Old/New Testament
ಯೋಷೀಯನು ಯೆಹೂದದಲ್ಲಿ ತನ್ನ ಆಳ್ವಿಕೆಯನ್ನು ಆರಂಭಿಸುವನು
22 ಯೋಷೀಯನು ಆಳಲಾರಂಭಿಸಿದಾಗ ಅವನಿಗೆ ಎಂಟು ವರ್ಷ ವಯಸ್ಸಾಗಿತ್ತು. ಅವನು ಮೂವತ್ತೊಂದು ವರ್ಷ ಜೆರುಸಲೇಮಿನಲ್ಲಿ ಆಳಿದನು. ಅವನ ತಾಯಿಯ ಹೆಸರು ಯದೀದಾ. ಇವಳು ಬೊಚ್ಕತ್ ಎಂಬ ಸ್ಥಳದ ಅದಾಯ ಎಂಬವನ ಮಗಳು. 2 ಯೆಹೋವನು ಯೋಗ್ಯವೆಂದು ಹೇಳಿದ ಕಾರ್ಯಗಳನ್ನು ಯೋಷೀಯನು ಮಾಡಿದನು. ಯೋಷೀಯನು ತನ್ನ ಪೂರ್ವಿಕನಾದ ದಾವೀದನಂತೆ ದೇವರನ್ನು ಅನುಸರಿಸಿದನು. ಯೋಷೀಯನು ದೇವರ ಬೋಧನೆಗಳಲ್ಲಿ ಯಾವುದೇ ಬದಲಾವಣೆ ಮಾಡದೆ ಅವುಗಳನ್ನು ಅನುಸರಿಸಿದನು.
ಯೋಷೀಯನು ದೇವಾಲಯದ ದುರಸ್ತಿಗೆ ಆಜ್ಞಾಪಿಸುವನು
3 ಯೋಷೀಯನು ರಾಜನಾಗಿದ್ದ ಹದಿನೆಂಟನೆಯ ವರ್ಷದಲ್ಲಿ ಅಚೆಲ್ಯನ ಮಗನೂ ಮೆಷುಲ್ಲಾಮನ ಮೊಮ್ಮಗನೂ ಕಾರ್ಯದರ್ಶಿಯೂ ಆದ ಶಾಫಾನನನ್ನು ದೇವಾಲಯಕ್ಕೆ ಕಳುಹಿಸಿದನು. 4 ಯೋಷೀಯನು, “ಮಹಾಯಾಜಕನಾದ ಹಿಲ್ಕೀಯನ ಬಳಿಗೆ ಹೋಗು. ದ್ವಾರಪಾಲಕರು ಜನರಿಂದ ಒಟ್ಟುಗೂಡಿಸಿರುವ ಹಣವನ್ನು ಅವನು ಲೆಕ್ಕಿಸಲಿ. ಜನರು ದೇವಾಲಯಕ್ಕೆ ತೆಗೆದುಕೊಂಡು ಬಂದು ಕೊಟ್ಟ ಹಣವೇ ಇದು. 5 ನಂತರ ಯಾಜಕರು ದೇವಾಲಯದಲ್ಲಿ ಕೆಲಸದ ಉಸ್ತುವಾರಿಯನ್ನು ನೋಡಿಕೊಳ್ಳುವ ಮುಖ್ಯಸ್ಥರಿಗೆ ಕೊಡಲಿ. ಯಾಜಕರು ದೇವಾಲಯವನ್ನು ದುರಸ್ತಿ ಮಾಡುವ ಕೆಲಸಗಾರರಿಗೆ ಈ ಹಣವನ್ನು ವಿನಿಯೋಗಿಸಲಿ. 6 ಅಲ್ಲಿ ಬಡಗಿಗಳು, ಶಿಲ್ಪಿಗಳು ಮತ್ತು ಕಲ್ಲುಕುಟಿಕರಿದ್ದಾರೆ. ಮರವನ್ನು ಕೊಳ್ಳಲು ಮತ್ತು ಕಲ್ಲುಗಳನ್ನು ಕೆತ್ತಿಸಲು ಈ ಹಣವನ್ನು ಬಳಸಿ. 7 ನೀವು ಕೆಲಸಗಾರರಿಗೆ ಕೊಡುವ ಹಣವನ್ನು ಲೆಕ್ಕಹಾಕಬೇಡಿ. ಯಾಕೆಂದರೆ ಆ ಕೆಲಸಗಾರರು ನಂಬಿಗಸ್ತರಾಗಿದ್ದಾರೆ” ಎಂದು ಹೇಳಿದನು.
ದೇವಾಲಯದಲ್ಲಿ ಧರ್ಮಶಾಸ್ತ್ರವು ಸಿಕ್ಕಿತು
8 ಪ್ರಧಾನಯಾಜಕನಾದ ಹಿಲ್ಕೀಯನು ಕಾರ್ಯದರ್ಶಿಯಾದ ಶಾಫಾನನಿಗೆ, “ದೇವಾಲಯದಲ್ಲಿ ನನಗೆ ಧರ್ಮಶಾಸ್ತ್ರವು ಸಿಕ್ಕಿತು” ಎಂದು ಹೇಳಿದನು. ಹಿಲ್ಕೀಯನು ಅದನ್ನು ಶಾಫಾನನಿಗೆ ನೀಡಿದನು. ಶಾಫಾನನು ಅದನ್ನು ಓದಿದನು.
9 ಕಾರ್ಯದರ್ಶಿಯಾದ ಶಾಫಾನನು ರಾಜನಾದ ಯೋಷಿಯನ ಬಳಿಗೆ ಬಂದು ಅವನಿಗೆ, “ನಿನ್ನ ಸೇವಕರು ದೇವಾಲಯದಲ್ಲಿದ್ದ ಹಣವನ್ನು ವ್ಯಯಮಾಡಿದರು. ಅವರು ಆ ಹಣವನ್ನು ದೇವಾಲಯದಲ್ಲಿ ಕೆಲಸ ಮಾಡಿಸುವ ಮೇಲ್ವಿಚಾರಕರಿಗೆ ಒಪ್ಪಿಸಿದರು” ಎಂದು ಹೇಳಿದನು. 10 ನಂತರ ಕಾರ್ಯದರ್ಶಿಯಾದ ಶಾಫಾನನು ರಾಜನಿಗೆ, “ಯಾಜಕನಾದ ಹಿಲ್ಕೀಯನು ನನಗೆ ಒಂದು ಗ್ರಂಥವನ್ನು ಕೊಟ್ಟನು” ಎಂದು ಹೇಳಿದನು. ಶಾಫಾನನು ರಾಜನಿಗೆ ಆ ಗ್ರಂಥವನ್ನು ಓದಿದನು.
11 ರಾಜನು ಧರ್ಮಶಾಸ್ತ್ರದ ವಾಕ್ಯಗಳನ್ನು ಕೇಳಿದಾಗ, ಗಲಿಬಿಲಿಗೊಂಡು ತನ್ನ ಬಟ್ಟೆಗಳನ್ನು ಹರಿದುಕೊಂಡನು. 12 ಅನಂತರ ರಾಜನು ಯಾಜಕನಾದ ಹಿಲ್ಕೀಯನಿಗೆ, ಶಾಫಾನನ ಮಗನಾದ ಅಹೀಕಾಮನಿಗೆ, ಮೀಕಾಯನ ಮಗನಾದ ಅಕ್ಬೋರನಿಗೆ, ಕಾರ್ಯದರ್ಶಿಯಾದ ಶಾಫಾನನಿಗೆ ಮತ್ತು ರಾಜಸೇವಕನಾದ ಅಸಾಯನಿಗೆ ಒಂದು ಆಜ್ಞೆಯನ್ನು ನೀಡಿದನು. 13 ರಾಜನಾದ ಯೋಷೀಯನು, “ಈಗ ನಾವು ಏನು ಮಾಡಬೇಕೆಂದು ಯೆಹೋವನನ್ನು ಕೇಳಿ. ನನಗಾಗಿ, ಜನರಿಗಾಗಿ ಮತ್ತು ಎಲ್ಲಾ ಯೆಹೂದಕ್ಕಾಗಿ ಯೆಹೋವನನ್ನು ಕೇಳಿ. ಈಗ ಸಿಕ್ಕಿರುವ ಈ ಗ್ರಂಥದ ವಾಕ್ಯಗಳನ್ನು ಕುರಿತಾಗಿಯೂ ಕೇಳಿ. ಯೆಹೋವನು ನಮ್ಮ ಮೇಲೆ ಕೋಪಗೊಂಡಿದ್ದಾನೆ. ಏಕೆಂದರೆ ನಮ್ಮ ಪೂರ್ವಿಕರು ಈ ಗ್ರಂಥದ ವಾಕ್ಯಗಳಿಗೆ ಕಿವಿಗೊಡಲಿಲ್ಲ; ಅವುಗಳನ್ನು ಕೈಕೊಂಡು ನಡೆಯಲಿಲ್ಲ” ಎಂದು ಹೇಳಿದನು.
ಯೋಷೀಯನು ತನ್ನ ಜನರನ್ನು ಪ್ರವಾದಿಯಾದ ಹುಲ್ದಳ ಬಳಿಗೆ ಕಳುಹಿಸಿದನು
14 ಆದ್ದರಿಂದ ಯಾಜಕನಾದ ಹಿಲ್ಕೀಯ, ಅಹೀಕಾಮ್, ಅಕ್ಬೋರ್, ಶಾಫಾನ್ ಮತ್ತು ಅಸಾಯ ಎಂಬವರು ಪ್ರವಾದಿನಿಯಾದ ಹುಲ್ದಳ ಬಳಿಗೆ ಹೋದರು. ಹುಲ್ದಳು ಹರ್ಹಸನ ಮೊಮ್ಮಗನೂ ತಿಕ್ವನ ಮಗನೂ ಆದ ಶಲ್ಲೂಮನ ಹೆಂಡತಿ. ಅವನು ಯಾಜಕರ ವಸ್ತ್ರಗಳಿಗೆ ಮೇಲ್ವಿಚಾರಕನಾಗಿದ್ದನು. ಹುಲ್ದಳು ಜೆರುಸಲೇಮಿನ ಎರಡನೆಯ ಭಾಗದಲ್ಲಿ[a] ವಾಸಿಸುತ್ತಿದ್ದಳು. ಅವರು ಹೋಗಿ ಹುಲ್ದಳ ಜೊತೆಯಲ್ಲಿ ಮಾತನಾಡಿದರು.
15 ಆಗ ಹುಲ್ದಳು ಅವರಿಗೆ, “ನಿಮ್ಮನ್ನು ನನ್ನ ಬಳಿಗೆ ಕಳುಹಿಸಿದವನ ಬಳಿಗೆ ಹೋಗಿ 16 ಇಸ್ರೇಲಿನ ದೇವರಾದ ಯೆಹೋವನು ಹೀಗೆನ್ನುತ್ತಾನೆ: ‘ಈ ದೇಶದ ಮೇಲೆ ಮತ್ತು ಇಲ್ಲಿ ವಾಸಮಾಡುತ್ತಿರುವ ಜನರ ಮೇಲೆ ನಾನು ಕೇಡುಗಳನ್ನು ಬರಮಾಡುವೆನು. ಯೆಹೂದದ ರಾಜನು ಓದಿದ ಗ್ರಂಥದಲ್ಲಿ ಈ ಕೇಡುಗಳನ್ನು ತಿಳಿಸಲಾಗಿದೆ. 17 ಯೆಹೂದದ ರಾಜರು ನನ್ನನ್ನು ತ್ಯಜಿಸಿದರು ಮತ್ತು ಇತರ ದೇವರುಗಳಿಗೆ ಧೂಪವನ್ನು ಸುಟ್ಟರು. ಅವರು ನನ್ನಲ್ಲಿ ಹೆಚ್ಚು ಕೋಪವನ್ನು ಉಂಟುಮಾಡಿದರು. ಅವರು ಅನೇಕ ವಿಗ್ರಹಗಳನ್ನು ನಿರ್ಮಿಸಿದರು. ಆದಕಾರಣವೇ ನಾನು ನನ್ನ ಕೋಪವನ್ನು ಈ ಸ್ಥಳದ ವಿರುದ್ಧ ತೋರ್ಪಡಿಸುತ್ತೇನೆ. ನನ್ನ ಕೋಪವು ಆರಿಹೋಗದ ಬೆಂಕಿಯಂತಿರುತ್ತದೆ!’
18-19 “ಯೆಹೂದದ ರಾಜನಾದ ಯೋಷೀಯನು ಯೆಹೋವನ ಸಲಹೆಯನ್ನು ಕೇಳಲು ನಿಮ್ಮನ್ನು ಕಳುಹಿಸಿದನು. ಯೋಷೀಯನಿಗೆ ಈ ಸಂಗತಿಗಳನ್ನು ಹೇಳಿ: ‘ನೀನು ಕೇಳುವ ಈ ಮಾತುಗಳನ್ನು ಇಸ್ರೇಲರ ದೇವರಾದ ಯೆಹೋವನು ಹೇಳಿದನು. ಈ ದೇಶವನ್ನು ಮತ್ತು ಇಲ್ಲಿ ವಾಸಿಸುವ ಜನರನ್ನು ಕುರಿತು ನಾನು ಹೇಳಿದ ಸಂಗತಿಗಳನ್ನು ನೀನು ಕೇಳಿರುವೆ. ನಿನ್ನ ಹೃದಯವು ಮೃದುವಾಗಿರುವುದರಿಂದ, ನೀನು ಅವುಗಳನ್ನು ಕೇಳಿದಾಗ ದೈನ್ಯತೆಯುಳ್ಳವನಾದೆ. ಈ ಸ್ಥಳಕ್ಕೆ (ಜೆರುಸಲೇಮಿಗೆ) ಆ ಭೀಕರ ಸಂಗತಿಗಳಾಗುತ್ತವೆಯೆಂದು ನಾನು ಹೇಳಿದೆ. ಆಗ ನೀನು ದುಃಖದಿಂದ ನಿನ್ನ ಬಟ್ಟೆಗಳನ್ನು ಹರಿದುಕೊಂಡು ಅಳಲಾರಂಭಿಸಿದೆ. ಆದಕಾರಣವೇ ನಾನು ನಿನಗೆ ಕಿವಿಗೊಟ್ಟೆನು.’ ಯೆಹೋವನು ಹೇಳುವುದೇನೆಂದರೆ: 20 ‘ನೀನು ನಿನ್ನ ಪೂರ್ವಿಕರ ಜೊತೆ ಸೇರುವಂತೆ ನಾನು ಮಾಡುತ್ತೇನೆ. ನೀನು ಶಾಂತಿಯಿಂದ ಸತ್ತು ನಿನ್ನ ಸಮಾಧಿಯನ್ನು ಸೇರುವೆ. ಈ ದೇಶದ (ಜೆರುಸಲೇಮಿನ) ಮೇಲೆ ನಾನು ತರಲಿರುವ ಕೇಡುಗಳನ್ನು ನಿನ್ನ ಕಣ್ಣುಗಳು ನೋಡುವುದಿಲ್ಲ’ ಎಂಬುದೇ” ಎಂದು ಹೇಳಿದಳು.
ನಂತರ ಯಾಜಕನಾದ ಹಿಲ್ಕೀಯ, ಅಹೀಕಾಮ್, ಅಕ್ಬೋರ್, ಶಾಫಾನ್ ಮತ್ತು ಅಸಾಯ ಹಿಂತಿರುಗಿ ಬಂದು ರಾಜನಿಗೆ ತಿಳಿಸಿದರು.
ಜನರು ಧರ್ಮಶಾಸ್ತ್ರವನ್ನು ಕೇಳುವರು
23 ಯೆಹೂದದ ಮತ್ತು ಜೆರುಸಲೇಮಿನ ನಾಯಕರೆಲ್ಲರೂ ಬಂದು ತನ್ನನ್ನು ಭೇಟಿಯಾಗಬೇಕೆಂದು ರಾಜನಾದ ಯೋಷೀಯನು ಹೇಳಿದನು. 2 ನಂತರ ರಾಜನು ದೇವಾಲಯಕ್ಕೆ ಹೋದನು. ಯೆಹೂದದ ಜನರೆಲ್ಲರು ಮತ್ತು ಜೆರುಸಲೇಮಿನಲ್ಲಿ ವಾಸಿಸುತ್ತಿದ್ದ ಜನರೆಲ್ಲರು ಅವನ ಜೊತೆಯಲ್ಲಿ ಹೋದರು. ಯಾಜಕರು, ಪ್ರವಾದಿಗಳು, ಚಿಕ್ಕವರು ಮತ್ತು ದೊಡ್ಡವರು ಅವನೊಡನೆ ಹೋದರು. ಆಗ ಅವನು ನಿಬಂಧನ ಗ್ರಂಥವನ್ನು ಓದಿದನು. ಇದು ದೇವಾಲಯದಲ್ಲಿ ಸಿಕ್ಕಿದ ಗ್ರಂಥವಾಗಿತ್ತು. ಜನರೆಲ್ಲರಿಗೂ ಕೇಳಿಸುವಂತೆ ಯೋಷೀಯನು ಗ್ರಂಥವನ್ನು ಓದಿದನು.
3 ರಾಜನು ಸ್ತಂಭದ ಬಳಿ ನಿಂತು ತಾನು ಯೆಹೋವನ ಮಾರ್ಗದಲ್ಲಿ ನಡೆಯುವುದಾಗಿಯೂ ಆತನ ಆಜ್ಞೆಗಳಿಗೆ, ಒಡಂಬಡಿಕೆಗೆ ಮತ್ತು ಆತನ ನಿಯಮಗಳಿಗೆ ಪೂರ್ಣಹೃದಯದಿಂದಲೂ ಪೂರ್ಣಆತ್ಮದಿಂದಲೂ ವಿಧೇಯನಾಗಿರುವುದಾಗಿಯೂ ನಿಬಂಧನ ಗ್ರಂಥದಲ್ಲಿ ಬರೆದಿರುವ ಎಲ್ಲಾ ವಾಕ್ಯಗಳನ್ನು ನೆರವೇರಿಸುವುದಾಗಿಯೂ ಯೆಹೋವನಿಗೆ ಪ್ರಮಾಣಮಾಡಿದನು. ರಾಜನ ಪ್ರಮಾಣಕ್ಕೆ ಬೆಂಬಲ ನೀಡಲು ಜನರೆಲ್ಲರೂ ಎದ್ದುನಿಂತರು.
4 ನಂತರ ರಾಜನು ಪ್ರಧಾನಯಾಜಕನಾದ ಹಿಲ್ಕೀಯನಿಗೆ, ಇತರ ಯಾಜಕರಿಗೆ, ದ್ವಾರಪಾಲಕರಿಗೆ, ಬಾಳ್ದೇವರಿಗೂ ಅಶೇರ ದೇವತೆಗೂ ಮತ್ತು ಆಕಾಶದ ನಕ್ಷತ್ರಗಳಿಗೂ ಉಪಯೋಗಿಸುತ್ತಿದ್ದ ಎಲ್ಲಾ ಸಲಕರಣೆಗಳನ್ನು ದೇವಾಲಯದಿಂದ ಹೊರತರುವಂತೆ ಆಜ್ಞಾಪಿಸಿದನು. ಯೋಷೀಯನು ಜೆರುಸಲೇಮಿನ ಹೊರಗೆ ಕಿದ್ರೋನ್ ಹೊಲಗಳಲ್ಲಿ ಅವುಗಳನ್ನು ಸುಟ್ಟುಹಾಕಿದನು. ಅವರು ಬೂದಿಯನ್ನು ಬೇತೇಲಿಗೆ ತೆಗೆದುಕೊಂಡು ಹೋದರು.
5 ಯೆಹೂದದ ರಾಜರುಗಳು ಯಾಜಕರಾಗಿ ಸೇವೆಮಾಡಲು ಕೆಲವು ಸಾಮಾನ್ಯ ಜನರನ್ನು ಆರಿಸಿಕೊಂಡರು. ಈ ಜನರು ಆರೋನನ ಕುಲದಿಂದ ಬಂದವರಲ್ಲ! ಈ ಸುಳ್ಳುಯಾಜಕರು ಯೆಹೂದದ ನಗರಗಳಲ್ಲಿನ ಮತ್ತು ಜೆರುಸಲೇಮಿನ ಊರುಗಳಲ್ಲಿನ ಉನ್ನತಸ್ಥಳಗಳಲ್ಲಿ ಧೂಪವನ್ನು ಸುಡುತ್ತಿದ್ದರು. ಅವರು ಬಾಳನನ್ನು, ಸೂರ್ಯನನ್ನು, ಚಂದ್ರನನ್ನು, ಆಕಾಶ ಸೈನ್ಯವಾದ ನಕ್ಷತ್ರಗಳನ್ನು ಗೌರವಿಸಲು ಧೂಪವನ್ನು ಸುಡುತ್ತಿದ್ದರು. ಆದರೆ ಯೋಷೀಯನು ಆ ಸುಳ್ಳು ಯಾಜಕರನ್ನು ನಿಲ್ಲಿಸಿದನು.
6 ಯೋಷೀಯನು ಅಶೇರಸ್ತಂಭವನ್ನು ದೇವಾಲಯದಿಂದ ತೆಗೆದುಹಾಕಿದನು. ಅವನು ಅಶೇರಸ್ತಂಭವನ್ನು ನಗರದ ಹೊರವಲಯದ ಕಿದ್ರೋನ್ ಕಣಿವೆಗೆ ತೆಗೆದುಕೊಂಡು ಹೋಗಿ ಅದನ್ನು ಅಲ್ಲಿ ಸುಟ್ಟುಹಾಕಿದನು. ನಂತರ ಅವನು ಅದನ್ನು ಪುಡಿಪುಡಿ ಮಾಡಿಸಿ ಧೂಳಿನಲ್ಲಿ ಬೆರಸಿ ಸಾಮಾನ್ಯ ಜನರ ಸ್ಮಶಾನದಲ್ಲಿ ಆ ಧೂಳನ್ನು ಚೆಲ್ಲಿದನು.
7 ನಂತರ ರಾಜನಾದ ಯೋಷೀಯನು ದೇವಾಲಯದಲ್ಲಿದ್ದ ದೇವದಾಸ ದೇವದಾಸಿಯರ ಮನೆಗಳನ್ನು ಕೆಡವಿಹಾಕಿಸಿದನು. ಆ ಮನೆಗಳಲ್ಲಿ ಸುಳ್ಳುದೇವತೆಯಾದ ಅಶೇರಳಿಗೋಸ್ಕರ ಚಿಕ್ಕ ಗುಡಾರಗಳನ್ನು ನೇಯುತ್ತಿದ್ದರು.
8-9 ಆ ಸಮಯದಲ್ಲಿ ಯಾಜಕರು ಯಜ್ಞಗಳನ್ನು ಜೆರುಸಲೇಮಿಗೆ ತರಲಿಲ್ಲ ಮತ್ತು ದೇವಾಲಯದಲ್ಲಿನ ಯಜ್ಞವೇದಿಕೆಯ ಮೇಲೆ ಅವುಗಳನ್ನು ಅರ್ಪಿಸಲಿಲ್ಲ. ಯಾಜಕರು ಯೆಹೂದದ ಎಲ್ಲಾ ನಗರಗಳಲ್ಲಿಯೂ ವಾಸಿಸುತ್ತಿದ್ದರು. ಅವರು ಆ ನಗರಗಳಲ್ಲಿನ ಉನ್ನತಸ್ಥಳಗಳಲ್ಲಿ ಧೂಪವನ್ನು ಸುಡುತ್ತಿದ್ದರು ಮತ್ತು ಯಜ್ಞಗಳನ್ನು ಅರ್ಪಿಸುತ್ತಿದ್ದರು. ಆ ಉನ್ನತಸ್ಥಳಗಳು ಗೆಬದಿಂದ ಬೇರ್ಷೆಬದವರೆಗೆ ಎಲ್ಲಾ ಕಡೆಗಳಲ್ಲಿದ್ದವು. ಯಾಜಕರು ತಮ್ಮ ಹುಳಿಯಿಲ್ಲದ ರೊಟ್ಟಿಗಳನ್ನು ಜೆರುಸಲೇಮಿನ ದೇವಾಲಯದಲ್ಲಿ ಯಾಜಕರಾಗಿದ್ದ ವಿಶೇಷ ಸ್ಥಳಗಳಲ್ಲಿ ತಿನ್ನದೆ ಆ ಊರುಗಳಲ್ಲಿ ಸಾಮಾನ್ಯ ಜನರೊಂದಿಗೆ ತಿನ್ನುತ್ತಿದ್ದರು. ಆದರೆ ರಾಜನಾದ ಯೋಷೀಯನು ಆ ಉನ್ನತಸ್ಥಳಗಳನ್ನು ನಾಶಗೊಳಿಸಿ ಆ ಯಾಜಕರನ್ನು ಜೆರುಸಲೇಮಿಗೆ ಕರೆತಂದನು. ನಗರಾಧಿಕಾರಿಯಾದ ಯೆಹೋಶುವನ ದ್ವಾರದ ಎಡಗಡೆಯಲ್ಲಿದ್ದ ಉನ್ನತಸ್ಥಳಗಳನ್ನು ಯೋಷೀಯನು ನಾಶಗೊಳಿಸಿದನು.
10 ತೋಫೆತ್ ಎನ್ನುವುದು ಬೆನ್ಹಿನ್ನೋಮ್ನ ಮಗನಿಗೆ ಸೇರಿದ ಒಂದು ಕಣಿವೆ. ಅಲ್ಲಿ ಸುಳ್ಳುದೇವರಾದ ಮೋಲೆಕನ ಗೌರವಾರ್ಥವಾಗಿ ಜನರು ತಮ್ಮ ಮಕ್ಕಳನ್ನು ಆಹುತಿ ಕೊಡುತ್ತಿದ್ದರು ಮತ್ತು ಯಜ್ಞವೇದಿಕೆಯ ಮೇಲೆ ಸುಡುತ್ತಿದ್ದರು. ಯೋಷೀಯನು, ಜನರು ಮತ್ತೆ ಆ ಸ್ಥಳವನ್ನು ಉಪಯೋಗಿಸದಂತೆ ನಾಶಗೊಳಿಸಿದನು. 11 ಪೂರ್ವಕಾಲದಲ್ಲಿ ಯೆಹೂದದ ರಾಜರುಗಳು ದೇವಾಲಯದ ಬಾಗಿಲಿನ ಹತ್ತಿರ ಕೆಲವು ಕುದುರೆಗಳನ್ನು ಮತ್ತು ರಥಗಳನ್ನು ನಿಲ್ಲಿಸುತ್ತಿದ್ದರು. ಇದು ನಾತಾನ್ ಮೆಲೆಕನೆಂಬ ಮುಖ್ಯ ಅಧಿಕಾರಿಯ ಕೋಣೆಯ ಹತ್ತಿರದಲ್ಲಿತ್ತು. ಆ ಕುದುರೆಗಳು ಮತ್ತು ರಥಗಳು ಸೂರ್ಯದೇವತೆಯ ಗೌರವಾರ್ಥವಾಗಿದ್ದವು. ಯೋಷೀಯನು ಕುದುರೆಗಳನ್ನು ತೆಗೆಸಿ ರಥಗಳನ್ನು ಸುಡಿಸಿಬಿಟ್ಟನು.
12 ಪೂರ್ವಕಾಲದಲ್ಲಿ, ಯೆಹೂದದ ರಾಜರುಗಳು ಅಹಾಬನ ಕಟ್ಟಡದ ಮಾಳಿಗೆಯ ಮೇಲೆ ಯಜ್ಞವೇದಿಕೆಗಳನ್ನು ನಿರ್ಮಿಸಿದ್ದರು. ರಾಜನಾದ ಮನಸ್ಸೆಯು ದೇವಾಲಯದ ಎರಡು ಪ್ರಾಕಾರಗಳಲ್ಲಿ ಯಜ್ಞವೇದಿಕೆಗಳನ್ನು ನಿರ್ಮಿಸಿದ್ದನು. ಯೋಷೀಯನು ಆ ಯಜ್ಞವೇದಿಕೆಗಳನ್ನೆಲ್ಲ ನಾಶಗೊಳಿಸಿ, ಅವುಗಳ ಚೂರುಗಳನ್ನು ಕಿದ್ರೋನ್ ಕಣಿವೆಗೆ ಎಸೆದನು.
13 ಪೂರ್ವಕಾಲದಲ್ಲಿ, ರಾಜನಾದ ಸೊಲೊಮೋನನು ಜೆರುಸಲೇಮಿನ ಬಳಿಯಲ್ಲಿದ್ದ ವಿಘ್ನಪರ್ವತದ ಮೇಲೆ ಕೆಲವು ಉನ್ನತಸ್ಥಳಗಳನ್ನು ನಿರ್ಮಿಸಿದ್ದನು. ಆ ಉನ್ನತಸ್ಥಳಗಳು ಪರ್ವತದ ದಕ್ಷಿಣದಿಕ್ಕಿನ ಮೇಲಿದ್ದವು. ರಾಜನಾದ ಸೊಲೊಮೋನನು ಚೀದೋನ್ಯರ ಅಷ್ಟೋರೆತ್, ಮೋವಾಬ್ಯರ ಕೆಮೋಷ್, ಅಮ್ಮೋನಿಯರ ಮಿಲ್ಕೋಮ್ ಎಂಬ ಅಸಹ್ಯ ವಿಗ್ರಹಗಳಿಗಾಗಿ ಆ ಉನ್ನತಸ್ಥಳಗಳನ್ನು ನಿರ್ಮಿಸಿದ್ದನು. ಆದರೆ ರಾಜನಾದ ಯೋಷೀಯನು ಆ ಪೂಜಾಸ್ಥಳಗಳನ್ನೆಲ್ಲಾ ನಾಶಪಡಿಸಿದನು. 14 ರಾಜನಾದ ಯೋಷೀಯನು ಎಲ್ಲಾ ಸ್ಮಾರಕಕಲ್ಲುಗಳನ್ನು ಮತ್ತು ಅಶೇರಸ್ತಂಭಗಳನ್ನು ಒಡೆದು ಹಾಕಿಸಿದನು. ಆಮೇಲೆ ಅವನು ಆ ಸ್ಥಳದ ಮೇಲೆ ಸತ್ತವರ ಎಲುಬುಗಳನ್ನು ಹರಡಿದನು.
15 ಯೋಷೀಯನು ಬೇತೇಲಿನ ಉನ್ನತಸ್ಥಳವನ್ನು ಮತ್ತು ಯಜ್ಞವೇದಿಕೆಯನ್ನು ಕೆಡವಿಬಿಟ್ಟನು. ನೆಬಾಟನ ಮಗನಾದ ಯಾರೊಬ್ಬಾಮನು ಈ ಯಜ್ಞವೇದಿಕೆಯನ್ನು ನಿರ್ಮಿಸಿದ್ದನು. ಇಸ್ರೇಲರು ಪಾಪಮಾಡುವಂತೆ ಯಾರೊಬ್ಬಾಮನು ಪ್ರೇರೇಪಿಸಿದ್ದನು. ಯೋಷೀಯನು ಯಜ್ಞವೇದಿಕೆಯನ್ನು ಮತ್ತು ಉನ್ನತಸ್ಥಳವನ್ನು ಕೆಡವಿಬಿಟ್ಟನು. ಯೋಷೀಯನು ಯಜ್ಞವೇದಿಕೆಯ ಕಲ್ಲುಗಳನ್ನು ಪುಡಿಪುಡಿಮಾಡಿ ಧೂಳಿನಲ್ಲಿ ಬೆರಸಿದನು. ಅವನು ಅಶೇರಸ್ತಂಭವನ್ನು ಸುಟ್ಟುಹಾಕಿದನು. 16 ಯೋಷೀಯನು ಸುತ್ತಲೂ ನೋಡಿದಾಗ ಬೆಟ್ಟದ ಮೇಲಿದ್ದ ಸ್ಮಶಾನಗಳನ್ನು ಕಂಡನು. ಅವನು ಜನರನ್ನು ಕಳುಹಿಸಿ ಆ ಸ್ಮಶಾನಗಳಿಂದ ಎಲುಬುಗಳನ್ನು ತರಿಸಿ ಆ ಎಲುಬುಗಳನ್ನು ಯಜ್ಞವೇದಿಕೆಯ ಮೇಲೆ ಸುಟ್ಟನು. ಈ ರೀತಿಯಲ್ಲಿ, ಯೋಷೀಯನು ಯಜ್ಞವೇದಿಕೆಯನ್ನು ಹೊಲಸು ಮಾಡಿದನು. ಇದು ಪ್ರವಾದಿಯು ಘೋಷಿಸಿದ್ದ[b] ಯೆಹೋವನ ಸಂದೇಶದಂತೆ ಸಂಭವಿಸಿತು. ಯಾರೊಬ್ಬಾಮನು ಯಜ್ಞವೇದಿಕೆಯ ಪಕ್ಕದಲ್ಲಿ ನಿಂತಿದ್ದಾಗ ಪ್ರವಾದಿಯು ಈ ಸಂಗತಿಗಳನ್ನು ಪ್ರಕಟಿಸಿದ್ದನು.
ನಂತರ ಯೋಷೀಯನು ಸುತ್ತಲೂ ನೋಡಿದಾಗ, ದೇವಮನುಷ್ಯನ ಸಮಾಧಿಯನ್ನು ಕಂಡನು.
17 ಯೋಷೀಯನು, “ನಾನು ನೋಡುತ್ತಿರುವ ಆ ಸ್ಮಾರಕ ಯಾವುದು?” ಎಂದು ಕೇಳಿದನು.
ಆ ನಗರದ ಜನರು ಅವನಿಗೆ, “ಅದು ಯೆಹೂದದಿಂದ ಬಂದ ದೇವಮನುಷ್ಯನ ಸಮಾಧಿ. ನೀನು ಬೇತೇಲಿನ ಯಜ್ಞವೇದಿಕೆಗೆ ಮಾಡಿದ ಕಾರ್ಯಗಳನ್ನು ಕುರಿತು ಈ ಪ್ರವಾದಿಯು ಬಹಳ ಕಾಲದ ಹಿಂದೆಯೇ ಹೇಳಿದ್ದನು” ಎಂದರು.
18 ಯೋಷೀಯನು, “ಆ ಸಮಾಧಿಗೆ ಏನೂ ಮಾಡಬೇಡಿ. ಅವನ ಎಲುಬುಗಳನ್ನು ತೆಗೆಯಬೇಡಿ” ಎಂದು ಹೇಳಿದನು.
19 ಯೋಷೀಯನು ಸಮಾರ್ಯದ ನಗರಗಳಲ್ಲಿದ್ದ ಉನ್ನತಸ್ಥಳಗಳ ಆಲಯಗಳನ್ನೆಲ್ಲ ನಾಶಗೊಳಿಸಿದನು. ಇಸ್ರೇಲಿನ ರಾಜರುಗಳು ಈ ಆಲಯಗಳನ್ನು ನಿರ್ಮಿಸಿದ್ದರು. ಇದರಿಂದ ಯೆಹೋವನು ಬಹಳ ಕೋಪಗೊಂಡಿದ್ದನು. ಯೋಷೀಯನು ಬೇತೇಲಿನಲ್ಲಿ ಆರಾಧನೆಯ ಸ್ಥಳಗಳನ್ನು ನಾಶಪಡಿಸಿದಂತೆ ಆ ಆಲಯಗಳನ್ನೂ ನಾಶಗೊಳಿಸಿದನು.
20 ಯೋಷೀಯನು ಸಮಾರ್ಯದ ಉನ್ನತಸ್ಥಳಗಳಲ್ಲಿದ್ದ ಯಾಜಕರನ್ನೆಲ್ಲ ಕೊಂದುಹಾಕಿದನು. ಅವನು ಯಾಜಕರನ್ನು ಯಜ್ಞವೇದಿಕೆಗಳ ಮೇಲೆಯೇ ಕೊಂದುಹಾಕಿದನು. ಅವನು ಜನರ ಎಲುಬುಗಳನ್ನು ಯಜ್ಞವೇದಿಕೆಯ ಮೇಲೆ ಸುಟ್ಟನು. ಈ ರೀತಿ ಅವನು ಪೂಜೆಯ ಸ್ಥಳಗಳನ್ನು ನಾಶಗೊಳಿಸಿದನು. ನಂತರ ಅವನು ಜೆರುಸಲೇಮಿಗೆ ಹಿಂದಿರುಗಿದನು.
ಯೆಹೂದದ ಜನರು ಪಸ್ಕಹಬ್ಬವನ್ನು ಆಚರಿಸಿದರು
21 ರಾಜನಾದ ಯೋಷೀಯನು ಜನರಿಗೆಲ್ಲ, “ನಿಮ್ಮ ದೇವರಾದ ಯೆಹೋವನಿಗಾಗಿ ಪಸ್ಕಹಬ್ಬವನ್ನು ಆಚರಿಸಿರಿ. ಈ ನಿಬಂಧನ ಗ್ರಂಥದಲ್ಲಿ ಬರೆದಿರುವಂತೆಯೇ ಅದನ್ನು ಮಾಡಿ” ಎಂದು ಆಜ್ಞಾಪಿಸಿದನು.
22 ನ್ಯಾಯಾಧೀಶರು ಇಸ್ರೇಲನ್ನು ಆಳಿದ ದಿನಗಳಿಂದ ಜನರು ಪಸ್ಕಹಬ್ಬವನ್ನು ಈ ರೀತಿಯಲ್ಲಿ ಆಚರಿಸಿರಲಿಲ್ಲ. ಇಸ್ರೇಲಿನ ರಾಜರುಗಳಾಗಲಿ ಇಲ್ಲವೆ ಯೆಹೂದದ ರಾಜರುಗಳಾಗಲಿ ಈ ರೀತಿ ಪಸ್ಕಹಬ್ಬವನ್ನು ವಿಜೃಂಭಣೆಯಿಂದ ಆಚರಿಸಿರಲಿಲ್ಲ. 23 ಯೋಷೀಯನು ರಾಜನಾಗಿದ್ದ ಹದಿನೆಂಟನೆ ವರ್ಷದಲ್ಲಿ ಅವರು ಯೆಹೋವನಿಗಾಗಿ ಈ ಪಸ್ಕಹಬ್ಬವನ್ನು ಜೆರುಸಲೇಮಿನಲ್ಲಿ ಆಚರಿಸಿದರು.
24 ಯೋಷೀಯನು ಮಾಂತ್ರಿಕರನ್ನು, ತಾಂತ್ರಿಕರನ್ನು, ಮನೆಯ ದೇವರುಗಳನ್ನು, ವಿಗ್ರಹಗಳನ್ನು, ಯೆಹೂದದಲ್ಲಿ ಮತ್ತು ಜೆರುಸಲೇಮಿನಲ್ಲಿ ಜನರು ಪೂಜಿಸುತ್ತಿದ್ದ ತೆರಾಫೀಮ್ ಎಂಬ ಗೊಂಬೆಗಳನ್ನು ನಾಶಪಡಿಸಿದನು. ಯಾಜಕನಾದ ಹಿಲ್ಕೀಯನಿಗೆ ದೇವಾಲಯದಲ್ಲಿ ಸಿಕ್ಕಿದ ಧರ್ಮಶಾಸ್ತ್ರದಲ್ಲಿ ಬರೆದಿರುವ ನಿಯಮಗಳಿಗೆ ವಿಧೇಯನಾಗಿರಲು ಯೋಷೀಯನು ಹೀಗೆ ಮಾಡಿದನು.
25 ಇದಕ್ಕೆ ಮೊದಲು ಯೋಷೀಯನಂತಹ ರಾಜನು ಇರಲೇ ಇಲ್ಲ. ಯೋಷೀಯನು ತನ್ನ ಪೂರ್ಣ ಹೃದಯದಿಂದಲೂ ತನ್ನ ಪೂರ್ಣ ಆತ್ಮದಿಂದಲೂ ತನ್ನ ಪೂರ್ಣ ಶಕ್ತಿಯಿಂದಲೂ ಯೆಹೋವನ ಕಡೆಗೆ ತಿರುಗಿದನು. ಮೋಶೆಯ ಧರ್ಮಶಾಸ್ತ್ರವನ್ನು ಯೋಷೀಯನಂತೆ ಬೇರೆ ಯಾವ ರಾಜನೂ ಅನುಸರಿಸಿರಲಿಲ್ಲ. ಆ ಕಾಲದವರೆಗೆ ಯೋಷೀಯನಂತಹ ಮತ್ತೊಬ್ಬ ರಾಜನು ಇರಲೇ ಇಲ್ಲ.
26 ಆದರೆ ಯೆಹೋವನು ಯೆಹೂದದ ಜನರ ಮೇಲೆ ಕೋಪಗೊಳ್ಳುವುದನ್ನು ನಿಲ್ಲಿಸಲೇ ಇಲ್ಲ. ಮನಸ್ಸೆಯು ಮಾಡಿದ ಕಾರ್ಯಗಳೆಲ್ಲವುಗಳಿಂದ ಯೆಹೋವನು ಅವರ ಮೇಲೆ ಇನ್ನೂ ಕೋಪಗೊಂಡಿದ್ದನು. 27 ಯೆಹೋವನು, “ನಾನು ಇಸ್ರೇಲರನ್ನು ತೆಗೆದುಹಾಕಿದಂತೆ ಯೆಹೂದ್ಯರನ್ನೂ ನನ್ನ ಸನ್ನಿಧಿಯಿಂದ ತೆಗೆದುಹಾಕುವೆನು. ನಾನು ಆರಿಸಿಕೊಂಡ ಜೆರುಸಲೇಮ್ ಪಟ್ಟಣವನ್ನೂ ನನ್ನ ನಾಮ ಮಹತ್ತಿಗಾಗಿ ಸ್ವೀಕರಿಸಿಕೊಂಡ ದೇವಾಲಯವನ್ನೂ ತಿರಸ್ಕರಿಸುವೆನು” ಎಂದು ಹೇಳಿದನು.
28 “ಯೆಹೂದದ ರಾಜರುಗಳ ಇತಿಹಾಸ” ಎಂಬ ಪುಸ್ತಕದಲ್ಲಿ ಯೋಷೀಯನು ಮಾಡಿದ ಇತರ ಕಾರ್ಯಗಳೆಲ್ಲವನ್ನು ಕುರಿತು ಬರೆಯಲಾಗಿದೆ.
ಯೋಷೀಯನ ಮರಣ
29 ಯೋಷೀಯನ ಕಾಲದಲ್ಲಿ ಈಜಿಪ್ಟಿನ ರಾಜನಾದ ಫರೋಹ-ನೆಕೋ ಎಂಬವನು ಅಶ್ಶೂರದ ರಾಜನ ವಿರುದ್ಧವಾಗಿ ಹೋರಾಡಲು ಯೂಫ್ರೇಟೀಸ್ ನದಿಯ ಬಳಿಗೆ ಹೋದನು. ರಾಜನಾದ ಯೋಷೀಯನು ಫರೋಹ ನೆಕೋವನ ವಿರುದ್ಧ ಹೋರಾಡಲು ಯೂಫ್ರೇಟೀಸ್ ನದಿಯ ಬಳಿಗೆ ಹೋದನು. ಆದರೆ ಮೆಗಿದ್ದೋವಿನಲ್ಲಿ ಫರೋಹ ನೆಕೋವನು ಯೋಷೀಯನನ್ನು ನೋಡಿ, ಅವನನ್ನು ಕೊಂದು ಹಾಕಿದನು. 30 ಯೋಷೀಯನ ಸೇವಕರು ಮೆಗಿದ್ದೋವಿನಿಂದ ರಥದಲ್ಲಿ ಯೋಷೀಯನ ದೇಹವನ್ನು ಜೆರುಸಲೇಮಿಗೆ ತೆಗೆದುಕೊಂಡು ಬಂದರು. ಅವರು ಯೋಷೀಯನನ್ನು ಅವನ ಸ್ವಂತ ಸ್ಮಶಾನದಲ್ಲಿ ಸಮಾಧಿಮಾಡಿದರು.
ನಂತರ ಸಾಮಾನ್ಯ ಜನರು ಯೋಷೀಯನ ಮಗನಾದ ಯೆಹೋವಾಹಾಜನನ್ನು ಕರೆದು, ಅವನನ್ನು ಅಭಿಷೇಕಿಸಿ ಹೊಸ ರಾಜನನ್ನಾಗಿ ಮಾಡಿದರು.
ಯೆಹೋವಾಹಾಜನು ಯೆಹೂದದ ರಾಜನಾಗುವನು
31 ಯೆಹೋವಾಹಾಜನು ರಾಜನಾದಾಗ ಅವನಿಗೆ ಇಪ್ಪತ್ತಮೂರು ವರ್ಷ ವಯಸ್ಸಾಗಿತ್ತು. ಅವನು ಜೆರುಸಲೇಮಿನಲ್ಲಿ ಮೂರು ತಿಂಗಳು ಆಳಿದನು. ಅವನ ತಾಯಿಯು ಲಿಬ್ನದ ಯೆರೆಮೀಯನ ಮಗಳಾದ ಹಮೂಟಲ್ ಎಂಬ ಹೆಸರಿನವಳು. 32 ಯೆಹೋವಾಹಾಜನು ಯೆಹೋವನು ಕೆಟ್ಟದ್ದೆಂದು ಹೇಳಿದ ಕಾರ್ಯಗಳನ್ನು ಮಾಡಿದನು. ಯೆಹೋವಾಹಾಜನು ತನ್ನ ಪೂರ್ವಿಕರೆಲ್ಲರೂ ಮಾಡಿದಂತಹ ಕಾರ್ಯಗಳನ್ನು ಮಾಡಿದನು.
33 ಫರೋಹ ನೆಕೋವನು ಹಮಾತ್ ದೇಶದ ರಿಬ್ಲಾ ಎಂಬಲ್ಲಿ ಯೆಹೋವಾಹಾಜನನ್ನು ಸೆರೆಹಿಡಿದನು. ಆದ್ದರಿಂದ ಯೆಹೋವಾಹಾಜನು ಜೆರುಸಲೇಮಿನಲ್ಲಿ ಆಳಲಿಲ್ಲ. ಫರೋಹ ನೆಕೋವನು ಮೂರುಸಾವಿರದ ನಾನೂರು ಕಿಲೋಗ್ರಾಂ ಬೆಳ್ಳಿಯನ್ನು ಮತ್ತು ಮೂವತ್ನಾಲ್ಕು ಕಿಲೋಗ್ರಾಂ ಚಿನ್ನವನ್ನು ಕೊಡುವಂತೆ ಯೆಹೂದದವರನ್ನು ಬಲವಂತಪಡಿಸಿದನು.
34 ಫರೋಹ ನೆಕೋವನು ಯೋಷೀಯನ ಮಗನಾದ ಎಲ್ಯಾಕೀಮನನ್ನು ಹೊಸರಾಜನನ್ನಾಗಿ ಮಾಡಿ ಎಲ್ಯಾಕೀಮನ ಹೆಸರನ್ನು ಯೆಹೋಯಾಕೀಮನೆಂದು ಬದಲಾಯಿಸಿದನು. ಯೆಹೋವಾಹಾಜನನ್ನು ಫರೋಹ ನೆಕೋವನು ಈಜಿಪ್ಟಿಗೆ ಕರೆದೊಯ್ದುನು. ಯೆಹೋವಾಹಾಜನು ಈಜಿಪ್ಟಿನಲ್ಲಿ ಸತ್ತುಹೋದನು. 35 ಯೆಹೋಯಾಕೀಮನು ಫರೋಹ ನೆಕೋವನಿಗೆ ಬೆಳ್ಳಿಬಂಗಾರವನ್ನು ಕೊಟ್ಟನು; ಸಾಮಾನ್ಯ ಜನರಿಗೂ ತೆರಿಗೆಗಳನ್ನು ಹಾಕಿ ಬಂದ ಹಣವನ್ನು ಫರೋಹ ನೆಕೋವನಿಗೆ ಕೊಟ್ಟನು. ಆದ್ದರಿಂದ ಪ್ರತಿಯೊಬ್ಬರು ತಮ್ಮ ಪಾಲಿನ ಬೆಳ್ಳಿಬಂಗಾರಗಳನ್ನು ಕೊಟ್ಟರು. ರಾಜನಾದ ಯೆಹೋಯಾಕೀಮನು ಫರೋಹ-ನೆಕೋವನಿಗೆ ಅವುಗಳನ್ನು ಕೊಟ್ಟನು.
36 ಯೆಹೋಯಾಕೀಮನು ರಾಜನಾದಾಗ ಅವನಿಗೆ ಇಪ್ಪತ್ತೈದು ವರ್ಷ ವಯಸ್ಸಾಗಿತ್ತು. ಅವನು ಜೆರುಸಲೇಮಿನಲ್ಲಿ ಹನ್ನೊಂದು ವರ್ಷ ಆಳಿದನು. ಅವನ ತಾಯಿಯ ಹೆಸರು ಜೆಬೂದಾ. ಆಕೆಯು ರೂಮದ ಪೆದಾಯನ ಮಗಳು. 37 ಯೆಹೋಯಾಕೀಮನು ಯೆಹೋವನು ಕೆಟ್ಟದ್ದೆಂದು ಹೇಳಿದವುಗಳನ್ನು ಮಾಡಿದನು. ಯೆಹೋಯಾಕೀಮನು ತನ್ನ ಪೂರ್ವಿಕರು ಮಾಡಿದ ಕಾರ್ಯಗಳನ್ನು ಮಾಡಿದನು.
31 ಅಷ್ಟರಲ್ಲಿ ಯೇಸುವಿನ ಶಿಷ್ಯರು, “ಗುರುವೇ, ಊಟಮಾಡು” ಎಂದು ಆತನನ್ನು ಒತ್ತಾಯ ಮಾಡಿದರು.
32 ಅದಕ್ಕೆ ಯೇಸು, “ನನ್ನಲ್ಲಿ ಆಹಾರವಿದೆ. ಆ ಆಹಾರದ ಬಗ್ಗೆ ನಿಮಗೇನೂ ಗೊತ್ತಿಲ್ಲ” ಎಂದನು.
33 ಆದ್ದರಿಂದ ಶಿಷ್ಯರು, “ಯಾರಾದರೂ ಆತನಿಗೆ ಮೊದಲೇ ಆಹಾರವನ್ನು ತಂದುಕೊಟ್ಟರೇ?” ಎಂದು ತಮ್ಮತಮ್ಮೊಳಗೆ ಕೇಳತೊಡಗಿದರು.
34 ಯೇಸು, “ನನ್ನನ್ನು ಕಳುಹಿಸಿದಾತನು (ದೇವರು) ನಾನು ಏನು ಮಾಡಬೇಕೆಂದು ಬಯಸುವನೋ ಅದನ್ನು ಮಾಡುವುದೇ ನನಗೆ ಆಹಾರವಾಗಿದೆ. ಆತನು ನನಗೆ ಕೊಟ್ಟಿರುವ ಕೆಲಸವನ್ನು ಪೂರೈಸುವುದೇ ನನಗೆ ಆಹಾರವಾಗಿದೆ. 35 ‘ಸುಗ್ಗಿಗೆ ಇನ್ನೂ ನಾಲ್ಕು ತಿಂಗಳು ಕಾಯಬೇಕು’ ಎಂದು ನೀವು ಹೇಳುವಿರಿ. ಆದರೆ ನಾನು ನಿಮಗೆ ಹೇಳುತ್ತೇನೆ, ನಿಮ್ಮ ಕಣ್ಣುಗಳನ್ನು ತೆರೆಯಿರಿ. ಹೊಲಗಳ ಸುತ್ತಲೆಲ್ಲಾ ನೋಡಿರಿ, ಅವು ಕೊಯ್ಲಿಗೆ ಬಂದಿವೆ. 36 ಈಗಲೂ ಸಹ, ಬೆಳೆಯನ್ನು ಕೊಯ್ಯುವವನಿಗೆ ಕೂಲಿ ದೊರೆಯುತ್ತದೆ. ಅವನು ಬೆಳೆಗಳನ್ನು ನಿತ್ಯಜೀವಕ್ಕಾಗಿ ಕೂಡಿಸುತ್ತಿದ್ದಾನೆ. ಆದ್ದರಿಂದ ಈಗ ಬಿತ್ತುವವರೂ ಮತ್ತು ಕೊಯ್ಯುವವರೂ ಒಟ್ಟಿಗೆ ಸಂತೋಷವಾಗಿರುವರು. 37 ‘ಒಬ್ಬನು ಬಿತ್ತುತ್ತಾನೆ, ಆದರೆ ಮತ್ತೊಬ್ಬನು ಬೆಳೆಯನ್ನು ಕೊಯ್ಯುತ್ತಾನೆ’ ಎಂದು ನಾವು ಹೇಳುವ ನಾಣ್ಣುಡಿ ಸತ್ಯವಾದದ್ದು. 38 ನೀವು ದುಡಿದಿಲ್ಲದ ಬೆಳೆಯನ್ನು ಕೊಯ್ಯುವುದಕ್ಕಾಗಿ ನಾನು ನಿಮ್ಮನ್ನು ಕಳುಹಿಸುತ್ತಿದ್ದೇನೆ. ಬೇರೆಯವರು ದುಡಿದರು, ಆದರೆ ಅವರ ದುಡಿಮೆಯಿಂದ ನೀವು ಲಾಭವನ್ನು ಪಡೆಯುತ್ತೀರಿ” ಎಂದು ಹೇಳಿದನು.
39 ಆ ಸಮಾರ್ಯ ಪಟ್ಟಣದ ಜನರಲ್ಲಿ ಅನೇಕರು ಯೇಸುವನ್ನು ನಂಬಿದರು. ಏಕೆಂದರೆ ಆ ಸ್ತ್ರೀಯು ಆತನ ವಿಷಯವಾಗಿ ಅವರಿಗೆ, “ನಾನು ಮಾಡಿರುವ ಪ್ರತಿಯೊಂದನ್ನೂ ಆತನು ನನಗೆ ತಿಳಿಸಿದನು” ಎಂದು ಹೇಳಿದ್ದಳು. 40 ಸಮಾರ್ಯದವರು ಯೇಸುವಿನ ಬಳಿಗೆ ಹೋಗಿ ತಮ್ಮೊಂದಿಗೆ ಇರಬೇಕೆಂದು ಆತನನ್ನು ಬೇಡಿಕೊಂಡರು. ಆದ್ದರಿಂದ ಆತನು ಅಲ್ಲಿ ಎರಡು ದಿನ ಇದ್ದನು. 41 ಆತನು ಹೇಳಿದ ಸಂಗತಿಗಳನ್ನು ಕೇಳಿ ಇನ್ನೂ ಅನೇಕ ಜನರು ನಂಬಿದರು.
42 ಅವರು ಆ ಸ್ತ್ರೀಗೆ, “ನಾವು ಮೊದಲು ನಿನ್ನ ಮಾತನ್ನು ಕೇಳಿ ಯೇಸುವನ್ನು ನಂಬಿದೆವು. ಆದರೆ ಈಗ ಸ್ವತಃ ನಾವೇ ಆತನ ಮಾತನ್ನು ಕೇಳಿದ್ದರಿಂದ ನಂಬುತ್ತೇವೆ. ನಿಜವಾಗಿಯೂ ಈತನೇ ಲೋಕರಕ್ಷಕನೆಂದು ಈಗ ನಮಗೆ ತಿಳಿದಿದೆ” ಎಂದು ಹೇಳಿದರು.
ಗುಣಹೊಂದಿದ ಅಧಿಕಾರಿಯ ಮಗ
(ಮತ್ತಾಯ 8:5-13; ಲೂಕ 7:1-10)
43 ಎರಡು ದಿನಗಳಾದ ನಂತರ ಯೇಸು ಅಲ್ಲಿಂದ ಗಲಿಲಾಯಕ್ಕೆ ಹೋದನು. 44 (ಪ್ರವಾದಿಗೆ ಸ್ವಂತ ಊರಿನಲ್ಲಿ ಗೌರವವಿಲ್ಲವೆಂದು ಸ್ವತಃ ಯೇಸುವೇ ತಿಳಿಸಿದ್ದನು.) 45 ಆತನು ಗಲಿಲಾಯವನ್ನು ತಲುಪಿದಾಗ, ಅಲ್ಲಿಯ ಜನರು ಆತನನ್ನು ಸ್ವಾಗತಿಸಿದರು. ಈ ಜನರು ಪಸ್ಕಹಬ್ಬಕ್ಕಾಗಿ ಜೆರುಸಲೇಮಿಗೆ ಹೋಗಿದ್ದಾಗ ಹಬ್ಬದ ಸಮಯದಲ್ಲಿ ಆತನು ಮಾಡಿದ ಕಾರ್ಯಗಳನ್ನೆಲ್ಲಾ ನೋಡಿದ್ದರು.
46 ಯೇಸು ಗಲಿಲಾಯದ ಕಾನಾ ಊರಿಗೆ ಮತ್ತೊಮ್ಮೆ ಭೇಟಿ ನೀಡಿದನು. ಆತನು ನೀರನ್ನು ದ್ರಾಕ್ಷಾರಸವನ್ನಾಗಿ ಮಾರ್ಪಡಿಸಿದ್ದು ಆ ಊರಿನಲ್ಲೇ. ರಾಜನ ಒಬ್ಬ ಅಧಿಕಾರಿಯು ಕಪೆರ್ನೌಮ್ ಪಟ್ಟಣದಲ್ಲಿ ವಾಸವಾಗಿದ್ದನು. ಅವನ ಮಗನಿಗೆ ಕಾಯಿಲೆಯಾಗಿತ್ತು. 47 ಯೇಸು ಜುದೇಯದಿಂದ ಬಂದು ಈಗ ಗಲಿಲಾಯದಲ್ಲಿ ಇದ್ದಾನೆ ಎಂಬ ಸುದ್ದಿಯನ್ನು ಅವನು ಕೇಳಿದನು. ಆದ್ದರಿಂದ ಅವನು ಆತನ ಬಳಿಗೆ ಹೋಗಿ ತನ್ನ ಮಗನನ್ನು ಗುಣಪಡಿಸುವುದಕ್ಕಾಗಿ ಕಪೆರ್ನೌಮ್ಗೆ ಬರಬೇಕೆಂದು ಆತನನ್ನು ಬೇಡಿಕೊಂಡನು. ಅವನ ಮಗನು ಸಾಯುವ ಸ್ಥಿತಿಯಲ್ಲಿದ್ದನು. 48 ಯೇಸು ಅವನಿಗೆ, “ನೀವು ಸೂಚಕಕಾರ್ಯಗಳನ್ನು ಮತ್ತು ಆಶ್ಚರ್ಯಕರವಾದ ಕಾರ್ಯಗಳನ್ನು ನೋಡದ ಹೊರತು ನನ್ನನ್ನು ನಂಬುವುದೇ ಇಲ್ಲ” ಎಂದು ಹೇಳಿದನು.
49 ರಾಜನ ಅಧಿಕಾರಿ, “ಸ್ವಾಮೀ, ನನ್ನ ಮಗನು ಸಾಯುವ ಮೊದಲೇ ನೀನು ಬರಬೇಕು” ಎಂದು ಕೇಳಿಕೊಂಡನು.
50 ಯೇಸು ಅವನಿಗೆ, “ಹೋಗು, ನಿನ್ನ ಮಗನು ಬದುಕುವನು” ಎಂದು ಉತ್ತರಕೊಟ್ಟನು.
ಯೇಸುವಿನ ಮಾತನ್ನು ಅವನು ನಂಬಿ ಮನೆಗೆ ಹಿಂತಿರುಗಿದನು. 51 ಅವನು ಮನೆಗೆ ಹೋಗುತ್ತಿರುವಾಗ ಅವನ ಸೇವಕರುಗಳು ಬಂದು ಅವನನ್ನು ಭೇಟಿಯಾಗಿ, “ನಿನ್ನ ಮಗನು ಗುಣಹೊಂದಿದನು” ಎಂದು ತಿಳಿಸಿದರು.
52 ಅವನು, “ನನ್ನ ಮಗನಿಗೆ ಯಾವಾಗ ಗುಣವಾಯಿತು?” ಎಂದು ಕೇಳಿದನು.
ಸೇವಕರುಗಳು, “ನಿನ್ನೆ ಮಧ್ಯಾಹ್ನ ಸುಮಾರು ಒಂದು ಗಂಟೆಯಲ್ಲಿ ಅವನ ಜ್ವರವು ಬಿಟ್ಟಿತು” ಎಂದು ಉತ್ತರಕೊಟ್ಟರು.
53 “ನಿನ್ನ ಮಗನು ಬದುಕುವನು” ಎಂದು ಯೇಸು ಹೇಳಿದ್ದು ಇದೇ ಹೊತ್ತಿನಲ್ಲಿ ಎಂಬುದು ತಂದೆಗೆ ತಿಳಿದಿತ್ತು. ಆದ್ದರಿಂದ ಅವನು ಮತ್ತು ಅವನ ಮನೆಯವರೆಲ್ಲ ಯೇಸುವನ್ನು ನಂಬಿದರು.
54 ಯೇಸು ಜುದೇಯದಿಂದ ಗಲಿಲಾಯಕ್ಕೆ ಬಂದ ಮೇಲೆ ಮಾಡಿದ ಎರಡನೆಯ ಸೂಚಕಕಾರ್ಯವಿದು.
Kannada Holy Bible: Easy-to-Read Version. All rights reserved. © 1997 Bible League International