Old/New Testament
16 ಆಗ ಯೆಹೋವನು ಹನಾನೀಯ ಮಗನಾದ ಯೇಹುವಿನೊಂದಿಗೆ ಮಾತನಾಡಿ ರಾಜನಾದ ಬಾಷನ ವಿರುದ್ಧವಾಗಿ ಹೀಗೆ ಹೇಳಿದನು: 2 “ನಾನು ನಿನ್ನನ್ನು ಪ್ರಾಮುಖ್ಯ ವ್ಯಕ್ತಿಯನ್ನಾಗಿ ಮಾಡಿದೆ. ಇಸ್ರೇಲಿನ ಜನರಿಗೆ ನಿನ್ನನ್ನು ರಾಜನನ್ನಾಗಿ ನಾನು ಮಾಡಿದೆ. ಆದರೆ ನೀನು ಯಾರೊಬ್ಬಾಮನ ಮಾರ್ಗವನ್ನೇ ಅನುಸರಿಸಿದೆ. ಇಸ್ರೇಲಿನ ನನ್ನ ಜನರು ಪಾಪಮಾಡುವಂತೆ ನೀನು ಪ್ರೇರೇಪಿಸಿದೆ. ಅವರು ತಮ್ಮ ಪಾಪಗಳಿಂದ ನನ್ನನ್ನು ಕೋಪಗೊಳಿಸಿದರು. 3 ಆದ್ದರಿಂದ ಬಾಷನೇ, ನಿನ್ನನ್ನೂ ನಿನ್ನ ಕುಟುಂಬವನ್ನೂ ನಾನು ನಾಶಪಡಿಸುತ್ತೇನೆ. ನೆಬಾಟನ ಮಗನಾದ ಯಾರೊಬ್ಬಾಮನ ಕುಟುಂಬಕ್ಕೆ ನಾನು ಮಾಡಿದಂತೆ ನಿನಗೂ ಮಾಡುತ್ತೇನೆ. 4 ನಿನ್ನ ಕುಟುಂಬದ ಜನರು ನಗರದ ಬೀದಿಗಳಲ್ಲಿ ಸಾಯುತ್ತಾರೆ; ಅವರ ದೇಹಗಳನ್ನು ನಾಯಿಗಳು ತಿನ್ನುತ್ತವೆ. ನಿನ್ನ ಕುಟುಂಬದ ಕೆಲವು ಜನರು ಹೊಲಗಳಲ್ಲಿ ಸಾಯುತ್ತಾರೆ. ಅವರ ದೇಹಗಳನ್ನು ಪಕ್ಷಿಗಳು ತಿನ್ನುತ್ತವೆ.”
5 ಬಾಷನು ಮಾಡಿದ ಎಲ್ಲ ಕಾರ್ಯಗಳ ಬಗ್ಗೆ ಮತ್ತು ಅವನ ಮಹಾಕಾರ್ಯಗಳ ಬಗ್ಗೆ, “ಇಸ್ರೇಲಿನ ರಾಜರುಗಳ ಇತಿಹಾಸ” ಎಂಬ ಪುಸ್ತಕದಲ್ಲಿ ಬರೆದಿದ್ದಾರೆ. 6 ಬಾಷನು ಸತ್ತುಹೋದನು. ಅವನನ್ನು ತಿರ್ಚದಲ್ಲಿ ಸಮಾಧಿಮಾಡಿದರು. ಅವನ ಮಗನಾದ ಏಲನು ಅವನ ನಂತರ ಹೊಸ ರಾಜನಾದನು.
7 ಯೆಹೋವನು ಪ್ರವಾದಿಯಾದ ಯೇಹುವಿಗೆ ಒಂದು ಸಂದೇಶವನ್ನು ನೀಡಿದನು. ಈ ಸಂದೇಶವು ಬಾಷನ ಮತ್ತು ಅವನ ಕುಟುಂಬದ ವಿರುದ್ಧವಾಗಿತ್ತು. ಬಾಷನು ಯೆಹೋವನ ವಿರುದ್ಧವಾಗಿ ದುರಾಚಾರವನ್ನೆಸಗಿದನು. ಇದು ಯೆಹೋವನಿಗೆ ಹೆಚ್ಚು ಕೋಪವನ್ನು ಉಂಟುಮಾಡಿತು. ಯಾರೊಬ್ಬಾಮನ ಕುಟುಂಬವು ಅವನಿಗಿಂತ ಮುಂಚೆ ಮಾಡಿದ ಕಾರ್ಯಗಳನ್ನೇ ಬಾಷನೂ ಮಾಡಿದನು. ಬಾಷನು ಯಾರೊಬ್ಬಾಮನ ಕುಟುಂಬದವರನ್ನೆಲ್ಲಾ ಕೊಂದುಹಾಕಿದ್ದಕ್ಕಾಗಿಯೂ ಯೆಹೋವನು ಕೋಪಗೊಂಡನು.
ಇಸ್ರೇಲಿನ ರಾಜನಾದ ಏಲ
8 ಆಸನು ಯೆಹೂದದ ರಾಜನಾದ ಇಪ್ಪತ್ತಾರನೆಯ ವರ್ಷದಲ್ಲಿ ಏಲನು ಇಸ್ರೇಲಿನ ರಾಜನಾದನು. ಏಲನು ಬಾಷನ ಮಗ. ಅವನು ತಿರ್ಚದಲ್ಲಿ ಎರಡು ವರ್ಷ ಆಳಿದನು.
9 ಜಿಮ್ರಿಯು ಏಲನ ಅಧಿಕಾರಿಗಳಲ್ಲಿ ಒಬ್ಬನಾಗಿದ್ದನು. ಏಲನ ರಥಬಲದ ಅರ್ಧಭಾಗಕ್ಕೆ ಜಿಮ್ರಿಯು ಅಧಿಪತಿ. ಆದರೆ ಏಲನ ವಿರುದ್ಧ ಜಿಮ್ರಿಯು ಸಂಚುಮಾಡಿದನು. ರಾಜನಾದ ಏಲನು ತಿರ್ಚದಲ್ಲಿದ್ದನು. ಅವನು ಅರ್ಚನ ಮನೆಯಲ್ಲಿ ಕುಡಿದು ಮತ್ತನಾದನು. ಅರ್ಚನು ತಿರ್ಚದಲ್ಲಿದ್ದ ಅರಮನೆಯ ಮೇಲ್ವಿಚಾರಕ. 10 ಜಿಮ್ರಿಯು ಆ ಮನೆಯೊಳಕ್ಕೆ ಹೋಗಿ ರಾಜನಾದ ಏಲನನ್ನು ಕೊಂದುಹಾಕಿದನು. ಆಸನು ಯೆಹೂದದ ರಾಜನಾಗಿದ್ದ ಇಪ್ಪತ್ತೇಳನೆಯ ವರ್ಷದಲ್ಲಿ ಇದು ನಡೆಯಿತು. ಏಲನ ನಂತರ ಜಿಮ್ರಿಯು ಇಸ್ರೇಲಿನ ಹೊಸ ರಾಜನಾದನು.
ಇಸ್ರೇಲಿನ ರಾಜನಾದ ಜಿಮ್ರಿ
11 ಜಿಮ್ರಿಯು ಹೊಸ ರಾಜನಾದ ಮೇಲೆ ಬಾಷನ ಕುಟುಂಬದವರನ್ನೆಲ್ಲಾ ಕೊಂದುಹಾಕಿದನು. ಅವನು ಬಾಷನ ಕುಟುಂಬದಲ್ಲಿ ಯಾವ ಗಂಡಸನ್ನೂ ಬಿಡಲಿಲ್ಲ. ಬಾಷನ ಸ್ನೇಹಿತರನ್ನೂ ಜಿಮ್ರಿಯು ಕೊಂದುಹಾಕಿದನು. 12 ಹೀಗೆ ಜಿಮ್ರಿಯು ಬಾಷನ ಕುಟುಂಬವನ್ನು ನಾಶಗೊಳಿಸಿದನು. ಬಾಷನ ವಿರುದ್ಧವಾಗಿ ಯೆಹೋವನು ಪ್ರವಾದಿಯಾದ ಯೇಹುವಿನ ಮೂಲಕ ತಿಳಿಸಿದಂತೆ ಇದು ಸಂಭವಿಸಿತು. 13 ಬಾಷನ ಮತ್ತು ಅವನ ಮಗನಾದ ಏಲನ ಪಾಪಗಳೇ ಅದಕ್ಕೆ ಕಾರಣ. ಅವರು ಪಾಪಗಳನ್ನು ಮಾಡಿದರು ಮತ್ತು ಪಾಪಗಳನ್ನು ಮಾಡುವಂತೆ ಇಸ್ರೇಲಿನ ಜನರನ್ನು ಪ್ರೇರೇಪಿಸಿದರು. ಅವರಲ್ಲಿ ಅನೇಕ ವಿಗ್ರಹಗಳಿದ್ದುದರಿಂದ ಯೆಹೋವನು ಕೋಪಗೊಂಡನು.
14 ಏಲನು ಮಾಡಿದ ಇತರ ಕಾರ್ಯಗಳ ಬಗ್ಗೆ, “ಇಸ್ರೇಲಿನ ರಾಜರುಗಳ ಇತಿಹಾಸ” ಎಂಬ ಪುಸ್ತಕದಲ್ಲಿ ಬರೆದಿದ್ದಾರೆ.
15 ಆಸನು ಯೆಹೂದದ ರಾಜನಾದ ಇಪ್ಪತ್ತೇಳನೆಯ ವರ್ಷದಲ್ಲಿ ಜಿಮ್ರಿಯು ಇಸ್ರೇಲಿನ ರಾಜನಾದನು. ಜಿಮ್ರಿಯು ತಿರ್ಚದಲ್ಲಿ ಏಳು ದಿನ ಆಳಿದನು. ಆಗ ಸಂಭವಿಸಿದ್ದೇನೆಂದರೆ: ಇಸ್ರೇಲಿನ ಸೈನ್ಯವು ಫಿಲಿಷ್ಟಿಯರಿಗೆ ಸೇರಿದ್ದ ಗಿಬ್ಬೆತೋನಿನ ವಿರುದ್ಧ ಮುತ್ತಿಗೆ ಹಾಕಿದ್ದರು. ಅವರು ಯುದ್ಧಕ್ಕೆ ಸಿದ್ಧರಾಗಿದ್ದರು. 16 ರಾಜನ ವಿರುದ್ಧ ಜಿಮ್ರಿಯು ರಹಸ್ಯಯೋಜನೆಗಳನ್ನು ಮಾಡಿದ್ದಾನೆಂಬುದು ಪಾಳೆಯದಲ್ಲಿದ್ದ ಜನರಿಗೆ ತಿಳಿಯಿತು. ಅವನು ರಾಜನನ್ನು ಕೊಂದುಹಾಕಿದನೆಂಬುದು ಅವರಿಗೆ ತಿಳಿಯಿತು. ಆದ್ದರಿಂದ ಇಸ್ರೇಲರೆಲ್ಲರೂ ಆ ದಿನವೇ ಪಾಳೆಯದಲ್ಲಿ ಒಮ್ರಿಯನ್ನು ಇಸ್ರೇಲಿನ ರಾಜನನ್ನಾಗಿ ಮಾಡಿದರು. ಒಮ್ರಿಯು ಸೈನ್ಯದ ಅಧಿಪತಿಯಾಗಿದ್ದನು. 17 ಒಮ್ರಿಯು ಇಸ್ರೇಲರೆಲ್ಲರೊಡನೆ ಗಿಬ್ಬೆತೋನನ್ನು ಬಿಟ್ಟು ತಿರ್ಚಕ್ಕೆ ಮುತ್ತಿಗೆ ಹಾಕಿದನು. 18 ಆ ನಗರವು ವಶವಾದುದನ್ನು ಜಿಮ್ರಿಯು ಕಂಡು ಅರಮನೆಯೊಳಕ್ಕೆ ಹೋಗಿ ಬೆಂಕಿಯನ್ನು ಹತ್ತಿಸಿದನು. ಅವನು ಅರಮನೆಯನ್ನು ಸುಟ್ಟುಹಾಕಿ ತಾನೂ ಸುಟ್ಟುಕೊಂಡನು. 19 ಜಿಮ್ರಿಯು ತಾನು ಮಾಡಿದ ಪಾಪದ ಕಾರಣದಿಂದಲೇ ಸತ್ತುಹೋದನು. ಯೆಹೋವನು ತಪ್ಪೆಂದು ಹೇಳಿದ ಕಾರ್ಯಗಳನ್ನು ಜಿಮ್ರಿಯು ಮಾಡಿದನು. ಯಾರೊಬ್ಬಾಮನು ಪಾಪಮಾಡಿದಂತೆ ಅವನೂ ಪಾಪವನ್ನು ಮಾಡಿದನು. ಇಸ್ರೇಲಿನ ಜನರು ಪಾಪಮಾಡುವಂತೆ ಯಾರೊಬ್ಬಾಮನು ಪ್ರೇರೇಪಿಸಿದ್ದನು.
20 ಜಿಮ್ರಿಯ ರಹಸ್ಯಯೋಜನೆಗಳ ಕುರಿತಾಗಿಯೂ ಅವನು ಮಾಡಿದ ಇತರ ಕಾರ್ಯಗಳ ಕುರಿತಾಗಿಯೂ “ಇಸ್ರೇಲಿನ ರಾಜರುಗಳ ಇತಿಹಾಸ” ಎಂಬ ಪುಸ್ತಕದಲ್ಲಿ ಬರೆದಿದ್ದಾರೆ, ಜಿಮ್ರಿಯು ರಾಜನಾದ ಏಲಾಗೆ ವಿರುದ್ಧವಾಗಿ ತಿರುಗಿಬಿದ್ದಾಗ ಸಂಭವಿಸಿದ ಘಟನೆಗಳನ್ನೂ ಆ ಪುಸ್ತಕದಲ್ಲಿ ಬರೆಯಲಾಗಿದೆ.
ಇಸ್ರೇಲಿನ ರಾಜನಾದ ಒಮ್ರಿ
21 ಇಸ್ರೇಲಿನ ಜನರಲ್ಲಿ ಎರಡು ಪಕ್ಷಗಳಾದವು. ಗೀನತನ ಮಗನಾದ ತಿಬ್ನಿಯನ್ನು ಒಂದು ಪಕ್ಷದವರು ಅನುಸರಿಸಿ, ಅವನನ್ನು ತಮ್ಮ ರಾಜನನ್ನಾಗಿ ಮಾಡಲು ಅಪೇಕ್ಷೆಪಟ್ಟರು. ಮತ್ತೊಂದು ಪಕ್ಷದವರು ಒಮ್ರಿಯನ್ನು ಅನುಸರಿಸಿದರು. 22 ಆದರೆ ಗೀನತನ ಮಗ ತಿಬ್ನಿಯ ಹಿಂಬಾಲಕರಿಗಿಂತಲೂ ಒಮ್ರಿಯ ಹಿಂಬಾಲಕರು ಬಲಶಾಲಿಗಳಾಗಿದ್ದರು. ಆದ್ದರಿಂದ ತಿಬ್ನಿಯನ್ನು ಕೊಲ್ಲಲಾಯಿತು; ಒಮ್ರಿಯು ರಾಜನಾದನು.
23 ಆಸನು ಯೆಹೂದದ ರಾಜನಾಗಿದ್ದ ಮೂವತ್ತೊಂದನೇ ವರ್ಷದಲ್ಲಿ ಒಮ್ರಿಯು ಇಸ್ರೇಲಿನ ರಾಜನಾದನು. ಒಮ್ರಿಯು ಇಸ್ರೇಲನ್ನು ಹನ್ನೆರಡು ವರ್ಷ ಆಳಿದನು. ಆ ಹನ್ನೆರಡು ವರ್ಷಗಳಲ್ಲಿ ಆರು ವರ್ಷ ಅವನು ತಿರ್ಚದಲ್ಲಿ ಆಳಿದನು. 24 ಆದರೆ ಒಮ್ರಿಯು ಸಮಾರ್ಯ ಬೆಟ್ಟವನ್ನು ಶೆಮೆರನಿಂದ ಅರವತ್ತೆಂಟು ಕಿಲೋಗ್ರಾಂ ಬೆಳ್ಳಿಗೆ ಕೊಂಡುಕೊಂಡನು. ಒಮ್ರಿಯು ಆ ಬೆಟ್ಟದ ಮೇಲೆ ಒಂದು ನಗರವನ್ನು ಕಟ್ಟಿಸಿದನು. ಅವನು ಆ ನಗರಕ್ಕೆ ಸಮಾರ್ಯವೆಂದು ಅದರ ಒಡೆಯನಾದ ಶೆಮೆರನ ಹೆಸರನ್ನು ಇಟ್ಟನು.
25 ಯೆಹೋವನು ಕೆಟ್ಟದ್ದೆಂದು ಹೇಳಿದ ಕಾರ್ಯಗಳನ್ನೆಲ್ಲ ಒಮ್ರಿಯು ಮಾಡಿದನು. ಒಮ್ರಿಯು ಅವನಿಗಿಂತಲೂ ಮುಂಚೆ ಇದ್ದ ರಾಜರುಗಳಲ್ಲೆಲ್ಲಾ ಅತ್ಯಂತ ಕೆಟ್ಟವನು. 26 ನೆಬಾಟನ ಮಗನಾದ ಯಾರೊಬ್ಬಾಮನು ಮಾಡಿದಂತಹ ಪಾಪಗಳನ್ನೇ ಅವನೂ ಮಾಡಿದನು, ಇಸ್ರೇಲಿನ ಜನರು ಪಾಪಮಾಡುವಂತೆ ಯಾರೊಬ್ಬಾಮನು ಪ್ರೇರೇಪಿಸಿದ್ದನು. ಆದ್ದರಿಂದ ಅವರು ಇಸ್ರೇಲಿನ ದೇವರಾದ ಯೆಹೋವನನ್ನು ಹೆಚ್ಚು ಕೋಪಗೊಳಿಸಿದರು. ಅವರು ನಿಷ್ಪ್ರಯೋಜಕವಾದ ವಿಗ್ರಹಗಳನ್ನು ಆರಾಧಿಸಿದ್ದರಿಂದ ಯೆಹೋವನು ಕೋಪಗೊಂಡನು.
27 ಒಮ್ರಿಯ ಕುರಿತಾದ ಇತರ ಸಂಗತಿಗಳನ್ನೂ ಅವನ ಪರಾಕ್ರಮಗಳನ್ನೂ “ಇಸ್ರೇಲಿನ ರಾಜರುಗಳ ಇತಿಹಾಸ” ಎಂಬ ಪುಸ್ತಕದಲ್ಲಿ ಬರೆದಿದ್ದಾರೆ. 28 ಒಮ್ರಿಯು ಸತ್ತುಹೋದನು; ಅವನನ್ನು ಸಮಾರ್ಯದಲ್ಲಿ ಸಮಾಧಿಮಾಡಿದರು, ಅವನ ನಂತರ ಅವನ ಮಗನಾದ ಅಹಾಬನು ಹೊಸ ರಾಜನಾದನು.
ಇಸ್ರೇಲಿನ ರಾಜನಾದ ಅಹಾಬ
29 ಆಸನು ಯೆಹೂದದ ರಾಜನಾಗಿದ್ದ ಮೂವತ್ತೆಂಟನೇ ವರ್ಷದಲ್ಲಿ ಒಮ್ರಿಯ ಮಗನಾದ ಅಹಾಬನು ಇಸ್ರೇಲಿನ ರಾಜನಾದನು. ಅಹಾಬನು ಇಸ್ರೇಲನ್ನು ಸಮಾರ್ಯ ಪಟ್ಟಣದಲ್ಲಿ ಇಪ್ಪತ್ತೆರಡು ವರ್ಷ ಆಳಿದನು. 30 ಯೆಹೋವನು ಕೆಟ್ಟದ್ದೆಂದು ಹೇಳಿದ ಕಾರ್ಯಗಳನ್ನು ಅಹಾಬನು ಮಾಡಿದನು. ಅವನಿಗಿಂತಲೂ ಮುಂಚೆ ಇದ್ದ ರಾಜರುಗಳಲ್ಲೆಲ್ಲಾ ಅಹಾಬನೇ ಅತ್ಯಂತ ಕೆಟ್ಟವನು. 31 ನೆಬಾಟನ ಮಗನಾದ ಯಾರೊಬ್ಬಾಮನು ಮಾಡಿದಂತಹ ಪಾಪಗಳನ್ನೇ ಅಹಾಬನು ಮಾಡಿದರೂ ಅವು ಅವನಿಗೆ ಸಾಕಾಗಲಿಲ್ಲ. ಆದ್ದರಿಂದ ಅಹಾಬನು ಎತ್ಬಾಳನ ಮಗಳಾದ ಈಜೆಬೆಲಳನ್ನು ಮದುವೆಯಾದನು. ಎತ್ಬಾಳನು ಚೀದೋನ್ಯರ ರಾಜನಾಗಿದ್ದನು. ನಂತರ ಅಹಾಬನು ಬಾಳ್ ದೇವರನ್ನು ಪೂಜಿಸಿ ಅದರ ಸೇವೆ ಮಾಡಲಾರಂಭಿಸಿದನು. 32 ಬಾಳನನ್ನು ಪೂಜಿಸಲು ಅಹಾಬನು ಸಮಾರ್ಯದಲ್ಲಿ ಒಂದು ಗುಡಿಯನ್ನು ಕಟ್ಟಿಸಿದನು. ಆ ಗುಡಿಯಲ್ಲಿ ಒಂದು ಯಜ್ಞವೇದಿಕೆಯನ್ನು ಕಟ್ಟಿಸಿದನು. 33 ಅಹಾಬನು ಅಶೇರ ದೇವತೆಯನ್ನು ಆರಾಧಿಸಲು ಒಂದು ವಿಶೇಷ ಸ್ತಂಭವನ್ನು ನೆಡಿಸಿದನು. ಹೀಗೆ ಎಷ್ಟೋ ಕೆಟ್ಟಕಾರ್ಯಗಳನ್ನು ಮಾಡಿ ತನ್ನ ಮುಂಚೆ ಇದ್ದ ಇಸ್ರೇಲ್ ರಾಜರುಗಳಿಗಿಂತಲೂ ಹೆಚ್ಚಾಗಿ ಇಸ್ರೇಲ್ ದೇವರಾದ ಯೆಹೋವನನ್ನು ರೇಗಿಸಿದನು.
34 ಅಹಾಬನ ಕಾಲದಲ್ಲಿ ಬೇತೇಲಿನ ಹೀಯೇಲನು ಜೆರಿಕೊ ಪಟ್ಟಣವನ್ನು ಮತ್ತೆ ನಿರ್ಮಿಸಿದನು. ಹೀಯೇಲನು ನಗರದಲ್ಲಿ ಈ ಕೆಲಸವನ್ನು ಮಾಡಲು ಆರಂಭಿಸಿದ ಕಾಲದಲ್ಲಿಯೇ ಅವನ ಹಿರಿಯ ಮಗನಾದ ಅಬೀರಾಮನು ಸತ್ತುಹೋದನು. ಹೀಯೇಲನು ನಗರದ ಬಾಗಿಲುಗಳನ್ನು ಕಟ್ಟಿಸಿದಾಗ, ಅವನ ಕಿರಿಯ ಮಗನಾದ ಸೆಗೂಬನು ಸತ್ತುಹೋದನು. ಯೆಹೋವನು ಹೇಳಿದಂತೆಯೇ ಇದು ಸಂಭವಿಸಿತು. ನೂನನ ಮಗನಾದ ಯೆಹೋಶುವನ ಮೂಲಕ ಯೆಹೋವನು ಇದನ್ನು ತಿಳಿಸಿದ್ದನು.[a]
ಎಲೀಯ ಮತ್ತು ಬರಗಾಲ
17 ಎಲೀಯನು ಗಿಲ್ಯಾದಿನ ತಿಷ್ಬೀ ಪಟ್ಟಣದ ಒಬ್ಬ ಪ್ರವಾದಿ. ಎಲೀಯನು ರಾಜನಾದ ಅಹಾಬನಿಗೆ, “ನಾನು ಇಸ್ರೇಲರ ದೇವರಾದ ಯೆಹೋವನ ಸೇವಕನಾಗಿದ್ದೇನೆ. ಮುಂದಿನ ಕೆಲವು ವರ್ಷಗಳವರೆಗೆ ಹಿಮವಾಗಲಿ ಮಳೆಯಾಗಲಿ ಬೀಳುವುದಿಲ್ಲವೆಂದು ನಾನು ಆತನ ಹೆಸರಿನ ಮೇಲೆ ಪ್ರಮಾಣ ಮಾಡುತ್ತೇನೆ. ನಾನು ಬೀಳುವಂತೆ ಮಳೆಗೆ ಆಜ್ಞಾಪಿಸಿದರೆ ಮಾತ್ರ ಅದು ಬೀಳುತ್ತದೆ” ಎಂದು ಹೇಳಿದನು.
2 ನಂತರ ಯೆಹೋವನು ಎಲೀಯನಿಗೆ, 3 “ಈ ಸ್ಥಳವನ್ನು ತ್ಯಜಿಸಿ, ಪೂರ್ವದಿಕ್ಕಿಗೆ ಹೋಗು. ಕೆರೀತ್ ಹಳ್ಳದ ಹತ್ತಿರ ಅಡಗಿಕೊ. ಆ ಹಳ್ಳವು ಜೋರ್ಡನ್ ನದಿಯ ಪೂರ್ವದಲ್ಲಿದೆ. 4 ನೀನು ಆ ಹಳ್ಳದ ನೀರನ್ನು ಕುಡಿಯಬಹುದು. ಆ ಸ್ಥಳದಲ್ಲಿರುವ ನಿನಗೆ ಆಹಾರವನ್ನು ತಂದುಕೊಡಬೇಕೆಂದು ನಾನು ಕಾಗೆಗಳಿಗೆ ಆಜ್ಞಾಪಿಸಿದ್ದೇನೆ” ಎಂದು ಹೇಳಿದನು. 5 ಆದ್ದರಿಂದ ಯೆಹೋವನು ಹೇಳಿದಂತೆ ಅವನು ಮಾಡಿದನು. ಅವನು ಜೋರ್ಡನ್ ನದಿಯ ಪೂರ್ವಕ್ಕಿರುವ ಕೆರೀತ್ ಹಳ್ಳದ ಹತ್ತಿರ ವಾಸಿಸಲು ಹೋದನು. 6 ಕಾಗೆಗಳು ಪ್ರತಿ ಮುಂಜಾನೆ ಮತ್ತು ಸಂಜೆ ಎಲೀಯನಿಗೆ ರೊಟ್ಟಿ ಮತ್ತು ಮಾಂಸವನ್ನು ತಂದುಕೊಡುತ್ತಿದ್ದವು. ಎಲೀಯನು ಹಳ್ಳದ ನೀರನ್ನು ಕುಡಿಯುತ್ತಿದ್ದನು.
7 ಅಲ್ಲಿಯೂ ಮಳೆಯಿಲ್ಲದ್ದರಿಂದ, ಸ್ವಲ್ಪಕಾಲದ ಬಳಿಕ ಹಳ್ಳವೂ ಬತ್ತಿಹೋಯಿತು. 8 ನಂತರ ಯೆಹೋವನು ಎಲೀಯನಿಗೆ, 9 “ಚೀದೋನ್ಯರ ಚಾರೆಪ್ತಗೆ ಹೋಗಿ ಅಲ್ಲಿ ವಾಸಮಾಡು. ಆ ಸ್ಥಳದಲ್ಲಿ ಒಬ್ಬ ವಿಧವೆಯು ವಾಸಿಸುತ್ತಾಳೆ. ನಿನಗೆ ಆಹಾರವನ್ನು ಕೊಡುವಂತೆ ಅವಳಿಗೆ ನಾನು ಆಜ್ಞಾಪಿಸಿದ್ದೇನೆ” ಎಂದು ಹೇಳಿದನು.
10 ಎಲೀಯನು ಚಾರೆಪ್ತಗೆ ಹೋದನು. ಅವನು ಊರು ಬಾಗಿಲಿಗೆ ಹೋದಾಗ, ಅಲ್ಲಿ ಒಬ್ಬ ವಿಧವೆಯನ್ನು ನೋಡಿದನು. ಆ ಸ್ತ್ರೀಯು ಬೆಂಕಿಗಾಗಿ ಸೌದೆಯನ್ನು ಒಟ್ಟುಗೂಡಿಸುತ್ತಿದ್ದಳು. ಎಲೀಯನು ಅವಳಿಗೆ, “ನನಗೆ ಕುಡಿಯುವುದಕ್ಕೆ ಚಂಬಿನಲ್ಲಿ ಸ್ವಲ್ಪ ನೀರನ್ನು ನೀನು ತರುವೆಯಾ?” ಎಂದು ಕೇಳಿದನು. 11 ಆ ಸ್ತ್ರೀಯು ಅವನಿಗೆ ನೀರನ್ನು ತರಲು ಹೋಗುತ್ತಿರುವಾಗ, ಎಲೀಯನು, “ದಯವಿಟ್ಟು ಒಂದು ತುಂಡು ರೊಟ್ಟಿಯನ್ನು ತೆಗೆದುಕೊಂಡು ಬಾ” ಎಂದು ಹೇಳಿದನು.
12 ಆ ಸ್ತ್ರೀಯು, “ನನ್ನಲ್ಲಿ ರೊಟ್ಟಿಯಿಲ್ಲವೆಂದು ನಿನ್ನ ದೇವರಾದ ಯೆಹೋವನ ಸನ್ನಿಧಿಯಲ್ಲಿ ನಾನು ಪ್ರಮಾಣ ಮಾಡುತ್ತೇನೆ. ನನ್ನ ಮಡಕೆಯಲ್ಲಿ ಸ್ವಲ್ಪ ಹಿಟ್ಟು ಮಾತ್ರ ಇದೆ; ಪಾತ್ರೆಯಲ್ಲಿ ಸ್ವಲ್ಪ ಆಲೀವ್ ಎಣ್ಣೆಯಿದೆ. ಬೆಂಕಿ ಹೊತ್ತಿಸಲು ಸೌದೆ ಚೂರುಗಳನ್ನು ಆಯ್ದುಕೊಳ್ಳವುದಕ್ಕಾಗಿ ನಾನು ಈ ಸ್ಥಳಕ್ಕೆ ಬಂದೆ. ಸೌಧೆಯನ್ನು ನಾನು ಮನೆಗೆ ತೆಗೆದುಕೊಂಡು ಹೋಗಿ, ನಮ್ಮ ಕೊನೆಯ ಊಟವನ್ನು ಸಿದ್ಧಪಡಿಸುತ್ತೇನೆ. ನನ್ನ ಮಗ ಮತ್ತು ನಾನು ಅದನ್ನು ತಿಂದು, ನಂತರ ಹಸಿವಿನಿಂದ ಸಾಯುತ್ತೇವೆ” ಎಂದು ಹೇಳಿದಳು.
13 ಎಲೀಯನು ಆ ಸ್ತ್ರೀಗೆ, “ಚಿಂತಿಸದಿರು, ಮನೆಗೆ ಹೋಗಿ ನೀನು ಹೇಳಿದಂತೆ ಆಹಾರವನ್ನು ಸಿದ್ಧಪಡಿಸು. ಆದರೆ ನಿನ್ನಲ್ಲಿರುವ ಹಿಟ್ಟಿನಿಂದ ಮೊದಲು ಒಂದು ಚಿಕ್ಕ ರೊಟ್ಟಿಯನ್ನು ಮಾಡು. ಆ ರೊಟ್ಟಿಯನ್ನು ನನಗೆ ತಂದುಕೊಡು; ನಂತರ ನಿನಗೆ ಮತ್ತು ನಿನ್ನ ಮಗನಿಗೆ ಅಡಿಗೆ ಮಾಡಿಕೋ. 14 ಇಸ್ರೇಲಿನ ದೇವರಾದ ಯೆಹೋವನು ಹೇಳುವುದೇನೆಂದರೆ, ‘ಆ ಮಡಕೆಯಲ್ಲಿರುವ ಹಿಟ್ಟು ಎಂದೆಂದಿಗೂ ಖಾಲಿಯಾಗುವುದಿಲ್ಲ. ಆ ಪಾತ್ರೆಯಲ್ಲಿ ಯಾವಾಗಲೂ ಎಣ್ಣೆಯಿರುತ್ತದೆ. ಯೆಹೋವನು ಭೂಮಿಯ ಮೇಲೆ ಮಳೆಯನ್ನು ಸುರಿಸುವ ತನಕ ಇದು ಹೀಗೆಯೇ ಮುಂದುವರಿಯುತ್ತದೆ’” ಎಂದು ಹೇಳಿದನು.
15 ಆ ಸ್ತ್ರೀಯು ತನ್ನ ಮನೆಗೆ ಹೋದಳು. ಎಲೀಯನು ಹೇಳಿದಂತೆ ಆಕೆಯು ಮಾಡಿದಳು. ಎಲೀಯನು, ಆ ಸ್ತ್ರೀಯು ಮತ್ತು ಅವಳ ಮಗನು ಅನೇಕ ದಿನಗಳಿಗಾಗುವಷ್ಟು ಆಹಾರವನ್ನು ಹೊಂದಿದ್ದರು. 16 ಮಡಕೆಯಲ್ಲಿದ್ದ ಹಿಟ್ಟು ಮತ್ತು ಪಾತ್ರೆಯಲ್ಲಿದ್ದ ಎಣ್ಣೆ ಎಂದೆಂದಿಗೂ ಖಾಲಿಯಾಗಲಿಲ್ಲ. ಯೆಹೋವನು ಎಲೀಯನ ಮೂಲಕ ಹೇಳಿದ್ದಂತೆಯೇ ಇದು ಸಂಭವಿಸಿತು.
17 ಸ್ವಲ್ಪಕಾಲದ ತರುವಾಯ ಆ ಸ್ತ್ರೀಯ ಮಗನು ಅಸ್ವಸ್ಥನಾದನು. ಅವನಿಗೆ ರೋಗವು ಹೆಚ್ಚಾಗುತ್ತಲೇ ಇತ್ತು. ಕೊನೆಗೆ ಆ ಬಾಲಕನು ಉಸಿರಾಡುವುದನ್ನೇ ನಿಲ್ಲಿಸಿದನು. 18 ಆ ಸ್ತ್ರೀಯು ಎಲೀಯನಿಗೆ, “ನೀನು ದೇವಮನುಷ್ಯ. ನೀನು ನನಗೆ ಸಹಾಯಮಾಡಲು ಬಂದಿರುವೆಯಾ? ಅಥವಾ ನನ್ನ ಪಾಪಗಳನ್ನೆಲ್ಲ ನನ್ನ ನೆನಪಿಗೆ ತಂದುಕೊಳ್ಳುವಂತೆ ಮಾಡಲು, ನನ್ನ ಮಗನಿಗೆ ಸಾವನ್ನು ಉಂಟುಮಾಡುವುದಕ್ಕಾಗಿಯೇ ಬಂದಿರುವೆಯಾ?” ಎಂದು ಕೇಳಿದಳು.
19 ಎಲೀಯನು ಅವಳಿಗೆ, “ನಿನ್ನ ಮಗನನ್ನು ನನಗೆ ಕೊಡು” ಎಂದು ಹೇಳಿದನು. ಎಲೀಯನು ಬಾಲಕನನ್ನು ಅವಳಿಂದ ತೆಗೆದುಕೊಂಡು, ಮೇಲಂತಸ್ತಿಗೆ ಹೋದನು. ಅವನು ನೆಲೆಸಿದ್ದ ಕೊಠಡಿಯ ಹಾಸಿಗೆಯ ಮೇಲೆ ಆ ಬಾಲಕನನ್ನು ಮಲಗಿಸಿದನು. 20 ನಂತರ ಎಲೀಯನು, “ನನ್ನ ದೇವರಾದ ಯೆಹೋವನೇ, ಈ ವಿಧವೆಯು ತನ್ನ ಮನೆಯಲ್ಲಿ ನನಗೆ ಸ್ಥಳವನ್ನು ಕೊಟ್ಟಿದ್ದಾಳೆ. ನೀನು ಅವಳಿಗೆ ಈ ಕೇಡನ್ನು ಮಾಡುವೆಯಾ? ನೀನು ಅವಳ ಮಗುವನ್ನು ಸಾಯಿಸುವೆಯಾ?” ಎಂದು ಪ್ರಾರ್ಥಿಸಿದನು. 21 ಬಳಿಕ ಆ ಬಾಲಕನ ಮೇಲೆ ಎಲೀಯನು ಮೂರು ಬಾರಿ ಬೋರಲಬಿದ್ದು, “ನನ್ನ ದೇವರಾದ ಯೆಹೋವನೇ, ಈ ಬಾಲಕನಿಗೆ ಮತ್ತೆ ಜೀವವನ್ನು ಕೊಡು” ಎಂದು ಪ್ರಾರ್ಥಿಸಿದನು.
22 ಯೆಹೋವನು ಎಲೀಯನ ಪ್ರಾರ್ಥನೆಗೆ ಕಿವಿಗೊಟ್ಟನು. ಆ ಬಾಲಕನು ಮತ್ತೆ ಉಸಿರಾಡಲಾರಂಭಿಸಿದನು. ಅವನು ಜೀವಂತನಾದನು! 23 ಎಲೀಯನು ಆ ಬಾಲಕನನ್ನು ಕೆಳ ಅಂತಸ್ತಿಗೆ ಕರೆದೊಯ್ದನು. ಎಲೀಯನು ಬಾಲಕನನ್ನು ಅವನ ತಾಯಿಗೆ ಒಪ್ಪಿಸಿ, “ನಿನ್ನ ಮಗ ಬದುಕಿದ್ದಾನೆ, ನೋಡು” ಎಂದು ಹೇಳಿದನು.
24 ಆ ಸ್ತ್ರೀಯು, “ಈಗ ನಿಜವಾಗಿಯೂ ನೀನು ದೇವಮನುಷ್ಯನೆಂಬುದು ನನಗೆ ತಿಳಿಯಿತು. ಯೆಹೋವನು ನಿನ್ನ ಮೂಲಕ ನಿಜವಾಗಿಯೂ ಮಾತಾಡುತ್ತಾನೆಂಬುದು ನನಗೆ ತಿಳಿದಿದೆ” ಎಂದು ಹೇಳಿದಳು.
ಎಲೀಯನು ಮತ್ತು ಬಾಳನ ಪ್ರವಾದಿಗಳು
18 ಬರಗಾಲದ ಮೂರನೆ ವರ್ಷದಲ್ಲಿ ಯೆಹೋವನು ಎಲೀಯನಿಗೆ, “ಹೋಗಿ, ರಾಜನಾದ ಅಹಾಬನನ್ನು ಭೇಟಿಮಾಡು. ನಾನು ಬೇಗ ಮಳೆಯನ್ನು ಸುರಿಸುತ್ತೇನೆ” ಎಂದು ಹೇಳಿದನು. 2 ಎಲೀಯನು ಅಹಾಬನನ್ನು ಭೇಟಿಮಾಡಲು ಹೋದನು.
ಆಗ ಸಮಾರ್ಯದಲ್ಲಿ ಆಹಾರವಿರಲಿಲ್ಲ. 3 ರಾಜನಾದ ಅಹಾಬನು ಓಬದ್ಯನನ್ನು ತನ್ನ ಬಳಿಗೆ ಕರೆಯಿಸಿದನು. ಓಬದ್ಯನು ರಾಜನ ಅರಮನೆಯ ಮೇಲ್ವಿಚಾರಕನಾಗಿದ್ದನು. (ಓಬದ್ಯನು ಯೆಹೋವನ ನಿಜವಾದ ಹಿಂಬಾಲಕರಲ್ಲಿ ಒಬ್ಬನಾಗಿದ್ದನು. 4 ಒಂದು ಕಾಲದಲ್ಲಿ ಈಜೆಬೆಲಳು ಯೆಹೋವನ ಪ್ರವಾದಿಗಳನ್ನೆಲ್ಲ ಕೊಲ್ಲುತ್ತಿದ್ದಳು. ಓಬದ್ಯನು ನೂರು ಮಂದಿ ಪ್ರವಾದಿಗಳನ್ನು ಕರೆದೊಯ್ದು, ಅವರನ್ನು ಗುಹೆಗಳಲ್ಲಿ ಅಡಗಿಸಿಟ್ಟನು. ಓಬದ್ಯನು ಐವತ್ತು ಮಂದಿ ಪ್ರವಾದಿಗಳನ್ನು ಒಂದು ಗುಹೆಯಲ್ಲಿಯೂ ಉಳಿದ ಐವತ್ತು ಮಂದಿ ಪ್ರವಾದಿಗಳನ್ನು ಮತ್ತೊಂದು ಗುಹೆಯಲ್ಲಿಯೂ ಇಟ್ಟನು. ಓಬದ್ಯನು ಅವರಿಗೆ ಆಹಾರವನ್ನೂ ನೀರನ್ನೂ ಒದಗಿಸುತ್ತಿದ್ದನು.) 5 ರಾಜನಾದ ಅಹಾಬನು ಓಬದ್ಯನಿಗೆ, “ನನ್ನ ಜೊತೆಯಲ್ಲಿ ಬಾ. ನಾವು ದೇಶದಲ್ಲಿರುವ ಪ್ರತಿಯೊಂದು ನೀರಿನ ಬುಗ್ಗೆಗಳಿಗೂ ತೊರೆಗಳಿಗೂ ಹೋಗಿ ನಮ್ಮ ಕುದುರೆಗಳಿಗೂ ಹೇಸರಕತ್ತೆಗಳಿಗೂ ಸಾಕಷ್ಟು ಹುಲ್ಲು ಸಿಕ್ಕುತ್ತದೆಯೋ ನೋಡಿಕೊಂಡು ಬರೋಣ. ಸಿಕ್ಕುವುದಾದರೆ, ನಮ್ಮ ಪಶುಗಳು ಸಾಯುವುದಿಲ್ಲ” ಎಂದು ಹೇಳಿದನು. 6 ಅಂತೆಯೇ ನೀರನ್ನು ಕಂಡುಕೊಳ್ಳಲು ದೇಶದ ಒಂದು ಕಡೆಗೆ ಅಹಾಬನು, ಮತ್ತೊಂದು ಕಡೆಗೆ ಓಬದ್ಯನು ಹೊರಟರು. ಅವರಿಬ್ಬರೂ ದೇಶವನ್ನೆಲ್ಲಾ ಸಂಚರಿಸಿದರು. 7 ಓಬದ್ಯನು ಸಂಚರಿಸುತ್ತಿರುವಾಗ ಎಲೀಯನನ್ನು ಭೇಟಿಯಾದನು. ಓಬದ್ಯನು ಎಲೀಯನನ್ನು ಕಂಡ ಕೂಡಲೇ ಅವನನ್ನು ಗುರುತಿಸಿ ಎಲೀಯನಿಗೆ ಸಾಷ್ಟಾಂಗನಮಸ್ಕಾರ ಮಾಡಿ, “ನನ್ನ ಒಡೆಯನಾದ ಎಲೀಯನು ನೀನೋ?” ಎಂದು ಕೇಳಿದನು.
8 ಎಲೀಯನು, “ಹೌದು, ನಾನೇ. ಹೋಗಿ, ನಿನ್ನ ಒಡೆಯನಾದ ರಾಜನಿಗೆ ನಾನಿಲ್ಲಿದ್ದೇನೆಂದು ಹೇಳು” ಎಂದು ಉತ್ತರಿಸಿದನು.
9 ಆಗ ಓಬದ್ಯನು, “ನೀನು ಎಲ್ಲಿರುವೆ ಎಂಬುದು ನನಗೆ ತಿಳಿದಿದೆಯೆಂದು ನಾನು ರಾಜನಿಗೆ ಹೇಳಿದರೆ, ಅವನು ನನ್ನನ್ನು ಕೊಂದುಬಿಡುತ್ತಾನೆ! ನಾನು ನಿನಗೆ ಯಾವ ತಪ್ಪನ್ನೂ ಮಾಡಿಲ್ಲ! ನೀನೇಕೆ ನನ್ನನ್ನು ಸಾಯಿಸಬೇಕೆಂದಿರುವೆ? 10 ನಿನ್ನ ದೇವರಾದ ಯೆಹೋವನಾಣೆ, ರಾಜನು ನಿನಗಾಗಿ ಎಲ್ಲಾ ಕಡೆಯೂ ಹುಡುಕುತ್ತಿದ್ದಾನೆ! ಅವನು ನಿನ್ನನ್ನು ಕಂಡುಹಿಡಿಯಲು ಎಲ್ಲಾ ದೇಶಗಳಿಗೂ ಜನರನ್ನು ಕಳುಹಿಸಿದ್ದಾನೆ. ಒಂದು ದೇಶದ ಅಧಿಪತಿಯು ನಮ್ಮ ದೇಶದಲ್ಲಿ ಎಲೀಯನು ಇಲ್ಲವೆಂದು ಹೇಳಿದರೆ ಆ ಮಾತು ಸತ್ಯವೊ ಎಂಬುದನ್ನು ತಿಳಿದುಕೊಳ್ಳುವುದಕ್ಕಾಗಿ ಅಹಾಬನು ಆ ಅಧಿಪತಿಯಿಂದ ಪ್ರಮಾಣ ಮಾಡಿಸುತ್ತಾನೆ. 11 ಈಗ ನೀನು ಇಲ್ಲಿರುವೆಯೆಂಬುದನ್ನು ನಾನು ಹೋಗಿ ಅವನಿಗೆ ತಿಳಿಸುವಂತೆ, ನೀನು ಇಚ್ಛಿಸಿರುವೆಯಲ್ಲವೇ? 12 ನಾನು ಹೋಗಿ ರಾಜನಾದ ಅಹಾಬನಿಗೆ ನೀನು ಇಲ್ಲಿರುವೆಯೆಂಬುದನ್ನು ತಿಳಿಸಿದರೆ, ನಂತರ ಯೆಹೋವನು ನಿನ್ನನ್ನು ಬೇರೊಂದು ಸ್ಥಳಕ್ಕೆ ಕರೆದೊಯ್ಯುವನು. ರಾಜನಾದ ಅಹಾಬನು ಇಲ್ಲಿಗೆ ಬಂದಾಗ, ನಿನ್ನನ್ನು ಕಂಡುಹಿಡಿಯಲು ಸಮರ್ಥನಾಗುವುದಿಲ್ಲ. ಆಗ ಅವನು ನನ್ನನ್ನು ಕೊಂದುಬಿಡುತ್ತಾನೆ! ನನ್ನ ಬಾಲ್ಯದಿಂದಲೂ ನಾನು ಯೆಹೋವನನ್ನೇ ಅನುಸರಿಸುತ್ತಿದ್ದೇನೆ. 13 ನಾನು ಏನು ಮಾಡಿದೆನೆಂಬುದು ನಿನಗೆ ತಿಳಿಯಲಿಲ್ಲವೇ? ಯೆಹೋವನ ಪ್ರವಾದಿಗಳನ್ನು ಈಜೆಬೆಲಳು ಕೊಲ್ಲುತ್ತಿದ್ದಾಗ ನೂರು ಮಂದಿ ಪ್ರವಾದಿಗಳನ್ನು ನಾನು ಗುಹೆಗಳಲ್ಲಿ ಅಡಗಿಸಿಟ್ಟೆನು. ಐವತ್ತು ಮಂದಿ ಪ್ರವಾದಿಗಳನ್ನು ಒಂದು ಗುಹೆಯಲ್ಲಿಯೂ ಉಳಿದ ಐವತ್ತು ಮಂದಿಯನ್ನು ಮತ್ತೊಂದು ಗುಹೆಯಲ್ಲಿಯೂ ನಾನು ಅಡಗಿಸಿಟ್ಟೆನು. ಅವರಿಗೆ ಆಹಾರವನ್ನೂ ನೀರನ್ನೂ ನಾನು ತಂದುಕೊಡುತ್ತಿದ್ದೆನು. 14 ಈಗ ನಿನ್ನ ಅಪೇಕ್ಷೆಯಂತೆ ನಾನು ಹೋಗಿ, ನೀನು ಇಲ್ಲಿರುವೆ ಎಂಬುದನ್ನು ರಾಜನಿಗೆ ತಿಳಿಸಿದರೆ, ರಾಜನು ನನ್ನನ್ನು ಕೊಂದು ಹಾಕುತ್ತಾನೆ” ಎಂದು ಹೇಳಿದನು.
15 ಎಲೀಯನು, “ನಾನು ಸೇವೆ ಮಾಡುತ್ತಿರುವ ಸೇನಾಧೀಶ್ವರನಾದ ಯೆಹೋವನಾಣೆ, ಈ ದಿನ ನಾನು ರಾಜನ ಎದುರಿನಲ್ಲಿ ಹಾಜರಾಗುತ್ತೇನೆ ಎಂಬುದಾಗಿ ಪ್ರಮಾಣ ಮಾಡುತ್ತೇನೆ” ಎಂದನು.
16 ಓಬದ್ಯನು ರಾಜನಾದ ಅಹಾಬನ ಬಳಿಗೆ ಹೋಗಿ ಎಲೀಯನು ಇರುವ ಸ್ಥಳವನ್ನು ತಿಳಿಸಿದನು. ರಾಜನಾದ ಅಹಾಬನು ಎಲೀಯನನ್ನು ಭೇಟಿಮಾಡಲು ಹೋದನು.
17 ಅಹಾಬನು ಎಲೀಯನನ್ನು ಕಂಡು, “ಇಸ್ರೇಲಿಗೆ ತೊಂದರೆ ಕೊಡುವವನು ನೀನೇ ಅಲ್ಲವೇ?” ಎಂದನು.
18 ಎಲೀಯನು, “ಇಸ್ರೇಲಿನ ತೊಂದರೆಗೆ ನಾನು ಕಾರಣನಲ್ಲ. ನೀನು ಮತ್ತು ನಿನ್ನ ತಂದೆಯ ಕುಟುಂಬವು ಈ ತೊಂದರೆಗಳಿಗೆಲ್ಲ ಕಾರಣ. ಯೆಹೋವನ ಆಜ್ಞೆಗಳಿಗೆ ವಿಧೇಯನಾಗದೆ ಸುಳ್ಳುದೇವರುಗಳನ್ನು ಅನುಸರಿಸತೊಡಗಿದ್ದರಿಂದ ಆ ತೊಂದರೆಗಳಿಗೆಲ್ಲಾ ನೀನೇ ಕಾರಣನಾಗಿರುವೆ. 19 ಈಗ ಕರ್ಮೆಲ್ ಬೆಟ್ಟದ ಮೇಲೆ ನನ್ನನ್ನು ಭೇಟಿಮಾಡಲು ಎಲ್ಲಾ ಇಸ್ರೇಲರಿಗೆ ತಿಳಿಸು. ಬಾಳನ ನಾನೂರೈವತ್ತು ಮಂದಿ ಪ್ರವಾದಿಗಳನ್ನು ಆ ಸ್ಥಳಕ್ಕೆ ಕರೆದುಕೊಂಡು ಬಾ. ಸುಳ್ಳುದೇವತೆಯಾದ ಅಶೇರಳ ನಾನೂರು ಮಂದಿ ಪ್ರವಾದಿಗಳನ್ನೂ ಕರೆದುಕೊಂಡು ಬಾ. ಆ ಪ್ರವಾದಿಗಳನ್ನು ರಾಣಿಯಾದ ಈಜೆಬೆಲಳು ಪೋಷಣೆ ಮಾಡುತ್ತಿದ್ದಾಳೆ” ಎಂದು ಹೇಳಿದನು.
20 ಇಸ್ರೇಲರೆಲ್ಲರನ್ನು ಮತ್ತು ಆ ಪ್ರವಾದಿಗಳನ್ನು ಕರ್ಮೆಲ್ ಬೆಟ್ಟಕ್ಕೆ ಅಹಾಬನು ಕರೆಸಿದನು. 21 ಜನರೆಲ್ಲರ ಹತ್ತಿರಕ್ಕೆ ಎಲೀಯನು ಬಂದು ಅವರಿಗೆ, “ನೀವು ಯಾರನ್ನು ಹಿಂಬಾಲಿಸಬೇಕೆಂಬುದನ್ನು ಯಾವಾಗ ತೀರ್ಮಾನಿಸುತ್ತೀರಿ? ಯೆಹೋವನು ನಿಜವಾದ ದೇವರಾಗಿದ್ದರೆ, ನೀವು ಆತನನ್ನು ಹಿಂಬಾಲಿಸಬೇಕು; ಬಾಳನೇ ನಿಜವಾದ ದೇವರಾಗಿದ್ದರೆ, ನೀವು ಅವನನ್ನೇ ಹಿಂಬಾಲಿಸಬೇಕು” ಎಂದನು.
ಜನರು ಏನನ್ನೂ ಹೇಳಲಿಲ್ಲ. 22 ಎಲೀಯನು, “ಯೆಹೋವನ ಪ್ರವಾದಿಯಾಗಿ ನಾನೊಬ್ಬನು ಮಾತ್ರ ಇಲ್ಲಿದ್ದೇನೆ. ಆದರೆ ಇಲ್ಲಿ ನಾನೂರೈವತ್ತು ಮಂದಿ ಬಾಳನ ಪ್ರವಾದಿಗಳಿದ್ದಾರೆ. 23 ಎರಡು ಹೋರಿಗಳನ್ನು ತನ್ನಿ. ಬಾಳನ ಪ್ರವಾದಿಗಳು ಒಂದು ಹೋರಿಯನ್ನು ತೆಗೆದುಕೊಳ್ಳಲಿ. ಅವರು ಅದನ್ನು ಕೊಂದು, ತುಂಡುತುಂಡಾಗಿ ಕತ್ತರಿಸಲಿ. ನಂತರ ಅವರು ಆ ಮಾಂಸವನ್ನು ಸೌದೆಯ ಮೇಲಿಡಲಿ. ಆದರೆ ಬೆಂಕಿಯನ್ನು ಹೊತ್ತಿಸುವುದು ಬೇಡ. ಆಗ ನಾನು ಮತ್ತೊಂದು ಹೋರಿಯನ್ನು ಅವರಂತೆಯೇ ಕತ್ತರಿಸುವೆನು. ನಾನೂ ಬೆಂಕಿಯನ್ನು ಹೊತ್ತಿಸುವುದಿಲ್ಲ. 24 ಬಾಳನ ಪ್ರವಾದಿಗಳಾದ ನೀವು ನಿಮ್ಮ ದೇವರನ್ನು ಪ್ರಾರ್ಥಿಸಿ. ನಾನು ಯೆಹೋವನನ್ನು ಪ್ರಾರ್ಥಿಸುತ್ತೇನೆ. ನಮ್ಮಲ್ಲಿ ಯಾರ ಪ್ರಾರ್ಥನೆಗೆ ಉತ್ತರವಾಗಿ ದೇವರು ಸೌದೆಯನ್ನು ಉರಿಯುವಂತೆ ಮಾಡುತ್ತಾನೋ ಆತನೇ ನಿಜವಾದ ದೇವರು” ಎಂದು ಹೇಳಿದನು.
ಜನರೆಲ್ಲರೂ ಇದು ಒಳ್ಳೆಯ ಆಲೋಚನೆಯೆಂದು ಒಪ್ಪಿಕೊಂಡರು.
25 ನಂತರ ಎಲೀಯನು ಬಾಳನ ಪ್ರವಾದಿಗಳಿಗೆ, “ನಿಮ್ಮಲ್ಲಿ ಬಹು ಜನರು ಇರುವುದರಿಂದ ಮೊದಲು ನೀವೇ ಹೋಗಿ ನಿಮ್ಮ ಹೋರಿಯನ್ನು ಆರಿಸಿಕೊಂಡು ಅದನ್ನು ಸಿದ್ಧಪಡಿಸಿ. ನಿಮ್ಮ ದೇವರಿಗೆ ಪ್ರಾರ್ಥಿಸಿ. ಆದರೆ ನೀವು ಬೆಂಕಿಯನ್ನು ಹೊತ್ತಿಸಬೇಡಿ” ಎಂದು ಹೇಳಿದನು.
26 ಪ್ರವಾದಿಗಳು ತಾವು ತಂದಿದ್ದ ಹೋರಿಯನ್ನು ತೆಗೆದುಕೊಂಡು ಸಿದ್ಧಪಡಿಸಿದರು. ಅವರು ಬಾಳನನ್ನು ಮಧ್ಯಾಹ್ನದವರೆಗೆ ಪ್ರಾರ್ಥಿಸಿದರು. “ಬಾಳನೇ, ದಯವಿಟ್ಟು ನಮಗೆ ಉತ್ತರ ನೀಡು!” ಎಂದು ಅವರು ಪ್ರಾರ್ಥಿಸಿದರು. ಆದರೆ ಯಾವ ಶಬ್ದವೂ ಆಗಲಿಲ್ಲ: ಯಾರೊಬ್ಬರೂ ಉತ್ತರಿಸಲಿಲ್ಲ; ಪ್ರವಾದಿಗಳು ತಾವು ನಿರ್ಮಿಸಿದ್ದ ಯಜ್ಞವೇದಿಕೆಯ ಸುತ್ತಲೂ ನರ್ತಿಸಿದರು. ಆದರೆ ಬೆಂಕಿಯು ಹೊತ್ತಿಕೊಳ್ಳಲೇ ಇಲ್ಲ.
27 ಮಧ್ಯಾಹ್ನವಾದಾಗ ಎಲೀಯನು ಅವರನ್ನು ಅಪಹಾಸ್ಯ ಮಾಡಲಾರಂಭಿಸಿದನು. ಎಲೀಯನು, “ಬಾಳನು ನಿಜವಾದ ದೇವರಾಗಿದ್ದರೆ, ನೀವು ಮತ್ತಷ್ಟು ಗಟ್ಟಿಯಾಗಿ ಪ್ರಾರ್ಥಿಸಿ! ಬಹುಶಃ ಅವನು ಯೋಚನಾನಿರತನಾಗಿರಬಹುದು! ಅಥವಾ ಕಾರ್ಯನಿರತನಾಗಿರಬಹುದು! ಅಥವಾ ಸಂಚಾರನಿರತನಾಗಿರಬಹುದು! ಅಥವಾ ನಿದ್ರಾಮಗ್ನನಾಗಿರಬಹುದು! ನೀವು ಮತ್ತಷ್ಟು ಗಟ್ಟಿಯಾಗಿ ಪ್ರಾರ್ಥಿಸಿ, ಅವನನ್ನು ಎಚ್ಚರಗೊಳಿಸಿ!” ಎಂದು ಹೇಳಿದನು. 28 ಪ್ರವಾದಿಗಳು ಮತ್ತಷ್ಟು ಗಟ್ಟಿಯಾಗಿ ಪ್ರಾರ್ಥಿಸಿದರು. ಅವರು ಖಡ್ಗ ಮತ್ತು ಬರ್ಜಿಗಳಿಂದ ತಮ್ಮನ್ನು ತಾವೇ ತಿವಿದುಕೊಂಡರು. (ಅವರು ಆರಾಧಿಸುವ ರೀತಿಯೇ ಇದು.) ರಕ್ತವು ತಮ್ಮ ದೇಹದ ಮೇಲೆ ಚಿಮ್ಮುವತನಕ ಅವರು ತಮ್ಮನ್ನು ತಾವು ತಿವಿದುಕೊಂಡರು. 29 ಮಧ್ಯಾಹ್ನದ ಸಮಯವು ಮೀರುತ್ತಾ ಬಂದರೂ ಬೆಂಕಿಯು ಹೊತ್ತಿಕೊಳ್ಳಲೇ ಇಲ್ಲ. ಸಾಯಂಕಾಲದ ಯಜ್ಞಗಳನ್ನು ಅರ್ಪಿಸುವ ಸಮಯ ಬರುವ ತನಕ ಪ್ರವಾದಿಗಳು ಗಟ್ಟಿಯಾಗಿ ಕೂಗುತ್ತಲೇ ಇದ್ದರು. ಆದರೂ ಬಾಳನಿಂದ ಉತ್ತರವೇ ಬರಲಿಲ್ಲ. ಯಾವ ಶಬ್ದವೂ ಆಗಲಿಲ್ಲ; ಅವರ ಕೂಗಾಟವನ್ನು ಯಾರೂ ಲಕ್ಷಿಸಲಿಲ್ಲ.
30 ಆಗ ಎಲೀಯನು ಜನರೆಲ್ಲರಿಗೂ, “ಈಗ ನನ್ನ ಬಳಿಗೆ ಬನ್ನಿ” ಎಂದನು. ಅವನ ಸುತ್ತಲೂ ಜನರೆಲ್ಲರೂ ಒಟ್ಟುಗೂಡಿದರು. ಯೆಹೋವನ ಯಜ್ಞವೇದಿಕೆಯು ಒಡೆದುಹೋಗಿತ್ತು. ಎಲೀಯನು ಅದನ್ನು ಸರಿಪಡಿಸಿದನು. 31 ಎಲೀಯನು ಇಸ್ರೇಲಿನ ಪ್ರತಿಯೊಂದು ಕುಲಕ್ಕೂ ಒಂದೊಂದು ಕಲ್ಲಿನಂತೆ ಹನ್ನೆರಡು ಕಲ್ಲುಗಳನ್ನು ತೆಗೆದುಕೊಂಡನು. ಯೆಹೋವನಿಂದ ಇಸ್ರೇಲನೆಂದು ಕರೆಸಿಕೊಂಡ ಯಾಕೋಬನ ಹನ್ನೆರಡು ಗಂಡುಮಕ್ಕಳ ಹೆಸರನ್ನೇ ಈ ಕುಲಗಳಿಗೆ ಕೊಡಲಾಗಿತ್ತು. 32 ಎಲೀಯನು ಯೆಹೋವನ ಗೌರವಾರ್ಥವಾಗಿ ಯಜ್ಞವೇದಿಕೆಯನ್ನು ಈ ಕಲ್ಲುಗಳಿಂದ ಸರಿಪಡಿಸಿದನು. ಎಲೀಯನು ಯಜ್ಞವೇದಿಕೆಯ ಸುತ್ತಲೂ ಹಳ್ಳವನ್ನು ತೋಡಿದನು. ಅದು ಹದಿನೈದು ಲೀಟರ್ ನೀರು ತುಂಬುವಷ್ಟು ಅಗಲವಾಗಿತ್ತು ಮತ್ತು ಆಳವಾಗಿತ್ತು. 33 ನಂತರ ಎಲೀಯನು ಸೌದೆಯನ್ನು ಯಜ್ಞವೇದಿಕೆಯ ಮೇಲೆ ಇಟ್ಟನು. ಅವನು ಹೋರಿಯನ್ನು ತುಂಡುತುಂಡಾಗಿ ಕತ್ತರಿಸಿದನು. ಅವನು ಆ ತುಂಡುಗಳನ್ನು ಸೌದೆಯ ಮೇಲಿಟ್ಟನು. 34 ಎಲೀಯನು, “ನಾಲ್ಕು ಕೊಡಗಳಲ್ಲಿ ನೀರನ್ನು ತುಂಬಿಸಿ. ಆ ಮಾಂಸದ ತುಂಡುಗಳ ಮೇಲೆ ಮತ್ತು ಸೌದೆಯ ಮೇಲೆ ಆ ನೀರನ್ನು ಸುರಿಯಿರಿ” ಎಂದು ಹೇಳಿದನು. ಎಲೀಯನು, “ಮತ್ತೆ ಅದೇ ರೀತಿ ಮಾಡಿ” ಎಂದನು, ಅವನು, “ಮೂರನೆಯ ಸಲ ಅದೇ ರೀತಿ ಮಾಡಿ” ಎಂದನು. 35 ಯಜ್ಞವೇದಿಕೆಯಿಂದ ಹರಿದ ನೀರೆಲ್ಲ ಹಳ್ಳವನ್ನು ತುಂಬಿಕೊಂಡಿತ್ತು.
36 ಅದು ಮಧ್ಯಾಹ್ನದ ಯಜ್ಞಗಳನ್ನು ಅರ್ಪಿಸುವ ಸಮಯ. ಪ್ರವಾದಿಯಾದ ಎಲೀಯನು ಯಜ್ಞವೇದಿಕೆಯ ಹತ್ತಿರಕ್ಕೆ ಹೋಗಿ, “ಅಬ್ರಹಾಮನ, ಇಸಾಕನ ಮತ್ತು ಯಾಕೋಬನ ದೇವರಾದ ಯೆಹೋವನೇ, ನೀನು ಇಸ್ರೇಲಿನಲ್ಲಿರುವ ದೇವರೆಂಬುದನ್ನು ರುಜುವಾತುಪಡಿಸಲು ನಾನೀಗ ನಿನ್ನನ್ನು ಪ್ರಾರ್ಥಿಸುತ್ತಿದ್ದೇನೆ. ನಾನು ನಿನ್ನ ಸೇವಕನೆಂಬುದನ್ನೂ ನೀನು ನಿರೂಪಿಸು. ಈ ಕಾರ್ಯಗಳನ್ನೆಲ್ಲಾ ನಾನು ಮಾಡುವಂತೆ ನೀನು ಆಜ್ಞಾಪಿಸಿದೆ ಎನ್ನುವುದನ್ನೂ ಈ ಜನರಿಗೆ ತೋರಿಸು. 37 ಯೆಹೋವನೇ, ನನ್ನ ಪ್ರಾರ್ಥನೆಗೆ ಕಿವಿಗೊಡು. ಯೆಹೋವನೇ, ನೀನು ದೇವರೆಂಬುದನ್ನು ಈ ಜನರಿಗೆಲ್ಲ ತೋರಿಸು. ಈ ಜನರನ್ನೆಲ್ಲ ಮತ್ತೆ ನೀನು ನಿನ್ನ ಬಳಿಗೆ ತರುತ್ತಿರುವೆ ಎಂಬುದನ್ನೂ ಈ ಜನರು ತಿಳಿದುಕೊಳ್ಳಲಿ” ಎಂದು ಪ್ರಾರ್ಥಿಸಿದನು.
38 ಕೂಡಲೇ ಯೆಹೋವನ ಕಡೆಯಿಂದ ಬೆಂಕಿಬಿದ್ದು ಯಜ್ಞಗಳನ್ನು, ಸೌದೆಯನ್ನು, ಕಲ್ಲುಗಳನ್ನು ಮತ್ತು ಯಜ್ಞವೇದಿಕೆಯ ಸುತ್ತಲಿನ ಮಣ್ಣನ್ನೆಲ್ಲ ದಹಿಸಿತು. ಆ ಹಳ್ಳದಲ್ಲಿದ್ದ ನೀರನ್ನೆಲ್ಲ ಬೆಂಕಿಯು ದಹಿಸಿ ಒಣಗಿಸಿತು. 39 ಈ ದೃಶ್ಯವನ್ನು ಜನರೆಲ್ಲರೂ ನೋಡಿದರು. ಜನರು ನೆಲಕ್ಕೆ ಬಾಗಿ ನಮಸ್ಕರಿಸುತ್ತಾ, “ಯೆಹೋವನೇ ದೇವರು! ಯೆಹೋವನೇ ದೇವರು!” ಎಂದು ಕೂಗಿದರು.
40 ಆಗ ಎಲೀಯನು, “ಬಾಳನ ಪ್ರವಾದಿಗಳನ್ನು ಹಿಡಿದು ತನ್ನಿ! ಅವರಲ್ಲಿ ಒಬ್ಬರಾದರೂ ತಪ್ಪಿಸಿಕೊಳ್ಳದಂತೆ ನೋಡಿಕೊಳ್ಳಿ!” ಎಂದು ಹೇಳಿದನು. ಪ್ರವಾದಿಗಳನ್ನೆಲ್ಲ ಜನರು ಹಿಡಿದುಕೊಂಡರು. ಎಲೀಯನು ಅವರನ್ನೆಲ್ಲಾ ಕೀಷೋನ್ ಬುಗ್ಗೆಗೆ ಎಳೆದುಕೊಂಡು ಹೋಗಿ ಕೊಂದು ಹಾಕಿದನು.
ಮಳೆಯು ಮತ್ತೆ ಸುರಿಯಿತು
41 ನಂತರ ಎಲೀಯನು ರಾಜನಾದ ಅಹಾಬನಿಗೆ, “ಈಗ ಹೋಗಿ, ಅನ್ನಪಾನಗಳನ್ನು ತೆಗೆದುಕೋ. ಬಿರುಸಾದ ಮಳೆಯು ಸುರಿಯುವುದು” ಎಂದು ಹೇಳಿದನು. 42 ರಾಜನಾದ ಅಹಾಬನು ಅನ್ನಪಾನಗಳನ್ನು ತೆಗೆದುಕೊಳ್ಳಲು ಹೋದನು. ಅದೇ ಸಮಯದಲ್ಲಿ ಎಲೀಯನು ಕರ್ಮೆಲ್ ಬೆಟ್ಟದ ತುದಿಗೆ ಹತ್ತಿದನು. ಎಲೀಯನು ಬೆಟ್ಟದ ತುದಿಯಲ್ಲಿ ಸಾಷ್ಟಾಂಗವೆರಗಿದನು. ಅವನು ತನ್ನ ಮೊಣಕಾಲುಗಳ ನಡುವೆ ತಲೆಯನ್ನು ಇಟ್ಟುಕೊಂಡನು. 43 ಎಲೀಯನು ತನ್ನ ಸೇವಕನಿಗೆ, “ಸಮುದ್ರದ ಕಡೆಗೆ ನೋಡು” ಎಂದು ಹೇಳಿದನು.
ಸಮುದ್ರವು ಕಾಣುವ ಸ್ಥಳಕ್ಕೆ ಆ ಸೇವಕನು ಹೋದನು. ನಂತರ ಸೇವಕನು ಹಿಂದಿರುಗಿ ಬಂದು, “ನನಗೆ ಏನೂ ಕಾಣುತ್ತಿಲ್ಲ” ಎಂದನು. ಎಲೀಯನು ಆ ಸೇವಕನಿಗೆ, “ಹೋಗಿ ಮತ್ತೆ ನೋಡು” ಎಂದನು. ಹೀಗೆ ಆ ಸೇವಕನು ಏಳು ಸಲ ಹೋದನು. 44 ಏಳನೆಯ ಸಲ, ಸೇವಕನು ಹಿಂದಿರುಗಿ ಬಂದು, “ಒಬ್ಬ ಮನುಷ್ಯನ ಮುಷ್ಟಿ ಗಾತ್ರದ ಚಿಕ್ಕ ಮೋಡವನ್ನು ನಾನು ನೋಡಿದೆನು. ಆ ಮೋಡವು ಸಮುದ್ರದಿಂದ ಬರುತ್ತಿದೆ” ಎಂದನು.
ಎಲೀಯನು ಸೇವಕನಿಗೆ, “ರಾಜನಾದ ಅಹಾಬನ ಬಳಿಗೆ ಹೋಗಿ, ತನ್ನ ರಥವನ್ನು ಸಿದ್ಧಗೊಳಿಸಿ ಈಗಲೇ ಮನೆಗೆ ಹೋಗುವಂತೆ ಅವನಿಗೆ ಹೇಳು, ಅವನೀಗ ಬಿಟ್ಟುಹೋಗದಿದ್ದರೆ, ಮಳೆಯು ಅವನನ್ನು ತಡೆಯುತ್ತದೆ” ಎಂದು ಹೇಳಿದನು.
45 ಸ್ವಲ್ಪ ಹೊತ್ತಿನಲ್ಲಿಯೇ, ಆಕಾಶವು ಕಪ್ಪಾದ ಮೋಡಗಳಿಂದ ಕವಿದುಕೊಂಡಿತು. ಗಾಳಿಯು ಬೀಸಲಾರಂಭಿಸಿತು ಮತ್ತು ಬಿರುಸಾದ ಮಳೆಯು ಸುರಿಯಲಾರಂಭಿಸಿತು. ಅಹಾಬನು ತನ್ನ ರಥವನ್ನೇರಿ, ಇಜ್ರೇಲಿಗೆ ಪ್ರಯಾಣ ಮಾಡಲಾರಂಭಿಸಿದನು. 46 ಯೆಹೋವನ ಶಕ್ತಿಯು ಎಲೀಯನ ಮೇಲೆ ಬಂದಿತು. ಎಲೀಯನು ಓಡುವುದಕ್ಕಾಗಿ ತನ್ನ ಬಟ್ಟೆಗಳನ್ನು ತನ್ನ ಸುತ್ತಲೂ ಬಿಗಿದುಕೊಂಡನು. ನಂತರ ಎಲೀಯನು ರಾಜನಾದ ಅಹಾಬನಿಗಿಂತ ಮುಂಚೆ ಇಜ್ರೇಲಿನ ದಾರಿಯುದ್ದಕ್ಕೂ ಓಡುತ್ತಲೇ ಹೋದನು.
ಯೇಸುವಿನ ಬಂಧನ
(ಮತ್ತಾಯ 26:47-56; ಮಾರ್ಕ 14:43-50; ಯೋಹಾನ 18:3-11)
47 ಯೇಸು ಮಾತಾಡುತ್ತಿದ್ದಾಗ, ಜನರ ಒಂದು ಗುಂಪು ಅಲ್ಲಿಗೆ ಬಂದಿತು. ಹನ್ನೆರಡು ಅಪೊಸ್ತಲರಲ್ಲಿ ಒಬ್ಬನು ಆ ಗುಂಪಿಗೆ ಮುಂದಾಳಾಗಿದ್ದನು. ಅವನೇ ಯೂದನು. ಅವನು ಯೇಸುವಿಗೆ ಮುದ್ದಿಡುವಷ್ಟು ಹತ್ತಿರ ಬಂದನು.
48 ಯೇಸು ಅವನಿಗೆ, “ಯೂದನೇ, ಮುದ್ದಿಟ್ಟು ಮನುಷ್ಯಕುಮಾರನನ್ನು ಹಿಡಿದುಕೊಡುವಿಯೋ?” ಎಂದು ಕೇಳಿದನು. 49 ಯೇಸುವಿನ ಶಿಷ್ಯರು ಸಹ ಅಲ್ಲಿ ನಿಂತಿದ್ದರು. ಅಲ್ಲಿ ನಡೆಯುತ್ತಿದ್ದುದನ್ನು ಅವರು ನೋಡುತ್ತಿದ್ದರು. ಶಿಷ್ಯರು ಯೇಸುವಿಗೆ, “ಪ್ರಭುವೇ, ನಾವು ನಮ್ಮ ಖಡ್ಗಗಳನ್ನು ಉಪಯೋಗಿಸೋಣವೇ?” ಎಂದು ಕೇಳಿದರು. 50 ಶಿಷ್ಯರಲ್ಲಿ ಒಬ್ಬನು ತನ್ನ ಖಡ್ಗವನ್ನು ಬೀಸಿ ಮಹಾಯಾಜಕನ ಆಳಿನ ಬಲಗಿವಿಯನ್ನು ಕತ್ತರಿಸಿದನು.
51 ಯೇಸು ಅವನಿಗೆ, “ನಿಲ್ಲಿಸು” ಎಂದು ಹೇಳಿ, ಆ ಸೇವಕನ ಕಿವಿಯನ್ನು ಮುಟ್ಟಿ ಸ್ವಸ್ಥಗೊಳಿಸಿದನು.
52 ಯೇಸುವನ್ನು ಬಂಧಿಸಲು ಅಲ್ಲಿಗೆ ಮಹಾಯಾಜಕರು, ಹಿರಿಯ ಯೆಹೂದ್ಯನಾಯಕರು ಮತ್ತು ಯೆಹೂದ್ಯ ಸಿಪಾಯಿಗಳು ಬಂದಿದ್ದರು. ಯೇಸು ಅವರಿಗೆ, “ಖಡ್ಗಗಳನ್ನೂ ದೊಣ್ಣೆಗಳನ್ನೂ ಹಿಡಿದುಕೊಂಡು ಇಲ್ಲಿಗೆ ಬಂದದ್ದೇಕೆ? ನಾನು ಅಪರಾಧಿಯೆಂದು ನೀವು ಭಾವಿಸುತ್ತೀರೋ? 53 ಪ್ರತಿದಿನ ನಿಮ್ಮ ಸಂಗಡ ದೇವಾಲಯದಲ್ಲಿದ್ದೆನು. ನೀವು ನನ್ನನ್ನು ಅಲ್ಲಿ ಏಕೆ ಬಂಧಿಸಲಿಲ್ಲ? ಆದರೆ ಇದು ನಿಮ್ಮ ಸಮಯ. ಇದು ಅಂಧಕಾರದ (ಪಾಪ) ದೊರೆತನ” ಎಂದು ಹೇಳಿದನು.
ಪೇತ್ರನ ವಿಶ್ವಾಸದ್ರೋಹ
(ಮತ್ತಾಯ 26:57-58,69-75; ಮಾರ್ಕ 14:53-54,66-72; ಯೋಹಾನ 18:12-18,25-27)
54 ಅವರು ಯೇಸುವನ್ನು ಬಂಧಿಸಿ ಪ್ರಧಾನಯಾಜಕನ ಮನೆಯೊಳಗೆ ಕರೆದುಕೊಂಡು ಬಂದರು. ಪೇತ್ರನು ಅವರನ್ನು ಹಿಂಬಾಲಿಸಿದನು. ಆದರೆ ಅವನು ಯೇಸುವಿನ ಹತ್ತಿರ ಬರಲಿಲ್ಲ. 55 ಸೈನಿಕರು ಅಂಗಳದ ಮಧ್ಯದಲ್ಲಿ ಬೆಂಕಿಯನ್ನು ಹೊತ್ತಿಸಿ ಒಟ್ಟಾಗಿ ಕುಳಿತುಕೊಂಡರು. ಪೇತ್ರನೂ ಅವರ ಜೊತೆ ಕುಳಿತುಕೊಂಡನು. 56 ಪೇತ್ರನು ಅಲ್ಲಿ ಕುಳಿತಿರುವುದನ್ನು ಒಬ್ಬ ಸೇವಕಿ ನೋಡಿದಳು. ಬೆಂಕಿಯ ಬೆಳಕಿನಿಂದ ಆಕೆಯು ಪೇತ್ರನನ್ನು ಗುರುತಿಸಿದಳು. ಅವಳು ಪೇತ್ರನ ಮುಖವನ್ನೇ ಲಕ್ಷ್ಯವಿಟ್ಟು ನೋಡಿ, “ಈ ಮನುಷ್ಯನು ಆತನ (ಯೇಸು) ಸಂಗಡ ಇದ್ದವನು” ಅಂದಳು.
57 ಆದರೆ ಪೇತ್ರನು ಅದು ನಿಜವಲ್ಲವೆಂದು ಹೇಳಿದನು. ಅವನು ಅಕೆಗೆ, “ಅಮ್ಮಾ, ಆತನು ನನಗೆ ಗೊತ್ತೇ ಇಲ್ಲ” ಅಂದನು. 58 ಸ್ವಲ್ಪ ಸಮಯದ ನಂತರ ಇನ್ನೊಬ್ಬ ವ್ಯಕ್ತಿ ಪೇತ್ರನನ್ನು ನೋಡಿ, “ನೀನು ಯೇಸುವನ್ನು ಹಿಂಬಾಲಿಸುತ್ತಿದ್ದ ಜನರಲ್ಲಿ ಒಬ್ಬನಾಗಿದ್ದೆ!” ಎಂದು ಹೇಳಿದನು.
ಆದರೆ ಪೇತ್ರನು, “ನಾನು ಆತನ ಹಿಂಬಾಲಕರಲ್ಲಿ ಒಬ್ಬನಲ್ಲ” ಅಂದನು.
59 ಸುಮಾರು ಒಂದು ತಾಸಿನ ನಂತರ ಇನ್ನೊಬ್ಬನು, “ಅದು ನಿಜ! ಈ ಮನುಷ್ಯನು ಆತನೊಡನೆ ಇದ್ದವನು. ಇವನು ಗಲಿಲಾಯದವನು!” ಎಂದು ದೃಢವಾಗಿ ಹೇಳಿದನು.
60 ಆಗ ಪೇತ್ರನು, “ನೀನು ಏನು ಹೇಳುತ್ತಿದ್ದೀಯೋ ನನಗೆ ಗೊತ್ತಿಲ್ಲ” ಅಂದನು.
ಪೇತ್ರನು ಇನ್ನೂ ಮಾತಾಡುತ್ತಿದ್ದಾಗ ಕೋಳಿ ಕೂಗಿತು. 61 ಆಗ ಪ್ರಭುವು (ಯೇಸು) ಹಿಂತಿರುಗಿ ಪೇತ್ರನನ್ನು ದೃಷ್ಟಿಸಿ ನೋಡಿದನು. “ಮುಂಜಾನೆ ಕೋಳಿ ಕೂಗುವುದಕ್ಕಿಂತ ಮೊದಲು ನೀನು ನನ್ನನ್ನು ಅರಿಯೆನೆಂಬುದಾಗಿ ಮೂರು ಸಲ ಹೇಳುವೆ” ಎಂದು ಪ್ರಭುವು ಹೇಳಿದ ಮಾತನ್ನು ಪೇತ್ರನು ಆಗ ಜ್ಞಾಪಿಸಿಕೊಂಡನು. 62 ಬಳಿಕ ಪೇತ್ರನು ಹೊರಗೆ ಹೋಗಿ ಬಹು ದುಃಖದಿಂದ ಅತ್ತನು.
ಯೇಸುವಿಗೆ ಜನರು ಮಾಡಿದ ಅಪಹಾಸ್ಯ
(ಮತ್ತಾಯ 26:67-68; ಮಾರ್ಕ 14:65)
63-64 ಕೆಲವು ಜನರು ಯೇಸುವನ್ನು ಹಿಡಿದುಕೊಂಡಿದ್ದರು. ಅವರು ಯೇಸುವಿನ ಮುಖಕ್ಕೆ ಮುಸುಕು ಹಾಕಿ, ಆತನನ್ನು ಹೊಡೆದು, “ನಿನ್ನನ್ನು ಹೊಡೆದವರ್ಯಾರು? ನಮಗೆ ಪ್ರವಾದನೆ ಹೇಳು” ಎಂದು ಗೇಲಿಮಾಡಿದರು. 65 ಅವರು ಹಲವಾರು ವಿಧದಲ್ಲಿ ಆತನನ್ನು ದೂಷಿಸಿ ನಿಂದಿಸಿದರು.
ಯೆಹೂದ್ಯನಾಯಕರ ಮುಂದೆ ಯೇಸು
(ಮತ್ತಾಯ 26:59-66; ಮಾರ್ಕ 14:55-64; ಯೋಹಾನ 18:19-24)
66 ಮರುದಿನ ಮುಂಜಾನೆ ಹಿರಿಯ ಜನನಾಯಕರು, ಮಹಾಯಾಜಕರು ಮತ್ತು ಧರ್ಮೋಪದೇಶಕರು ಒಟ್ಟಾಗಿ ಸೇರಿಬಂದರು. ಅವರು ಯೇಸುವನ್ನು ನ್ಯಾಯಾಲಯಕ್ಕೆ ಕರೆದೊಯ್ದು, 67 “ನೀನು ಕ್ರಿಸ್ತನಾಗಿದ್ದರೆ ನಮಗೆ ಹೇಳು” ಎಂದು ಹೇಳಿದರು.
ಯೇಸು ಅವರಿಗೆ, “ನಾನು ಕ್ರಿಸ್ತನೆಂದು ಹೇಳಿದರೂ ನೀವು ನನ್ನನ್ನು ನಂಬುವುದಿಲ್ಲ. 68 ನಾನು ನಿಮ್ಮನ್ನು ಕೇಳಿದರೂ ನೀವು ಉತ್ತರಕೊಡುವುದಿಲ್ಲ. 69 ಆದರೆ ಇಂದಿನಿಂದ ಮನುಷ್ಯಕುಮಾರನು ದೇವರ ಸಿಂಹಾಸನದ ಬಲಗಡೆಯಲ್ಲಿ ಆಸೀನನಾಗಿರುವನು” ಎಂದು ಹೇಳಿದನು.
70 ಅವರೆಲ್ಲರೂ, “ಹಾಗಾದರೆ ನೀನು ದೇವರ ಕುಮಾರನೋ?” ಎಂದು ಕೇಳಿದರು. ಯೇಸು ಅವರಿಗೆ, “ನಾನು ಆತನೇ ಎಂದು ನೀವೇ ಹೇಳುತ್ತಿದ್ದೀರಿ” ಎಂದನು.
71 ಆಗ ಅವರು, “ಇನ್ನೇನು ಸಾಕ್ಷಿಬೇಕು? ಆತನು ಹೀಗೆ ಹೇಳುವುದನ್ನು ನಾವೇ ಕೇಳಿದೆವಲ್ಲಾ!” ಅಂದರು.
Kannada Holy Bible: Easy-to-Read Version. All rights reserved. © 1997 Bible League International