Print Page Options
Previous Prev Day Next DayNext

Old/New Testament

Each day includes a passage from both the Old Testament and New Testament.
Duration: 365 days
Kannada Holy Bible: Easy-to-Read Version (KERV)
Version
2 ರಾಜರುಗಳು 13-14

ಯೆಹೋವಾಹಾಜನು ತನ್ನ ಆಳ್ವಿಕೆಯನ್ನು ಆರಂಭಿಸಿದನು

13 ಯೆಹೂದದ ಅರಸನೂ ಅಹಜ್ಯನ ಮಗನೂ ಆದ ಯೆಹೋವಾಷನ ಆಳ್ವಿಕೆಯ ಇಪ್ಪತ್ತಮೂರನೆಯ ವರ್ಷದಲ್ಲಿ ಯೇಹುವಿನ ಮಗನಾದ ಯೆಹೋವಾಹಾಜನು ಸಮಾರ್ಯದಲ್ಲಿ ಇಸ್ರೇಲಿನ ರಾಜನಾದನು. ಯೆಹೋವಾಹಾಜನು ಹದಿನೇಳು ವರ್ಷ ಆಳಿದನು.

ಯೆಹೋವನು ತಪ್ಪೆಂದು ಹೇಳಿದ ಕಾರ್ಯಗಳನ್ನು ಯೆಹೋವಾಹಾಜನು ಮಾಡಿದನು. ಇಸ್ರೇಲರನ್ನು ಪಾಪಮಾಡುವಂತೆ ಪ್ರೇರೇಪಿಸಿದ ನೆಬಾಟನ ಮಗನಾದ ಯಾರೊಬ್ಬಾಮನ ಪಾಪಗಳನ್ನೂ ಯೆಹೋವಾಹಾಜನು ಅನುಸರಿಸುತ್ತಲೇ ಹೋದನು. ಆಗ ಯೆಹೋವನು ಇಸ್ರೇಲಿಗೆ ವಿರುದ್ಧವಾಗಿ ಕೋಪಗೊಂಡು ಅರಾಮ್ಯರ ರಾಜನಾದ ಹಜಾಯೇಲನ ಮತ್ತು ಅವನ ಮಗನಾದ ಬೆನ್ಹದದನ ಅಧೀನಕ್ಕೆ ಇಸ್ರೇಲನ್ನು ಒಪ್ಪಿಸಿದನು.

ಇಸ್ರೇಲಿನ ಮೇಲೆ ಯೆಹೋವನ ಕರುಣೆ

ಆಗ ಯೆಹೋವಾಹಾಜನು ಯೆಹೋವನಿಗೆ ಮೊರೆಯಿಟ್ಟನು. ಯೆಹೋವನು ಅವನ ಮೊರೆಯನ್ನು ಕೇಳಿ, ಅರಾಮ್ಯರ ರಾಜನಿಂದ ಬಾಧೆಗೆ ಒಳಗಾಗಿದ್ದ

ಇಸ್ರೇಲನ್ನು ರಕ್ಷಿಸಲು ಒಬ್ಬನನ್ನು ಯೆಹೋವನು ಕಳುಹಿಸಿದನು. ಇಸ್ರೇಲರು ಅರಾಮ್ಯದಿಂದ ಬಿಡುಗಡೆಗೊಂಡು ಸ್ವತಂತ್ರರಾದರು. ಇಸ್ರೇಲರು ತಮ್ಮ ಸ್ವಂತ ಮನೆಗಳಿಗೆ ಹಿಂದಿರುಗಿ ಸುರಕ್ಷಿತವಾಗಿ ವಾಸಿಸಿದರು.

ಆದರೂ ಇಸ್ರೇಲರು ಪಾಪಗಳನ್ನು ಮಾಡುವಂತೆ ಪ್ರೇರೇಪಿಸಿದ ಯಾರೊಬ್ಬಾಮನ ಕುಟುಂಬದ ಪಾಪಗಳನ್ನು ಮಾಡುವುದನ್ನು ಇಸ್ರೇಲರು ನಿಲ್ಲಿಸಲಿಲ್ಲ. ಇಸ್ರೇಲರು ಯಾರೊಬ್ಬಾಮನ ಪಾಪಗಳನ್ನು ಮಾಡುತ್ತಲೇ ಹೋದರು. ಅವರು ಸಮಾರ್ಯದಲ್ಲಿ ಅಶೇರ ವಿಗ್ರಹಸ್ತಂಭವನ್ನು ನೆಟ್ಟರು.

ಅರಾಮ್ಯರ ರಾಜನು ಯೆಹೋವಾಹಾಜನ ಸೇನೆಯನ್ನು ಸೋಲಿಸಿದನು. ಅರಾಮ್ಯರ ರಾಜನು ಐವತ್ತು ಮಂದಿ ರಾಹುತರನ್ನು, ಹತ್ತು ರಥಗಳನ್ನು ಮತ್ತು ಹತ್ತು ಸಾವಿರ ಭೂಸೈನಿಕರನ್ನು ಬಿಟ್ಟು ಉಳಿದವರೆಲ್ಲರನ್ನು ಸುಗ್ಗಿಯ ಕಾಲದಲ್ಲಿ ಗಾಳಿಗೆ ಹಾರಿಹೋಗುವ ಹೊಟ್ಟಿನಂತೆ ನಾಶಮಾಡಿದನು.

“ಇಸ್ರೇಲಿನ ರಾಜರುಗಳು ಇತಿಹಾಸ” ಎಂಬ ಪುಸ್ತಕದಲ್ಲಿ ಯೆಹೋವಾಹಾಜನು ಮಾಡಿದ ಇತರ ಮಹಾಕಾರ್ಯಗಳನ್ನು ಕುರಿತು ಬರೆಯಲಾಗಿದೆ. ಯೆಹೋವಾಹಾಜನು ತೀರಿಕೊಂಡಾಗ ಅವನನ್ನು ಅವನ ಪೂರ್ವಿಕರ ಬಳಿ ಸಮಾರ್ಯದಲ್ಲಿ ಸಮಾಧಿಮಾಡಿದರು. ಯೆಹೋವಾಹಾಜನ ನಂತರ ಅವನ ಮಗನಾದ ಯೋವಾಷನು ನೂತನ ರಾಜನಾದನು.

ಇಸ್ರೇಲಿನಲ್ಲಿ ಯೋವಾಷನ ಆಳ್ವಿಕೆ

10 ಯೆಹೂದದ ರಾಜನಾಗಿದ್ದ ಯೆಹೋವಾಷನ ಆಳ್ವಿಕೆಯ ಮೂವತ್ತೇಳನೆಯ ವರ್ಷದಲ್ಲಿ ಯೆಹೋವಾಹಾಜನ ಮಗನಾದ ಯೋವಾಷನು ಸಮಾರ್ಯದಲ್ಲಿ ಇಸ್ರೇಲಿನ ರಾಜನಾದನು. ಯೋವಾಷನು ಇಸ್ರೇಲನ್ನು ಹದಿನಾರು ವರ್ಷ ಆಳಿದನು. 11 ಯೆಹೋವನು ತಪ್ಪೆಂದು ಹೇಳಿದ ಕಾರ್ಯಗಳನ್ನು ಇಸ್ರೇಲಿನ ರಾಜನಾದ ಯೋವಾಷನು ಮಾಡಿದನು. ಇಸ್ರೇಲರು ಪಾಪಗಳನ್ನು ಮಾಡುವಂತೆ ಪ್ರೇರೇಪಿಸಿದ ನೆಬಾಟನ ಮಗನಾದ ಯಾರೊಬ್ಬಾಮನ ಪಾಪಗಳನ್ನು ಮತ್ತೆ ಮಾಡುವುದನ್ನು ಅವನು ನಿಲ್ಲಿಸಲಿಲ್ಲ. 12 ಯೋವಾಷನು ಮಾಡಿದ ಮಹಾಕಾರ್ಯಗಳನ್ನು ಮತ್ತು ಯೆಹೂದದ ರಾಜನಾದ ಅಮಚ್ಯನ ವಿರುದ್ಧವಾಗಿ ಅವನು ಮಾಡಿದ ಯುದ್ಧಗಳನ್ನು, “ಇಸ್ರೇಲರ ರಾಜರುಗಳ ಇತಿಹಾಸ” ಎಂಬ ಪುಸ್ತಕದಲ್ಲಿ ಬರೆಯಲಾಗಿದೆ. 13 ಯೋವಾಷನು ತೀರಿಕೊಂಡಾಗ ಅವನ ಪೂರ್ವಿಕರ ಬಳಿಯಲ್ಲಿ ಅವನನ್ನು ಸಮಾಧಿಮಾಡಿದರು. ಅನಂತರ ಯಾರೊಬ್ಬಾಮನು ಯೋವಾಷಾನ ಸಿಂಹಾಸನದ ಮೇಲೆ ಕುಳಿತುಕೊಂಡು ನೂತನ ರಾಜನಾದನು. ಯೋವಾಷನನ್ನು ಸಮಾರ್ಯದಲ್ಲಿ ಇಸ್ರೇಲಿನ ರಾಜರುಗಳ ಜೊತೆ ಸಮಾಧಿಮಾಡಿದರು.

ಯೋವಾಷನು ಎಲೀಷನನ್ನು ಸಂಧಿಸುವನು

14 ಎಲೀಷನು ಕಾಯಿಲೆ ಬಿದ್ದನು. ತರುವಾಯ, ಈ ಕಾಯಿಲೆಯಿಂದ ಎಲೀಷನು ಸತ್ತುಹೋದನು. ಇಸ್ರೇಲಿನ ರಾಜನಾದ ಯೋವಾಷನು ಎಲೀಷನ ಬಳಿಗೆ ಹೋದನು. ಯೋವಾಷನು ಎಲೀಷನಿಗಾಗಿ ಗೋಳಾಡಿದನು. ಯೋವಾಷನು, “ನನ್ನ ತಂದೆಯೇ, ನನ್ನ ತಂದೆಯೇ, ದೇವರು ಬಂದು ನಿನ್ನನ್ನು ತೆಗೆದುಕೊಂಡು ಹೋಗಲು ಇದು ಸಕಾಲವೇ?”[a] ಎಂದು ಹೇಳಿದನು.

15 ಎಲೀಷನು ಯೋವಾಷನಿಗೆ, “ಒಂದು ಬಿಲ್ಲು ಮತ್ತು ಕೆಲವು ಬಾಣಗಳನ್ನು ತೆಗೆದುಕೋ” ಎಂದು ಹೇಳಿದನು.

ಯೋವಾಷನು ಒಂದು ಬಿಲ್ಲು ಮತ್ತು ಕೆಲವು ಬಾಣಗಳನ್ನು ತೆಗೆದುಕೊಂಡನು. 16 ಆಗ ಎಲೀಷನು ಇಸ್ರೇಲಿನ ರಾಜನಿಗೆ, “ಬಿಲ್ಲಿನ ಮೇಲೆ ನಿನ್ನ ಕೈಯನ್ನು ಇಡು” ಎಂದು ಹೇಳಿದನು. ಯೋವಾಷನು ತನ್ನ ಕೈಯನ್ನು ಬಿಲ್ಲಿನ ಮೇಲಿಟ್ಟನು. ನಂತರ ಎಲೀಷನು ತನ್ನ ಕೈಗಳನ್ನು ರಾಜನ ಕೈಗಳ ಮೇಲಿಟ್ಟನು. 17 ಎಲೀಷನು, “ಪೂರ್ವದಿಕ್ಕಿನ ಕಿಟಕಿಯನ್ನು ತೆಗೆ” ಎಂದು ಹೇಳಿದನು.

ಯೋವಾಷನು ಕಿಟಕಿಯನ್ನು ತೆರೆದನು. ಆಗ ಎಲೀಷನು, “ಹೊಡಿ” ಎಂದನು. ಯೋವಾಷನು ಹೊಡೆದನು. ಆಗ ಎಲೀಷನು, “ಅದು ಯೆಹೋವನ ವಿಜಯದ ಬಾಣ! ಅರಾಮ್ಯರ ಮೇಲಿನ ವಿಜಯದ ಬಾಣ! ನೀನು ಅರಾಮ್ಯರನ್ನು ಅಫೇಕದಲ್ಲಿ ಸೋಲಿಸುವೆ. ನೀನು ಅವರನ್ನು ನಾಶಗೊಳಿಸುವೆ” ಎಂದು ಹೇಳಿದನು.

18 ಎಲೀಷನು, “ಬಾಣಗಳನ್ನು ತೆಗೆದುಕೋ” ಎಂದನು. ಯೋವಾಷನು ಬಾಣಗಳನ್ನು ತೆಗೆದುಕೊಂಡನು. ಆಗ ಎಲೀಷನು ಇಸ್ರೇಲಿನ ರಾಜನಿಗೆ, “ನೆಲದ ಮೇಲೆ ಹೊಡಿ” ಎಂದನು.

ಯೋವಾಷನು ನೆಲವನ್ನು ಮೂರು ಸಲ ಹೊಡೆದನು. ನಂತರ ಅವನು ನಿಲ್ಲಿಸಿದನು. 19 ದೇವಮನುಷ್ಯನು (ಎಲೀಷನು) ಯೋವಾಷನ ಮೇಲೆ ಕೋಪಗೊಂಡು, “ನೀನು ಐದು ಅಥವಾ ಆರು ಸಲ ಹೊಡೆಯಬೇಕಾಗಿತ್ತು! ಆಗ ನೀನು ಅರಾಮ್ಯರನ್ನು ನಾಶಗೊಳಿಸುವವರೆಗೆ ಸೋಲಿಸಿ ಬಿಡಬಹುದಾಗಿತ್ತು! ಆದರೆ ಈಗ ನೀನು ಅರಾಮ್ಯರನ್ನು ಮೂರು ಸಲ ಮಾತ್ರ ಸೋಲಿಸುವೆ!” ಎಂದು ಹೇಳಿದನು.

ಎಲೀಷನ ಸಮಾಧಿಯಲ್ಲಿ ಸಂಭವಿಸಿದ ಆಶ್ಚರ್ಯಕರವಾದ ಸಂಗತಿ

20 ಎಲೀಷನು ತೀರಿಕೊಂಡಾಗ ಜನರು ಅವನನ್ನು ಸಮಾಧಿಮಾಡಿದರು.

ವಸಂತಮಾಸದ ಒಂದು ದಿನ, ಮೋವಾಬ್ಯ ಸೈನಿಕರ ಒಂದು ಗುಂಪು ಇಸ್ರೇಲಿಗೆ ಸುಲಿಗೆ ಮಾಡಲು ಬಂದಿತು. 21 ಇಸ್ರೇಲರಲ್ಲಿ ಕೆಲವರು ಸತ್ತವನೊಬ್ಬನನ್ನು ಸಮಾಧಿ ಮಾಡುತ್ತಿರುವಾಗ ಸೈನಿಕರ ಆ ಗುಂಪನ್ನು ನೋಡಿ ಸತ್ತವನನ್ನು ಎಲೀಷನ ಸಮಾಧಿಯಲ್ಲಿ ಎಸೆದು ಓಡಿಹೋದರು. ಎಲೀಷನ ಮೂಳೆಗಳನ್ನು ಸತ್ತವನು ಸ್ಪರ್ಶಿಸಿದ ತಕ್ಷಣ, ಸತ್ತ ಮನುಷ್ಯನಿಗೆ ಜೀವ ಬಂದು, ಅವನು ತನ್ನ ಕಾಲುಗಳ ಮೇಲೆ ನಿಂತುಕೊಂಡನು!

ಯೋವಾಷನು ಅರಾಮ್ಯರಿಂದ ಇಸ್ರೇಲಿನ ನಗರಗಳನ್ನು ಮತ್ತೆ ಗೆದ್ದುಕೊಂಡನು

22 ಯೆಹೋವಾಹಾಜನು ಆಳುತ್ತಿದ್ದ ದಿನಗಳಲ್ಲೆಲ್ಲಾ ಅರಾಮ್ಯರ ರಾಜನಾದ ಹಜಾಯೇಲನು ಇಸ್ರೇಲಿಗೆ ತೊಂದರೆ ಕೊಡುತ್ತಿದ್ದನು. 23 ಆದರೆ ಯೆಹೋವನು ಇಸ್ರೇಲರಿಗೆ ದಯಾಪರನಾಗಿದ್ದನು. ಯೆಹೋವನು ಕರುಣೆಯಿಂದ ಇಸ್ರೇಲರಿಗೆ ಅಭಿಮುಖನಾದನು. ಏಕೆಂದರೆ ಆತನು ಅಬ್ರಹಾಮನೊಂದಿಗೆ ಇಸಾಕನೊಂದಿಗೆ ಮತ್ತು ಯಾಕೋಬನೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದನು. ಯೆಹೋವನು ಇಸ್ರೇಲರನ್ನು ನಾಶಗೊಳಿಸಲಿಲ್ಲ. ಅವರನ್ನು ಇನ್ನೂ ತಳ್ಳಿಬಿಟ್ಟಿರಲಿಲ್ಲ.

24 ಅರಾಮ್ಯರ ರಾಜನಾದ ಹಜಾಯೇಲನು ಸತ್ತಮೇಲೆ ಬೆನ್ಹದದನು ನೂತನ ರಾಜನಾದನು. 25 ಹಜಾಯೇಲನು ಸಾಯುವುದಕ್ಕೆ ಮೊದಲು, ಯೋವಾಷನ ತಂದೆಯಾದ ಯೆಹೋವಾಹಾಜನಿಂದ ಯುದ್ಧದಲ್ಲಿ ಕೆಲವು ನಗರಗಳನ್ನು ಮತ್ತೆ ವಶಪಡಿಸಿಕೊಂಡನು. ಆದರೆ ಈಗ ಯೋವಾಷನು ಹಜಾಯೇಲನ ಮಗನಾದ ಬೆನ್ಹದದನಿಂದ ಈ ನಗರಗಳನ್ನು ವಶಪಡಿಸಿಕೊಂಡನು. ಯೋವಾಷನು ಬೆನ್ಹದದನನ್ನು ಮೂರು ಸಲ ಸೋಲಿಸಿ ಇಸ್ರೇಲಿನ ನಗರಗಳನ್ನು ವಶಪಡಿಸಿಕೊಂಡನು.

ಅಮಚ್ಯನು ಯೆಹೂದದಲ್ಲಿ ತನ್ನ ಆಳ್ವಿಕೆಯನ್ನು ಆರಂಭಿಸುವನು

14 ಯೆಹೋವಾಹಾಜನ ಮಗನಾದ ಯೋವಾಷನು ಇಸ್ರೇಲಿನ ರಾಜನಾಗಿದ್ದ ಎರಡನೆಯ ವರ್ಷದಲ್ಲಿ ಯೆಹೋವಾಷನ ಮಗ ಅಮಚ್ಯನು ಯೆಹೂದದ ರಾಜನಾದನು. ಅಮಚ್ಯನು ಆಳಲಾರಂಭಿಸಿದಾಗ ಅವನಿಗೆ ಇಪ್ಪತ್ತೈದು ವರ್ಷ ವಯಸ್ಸಾಗಿತ್ತು. ಅಮಚ್ಯನು ಜೆರುಸಲೇಮಿನಲ್ಲಿ ಇಪ್ಪತ್ತೊಂಭತ್ತು ವರ್ಷ ಆಳಿದನು. ಜೆರುಸಲೇಮಿನ ಯೆಹೋವದ್ದೀನಳು ಅಮಚ್ಯನ ತಾಯಿ. ಯೆಹೋವನು ಸರಿಯೆಂದು ಹೇಳಿದ ಕಾರ್ಯಗಳನ್ನು ಅಮಚ್ಯನು ಮಾಡಿದನು. ಆದರೆ ಅವನು ತನ್ನ ಪೂರ್ವಿಕನಾದ ದಾವೀದನು ಅನುಸರಿಸಿದಂತೆ ಸಂಪೂರ್ಣವಾಗಿ ಯೆಹೋವನನ್ನು ಅನುಸರಿಸಲಿಲ್ಲ. ಅಮಚ್ಯನು ತನ್ನ ತಂದೆಯಾದ ಯೆಹೋವಾಷನು ಮಾಡಿದ ಕಾರ್ಯಗಳನ್ನೆಲ್ಲ ಮಾಡಿದನು. ಆದರೆ ಅವನು ಉನ್ನತ ಪೂಜಾಸ್ಥಳಗಳನ್ನು ನಾಶಗೊಳಿಸಲಿಲ್ಲ. ಜನರು ಪೂಜಾಸ್ಥಳಗಳಲ್ಲಿ ಇನ್ನೂ ಯಜ್ಞಗಳನ್ನು ಅರ್ಪಿಸುತ್ತಿದ್ದರು ಮತ್ತು ಧೂಪ ಹಾಕುತ್ತಿದ್ದರು.

ಅಮಚ್ಯನು ರಾಜ್ಯಾಧಿಕಾರವನ್ನು ಬಿಗಿಗೊಳಿಸಿಕೊಂಡ ಮೇಲೆ, ತನ್ನ ತಂದೆಯನ್ನು ಕೊಂದ ಅಧಿಕಾರಿಗಳನ್ನು ಕೊಂದುಹಾಕಿದನು. ಆದರೆ ಮೋಶೆಯ ಧರ್ಮಶಾಸ್ತ್ರದಲ್ಲಿನ ನಿಯಮಗಳಿಗನುಸಾರವಾಗಿ ಅವನು ಕೊಲೆಗಾರರ ಮಕ್ಕಳನ್ನು ಕೊಂದುಹಾಕಲಿಲ್ಲ. ಮೋಶೆಯ ಧರ್ಮಶಾಸ್ತ್ರದಲ್ಲಿ ಯೆಹೋವನು, “ಮಕ್ಕಳು ಮಾಡಿದ ತಪ್ಪಿಗೆ ತಂದೆತಾಯಿಗಳನ್ನು ಸಾವಿಗೆ ಗುರಿಪಡಿಸಬಾರದು. ತಂದೆತಾಯಿಗಳು ಮಾಡಿದ ತಪ್ಪಿಗೆ ಅವರ ಮಕ್ಕಳನ್ನು ಸಾವಿಗೆ ಗುರಿಪಡಿಸಬಾರದು. ಒಬ್ಬ ವ್ಯಕ್ತಿಯನ್ನು ಅವನು ಮಾಡಿದ ಕೆಟ್ಟಕಾರ್ಯಕ್ಕಾಗಿ ಮಾತ್ರ ಸಾವಿಗೆ ಗುರಿಪಡಿಸಬೇಕು” ಎಂದು ಆಜ್ಞಾಪಿಸಿದ್ದಾನೆ.

ಅಮಚ್ಯನು ಉಪ್ಪಿನ ಕಣಿವೆಯಲ್ಲಿ ಹತ್ತುಸಾವಿರ ಎದೋಮ್ಯರನ್ನು ಕೊಂದುಹಾಕಿ ಅವರಿಂದ ಸೆಲ ದುರ್ಗವನ್ನು ವಶಪಡಿಸಿಕೊಂಡು ಅದನ್ನು “ಯೊಕ್ತೆಯೇಲ್” ಎಂದು ಕರೆದನು. ಆ ಸ್ಥಳಕ್ಕೆ ಇಂದಿಗೂ ಅದೇ ಹೆಸರಿದೆ.

ಯೋವಾಷನ ವಿರುದ್ಧ ಯುದ್ಧಮಾಡಲು ಅಮಚ್ಯನ ಅಪೇಕ್ಷೆ

ಇಸ್ರೇಲರ ರಾಜನೂ ಯೇಹುವಿನ ಮೊಮ್ಮಗನೂ ಯೆಹೋವಾಹಾಜನ ಮಗನೂ ಆದ ಯೋವಾಷನ ಬಳಿಗೆ ಅಮಚ್ಯನು ಸಂದೇಶಕರನ್ನು ಕಳುಹಿಸಿದನು. ಅಮಚ್ಯನು ಸಂದೇಶದಲ್ಲಿ, “ಬಾ, ನಾವು ಪರಸ್ಪರ ಯುದ್ಧ ಮಾಡೋಣ!” ಎಂದು ಹೇಳಿದ್ದನು.

ಇಸ್ರೇಲಿನ ರಾಜನಾದ ಯೋವಾಷನು ಯೆಹೂದದ ರಾಜನಾದ ಅಮಚ್ಯನಿಗೆ, “ಲೆಬನೋನಿನ ಒಂದು ಮುಳ್ಳುಗಿಡವು ಲೆಬನೋನಿನ ದೇವದಾರುಮರಕ್ಕೆ ಒಂದು ಸಂದೇಶವನ್ನು ಕಳುಹಿಸಿತು. ಅದು, ‘ನನ್ನ ಮಗನಿಗೆ ನಿನ್ನ ಮಗಳನ್ನು ಕೊಟ್ಟು ಮದುವೆ ಮಾಡು’ ಎಂದಿತು. ಆದರೆ ಲೆಬನೋನಿನ ಒಂದು ಕಾಡುಮೃಗವು ಆ ದಾರಿಯಲ್ಲಿ ಹೋಗುವಾಗ, ಮುಳ್ಳುಗಿಡದ ಮೇಲೆ ಹಾದುಹೋಯಿತು. 10 ನೀನು ಎದೋಮ್ಯರನ್ನು ಸೋಲಿಸಿದೆಯೆಂಬುದು ನಿಜ. ಆದರೆ ನೀನು ಎದೋಮ್ಯರ ಮೇಲೆ ಜಯಗಳಿಸಿದ್ದರಿಂದ ಗರ್ವಿತನಾಗಿರುವೆ. ನೀನು ನಿನ್ನ ಮನೆಯಲ್ಲೇ ಕುಳಿತು ಬಡಾಯಿಕೊಚ್ಚಿಕೋ. ನಿನಗೆ ತೊಂದರೆಯನ್ನು ತಂದುಕೊಳ್ಳಬೇಡ. ಇಲ್ಲವಾದರೆ ನೀನೂ ಬೀಳುವುದಲ್ಲದೆ, ಯೆಹೂದವೂ ನಿನ್ನೊಂದಿಗೆ ಬಿದ್ದುಹೋಗುವುದು!” ಎಂದು ಹೇಳಿದನು.

11 ಆದರೆ ಯೋವಾಷನ ಎಚ್ಚರಿಕೆಯನ್ನು ಅಮಚ್ಯನು ಆಲಿಸಲೇ ಇಲ್ಲ. ಆದ್ದರಿಂದ ಇಸ್ರೇಲಿನ ರಾಜನಾದ ಯೋವಾಷನು ಯೆಹೂದದ ರಾಜನಾದ ಅಮಚ್ಯನ ವಿರುದ್ಧ ಹೋರಾಟ ಮಾಡಲು ಯೆಹೂದದ ಬೇತ್ಷೆಮೆಷಿಗೆ ಹೋದನು. 12 ಯೆಹೂದ್ಯರನ್ನು ಇಸ್ರೇಲರು ಸೋಲಿಸಿದರು. ಯೆಹೂದದ ಪ್ರತಿಯೊಬ್ಬರೂ ಮನೆಗೆ ಓಡಿಹೋದರು. 13 ಇಸ್ರೇಲಿನ ರಾಜನಾದ ಯೋವಾಷನು ಬೇತ್ಷೆಮೆಷಿನಲ್ಲಿ ಯೆಹೂದದ ರಾಜನಾದ ಅಮಚ್ಯನನ್ನು ಸೆರೆಹಿಡಿದನು. ಅಮಚ್ಯನು ಯೆಹೋವಾಷನ ಮಗನೂ ಅಹಜ್ಯನ ಮೊಮ್ಮಗನೂ ಆಗಿದ್ದನು. ಯೋವಾಷನು ಜೆರುಸಲೇಮಿಗೆ ಬಂದು ಎಫ್ರಾಯೀಮ್ ಬಾಗಿಲಿನಿಂದ ಮೂಲೆಯ ಬಾಗಿಲಿನವರೆಗೆ ಆರುನೂರು ಅಡಿ ಉದ್ದದ ಗೋಡೆಯನ್ನು ಒಡೆದುಹಾಕಿದನು. 14 ನಂತರ ಯೋವಾಷನು ದೇವಾಲಯದಲ್ಲಿದ್ದ ಮತ್ತು ಅರಮನೆಯ ಭಂಡಾರದಲ್ಲಿದ್ದ ಬೆಳ್ಳಿಬಂಗಾರಗಳನ್ನು ಮತ್ತು ಪಾತ್ರೆಗಳನ್ನೆಲ್ಲ ತೆಗೆದುಕೊಂಡನು. ಇದಲ್ಲದೆ ಯೋವಾಷನು ಜನರನ್ನು ಸಹ ತನ್ನ ಸೆರೆಯಾಳುಗಳನ್ನಾಗಿ ತೆಗೆದುಕೊಂಡು ಸಮಾರ್ಯಕ್ಕೆ ಹಿಂದಿರುಗಿದನು.

15 “ಇಸ್ರೇಲಿನ ರಾಜರುಗಳ ಇತಿಹಾಸ” ಎಂಬ ಪುಸ್ತಕದಲ್ಲಿ ಯೋವಾಷನು ಮಾಡಿದ ಇತರ ಮಹಾಕಾರ್ಯಗಳನ್ನೂ ಯೆಹೂದದ ರಾಜನಾದ ಅಮಚ್ಯನ ವಿರುದ್ಧ ಅವನು ಹೇಗೆ ಹೋರಾಡಿದನೆಂಬುದನ್ನೂ ಬರೆಯಲಾಗಿದೆ. 16 ಯೋವಾಷನು ತೀರಿಕೊಂಡಾಗ ಅವನನ್ನು ಅವನ ಪೂರ್ವಿಕರಾದ ಇಸ್ರೇಲಿನ ರಾಜರೊಡನೆ ಸಮಾರ್ಯದಲ್ಲಿ ಸಮಾಧಿಮಾಡಿದರು. ಯೋವಾಷನ ನಂತರ ಅವನ ಮಗನಾದ ಯಾರೊಬ್ಬಾಮನು ನೂತನ ರಾಜನಾದನು.

ಅಮಚ್ಯನ ಸಾವು

17 ಇಸ್ರೇಲರ ರಾಜನೂ ಯೆಹೋವಾಹಾಜನ ಮಗನೂ ಆದ ಯೋವಾಷನು ಸತ್ತನಂತರ ಹದಿನೈದು ವರ್ಷ ಯೆಹೂದದ ರಾಜನೂ ಯೆಹೋವಾಷನ ಮಗನೂ ಆದ ಅಮಚ್ಯನು ಬದುಕಿದ್ದನು. 18 “ಯೆಹೂದದ ರಾಜರುಗಳ ಇತಿಹಾಸ” ಎಂಬ ಪುಸ್ತಕದಲ್ಲಿ ಅಮಚ್ಯನು ಮಾಡಿದ ಇತರ ಮಹಾಕಾರ್ಯಗಳನ್ನೆಲ್ಲ ಬರೆಯಲಾಗಿದೆ. 19 ಜನರು ಜೆರುಸಲೇಮಿನಲ್ಲಿ ಅಮಚ್ಯನ ವಿರುದ್ಧವಾಗಿ ಒಳಸಂಚು ಮಾಡಿದರು. ಅಮಚ್ಯನು ಲಾಕೀಷಿಗೆ ಓಡಿಹೋದನು. ಆದರೆ ಜನರು ಅಮಚ್ಯನ ಹಿಂದೆ ಲಾಕೀಷಿಗೆ ಆಳುಗಳನ್ನು ಕಳುಹಿಸಿದರು. ಅವರು ಲಾಕೀಷಿನಲ್ಲಿ ಅಮಚ್ಯನನ್ನು ಕೊಂದುಹಾಕಿದರು. 20 ಅಮಚ್ಯನ ದೇಹವನ್ನು ಜನರು ಕುದುರೆಗಳ ಮೇಲೆ ತೆಗೆದುಕೊಂಡು ಬಂದರು. ಅಮಚ್ಯನನ್ನು ಜೆರುಸಲೇಮಿನಲ್ಲಿರುವ ದಾವೀದನಗರದಲ್ಲಿ ಅವನ ಪೂರ್ವಿಕರ ಬಳಿ ಸಮಾಧಿಮಾಡಿದರು.

ಅಜರ್ಯನು ಯೆಹೂದದಲ್ಲಿ ತನ್ನ ಆಳ್ವಿಕೆಯನ್ನು ಆರಂಭಿಸಿದನು

21 ನಂತರ ಯೆಹೂದದ ಜನರೆಲ್ಲರೂ ಅಜರ್ಯನನ್ನು ನೂತನ ರಾಜನನ್ನಾಗಿ ಮಾಡಿದರು. ಅಜರ್ಯನಿಗೆ ಹದಿನಾರು ವರ್ಷ ವಯಸ್ಸಾಗಿತ್ತು. 22 ರಾಜನಾದ ಅಮಚ್ಯನು ಸತ್ತಮೇಲೆ ಅವನನ್ನು ಅವನ ಪೂರ್ವಿಕರ ಸ್ಮಶಾನದಲ್ಲಿ ಸಮಾಧಿ ಮಾಡಿದರು. ನಂತರ ಅಜರ್ಯನು ಏಲತ್ ಪಟ್ಟಣವನ್ನು ಮತ್ತೆ ನಿರ್ಮಿಸಿ ಅದನ್ನು ಯೆಹೂದ ರಾಜ್ಯಕ್ಕೆ ಸೇರಿಸಿಕೊಂಡನು.

ಎರಡನೆಯ ಯಾರೊಬ್ಬಾಮನು ಇಸ್ರೇಲಿನಲ್ಲಿ ತನ್ನ ಆಳ್ವಿಕೆಯನ್ನು ಆರಂಭಿಸಿದನು

23 ಯೆಹೂದದ ರಾಜನೂ ಯೆಹೋವಾಷನ ಮಗನೂ ಆದ ಅಮಚ್ಯನ ಆಳ್ವಿಕೆಯ ಹದಿನೈದನೆಯ ವರ್ಷದಲ್ಲಿ ಇಸ್ರೇಲರ ರಾಜನೂ ಯೋವಾಷನ ಮಗನೂ ಆದ ಯಾರೊಬ್ಬಾಮನು ಸಮಾರ್ಯದಲ್ಲಿ ಆಳಲಾರಂಭಿಸಿದನು. ಯಾರೊಬ್ಬಾಮನು ನಲವತ್ತೊಂದು ವರ್ಷ ಆಳಿದನು. 24 ಯೆಹೋವನು ಕೆಟ್ಟದ್ದೆಂದು ಹೇಳಿದ ಕಾರ್ಯಗಳನ್ನು ಯಾರೊಬ್ಬಾಮನು ಮಾಡಿದನು. ಇಸ್ರೇಲರನ್ನು ಪಾಪಮಾಡುವಂತೆ ಪ್ರೇರೇಪಿಸಿದ ನೆಬಾಟನ ಮಗನಾದ ಯಾರೊಬ್ಬಾಮನ ಪಾಪಕೃತ್ಯಗಳನ್ನು ಮಾಡುವುದನ್ನು ಯಾರೊಬ್ಬಾಮನು ನಿಲ್ಲಿಸಲಿಲ್ಲ. 25 ಲೆಬೊಹಮಾತಿನಿಂದ ಅರಾಬ ಸಮುದ್ರದವರೆಗೆ ಹಬ್ಬಿದ ಇಸ್ರೇಲರ ದೇಶವನ್ನು ಯಾರೊಬ್ಬಾಮನು ಮತ್ತೆ ವಶಪಡಿಸಿಕೊಂಡನು. ಇಸ್ರೇಲರ ಯೆಹೋವನು ತನ್ನ ಸೇವಕನೂ ಅಮಿತ್ತೈನ ಮಗನೂ ಗತ್‌ಹೇಫೆರಿನ ಪ್ರವಾದಿಯೂ ಆದ ಯೋನಾ ಎಂಬವನ ಮೂಲಕ ಮೊದಲೇ ತಿಳಿಸಿದ್ದಂತೆ ಇದು ಸಂಭವಿಸಿತು. 26 ಇಸ್ರೇಲಿನ ಸ್ವತಂತ್ರರಾದ ಜನರೂ ಗುಲಾಮರೂ ಬಾಧೆಪಡುತ್ತಿರುವುದನ್ನು ಯೆಹೋವನು ನೋಡಿದನು. ಇಸ್ರೇಲರಿಗೆ ಸಹಾಯ ಮಾಡುವವರು ಯಾರೂ ಇರಲಿಲ್ಲ. 27 ಈ ಲೋಕದಿಂದ ಇಸ್ರೇಲರ ಹೆಸರನ್ನೇ ತಾನು ಅಳಿಸಿಹಾಕುತ್ತೇನೆಂದು ಯೆಹೋವನು ಹೇಳಿರಲಿಲ್ಲ. ಆದ್ದರಿಂದ ಇಸ್ರೇಲಿನ ಜನರನ್ನು ರಕ್ಷಿಸಲು ಯೆಹೋವನು ಯೋವಾಷನ ಮಗನಾದ ಯಾರೊಬ್ಬಾಮನನ್ನು ಉಪಯೋಗಿಸಿಕೊಂಡನು.

28 “ಇಸ್ರೇಲಿನ ರಾಜರುಗಳ ಇತಿಹಾಸ” ಎಂಬ ಪುಸ್ತಕದಲ್ಲಿ ಯಾರೊಬ್ಬಾಮನು ಮಾಡಿದ ಇತರ ಮಹಾಕಾರ್ಯಗಳ ಬಗ್ಗೆ ಬರೆಯಲಾಗಿದೆ. ಯಾರೊಬ್ಬಾಮನು ಇಸ್ರೇಲಿಗಾಗಿ ದಮಸ್ಕವನ್ನು ಮತ್ತು ಹಮಾತನ್ನು ವಶಪಡಿಸಿಕೊಂಡದ್ದನ್ನು ಇದು ಒಳಗೊಂಡಿದೆ. (ಈ ನಗರಗಳು ಯೆಹೂದಕ್ಕೆ ಸೇರಿದ್ದವು.) 29 ಯಾರೊಬ್ಬಾಮನು ಸತ್ತಮೇಲೆ ಅವನನ್ನು ಅವನ ಪೂರ್ವಿಕರಾದ ಇಸ್ರೇಲಿನ ರಾಜರುಗಳ ಸ್ಮಶಾನದಲ್ಲಿ ಸಮಾಧಿಮಾಡಿದರು. ಯಾರೊಬ್ಬಾಮನ ಮಗನಾದ ಜೆಕರ್ಯನು ಅವನ ನಂತರ ಹೊಸ ರಾಜನಾದನು.

ಯೋಹಾನ 2

ಕಾನಾ ಊರಿನಲ್ಲಿ ಮದುವೆ

ಮಾರನೆಯ ದಿನ ಗಲಿಲಾಯದ ಕಾನಾ ಊರಿನಲ್ಲಿ ಒಂದು ಮದುವೆ ಇತ್ತು. ಯೇಸುವಿನ ತಾಯಿಯೂ ಬಂದಿದ್ದಳು. ಯೇಸು ಮತ್ತು ಆತನ ಶಿಷ್ಯರನ್ನು ಸಹ ಮದುವೆಗೆ ಆಹ್ವಾನಿಸಲಾಗಿತ್ತು. ಮದುವೆಯಲ್ಲಿ ಸಾಕಷ್ಟು ದ್ರಾಕ್ಷಾರಸವಿರಲಿಲ್ಲ. ಇದ್ದ ದ್ರಾಕ್ಷಾರಸವೆಲ್ಲಾ ಮುಗಿದುಹೋದಾಗ ಯೇಸುವಿನ ತಾಯಿಯು ಆತನಿಗೆ, “ಅವರಲ್ಲಿ ದ್ರಾಕ್ಷಾರಸವೇ ಇಲ್ಲ” ಎಂದು ತಿಳಿಸಿದಳು.

ಯೇಸು, “ಅಮ್ಮಾ, ನನ್ನ ಗೊಡವೆ ನಿನಗೇಕೆ? ನನ್ನ ಸಮಯ ಇನ್ನೂ ಬಂದಿಲ್ಲ” ಎಂದು ಉತ್ತರಕೊಟ್ಟನು.

ಯೇಸುವಿನ ತಾಯಿ ಸೇವಕರಿಗೆ, “ಯೇಸು ನಿಮಗೆ ಏನು ಹೇಳುತ್ತಾನೋ ಅದನ್ನು ಮಾಡಿರಿ” ಎಂದು ಹೇಳಿದಳು.

ಕಲ್ಲಿನಿಂದ ಮಾಡಿದ ಆರು ದೊಡ್ಡ ಬಾನೆಗಳು ಅಲ್ಲಿದ್ದವು. ಯೆಹೂದ್ಯರು ಶುದ್ಧಾಚಾರಗಳಿಗಾಗಿ ಈ ಕಲ್ಲಿನ ಬಾನೆಗಳನ್ನು ಉಪಯೋಗಿಸುತ್ತಿದ್ದರು. ಪ್ರತಿಯೊಂದು ಬಾನೆಯೂ ಸುಮಾರು ನೂರು ಲೀಟರ್‌ಗಳಷ್ಟು ನೀರು ಹಿಡಿಯುತ್ತಿತ್ತು.

ಯೇಸು ಸೇವಕರಿಗೆ, “ಆ ಬಾನೆಗಳಲ್ಲಿ ನೀರನ್ನು ತುಂಬಿರಿ” ಎಂದು ಹೇಳಿದನು. ಅಂತೆಯೇ ಸೇವಕರು ಆ ಬಾನೆಗಳ ಕಂಠದವರೆಗೂ ನೀರನ್ನು ತುಂಬಿದರು.

ಬಳಿಕ ಯೇಸು ಸೇವಕರಿಗೆ, “ಈಗ ಸ್ವಲ್ಪ ನೀರನ್ನು ತೆಗೆದುಕೊಂಡು ಹೋಗಿ ಔತಣದ ಮೇಲ್ವಿಚಾರಕನಿಗೆ ಕೊಡಿರಿ” ಎಂದು ಹೇಳಿದನು.

ಅಂತೆಯೇ ಅವರು ಅದನ್ನು ತೆಗೆದುಕೊಂಡು ಹೋದರು. ಮದುವೆಯ ಮೇಲ್ವಿಚಾರಕನು ದ್ರಾಕ್ಷಾರಸವಾಗಿ ಮಾರ್ಪಟ್ಟಿದ್ದ ನೀರನ್ನು ರುಚಿ ನೋಡಿದನು. ದ್ರಾಕ್ಷಾರಸವು ಎಲ್ಲಿಂದ ಬಂತೆಂಬುದು ಅವನಿಗೆ ಗೊತ್ತಿರಲಿಲ್ಲ. ಆದರೆ ಅದು ಆ ಸೇವಕರಿಗೆ ತಿಳಿದಿತ್ತು. ಮದುವೆಯ ಮೇಲ್ವಿಚಾರಕನು ಮದುಮಗನನ್ನು ಕರೆದು, 10 “ಜನರು ಉತ್ತಮವಾದ ದ್ರಾಕ್ಷಾರಸವನ್ನು ಯಾವಾಗಲೂ ಮೊದಲು ಹಂಚುತ್ತಾರೆ. ಅತಿಥಿಗಳು ಕುಡಿದು ಮತ್ತರಾದ ಮೇಲೆ ಅವರಿಗೆ ಕಡಿಮೆ ದರ್ಜೆಯ ದ್ರಾಕ್ಷಾರಸವನ್ನು ಕೊಡುತ್ತಾರೆ. ಆದರೆ ನೀನು ಉತ್ತಮವಾದ ದ್ರಾಕ್ಷಾರಸವನ್ನು ಈವರೆಗೂ ಇಟ್ಟಿರುವೆ!” ಎಂದು ಹೇಳಿದನು.

11 ಯೇಸು ಮಾಡಿದ ಮೊದಲನೆಯ ಅದ್ಭುತಕಾರ್ಯವಿದು. ಯೇಸು ಇದನ್ನು ಗಲಿಲಾಯದ ಕಾನಾ ಊರಿನಲ್ಲಿ ಮಾಡಿ ತನ್ನ ಮಹತ್ವವನ್ನು ತೋರಿದನು. ಆತನ ಶಿಷ್ಯರೂ ಆತನಲ್ಲಿ ನಂಬಿಕೆ ಇಟ್ಟರು.

12 ಬಳಿಕ ಯೇಸು ಕಪೆರ್ನೌಮ್ ಎಂಬ ಊರಿಗೆ ಹೋದನು. ಯೇಸುವಿನ ತಾಯಿ ಮತ್ತು ಸಹೋದರರು ಹಾಗೂ ಆತನ ಶಿಷ್ಯರು ಆತನೊಡನೆ ಹೋದರು. ಅವರೆಲ್ಲರೂ ಕಪೆರ್ನೌಮ್‌ನಲ್ಲಿ ಕೆಲವು ದಿನ ತಂಗಿದ್ದರು.

ದೇವಾಲಯದಲ್ಲಿ ಯೇಸು

(ಮತ್ತಾಯ 21:12-13; ಮಾರ್ಕ 11:15-17; ಲೂಕ 19:45-46)

13 ಆಗ ಯೆಹೂದ್ಯರ ಪಸ್ಕಹಬ್ಬ ಬಹು ಸಮೀಪವಾಗಿತ್ತು. ಆದ್ದರಿಂದ ಯೇಸು ಜೆರುಸಲೇಮಿಗೆ ಹೋದನು. 14 ದೇವಾಲಯದಲ್ಲಿ ಜನರು ದನ, ಕುರಿ ಮತ್ತು ಪಾರಿವಾಳಗಳನ್ನು ಮಾರುತ್ತಿರುವುದನ್ನು ಯೇಸು ಕಂಡನು. ಇತರ ಕೆಲವು ಜನರು ಮೇಜುಗಳ ಸಮೀಪದಲ್ಲಿ ಕುಳಿತುಕೊಂಡು ಹಣ ವಿನಿಮಯ ಮಾಡುತ್ತಿದ್ದರು ಮತ್ತು ವ್ಯಾಪಾರ ಮಾಡುತ್ತಿದ್ದರು. 15 ಯೇಸು ಹಗ್ಗದ ಕೆಲವು ತುಂಡುಗಳನ್ನು ತೆಗೆದುಕೊಂಡು ಅವುಗಳಿಂದ ಒಂದು ಚಾವಟಿ ಮಾಡಿ ಆ ಜನರನ್ನು ಮತ್ತು ದನಕುರಿಗಳನ್ನು ಬಲವಂತವಾಗಿ ದೇವಾಲಯದಿಂದ ಹೊರಗಟ್ಟಿದನು. ಯೇಸು ಮೇಜುಗಳನ್ನು ಕೆಡವಿ, ಹಣ ವಿನಿಮಯ ಮಾಡುತ್ತಿದ್ದ ಜನರ ಹಣವನ್ನು ಚೆಲ್ಲಿದನು. 16 ಪಾರಿವಾಳಗಳನ್ನು ಮಾರುತ್ತಿದ್ದವರಿಗೆ, “ಇವುಗಳನ್ನು ಹೊರಗೆ ತೆಗೆದುಕೊಂಡು ಹೋಗಿರಿ! ನನ್ನ ತಂದೆಯ ಮನೆಯನ್ನು ವ್ಯಾಪಾರ ಸ್ಥಳವನ್ನಾಗಿ ಮಾಡಬೇಡಿ!” ಎಂದು ಹೇಳಿದನು.

17 “ನಿನ್ನ ಆಲಯದ ಮೇಲಿನ ಅಭಿಮಾನವು ನನ್ನೊಳಗೆ ಬೆಂಕಿಯಂತೆ ಸುಡುತ್ತದೆ”(A)

ಎಂದು ಪವಿತ್ರ ಗ್ರಂಥದಲ್ಲಿ ಬರೆದಿರುವ ವಾಕ್ಯವನ್ನು ಯೇಸುವಿನ ಶಿಷ್ಯರು ಆಗ ಜ್ಞಾಪಿಸಿಕೊಂಡರು.

18 ಯೆಹೂದ್ಯರು ಯೇಸುವಿಗೆ, “ಇಷ್ಟೆಲ್ಲಾ ಮಾಡಲು ನಿನಗೆ ಅಧಿಕಾರವಿದೆ ಎಂದು ರುಜುವಾತುಪಡಿಸಲು ಯಾವ ಸೂಚಕಕಾರ್ಯವನ್ನು ಮಾಡುವೆ?” ಎಂದು ಕೇಳಿದರು.

19 ಯೇಸು, “ಈ ದೇವಾಲಯವನ್ನು ಕೆಡವಿರಿ, ಮೂರು ದಿನಗಳಲ್ಲಿ ಅದನ್ನು ಮತ್ತೆ ಕಟ್ಟುತ್ತೇನೆ” ಎಂದು ಉತ್ತರಕೊಟ್ಟನು.

20 ಯೆಹೂದ್ಯರು, “ಈ ದೇವಾಲಯವನ್ನು ಕಟ್ಟಲು ಜನರು ನಲವತ್ತಾರು ವರ್ಷಗಳ ಕಾಲ ದುಡಿದಿದ್ದಾರೆ! ನೀನು ಮೂರೇ ದಿನಗಳಲ್ಲಿ ಇದನ್ನು ಕಟ್ಟಬಲ್ಲೆಯಾ?” ಎಂದು ಕೇಳಿದರು.

21 (ಆದರೆ ಯೇಸು ತನ್ನ ದೇಹವೇ ದೇವಾಲಯವೆಂಬ ಅರ್ಥದಲ್ಲಿ ಹೇಳಿದ್ದನು. 22 ಯೇಸು ಸತ್ತವರೊಳಗಿಂದ ಎದ್ದುಬಂದಾಗ ಆತನ ಶಿಷ್ಯರು ಆತನ ಈ ಮಾತನ್ನು ಜ್ಞಾಪಿಸಿಕೊಂಡರು. ಅವರು ಪವಿತ್ರ ಗ್ರಂಥವನ್ನು ಮತ್ತು ಆತನು ಹೇಳಿದ ಮಾತುಗಳನ್ನು ನಂಬಿದರು.)

23 ಯೇಸು ಪಸ್ಕಹಬ್ಬಕ್ಕಾಗಿ ಜೆರುಸಲೇಮಿನಲ್ಲಿದ್ದನು. ಆತನು ಮಾಡಿದ ಸೂಚಕಕಾರ್ಯಗಳನ್ನು ನೋಡಿದಾಗ ಅನೇಕ ಜನರು ಆತನನ್ನು ನಂಬಿದರು. 24 ಆದರೆ ಯೇಸು ಅವರಲ್ಲಿ ಭರವಸೆ ಇಡಲಿಲ್ಲ. ಏಕೆಂದರೆ ಆತನು ಅವರನ್ನು ಚೆನ್ನಾಗಿ ಬಲ್ಲವನಾಗಿದ್ದನು. 25 ಜನರ ಬಗ್ಗೆ ಆತನಿಗೆ ಯಾರೂ ತಿಳಿಸುವ ಅಗತ್ಯವಿರಲಿಲ್ಲ. ಮನುಷ್ಯನ ಮನಸ್ಸಿನಲ್ಲಿ ಏನಿದೆ ಎಂಬುದು ಯೇಸುವಿಗೆ ಗೊತ್ತಿತ್ತು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International