ಭೇಟಿಮಾಡಲು ಹೋದನು. ಯೆಹೋಯಾಖೀನನ ತಾಯಿ, ಅವನ ಅಧಿಕಾರಿಗಳು, ನಾಯಕರು ಮತ್ತು ಸಿಬ್ಬಂದಿಯೆಲ್ಲವೂ ಅವನೊಂದಿಗೆ ಹೋದರು. ಆಗ ಬಾಬಿಲೋನ್ ರಾಜ ಯೆಹೋಯಾಖೀನನನ್ನು ಸೆರೆಹಿಡಿದನು. ಇದು ಸಂಭವಿಸಿದ್ದು ನೆಬೂಕದ್ನೆಚ್ಚರನ ಆಳ್ವಿಕೆಯ ಎಂಟನೆಯ ವರ್ಷದಲ್ಲಿ.

13 ನೆಬೂಕದ್ನೆಚ್ಚರನು ಜೆರುಸಲೇಮಿನ ದೇವಾಲಯದಲ್ಲಿದ್ದ ಭಂಡಾರವನ್ನೆಲ್ಲಾ ಮತ್ತು ರಾಜನ ಅರಮನೆಯಲ್ಲಿದ್ದ ಭಂಡಾರವನ್ನೆಲ್ಲಾ ತೆಗೆದುಕೊಂಡು ಹೋದನು. ಇಸ್ರೇಲರ ರಾಜನಾದ ಸೊಲೊಮೋನನು ದೇವಾಲಯದಲ್ಲಿಟ್ಟಿದ್ದ ಬಂಗಾರವನ್ನೆಲ್ಲಾ ನೆಬೂಕದ್ನೆಚ್ಚರನು ತೆಗೆದುಕೊಂಡನು. ಯೆಹೋವನು ಹೇಳಿದ್ದಂತೆಯೇ ಇದು ಸಂಭವಿಸಿತು.

14 ನೆಬೂಕದ್ನೆಚ್ಚರನು ಜೆರುಸಲೇಮಿನ ಜನರನ್ನೆಲ್ಲಾ ಸೆರೆಹಿಡಿದನು. ಅವನು ಎಲ್ಲಾ ನಾಯಕರನ್ನು ಮತ್ತು ಹಣವಂತರನ್ನು ಸೆರೆಹಿಡಿದನು. ಅವನು ಹತ್ತು ಸಾವಿರ ಜನರನ್ನು ಸೆರೆಯಾಳುಗಳನ್ನಾಗಿ ಒಯ್ದನು. ನೆಬೂಕದ್ನೆಚ್ಚರನು ನುರಿತ ತಜ್ಞರನ್ನು ಮತ್ತು ಕಮ್ಮಾರರನ್ನು ಕರೆದೊಯ್ದನು. ಸಾಮಾನ್ಯ ಜನರನ್ನೂ ಕಡುಬಡವರನ್ನೂ ಬಿಟ್ಟು ಉಳಿದ ಯಾರನ್ನೂ ಬಿಡಲಿಲ್ಲ. 15 ನೆಬೂಕದ್ನೆಚ್ಚರನು ಯೆಹೋಯಾಖೀನನನ್ನು ಸೆರೆಯಾಳಾಗಿ ಬಾಬಿಲೋನಿಗೆ ಕರೆದೊಯ್ದನು. ನೆಬೂಕದ್ನೆಚ್ಚರನು ರಾಜನ ತಾಯಿಯನ್ನು, ಅವನ ಪತ್ನಿಯರನ್ನು, ಅಧಿಕಾರಿಗಳನ್ನು ಮತ್ತು ದೇಶದ ಪ್ರತಿಷ್ಠಿತರನ್ನು ಕರೆದೊಯ್ದನು. ನೆಬೂಕದ್ನೆಚ್ಚರನು ಅವರನ್ನು ಜೆರುಸಲೇಮಿನಿಂದ ಬಾಬಿಲೋನಿಗೆ ಸೆರೆಯಾಳುಗಳನ್ನಾಗಿ ಒಯ್ದನು. 16 ಬಾಬಿಲೋನ್ ರಾಜನು ಏಳು ಸಾವಿರ ಮಂದಿ ಸೈನಿಕರನ್ನು ಮತ್ತು ಒಂದು ಸಾವಿರ ಮಂದಿ ನುರಿತ ತಜ್ಞರನ್ನು ಮತ್ತು ಕಮ್ಮಾರರನ್ನು ಕರೆದೊಯ್ದನು. ಈ ಜನರೆಲ್ಲರೂ ಸೈನಿಕರಾಗಿದ್ದು, ಯುದ್ಧಗಳಲ್ಲಿ ಹೋರಾಡಲು ಸಮರ್ಥರಾಗಿದ್ದರು. ಬಾಬಿಲೋನ್ ರಾಜನು ಅವರನ್ನು ಸೆರೆಯಾಳುಗಳನ್ನಾಗಿ ಬಾಬಿಲೋನಿಗೆ ಒಯ್ದನು.

ರಾಜನಾದ ಚಿದ್ಕೀಯನು

17 ಬಾಬಿಲೋನ್ ರಾಜನು ಮತ್ತನ್ಯನನ್ನು ಹೊಸ ರಾಜನನ್ನಾಗಿ ನೇಮಿಸಿದನು. ಅವನು ಯೆಹೋಯಾಖೀನನ ಸ್ಥಳವನ್ನು ಪಡೆದನು. ಮತ್ತನ್ಯನು ಯೆಹೋಯಾಖೀನನ ಚಿಕ್ಕಪ್ಪ. ಬಾಬಿಲೋನ್ ರಾಜನು ಮತ್ತನ್ಯನ ಹೆಸರನ್ನು ಚಿದ್ಕೀಯ ಎಂದು ಬದಲಾಯಿಸಿದನು. 18 ಚಿದ್ಕೀಯನು ಆಳಲಾರಂಭಿಸಿದಾಗ ಅವನಿಗೆ ಇಪ್ಪತ್ತೊಂದು ವರ್ಷ ವಯಸ್ಸಾಗಿತ್ತು. ಅವನು ಜೆರುಸಲೇಮಿನಲ್ಲಿ ಹನ್ನೊಂದು ವರ್ಷ ಆಳಿದನು. ಅವನ ತಾಯಿಯು ಲಿಬ್ನದ ಯೆರೆಮೀಯನ ಮಗಳಾದ ಹಮೂಟಲ್ ಎಂಬ ಹೆಸರಿನವಳು. 19 ಯೆಹೋವನು ಕೆಟ್ಟದ್ದೆಂದು ಹೇಳಿದ ಕಾರ್ಯಗಳನ್ನು ಚಿದ್ಕೀಯನು ಮಾಡಿದನು. ಚಿದ್ಕೀಯನು ಯೆಹೋಯಾಖೀನನು ಮಾಡಿದಂಥ ಕಾರ್ಯಗಳನ್ನು ಮಾಡಿದನು. 20 ಯೆಹೋವನ ಕೋಪದಿಂದ ಯೆಹೂದಕ್ಕೆ ಮತ್ತು ಜೆರುಸಲೇಮಿಗೆ ಇವೆಲ್ಲವೂ ಸಂಭವಿಸಿದವು. ಹೀಗೆ ಯೆಹೋವನು ಅವರನ್ನು ತನ್ನಿಂದ ದೂರಸರಿಸಿದನು. ಚಿದ್ಕೀಯನು ಬಾಬಿಲೋನ್ ರಾಜನಿಗೆ ವಿರುದ್ಧವಾಗಿ ದಂಗೆ ಎದ್ದನು.

ನೆಬೂಕದ್ನೆಚ್ಚರನು ಚಿದ್ಕೀಯನ ಆಳ್ವಿಕೆಯನ್ನು ಕೊನೆಗೊಳಿಸಿದನು

25 ಆದ್ದರಿಂದ ಬಾಬಿಲೋನ್ ರಾಜನಾದ ನೆಬೂಕದ್ನೆಚ್ಚರನು ಜೆರುಸಲೇಮಿನ ವಿರುದ್ಧ ಯುದ್ಧಮಾಡಲು ತನ್ನ ಎಲ್ಲಾ ಸೇನೆಯೊಡನೆ ಬಂದನು. ನೆಬೂಕದ್ನೆಚ್ಚರನು ಜೆರುಸಲೇಮಿನ ಸುತ್ತಲೂ ಪಾಳೆಯ ಮಾಡಿಕೊಂಡು ಮಣ್ಣಿನ ದಿಬ್ಬವನ್ನು ನಿರ್ಮಿಸಿದನು. ಅವನು ನಗರದೊಳಕ್ಕೆ ಹೋಗುವ ಮತ್ತು ನಗರದಿಂದ ಬರುವ ಜನರನ್ನು ತಡೆಯಲು ಹೀಗೆ ಮಾಡಿದನು. ಇದು ನೆಬೂಕದ್ನೆಚ್ಚರನ ಆಳ್ವಿಕೆಯ ಒಂಭತ್ತನೆಯ ವರ್ಷದ ಹತ್ತನೆಯ ತಿಂಗಳಿನ ಹತ್ತನೆಯ ದಿನದಂದು ಸಂಭವಿಸಿತು. ನೆಬೂಕದ್ನೆಚ್ಚರನ ಸೇನೆಯು ಜೆರುಸಲೇಮಿನ ಸುತ್ತಲೂ, ಚಿದ್ಕೀಯನು ಯೆಹೂದದ ರಾಜನಾದ ಹನ್ನೊಂದನೆಯ ವರ್ಷದವರೆಗೆ ನೆಲೆಸಿತು. ನಾಲ್ಕನೆಯ ತಿಂಗಳ ಒಂಭತ್ತನೆಯ ದಿನದಂದು ನಗರದಲ್ಲಿ ಭೀಕರ ಬರಗಾಲವಿತ್ತು. ಅಲ್ಲಿನ ಸಾಮಾನ್ಯರಿಗೆ ಆಹಾರವೇನೂ ಇರಲಿಲ್ಲ.

ಆಗ ನೆಬೂಕದ್ನೆಚ್ಚರನ ಸೇನೆಯು ನಗರದ ಗೋಡೆಯಲ್ಲಿ ಒಂದು ರಂಧ್ರವನ್ನು ಕೊರೆದರು. ಅಂದಿನ ರಾತ್ರಿ ರಾಜನಾದ ಚಿದ್ಕೀಯ ಮತ್ತು ಅವನ ಸೈನಿಕರೆಲ್ಲರೂ ಓಡಿಹೋದರು. ಅವರು ರಾಜನ ತೋಟದ ಎರಡು ಗೋಡೆಗಳ ಮಧ್ಯಭಾಗದ ರಹಸ್ಯ ಬಾಗಿಲಿನ ಮೂಲಕ ಓಡಿಹೋದರು. ಬಾಬಿಲೋನ್ ಸೇನೆಯು ನಗರವನ್ನು ಸುತ್ತುವರಿದಿತ್ತು. ಆದರೆ ಚಿದ್ಕೀಯ ಮತ್ತು ಅವನ ಸೇನೆಯು ಮರುಭೂಮಿಯ ರಸ್ತೆಯಲ್ಲಿ ತಪ್ಪಿಸಿಕೊಂಡರು. ಬಾಬಿಲೋನ್ ಸೇನೆಯು ರಾಜನಾದ ಚಿದ್ಕೀಯನನ್ನು ಅಟ್ಟಿಸಿಕೊಂಡು ಹೋಗಿ, ಅವನನ್ನು ಜೆರಿಕೊವಿನ ಸಮೀಪದಲ್ಲಿ ಹಿಡಿದರು.

ಬಾಬಿಲೋನಿನವರು ರಾಜನಾದ ಚಿದ್ಕೀಯನನ್ನು ರಿಬ್ಲದಲ್ಲಿ ಬಾಬಿಲೋನ್ ರಾಜನಿಗೆ ಒಪ್ಪಿಸಿದರು. ಬಾಬಿಲೋನ್ ರಾಜನು ಚಿದ್ಕೀಯನನ್ನು ದಂಡಿಸಲು ತೀರ್ಮಾನಿಸಿದನು. ಅವರು ಚಿದ್ಕೀಯನ ಮಕ್ಕಳನ್ನು ಅವನ ಎದುರಿನಲ್ಲಿಯೇ ಕೊಂದುಹಾಕಿದರು. ನಂತರ ಅವರು ಚಿದ್ಕೀಯನ ಕಣ್ಣುಗಳನ್ನು ಕಿತ್ತುಹಾಕಿದರು. ಅವರು ಅವನನ್ನು ಸರಪಣಿಗಳಿಂದ ಬಂಧಿಸಿ, ಬಾಬಿಲೋನಿಗೆ ಕೊಂಡೊಯ್ದರು.

ಜೆರುಸಲೇಮನ್ನು ನಾಶಗೊಳಿಸಲಾಯಿತು

ಬಾಬಿಲೋನ್ ರಾಜನಾಗಿದ್ದ ನೆಬೂಕದ್ನೆಚ್ಚರನು ತನ್ನ ಆಳ್ವಿಕೆಯ ಹತ್ತೊಂಭತ್ತನೆಯ ವರ್ಷದ ಐದನೆಯ ತಿಂಗಳ ಏಳನೆಯ ದಿನದಂದು ಜೆರುಸಲೇಮಿಗೆ ಬಂದನು. ನೆಬೂಜರದಾನ ಎಂಬವನು ನೆಬೂಕದ್ನೆಚ್ಚರನ ರಕ್ಷಕ ದಳದ ಅಧಿಪತಿಯಾಗಿದ್ದನು. ನೆಬೂಜರದಾನನು ದೇವಾಲಯವನ್ನೂ ರಾಜನ ಅರಮನೆಯನ್ನೂ ಜೆರುಸಲೇಮಿನಲ್ಲಿದ್ದ ಮನೆಗಳನ್ನೆಲ್ಲಾ ಸುಟ್ಟುಹಾಕಿದನು. ಅವನು ಮಹಾಸೌಧಗಳನ್ನು ನಾಶಗೊಳಿಸಿದನು.

10 ನಂತರ ನೆಬೂಜರದಾನನೊಂದಿಗಿದ್ದ ಬಾಬಿಲೋನ್ ಸೈನ್ಯವು ಜೆರುಸಲೇಮಿನ ಸುತ್ತಲೂ ಇದ್ದ ಗೋಡೆಯನ್ನು ಕೆಡವಿಹಾಕಿತು. 11 ಆ ನಗರದಲ್ಲಿ ಉಳಿದಿದ್ದ ಜನರನ್ನೆಲ್ಲಾ ನೆಬೂಜರದಾನನು ಸೆರೆಹಿಡಿದನು. ರಾಜನಾದ ನೆಬೂಕದ್ನೆಚ್ಚರನಿಗೆ ವಿಧೇಯರಾಗಿರಲು ಕೆಲವು ಜನರು ಒಪ್ಪಿದರು. ಆದರೆ ನೆಬೂಜರದಾನನು ಆ ಜನರನ್ನೆಲ್ಲಾ ಸೆರೆಹಿಡಿದನು. ಅವನು ನಗರದಲ್ಲಿದ್ದ ಪ್ರತಿಯೊಬ್ಬರನ್ನೂ ಕರೆದೊಯ್ದನು. 12 ಸಾಮಾನ್ಯ ಜನರಲ್ಲಿ ತೀರ ಬಡವರಾದ ಜನರನ್ನು ಮಾತ್ರ ನೆಬೂಜರದಾನನು ಅಲ್ಲಿಯೇ ನೆಲೆಸಲು ಬಿಟ್ಟನು. ಆ ಬಡಜನರು ಅಲ್ಲಿಯೇ ನೆಲೆಸಿ, ಬೇಸಾಯಮಾಡಿ ದ್ರಾಕ್ಷಿಯನ್ನು ಬೆಳೆಯಲು ಅವರನ್ನು ಬಿಟ್ಟುಬಿಟ್ಟನು.

13 ಬಾಬಿಲೋನ್ ಸೈನಿಕರು ದೇವಾಲಯದಲ್ಲಿದ್ದ ತಾಮ್ರದ ಸ್ತಂಭಗಳನ್ನು ಚೂರುಚೂರು ಮಾಡಿದರು. ಅವರು ಯೆಹೋವನ ಆಲಯದಲ್ಲಿದ್ದ ತಾಮ್ರದ ದೊಡ್ಡ ತೊಟ್ಟಿಯನ್ನು ಮತ್ತು ತಾಮ್ರದ ಬಂಡಿಯನ್ನು ಚೂರುಚೂರಾಗಿ ಒಡೆದುಹಾಕಿದರು. ನಂತರ ಬಾಬಿಲೋನ್ ಸೈನಿಕರು ತಾಮ್ರದ ಚೂರುಗಳನ್ನು ಬಾಬಿಲೋನಿಗೆ ತೆಗೆದುಕೊಂಡು ಹೋದರು. 14 ಬಾಬಿಲೋನಿನವರು ದೇವಾಲಯದಲ್ಲಿ ಉಪಯೋಗಿಸುತ್ತಿದ್ದ ಬೋಗುಣಿ, ಸಲಿಕೆ, ಕತ್ತರಿ, ಧೂಪಾರತಿ ಮೊದಲಾದ ತಾಮ್ರದ ವಸ್ತುಗಳನ್ನು ತೆಗೆದುಕೊಂಡು ಹೋದರು. 15 ನೆಬೂಜರದಾನನು ಅಗ್ಗಿಷ್ಟಿಕೆಗಳನ್ನು ಮತ್ತು ಬಟ್ಟಲುಗಳನ್ನು ತೆಗೆದುಕೊಂಡು ಹೋದನು. ಅವನು ಬಂಗಾರದ ವಸ್ತುಗಳನ್ನು ಬಂಗಾರಕ್ಕಾಗಿಯೂ ಬೆಳ್ಳಿಯ ವಸ್ತುಗಳನ್ನು ಬೆಳ್ಳಿಗಾಗಿಯೂ ತೆಗೆದುಕೊಂಡು ಹೋದನು. 16 ಅವನು ತೆಗೆದುಕೊಂಡು ಹೋದ ವಸ್ತುಗಳ ಪಟ್ಟಿಯು ಹೀಗಿದೆ: ಎರಡು ತಾಮ್ರ ಕಂಬಗಳು, ಒಂದು ತೊಟ್ಟಿ ಮತ್ತು ದೇವಾಲಯಕ್ಕೆ ಸೊಲೊಮೋನನು ನಿರ್ಮಿಸಿದ್ದ ಬಂಡಿಗಳು. ಈ ವಸ್ತುಗಳ ತಾಮ್ರವು ತೂಕ ಮಾಡಲಾರದಷ್ಟು ಅಧಿಕವಾಗಿತ್ತು. 17 ಪ್ರತಿಯೊಂದು ಕಂಬವೂ ಸುಮಾರು ಇಪ್ಪತ್ತೇಳು ಅಡಿ ಉದ್ದವಾಗಿತ್ತು. ಕಂಬಗಳ ಮೇಲಿದ್ದ ಬೋದಿಗೆಗಳನ್ನು ತಾಮ್ರದಿಂದ ನಿರ್ಮಿಸಿದ್ದರು. ಪ್ರತಿಯೊಂದು ಬೋದಿಗೆಯೂ ನಾಲ್ಕುವರೆ ಅಡಿ ಉದ್ದವಾಗಿತ್ತು. ಪ್ರತಿಯೊಂದು ಬೋದಿಗೆಯ ಮೇಲೆ ಜಾಲರಿಯ ಆಕಾರವಿತ್ತು ಮತ್ತು ದಾಳಿಂಬೆ ಹಣ್ಣುಗಳ ಆಕಾರಗಳಿದ್ದವು. ಇವೆಲ್ಲವುಗಳನ್ನು ತಾಮ್ರದಿಂದಲೇ ಮಾಡಿದ್ದರು. ಎರಡು ಕಂಬಗಳೂ ಒಂದೇ ರೀತಿಯ ಆಕಾರದಲ್ಲಿದ್ದವು.

ಯೆಹೂದದ ಜನರನ್ನು ಸೆರೆಯಾಳುಗಳನ್ನಾಗಿಸಿ ಕರೆದೊಯ್ದರು

18 ನಂತರ, ನೆಬೂಜರದಾನನು, ಪ್ರಧಾನಯಾಜಕನಾದ ಸೆರಾಯನನ್ನು, ಎರಡನೆಯ ಯಾಜಕನಾದ ಚೆಫನ್ಯನನ್ನು ಮತ್ತು ಮೂವರು ದ್ವಾರಪಾಲಕರನ್ನು ಹಿಡಿದುಕೊಂಡು ಹೋದನು.

19 ನೆಬೂಜರದಾನನು ಸೇನೆಯ ಸೇನಾಧಿಕಾರಿಯೊಬ್ಬನನ್ನು ಹಿಡಿದುಕೊಂಡು ಹೋದನು. ನೆಬೂಜರದಾನನು ನಗರದಲ್ಲಿ ಸಿಕ್ಕಿದ ರಾಜನ ಐದು ಮಂದಿ ಸಲಹೆಗಾರರನ್ನು ಹಿಡಿದೊಯ್ದನು. ಅವನು ಸೇನೆಯ ಅಧಿಕಾರಿಯ ಕಾರ್ಯದರ್ಶಿಯನ್ನು ಹಿಡಿದೊಯ್ದನು. ಸೇನಾಧಿಕಾರಿಯ ಕಾರ್ಯದರ್ಶಿಯು ಸಾಮಾನ್ಯ ಜನರನ್ನು ಒಟ್ಟುಗೂಡಿಸಿ, ಅವರನ್ನು ಸೈನಿಕರನ್ನಾಗಿ ಆರಿಸುತ್ತಿದ್ದನು. ನೆಬೂಜರದಾನನು ನಗರದಲ್ಲಿ ಸಿಕ್ಕಿದ ಇತರ ಅರವತ್ತು ಮಂದಿಯನ್ನು ಹಿಡಿದೊಯ್ದನು. ಈ ಜನರು ಸಾಮಾನ್ಯ ಜನರಾಗಿದ್ದರು.

20 ನಂತರ ನೆಬೂಜರದಾನನು ಆ ಜನರನ್ನೆಲ್ಲ ರಿಬ್ಲದಲ್ಲಿದ್ದ ಬಾಬಿಲೋನ್ ರಾಜನ ಬಳಿಗೆ ಒಯ್ದನು. 21 ಬಾಬಿಲೋನ್ ರಾಜನು ಹಮಾತ್ ದೇಶದ ರಿಬ್ಲದಲ್ಲಿ ಅವರನ್ನೆಲ್ಲ ಕೊಂದುಹಾಕಿದನು. ಹೀಗೆ ಯೆಹೂದದ ಜನರನ್ನೆಲ್ಲ ಅವರ ದೇಶದಿಂದ ಸೆರೆಯಾಳುಗಳನ್ನಾಗಿಸಿ ಹಿಡಿದೊಯ್ದರು.

ನೆಬೂಕದ್ನೆಚ್ಚರನು ಗೆದಲ್ಯನನ್ನು ಯೆಹೂದದ ರಾಜ್ಯಪಾಲನನ್ನಾಗಿ ನೇಮಿಸಿದನು

22 ಬಾಬಿಲೋನ್ ರಾಜನಾದ ನೆಬೂಕದ್ನೆಚ್ಚರನು ಯೆಹೂದ ದೇಶದಲ್ಲಿ ಕೆಲವು ಜನರನ್ನು ಬಿಟ್ಟನು. ಅವನು ಅಹೀಕಾಮನ ಮಗನೂ ಶಾಫಾನನ ಮೊಮ್ಮಗನೂ ಆದ ಗೆದಲ್ಯನನ್ನು ಯೆಹೂದದಲ್ಲಿ ಜನರಿಗೆ ರಾಜ್ಯಪಾಲನನ್ನಾಗಿ ಮಾಡಿದನು.

23 ಬಾಬಿಲೋನ್ ರಾಜನು ಗೆದಲ್ಯನನ್ನು ರಾಜ್ಯಪಾಲನನ್ನಾಗಿ ನೇಮಿಸಿರುವುದನ್ನು ಸೇನಾಧಿಪತಿಗಳು ಮತ್ತು ಅವನ ಜನರು ಕೇಳಿ ಮಿಚ್ಛದಲ್ಲಿದ್ದ ಗೆದಲ್ಯನ ಬಳಿಗೆ ಬಂದರು. ಈ ಸೇನಾಧಿಪತಿಗಳು ಯಾರೆಂದರೆ: ನೆತನ್ಯನ ಮಗನಾದ ಇಷ್ಮಾಯೇಲ, ಕಾರೇಹನ ಮಗನಾದ ಯೋಹಾನಾನ್, ನೆಟೋಫದವನೂ ತನ್ಹುಮೆತನ ಮಗನೂ ಆದ ಸೆರಾಯ, ಮಾಕಾತ್ಯರಲ್ಲಿ ಒಬ್ಬನ ಮಗನಾದ ಯಾಜನ್ಯ. 24 ನಂತರ ಗೆದಲ್ಯನು ಈ ಸೇನಾಧಿಪತಿಗಳಿಗೆ ಮತ್ತು ಅವರ ಜನರಿಗೆ, “ಬಾಬಿಲೋನ್ ಅಧಿಕಾರಿಗಳಿಗೆ ನೀವು ಹೆದರಬೇಡಿ. ನೀವು ದೇಶದಲ್ಲಿ ವಾಸಿಸುತ್ತ ಬಾಬಿಲೋನ್ ರಾಜನ ಸೇವೆಯನ್ನು ಮಾಡಿ. ಆಗ ನಿಮಗೇನೂ ತೊಂದರೆಯಾಗುವುದಿಲ್ಲ” ಎಂದು ಪ್ರಮಾಣ ಮಾಡಿದನು.

25 ಆದರೆ ಏಳನೆಯ ತಿಂಗಳಲ್ಲಿ, ರಾಜನ ಕುಲದವನೂ ಎಲೀಷಾಮನ ಮೊಮ್ಮಗನೂ ನೆತನ್ಯನ ಮಗನೂ ಆದ ಇಷ್ಮಾಯೇಲನು ಹತ್ತು ಜನರೊಂದಿಗೆ ಬಂದು ಗೆದಲ್ಯನನ್ನು ಕೊಂದುಹಾಕಿದನು. ಇಷ್ಮಾಯೇಲ ಮತ್ತು ಅವನ ಜನರು ಮಿಚ್ಛದಲ್ಲಿ ಗೆದಲ್ಯನ ಜೊತೆಗಿದ್ದ ಯೆಹೂದ್ಯರನ್ನು ಮತ್ತು ಬಾಬಿಲೋನಿನವರನ್ನು ಕೊಂದುಹಾಕಿದರು. 26 ಇದಾದ ನಂತರ, ಕನಿಷ್ಠರಾದವರೂ ಮತ್ತು ಅತಿ ಮುಖ್ಯರೂ ಆದ ಜನರೆಲ್ಲರು ಮತ್ತು ಸೇನೆಯ ನಾಯಕರು ಬಾಬಿಲೋನಿನವರಿಗೆ ಹೆದರಿಕೊಂಡು ಈಜಿಪ್ಟಿಗೆ ಓಡಿಹೋದರು.

27 ಬಾಬಿಲೋನ್ ರಾಜನಾದ ಎವೀಲ್ಮೆರೋದಕನು, ಯೆಹೂದದ ರಾಜನಾದ ಯೆಹೋಯಾಖೀನನನ್ನು ಸೆರೆಯಿಂದ ಬಿಡುಗಡೆ ಮಾಡಿದನು. ಯೆಹೋಯಾಖೀನನನ್ನು ಸೆರೆಹಿಡಿದ ಮೂವತ್ತೇಳನೆಯ ವರ್ಷದ ನಂತರ ಇದು ಸಂಭವಿಸಿತು. ಎವೀಲ್ಮೆರೋದಕನ ಆಳ್ವಿಕೆಯ ಹನ್ನೆರಡನೆ ತಿಂಗಳಿನ ಇಪ್ಪತ್ತೇಳನೆಯ ದಿನದಂದು ಇದು ಸಂಭವಿಸಿತು. 28 ಎವೀಲ್ಮೆರೋದಕನು ಯೆಹೋಯಾಖೀನನೊಂದಿಗೆ ದಯೆಯಿಂದ ಮಾತನಾಡಿದನು. ಎವೀಲ್ಮೆರೋದಕನು ಯೆಹೋಯಾಖೀನನ ಸಿಂಹಾಸನವನ್ನು ಬಾಬಿಲೋನಿನಲ್ಲಿ ತನ್ನೊಂದಿಗಿದ್ದ ರಾಜರುಗಳ ಸಿಂಹಾಸನಗಳಿಗಿಂತ ಎತ್ತರದಲ್ಲಿರಿಸಿದನು. 29 ಎವೀಲ್ಮೆರೋದಕನು ಯೆಹೋಯಾಖೀನನ ಸೆರೆವಾಸದ ಬಟ್ಟೆಗಳನ್ನು ತೆಗೆಸಿ ಹೊಸ ಬಟ್ಟೆಗಳನ್ನು ತೊಡಿಸಿದನು. ಯೆಹೋಯಾಖೀನನು ಬದುಕಿರುವ ತನಕ ತನ್ನ ಪಂಕ್ತಿಯಲ್ಲಿ ಊಟಮಾಡಲು ಎವೀಲ್ಮೆರೋದಕನು ಅವಕಾಶ ಮಾಡಿಕೊಟ್ಟನು. 30 ಹೀಗೆ ರಾಜನಾದ ಎವೀಲ್ಮೆರೋದಕನ ಪಂಕ್ತಿಯಲ್ಲಿ ಯೆಹೋಯಾಖೀನನು ತನ್ನ ಉಳಿದ ಜೀವಿತದಲ್ಲಿ ಊಟಮಾಡಿದನು.

ಯೋಹಾನ 5:1-24

ಕೊಳದ ಬಳಿ ಗುಣಹೊಂದಿದ ರೋಗಿ

ತರುವಾಯ ಯೇಸು ಯೆಹೂದ್ಯರ ಒಂದು ಹಬ್ಬಕ್ಕಾಗಿ ಜೆರುಸಲೇಮಿಗೆ ಹೋದನು. ಜೆರುಸಲೇಮಿನಲ್ಲಿ ಐದು ಮಂಟಪಗಳಿಂದ ಕೂಡಿದ ಒಂದು ಕೊಳವಿದೆ. ಯೆಹೂದ್ಯರ ಭಾಷೆಯಲ್ಲಿ ಅದಕ್ಕೆ “ಬೆತ್ಸಥ” ಎಂದು ಕರೆಯುತ್ತಾರೆ. ಈ ಕೊಳವು “ಕುರಿಬಾಗಿಲು” ಎಂಬ ಸ್ಥಳದ ಸಮೀಪದಲ್ಲಿದೆ. ಕೊಳದ ಬಳಿಯಲ್ಲಿದ್ದ ಮಂಟಪಗಳಲ್ಲಿ ಅನೇಕ ರೋಗಿಗಳು ಬಿದ್ದುಕೊಂಡಿರುತ್ತಿದ್ದರು. ಅವರಲ್ಲಿ ಕೆಲವರು ಕುರಡರಾಗಿದ್ದರು, ಕೆಲವರು ಕುಂಟರಾಗಿದ್ದರು, ಮತ್ತೆ ಕೆಲವರು, ಪಾರ್ಶ್ವವಾಯು ರೋಗಿಗಳಾಗಿದ್ದರು.[a] [b] ಮೂವತ್ತೆಂಟು ವರ್ಷಗಳಿಂದ ರೋಗಿಯಾಗಿದ್ದ ಒಬ್ಬನು ಅಲ್ಲಿ ಬಿದ್ದುಕೊಂಡಿದ್ದನು. ಯೇಸು ಅವನನ್ನು ನೋಡಿದನು. ಅವನು ಬಹುಕಾಲದಿಂದ ರೋಗಿಯಾಗಿರುವುದು ಆತನಿಗೆ ಗೊತ್ತಿತ್ತು. ಆದ್ದರಿಂದ ಆತನು ಅವನಿಗೆ, “ಗುಣಹೊಂದಲು ನಿನಗೆ ಅಪೇಕ್ಷೆ ಇದೆಯಾ?” ಎಂದು ಕೇಳಿದನು.

ಆ ರೋಗಿಯು, “ಅಯ್ಯಾ, ನೀರು ಉಕ್ಕುವಾಗ ಕೊಳದೊಳಗೆ ಇಳಿದುಹೋಗಲು ನನಗೆ ಯಾರೂ ಸಹಾಯ ಮಾಡುವುದಿಲ್ಲ. ನಾನು ಎಲ್ಲರಿಗಿಂತ ಮೊದಲೇ ನೀರಿಗೆ ಇಳಿಯಲು ಪ್ರಯತ್ನಿಸುವೆ. ಆದರೆ ಪ್ರತಿಸಲವೂ ನನಗಿಂತ ಮೊದಲೇ ಮತ್ತೊಬ್ಬನು ಇಳಿದುಬಿಡುತ್ತಾನೆ” ಎಂದು ಹೇಳಿದನು.

ಆಗ ಯೇಸು, “ಎದ್ದುನಿಲ್ಲು! ನಿನ್ನ ಹಾಸಿಗೆಯನ್ನು ಎತ್ತಿಕೊಂಡು ನಡೆ” ಎಂದು ಹೇಳಿದನು. ಆ ಕ್ಷಣವೇ ಆ ಮನುಷ್ಯನು ಗುಣಹೊಂದಿ, ತನ್ನ ಹಾಸಿಗೆಯನ್ನು ಎತ್ತಿಕೊಂಡು ನಡೆದನು.

ಇದೆಲ್ಲಾ ನಡೆದದ್ದು ಸಬ್ಬತ್‌ದಿನದಲ್ಲಿ. 10 ಆದ್ದರಿಂದ ಯೆಹೂದ್ಯರು ಗುಣಹೊಂದಿದ ಆ ವ್ಯಕ್ತಿಗೆ, “ಇಂದು ಸಬ್ಬತ್‌ದಿನ. ನೀನು ಸಬ್ಬತ್‌ದಿನದಲ್ಲಿ[c] ಹಾಸಿಗೆಯನ್ನು ಹೊತ್ತುಕೊಂಡು ಹೋಗುವುದು ನಮ್ಮ ಧರ್ಮಶಾಸ್ತ್ರಕ್ಕೆ ವಿರುದ್ಧವಾದದ್ದು” ಎಂದರು.

11 ಅದಕ್ಕೆ ಅವನು, “ನನ್ನನ್ನು ಗುಣಪಡಿಸಿದವನೇ, ‘ನಿನ್ನ ಹಾಸಿಗೆಯನ್ನು ಎತ್ತಿಕೊಂಡು ನಡೆ’ ಎಂದು ಹೇಳಿದನು” ಎಂಬುದಾಗಿ ಉತ್ತರಿಸಿದನು.

12 ಅದಕ್ಕೆ ಅವರು, “ನಿನ್ನ ಹಾಸಿಗೆಯನ್ನು ಎತ್ತಿಕೊಂಡು ನಡೆಯಲು ನಿನಗೆ ಹೇಳಿದವನು ಯಾರು?” ಎಂದು ಕೇಳಿದರು.

13 ಆದರೆ ಗುಣಹೊಂದಿದ್ದ ವ್ಯಕ್ತಿಗೆ ತನ್ನನ್ನು ಗುಣಪಡಿಸಿದವನು ಯಾರೆಂಬುದು ಗೊತ್ತಿರಲಿಲ್ಲ. ಆ ಸ್ಥಳದಲ್ಲಿ ಅನೇಕ ಜನರಿದ್ದರು. ಯೇಸು ಆ ಸ್ಥಳದಿಂದ ನುಸುಳಿಕೊಂಡು ಹೊರಟುಹೋದನು.

14 ಅನಂತರ ಯೇಸು ಆ ಮನುಷ್ಯನನ್ನು ದೇವಾಲಯದಲ್ಲಿ ಕಂಡು ಅವನಿಗೆ, “ನೋಡು, ಈಗ ನೀನು ಗುಣಹೊಂದಿರುವೆ. ಆದರೆ ಪಾಪ ಮಾಡುವುದನ್ನು ಬಿಟ್ಟುಬಿಡು. ಇಲ್ಲದಿದ್ದರೆ ಹೆಚ್ಚಿನ ಕೇಡು ನಿನಗೆ ಸಂಭವಿಸಬಹುದು!” ಎಂದು ಹೇಳಿದನು.

15 ಆಗ ಆ ಮನುಷ್ಯನು ಆ ಯೆಹೂದ್ಯರ ಬಳಿಗೆ ಹೋಗಿ ತನ್ನನ್ನು ಗುಣಪಡಿಸಿದವನು ಯೇಸುವೇ ಎಂದು ತಿಳಿಸಿದನು.

16 ಯೇಸು ಈ ಕಾರ್ಯಗಳನ್ನು ಸಬ್ಬತ್‌ದಿನದಲ್ಲಿ ಮಾಡುತ್ತಿದ್ದನು. ಈ ಕಾರಣದಿಂದಾಗಿ ಯೆಹೂದ್ಯರು ಯೇಸುವನ್ನು ಹಿಂಸಿಸತೊಡಗಿದರು. 17 ಆದರೆ ಯೇಸು ಅವರಿಗೆ, “ನನ್ನ ತಂದೆಯು ತನ್ನ ಕಾರ್ಯವನ್ನು ಎಂದಿಗೂ ನಿಲ್ಲಿಸುವುದಿಲ್ಲ. ಆದ್ದರಿಂದ ನಾನು ಸಹ ಕಾರ್ಯನಿರತನಾಗಿದ್ದೇನೆ” ಎಂದು ತನ್ನನ್ನು ಪ್ರತಿಪಾದಿಸಿಕೊಂಡನು.

18 ಯೇಸು ಸಬ್ಬತ್ತನ್ನು ಉಲ್ಲಂಘಿಸಿದ್ದಲ್ಲದೆ ದೇವರನ್ನು ತನ್ನ ತಂದೆಯೆಂದು ಹೇಳಿಕೊಂಡು ತನ್ನನ್ನು ದೇವರಿಗೆ ಸರಿಸಮಾನನನ್ನಾಗಿ ಮಾಡಿಕೊಳ್ಳುತ್ತಿದ್ದಾನೆಂದು ಯೆಹೂದ್ಯರು ಆತನನ್ನು ಕೊಲ್ಲಲು ಮತ್ತಷ್ಟು ಪ್ರಯತ್ನಿಸಿದರು.

ಯೇಸುವಿಗೆ ದೇವರ ಅಧಿಕಾರವಿದೆ

19 ಅದಕ್ಕೆ ಉತ್ತರವಾಗಿ ಆತನು ಹೀಗೆಂದನು: “ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ಮಗನು ತನ್ನಷ್ಟಕ್ಕೆ ತಾನೇ ಏನೂ ಮಾಡಲಾರನು; ತಂದೆಯು ಮಾಡುವುದನ್ನು ಕಂಡು ತಾನೂ ಹಾಗೆಯೇ ಮಾಡುತ್ತಾನೆ. ತಂದೆಯು ಮಾಡುವ ಕಾರ್ಯಗಳನ್ನೇ ಮಗನೂ ಮಾಡುತ್ತಾನೆ. 20 ತಂದೆಯು ಮಗನನ್ನು ಪ್ರೀತಿಸುವನು ಮತ್ತು ತಾನು ಮಾಡುವ ಎಲ್ಲಾ ಕಾರ್ಯಗಳನ್ನು ಮಗನಿಗೆ ತೋರಿಸುವನು. ಆದರೆ ಇದಕ್ಕಿಂತಲೂ ಹೆಚ್ಚಿನ ಕಾರ್ಯಗಳನ್ನು ತಂದೆಯು ಮಗನಿಗೆ ತೋರಿಸುವನು. ಆಗ ನೀವೆಲ್ಲರೂ ಆಶ್ಚರ್ಯಚಕಿತರಾಗುವಿರಿ. 21 ತಂದೆಯು ಸತ್ತವರನ್ನು ಎಬ್ಬಿಸಿ ಅವರಿಗೆ ಜೀವ ಕೊಡುತ್ತಾನೆ. ಅದೇ ರೀತಿಯಲ್ಲಿ ಮಗನು ತಾನು ಬಯಸಿದವರಿಗೆ ಜೀವವನ್ನು ಕೊಡುತ್ತಾನೆ.

22 “ಇದಲ್ಲದೆ ತಂದೆಯು ಯಾರಿಗೂ ತೀರ್ಪು ಮಾಡುವುದಿಲ್ಲ. ಆದರೆ ತಂದೆಯು ತೀರ್ಪು ಮಾಡುವ ಅಧಿಕಾರವನ್ನೆಲ್ಲಾ ಮಗನಿಗೆ ಕೊಟ್ಟಿದ್ದಾನೆ. 23 ಜನರು ತಂದೆಯನ್ನು ಗೌರವಿಸುವಂತೆ ಮಗನನ್ನು ಗೌರವಿಸಬೇಕೆಂದು ದೇವರು ಹೀಗೆ ಮಾಡಿದನು. ಮಗನನ್ನು ಸನ್ಮಾನಿಸದವನು ಆತನನ್ನು ಕಳುಹಿಸಿರುವ ತಂದೆಯನ್ನೂ ಸನ್ಮಾನಿಸದವನಾಗಿದ್ದಾನೆ.

24 “ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ನನ್ನ ಮಾತನ್ನು ಕೇಳಿ ನನ್ನನ್ನು ಕಳುಹಿಸಿದಾತನನ್ನು ನಂಬುವವನು ನಿತ್ಯಜೀವವನ್ನು ಹೊಂದಿದ್ದಾನೆ. ಅವನಿಗೆ ಅಪರಾಧಿಯೆಂಬ ತೀರ್ಪಾಗುವುದಿಲ್ಲ. ಅವನು ಈಗಾಗಲೇ ಮರಣವನ್ನು ದಾಟಿ ಜೀವಕ್ಕೆ ಪ್ರವೇಶಿಸಿದ್ದಾನೆ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International