Old/New Testament
12 1-2 ಸೊಲೊಮೋನನಿಂದ ಓಡಿಹೋಗಿದ್ದ ನೆಬಾಟನ ಮಗನಾದ ಯಾರೊಬ್ಬಾಮನು ಇನ್ನೂ ಈಜಿಪ್ಟಿನಲ್ಲಿಯೇ ಇದ್ದನು. ಸೊಲೊಮೋನನು ಸತ್ತುಹೋದ ಸುದ್ದಿಯನ್ನು ಕೇಳಿ ಅವನು ಎಫ್ರಾಯೀಮ್ ಬೆಟ್ಟದಲ್ಲಿರುವ ಜೆರೆಧ ಎಂಬ ಪಟ್ಟಣಕ್ಕೆ ಹಿಂದಿರುಗಿದನು. ರಾಜನಾದ ಸೊಲೊಮೋನನು ಸತ್ತುಹೋದನು ಮತ್ತು ಅವನನ್ನು ಅವನ ಪೂರ್ವಿಕರ ಬಳಿಯಲ್ಲಿ ಸಮಾಧಿಮಾಡಿದರು.
ಅನಂತರ ಅವನ ಮಗನಾದ ರೆಹಬ್ಬಾಮನು ಹೊಸ ರಾಜನಾದನು. 3 ಇಸ್ರೇಲಿನ ಜನರೆಲ್ಲರೂ ರೆಹಬ್ಬಾಮನನ್ನು ರಾಜನನ್ನಾಗಿ ಮಾಡಲು ಶೆಕೆಮಿಗೆ ಹೋದರು. ರೆಹಬ್ಬಾಮನೂ ರಾಜನಾಗಲು ಶೆಕೆಮಿಗೆ ಹೋದನು. ಜನರು ರೆಹಬ್ಬಾಮನಿಗೆ, 4 “ನಿನ್ನ ತಂದೆಯು ನಮ್ಮನ್ನು ಹೆಚ್ಚು ಕಷ್ಟದ ಕೆಲಸ ಮಾಡಲು ಬಲಾತ್ಕರಿಸಿದನು. ಈಗ ನೀನು ನಮಗೆ ಅದನ್ನು ಕಡಿಮೆಗೊಳಿಸು, ನಿನ್ನ ತಂದೆಯು ನಮ್ಮನ್ನು ಬಲಾತ್ಕರಿಸಿ ಮಾಡಿಸುತ್ತಿದ್ದ ಹೆಚ್ಚು ಕೆಲಸಗಳನ್ನು ನಿಲ್ಲಿಸು. ಆಗ ನಾವು ನಿನ್ನ ಸೇವೆಯನ್ನು ಮಾಡುವೆವು” ಎಂದು ಹೇಳಿದರು.
5 ರೆಹಬ್ಬಾಮನು, “ಮೂರು ದಿನಗಳಾದ ಮೇಲೆ ನನ್ನ ಬಳಿಗೆ ಹಿಂದಿರುಗಿ ಬನ್ನಿ. ನಾನು ನಿಮಗೆ ಉತ್ತರವನ್ನು ಹೇಳುತ್ತೇನೆ” ಎಂದನು. ಆದ್ದರಿಂದ ಜನರು ಹೊರಟುಹೋದರು.
6 ಸೊಲೊಮೋನನ ಕಾಲದಲ್ಲಿ ತೀರ್ಮಾನಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತಿದ್ದ ಕೆಲವು ಹಿರಿಯರು ಅಲ್ಲಿದ್ದರು. ರಾಜನಾದ ರೆಹಬ್ಬಾಮನು ಅವರಿಗೆ, “ನಾನು ಈ ಜನರಿಗೆ ಉತ್ತರ ಹೇಳಲೇಬೇಕು. ನಾನು ಏನು ಹೇಳಲಿ? ನಿಮ್ಮ ಆಲೋಚನೆಯೇನು?” ಎಂದು ಕೇಳಿದನು.
7 ಆ ಹಿರಿಯರು, “ಇಂದು ನೀನು ಅವರಿಗೆ ಸೇವಕನಂತೆ ಇರುವುದಾದರೆ, ಅವರು ನಿನ್ನ ಸೇವೆಯನ್ನು ನಿಜವಾಗಿಯೂ ಮಾಡುತ್ತಾರೆ. ನೀನು ಅವರೊಂದಿಗೆ ಕರುಣೆಯಿಂದ ಮಾತಾಡಿದರೆ, ಅವರು ಎಂದೆಂದಿಗೂ ನಿನಗಾಗಿ ದುಡಿಯುತ್ತಾರೆ” ಎಂದರು.
8 ಆದರೆ ರೆಹಬ್ಬಾಮನು ಈ ಸಲಹೆಗೆ ಕಿವಿಗೊಡಲಿಲ್ಲ. ಅವನು ತನ್ನ ಸ್ನೇಹಿತರಾದ ಯುವಜನರಿಗೆ, 9 “ಈ ಜನರು, ‘ನಿನ್ನ ತಂದೆ ಕೊಟ್ಟ ಕೆಲಸಕ್ಕಿಂತಲೂ ಸುಲಭವಾದ ಕೆಲಸವನ್ನು ನಮಗೆ ಕೊಡು’ ಎಂದು ಕೇಳುತ್ತಿದ್ದಾರೆ. ಈ ಜನರಿಗೆ ನಾನು ಉತ್ತರವನ್ನು ಹೇಳಲೇಬೇಕು. ಈ ವಿಷಯದಲ್ಲಿ ನಿಮ್ಮ ಆಲೋಚನೆಯೇನು? ನಾನು ಅವರಿಗೆ ಏನು ಹೇಳಬೇಕು?” ಎಂದು ಕೇಳಿದನು.
10 ರಾಜನ ಸ್ನೇಹಿತರಾದ ಯುವಕರು, “ಆ ಜನರು ನಿನ್ನ ಬಳಿಗೆ ಬಂದು, ‘ನಿನ್ನ ತಂದೆಯು ಬಲಾತ್ಕರಿಸಿ ಹೆಚ್ಚು ಕಷ್ಟದ ಕೆಲಸಗಳನ್ನು ಮಾಡಿಸಿದನು. ಈಗ ನಮ್ಮ ಕೆಲಸವನ್ನು ಸುಲಭಗೊಳಿಸು’ ಎಂದು ಹೇಳಿದರು. ಆದ್ದರಿಂದ ನೀನು ಜಂಬದಿಂದ ಅವರಿಗೆ, ‘ನನ್ನ ಕಿರುಬೆರಳು ನನ್ನ ತಂದೆಯ ಪೂರ್ಣದೇಹಕ್ಕಿಂತ ಶಕ್ತಿಯುಳ್ಳದ್ದಾಗಿದೆ. 11 ನನ್ನ ತಂದೆಯು ಹೆಚ್ಚು ಕಷ್ಟದ ಕೆಲಸಗಳನ್ನು ಮಾಡಲು ನಿಮ್ಮನ್ನು ಬಲಾತ್ಕರಿಸಿದನು. ಆದರೆ ನಾನು ಮತ್ತಷ್ಟು ಕಷ್ಟದ ಕೆಲಸಗಳನ್ನು ನಿಮ್ಮಿಂದ ಮಾಡಿಸುತ್ತೇನೆ. ನಿಮ್ಮಿಂದ ಕೆಲಸ ಮಾಡಿಸಲು ನಮ್ಮ ತಂದೆಯು ಚಾವಟಿಗಳಿಂದ ನಿಮ್ಮನ್ನು ಹೊಡೆಸಿದನು. ನಾನಾದರೋ ನಿಮ್ಮನ್ನು ಮುಳ್ಳುಕೋಲುಗಳಿಂದ ಮತ್ತಷ್ಟು ಕಠಿಣವಾಗಿ ಹೊಡೆಸುತ್ತೇನೆ’ ಎಂದು ತಿಳಿಸು” ಎಂಬುದಾಗಿ ಹೇಳಿಕೊಟ್ಟರು.
12 ರೆಹಬ್ಬಾಮನು ಜನರಿಗೆ, “ಮೂರು ದಿನಗಳ ನಂತರ ನನ್ನ ಬಳಿಗೆ ಮತ್ತೆ ಬನ್ನಿ” ಎಂದು ಹೇಳಿದ್ದನು. ಮೂರು ದಿನಗಳ ನಂತರ ಇಸ್ರೇಲಿನ ಜನರೆಲ್ಲರೂ ರೆಹಬ್ಬಾಮನ ಬಳಿಗೆ ಬಂದರು. 13 ಆ ಸಮಯದಲ್ಲಿ, ರೆಹಬ್ಬಾಮನು ಅವರೊಂದಿಗೆ ಕಠಿಣವಾಗಿ ಮಾತನಾಡಿದನು. ಹಿರಿಯರು ನೀಡಿದ ಸಲಹೆಗೆ ಅವನು ಕಿವಿಗೊಡಲಿಲ್ಲ. 14 ತನ್ನ ಸ್ನೇಹಿತರು ತಿಳಿಸಿದಂತೆಯೇ ಅವನು ಮಾಡಿದನು. ರೆಹಬ್ಬಾಮನು, “ನನ್ನ ತಂದೆಯು ಕಷ್ಟದ ಕೆಲಸಗಳನ್ನು ಮಾಡಲು ನಿಮ್ಮನ್ನು ಬಲಾತ್ಕರಿಸಿದನು. ನಾನು ನಿಮಗೆ ಮತ್ತಷ್ಟು ಹೆಚ್ಚು ಕೆಲಸವನ್ನು ಕೊಡುತ್ತೇನೆ. ನನ್ನ ತಂದೆಯು ಬಾರುಕೋಲಿನಿಂದ ನಿಮ್ಮನ್ನು ಹೊಡೆಸಿದನು. ಆದರೆ ನಾನು ನಿಮ್ಮನ್ನು ಮತ್ತಷ್ಟು ಕಠಿಣವಾಗಿ ಮುಳ್ಳುಕೋಲುಗಳಿಂದ ಹೊಡೆಸುತ್ತೇನೆ” ಎಂದು ಹೇಳಿದನು. 15 ರಾಜನು ಜನರ ಅಪೇಕ್ಷೆಯನ್ನು ನೆರವೇರಿಸಲಿಲ್ಲ. ನೆಬಾಟನ ಮಗನಾದ ಯಾರೊಬ್ಬಾಮನಿಗೆ ತಾನು ಮಾಡಿದ್ದ ವಾಗ್ದಾನವನ್ನು ಈಡೇರಿಸಲು ಯೆಹೋವನೇ ಹೀಗೆ ಮಾಡಿದನು. ಯೆಹೋವನು ಪ್ರವಾದಿಯಾದ ಅಹೀಯನ ಮೂಲಕ ಈ ವಾಗ್ದಾನವನ್ನು ಮಾಡಿದ್ದನು. ಅಹೀಯನು ಶೀಲೋವಿನವನು.
16 ಇಸ್ರೇಲಿನ ಜನರೆಲ್ಲರೂ ಹೊಸರಾಜನು ತಮ್ಮ ಮಾತಿಗೆ ಕಿವಿಗೊಡಲಿಲ್ಲವೆಂಬುದನ್ನು ನೋಡಿದರು. ಆದ್ದರಿಂದ ಜನರೆಲ್ಲರೂ ರಾಜನಿಗೆ,
“ದಾವೀದನ ಕುಟುಂಬದಲ್ಲಿ ನಾವೆಲ್ಲರೂ ಭಾಗಿಗಳೇ?
ಇಲ್ಲ! ಇಷಯನ ಭೂಮಿಯಲ್ಲಿ ನಮಗೇನಾದರೂ ಪಾಲು ಸಿಕ್ಕುತ್ತದೆಯೇ?
ಇಲ್ಲ! ಇಸ್ರೇಲರೇ, ನಮ್ಮ ಮನೆಗಳಿಗೆ ನಾವು ಹೋಗೋಣ ನಡೆಯಿರಿ.
ದಾವೀದನ ಮಗನು ತನ್ನ ಜನರನ್ನು ತಾನೇ ಆಳಲಿ!”
ಎಂದು ಹೇಳಿದರು. ಇಸ್ರೇಲಿನ ಜನರೆಲ್ಲರೂ ಮನೆಗಳಿಗೆ ಹೋದರು. 17 ಆದರೆ ರೆಹಬ್ಬಾಮನು ಯೆಹೂದನಗರಗಳಲ್ಲಿ ವಾಸವಾಗಿದ್ದ ಇಸ್ರೇಲರನ್ನು ಆಳಿದನು.
18 ಅದೋರಾಮನೆಂಬ ಹೆಸರಿನ ಮನುಷ್ಯನು ಕೆಲಸಗಾರರ ಮೇಲ್ವಿಚಾರಕನಾಗಿದ್ದನು. ರಾಜನಾದ ರೆಹಬ್ಬಾಮನು ಜನರೊಂದಿಗೆ ಮಾತನಾಡಲು ಅದೋರಾಮನನ್ನು ಕಳುಹಿಸಿದನು. ಆದರೆ ಇಸ್ರೇಲಿನ ಜನರು ಅವನು ಸಾಯುವವರೆಗೆ ಅವನ ಕಡೆಗೆ ಕಲ್ಲುಗಳನ್ನು ಎಸೆದರು. ಆಗ ರೆಹಬ್ಬಾಮನು ತನ್ನ ರಥವನ್ನು ಹತ್ತಿ ತಪ್ಪಿಸಿಕೊಂಡು, ಜೆರುಸಲೇಮಿಗೆ ಓಡಿಹೋದನು. 19 ಹೀಗೆ ದಾವೀದನ ಕುಟುಂಬಕ್ಕೆ ವಿರೋಧವಾಗಿ ಇಸ್ರೇಲರು ದಂಗೆ ಎದ್ದರು. ಅವರು ಇಂದಿಗೂ ದಾವೀದನ ಕುಟುಂಬದ ವಿರೋಧಿಗಳಾಗಿದ್ದಾರೆ.
20 ಯಾರೊಬ್ಬಾಮನು ಹಿಂದಿರುಗಿ ಬಂದಿದ್ದಾನೆ ಎಂಬುದು ಇಸ್ರೇಲಿನ ಜನರೆಲ್ಲರಿಗೂ ತಿಳಿಯಿತು. ಅವರು ಅವನನ್ನು ಒಂದು ಸಭೆಗೆ ಕರೆಸಿ, ಅವನನ್ನು ಇಸ್ರೇಲಿನ ರಾಜನನ್ನಾಗಿ ನೇಮಿಸಿದರು. ಯೆಹೂದಕುಲವೊಂದು ಮಾತ್ರ ದಾವೀದನ ಕುಟುಂಬವನ್ನು ಅನುಸರಿಸಿತು.
21 ರೆಹಬ್ಬಾಮನು ಜೆರುಸಲೇಮಿಗೆ ಹಿಂದಿರುಗಿ ಹೋದನು. ಅವನು ಯೆಹೂದದ ಕುಟುಂಬಗಳನ್ನು ಮತ್ತು ಬೆನ್ಯಾಮೀನ್ ಕುಟುಂಬಗಳನ್ನು ಒಟ್ಟಾಗಿ ಸೇರಿಸಿದನು. ಅವರಲ್ಲಿ ಒಂದು ಲಕ್ಷದ ಎಂಭತ್ತು ಸಾವಿರ ಸೈನಿಕರಿದ್ದರು. ರೆಹಬ್ಬಾಮನು ಇಸ್ರೇಲಿನ ಜನರ ವಿರುದ್ಧ ಯುದ್ಧಮಾಡಲು ಅಪೇಕ್ಷಿಸಿದನು. ಅವನು ತನ್ನ ರಾಜ್ಯವನ್ನು ಪುನರ್ಸ್ಥಾಪಿಸಬೇಕೆಂದಿದ್ದನು. 22 ಆದರೆ ಯೆಹೋವನು ದೇವರ ಮನುಷ್ಯನೊಬ್ಬನೊಡನೆ ಮಾತನಾಡಿದನು. ಅವನ ಹೆಸರು ಶೆಮಾಯ. ಯೆಹೋವನು, 23 “ಯೆಹೂದದ ರಾಜನೂ ಸೊಲೊಮೋನನ ಮಗನೂ ಆದ ರೆಹಬ್ಬಾಮನೊಂದಿಗೆ, ಯೆಹೂದ ಮತ್ತು ಬೆನ್ಯಾಮೀನ್ ಜನರೆಲ್ಲರೊಂದಿಗೆ ಮಾತನಾಡು. 24 ನೀನು ಅವರಿಗೆ, ‘ನಿಮ್ಮ ಸೋದರರಾದ ಇಸ್ರೇಲರ ವಿರುದ್ಧ ನೀವು ಯುದ್ಧಕ್ಕೆ ಹೋಗಲೇಬಾರದೆಂದು ಯೆಹೋವನು ಹೇಳುತ್ತಾನೆ. ನಿಮ್ಮಲ್ಲಿ ಪ್ರತಿಯೊಬ್ಬನು ಮನೆಗೆ ಹೋಗಬೇಕು. ಈ ಸಂಗತಿಗಳೆಲ್ಲ ಸಂಭವಿಸುವಂತೆ ನಾನೇ ಮಾಡಿದೆನು’ ಎಂದು ಹೇಳು” ಎಂಬುದಾಗಿ ತಿಳಿಸಿದನು. ಆದ್ದರಿಂದ ರೆಹಬ್ಬಾಮನ ಸೈನ್ಯದಲ್ಲಿನ ಜನರೆಲ್ಲರೂ ಯೆಹೋವನ ಆಜ್ಞೆಯನ್ನು ಅನುಸರಿಸಿದರು. ಅವರು ತಮ್ಮ ಮನೆಗಳಿಗೆ ಹೋದರು.
25 ಎಫ್ರಾಯೀಮ್ ಬೆಟ್ಟದ ಸೀಮೆಯಲ್ಲಿ ಶೆಕೆಮ್ ನಗರವಿತ್ತು. ಯಾರೊಬ್ಬಾಮನು ಶೆಕೆಮನ್ನು ಒಂದು ಬಲಾಢ್ಯ ನಗರವನ್ನಾಗಿಸಿಕೊಂಡು ಅಲ್ಲಿ ನೆಲೆಸಿದನು. ತರುವಾಯ ಅವನು ಪೆನೂವೇಲ್ ನಗರಕ್ಕೆ ಹೋಗಿ ಅದನ್ನು ಬಲಪಡಿಸಿದನು.
26-27 ಯಾರೊಬ್ಬಾಮನು ತನ್ನಲ್ಲೇ, “ಜನರು ಜೆರುಸಲೇಮಿನಲ್ಲಿರುವ ಯೆಹೋವನ ಆಲಯಕ್ಕೆ ಹೋಗುವುದನ್ನೇ ಮುಂದುವರಿಸಿದರೆ, ಆಗ ಅವರು ದಾವೀದನ ಕುಟುಂಬವೇ ನಮ್ಮನ್ನು ಆಳಲಿ ಎಂದು ಅಪೇಕ್ಷೆಪಡಬಹುದು. ಜನರು ಯೆಹೂದದ ರಾಜನಾದ ರೆಹಬ್ಬಾಮನನ್ನೇ ಮತ್ತೆ ಅನುಸರಿಸಬಹುದು. ನಂತರ ಅವರು ನನ್ನನ್ನು ಕೊಂದುಬಿಡಬಹುದು.” ಅಂದುಕೊಂಡನು. 28 ಬಳಿಕ ರಾಜನು ಈಗ ತಾನೇನು ಮಾಡಬೇಕೆಂದು ತನ್ನ ಸಲಹೆಗಾರರನ್ನು ಕೇಳಿದನು. ಅವರು ತಮ್ಮ ಸಲಹೆಯನ್ನು ಅವನಿಗೆ ನೀಡಿದರು. ಯಾರೊಬ್ಬಾಮನು ಎರಡು ಬಂಗಾರದ ಕರುಗಳನ್ನು ಮಾಡಿಸಿ ಜನರಿಗೆ, “ನೀವು ಆರಾಧಿಸಲು ಜೆರುಸಲೇಮಿಗೆ ಹೋಗಲೇಬಾರದು. ಇಸ್ರೇಲರೇ, ನಿಮ್ಮನ್ನು ಈಜಿಪ್ಟಿನಿಂದ ಹೊರತಂದ ದೇವರುಗಳು ಇಲ್ಲಿವೆ” ಎಂದು ಹೇಳಿದನು. 29 ರಾಜನಾದ ಯಾರೊಬ್ಬಾಮನು ಒಂದು ಬಂಗಾರದ ಕರುವನ್ನು ಬೇತೇಲಿನಲ್ಲಿರಿಸಿದನು; ಮತ್ತೊಂದು ಬಂಗಾರದ ಕರುವನ್ನು ದಾನ್ ನಗರದಲ್ಲಿರಿಸಿದನು. 30 ಆದರೆ ಇದು ಮಹಾ ಪಾಪವಾಗಿತ್ತು. ಇಸ್ರೇಲಿನ ಜನರು ಕರುಗಳನ್ನು ಆರಾಧಿಸಲು ಬೇತೇಲ್ ಮತ್ತು ದಾನ್ ನಗರಗಳಿಗೆ ಪ್ರಯಾಣ ಮಾಡಿದರು.
31 ಯಾರೊಬ್ಬಾಮನು ಎತ್ತರದ ಸ್ಥಳಗಳಲ್ಲಿ ಆಲಯಗಳನ್ನು ನಿರ್ಮಿಸಿದನು. ಅವನು ಇಸ್ರೇಲಿನ ಬೇರೆಬೇರೆ ಕುಲಗಳಿಂದ ಯಾಜಕರನ್ನು ಆರಿಸಿಕೊಂಡನು. (ಅವನು ಲೇವಿಯರ ಕುಲವೊಂದರಿಂದಲೇ ಯಾಜಕರನ್ನು ಆರಿಸಿಕೊಳ್ಳಲಿಲ್ಲ.) 32 ರಾಜನಾದ ಯಾರೊಬ್ಬಾಮನು ಹೊಸಹಬ್ಬದ ದಿನವನ್ನು ಆರಂಭಿಸಿದನು. ಈ ಹಬ್ಬವು ಯೆಹೂದ್ಯರ ಪಸ್ಕಹಬ್ಬದಂತಿತ್ತು. ಆದರೆ ಈ ಹಬ್ಬವು ಎಂಟನೆಯ ತಿಂಗಳ ಹದಿನೈದನೆಯ ದಿವಸವಾಗಿತ್ತು. ಆ ಸಂದರ್ಭದಲ್ಲಿ ರಾಜನು ಬೇತೇಲ್ ನಗರದಲ್ಲಿ ಯಜ್ಞವೇದಿಕೆಯ ಮೇಲೆ ಯಜ್ಞಗಳನ್ನು ಅರ್ಪಿಸಿದನು. ಅವನು ತಾನೇ ನಿರ್ಮಿಸಿದ ಕರುಗಳಿಗೆ ಯಜ್ಞಗಳನ್ನು ಅರ್ಪಿಸಿದನು. ರಾಜನಾದ ಯಾರೊಬ್ಬಾಮನು ತಾನು ನಿರ್ಮಿಸಿದ ಎತ್ತರದ ಸ್ಥಳಗಳಲ್ಲಿ ಸೇವೆಮಾಡಲು ಯಾಜಕರನ್ನು ಬೇತೇಲ್ನಲ್ಲಿಯೇ ಆರಿಸಿಕೊಂಡನು. 33 ರಾಜನಾದ ಯಾರೊಬ್ಬಾಮನು ಇಸ್ರೇಲರಿಗೆ ತನ್ನದೇ ಆದ ಹಬ್ಬದ ದಿನವನ್ನು ಆರಿಸಿಕೊಂಡನು. ಅದು ಎಂಟನೆಯ ತಿಂಗಳ ಹದಿನೈದನೆಯ ದಿವಸವಾಗಿತ್ತು. ಆ ಸಮಯದಲ್ಲಿ ಅವನು ತಾನು ನಿರ್ಮಿಸಿದ ಯಜ್ಞವೇದಿಕೆಯ ಮೇಲೆ ಯಜ್ಞಗಳನ್ನು ಮತ್ತು ಧೂಪವನ್ನು ಅರ್ಪಿಸಿದನು. ಇದು ಬೇತೇಲ್ ನಗರದಲ್ಲಿ ನಡೆಯಿತು.
ಬೇತೇಲಿಗೆ ದೇವರ ಶಾಪ
13 ಯೆಹೂದ ದೇಶದವನಾದ ಒಬ್ಬ ದೇವಮನುಷ್ಯನು ಯೆಹೋವನ ಆಜ್ಞೆಯಂತೆ ಬೇತೇಲಿಗೆ ಬಂದನು. ಆಗ ಯಾರೊಬ್ಬಾಮನು ಧೂಪವನ್ನು ಅರ್ಪಿಸುತ್ತಾ, ಯಜ್ಞವೇದಿಕೆಯ ಹತ್ತಿರ ನಿಂತಿದ್ದನು. 2 ಯಜ್ಞವೇದಿಕೆಯ ವಿರುದ್ಧ ಮಾತನಾಡುವಂತೆ ಆ ದೇವಮನುಷ್ಯನಿಗೆ ಯೆಹೋವನು ಆಜ್ಞಾಪಿಸಿದನು. ಆಗ ಅವನು ಹೇಳಿದ್ದೇನೆಂದರೆ:
“ಯಜ್ಞವೇದಿಕೆಯೇ, ಯೆಹೋವನು ನಿನಗೆ ಹೀಗೆನ್ನುತ್ತಾನೆ: ‘ದಾವೀದನ ವಂಶದಲ್ಲಿ ಯೋಷೀಯನೆಂಬ ಮಗನು ಹುಟ್ಟುವನು. ಈಗ ಈ ಪೂಜಾಸ್ಥಳಗಳಲ್ಲಿ ಧೂಪಸುಡುತ್ತಿರುವ ಈ ಯಾಜಕರನ್ನು ಅವನು ಹಿಡಿದು ಅವರನ್ನು ನಿನ್ನ ಮೇಲೆಯೇ ಕೊಲ್ಲುವನು; ಈಗ ನಿನ್ನ ಮೇಲೆ ಧೂಪಸುಡುತ್ತಿರುವ ಯಾಜಕರನ್ನು ಅವನು ಹಿಡಿದು ಅವರ ಮೂಳೆಗಳನ್ನು ನಿನ್ನ ಮೇಲೆ ಸುಡುವನು.’”
3 ಇದಲ್ಲದೆ ದೇವಮನುಷ್ಯನು ಜನರಿಗೆ, “ಯೆಹೋವನು ಇದರ ಬಗ್ಗೆ ನನಗೆ ಹೇಳಿರುವ ಗುರುತೇನೆಂದರೆ, ‘ಯಜ್ಞವೇದಿಕೆಯು ಒಡೆದುಹೋಳಾಗುವುದು, ಬೂದಿಯು ನೆಲದ ಮೇಲೆ ಚೆಲ್ಲಿಹೋಗುವುದು’” ಎಂದನು.
4 ಬೇತೇಲಿನ ಯಜ್ಞವೇದಿಕೆಯನ್ನು ಕುರಿತು ದೇವಮನುಷ್ಯನು ಹೇಳಿದ ಸಂದೇಶವು ರಾಜನಾದ ಯಾರೊಬ್ಬಾಮನಿಗೆ ಕೇಳಿಸಿತು. ಅವನು ತನ್ನ ಕೈಯನ್ನು ಯಜ್ಞವೇದಿಕೆಯಿಂದ ಥಟ್ಟನೆ ತೆಗೆದು, ಆ ಮನುಷ್ಯನ ಕಡೆಗೆ ಗುರಿಮಾಡಿ, “ಆ ಮನುಷ್ಯನನ್ನು ಹಿಡಿಯಿರಿ!” ಎಂದು ಹೇಳಿದನು. ಆದರೆ ರಾಜನು ಇದನ್ನು ಹೇಳಿದಾಗ, ಅವನ ಕೈಗೆ ಲಕ್ವ ಹೊಡೆಯಿತು. ಅವನು ಅದನ್ನು ಚಲಿಸಲಾಗಲಿಲ್ಲ, 5 ಯಜ್ಞವೇದಿಕೆಯೂ ಒಡೆದು ಚೂರಾಯಿತು. ಅದರ ಮೇಲಿನ ಬೂದಿಯು ನೆಲದ ಮೇಲೆ ಚೆಲ್ಲಿಹೋಯಿತು. ದೇವರೇ ಆಜ್ಞಾಪಿಸಿದನೆಂದು ದೇವಮನುಷ್ಯನು ಹೇಳಿದ ಸಂಗತಿಗಳಿಗೆ ಇದೇ ಗುರುತಾಗಿತ್ತು. 6 ನಂತರ ರಾಜನಾದ ಯಾರೊಬ್ಬಾಮನು ದೇವಮನುಷ್ಯನಿಗೆ, “ನಿನ್ನ ದೇವರಾದ ಯೆಹೋವನಲ್ಲಿ ನನಗಾಗಿ ಪ್ರಾರ್ಥಿಸು. ನನ್ನ ಕೈಯನ್ನು ಗುಣಪಡಿಸುವಂತೆ ಯೆಹೋವನಲ್ಲಿ ಪ್ರಾರ್ಥಿಸು” ಎಂದನು.
ದೇವಮನುಷ್ಯನು ಯೆಹೋವನಿಗೆ ಪ್ರಾರ್ಥಿಸಿದನು. ಆಗ ರಾಜನ ಕೈ ಗುಣವಾಯಿತು. ಅದು ಮತ್ತೆ ಮೊದಲಿನಂತೆ ಆಯಿತು. 7 ಆಗ ರಾಜನು ದೇವಮನುಷ್ಯನಿಗೆ, “ದಯವಿಟ್ಟು ನನ್ನೊಡನೆ ಮನೆಗೆ ಬಾ. ನನ್ನೊಡನೆ ಊಟಮಾಡು. ನಾನು ನಿನಗೆ ಒಂದು ಕಾಣಿಕೆಯನ್ನು ಕೊಡುತ್ತೇನೆ” ಎಂದು ಹೇಳಿದನು.
8 ಆದರೆ ದೇವಮನುಷ್ಯನು ರಾಜನಿಗೆ, “ನಾನು ನಿನ್ನೊಡನೆ ಮನೆಗೆ ಬರುವುದಿಲ್ಲ! ನೀನು ನಿನ್ನ ಅರ್ಧರಾಜ್ಯವನ್ನು ಕೊಟ್ಟರೂ ನಾನು ಬರುವುದಿಲ್ಲ! ನಾನು ಈ ಸ್ಥಳದಲ್ಲಿ ಏನನ್ನೂ ತಿನ್ನುವುದಿಲ್ಲ ಮತ್ತು ಕುಡಿಯುವುದಿಲ್ಲ. 9 ನಾನು ಏನನ್ನೂ ತಿನ್ನಬಾರದು ಮತ್ತು ಕುಡಿಯಬಾರದೆಂದು ಯೆಹೋವನು ನನಗೆ ಆಜ್ಞಾಪಿಸಿದ್ದಾನೆ. ನಾನು ಇಲ್ಲಿಗೆ ಬಂದ ರಸ್ತೆಯಲ್ಲಿ ಮತ್ತೆ ಹಿಂದಿರುಗಿ ಹೋಗಬಾರದೆಂದು ಯೆಹೋವನು ನನಗೆ ಆಜ್ಞಾಪಿಸಿದ್ದಾನೆ” ಎಂದು ಹೇಳಿದನು. 10 ಆದ್ದರಿಂದ ಅವನು ಬೇರೆ ರಸ್ತೆಯಲ್ಲಿ ಹೋದನು. ಅವನು ಬೇತೇಲಿಗೆ ಬಂದ ರಸ್ತೆಯಲ್ಲಿ ಮತ್ತೆ ಹಿಂದಿರುಗಿಹೋಗಲಿಲ್ಲ.
11 ಬೇತೇಲಿನಲ್ಲಿ ಒಬ್ಬ ವಯಸ್ಸಾದ ಪ್ರವಾದಿಯು ನೆಲೆಸಿದ್ದನು. ಬೇತೇಲಿನಲ್ಲಿ ದೇವಮನುಷ್ಯನು ಮಾಡಿದ್ದನ್ನು ಅವನ ಮಕ್ಕಳು ಬಂದು ಅವನಿಗೆ ಹೇಳಿದರು. ದೇವಮನುಷ್ಯನು ರಾಜನಾದ ಯಾರೊಬ್ಬಾಮನಿಗೆ ಹೇಳಿದುದ್ದನ್ನು ಅವರು ತಮ್ಮ ತಂದೆಗೆ ಹೇಳಿದರು. 12 ಆ ವಯಸ್ಸಾದ ಪ್ರವಾದಿಯು, “ಅವನು ಬಿಟ್ಟುಹೋಗುವಾಗ ಯಾವ ರಸ್ತೆಯಲ್ಲಿ ಹೋದನು?” ಎಂದು ಕೇಳಿದನು. ಯೆಹೂದ ದೇಶದವನಾದ ದೇವಮನುಷ್ಯನು ಯಾವ ರಸ್ತೆಯಲ್ಲಿ ಹಿಂದಿರುಗಿ ಹೋದನೆಂಬುದನ್ನು ಅವನ ಮಕ್ಕಳು ತಂದೆಗೆ ತೋರಿಸಿದರು. 13 ಆ ಪ್ರವಾದಿಯು ತನ್ನ ಕತ್ತೆಯ ಮೇಲೆ ತಡಿಯೊಂದನ್ನು ಹಾಕಲು ಮಕ್ಕಳಿಗೆ ಹೇಳಿದನು. ಅವರು ಕತ್ತೆಯ ಮೇಲೆ ತಡಿಯನ್ನು ಹಾಕಿದರು. ಆಗ ಆ ಪ್ರವಾದಿಯು ತನ್ನ ಕತ್ತೆಯ ಮೇಲೆ ಹೋದನು.
14 ಆ ಪ್ರವಾದಿಯು ದೇವಮನುಷ್ಯನನ್ನು ಹಿಂಬಾಲಿಸಿ ಹೋಗಿ ಓಕ್ ಮರದ ಕೆಳಗೆ ಕುಳಿತಿದ್ದ ಅವನನ್ನು ಕಂಡು, “ನೀನು ಯೆಹೂದದಿಂದ ಬಂದ ದೇವಮನುಷ್ಯನೋ?” ಎಂದು ಕೇಳಿದನು.
ದೇವಮನುಷ್ಯನು, “ಹೌದು, ನಾನೇ” ಎಂದನು.
15 ವಯಸ್ಸಾದ ಪ್ರವಾದಿಯು, “ದಯವಿಟ್ಟು ಮನೆಗೆ ಬಂದು ನನ್ನೊಂದಿಗೆ ಊಟಮಾಡು” ಎಂದನು.
16 ಆದರೆ ದೇವಮನುಷ್ಯನು, “ನಾನು ನಿನ್ನ ಜೊತೆಯಲ್ಲಿ ಮನೆಗೆ ಬರಲು ಸಾಧ್ಯವಿಲ್ಲ. ನಾನು ಈ ಸ್ಥಳದಲ್ಲಿ ನಿನ್ನೊಂದಿಗೆ ತಿನ್ನುವುದಿಲ್ಲ ಮತ್ತು ಕುಡಿಯುವುದಿಲ್ಲ. 17 ಯೆಹೋವನು ನನಗೆ, ‘ನೀನು ಆ ಸ್ಥಳದಲ್ಲಿ ಅನ್ನಪಾನಗಳನ್ನು ತೆಗೆದುಕೊಳ್ಳಕೂಡದು; ನೀನು ಅಲ್ಲಿಗೆ ಹೋದ ರಸ್ತೆಯಲ್ಲಿ ಮತ್ತೆ ಹಿಂದಿರುಗಬಾರದು’ ಎಂದು ಹೇಳಿದ್ದಾನೆ” ಎಂಬುದಾಗಿ ಉತ್ತರಿಸಿದನು.
18 ಆಗ ಆ ಪ್ರವಾದಿಯು, “ಆದರೆ ನಾನೂ ನಿನ್ನಂತೆಯೇ ಒಬ್ಬ ಪ್ರವಾದಿ” ಎಂದು ಹೇಳಿದನು. ನಂತರ ವಯಸ್ಸಾದ ಪ್ರವಾದಿಯು ಅವನಿಗೆ “ಯೆಹೋವನಿಂದ ಒಬ್ಬ ದೇವದೂತನು ನನ್ನ ಬಳಿಗೆ ಬಂದಿದ್ದನು. ಆ ದೂತನು ನಿನ್ನನ್ನು ನನ್ನ ಮನೆಗೆ ಕರೆತರಲು ನಿನ್ನೊಂದಿಗೆ ಅನ್ನಪಾನಗಳನ್ನು ತೆಗೆದುಕೊಳ್ಳಲು ನನಗೆ ತಿಳಿಸಿದನು” ಎಂದು ಸುಳ್ಳು ಹೇಳಿದನು.
19 ಆದ್ದರಿಂದ ಆ ಪ್ರವಾದಿಯ ಮನೆಗೆ ದೇವಮನುಷ್ಯನು ಹೋಗಿ, ಅವನ ಸಂಗಡ ಅನ್ನಪಾನಗಳನ್ನು ತೆಗೆದುಕೊಂಡನು. 20 ಅವರು ಮೇಜಿನ ಮುಂದೆ ಕುಳಿತಿದ್ದಾಗ, ಯೆಹೋವನು ಆ ಪ್ರವಾದಿಯೊಂದಿಗೆ ಮಾತನಾಡಿದನು. 21 ಆ ಪ್ರವಾದಿಯು ಯೆಹೂದ ದೇಶದವನಾದ ದೇವಮನುಷ್ಯನಿಗೆ, “ಯೆಹೋವನು ಹೇಳುವುದೇನೆಂದರೆ, ನೀನು ಆತನಿಗೆ ವಿಧೇಯನಾಗಲಿಲ್ಲ. ಆತನ ಆಜ್ಞೆಯನ್ನು ನೀನು ಅನುಸರಿಸಲಿಲ್ಲ. 22 ಈ ಸ್ಥಳದಲ್ಲಿ ನೀನು ಅನ್ನಪಾನಗಳನ್ನು ತೆಗೆದುಕೊಳ್ಳಕೂಡದೆಂದು ಯೆಹೋವನು ನಿನಗೆ ಆಜ್ಞಾಪಿಸಿದ್ದನು. ಆದರೆ ನೀನು ಹಿಂದಿರುಗಿಬಂದು ಅನ್ನಪಾನಗಳನ್ನು ತೆಗೆದುಕೊಂಡೆ. ಆದ್ದರಿಂದ ನಿನ್ನ ವಂಶದ ಸ್ಮಶಾನದಲ್ಲಿ ನಿನ್ನ ದೇಹವನ್ನು ಸಮಾಧಿಮಾಡಲಾಗುವುದಿಲ್ಲ ಎಂದು ಯೆಹೋವನು ಹೇಳುತ್ತಾನೆ” ಎಂದನು.
23 ದೇವಮನುಷ್ಯನು ಅನ್ನಪಾನಗಳನ್ನು ತೆಗೆದುಕೊಂಡ ನಂತರ ಆ ಪ್ರವಾದಿಯು ಅವನಿಗಾಗಿ ಕತ್ತೆಯ ಮೇಲೆ ತಡಿಯನ್ನು ಹಾಕಿದನು. ದೇವಮನುಷ್ಯನು ಅಲ್ಲಿಂದ ಹೊರಟನು. 24 ಅವನು ತನ್ನ ಮನೆಗೆ ಹಿಂತಿರುಗಿ ಹೋಗುತ್ತಿರುವಾಗ ದಾರಿಯಲ್ಲಿ ಒಂದು ಸಿಂಹವು ಅವನ ಮೇಲೆರಗಿ ಅವನನ್ನು ಕೊಂದುಹಾಕಿತು. ಪ್ರವಾದಿಯ ದೇಹವು ರಸ್ತೆಯ ಮೇಲೆ ಬಿದ್ದಿತ್ತು. ಕತ್ತೆ ಮತ್ತು ಸಿಂಹವು ಆ ದೇಹದ ಹತ್ತಿರ ನಿಂತಿದ್ದವು. 25 ಆ ರಸ್ತೆಯಲ್ಲಿ ಸಂಚರಿಸುತ್ತಿದ್ದ ಕೆಲವರು ಆ ದೇಹವನ್ನೂ ಮತ್ತು ಆ ದೇಹದ ಬಳಿ ನಿಂತಿದ್ದ ಸಿಂಹವನ್ನೂ ನೋಡಿದರು. ಆ ಜನರು ಪ್ರವಾದಿಯು ವಾಸಿಸುತ್ತಿದ್ದ ನಗರಕ್ಕೆ ಬಂದು, ಅವರು ರಸ್ತೆಯ ಮೇಲೆ ಕಂಡದ್ದನ್ನು ಹೇಳಿದರು.
26 ಆ ಪ್ರವಾದಿಯು ಆ ಮನುಷ್ಯನನ್ನು ಮೋಸದಿಂದ ಕರೆದು ತಂದಿದ್ದನು. ಅವನಿಗೆ ಸಂಭವಿಸಿದ್ದನ್ನು ಕೇಳಿದಾಗ ಅವನು, “ಯೆಹೋವನ ಆಜ್ಞೆಗಳನ್ನು ಅನುಸರಿಸದಿದ್ದ ದೇವಮನುಷ್ಯನೇ ಅವನಾಗಿರಬೇಕು. ಅವನನ್ನು ಕೊಲ್ಲಲು ಯೆಹೋವನು ಸಿಂಹವನ್ನು ಕಳುಹಿಸಿದನು. ಹೀಗೆ ಮಾಡುವುದಾಗಿ ಯೆಹೋವನೇ ಹೇಳಿದ್ದನು” ಎಂದನು. 27 ನಂತರ ಆ ಪ್ರವಾದಿಯು ತನ್ನ ಮಕ್ಕಳಿಗೆ, “ನನ್ನ ಕತ್ತೆಯ ಮೇಲೆ ತಡಿಯೊಂದನ್ನು ಹಾಕಿ” ಎಂದು ಹೇಳಿದನು. ಆಗ ಅವನ ಮಕ್ಕಳು ಕತ್ತೆಯ ಮೇಲೆ ತಡಿಯನ್ನು ಹಾಕಿದರು. 28 ಪ್ರವಾದಿಯು ಹೋಗಿ ರಸ್ತೆಯ ಮೇಲೆ ಬಿದ್ದಿರುವ ದೇಹವನ್ನು ಕಂಡನು. ಕತ್ತೆ ಮತ್ತು ಸಿಂಹವು ಆ ದೇಹದ ಹತ್ತಿರ ಇನ್ನೂ ನಿಂತಿದ್ದವು. ಸಿಂಹವು ಆ ದೇಹವನ್ನು ತಿಂದಿರಲಿಲ್ಲ ಮತ್ತು ಕತ್ತೆಗೆ ತೊಂದರೆಯನ್ನೂ ಮಾಡಿರಲಿಲ್ಲ.
29 ಪ್ರವಾದಿಯು ಆ ದೇಹವನ್ನು ಕತ್ತೆಯ ಮೇಲೆ ಹಾಕಿದನು. ಸತ್ತವನಿಗಾಗಿ ರೋದಿಸಲು ಮತ್ತು ಅದನ್ನು ಸಮಾಧಿಮಾಡಲು ಆ ದೇಹವನ್ನು ನಗರಕ್ಕೆ ತಂದನು. 30 ಪ್ರವಾದಿಯು ತನ್ನ ಕುಟುಂಬದ ಸ್ಮಶಾನದಲ್ಲಿ ಆ ಮನುಷ್ಯನ ದೇಹವನ್ನು ಸಮಾಧಿ ಮಾಡಿದನು. ಪ್ರವಾದಿಯು ಅವನಿಗಾಗಿ ಗೋಳಾಡುತ್ತಾ, “ಅಯ್ಯೋ, ನನ್ನ ಸೋದರನೇ!” ಎಂದು ಹೇಳಿದನು. 31 ಹೀಗೆ ಪ್ರವಾದಿಯು ಆ ದೇಹವನ್ನು ಸಮಾಧಿ ಮಾಡಿದನು. ನಂತರ ಅವನು ತನ್ನ ಮಕ್ಕಳಿಗೆ, “ನಾನು ಸತ್ತಾಗ, ನನ್ನನ್ನು ಅದೇ ಸ್ಮಶಾನದಲ್ಲಿ ಸಮಾಧಿಮಾಡಿ. ಅವನ ಪಕ್ಕದಲ್ಲೇ ನನ್ನ ಮೂಳೆಗಳನ್ನೂ ಹಾಕಿರಿ. 32 ಅವನ ಮೂಲಕ ಯೆಹೋವನು ಹೇಳಿದ ಸಂಗತಿಗಳು ಖಂಡಿತವಾಗಿಯೂ ನಿಜವಾಗುತ್ತವೆ. ಬೇತೇಲಿನ ಯಜ್ಞವೇದಿಕೆಯ ವಿರುದ್ಧವಾಗಿಯೂ ಸಮಾರ್ಯದ ಇತರ ಪಟ್ಟಣಗಳಲ್ಲಿರುವ ಉನ್ನತಸ್ಥಳಗಳ ವಿರುದ್ಧವಾಗಿಯೂ ಯೆಹೋವನು ಅವನ ಮೂಲಕವಾಗಿ ಮಾತನಾಡಿದನು” ಎಂದು ಹೇಳಿದನು.
33 ರಾಜನಾದ ಯಾರೊಬ್ಬಾಮನು ಬದಲಾವಣೆಯಾಗಲಿಲ್ಲ. ಅವನು ಕೆಟ್ಟಕಾರ್ಯಗಳನ್ನು ಮಾಡುತ್ತಲೇ ಇದ್ದನು. ಅವನು ಬೇರೆಬೇರೆ ಕುಲಗಳಿಂದ ಯಾಜಕರನ್ನು ಆರಿಸಿಕೊಳ್ಳುತ್ತಲೇ ಇದ್ದನು. ಆ ಯಾಜಕರು ಎತ್ತರದ ಸ್ಥಳಗಳಲ್ಲಿ ಸೇವೆಯನ್ನು ಮಾಡುತ್ತಿದ್ದರು. ಯಾಜಕನಾಗಬೇಕೆಂದು ಯಾವ ವ್ಯಕ್ತಿಯಾದರೂ ಇಚ್ಛಿಸಿದರೆ, ಯಾಜಕನಾಗಲು ಅವನಿಗೆ ಅವಕಾಶ ಕಲ್ಪಿಸುತ್ತಿದ್ದನು. 34 ಅವನ ರಾಜ್ಯವು ವಿನಾಶಗೊಳ್ಳಲು ಮತ್ತು ಹಾಳಾಗಲು ಆ ಪಾಪವೇ ಕಾರಣವಾಯಿತು.
ಯೇಸುವನ್ನು ಕೊಲ್ಲಲು ಯೆಹೂದ್ಯನಾಯಕರ ಸಂಚು
(ಮತ್ತಾಯ 26:1-5,14-16; ಮಾರ್ಕ 14:1-2,10-11; ಯೋಹಾನ 11:45-53)
22 ಯೆಹೂದ್ಯರ ಹುಳಿಯಿಲ್ಲದ ರೊಟ್ಟಿಯ ಹಬ್ಬ ಅಂದರೆ ಪಸ್ಕಹಬ್ಬವು ಹತ್ತಿರವಾಗಿತ್ತು. 2 ಮಹಾಯಾಜಕರು ಮತ್ತು ಧರ್ಮೋಪದೇಶಕರು ಯೇಸುವನ್ನು ಹೇಗೆ ಕೊಲ್ಲಬೇಕೆಂದು ಆಲೋಚಿಸುತ್ತಾ ಜನರ ಭಯದಿಂದ ತಕ್ಕ ಮಾರ್ಗವನ್ನು ಹುಡುಕತೊಡಗಿದರು.
ಯೇಸುವಿನ ವಿರುದ್ಧ ಯೂದನು ಮಾಡಿದ ಸಂಚು
3 ಯೇಸುವಿನ ಹನ್ನೆರಡು ಅಪೊಸ್ತಲರಲ್ಲಿ ಇಸ್ಕರಿಯೋತ ಯೂದನು ಒಬ್ಬನಾಗಿದ್ದನು. ಸೈತಾನನು ಇವನೊಳಗೆ ಪ್ರವೇಶಿಸಿ ಕೆಟ್ಟಕಾರ್ಯವೊಂದನ್ನು ಮಾಡುವಂತೆ ಪ್ರೇರೇಪಿಸಿದನು. 4 ಯೂದನು ಮಹಾಯಾಜಕರ ಮತ್ತು ದೇವಾಲಯವನ್ನು ಕಾಯುತ್ತಿದ್ದ ಕೆಲವು ಸೈನಿಕರ ಬಳಿಗೆ ಹೋಗಿ, ಯೇಸುವನ್ನು ಹಿಡಿದುಕೊಡುವುದರ ಬಗ್ಗೆ ಅವರೊಂದಿಗೆ ಮಾತಾಡಿದನು. 5 ಯಾಜಕರಿಗೆ ಬಹಳ ಸಂತೋಷವಾಯಿತು. ಯೇಸುವನ್ನು ತಮಗೆ ಹಿಡಿದುಕೊಟ್ಟರೆ ಹಣ ಕೊಡುವುದಾಗಿ ಅವರು ಯೂದನಿಗೆ ಮಾತುಕೊಟ್ಟರು. 6 ಯೂದನು ಅದಕ್ಕೆ ಒಪ್ಪಿದನು. ಬಳಿಕ ಯೇಸುವನ್ನು ಅವರಿಗೆ ಹಿಡಿದುಕೊಡಲು ಉತ್ತಮವಾದ ಸಮಯಕ್ಕಾಗಿ ಕಾಯತೊಡಗಿದನು. ತನ್ನ ಈ ಕಾರ್ಯವನ್ನು ಯಾರಿಗೂ ತಿಳಿಯದಂಥ ಸಮಯದಲ್ಲಿ ಮಾಡಬೇಕೆಂಬುದು ಅವನ ಬಯಕೆಯಾಗಿತ್ತು.
ಪಸ್ಕದ ಊಟಕ್ಕೆ ಸಿದ್ಧತೆ
(ಮತ್ತಾಯ 26:17-25; ಮಾರ್ಕ 14:12-21; ಯೋಹಾನ 13:21-30)
7 ಹುಳಿಯಿಲ್ಲದ ರೊಟ್ಟಿಯನ್ನು ತಿನ್ನುವ ದಿನ ಬಂತು. ಯೆಹೂದ್ಯರು ಪಸ್ಕದ ಕುರಿಮರಿಗಳನ್ನು ಕೊಯ್ಯುವ ದಿನ ಅದಾಗಿತ್ತು. 8 ಯೇಸುವು ಪೇತ್ರ ಮತ್ತು ಯೋಹಾನರಿಗೆ, “ಹೋಗಿ, ಪಸ್ಕದ ಊಟವನ್ನು ನಮಗಾಗಿ ಸಿದ್ಧಮಾಡಿರಿ” ಎಂದು ಹೇಳಿದನು.
9 ಪೇತ್ರ ಮತ್ತು ಯೋಹಾನರು, “ಊಟವನ್ನು ಎಲ್ಲಿ ಸಿದ್ಧಮಾಡಬೇಕು?” ಎಂದು ಯೇಸುವಿಗೆ ಕೇಳಿದರು.
10 ಯೇಸು ಅವರಿಗೆ, “ಕೇಳಿರಿ! ನೀವು ಪಟ್ಟಣದೊಳಗೆ (ಜೆರುಸಲೇಮಿಗೆ) ಹೋದನಂತರ, ನೀರಿನ ಕೊಡವನ್ನು ಹೊತ್ತುಕೊಂಡು ಹೋಗುವ ಒಬ್ಬ ಮನುಷ್ಯನನ್ನು ನೋಡುವಿರಿ. ಅವನನ್ನೇ ಹಿಂಬಾಲಿಸಿರಿ. ಅವನು ಒಂದು ಮನೆಯೊಳಗೆ ಹೋಗುವನು. ನೀವು ಅವನೊಂದಿಗೆ ಹೋಗಿರಿ. 11 ಆ ಮನೆಯ ಯಜಮಾನನಿಗೆ, ‘ಗುರುವು ತನ್ನ ಶಿಷ್ಯರೊಂದಿಗೆ ಯಾವ ಕೋಣೆಯಲ್ಲಿ ಪಸ್ಕದ ಊಟವನ್ನು ಮಾಡಬೇಕೆಂಬುದನ್ನು ದಯಮಾಡಿ ತೋರಿಸು’ ಎಂದು ಹೇಳಿರಿ. 12 ಆಗ ಮನೆಯ ಯಜಮಾನನು ಮೇಲಂತಸ್ತಿನಲ್ಲಿ ಒಂದು ದೊಡ್ಡ ಕೋಣೆಯನ್ನು ತೋರಿಸುವನು. ಈ ಕೋಣೆಯು ನಿಮಗಾಗಿ ಸಿದ್ಧವಾಗಿರುವುದು. ಪಸ್ಕದ ಊಟವನ್ನು ಅಲ್ಲಿ ಸಿದ್ಧಮಾಡಿರಿ” ಅಂದನು.
13 ಆದ್ದರಿಂದ ಪೇತ್ರ ಮತ್ತು ಯೋಹಾನ ಹೊರಟರು. ಯೇಸು ಹೇಳಿದ ಹಾಗೆ ಪ್ರತಿಯೊಂದೂ ನಡೆಯಿತು. ಅವರು ಪಸ್ಕದ ಊಟವನ್ನು ಅಲ್ಲಿ ಸಿದ್ಧಮಾಡಿದರು.
ಪ್ರಭುವಿನ ರಾತ್ರಿ ಭೋಜನ
(ಮತ್ತಾಯ 26:26-30; ಮಾರ್ಕ 14:22-26; 1 ಕೊರಿಂಥ. 11:23-25)
14 ಪಸ್ಕದ ಊಟಮಾಡುವ ಸಮಯ ಬಂತು. ಯೇಸು ಮತ್ತು ಅಪೊಸ್ತಲರು ಮೇಜಿನ ಸುತ್ತಲೂ ಊಟಕ್ಕೆ ಕುಳಿತುಕೊಂಡರು. 15 ಯೇಸು ಅವರಿಗೆ, “ನಾನು ಸಾಯುವ ಮೊದಲು ಈ ಪಸ್ಕದ ಊಟ ಮಾಡಲು ಬಹಳವಾಗಿ ಅಪೇಕ್ಷಿಸಿದ್ದೇನೆ. 16 ಇದರ ನಿಜವಾದ ಅರ್ಥವು ದೇವರ ರಾಜ್ಯದಲ್ಲಿ ನೆರವೇರುವ ತನಕ, ನಾನೆಂದಿಗೂ ಇನ್ನೊಂದು ಪಸ್ಕದ ಊಟವನ್ನು ಮಾಡುವುದೇ ಇಲ್ಲ” ಅಂದನು.
17 ಬಳಿಕ ಯೇಸು ದ್ರಾಕ್ಷಾರಸದ ಪಾತ್ರೆಯನ್ನು ತೆಗೆದುಕೊಂಡು ಅದಕ್ಕಾಗಿ ದೇವರಿಗೆ ಸ್ತೋತ್ರ ಮಾಡಿದನು. ಬಳಿಕ ಆತನು, “ಈ ಪಾತ್ರೆಯಲ್ಲಿರುವ ದ್ರಾಕ್ಷಾರಸವನ್ನು ನೀವೆಲ್ಲರೂ ಹಂಚಿಕೊಳ್ಳಿರಿ. 18 ದೇವರ ರಾಜ್ಯ ಬರುವ ತನಕ, ನಾನೆಂದಿಗೂ ತಿರುಗಿ ದ್ರಾಕ್ಷಾರಸ ಕುಡಿಯುವುದಿಲ್ಲ” ಅಂದನು.
19 ಆಮೇಲೆ ಯೇಸು ಸ್ವಲ್ಪ ರೊಟ್ಟಿಯನ್ನು ತೆಗೆದುಕೊಂಡನು. ಆತನು ರೊಟ್ಟಿಗಾಗಿ ದೇವರಿಗೆ ಸ್ತೋತ್ರಮಾಡಿ ಅದನ್ನು ಮುರಿದು ಅಪೊಸ್ತಲರಿಗೆ ಕೊಟ್ಟನು. ಬಳಿಕ ಯೇಸು, “ನಾನು ನಿಮಗೋಸ್ಕರ ಕೊಡುತ್ತಿರುವ ನನ್ನ ದೇಹವಿದು. ನನ್ನನ್ನು ನೆನಸಿಕೊಳ್ಳುವುದಕ್ಕಾಗಿ ಹೀಗೆ ಮಾಡಿರಿ” ಅಂದನು. 20 ಅದೇ ರೀತಿಯಾಗಿ, ಊಟವಾದ ನಂತರ, ಯೇಸು ದ್ರಾಕ್ಷಾರಸದ ಪಾತ್ರೆಯನ್ನು ತೆಗೆದುಕೊಂಡು, “ದೇವರು ತನ್ನ ಜನರೊಂದಿಗೆ ಮಾಡಿಕೊಂಡ ಹೊಸ ಒಡಂಬಡಿಕೆಯನ್ನು ಇದು ಸೂಚಿಸುತ್ತದೆ. ನಾನು ನಿಮಗಾಗಿ ಕೊಡುತ್ತಿರುವ ರಕ್ತದಿಂದ ಈ ಹೊಸ ಒಡಂಬಡಿಕೆ ಪ್ರಾರಂಭವಾಗುತ್ತದೆ” ಅಂದನು.
ಯೇಸುವಿಗೆ ಯಾರು ವಿರೋಧಿಗಳಾಗುವರು?
21 ಯೇಸು, “ನನಗೆ ದ್ರೋಹ ಬಗೆಯುವವನು ನನ್ನೊಂದಿಗೆ ಇದೇ ಪಂಕ್ತಿಯಲ್ಲಿ ಊಟಕ್ಕೆ ಕುಳಿತಿದ್ದಾನೆ. 22 ಮನುಷ್ಯಕುಮಾರನು ದೇವರ ಯೋಜನೆಗನುಸಾರವಾಗಿ ಮರಣಹೊಂದುವನು. ಆದರೆ ಮನುಷ್ಯಕುಮಾರನನ್ನು ಕೊಲ್ಲುವುದಕ್ಕೆ ಒಪ್ಪಿಸಿಕೊಡುವ ವ್ಯಕ್ತಿಗೆ ಬಹಳ ಕೇಡಾಗುವುದು” ಎಂದು ಹೇಳಿದನು.
23 ಆಗ ಅಪೊಸ್ತಲರು, “ನಮ್ಮಲ್ಲಿ ಯಾವನು ಇಂಥ ದುಷ್ಕೃತ್ಯ ಮಾಡುವನು?” ಎಂದು ಒಬ್ಬರನ್ನೊಬ್ಬರು ಕೇಳಿಕೊಂಡರು.
ಸೇವಕರಂತಿರಿ
24 ಬಳಿಕ ಅಪೊಸ್ತಲರು ತಮ್ಮಲ್ಲಿ ಯಾರು ಅತಿ ಶ್ರೇಷ್ಠರೆಂದು ವಾದ ಮಾಡತೊಡಗಿದರು. 25 ಆಗ ಯೇಸು ಅವರಿಗೆ, “ಈ ಲೋಕದ ಅರಸರು ತಮ್ಮ ಜನರ ಮೇಲೆ ದೊರೆತನ ಮಾಡುತ್ತಾರೆ. ಜನರ ಮೇಲೆ ಅಧಿಕಾರ ಹೊಂದಿರುವವರನ್ನು ಧರ್ಮಿಷ್ಠರೆಂದು ಕರೆಯುತ್ತಾರೆ. 26 ಆದರೆ ನೀವು ಹಾಗಾಗಬಾರದು. ಅತ್ಯಂತ ದೊಡ್ಡ ವ್ಯಕ್ತಿಯು ಅತ್ಯಂತ ಚಿಕ್ಕ ವ್ಯಕ್ತಿಯಾಗಬೇಕು. ನಾಯಕರು ಸೇವಕರಂತಿರಬೇಕು. 27 ಶ್ರೇಷ್ಠನಾದವನು ಯಾರು? ಊಟಕ್ಕೆ ಕುಳಿತವನೋ? ಅಥವಾ ಅವನಿಗೆ ಸೇವೆ ಮಾಡುವವನೋ? ಊಟಕ್ಕೆ ಕುಳಿತಿರುವವನೇ ಶ್ರೇಷ್ಠನೆಂದು ನೀವು ಭಾವಿಸುತ್ತೀರೋ? ಆದರೆ ನಾನು ನಿಮ್ಮಲ್ಲಿ ಸೇವಕನಂತಿದ್ದೇನೆ!
28 “ನೀವು ನನ್ನ ಅನೇಕ ಕಷ್ಟಗಳಲ್ಲಿ ನನ್ನ ಸಂಗಡ ಇದ್ದವರು. 29 ನನ್ನ ತಂದೆ ನನಗೆ ರಾಜ್ಯವನ್ನು ಕೊಟ್ಟಿದ್ದಾನೆ. ನನ್ನ ಸಂಗಡ ಆಳುವುದಕ್ಕೆ ನಾನು ಸಹ ನಿಮಗೆ ಅಧಿಕಾರ ಕೊಡುತ್ತೇನೆ. 30 ನನ್ನ ರಾಜ್ಯದಲ್ಲಿ ನೀವು ನನ್ನ ಸಂಗಡ ಊಟಮಾಡುವಿರಿ ಮತ್ತು ಕುಡಿಯುವಿರಿ. ನೀವು ಸಿಂಹಾಸನಗಳಲ್ಲಿ ಕುಳಿತುಕೊಂಡು ಇಸ್ರೇಲಿನ ಹನ್ನೆರಡು ಕುಲಗಳಿಗೆ ನ್ಯಾಯತೀರಿಸುವಿರಿ.
Kannada Holy Bible: Easy-to-Read Version. All rights reserved. © 1997 Bible League International